ಸಮಕಾಲೀನತೆಯ ಸಂದರ್ಭಕ್ಕೆ ಪರಂಪರೆಯೆನ್ನುವುದು ಅಗತ್ಯವಾಗುವುದು ಔಚಿತ್ಯವೆನ್ನಬಹುದಾದ ಮಿತಿಯ ಕಾರಣಕ್ಕಲ್ಲ. ಪರಂಪರೆ ಪುರಾಣ, ಇತಿಹಾಸ, ಜಾನಪದ ಗಳನ್ನೆಲ್ಲಾ ಅರಿತು ಬೆಸುಗೆ ಹಾಕುವ ಕೆಲಸ ಮಾಡುತ್ತಲೇ, ನಿರಂತರತೆಯನ್ನು ಕಾಯ್ದು ಕೊಳ್ಳುತ್ತದೆ. ಅಗತ್ಯಕ್ಕನುಗುಣವಾದ ಕಾಲಿಕ ಸಂಸ್ಕಾರದೊಂದಿಗೆ ಉಳಿದು, ಬೆಳೆದು, ರೂಪಾಂತರವೋ, ಸೃಜನಶೀಲವೋ ಆಗುತ್ತಲೇ ಭೂತದೊಂದಿಗೆ ವರ್ತಮಾನ ಮತ್ತು ಭವಿಷ್ಯತ್ತನ್ನು ಕಾಣಲು ಸಹಕರಿಸುತ್ತದೆ. ಆದ್ದರಿಂದಲೇ ಪುರಾಣದಿಂದ ಇತಿಹಾಸವೂ, ಇತಿಹಾಸದಿಂದ ಆಧುನಿಕತೆಯೂ ಪರಸ್ಪರತೆಯ ಅರ್ಥದಲ್ಲಿ ಅಸ್ತಿತ್ವದ ಹುಡುಕಾಟ ದಲ್ಲಿರುತ್ತದೆ.

ಈ ಹಿನ್ನೆಲೆಯಿಂದಲೇ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಬೇಡರು ಎನ್ನುವ ವಿಚಾರವನ್ನು ಕುರಿತು ಚರ್ಚಿಸುವಾಗ ಸಂಸ್ಕೃತಿಯ ನೆಲೆಗಟ್ಟು ಬಹಳ ಮುಖ್ಯವಾಗುತ್ತದೆ. ಅದು ಪುರಾಣದ ಹಲವು ಆಧಾರಗಳೊಂದಿಗೆ, ಸ್ಪೃತಿಗಳೊಂದಿಗೆ ಒಂದು ಭವ್ಯ ಪರಂಪರೆಯನ್ನು, ಕನವರಿಸುವುದು ಸಹ ಸಾಧ್ಯವಾಗುತ್ತದೆ. ಹಾಗೆಯೇ ಸಾಹಿತ್ಯದ ನಂಟೂ ಸಹ. ಆದ್ದರಿಂದಲೂ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸಹ ಪರಸ್ಪರತೆಯ ಅರ್ಥದಲ್ಲಿ ಒಂದರಿಂದ ಒಂದು, ಒಂದರೊಡನೊಂದು ಎಂದೇ ಪರಿಭಾವಿಸುವುದಾಗುತ್ತದೆ. ಬದುಕುವ ಕ್ರಮ ಸಂಸ್ಕೃತಿಯದಾದರೆ, ದಾಖಲೆಯ ಸ್ವರೂಪ ಸಾಹಿತ್ಯದ್ದಾಗುತ್ತದೆ.

ಸಂಸ್ಕೃತಿಗೂ, ಶ್ರಮಕ್ಕೂ ಸಮೀಪ ಸಂಬಂಧವಿರುವ ಸಮುದಾಯಗಳಲ್ಲಿ ಬದುಕುತ್ತಲೇ, ಬುದುಕಿನೊಳಗಿನಿಂದಲೇ ಜ್ಞಾನವನ್ನು ಸಹ ದಾಹದ ಸ್ವರೂಪದಿಂದಲೇ ಪಡೆಯುವ ಕ್ರಿಯೆ ಸಹಜವೆಂಬಂತೆ ಘಟಿಸುತ್ತದೆ. ಅದು ಮೂಲತಃ ಸಮುದಾಯದ ಅರ್ಥವನ್ನು ಪ್ರತಿನಿಧಿ ಸುತ್ತಲೇ ಜನಪದ, ಜನಪರವಾಗುತ್ತದೆ. ಸತ್ಯ ಮತ್ತು ಸತ್ವಗಳ ಹುಡುಕಾಟವೂ ಇಲ್ಲಿ ಸುಲಭವಾಗುತ್ತದೆ.

ಜನಾಂಗದ ಹೆಸರೇ ಆಗಿ ರೂಪುಗೊಳ್ಳುವ ವಾಲ್ಮೀಕಿ ಈ ಬಗೆಯ ಭಿತ್ತಿಯಲ್ಲಿ ಕಾಣಿಸಿ ಕೊಳ್ಳುತ್ತಾನೆ. ಅವನ ಮೂಲವೃತ್ತಿ ಸಮುದಾಯದ್ದಾಗಿತ್ತು. ಅವನು ಜ್ಞಾನಿಯಾಗಲು ತೆಗೆದುಕೊಂಡ ತೀರ್ಮಾನ ವ್ಯಕ್ತಿಗತವಾಗಿತ್ತು. ತಪಸ್ಸು ಹುತ್ತಗಳೆಲ್ಲವೂ ಅವನ ಪ್ರಯತ್ನಗಳ ಹಠದ ಫಲಿತಗಳೇ ಆಗಿತ್ತು ಮತ್ತು ಬಹಳ ಮುಖ್ಯವಾಗಿ ಅದು ಜಾತಿಯಾಧಾರಿತ ವೃತ್ತಿ, ಜ್ಞಾನ, ತೀರ್ಮಾನಗಳ ವ್ಯವಸ್ಥೆಯ ಸಂಚನ್ನು ಒಡೆದು ಸಾಧಿಸಿದ ಬಂಡಾಯವಾಗಿತ್ತು.

ಈ ದೇಶದ ಆದಿಮ ಕಾವ್ಯ ನಿಜದ ನೆಲೆಯಲ್ಲಿ ಸೃಷ್ಟಿಗೊಂಡಿದ್ದು ಹೀಗೆ. ಒಬ್ಬ ಬೇಟೆಗಾರನಿಂದ ಎನ್ನುವುದೇ ಅತಿಮುಖ್ಯವಾದ ಸಂಗತಿ. ಜ್ಞಾನವನ್ನು ಬ್ರಹ್ಮತ್ವದ ಅರ್ಥ ದಲ್ಲೇ ಸಾಧಿಸಿದವನು ವಾಲ್ಮೀಕಿ. ಅದು ದರ್ಶನದ ರೂಪದಲ್ಲೂ ಘಟಿಸಿದುದರಿಂದಲೇ ಆತ ಕಾವ್ಯದೊಳಗೆ ತಾನೂ ಒಂದು ಪಾತ್ರವಾಗುವುದಾಯಿತು. ಇಂದಿಗೂ ಈ ಸತ್ಯವನ್ನು ಅರಗಿಸಿಕೊಳ್ಳಲಾಗದ ವ್ಯವಸ್ಥೆ ಅದನ್ನು ಮರೆಮಾಚುವ ಹತ್ತು ಹಲವು ತಂತ್ರಗಳನ್ನು ರೂಪಿಸುತ್ತಲೇ ಇದೆ.

ಇಡೀ ದೇಶ ಸಂಸ್ಕೃತಿಗಳಿಗೆ ಪರ್ಯಾಯದ ಹೆಸರಾಗಿ, ಸ್ಫೂರ್ತಿ ಶಕ್ತಿಯಾಗಬಹುದಾದ ವಾಲ್ಮೀಕಿ ಒಂದು ಜನಾಂಗ ಅಥವಾ ಸಮುದಾಯದ ಅರ್ಥಗಳಿಗೇಕೆ ಮಾದರಿಯಾಗುವುದಿಲ್ಲ ಆತ್ಮಾವಲೋಕನದ ಅರ್ಥಗಳಿಗೆ ಉತ್ತರ ದೊರಕಬೇಕಿರುವುದಿಲ್ಲಿಯೇ. ವಾಲ್ಮೀಕಿ ಪುರಾಣ ದಿಂದ ಇತಿಹಾಸವಾಗುತ್ತಾ, ಸಂಸ್ಕೃತಿಯೇ ಆಗಿ ಅದರೊಂದಿಗೆ ಸಾಹಿತ್ಯವೂ ಆಗಿ ದಾಖಲಾಗು ವುದು ಒಂದು ಬಗೆಯಾದರೆ, ಅವನ ಕೃತಿಯೊಳಗೆ ದಾಖಲಾಗುವ ಮತ್ತೊಬ್ಬ ಬೇಡ ಹೆಣ್ಣುಮಗಳು ಶಬರಿ….

ನಿರೀಕ್ಷೆಯಲ್ಲಿಯೇ ಹಣ್ಣಾಗುವ ಆದರೆ ಬೇಕಾದ್ದನ್ನು ದಾಖಲಿಸಿಯೇ ತೀರುವ ಛಲದ ಪರ್ಯಾಯವಾಗಿ ಪ್ರತಿಬಿಂಬಿತವಾಗುತ್ತಾಳೆ. ನಿರೀಕ್ಷೆ ಎನ್ನುವುದೇ ತಪಸ್ಸಿನ ರೂಪವಾದಾಗ ಕಡೆಗೆ ಫಲ ಪಡೆದೇ ತೀರುತ್ತಾಳೆ. ದೇವರ ರೂಪವೆಂದೇ ಭಾವಿಸಬಹುದಾದ ಪುರುಷೋತ್ತಮ ನನ್ನು ಕಾಣುವ ಅವಳ ಹಂಬಲ ಶುದ್ಧಪ್ರೇಮದ ಸ್ವರೂಪವಾಗಿಯೂ ಕಾಣುವಂತಹದು. ಆಯ್ಕೆ, ಸ್ವಾತಂತ್ರ್ಯ, ತಪಸ್ಸು, ಸಾಧನೆ, ಸಮಾನತೆ ಇದೇ ಮೊದಲಾದ ಆಶಯಗಳು, ಸಂವೇದನೆಗಳ ಮೊದಲ ಮಹಿಳಾ ಹೆಜ್ಜೆಯಾಗಿ ಅವಳ ವ್ಯಕ್ತಿತ್ವದ ದಾಖಲೆಯಾಗುತ್ತದೆ.

ಮಹಾಭಾರತದ ಕಾವ್ಯದಲ್ಲಿಯೂ ಬಿಡಿಪಾತ್ರವಾಗಿ, ಸಮುದಾಯಕ್ಕೆ ಸವಾಲಾಗುವ, ಸಾಂಸ್ಕೃತಿಕ ನಾಯಕನಂತೆ ಕಾಣಸಿಗುವ ಏಕಲವ್ಯನ ಪಾತ್ರ ಮತ್ತೊಂದು ಬಗೆಯದು. ವಾಲ್ಮೀಕಿಯಂತೆ ಭಿನ್ನ ಸಾಧಕನಾಗಿ ಕಾಣಸಿಗುವ ಈತ ತನ್ನ ಮಿತಿಯಿಂದಲೇ ಅಪಾರವನ್ನು, ಒಂದು ಬೃಹತ್ ವ್ಯಾಪ್ತಿಯನ್ನು ಮುಟ್ಟಿಬಿಡುತ್ತಾನೆ. ಜಗದೇಕ ವೀರನೆಂಬ ಅರ್ಜುನನ ಅಹಂಕಾರಕ್ಕೆ ಏಕಾಗ್ರತೆಯ, ಸಾಧನೆಯ ಉತ್ತರವಾಗುತ್ತಾನೆ. ಇದು ಧ್ಯಾನಸ್ಥ ನೆಲೆಯಿಂದ ಸಾಧಿತವಾದ ಅಪರಿಮಿತ ಆಕಾಂಕ್ಷೆ ಮತ್ತು ಜೀವನದ ಎಲ್ಲಾ ಆಯ್ಕೆ ಮತ್ತು ಎಚ್ಚರಗಳ ಸಾಧನೆಯ ಮಾದರಿ. ಕಣ್ಣಪ್ಪ ಭಕ್ತಿಯ ಮತ್ತೊಂದು ನೆಲೆಯ ಸಂಶೋಧನೆಗಳಿಗೆ ಅರ್ಥ ತೋರಿಸಿದವನು. ದೇವರನ್ನು ಕಾಣುವ, ಹೊಂದುವ, ಮಾತನಾಡುವ ಹತ್ತು-ಹಲವು ಉತ್ತರ ಗಳಿಗೆ ವ್ಯವಸ್ಥೆಯ  ಕಟ್ಟು ಪಾಡುಗಳಿಗೆ ಸಡ್ಡು ಹೊಡೆದಂತೆ ಎಲ್ಲ ಧರ್ಮ ಜ್ಞಾನಗಳ ಆಚೆಗೂ ತನ್ನ ಮುಗ್ಧತೆಯ ವ್ಯಕ್ತಿ ವಿಶೇಷತೆಗಳಿಂದಲೇ ದೇವರನ್ನು ಗೆದ್ದವನು. ಭಕ್ತಿಗೆ ಹೊಸ ಭಾಷೆ ಬರೆದು ದೇವರನ್ನು ಮೂರ್ತಿಯಾಗಿ ಕಂಡು ಜೀವವಾಗಿಸಿ ಕಣ್ಣು ಕೊಡುವ ತನ್ಮಯತೆಗೆ ದಾಟಿದವನು. ಮುಗ್ಧತೆಯಿಂದಲೇ ತನ್ನದೇ ಅರಿವಿಗೂ, ಜ್ಞಾನಕ್ಕೂ ಸಾಗಿದ ಕಣ್ಣಪ್ಪ ತನ್ನ ಬದುಕಿನ ಕ್ರಮದಿಂದಲೇ ಹಬ್ಬವೊಂದರ ಸೃಷ್ಟಿಕರ್ತನಾಗಿ ಸಾಂಸ್ಕೃತಿಕ ವೀರನಾಗು ವತ್ತ ಚಲಿಸುತ್ತಾನೆ. ಈಚಿನ ದಿನಗಳಲ್ಲಿ ಈ ಕತೆಯನ್ನೂ ತಿರುಚುವ ಅಪಾಯಗಳು ಅಲ್ಲಲ್ಲಿ ನಡೆದಿವೆ.

ಅಂದರೆ ಈ ಮೇಲಿನ ಪಾತ್ರಗಳ ಅವಲೋಕನದ ಸಂದರ್ಭದಲ್ಲಿ ಕಂಡದ್ದು, ಸಾಂಸ್ಕೃತಿಕ ದಾಖಲೆಗಳೇ ಎಲ್ಲವೂ ಕಾಡು, ಬುಡಕಟ್ಟು ಮತ್ತು ಏಕಾಂತಗಳ ಸಾಧಿತ ನೆಲೆಯಲ್ಲಿ ರೂಪು ಗೊಂಡವು. ಹಾಗೆಯೇ ನಾಗರೀಕ ಬದುಕಿನ ಭ್ರಮೆಗಳಿಗೆ ಸವಾಲುಗಳಾಗಿಯೂ ಸೃಷ್ಟಿ ಯಾದವು. ಇದನ್ನು ಜಾಣತನದ ಜ್ಞಾನದ, ವ್ಯವಸ್ಥೆಗಳೆಲ್ಲವೂ ಲಿಖಿತ ಆಧಾರಗಳಲ್ಲಿ ಉಳಿಸಿಕೊಳ್ಳಬೇಕಾದ ತುರ್ತಿಗೆ ಒಳಗಾದದ್ದು ಅಚ್ಚರಿಯ ಹಾಗೆ. ಅನಿವಾರ್ಯತೆಯನ್ನು ಹೇಳುವಂಥಹವುಗಳು ಹಾಗಾಗಿಯೂ ಇವು ನಿಜದ ನೆಲೆಯ ಸಂಸ್ಕೃತಿಯ ಪರಿಭಾಷೆಗಳಾಗಿವೆ. ತನ್ನ ಪರಂಪರೆಯ ಬಗೆಗೆ ಮಾತನಾಡಿಕೊಳ್ಳುತ್ತಲೇ ಅದನ್ನು ಭವ್ಯ ದಿವ್ಯಗಳ ಐತಿಹ್ಯ ವನ್ನಾಗಿಸಿಕೊಂಡು ವರ್ತಮಾನ ಕಟ್ಟಿಕೊಳ್ಳುವ ಜಾಯಮಾನ ಮನುಷ್ಯನ ಮೂಲ ಪ್ರವೃತ್ತಿ ಗಳಲ್ಲಿ ಒಂದಾಗಿರಬಹುದು. ಆದ್ದರಿಂದಲೇ ಪ್ರತಿಯೊಬ್ಬನಿಗೂ ತನ್ನ ಹಿಂದಿನ ಒಂದಷ್ಟು ರೋಮಾಂಚನದ ನೆನಪುಗಳು ಸದಾ ಜಾಗೃತವಾಗಿರುತ್ತವೆ. ಇದು ತನ್ನ ಆ ಹೊತ್ತಿನ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾದರೆ ಅದಕ್ಕೆ ಮತ್ತಷ್ಟು ಬೆಲೆಯೂ ಬಂದಿತು. ಆದರೆ ಬಹಳಷ್ಟು ಸಲ ಹಾಗಾಗುವುದಿಲ್ಲ. ಪ್ರತಿ ಬುಡಕಟ್ಟು-ಸಮುದಾಯಗಳಿಗೆಲ್ಲಾ ಈಬಗೆಯ ಒಂದಷ್ಟು ಸಾಂಸ್ಕೃತಿಕ ಭವ್ಯತೆಯ ನೆನಪುಗಳು ಅಗತ್ಯ ಎನ್ನುವಂತೆಯೇ ಉಳಿದುಬಿಟ್ಟಿದೆ. ಅದು ಈ ದೇಶದ ಯಾವ ಜಾತಿ-ಸಮುದಾಯವನ್ನು ಬಿಟ್ಟಿಲ್ಲ ಎಂದು ಅವರು ಉತ್ಪ್ರೇಕ್ಷೆ ಯಾಗಬೇಕಿಲ್ಲ.

ಹಾಗೆಯೇ ವಾಲ್ಮೀಕಿ ಸಮುದಾಯಕ್ಕೂ, ವಾಲ್ಮೀಕಿ, ಶಬರಿ, ಏಕಲವ್ಯ, ಕಣ್ಣಪ್ಪ ಎಂಬೆಲ್ಲಾ ಪುರಾಣದ ಸ್ಮೃತಿಗಳೂ ಅದರೊಂದಿಗೆ, ಮದಕರಿನಾಯಕ, ಕುಮಾರರಾಮ, ಸಿಂಧೂರ ಲಕ್ಷ್ಮಣ ಎನ್ನುವ ಐತಿಹಾಸಿಕ ದಾಖಲೆಗಳೂ ಪರಂಪರೆಯ ಬಗೆಗಿನ ಮಾತು ಮತ್ತು ನಂಬಿಕೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಹೀಗೆ ಪುರಾಣದಿಂದ ಇತಿಹಾಸ, ಇತಿಹಾಸದಿಂದ ವರ್ತಮಾನಕ್ಕೆ ಸಾಗುವ ಯಾನದಲ್ಲಿ ವರ್ತಮಾನದಲ್ಲಿ ಈ ಜನರ ಸಂಸ್ಕೃತಿ, ಸಾಹಿತ್ಯದ ನೆಲೆ ಬೆಲೆಯೇನು? ಎನ್ನುವುದು ಎಷ್ಟು ಮುಖ್ಯ ಪ್ರಶ್ನೆಯೇ ಅಷ್ಟು ಸಮಾಧಾನಕರ ಉತ್ತರಗಳಂತೂ ಸಾಧ್ಯವಿಲ್ಲ. ಆಧುನಿಕತೆಯ, ನಾಗರೀಕತೆಯ ಉತ್ಕೃರ್ಷದ ಈ ಹೊತ್ತಿನಲ್ಲಿ ಸಂಸ್ಕೃತಿ ಕುರಿತ ಚರ್ಚೆ ತುಂಬಾ ವಿಭಿನ್ನವಾಗಿಯೇ ತೆರೆದುಕೊಳ್ಳುತ್ತಿದೆ. ಸಂಸ್ಕೃತಿಯ ಅವಲೋಕನದ ಜೊತೆಗೆ ಅದರ ನೆಲೆ-ಬೆಲೆ-ಪರ್ಯಾಯಗಳು ಇತ್ಯಾದಿಗಳು ಕಾಲಿಕ ಬದಲಾವಣೆಯ ಹೊತ್ತಿನಲ್ಲಿ ಅದನ್ನು ಮುರಿದು ಕಟ್ಟುವ ಬಗೆ ಮತ್ತು ಅನಿವಾರ್ಯತೆಗಳು, ವಿಭಿನ್ನ ನೆಲೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ವಿಶ್ವ ಪ್ರಜ್ಞೆಯ ಜೊತೆಗೆ ಜಾತ್ಯಾತೀತತೆಯ ಮಾತುಗಳು ಸೇರಿಕೊಂಡು ಅನ್ವೇಷಣೆಯ ಅರ್ಥದಲ್ಲಿ ರಾಜಕಾರಣವೆನ್ನುವುದು ಜಾತಿಗಳ ಸಂಘಟನೆಯನ್ನು ಕಾಲಿಕ ತುರ್ತನ್ನಾಗಿ ನಿರ್ಮಿಸಿಬಿಟ್ಟಿದೆ. ಕೆಲವೊಮ್ಮೆ ಮಾನವೀಯ ನೆಲೆಗಟ್ಟಿನಲ್ಲಿ ಬೇಡವಾದ ಜಾತಿಗಳು, ಧರ್ಮ, ಅಧಿಕಾರ, ರಾಜಕಾರಣದ ಹೊತ್ತಿನಲ್ಲಿ ವಿಚಿತ್ರ ಅನಿವಾರ್ಯತೆಗೆ ಒಳಗಾದಂತೆ ಸಂಘಟಿತ ವಾಗಲೇಬೇಕಾದ ಒತ್ತಡದಲ್ಲಿವೆ. ಜಾತಿಯಾಧಾರಿತ ಲೆಕ್ಕಾಚಾರವೇ ರಾಜಕೀಯದ ಮೂಲ ನೆಲೆ ಎನ್ನಿಸುವ ಅಪಾಯವಿರುವ ಈ ಹೊತ್ತಿಗೆ ಬೇಡ ಸಮುದಾಯ ತನ್ನ ಹಲವು ಪರ್ಯಾಯ ಹೆಸರುಗಳು ಸಮಗ್ರತೆಯ ದೃಷ್ಟಿಯಲ್ಲಿ ರಾಜ್ಯದ ಸುಮಾರು ನಾಲ್ಕನೇ ಸ್ಥಾನದಲ್ಲಿದ್ದರೂ ಎಷ್ಟು ಸಾಧಿಸಬಹುದು ಅಷ್ಟು ಅಧಿಕಾರದಲ್ಲಿ ಪಾಲ್ಗೊಳ್ಳಲಿಲ್ಲ. ತನ್ಮೂಲಕ ಈ ಸಮಾಜ ಉದ್ಧಾರವಾಗಲಿಲ್ಲ ಎನ್ನುವುದನ್ನು ದುರಂತವೆನ್ನದೆ ಮತ್ತಾವ ಪರಿಭಾಷೆಯಿಂದಲೂ ಗುರುತಿಸುವಂತಿಲ್ಲ. ಸಂಘಟನೆ ಎನ್ನುವ ನಿಜದ ಅರ್ಥವೇ ಬಹುಶಃ ಈ ಸಮುದಾಯದ ಅರ್ಥಕೋಶದಿಂದ ದೂರವಿರಬಹುದೆ? ಎನ್ನುವ ಅನುಮಾನವೇ ನಿರಂತರವಾಗಿದೆ. ಈ ಹೊತ್ತಿನ ಮುಖ್ಯ ತುರ್ತು ಎಂಬುವಂತೆ ಸೃಷ್ಟಿಯಾದ ಈ ಜಾತಿಯ ಮಠವೂ ಆ ನಿಟ್ಟಿನಲ್ಲಿ ಬಹಳಷ್ಟು ದೂರ ಕ್ರಮಿಸಬೇಕಿದೆ.

ಈ ದೇಶದ ಬಹುಜನರನ್ನು ಕಾಡುವ ಬಡತನ, ಅನಕ್ಷರತೆ, ಮೌಢ್ಯತೆ ಇತ್ಯಾದಿಗಳೆಲ್ಲವೂ ತುಸು ಹೆಚ್ಚು ಎನ್ನುವಷ್ಟು ಈ ಸಮಾಜವನ್ನು ಕಾಡಿದೆ. ಸಂಘಟನೆ ಎನ್ನುವುದು ವಿಶಾಲಾರ್ಥ ದಲ್ಲಿ ಇವುಗಳನ್ನೆಲ್ಲಾ ಮೀರಿಯೇ ನಡೆಯಬೇಕಿದೆ. ಆ ದೃಷ್ಟಿಯಿಂದಲೇ ಮಠ, ರಾಜಕಾರಣ ಮತ್ತು ವಿದ್ಯಾವಂತರ ಜವಾಬ್ದಾರಿಯೂ ಹೆಚ್ಚಾಗಿದೆ. ಉದ್ದೇಶಿತ ಅರ್ಥದಲ್ಲಿ ಸಮುದಾಯದ ಜಾಗೃತಿ ನಡೆಯಬೇಕಿದೆ. ಸಂಸ್ಕೃತಿಯ ಪರಿಭಾಷೆಯನ್ನು ವಿಸ್ತೃತ ನೆಲೆಯಲ್ಲಿ ಅರ್ಥೈಸುವ ತುರ್ತು ಸಹ ಇಲ್ಲಿಯೇ ಇದೆ. ತನ್ಮೂಲಕ ಜನಾಂಗವಾಗಿ, ಸಮುದಾಯವಾದ ಭಿನ್ನ ಪ್ರದೇಶಗಳಲ್ಲಿ ಹಂಚಿಹೋಗಿರುವ ವೈವಿಧ್ಯತೆಗಳ ಕುರಿತ ಒಳನೋಟಗಳ ವಿಶಿಷ್ಟತೆಯನ್ನು ಗುರುತಿಸಿ, ದಾಖಲಿಸಿ, ಎಚ್ಚರಿಸುವುದಾಗಬೇಕಿದೆ. ಸಂಸ್ಕೃತಿ ಸಾಹಿತ್ಯದ ದಾಖಲೆಯು ಸಾಗಬೇಕಿ ರುವುದು ಹೀಗೆಯೇ. ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಮಾತನಾಡುವಾಗ ಈ ಸಂದರ್ಭಕ್ಕೆ ಎರಡು ಮುಖ್ಯ ನೆಲೆಗಳನ್ನು ಗುರುತಿಸಬಹುದು.

೧. ಸಮಗ್ರತೆಯ ನೆಲೆ

೨. ಜಾತಿ ಆಧಾರಿತ ನೆಲೆ

ಸಾಹಿತ್ಯ ವೆನ್ನುವ ಎಲ್ಲವನ್ನು ಮೀರಿ ನೆಡೆಯುವ ಸೃಜನಶೀಲ ಪ್ರಕ್ರಿಯೆ ಸಮಗ್ರತೆಯ ಅರ್ಥವನ್ನು ಗ್ರಹಿಸಬೇಕಿರುವುದು ಈ ಹಿನ್ನೆಲೆಯಲ್ಲಿ. ಹಾಗೆಯೇ ಜಾತಿ ಅಥವಾ ಸಮುದಾಯ ತನ್ನನ್ನು ವಿಶಿಷ್ಟವೆಂದುಕೊಳ್ಳುವ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಮೂಲಕ ಸಾಹಿತ್ಯ ವಾಗುವುದು. ಅಂದರೆ ಅನುಭವವೂ ಇಲ್ಲಿ ಮೊದಲು ಸಮುದಾಯವನ್ನು ಪ್ರತಿನಿಧಿಸುವ ವೃಷ್ಟಿಯಾಗುತ್ತಲೇ ಇತರರನ್ನು ಒಳಗೊಳ್ಳುವ ಅಥವಾ ಇತರರೊಂದಿಗೆ ತನ್ನನ್ನು ಸಮೀಕರಿಸಿ ಸಹಜೀವನವನ್ನು ಪ್ರೇರೇಪಿಸುವ ಸಮಷ್ಟಿಯೂ ಆಗಿ ಬಿಡುತ್ತದೆ. ತಾನು, ತನ್ನ ಬದುಕು, ತನ್ನ ಸಮಾಜ, ಸಮುದಾಯ ಹೀಗೆಲ್ಲಾ ಪರಿಚಿತವಾದ ಸಂಸ್ಕೃತಿಯ ದಾಖಲೆ ಒಂದು ಬಗೆ ಯಾದರೆ, ತನ್ನ ಅನುಭವಗಳನ್ನು ಸೂಕ್ಷ್ಮವಾಗಿ, ಹಿನ್ನೆಲೆಯಾಗಿ ಒಳನೋಟಗಳ ರೂಪದಲ್ಲಿ, ಮುಂತಾಗಿ ಬಳಸಿಕೊಳ್ಳುವುದು ಮತ್ತೊಂದು ಬಗೆ.

ಎಂದಿಗೂ ಹೀಗೊಂದು ಜಾತಿಯ ಮಿತಿಯಲ್ಲಿ ಗುರುತಿಸಿಕೊಳ್ಳಲು ಬಯಸಿದ ಬರಗೂರು ರಾಮಚಂದ್ರಪ್ಪರನ್ನು ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕು. ಕರ್ನಾಟಕದ ಪ್ರಗತಿಪರ ಚಳುವಳಿ ಬಂಡಾಯದ ಜೊತೆಗೆ ಗುರುತಿಸಿಕೊಂಡೆ ಸಂವೇದನಾ ಶೀಲತೆಯನ್ನು ನಿರಂತರವಾಗಿ ಕಾಯ್ದುಕೊಂಡು, ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪ್ರತಿಪಾದಕರಾಗಿ ಈಹೊತ್ತಿಗೂ ಬದ್ಧತೆಯ ಹಾದಿಯಲ್ಲಿ ಸಾಗಬಯಸಿದ ಇವರು ಕವಿಯಾಗಿ, ಕತೆಗಾರರಾಗಿ, ಕಾದಂಬರಿಕಾರ ರಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ, ತಮ್ಮದೇ ವಿಶಿಷ್ಟ ನೆಲೆಯ ಛಾಪನ್ನು ಕನ್ನಡ ಸಾಹಿತ್ಯ, ಸಂಸ್ಕೃತಿಯ ಸಂದರ್ಭದಲ್ಲಿ ಮೂಡಿಸಿದ್ದಾರೆ. ನೊಂದವರ, ಶೋಷಿತರ, ಧ್ವನಿಯಾಗ ಬಹುದಾದ ಹತ್ತು ಹಲವು ಸಾಧ್ಯತೆಗಳ ಹುಡುಕಾಟದ ಬದ್ಧತೆಯನ್ನೇ ಸಾಹಿತ್ಯ ಚಿಂತನೆ ಯಾಗಿಸಿಕೊಂಡ ಬರಗೂರರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಾಲಕ್ಕೆ ಉಪಸಂಸ್ಕೃತಿಯ ಚಿಂತನ ಮಾಲೆಯ ಹೊಸಬಗೆಯ ಆಲೋಚನೆಗಳೊಂದಿಗೆ ಈ ದೇಶದ ಬಹುಜನರ ವೈವಿಧ್ಯತೆಯ ಜೀವನ ಕ್ರಮಗಳ ಶೋಧನೆ ಮತ್ತು ದಾಖಲೆಯ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿ ಸಾಂಸ್ಕೃತಿಕ ಕ್ರಾಂತಿಗೂ ಮುನ್ನುಡಿ ಬರೆದರು. ಈ ಹೊತ್ತಿನ, ಈ ನಾಡಿನ ಸಾಂಸ್ಕೃತಿಕ ಚರ್ಚೆಯ ಮಹತ್ವದ ಕಾಲದಲ್ಲಿ ಬರಗೂರರ ಈ ಬಗೆಯ ಪ್ರಯತ್ನ ಪ್ರಯೋಗಗಳ ಮಹತ್ವದ ಮೂಲ ಮತ್ತು ಆಕರಗಳಾಗಿವೆ. ಹೊಸ ಹೊಸ ಪರಿಕಲ್ಪನೆಗಳ ಹಿನ್ನೆಲೆಗೆ ದೀವಿಗೆಗಳಾಗಿವೆ.

ಸೂರ್ಯ, ಹುತ್ತ, ಒಂದು ಊರಿನ ಕತೆ, ಈಚಿನ ಶಬರಿ ಮೊದಲಾದ ಕಾದಂಬರಿಗಳು ಬಂಡಾಯದ ನೆಲೆಯ ಹೊಸ ಮನುಷ್ಯನ ಕನಸಿನ ಆವಿಷ್ಕಾರಗಳಾದರೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂ, ಗುಲಾಮಗೀತೆ, ಕಾಂಟೆಸಾದಲ್ಲಿ ಕಾವ್ಯ ಮುಂತಾದ ಕವಿತಾ ಸಂಕಲನಗಳು ನೊಂದವರ ಎದೆಯ ದನಿಗಳಾಗಿ ನಾಳಿನ ಹಾದಿಗಳ ಹುಡುಕಾಟದ ಆಶಾವಾದಗಳಾಗಿ ಕಾಣುತ್ತವೆ. ಸಾಹಿತ್ಯವಷ್ಟೇ ಅಲ್ಲದೆ ಸಿನಿಮಾ ಕ್ಷೇತ್ರದಲ್ಲಿಯೂ ಬರಗೂರರ ಸಾಧನೆ ಅಪಾರ ವಾದುದು. ತಮ್ಮ ಸೃಜನಶೀಲ ಪ್ರತಿಭೆಯಿಂದ ಹಲವು ಪ್ರಯೋಗಗಳೊಂದಿಗೆ, ನಿರ್ದೇಶಕ ನಾಗಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದ್ದಾರೆ. ವ್ಯಕ್ತಿಯೇ ಒಂದು ಸಮುದಾಯದ ಅರ್ಥದಲ್ಲಿ, ಸಂಸ್ಕೃತಿಯ ಅರ್ಥದಲ್ಲಿ ಹೀಗೆ ಅಪಾರವಾಗಿ ಸಾಧಿಸು ವುದು ಕ್ರಿಯಾಶೀಲತೆಯ, ನಿರಂತರತೆಯ ಅರ್ಥಗಳೂ ಹೌದು.

ಈ ಸಮುದಾಯದಿಂದ ಸಾಧನೆಯೆಡೆಗೆ ಸಾಗಿದ ಮಹತ್ವದ ಮಹಿಳೆಯಾಗಿ ಕಮಲಾ ಹಂಪನಾ ಮುಖ್ಯರಾಗಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕಮಲಾ ಅವರು, ಸ್ತ್ರೀ ಸಂವೇದನೆಯ ಮೂಲಧಾತುವಿನಂತೆ ಶೂದ್ರ ಪ್ರಜ್ಞೆಯ ಎಲ್ಲ ಸಾಧಿತ ಫಲಗಳ ಆಶಯದಂತೆಯೂ ಕಾಣಿಸುತ್ತಾರೆ.

ಕತೆ, ಪ್ರಬಂಧ, ಅನುವಾದ, ಸಂಪಾದನೆ, ಜೀವನ ಚರಿತ್ರೆ, ವಿಮರ್ಶೆ, ವೈಚಾರಿಕ ಬರಹ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ನಡೆಸಿದ ಕಮಲಾ ಹಂಪನಾ ಅವರ ಸಾಹಿತ್ಯ ಬದುಕಿನ ಅನುಭವ ಕೇಂದ್ರಿತ ನೆಲೆಯಿಂದಲೂ ಮಹತ್ವದ ಸಾಂಸ್ಕೃತಿಕ ದಾಖಲೆಗಳೇ ಆಗಿವೆ. ಬದುಕು, ಸಮಾಜ ಮತ್ತು ವ್ಯವಸ್ಥೆಗಳ ಮುಖಾಮುಖಿ ಇವರ ಸಾಹಿತ್ಯದ ಮುಖ್ಯ ಆಶಯ ಗಳಾಗಿ ಕಾಣಿಸುತ್ತವೆ.

ಬಂದಲಿ ಮತ್ತು ಬುಗುಡಿ ಸಂಕಲನಗಳು ಆಧುನಿಕ ವಚನಗಳಾಗಿವೆ. ಇವು ವಚನ ಪರಂಪರೆಯ ಮುಂದುವರಿಕೆಯ ಪ್ರಯತ್ನದಂತೆಯೂ ಕಾಣುತ್ತದೆನ್ನುವುದು ಉಲ್ಲೇಖಾರ್ಹ ವಾದ ವಿಚಾರ. ಜೈನ ಸಂಸ್ಕೃತಿಯ ಬಗೆಗೆ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಕಮಲಾ ಅವರು ತಮ್ಮ ಜೀವನ ಸಂಗಾತಿ ಹಂಪನಾ ಅವರೊಂದಿಗೆ ಸೇರಿ ಆ ನಿಟ್ಟಿನಲ್ಲಿ ಮತ್ತಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ತನ್ಮೂಲಕ ಯಾವುದೇ ಸಮುದಾಯದ ಜನರಿಗಾದರೂ, ವಿಶೇಷ ವಾಗಿ ಮಹಿಳೆಗಾದರೂ ಮಾದರಿಯಾಗಬಹುದಾದ ದಿಟ್ಟ ಹೆಜ್ಜೆಗಳನ್ನು ಇಟ್ಟು ಸಾಗಿರುವ ಕಮಲಾ ಅವರು ಸಮಾಜದ ಸಂಸ್ಕೃತಿ ಸಂದರ್ಭದ ಮುಖ್ಯ ಮೈಲಿಗಲ್ಲೆನ್ನಬಹುದು.

ಹೀಗೆ ಅಕಾಡೆಮಿಕ ವಲಯದ ಪ್ರಭಾವಶಾಲಿ ಸಾಹಿತಿಗಳಾಗಿ ಬರಗೂರು ಮತ್ತು ಕಮಲಾ ಹಂಪನಾ ಅವರನ್ನು ಗುರಿತಿಸಿದ ನಂತರ ಜನಪ್ರಿಯ ಕಾದಂಬರಿಕಾರರಾಗಿ ನಾನ್ ಅಕಾಡೆಮಿಕ್ ಆದ ವಲಯದಲ್ಲಿ ಗುರುತಿಸಬಹುದಾದ ಲೇಖಕ, ಬಿ.ಎಲ್. ವೇಣು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕಾದಂಬರಿಯ ಪ್ರಪಂಚದ್ದೇ ಒಂದು ವಿಶಿಷ್ಟ ಪರಂಪರೆಯಿದೆ. ಅದು ತನ್ನ ಆರಂಭದ ಕಾಲದಿಂದ ಈ ಹೊತ್ತಿನವರೆಗೂ ತನ್ನ ವಿಶಿಷ್ಟತೆಯನ್ನು ಮತ್ತು ಜನಪ್ರಿಯತೆಯ ಸಂದರ್ಭದಲ್ಲಿಯೂ ವ್ಯಾಪ್ತಿಯನ್ನು ಉಳಿಸಿಕೊಂಡೇ ಬಂದಿದೆ. ಸ್ವರೂಪ, ಲಕ್ಷಣ, ಕಾಲ, ಪರಿಸರ ಇತ್ಯಾದಿಯಾದ ಭಿನ್ನ ಕಾರಣಗಳಿಗಾಗಿ ಅದು ಹಲವು ನೆಲೆಗಳಲ್ಲಿ ಗುರುತಿಸಲ್ಪಟ್ಟರೂ ಕರತಲರಂಗ ಭೂಮಿ ಎನ್ನುವ ಮಾತಿಗೆ ಅನ್ವರ್ಥವಾಗಿಯೇ ಉಳಿದು ಬೆಳೆದು ಬಂದಿದೆಯೆನ್ನ ಬಹುದು. ಕನ್ನಡದಲ್ಲಿ ಬಹಳಷ್ಟು ಕಾದಂಬರಿಕಾರರು ತಮ್ಮದೇ ಕಾರಣಗಳಿಗಾಗಿ ವಿಶಿಷ್ಟತೆ ಯನ್ನು ದಾಖಲಿಸಿಕೊಂಡಿದ್ದಾರೆ.

ಕನ್ನಡದ ಸಂದರ್ಭದಲ್ಲಿ ಓದುಗರನ್ನು ಹೆಚ್ಚು ಮಾಡಿದ ಪ್ರಕಾರವೆಂಬ ಹಿರಿಮೆಗೂ ಪಾತ್ರವಾದ ಈ ಕಾದಂಬರಿ ಕ್ಷೇತ್ರದಲ್ಲಿ ಮಹತ್ವದ ಹೆಸರಾಗಿಯೇ ಪ್ರಸ್ತುತರಾಗುವ ಬಿ.ಎಲ್. ವೇಣು ಮೂಲತಃ ಚಿತ್ರದುರ್ಗದವರು. ಬಹುಶಃ ತ.ರಾ. ಸುಬ್ಬರಾವ್ ಅವರ ನಂತರ ಪ್ರಮುಖ ಕಾದಂಬರಿಕಾರರಾಗಿ ಜನಪ್ರಿಯತೆಯ ಮನ್ನಣೆಯನ್ನು ಗಳಿಸಿದವರಾದರು. ಮಹತ್ವದ ಐತಿಹಾಸಿಕ ವಸ್ತುವನ್ನು ಸಹ ತಮ್ಮ ಕೃಷಿಗೆ ಬಳಸಿಕೊಂಡಿದ್ದಾರೆ.

ಮನುಷ್ಯ ಕೇಂದ್ರಿತವಾದ, ಜಾತಿ, ವರ್ಗಗಳನ್ನು ಮೀರಿದ ಚಿಂತನೆಯ ನೆಲೆಯಲ್ಲಿ ಇವರ ಕಾದಂಬರಿಗಳ ವಸ್ತು ಚರ್ಚಿಸಲ್ಪಡುವಂತಹುದು. ಪ್ರೇಮಪರ್ವ, ಅಜೇಯ, ಪರಾಜಿತ, ಪ್ರೀತಿ ವಾತ್ಸಲ್ಯ, ಪ್ರೇಮಜಾಲ, ರಾಮರಾಜ್ಯದಲ್ಲಿ ರಾಕ್ಷಸರು, ಬೆತ್ತಲೆ ಸೇವೆ ಮೊದಲಾದ ಕೃತಿಗಳಲ್ಲಿ ತಮ್ಮ ಛಾಪನ್ನು ಒತ್ತಿ ಗುರುತಿಸಲ್ಪಟ್ಟ ಇದರ ಬಹಳಷ್ಟು ಕಾದಂಬರಿಗಳು ಸಿನಿಮಾಗಳಾಗಿ ಯಶಸ್ವಿಯೂ ಆಗಿವೆ ಎನ್ನುವುದಿಲ್ಲಿ ಉಲ್ಲೇಖಾರ್ಹ. ಕಾದಂಬರಿಕಾರ ರಾಗಿಯೂ ಜೊತೆಗೂ ಸುಮಾರು ಅರವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನು ರಚಿಸಿರುವ ವೇಣು ತಮ್ಮ ಕೃತಿಗಳಲ್ಲಿ ಮಾನವ ಪ್ರೀತಿಯನ್ನು ಸಂಬಂಧಗಳ ಸೂಕ್ಷ್ಮತೆಯನ್ನು ರಾಜಕೀಯ ಕ್ಷುದ್ರತೆಗಳನ್ನು ಕುರಿತೇ ಮುಖ್ಯ ನೆಲೆಯಲ್ಲಿ ಅನಾವರಣ ಮಾಡುತ್ತಾರೆ. ಮೌಢ್ಯದ ವಿರುದ್ಧದ ಹೋರಾಟವೂ ಅವರ ನಿಲುವಿನ ಮುಖ್ಯ ಅಂಶಗಳಲ್ಲಿ ಒಂದು. ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಗತ್ತಿ ಭರಮ್ಮಣ್ಣನಾಯಕ, ವೀರವನಿತೆ ಒನಕೆ ಓಬವ್ವ ಅವರ ಮುಖ್ಯವಾದ ಐತಿಹಾಸಿಕ ಕಾದಂಬರಿಗಳು ಅಭಿಮಾನದ ಚಿತ್ರದುರ್ಗ ಕೋಟೆಯ ಇತಿಹಾಸ ಮತ್ತು ಸಂಸ್ಕೃತಿಯ ಮುಖಾಮುಖಿಯ ನೆಲ ಪ್ರೀತಿ ಈ ಕೃತಿಗಳಲ್ಲಿ ಕಾಣಸಿಗುತ್ತದೆ. ನಾಯಕರ ಆಳ್ವಿಕೆಯ ವಿವರಣೆಯ ಮೂಲಕವೇ ಇದೊಂದು ಜನಪರ ಸಾಂಸ್ಕೃತಿಕ ದಾಖಲೆಯೂ ಆಗಿ ಸಹೃದಯವನ್ನು ಮುಟ್ಟುತ್ತದೆ. ಅಂದರೆ ಇತಿಹಾಸದ ಮುಖೇನ ವಾಸ್ತವವನ್ನು ಗ್ರಹಿಸುವ ಕೆಲಸವಿಲ್ಲಿ ನಡೆದಿದೆ.

ಹೀಗೆ ದಾಖಲಿಸಬಹುದಾದ ಕೆಲವು ಮಹತ್ವಗಳನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸ ಲಾಗಿದೆ. ಮೂಲತಃ ಬಡತನ, ಅನಕ್ಷರತೆ, ಅಸಮಾನತೆ, ಶೋಷಣೆ ಎಂಬೆಲ್ಲಾ ಭಾರತೀಯ ಸಂದರ್ಭದ ಬಹಳಷ್ಟು ಲಕ್ಷಣಗಳಿಂದ ಹೊರತಾಗದ ಈ ಬೇಡ ಸಮುದಾಯ ತನ್ನ ಹಲವು ಪರ್ಯಾಯ ಹೆಸರುಗಳಲ್ಲಿ ವಾಲ್ಮೀಕಿ, ಬೇಡ, ತಳವಾರ, ಪರಿವಾರ, ನಾಯಕ ಇತ್ಯಾದಿ ಸಮುದಾಯದ ಒಗ್ಗಟ್ಟಿನ ಕೊರತೆಯಲ್ಲಿ, ನಾಯಕತ್ವದ ಗೊಂದಲಗಳ ನಡುವೆ ತನ್ನನ್ನು ಒಂದು ಸಾಂಘಿಕ ಸಂಸ್ಕೃತಿಯಾಗಿ, ಪ್ರಭಾವವಾಗಿ ದಾಖಲಿಸಿಕೊಳ್ಳುವಲ್ಲಿ ಕ್ರಮಿಸಬೇಕಾದ ದೂರ ಸಾಕಷ್ಟಿದೆ. ಆ ನಡುವೆಯೇ ವ್ಯಕ್ತಿತ್ವದ ಸೃಜನಶೀಲತೆಗಳು ಅಲ್ಲಲ್ಲಿ ಈ ಪ್ರಯತ್ನ ದಲ್ಲಿಯೂ ತೊಡಗಿಸಿಕೊಂಡಿವೆ. ಶೈಕ್ಷಣಿಕ, ಅಶೈಕ್ಷಣಿಕ ವಲಯಗಳಲ್ಲಿಯೂ ಈ ಬಗೆಯ ಪ್ರಯತ್ನಗಳು ನಿರಂತರವಾಗಿವೆ ಎನ್ನುವುದೇ ಸದ್ಯದ ಆಶಾವಾದ. ವಾಲ್ಮೀಕಿ ಬಂಧು, ವಾಲ್ಮೀಕಿ ಕರ್ನಾಟಕದಂತಹ ಪತ್ರಿಕೆಗಳು ಈ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡುತ್ತಿವೆ. ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಹತ್ತು ಹಲವಾರು ತಮ್ಮನ್ನು ಕ್ರಿಯಾಶೀಲ ವಾಗಿಯೂ ತೊಡಗಿಸಿಕೊಂಡಿದ್ದಾರೆ.

ಹರ್ತಿಕೋಟೆ ವೀರೇಂದ್ರ ಸಿಂಹ, ಡಾ. ತೇಜಸ್ವಿ ಕಟ್ಟೀಮನಿ, ಡಾ. ನೀಲಗಿರಿ ತಳವಾರ್, ಡಾ. ರಂಗರಾಜ ವನದುರ್ಗ, ಡಾ. ವಿರೂಪಾಕ್ಷ ಪೂಜಾರಹಳ್ಳಿ, ಡಾ. ಮಂಜುನಾಥ ಬೇವಿನ ಕಟ್ಟಿ, ಡಾ. ಜಿ. ಪ್ರಶಾಂತನಾಯಕ, ಡಾ. ವೈ.ಎಂ. ಸೈದಾಪುರ, ಸುಕನ್ಯಾ ಮಾರುತಿ ಮುಂತಾದ ವರನ್ನು ಇಲ್ಲಿ ಉದಾಹರಣೆಗಳಿಗಾಗಿ ಹೆಸರಿಸಬಹುದು. ಒಟ್ಟಾರೆಯಾಗಿ ಆಧುನಿಕತೆಯ ತುರ್ತು ಸವಾಲಿನದ್ದೇ ಆಗಿದೆ. ಏಕಕಾಲಕ್ಕೆ ಜಾಗತೀಕರಣ, ಆಧುನೀಕರಣ, ವಿಶ್ವಪ್ರಜ್ಞೆಗಳ ನಡುವೆ, ತನ್ನನ್ನು ಉಳಿಸಿಕೊಂಡೇ ಹೋರಾಡುವ ತುರ್ತು ಸಮುದಾಯದ ಎದುರಿಗಿದೆ. ಅಂದರೆ ಮೀರುವ ಕ್ರಿಯೆಯ ನಡುವೆಯೇ ಸೃಜನಶೀಲತೆಯ ಅಸ್ತಿತ್ವವನ್ನು ಕಂಡುಕೊಳ್ಳ ಬೇಕಾದ ಅನಿವಾರ್ಯತೆಯಿದೆ. ಕೇವಲ ಭಾವುಕತೆ ಸಾಹಿತ್ಯ, ಸಂಸ್ಕೃತಿಯಾಗುವುದಿಲ್ಲ ಎನ್ನುವ ಎಚ್ಚರದೊಂದಿಗೆ ಎಲ್ಲಾ ಒಗ್ಗೂಡಿ, ಸಮಾಜ, ರಾಜಕೀಯ, ಧಾರ್ಮಿಕ ಸಾಧನೆಗಳಿಗೆ ಮುಂದಾಗಬೇಕಿದೆ. ತನ್ಮೂಲಕ ಸಂಸ್ಕೃತಿಯ ವಿಶ್ಲೇಷಣೆ ನಡೆಸುವಂತಾಗಬೇಕು. ಅದರೊಂದಿಗೆ ಇಂದು ನಾಳಿನ ಪೀಳಿಗೆಗಳಿಗೆ ಸಂಸ್ಕೃತಿ ಪರವಾದ ಸ್ಪಷ್ಟ ಸಂದೇಶವನ್ನು ತಲುಪಿಸಬೇಕು. ಹಾಗಾಗಿಯೇ ಸಮಕಾಲೀನತೆಯ ಜವಾಬ್ದಾರಿಯೂ ಹೆಚ್ಚಿದೆ.