ಕನ್ನಡನಾಡಿನಲ್ಲಿ ಬೇಡ ಬುಡಕಟ್ಟು ಪೌರಾಣಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಾಗಿ ಭವ್ಯ ಪರಂಪರೆಯನ್ನು ಹೊಂದಿದೆ. ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವಂತೆ ಬೇಡ ಸಮುದಾಯದ ಜನರು ಬಹುಸಂಖ್ಯೆಯಲ್ಲಿವಾಸವಾಗಿದ್ದಾರೆ. ಇವರು ಗಡಿಭಾಗದಲ್ಲಿ ಸಾಧಿಸಿರುವ ಸಾಹಸ ಸಿದ್ದಿಗಳೆಲ್ಲವೂ ಪುರಾಣ-ಇತಿಹಾಸಕ್ಕೆ ಸಂಬಂಧಿ ಸಿದ್ದು, ಆಧುನಿಕ ಜೀವನದ ಸವಾಲುಗಳನ್ನು ಎದುರಿಸಿ ಬದುಕಲು ಬೇಕಾಗಿರುವ ಆರ್ಥಿಕ ಸ್ಥಿತಿ-ಗತಿಯಲ್ಲಿ ತುಂಬಾ ದುರ್ಬಲವೆಂದೇ ಹೇಳಬಹುದು. ಇದಕ್ಕೆ ಮುಖ್ಯಕಾರಣವೆಂದರೆ, ಶತಮಾನಗಳ ಕಾಲ ಬೇಡ ಸಮುದಾಯವು ನಾಡಿನಿಂದ ದೂರ ಉಳಿದು, ಅರಣ್ಯ ಪ್ರದೇಶ ಗಳಲ್ಲಿ ತಮ್ಮದೇ ಆದ ಆಚಾರ-ವಿಚಾರ ಸಂಪ್ರದಾಯಗಳನ್ನು ರೂಢಿಸಿಕೊಂಡು, ಜೀವನಾ ಧಾರಕ್ಕೆ ಪಶುಸಂಗೋಪನೆ-ಬೇಟೆಯನ್ನು ಅವಲಂಭಿಸಿ ವಲಸೆ ಜೀವನ ನಡೆಸಿರುವುದು. ಅರಣ್ಯ ಗಳು ನಾಶಹೊಂದಿದಂತೆಲ್ಲಾ ಬೇಡರು ನಾಡಿನೊಂದಿಗೆ ಸಂಪರ್ಕ ಬೆಳೆಯಿಸಿಕೊಂಡು ಬದುಕು ವುದು ಅನಿವಾರ್ಯವಾಯಿತು. ತಮ್ಮದೇ ಆದ ಜೀವನ ಮೌಲ್ಯಗಳ ನೆಲೆಯಲ್ಲಿ ಸ್ವಾವಲಂಭಿ ಬದುಕನ್ನು ಬದುಕಿದ ಬೇಡರು ಶಿಕ್ಷಣ, ಬಂಡವಾಳ, ವ್ಯವಹಾರಜ್ಞಾನ ಮುಂತಾದವುಗಳಲ್ಲಿ ಹಿಂದುಳಿದುದರಿಂದ ನಾಡಿನಲ್ಲಿ ಪರಾವಲಂಭಿ ಬದುಕನ್ನು ಬದುಕಬೇಕಾಯಿತು.

ಆರ್ಥಿಕತೆಯ ಬಲಸಂವರ್ಧನೆಗೆ ಪೂರಕವಾದ ಕೃಷಿ. ಶಿಕ್ಷಣ, ವಾಣಿಜ್ಯ-ವ್ಯಾಪಾರ, ಉದ್ಯೋಗ ಮುಂತಾದವುಗಳಲ್ಲಿ ಬೇಡಸಮುದಾಯ ತುಂಬಾ ಹಿಂದುಳಿದಿದೆ. ಪರಿಣಾಮವಾಗಿ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಮೂಲಭೂತ ಸೌಲಭ್ಯಗಳನ್ನು ಹೊಂದಿರದೆ ಕಡುಬಡತನವನ್ನು ಅನುಭವಿಸುತ್ತಿದೆ. ಬೇಡರ ಜೀವನ ಕ್ರಮ ಮತ್ತು ಜೀವನಾಧಾರಕ್ಕೆ ಅವಲಂಭಿಸಿರುವ ವೃತ್ತಿಗಳನ್ನೂ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಆದಂತಹ ಏಳು-ಬೀಳುಗಳನ್ನು ಅವಲೋಕಿಸಿದಾಗ ಆರ್ಥಿಕ ಸ್ಥಿತಿ-ಗತಿಯನ್ನು ಸ್ಪಷ್ಟವಾಗಿ ತಿಳಿಯಬಹುದು.

ವ್ಯವಸಾಯ

ಬುಡಕಟ್ಟಿನ ಬೇಡರು ತಾವು ವಾಸಿಸುವುದಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಬಹುತೇಕ ಪ್ರದೇಶಗಳು ಅತ್ಯಂತ ಕಡಿಮೆ ಮಳೆ ಬೀಳುವಂತಹ ಗುಡ್ಡಗಾಡಿನ ಬಂಜರು ಭೂಪ್ರದೇಶ ಗಳಾಗಿವೆ. ೪-೫ ಎಕರೆ ಭೂಮಿಯನ್ನು ಹೊಂದಿರುವ ಸಣ್ಣ ರೈತರೇ ಅಧಿಕವಾಗಿದ್ದು, ನೂರಾರು ಎಕರೆ ಭೂಮಿಯನ್ನು ಹೊಂದಿರುವ ದೊಡ್ಡ ರೈತರು ತುಂಬಾ ವಿರಳ.ಇವರು ರಾಗಿ, ಜೋಳ, ಹುರುಳಿ, ಸಜ್ಜೆ, ನವಣೆ ಮುಂತಾದ ಸಾಮಾನ್ಯ ದವಸ ಧಾನ್ಯಗಳನ್ನು ಬೆಳೆಯುತ್ತಾರೆ. ಇತ್ತೀಚೆಗೆ ಶೇಂಗ, ಸೂರ್ಯಕಾಂತಿ, ಮೆಕ್ಕೆಜೋಳ, ವಾಣಿಜ್ಯ, ಬೆಳೆಗಳನ್ನು ಬೆಳೆದರೂ ಇವರು ವಾಸಿಸುವ ಹಟ್ಟಿ-ಹಳ್ಳಿಗಳಿಗೆ ಸಮೀಪವಾಗಿ ಮಾರುಕಟ್ಟೆ ಸೌಕರ್ಯವಿಲ್ಲದೆ ಸಾಲಪಡೆದ ಮುಲಾಜಿಗೆ ಸ್ಥಳೀಯ ಬಂಡವಾಳಗಾರರಿಗೆ ಇಲ್ಲವೆ ಅನಧಿಕೃತ ಸಂಚಾರಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇವರ ಉಪಕಸಬು ಕುರಿ-ಮೇಕೆಗಳ ಸಾಕಾಣಿಕೆ ಮಾರಕ ರೋಗಗಳಿಂದ ಅವನತಿಯ ಹಾದಿಯಲ್ಲಿದೆ.  ಸಕಾಲಕ್ಕೆ ಬಾರದ ಮಳೆ ಅವೈಜ್ಞಾನಿಕ ವ್ಯವಸಾಯಪದ್ಧತಿ, ಸರ್ಕಾರದ ಸೌಲತ್ತುಗಳು ತಲುಪದೆ ಇರುವುದು, ಸಾಲದ ಬಾಧೆ ಹಲವಾರು ಸಮಸ್ಯೆಗಳಿಂದ ಈ ಸಮುದಾಯದ ರೈತರ ಜೀವನ ಅತ್ಯಂತ ಶೋಚನೀಯವಾಗಿದೆ.

ವ್ಯಾಪಾರ

ಬೇಡರಲ್ಲಿ ಶಿಕ್ಷಣ ಮತ್ತು ಬಂಡವಾಳದ ಕೊರತೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವಂತಹ ವ್ಯಾಪಾರಗಾರರ ಸಂಖ್ಯೆ ಅತ್ಯಂತ ಕಡಿಮೆ. ಬಹಳಷ್ಟು ಜನರು ದೈನಂದಿನ ಜೀವನಾಧಾರಕ್ಕಾಗಿ ತರಕಾರಿ ಅರಣ್ಯದಲ್ಲಿ ಸಿಗುವ ಹಣ್ಣು- ಹಂಪಲು ಬೀಡಾ ಸ್ಟಾಲ್ ಮುಂತಾದ ಚಿಕ್ಕಪುಟ್ಟ ವ್ಯಾಪಾರಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ವಿದ್ಯಾವಂತ ಯುವಕರು ವ್ಯವಹಾರಜ್ಞಾನವುಳ್ಳವರಾಗಿದ್ದು, ದೊಡ್ಡ ಪ್ರಮಾಣದ ವ್ಯಾಪಾರ ಮಾಡಲು ಉತ್ಸಾಹಕರಾಗಿದ್ದರೂ ಬಂಡವಾಳದ ಕೊರತೆ ಅವರನ್ನು ಕುಗ್ಗಿಸಿ ನಿರಾಶೆಯನ್ನುಂಟುಮಾಡಿದೆ. ಆಸ್ತಿ-ಒಡವೆಗಳ ಆಧಾರ ಅಥವಾ ಬಂಡವಾಳಗಾರರ ಜಾಮೀನು ಇಲ್ಲದೆ ಬ್ಯಾಂಕ್ ಮತ್ತು ಸರ್ಕಾರಿ-ಸರ್ಕಾರೇತರ ಲೇವಾದೇವಿ ಹಣಕಾಸು ಸಂಸ್ಥೆಗಳು ಸಾಲವನ್ನು ನೀಡದಿರುವುದು ಈ ಸಮುದಾಯದ ವಿದ್ಯಾಂವತ ಯುವಕರಿಗೆ ಭ್ರಮನಿರಸನವನ್ನುಂಟುಮಾಡಿದೆ.

ಶಿಕ್ಷಣಸರ್ಕಾರಿ ಉದ್ಯೋಗ

ಬ್ರಿಟಿಷ್ ಸರ್ಕಾರ ವಿದ್ಯಾವಂತರಲ್ಲದ ನಾಯಕ ಬುಡಕಟ್ಟನ್ನು ನಿಕೃಷ್ಟವಾಗಿ ಕಂಡದ್ದಲ್ಲದೆ ಇವರ ವಾಸದ ನೆಲೆಗಳನ್ನು ಒಕ್ಕಲೆಬ್ಬಿಸಿ, ಅನೇಕ ಪಾಳೆಯಗಾರರ ಸಂಪತ್ತನ್ನು ಮುಟ್ಟು ಗೋಲು ಹಾಕಿಕೊಂಡ ಕಾರಣ ಈ ಬುಡಕಟ್ಟಿನ ಆರ್ಥಿಕ ದಿವಾಳಿತನಕ್ಕೆ ಕಾರಣವಾಯಿತು. ಉದ್ಯೋಗ ನೇಮಕಾತಿಯಲ್ಲಿ ಯಾವ ಪ್ರಾಶಸ್ತ್ಯವೂ ಇರಲಿಲ್ಲ. ನಾಯಕ ಬುಡಕಟ್ಟಿನವರು ಮಾತ್ರ ವಾಸವಾಗಿರುವ ಹಟ್ಟಿ-ಹಳ್ಳಿಗಳಲ್ಲಿ ಕಂದಾಯದ ವಸೂಲಿಗಾಗಿ ಗೌಡ, ಶಾನಭೋಗ, ತಳವಾರ ಹುದ್ದೆಗಳು ಅನಿವಾರ್ಯವಾಗಿ ನೇಮಕವಾದವು. ಸದೃಢ ಮೈಕಟ್ಟು, ಧೈರ್ಯಸಾಹಸ ಪ್ರಮಾಣಿಕತೆಗಳ ಅರ್ಹತೆಯಿಂದ ಕೆಲವರು ಕಛೇರಿಗಳಲ್ಲಿ ಜವಾನರಾಗಿ, ವನಪಾಲಕರಾಗಿ ನೇಮಕಗೊಂಡರು.

ಸ್ವಾತಂತ್ರ್ಯ ಹೋರಾಟದಲ್ಲಿ ತನು-ಮನ-ಧನಗಳನ್ನು ಸಮರ್ಪಣೆ ಮಾಡಿದ ಈ ಬುಡಕಟ್ಟಿನ ಬಗ್ಗೆ ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ಸರ್ಕಾರ ಸ್ವಲ್ಪವೂ ಗಮನ ಹರಿಸಲಿಲ್ಲ. ಇವರ ಸ್ಥಿತಿ-ಗತಿ ಕುರಿತು ಸಮೀಕ್ಷೆ ಮಾಡದಿರುವುದು ಯೋಜನೆಗಳನ್ನು ರೂಪಿಸ ದಿರುವುದು ಬೇಡ ಸಮುದಾಯದ ದೌರ್ಭಾಗ್ಯವೆಂದೇ ಹೇಳಬಹುದು. ೧೯೭೨ ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿ ಮಾನ್ಯ ದೇವರಾಜ ಅರಸುರವರ ಸಾಮಾಜಿಕ ಕಳಕಳಿ ಯಿಂದಾಗಿ, ಖ್ಯಾತ ವಕೀಲರಾದ ಶ್ರೀ ಎಲ್.ಜಿ. ಹಾವನೂರ್‌ರವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ಈ ವರ್ಗಗಳ ಸಮಸ್ಯೆಗಳನ್ನು ತಿಳಿಯುವುದು, ಪರಿಹಾರವನ್ನು ಕಂಡುಕೊಳ್ಳುವುದೇ ಆಯೋಗದ ಮುಖ್ಯ ಉದ್ದೇಶವಾಗಿತ್ತು. ಆಯೋಗವು ೧೯೭೫ರಲ್ಲಿ ನಾಲ್ಕು ಸಂಪುಟಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತು. ಆ ವರದಿಯಲ್ಲಿ ಕರ್ನಾಟಕ  ರಾಜ್ಯದಲ್ಲಿ ಬೇಡ ಬುಡಕಟ್ಟು ಒಟ್ಟು ಜನಸಂಖ್ಯೆ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ, ದರ್ಜೆವಾರು ಸರ್ಕಾರಿ ನೌಕರ ಸಂಖ್ಯೆ ಮುಂತಾದ ವಿಚಾರಗಳನ್ನು ತಿಳಿಸಿದ್ದಾರೆ. ನಾಯಕ ಸಮುದಾಯದ ಎಲ್ಲಾ ದರ್ಜೆ ನೌಕರರ ಸಂಖ್ಯೆ ಕೇವಲ ೪೩೦೭.

ಹಾವನೂರ್ ವರದಿ ನಾಯಕ ಸಮಾಜಕ್ಕೆ ಸಂಜೀವಿನಿಯೆಂದೇ ಹೇಳಬಹುದು. ನಂತರ ಸಮಾಜ ಕಲ್ಯಾಣ ಇಲಾಖೆಯ ಸ್ಥಾಪನೆ ಜನಾಂಗದ ಶೈಕ್ಷಣಿಕ ಪ್ರಗತಿಗೆ ತುಂಬಾ ಸಹಕಾರಿ ಯಾಯಿತು. ನಾಯಕ ಸಮುದಾಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಶೇಕಡ ೩% ರಷ್ಟು ಮೀಸಲಾತಿ ನಿಗದಿಗೊಳಿಸಿದುದರಿಂದ ಉದ್ಯೋಗಕ್ಕೆ ಸೇರಿಕೊಂಡರು. ಇದರಿಂದ ಬೇಡ ಸಮುದಾಯದ ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸಿತು. ಈ ಸೌಲಭ್ಯದಿಂದ ಬಳ್ಳಾರಿ ಜಿಲ್ಲೆಯ ಜನತೆ ವಂಚಿತರಾದದ್ದು ಶೈಕ್ಷಣಿಕ-ಆರ್ಥಿಕವಾಗಿ ಹಿಂದುಳಿಯಲು ಕಾರಣವಾಯಿತು. ಹಲವು ವರ್ಷಗಳ ಹೋರಾಟದ ಫಲವಾಗಿ ೧೯೯೧ರಲ್ಲಿ ಬಳ್ಳಾರಿ ಜಿಲ್ಲೆಯ ನಾಯಕ (ಬೇಡ, ವಾಲ್ಮೀಕಿ) ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತು.

ಇತ್ತೀಚೆಗೆ ನಾಯಕ ಸಮುದಾಯವು ಶಿಕ್ಷಣದಲ್ಲಿ ಮುನ್ನಡೆಸಾಧಿಸುತ್ತಿದ್ದು, ಮರಳುಗಾಡಿನ ಓಯಾಸಿಸ್‌ನಂತೆ ಐ.ಎ.ಎಸ್ ಅಧಿಕಾರಿಗಳಾಗಿ ನೇಮಕವಾಗುತ್ತಿರುವುದು ಸಂತಸದ ಸಂಗತಿ. ಕರ್ನಾಟಕ ರಾಜ್ಯದಲ್ಲಿ ೬೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಾಯಕ ಸಮುದಾಯ ಉದ್ಯೋಗದಲ್ಲಿ ನಿಗದಿಗೊಳಿಸಿರುವ ಶೇಕಡ ೩%ರ ಮೀಸಲಾತಿ ಅತ್ಯಲ್ಪ. ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇಕಡ ೭%ರ ಮೀಸಲಾತಿಯನ್ನು ಅನುಸರಿಸಿದರೆ ಇವರ ಏಳಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ಪಕ್ಷ ರಹಿತ ರಾಜಕೀಯ ಸಂಕಲ್ಪ, ಸಂಘ-ಸಂಸ್ಥೆಗಳ ಸಂಘಟನೆ, ಹೋರಾಟಗಳಿಂದ ಮೀಸಲಾತಿಗೆ ಪ್ರಯತ್ನಸಿ ಯಶಸ್ಸನ್ನು ಕಾಣಬೇಕಾಗಿದೆ.

ಸಹಕಾಸಾಮರಸ್ಯ ಬದುಕಿನ ಕೊರತೆ

ಗ್ರಾಮೀಣ ಪ್ರದೇಶದ ಬೇಡ ಸಮುದಾಯದಲ್ಲಿ ಅಜ್ಞಾನ-ಬಡತನ ಬಹಳಷ್ಟಿದ್ದು ಪರಸ್ಪರ ವೈಷಮ್ಯ, ದ್ವೇಷ, ಅಸೂಯೆಗಳು ತಾಂಡವವಾಡುತ್ತಿವೆ.ಇವುಗಳ ಪರಿಣಾಮವಾಗಿ ಕಾಲಿಡಿದೆಳೆ ಯುವ ಪ್ರವೃತ್ತಿ ದಿನೇ ದಿನೇ ಹೆಚ್ಚಾಗಿದ್ದು ಸಹಕಾರ-ಸಾಮರಸ್ಯದ ಬದುಕಿಗೆ ಬರಬಂದಿದೆ. ಒಡೆದು ಆಳುವ ನೀತಿಯನ್ನು ಅನುಸರಿಸುವವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ರಕ್ಷಕರೇ ಭಕ್ಷಕರಾದರೆ ಉಳಿಗಾಲ ಇನ್ನೆಲ್ಲಿದೆ? ಹಾವು ತನ್ನ ಮೊಟ್ಟೆಯನ್ನು ತಾನೇ ತಿಂದು ಬದುಕುವಂತೆ ಸಮುದಾಯದ ಮುನ್ನಡೆಗೆ ವಾರಸುದಾರರಾದವರೇ ಹಣ, ಅಧಿಕಾರ, ಕೀರ್ತಿಗಾಗಿ ತಮ್ಮನ್ನು ತಾವು ಶೋಷಿಸುತ್ತಿರುವುದು ಆರ್ಥಿಕ, ಸಾಮಾಜಿಕ, ರಾಜಕೀಯ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ.

ನಾಯಕರು ಪರಸ್ಪರ ಸಹಕಾರ-ಸಾಮರಸ್ಯದ ಬದುಕನ್ನು ರೂಪಿಸಿಕೊಂಡು ಸಂಘಟಿತ ರಾದರೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದು ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿ ಕೊಳ್ಳಲು ಸಾಧ್ಯವಾಗುತ್ತದೆ.

ನಾಯಕರಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ಹೊಲಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ ಗಣಿಗಾರಿಕೆಯಲ್ಲಿ, ಸರ್ಕಾರಿ ಕಾಮಗಾರಿಗಳಲ್ಲಿ ಶ್ರಮಿಸುತ್ತಿದ್ದಾರೆ. ಇವರನ್ನು ಅಧಿಕಾರಿಗಳು, ಬಂಡವಾಳಗಾರರು ನಯವಾಗಿ ಶೋಷಣೆ ಮಾಡುತ್ತಿರುವುದರಿಂದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಅಲ್ಲದೆ ಜೀವವಿಮೆ, ವಸತಿ, ಪೌಷ್ಟಿಕ ಆಹಾರ, ಔಷಧೋಪ ಕಾರ ಮುಂತಾದ ಸೌಲತ್ತುಗಳಿಲ್ಲದೆ  ಹಗಲು-ರಾತ್ರಿ ದುಡಿದು ಅನಾರೋಗ್ಯದಿಂದ ಬಳಲಿ ಸಾಯುತ್ತಿದ್ದಾರೆ. ಇದರಿಂದ ಅನೇಕ ಕೂಲಿ-ಕಾರ್ಮಿಕ ಕುಟುಂಬಗಳು ನಿರ್ಗತಿಕವಾಗಿವೆ. ಇಂತಹ ಕುಟುಂಬಗಳಿಗೆ ಭದ್ರತೆಯನ್ನು ನೀಡಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಹಕರಿಸಬೇಕಾಗಿದೆ.

ದುಶ್ಚಟಗಳ ದಾಸ್ಯತೆ

ಬೇಡ ಸಮುದಾಯವು ತಮ್ಮ ಆದರ್ಶ ಜೀವನ ಮೌಲ್ಯಗಳನ್ನು ಗಾಳಿಗೆ ತೂರಿ, ಆಧುನಿಕ ಮೋಜಿನ ಜೀವನಕ್ಕೆ ಮಾರುಹೋಗಿ, ದುಶ್ಚಟಗಳಿಗೆ ದಾಸರಾಗಿರುವುದೇ ಆರ್ಥಿಕ ದೀವಾಳಿ ತನಕ್ಕೆ ಕರಾಳ ಶಾಪವಾಗಿದೆ. ಇವರು ಶ್ರಮಜೀವಿಗಳು ಆದರೆ ದುಡಿದುದ್ದನ್ನು ಸದುಪಯೋಗ ಮಾಡಿಕೊಳ್ಳುವ ಜೀವನದ ಜಾಣ್ಮೆ ಬಹಳಷ್ಟು ಜನಕ್ಕಿಲ್ಲ. ದುಡಿತದ  ಬಹುಭಾಗವನ್ನು ಮಧ್ಯಪಾನಕ್ಕೆ ವ್ಯಯಮಾಡುತ್ತಾರೆ. ಅಲ್ಲದೆ ಕೌಟುಂಬಿಕ ಸಮಸ್ಯೆಗಳಿಗಿಂತ ಕುಡಿತ, ಜೂಜು ಮುಂತಾದ ದುಶ್ಚಟಗಳಿಗಾಗಿ ಸಾಲ ಮಾಡುವುದರಿಂದ ಬಡತನ- ದಾರಿದ್ರ್ಯಗಳಿಂದ ಮೇಲೇಳಲಾಗುತ್ತಿಲ್ಲ. ಇದಕ್ಕೆ ಏಕೈಕ ಪರಿಹಾರ ಎಂದರೆ ಮಧ್ಯಪಾನ ನಿಷೇಧ ರಾಷ್ಟ್ರೀಯ ನೀತಿಯಾಗಬೇಕು. ಆಗ ಒಂದು ಸಮುದಾಯ ಮಾತ್ರವಲ್ಲ ಸಮಸ್ತ ಸಮಾಜವೇ ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ವರ್ಷದಲ್ಲಿ ೩-೪ ತಿಂಗಳು ವ್ಯವಸಾಯದ ಕೆಲಸಗಳನ್ನು ಮುಗಿಸಿಕೊಂಡು ೬-೭ ತಿಂಗಳು ದುಡಿಮೆ ಇಲ್ಲದೆ ಕಾಲ ಕಳೆಯುತ್ತಾರೆ. ಅವರನ್ನು ದುಡಿಮೆಗೆ ತೊಡಗಿಸಿ, ಆರ್ಥಿಕ ಪ್ರಗತಿಗೆ ಅನುವಾಗುವಂತಹ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳ ಬೇಕಾಗಿದೆ. ಉದಾಹರಣೆಗೆ ಚಳ್ಳಕೆರೆಯ ಪ್ರಥಮ ದರ್ಜೆ ಕೃಷಿ ಮಾರುಕಟ್ಟೆ, ನೇರ‌್ಲಗುಂಟೆ ಕುರಿಸಂಗೋಪನೆ, ಉಳ್ಳಾರ್ತಿ ಪಶುಸಂಗೋಪನೆ, ಮಹದೇವಪುರದ ತೋಟಗಾರಿಗೆ-ಇವು ಆ ಭಾಗದ ಬೇಡ ಬುಡಕಟ್ಟಿನ ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅದೇ ರೀತಿ ಘನ ಸರ್ಕಾರ ರಾಯಚೂರು ಬಳ್ಳಾರಿ, ಚಿತ್ರದುರ್ಗ, ಕೋಲಾರ, ತುಮಕೂರು ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೆ ಖಂಡಿತ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಛಾಯಾಗ್ರಹಣ, ಹೊಲಿಗೆ, ಬಡಿಗೆ, ಹೈನುಗಾರಿಕೆ, ರೇಷ್ಮೆ, ಎಲೆಕ್ಟ್ರಿಕಲ್, ಕಂಪ್ಯೂಟರ್ ಮುಂತಾದ ವೃತ್ತಿಪರ ತರಬೇತಿಗಳನ್ನು ಸರ್ಕಾರ ಈ ಸಮುದಾಯದ ವಿದ್ಯಾವಂತ ಯುವಜನರಿಗೆ ನೀಡಿ ವಿನಾಯಿತಿಯಲ್ಲಿ ಸಾಲಸೌಲಭ್ಯ ಒದಗಿಸಿದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸಿದಂತಾಗುತ್ತದೆ. ನಾಯಕ ಬುಡಕಟ್ಟು ಇತ್ತೀಚೆಗೆ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಸಾಧಿಸಿರು ವಂಥದ್ದು ನಿರಾಶದಾಯಕವೇನಲ್ಲ. ಬೇಗನ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಸ್ತಿತ್ವದ ಭದ್ರತೆಯನ್ನು ನೆಲೆಗೊಳಿಸಿಕೊಳ್ಳಬೇಕೆಂದು ಕಾತರತೆಯಿಂದ ಸಮುದಾಯದ ಸಮಸ್ತ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಆದರೆ ನಿಶ್ಚಿತ ಗುರಿಯನ್ನು ಮುಟ್ಟಬೇಕಾದರೆ ರಾಜಕೀಯ ದೃಢಸಂಕಲ್ಪದಿಂದ ಮಾತ್ರ ಸಾಧ್ಯ. ಆದ್ದರಿಂದ ಸಮುದಾಯದ ಸಾರಥ್ಯವನ್ನು ವಹಿಸಿಕೊಂಡಿರುವಂತಹ ರಾಜಕೀಯ ಧುರೀಣರು ತಮ್ಮ ಪಕ್ಷ ಭೇದಗಳನ್ನು ಮರೆತು, ಸಮಾಜ ಸುಧಾರಕರನ್ನು, ಬುದ್ದಿಜೀವಿಗಳನ್ನು ಜೊತೆಗೂಡಿಸಿಕೊಂಡು ಪ್ರಾಣಿಕ ವಾಗಿ ಹೋರಾಡಿದರೆ ಆರ್ಥಿಕ ಸಬಲೀಕರಣ ಖಂಡಿತ ಸಾಧ್ಯ. ಒಬ್ಬನಿಗಾಗಿ ಎಲ್ಲರೂ ಎಲ್ಲರಿಗಾಗಿ ಒಬ್ಬನು ಎಂಬ ತತ್ವ ದಿವ್ಯ ಮಂತ್ರವಾಗಿ, ಸಹಕಾರ ತತ್ವ, ಕಾಯಕತತ್ವಗಳನ್ನು ಮೈಗೂಡಿಸಿಕೊಂಡು ಸಂಘಟನೆ, ಹೋರಾಟಗಳಿಂದ ಸಮುದಾಯವು ತ್ವರಿತಗತಿಯಲ್ಲಿ ನಿಶ್ಚಿತ ಗುರಿಯನ್ನು ತಲುಪಲಿ ಎಂದು ಆಶಿಸೋಣ.