ರಾಜ್ಯದ ಬೇಡಸಮುದಾಯದ ಸಧ್ಯದ ಪರಿಸ್ಥಿತಿಯ ಸ್ಪಷ್ಟವಾದ ಮತ್ತು ವಿವರವಾದ ಚಿತ್ರಣ ಒಂದು ಕಡೆ ದೊರೆಯದಿರುವದೇ ಒಂದು ಸವಾಲು. ಈ ವ್ಯಾಪಕ ಸವಾಲಿನಲ್ಲಿ ಉಳಿದೆಲ್ಲ ಉಪಸವಾಲುಗಳು ಅಡಕವಾಗುತ್ತವೆ. ಈ ಚಿತ್ರಣ ಅಥವಾ ಸ್ವರೂಪವನ್ನು ತಿಳಿದುಕೊಳ್ಳುವುದು ಅವಶ್ಯ. ಆಗ್ರ ಸಮುದಾಯದ ಉತ್ತಮ ಅಂಶಗಳು, ಉಪಯುಕ್ತ ಮತ್ತು ಪ್ರೇರಕ ಅಂಶಗಳೊಂದಿಗೆ ಅದರ ಸಮಸ್ಯೆಗಳು, ಕುಂದುಕೊರತೆಗಳು, ಲೋಪದೋಷಗಳು, ಅನಿಷ್ಟ ಸಂಗತಿಗಳು, ದೌರ್ಬಲ್ಯಗಳು, ಮಾರಕ ವಿಚಾರಧಾರೆ, ಅಲ್ಲದೆ ಸಂಪ್ರದಾಯಗಳು ಗೊತ್ತಾಗುತ್ತವೆ. ವಾಲ್ಮೀಕಿ ಸಮಾಜ ಹಾಳಾಗಿರುವುದೇ ಅಸಂಘಟನೆ, ಅಜ್ಞಾನ, ಅವಿವೇಕಗಳಿಂದ ಮತ್ತು ತಕ್ಕ ಮಟ್ಟಿನ ಸೋಮಾರಿತನದಿಂದ. ಸಮಾಜದ ಸ್ಥಿತಿಗತಿಯ ಅರಿವಾದರೆ, ಅದರ ಉತ್ತಮ ಅಂಶಗಳನ್ನು ಚೆನ್ನಾಗಿ ದುಡಿಸಿಕೊಳ್ಳಬಹುದು, ಲೋಪದೋಷಗಳ ನಿವಾರಣೆಗೆ ಮಾರ್ಗದರ್ಶನ, ತರಬೇತಿ, ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು. ಹೀಗಾದರೆ ಸಮಾಜ ತನ್ನ ಜಡತ್ವವನ್ನು ಹೇಡಿತನವನ್ನು ಕಿತ್ತೊಗೆದು ಈ ಯುಗದ ಆಧುನಿಕತೆಯನ್ನು ಮೈಗೂಡಿಸಿಕೊಂಡು ಕ್ರಿಯಾಶೀಲವಾಗಿ ಸಮೃದ್ದಿಯನ್ನು ಸಾಧಿಸಬಹುದು, ತೃಪ್ತಿ, ಗೆಲುವು, ಉತ್ಸಾಹಗಳಿಂದ ಮೆರೆಯಬಹುದು, ತನ್ನ ಪೂರ್ವಜರ ಸಾಂಸ್ಕೃತಿಕ  ಔನ್ನತ್ಯವನ್ನು ಪುನಃ ಎತ್ತಿಹಿಡಿದು, ರಾಷ್ಟ್ರಕ್ಕೆ ತನ್ನದೇ ಆದ ಕಾಣಿಕೆ ನೀಡಬಹುದು. ಜವಾಹರಲಾಲ ನೆಹರೂ ಹೀಗೆ ಹೇಳುತ್ತಾರೆ:‘‘ Success comes to those who dare and act, it seldom goes to the timid,’’ ಈ ಸಮಾಜದ ಸಮೃದ್ದಿಗಾಗಿ ಆಗತಕ್ಕ ಕಾರ್ಯಗಳು ಆಗದೇ ಇರುವದೇ ಸವಾಲು. ಈ ಆಗತಕ್ಕ ಕಾರ್ಯಗಳ ಪರಿಚಯ ಹಾಗೂ ಪರಿಹಾರಗಳನ್ನು ಇಲ್ಲಿ ಗಮನಿಸೋಣ. ಪೂರ್ವಜರ ಕಾರ್ಯದ ಪೌರುಷ ಮತ್ತು ನಮ್ಮ ಆವೇಶಗಳನ್ನು ಸಧ್ಯ ಬದಿಗಿಟ್ಟು ಹಿಂದೆ ಬಿದ್ದ ಈ ಸಮುದಾಯದ ಸುಧಾರಣೆಗಾಗಿ ವ್ಯಾವಹಾರಿಕವಾಗಿ ವಿವೇಚಿಸಬೇಕಾಗಿದೆ.

ಜನಸಂಖ್ಯೆ

ನಾಯಕ ಸಮುದಾಯದ ನಿರ್ದಿಷ್ಟ ಜನಸಂಖ್ಯೆ ತಿಳಿಯದಿರುವುದು ಸ್ವಲ್ಪ ತೊಡಕಿನ ವಿಷಯ. ಇದು ಎಲ್ಲ ಜಾತಿಗಳ ಸಮಸ್ಯೆಯೂ ಹೌದು. ರಾಜ್ಯದಲ್ಲಿ ನಾಯಕರ ಸಂಖ್ಯೆ ೬೦ ಲಕ್ಷ, ೬೫ ಲಕ್ಷ-ಹೀಗೆ ಬೇರೆ ಬೇರೆಯಾಗಿ ಹೇಳಲಾಗುತ್ತದೆ. ಸಮಾಜದ ಒಕ್ಕಟ್ಟು ಮತ್ತು ಪ್ರಗತಿಗೆ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಅವಶ್ಯ. ಸರಕಾರಕ್ಕೆ ಬೇಡಿಕೆ ಸಲ್ಲಿಸಲು, ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಇತರ ಕಾರಣಗಳಿಗಾಗಿ ಜನಸಂಖ್ಯೆಯ ಮಾಹಿತಿ ಬೇಕು. ಸರ್ ಎಂ. ವಿಶ್ವೇಶ್ವರಯ್ಯನವರು ಏಲ್ಲ ಇಲಾಖೆಗಳಿಂದ, ಪ್ರತಿಯೊಂದು ವಿಷಯ ದಲ್ಲಿ ಅಂಕಿಅಂಶ ಸಂಗ್ರಹಿಸಿ ತಿಳಿಸಲು ಒತ್ತಾಯಿಸುತ್ತಿದ್ದರು, ಯೋಜನೆಗಳಿಗೆ ಅಂಕಿ-ಅಂಶಗಳ ಅಗತ್ಯವಿದೆ. ೧೯೪೦ರ ವರೆಗೆ ಜಾತಿವಾರು ಜನಗಣತಿ ನಡೆಯುತ್ತಿತ್ತು. ಆಗಿನ ಬೇರೆ ಬೇರೆ ರಾಜ್ಯಗಳಲ್ಲಿ ಸೇರಿದ ಕನ್ನಡ ಪ್ರದೇಶಗಳ ನಾಯಕರ ಜನಸಂಖ್ಯೆ ಆಧರಿಸಿ ಈಗಿನ ಸಂಖ್ಯೆ ಹೆಚ್ಚಾದ ಜನಸಂಖ್ಯಾ ಪ್ರಮಾಣ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ದೊರೆಯುತ್ತದೆ. ಸರಕಾರವೇ ಇತ್ತೀಚೆಗೆ ಪ.ಜಾ. ಪ.ಪಂ. ಮತ್ತು ಹಿಂದುಳಿದವರ ಜಾತಿವಾರು ಜನಗಣತಿ ಮಾಡಲು ನಿರ್ಧರಿಸಿದ್ದು ಸ್ವಾಗತಾರ್ಹ. ೨೦೦೧ರ ಜನಗಣತಿಯಲ್ಲಿ ಕರ್ನಾಟಕದ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ೩೪ ಲಕ್ಷ ಎಂದು ದಾಖಲಾಗಿರುವುದು ವಾಸ್ತವಿಕವಲ್ಲ. ಪ. ಪಂಗಡದಲ್ಲಿಯ ೫೦ ಜಾತಿ ಸೇರಿ ಈ ಜನಸಂಖ್ಯೆ ರೂಪಿತವಾಗಿದೆ. ಇದೇ ಆಧಾರದಿಂದ ಯೋಜನೆಯಲ್ಲಿ ಹಣಕಾಸಿನ ಮಂಜೂರಿಯಾಗುವುದರಿಂದ ಪ.ಪಂ. ಗಳಿಗೆ ಬಹಳ ಅನ್ಯಾಯವಾಗುತ್ತದೆ. ನಾಯಕರಲ್ಲೇ ಕೆಲವು ಪರ್ಯಾಯ ಜಾತಿವಾಚಕಗಳು ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಕೇಂದ್ರ ಸರಕಾರದಲ್ಲಿ ಮತ್ತು ಬೇರೆ ಕೆಲವು ರಾಜ್ಯಗಳಲ್ಲಿ ಪ.ಪಂ. ಕ್ಕೆ ಮೀಸಲಾತಿ ೭.೫ ಇದ್ದುದನ್ನು ಆಧರಿಸಿ ಮಾಡಬೇಕಾದ ಹೋರಾಟ ತೀವ್ರವಾಗಿ ಮತ್ತು ಕಳಕಳಿಯಿಂದ ನಡೆದೇ ಇಲ್ಲ. ಸಧ್ಯದ ಶೇ. ೩ ಯಾತಕ್ಕೂ ಸಾಲದು. ಇದು ಪರಮ ಅನ್ಯಾಯ, ಇತ್ತೀಚೆಗೆ ಇತರ ಗುಂಪು(ಕೆಟೆಗೆರಿ)ಗಳಿಂದ ಕೆಲವು ಜಾತಿಗಳನ್ನು ಪ.ಪಂಗಡಕ್ಕೆ ಸೇರಿಸಿದ್ದರೂ (ನಾಯಕರದೂ ಸಹ) ಅಲ್ಲಿ  ಅವರ ಪ್ರಮಾಣದ ಮೀಸಲಾತಿ ಕಡಿಮೆಗೊಳಿಸಿ ಪ.ಪಂಗಡಕ್ಕೆ ಸೇರಿಸಿಲ್ಲ. ಕರ್ನಾಟಕದಲ್ಲಿ ಪ.ಪಂಗಡಗಳ ಜನಸಂಖ್ಯೆಯ ಸಮಗ್ರ ಮಾಹಿತಿ ಆಧರಿಸುವುದಾದರೆ, ಶೇ.೧೦ರ ಮೀಸಲಾತಿ ಯೋಗ್ಯವಾದುದಾಗಿದೆ.

ಆರ್ಥಿಕ ಪರಿಸ್ಥಿತಿ

ವಾಲ್ಮೀಕಿ ಸಮುದಾಯದ ಶೇ.೭೦ ಜನರಿಗೆ ಎಷ್ಟಾದರೂ ಆಸ್ತಿ, ಜಮೀನು ಇರುತ್ತದೆ. ಆದರೆ ಕುಟುಂಬ ನಿರ್ವಹಣೆಗೆ, ಹೆಚ್ಚಿನ ಅಭಿವೃದ್ದಿಗೆ ಸಾಕಾಗುವಷ್ಟು ಆಸ್ತಿ ಇದ್ದವರು ಬಹಳ ಕಡಿಮೆ. ಬಯಲು ಸೀಮೆಯಲ್ಲಿ ಭೂಮಿಯ ಉತ್ಪನ್ನ ನೆಚ್ಚುವಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲವರು ನೌಕರಿ ಸೇರಿ ಸುಧಾರಿಸುತ್ತಿದ್ದಾರೆ. ಮಿಕ್ಕವರೆಲ್ಲ ಕೂಲಿ, ಕೆಳದರ್ಜೆ ಸೇವೆ ಮಾಡುತ್ತಾರೆ. ಮುಸಲ್ಮಾನರಂತೆ ಕೈಗಾರಿಕೆ, ವ್ಯಾಪಾರ, ತಾಂತ್ರಿಕ  ಕೆಲಸಗಳಿಂದ ವಾಲ್ಮೀಕಿಗಳು ಸ್ವಾವಲಂಬಿಗಳಾಗುವದನ್ನು ಕಲಿಸಬೇಕಾಗಿದೆ. ಆಲಸ್ಯೆ, ದುಂದುವೆಚ್ಚ, ದುಶ್ಚಟಗಳಿಂದಲೂ ಇವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇವರಲ್ಲಿ ಉಳಿತಾಯ, ಪ್ರವೃತ್ತಿಯೂ ಬಹಳ ಕಡಿಮೆ. ಸರಕಾರದಿಂದ ದೊರೆಯುವ ಆರ್ಥಿಕ ಸವಲತ್ತು, ತರಬೇತಿಗಳ ಮಾಹಿತಿ ಇಲ್ಲದಷ್ಟು ಇವರು ಅಜ್ಞಾನಿಗಳಾಗಿದ್ದಾರೆ. ಇವರಿಗೆ ಕಳೆದ ೨೦೦ ವರ್ಷಗಳಿಂದ ಆನುವಂಶಿಕ ಉದ್ಯೋಗವೆಂಬುದಿಲ್ಲ. ಇದಕ್ಕೆ ಐತಿಹಾಸಿಕ ಕಾರಣವಿದೆ. ಆರ್ಥಿಕ ಜಡತ್ವವನ್ನು ಕಿತ್ತುಹಾಕು ವುದೇ ಒಂದು ದೊಡ್ಡ ಸವಾಲು.

ಸಾಮಾಜಿಕ ಸ್ಥಿತಿ

ಬಡತನ ನಿರಕ್ಷರತೆಯಿಂದಾಗಿ ಬಹುಪಾಲು ಜನರನ್ನು ಕೀಳರಿಮೆ ಕಾಡುತ್ತಿದೆ. ಮೂಢ ನಂಬಿಕೆಗಳೂ ಸಾಕಷ್ಟಿವೆ. ವೈಚಾರಿಕ ಜಾಗೃತಿ ಇಲ್ಲ. ಹುಂಬತನ, ತಿಳಿಗೇಡಿತನಗಳಿಂದ ಇವರು ಒರಟರೆನಿಸಿಕೊಂಡಿದ್ದಾರೆ. ಆದ್ದರಿಂದ ಅಜ್ಞಾನ ಹೋಗಲಾಡಿಸಿ ಪೂರ್ವಜರ ಸಾಧನೆಗಳ ಪರಿಚಯ ಮಾಡಿಕೊಟ್ಟರೆ, ಶಿಕ್ಷಣ ನೀಡಿದರೆ ಬಾಳೆವಂತರಾಗಿ ಸಮಾಜದಲ್ಲಿ ಗೌರವಯುತ ವಾಗಿ ಬಾಳಬಲ್ಲರು. ಇವರಲ್ಲಿ ಒಕ್ಕಟ್ಟು ಇಲ್ಲದಿರುವದೂ ಒಂದು ಕೊರತೆ United we stand, Divided we fall  ಎಂಬುದರ ಮನವರಿಕೆ ಆಗಬೇಕು. ಈ ಮಾತಿಗೆ ಹಲವಾರು ಉದಾಹರಣೆ ಕೊಡಬಹುದು. ಈ ಸಮಾಜದಲ್ಲಿ ಸ್ವಚ್ಛತಾ ಪ್ರಜ್ಞೆಕಡಿಮೆ. ವೈಯಕ್ತಿಕ ಹಾಗೂ ಕೌಟುಂಬಿಕ ಮಟ್ಟದಲ್ಲಿ ಮತ್ತು ತಮ್ಮ ಓಣಿಕಟ್ಟುಗಳಲ್ಲಿ ಸ್ವಚ್ಛತೆಗೆ ಪ್ರಾಧಾನ್ಯ ನೀಡಿದರೆ, ಸಾಮಾಜಿಕ ಸ್ಥಾನಮಾನವೂ ಹೆಚ್ಚುತ್ತದೆ. ಸ್ವಚ್ಛತೆ ಇಲ್ಲದವರನ್ನು ಸಾಮಾನ್ಯವಾಗಿ ಕೀಳಾಗಿ ಕಾಣಲಾಗುವುದು. ಬಡಲಿಂಗಾಯತರು, ಬ್ರಾಹ್ಮಣರು ಕೂಡ ಬೆಳಿಗ್ಗೆ ಸ್ನಾನ ಮಾಡಿ, ನಾಮ ವಿಭೂತಿ ಧರಿಸಿ, ಮಡಿ ಬಟ್ಟೆ ಧರಿಸಿ ಹೊರಹೋಗುವ ಪರಂಪರೆ ಹೊಂದಿದ್ದಾರೆ. Cleanliness is next to the godliness ಎನ್ನುವ ಮಾತು ಅರ್ಥಗರ್ಭಿತವಾಗಿದೆ.

ಧಾರ್ಮಿಕ ಸ್ಥಿತಿ

ಇತರ ಹಿಂದುಳಿದ ವರ್ಗದವರಲ್ಲಿಯಂತೆ ನಾಯಕರಲ್ಲೂ ಧರ್ಮ, ದೇವರ ಹೆಸರಿನಲ್ಲಿ ಹಲವಾರು ಅರ್ಥಹೀನ ಆಚರಣೆ, ನಂಬಿಕೆಗಳು ಬೆಳೆದಿವೆ. ಕೆಲವು ಸಲ ಹುಚ್ಚಾಟಗಳೇ ಮೆರೆಯುತ್ತವೆ. ಇದಕ್ಕಾಗಿ ಸಮಯ, ಹಣ ಶ್ರಮ ಪೋಲಾಗುತ್ತವೆ. ಆದರೆ ಪ್ರಗತಿ ಸರಳ ಪೂಜಾ ವಿಧಾನ ರೂಢಿಸುವದು ಅವಶ್ಯ. ಸದ್ಭಾವನೆ, ಸೌಹಾರ್ದತೆ, ತಾಳ್ಮೆ, ಪ್ರೀತಿಗಳನ್ನು ಬೆಳೆಸುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರೋಪಕಾರ, ಮಾನವ ಸೇವೆ ನಿಜವಾದ ಪೂಜ ಎಂಬ ಪರಿಕಲ್ಪನೆ ಬೆಳೆಸಬೇಕಾಗುತ್ತದೆ. god helps those who help them selves ಎಂಬುದು ಇಂಗ್ಲಿಷಿನಲ್ಲಿಯ ಮಾತು. ಬುದ್ಧ, ಬಸವಣ್ಣನವರ ತತ್ತ್ವಗಳ ಆಚರಣೆಗೆ ಒತ್ತುಕೊಡಲು ಕಲಿಸಬೇಕು. ಈ ಸಮಾಜಕ್ಕೆ ಮೊದಲು ಪಾರಂಪರಿಕ ಮಠಾಧೀಶರಿರಲಿಲ್ಲ. ಇತ್ತೀಚೆಗೆ ವಾಲ್ಮೀಕಿ ಗುರುಪೀಠ ಸ್ಥಾಪಿತವಾಗಿದ್ದು ಅದನ್ನು ಬೆಳೆಸಬೇಕಾಗಿದೆ. ಶಿವ-ವಿಷ್ಣು ಬೇಧವಿಲ್ಲದೆ ಇರುವುದು, ಮದುವೆ ಮತ್ತು ಅಂತ್ಯ ಸಂಸ್ಕಾರಗಳಲ್ಲಿ ಪುರೋಹಿತ, ಜಂಗಮರನ್ನು ಅವಲಂಬಿಸಿದೆ ಅಂಥಕಾರ್ಯಗಳಿಗೆ ಸಮಾಜದ ವ್ಯಕ್ತಿಗಳನ್ನು ತಯಾರಿಸುವ ಸಂಪ್ರದಾಯ ಬೆಳೆಯಬೇಕಾಗಿದೆ. ಅರ್ಹರಾದ ಪುರೋಹೀತ, ಜಂಗಮರೂ ಇತ್ತೀಚೆ ಅಲಭ್ಯರಾಗುತ್ತಿದ್ದಾರೆ.

ಶೈಕ್ಷಣಿಕ ಸಮಸ್ಯೆ

ಈ ಕಾಲದಲ್ಲಿ ಎಸ್.ಎಸ್.ಎಲ್.ಸಿ ವರೆಗಾದರೂ ಎಲ್ಲ ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಬೇಕು. ಆದರೆ ನೌಕರಿ ನಿರೀಕ್ಷಿಸದೆ ಸ್ವಂತ ಉದ್ಯೋಗದ ಗುರಿ ಇರಬೇಕು. ಚಿಕ್ಕ ಚಿಕ್ಕ ಸಮಾಜಗಳು ಸಹ ತಮ್ಮ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮವರಿಗೆ ಹೆಚ್ಚು ಅವಕಾಶ ಕೊಡುತ್ತಾರೆ. ಈ ವಿಷಯದಲ್ಲಿ ವಾಲ್ಮೀಕಿ ಸಮಾಜ ಬಹಳ ಹಿಂದಿದೆ. ವೈಜ್ಞಾನಿಕ, ತಾಂತ್ರಿಕ ಶಿಕ್ಷಣ, ವೃತ್ತಿ ಶಿಕ್ಷಣಗಳಿಗೆ ಹೆಚ್ಚು ಗಮನಕೊಡಬೇಕಾಗಿದೆ. ಇದು ಸ್ಪರ್ಧಾಯುಗ. ಕೇವಲ ವಿಜಾಪುರ, ಗುಲಬರ್ಗಾ ಜಿಲ್ಲೆಗಳಲ್ಲೇ ಬಂಜಾರ ಸಮಾಜ ನಡೆಸುವ ೬೦ ಶಾಲೆಗಳಿವೆ.

ರಾಜಕೀಯ ಸ್ಥಿತಿ

ಅಪಾರ ಜನಸಂಖ್ಯೆ ಇದ್ದರೂ ರಾಜಕೀಯ ಸ್ಥಾನಮಾನ ಕಮ್ಮಿ. ರಾಜಕೀಯ ಅಧಿಕಾರ ವಿಲ್ಲದೆ ಪ್ರಗತಿ ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ. ಪಕ್ಷ ಯಾವುದೇ ಇರಲಿ ಎಲ್ಲ ಹಂತ ಗಳಲ್ಲೂ ರಾಜಕೀಯ ಪ್ರವೇಶ ಮಾಡಬೇಕು. ಜನಹಿತಕ್ಕಾಗಿ ಹೋರಾಟ  ಗುರಿಯಾಗಿರಬೇಕು. ರಾಜಕಾರಣ ಸಮಾಜ ಸೇವೆಯ ಒಂದು ಪ್ರಮುಖ ಅಂಗ. ಚುನಾವಣಾ ಆಯೋಗ ಪರಿಶಿಷ್ಟ ಪಂಗಡದವರಿಗೆ ಇತ್ತೀಚೆಗೆ ೧೫ ವಿಧಾನ ಸಭಾ ೨ ಲೋಕಸಭಾ ಕ್ಷೇತ್ರಗಳನ್ನು ಮೀಸಲಿರಿಸಲು ಉದ್ದೇಶಿಸಿರುವುದು ಸ್ವಲ್ಪ ಸಮಾಧಾನದ ಸಂಗತಿ.

ಐತಿಹಾಸಿಕ ಸ್ಥಿತಿ

ನಾಯಕರ ಐತಿಹಾಸಿಕ ಪರಂಪರೆ ಅದ್ಭುತವಾದುದು. ಅವರು ಕೋಟೆಕೊತ್ತಲ, ಕೆರೆಕಾಲುವೆ ಕಟ್ಟಿಸಿ ಸ್ವದೇಶ, ಸ್ವಧರ್ಮ ರಕ್ಷಣೆಗಾಗಿ ಹೋರಾಡಿ ರಾಜ್ಯ, ಸಾಮ್ರಾಜ್ಯ ಸ್ಥಾಪಿಸಿ ನಾಡಸೇವೆಗೈದವರು, ಬಲಿದಾನ ಮಾಡಿದವರು. ಸೋತು ಸುಣ್ಣವಾದವರು, ಈ ಪ್ರಜ್ಞೆ ನಾಯಕರಿಗೆ ಇದ್ದರೆ ತಮ್ಮ ಏಳಿಗೆಗೆ ಪಣತೊಡುತ್ತಾರೆ. ನಾಯಕರ ಇಂದಿನ ಹೀನ ಸ್ಥಿತಿಗೆ ಈ ಐತಿಹಾಸಿಕ ಕಾರಣವೂ ಒಂದೆಂದು ಬಗೆದು ಮುಂದುವರಿದ ಸಮಾಜಗಳೂ ನಾಯಕರ ಹಿತವರ್ಧನೆಗೆ ಕೈಗೂಡಿಸಬೇಕಾಗಿದೆ. ತಮ್ಮ ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ರೂಪಿಸಲಾರರು ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಆದರೆ ಇತ್ತೀಚೆ ನಾಯಕರ ಚರಿತ್ರೆ ಯನ್ನು ಇತರ ಸ್ವಾರ್ಥಿಗಳು ಕಸಿದುಕೊಳ್ಳುತ್ತಿದ್ದಾರೆ. ಉದಾ: ಹಕ್ಕಬುಕ್ಕ, ಕನಕದಾಸ. ಈಗ ಇತಿಹಾಸ ನಿರ್ಮಿಸಲಾರದ ನಾವು ನಮ್ಮ ಪೂರ್ವಜರ ಇತಿಹಾಸವನ್ನಾದರೂ ಉಳಿಸಿಕೊಳ್ಳ ಬೇಕಲ್ಲ! ಈ ಸಾವಾಲನ್ನು ಧೀರ ನಾಯಕರು ಸ್ವೀಕರಿಸುವರೆ? ನಾಯಕರ ಇತಿಹಾಸ, ರಾಜ್ಯ, ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ವ್ಯಕ್ತಿಗಳ ಚಿಕ್ಕ ಚಿಕ್ಕ ಪರಿಚಯ ಪುಸ್ತಕಗಳನ್ನು ಯೋಗ್ಯದರದಲ್ಲಿ ಪ್ರಕಟಿಸಿ ಪ್ರಸಾರ ಮಾಡಬೇಕು.

ಮಹಿಳಾ ಸಮಸ್ಯೆ ಮಕ್ಕಳ ಕೂಲಿ ಸಮಸ್ಯೆ:- ಮಹಿಳೆಯೊಬ್ಬಳು ಕಲಿತರೆ ಮನೆಯಲ್ಲಿ ಶಾಲೆಯೊಂದನ್ನು ತೆರೆದಂತೆ ಎಂದು ಹೇಳುತ್ತಾರೆ. ಇದು ಸತ್ಯವೂ ಹೌದು. ಆಕೆ ತಾಳ್ಮೆಯ ಮೂರ್ತಿ, ತ್ಯಾಗ ಮೂರ್ತಿ. ಆದರೆ ಅವಳನ್ನು ಗುಲಾಮಳಂತೆ ನಡೆಸಿಕೊಂಡರೆ, ಹಿಂಸಿಸಿದರೆ ಮನೆತನ ಹಾಳಾದಂತೆ ಅವಳ ಮನಸ್ಸು ಅರಳುವಂತೆ ನಡೆಯಬೇಕಾದುದು ಪುರುಷನ ಕರ್ತವ್ಯ.

ವಿದ್ಯೆಕೊಡದೆ ತಂದೆ ಮಗುವಿನ ವೈರಿಯೆಂದು ಹಿರಿಯರು ಹೇಳಿದ್ದಾರೆ. ರಟ್ಟೆ ಬಲಿಯದ ಮುಗ್ಧ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸುವುದಾದರೆ ಮಕ್ಕಳನ್ನಾದರೂ ಏಕೆ ಹೆರಬೇಕು! ಬಾಲ್ಯದ ಸಂತೋಷವೇ ಭವಿಷ್ಯದ ಬುನಾದಿ. ಇಂದಿನ ಮಕ್ಕಳೇ ನಾಳಿನ ನಾಗರಿಕರಲ್ಲವೆ? ೧೪ ವರ್ಷಗಳ ಒಳಗಿನ ಮಕ್ಕಳನ್ನು ಶಾಲೆಗೆ ಕಳಿಸದೇ ದುಡಿಯಲು ಹಚ್ಚುವುದು ಅಪರಾಧವೂ ಆಗಿದೆ. ಇದಕ್ಕೆ ಶಿಕ್ಷೆಯುಂಟು.

ವೇಶ್ಯಾ ಸಮಸ್ಯೆ

ವೇಶ್ಯಾವೃತ್ತಿ ಎಲ್ಲದೇಶ ಕಾಲಗಳಲ್ಲೂ ಇದೆ. ಭಾರತದಲ್ಲೂ ಇದೊಂದು ಸಮಸ್ಯೆ. ಈ ದೇಶದಲ್ಲಿ ಈ ಬಗ್ಗೆ ಹಿಂದೆ ಇನ್ನೊಂದು ದೃಷ್ಟಿಕೋನವೂ ಇತ್ತು. ಅಲ್ಲಿ ಅವಳು ದೇವರದಾಸಿ ಮಾತ್ರ ಆಗಿದ್ದಳು, ದೇವಾಲಯದಲ್ಲಿ ದೇವರ ಸೇವೆಯೆಂದು ಕಲಾ ಸೇವೆ ಸಲ್ಲಿಸುತ್ತಿದ್ದಳು. ಸಂಗೀತ, ನೃತ್ಯ, ವೀಣೆ, ನಾಟಕದಂತಹ ಕಲೆಗಳಲ್ಲಿ ಪ್ರವೀಣತೆ ಇರುತ್ತಿತ್ತು. ಒಬ್ಬ ಸದ್ಗೃಹಸ್ಥನ ಜೊತೆಗೂಡಿ ಗೃಹಿಣಿಯಂತೆ ಜೀವನ ಸಾಗಿಸುತ್ತಿದ್ದಳು. ಸಮಾಜದಲ್ಲಿ ಅವಳಿಗೆ ಗೌರವವಿತ್ತು. ಆದರೆ ಅವಳು ಕಾಲಮಾನ ಗತಿಸಿದಂತೆ ವೇಶ್ಯಾರೂಪಕ್ಕೆ ಜಾರಿದಳು. ಹೀಗೆ ಬರಬರುತ್ತ ದಾರಿ ತಪ್ಪಲು ಶ್ರೀಮಂತರ, ಮೇರ್ಲ್ವಗಗಳ ಪ್ರಚೋದನೆಯೂ ಕಾರಣ.

ಹಲವಾರು ಹಿಂದುಳಿದ ವರ್ಗಗಳಲ್ಲಿ ಈ ವೇಶ್ಯಾ ಪದ್ಧತಿ ಪ್ರಾರಂಭವಾಯಿತು.  ಸೈನಿಕರೂ ಜಹಗೀರದಾರರೂ, ಗೌಡರು, ಜಮೀನುದಾರರು, ಮಾಂಡಲೀಕರು, ರಾಜರು ಆಗಿದ್ದ ನಾಯಕರಲ್ಲಿ, ಯುದ್ಧದಲ್ಲಿ ಜಯಿಸಿ ಹಲವು ವೈರಿವಲಯದ ಸ್ತ್ರೀಯರನ್ನು ಅಪಹರಿಸಿ ಸುಖಿಸುತ್ತಿದ್ದ ನಾಯಕರ ಮನೆತನಗಳಲ್ಲಿ ವೇಶ್ಯಾವೃತ್ತಿ ಪರಂಪರೆಯಾಗಿ ಬೆಳೆಯಲು ಹೇಗೆ ಸಾಧ್ಯ? ಆದರೂ ಯುದ್ಧದಲ್ಲಿ ಸಾವಿರಾ ಸಾವಿರ ಹತರಾದ ವೀರಯೋಧರ ಪತ್ನಿಯರು ಅಸಹಾಯಕರೂ ಪರಾವಲಂಬಿಗಳೂ ಆಗಿ ತಮ್ಮ ಚಿಕ್ಕಮಕ್ಕಳು, ವೃದ್ಧರನ್ನು ಕಾಪಾಡಲು ಇತರರ ಸೇವೆಗೆ ನಿಲ್ಲಬೇಕಾಯಿತು. ಅವರು ಬರುಬರುತ್ತಾ ಪ್ರಚೋದನೆ, ಆಮಿಷಗಳಿಗೆ ಒಳಗಾಗಿರುವುದು ಸಹಜ. ತಾರುಣ್ಯದ ವೈಧವ್ಯವೂ ಕಾಡಿರಬೇಕಷ್ಟೇ. ಇದೇ ಒಂದು ರೂಢಿ, ಪದ್ಧತಿಯಾಗಿ ಬೆಳೆದಿರಬೇಕು. ಹೀಗೆ ಬೇಡರ ಕೆಲವು ಮನೆತನಗಳಲ್ಲಿ ಈ ಪದ್ಧತಿ ಬೆಳೆದು ಬರಲು ಐತಿಹಾಸಿಕ ಕಾರಣಗಳಿವೆ. ಪುರೋಹಿತಶಾಹಿಯೂ ಈ ಪದ್ಧತಿಯನ್ನು ಧರ್ಮದ ಹೆಸರಿನಲ್ಲಿ ಮೂಢ ಜನರಲ್ಲಿ ಪ್ರೋಬಂದಿದೆ. ವೈದಿಕ ಪರಂಪರೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆದು ಎಲ್ಲ ಹಿಂದೂಗಳ ದೇವರೆಂದು ಮಾನ್ಯವಾಗಿರುವ ಬ್ರಹ್ಮಚಾರಿ ಹನುಮಂತ ದೇವರ ಗುಡಿಯ ಸುತ್ತ ಯುಗಾದಿ ಹಬ್ಬದಲ್ಲಿ (ಕೆಲವು ಕಡೆ ಬೇರೆ ಹಬ್ಬಗಳಲ್ಲಿ) ವೇಶ್ಯಯನ್ನು ಪ್ರದಕ್ಷಿಣೆ ಹಾಕಿಸುತ್ತ (ತಿರುಗಿಹೊಡೆಯಲು ಆಕೆಯ ಕೈಯಲ್ಲಿ ಉದ್ಧವಾದ ಹಸಿಬರಲುಗಳೂ ಇರುತ್ತವೆ.) ಪಡ್ಡೆ ಹುಡುಗರು ಬುಟ್ಟಿ ಬುಟ್ಟಿಗಳಲ್ಲಿ ಅವಳ ಉಸುರು ಗಟ್ಟುವಂತೆ ಆಕೆಯ ಮುಖಕ್ಕೆ ನೀರು ಗೊಜ್ಜುವ ಒಕುಳಿಯೂಟವೇಕೆ?

ಹಿಂದೆಯಾದರೂ ನಾಯಕರ ಎಲ್ಲ ಮನೆತನಗಳಲ್ಲೂ ಈ ವೇಶ್ಯಾ ಪದ್ಧತಿ ಇರಲಿಲ್ಲ; ಅಲ್ಲಲ್ಲಿ ಹಲವಾರು ಮನೆತನಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಇದು ವ್ಯಾಪಿಸಿತು. ವೇಶ್ಯಾ ಪದ್ಧತಿ ಹೊಂದಿದ ಮನೆತನಗಳೊಂದಿಗೆ ಹೊಂದಿರದ ಮನೆತನಗಳು ಬೀಗತನ ಮಾಡುತ್ತಿರಲಿಲ್ಲ. ಅವರವರಲ್ಲೇ ಸಂಬಂಧ ನಡೆಯುತ್ತಿತ್ತು. ಇದು ಸಮಾಜದಲ್ಲಿ ಬದುಕಿಗೂ ಕಾರಣವಾಯಿತು. ಮೇಲು ಕೀಳುಗಳ ಸೃಷ್ಟಿಯೂ ಆಯಿತು. ಇತ್ತೀಚೆ ಈ ಪದ್ಧತಿ ಬಹುತೇಕ ನಿಂತುಹೋಗಿದೆ; ಒಂದೆರಡು ಜಿಲ್ಲೆಗಳ ಕೆಲವು ಊರುಗಳಲ್ಲಿ ಮಾತ್ರ ಉಳಿದುಕೊಂಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅದೂ ಅಂತ್ಯವಾಗುತ್ತದೆ. ಆದರೆ ಈಗಿರುವ ದೇವದಾಸಿಯರ, ಅವರ ಮಕ್ಕಳ ಭವಿಷ್ಯ ಸುಂದರವಾಗಬೇಕು. ಅದಕ್ಕೆ ಸರಕಾರವೂ ಯೋಜನೆ ರೂಪಿಸಿದೆ. ಎಲ್ಲ ಸಮಾಜಗಳೂ ಅವರನ್ನು ಮಾನವೀಯತೆಯಿಂದ ಕಂಡು, ಅವರ ಪ್ರಗತಿಗೆ ಸಹಕರಿಸ ಬೇಕು, ಅವರು ನೊಂದುಕೊಳ್ಳದಂತೆ ನಡೆದುಕೊಳ್ಳಬೇಕು. ಅವರ ಮಕ್ಕಳನ್ನು ಈ ವಿಷಯ ದಲ್ಲಿ ಕೆಣಕಬಾರದು; ಅದು ಮನುಷ್ಯತ್ವವಾಗುವುದಿಲ್ಲ, ಹಿರಿಯರು ಮಾಡಿದ ತಪ್ಪಿಗೆ ಈಗ ಉಳಿದಿರುವ ದೇವದಾಸಿಯರಿಗೆ, ಅವರ ಮುಗ್ಧ ಮಕ್ಕಳಿಗೇಕೆ, ಅಪಮಾನ!

ಬೇರೆ ಜಾತಿಯ ಕೆಲವರು ವೇಶ್ಯಾವೃತ್ತಿ ರೂಢಿಯಲ್ಲಿದ್ದ ಜಾತಿಯವರನ್ನು ಅಣಕಿಸ ಬಹುದು, ಕೀಳಾಗಿ ಕಾಣಬಹುದು. ಇದು ಬಹಳ ಕ್ವಚಿತ್ರ. ಆದರೆ ಹಿಂದೆ ಇಂಥವರಲ್ಲೂ ಈ ಪದ್ಧತಿ ಇದ್ದ ಬಗ್ಗೆ ದಾಖಲೆಗಳಿವೆ. ಕುರುಬರಲ್ಲೂ ಈ ಪದ್ಧತಿ ಇತ್ತು (ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡನಾಡಿನ ಚರಿತ್ರೆ, ಭಾಗ-೧ ಇದರಲ್ಲಿ ಸಂಶೋಧಕರಾಗಿದ್ದ ಡಾ. ಪಿ.ಬಿ. ದೇಸಾಯಿಯವರ ಲೇಖನ ನೋಡಿ). ಅಂಬಿಗರು (ಬೆಸ್ತ) ಡೊಂಬರಲ್ಲಿಯೂ ಈ ಪದ್ಧತಿ ಇತ್ತು, ಮುಸಲ್ಮಾನರಲ್ಲಿದೆ. ದಲಿತರಲ್ಲಿ ಸಾಮಾನ್ಯ. ವಿಚಿತ್ರವೆಂದರೆ ಉದಾಹರಣೆಗೆ: ಕೂಡಲ ಸಂಗಮದ ಜಾತ್ರೆ ಕಾಲದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೂಸಾದ ಬಸವಣ್ಣ ನವರನ್ನು ತೊಟ್ಟಿಲದಲ್ಲಿ ಹಾಕಿ ನಾಮಕರಣ ಮಾಡುವದೂ ಒಂದು. ಆಗ ‘‘ವೇಶ್ಯೆಯರು (ವೀರಶೈವ ವೇಶ್ಯೆಯರೂ) ತೊಟ್ಟಿಲು ತೂಗಿ ಜೋಗುಳ ಹಾಡುತ್ತಾರೆ’’ ಎಂಬ ವಾಕ್ಯವಿದೆ (ಕೂಡಲ ಸಂಗಮ ಕ್ಷೇತ್ರ ಪರಿಚಯದ ಚಿಕ್ಕ ಪುಸ್ತಕ ನೋಡಿ). ಒಂದೆರಡು ದೊಡ್ಡ ಊರುಗಳಲ್ಲಿ ವೀರಶೈವ ವೇಶ್ಯಾಮನೆತನಗಳಿದ್ದದನ್ನು ಬಹಳ ವರ್ಷಗಳ ಹಿಂದೆ ನಾನು ನೋಡಿರುವೆ ಹಾಗೂ ಕೇಳಿರುವೆ. ಈಗ ಅಂಥ ಅವಶೇಷ ಇಲ್ಲವೆಂದು ಲಿಂಗಧಾರಿಗಳಾದ ವೇಶ್ಯಾಯರನ್ನು ಕೀಳಾಗಿ ಕಾಣಬಹುದೆಂದು ಕೆಲವು ಶಿವಶರಣರು ತಮ್ಮ ವಚನಗಳಲ್ಲಿ ಉಪದೇಶಿಸಿದ್ದಾರೆ. ಆದ್ದರಿಂದ ಇಂಥ ಪದ್ಧತಿ ಹೊಂದಿದ್ದ ಸಮಾಜದವರ ಬಗ್ಗೆ ಯಾರಾ ದರೂ ಆಡಿಕೊಂಡರೆ, ಅವರಿಗೆ ಮೇಲಿನ ಸಂಗತಿಗಳನ್ನು ಹೇಳಿ ಬಾಯಿ ಮುಚ್ಚಿಸಬೇಕು. ಇನ್ನು, ಪರಿಸ್ಥಿತಿಯ ಒತ್ತಡದಿಂದ ಅಥವಾ ತಾವೇ ಜಾರಿ ವೇಶ್ಯೆಯರಾದಂಥವರಂತೂ ಎಲ್ಲ ಜಾತಿಗಳಲ್ಲೂ ಇದ್ದಾರಲ್ಲವೆ?

ವ್ಯಕ್ತಿತ್ವ ವಿಕಸನ ಹಾಗೂ ಸಮಾಜ ಸೇವಾ ಶಿಬಿಗಳು

ಇತರ, ಜಾತಿಗಳವರಲ್ಲಿ ಮತ್ತು ದಲಿತರು, ಚಿಕ್ಕ ಚಿಕ್ಕ ಕೋಮಿನವರಲ್ಲಿ ಸಹ ಜಾಗೃತಿ ಮೂಡಿದ್ದು ಸಂಘಟನೆ, ಹೋರಾಟಗಳು ಅವ್ಯಾಹತವಾಗಿ ನಡೆಯುತ್ತಿವೆ. ತಮ್ಮವರನ್ನು ಗೌರವಿಸುವ, ಪ್ರೀತಿಸುವ, ಎತ್ತಿ ಹಿಡಿಯುವ, ಅವರಿಗೆ ಮಾರ್ಗದರ್ಶನ ಸಹಾಯ ಮಾಡುವ ಮನೋಭಾವ ಮತ್ತು ಸರಕಾರವನ್ನು ಮಣಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಕೆಚ್ಚು-ಇವು ಅವರಲ್ಲಿ ಕೆಲಸ ಮಾಡುತ್ತವೆ. ಆದರೆ ಸಾಮಾನ್ಯವಾಗಿ ನಾಯಕರಲ್ಲಿ ತಾತ್ಸಾರ, ಅಸೂಯೆ, ತಮ್ಮವರನ್ನು ನಿಷ್ಠುರವಾಗಿ ಆಡಿಕೊಳ್ಳವದು, ಮುಂದೋರಣೆಯ ಕೊರತೆ, ಜಡತೆ-ಇವು ಮನೆಮಾಡಿಕೊಂಡಿವೆ. ಹೀಗಾಗಿ ತಮಗಾಗುವ ಅನ್ಯಾಯ, ಅಸಡ್ಡೆಗಳನ್ನು ಪ್ರತಿಭಟಿಸಿ ಸರಕಾರವನ್ನು ಬಗ್ಗಿಸುವ ಒಂದಾದರೂ ರಾಜ್ಯ ಮಟ್ಟದ ಚಳವಳಿ ನಡೆಸಲು ಇಲ್ಲಿಯವರೆಗಿನ ೫೦ ವರ್ಷಗಳಲ್ಲಿ ಸಾಧ್ಯವಾಗಿಲ್ಲ. ಈ ಕಾರಣಗಳಿಂದಾಗಿ ಈ ಸಮುದಾಯದ ವ್ಯಕ್ತಿಯ ಮನೋಭಾವ ಬದಲಿಸಬೇಕಾಗಿದೆ, ಹೊಸ ವ್ಯಕ್ತಿತ್ವನ್ನು ನಿರ್ಮಿಸಬೇಕಾಗಿದೆ, ಚೈತನ್ಯ ತುಂಬಿದ ಮನುಷ್ಯನನ್ನಾಗಿ ಮಾಡಬೇಕಾಗಿದೆ.

ಹೀಗೆ ವಾಲ್ಮೀಕಿ ಸಮಾಜ ಛಿದ್ರ ಹಾಗೂ ಹೀನ ಸ್ಥಿತಿ ತಲುಪಿರುವುದರಿಂದ ಕೇವಲ ಉಪದೇಶ, ಲೇಖನಗಳಿಂದ ಅದನ್ನು ಸುಧಾರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಕ್ತಿತ್ವ ವಿಕಸನ ಹಾಗೂ ಸಮಾಜ ಸೇವಾ ಶಿಬಿರಗಳು ಅಥವಾ ತರಬೇತಿಗಳನ್ನು ೫ರಿಂದ ೮ದಿನ ನಡೆಸಬೇಕು. ಇದಕ್ಕಾಗಿ ಕೆಳಗಿನ ಅಂಶಗಳಿಂದ ಕೂಡಿದ ಅಭ್ಯಾಸ ಪತ್ರಿಕೆ (ಸಿಲ್ಯಾಬಸ್) ರಚಿಸಬೇಕು.

ಜಡ, ದುರ್ಬಲ ಮತ್ತು ಅಜ್ಞಾನಿ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಿ ಜೀವನದ ಸಮಸ್ಯೆಗಳನ್ನು ಎದುರಿಸಲು ಮತ್ತು ಶಕ್ತಿಶಾಲಿ ಜೀವನವನ್ನು ನೆಡಸುವಂತೆ ಅಣಿಗೊಳಿಸಲು ಸಹಾಯವಾಗುವ ಹೊಸ ವಿಚಾರಧಾರೆ, ಮನಃ ಶಾಸ್ತ್ರದಲ್ಲಿಯ ಸಂಶೋಧನೆಗಳು ಜಗತ್ತಿನ ಅನೇಕ ಮುಂದುವರಿದ ದೇಶಗಳಲ್ಲಿ ಪ್ರಚಲಿತವಾಗಿವೆ, ಪ್ರಯೋಗಿಸಲ್ಪಡುತ್ತಿವೆ. ಈ ಕುರಿತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳ ಲಕ್ಷ ಲಕ್ಷ ಪ್ರತಿಗಳು ಪ್ರಕಟವಾಗಿವೆ. ಇವುಗಳಿಗೆ ಭಾರಿ ಬೇಡಿಕೆ ಇದೆ. ಟ್ರ್ಯಾಂಜ್ಯಾಕ್ಸ್ಯನಲ್ ಆ್ಯನ್‌ಲಿಸಿಸ್(T.A), ನ್ಯೂರೋ ಲಿಂಗ್ವಿಸ್ಟಿಕ್ ಪ್ರೊಗ್ರ್ಯಾಮ (N.L.P.), ಸಿಲ್ವಾ ಮೈಂಡ್ ಕಂಟ್ರೊಲ್ ಮೆಥಡ್ ಇತ್ಯಾದಿಗಳು ವ್ಯಕ್ತಿತ್ವ ವಿಕಸನ ಕ್ರಿಯೆಯಲ್ಲಿ ಬಹಳ ಪ್ರಭಾವ ಬೀರುತ್ತವೆ. ಇವುಗಳೊಡನೆ ಯೋಗ, ಧ್ಯಾನಗಳನ್ನು ಸೇರಿಸಿಕೊಳ್ಳಬಹುದು. ಬುದ್ಧ ಬೋಧಿಸಿದ ವಿಪಶ್ಯನ ಧ್ಯಾನ, ಮೈತ್ರಿ ಧ್ಯಾನಗಳು ಬಹಳ ಪರಿಣಾಮಕಾರಿಯಾಗಿವೆ. ಮುಖಂಡತ್ವದ ತರಬೇತಿಯೂ ಅವಶ್ಯ.

ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ, ನಾಯಕ ಸಮಾಜದ ಸೇವೆಗಾಗಿ ಈ ಸಮುದಾಯದ ಚರಿತ್ರೆ, ಸ್ವಭಾವ, ಸಾಧನೆ, ಸಾಹಸ, ತ್ಯಾಗ, ಮಹಾನ್ ವ್ಯಕ್ತಿಗಳು, ಧಾರ್ಮಿಕ ರೀತಿನೀತಿ, ಈ ರಾಜ್ಯ ಮತ್ತು ಇತರ ರಾಜ್ಯಗಳಲ್ಲಿರುವ ವಾಲ್ಮೀಕಿಗಳ ಪರಿಸ್ಥಿತಿಯ ಅಧ್ಯಯನ ಲೋಪದೋಷಗಳು, ಮಾಡಬೇಕಾದ ಸಂಘಟನೆ, ಮಾರ್ಗದರ್ಶನ ಕುರಿತ ವಿಷಯಗಳನ್ನು ಬೋಧಿಸಬೇಕು.

ವಯಸ್ಸಾದವರನ್ನು ತಿದ್ದುವದು ಕಷ್ಟ. ಆದ್ದರಿಂದ ೧೬ರಿಂದ ೩೫ ವರ್ಷಗಳೊಳಗಿನ ಕನಿಷ್ಠ ೭ನೇ ವರ್ಗ ಅಥವಾ ಹೆಚ್ಚು ಕಲಿತ ೫೦-೬೦ ತರುಣರನ್ನು (ಅನುಕೂಲವಿದ್ದಾಗ ತರುಣಿಯರನ್ನು) ಆರಿಸಿ ತಾಲೂಕು  ಮಟ್ಟದಲ್ಲಿ ತಜ್ಞರಿಂದ, ಸಮಾಜ ಸೇವಕರಿಂದ ತರಬೇತಿ ಕೊಡಿಸಬೇಕು. ಪ್ರಾರಂಭದಲ್ಲಿ ಕೆಲವು ಪ್ರಮುಖ ಸ್ಥಳಗಳಲ್ಲಿ ಶಿಬಿರ ಇಟ್ಟುಕೊಂಡು ಎಲ್ಲ ಭಾಗಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು, ಈ ಅನುಭವದ ಹಿನ್ನೆಲೆಯಲ್ಲಿ ಮುಂದೆ ತಾಲೂಕಾ ಮಟ್ಟದಲ್ಲಿ ಶಿಬಿರ ನಡೆಸಬಹುದು. ಶಿಬಿರಾರ್ಥಿಗಳನ್ನು ಬೀಳ್ಕೊಡುವಾಗ ಸಮಾಜ ಸೇವೆ, ನಾಯಕ ಸಮಾಜದ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನದ ಹಲವಾರು ಉಪಯುಕ್ತ ಪುಸ್ತಕಗಳನ್ನು ಪುಕ್ಕಟೆಯಾಗಿ ಕೊಡಬೇಕು. ಬೇಕಾದರೆ, ಪ್ರಾರಂಭದಲ್ಲಿ ಶಿಬಿರಾರ್ಥಿಗಳಿಂದ ೧೦೦-೧೫೦ ರೂ. ಶುಲ್ಕ ಪಡೆಯಬಹುದು. ಅದನ್ನೇ ಈ ಪುಸ್ತಕಗಳನ್ನು ಕೊಳ್ಳಲು ವಿನಿಯೋಗಿಸಬಹುದು. ಅವರ ವಿಳಾಸ ಇಟ್ಟುಕೊಂಡು ಬೇಕಾದರೊಡನೆ ಮುಂದೆ ಸಂಪರ್ಕ ಇಟ್ಟುಕೊಳ್ಳಬಹುದು. ಹೀಗೆ ೧೦ ವರ್ಷಗಳಲ್ಲಿ ಎಲ್ಲ ತಾಲೂಕುಗಳಲ್ಲಿ ೨-೩ ಸಾರೆ ಉಚಿತ ತರಬೇತಿ ನೀಡಿದರೆ, ಮುಂದಿನ ಪೀಳಿಗೆಯ ಬಹಳ ವ್ಯಕ್ತಿಗಳು ಸಮರ್ಥ ನಾಗರಿಕರಾಗಿ, ಉತ್ತಮ ಸಂಘಟಕರಾಗಿ ತ್ಯಾಗ ಸೇವೆಗಳಿಗೆ ಒಗ್ಗುವ ಮನೋಭಾವದವ ರಾಗುತ್ತಾರೆ. ಶಿಬಿರ ನಡೆಸಲು ಬೇಕಾಗುವ ಹಣಕಾಸನ್ನು ಶ್ರೀಮಂತರು, ದಾನಿಗಳು, ಹಾಗೂ ಸ್ಥಳೀಯರಿಂದ ಪಡೆಯಬೇಕು. ಇದನ್ನೆಲ್ಲ ನಡೆಸಲು, ಪ್ರೇರಿಸಲು ಒಂದೆರಡು ಸಂಸ್ಥೆಗಳನ್ನು ಹುಟ್ಟುಹಾಕಬೇಕು. ಇವೂ ಸಾಧ್ಯವಾದಷ್ಟು ಹಣಕಾಸು ಒದಗಿಸಬೇಕು. ರಜ ದಿನಗಳಲ್ಲಾದರೆ, ಶಾಲೆಗಳ ಕಟ್ಟಗಳಲ್ಲಿ ಶಿಬಿರಗಳನ್ನು ನಡೆಸಲು ಅನುಕೂಲವಾಗುತ್ತದೆ.

ಸಮಾಜದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ

ವಾಲ್ಮೀಕಿ ಸಮಾಜಕ್ಕೆ ಎಷ್ಟಾದರೂ ಸಂಬಂಧವಿರುವ, ಸಮಾಜದ ವ್ಯಕ್ತಿಗಳ, ವಿಷಯಗಳ ಪ್ರಸ್ತಾಪವಿರುವ, ಪೂರ್ಣವಾಗಿ, ಈ ಸಮಾಜವನ್ನು ಕುರಿತೇ ಬರೆದಿರುವ ಎಲ್ಲ ಪುಸ್ತಕ ಸ್ಮರಣ ಸಂಚಿಕೆ, ಪತ್ರಿಕೆಗಳ (ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಶ್, ಅಥವಾ ಲಭ್ಯವಿರುವ ಇತರ ಭಾಷೆ) ಮಾಹಿತಿ ಸಂಗ್ರಹಿಸಬೇಕು. (ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಾಶಕರು, ಬೆಲೆ, ಒಳಗೊಂಡ ವಿಷಯದ ಮುಖ್ಯಾಂಶಗಳು), ಈ ಮಾಹಿತಿಯನ್ನು ಟೈಪ್ ಅಥವಾ ಝೆುರಾಕ್ಸ್ ಮಾಡಿಸಬೇಕು. ಲಭ್ಯವಿದ್ದ ಪುಸ್ತಕ, ಪತ್ರಿಕೆಗಳನ್ನು ಕೊಂಡು ಅವನ್ನು ಹಾಗೂ ಮಾಹಿತಿಯನ್ನು ಸಮಾಜದ ಜಿಲ್ಲಾ ಗ್ರಂಥಾಲಯ ಸ್ಥಾಪಿಸಿ ಅಲ್ಲಿಡಬೇಕು. ಹಲವಾರು ವೈಚಾರಿಕ ಗ್ರಂಥಗಳು ಇರಬೇಕು. ಮತ್ತು ಜ್ಞಾನದಾಯಕ ಸಮಾಜದ ಸದಸ್ಯರಿಗೆ ಅವಶ್ಯ ವಾಗಿರುವ ಹಾಗೂ ಮಾರ್ಗದರ್ಶಕವಾದ ಉದ್ಯೋಗ, ತರಬೇತಿ, ಕೃಷಿ, ವ್ಯಾಪಾರ, ಕೈಗಾರಿಕೆ, ಸಂಶೋಧನೆ, ಸಂಸ್ಕೃತಿ, ಇತಿಹಾಸ, ಸರಕಾರದಿಂದ ಸಿಗುವ ಸವಲತ್ತು, ಸಮಾಜದ ಮುಖ್ಯ ಸಂಘ ಸಂಸ್ಥೆ, ಮುಖಂಡರ ವಿಳಾಸ ಮೊದಲಾದವುಗಳ ಮಾಹಿತಿಯೂ ಇಲ್ಲಿ ದೊರಕಬೇಕು. ಇಂಥ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ತಾಲೂಕು ಮಟ್ಟದಲ್ಲೂ ಅವಶ್ಯಕವಾಗಿವೆ. ಇವು ಜಿಲ್ಲಾ ಮತ್ತು ತಾಲೂಕಾ ಮಟ್ಟದ ನಾಯಕರ ಸಂಘಗಳ ಕರ್ತವ್ಯದ ಒಂದು ಭಾಗವಾಗಿ ಅಥವಾ ಸೇವೆಯಾಗಿ ಕೆಲಸ ಮಾಡಬೇಕು.

ತಮ್ಮ ಸಮಾಜಕ್ಕೆ ಸಂಬಂಧಿಸಿದ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಂಡು, ದೊಡ್ಡ ಸವಾಲುಗಳನ್ನು ಎದುರಿಸಲು ಬೇರೆ ಬೇರೆ ಸಮಾಜಗಳಲ್ಲಿ ಬಲಿಷ್ಠ ಸಂಘ-ಸಂಸ್ಥೆಗಳು, ಮಠ-ಮಂದಿರಗಳು, ಅವರವರ ಶಿಕ್ಷಣ ಸಂಸ್ಥೆಗಳು ಇವೆ. ಆದರೆ ಹಲವಾರು ಹಿಂದುಳಿದ ಸಮಾಜಗಳಲ್ಲಿ ಇಂಥ ಸಂಸ್ಥೆಗಳಿಲ್ಲ. ಇದ್ದವುಗಳೂ ಸಮರ್ಪಕವಾಗಿ ಹಾಗೂ ಕಳಕಳಿಯಿಂದ ಕೆಲಸ ಮಾಡುವುದಿಲ್ಲ, ಸಬಲವಾಗಿಲ್ಲ. ಇದೇ ಇವುಗಳ ದುರ್ದೈವ, ಆದರೆ ಈ ಬಗ್ಗೆ ನಿರಾಶೆ, ದೈವಾವಲಂಬನೆ, ಕರ್ಮಸಿದ್ಧಾಂತದ ಹಾಗೂ ಬರಹ, ಸೊಲ್ಲು ಸಲ್ಲದು, ಧೈರ್ಯ, ತ್ಯಾಗ, ಪ್ರಯತ್ನ, ಸಾಹಸಗಳೇ ನಮ್ಮ ಏಳಿಗೆಗೆ ತಾರಕವೆಂದು ಅರಿತಷ್ಟೂ ಕ್ಷೇಮ. ನೆಹರೂ ಹೇಳಿದಂತೆ (Daring and acting) ಕ್ರಿಯಾಶೀಲತೆ ಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯ ದಲ್ಲಿ ಸ್ಥಾಪಿತವಾಗಿರುವ ವಾಲ್ಮೀಕಿ ಅಧ್ಯಯನ ಪೀಠವಾದರೂ, ಈ ಸಾಹಸಕ್ಕೆ ಕೈ ಹಾಕಲಿ. ಆದರೆ ಇದಕ್ಕೆ ಕೆಲವು ಮಿತಿಗಳಿವೆ. ಅಲ್ಲದೆ ಸಧ್ಯ ಹಣದ ಬಲವಿಲ್ಲ. ಇದಕ್ಕೆ ಕೋಟಿಗಟ್ಟಲೆ ರೂ. ಗಳ ಅನುದಾನ ಸರಕಾರದಿಂದ ದೊರೆಯುವಂತೆ ಹೋರಾಡುವ ಸವಾಲನ್ನಾದರೂ ‘ನಾಯಕರು’ ಸ್ವೀಕರಿಸುವರೆ?