ಜಾಗತಿಕ ಚರಿತ್ರೆಯಲ್ಲಿ ಯಾವುದೇ ರಾಷ್ಟ್ರವು ಒಂದೇ ಬಾರಿಗೆ ಪ್ರವರ್ಧಮಾನಕ್ಕೆ ಬಂದಿಲ್ಲ. ಇದನ್ನು ಚರಿತ್ರೆ ಖಚಿತಪಡಿಸುತ್ತದೆ.ಅಲ್ಲಿನ ಭೌಗೋಳಿಕ ಪರಿಸ್ಥಿತಿ ಕೂಡ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ತನ್ನ ಮೂಲಭೂತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸುತ್ತವೆ. ಕಾಲಕ್ರಮೇಣ ಪ್ರಬಲ ರಾಷ್ಟ್ರಗಳು ಬಲಹೀನ ರಾಷ್ಟ್ರಗಳ ಮೇಲೆ ಬಲಪ್ರಯೋಗ ಮತ್ತು ಹೆಜಿಮೋನಿ ಮುಖಾಂತರ ಒತ್ತಡ ತರುತ್ತವೆ. ಇಂತಹ ಪ್ರವೃತ್ತಿಗೆ ಯೂರೋಪಿನ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಈ ಪ್ರಕ್ರಿಯೆಯು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಸಂದರ್ಭದಲ್ಲಿ ಹತೋಟಿ ಸಾಧಿಸಿದ ರಾಷ್ಟ್ರದ ವಿರುದ್ಧ ಹತೋಟಿಗೊಳಪಟ್ಟ ರಾಷ್ಟ್ರದ ಜನತೆ ಹೋರಾಟ ಮನೋಭಾವ ಬೆಳೆಸಿಕೊಳ್ಳುವುದು ಸಹಜ. ಭಾರತವು ಇದಕ್ಕೆ ಹೊರತಾಗಿರಲಿಲ್ಲ. ಬ್ರಿಟನ್ ಸೇರಿದಂತೆ ಯೂರೋಪಿನ ರಾಷ್ಟ್ರಗಳು ಭಾರತದ ಆರ್ಥಿಕ ಸಂಪನ್ಮೂಲವನ್ನು ತನ್ನ ಬೆಳವಣಿಗೆಗೆ ಉಪಯೋಗಿಸಿಕೊಳ್ಳುತ್ತಿದ್ದವು. ಜನತೆಯ ಆಶೋತ್ತರಗಳಿಗೆ ವಿರುದ್ಧವಾಗಿ, ಸ್ವತಂತ್ರ್ಯ ವಿಚಾರಗಳಿಗೆ ಅಡ್ಡಿಯಾಗಿದ್ದರು. ಇವೆಲ್ಲವುದರ ಪರಿಣಾಮವಾಗಿ ಭಾರತೀಯರು ಒಗ್ಗೂಡಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದರು. ಈ ಹಿನ್ನೆಲೆಯಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ, ಹೋರಾಟ ಮಾಡಿ ಸ್ವಯಂ ಆಡಳಿತಕ್ಕಾಗಿ ಅನೇಕ ವರ್ಷಗಳ ಕಾಲ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಐರೋಪ್ಯರಲ್ಲಿ ಮುಖ್ಯವಾಗಿ ಬ್ರಿಟಿಷರು ಇಲ್ಲಿನ ವ್ಯವಸ್ಥೆಯೊಂದಿಗೆ ಬೆರತುಹೋಗಿದ್ದರು. ೨೦ನೇ ಶತಮಾನದ ಮಧ್ಯಭಾಗದವರೆಗೂ ಕೂಡ ಭದ್ರವಾಗಿ ತಳವೂರಿದ್ದರು. ವಸಾಹತುಶಾಹಿ ನೀತಿಯ ಮುಂದುವರಿದ ಭಾಗಗಳಾದ ಉದಾರೀ ಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪರಿಣಾಮವಾಗಿ ೨೧ನೇ ಶತಮಾನದ ಈ ದಿನಗಳಲ್ಲಿ ಭಾರತದಂಹ ರಾಷ್ಟ್ರಗಳನ್ನು ನಿಯಂತ್ರಿಸುವ, ಆಕ್ರಮಿಸುವ, ಹಿಡಿದಿಡುವ ಪರಿಸ್ಥಿತಿಗೆ ಬದಲಾಗಿದೆ. ಹೀಗಿರುವಾಗ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ಪ್ರಾಂತ್ಯಗಳು ಭಾಗವಹಿಸಿ, ಹೋರಾಡಿವೆ. ಇದಕ್ಕೆ ಚರಿತ್ರೆಯಲ್ಲಿ ಸಾಕಷ್ಟು ವಿವರಗಳು ಸಿಗುತ್ತವೆ. ಭಾರತವು ಸ್ವಾತಂತ್ರ್ಯಗಳಿಸುವಾಗ ಹಲವು ವ್ಯಕ್ತಿಗಳು, ಜನತೆ, ರೈತರು, ಬುಡಕಟ್ಟಿನವರು, ನಾಗರಿಕ ಪ್ರತಿಭೆಗಳು, ಸಶಸ್ತ್ರ ಪ್ರತಿಭಟನೆಗಳ ಮುಖಾಂತರ, ದಲಿತರು, ಹಲವು ಜನ-ವರ್ಗಗಳು ಭಾಗವಹಿಸಿವೆ. ಅನೇಕ ಸಮುದಾಯಗಳು ಹೋರಾಡಿವೆ; ಶ್ರಮಿಸಿವೆ, ಪ್ರಾಣತ್ಯಾಗವನ್ನು ಕೂಡ ಮಾಡಿವೆ. ಇದಕ್ಕೆ ಬೇಡ ಸಮುದಾಯಗಳು ಹೊರತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬೇಡರು ಎನ್ನುವ ವಿಷಯನ್ನು ಕುರಿತು ಚರ್ಚಿಸಲು ಪ್ರಸ್ತುತ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

ಸ್ವಾತಂತ್ರ್ಯ ಪದದ ಅರ್ಥ

‘ಸ್ವತಂತ್ರ್ಯ’ ಒಂದು ರಾಷ್ಟ್ರದ ಜೀವಾಳ. ಸ್ವಆಡಳಿತ ನಡೆಸಲು ಅತ್ಯಾವಶ್ಯಕ. ವಿಶ್ವದ ಪ್ರಮುಖ ಕ್ರಾಂತಿಗಳನ್ನು ಅವಲೋಕಿಸಿದಾಗ ಸ್ವತಂತ್ರ್ಯ, ಸಮಾನತೆಗಾಗಿ ಸಂಭವಿಸಿವೆ. ೧೭೮೯ರ ಫ್ರಾನ್ಸಿನ ಮಹಾಕ್ರಾಂತಿಯ ಪರಿಣಾಮ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಹಕ್ಕುಗಳಿಗಾಗಿ ಹೋರಾಡವುದನ್ನು ರೂಢಿಸಿಕೊಂಡವು. ಮನುಷ್ಯನಿಗೆ ಮೂಲಭೂತ ಬೇಡಿಕೆಗಳಾದ ನೀರು, ಆಹಾರ, ಗಾಳಿ ಎಷ್ಟು ಅವಶ್ಯಕವೊ ಸ್ವತಂತ್ರ್ಯ ಅಷ್ಟೆ ಅವಶ್ಯಕ. ‘ಸ್ವತಂತ್ರ್ಯ’ ಎನ್ನುವ ಪದವನ್ನು ಗಮನಿಸಿದಾಗ ತನ್ನಿಚ್ಚೆಯಂತೆ ಇರುವುದು, ಬಂಧನದಿಂದ ವಿಮುಕ್ತಿ ಹೊಂದುವುದು, ಬಿಡುಗಡೆ ಹೊಂದುವುದು, ವಿಶೇಷ ಹಕ್ಕನ್ನು ಪಡೆಯುವುದು, ವ್ಯಕ್ತಿ ಸರಿಯೆನಿಸಿದ್ದನ್ನು ಮಾಡುವಂತಹ ಹಕ್ಕು ಎಂಬರ್ಥಗಳನ್ನು ಒಳಗೊಂಡಿದೆ. ದಂಗೆ, ಕಾಳಗ, ಕ್ರಾಂತಿ, ಯುದ್ಧ, ಸಂಗ್ರಾಮ, ಚಳವಳಿ, ಹೋರಾಟ ಸತ್ಯಾಗ್ರಹ, ಪ್ರತಿಭಟನೆ ಮುಂತಾದ ಆಯಾಮಗಳ ಮುಖಾಂತರ ವ್ಯಕ್ತಿ ಅಥವಾ ರಾಷ್ಟ್ರ ಸ್ವತಂತ್ರ್ಯಗೊಳ್ಳಲು ಪ್ರಯತ್ನಿ ಸುತ್ತದೆ. ರಾಷ್ಟ್ರೀಯ ನೆಲೆಗಟ್ಟಿನಲ್ಲಿ ಅವಲೋಕಿಸಿದಾಗ ಕೇವಲ ಪ್ರತಿಷ್ಟಿತರು ಮಾತ್ರವಲ್ಲದೆ ಜನಸಾಮಾನ್ಯರು ಕೂಡ ಮುಖ್ಯ ಪಾತ್ರ ವಹಿಸಬಲ್ಲರು ಎಂಬುದನ್ನು ಖಚಿತಪಡಿಸ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಇವರ ಕೊಡುಗೆ ಅಮೂಲ್ಯ ವಾದುದು. ಜನರ ಚರಿತ್ರೆಯೇ ಒಂದು ದೇಶದ ವಾಸ್ತವಿಕ ಚರಿತ್ರೆಯೆಂಬುದನ್ನು ಮನಗಾಣ ಬೇಕಾಗಿದೆ. ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಭವಿಷ್ಯತ್ತನ್ನು ಕಟ್ಟಬೇಕಾಗಿದೆ.

ಮಧ್ಯಕಾಲೀನ ಕರ್ನಾಟಕದ ಸಂದರ್ಭದಲ್ಲಿ ೧೬ ನೇ ಶತಮಾನವು ಮಹತ್ವಪೂರ್ಣ ವಾದುದು. ವಿಜಯನಗರ ಸಾಮ್ರಾಜ್ಯ ಪತನದ ತರುವಾಯ ವಿಕೇಂದ್ರಿಕರಣ ಪ್ರಕ್ರಿಯೆ ವಿಸ್ತರಿಸ ತೊಡಗಿತು. ರಾಜರು, ಸಾಮಂತರು, ಪಾಳೆಯಗಾರರು ಸ್ವತಂತ್ರ್ಯವಾಗಲು ಯತ್ನಿಸಿದರು. ಕೆಲವರು ಸ್ವತಂತ್ರ್ಯರಾದರು. ವಿಜಯನಗರ ಬಿಗಿಹಿಡಿತ ಸಡಿಲಿತವಾಯಿತು ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಆದುದರಿಂದ ಕೇಂದ್ರಿಕೃತ ಆಡಳಿತ ಕುಸಿಯತೊಡಗಿತು. ಇದು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪಾಳೆಯಗಾರರ ಆಳ್ವಿಕೆಗೆ ಭದ್ರಬುನಾದಿಯಾಯಿತು. ಈ ಕುರಿತು ಚರಿತ್ರೆಕಾರರು ಮತ್ತು ವಿದ್ವಾಂಸರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ವಿಜಯನಗರೋತ್ತರ ಅವಧಿಯಲ್ಲಿ ಈ ಪಾಳೆಯಪಟ್ಟುಗಳು ಮುಖ್ಯವಾಹಿನಿಯಲ್ಲಿದ್ದವು. ಈ ಸಂಕೀರ್ಣ ಸಂದರ್ಭದಲ್ಲಿ ಐರೋಪ್ಯರ ಆಗಮನ ಭಾರತದ ಮೇಲೆ ಪರಿಣಾಮ ಬೀರಲಾರಂಭಿಸಿತು. ಕಾಲಕ್ರಮೇಣ ಪಾಶ್ಚಿಮಾತ್ಯರ ಹತೋಟಿ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತು. ಆದುದರಿಂದ ಇಲ್ಲಿನ ಸ್ಥಳೀಯ ರಾಜರು, ಜನಸಾಮಾನ್ಯರು ಬ್ರಿಟಿಷ್ ಆಡಳಿತ ನೀತಿಯ ವಿರುದ್ಧ ತಿರುಗಿಬಿದ್ದರು.

ವಸಾತುಶಾಹಿಗಳ ಪ್ರಾಬಲ್ಯ

ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಭಾರತಕ್ಕೆ ಕ್ರಮವಾಗಿ ಆಗಮಿಸಿದರು. ರಾಷ್ಟ್ರದ ಸಂಪನ್ಮೂಲವು ಆಕರ್ಷಣೆಯಾಯಿತು. ಇಲ್ಲಿನ ರಾಜಕೀಯ ಅನೈತಿಕತೆ ಕೂಡ ಐರೋಪ್ಯರಿಗೆ ಪ್ರೇರಣೆಯಾಯಿತು. ಬ್ರಿಟಿಷರನ್ನು ಹೊರತುಪಡಿಸಿ ಉಳಿದವರ್ಯಾರು ಭಾರತ ದಲ್ಲಿ ಸುಭದ್ರ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಇದಕ್ಕೆ ಹಲವು ಕಾರಣಗಳುಂಟು. ಬ್ರಿಟಿಷರು ಸೇರಿದಂತೆ ಐರೋಪ್ಯರು ಇಲ್ಲಿನ ಸ್ಥಳೀಯ ರಾಜರೊಂದಿಗೆ ಹಲವು ಹೋರಾಟ ಗಳನ್ನು ಮಾಡಿದರು. ಈ ಹೋರಾಟಗಳಲ್ಲಿ ಬ್ರಿಟಿಷರು ಮಾತ್ರ ಯಶಸ್ವಿಯಾದರು. ಇದಕ್ಕೆ ಸ್ಥಳೀಯ ರಾಜರ ವೈಫಲ್ಯಕ್ಕೆ ಅನೇಕ ಕಾರಣಗಳಿವೆ. ಪ್ರಾರಂಭದಲ್ಲಿ ಇಂಗ್ಲಿಷರು ಭಾರತದಲ್ಲಿ ಆಡಳಿತ ನಡೆಸಲು ಮತ್ತು ಮುಖ್ಯ ವಸಾಹತು ಮಾಡಿಕೊಳ್ಳಲು ಯತ್ನಿಸದಿದ್ದರೂ, ಕಾಲ ಕ್ರಮೇಣ ಇಲ್ಲಿನ ರಾಜಕೀಯ ಅನೈತಿಕತೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳು ಪ್ರೇರಣೆಯಾದವು. ಭಾರತೀಯ ಚರಿತ್ರೆಯಲ್ಲಿ ಬ್ರಿಟಿಷರಿಗೆ ಭದ್ರವಾಗಿ ತಳವೂರಲು ಕ್ರಿ.ಶ. ೧೭೫೭ ಪ್ಲಾಸಿ ಪ್ರಮುಖ ಕಾರಣವಾಯಿತು. ಈ ಕದನದ ಪರಿಣಾಮವಾಗಿ ಬ್ರಿಟಿಷರು ಮೇಲುಗೈ ಪಡೆದು ಬಂಗಾಳ, ಬಿಹಾರ, ಒರಿಸ್ಸಾ, ಅಸ್ಸಾಂಗಳನ್ನೊಳಗೊಂಡ ಬಂಗಾಳ ಪ್ರಾಂತದ ಪತನವಾದುದು. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವು ಬಂಗಾಳದ ನವಾಬ ಸಿರಾಜುದೌಲನನ್ನು ಸೋಲಿಸಿದಾಗಲೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭ ವಾಯಿತು ಎಂದು ಹೆೀಳಿದರೆ ತಪ್ಪಗಲಾರದು.

೧೭೬೪ ರಲ್ಲಿ ಬ್ರಿಟಿಷ್ ಕಂಪನಿಗೂ ಮತ್ತು ಮೀರ್ ಖಾಸಿಂನಿಗೆ ನಡೆದ ಕದನದಲ್ಲಿ  (ಬಾಕ್ಸಾರ್) ಬ್ರಿಟಿಷರು ಪ್ರಬುದ್ಧತೆಯನ್ನು ಪ್ರದರ್ಶಿಸಿದರು. ಇದರಿಂದ ಮತ್ತೊಂದು ಹೆಜ್ಜೆ ಮುಂದೆ ಹೊದಂತೆ ಕಾಣಲಾರಂಭಿಸಿತು. ಹಾಗೆಯೇ ದಕ್ಷಿಣ ಭಾರತದಲ್ಲಿ ಬ್ರಿಟಿಷರಿಗೆ ಮತ್ತು ಮೈಸೂರಿನ ಅರಸರಿಗೆ ಸ್ವಾತಂತ್ರ್ಯದ ವಿಚಾರದಲ್ಲಿ ಆಗಿಂದಾಗ್ಗೆ ಘರ್ಷಣೆಗಳು ನಡೆಯುತ್ತಲೇ ಇದ್ದವು. ಪ್ರಮುಖವಾಗಿ ನಾಲ್ಕು ಆಂಗ್ಲೊ-ಮೈಸೂರು ಯುದ್ಧಗಳು ಹೈದರ್ ಮತ್ತು ಟಿಪ್ಪು ಸುಲ್ತಾನನನ್ನು ದಮನಿಸಿ ಸಾರ್ವಭೌಮತ್ವ ಸಾರಲು ಮುಂದಾದರು. ಬ್ರಿಟಿಷ್ ಗೌರ‌್ನರ್-ಜನರಲ್‌ಗಳು ಜಾರಿಗೆ ತಂದ ಕಾಯಿದೆಗಳು ಕೂಡ ಭಾರತೀಯ ಅರಸರಿಗೆ ಮಾರಕವಾಗಿದ್ದವು. ಸಹಾಯಕ ಸೈನ್ಯ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಹಾಗೂ ಕರಾರುಗಳು ಸಂಪೂರ್ಣವಾಗಿ ಬ್ರಿಟಿಷರಿಗೆ ಪೂರಕ ಫಲಿತಾಂಶವನ್ನು ಒದಗಿಸಿಕೊಟ್ಟವು. ಹಾಗೆಯೇ ಅವರು ಜಾರಿಗೆ ತಂದ ಭೂಕಂದಾಯ ಮತ್ತು ಭೂಹಿಡುವಳಿ ಪದ್ಧತಿಗಳು ಪ್ರಮುಖ ಕಾರಣೀಭೂತವಾದವು. ಇದರಿಂದಾಗಿ ಸ್ಥಳೀಯ ರಾಜರು ನವಾಬರು, ಪಾಳೆಯಗಾರರು ಸಂಧಾನಕ್ಕೆ ಮುಂದಾದರು.

ಪಾಳೆಯಗಾರರ ಬಂಡಾಯ

ಬ್ರಿಟಿಷ್ ಆಳ್ವಿಕೆಯನ್ನು ಭಾರತೀಯರು ಪ್ರಾರಂಭದಿಂದಲೇ ಪ್ರತಿಭಟಿಸಲು ಪ್ರಯತ್ನಿಸಿ ವಿಫಲರಾದರು. ಕ್ರಿ.ಶ. ೧೭೦೭ರಲ್ಲಿ ಔರಂಗಜೇಬನ ಮರಣದ ನಂತರ ಅನೇಕ ಪ್ರಾಂತ್ಯಗಳು ಸ್ವಾತಂತ್ರ್ಯಕ್ಕಾಗಿ ಪ್ರತಿಭಟಿಸಿದವು. ಇವುಗಳಲ್ಲಿ ಮುಖ್ಯವಾಗಿ ಬುಡಕಟ್ಟು, ರೈತರ ಪಾಳೆಯ ಗಾರರ ಪ್ರತಿಭಟನೆಗಳು ಸೇರಿಕೊಂಡಿದ್ದವು. ದಕ್ಷಿಣ ಭಾರತದಲ್ಲಿ ವಿಜಯನಗರದ ಅರಸ ನೊಬ್ಬ ೧೭೯೪ ರಲ್ಲಿ ಬಂಡೆದ್ದನು. ೧೭೯೦ರ ಸುಮಾರಿಗೆ ತಮಿಳುನಾಡಿನ ಪಾಳೆಯಗಾರರು ದಂಗೆಯೆದ್ದರು. ೧೮೦೧ರಲ್ಲಿ ಮಬಾರ್ ಮತ್ತು ದಿಂಡಿಗಲ್‌ನವರು, ೧೮೦೦ರಲ್ಲಿ ಹಾಗೂ ೧೮೩೧ರಲ್ಲಿ ಮೈಸೂರಿನವರು ದಂಗೆಯೆದ್ದರು. ಪಶ್ಚಿಮ ಭಾರತದಲ್ಲಿ ಸೌರಾಷ್ಟ್ರದ ನಾಯಕರು ೧೮೧೬ ರಿಂದ ೧೮೩೨ರವರೆಗೆ ಪದೇ ಪದೇ ದಂಗೆಯೆದ್ದರು.

ತರೀಕೆರೆ ಪಾಳೆಯಗಾರ ಸರ್ಜಾರಂಗಪ್ಪನಾಯಕನಿಗೆ ರಾಷ್ಟ್ರದ ಬಗ್ಗೆ ಕಾಳಜಿಯಿತ್ತು. ಆ ಸಂದರ್ಭದಲ್ಲಿ ಮೈಸೂರಿನ ಮೇಲೆ ಇಂಗ್ಲಿಷ್‌ರ ಅಧಿಪತ್ಯವಿತ್ತು. ಆದುದರಿಂದ ಬ್ರಿಟಿಷರ ವಿರುದ್ಧ ದಂಗೆಯೆದ್ದು ಪ್ರಾಂತ್ಯವನ್ನು ಅವರಿಂದ ಮುಕ್ತಗೊಳಿಸಲು ಪ್ರಯತ್ನಿಸಿದನು. ಈ ರೀತಿಯ ದಂಗೆಗಳು ಬ್ರಿಟಿಷರ ವಿರುದ್ಧ ಪದೇ ಪದೇ ನಡೆಯುತ್ತಿದ್ದವು. ಆದರೆ ಬಿಕ್ಕಟ್ಟಿನ ಕೊರತೆಯಿಂದ ಸಫಲತೆಯನ್ನು ಕಾಣಲಿಲ್ಲ. ಮೈಸೂರು ರಾಜ್ಯದ ನಾನಾ ಕಡೆಗಳಲ್ಲಿ ಬಂಡಾಯವೆದ್ದವರ ಪೈಕಿ ರಂಗಪ್ಪನಾಯಕ ಕೂಡ ಒಬ್ಬರು. ಸಮಕಾಲೀನ ಸಂದರ್ಭದಲ್ಲಿ ಧೋಂಡಿಯವಾಗ್, ಬೇಲೂರಿನ ಕೃಷ್ಣಪ್ಪನಾಯಕ ಮತ್ತು ಉಳಿದ ಪಾಳೆಯಗಾರರು ಪ್ರಮುಖರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಕಾರ್ಯಾಚರಣೆ ಕೈಗೊಂಡನು. ಇವನಿಗೆ ಬೂದಿ ಬಸವಪ್ಪನಾಯಕನ ಸೈನ್ಯದ ಕಾರ್ಯಾಚರಣೆಯು ಕೂಡ ಸಹಾಯಕ್ಕೆ ಧಾವಿಸಿತು. ಕೊನೆಗೆ ಸರ್ಜಾರಂಗಪ್ಪನಾಯಕನು ಸೋಲನ್ನು ಒಪ್ಪಿಕೊಳ್ಳುವುದರ ಜೊತೆಗೆ ತಾತ್ಕಾಲಿಕವಾಗಿ ತೆರೆಬಿದ್ದಿತು. ಇವನ ಮುಖ್ಯ ಉದ್ದೇಶ ಬ್ರಿಟಿಷರನ್ನು ಇಲ್ಲಿಂದ ತೆರುವು ಗೊಳಿಸುವುದೇ ಆಗಿತ್ತು.

ಸರ್ಜಾರಂಗಪ್ಪನಾಯಕನ ತರುವಾಯ ಸರ್ಜಾಹನುಮಪ್ಪನಾಯಕನು ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸಿದನು. ಆ ಸಂದರ್ಭದಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳು ದೇಶಿಯ ರಾಜರ ವಿರುದ್ಧ ಶಕ್ತಿಮೀರಿ ಹೋರಾಡುವಂತೆ ಪ್ರೇರಿಪಿಸಲಾಗುತ್ತಿತ್ತು. ರಾಕ್ ಪೋರ್ಟ್‌ಮತ್ತು ಕಾನ್‌ವೇ ಅವರಲ್ಲಿ ಪ್ರಮುಖರು. ಬ್ರಿಟಿಷರು ಮೋಸದಿಂದ ಕಾಮನ ದುರ್ಗಕ್ಕೆ ಮುತ್ತಿಗೆ ಹಾಕಿದಾಗ ಹನುಮಪ್ಪನಾಯಕನನ್ನು ಮೋಸದಿಂದ ಬಂಧಿಸಿ ಗಲ್ಲಿಗೇರಿಸು ತ್ತಾರೆ. ಬ್ರಿಟಿಷರ ವಿರುದ್ಧ ನಗುನಗುತ್ತಾ ಪ್ರಾಣವನ್ನು ಬಿಟ್ಟ ಹನುಮಪ್ಪನಾಯಕನು ಚರಿತ್ರೆ ಯಲ್ಲಿ ಅಮರನಾಗಿ ಉಳಿಯುತ್ತಾನೆ. ಶಿಷ್ಟ ದಾಖಲೆಗಳ ಜೊತೆಗೆ ಮೌಖಿಕ ಚರಿತ್ರೆ ಕೂಡ ಜನಪದಗೀತೆಗಳ ಮುಖಾಂತರ ಮನಮುಟ್ಟುವಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಸಂಗತಿ ಗಳನ್ನು ತಿಳಿಯಬಹುದಾಗಿದೆ. ಕ್ರಿ.ಶ. ೧೮೦೦-೧೮೫೦ ಸಮಯದಲ್ಲಿ ಹಲವಾರು ದಂಗೆಗಳು ಬ್ರಿಟಿಷರ ವಿರುದ್ಧ ಸ್ಫೋಟಗೊಂಡವು. ಆ ಅವಧಿಯಲ್ಲಿ ಸ್ಥಳೀಯರು ಆಡಳಿತದಲ್ಲಿ ಪಾಲ್ಗೊಳ್ಳಲು ಅವಕಾಶವಿರಲಿಲ್ಲ. ಸಹಜವಾಗಿ ಆಡಳಿತವು ಆಂಗ್ಲರ ಹಿಡಿತದಲ್ಲಿತ್ತು. ಪಾಳೆಯಗಾರರು, ದೇಶಿಯ ಸೈನಿಕರು ಮತ್ತು ಗಿರಿಜನರು ಒಳಗೊಂಡಂತೆ ಬ್ರಿಟಿಷರ ವಿರುದ್ಧ ದಂಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಬ್ರಿಟಿಷರು ಈ ದಂಗೆಗಳನ್ನು ವ್ಯವಸ್ಥಿತವಾಗಿ ವಿಫಲ ಗೊಳಿಸಿದರು. ೧೮೦೩ ರಲ್ಲಿ ಬಳ್ಳಾರಿಯಲ್ಲಿ ಪಾಳೆಯಗಾರರ ದಂಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮನ್ರೋ ಗುಡೇಕೋಟೆಗೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಕ್ಷಾಮ ಉಲ್ಬಣಗೊಂಡದ್ದನ್ನು ಮನಗಂಡು ಈ ಭಾಗದ ಅರಸರು, ಪಾಳೆಯಗಾರರ ಮನೆತನಗಳು ತಮ್ಮ ಮೂಲ ಸೌಲಭ್ಯಗಳಿಗಾಗಿ ಗಲಭೆ ನಡೆಸಿದ್ದನ್ನು ಗಮನಿಸಬಹುದು. ೧೮೦೫ರ ಸುಮಾರಿಗೆ ಈ ಪ್ರಾಂತ್ಯಗಳಲ್ಲಿ ಭಯಂಕರ ಬರಗಾಲ ಸಂಭವಿಸಿತು. ಈ ರೀತಿಯ ತುರ್ತುಪರಿಸ್ಥಿತಿಗಳನ್ನು ನಿವಾರಿಸುವಲ್ಲಿ ಬ್ರಿಟಿಶ್ ಆಡಳಿತ ವಿಫಲವಾಯಿತು ಎಂದರೆ ತಪ್ಪಾಗಲಾರದು. ಒಂದು ಕಡೆ ಮೂಲ ಸೌಲಭ್ಯ ಮತ್ತು ತಮ್ಮ ಹಕ್ಕುಗಳಿಗಾಗಿ ಪಾಳೆಯಗಾರ ಪ್ರತಿಭಟನೆ ನಡೆಸಿದರೆ, ಮತ್ತೊಂದು ಬಗೆಯಲ್ಲಿ ದಾಸ್ಯದ ಸಂಕೋಲೆಯನ್ನು ಕಿತ್ತೊಗೆದು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆದುದರಿಂದ ಈ ರೀತಿಯ ಪ್ರತಿಭಟನೆ ಮತ್ತು ದಂಗೆಗಳನ್ನು ಕೇವಲ ಏಕಪಕಿ್ಷಯವಾಗಿ ನೋಡದೆ ಭಿನ್ನ ಮಾದರಿಯಲ್ಲಿ ವಿಶ್ಲೇಷಿಸಲು ಸಾಧ್ಯವಿದೆ. ಇದರ ಜೊತೆಗೆ ರಾಜ್ಯಾದ್ಯಾಂತ ಪಾಳೆಯಗಾರರ ಪ್ರತಿಭಟನೆಗಳ ಜೊತೆಗೆ ಇತರೆ ಸಮುದಾಯಗಳು ಸಹ ಭಾಗವಹಿಸಿದ್ದವು ಎಂಬುದನ್ನು ಅವಲೋಕಿಸಬೇಕು. ಕೊಪ್ಪಳದ ವೀರಪ್ಪನ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಕಿತ್ತೂರಿನ ದಂಗೆ, ಬಾದಾಮಿ ಕ್ರಾಂತಿ ಹಾಗೂ ಇತರೆ ಸಂಘಟನೆಗಳು ಭಾಗವಹಿಸಿದ್ದವು.

ಬಳ್ಳಾರಿಯಲ್ಲಿ ಆಡಳಿತಾಧಿಕಾರಿಯಾಗಿದ್ದು ಫ್ರಾನ್ಸಿಸ್ ಎಂಬುವವನು ಈ ಭಾಗದ ಬೇಡರ ಪರಾಕ್ರಮವನ್ನು ಕುರಿತು ‘ಧೈರ್ಯವಂತರು, ಪರಾಕ್ರಮಿಗಳು, ಬಲಶಾಲಿಗಳು, ದೃಢಕಾರರು, ಬಹುಸಂಖ್ಯೆಯುಳ್ಳವರು ಎಂದು ಹೇಳಿದ್ದಾನೆ. ಬಹುಶಃ ಬ್ರಿಟಿಷ್ ಸೈನ್ಯಕ್ಕೆ ಪ್ರಬಲ ಪೈಪೋಟಿ ನೀಡಬಲ್ಲ ಸಮುದಾಯವೆಂದರೆ ಬೇಡರು ಎಂಬುದನ್ನು ಬ್ರಿಟಿಷರು ಅರಿತ್ತಿದ್ದರು. ಆದುದರಿಂದ ದೂರಲೋಚನೆಯುಳ್ಳವರಾರು ಇವರು ಸಹಜವಾಗಿ ಬೇಡರ ವಿಶ್ವಾಸವನ್ನು ಗಳಿಸಲು ಮುಂದಾದರು. ಬೇಡರ ಪಡೆಯನ್ನು ಎದುರುಹಾಕಿಕೊಂಡರೆ ತಮಗೆ ಅನ್ಯಾಯ ಎಂಬುದನ್ನು ಮನಗಂಡಿದ್ದರು. ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಎರಡು ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಕ್ರಿ.ಶ. ೧೮೦೦ ರಿಂದ ೧೮೫೦ರ ಸುಮಾರಿಗೆ ಅನೇಕ ದಂಗೆಗಳು ಯುದ್ಧೋಪಕರಣಗಳು ಹಾಗೂ ಭಾರತೀಯರ ರಾಜಕೀಯ ಅನೈತಿಕತೆ.

ಹಲಗಲಿ ಬೇಡರ ದಂಗೆ

೧೮೫೭ರ ದಂಗೆಯು ಬ್ರಿಟಿಷರ ವಿರುದ್ಧ ಸಂಚಲನ ಮೂಡಿಸಿತು. ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಮರ ಎಂದು ಕರೆಯಲಾಗಿದೆ. ರಾಷ್ಟ್ರಾದ್ಯಂತ ವ್ಯಾಪಕ ಹೋರಾಟ ನಡೆಯಿತು. ಇದಕ್ಕೆ ಕರ್ನಾಟಕವು ಹೊರತಾಗಿರಲಿಲ್ಲ. ಬ್ರಿಟಿಷರ ಆಡಳಿತ ನೀತಿಯನ್ನು ವಿರೋಧಿಸಿದವರಲ್ಲಿ ಹಲಗಲಿಯ ಬೇಡರು ಮೊದಲಿಗರು. ಉತ್ತರ ಕರ್ನಾಟಕದ ಈ ಸಮುದಾಯದವರು ತಮ್ಮ ಧೈರ್ಯ, ಸಾಮರ್ಥ್ಯ ಮತ್ತು ನಂಬಿಕೆಗೆ ಹೆಸರಾಗಿದ್ದರು. ತಮ್ಮ ಹಕ್ಕು ಬಾಧ್ಯತೆಗಳನ್ನು ಕಾಪಾಡಿಕೊಳ್ಳುವಲ್ಲಿ ಆಸ್ಥೆವಹಿಸಿದ್ದರು ಇವರು ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಎಂತಹ ಪ್ರಬಲ ಶರ್ತೃಗಳಾದರೂ ಪ್ರತಿಭಟಸದೇ ಇರುತ್ತಿರಲಿಲ್ಲ.  ಬಹು ಪಾಲು ಬೇಡರು ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯಿಂದ ಗುರುತಿಸಿಕೊಂಡಿದ್ದಾರೆ. ಇಂದಿಗೂ ಕೂಡ ಹಬ್ಬ-ಹರಿದಿನಗಳಲ್ಲಿ ಆಯುಧಗಳನ್ನು ಪೂಜಿಸುವ ಕ್ರಮವನ್ನು ಆಚರಿಸಿ ಕೊಂಡು ಬರುತ್ತಿದ್ದಾರೆ. ಹಿರಿಯರ ಹಬ್ಬವನ್ನು ಮಾಡುವ ಸಂದರ್ಭದಲ್ಲಿ ಆಯುಧಗಳಿಗೆ ವಿಶೇಷ ಪೂಜೆಸಲ್ಲುತ್ತದೆ. ೧೮೫೭ ರ ದಂಗೆಯಲ್ಲಿ ಹೋರಾಡಿದವರ ಪೈಕಿ  ಹಲಗಲಿಯ ಬೇಡರು ಅಪ್ರತಿಮ ಸಾಧನೆಗೈದರು. ಹೋರಾಟಗಳಲ್ಲಿ ಪುರುಷ ಪ್ರಧಾನ ಸಂಗತಿಗಳೆ ಮುಖ್ಯ ಸ್ಥಾನ ಪಡೆಯುತ್ತವೆ ಎಂದು ಭಾವಿಸುವಂತಿಲ್ಲ. ಬೇಡ ಮಹಿಳೆಯರ ಪಾತ್ರ ಕೂಡ ಅಷ್ಟೇ ಮುಖ್ಯ. ಆದರೆ ಚರಿತ್ರೆಯ ಲಿಖಿತ ದಾಖಲೆಗಳಲ್ಲಿ ಈ ಮಹಿಳೆಯರ ವಿವರಗಳು ಲಭ್ಯವಿಲ್ಲ. ಈ ದಂಗೆಯಲ್ಲಿ ಕ್ರಿಯಾತ್ಮಕ ಹೋರಾಟ, ತೋರಿಸಿದ ಶೌರ್ಯ-ಧೈರ್ಯ, ಪರಾಕ್ರಮಗಳನ್ನು ‘ರಾಮಿ’ ಎಂಬ ಬೇಡ ಸಮುದಾಯದ ಮಹಿಳೆಯ ಸಾಧನೆಯನ್ನು ಕುರಿತು ಲಾವಣಿ ಮನ ಮುಟ್ಟುವಂತೆ ಹೇಳುತ್ತದೆ. ವಸಾಹತುಶಾಹಿ ಸಂದರ್ಭದಲ್ಲಿ ಹುಟ್ಟಿಕೊಂಡ ಈ ಸಾಹಿತ್ಯವನ್ನು ಅವಲೋಕಿಸಿದಾಗ ಮತ್ತಷ್ಟು ವಿವರಗಳು ದೊರಕುವ ಸಂಭವವಿದೆ. ಆದರೆ ಲಿಖಿತ ಸಾಹಿತ್ಯ ಇದರ ಬಗ್ಗೆ ಮೌನವಹಿಸುತ್ತದೆ. ರಾಷ್ಟ್ರೀಯ ಹೋರಾಟವನ್ನು ಕುರಿತು ಬ್ರಿಟಿಷ್ ದಾಖಲೆಗಳು ಏನು ಹೇಳುತ್ತವೆ, ರಾಷ್ಟ್ರೀಯ ಚಳುವಳಿಯ ಸಂದರ್ಭದಲ್ಲಿ ರಚಿತಗೊಂಡ ರಂಜನೀಯ ಚರಿತ್ರೆ ಹೇಳುವುದೇನು? ಹಾಗೆಯೇ ಕೆಳಸಮುದಾಯಗಳ ಭಾಗವಹಿಸುವಿಕೆಯಲ್ಲಿ ಲಾವಣಿ ಸಾಹಿತ್ಯ ಹೇಗೆ ಬಿಚ್ಚಿಕೊಳ್ಳುತ್ತದೆ ಎಂಬುದನ್ನು ವಿಶ್ಲೇಷಣಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಿದಾಗ ಮತ್ತಷ್ಟು ವಿವರಗಳು ದೊರಕುವ ಸಂಭವವಿದೆ. ಆದುದರಿಂದ ಏಷ್ಟೋ ಪ್ರಮುಖ ದಾಖಲೆಗಳು ಜನತೆಯ ಮನೆಯಿಂದ ಹೊರಬಂದಿಲ್ಲ. ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಬ್ರಿಟಿಷರು ಬೇಡ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲ ವಾದುದ್ದು ಹೇಗೆ ಎಂಬ ವಿಷಯವನ್ನು ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ ಭವಿಷ್ಯತ್‌ನ್ನು ಕಟ್ಟುವ ಕಡೆಗೆ ಯೋಚಿಸಬೇಕಾಗಿದೆ. ಈ ಸಮುದಾಯಗಳಿಗೆ ದೂರಾ ಲೋಚನೆಯ ಬಗ್ಗೆ ನಿರ್ದಿಷ್ಟ ಮಾರ್ಗದರ್ಶನ ಅವಶ್ಯಕತೆಯಿದೆ ಎಂದರೆ ತಪ್ಪಾಗಲಾರದು.

ಆರ್ಥಿಕವಾಗಿ ದುರ್ಬಲರು ಆಯುಧಗಳಲ್ಲಿ ಶ್ರೀಮಂತರು

 ರಾಜಕೀಯ ಮತ್ತು ಆರ್ಥಿಕ ಬೆಂಬಲವಿಲ್ಲದ ಈ ಸಮುದಾಯ ಇಂದಿಗೂ ಕೂಡ ಬಡತನ ಬವಣೆಯಲ್ಲಿ ಜೀವನ ಸಾಗಿಸುತ್ತಿದೆ. ಆದರೆ ಸಂಪದ್ಬರಿತ ಸಂಸ್ಕೃತಿಯನ್ನು ಒಳ ಗೊಂಡಿರುವುದರ ಜೊತೆಗೆ ಅದನ್ನು ಮುಂದುವರಿಸಿಕೊಂಡು ಬರುತ್ತದೆ. ಚರಿತ್ರೆಯ ಪುಟ ಗಳನ್ನು ಅವಲೋಕಿಸಿದಾಗ ಕರ್ನಾಟಕದ ವಿವಿಧ ರಾಜವಂಶಗಳ ಆಳ್ವಿಕೆಯ ಸಂದರ್ಭದಲ್ಲಿ ಬೇಡರ ಅಪ್ರತಿಮ ಸಾಧನೆ ಮತ್ತು ಸಂಸ್ಕೃತಿಯಿಂದ ಅವರ ಮಹತ್ವವನ್ನು ಅರಿಯಬಹು ದಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ‘ಆಯುಧ ಕಾಯಿದೆ’ ಯನ್ನು ಜಾರಿಗೆ ತಂದಿತು. ಅದರ ಪ್ರಕಾರ ಬೇಡ ಜನಾಂಗದವರು ಆಯುಧಗಳನ್ನು ಅಪೇಕ್ಷಿಸುವವರು ಲೈಸೆನ್ಸ್ ಪಡೆಯಬೇಕಾಗಿತ್ತು. ಇದರಿಂದ ಈ ಸಮುದಾಯದಿಂದ ವ್ಯಾಪಕ ಪ್ರತಿಭಟನೆ ಎಂದುರಾಯಿತು. ಬ್ರಿಟಿಷರ ನಿಶ್ಯಸ್ತ್ರಿಕರಣ ಕಾಯಿದೆಯನ್ನು ವಿರೋಧಿಸಿ ಬಾಲಾಜಿ ನಿಂಬಾಳ್ಳರ್ ಮತ್ತು ಬಾಳ್ಯ ಎಂಬುವವರ ನೇತೃತ್ವದಲ್ಲಿ ದಂಗೆ ಎದ್ದರು. ಆದುರಿಂದ ಇದನ್ನು ಹಲಗಲಿಯ ಬೇಡರ ದಂಗೆ ಎಂದು ಕರೆಯಲಾಗಿದೆ. ಮೂಲತಃ ಇವರು ಬೇಟೆ ಮತ್ತು ಸೈನಿಕ ವೃತ್ತಿಯನ್ನು ಅವಲಂಬಿಸಿದ್ದರು. ೧೮೫೭ರ ನವಂಬರ್ ೨೧ ರಂದು ಲೆಪ್ಟಿನೆಂಟ್ ಕರ್ನಲ್ ಸೆಟನ್‌ಕರ್ ಸೈನ್ಯದೊಂದಿಗೆ ಹಲಗಲಿಗೆ ಮುತ್ತಿಗೆ ಹಾಕಿದನು. ‘ನಿಮ್ಮ ಶಸ್ತ್ರಾಸ್ತ್ರ ಗಳನ್ನೆಲ್ಲಾ ಕೆಳಗಿಡಿ, ಇಲ್ಲದೆ ಶರಣಾಗತರಾಗಿ ಎಂಬುದಾಗಿ ಬೇಡರಿಗೆ ಹೇಳಿದ. ಇದನ್ನು ತಿರಸ್ಕಸಿದ ಬೇಡರು ಹೋರಾಟಕ್ಕೆ ಮುಂದಾದರು. ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಕ್ಕಿಂತ ಮರಣವನ್ನುಪ್ಪುವುದೇ ಲೇಸೆಂದು ದಂಗೆಗೆ ಮುಂದಾದರು ಅಂದರೆ ಪರಂಪರಾನುಗತವಾಗಿ ಹೊಂದಿದ್ದ ಆಯುಧಗಳನ್ನು ಎಷ್ಟು ಪೂಜ್ಯನಾಯ ಸ್ಥಾನದಿಂದ ನೋಡುತ್ತಿದ್ದರು ಎಂಬು ದನ್ನು ನೋಡುವುದರ ಜೊತೆಗೆ ಬ್ರಿಟಿಷರ ಕುಟಿಲ ನೀತಿಯನ್ನು ನಿರ್ಧರಿಸುವಲ್ಲಿ ವಿಫಲ ರಾದರು. ಕೊನೆಗೆ ಸೆಟನ್‌ಕರನು ಈ ಹಳ್ಳಿಗೆ ಬೆಂಕಿ ಹಚ್ಚಿದನು. ಅನೇಕ ಹೋರಾಟಗಾರರನ್ನು ಕಳೆದುಕೊಳ್ಳುವುದರ ಜೊತೆಗೆ ಕೆಲವರನ್ನು ಗಲ್ಲಿಗೇರಿಸಲಾಯಿತು.

ಈ ಮೇಲಿನ ವಿವರಣೆಯನ್ನು ಗಮನಿಸಿದಾಗ ಬೇಡರಲ್ಲಿಯೇ ಬ್ರಿಟಿಷರ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತೆಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬಹುದಾಗಿದೆ. ಬ್ರಿಟಿಷರನ್ನು ಬೆಂಬಲಿಸಿದ ಬೇಡರು ಅನಿವಾರ್ಯ ಸಂದರ್ಭದಲ್ಲಿ ಹೋರಾಡುವುದರಿಂದ ವಿಫಲತೆಯನ್ನು ಕಾಣಬೇಕಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಆಯುಧ ಕಾಯಿದೆಯಿಂದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಉಗ್ರರೂಪ ತಾಳಿದರು. ಕರ್ನಾಟಕದ ಚರಿತ್ರೆಯಲ್ಲಿ ಬ್ರಿಟಿಷರ ನೀತಿಗಳ ವಿರುದ್ಧ ಹಾಗೂ ಅವರ ಒಡೆದು ಆಳುವ ನೀತಿಯ ವಿರುದ್ಧ ಬಂಡೆದ್ದವರಲ್ಲಿ ಹಲಗಲಿಯ ಬೇಡರ ಪಾತ್ರ ಮಹತ್ವದಾಗಿದೆ.

ಸುರಪುರದ ವೆಂಕಟಪ್ಪ ನಾಯಕ

ಸುರಪುರವನ್ನು ಪ್ರಾರಂಭದಲ್ಲಿ ಶೋರಾಪುರ ಎಂದು ಕರೆಯುತ್ತಿದ್ದರು. ಭೀಮಾ ನದಿ ಯಿಂದ ಕೃಷ್ಣ ನದಿಯವರೆಗೆ ಹಬ್ಬಿದ್ದ ಈ ಪ್ರದೇಶವನ್ನು ಸಗರನಾಡು ಎಂದು ಕರೆಯಲಾ ಗುತ್ತಿತ್ತು. ಇದನ್ನು ಸುರಪುರದ ನಾಯಕ ಅರಸು ಮನೆತನದವರು ಆಳುತ್ತಿದ್ದರು. ಸುರಪುರದ ನಾಲ್ಕನೆ ವೆಂಕಟಪ್ಪನಾಯಕ ೧೮೫೭ರ ದಂಗೆಯಲ್ಲಿ ಭಾಗವಹಿಸಿದ್ದ. ಅದು ಬ್ರಿಟಿಷರ ವಿರುದ್ಧ, ಇದಕ್ಕೂ ಮೊದಲು ಸುರಪುರದ ನಾಯಕರು ಔರಂಗಜೇಬನ ವಿರುದ್ಧ ಹೋರಾಡಿದ್ದರು. ಗುಲ್ಬರ್ಗಾ ಜಿಲ್ಲೆಯಲ್ಲಿರುವ ಈಪ್ರದೇಶ ವಿಜಯನಗರ ಸಾಮ್ರಾಜ್ಯ ಪತನದ ತರುವಾಯ ಬೇಡರ ನಾಡಾಯಿತು. ಸುರಪುರದ ಬೇಡರು ಶೌರ್ಯಪರಾಕ್ರಮಗಳಿಗೆ ಹೇಸರಾಗಿದ್ದು, ಜನತೆ ಸ್ವಾತಂತ್ರ್ಯಾಕ್ಕಾಗಿ ಹಂಬಲಿಸುತ್ತಿದ್ದರು. ಅಂದರೆ ಬ್ರಿಟಿಷರ ಬಿಗಿಹಿಡಿತ ಎಷ್ಟರ ಮಟ್ಟಿಗೆ ಸುರಪುರದ ಮೇಲೆ ಇತ್ತು ಎಂಬುದನ್ನು ಮನಗಾಣಬಹುದು. ವೆಂಕಟಪ್ಪನಾಯಕ ಏಳು ವರ್ಷದವನಿರುವಾಗಲೇ ತಂದೆ ಕೃಷ್ಣಪ್ಪನಾಯಕ ತೀರಿಕೊಂಡ. ಸುರಪುರಕ್ಕೆ ಎರಡು ಕಡೆಗಳಿಂದ ಉಪಟಳವಿತ್ತು; ಬ್ರಿಟಿಷರು ಮತ್ತು ಹೈದರಾಬಾದಿನ ನಿಜಾಮ. ಇಂತಹ ಸಮಯದಲ್ಲಿ ಮೇಡೋಸ್ ಟೇಲರ್ ಸುರಪುರ ಸಂಸ್ಥಾನಕ್ಕೆ ಏಜೆಂಟಾಗಿ ಬರುತ್ತಾನೆ. ಬ್ರಿಟಿಷರು, ನಿಜಾಮರು ಮತ್ತು ಮರಾಠರು ಸುರಪುರವನ್ನು ದುಃಸ್ಥಿತಿಗೆ ತಂದರು. ಆದರೂ ಸಹ ಸುಶಿಕ್ಷತನದ ವೆಂಕಟಪ್ಪನಾಯಕ ಬ್ರಿಟಿಷರ ನೀತಿ ವಿರುದ್ಧ ಅಸಮಾಧಾನಗೊಂಡಿದ್ದ ನಾನಾಸಾಹೇಬ ಮತ್ತು ಸ್ಥಳೀಯ ಜಮೀನುದಾರರೊಡನೆ ಸಂಪರ್ಕ ಕಲ್ಪಿಸಿದ. ಇವನ ಪ್ರತಿನಿಧಿಗಳು ಬ್ರಿಟಿಷ್ ಸೈನ್ಯದ ಸಿಪಾಯಿಗಳನ್ನು ದಂಗೆ ಏಳುವಂತೆ ಪ್ರೇರೇಪಿಸಿದರು. ಈ ಪಿತೂರಿ ಬ್ರಿಟಿಷರಿಗೆ ತಿಳಿದು ಸುರಪುರ ಮತ್ತು ವೆಂಕಟಪ್ಪನಾಯಕನನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ೧೮೫೮ ರಲ್ಲಿ ಸುರಪುರವನ್ನು ಆಕ್ರಮಿಸಿದರೂ ವೆಂಕಟಪ್ಪನಾಯಕ ತಪ್ಪಿಸಿಕೊಂಡನು. ಈ ಮೇಲಿನ ಅಂಶಗಳು ಸುರಪುರದ ವೆಂಕಟಪ್ಪನಾಯಕನಿಗೆ ಮತ್ತು ಬ್ರಿಟಿಷರ ವಿರುದ್ಧ ದಂಗೆ ಆರಂಭಿಸಲು ಕಾರಣಗಳಾದವು.

ತೆರಿಗೆ ವಿವಾದ

ವೆಂಕಟಪ್ಪನಾಯಕ ಬ್ರಿಟಿಷರ ಅಧೀನದಲ್ಲಿದ್ದರೂ, ಅವರಿಗೆ ಹೇರಳವಾಗಿ ಕಪ್ಪ ಕೊಟ್ಟು ಶೋಷಿತನಾದನು. ಇದರ ಪರಿಣಾಮವಾಗಿ ಸುರಪುರದಲ್ಲಿ ಆರ್ಥಿಕವಾಗಿ ಹಲವಾರು ಪರಿಣಾಮಗಳು ಉಂಟಾದವು. ನಿಗದಿತ ಮತ್ತು ನಿರೀಕ್ಷೆಗಿಂತ ಹೆಚ್ಚಿನ ಕ್ಪವನ್ನು ಬ್ರಿಟಿಷರು ಸಂಗ್ರಹಿಸಿದರು. ಆರ್ಥಿಕ ದೃಷ್ಟಿಕೋನದಿಂದ ಇದರ ಕಾರಣ ಮತ್ತು ಪರಿಣಾಮಗಳನ್ನು ಗಮನಿಸಿದಾಗ ತೆರಿಗೆ ಹಣವು ಕೂಡ ಬ್ರಿಟಿಷರ ಕಣ್ಣು ಕುಕ್ಕಿರಲು ಸಾಧ್ಯವಾಗಿದೆ. ಜನ ಸಾಮಾನ್ಯರು ಸಹಜವಾಗಿ ತೆರಿಗೆ ಕೊಟ್ಟು ದುರ್ಬಲರಾದರು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಸುರಪುರ ಬ್ರಿಟಿಷರ ಅಧೀನದಲ್ಲಿ ಒಳಪಡುವುದರ ಜೊತೆಗೆ ಭದ್ರವಾಗಿ ತಳವೂರಿದರು. ಈ ಮೊದಲು ಗ್ರಿಸ್ಲೆಯ ಸ್ಥಾನಕ್ಕೆ ಕ್ಯಾಪಟನ್ ಟೇಲರ್‌ನನ್ನು ಬ್ರಿಟಿಷ್ ಸರಕಾರ ನೇಮಿಸಿತು. ಟೇಲರ್‌ನು ಗ್ರಿಸ್ಲೆಯಿಂದ ಕೆಲವು ಸಲಹೆಸೂಚನೆಗಳನ್ನು ಪಡೆದುಕೊಂಡನು. ಸುರಪುರದ ರಾಜಕೀಯ ಸ್ಥಿತಿ-ಗತಿಗಳ ಬಗ್ಗೆ ತಿಳಿದುಕೊಂಡನು. ಈ ವೇಳೆಗೆ ಸುರಪುರದಲ್ಲಿ ರಾಜದರ್ಬಾರಿ ಗಾಗಿ ಪಿಡ್ಡನಾಯಕ ಮತ್ತು ರಾಣಿಯ ಮಧ್ಯೆ ಕಿತ್ತಾಟ ನಡೆಯುತಿತ್ತು. ಟೇಲರನು ಸುರಪುರ ಸಂಸ್ಥಾನದಿಂದ ಕೆಲವು ಆಡಳಿತಾತ್ಮಕ ಖರ್ಚು ಬಾಬ್ತುಗಳನ್ನು ಪರಿಶೀಲಿಸಲು ಮುಂದಾದನು. ಇದನ್ನು ಸೂಕ್ಷ್ಮವಾಗಿ ರಾಣಿ ವರ್ಗದವರು ಗಮನಿಸುತ್ತಿದ್ದರು. ಇದರ ಜೊತೆಗೆ ಸಂಸ್ಥಾನವು ಈ ಹಿಂದೆ ಯಾವ ಉದ್ದೇಶಗಳಿಗೆ ಎಷ್ಟು ಹಣ ಖರ್ಚುಮಾಡಿದೆ ಎಂಬ ವಿವರವನ್ನು ಟೇಲರ್‌ನಿಗೆ ಕೊಡಬೇಕಾಗಿತ್ತು. ಇದು ಕೂಡ ಪರೋಕ್ಷವಾಗಿ ಸುರಪುರದ ವೆಂಕಟಪ್ಪನಾಯಕ ಬ್ರಿಟಿಷರ ವಿರುದ್ಧ ಸೇಡಿನ ಮನೋಭಾವನೆ ತಳೆಯಲು ಕಾರಣವಾಯಿತು. ಈ ವೇಳೆಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ವಿರುದ್ಧ ಪ್ರಬಲವಾಗಿತ್ತು. ಆರ್ಥಿಕ ಸಂಕಷ್ಟದಿಂದ ಸುರಪುರ ನಲುಗಿ ಹೋಗಿತ್ತು. ಅದನ್ನು ಪುನಃ ಹೇಗಾದರೂ ಮಾಡಿ ಮೊದಲಿನ ಸ್ಥಿತಿಗೆ ತರುವುದು ಹಾಗೂ ಬ್ರಿಟಿಷರ ಹತೋಟಿಯಿಂದ ಸಂಸ್ಥಾನವನ್ನು ಸಂರಕ್ಷಿಸುವುದು ವೆಂಕಟಪ್ಪನಾಯಕನ ಮುಖ್ಯ ಉದ್ದೇಶವಾಗಿತ್ತು.

ಈ ವೇಳೆಗೆ ೧೮೫೭ರ ದಂಗೆಯು ಆರಂಭವಾಯಿತು. ಬ್ರಿಟಿಷರ ಪ್ರಬಲ ಶರ್ತೃವಾದ ನಾಲ್ಕನೆ ವೆಂಕಟಪ್ಪನಾಯಕ, ಬ್ರಿಟಿಷರ ದಬ್ಬಾಳಿಕೆ ಮತ್ತು ನ್ಯಾಯ ಬಾಹಿರ ಕಪ್ಪವನ್ನು ಸಲ್ಲಿಸದೇ ಹೋರಾಟಕ್ಕೆ ಸಿದ್ಧವಾದನು. ಈ ಸಮಯಕ್ಕೆ ಉತ್ತರ ಭಾರತದಲ್ಲಿ ನಾನಾ ಸಾಹೇಬನು ಸಹ ಬ್ರಿಟಿಷರ ವಿರುದ್ಧ ಬಂಡಾಯವೆದ್ದಿದ್ದನು. ಕೂಡಲೇ ಅವನೊಂದಿಗೆ ಸಂಪರ್ಕ ಸಾಧಿಸಿ ಸುರಪುರದ ಜನತೆಯನ್ನು ಸಂಘಟಿಸಿ ದಂಗೆಗೆ ಪ್ರಚೋದನೆ ನೀಡಿದನು. ೧೮೫೮ ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಮಿಂಡ್ ಹ್ಯಾಂನು ಶಸ್ತ್ರಸಜ್ಜಿತ ಸೈನ್ಯದೊಂದಿಗೆ ಸುರಪುರಕ್ಕೆ ಮುತ್ತಿಗೆ ಹಾಕಿ ವೆಂಕಟಪ್ಪನಾಯಕನನ್ನು ಸೆರೆ ಹಿಡಿದನು. ಇದಕ್ಕೆ ಕೆಲವು ದೇಶದ್ರೋಹಿಗಳು ಕೂಡ ನೆರವಾಗಿದ್ದರು. ಈ ಹಿನ್ನೆಲೆಯಲ್ಲಿ ವೆಂಕಟಪ್ಪನಾಯಕನನ್ನು ವಿಚಾರಣೆಗೆ ಗುರಿಪಡಿಸಿ ಮರಣದಂಡನೆ  ವಿಧಿಸಲಾಯಿತು. ಕೊನೆಗೆ ಅವನನ್ನು ಕಾರಾಗೃಹಕ್ಕೆ ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಸುರಪುರವನ್ನು ೧೮೬೧ರಲ್ಲಿ ನಿಜಾಮನಿಗೆ ವಹಿಸಿ ಕೊಡಲಾಯಿತು. ಭಾರತದ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಹಲಗಲಿಯ ಬೇಡರ ದಂಗೆಯ ಜೊತೆಗೆ ಸುರಪುರದ ಹೋರಾಟ ಅವಿಸ್ಮರಣೀಯ. ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದೆ ಸ್ವಾತಂತ್ರ್ಯಕ್ಕಾಗಿ ದಂಗೆಗಳಾದವು.

ಜನಸಾಮಾನ್ಯರ ಪರವಾಗಿ ಹೋರಾಟಕ್ಕಿಳಿದ ಸಿಂಧೂರ ಲಕ್ಷ್ಮಣ

ಜನಸಾಮಾನ್ಯರಿಗೆ ನ್ಯಾಯ ಒದಗಿಸಲೆಂದೇ ಹೋರಾಟಕ್ಕಿಳಿದ ಸಿಂಧೂರ ಲಕ್ಷ್ಮಣ ದಾಖಲಿಸಿದ ಚರಿತ್ರೆಗಿಂತ ಜನಪದದ ಮೌಖಿಕ ಚರಿತ್ರೆಯಲ್ಲಿ ಅಮರನಾಗಿದ್ದಾನೆ. ಬೇಡ ಸಮುದಾಯದಲ್ಲಿ ಹುಟ್ಟಿದ ಇವನು ಪ್ರಾರಂಭದಿಂದಲೂ ದಬ್ಬಾಳಿಕೆ ಮತ್ತು ಪ್ರಭುತ್ವವನ್ನು ವಿರೋಧಿಸುತ್ತಿದ್ದನು. ಅಧಿಕಾರಶಾಹಿಯಿಂದ ಜನತೆ ನರಳುತ್ತಿದ್ದನ್ನು ಮನಗಂಡಿದ್ದನು. ‘‘ಇವನ ದೃಷ್ಟಿಯಲ್ಲಿ ಈ ದೇಶದ ವೈರಿಗಳೆಂದರೆ ಇಬ್ಬರು ಮಾತ್ರ. ಆಂಗ್ಲರು ಮತ್ತು ಜನರನ್ನು ಸುಲಿಗೆ ಮಾಡುತ್ತಿರುವ ಸ್ಥಾನಿಕ ಆಡಳಿತಗಾರರು. ಇವರೀರ್ವರನ್ನು ಮುಗಿಸಿದ ಹೊರತು ಜನಸಾಮಾನ್ಯರಿಗೆ ಮುಕ್ತಿಯಿಲ್ಲ’’ ಎಂದು ಸಾರಿದನು. ಜನಸಾಮಾನ್ಯರನ್ನು ಒಗ್ಗೂಡಿಸಿ ತನ್ನದೇ ಆದ ಒಂದು ಪಡೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ದಂಗೆಗೆ ಸಿದ್ಧನಾದ. ಒಮ್ಮೆ ತಿಗಡಿ ಗ್ರಾಮದಲ್ಲಿ ಪೊಲೀಸರು ಇವನ ಮೇಲೆ ಆಕ್ರಮಣ ಮಾಡಿದರು. ಇವನ ಜೊತೆಗಿದ್ದ ಸಿದ್ದಪ್ಪ ಎಂಬುವವರ ಮುಂಗೈ ಸೀಳಿಹೋಯಿತು. ಪರಿಣಾಮವಾಗಿ ಸಿಂಧೂರ ಲಕ್ಷ್ಮಣ ತನ್ನ ಕಾರ್ಯಾಚರಣೆ ಪ್ರದೇಶವನ್ನು ಬಾಗಕೋಟೆ ಮತ್ತು ಜಮಖಂಡಿಗೆ ವರ್ಗಾ ಯಿಸಿದ. ಈ ಸಮಯದಲ್ಲಿ ವೆಂಕನಗೌಡ ಎಂಬುವವನು ಲಕ್ಷ್ಮಣನ ಸಹಾಯ ಬಂದರೂ ಪಿತೂರಿ ನಡೆಸಿತೊಡಗಿದ. ಈ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದ ಬ್ರಿಟಿಷರು ವೆಂಕನಗೌಡನ ಸಹಾಯದಿಂದ ಸಿಂಧೂರಲಕ್ಷ್ಮಣನನ್ನು ಪತನಗೊಳಿಸಿದರು.

ವೆಂಕನಗೌಡನ ಅನುಯಾಯಿಗಳು, ಸ್ಥಾನಿಕ ಜಮೀನ್‌ದಾರರು ಹಾಗೂ ಬ್ರಿಟಿಷ್ ಅಧಿಕಾರಿಗಳು ಸೇರಿಕೊಂಡು ಲಕ್ಷ್ಮಣನನ್ನು ದೂರಮಾಡಿದರು. ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಾನಿಕ ಆಡಳಿತಗಾರರನ್ನು ನೇರವಾಗಿ ಪ್ರಶ್ನಿ ಸುತ್ತಿದ್ದ. ಆದುದರಿಂದ ೧೯೨೨ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಬ್ರಿಟಿಷರೆ ಜಯಶಾಲಿ ಗಳಾದರು. ಬ್ರಿಟಿಷರ ಬಗ್ಗೆ ಎಷ್ಟು ಶರ್ತೃತ್ವ ಬೆಳೆಸಿಕೊಂಡಿದ್ದ ಎಂಬುದರ ಬಗ್ಗೆ ಜನ ಸಾಮಾನ್ಯರ ಮನದಾಳದಲ್ಲಿರುವ ಈ ಕೆಳಗಿನ ಸಾಲುಗಳೇ ಸಾಕ್ಷಿ.

ಬಂಡೆದ್ದು ನಾವೆಲ್ಲ ಆಂಗ್ಲರ ಹಿಡಿದು
ಕಂಡಲ್ಲಿ ತುಳಿದು ಬರೋಣ/ಬೆನ್ನಟ್ಟಿ
ಬುಡಿನಲ್ಲಿ ಹಾಕಿ ತುಳಿಯೋಣ.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ಕಂಡವರು

ಕ್ರಿ.ಶ. ೧೮೫೭ ರಿಂದ ೧೯೪೭ರವರೆಗಿನ ರಾಷ್ಟ್ರೀಯ ಹೋರಾಟದ ಘಟ್ಟಗಳನ್ನು ನೋಡಿದಾಗ ಅನೇಕ ರಾಷ್ಟ್ರೀಯ ನಾಯಕರು ಹೋರಾಟದ ಪರಿಣಾಮ ಸೆರೆಮನೆ, ಮರಣದಂಡನೆ ಶಿಕ್ಷೆ ಅನುಭವಿಸಿದ್ದಾರೆ. ೨೦ನೇ ಶತಮಾನದ ಪ್ರಥಮಾರ್ಧದಲ್ಲಿ ಕರ್ನಾಟಕದ ವಿವಿಧ ಪ್ರಾಂತ್ಯಗಳಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯನ್ನು ಭಾಗವಹಿಸಿ ಸೆರೆಮನೆ ಸೇರಿದರು. ೧೯೪೨ರಲ್ಲಿ ಭಾರತವು ಒಂದು ಘೋಷಣೆಯನ್ನು ಹೊರಡಿಸಿತು. ಕ್ವಿಟ್ ಇಂಡಿಯಾ ಅಥವಾ ಭಾರತ ಬಿಟ್ಟು ತೋಲಗಿ ಚಳುವಳಿಯಲ್ಲಿ ಪಿ.ಎಸ್. ಸಣ್ಣಪ್ಪನಾಯಕ ಅವರು ಸೂರ್ಯನಾರಾಯಣರಾವ್ ಅವರ ಮಾರ್ಗದರ್ಶನದಲ್ಲಿ ಹೋರಾಟಕ್ಕಿಳಿದು ಸೆರೆಮನೆ ಸೇರಿದರು. ಅದೇ ರೀತಿಯಾಗಿ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದಾಗಿತ್ತು. ಅದರಲ್ಲಿಯೂ ಬೀದಿ ಕಾರ್ಮಿಕರಾದ ನಾಗನಾಯಕರು ಗುಂಡ್ಲು ಪೇಟೆ, ನಂಜನಗೂಡುಗಳಲ್ಲಿ ಪೊಲೀಸರು ಇವರನ್ನು ಸೆರೆಮನೆಗೆ ತಳ್ಳಿದರು. ಅದೇ ರೀತಿಯಾಗಿ ಬೇದೂರಿನಿಂದ ದೊಡ್ಡನಾಯ್ಕ, ಗುಂಡ್ಲುಪೇಟೆಯ ಮಾದನಾಯ್ಕ, ಪುಟ್ಟ ವೀರನಾಯಕ, ರಂಗನಾಯಕ ಮತ್ತು ಹೊಸೂರಿನ ಕಾಳನಾಯಕ ಮೈಸೂರು ಚಲೊ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಕಂಡರು. ಪ್ರತ್ಯಕ್ಷವಾಗಿ ಮತ್ತು ಪ್ರಾಣವನ್ನೆ ಬಲಿದಾನ ಮಾಡಿದರು.

ಬಹುಪಾಲು ಕೆಳಸಮುದಾಯಗಳು ಒಂದು ನಿರ್ದಿಷ್ಟ ಗುರಿಯಿಲ್ಲದೆ ಪರಿತಪಿಸಿದಂತಾ ಯಿತು. ಇವರಿಗೆ ಮುಖ್ಯವಾಗಿ ಎರಡು ರೀತಿಯ ಸಮಸ್ಯೆಗಳು ಕಾಡುತ್ತಿದ್ದವು. ಒಂದು; ಬ್ರಿಟಿಷರ ಪರಮಾಧಿಕಾರವನ್ನು ಧಿಕ್ಕರಿಸುವುದು ಎರಡು; ಸ್ಥಳೀಯ ಆಡಳಿತಗಾರರ ಕಪಿಮುಷ್ಠಿ ಯಿಂದ ಮುಕ್ತವಾಗುವುದು. ಆದುದರಿಂದ ಚಳುವಳಿಯ ಸಂದರ್ಭದಲ್ಲಿ ರೈತರ ದಂಗೆಗಳು, ಬುಡಕಟ್ಟು ದಂಗೆಗಳು, ನಾಗರಿಕ ಪ್ರತಿಭಟನೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಕೈಗೂಡಿಸಿದವು. ಅದೇ ರೀತಿಯಾಗಿ ದಲಿತ ವರ್ಗದವರು ಸಹ ಮೇಲ್ಜಾತಿಗಳ ಸೇವೆಯಿಂದ ಮುಕ್ತವಾಗಿರಲಿಲ್ಲ. ಇನ್ನು ಸಂಪ್ರದಾಯ ವೃತ್ತಿಗಳಿಗೆ ಅಂಟಿಕೊಂಡಿದ್ದರಿಂದ ರಾಷ್ಟ್ರೀಯ ಚಳವಳಿ ಇವರನ್ನು ಹೆಚ್ಚು ಆಕರ್ಷಸಲಿಲ್ಲವೆಂದೆ ಹೇಳಬಹುದು. ಬ್ರಿಟಿಷ್ ಆಡಳಿತಗಾರರು ಜಾರಿಗೆ ತಂದ ಕೆಲವು ನೀತಿಗಳು ಭಾರತಕ್ಕೆ ಮಾರಕವಾಗಿದ್ದವು. ಈ ನೀತಿಗಳಿಂದ ದಕ್ಷಿಣ ಭಾರತವು ಹೊರತಾಗಿರಲಿಲ್ಲ. ಬೇಡಸಮುದಾಯವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಛಾಪು ಮೂಡಿಸಿದ್ದು, ಶ್ರೀಮಂತ ಸಂಸ್ಕೃತಿಗೆ ಹೆಸರಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬ್ರಿಟಿಷರ ವಿರುದ್ಧ ಜಯ ದೊರಕದಿದ್ದರೂ ಪ್ರಬಲ ಪೈಪೋಟಿ ನೀಡಿದ್ದು ಸತ್ಯ. ಕರ್ನಾಟಕವು ಒಂದು ರಾಜ್ಯವಾಗಿ ಭೌಗೋಳಿಕ ರೂಪದಲ್ಲಿ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು. ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಪ್ರಾಂತ್ಯ ಮತ್ತು ಕೊಡಗು. ವಿವಿಧ ಪಾಳೆಯಪಟ್ಟುಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಬೇಡರು ತಮ್ಮನ್ನು ಗುರುತಿಸಿಕೊಂಡಿದ್ದು ಹಲಗಲಿಯ ಬೇಡರ ದಂಗೆಯ ಮೂಲಕ. ಇದಕ್ಕಿಂತ ಪೂರ್ವದಲ್ಲಿ ತರೀಕೆರೆಯ ಪಾಳೆಯಗಾರರು ಔರಂಗಜೇಬನ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ್ದನ್ನು ಸ್ಮರಿಸಬಹುದು. ಬ್ರಿಟಿಷರು ತಮ್ಮ ಕುಟಿಲ ನೀತಿಗಳಿಂದ ಸ್ಥಾನಿಕ ರಾಜರು ಮೂಲ ಉದ್ದೇಶಗಳತ್ತ ಕೇಂದ್ರಿಕರಿಸದಂತೆ ನೋಡಿಕೊಂಡರು. ಪರಿಣಾಮ ವಾಗಿ ಹಲವು ದಂಗೆಗಳು ಆರ್ಥಿಕ ಹಿನ್ನೆಲೆಯಿಂದ ನಡೆದವು. ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಬೇಡರ ದಂಗೆಗಳು ಇತರ ಸ್ಥಾನಿಕ ಅರಸರಿಗೆ ಪ್ರೇರಣೆ ಯಾಗಿದ್ದವು. ಸಾಮಾಜಿಕವಾಗಿ ಶೋಷಿತರಾದರೂ ಸಾಂಸ್ಕೃತಿಕವಾಗಿ ಶ್ರೀಮಂತರು. ಸ್ವಾಭಿಮಾನಿಗಳಾದ ಇವರು ಬ್ರಿಟಿಷರು ಜಾರಿಗೆ ತರುತ್ತಿದ್ದ ಮಾರಕ ನೀತಿಗಳನ್ನು ನೇರವಾಗಿ ಪ್ರಶ್ನಿಸುತ್ತಿದ್ದರು. ಇದು ಬೇಡರನ್ನು ಹತ್ತಿಕ್ಕುವಂತೆ ಬ್ರಿಟಿಷರಿಗೆ ಕಾರಣವಾಯಿತು. ಇದರ ಜೊತೆಗೆ ಬೇಡರ ಸಂಸ್ಥಾನಗಳಲ್ಲಿ  ಇಂಗ್ಲಿಷರು ಅನಾವಶ್ಯಕ ಹಸ್ತಕ್ಷೇಪ ಮಾಡುತ್ತಿದ್ದರು. ತರೀಕೆರೆ, ಬಳ್ಳಾರಿ ಪಾಳೆಯಗಾರರು, ಸುರಪುರದ ಬೇಡ ಅರಸರು, ಹಲಗಲಿಯ ಬೇಡರು, ಸ್ವಾತಂತ್ರ್ಯ ಹೋರಾಟ ಅಂತಿಮ ಘಟ್ಟದಲ್ಲಿ ಅನೇಕ ಬೇಡ ಸಮುದಾಯದ ಹೋರಾಟ ಗಾರರು ರಾಷ್ಟ್ರಸೇವೆಯಲ್ಲಿ ಭಾಗವಹಿಸಿ ಸ್ಮರಣೀಯರಾಗಿದ್ದಾರೆ. ಇಲ್ಲಿ ಆಕರಗಳನ್ನು ಮತ್ತಷ್ಟು ವಿಶ್ಲೇಷಣೆಗೆ ಒಳಪಡಿಸಿದಾಗ ಹೊಸ ವಿಷಯಗಳು ಗೋಚರವಾಗುವ ಸಂಭವವಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಚಿತವಾದ ಬರಹಗಳು ಚರಿತ್ರೆಕಾರರಿಗೆ ಇನ್ನು ಸ್ಪಷ್ಟವಾಗಿ ಕೈಸೇರಿಲ್ಲ. ಆದುರಿಂದ ಈ ಅವಧಿಯ ಚರಿತ್ರೆಯನ್ನು ಕುರಿತು ಚರ್ಚಿಸುವು ದೆಂದರೆ ತುಸು ಕಷ್ಟಸಾಧ್ಯ. ಲಭ್ಯವಿರುವ ಆಕರಗಳನ್ನೆ ಆಧಾರವಾಗಿಟ್ಟುಕೊಂಡು ಚರ್ಚಿಸಲು ಪ್ರಯತ್ನಿಸಲಾಗಿದೆ. 

ಪರಾಮರ್ಶನ ಗ್ರಂಥಗಳು

೧. ಶ್ರೀನಿವಾಸಮೂರ್ತಿ ಎಚ್.ವಿ. ಮತ್ತು ರಾಮಕೃಷ್ಣನ್ ಆರ್, ಸಮಗ್ರ ಕರ್ನಾಟಕ  ಚರಿತ್ರೆ, ಓರಿಯಂಟ್ ಲಾಂಗ್‌ಮಾನ್, ಬೆಂಗಳೂರು, ೧೯೯೫

೨. ಚಂದ್ರಶೇಖರ್ ಎಸ್ (ಸಂ), ಚರಿತ್ರೆ ಸಂಪುಟ -೭, ಪ್ರಸಾರಾಂಗ, ಕನ್ನಡ  ವಿಶ್ವವಿದ್ಯಾಲಯ, ಹಂಪಿ ೧೯೯೭

೩. ಸೂರ್ಯನಾಥ ಯು. ಕಾಮತ್ (ಸಂ),ಕರ್ನಾಟಕ ಗ್ಯಾಜೆಟಿಯರ್ ಭಾಗ -೩, ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಣೆ, ಬೆಂಗಳೂರು, ೧೯೮೪

೪. ನರಸಿಂಹಮೂರ್ತಿ (ಅನು ಮತ್ತು ಸಂ)ಸ್ವಾತಂತ್ರ್ಯ ಸಂಗ್ರಾಮ, ಸಂಪುಟ -೨೩, ಭಾರತೀಯ ವಿದ್ಯಾಭವನ ಬೆಂಗಳೂರು,೧೯೯೮

೫. ಕಪಟರಾಳ ಕೃಷ್ಣರಾಯ, ಸುರಪುರ ಸಂಸ್ಥಾನ ಇತಿಹಾಸ, ಪುಸ್ತಕ ಶಕ್ತೆ ಪ್ರಕಾಶನ, ಬೆಂಗಳೂರು ೨೦೦೫

೬. ವಿರೂಪಾಕ್ಷಿ ಪೂಜಾರಹಳ್ಳಿ (ಸಂ), ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬

೭. Bipan chandra, Amales Tripathi, Braun De, Freedom Struggle, National Book Trust, New Delhi, ೨೦೦೫