ಬುಡಕಟ್ಟು ಸಮುದಾಯಗಳ ಇತಿಹಾಸ, ಸಂಸ್ಕೃತಿ, ಜೀವನಪದ್ಧತಿ, ಬದುಕುವ ಕ್ರಮ, ವೃತ್ತಿ, ಆಚಾರ-ವಿಚಾರ, ಸಂಪ್ರದಾಯ, ದೈವ, ನಂಬಿಕೆ ಮೊದಲಾದ ಸಾಂಸ್ಕೃತಿಕ ಅಂಶಗಳ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಭಾಷೆಯ ಮುಖೇನ ಬುಡಕಟ್ಟು ಅಧ್ಯಯನಗಳು ನಡೆದಿರುವುದು ಬಹಳ ವಿರಳ. ಈ ದಿಸೆಯಲ್ಲಿ ಬುಡಕಟ್ಟು ಸಮುದಾಯವಾದ ಮ್ಯಾಸಬೇಡರ ಭಾಷೆಯನ್ನು ಸಾಮಾಜಿಕ ನೆಲೆಯಲ್ಲಿ ಅಧ್ಯಯನ ಮಾಡುವುದು ಸೂಕ್ತವೆನಿಸುತ್ತದೆ. ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೆ ಆಗಿರುವುದಿಲ್ಲ. ಭಾಷೆಯಿಂದ ಒಂದು ಸಮುದಾಯ, ಒಬ್ಬ ವ್ಯಕ್ತಿಯ ಇತಿಹಾಸ, ಸಂಸ್ಕೃತಿ, ಬದುಕುವ ಕ್ರಮ, ಜೀವನ ಪದ್ಧತಿ, ಜೀವನ ಮೌಲ್ಯ, ಆಲೋಚನ ವಿಧಾನ ಆಚಾರ-ವಿಚಾರ, ಸಂಪ್ರದಾಯ, ದೈವ, ನಂಬಿಕೆ ಮುಂತಾದ ಸಾಂಸ್ಕೃತಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ಹಿನ್ನೆಲೆ ಯಲ್ಲಿ ಮ್ಯಾಸಬೇಡರ ಭಾಷೆಯ ಸ್ವರೂಪವನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಒಂದು ಸಮುದಾಯದಲ್ಲಿ ಬಳಕೆಯಾಗುವ ಭಾಷೆ ಹಲವು ರೀತಿಯ ಮಾತಿನ ಶೈಲಿ, ಹಲವು ರೀತಿಯ ಭಾಷಾ ವೈವಿಧ್ಯತೆಯನ್ನು ಹೊಂದಿರುತ್ತದೆ. ಅವುಗಳು ಒಂದೇ ಸಮನಾಗಿರುವುದಿಲ್ಲ.

ಭಾಷೆಯಲ್ಲಿ ಧ್ವನಿ, ಪದ-ವಾಕ್ಯ, ಅರ್ಥ ಮುಂತಾದ ಅಂಶಗಳಿರುವಂತೆ ಸಾಮಾಜಿಕ ರಚನೆಯಲ್ಲಿ ಮನುಷ್ಯನಿಗೆ ಲಿಂಗ, ವರ್ಗ, ಜಾತಿ, ವಯಸ್ಸು, ವೃತ್ತಿ, ಶಿಕ್ಷಣ, ಕುಟುಂಬ ಮುಂತಾದ ಅಂಶಗಳಿರುವುದು ಗೋಚರವಾಗುತ್ತದೆ. ಇವುಗಳಿಂದ ಸಾಮಾಜಿಕ ರಚನೆಯಲ್ಲಿ ಮನುಷ್ಯನಿಗೆ ಇರುವ ಭಾಷಾ ಸಂಬಂಧವನ್ನು ತಿಳಿಯಬಹುದಾಗಿದೆ. ಸಾಮಾಜಿಕ ಭಿನ್ನಾಂಶಗಳು ಸಮಾಜದಲ್ಲಿ ದಿನನಿತ್ಯ ಬಳಕೆಯಾಗುವ ಭಾಷೆಯನ್ನು ನಿಯಂತ್ರಿಸುತ್ತಿರುತ್ತವೆ. ಭಾಷೆ ವರ್ಗದಿಂದ ವರ್ಗಕ್ಕೆ, ಜಾತಿಯಿಂದ ಜಾತಿಗೆ, ಸಮುದಾಯದಿಂದ ಸಮುದಾಯಕ್ಕೂ, ವೃತ್ತಿಯಿಂದ ವೃತ್ತಿಗೂ, ವಿದ್ಯಾವಂತರಿಂದ ಅವಿದ್ಯಾವಂತರಿಗೂ, ಪುರುಷರಿಂದ ಮಹಿಳೆ ಯರಿಗೂ ಬಳಕೆಯಾಗುವಲ್ಲಿ ವ್ಯತ್ಯಾಸ ಹೊಂದಿರುತ್ತದೆ.

ಸಮಾಜ ಮತ್ತು ಭಾಷೆ ಇವೆರಡರ ಆಂತರಿಕ ಸಂಬಂಧ ವಿಶಿಷ್ಟವಾದುದು. ಭಾಷೆಯಿಂದ ಸಮಾಜದ ರಚನಾ ವ್ಯವಸ್ಥೆಯನ್ನು ಬಹುಸುಲಭವಾಗಿ ಅರಿಯಬಹುದು. ಮನುಷ್ಯ ಸಮಾಜ ದಲ್ಲಿ ಸರ್ವಸ್ವತಂತ್ರನಾಗಿರದೆ ಆಯಾ ಸಮುದಾಯ ಅವಿಚ್ಛಿನ್ನ ಘಟಕವಾಗಿರುವನು. ವ್ಯಕ್ತಿಯನ್ನು ಸಮಾಜದಿಂದ ಬೇರ್ಪಡಿಸಲಾಗದು, ವ್ಯಕ್ತಿಯಿಂದ ಭಾಷೆಯನ್ನು ಬೇರ್ಪಡಿಸ ಲಾಗದು. ಹಾಗಾಗಿ ಭಾಷೆ ಸಮಾಜದ ಎಲ್ಲಾ ಚಟುವಟಿಕೆಗಳ ಬುನಾದಿ. ಸಮಾಜದ ಬೆಳವಣಿಗೆಗೆ ಹಾಗೂ ಬದಲಾವಣೆಗೆ ಭಾಷೆ ಅನಿವಾರ್ಯವೆನಿಸುತ್ತದೆ. ಭಾಷೆಯನ್ನು ಸಮಾಜದ ಹಿನ್ನೆಲೆಯಲ್ಲಿ ಗಮನಿಸದೆ ಅಧ್ಯಯನ ಮಾಡಿದರೆ ಭಾಷೆಯ ಸಂಪೂರ್ಣ ವೈಜ್ಞಾನಿಕ ವಿಶ್ಲೇಷಣೆ ಮಾಡಿದಂತಾಗುವುದಿಲ್ಲ ಎಂದು ಪೀಟರ್ ಟ್ರಡ್ಜಿಲ್ (೧೯೭೮) ಅವರು ಅಭಿಪ್ರಾಯಪಡುತ್ತಾರೆ.

ಸಮುದಾಯಗಳ ಜನರು ಬೇರೆ ಬೇರೆ ಭೂ ಪ್ರದೇಶಗಳಿಗೆ ಹೋಗಿ ನೆಲಸುವುದು ವಲಸೆ ಇತ್ಯಾದಿ ಕಾರಣಗಳಿಂದಾಗಿ ಅಂತಹ ಸಂದರ್ಭದಲ್ಲಿ ಬೇರೆ ಭಾಷಾ ಸಮುದಾಯ ಗಳೊಂದಿಗೆ ಬೆರೆಯುವುದು ಅನಿವಾರ್ಯವುಂಟಾಗುತ್ತದೆ. ಇಂತಹ ಪರಿಸ್ಥಿತಿಗಳು ಬಹುಹಿಂದಿ ನಿಂದಲೂ ಉಂಟಾಗಿರುವುದಕ್ಕೆ ಪುರಾವೆಗಳಿವೆ. ಅದೇನೆ ಇರಲಿ ಒಂದು ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳು ಬಳಕೆಯಾಗುವ ಸಂದರ್ಭವಿದ್ದಾಗ ಅದನ್ನೊಂದು ಬಹುಭಾಷಿಕ ಸನ್ನಿವೇಶ ಎನ್ನುತ್ತೇವೆ. ಇಂಥ ಸನ್ನಿವೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆ ಗಳನ್ನು ಕಲಿತು ಬಳಸಬೇಕಾದ ಅವಕಾಶ ಒತ್ತಡಗಳು ಉಂಟಾಗುತ್ತವೆ. ಜನರು ಹೀಗೆ ಎರಡು ಭಾಷೆಗಳನ್ನು ಕಲಿತು ಬಳಸತೊಡಗಿದಾಗ ಆ ಪರಿಸರದಲ್ಲಿ ದ್ವಿಭಾಷಿಕತೆ ಇದೆ ಎನ್ನುತ್ತೇವೆ. ಉದಾ. ಕರ್ನಾಟಕದ ಕೋಲಾರ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕನ್ನಡ ತೆಲುಗು ಈ ಎರಡೂ ಭಾಷೆಗಳನ್ನು ಕಲಿತು ಬಳಸುವ ಜನಸಮುದಾಯಗಳು ಹಲವಾರು ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದ್ದಾರೆ. ಹಾಗಾಗಿ ಇದೊಂದು ದ್ವಿಭಾಷಿಕ ಪ್ರದೇಶ. ಅದೇ ರೀತಿಯಾಗಿ ಚಿತ್ರದುರ್ಗ ಪರಿಸರದ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳಲ್ಲಿ ಕನ್ನಡ ತೆಲುಗು ಎರಡು ಭಾಷೆಗಳನ್ನು ಬಳಸುವ ಜನಸಮುದಾಯಗಳು ಕಾಣಬರುತ್ತವೆ. ಅಂಥ ಸಮುದಾಯಗಳಲ್ಲಿ ಮ್ಯಾಸಬೇಡರ ಸಮುದಾಯವೂ ಒಂದು.

ಕರ್ನಾಟಕದಲ್ಲಿ ಕೆಲವು ಸಮುದಾಯಗಳು ತಮ್ಮ ಮೂಲಭಾಷೆಯನ್ನು ಕಳೆದುಕೊಂಡು ಕನ್ನಡವನ್ನೇ ತಮ್ಮ ಭಾಷೆಯನ್ನಾಗಿ ಸ್ವೀಕರಿಸಿರುವುದು ಸಾಧ್ಯವಾಗಿದೆ. ಆದರೆ ಕೆಲ ಸಮುದಾಯಗಳು ಚಿಕ್ಕ ಚಿಕ್ಕ ದ್ವಿಭಾಷಿಕ ಸಮುದಾಯಗಳಾಗಿ ರೂಪಗೊಂಡಿವೆ. ಉತ್ತರ ಕನ್ನಡ ಜಿಲ್ಲೆಯ ಹಲವಾರು ಬುಡಕಟ್ಟು ಸಮುದಾಯಗಳು ಇದಕ್ಕೆ ನಿದರ್ಶನ. ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಕಾಣಸಿಗುವ ಹತ್ತಾರು ಅಲೆಮಾರಿ ಸಮುದಾಯಗಳಾದ ಹಕ್ಕಿ ಪಿಕ್ಕಿಗಳು, ಬುಂಡೆ ಬೆಸ್ತರು, ಗೊಂಬೆಯಾಟದವರು, ದೊಂಬರು, ಜೋಗಿಗಳು ತಮ್ಮ ಮಾತೃಭಾಷೆ ಅಂದರೆ ಮನೆಭಾಷೆಯೊಂದಿಗೆ ತಮ್ಮ ಪರಿಸರದ ಇನ್ನೊಂದು ಭಾಷೆಯನ್ನು ಕಲಿಯುವುದರ ಮೂಲಕ ದ್ವಿಭಾಷಿಕ ಸಮುದಾಯಗಳಾಗಿ ಮಾರ್ಪಟ್ಟಿವೆ. ಇದೇ ರೀತಿ ಚಿತ್ರದುರ್ಗ ಪರಿಸರದ ಮ್ಯಾಸಬೇಡರ ಸಮುದಾಯವೂ ಕೂಡ ದ್ವಿಭಾಷಿಕ ಸಮುದಾಯವಾಗಿದ್ದು ಅಧ್ಯಯನ ಯೋಗ್ಯ ಅಂಶಗಳನ್ನು ಒಳಗೊಂಡಿದೆ.

ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಸಂಸ್ಕೃತಿ, ಜೀವನ ಪದ್ಧತಿ, ಕಸುಬು, ವೃತ್ತಿಗಳನ್ನು ಅಳವಡಿಸಿಕೊಂಡಂತೆ ತಮ್ಮದೇ ಆದ ಭಾಷೆಯನ್ನು ಅಳವಡಿಸಿಕೊಂಡಿರುತ್ತವೆ. ಮ್ಯಾಸಬೇಡರು ತಮ್ಮ ಆಪ್ತವಲಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮ ಮಾತೃಭಾಷೆಯಾದ ತೆಲುಗು ಭಾಷೆಯನ್ನು ಬಳಸಿ ವ್ಯವಹಾರಿಕ ವಲಯದಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಬಳಸುವುದು ಕಾಣಬರುತ್ತದೆ. ಈ ಸಮುದಾಯ ಯಾವ ಭಾಷೆಯ ಮುಖೇನ ತನ್ನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹಾಗೂ ಆಧುನೀಕರಣದ ಸಂದರ್ಭದಲ್ಲಿ ಯಾವ ಭಾಷೆಯ ಮೂಲಕ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

ಚಿತ್ರದುರ್ಗ ಪರಿಸರದಲ್ಲಿ ಇತರೆ ಸಮುದಾಯಗಳು ತೆಲುಗು ಭಾಷೆಯನ್ನು ಬಳಕೆ ಮಾಡಿದರೂ ಸಹ ಮ್ಯಾಸಬೇಡರು ಮಾತ್ರ ವಿಶಿಷ್ಟವಾದ ‘ತೆಲುಗುಗನ್ನಡ’ ಅಥವಾ ಭಾಷೆ ಯನ್ನು ‘ಕಂದೆಲುಗು’ ಬಳಸುವುದು ಕಾಣಬರುತ್ತದೆ. ನಿದರ್ಶನಕ್ಕಾಗಿ ಕೆಲವು ವಿಶಿಷ್ಟ ಪದಗಳೊಂದಿಗೆ ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಶಿಷ್ಟಕನ್ನಡ ಮ್ಯಾಸಬೇಡರ ತೆಲುಗು ಶಿಷ್ಟಕನ್ನಡ ಶಿಷ್ಟ ತೆಲುಗು ಪ್ರಯೋಗಗಳು ಮತ್ತು ವಿವರಣೆ
೧. ಕಟ್ಟಿಗೆ ಪುಡುಕಲು ಕಟ್ಟಿಗೆ ಶಿಷ್ಟ ತೆಲುಗಿನ ‘ಕಟ್ಟಲು’ ಎಂಬ ಪದದ ಬದಲು ‘ಪುಡುಕಲು’ ಎಂಬ ಪದವನ್ನು ಬಳಸುತ್ತಾರೆ. ‘ಪುಡು ಕಲು’ ಎಂದರೆ ಇವರ ಭಾಷೆಯಲ್ಲಿ ‘ಕಟ್ಟಿಗೆ’ ಎಂದರ್ಥ. ಕನ್ನಡದ ‘ಕಟ್ಟಿಗೆ ಪುಳ್ಳೆ’ ಎಂಬ ಪದದ ಪ್ರಭಾವದಿಂದ ಬಳಕೆಯಾಗುತ್ತಿರಬಹುದೆನಿಸುತ್ತದೆ. ಉದಾ.ಮ್ಯಾ.ತೆ : ಉರ್ತಾಳಾನ ಪುಡುಕಲು ಸ್ಯಾನ ನೊರಕುತಾರ. ಶಿ.ಕ : ಉರ್ತಾಳನಲ್ಲಿ ಕಟ್ಟಿಗೆ ಬಹಳ ಕಡಿಯುತ್ತಾರೆ.
೨. ಚೀಲ ತಿತ್ತಿ ಸಂಚಿ ಶಿಷ್ಟ ತೆಲುಗಿನ ‘ಸಂಚಿ’ ಎಂಬ ಪದದ ಬದಲು ಇವರ ತೆಲುಗಿನಲ್ಲಿ ‘ತಿತ್ತಿ’ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಈ ಪದಕ್ಕೆ ತೆಲುಗಿನ ಆಡು ನುಡಿಯಲ್ಲಿ ಬಳಕೆಯಾಗುವ ‘ತಿತ್ತಿ’  ಪದದ ಪ್ರಭಾವ ಬೀರಿರುವುದು ತಿಳಿದು ಬರುತ್ತದೆ. ಉದಾ. ಮ್ಯಾ.ತೆ : ಈ ತಡವು ಮಾಮು ನೂರು ತಿತ್ತಿಲು ಜೊಂಡ್ಲು ಬೆಳಸೆಮಿ. ಶಿ.ಕ. : ಈ ಸಲ ನಾವು ನೂರು ಚೀಲ ಚೋಳ ಬೆಳೆದಿದ್ದೇವೆ.
೩. ದೊಡ್ಡಪ್ಪ ಗೊಪ್ಪಯ್ಯ ಪೆದ್ದನಾಯನ ಶಿಷ್ಟತೆಲುಗಿನ ‘ಪೆದ್ದನಾಯನ’ ಎಂಬ ಪದದ ಬದಲಾಗಿ ಇವರ ತೆಲುಗಿನಲ್ಲಿ ‘ಗೊಪ್ಪಯ್ಯ’ ಎಂಬ ಪದವನ್ನು ಸಂಬಂಧ ಸೂಚಕವಾಗಿ ಬಳಸುತ್ತಾರೆ. ತೆಲುಗಿನಲ್ಲಿ ‘ಗೊಪ್ಪ’ ಎಂದರೆ ಉತ್ತಮ, ಒಳ್ಳೆಯ ಎಂಬ ಅರ್ಥವಿರುವುದು ತಿಳಿದುಬರುತ್ತದೆ. ಉದಾ. ಮ್ಯಾ.ತೆ : ಮಾ ಗೊಪ್ಪಯ್ಯ ನಾಮಿಂದ ಪಂಚಪ್ರಾಣಮು. ಶಿ.ಕ : ನಮ್ಮ ದೊಡ್ಡಪ್ಪ ನನ್ನ ಮೇಲೆ ಪಂಚಪ್ರಾಣ.
೪. ಬೆಳಿಗ್ಗೆ ರೆಕಾಡು ಪೊದ್ದುನ ಮ್ಯಾಸಬೇಡರು ‘ಬೆಳಿಗ್ಗೆ’ ಎನ್ನುವ ಪದಕ್ಕೆ ಇವರ ತೆಲುಗಿನಲ್ಲಿ ‘ರೆಕಾಡು’ ಎಂಬ ಪದವನ್ನು ಬಳಸುತ್ತಾರೆ. ಶಿಷ್ಟ ತೆಲುಗಿನಲ್ಲಿ ‘ಪೊದ್ದನ’ ಎಂಬ ಪದ ಪ್ರಯೋಗದಲ್ಲಿದೆ. ಆದರೆ ಇವರ ತೆಲುಗಿನಲ್ಲಿ ಈ ಪದ ಬಳಕೆಯಾಗುತ್ತಿರುವುದು ವಿಶಿಷ್ಟವೆನಿಸುತ್ತದೆ. ಉದಾ. ಮ್ಯಾ.ತೆ. : ನಾನು ರೆಕಾಡು ಲೇಸಿ ದುರ್ಗ ಮುಕಿ ಪೊವ್ವಾಲ. ಶಿ.ಕ. : ನಾನು ಬೆಳಿಗ್ಗೆ ಎದ್ದು ದುರ್ಗಕ್ಕೆ ಹೋಗಬೇಕು.
೫. ಮೊಲೆ ಸೊನ್ನು ಕೊಮ್ಮು ಶಿಷ್ಟ ತೆಲುಗಿನ ‘ಕೊಮ್ಮು’ ಎಂಬ ಪದದ ಬದಲಾಗಿ ‘ಸೊನ್ನು’ ಎಂಬ ಪದ ಬಳಕೆ ಮಾಡುವುದು ವಿಶೇಷವಾಗಿದೆ. ಕನ್ನಡದಲ್ಲಿ ‘ಮೊಲೆ’ ಎಂಬ ಪದ ಬಳಕೆಯಲ್ಲಿರುವುದು ಕಾಣಬರುತ್ತದೆ. ಉದಾ. ಮ್ಯಾ.ತೆ. : ಮಾ ಅಮ್ಮ ಪಾಪಕಿ ಸೊನ್ನು ಇಚ್ಚಾಕಿ ಪೊಯ್ಯಿದ.  ಶಿ.ಕ: ನಮ್ಮ ಅಮ್ಮ ತಂಗಿಗೆ ಮೊಲೆ ಕುಡಿಸುವುದಕ್ಕೆ ಹೋಗಿದ್ದಾರೆ.
೬. ಮುಗಳಿ ಪುಟ್ಟಿ ಗುದ್ದ ಶಿಷ್ಟತೆಲುಗಿನ ‘ಗುದ್ದ’ ಎಂಬ ಪದದ ಬದಲು ಇವರ ತೆಲುಗಿನಲ್ಲಿ ‘ಪುಟ್ಟಿ’ ಎಂಬ ಪದ ಬಳಕೆಯಾಗುವುದು ವಿಶಿಷ್ಟವೆನಿಸುತ್ತದೆ. ಕನ್ನಡದಲ್ಲಿ ‘ಮುಗಳಿ’ ಎಂಬ ಪದ ಬಳಕೆಯಲ್ಲಿರುವುದು ಕಾಣಬರುತ್ತದೆ. ಉದಾ. ಮ್ಯಾ.ತೆ: ರಾಮನಿಕಿ ಪುಟ್ಟಿ ಮಿದ ಗಾಯಮು ಆಯಿದಾ ಶಿ.ಕ: ರಾಮನಿಗೆ ಮುಗಳಿ ಮೇಲೆಗಾಯವಾಗಿದೆ.
೭. ಸಗಣಿ ತಪ್ಪ ಪ್ಯಾಡ ಶಿಷ್ಟ ತೆಲುಗಿನ ‘ಪ್ಯಾಡ’ ಎನ್ನುವ ಪದದ ಬದಲು ಇವರ ತೆಲುಗಿನಲ್ಲಿ ‘ತಪ್ಪ’ ಎಂಬ ಪದವನ್ನು ಬಳಸುತ್ತಾರೆ. ‘ತಪ್ಪ’ ಎಂದರೆ ‘ಸಗಣಿ’ ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಕನ್ನಡದ ‘ತೊಪ್ಪ’ ಎನ್ನುವ ರೂಪದಿಂದ ಪ್ರಭಾವ ಬೀರಿದೆನಿಸುತ್ತದೆ. ಉದಾ. ಮ್ಯಾ.ತೆ: ಪ್ರತಿ ಶನಿವಾರಮು ಇಂಟ ಮುಂದಾ ತಪ್ಪಮು ನೀಡ್ಲು ಏಸ್ತಾರಾ. ಶಿ.ಕ: ಪ್ರತಿ ಶನಿವಾರ ಮನೆ ಮುಂದೆ ಸಗಣಿ ನೀರು ಹಾಕುತ್ತಾರೆ.
೮. ಸಾರು ಅಗಲಿಕಾ/ಹಾಸ ಸಾರು ‘ಅಗಲಿಕ’ ಎನ್ನುವ ಪದವು ಇವರ ತೆಲುಗಿನಲ್ಲಿ ‘ಸಾರು’ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ಈ ಪದವು ಎರಡು ಭಾಷೆಗಳಿಗಿಂತ ಭಿನ್ನವಾಗಿ ಬಳಕೆ ಮಾಡುವುದು ವಿಶಿಷ್ಟವೆನಿಸುತ್ತದೆ. ಕೆಲವೊಂದು ಹಳ್ಳಿಗಳಲ್ಲಿ ‘ಹಾಸ’ ಎಂದು ಸಹ ಬಳಕೆ ಮಾಡುತ್ತಾರೆ.  ಉದಾ. ಮ್ಯಾ.ತೆ : ಬ್ಯಾಡ್ಲು ‘ಅಗಲಿಕಾ’ ಬಾಗುವುಂಡೆ. ಶಿ.ಕ : ಬೇಳೆ ‘ಸಾರು’ ಚೆನ್ನಾಗಿತ್ತು.
೯. ಹೊಟ್ಟೆ ವಡ್ಲು ಕಡಪು ‘ವಡ್ಲು’ ಎಂಬ ಪದವು ಇವರ ತೆಲುಗಿನಲ್ಲಿ ‘ಹೊಟ್ಟೆ’ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಶಿಷ್ಟ ತೆಲುಗಿನಲ್ಲಿ ‘ಕಡಪು’ ಎಂಬ ಪದ ಪ್ರಯೋಗದಲ್ಲಿದೆ. ಕನ್ನಡದಲ್ಲಿ ‘ಒಡಲು’ ಎಂದರೆ ದೇಹ, ಶರೀರ ಎನ್ನುವ ಅರ್ಥವಿದೆ. ಈ ಪದದ ಪ್ರಭಾವ ಇವರ ತೆಲುಗಿನ ಮೇಲೆ ಬೀರಿರಬಹುದೆನಿಸುತ್ತದೆ. ಉದಾ. ಮ್ಯಾ.ತೆ : ರೆಕಾಡು ನುಂಚಿ ಬದ್ಕು ಸೇಸಿ ವಡ್ಲಕ್ಲಾ ಆಯಂದಿ. ಶಿ.ಕ. : ಬೆಳಿಗ್ಗೆಯಿಂದ ಕೆಲಸ ಮಾಡಿ ಹೊಟ್ಟೆ ಹಸಿವು ಆಗಿದೆ.
೧೦. ಹೊರಗೆ ಎಲ್ಲಿಕಾ ಬಯಟ ಶಿಷ್ಟ ತೆಲುಗಿನ ‘ಬಯಟ’ ಎಂಬ ಪದದ ಬದಲು ಮ್ಯಾಸಬೇಡರ ತೆಲುಗಿನಲ್ಲಿ ‘ಎಲ್ಲಿಕಾ’ ಎಂಬ ಪದವನ್ನು ಬಳಸುತ್ತಾರೆ. ಕನ್ನಡದಲ್ಲಿ ‘ಹೊರಗೆ’ ಎಂಬ ಪದವನ್ನು ಬಳಕೆ ಮಾಡುವುದು ಕಾಣಬರುತ್ತದೆ. ಉದಾ. ಮ್ಯಾ.ತೆ. : ಮಾ ಅನ್ನಾ ಇವುಡು ಎಲ್ಲಿಕಾ ಪೊಯ್ಯಡೆ. ಶಿ.ಕ.: ನಮ್ಮ ಅಣ್ಣ ಇವಾಗ ಹೊರಗೆ ಹೋಗಿದ್ದಾನೆ.

ಮ್ಯಾಸಬೇಡರ ಮಾತೃಭಾಷೆಯಾದ ತೆಲುಗು ಭಾಷೆಯಲ್ಲಿ ಕನ್ನಡ ಮತ್ತು ತೆಲುಗು ಎರಡು ಅಲ್ಲದ ವಿಶಿಷ್ಟ ಪದಗಳು ಬಳಕೆಯಾಗುತ್ತವೆ. ಇವರು ಕನ್ನಡ ಪರಿಸರದಲ್ಲಿ ನೆಲಸಿ ಹಲವು ಶತಮಾನಗಳು ಗತಿಸಿದ್ದರೂ ಸಹ ವಿಶಿಷ್ಟ ಭಾಷಿಕ ಸಂಸ್ಕೃತಿಯನ್ನು ಅಳವಡಿಸಿಕೊಂಡಿ ರುವುದು ಮೇಲಿನ ಮಾಹಿತಿಯಿಂದ ತಿಳಿದುಬರುತ್ತದೆ. ಈ ಪದಗಳ ಮೂಲ, ನಿಷ್ಪತ್ತಿ, ಅರ್ಥ ಮುಂತಾದ ಅಂಶಗಳನ್ನು ಕುರಿತು ಹೆಚ್ಚಿನ ಅಧ್ಯಯನ ನಡೆಸುವುದು ಅವಶ್ಯಕತೆಯಿದೆ. ಇದರಿಂದ ಮ್ಯಾಸಬೇಡರ ಭಾಷಿಕ ಸಂಸ್ಕೃತಿಯನ್ನು ಅರಿತಂತಾಗುತ್ತದೆ.

ಸಮಾಜದ ಎಲ್ಲಾ ದ್ವಿಭಾಷಿಕ ಸಮುದಾಯಗಳ ಕೌಟುಂಬಿಕ ವಲಯದ ಭಾಷೆಯು ವ್ಯವಹಾರಿಕ ವಲಯದ ಭಾಷೆಗಿಂತ ಭಿನ್ನವಾಗಿ ಬಳಕೆಯಾಗುವುದನ್ನು ಸಾಮಾನ್ಯವಾಗಿ ಕಾಣಬಹುದು. ಹಾಗೆಯೇ ಮ್ಯಾಸಬೇಡರು ಕೌಟುಂಬಿಕ ವಲಯದಲ್ಲಿ ಬಳಸುವ ಭಾಷೆ ವ್ಯವಹಾರಿಕ ವಲಯದ ಭಾಷೆಗಿಂತ ಹೇಗೆ ಭಿನ್ನವಾಗಿದೆಂಬುದನ್ನು ಅಪ್ತರು, ರಕ್ತಸಂಬಂಧಿಗಳು, ಬಂಧು ಬಳಗದವರ ಜೊತೆ ಬಳಕೆಯಾಗುವ ಸಂಬಂಧ ವಾಚಕಗಳನ್ನು ಸಾಮಾಜಿಕ ನೆಲೆಯಲ್ಲಿ ಚರ್ಚಿಸಲಾಗಿದೆ.

ಸಂಬಂಧ ವಾಚಕಗಳನ್ನು ಭಾಷಿಕ ರಚನೆಗಳೆಂದು ಪರಿಗಣಿಸಲಾಗುವುದು. ಸಾಮಾಜಿಕ ಭಾಷಾಶಾಸ್ತ್ರಜ್ಞರು ಹೆಸರುಗಳನ್ನು ಸ್ಥಳನಾಮಗಳ ಮತ್ತು ವ್ಯಕ್ತಿನಾಮಗಳೆಂದು ವಿಂಗಡಿಸಿ ದ್ದಾರೆ. ವ್ಯಕ್ತಿನಾಮಗಳ ಕಕ್ಷೆಯಲ್ಲಿ ಬರುವ ಸಂಬಂಧವಾಚಕಗಳ ಸಂಖ್ಯೆ ಸೀಮಿತವಾಗಿದ್ದರೂ ಅವುಗಳ ಸಾಮಾಜಿಕ ಅರ್ಥಛಾಯೆ ವೈವಿಧ್ಯಮಯವಾಗಿದೆ. ಇವುಗಳ ಬಳಕೆಯಲ್ಲಿ ಭಾಷಿಕರ ಬಯಕೆ ಹಾರೈಕೆಗಳು ಹಾಗೂ ಅವರ ಕೌಟುಂಬಿಕ ಪರಂಪರೆ ಅಡಗಿರುತ್ತದೆ. ಹೀಗಾಗಿ ಸಂಬಂಧವಾಚಕಗಳು ಸಂಸ್ಕೃತಿ ಅಧ್ಯಯನಕ್ಕೆ ಮೌಲಿಕ ಆಕರಗಳಾಗಿ ಕಾಣಬರುತ್ತವೆ.

ಹೆತ್ತ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ ಮುಂತಾದವರಿಂದ ಉಂಟಾದ ಸಂಬಂಧವನ್ನು ರಕ್ತಸಂಬಂಧವೆಂತಲೂ ಮತ್ತು ಕಳ್ಳು-ಬಳ್ಳಿ ಸಂಬಂಧವೆಂತಲೂ ಕರೆಯಲಾಗುವುದು. ಇಂತಹ ಸಂಬಂಧದಿಂದ ಉಂಟಾದ ಸಂಬಂಧವಾಚಕಗಳನ್ನು ಮ್ಯಾಸಬೇಡರು ಕೌಟುಂಬಿಕ ವಲಯದಲ್ಲಿ ಮಾತೃಭಾಷೆ ಯಾದ ತೆಲುಗಿನಲ್ಲಿ ಮತ್ತು ವ್ಯವಹಾರಿಕ ವಲಯದ ಕನ್ನಡದಲ್ಲಿ ಬಳಕೆಯಾಗುವುದು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಉದಾ.

ಶಿಷ್ಟ ಕನ್ನಡ ಮ್ಯಾಸಬೇಡರ ಕನ್ನಡ ಮ್ಯಾಸಬೇಡರ ತೆಲುಗು ಶಿಷ್ಟ ತೆಲುಗು
ತಂದೆ ಅಪ್ಪ/ಯಪ್ಪ ಅಯ್ಯ/ಯಯ್ಯ ನಾಯನ
ತಾಯಿ ಅಮ್ಮ/ಯಮ್ಮ ಅವ್ವ/ಯವ್ವ ಅಮ್ಮ
ಅಜ್ಜ ತಾತ ತಾತ ತಾತ
ಅಜ್ಜಿ ಅವ್ವ/ಯವ್ವ ಅಬ್ಬ/ಯಬ್ಬ ಅವ್ವ
ಅತ್ತೆ ಅತ್ತೆ/ಯತ್ತೆ ಅತ್ತ/ಯತ್ತ ಅತ್ತ
ಮಾವ ಮಾಮ ಮಾಮ ಮಾಮ
ದೊಡ್ಡಪ್ಪ ದೊಡ್ಡಪ್ಪ ಗೊಪ್ಪಯ್ಯ ಪೆದ್ದನಾಯನಾ
ದೊಡ್ಡಮ್ಮ ದೊಡ್ಡಮ್ಮ ಗೊಪ್ಪವ್ವ ಪೆದ್ದಮ್ಮ
ಚಿಕ್ಕಪ್ಪ ಸಣ್ಣಪ್ಪ ಸನ್ನಯ್ಯ ಚಿನ್ನಾಯನ
ಚಿಕ್ಕಮ್ಮ ಸಣ್ಣಮ್ಮ ಸನ್ನಮ್ಮ ಪಿನ್ನಮ್ಮ
ಮಗ ಮಗ ಕೊಡಕು ಕೊಡಕು
ಮಗಳು ಮಗ್ಳು ಬಿಡ್ಡ/ಕೂತ್ರು ಕೂತ್ರ
ತಂಗಿ ತಂಗಿ ತಂಗಿ ಚೆಲ್ಲಿ
ಮೈದುನ ಮದಿನ ಮದಿನ ಮದಿನ
ಹೆಂಡತಿ ಎಂಡಿ/ಯೆಂಡ್ತಿ ಆಲು ಬಾರ್ಯ

ಮ್ಯಾಸಬೇಡರಲ್ಲಿ ತಂದೆ, ತಾಯಿ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ತಂಗಿ, ಹೆಂಡತಿ, ಚಿಕ್ಕಪ್ಪ, ಚಿಕ್ಕಮ್ಮ, ಮೈದುನ ಮುಂತಾದ ಸಂಬಂಧವಾಚಕಗಳು ಶಿಷ್ಟ ತೆಲುಗುಗಿಂತ ಭಿನ್ನವಾಗಿ ಅಯ್ಯ, ಅವ್ವ, ಅಬ್ಬ, ಗೊಪ್ಪಯ್ಯ, ಗೊಪ್ಪವ್ವ, ತಂಗಿ, ಆಲು, ಸನ್ನಯ್ಯ, ಸನ್ನಮ್ಮ, ಮರ್ದಿ ಮುಂತಾದ ಪದಗಳು ಬಳಕೆಯಾಗುವುದು ವಿಶಿಷ್ಟವೆನಿಸುತ್ತದೆ. ಹಾಗೆಯೇ ಸಂಬಂಧ ವಾಚಕಗಳಲ್ಲಿ ಪದದಾದಿಯ ‘ಅ’ ಕಾರವು ‘ಯ’ ಕಾರವಾಗುವುದು ಮತ್ತು ಪದಾದಿಯ ‘ಚ’ ಕಾರವು ‘ಸ’ ಕಾರವಾಗುವ ಧ್ವನಿ ನಿಯಮದ ಪ್ರಕ್ರಿಯೆಗಳು ಕಾಣಬರುತ್ತವೆ. ಈ ಮೇಲಿನ ಸಂಬಂಧವಾಚಕಗನ್ನು ಗಮನಿಸಿದಾಗ ಮ್ಯಾಸಬೇಡರು ಇತರೆ ಸಮುದಾಯದವರು ಬಳಸುವ ಸಂಬಂಧವಾಚಕಗಳಗಿಂತ ಭಿನ್ನವಾದ ಸಂಬಂಧವಾಚಕಗಳನ್ನು ಬಳಸುವುದು ವೇದ್ಯವಾಗುತ್ತದೆ.

ಮ್ಯಾಸಬೇಡರ ಭಾಷಿಕ ಸಂಸ್ಕೃತಿಯನ್ನು ತಿಳಿಯಲು ಸಂಬಂಧವಾಚಕಗಳನ್ನಷ್ಟೇ ಅಲ್ಲದೇ ಸಂಬೋಧನಾ ರೂಪಗಳು, ವ್ಯಕ್ತಿನಾಮ, ಸ್ಥಳನಾಮಗಳು ಮತ್ತು ನಿತ್ಯೋಪಯೋಗಿ ಸಂಬಂಧಿಸಿದ ವಸ್ತುಸೂಚಕ ಪದಗಳೊಂದಿಗೆ ಮೊದಲಾದ ಭಾಷಿಕ ಅಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಇವರು ವಂಶಪರಂಪರೆಯಾಗಿ ದೈವ, ಆಚರಣೆ, ಸಂಪ್ರದಾಯ, ನಂಬಿಕೆ ಬದುಕುವ ಕ್ರಮವನ್ನು ಉಳಸಿಕೊಂಡು ಬಂದಂತೆ ಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲ ಇವರಲ್ಲಿದೆ. ಆದರೆ ಆಧುನಿಕ ಸಂದರ್ಭದಲ್ಲಿ ಮೂಲಸೌಲಭ್ಯಗಳನ್ನು ಪಡೆಯುವ ಸಲುವಾಗಿ ಹಾಗೂ ಪ್ರಾದೇಶಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮೊದಲಾದ ಕಾರಣಗಳಿಂದ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಲಿಯುವ ಅವಶ್ಯಕತೆ ಮತ್ತು ಅನಿವಾರ್ಯತೆಗಳು ಇವರಲ್ಲಿ ದಟ್ಟವಾಗಿ ಕಾಣಬರುತ್ತವೆ.