ವ್ಯಕ್ತಿತ್ವ ವಿಕಾಸಕ್ಕೆ ಮಾನವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದಕ್ಕೆ ಶಿಕ್ಷಣ ಅಗತ್ಯವಾದುದು. ಶಿಕ್ಷಣ ಎನ್ನುವುದು ನಮ್ಮನ್ನು ನಾವು ಗೌರವಿಸಿಕೊಳ್ಳುವುದಕ್ಕೆ, ಹಾಗೆಯೇ ಇತರರು ನಮ್ಮನ್ನು ಗೌರವಿಸುವುದಕ್ಕೆ, ನಮ್ಮ ಸಮಾಜದ ಏಳ್ಗೆಗೆ ಇರುವ ಸಾಧನ. ಅದಕ್ಕಾಗಿಯೇ ಶಿಕ್ಷಣ ಎನ್ನುವುದು ಮೂಲಭೂತ ಹಕ್ಕು. ಈ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗುವಂತಾಗಬೇಕು. ಶಿಕ್ಷಣ ಉಚಿತವಾಗಿ ಸಿಗಬೇಕು. ಕೊನೆ ಪಕ್ಷ ಪ್ರಾಥಮಿಕ ಹಂತದಲ್ಲಾದರೂ ಸಿಗಲೇಬೇಕು. ತಾಂತ್ರಿಕ ಮತ್ತು ವೃತ್ತಿ ಶಿಕ್ಷಣಗಳು ಉಚಿತವಾಗಿ ದೊರಕು ವಂತಾಗಬೇಕು. ಆಗಲಾದರೂ ಶಿಕ್ಷಣದ ಅಗತ್ಯ ಮತ್ತು ಅರ್ಥ ತಿಳಿದೀತು.

ಇನ್ನು ಬೇಡರು ನಾಗರೀಕತೆಯಿಂದ ದೂರವಾಗಿ ಪ್ರತ್ಯೇಕವಾಗಿ ಬದುಕಿ ತಮ್ಮ ಸಾಂಸ್ಕೃತಿಕ ಅಪೂರ್ವತೆಯನ್ನು ಉಳಿಸಿಕೊಂಡು ಬಂದವರು. ಇಂಥ ಬೇಡ ಅಥವಾ ಬುಡಕಟ್ಟು   ಅಭಿವೃದ್ದಿಗಾಗಿ ವಿಶೇಷ ವಿವಿಧೋದ್ದೇಶ ಬುಡಕಟ್ಟು ಬ್ಲಾಕ್‌ಗಳನ್ನು ೨ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಸ್ಥಾಪಿಸಲಾಯಿತು. ಈ ಬುಡಕಟ್ಟಿನ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ದಿ ಈ ಬ್ಲಾಕ್‌ಗಳ ಉದ್ದೇಶವಾಗಿತ್ತು.

ಕರ್ನಾಟಕದ ಶೈಕ್ಷಣಿಕ ಸ್ಥಿತಿ-ಗತಿ ಹೇಳಬಹುದಾದರೆ ತೀರ ಹಿಂದುಳಿಯದೆ, ಅತಿ ಪ್ರಗತಿಯನ್ನು ಕಾಣದೆ ಮಧ್ಯಗತಿಯಲ್ಲಿ ಸಾಗುತ್ತಿದೆ. ಇಲ್ಲಿ ಗಮನಿಸಬಹುದಾದರೆ ಶೇ. ೬೭ರಷ್ಟಿರುವ ಸಾಕ್ಷರತೆಯಲ್ಲಿ ಪುರುಷರ ಸಾಕ್ಷರತೆ ಶೇ. ೭೬.೨೯, ಮಹಿಳೆಯರು ಶೇ. ೫೭.೪೫. ಇದರಲ್ಲಿ ಗ್ರಾಮೀಣ ಮಹಿಳೆಯ ಸಾಕ್ಷರತೆಯ ಪ್ರಮಾಣ ತೀರಾ ಕಡಿಮೆ.

ರಾಜ್ಯದ ೨೭ ಜಿಲ್ಲೆಗಳಲ್ಲಿಯೂ ಬೇಡ ಸಮುದಾಯ (ಪರಿಶಿಷ್ಟ ಪಂಗಡ) ಜನಸಂಖ್ಯೆ ಯಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೭ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆ ಯಿದೆ. ಈ ಸಮುದಾಯ ಸಾಂಪ್ರದಾಯಿಕ ಶಿಕ್ಷಣದ ವಿಚಾರವೂ ತೀರಾ ಇತ್ತೀಚಿನದೆಂದೇ ಹೇಳಬಹುದು. ಈ ಸಮುದಾಯ ಸಾಕ್ಷರತೆಯ ಪ್ರಮಾಣ ಶೇ. ೪೯ರಷ್ಟು. ಇದರಲ್ಲಿ ಶೇ. ೬೦ ಪುರುಷರ, ಶೇ. ೩೭ ಮಹಿಳೆಯರ ಸಾಕ್ಷರತೆಯಿದೆ.

ಈ ಸಮುದಾಯದ ಗ್ರಾಮೀಣ ಸಾಕ್ಷರತೆ ಶೇ. ೪೫.೩ರಷ್ಟಿದ್ದರೆ ಅದರಲ್ಲಿ ಪುರುಷರ ಸಾಕ್ಷರತೆ ಶೇ. ೫೬.೯ರಷ್ಟು ಮಹಿಳೆಯರದು ಶೇ. ೩೩.೩ರಷ್ಟು.

ಇನ್ನು ನಗರ ಪ್ರದೇಶದ ಸಾಕ್ಷರತೆ ಶೇ. ೬೪.೬ರಷ್ಟಿದೆ. ಪುರುಷರದು ಶೇ. ೭೪.೪ ಮಹಿಳೆಯರದು ಶೇ. ೫೪.೩. ಈ ಸಾಕ್ಷರತೆಯ ಪ್ರಮಾಣವನ್ನು ಗಮನಿಸಿದರೆ ಬೇಡರ ಶೈಕ್ಷಣಿಕ ಸ್ಥಿತಿ-ಗತಿ ಶೋಚನೀಯವಾಗಿದೆ. ಸರ್ಕಾರದ ಸೌಲಭ್ಯವಿದ್ದರೂ ಅದರ ಮಾಹಿತಿ ಸರಿಯಾಗಿ ಇವರಿಗೆ ಸಿಗುತ್ತಿಲ್ಲ.

ಜಿಲ್ಲಾವಾರು ಸಾಕ್ಷರತೆಯ ಪ್ರಮಾಣವನ್ನು ಗಮನಿಸಿದರೆ ಶೈಕ್ಷಣಿಕ ಸ್ಥಿತಿ-ಗತಿಯ ಚಿತ್ರಣ ದೊರತೀತು. ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಶೇಕಡವಾರು ಸಾಕ್ಷರತೆಯ ಪ್ರಮಾಣದಲ್ಲಿ ಮುಂದಿರುವುದು ದಕ್ಷಿಣ ಕನ್ನಡ ಜಿಲ್ಲೆ. ಶೇ. ೭೩ರಷ್ಟಿರುವ ಸಾಕ್ಷರತೆಯಲ್ಲಿ.

ಪುರುಷರು – ಶೇ. ೮೦.೨

ಮಹಿಳೆಯರು – ಶೇ. ೬೫.೭

ಇದರಲ್ಲಿ ಗ್ರಾಮೀಣ ಸಾಕ್ಷರತೆ ಶೇ. ೭೧.೭

ನಗರ ಸಾಕ್ಷರತೆ ಶೇ. ೮೦.೭ರಷ್ಟಿದೆ.

ಮೂರು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಾಯಚೂರು ಜಿಲ್ಲೆ ಅತಿ ಕಡಿಮೆ ಅಂದರೆ ಶೇ. ೨೯ರಷ್ಟು ಸಾಕ್ಷರತೆ ಪಡೆದಿದೆ. ಇದರಲ್ಲಿ

ಪುರುಷರು ಶೇ. ೪೧.೧

ಮಹಿಳೆಯರು ಶೇ. ೧೬.೯

ಇದರಲ್ಲಿ ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇ. ೨೭.೮ರಷ್ಟು ನಗರ ಪ್ರದೇಶದ ಸಾಕ್ಷರತೆ ಶೇ. ೪೧.೮ರಷ್ಟು.

ರಾಜ್ಯದಲ್ಲೇ ಅತಿ ಹೆಚ್ಚು ಪರಿಶಿಷ್ಟ ವರ್ಗದ ಜನಸಂಖ್ಯೆಯನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷದ ಎಪ್ಪತ್ತು ಸಾವಿರ ಜನಸಂಖ್ಯೆಯಿದೆ. ಶೈಕ್ಷಣಿಕತೆಯ ಸಾಕ್ಷರತೆಯ ಪ್ರಮಾಣ ಶೇ. ೪೧ ರಿಂದ ೪೨ ಮಾತ್ರ.

ಪುರುಷರ ಸಾಕ್ಷರತೆ ಶೇ. ೫೪

ಮಹಿಳೆಯರದು ಶೇ. ೨೯

ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇ. ೩೭.೯

ನಗರ ಪ್ರದೇಶದಲ್ಲಿ ಶೇ. ೫೧.೭

ಇನ್ನು ಜನಸಂಖ್ಯೆಯ ದೃಷ್ಟಿಯಲ್ಲಿ ೩ನೇ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ೨ ಲಕ್ಷದ ೭೦ ಸಾವಿರ ಜನಸಂಖ್ಯೆಯಿದ್ದು ಸಾಕ್ಷರತೆಯ ಪ್ರಮಾಣ ಶೇ. ೫೩.೯.

ಮಹಿಳೆಯರ ಸಾಕ್ಷರತೆ ಶೇ. ೪೧.೫

ಪುರುಷರ ಸಾಕ್ಷರತೆ ಶೇ. ೬೫.೮

ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇ. ೫೧.೬

ನಗರ ಪ್ರದೇಶದ ಸಾಕ್ಷರತೆ ಶೇ. ೭೧.೯

ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿನ ಸಾಕ್ಷರತೆಯ ಪ್ರಮಾಣ ಶೇ. ೫೪.೧.

ಪುರುಷರ ಸಾಕ್ಷರತೆ ಶೇ. ೬೪.೮

ಮಹಿಳೆಯರ ಸಾಕ್ಷರತೆ ಶೇ. ೪೩

ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇ. ೫೨.೨

ನಗರ ಪ್ರದೇಶದ ಸಾಕ್ಷರತೆ ಶೇ. ೬೪.೨

ಮೈಸೂರು ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ. ೧೨ರಷ್ಟಿರುವ ಪರಿಶಿಷ್ಟ ಪಂಗಡದವರ ಸಾಕ್ಷರತೆ ಶೇ. ೪೬.೪.

ಪುರುಷರ ಸಾಕ್ಷರತೆ ಶೇ. ೫೫.೧

ಮಹಿಳೆಯರ ಸಾಕ್ಷರತೆ ಶೇ. ೩೭.೫

ಗ್ರಾಮೀಣ ಪ್ರದೇಶದ ಸಾಕ್ಷರತೆ ಶೇ. ೪೧.೯

ನಗರ ಪ್ರದೇಶದ ಸಾಕ್ಷರತೆ ಶೇ. ೬೭

ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಶೇ. ೩೬.೧ ರಿಂದ ಶೇ. ೪೮.೩ರಷ್ಟು ಏರಿಕೆ ಯಾಗಿದ್ದರೂ ಮಹಿಳೆಯರ ಸಾಕ್ಷರತೆಯ ಪ್ರಮಾಣ ತೀರಾ ಕಡಿಮೆ ಇದೆ. ಹೀಗೆ ಕೆಲ ಜಿಲ್ಲೆಗಳ ಸಾಕ್ಷರತೆಯ ಪ್ರಮಾಣ ನೋಡಿದರೆ ಇನ್ನೂ ಶಿಕ್ಷಣದಿಂದ ವಂಚಿತ ಜನಸಂಖ್ಯೆಯೇ ಹೆಚ್ಚು. ಇದನ್ನು ಮನಗಂಡ ಸರ್ಕಾರ ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಘಟಕಗಳನ್ನು ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಸ್ಥಳಗಳಲ್ಲಿ ಸ್ಥಾಪಿಸಿದೆ.

ಇನ್ನೂ ಮುಖ್ಯವಾಗಿ ೨೦೦೧೦೨ರಲ್ಲಿ ಹೊಸದಾಗಿ ಚಾಮರಾಜನಗರ, ಚಿತ್ರದುರ್ಗ, ಬೆಳಗಾಂ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಛೇರಿಗಳನ್ನು ಆರಂಭಿಸಬೇಕಿದೆ. ಅದರಲ್ಲೂ ಪರಿಶಿಷ್ಟ ಪಂಗಡದ ಜನ ಹೆಚ್ಚಿರುವ ಬಳ್ಳಾರಿ ಜಿಲ್ಲೆಯಲ್ಲಿ ಆಗಬೇಕಿದೆ.

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದೆ. ಆದರೆ ಇತ್ತೀಚೆಗೆ ಪದವಿವರೆಗಿನ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವು ದರಿಂದ ಹಾಸ್ಟಲ್ ಸೌಲಭ್ಯವನ್ನು ಹೆಚ್ಚಿಸಬೇಕಾಗಿದೆ. ಎಲ್ಲಾ ತಾಲೂಕುಗಳಲ್ಲಿಯೂ ಈ ವರ್ಗದ ಮಹಿಳೆಯರಿಗೆ ಹಾಸ್ಟಲ್ ಸೌಲಭ್ಯ ದೊರೆಯುವಂತಾದರೆ ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಬಹುದು.

ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಈ ಇಲಾಖೆಗಳಿಂದ ಆರ್ಥಿಕ ಸಹಾಯವಿದೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್., ಪಿಎಚ್.ಡಿ ಅಧ್ಯಯನ ಮಾಡುವವರಿಗೆ ವಿಶೇಷ ಆರ್ಥಿಕ ಸೌಲಭ್ಯವಿದೆ. ಸಿ.ಇ.ಟಿ ಪರೀಕ್ಷೆಗೆ ಕುಳಿತುಕೊಳ್ಳಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುಂಚಿತವಾಗಿ ಕೋಚಿಂಗ್ ತರಗತಿಗಳಿಗೆ ಕಳುಹಿಸುವ ವ್ಯವಸ್ಥೆಯೂ ಇದೆ. ಇದರಿಂದ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಈ ವರ್ಗದವರು ಪಡೆಯಬಹುದಾಗಿದೆ. ಸುಮಾರು ೪೧ ವಿವಿಧ ವೃತ್ತಿಪರ ಟ್ರೇಡ್‌ಗಳಲ್ಲಿ ತರಬೇತಿಯನ್ನು ನವಚೇತನ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ. ನಿರುದ್ಯೋಗಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಜೊತೆಗೆ ಶಿಷ್ಯವೇತನವೂ ಸಹ ದೊರೆಯುತ್ತದೆ. ಹಾಗೆಯೇ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೆ ಅಂತಹ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಯೋಜನೆ ಯಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಹಿಂದುಳಿದ ಪ್ರದೇಶಗಳಲ್ಲಿ ಶಾಲಾಕಾಲೇಜುಗಳನ್ನು ಸ್ಥಾಪಿಸಬೇಕಿದೆ. ಬಳ್ಳಾರಿಯ ಅಲ್ಲೀಪುರದ ಹನುಮಂತಪ್ಪ, ಚಿತ್ರದುರ್ಗದ ಬೋರಪ್ಪ, ಮಾರಪ್ಪನವರು ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿ ಜಾರಕೀ ಹೊಳಿ ಕುಟುಂಬದವರು ರಾಜನಹಳ್ಳಿ ಸಂಸ್ಥಾನದ ಮಠದ ವತಿಯಿಂದ ಶಾಲಾಕಾಲೇಜುಗಳು ಸ್ಥಾಪನೆಯಾಗಿವೆ. ಇನ್ನೂ ಉತ್ತಮ ಸ್ಥಿತಿಯಲ್ಲಿರುವವರು ಈ ಕ್ಷೇತ್ರದತ್ತ ಗಮನ ಹರಿಸಬೇಕಿದೆ.

ಬೇಡ ಸಮುದಾಯ ಹಿರಿತಲೆಮಾರಿನ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಬರಗೂರು ರಾಮಚಂದ್ರಪ್ಪ, ಕಮಲಾಹಂಪನಾ, ಬಿಸಿಲಯ್ಯನವರ ಮಾರ್ಗದರ್ಶನ ಮತ್ತು ಯುವ ಪೀಳಿಗೆಯಲ್ಲಿ ಹೆಸರುಗಳಿಸಿರುವ ಡಾ. ರಂಗರಾಜ್ ವನದುರ್ಗ, ವಿರೂಪಾಕ್ಷಿ ಪೂಜಾರಹಳ್ಳಿ, ತೇಜಸ್ವಿ ಕಟ್ಟೀಮನಿ ಅಲ್ಲದೆ ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರಾಗಿರುವವರು ತಮ್ಮ ಸಮುದಾಯದ ಶೈಕ್ಷಣಿಕ ಸ್ಥಿತಿ-ಗತಿಯ ಕಡೆ ಗಮನ ಹರಿಸುತ್ತಿದ್ದಾರೆ. ಇನ್ನೂ ಗಮನ ಹರಿಸಬೇಕಾಗಿದೆ. ಪ್ರಾಥಮಿಕ, ಪ್ರೌಢ, ಉನ್ನತ, ತಾಂತ್ರಿಕ, ವೃತ್ತಿಪರ ಕೋರ್ಸಿಗಳ ಬಗ್ಗೆ ಇವರಿಗೆ ಮಾಹಿತಿ ನೀಡಬೇಕಿದೆ. ವಿದ್ಯಾರ್ಥಿಗಳ ಸಮಸ್ಯೆಗಳತ್ತ ಕೊಂಚ ಗಮನ ಹರಿಸಿ, ಸಾಧ್ಯವಾದಷ್ಟು ಮಾಹಿತಿ ನೀಡಬೇಕಿದೆ.

ಅಧಿಕಾರ ವರ್ಗದಲ್ಲಿರುವ, ಶಿಕ್ಷಣ, ಕಾನೂನು ಕ್ಷೇತ್ರದಲ್ಲಿ ಉನ್ನತ ಸ್ಥಿತಿಯಲ್ಲಿರುವವರು ಈ ಸಮುದಾಯದ ಶೈಕ್ಷಣಿಕ ಸ್ಥಿತಿ-ಗತಿಯ ಕಡೆ ಗಮನ ಹರಿಸದಿದ್ದರೆ ಈ ಸಮುದಾಯಕ್ಕೆ ಮೀಸಲಿರುವ ಸೌಲಭ್ಯಗಳು ಅನ್ಯರಪಾಲಾಗುವುದರಲ್ಲಿ ಸಂಶಯವಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿರುವ ವಾಲ್ಮೀಕಿ ಅಧ್ಯಯನ ಪೀಠ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನಾಂಗದ ಶೈಕ್ಷಣಿಕ ಸ್ಥಿತಿ-ಗತಿಯ ಬಗ್ಗೆ ವಿಚಾರಗೋಷ್ಠಿ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಇನ್ನೂ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ ಬೇಕಿದೆ.

ಬೇಡ ಬುಡಕಟ್ಟಿನ ಪುರಾಣ ಪ್ರಸಿದ್ಧ ವ್ಯಕ್ತಿಗಳ, ಸಾಂಸ್ಕೃತಿಕ ನಾಯಕರ ಚರಿತ್ರೆಯನ್ನು ಪಠ್ಯಕ್ಕೆ ಅಳವಡಿಸುವಂತೆ ಆಗ್ರಹಿಸಬೇಕಿದೆ. ಸಮುದಾಯಕ್ಕೆ ಮೀಸಲಾದ ಮಾಹಿತಿಯನ್ನು ನೀಡಬಲ್ಲ ಪತ್ರಿಕೆಗಳು ಬೇಕಾಗಿದೆ. ಈಗಿರುವ ವಾಲ್ಮೀಕಿ ಬಂಧು, ವಾಲ್ಮೀಕಿ ಕರ್ನಾಟಕ ಜೊತೆಗೆ ಶೈಕ್ಷಣಿಕ ಮಾರ್ಗದರ್ಶನದ ಪತ್ರಿಕೆಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಾಜದ ಉತ್ತಮ ಸ್ಥಿತಿಯಲ್ಲಿರುವವರು ಆಸಕ್ತಿ ವಹಿಸಬೇಕಿದೆ. ವಿಶ್ವವಿದ್ಯಾನಿಲಯದ ವಿವಿಧ ಅಕಾಡೆಮಿಗಳಿಗೆ ಆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಈ ಸಮುದಾಯದ ವಿದ್ವಾಂಸರಿಗೆ ಅವಕಾಶ ನೀಡಲು ಒಟ್ಟಾಗಿ ಆಗ್ರಹಿಸಬೇಕಾಗಿದೆ. ಹೀಗೆ ನಮಗೆ ಸಲ್ಲಬೇಕಾದದ್ದು ನಮಗೇ ಸಲ್ಲಿದರೆ ಈ ಸಮುದಾಯದ ಶೈಕ್ಷಣಿಕ ಸ್ಥಿತಿ-ಗತಿ ಸುಧಾರಣೆಯಾದೀತು.