ಭಾರತದಲ್ಲಿ ಪರಕಿಯರನ್ನು ಹೊರದೂಡುವ ದೇಶಿಯರ ಪ್ರಯತ್ನ ಮಹತ್ವ ಘಟನೆಯಾಗಿದೆ. ಕರ್ನಾಟಕದಲ್ಲಿಯೂ ಅದೊಂದು ರೀತಿಯಲ್ಲಿ ವಿಶೇಷ ಘಟನೆಯಾಗಿ ಸಂಭವಿಸಿದ್ದು ಸ್ಮರಣೀಯ. ಈ ಪೈಕಿ ತರೀಕೆರೆ ಪಾಳೆಯಗಾರರು ಹೊರತಲ್ಲ. ಸರ್ಜಾರಂಗಪ್ಪ ನಾಯಕ ಮತ್ತು ಅವನ ಮಗ ಸರ್ಜಾಹನುಮಪ್ಪನಾಯಕರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ. ಸರ್ಜಪ್ಪನಾಯಕನನ್ನು ಕುರಿತು ಕರ್ನಾಟಕದ ಚರಿತ್ರೆಯಲ್ಲಿ ನಿಖರವಾಗಿ ಚಿತ್ರಿಸಿಲ್ಲ. ಅವನ ಹುಟ್ಟು, ಬಾಲ್ಯ, ಶಿಕ್ಷಣ, ಯೌವನ, ಅವಸಾನ ಹೀಗೆ ಅವನ ಜೀವನದ ವಿವಿಧ ಮುಖಗಳನ್ನು ಬಿಂಬಿಸುವಲ್ಲಿ ಚರಿತ್ರೆಕಾರರು ವಿಫಲರಾಗಿ ರುವುದು ಸಹಜ. ಕಾರಣ ಈ ಕಾಲಘಟ್ಟದ ಚರಿತ್ರೆಯ ಘಟನೆಗಳು ಇತಿಹಾಸದಲ್ಲಿ ದಾಖಲಾಗದೆ, ಜನರ ಬಾಯಲ್ಲಿ ನರ್ತಿಸುವುದರಿಂದ ಚರಿತ್ರೆಯ ಘಟನೆಯೊಂದು ನಾನಾ ಬಗೆಯಾಗಿ ಜೀವಂತಿಕೆ ಪಡೆದುಕೊಂಡಿದೆ. ಜನಪದ ಕಥೆ, ಲಾವಣಿ, ಕಥನ ಗೀತೆ, ಜನಪದ ಗೀತೆಗಳಲ್ಲಿ ವರ್ಣಿತವಾಗಿರುವ ಸಂಗತಿಗಳ ಮೂಲಕ ಚರಿತ್ರೆಯನ್ನು ಕಟ್ಟಿಕೊಡುವ ಹೊಸ ಆಯಾಮವಿದೆ.

ಸರ್ಜಾಹನುಮಪ್ಪನಾಯಕನ ತಂದೆ ಸರ್ಜಾರಂಗಪ್ಪನಾಯಕ (೧೮೩೧-೩೭) ಮಡಿದ ತರುವಾಯ, ಸರ್ಜಾಹನುಮಪ್ಪನಾಯಕನನ್ನು ಬೆಂಗಳೂರಿಗೆ ಕರೆದೊಯ್ಯುತ್ತಾರೆ. ಕ್ರಿ.ಶ. ೧೮೩೪ರಲ್ಲಿ ಗುಟ್ಟಹಳ್ಳಿ ಅರಮನೆ ಪರಿಸರದ ವನವಿಹಾರದಲ್ಲಿ ಈತನಿಗೆ ಮೂರು ಬಾರಿ ಗಲ್ಲಿಗೇರಿಸಿದರು. ಪ್ರಾಣ ಹೋಗಲಿಲ್ಲವಾದ ಕಾರಣ ಬ್ರಿಟಿಷರು ಪ್ರಾಣ ದಾನ ನೀಡಿದ್ದನ್ನು ವಿರೋಧಿಸಿ ತನ್ನ ಕೈಯಿಂದಲೇ ನೇಣು ಹಾಕಿಕೊಂಡು ಪ್ರಾಣ ಬಿಡುತ್ತಾನೆ. ಹೀಗೆ ಹುತಾತ್ಮ ನಾಗುವುದು ಸರ್ಜಾಹನುಮಪ್ಪನಾಯಕನ ವಾಸ್ತವ ಘಟನೆಯೆಂದು ಒತ್ತಿಹೇಳುವಂತಿಲ್ಲ. ಚಿಕ್ಕಮಗಳೂರು ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ ಸರ್ಜಪ್ಪನಾಯಕನ ಸಾವಿನ ಬಗ್ಗೆ ಹೀಗೆ ತಿಳಿಸಲಾಗಿದೆ. In october ೧೮೩೧, the British took over the government of mysore. They issued a proclamation severely warning the rebels against their continued operations. Then, while some Insurgents surrendered and others carried on their defiant activities for some time more up to ೧೮೩೩ AD. Sarjappa Nayaka of the family of the old Tarikere chiefs, who tried to continue the fight, was captured about the same time in Kanara which had been annexed by the British (ಪು. ೫೫) ಎಂದು ದಾಖಲಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪರಿಸರದಲ್ಲಿ ಕಲದುರ್ಗ ಮತ್ತು ಕಾಮನದುರ್ಗ ಗಳಲ್ಲಿ ಕೋಟೆಗಳಿವೆ. ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ್ದು, ನಗರ ದಂಗೆಯಲ್ಲಿ ಬೂದಿ ಬಸಪ್ಪನಾಯಕನೊಂದಿಗೆ ಸರ್ಜಪ್ಪನಾಯಕ (೧೮೩೩) ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಾರೆ. ಕೆಲವು ದಾಖಲೆಗಳಲ್ಲಿ ೧೮೩೧ ಎಂದು ಉಲ್ಲೇಖವಾಗಿದೆ. ತರೀಕೆರೆ ಪಾಳೆಯಗಾರರು ಮೂಲತಃ ಬೇಡ ಬುಡಕಟ್ಟಿಗೆ ಸೇರಿದ್ದು, ವಾಲ್ಮೀಕಿ, ವ್ಯಾಧ, ನಾಯಕ, ಪುಳಿಂದ, ಕಿರಾತ, ಶಬರ ಎಂದು ಕರೆಸಿಕೊಂಡ ಯೋಧ ಹಾಗೂ ಸೈನಿಕ ವೃತ್ತಿಯ ಸಮುದಾಯ ವಾಗಿದೆ. ಮೊದಲಿನಿಂದಲೂ ಇವರು ಹೋರಾಡುತ್ತಲೇ ಬ್ರಿಟಿಷರನ್ನು ಹೊರದೂಡಲು ಸತತ ಪ್ರಯತ್ನ ನಡೆಸಿದ್ದಾರೆ.

ಜನಪದರು ಕಟ್ಟಿಕೊಂಡಿರುವ ಕಥನ ಕಾವ್ಯ(ಖಂಡಕಾವ್ಯ)ದಲ್ಲಿ ಚಾರಿತ್ರಿಕ ಪುರುಷನಾದ ಸರ್ಜಪ್ಪನಾಯಕ ಹಾರುವರ ನಿಂಗಮ್ಮ(ಬ್ರಾಹ್ಮಣ)ನನ್ನು ಉಪಪತ್ನಿಯಾಗಿಟ್ಟು ಕೊಂಡಿದ್ದ ರಿಂದ, ನಿಂಗಮ್ಮನ ಅಣ್ಣ ವೆಂಕಪರಾಯ ಹಾಗೂ ಗೋವಿಂದರಾಯರು ಇವನ ಸಾವಿಗೆ ಕುತಂತ್ರ ನಡೆಸುತ್ತಾರೆ. ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿರುವ ಬೇಡ ನಾಯಕರು ಸರ್ಜಪ್ಪನಾಯಕನ ಕಥನ ಕಾವ್ಯವನ್ನು ಕರುಣಾಜನಕವಾಗಿ ಹಾಡುತ್ತಾರೆ. ಇಲ್ಲಿ ಬೇಡರ ಮತ್ತು ಬ್ರಾಹ್ಮಣರ ನಡುವೆ ಸಾಮಾಜಿಕ ಸಂಘರ್ಷವನ್ನು ಕಾಣುತ್ತೇವೆ. ಏಕಕಾಲದಲ್ಲಿ ಸರ್ಜಪ್ಪನಾಯಕ ಬ್ರಾಹ್ಮಣರ ಮತ್ತು ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು ದೊಡ್ಡ ಸಾಹಸವಾಗಿದೆ. ಇಲ್ಲಿ ವಿವಿಧ ವೃತ್ತಿ, ಆಯಗಾರರು, ವಿವಿಧ ಜಾತಿಯವರು ಈ ಪಾಳೆಯ ಪಟ್ಟಿನಲ್ಲಿ ಹೊಂದಿದ್ದ ಪಾತ್ರವನ್ನು ಇಲ್ಲಿ ಬೆಳಕಿಗೆ ತರುವುದು  ಅಗತ್ಯ. ಸರ್ಜಪ್ಪನ ಜೀವನ ಶೋಕ, ದುಃಖದಿಂದ ಕೂಡಿದೆ. ತಂದೆ-ತಾಯಿಗಳಲ್ಲಿ ಹಿತವಚನ ಕೇಳಿದ್ದರೆ ಬಹುಶಃ ಸರ್ಜಪ್ಪನ ಬದುಕು ಬದಲಾಗುತ್ತಿತ್ತೇನೋ ಆದರೆ ಹಠಮಾರಿತನ ಧೋರಣೆಯಿಂದ ಹಾಗೂ ಒಬ್ಬ ಸೂಳೆಯಿಂದ ಹತನಾಗುವ ಅಪಕೀರ್ತಿಯನ್ನು ಕಥನ ಕಾವ್ಯದಲ್ಲಿ ತಿಳಿಸುತ್ತದೆ.

ಕರ್ನಾಟಕದಲ್ಲಿ ಹತ್ತೊಂಬತ್ತನೆಯ ಶತಮಾನವು ಅನೇಕ ಪರಿವರ್ತನೆಗಳನ್ನು ಸೃಷ್ಟಿಸಿದೆ.  ಬ್ರಿಟಿಷರು ಮತ್ತು ಸ್ಥಳೀಯರ ನಡುವೆ ನಡೆದ ದಂಗೆಗಳೇ ಇದಕ್ಕೆ ಕಾರಣ. ಸರ್ಜಪ್ಪನಾಯಕನ ಸಾವು ದುರಂತಮಯವಾದುದು. ಸಾವಿನ ಘಟನೆಯಿಂದಲೇ ಆತನ ವ್ಯಕ್ತಿತ್ವಕ್ಕೆ ಅಸಾಧಾರಣ ಮೆರಗು ಬಂದಿದೆ.

ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಸರ್ಜಪ್ಪನಾಯಕ

ಕರ್ನಾಟಕದ ಜಾನಪದ ಕ್ಷೇತ್ರವು ತನ್ನ ಪ್ರಕಾರಗಳನ್ನು ವಿವಿಧ ಬಗೆಯಾಗಿ ಜೀವಂತ ಗೊಳಿಸಿಕೊಂಡಿರುವುದು ಸ್ಪಷ್ಟ. ಅವುಗಳೆಂದರೆ ಜನಪದ ಕಥನಗೀತೆಗಳು, ಗೀತೆ, ಗದ್ಯಕಥನ, ಹಾಡು, ಐತಿಹ್ಯ, ಲಾವಣಿ, ಪುರಾಣ, ಜನಪದ ಮಹಾಕಾವ್ಯ ಇತರ ಪ್ರಕಾರಗಳನ್ನು ಇಲ್ಲಿ ಪಟ್ಟಿ ಮಾಡಬಹುದು.

ಕಥನ ಕಾವ್ಯ ಹಾಗೂ ಗೀತೆ ಜನಪದ ಸಾಹಿತ್ಯದ ಬಹುಮುಖ್ಯ ಪ್ರಭೇದ. ಕಥನ ಕಾವ್ಯ ಗೀತೆಗಳು ಗ್ರಾಮಾಂತರ ಜನತೆಯ ಮನರಂಜನೆಯ ಮುಖ್ಯ ಸಾಧನವಾಗಿ ಉಳಿದುಬಂದಿದೆ. ಜನಪದ ಕಥನ ಸಾಹಿತ್ಯ ಆಶಯವಾಗಿದೆ. ಇಲ್ಲಿ ಹೆಣ್ಣಿನ ದುಃಖವನ್ನು, ಸಂಕಷ್ಟವನ್ನು, ತ್ಯಾಗವನ್ನು ಬಲಿದಾನವನ್ನು ಸಮರ್ಥವಾಗಿ ಚಿತ್ರಿಸುವುದು, ಸಮರ್ಪಕವಾಗಿ ಪ್ರತಿನಿಧಿಸುವ ಅಪರಿಮಿತ ಕಥನಗೀತೆಗಳು ಕನ್ನಡ ಜನಪದ ಸಾಹಿತ್ಯದ ಅನರ್ಘ್ಯ ರತ್ನಗಳೇ ಆಗಿವೆ. ಇಂಥ ಗಂಭೀರ ಸ್ವರೂಪದ ಕಥೆಗಳನ್ನು ಹೆಣ್ಣುಮಕ್ಕಳೇ ಹಾಡುತ್ತಾರೆ. ಕೆಲವು ಕಡೆ ಗಂಡಿನ ತ್ಯಾಗ, ದುಃಖ, ಶೋಕ, ಕುತಂತ್ರ, ಅನ್ಯಾಯ, ಪರಿತಪಿಸುವುದು, ಪ್ರೇಮ ಸಂಬಂಧ ಘಟನೆಗಳು ರಂಜನೀಯವಾಗಿರುತ್ತವೆ. ಕಥನಗೀತೆಗಳು ತ್ರಿಪದಿಯಲ್ಲಿ ಬರುತ್ತಿರುವುದು ಹೆಚ್ಚು. ಚೊಕ್ಕ ಮಧುರವಾದ ಚಿಕ್ಕ ಕಾವ್ಯ ಎಂದು ಇದಕ್ಕೆ ಕರೆಯಲಾಗಿದೆ. ಆದರೆ ಸರ್ಜಪ್ಪ ನಾಯಕನ ಕಥನ ಕಾವ್ಯ ಹಾಡುಗಾರನ ನಾಲಿಗೆಯ ಮೇಲೆ ನರ್ತಿಸುವಾಗ ಪಂಚಪದಿಯಲ್ಲಿ ನಿರೂಪಣೆಗೊಂಡಿದೆ. ಉದಾ. ಉತ್ತರದೇವ, ಈರೋಬಿ, ನಾಗವ್ವ, ಚಿಕ್ಕೊಳು ಹಿರಿದಿಮ್ಮವ್ವ, ಹುಳಿಯಾರು ಕೆಂಚಮ್ಮ, ಸಂಪನ್ನೆ, ಕೊಂತಮ್ಮ, ಹೊನ್ನಮ್ಮ ಮೊದಲಾದವುಗಳಿಗೆ ಇವನನ್ನು ಹೋಲಿಸಿದಾಗ ಭಿನ್ನವಾಗಿ ಕಂಡುಬರುತ್ತದೆ.

‘ಜನಪದ ಕಥನ ಗೀತೆಗಳು’ ಎಂಬ ಕೃತಿಯನ್ನು ೧೯೫೬ರಲ್ಲಿ ಕ.ರಾ.ಕೃ ರಚಿಸಿ ಜನಪದ ಸಾಹಿತ್ಯ ಅಕಾಡೆಮಿ ಮೂಲಕ ಪ್ರಕಟಿಸಿದ್ದಾರೆ. ಮೇಲೆ ಕಥನ ಗೀತೆ ಬಗ್ಗೆ ತಿಳಿಸಿರುವಂತೆ ಈ ಕೃತಿಯಲ್ಲಿ ನಾಲ್ಕು ವಿಭಾಗಗಳಿವೆ. ೧. ಅಂಬಿಗರ ಮತ್ತು ಇತರ ಹಾಡುಗಳು ೨. ಉತ್ತರದೇವಿ ಮತ್ತು ಇತರ ಹಾಡುಗಳು ೩. ಪಿರಿಯಾಪಟ್ಟಣದ ಕಾಳಗ ಮತ್ತು ಇತರ ಹಾಡುಗಳು ೪. ಚೆನ್ನಿಜೋಗಯ್ಯ ಮತ್ತು ಇತರ ಹಾಡುಗಳು ಇಲ್ಲಿ ಅನಾವರಣಗೊಂಡಿವೆ. ಪೌರಾಣಿಕ ಕಥನ ಗೀತೆಗಳಲ್ಲಿ ಈಶ್ವರಿ, ಪಾರ್ವತಿ, ಗಂಗೆ, ಕೃಷ್ಣ ರುಕ್ಮಿಣಿಯರನ್ನು ಜನಪದ ವಕ್ತೃಗಳು ಆಪ್ತಬಂಧುಗಳಂತೆ ಕಂಡಿದ್ದಾರೆ. ಕಥನಗೀತೆ, ಕಾವ್ಯಗಳು, ಜನಪದ ಕ್ಷೇತ್ರದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಜನಪದರ ಹೃದಯದ ರಾಗ-ಭಾವಗಳಿಗೆ ಸಮೀಪ ವರ್ತಿಯಾಗಿರುತ್ತವೆ.

ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಗದ್ಯಕಥನಗಳು, ಗೀತೆಗಳು, ಕೆಲಸದ ಹಾಡುಗಳು, ಐತಿಹ್ಯ, ಕಥನಗೀತೆ, ಮಹಾಕಾವ್ಯ, ಗದ್ಯಕಥನಗಳಲ್ಲಿ ಪುರಾಣ, ಕಟ್ಟುಕತೆ, ಆಶಯ ಮತ್ತು ವರ್ಗ ಮುಖ್ಯವಾಗಿರುತ್ತದೆ.

ಕನ್ನಡ ಜನಪದ ಗ್ರಂಥಗಳಲ್ಲಿ ಪ್ರಮುಖವಾದವು : ಪಟ್ಟೊಳೆ ಪಳಮೆ, ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು, ಜೀವನ ಸಂಗೀತ, ಮಲ್ಲಿಗೆ ದಂಡೆ, ಜನತೆಯ ಸಂಸ್ಕೃತಿ, ನಾಡಪದ ಗಳು, ಜನಪದ ಕಥನಗೀತೆಗಳು, ಕರ್ನಾಟಕದ ವೃತ್ತಿಗಾಯಕರು, ಜಾನಪದ ಸ್ವರೂಪ, ಜಾನಪದ ಅಧ್ಯಯನ, ಹೊನ್ನ ಬಿತ್ತೆವು ಹೊಲಕೆಲ್ಲ, ಗ್ರಾಮೀಣ, ಸಂಗ್ಯಾಬಾಳ್ಯಾ, ಕನ್ನಡ ಜನಪದ ಗೀತೆಗಳು, ಜಾನಪದ ಸಾಹಿತ್ಯ ದರ್ಶನ, ಫ್ಲೀಟರು ಸಂಗ್ರಹಿಸಿದ ಐದು ಲಾವಣಿಗಳು, ಮಲೆಯ ಮಾದೇಶ್ವರ, ಆನ್ವಯಿಕ ಜಾನಪದ, ಕನ್ನಡದ ಸಾವಿರ ಒಗಟುಗಳು, ಹೆಸರ ಹೇಳ್ತೀನಿ ಒಡಪಕಟ್ಟಿ, ಭಾರತೀಯ ಪರಂಪರೆ ಹಾಗೂ ಸಾಹಿತ್ಯದಲ್ಲಿ ಒಗಟು ಇತರ ಗ್ರಂಥಗಳು ಇತ್ತೀಚಿಗೆ ಸಾಕಷ್ಟು ಪ್ರಕಟವಾಗಿವೆ. ಬುಡಕಟ್ಟು ಮತ್ತು ಜಾನಪದ ನೆಲೆಯಲ್ಲಿ ರಚನೆಗೊಂಡ ಗಾದರಿಪಾಲನಾಯಕ ಮತ್ತು ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು ಕೃತಿಗಳು ಮೌಖಿಕ ಮತ್ತು ಸ್ಥಳೀಯ ಚರಿತ್ರೆಯನ್ನು ಒಳಗೊಂಡಿವೆ. ಇಂಥ ಕೆಲವು ಕೃತಿಗಳಲ್ಲಿ ಸರ್ಜಪ್ಪನಾಯಕನ ಪ್ರಸ್ತಾಪ ಬರುತ್ತದೆ.

ಗ್ರಾಮೀಣ ಪ್ರದೇಶದ ಗೀತೆಗಳಲ್ಲಿ ಕೆಲಸದ ಹಾಡುಗಳು ಇಂದಿಗೂ ಪ್ರಚಲಿತದಲ್ಲಿವೆ. ಬೀಸುವ ಪದ, ಹಂತಿ ಹಾಡು, ಕುಟ್ಟುವ ಹಾಡು, ನಾಟಿಯ ಹಾಡು, ಲಾಲಿಯ ಪದ, ಸಂಪ್ರದಾಯದ ಹಾಡು, ಆಚರಣೆಯ ಹಾಡು, ಅಂಟಿಗೆ-ಪಂಟಿಗೆ ಪದ, ಮದುವೆ ಮತ್ತು ಒಸಗೆಯ ಹಾಡು, ಮೊಹರಂ ಪದ, ಡೊಳ್ಳಿನ ಪದ, ಹರದೇಶಿ-ನಾಗೇಶಿ ಮೊದಲಾದವುಗಳಿವೆ.

‘ಕನ್ನಡ ಜನಪದ ಗೀತೆಗಳು’ ಎಂಬ ಗ್ರಂಥವನ್ನು ೧೯೫೫ರಲ್ಲಿ ಡಾ. ಬಿ.ಎಸ್. ಗದ್ದಗಿ ಮಠರು ಕರ್ನಾಟಕ ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿಗಾಗಿ ಅರ್ಪಿಸಿದ ಈ ನಿಬಂಧ ಸಂಗ್ರಹ ರೂಪದಿಂದ ೧೯೬೨ರಲ್ಲಿ ಪ್ರಕಟವಾಗಿರುತ್ತದೆ. ಜನಪದ ಗೀತೆಗಳಿಗೆ ಸಂವಾದಿಯಾಗಿ ಲೋಕಗೀತೆಗಳೆಂದು ಗದ್ಗಿಮಠರು ಕರೆದಿರುವುದು ವಿಶೇಷ.

ಫ್ಲೀಟರ ಐದು ಲಾವಣಿಗಳು ಇಂಗ್ಲಿಷ್‌ನಲ್ಲಿ ೧೮೮೫ರಲ್ಲಿ ಪ್ರಕಟವಾಗಿವೆ. ಕ್ಯಾತನಹಳ್ಳಿ ರಾಮಣ್ಣ ಸಂಪಾದಕರಾಗಿ ಪ್ರಕಟಿಸಿದ್ದಾರೆ. ಇದರಲ್ಲಿ ಸಂಗೊಳ್ಳಿ ರಾಯಣ್ಣನ ದಂಗೆ, ಆದಾಯ ತೆರಿಗೆ, ಹಲಗಲಿಯ ಬೇಡರು, ಸಂಗ್ಯನ ಅಪರಾಧ ಮತ್ತು ಸಾವು, ಕಿತ್ತೂರ ಚನ್ನವ್ವನ ಸೊಸೆ ಎಂಬ ಲಾವಣಿಗಳಿವೆ. ಕರ್ನಾಟಕದ ರಾಜ, ಮಂತ್ರಿ, ರಾಣಿ ಇತರ ವ್ಯಕ್ತಿಗಳ ಬಗ್ಗೆ ಹುಟ್ಟಿಕೊಂಡ ಕಥನ ಕಾವ್ಯ, ಗೀತೆ, ಲಾವಣಿಗಳು ಪ್ರಮುಖವಾದವು. ಕುಮಾರರಾಮನನ್ನು ಇಲ್ಲಿ ಉದಾಹರಿಸಬಹುದು. ಆದರೆ ಪಾಳೆಯಗಾರರ ಬಗ್ಗೆ ಹುಟ್ಟಿಕೊಂಡ ಜನಪದ ಸಾಹಿತ್ಯ ವಿಶೇಷವಾಗಿರುವಂತದ್ದು. ತರೀಕೆರೆಪಾಳೆಯಗಾರರು ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು ಸಹಜ. ಈ ಹೋರಾಟದ ಘಟನೆ ಚರಿತ್ರೆ ಮತ್ತು ಜನಪದ ಕ್ಷೇತ್ರಗಳಲ್ಲಿ ಭಿನ್ನ ರೂಪ ತಳೆದಿರುವುದುಂಟು. ಬ್ರಿಟಿಷರ ದಾಖಲೆ, ಕೃತಿಗಳಲ್ಲಿ ವಸ್ತುಸ್ಥಿತಿಗೂ ನಮ್ಮ ಜನಪದರು ಕಟ್ಟಿರುವ ಕಥೆಗೂ ವ್ಯತ್ಯಾಸಗಳಿವೆ. ಹಾಗಾಗಿ ಸ್ಥೂಲವಾಗಿ ಕೆಲವು ದಾಖಲೆಗಳ ಮೂಲಕ ಇಲ್ಲಿ ಅವಲೋಕಿಸಲಾಗಿದೆ. ಸರ್ಜಪ್ಪನಾಯಕನ ಸಾವಿನ ಬಗ್ಗೆ ಲಭ್ಯವಿರುವ ಜನಪದ ಸಾಹಿತ್ಯ ಹೀಗಿದೆ. ಸರ್ಜಾನ, ಆಂಗ್ಲರೆದುರು ತೋಪಿಗೆ ಅಳಲಿಲ್ಲ. ಧೈರ್ಯದಲ್ಲಿ ಎದೆಯೊಡ್ಡಿ ಆಳಿದ ಸರ್ಜಾನ, ಕಥನದಲ್ಲಿ ವೀರನಾಗಿ ಎದ್ದುಬಂದ ನಿಂಗಿಯ ಮೋಸದಲ್ಲಿ ಸಿಲುಕಿ ಆಂಗ್ಲರಲ್ಲಿ ಗಲ್ಲಿಗೆದುರು ಗಂಡಾಗಿ ಬದುಕಿದ ಪ್ರಾಣಭಿಕ್ಷೆಯ ಬೇಡದೆಯೆ ಕೈಯಾರೆ ನೇಣಿಗೇರಿದ.

ಒಟ್ಟಾರೆ ಹೇಳುವುದಾದರೆ, ಸರ್ಜಪ್ಪನಾಯಕ ಬ್ರಿಟಿಷರ ವಿರುದ್ಧ ಹೋರಾಡುವುದು, ಆತನನ್ನು ಕಳ್ಳನೆಂದು ಕರೆದಿರುವುದು ಸಂಘರ್ಷಕ್ಕೆ ನಾಂದಿ ಹಾಡಿದ್ದು ಸ್ಪಷ್ಟ. ಸಾಮಾನ್ಯ ಪಾಳೆಯಗಾರ ಅಪಾರ ಸಂಖ್ಯೆಯ ಬ್ರಿಟಿಷ್ ಸೈನ್ಯವನ್ನು ಎದುರಿಸುವುದಾದರೂ ಹೇಗೆ? ಬ್ರಿಟಿಷ್ ಅಧಿಕಾರಿಗಳು ಈತನನ್ನು ಬೆಂಗಳೂರಿನ ಗುಟ್ಟಹಳ್ಳಿ ಅರಮನೆ ಆವರಣದಲ್ಲಿ ಗಲ್ಲಿಗೆ ಹಾಕಿದಾಗ ಸಾಯುವುದಿಲ್ಲ, ತಾನೇ ಕೊರಳಿಗೆ ಉರುಲು ಹಾಕಿಕೊಂಡು ಸಾಯುತ್ತಾ ನೆಂದು ತಿಳಿಸಲಾಗಿದೆ. ಸೂಳೆ ನಿಂಗಮ್ಮನ ಕಥೆ ಇಲ್ಲಿ ಉಪಕಥೆಯಾಗಿ ವ್ಯಕ್ತಿ ಕಥನಕ್ಕೆ ಪೂರಕವೆಂಬಂತೆ ಬಂದಿರಬೇಕು. 

ಆಧಾರ ಸೂಚಿ

೧. ಬಿ.ಎನ್. ಸತ್ಯನ್ (ಸಂ.), ಚಿಕ್ಕಮಗಳೂರು ಡಿಸ್ಟ್ರಿಕ್ಸ್ ಗ್ಯಾಸೆಟಿಯರ್.

೨. ಗೊ.ರು. ಚನ್ನಬಸಪ್ಪ (ಸಂ.), ಹೊನ್ನ ಬಿತ್ತೇವು ಹೊಲಕೆಲ್ಲ, ತರೀಕೆರೆ.

೩. ಜಿ.ಶಂ. ಪರಮಶಿವಯ್ಯ, ೧೯೬೯, ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೪. ಸೆಬಾಸ್ಟೀಯನ್ ಜೊಸೇಫ್, ೧೯೯೭, ಕರ್ನಾಟಕ ಚರಿತ್ರೆ ಸಂಪುಟ. ೬, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬.

೫. ಅಬ್ದುಲ್ ಸತ್ತಾರ್, ೧೯೯೬, ತರೀಕೆರೆ ಪಾಳೆಯಗಾರರು, ಪಾಂಡವಪುರ.

೬. ವಿರೂಪಾಕ್ಷಿ ಪೂಜಾರಹಳ್ಳಿ (ಸಂ.), ೨೦೦೬, ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೭. ವಿರೂಪಾಕ್ಷಿ ಪೂಜಾರಹಳ್ಳಿ (ಸಂ.), ೨೦೦೬, ವಾಲ್ಮೀಕಿ ಸಮುದಾಯದ ಪ್ರಾತಃಸ್ಮರಣೀಯರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬.

೮. ಈ ಬಗ್ಗೆ ತರೀಕೆರೆ, ನಾಯಕನಹಟ್ಟಿ, ಯರ್ಜೇನಹಳ್ಳಿ (ಮೊಳಕಾಲ್ಮೂರು ತಾ.)ಗುಡೇಕೋಟೆ, ಜರಿಮಲೆ ಪಾಳೆಯಗಾರರ ವಂಶೀಕರು ತಮ್ಮದೇ ಆದ ಅನುಭವಗಳನ್ನು ತಿಳಿಸುತ್ತಾರೆ. ಬೆಂಗಳೂರಿನ ಕರ್ನಾಟಕ ಲೋಕಾಯುಕ್ತರ ಕಚೇರಿಯಲ್ಲಿ ಎಸ್.ಪಿ. ಆಗಿರುವ ಸನ್ಮಾನ್ಯ ಶ್ರೀ ಎಸ್. ರಂಗಸ್ವಾಮಿ ಅವರು ಈ ಸರ್ಜಪ್ಪನಾಯಕನ ಬಗ್ಗೆ ತಮ್ಮ ತಾತ, ಸಂಬಂಧಿಕರು ತಿಳಿಸುವ ವಿಚಾರಗಳನ್ನು ತಿಳಿಸಿರುತ್ತಾರೆ. ಅವರಿಗೆ ಕೃತಜ್ಞತೆಗಳು.