ಬುಡಕಟ್ಟು ಸಮುದಾಯಗಳು ಇಂದು ಸಂಕ್ರಮಣದ ಸಂದರ್ಭದಲ್ಲಿ ನಿಂತಿವೆ. ಅನೇಕ ಬುಡಕಟ್ಟು ಸಮುದಾಯಗಳು ಆಧುನಿಕತೆಯ ಹೆಸರಿನಲ್ಲಿ ಒಕ್ಕಲೇಳುತ್ತಲೂ ಇವೆ. ಒಕ್ಕೂಟ ವ್ಯವಸ್ಥೆಯ(Fedaral System)ಲ್ಲಿನ ಕೇಂದ್ರದಲ್ಲಿರುವ ಬೇಡ ಸಮುದಾಯ ದಂತಹ ಬುಡಕಟ್ಟುಗಳು ಮೀಸಲಾತಿಯಂತಹ ವ್ಯವಸ್ಥೆಯ ನಿರಂತರತೆಯನ್ನು ಬಯಸಿದರೆ, ಅನೇಕ ಸಮುದಾಯಗಳು ನಗರೀಕರಣದ ಪ್ರಕ್ರಿಯೆಯನ್ನೇ ಒಪ್ಪುತ್ತಿಲ್ಲ. ಕಾರಣ, ಆಧುನಿಕತೆಯ ಒಳಗಡೆಯೇ ಇರುವ ಕ್ರೌರ್ಯ, ಲಾಭದಾಯಕತೆ, ಇವರನ್ನು ಬೆಚ್ಚು ಬೀಳಿಸಿದೆ. ಹಾಗಾಗಿಯೇ ಛತ್ತೀಸ್‌ಘಡದ ಸೆಲ್ಪಾಜುಡಾಮ್‌ನಂತಹ ಬುಡಕಟ್ಟುಗಳು ಇಂದು ತಮ್ಮನ್ನು ಒಕ್ಕಲೆಬ್ಬಿಸುವ ಜನವಿರೋಧಿ ಧೋರಣೆಯ ವಿರುದ್ಧ ಪ್ರತಿಭಟಿಸಿ ತನ್ನ ಸಂಸ್ಕೃತಿಯ ಬೇರುಗಳನ್ನು ನಾಶಪಡಿಸಿಕೊಂಡು ಅನಾಥವಾಗಿದೆ. ಕರ್ನಾಟಕದ ಒಳಗೇ ಇರುವ ಜೇನುಕುರುಬ, ಕಾಡುಕುರುಬ, ಸೋಲಿಗ, ಬೇಡ, ಗೊಲ್ಲ, ಹಕ್ಕಿಪಿಕ್ಕಿ, ಹಸಲರು, ಹಾಲಕ್ಕಿ, ಮೊಂಡರಂತಹ ಅನೇಕ ಬುಡಕಟ್ಟುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಅಲ್ಲ. ಮೊಂಡ ರಂತಹ ಸಮುದಾಯಗಳಿಗೆ ಹಿಡಿಮಣ್ಣೇ ಇರದೇ ಹೋಗಿ ಅಲೆಮಾರಿ ಬದುಕನ್ನು ಸಾಗಿಸುತ್ತಿ ದ್ದಾರೆ.

ಇದೇ ಸಂದರ್ಭದಲ್ಲಿ ನಮಗೆ ಸುವರ್ಣ ಸ್ವಾತಂತ್ರ್ಯ ಮತ್ತು ಸುವರ್ಣಕರ್ನಾಟಕದ ಸಂಭ್ರಮಗಳಿವೆ. ವಿಪರ್ಯಾಸವೆಂದರೆ ವಿ.ವಿಗಳು, ಸರ್ಕಾರಗಳು ಬುಡಕಟ್ಟು ಸಮುದಾಯದ ಅಭಿವೃದ್ದಿ ಚಿಂತನೆಯನ್ನು ನಡೆಸುತ್ತಿವೆ. ಇಂತಹ ವೈರುಧ್ಯಗಳ ನಡುವೆ ನಿಂತಿರುವ ಬೇಡ ಸಮುದಾಯದ ಮುಂದಿನ ಸವಾಲುಗಳಾವುವು? ಈ ಸಮುದಾಯ ಬಯಸುವ ಬದಲಾವಣೆ ಯಾದರೂ ಎಂತಹುದು? ವಿಶ್ವವಿದ್ಯಾಲಯಗಳು, ಸರ್ಕಾರಗಳು ಇದರ ಬಗೆಗೆ ಚಿಂತಿಸುವ ಬಗೆಗಳಾದರೂ ಹೇಗಿವೆ?

ಪ್ರಸ್ತುತ ರಾಜ್ಯಾಡಳಿತ ಸರ್ಕಾರವು ಹಿಂದುಳಿದ ವರ್ಗಗಳಿಗೆ, ಕೃಷಿ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಕೇಂದ್ರಸರ್ಕಾರವು ಅಭಿವೃದ್ದಿ ಪ್ರಕ್ರಿಯೆಯ ಸಮತೋಲನ ಹಾಗೂ ವಿವಿಧ ವೈಷಮ್ಯಗಳ ನಿವಾರಣೆಗಾಗಿ ಆರ್ಥಿಕ ಸುಧಾರಣೆಗಳನ್ನು ಪ್ರಮುಖ ಸವಾಲಾಗಿ ಸ್ವೀಕರಿಸಿದೆ. ಈ ಮೂಲಕ ಆರ್ಥಿಕ, ತಾಂತ್ರಿಕ ಹಾಗೂ ಸಂಪರ್ಕ ಸಾಮರ್ಥ್ಯ ಈ ಅಂತರವನ್ನು ಅಲ್ಪಕಾಲದಲ್ಲೇ ಅಳಿಸಿಹಾಕಲು ಗುಡ್ಡಗಾಡು ಹಾಗೂ ಬುಡಕಟ್ಟು ಸಮುದಾಯಗಳನ್ನೊಳಗೊಂಡು ಯೋಜನೆಗಳನ್ನೇ ಕೈಗೆತ್ತಿಕೊಂಡಿದೆ. ಹೀಗೆ ಏನೆಲ್ಲಾ ಬದಲಾಗುತ್ತಿರುವ ಸನ್ನಿವೇಶದೊಳಗಿನ ಬೇಡ ಸಮುದಾಯದ ಮುಂದಿನ ಸವಾಲು ಗಳೆಂದರೆ:

೧. ತನ್ನ ಸಂಸ್ಕೃತಿಯ ಬೇರುಗಳ ತಡಕಾಟದ್ದು.

೨. ಆಧುನಿಕ ಜಗತ್ತಿಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳಬೇಕಾದುದು.

೩. ನಾಯಕನನ್ನು ಗುರುತಿಸಿಕೊಳ್ಳುವುದರೊಂದಿಗೆ ಸಾಹಿತ್ಯ ಮತ್ತು ಚರಿತ್ರೆಗಳ                       ಶೋಧಗಳದ್ದಾಗಿವೆ.

ಈ ಸಮುದಾಯ ತನ್ನ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಂಡು ಆಧುನಿಕತೆಯೊಂದಿಗೆ ದಾಪುಗಾಲಿರಿಸಬೇಕೆ? ಅಥವಾ ಈ ಸ್ಥಿತ್ಯಂತರದಲ್ಲಿಯೂ ಸಂಸ್ಕೃತಿಯಬೇರುಗಳನ್ನು ಉಳಿಸಿ ಕೊಳ್ಳಬೇಕೆ? ಎನ್ನುವುದು. ಆದರೆ, ಆಧುನಿಕ ಜಗತ್ತಿಗೆ ತನ್ನನ್ನು ತಾನು ಸಜ್ಜುಗೊಳಿಸಿ ಕೊಳ್ಳಬೇಕಾದ ಅನಿವಾರ್ಯತೆಗಳಿವೆ. ಏಕೆಂದರೆ, ಅಕ್ಷರಜ್ಞಾನವನ್ನು ದಾವತಿಯಿಂದ ಪಡೆದುಕೊಂಡ ಪ್ರಥಮ ತಲೆಮಾರಿನ ವರ್ಗವೇ ಭ್ರಮನಿರಸನದಲ್ಲಿದೆ. ಪಡೆದಿರುವ ಸಾಂಪ್ರದಾಯಕ ಶಿಕ್ಷಣಕ್ಕೆ ಕಣ್ಣಮುಂದಿರುವ ಉದ್ಯೋಗದ ಅವಕಾಶಗಳು ಕೈಗೆಟುಕದಂತಹು ಗಳಾಗಿವೆ. ಎಷ್ಟೋ ಅವಕಾಶಗಳು ಸರ್ಕಾರದ ನಷ್ಟದ ಹೆಸರಿನಲ್ಲಿ ಮುಚ್ಚಿ ಹೋಗಿವೆ. ಖಾಸಗಿ ಕಂಪನಿಗಳು ಇದೇ ಹೊತ್ತಿಗೆ ಪ್ರತಿಭೆಯೆನ್ನುವುದನ್ನು ಪ್ರಧಾನವಾಗಿರಿಸಿಕೊಂಡು ಸಾಮಾಜಿಕ ನ್ಯಾಯವನ್ನು ಗೌಣವಾಗಿರಿಸಿವೆ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಸಂಸ್ಕೃತಿಯ ಬೇರುಗಳ ತಡಕಾಟದಿಂದ ಆಗುವ ಪ್ರಯೋಜನವೇನು ಎನ್ನುವ ಪ್ರಶ್ನೆ ಈ ಸಮುದಾಯದ ಯುವಕರದ್ದು. ಇದೇ ಆರ್ಥಿಕ ಮತ್ತು ರಾಜಕೀಯವಾದುದು ಹೌದು.

ಈ ಸಮುದಾಯದ ಕಟ್ಟೆಮನೆಗಳು, ಎತ್ತಿನಕಿಲಾರಿಗಳು, ಪೆಟ್ಟಿಗೆದೇವರುಗಳು ಸಮುದಾಯದ ಬದುಕನ್ನೆ ರೂಪಿಸಬಲ್ಲವೆ? ಇಂತಹ ಸಂಸ್ಕೃತಿಯ ಮೂಲಾಂಶಗಳಿಂದ ಒಂದಾಗುವ ಜನ ರಾಜಕೀಯವಾಗಿ ಸಂಘಟಿತರಾಗಬಲ್ಲರೆ? ಎನ್ನುವ ಪ್ರಶ್ನೆಗೆ ಉತ್ತರವಾಗಿ ಹಾವನೂರರು ಕಣ್ಣಮುಂದಿದ್ದಾರೆ. ಇಂತಹ ಸಾಂಸ್ಕೃತಿಕ ಅಂಶಗಳಿಂದಲೇ ನಾಯಕರಾಗಿ ವಿಜೃಂಭಿಸಿದ ರಾಜಕೀಯ ನಾಯಕರುಗಳ ಕ್ಷೇತ್ರ ಬದಲಾವಣೆ ಕಂಡಿರುವುದನ್ನೇ ಅಂಕಿ ಅಂಶಗಳಿಂದ ಶೋಧಿಸಬೇಕಾಗಿದೆ. ಹಾಗಾಗಿ ನಿಜವಾದ ಸವಾಲಿರುವುದು ಈ ಸಮುದಾಯ ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿಕೊಂಡು ಸಕ್ರೀಯ ರಾಜಕಾರಣದಲ್ಲಿ ಭಾಗವಹಿ ಸುವ ಮೂಲಕ ರಚನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳಬೇಕಾಗಿದೆ. ಸಮರ್ಥ ನಾಯಕನನ್ನೇ ಕಂಡುಕೊಳ್ಳಬೇಕಿದೆ. ಜೊತೆಗೆ ಸಾಂಪ್ರದಾಯಕ ಶಿಕ್ಷಣವನ್ನು ನೆಚ್ಚಿಕೊಳ್ಳದೇ ತಾಂತ್ರಿಕ ಮೂಲದ ಶಿಕ್ಷಣವನ್ನೇ ಅಪ್ಪಿಕೊಳ್ಳಬೇಕಿದೆ. ಅಭಿವೃದ್ದಿ ಯೋಜನೆಗಳ ಸಂಪೂರ್ಣ ಪಾಲನ್ನು ತನ್ನ ಸಮುದಾಯ ಸದುಪಯೋಗ ಪಡಿಸಿಕೊಳ್ಳುವಂತೆ ನೋಡಿಕೊಂಡು ಅಭಿವೃದ್ದಿ ಗೊಳ್ಳುತ್ತಿರುವ ಸಮಾಜದ ಮುಂಚೂಣಿಗೆ ಬರಬೇಕಿದೆ. ಇಂತಹ ಸವಾಲುಗಳನ್ನೇ ಸ್ವೀಕರಿಸಿ ಮುಖಾಮುಖಿಯಾಗಿದೆ; ಕಳೆದುಹೋದ ಸಾಂಸ್ಕೃತಿಕ ನಾಯಕನನ್ನು ನಿರ್ಮಿಸಿಕೊಳ್ಳುವ, ತನ್ನ ಸಂಸ್ಕೃತಿಯ ಬೇರುಗಳಿಗಾಗಿ ತಡಕಾಡುವ ಸಾಹಿತ್ಯ ಮತ್ತು ಚರಿತ್ರೆಗಳನ್ನೇ ಪ್ರಕ್ರಿಯೆಗಳು ಹೆಚ್ಚು ಪ್ರಯೋಜನಕಾರಿಯಾಗಲಾರವು. ಇವು ಕಟ್ಟುವ, ಕೆಡವುವ, ಆಕ್ರಮಿಸುವ ಮೂಲಕ ಏಕ ಸಂಸ್ಕೃತಿಯಾಗ ಹೊರಟಿರುವ ಸಂಕ್ರಮಣ ಸಂದರ್ಭದ ಬೀಸು ಹೆಜ್ಜೆಗಳ ಅನುಕರಣೀಯ ವಾದವುಗಳಾಗಿ ಬಿಡುವ ಅಪಾಯದವುಗಳಾಗಿ ಬಿಡುತ್ತವೆ ಎಂದನ್ನೇ ಬೇಕಾಗುತ್ತದೆ.