ಭಾರತೀಯ ಸಾಮಾಜಿಕ ಸಂಸ್ಥೆಯಲ್ಲಿ ವಾಲ್ಮೀಕಿ ಸಮುದಾಯವು ತನ್ನದೇ ಆದ ಇತಿಹಾಸ ಪ್ರಖ್ಯಾತಿ ಪಡೆದುಕೊಂಡದ್ದನ್ನು ಇತಿಹಾಸದ ಪುಟ ಪುಟಗಳು ಸಾರುತ್ತಿವೆ. ಕೋಟೆ, ಕೊತ್ತಲುಗಳನ್ನು ಕಟ್ಟಿ ನಾಯಕರಾಗಿ, ಸೈನಿಕರಾಗಿ ಹಿಂದೆ ಮೆರೆದ ನಾಯಕರು ಇದೀಗ ಸರಿಯಾದ ಸಂಘಟನೆಯಿಲ್ಲದೆ, ಒಕ್ಕಟ್ಟಿಲ್ಲದೆ ಎತ್ತಿಂದೆತ್ತಲೋ ಅಡ್ಡಾದಿಡ್ಡಿಯಾಗಿ ಸಾಗುತ್ತಿ ರುವುದು ಎಲ್ಲಾ ಪ್ರಜ್ಞಾವಂತ ನಾಯಕರಿಗೆ ತಿಳಿದ ವಿಷಯವಾಗಿದೆ. ಹಾಗಾದರೆ ಸಮಾಜದ ಪ್ರಗತಿಗೆ ಅಭಿವೃದ್ದಿಗೆ ಬಲವೃದ್ದಿಗೆ ಎಲ್ಲರೂ ಚಿಂತನೆ ಮಾಡಬೇಕಾದ ಕಾಲ ಇದೀಗ ಒದಗಿ ಬಂದಿದೆ.

ನಾಯಕ ಸಮಾಜದಲ್ಲಿ ಋಷಿಗಳನ್ನು, ಆಡಳಿತಗಾರರನ್ನು, ಬುದ್ದಿಜೀವಿಗಳನ್ನು, ಸಾಹಿತಿಗಳನ್ನು, ಆದರ್ಶ ತ್ಯಾಗಿಗಳನ್ನು, ಶೂರರನ್ನು ಗತಕಾಲದ ಇತಿಹಾಸದಲ್ಲಿ ಕಂಡು ದಾಗಿದೆ. ಅದರಂತೆ ಇಂದಿಗೂ ಸಹ ಸಮಾಜದಲ್ಲಿ ಶ್ರೇಷ್ಠ ಸಾಹಿತಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಪ್ರಖ್ಯಾತ ವೈದ್ಯರು, ಪತ್ರಕರ್ತರು, ಸಮಾಜ ಸೇವಕರು, ಬುದ್ದಿಜೀವಿಗಳು, ಇತಿಹಾಸ ತಜ್ಞರು, ಸಂಶೋಧಕರು, ಸಮಾಜ ಸಂಘಟಿತರು, ನ್ಯಾಯ ವಾದಿಗಳು ನೂರಾರು ಸಂಖ್ಯೆಯಲ್ಲಿ ಇದ್ದಾರೆ. ಆದರೂ ನಮ್ಮ ಸಮಾಜ ಪ್ರಗತಿದಾಯಕ ವಾಗಿ, ಸಂಘಟನಾತ್ಮಕ ರೀತಿಯಲ್ಲಿ ಏಕತೆಯಿಂದ ಬದಲಾವಣೆಯ ಗಾಳಿಯಿಂದ ಇನ್ನೂ ಮುನ್ನೆಡೆಯುತ್ತಿಲ್ಲ. ಎಂದೋ ಸಾಧಿಸಬೇಕಾದ ಸಮಾಜದ ಸರಿಯಾದ ಸಂಘಟನೆ ಇಂದಿಗೂ ಆದೇಕೆ ಸಾಧ್ಯವಾಗಿಲ್ಲ? ರಾಜ್ಯ ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ ಜಾತಿ ಇನ್ನೂ ಮುಂದುವರಿದ ಜಾತಿಗಳಂತೆ ಅಭಿವೃದ್ದಿಯನ್ನು ಏಕೆ ಸಾಧಿಸಿಲ್ಲ? ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಬಹುಶಃ ಅದು ಉತ್ತಮ ನಾಯಕತ್ವದ ಕೊರತೆ ಎಂದೇ ಹೇಳಬಹುದು. ಸಮಾಜದ ಅಭಿವೃದ್ದಿಗೆ ಶ್ರಮಿಸತಕ್ಕವರು ಯಾರೂ ಇಲ್ಲವೆಂದಲ್ಲ. ಆದರ್ಶ ಸಮಾಜವನ್ನು ನಿರ್ಮಾಣ ಮಾಡಿ, ನಾಡಿಗೆ ಮಾದರಿಯಾಗಿರುವ ನಾಯಕರು, ಅನೇಕರು ಇದ್ದಾಗ್ಯೂ ಅಂಥ ಜನರನ್ನು ಕಡೆಗಣಿಸಲಾಗಿದೆ. ಅಂಥ ಸಮಾಜ ಸೇವಕರನ್ನು ದೂರ ಸರಿಸಿ, ಆಧುನಿಕ ರಾಜಕೀಯ ನಾಯಕರು ಮುಂದಿದ್ದಾರೆ. ಆದರೆ, ನಾಯಕತ್ವದ ಸ್ಥಾನವನ್ನರಿಯದೇ ಅದೊಂದು ರಾಜಕೀಯಗೊಂದಲವನ್ನಾಗಿ ಮಾಡಿದ್ದಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಬಲ ರಾಜಕೀಯ ಪ್ರವೇಶ ಮಾಡಿದರೆ ಆ ಸಮಾಜವು ಗೊಂದಲದ ಗೂಡಾಗುವುದು. ಸ್ವಾರ್ಥ, ವೈಯಕ್ತಿಕ ಪ್ರತಿಷ್ಠೆಗಳು ಮುಂದಾಗುವುದು ರಾಗ-ದ್ವೇಷಗಳು ಉಂಟಾಗಿ ಬೆಳೆಯುತ್ತಾ ಬಂದು, ಬಗೆಹರಿಯದ ಸಮಸ್ಯೆಗಳಾಗಿ ಸಮಾಜವನ್ನು ಒಡೆದು ಹಾಕುತ್ತವೆ. ಹಾಗೆಂದರೆ ರಾಜಕೀಯ ಬೇಡವೆಂದಲ್ಲಾ ಸಮಾಜ ಸಂಘಟನೆಗೆ ರಾಜಕೀಯ ಅಧಿಕಾರದ ಆಶ್ರಯ ಬೇಕೇಬೇಕು. ಆದರೆ ಸಮಾಜ ಸಂಘಟನೆಯಲ್ಲಿ ರಾಜಕೀಯ ಸೇರಬಾರದು. ಇಂದು ಸಮಾಜದಲ್ಲಿ ಆಗಿರುವುದೇನೆಂದರೆ, ಸಮಾಜ ಸಂಘಟನೆ ಪ್ರಬಲ ರಾಜಕೀಯ ಬೆರೆಸಿ ವೈಯಕ್ತಿಕ ಪ್ರತಿಷ್ಠೆಮುಂದೆ ಮಾಡಲಾಗುತ್ತಿದೆ. ಇದರಿಂದ ಸಮಾಜದ ಪರಿವರ್ತನೆಯಾಗದೇ ಸಮಾಜ ಸಂಘಟನೆಯಲ್ಲಿ ಪ್ರಬಲ ನಾಯಕರು ಕಾಣದಾಗಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲಿರುವ ನಾಯಕರು, ರಾಜಕಾರಣಿಗಳು, ಚಿಂತಕರು, ಉನ್ನತ ಅಧಿಕಾರಿಗಳು, ಸಾಹಿತಿಗಳು, ಶಾಸಕರು,  ಸಚಿವರು ಹೀಗೆ ಸಮಾಜದ  ಶ್ರೇಷ್ಠೋತ್ತಮರು. ಒಂದೇ ವೇದಿಕೆಯನ್ನು ಸೇರಿ ಸವಾಜದ ಅಭಿವೃದ್ದಿಯ ಕುರಿತು ಚಿಂತನೆ, ವಿಮರ್ಶೆ, ರೂಪು ರೇಷೆಗಳನ್ನು, ಯೋಜನೆಗಳನ್ನು ತಯಾರು ಮಾಡಿ ಆದರ್ಶ ಸಮಾಜದ ಪ್ರಯತ್ನಕ್ಕೆ ನಾಂದಿ ಹಾಡದಿರುವುದು ಒಂದು ದುರಂತ. ಕೇವಲ ಕೆಲವೇ ಕೆಲವು ಸ್ವಯಂ ಘೋಷಿತ ನಾಯಕರು, ತಮ್ಮ ತಮ್ಮ ಹಿಂಬಾಲಕರ, ಸ್ತುತಿಗಾರರ ಪಡೆಗಳನ್ನು ನಿರ್ಮಿಸಿ ಕೊಂಡು, ಮನಬಂದಂತೆ ಸಮಾಜ ಸಂಘಟನೆಯಲ್ಲಿ ತೊಡಗಿದರೆ ಸಮಾಜ ಸಂಘಟನೆ ಒಮ್ಮುಖವಾಗಿ ಬೆಳೆಯಲಾರದು. ಸರ್ವಾನುಮತದಿಂದ ಆಯ್ಕೆಯಾದ ನಾಯಕನ ನಾಯಕತ್ವದ ಸಮಾಜ ಸಂಘಟನೆ ಬಲವರ್ಧನೆಯಾಗುತ್ತದೆ ಎಂಬುದನ್ನು ಸಮಾಜ ಜೀವಿಗಳು ಮರೆಯಬಾರದು.

ಹಾಗಾದರೆ ಸಮಾಜ ಸಂಘಟನೆಯ ರೂಪ ಎಂದಿರಬೇಕು? ಗ್ರಾಮಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾಮಟ್ಟದಿಂದ ರಾಜ್ಯಮಟ್ಟದವರೆಗೆ ಸಂಘಟನೆ ಏಕರೂಪವಾಗಿರಬೇಕು. ಗ್ರಾಮದ ಪ್ರತಿಯೊಂದು ನಾಯಕನ ಮನೆಗೆ ಒಬ್ಬ ಸದಸ್ಯನೆಂದು ಪರಿಗಣಿಸಿ ಗ್ರಾಮಮಟ್ಟದ ಪಂಚಾಯತ್‌ದಲ್ಲಿ ಐವರು ಮುಖಂಡರು ಇರಬೇಕು. ಓರ್ವ ಅಧ್ಯಕ್ಷ, ಓರ್ವ ಕಾರ್ಯದರ್ಶಿ, ಓರ್ವಸ್ತ್ರೀ, ಓರ್ವ ಯುವಕ, ಓರ್ವ ಹಿರಿಯ ಹೀಗೆ ಐವರ ಸಂಘಟನೆ ಬೇಕು. ಗ್ರಾಮಮಟ್ಟದ ಅಧ್ಯಕ್ಷರು ಸೇರಿಕೊಂಡು ತಾಲೂಕು ಮಟ್ಟದ ಹನ್ನೊಂದು ಜನರ ಸಮಿತಿ ಇರಬೇಕು. ಇದರಂತೆ ಇಂದು ನಮ್ಮವರ ಸಂಘಗಳು, ಸಂಘಟನೆಗಳು ವಿಚಿತ್ರ ರೀತಿಯಲ್ಲಿ ಮುಂದುವರಿ ಯುತ್ತಿದೆ.

ಪ್ರತಿಯೊಂದು ಗ್ರಾಮದಲ್ಲಿ ಗುಂಪುಗಳಿವೆ. ಪ್ರತಿಯೊಂದು ಶಹರಗಳಲ್ಲಿ ಆರೆಂಟು ಸಂಘ ಗಳು ಇವೆ. ಪ್ರತಿಯೊಂದು ಗುಂಪು, ಸಂಘ ನಾವೇ ನಾಯಕರ ನಾಯಕರೆಂದು ತಮ್ಮ ತಮ್ಮ ತುತ್ತೂರಿಗಳನ್ನು ಮೊಳಗಿಸುತ್ತಿವೆ. ಸಮಾಜ ಸೇವೆಯ ಹೆಸರಿನಲ್ಲಿ ಜನರ ಶೋಷಣೆ ಮಾಡುತ್ತಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಸರಿಯಾದ ಲೆಕ್ಕಪತ್ರಗಳಿಲ್ಲ. ಕೆಲವು ಸಂಘಗಳನ್ನು ಹಾಳು ಮಾಡಿ ನಾವೇ ಪದಾಧಿಕಾರಿಗಳೆಂದು ಹಲವು ವರ್ಷಗಳಿಂದ ಪಟ್ಟಭದ್ರರಾಗಿ ಕುಳಿ ತ್ತಿದ್ದಾರೆ. ಸಂಘಟನೆಗಾಗಿ ಕೂಡಿಸಿದ ಹಣದ ಜಮಾ-ಖರ್ಚುಗಳ ವಿವರಗಳಿಲ್ಲ. ಸಾರ್ವ ಜನಿಕವಾಗಿ ಹಣ ಕೂಡಿಸಿ, ಮೋಜು ಮಾಡಿ, ತಮ್ಮ ಹಾಗೂ ತಮ್ಮ ಹಿಂಬಾಲಕರ ಪೋಟೋ ಗಳನ್ನು ಹಾಕಿಸಿಕೊಂಡು ಮೆರೆಯುವುದೇ ಒಂದು ಸಮಾಜ ಸೇವೆಂದು ತಿಳಿದಿದ್ದಾರೆ. ಹತ್ತಿಪ್ಪತ್ತು ವರ್ಷ ಸಂಘಗಳ ಹಣಕಾಸಿನ ವಿವರಗಳನ್ನೇ ತೋರಿಸುತ್ತಿಲ್ಲ. ಒಬ್ಬರ ಮೇಲೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಈ ರೀತಿ ಸಂಘ ಸಂಸ್ಥೆ ಪದಾಧಿಕಾರಿಗಳು ನಡೆದರೆ ಸಮಾಜವು ಈ ಜನರನ್ನು ಎಂದೂ ವಿಶ್ವಾಸದೊಂದಿಗೆ ಕಾಣದು.

ಸಮಾಜವು ಧಾರ್ಮಿಕವಾಗಿ ಮುಂದುವರಿಯಬೇಕಾದರೆ ಪ್ರತಿಯೊಬ್ಬರ ಮನೆಯಲ್ಲಿ ವಾಲ್ಮೀಕಿ ಪೋಟೋ ಇರಬೇಕು. ಪ್ರತಿ ವರ್ಷ ವಾಲ್ಮೀಕಿ ಜಯಂತಿಯನ್ನು ಆ ದಿನದಂದೇ ಆಚರಿಸಬೇಕು. ಬೇರೆ ದಿನಗಳಲ್ಲಿ ಅನ್ಯಥಾ ಆಚರಿಸಬಾರದು. ವಾಲ್ಮೀಕಿ ಜಯಂತಿ ದಿನದಂದು ಬಹುತೇಕ ರೈತ ವರ್ಗದವರು ಅಂದು ಮುಂಜಾನೆ ತಮ್ಮ ತಮ್ಮ ಹೊಲಗಳಿಗೆ ಚರಗಚಲ್ಲಲು ಹೋಗುತ್ತಾರೆ ಕಾರಣ ಮುಂಜಾನೆ ಹೋದಲ್ಲಿಯೇ ಒಂದು ಮಣ್ಣಿನ ಹುತ್ತದಲ್ಲಿ ವಾಲ್ಮೀಕಿ ಮೂರ್ತಿ ಮಾಡಿ ಹೊಲದಲ್ಲಿಯೇ ಮುಂಜಾನೆ ಪೂಜಿಸಬೇಕು. ಸಂಜೆಯ ಮುಂದೆ ಮನೆಗಳಿಗೆ ಬಂದಾಗ ಸಾಂಸ್ಕೃತಿಕ ಕಾರ್ಯಗಳನ್ನು ಏರ್ಪಡಿಸಬೇಕು. ಪ್ರತಿಯೊಬ್ಬರ ಮನೆಯಲ್ಲಿ ‘ಸರಳ ರಾಮಾಯಣ’ ಪುಸ್ತಕ ಇರಬೇಕು. ವಾಲ್ಮೀಕಿ ಜಯಂತಿಯ ಮುನ್ನಾದಿನಗಳಂದು ರಾಮಾಯಣದ ಪಾರಾಯಣ ಮಾಡಬೇಕು. ಅದರಲ್ಲಿಯೂ ಮಹತ್ವದ ತತ್ವಗಳನ್ನು ಮನೆ ಮಂದಿಗೆಲ್ಲಾ ತಿಳಿಸಬೇಕು. ರಾಮಾಯಣ ಗ್ರಂಥಕ್ಕೆ ಪೂಜೆ ಸಲ್ಲಿಸಬೇಕು. ವಾಲ್ಮೀಕರಿಗೊಂದು ಪ್ರತ್ಯೇಕ ಧಾರ್ಮಿಕ ಹಾಗೂ ಸಾಮಾಜಿಕ ನೀತಿ ಸಂಹಿತೆ ರಚಿಸಬೇಕು. ಈ ಬಗ್ಗೆ ರಾಜನಹಳ್ಳಿಯ ಮಠಾಧೀಶರು ಕಾರ್ಯ ಪ್ರವೃತ್ತರಾಗಬೇಕು.

ತಾಲ್ಲೂಕು ಮಟ್ಟದ ಅಧ್ಯಕ್ಷರೆಲ್ಲಾ ಸೇರಿ ಜಿಲ್ಲೆಗೆ ತಕ್ಕ ಜಿಲ್ಲಾಮಟ್ಟದ ಹದಿನೈದು ಜನರ ಸಮಿತಿ ರಚಿಸಬೇಕು. ಜಿಲ್ಲಾಮಟ್ಟದ ಅಧ್ಯಕ್ಷರು ಕೂಡಿಕೊಂಡು ರಾಜ್ಯಮಟ್ಟದ ಹತ್ತೊಂಬತ್ತು ಜನರ ಸಮಿತಿ ಇರಬೇಕು. ಈ ರೀತಿಯಾಗಿ ರಾಜ್ಯಮಟ್ಟಕ್ಕೆ ಓರ್ವನೇ ಅಧ್ಯಕ್ಷ ನಾಗಿರಬೇಕು. ಇದಲ್ಲದೇ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ಸಮಿತಿಯವರು ಉಪ ಸಮಿತಿಗಳನ್ನು ಮಾಡಿಕೊಂಡು ಅದರಲ್ಲಿ ಶಿಕ್ಷಣ, ಆರೋಗ್ಯ, ಎಂಜಿಯನಿಯರಿಂಗ್, ಕ್ರೀಡೆ ಹೀಗೆ ಇವುಗಳಲ್ಲಿ ಪ್ರತಿಭಾನ್ವಿತ ಸದಸ್ಯರನ್ನು ಸೇರಿಸಿಕೊಳ್ಳಬೇಕು. ಇನ್ನು ಕಾರ್ಪೊರೇಶನ್ನು ಟೌನ್ ಪಂಚಾಯಿತಿಗಳಲ್ಲಿ ವಾರ್ಡ್‌ಮಟ್ಟದ ಅಧ್ಯಕ್ಷರು ಹಾಗೂ ಸಮಿತಿ ಹಾಗೂ ಕಾರ್ಪೊ ರೇಶನ್ ಟೌನ್ ಪಂಚಾಯಿತ್ ಮಟ್ಟದ ಅಧ್ಯಕ್ಷರು ಹಾಗೂ ಸಮಿತಿಗಳನ್ನು ಆರಿಸಿ ಕೊಳ್ಳಬೇಕು. ಪ್ರತಿಯೊಂದು ಮಟ್ಟದಲ್ಲಿ ಎಷ್ಟು ಸದ್ಯಸ್ಯರಿರಬೇಕು ಕಾರ್ಯವಿಧಾನ, ಹಣಕಾಸು ಮುಂತಾದ ವಿಷಯಗಳಿಗೆ ಬಾಯಲಾಗಳನ್ನು ಮಾಡಿಕೊಳ್ಳಬೇಕು. ಈ ರೀತಿ ರಾಜ್ಯಾದ್ಯಂತ ಒಂದೇ ಒಂದು ಸಮಿತಿ ಸಂಘಟನೆಯಲ್ಲಿ ಇರಬೇಕು. ಕರ್ನಾಟಕ ರಾಜ್ಯದ ೨೮ ಜಿಲ್ಲೆಗಳಲ್ಲಿ, ೨೮ ಅಧ್ಯಕ್ಷರು ಇರಬೇಕು. ಅಂದರೆ ಸಮಾಜದಲ್ಲಿ ಏಕತೆ ಉಂಟಾಗುವುದು. ವಿಚಾರವಂತರು ವೈಚಾರಿಕತೆಯ ಒರೆಗಲ್ಲಿಗೆ ಹಚ್ಚಿ ಒಂದು ನಿರ್ಧಾರಕ್ಕೆ ಬರಬೇಕು. ಅಂದರೆ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಅಡಿಗಲ್ಲು ಹಾಕಿದಂತಾಗುತ್ತದೆ.

ಇನ್ನೂ ಅಖಿಲ ಭಾರತ ನಾಯಕ ಸಂಘವನ್ನೇನೋ ಬೆಂಗಳೂರಲ್ಲಿ ಸ್ಥಾಪಿಸಲಾಗಿದೆ. ಅದು ಬೆಂಗಳೂರು ಬಿಟ್ಟು ಮೇಲೇರಲೊಲ್ಲದಾಗಿದೆ. ಅಖಿಲ ಭಾರತ ಎಂದರೆ ಭಾರತದ ಎಲ್ಲಾ ರಾಜ್ಯಗಳಲ್ಲಿಯ ಅಧ್ಯಕ್ಷರು ಸೇರಿ ಒಂದು ಮಹಾಮಂಡಲವಾಗಬೇಕು. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಅದರಲ್ಲಿರಬೇಕು. ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯದಲ್ಲಿ ನಮ್ಮ ಸಮುದಾಯವಿದೆ. ನಮ್ಮ ಜನರ ಜನಸಂಖ್ಯೆ ಸಾಕಷ್ಟಿದೆ. ಇನ್ನೂ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ನಮ್ಮವರು ಇತ್ತೀಚೆಗೆ ನೆಲೆಸಿದ್ದಾರೆ. ಆದ್ದರಿಂದ ಪ್ರತಿಯೊಂದು ರಾಜ್ಯದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿ ಇದಕ್ಕೆ ಭಾರತ ಮಟ್ಟದ ಸ್ವರೂಪ ಕೊಡಬೇಕು. ಈ ಬಗ್ಗೆ ಅಖಿಲ ಭಾರತ ನಾಯಕ ಸಂಘದವರ ಅವಲೋಕನ ಮಾಡಿಕೊಳ್ಳಬೇಕು.

ಇನ್ನೂ ಸಮಾಜದ ರಾಜಕೀಯ ಮುಖಂಡರು ಸಮಾಜಕ್ಕಾಗಿ ಏನು ಮಾಡಬೇಕು? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಕೀಯ ರಂಗದಲ್ಲಿ ಕೆಲವು ಸಮಾಜದ ನಾಯಕರು ಉನ್ನತ ಸ್ಥಾನಕ್ಕೆ ಏರಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಶಾಸಕರಾಗಿದ್ದಾರೆ. ಸಂಸದರಾಗಿದ್ದಾರೆ. ಸಚಿವರಾಗಿದ್ದಾರೆ ಇವರು ಸಮಾಜದ ಶ್ರೇಯೋಭಿವೃದ್ದಿಗೆ ನೆರವಾಗಬೇಕು. ರಾಜ್ಯದ ಏಳು ವಿಶ್ವವಿದ್ಯಾಲಯಗಳಲ್ಲಿ ಒಬ್ಬರಿಗೂ ಉಪಕುಲಪತಿ ಸ್ಥಾನ ದೊರಕಿಲ್ಲ. ವಿಶ್ವವಿದ್ಯಾಲಯಗಳ ಸಿಂಡಿಕೇಟು ಸಮಿತಿಗಳಲ್ಲಿ ಗಿರಿಜನರಿಗೆ ರಿಜರ್ವೇಶನ್ ಇಲ್ಲ. ಒಂದೇ ಒಂದು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ-ಅಧ್ಯಯನ ಪೀಠದಲ್ಲಿ ಗಿರಿಜನಾಂಗಕ್ಕಾಗಿ ಪ್ರತ್ಯೇಕವಾಗಿ ಐ.ಎ.ಎಸ್.-ಐ.ಪಿ.ಎಸ್. ತರಗತಿ ಗಳಲ್ಲಿ ತರಬೇತಿ ಕೇಂದ್ರವಿಲ್ಲ. ಈ ಜನರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲು ಇಲ್ಲ. ಈ ಸಮಾಜದ ಮಹಿಳಾ ವಿದ್ಯಾರ್ಥಿನಿಗಳಿಗಾಗಿ ಸಮಾಜದವರು ಒಂದಾದರೂ ರೆಸಿಡೆನ್ಸಿ ಹಾಸ್ಟೆಲು ಕಟ್ಟಿಸಿಲ್ಲ. ಕರ್ನಾಟಕದ ಗಿರಿಜನಾಂಗಗಳಿಗಾಗಿ ಪ್ರತ್ಯೇಕ ಒಬ್ಬ ಗಿರಿಜನಾಂಗದ ಸಚಿವರಿಲ್ಲ. ಸ್ವಾತಂತ್ರ್ಯ ಬಂದು ೬೦ ವರ್ಷಗಳಾದರೂ ಲೋಕಾಸೇವಾ ಆಯೋಗದಲ್ಲಿ ಈ ಸಮಾಜದ ಒಬ್ಬನಿಗೂ ಸದಸ್ಯತ್ವ ಕೊಟ್ಟಿಲ್ಲ. ಕೇಂದ್ರ ಸರ್ಕಾರದಲ್ಲಿದ್ದು ೭.೫% ರಿಜರ್ವೇಶನ್ ನಮಗೆ ಇಲ್ಲ ಇಂತಹ ಸಮಸ್ಯೆಗಳನ್ನು ರಾಜಕಾರಣಿಗಳು ಬಿಡಿಸಬೇಕು. ನಮಗಾಗಿ ತಾವುಗಳು ಹಾಸ್ಟೆಲುಗಳನ್ನು ತೆರೆದಿದ್ದೀರಾ? ಶಿಕ್ಷಣ ಸಂಸ್ಥೆಗಳನ್ನು ನೆಡೆಸುತ್ತಿದ್ದೀರಾ? ಅಥವಾ ಈ ರೀತಿ ಕೆಲಸ ಮಾಡುವವನಿಗೆ ಆಶ್ರಯ ಕೊಟ್ಟಿದ್ದೀರಾ? ಇಂಥ ಅನೇಕ ಸಮಸ್ಯೆಗಳಿದ್ದು ರಾಜಕಾರಣಿಗಳು ಇವುಗಳಿಗೆ ಸ್ಪಂದಿಸಬೇಕು.

ಸಮಾಜದ ಹೆಸರಿನಲ್ಲಿ ಅಧಿಕಾರ ಪಡೆದವರು ತಮ್ಮ ಅಧಿಕಾರ ಹೋಗುವವರೆಗೆ ಸಮಾಜದ ಕಡೆಗೆ ಹಿಂತಿರುಗಿ ನೋಡುವುದಿಲ್ಲ ಮತ್ತು ಸಮಾಜದ ನೆನಪಾಗುವುದು ಅಧಿಕಾರ ದಿಂದ ವಂಚಿತರಾದಾಗ ಮಾತ್ರ. ಹೀಗಾದರೆ ಸಮಾಜಕ್ಕೆ ರಾಜಕೀಯ ಆಶ್ರಯ ಎಲ್ಲಿಂದ ದೊರಕೀತು? ರಾಜಕೀಯ ಕ್ಷೇತ್ರದಲ್ಲಿ ಸಮಾಜದ ಸ್ಥಾನಮಾನ ಇನ್ನೂ ಗಟ್ಟಿಯಾಗಿಲ್ಲ. ರಾಜ್ಯದಲ್ಲಿ ಸಮಾಜ ಜನಸಂಖ್ಯಾ ದೃಷ್ಟಿಯಿಂದ ಐದನೆಯ ಸ್ಥಾನದಲ್ಲಿದ್ದರೂ, ನಮಗಿಂತ ಕಡಿಮೆ ಜನಸಂಖ್ಯೆ ಇರುವ ಸಮಾಜಕ್ಕೆ ಹೆಚ್ಚು ಸಚಿವ ಸ್ಥಾನಗಳು, ಶಾಸಕ ಸ್ಥಾನಗಳು ಕೊಡಲ್ಪಟ್ಟಿವೆ. ಈ ರೀತಿ ನಾಯಕರಿಗೆ ರಾಜಕೀಯದಲ್ಲಿ ಬಹಳಷ್ಟು ಅನ್ಯಾಯವಾಗಿದೆ. ಇದನ್ನು ಗಂಭೀರವಾಗಿ ಯೋಚಿಸಿ ರಾಜಕೀಯ ನಾಯಕರು ವಿಮರ್ಶೆ ಮಾಡಿ, ಸಮಾಜದ ಏಳಿಗೆಯ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಸಮಾಜದ ಬಲವರ್ಧನೆಗೆ ರಾಜಕೀಯ ಅಧಿಕಾರ ಬೇಕೇಬೇಕು. ಕನಿಷ್ಟ ಇಪ್ಪತ್ತೈದು ಶಾಸಕರನ್ನು ಆರಿಸಿ ಕಳಿಸಬೇಕಾದ ನಾವು ಐದಾರು ಶಾಸಕರಿಂದ ತೃಪ್ತರಾಗಿದ್ದೇವೆ.

ಜ್ಞಾನಾಭಿವೃದ್ದಿಯಲ್ಲಿ ಸಮಾಜ ಇನ್ನೂ ಮುನ್ನಡೆಯಬೇಕಾಗಿದೆ. ಈಗಿನ ಆಧುನಿಕ ಕಾಲದಲ್ಲಿ ವಿದ್ಯೆ, ಬುದ್ದಿಗಳಿಗೆ ಅತೀ ಮಹತ್ವ ಇದೆ. ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ವಾದ, ಆಗಾಧವಾದ ಕಾರ್ಯ ಮಾಡಬೇಕಾಗಿದೆ. ಪ್ರಗತಿ ಸಾಧಿಸಬೇಕಾಗಿದೆ. ಪ್ರಾಥಮಿಕ ಹಂತದಿಂದ ಮೊದಲ್ಗೊಂಡು ಕಾಲೇಜ್ ಹಂತದವರೆಗೆ ಶಾಲಾ, ಕಾಲೇಜುಗಳನ್ನು ವಸತಿ ಹಂತದವರೆಗೆ ಶಾಲಾ, ಕಾಲೇಜುಗಳನ್ನು ಸ್ಥಾಪನೆಮಾಡಿ, ಪೋಷಿವುದರ ಕಡೆಗೆ ಗಮನ ಹರಿಸಬೇಕಾಗಿದೆ. ಇದು ಇಂದಿನ ಅನಿವಾರ್ಯ ಅಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಪ್ರಾರಂಭವಾದರೆ, ಸರ್ವ ಕ್ಷೇತ್ರಗಳಲ್ಲಿ ಸಮಾಜದ ಅಭಿವೃದ್ದಿ ಸಾಧ್ಯ ಸಮಾಜವು ಸದೃಢವಾಗಿ, ಸುಭದ್ರವಾಗಿ, ಆದರ್ಶಮಯವಾಗಿ ಬೆಳೆಯಬೇಕಾದರೆ ಶಿಕ್ಷಣ ಮೊದಲು ಬೇಕು.

ಸಮಾಜದ ಸರಕಾರಿ ನೌಕರರು ಸಹ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವಿದೆಯೋ, ಅದನ್ನು ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಅವರ ಕಾರ್ಯಗಳಿಗೆ ನೆರವು ನೀಡಬೇಕು. ಪ್ರೋಕೊಡಬೇಕು. ಸಮಾಜದ ಸಂಘಟನೆಗೆ ಪರೋಕ್ಷವಾಗಿ ಸಹಾಯ ಸಹಕಾರ ನೀಡು ವುದನ್ನು ಮರೆಯಬಾರದು. ಈ ಜನರ ಅಭಿವೃದ್ದಿಯಲ್ಲಿ ಸಮಾಜ ನೌಕರರ ಪಾತ್ರ ಬಹಳ ಮಹತ್ವದ್ದಾಗಿದೆ.

ಸಮಾಜದ ಯುವಶಕ್ತಿ ಮುಂದೆ ಬರಬೇಕು. ಹಿರಿಯರ, ಬುದ್ದಿ ಜೀವಿಗಳ ಮಾರ್ಗ ದರ್ಶನದಲ್ಲಿ ಸಮಾಜ ಸಂಘಟನೆಗಾಗಿ ದುಡಿಯಬೇಕು. ದುರ್ನಡೆತೆ, ದುರಾಚಾರಗಳಿಂದ ದೂರವಿರಬೇಕು. ಸದಾಚಾರ, ಸನ್ನಡೆತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸುಂದರ, ಸಂಪನ್ನ, ಸುಭದ್ರ ಸಮಾಜ ರಚಿಸಲು ಮುಂದಾಗಬೇಕು. ತ್ಯಾಗ, ಸೇವೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಯುವಕರು ಕೇವಲ ನೌಕರಿಗಳಿಗಾಗಿ ಬೆನ್ನು ಹತ್ತದೆ ಹೊಸ-ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು. ಯಾವುದೇ ಸಮಾಜ ಕಾರ್ಯ ವನ್ನು ಉತ್ಸಾಹದಿಂದ ಪ್ರೇರಿತವಾಗಿ ತಮ್ಮ ಹೊಣೆಗಾರಿಕೆಗಳನ್ನು ಜಾಣತನದಿಂದ ನಿರ್ವ ಹಿಸಿದಾಗ ಯಾವುದೇ ಕಾರ್ಯಗಳು ಅಸಾಧ್ಯವಲ್ಲ.

ನಾಯಕರು ಇಂದು ದುಶ್ಚಟಗಳನ್ನು ದುರ್ಮಾಗಗಳನ್ನು ಮೂಢನಂಬಿಕೆಗಳನ್ನು ತೊರೆ ಯಬೇಕು. ದೇವರಿಗೆ ಪ್ರಾಣಿಗಳನ್ನು ಬಲಿಕೊಡುವ ಕಾರ್ಯಗಳನ್ನು ಬಿಡಬೇಕು.ಸಮಾಜದ ಸಾಹಿತಿಗಳು ಸಮಾಜದ ಹಿತಚಿಂತನೆಯ ಕುರಿತಾದ ಸಾಹಿತ್ಯವನ್ನು ರಚಿಸಬೇಕು. ಮುಂದಿನ ಪೀಳಿಗೆಗೆ ಜ್ಞಾನಮಾಡಿಕೊಟ್ಟು ಸನ್ಮಾರ್ಗದಲ್ಲಿ ಸಮಾಜ ಸೇವೆಯಲ್ಲಿ ಅವರು ನಡೆಯುವಂತೆ ನೋಡಿಕೊಳ್ಳಬೇಕು. ನಮ್ಮ ಉಜ್ಜಲ ಗತ ಇತಿಹಾಸವನ್ನು ಅವರೆದುರಿಗಿಟ್ಟು, ಶೌರ್ಯ, ಧೈರ್ಯ, ಸಾಹಸಗಳಿಂದ ಕಾರ್ಯ ಮಾಡಲು ಅವರನ್ನು ಪ್ರೇರೇಪಿಸಬೇಕು. ಆದರ್ಶ ರೀತಿಯಲ್ಲಿ ಎಲ್ಲಾ ಸಮಾಜಗಳೊಂದಿಗೆ ಮುಂದುವರಿಯುವಂತೆ ತಿಳುವಳಿಕೆ ನೀಡಬೇಕು.

ಹೀಗಿರುವ ಸಮಾಜದ ಸಂಘ, ಸಂಸ್ಥೆಗಳು ಸಮಾಜದ ಪರಿವರ್ತನೆಗಾಗಿ ಮಹತ್ವದ ಪಾತ್ರ ವಹಿಸಬೇಕಾದೆ. ಸಮಾಜದ ಪತ್ರಿಕೆಗಳು ಗುರುವಿನಂತೆ, ಸದಾ ಮಾರ್ಗದರ್ಶಿ ವಿಚಾರ ಗಳಿಂದ ಸಮಾಜವನ್ನು ಮುಂದುವರಿಸಬೇಕು. ಸಮಾಜದ ಕುರಿತಾದ ವಿಚಾರ ಸಂಕಿರಣ, ಜನಜಾಗೃತಿಯ ಆಂದೋಲನ, ಸಂಘಟನೆಯ ಬಲವರ್ಧನೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮಾಜದ ಪಾತ್ರ ಕುರಿತು ಹಲವಾರು ಕಾರ್ಯಗಳನ್ನು ಕೈಗೊಳ್ಳಬೇಕು. ಜನರಲ್ಲಿ ಹೊಸ ಪ್ರಜ್ಞೆ ಮೂಡಬೇಕು. ಇದರಿಂದ ಸಮಾಜದ ಯೋಗ್ಯ ನಾಯಕರು ಮುಂದೆ ಬಂದು ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಹಿರಿಯರು, ಬುದ್ದಿವಂತರು, ರಾಜಕಾರಣಿಗಳು ಪರಸ್ಪರ ವಿಚಾರ ಮಾಡಿ, ಸಮಾಜದ ಅಭಿವೃದ್ದಿಗೆ ನಿಶ್ಚಿತ ಅಡಿಪಾಯ ಹಾಕಬೇಕು. ಸೇವಾ ಮನೋಭಾವದ, ಅರ್ಪಣಾ ಮನೋ ಭಾವದ ಸಮಾಜ ಸೇವಕರು ಮುಂದೆ ಬಂದು, ಆದರ್ಶ ಸಮಾಜವನ್ನು ನಿರ್ಮಿಸು ವಂತಾಗಲೆಂದು ಹಾರೈಸುವೆ.