ಹಿನ್ನೆಲೆ

ಭಾರತದ ಇತಿಹಾಸದ ಪುಟಗಳಲ್ಲಿ ಬ್ರಿಟಿಷರ ವಿರುದ್ಧ, ಸ್ವಾತಂತ್ರ್ಯ ಸಂಗ್ರಾಮ ಮಾಡಿದ ಕೆಲವೇ ಸಂಸ್ಥಾನಗಳಲ್ಲಿ ಗಂಡು ಮೆಟ್ಟಿನ ನಾಡು ಸುರುಪುರವು ಒಂದು. ಕೆಚ್ಚೆದೆಯ ವೀರ ಬೇಡರ ಸಂಸ್ಥಾನವೆಂದು ಪ್ರಸಿದ್ದಿಯೂ ಪಡೆದಿತ್ತು. ಇದನ್ನು ಗಡ್ಡಿಪಿಡ್ಡನಾಯಕ ಆಳ್ವಿಕೆಯಿಂದ ಆರಂಭಗೊಂಡ ವಾಗನಗೆರೆ ಕಿಲ್ಲೆಯ (ಕೋಟೆ) ಪಾಳೆಯಗಾರಿಕೆಯು ಸುರಪುರ ವನ್ನು ಸ್ವತಂತ್ರ ರಾಜಧಾನಿಯಾಗಿ ಸಾಬೀತು ಪಡಿಸಿತು. ಸರಿ ಸುಮಾರು ಎರಡುವರೆ ಶತಮಾನ ಗಳ ಮಹತ್ವದ ಇತಿಹಾಸ ಸೃಷ್ಟಿಸಿದ್ದು ಸುರಪುರ ಸಂಸ್ಥಾನದ ಪುಟಗಳಲ್ಲಿದೆ. ಈ ಸಂಸ್ಥಾನವನ್ನು ಆಳಿದ ಹನ್ನೊಂದು ಜನ ಅಪ್ರತಿಮ ವೀರ ಅರಸರಲ್ಲಿ ನಾಲ್ವಡಿ (ನಾಲ್ಕನೇ) ರಾಜಾ ವೆಂಕಟಪ್ಪನಾಯಕನದು ವಿಶಿಷ್ಟ ವ್ಯಕ್ತಿತ್ವ ಹಾಗೂ ಅಪ್ರತಿಮ ಹೋರಾಟಗಾರ ಎಂದು ಹೇಳುವುದರಲ್ಲಿ ಸಂದೇಹವಿಲ್ಲ.

ಈತನ ತಂದೆ ಕೃಷ್ಣಪ್ಪನಾಯಕ ತೀರಿಕೊಂಡಾಗ ನಾಲ್ವಡಿ ವೆಂಕಟಪ್ಪನಾಯಕ ಕೇವಲ ೮ ವರ್ಷದವನಿದ್ದನು. ಆದಕಾರಣ ರಾಣಿ ಈಶ್ವರಮ್ಮ ಗಂಡ ತೀರಿಕೊಂಡ ಕೂಡಲೇ ಸಂಸ್ಥಾನದ ಅಧಿಕಾರವನ್ನು ತಾನೇ ವಹಿಸಿಕೊಂಡಳು. ಇದಕ್ಕೆ ಕಾರಣವಿಷ್ಟೇ. ಕೃಷ್ಣಪ್ಪನಾಯಕ ತಮ್ಮ ಪಿಡ್ಡನಾಯಕನಿಗೆ ಅಧಿಕಾರ ಹೋಗಬಾರದು ಎಂಬ ಮಹಾದಾಸೆ ಇತ್ತು. ಇದರಿಂದ ರಾಣಿ ಈಶ್ವರಮ್ಮ ತಾನೇ ಅಧಿಕಾರ ವಹಿಸಿಕೊಂಡಳು. ಇದೇ ಸಂದರ್ಭದಲ್ಲಿ ಕ್ಯಾಪಟನ್ ಗ್ರೀಸ್ಲೆ ಅಧಿಕೃತವಾಗಿ ಸುರಪುರ ಸಂಸ್ಥಾನದ ಒಳಾಡಳಿತದಲ್ಲಿ ಕೈಹಾಕಿ ಸುರಪುರದಿಂದ ಬರಬೇಕಾಗಿದ್ದ ಬಾಕಿ ಹಣದ ವಸೂಲಿಗೆ ಸೈನ್ಯದ ಸಹಾಯ ಕೇಳಿ ರೆಸಿಡೆಂಟನಿಗೆ ಪತ್ರ ಬರೆದನು. ಆದರೆ ಈ ಬೇಡಿಕೆ ತಿರಸ್ಕೃತಗೊಂಡಿತು. ವಿಧಿಯಿಲ್ಲದೆ ಗ್ರೀಸ್ಲೆ ಕ್ಯಾಪ್ಟನ್ ಟೇಲರನನ್ನು ಕಳುಹಿಸಿದನು.

ಕ್ಯಾಪ್ಟನ್ ಟೇಲರನು ಅತ್ಯಂತ ಮುತ್ಸದ್ದಿತನದಿಂದ ರಾಣಿ ಈಶ್ವರಮ್ಮ ರಾಜಕುಮಾರ ಮತ್ತು ರಾಣಿಯ ಮೈದುನನಾದ ಪಿಡ್ಡಿನಾಯಕ ಹಾಗೂ ಇತರ ಮುಖಂಡರನ್ನು ಭೇಟಿಯಾಗಿ ರೆಸಿಡೆಂಟನಿಂದ ಆಗಿದ್ದ ತನ್ನ ಮುಕ್ತಿ ಪತ್ರವನ್ನು ಕೊಟ್ಟು, ರಾಜಾ ವೆಂಕಟಪ್ಪನಾಯಕನು ಪ್ರಾಪ್ತ ವಯಸ್ಕನಾಗುವವರೆಗೆ ಪಾಲಕನಾಗಿ ಪಿಡ್ಡನಾಯಕನನ್ನು ನಿಯಮಿಸಿರುವುದನ್ನು, ವಿರೋಧಿಸಿದಲ್ಲಿ ಸಂಸ್ಥಾನಕ್ಕೆ ಕೇಡು ಸಂಭವಿಸಬಹುದೆಂದೂ ಮಾರ್ಮಿಕವಾಗಿ ತಿಳಿಸಿ, ರಾಜಧಾನಿಯಲ್ಲಿ ಶಾಂತಿ ನೆಲೆಗೊಳ್ಳುವ ಮೊದಲ ಪ್ರಯತ್ನ ಮಾಡಿದನು.

ನಾಲ್ವಡಿ ರಾಜಾವೆಂಕಟಪ್ಪ ನಾಯಕ

ಯುವರಾಜ ವೆಂಕಟಪ್ಪ ನಾಯಕ ವರ್ಷಗಳು ಕಳೆದಂತೆ ರೆಸಿಡೆಂಟನಾದ ಜನರಲ್ ಪ್ರೇಜರನು ಗವ್ಹರ್ನರ್ ಜನರಲ್ಲನ ೧೮.೫.೧೮೪೩ ರಂದು ಪತ್ರದ ಪ್ರತಿಯೊಂದು ಕಳಿಸಿ ಕೊಟ್ಟು ಅದರ ಪ್ರಕಾರ “ಪಿಡ್ಡನಾಯಕ ಅನುಮತಿಯಂತೆ ಚಿಕ್ಕವನಾದ ಯುವರಾಜನನ್ನು ಗಾದಿಗೆ ಕೂಡಿಸಿ” ರಾಜಕುಮಾರನ ಮರ್ಯಾದೆಗೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕೆಂದೂ, ಯುವರಾಜನು ದೊಡ್ಡವನಾದ ನಂತರ, ಸುಸ್ಥಿತಿ ಸುವ್ಯವಸ್ಥಿತ ರಾಜ್ಯವನ್ನು ಆತನಿಗೊಪ್ಪಿಸ ಬೇಕೆಂದೂ ಮತ್ತು ಆತನಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಆಡಳಿತ ಯೋಗ್ಯ ತರಬೇತಿಯನ್ನು ಕೊಡಿಸುವಂತೆ ಅಭಿಪ್ರಾಯ ಪಟ್ಟಿದ್ದನು. ಟೇಲರನು ಇದಕ್ಕೆ ತಕ್ಕಂತೆ ಎಲ್ಲರನ್ನು ಸಂತೋಷ ಗೊಳಿಸುವುದಕ್ಕಾಗಿ ಬಾಲ ವೆಂಕಟಪ್ಪನಾಯಕನ ರಾಜ್ಯಾರೋಹಣ ಸಮಾರಂಭವನ್ನು ವ್ಯವಸ್ಥೆ ಗೊಳಿಸಲು ಪ್ರಾರಂಭಿಸಿದನು. ಈ ಪ್ರಕ್ರಿಯಗೆ ಪಿಡ್ಡನಾಯಕನು ರಾಜ್ಯಾಭೀಷೇಕವಾದರೆ ತನಗೆ ಅಡಚಣೆಯುಂಟಾಗಬಹುದೇನೋ ಎಂಬ ಸಂಶಯದಿಂದಲೋ ಎನ್ನುವಂತೆ ಅದಕ್ಕೆ ಅನಾನುಕೂಲಗಳಿರುವಂತೆ ತೋರಿಸಿಕೊಟ್ಟನು. ಆದರೆ ಇದು ಸರಕಾರದ ಆಜ್ಞೆ ಎಂಬ ಕಲ್ಪನೆಯನ್ನು ಕೊಟ್ಟಾಗ ಆತನು ಸಮ್ಮತಿಸಿದನು. ಇತ್ತ ಈಶ್ವರಮ್ಮ ರಾಣಿಗೂ ಸಂತೋಷ ವಾಗಿತ್ತು. ರಾಜಮನೆತನದ ಪದ್ಧತಿಗಳಂತೆ ಆಹ್ವಾನಗಳನ್ನು ಕಳಿಸಿಕೊಟ್ಟು ಉತ್ಸವಗಳು ನೆರವೇರಿ ವೆಂಕಟಪ್ಪನಾಯಕನನ್ನು ಸುರಪುರ ಸಂಸ್ಥಾನದ ಗಾದಿಯ ಮೇಲೆ ಕೂಡಿಸಲಾಯಿತು, ದರ್ಬಾರದ ಮರ್ಯಾದಗಳಿಗನುಸಾರ ಕಾಣಿಕೆ ಮುಜುರೆ ಎಲ್ಲವೂ ಸರಳವಾಗಿ ನಡೆದು ಸರ್ವರಿಗೂ ಸಂತೋಷವಾಯಿತು. ಟೇಲರನು ಬಾಲ ವೆಂಕಟಪ್ಪ ನಾಯಕನಿಗೆ ಒಳ್ಳೆಯ ಶಿಕ್ಷಣ ಕೊಡಲು ಡಾ. ಮುರ‌್ರೆಯನ್ನು ನೇಮಿಸಿದನು. ಇಂಗ್ಲಿಷಿನ ಜೊತೆ ತೆಲುಗು, ಮರಾಠಿ, ಫಾರಸಿ ಭಾಷೆಗಳನ್ನು ಕಲಿಯುತ್ತಿದನು. ಈ ಸಂದರ್ಭದಲ್ಲಿ ಮಹಾನವಮಿ ಹಬ್ಬವು ಸಮೀಪಿಸುತ್ತಿರುವಾಗ ರಾಜನನ್ನು ಕೊಲೆಗೈಯುವ ಸಂಚು ನಡೆದಿರುವುದರ ವಿಚಾರ ಟೇಲರನ ಗಮನಕ್ಕೆ ಬಂದಿತು. ಇಂಥದೊಂದು ದುರ್ಘಟನೆ ನಡೆದರೆ ಪಿಡ್ಡನಾಯಕನೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆಂಬ ಅಂಶವನ್ನು ಟೇಲರನು ಪಿಡ್ಡನಾಯಕನಿಗೆ ತಿಳಿಸಿದನು. ಇದರಿಂದ ದುರಾಗ್ರಹ ಪೀಡಿತರ ಮೇಲೆ ಹತೋಟಿ ಸಾಧಿಸಿದನು. ಇದೇ ಸಮಯದಲ್ಲಿ ಏನಾದರೂ ಅನಾಹುತ ಜರುಗೀತೆಂಬುದಕ್ಕಾಗಿ ಟೇಲರನು ತಾನು ಸ್ವತ ರಾಜನ ಅಂಗರಕ್ಷಕರ (ವನದುರ್ಗ ಸೈನಿಕರು) ಬಿಗಿಕಾವಲನ್ನು ಹಾಕಿದ್ದಕ್ಕಾಗಿ ಸುಗಮ ರೀತಿಯಲ್ಲಿ ಉತ್ಸವ ಜರುಗಿ ಎಲ್ಲಾ ಧಾರ್ಮಿಕ ವಿಧಿಗಳು ಮುಗಿದ ನಂತರ ರಾಜನನ್ನು ಟೇಲರ್ ಸುರಕ್ಷಿತವಾಗಿ ರಾಣಿಯ ವಶಕ್ಕೊಪ್ಪಿಸಿದನು. ಈಗ ರಾಜನಿಗೆ ಹನ್ನೊಂದು ವರ್ಷಗಳಾಗಿದ್ದವು. ಆತನ ಜಾವಳವು ಆಗಿರಲಿಲ್ಲ. ಇದಕ್ಕಾಗಿ ರೆಸಿಡೆಂಟಿನಿಂದ ಖರ್ಚಿನ ಅನುಮತಿ ಪಡೆದು ಸಂಸ್ಥಾನದ ಮರ್ಯಾದೆ ಗಳಿಗೆ ತಕ್ಕ ರೀತಿಯಲ್ಲಿ ಜಾವಳದ ಕಾರ್ಯಕ್ರಮ ಸಿದ್ಧನ ತೋಟದಲ್ಲಿ ನೆರವೇರಿಸಲಾಯಿತು. ಆ ದಿನವೆಲ್ಲ ಅನ್ನ ಸಂತಾರ್ಪಣೆ ದಾನ ಧರ್ಮ ಹಾಗೂ ಸಂತೋಷದ ಕಾರ್ಯಕ್ರಮಗಳನ್ನು ನಡೆಯಿಸಿ ಅಲ್ಲೇ ಇದ್ದು ಮರುದಿನ ಸಪರಿಹಾರ ಮೆರವಣಿಗೆಯೊಂದಿಗೆ ಊರೊಳಗೆ ಬಂದರು.

ಇದೇ ಸಂದರ್ಭದಲ್ಲಿ ನಾಲ್ವಡಿ ರಾಜವೆಂಕಟಪ್ಪ ನಾಯಕನ ಚಿಕ್ಕಪ್ಪನಾದ ಪಿಡ್ಡ ನಾಯಕನೂ ಪಾರ್ಶ್ವವಾಯುವಿನಿಂದ ಪೀಡಿತನಾಗಿ ಮೃತಪಟ್ಟನು. ಕೂಡಲೇ ಈಶ್ವರಮ್ಮ ರಾಣಿ ಮತ್ತೊಮ್ಮೆ ಅಧಿಕಾರ ಪಡೆಯಲು ಪ್ರಯತ್ನಿಸಿದರು. ಆದರೆ ಚಾಣಾಕ್ಷನಾದ ಟೇಲರನು ತಾನೇ ಅಧಿಕಾರವನ್ನು ವಹಿಸಿಕೊಂಡನು. ಮುಂದೆ ರಾಣಿಯನ್ನು ಅಧಿಕಾರದಿಂದ ದೂರವಿಡ ಲಾಯಿತು. ತದನಂತರದಲ್ಲಿ ೧೮೫೩ ಇಸವಿಯ ಹೊತ್ತಿಗೆ ರಾಜಾವೆಂಕಟಪ್ಪನಾಯಕನು ಪ್ರೌಢ ವಯಸ್ಕನಾಗುತ್ತಿದ್ದುದರಿಂದ ಸುರಪುರ ಸಂಸ್ಥಾನದ ಅಧಿಕಾರವನ್ನು ಆತನಿಗೆ ಒಪ್ಪಿಸಬೇಕೆಂದು ರೆಸಿಡೆಂಟನು ಬ್ರಿಟೀಷ ಸರಕಾರಕ್ಕೆ ಮನವಿ ಮಾಡಿಕೊಂಡನು. ರಾಜ್ಯವನ್ನು ಒಪ್ಪಿಸಿದರೂ ರಾಜಕೀಯ ಪ್ರತಿನಿಧಿಯಾಗಿ ಟೇಲರನು ಮುಂದುವರೆಯುವುದೊಳ್ಳೆಯದೆಂದೂ ಅದಕ್ಕಾಗಿ ಸಂಸ್ಥಾನದಿಂದ ಆತನಿಗೆ ೧,೫೦೦ ರೂ ಸಂಬಳ ಕೊಡಬೇಕೆಂಬ ವಿಚಾರವನ್ನು ತಿಳಿಸಿದನು.

ರಾಜನಿಗೆ ಟೇಲರನ ಮೇಲೆ ಪ್ರೀತಿ ವಿಶ್ವಾಸಗಳಿದ್ದುದು ನಿಜವಾದರೂ ಪ್ರತಿ ತಿಂಗಳು ಇಷ್ಟು ಹಣವನ್ನು ರಾಜ್ಯದ ಬೊಕ್ಕಸದಿಂದ ಕೊಡಲು ಸಾಧ್ಯವಿಲ್ಲದ ಮಾತಾಗಿದ್ದಿತು. ಆ ಮಾತನ್ನು ರಾಜನು ಟೇಲರನಿಗೆ ಸ್ಪಷ್ಟಪಡಿಸಿದನು. ಅದರಂತೆ ಟೇಲರನೂ ಕೂಡ ಮೇಲಿನ ಅಧಿಕಾರಿಗಳಿಗೆ ಬರೆದುಕೊಂಡನು. ಈಗ ಬ್ರಿಟಿಷ್ ಸರಕಾರವು ಬೇರೇನೂ ಉಪಾಯವಿಲ್ಲದೆ ರಾಜ್ಯದ ಅಧಿಕಾರವನ್ನು ಹಸ್ತಾಂತರಿಸಲು ಟೇಲರನಿಗೆ ತಿಳಿಸಿತು.

ರಾಜ್ಯಾಧಿಕಾರದ ಹಸ್ತಾಂತರೀಕರಣ

ಗವ್ಹರ್ನರ ಜನರಲ್ಲನಾದ ಲಾರ್ಡ್ ಡಾಲ ಹೌಸಿಯು ರಾಜಕೀಯ ಪ್ರತಿನಿಧಿಯನ್ನು ನೇಮಿಸಿಕೊಳ್ಳಲಾಗುವುದಿಲ್ಲವೆಂಬ ರಾಜಾವೆಂಕಟಪ್ಪನಾಯಕನ ಪತ್ರದಿಂದ ಬಹಳ ಅಸಂತುಷ್ಟ ನಾದನು. ಆದರೆ ಒತ್ತಾಯ ಮಾಡಲು ಸಾಧ್ಯವಿರಲಿಲ್ಲವಾದ ಕಾರಣ ರಾಜ್ಯಭಾರವನ್ನು ವೆಂಕಟಪ್ಪನಾಯಕನಿಗೆ ಒಪ್ಪಿಸಲು ಬರೆಯಬೇಕಾಯಿತು. ಅಂತೆಯೇ ಜೂನ್ ೩೦, ೧೮೫೩ ರಂದು ಟೇಲರನು ದರ್ಬಾರನ್ನು ನೆರೆಯಿಸಿ. ರಾಜನಿಗೆ ಹೂಮಾಲೆಯನ್ನು ಹಾಕಿ ರಾಜಮುದ್ರೆ ಯನ್ನು ವೆಂಕಟಪ್ಪ ನಾಯಕನಿಗೆ ಒಪ್ಪಿಸಿದನು. ಸಂತೋಷವನ್ನು ವ್ಯಕ್ತಗೊಳಿಸಲು ತೋಪುಗಳು ಹಾರಿಸಲ್ಪಟ್ಟವು. ಟೇಲರನ ಬಂಗ್ಲೆಯನ್ನು ೨೦ಸಾವಿರ ರೂಪಾಯಿಗಳಿಗೆ ಖರೀದಿಸಿ ರಾಜನು ಆತನನ್ನು ಕಳಿಸಿಕೊಟ್ಟನೆಂದು ತಿಳಿದು ಬರುತ್ತದೆ.

ರಾಜಾ ವೆಂಕಟಪ್ಪನಾಯಕನು ಆಡಳಿತವನ್ನು ಕೈಯಲ್ಲಿ ತೆಗೆದುಕೊಂಡಾಗ ಭಾರತದ ಉತ್ತರ, ದಕ್ಷಿಣ ಭಾಗಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ಕಿಡಿಯು ಹೊತ್ತಿಕೊಂಡು ಉರಿಯ ತೊಡಗಿತ್ತು. ಒಂದುಕಡೆ ಸ್ವಾತಂತ್ರ್ಯ ವೀರರು ಆತ್ಮಾರ್ಪಣೆಗೈಯುತ್ತಿದ್ದ ಸಮಾಚಾರ ಗಳಿಂದಲೂ, ಮತ್ತೊಂದು ಕಡೆ ವೈರಿಗಳಾದ ಬ್ರಿಟಿಷ ನಿಜಾಮರ ಅಪವಿತ್ರ ಕುತಂತ್ರ ಗಳಿಂದಲೂ ಕೋಪವುಕ್ಕಿ ಆತನ ರಕ್ತ ಕುದಿಯತೊಡಗಿತ್ತು. ನೆರೆಹೊರೆಯ ಸಂಸ್ಥಾನಿಕರಾದ ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ ಹಾಗೂ ಇತರರು ಈತನಿಗೆ ಸಹಾಯ ನೀಡಲು ಕಾತರರಾಗಿದ್ದರು. ಈ ಬಗ್ಗೆ ಪತ್ರಗಳ ಮುಖಾಂತರವಾಗಿಯೂ ಬ್ರಿಟಿಷರ ವಿರುದ್ಧ ಕಾವಲು ಸಂಪೂರ್ಣ ಸಹಾಯ ಒದಗಿಸಲು ಆಶ್ವಾಸನೆಯನ್ನಿತ್ತಿದ್ದರು. ಸುರಪುರ ಸಂಸ್ಥಾನದ ದೊರೆ ರಾಜಾ ವೆಂಕಟಪ್ಪನಾಯಕನ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಸಂಸ್ಥಾನಿಕರಲ್ಲಿ ಅಕ್ಕಲಕೋಟೆ, ಕೋಲ್ಲಾಪುರ, ಮಿರಜ್, ಜತ್ತ, ಜಮಖಂಡಿ, ಆನೆಗುಂದಿ, ಮುಧೋಳ, ಹುನಗುಂದ, ಶಿರಹಟ್ಟಿ ಇವರುಗಳು ಪ್ರಮುಖರು. ಸಂಗ್ರಾಮದಲ್ಲಿ ಪಾಲುಗೊಳ್ಳಲು ಮೇಲಿನ ದೇಶಾಭಿಮಾನಿಗಳ ಕರೆಬಂತು. ಈ ಅವಕಾಶವನ್ನು ಸುಮ್ಮನೆ ಬಿಟ್ಟಾನೆಯೇ, ತನ್ನ ಅಭಿಮಾನಿಗಳ ಕರೆಗೆ ಓಗೊಟ್ಟ ರಾಜ ಬ್ರಿಟಿಷ್ ಸಾಮ್ರಾಜ್ಯವನ್ನು ರುಳಿಸುವ ಮಹಾನ್ ಕಾರ್ಯವನ್ನೆಸಗಲು ರಣರಂಗದಲ್ಲಿ ಧುಮಿಕಿ, ಮುಂಚೂಣಿಯಲ್ಲಿ ನಿಂತ, ಪರಕೀಯರ ವಿರುದ್ಧ ಕಾದಿ, ಸಮಗ್ರ ದಕ್ಷಿಣ ಭಾರತವನ್ನು ರಕ್ಷಣೆಗೈಯಬಲ್ಲ ನಿರ್ವಿವಾದಿತ ಧುರಂಧರನು ಈ ವೆಂಕಟಪ್ಪ ನಾಯಕನೊಬ್ಬನೇ ಎಂಬುದನ್ನು ಈ ಸಂಸ್ಥಾನಿಕ ರೆಲ್ಲರೂ ತೀರ್ಮಾನಗೈದು ಈತನಿಗೆ ಸಹಾಯವೊದಗಿಸಲು ಸಿದ್ಧರಾಗಿ ನಿಂತರು. ಸುರಪುರವು ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವಾಗಿ ಪರಿಣಮಿಸಿತು.

ಪ್ರತಿನಿತ್ಯವೂ ದೂರ ಸಮೀಪದ ಸ್ಥಳಗಳಿಂದ ಸ್ವಾತಂತ್ರ್ಯ ವೀರರನ್ನು ಆಂಗ್ಲರು ನಿರ್ದಯ ವಾಗಿ ಮರಣದಂಡನೆಗೆ ಗುರಿ ಮಾಡಿದರು. ಜನಸಂಚಾರೀ ಮಾರ್ಗಗಳ ಪಕ್ಕಗಳಲ್ಲಿದ್ದ ಮರಗಳಿಗೆ ಅವರನ್ನು ನೇತು ಹಾಕಿ ಪೈಶಾಚಿಕ ಕೊಲೆಗಡುಕತನ ಪ್ರದರ್ಶಿಸಿ ಜನಸ್ತೋಮ ಭೀತಿಗೊಳ್ಳುವಂತೆ ಮಾಡಿದ್ದ ಸಮಾಚಾರಗಳು ಬರುತ್ತಲೆ ಇದ್ದವು. ಮೊಗಲರ ಕೊನೆಯ ಚಕ್ರವರ್ತಿ ಬಹಾದೂರು ಶಾಹನು ೨೧ ಸೆಪ್ಟೆಬಂರ್ ೧೮೫೭ರಂದು ಸೆರೆಯಾಗಿ ದಿಲ್ಲಿಯ ಪತನದೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ದಿಕ್ಕು ಬದಲಾಯಿತು. ಫಲಿತಾಂಶಗಳು ಖಚಿತವಾಗಿ ಬ್ರಿಟಿಷರ ಪರವಾಗಿ ತಿರುಗ ಹತ್ತಿದವು. ಈಗಾಗಲೇ ತಿಳಿಸಿರುವಂತೆ ಝೂಂಸಿ, ಮೀರತ್, ದಿಲ್ಲಿ, ಕಾನ್ಪುರ, ಲಕ್ನೋ, ಔಧ, ಗ್ವಾಲಿಯಾರ್‌ಗಳು ಬ್ರಿಟಿಷರ ವಶವಾಗಿದ್ದವು. ದಕ್ಷಿಣ ರಾಜ್ಯಗಳ ವಿಧಿಯೂ ಇದಕ್ಕಿಂತ ಬೇರೆಯಾಗಿದ್ದಿಲ್ಲ. ಹೈದರಾಬಾದ್, ರಾಯಚೂರ, ವಿಜಾಪುರ, ಧಾರವಾಡ ಜಿಲ್ಲೆಗಳ ಎಲ್ಲ ಭಾಗಗಳು. ಆಂಗ್ಲರ ವಶವಾಗಿ  ಅವರ ಆಡಳಿತ ಸ್ಥಿರವಾಗಿ ನೆಲೆಗೊಂಡಿತ್ತು.

ನಿಜಾಮ ಸರಕಾರದ ಮಂತ್ರಿಯಾದ ಸಾಲಾರಜುಂಗ ಹಾಗೂ ವನವರ್ತಿಯ ರಾಜಾ ರಾಮೇಶ್ವರರಾವ್ ಇವರು ಆಂಗ್ಲರ ಕೈಗೊಂಬೆಗಳಾಗಿ ಅವರ ಸಹಾಯಕರಾಗಿ ನಡೆದುಕೊಳ್ಳು ತ್ತಿದ್ದರು. ಈಗ ಏನಿದ್ದರೂ ಬ್ರಿಟಿಷರ ಅತ್ಯಂತ ಭಯಂಕರ ಎದುರಾಳಿ ಪುಳಿಂದ ಪುಲಿಯಾದ ರಾಜಾವೆಂಕಟಪ್ಪ ನಾಯಕನೊಬ್ಬನೇ. ಆದರೆ ಆತನು ಬಂಡುಗಾರನೆಂದು ಸಾಬೀತು ಪಡಿಸದೆ ಆತನ ಮೇಲೆ ಆಕ್ರಮಣ ಗೈಯುವುದು ಸಾಧ್ಯವಿದ್ದಿಲ್ಲ ಸಾಕ್ಷೀಕರಿಸುವ ಆಧಾರಗಳಿಗಾಗಿಯೇ ಈಗ ಸಿದ್ಧತೆ ನಡೆದಿತ್ತು.

ಕ್ಯಾಂಪಬೆಲ್ಲನಿಂದ ಪತ್ರಗಳ ಸಮಾಚಾರವು ರೆಸಿಡೆಂಟನಿಗೆ ತಲುಪಿದ್ದೇ ತಡ ಆಂಗ್ಲ ಸರ್ಕಾರದ ವಿರುದ್ಧ ಆರಬ-ರೋಹಿಲೆ ಜನರನ್ನು ನೌಕರಿಯಿಲ್ಲಿಟ್ಟುಕೊಂಡದ್ದು ರಾಜ ಅಪರಾಧವಾದರೆ ಆಂಗ್ಲರ ವಿರುದ್ಧ ಹೋರಾಡಬೇಕೆಂಬುದನ್ನು ತಿಳಿದೂ ಸಹ ಅರಬ ಮತ್ತು ರೋಹಿಲೆ ಜನರು ಹೈದರಾಬಾದಿನಿಂದ ಹೊರಗೆ ಹೋಗಬಾರದೆಂಬ ನಿರ್ಬಂಧವನ್ನು ನಿರ್ಲಕ್ಷಿಸಿ ಸುರಪುರ ರಾಜನಲ್ಲಿ ನೌಕರಿಗೆ ಸೇರಿಕೊಂಡದ್ದು ಅವರ ಘೋರ ಅಪರಾಧವಾಗಿದೆ. ಕಾರಣ ರಾಜನನ್ನು ಸೈನಿಕ ಶಿಬಿರಕ್ಕೆ ಕರೆಯಿಸಿ ವಿಚಾರಣೆ ಮಾಡುವುದರ ಜೊತೆಗೆ ಸುರಪುರಕ್ಕೆ ಹೋಗಿರುವ ಎಲ್ಲ ಕೂಲಿಕಾರ ಸಿಪಾಯಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅವರನ್ನು ನಿಶಸ್ತ್ರ ರನ್ನಾಗಿ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಎಲ್ಲ ಸೈನಿಕ ತುಕಡಿಗಳು ಬರುವವರೆಗೆ ಕಾದಿದ್ದು ಒಮ್ಮೆಗೇ ದಾಳಿ ಮಾಡಿ ಸುರಪುರವನ್ನು ವಶಪಡಿಸಿಕೊಳ್ಳ ತಕ್ಕದೆಂದೂ ಆಜ್ಞೆ ಆತನಿಂದ ಬಂದಿತು. ಅದರಂತೆ ನಿಶ್ಚಿತ ಕಾರ್ಯಕ್ರಮಗಳು ಪ್ರಾರಂಭವಾದವು. ಇಂಗ್ಲಿಷರ ಸೈನ್ಯ ಬರುತ್ತಿರುವ ಸಮಾಚಾರ ದಟ್ಟವಾಗಿ ಹರಡಿತ್ತು. ಕ್ಯಾಂಪಬೆಲ್ಲನು ಈಗ ಸುರಪುರದಲ್ಲಿರುವುದು ಸುರಕ್ಷಿತವಲ್ಲವೆಂದು ತಿಳಿದು ಲಿಂಗಸೂರಿನಲ್ಲಿದ್ದ ಕ್ಯಾಪ್ಟನ್ ವಿಂಡ್‌ಹ್ಯಾಮನ ಕ್ಯಾಂಪಿನತ್ತ ಹೋದನು. ಆಂಗ್ಲ ಸೇನೆಗಳು ಎಲ್ಲಾ ನಾಲ್ಕು ಕಡೆಗಳಿಂದಲೂ ಬಂದು ದೇವದುರ್ಗದಲ್ಲಿ ನೆಲೆಯೂರಿ ಸ್ವಲ್ಪ ಸೈನ್ಯವನ್ನು ಅಲ್ಲಿ ಉಳಿಸಿ ಉಳಿದೆಲ್ಲ ಸೈನಿಕರೊಂದಿಗೆ ದಾಳಿ ಮಾಡಲು ನಿಶ್ಚಯಿಸಿ ರುಕ್ಮಾಪುರದ ಬಯಲಿನಲ್ಲಿ ಸೈನ್ಯವು ಬಂದಿಳಿ ಯಿತು.

೬ನೇ ಫೆಬ್ರವರಿ ೧೮೫೮ ರಂದು ಇನ್ನೊಂದು ಕಡೆಯಿಂದ ಕ್ಯಾಪ್ಟನ್ ವಿಂಡಹ್ಯಾಮನ ಕ್ಯಾಂಪಿನ ಲಿಂಗಸೂಗೂರುನಲ್ಲಿದ್ದ ಸೈನ್ಯವು ಸುರಪುರದೆದುರು ಠಾಣೆ ಹಾಕಿತು. ತಮ್ಮ ಮೇಲೆ ಆಕ್ರಮಣಗೈಯಲು ಬಂದ ಕ್ಯಾಂಪಿನ ಮೇಲೆ ೭.೨.೧೮೫೮ ರಂದು ಸುರಪುರದ ಕಡೆಯಿಂದ ಹಲ್ಲೆ ಪ್ರಾರಂಭವಾಯಿತು. ಎತ್ತರದ ಸ್ಥಳಗಳಿಂದ ತೋಪುಗಳು ಹಾಕಲು ಪ್ರಾರಂಭವಾದ ಕೂಡಲೇ ಕ್ಯಾಪ್ಟನ್ ವಿಂಡ್‌ಹ್ಯಾಮನೂ ಪ್ರತಿಯಾಗಿ ತೋಪುಗಳನ್ನು ಹಾರಿಸಲು ಪ್ರಾರಂಭಿಸಿದಾಗ ಸುರಪುರದ ಸೈನ್ಯವು ಮುಂದುವರೆಯಲು ಸಾಧ್ಯವಾಗದೆ ಸ್ತಬ್ಧ ವಾಗಿ ನಿಂತಿತು. ಮೇಜರ್ ಹ್ಯೋಗ ನೇತೃತ್ವದ ಆಂಗ್ಲಸೇನೆಯೂ ದಿನಾಂಕ ೮.೨.೧೮೫೮ರ ಹೊತ್ತಿಗೆ ಕ್ಯಾಪ್ಟನ ವಿಂಡ್‌ಹ್ಯಾಮನ ಸೈನ್ಯದಲ್ಲಿ ಬಂದು ಸೇರಿಕೊಂಡಿತು. ಬ್ರಿಟಿಷ ಸೈನ್ಯವು ವೆಂಕಾಪುರ ದಿಡ್ಡಿ-ಶಿಬಾರ-ಬಂಡಿ ಸೀಮೆಯಿಂದ ಮುನ್ನುಗ್ಗಿ ಬರುತ್ತಿರುವಾಗ ಎದುರಿನಲ್ಲಿದ್ದ ಸುರಪುರದ ದಂಡು ಪ್ರತಿಭಟಿಸುತ್ತಿರುವುದೆಂದೂ ನ್ಯೊಬೆರಿಯು ಪ್ರತ್ಯತ ಒಡ್ಡಲು ಭಯಂಕರ ಕದನವೇರ್ಪಟ್ಟು ಕ್ಯಾಪ್ಟನ್ ನ್ಯೂಬೆರಿಯು ಮಡಿದ, ಆತನ ಸಹಾಯಕ ಸ್ಚೂಅರ್ಟಿನೂ ಗಂಭೀರವಾಗಿ ಗಾಯಗೊಂಡನು. ಮರಣಿಸಿದ ನ್ಯೂಬೆರಿಯಾ ಈಗಲೂ ರುಕ್ಷ್ಮಾಪುರದ ಹತ್ತಿರ ನಮಗೆ ನೋಡಲು ಸಿಗುತ್ತದೆ.

ಸುರಪುರದ ಅಧಿಕಾರಿಗಳು ಆಂಗ್ಲರ ಮೋಸಗಾರಿಕೆಯ ತಂತ್ರಕ್ಕೆ ಬಲಿಯಾಗಿ ರಾಜನಿಗೆ ದ್ರೋಹ ಬಗೆದರು. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯೊಂದಿಗೆ ಕಾಯುವುದು  ಕಠಿಣ ತಮ್ಮ ಕೆಲಸವಷ್ಟೇ ಅಲ್ಲದೆ. ಬುದ್ದಿಗೇಡಿತನವೂ ಆಗವುದೆಂದರಿತ ವೆಂಕಟಪ್ಪ ನಾಯಕನು. ಈ ದುರ್ಧರ ಪ್ರಸಂಗದಲ್ಲಿ ಕೋಪಗೊಂಡಿದ್ದ ಬ್ರಿಟಿಷರೊಂದಿಗೆ ವ್ಯವರಿಸುವಲ್ಲಿ ನಿಜಾಮನೇನಾದರೂ ಸಹಾಯಕನಾಗಬಹುದೇನೋ ಎಂದು ಯೋಚಿಸಿ ಆ ಬಗ್ಗೆ ಆಪ್ತಲೋಚನೆಗೈದನು. ದಿವಾನ ಮತ್ತುಆತನ ಅಳಿಯ ಇಬ್ಬರೂ ರಾಜನ ವಿಚಾರ ಸೂಕ್ತ ವೆಂದು ಅಭಿಪ್ರಾಯಪಟ್ಟರು. ದಿವಾನ ಮುದ್ದೋ ಭೀಮರಾವ್ ಮತ್ತು ಆತನ ಅಳಿಯ ವಾಗಿನಗೇರಿ ರಾಮಣ್ಣರ ಮೋಸದಿಂದ ಸಾಲಾರಜಂಗ ಮನೆಯಲ್ಲಿ ದೊರೆ ಸೆರೆ ಸಿಕ್ಕಾಗ ಆತನನ್ನು ಸಿಕಂದರಬಾದ ಜೈಲಿನಲ್ಲಿಡಲಾಯಿತು.

ಸಿಕಂದರಬಾದಿನಲ್ಲಿ ಸೆರೆಮನೆಯಲ್ಲಿದ್ದಾಗ ರಾಜನಿಗೆ ಟೇಲರನ ಭೇಟಿಯಾಯಿತು. ಟೇಲರನು ಉಲ್ಲೇಖಿಸಿದಂತೆ “ಒಂದು ವೇಳೆ ರಾಜನು ಅಪೇಕ್ಷೆ ಪಟ್ಟರೆ ಸ್ವತಃ ರೆಸಿಡೆಂಟನು ಆತನನ್ನು ಭೇಟಿಯಾಗಲು ಬರುವುನೆಂದು ತಿಳಿಸಿದಾಗ ರಾಜನು ಕೊಟ್ಟ ಉತ್ತರವು ಅತ್ಯಂತ ಗಮನಾರ್ಹವಾಗಿದೆ”. ನಾನು ನನ್ನ ಜೀವನವನ್ನುಳಿಸಲು ರೆಸಿಡೆಂಟನನ್ನು ಬೇಡಿಕೊಳ್ಳಬೇಕೆಂಬ ಅಪೇಕ್ಷೆ ಆತನಿಗಿದ್ದುದಾದರೆ ಅದೆಂದಿಗೂ ಆಗದ ಮಾತು. ಇಂಗ್ಲೀಷರು ನನ್ನನ್ನು ಉಳಿಸಿದರೆ ನಾನು ಅವರ ಋಣಿಯಾಗಿರುವೆ. ಆದರೆ ಹೇಡಿಯಂತೆ ಜೀವವನ್ನುಳಿಸಲು ಅವರನ್ನು ಬೇಡಿಕೊಳ್ಳಲಾರೆ. ಮತ್ತು ನನ್ನವರೊಡನೆ ವಿಶ್ವಾಸ ಘಾತಮಾಡಲಾರೆ. ಎಂತಹ ಕೀಳು ಬೇಡನಾದರೂ ಸೆರೆಯಲ್ಲಿದ್ದು ಜೀವಿಸಲಾರ. ನಾನಂತೂ ರಾಜನು. ನನ್ನನ್ನು ತೋಪಿನ ಬಾಯಿಗೆ ಕಟ್ಟಿ ಹಾರಿಸಿದರೆ ನಾನು ಅಂಜುವುದಿಲ್ಲ. ಆದರೆ ಒಂದೇ ಮಾತು. ಕಳ್ಳನಂತೆ ನನ್ನನ್ನು ಗಲ್ಲಿಗೆ ಹಾಕಬಾರದು, ಗಲ್ಲಿಗೆ ಹಾಕುವಂತಹ ಕೆಲಸವನ್ನೇನೂ ನಾನು ಮಾಡಿಲ್ಲ ಎಂದು ಹೇಳಿರುವುದು ತಿಳಿದು ಬರುತ್ತದೆ.

ಈ ಸಂದರ್ಭದಲ್ಲಿ ಬ್ರಿಟಿಷರ ವಿಚಾರ ಲಹರಿಯೆ ಬೇರೆಯಾಗಿತ್ತು. ಬ್ರಿಟಿಷ್ ಬ್ರಿಗೇಡಿ ಯರನ ನೇತೃತ್ವದ ಮಿಲಿಟರಿ ಅಧಿಕಾರಿಗಳ ನ್ಯಾಯಾಲಯವು ರಾಜನ ವಿರುದ್ಧ ವಿಚಾರಣೆಯ ನಾಟಕವೊಂದನ್ನು ನಡೆಸಿತು. ನಿಜವಾಗಿಯೂ ಸ್ವಾತಂತ್ರ್ಯ ಪ್ರೇಮಿ. ಬ್ರಿಟಿಷರ ಅತ್ಯಂತ ದೊಡ್ಡ ಹಗೆಯಾದ ರಾಜಾ ವೆಂಕಟಪ್ಪ ನಾಯಕನನ್ನು ಹೇಗಾದರೂ ಸರಿ ಮುಗಿಸಲೇ ಬೇಕಾಗಿತ್ತು. ಇಲ್ಲದಿದ್ದರೆ ದಕ್ಷಿಣ ಭಾರತದಲ್ಲಿ ಅವರು ನಿಲ್ಲಲು ಸಾಧ್ಯವೇ ಇಲ್ಲದಾಗುತ್ತದೆ ಎಂದು ಅವರ ದೃಢ ನಿಶ್ಚಯ ನೇರವಾಗಿ ಆತನನ್ನು ಕೊಂದರೆ ಇಡೀ ದಕ್ಷಿಣ ಭಾರತದ ಜನ ಬಂಡುಗೈಯುವುದು ನಿಶ್ಚಿತ. ಆದ್ದರಿಂದ ನಾಲ್ಕು ವರ್ಷಗಳವರೆಗೆ ಮದ್ರಾಸ ಸಮೀಪದ ಚಂಗಲ ಪೇಟೆಯ ದುರ್ಗದಲ್ಲಿ ಆತನಿಗೆ ಬೇಕಾದ ಹೆಂಡಂದಿರೊಡನೆ ಸೆರೆಯಲ್ಲಿಟ್ಟರು. ಒಂದು ದಿನ ಒಳ್ಳೆಯ ನಡೆವಳಿಕೆ ತೋರಿದರೆ ಆತನ ರಾಜ್ಯವನ್ನು ಹಿಂದಿರುಗಿಸುವಂತೆ ಆಜ್ಞೆ ಕೊಟ್ಟರು. ಈ ಆಜ್ಞೆಯ ಅನುಷ್ಠಾನಕ್ಕಾಗಿ ಬ್ರಿಟಿಷ ಸೈನಿಕರ ಸರ್ಪಗಾವಲಿನಲ್ಲಿ ರಾಜನನ್ನು ಕರೆದುಕೊಂಡು ಹೋಗುತ್ತಿರುವಾಗ ಅಂಬರ ಪೇಟೆಯಲ್ಲಿ (ಸಿಕಿಂದರಬಾದಿಗೆ ಸಮೀಪವೆ ಇದೆ) ಮೊದಲನೆಯ ವಿಚಾರ ಹಾಕಿದಾಗ, ಮರುದಿನ ಬೆಳಗಿನಲ್ಲಿ ಡೇರೆಯೊಳಗಿನಿಂದ ಗುಂಡು ಹಾರಿದ ಶಬ್ದ ಕೇಳಿಸಿತು. ಗುಂಡು ರಾಜನ ಹೊಟ್ಟೆಯೊಳಗಿನಿಂದ ಹಾಯ್ದು ಬೆನ್ನಲ್ಲಿ ತೂರಿ ಹೊರಗೆ ಹೋಗಿತ್ತು. ಸ್ವಾತಂತ್ರ್ಯ ವೀರ ರಾಜಾವೆಂಕಟಪ್ಪನಾಯಕ ವೀರಸ್ವರ್ಗವನ್ನಪ್ಪಿದ್ದ ಆದರೆ ರಾಜನು ತನ್ನನ್ನು ತಾನೇ ಹೊಡೆದುಕೊಂಡು ಮರಣ ಹೊಂದಿದ ಎಂಬ ಸುದ್ದಿ ಹಬ್ಬಿಸಲಾಯಿತು. ಇದರೊಂದಿಗೆ ೨೨೨ ವರ್ಷಗಳ ಕಾಲ ರಾಜ್ಯವಾಳಿದ ಗೋಸಲ ವಂಶಕ್ಕೆ ರಾಜ್ಯ ಲಕ್ಷ್ಮೀಯ ಅನುಗ್ರಹ ತಪ್ಪಿತು. ಹಳೆಯ ವೈಭವಗಳೆಲ್ಲ ಮರೆ ಯಾದವು. 

ಆಧಾರ ಗ್ರಂಥಗಳು

೧. ಮರೆಯಲಾಗದ ಸುರಪುರ ರಾಜರ ಚರಿತ್ರೆ, ಶ್ರೀ ಬಿ. ಕೃಷ್ಣಮಾಚಾರ್ಯ ರಾಜಗುರು, ಶ್ರೀಮತಿ ಆರ್.ಪಿ. ಜೈನ್ ಪ್ರಕಾಶನ, ಸುರಪುರ, ೨೦೦೩.

೨. ಸಾಗರನಾಡು ದರ್ಶನ (ಸಂಶೋಧನಾತ್ಮಕ ಲೇಖನ-ಕವನಗಳ-ಸಂಕಲನ)ಸ್ಮರಣ ಸಂಚಿಕೆ, ಮಹಾಕವಿ ಲಕ್ಷ್ಮೀಶ ವಚನ ಸಂಘ, ಸುರಪುರ, ೧೯೮೫.