ಭಾರತದಲ್ಲಿ ವಸಾಹತುಶಾಹಿ ಆಳ್ವಿಕೆ ಆರಂಭವಾದಾಗಿನಿಂದ ಹಲವು ನಿಟ್ಟಿನಲ್ಲಿ ವಿಭಿನ್ನ ವರ್ಗದ ಜನ ಪ್ರತಿಭಟಿಸುತ್ತಾ ಬಂದಿದ್ದಾರೆ. ಎಷ್ಟೋ ಜನ ಎಲೆ ಮರೆಯ ಕಾಯಿಯಂತೆ ಹೋರಾಡಿದ್ದಾರೆ. ಈ ವಸಾಹತು (ಸಾಮ್ರಾಜ್ಯಶಾಹಿ) ಕಟ್ಟಡವನ್ನು ಉರುಳಿಸು ವಲ್ಲಿ ಬಿದ್ದ ಒಂದೊಂದು ಹೊಡೆತವು ಮುಖ್ಯವಾಗುತ್ತವೆ (ಒಂದೇ ಹೊಡೆತದಿಂದ ಅದು ಸ್ಫೋಟಗೊಳ್ಳಲಿಲ್ಲ). ಆದ್ದರಿಂದ ಒಂದು ಹೊಡೆತ ಪ್ರಜ್ಞಾಪೂರ್ವಕವಾಗಿರಬಹುದು. ಆದರೆ ಕೊಟ್ಟಿದ್ದು ಹೊಡೆತನೇ ತಾನೆ?

ಬ್ರಿಟಿಷರು ನಮ್ಮ ದೇಶವನ್ನು ಆಳಲು ಆರಂಭಿಸಿದ ಕಾಲದಿಂದಲೂ ನಮ್ಮವರು ಸಾಮ್ರಾಜ್ಯವನ್ನು ಹೇಗಾದರೂ ಉಳಿಸಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಹಲವಾರು ಚಳವಳಿ ಗಳನ್ನು ಆರಂಭಿಸಿದರು. ೧೯೦೮ರಲ್ಲಿ ತಿಲಕರು ಸೆರೆಮನೆ ವಾಸಕ್ಕೆ ಗುರಿಯಾದಾಗ ಕ್ರಾಂತಿಕಾರಿ ಚಳವಳಿ, ೧೯೨೦ರಲ್ಲಿ ಅಸಹಕಾರ ಚಳವಳಿ ಹೀಗೆ ಅನೇಕ ಚಳವಳಿಗಳ ಮುಖಾಂತರ ನಮ್ಮ ಸ್ವರಾಜ್ಯಕ್ಕೆ ಪಣವನ್ನು ತೊಟ್ಟು ಜೀವನ ಮರಣದಿಂದ ಹೋರಾಡಿದ್ದಾರೆ.

ಇಂಥ ಸಂದರ್ಭದಲ್ಲಿ ಬ್ರಿಟಿಷರು ಮೇಲ್ವರ್ಗದವರನ್ನು ಎತ್ತಿಕಟ್ಟುತ್ತಿದ್ದರು. ಯಾಕೆಂದರೆ ಜಮೀನ್ದಾರರ ಜೊತೆಗಿದ್ದು ಅವರನ್ನು ಮಾಂಡಲೀಕರನ್ನಾಗಿ ಮಾಡಿ ತಮ್ಮ ಕೆಲಸ ಮಾಡಿ ಕೊಳ್ಳುತ್ತಿದ್ದರು. ದುರ್ಬಲರನ್ನು ಬ್ರಿಟಿಷರು ಯಾವತ್ತು ಎತ್ತಿಹಿಡಿಯುತ್ತಿದ್ದಿಲ್ಲ. ಬೇಡರು ಕ್ಷಾತ್ರ ಪರಂಪರೆಯುಳ್ಳವರಾಗಿದ್ದರು. ಇವರಿಗೆ ಆಶ್ರಯ ಕೊಡುವ ಯಾವುದೇ ರಾಜ್ಯಗಳು, ಸಂಸ್ಥೆಗಳು ಇರಲಿಲ್ಲ.

ಇವರು ಯೋಧ ವೃತ್ತಿ ನಿಂತು ಹೋಗಿ ಅನುವಂಶಿಕ ಉದ್ಯೋಗ ಇರಲಿಲ್ಲ. ಸಹಜವಾಗಿ ಸ್ವಾತಂತ್ರ್ಯ ಪ್ರಿಯರಾದ ಇವರು ಬ್ರಿಟಿಷರನ್ನು ಕಠೋರವಾಗಿ ವಿರೋಧಿಸುತ್ತಿದ್ದರು. ಉದಾ ಹರಣೆಗೆ ರಾಜವೆಂಕಟಪ್ಪ ನಾಯಕ. ಸಾಮಾನ್ಯ ಬೇಡರು ಸಹ ಬ್ರಿಟಿಷರಿಗೆ ಸಿಂಹ ಸ್ವಪ್ನರಾದರು. ಉದಾಹರಣೆಗೆ ಹಲಗಲಿ ಬೇಡರು.

ಈ ಹಿನ್ನೆಲೆಯಲ್ಲಿ ಸಿಂಧೂರ ಲಕ್ಷ್ಮಣನಂತವರು ಭಾರತೀಯರೇ ಆದ ಬಲಿಷ್ಠರಿಂದ ಕಿರುಕುಳಕ್ಕೆ ಒಳಗಾಗಿ ಬೇರೆ ಉಪಾಯ ಕಾಣದೆ ಸಿಡಿದೇಳಬೇಕಾಯಿತು. ಈ ಬಲಿಷ್ಠರು ಬ್ರಿಟಿಷರ ಹಿಂಬಾಲಕರಾಗಿರುವುದರಿಂದ ಸ್ವಾಭಾವಿಕವಾಗಿ ಬ್ರಿಟಿಷರ ವಿರೋಧಿಯಾಗಿ ಸ್ವಾತಂತ್ರ್ಯ ಕಹಳೆಯನ್ನು ಊದಿದರು.

ಸಿಂಧೂರ ಲಕ್ಷ್ಮಣನಿಗೆ ಸ್ವಾತಂತ್ರ್ಯ ಪ್ರೇಮದ ಸಂಸ್ಥಾನಿಕರಾಗಲಿ, ಸಂಸ್ಥೆಗಳಲ್ಲಾಗಲಿ ಇವನಿಗೆ ಆಶ್ರಯ ದೊರೆಯದೆ ಇದ್ದುದರಿಂದ ಬ್ರಿಟಿಷರನ್ನು ವಿರೋಧಿಸುತ್ತಲೆ ಬಂದನು. ಶ್ರೀಮಂತರ ಲೂಟಿಗೆ ಆರಂಭಿಸಿದರು. ಆದರೆ ಇವನು ನಿಸ್ವಾರ್ಥಿಯಾದ್ದರಿಂದ ಲೂಟಿ ಮಾಡಿದ ಹಣವನ್ನು ಬಡವರಿಗೆ ಹಂಚುತ್ತಿದ್ದನು. ಆದರೆ ಶ್ರೀಮಂತರು ಬಡವರಿಗೆ ಸಹಾಯ ಮಾಡುತ್ತಿರಲಿಲ್ಲ.

ಈ ದಿಸೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ, ಅದರಲ್ಲೂ ಕಡು ಬಡತನದಿಂದ ಬಂದ ವ್ಯಕ್ತಿ. ಸ್ವಾಭಿಮಾನದ ಆಗರವಾಗಿ, ಬಡವರ ಭಾಗ್ಯನಿಧಿಯಾಗಿ, ಬಲ್ಲವ ಸಿರಿವಂತರಿಗೆ ಶೂಲದ ವಿಧಿಯೂ ಧೂತನಂತೆ ಆಂಗ್ಲರಿಗೆ ಸಿಂಹ ಸ್ವಪ್ನನೂ ಅಪಾರ ಗುಣಮಣಿಯೂ ಆದಂತ ಲಕ್ಷ್ಮಣನಿದ್ದನು. ಮುಂಬಯಿ ಕರ್ನಾಟಕದ ಉತ್ತರ ಗಡಿಯಲ್ಲಿ ‘ಜತ್ತ’ ಎಂಬುದು ಒಂದು ಚಿಕ್ಕ ಸಂಸ್ಥಾನವಾಗಿತ್ತು. ಅದನ್ನು ಕೊಲ್ಲಾಪುರದ ರಾಜಮನೆತನಕ್ಕೆ ಸಂಬಂಧಿಸಿದ ‘ಢಪಳೆ’ ಎಂಬ ಅರಸು ಆಳುತ್ತಿದ್ದನು. ಆ ಸಂಸ್ಥಾನದಲ್ಲಿ ಸಿಂಧೂರು ಎಂಬುದು ಒಂದು ಚಿಕ್ಕ ಹಳ್ಳಿ. ಅಲ್ಲಿ ಗ್ರಾಮಸ್ಥರಕ್ಕೆ ಕೆಳಗೆ ಓಲೇಕಾರ(ಹಳಬ)ನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣನು.

ಈಗೀನ ಬೀಳಗಿ ತಾಲೂಕಿನಲ್ಲಿ ಬರುವ ಜತ್ತಿ (ಈಗ ಆ ಊರಿಗೆ ತೆಗ್ಗಿಎಂದು ಕರೆಯು ತ್ತಾನೆ) ಎಂಬ ಆಗಿನ ಸಂಸ್ಥಾನದಲ್ಲಿ ಸಿಂಧೂರ ಎಂಬ ಊರಲ್ಲಿ ನಡೆದ ಘಟನೆ ಇದಾಗಿದೆ. ಮುಂಬಯಿ ಕರ್ನಾಟಕ ಇದ್ದಾಗ ಜಮಖಂಡಿ ತಾಲೂಕಿನಲ್ಲಿ ಬೀಳಗಿ ತಾಲೂಕ ಮತ್ತು ಜತ್ತಿ ಉಮಾರಾಣಿ ಸಂಸ್ಥಾನದಲ್ಲಿ ನಡೆದ ಘಟನೆ ಎಂದು ತೋರುತ್ತದೆ.

ಸಿಂಧೂರ ಲಕ್ಷ್ಮಣನನ್ನು ಕುರಿತ ಲಾವಣಿಗಳು ಹಾಗೂ ಮಹಾಕಾವ್ಯಗಳು ಬಂದಿವೆ. ಆ ಪ್ರದೇಶಕ್ಕೆ ಸೇರಿದ ಬಿದರಿ ಉಳ್ಳಾಗಡ್ಡಿ ಪರಪ್ಪನೆಂಬುವವರು ಲಾವಣಿಯನ್ನು ರಚಿಸಿದ್ದಾರೆ. ‘ಬಿಜಾಪೂರ ಜಿಲ್ಲೆಯ ಲಾವಣಿಗಳು’, ‘ಧಾರವಾಡ ಜಿಲ್ಲೆಯ ಲಾವಣಿಗಳು’ ಮತ್ತು ‘ಜನಪದ ವೀರಗೀತೆಗಳು’ ಬಿ.ಬಿ. ಮಹಿಶವಾಡಿ ರಚಿಸಿದ್ದಾರೆ. ಅಲ್ಲದೇ ಡಾ. ಆರ್.ಸಿ. ಮುದ್ದೇಬಿಹಾಳ ರವರು ಸಿಂಧೂರ ಲಕ್ಷ್ಮಣ ಮಹಾಕಾವ್ಯವನ್ನೇ ಬರೆದಿದ್ದಾರೆ.

ಈತನನ್ನು ಕುರಿತ ಹಾಡುಗಳು ಇಂದಿಗೂ ಜನಮನದಲ್ಲಿ ಅಳಿಸದೇ ಹಾಗೇ ಉಳಿದು ಬಂದಿದ್ದು ನಮಗೆ ಕಾಣುತ್ತದೆ.

“ಜಮಖಂಡಿ ನಾಡ ಪರಗಣಿ ಜತ್ತಿ ಉಮರಾಣಿ ಆಳವಂಥ ಧನೀ
ಡಪ್ಪಳೆ ಸರಕಾರ ಡಪ್ಪಳೆ ಸರಕಾರ                     ||ಪಲ್ಲವಿ||
ಜತ್ತಿ ತಾಲೂಕ ಪೈಕಿ ಸಣ್ಣಹಳ್ಳಿ ಸಿಂಧೂರು
ಸಿಂಧೂರಾಗ ಲಕ್ಷ್ಮಣ ಹುಟ್ಯಾನ | ಬಂಟನೆನಿಸ್ಯಾನ |
ಕೊಟ್ಟ ವಚನ | ತಪ್ಪುದಿಲ್ಲಾ |ತಪ್ಪುದಿಲ್ಲಾ

ಘಟ ಹೋಗು ತನಕ ಹಿಡಿದ ಹಟ ಬಿಡಾವಲ್ಲ
ಪಾಂಡವರೊಳಗ ಇದ್ದಾಂಗ ಭೀಮ | ಚೆಲುವ ಚಂದ್ರಾಮ |
ತೇಟ ಹೋಳಿಕಾಮ ರೂಪದಲ್ಲಿ ಡೌಲಾ ರೂಪದಲ್ಲಿ ಡೌಲಾ |
ಹೆಂತಾ ತಾಯಿ ಹೊಟ್ಟೆಯಲ್ಲಿ ಹುಟ್ಟಿಯಾದ ಪ್ರಭುಲ್”

ಜತ್ತಿ ತಾಲೂಕಿನ ಒಂದು ಪುಟ್ಟಹಳ್ಳಿ ಸಿಂಧೂರ  ಲಕ್ಷ್ಮಣನು ಹುಟ್ಟಿದ ಊರು. ಹುಟ್ಟಿ ಆ ವ್ಯಕ್ತಿ ಬಂಟನೆನಿಸಿಕೊಂಡು ಬೆಳೆದವನು. ವಚನ ಕೊಟ್ಟ ಮೇಲೆ ಎಂದೆಂದಿಗೂ ಆತ ತನ್ನ ಘಟ ಹೋದರೂ ಪರವಾಗಿಲ್ಲ. ಆದರೆ ಹಿಡಿದ ಹಟವನ್ನು ಬಿಡುವವ ಅಲ್ಲ. ಪಂಚ ಪಾಂಡವರಲ್ಲಿ ಭೀಮ ಇದ್ದಾಂಗ ಚಂದ್ರಾಮನ ಹಾಗೆ ಚೆಲುವ ನೋಡುವವರಿಗೆ ಹೋಳಿ ಕಾಮನ ಹಾಗೆ ಕಾಣುತ್ತಿದ್ದ ರೂಪದಲ್ಲಿ ಕೂಡ ಡೌಲು. ಇಂಥ ವ್ಯಕ್ತಿ ಒಂದು ದಿನ ಸರಕಾರದ ನೌಕರಿಯಲ್ಲಿ ಓಲೇಕಾರನಾಗಿ ಕೆಲಸ ಮಾಡುತ್ತಿದ್ದ ಅಲ್ಲದೇ ದರೋಡೆಯನ್ನು ಮಾಡುತ್ತಿದ್ದ. ಓಟದಲ್ಲಿ ಕೂಡ ಬಹಳ ಪ್ರಸಿದ್ಧನಾಗಿದ್ದ. ವೇಗದಲ್ಲಿ ಓಡುವಮೊಲವನ್ನು ಅದಕ್ಕಿಂತ ಮುಂದೆ ಓಡಿ ಮೊಲ ಹಿಡಿಯುತ್ತಿದ್ದ. ಅಷ್ಟೇ ಗುರಿಯೂ ಕೂಡ ಇತ್ತು. ಹಾಗೆಯೇ ಇಂಥ ಗುರುತಿಗೆ ಕಲ್ಲು ಎಸೆಯಬೇಕೆಂದರೆ ಅದಕ್ಕೆ ಹೋಗಿ ಬಡಿಯುವ ಹಾಗೆ ಎಸೆಯುತ್ತಿದ್ದ. ಹೀಗಿರುವಾಗ ಒಂದು ದಿನ ಆಕಸ್ಮಾತ್

“ಒಬ್ಬ ಅಯ್ಯನಾರನ ಕಾಲಾಗ ಮರ್ಮ ಬಿತ್ತು |
ಆತ ವಿಪರೀತ ಹೇಳತಾನ ನಿಂತ |ಭಿಡೇ ಇಡಲಿಲ್ಲಾ |
ಒಂದು ದಿನಾ ಲಕ್ಷ್ಮಣ ತಳ್ಳಿ ಮಾಡ್ಯಾನ ಅಯ್ಯನಾರನ ಮ್ಯಾಲ |
ಊರಿದ್ದಲ್ಲಿ ಹೊಲಗೇರಿ ಉಂಟು |ಮಾಡಿ ರಿಪೋರ್ಟ
ಬಂದ ಇನ್ಸ್‌ಪೆಕ್ಟರ್ ಆದ ಬೆಂಕಿ ಲಾಲ |ಬೆಂಕಿ ಬಾಲ
ಕರಕರ ಹಲ್ಲ ತಿಂತಾನ ಲಕ್ಷ್ಮಣನ ಮ್ಯಾಲ”

ಹೀಗೆ ಒಂದು ಸಣ್ಣ ತಪ್ಪಿನಿಂದಾಗಿ ಆತ ಸೊಕ್ಕಿನಿಂದ ಮಾತಾಡಿದ್ದಕ್ಕಾಗಿ ಈತ ಮೊದಲೇ ಕ್ಷಾತ್ರ ತೇಜಕ್ಕೆ ಎಂದು ತಲೆಬಾಗಿ ಗೊತ್ತಿರಲಿಲ್ಲ. ಈಗ ಅಂಥಾ ಪ್ರಸಂಗ ಬಂದ ಲಕ್ಷ್ಮಣ ಅವನನ್ನು ತಳ್ಳಿ ಬಿಡುತ್ತಾನೆ. ಆಗ ಅವನು ರಿಪೋರ್ಟ್ ಮಾಡುತ್ತಾನೆ. ಆಗ ಇನ್ಸ್‌ಪೆಕ್ಟರ್ ಬಂದು ಇವರ ಮೇಲೆ ಕರಕರ ಹಲ್ಲು ಕಡಿದರು. ಸಿಪಾಯಿಗಳೊಂದಿಗೆ ಈತನನ್ನು ಕರೆಕಳಿಸು ತ್ತಾನೆ. ಆಗ ಇನ್ಸ್‌ಪೆಕ್ಟರ್ ಬೇಡಿ ಹಾಕಲಿಕ್ಕೆ ಹೋದ. ಲಕ್ಷ್ಮಣ ಕೈಕೊಸರಿ ಬಾಳ ಹುಸಾರಿಂದಾ ಬಾರೋ ಎದ್ದು ಇಷ್ಟು ಅಂದು ಎರಡು ಹೆಜ್ಜೆ ಹಿಂದ ಸರಿದು ಕಟ್ಟಿ ಜಿಗಿದು ಓಡಿ ಹೋಗು ತ್ತಾನೆ. ಕೂಡಲೇ ಇನ್ಸ್‌ಪೆಕ್ಟರ್ ಅವನನ್ನು ಅವನಿಗಿಂತ ಚದುರಾಗಿ ಓಡುತ್ತಾ ಭರ್ಚಿಯನ್ನು ಎಸೆಯುತ್ತಾನೆ. ಅದು ಲಕ್ಷ್ಮಣನ ತೊಡೆಗೆ ನೆಡುತ್ತದೆ. ಆಗ ಒಮ್ಮೆಲೇ ಗಾಯದಿಂದ ರಾಮಾ ರಾಮಾ ಎಂದು ಭೂಮಿ ಮೇಲೆ ಬಿದ್ದು ಬಿಡುತ್ತಾನೆ. ಆಗ ದಾವಾಖಾನೆಗೆ ಹಾಕುತ್ತಾರೆ. ಡಾಕ್ಟರು ಎರಡು ದಿನಗಳಲ್ಲಿ ಆರಾಮ ಮಾಡುತ್ತಾರೆ. ನಂತರ ಇನ್ಸ್‌ಪೆಕ್ಟರ್ ಅವನನ್ನು ಒಯ್ದು ಜೈಲಿಗೆ ಹಾಕುತ್ತಾರೆ.

ಇತ್ತ ಕಡೆ ಲಕ್ಷ್ಮಣನ ಅಳಿಯರಾದ ಪರಿಸ್ಯಾ, ಬಸ್ಯಾ, ನರಸ್ಯಾ. ಈ ಮೂರು ಜನ ಸೇರಿ ರಾತ್ರೋ ರಾತ್ರಿ ಜತ್ತಿಗೆ ಬಂದು ಜೈಲು ಕಂಬಿ ಮುರಿದು ಲಕ್ಷ್ಮಣನನ್ನು ಕರೆದುಕೊಂಡು ಹೋಗುತ್ತಾರೆ. ಆಗ ಪೇಟೆಯಲ್ಲಿ ನಿಂತು ಜನರಿಗೆ ಎಚ್ಚರಿಕೆ ಕೊಡುತ್ತಾರೆ.

“ಸಾರಿ ಹೇಳತಾರ |ನಿಂತ ಪ್ಯಾಟ್ಯಾಗ |ನಡು ಪ್ಯಾಟ್ಯಾಗ
ಗಂಡಸಿನ ಮಗ ಇದ್ರ ಬಂದ ಹಿಡಿರೋ ನೀವು ನಮಗ |
ಕ್ಯಾಕಿ ಹೊಡೆದು ಹೊಂಟರು ಊರಾಗ
ಯಾರ್ಯಾರು ಬರಲಿಲ್ಲ ಸನೇದಾಗ  ||

ಆಗ ಬ್ರಿಟಿಷರಿಗೆ ಹೇಗೋ ಆ ಸುದ್ದಿಯು ತಿಳಿಯುತ್ತದೆ. ಅವರು ಲಕ್ಷ್ಮಣನ ಮೇಲೆ ಸಿಟ್ಟಾಗುತ್ತಾರೆ. ಕೂಡಲೇ ಸಮಾಚಾರವನ್ನು ಕಳಿಸಿ ಅವರನ್ನು ಹುಡುಕಲು ಹಚ್ಚುತ್ತಾರೆ. ಅವರಿಗೆ ಲಕ್ಷ್ಮಣ ಸಿಗುವುದಿಲ್ಲ. ಲಕ್ಷ್ಮಣ ಟೋಳಿ ಕಟಗೊಂಡು ಗುಡ್ಡದಲ್ಲಿ ಅಡಗಿಕೊಂಡು ಕುಳಿತಿದ್ದ. ಈ ಸುದ್ದಿ ಸುತ್ತಕಡೆ ಹಬ್ಬಿತು. ಆಗ ಬ್ರಿಟಿಷರು ಹಿಡಿದುಕೊಟ್ಟವರಿಗೆ ಒಳ್ಳೆಯ ಬಹುಮಾನ ಕೊಡುತ್ತೇವೆ ಎಂದು ಡಂಗೂರ ಸಾರುತ್ತಾರೆ. ಆಗ ಒಬ್ಬ ಇನ್ಸ್‌ಪೆಕ್ಟರ್ ಬಂದು ನಾನು ಹಿಡಿದುಕೊಡುತ್ತೇನೆಂದು ವೀಳ್ಯವನ್ನು ಸ್ವೀಕರಿಸುತ್ತಾನೆ. ನಾಳೆನೇ ಅವನ ನೆತ್ತರವನ್ನು ಕುಡಿಯುತ್ತೇನೆ ಎನ್ನುತ್ತ ಸಂತೋಷದಲ್ಲಿರುವನು. ಆ ಸುದ್ದಿಯೂ ಲಕ್ಷ್ಮಣನಿಗೆ ಮುಟ್ಟುತ್ತದೆ. ಮರುದಿನ ಇನ್ಸ್‌ಪೆಕ್ಟರ್ ಗುಡ್ಡಕ್ಕೆ ಬರುತ್ತಾನೆ ತನ್ನ ಸಿಬ್ಬಂಧಿಗೆ ಹೇಳುತ್ತಾನೆ. ಈಗ ಲಕ್ಷ್ಮಣ ಸಿಕ್ಕರೆ ನೆತ್ತರನ್ನು ಕುಡಿತೀನಿ ಎನ್ನುತ್ತಾನೆ. ಈ ಮಾತು ಲಕ್ಷ್ಮಣನಿಗೆ ಕೇಳುತ್ತದೆ. ಆಗ ಎಲ್ಲಾರು ಸಜ್ಜಾಗುತ್ತಾರೆ. ಇನ್ಸ್‌ಪೆಕ್ಟರ್ ಮುಂದೆ ಬರುವದೊಳಗೆ ಅವನು ಮುಂದೆ ಜಿಗಿದು ನಿಲ್ಲುತ್ತಾನೆ. ಆಗ ಲಕ್ಷ್ಮಣ…..

“ಒಬ್ಬರೊಬ್ಬರು ತಕ್ಕ ಮುಕ್ಕಬಿದ್ದ | ಒಬ್ಬನ ಒಬ್ಬ ವಗದ
ಲಕ್ಷ್ಮಣ ಕೆಳಗೆ ಬಿದ್ದಾನು ಕೆಳಗೆ ಬಿದ್ದಾನು
ಎದಿಮ್ಯಾಲ ಕುಂತು ಇನ್ಸ್‌ಪೆಕ್ಟರ್ ಪಿಸ್ತೂಲ ಹಿಡಿದಾನು |
ಅವಸರಮಾಡಿ ನರಸ್ಯಾ ಓಡಿ ಬಂದು |ಕೊರಳಿಗೆ ಹಗ್ಗ ವಗದ |
ಜಗ್ಗಿ ಜೋಲಿ ಹೊಡೆದ | ಇನ್ಸ್‌ಪೆಕ್ಟರ್‌ನನ್ನು ಕೆಡವ್ಯಾನು ನೆಲಕ್ಕೆ
ಕುಡುಗೋಲು ತಗೊಂಡು ಕರಕರ ಕುತ್ತಿಗೆ ಕೊಯ್ದನು||

ಇನ್ಸ್‌ಪೆಕ್ಟರ್ ಕುತ್ತಿಗೆ ಕೊಯ್ಯು ಅವನ ಕತ್ತನ್ನು ಕಲ್ಲೋಳಗಿ ಊರಿನ ಅಗಸಿಗೆ ಕತ್ತು ಕಟ್ಟಿ ಚಾವಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಆಗ ಯಾರ ಇವರ ತಂಟೆಗೆ ಬರುವುದಿಲ್ಲ. ಆಗ ವಾಲೀಕಾರಗ ಎಲ್ಲಾ ತಿಳಿಸಿ ಅರಭಾಂವಿ ಕ್ಷೇತ್ರಕ್ಕೆ ಬಂದು ಅಜ್ಜನವರ ಪಾದಕ್ಕೆ ನಮಸ್ಕರಿಸಿ ಅಲ್ಲಿಯೇ ಊಟ ನೀರು ಕೊಟ್ಟರು. ಅಲ್ಲಿ ರಡ್ಡರಬ್ಬಿ ಬಸ್ಯಾ, ದರೂಠ ಸಿದ್ದ್ಯಾ, ನೆಡೋಗಿ ಹೊಲಿಯಾ ದುಂಡ್ಯಾ ಇವರೂ ಲಕ್ಷ್ಮಣನ ಟೋಳೆಯಲ್ಲಿ ಕೂಡಿದರು. ಎಲ್ಲಾರು ಜೊತೆ ಸೇರಿ ಗಲಗಲವಾದ ಮಾಡಿ ದೇಸಾಯೀನುರ ಹಳ್ಳಿ ಕೊಳ್ಳೆ ಹೊಡೆದು ಕಾಕಣರ (ಕಾಬಂಡಿಕಿ) ತೋಟದಲ್ಲಿ ಊಟಮಾಡಿ ಮಲಗುತ್ತಾರೆ.

ಮತ್ತೇ ಬ್ರಿಟಿಷರು ಶೋಧನೆ ನಡೆಸಿ ಇವರು ಇರುವ ಸ್ಥಳವನ್ನು ಪತ್ತೆ ಹಚ್ಚಿ ಜತ್ತಿ ಪೊಲೀಸರು ದಂಡ ಸೇರಿ ಇವರು ಇರುವ ಸ್ಥಳ ನೋಡಿ ಗುಂಡು ಹಾರಿಸುತ್ತಾರೆ. ಆಗ ಮಲಗಿದ್ದ ಇವರು ಗುಂಡಿನ ಸದ್ದು ಕೇಳಿ ಗಾಭರಿಯಾಗಿ ಎದ್ದು ಒಬ್ಬರ ಕೊಟ್ಟರು ಜಿಗಿದು ಪಾರಾಗಾಕ ಹತ್ತಿದರು. ಆಗ ಬ್ರಿಟಿಷರು ಬಸ್ಯಾನ ಹಿಡಿದು ಕೊಂದು ಬಿಟ್ಟರು. ಆದರೆ ನಡೋಗಿ ಹೊಲಿಯಾರ ದುಂಡ್ಯಾ ತಪ್ಪಿಸಿಕೊಂಡು ಪ್ರಾಣವನ್ನು ಉಳಿಸಿಕೊಂಡನು.

ಐದು ಅಕ್ಕಡಿ ಭಾವಿ ಅಡ್ಡ ಅಗಲಾ |
ನರಸ್ಯಾ ಜಿಗಿದ ಹೋದನು ಸಿಗಲಿಲ್ಲಾ ||
ಬಾಳ ಬಂಟ ಸಾವ್ಯಾ ಗೋಪಾಲ
ವೈದ ಹಾಕ್ಯಾರ ಬೆಳಗಾವಿ ಜೈಲಾ
ಲಕ್ಷ್ಮಣ ಹೊಡಿತಾನು ಕಲ್ಲಾ
ಬಹಳ ಮಂದಿದು ಮುರಿದಾನು ಕಾಲ

ಅಲ್ಲಿಂದ ಪಾರಾಗಿ ಬೆಳಗಾಂವಿಯ ಇಂಡಲಗಿ ಜೈಲಿಗೆ ಬಂದು ಜೈಲು ಮುರಿದು ಸಾವ್ಯಾ ಗೋಪಾಲ ಇಬ್ಬರನ್ನು ಬಿಡಿಸಿಕೊಂಡು ಅಲ್ಲಿಂದ ತಿಗಡಿಗೆ ಹೋಗಿ ದರೋಡೆ ಮಾಡಿ ಆ ಊರನ ಚನ್ನಪ್ಪ ಸಾವುಕಾರ ಊಟ ಹಾಕುತ್ತಾನೆ. ಅಲ್ಲಿಂದ ಗೋಪಿಚಂದ ಗುಜ್ಜನ ಅವರ ಮನೆಯನ್ನು ಹಗಲು ದರೋಡೆ ಮಾಡುತ್ತಾರೆ. ಆ ದುಡ್ಡನ್ನು ಬಡ ಬಗ್ಗರಿಗೆ ಹಂಚುತ್ತಾರೆ. ಕಳವು ಮಾಡಿದ ಮಾಲನ್ನು ಹೊರಲಾರದೆ ತೆಗೆದುಕೊಂಡು ಹೊರಟಾಗ ದಾರಿ ದಾರಿಯಲ್ಲಿ ರೂಪಾಯಿ ಚೆಲ್ಲಿ ಬಿಟ್ಟಿದ್ದರು.

ಕೂಡಲೇ ಇವರನ್ನು ಹುಡುಕಲಿಕ್ಕೆ ಅಲ್ಲಲ್ಲಿ ತಪಾಸಣೆಗೆ ಕಳಿಸಿದರು. ಆದರೆ ಒಂದು ತಿಂಗಳ ಆಕಡೆ ತಿರುಗಿ ಹೋಗಲೇ ಇಲ್ಲ. ಆನಂತರ ಮುಂಡಗನೂರಿಗೆ ಬರುತ್ತಾರೆ. ಆಗ ಗಾರ್ಮನ್ ಸಾಹೇಬ ಮೋಟಾರು ತೆಗೆದುಕೊಂಡು ಬರುತ್ತಾನೆ. ಆಗ ಲಡಾಯಿ ಪ್ರಾರಂಭ ವಾಗುತ್ತದೆ.

ಮುಂಜಾನೆ ಲಡಾಯಿ ಸುರುವಾತು
ಸಂಜಿತನ ನಡಿತು |ಸಾಹೇಬ ತೆಳಗ |ಲಕ್ಷ್ಮಣ ಮ್ಯಾಗ |
ಗುಡ್ಡದ ಮ್ಯಾಗ |ಸಾಹೇಬಗ ಹೇಳೆಂಬ ಹುಶಾರಿರಲಿ ಮೈಮ್ಯಾಗ
ಹೇಳಿ ಹೇಳಿ ಹೊಡೆದರೆ ಪಲ್ಲಾ |
ಸಾಹೇಬ ನಿಂತಿದ್ದ ಮೋಟಾರದ ಮ್ಯಾಲ |
ಟೊಪ್ಪಿಗೆಗೆ ಗುಂಡು ಬಡಿದಿತಲ್ಲಾ |
ಸಿಡಿದ ಬಿದ್ದಿತ ಭೂಮಿಯ ಮೇಲಾ  |
ಮೋಟಾರ ತಿರುವಿ ಸಾಹೇಬ ನಿಂದರಲಿಲ್ಲಾ |
ಚಣ್ಣದ ತುಂಬ ಮುಳಗಿತು ಮಲಾ |
ಲಕ್ಷ್ಮಣನ ಹೇಳತಾನ ತಿರುಗಿ ನಾಳೆ ಬರತೀನ
ನಿನ್ನ ಹಿಡಿತೇನ ಇರಲಿ ಎಚ್ಚರಾ

ಆಗ ಲಕ್ಷ್ಮಣ ಸಾಹೇಬನಿಗೆ ಹೇಳತಾನೆ ನಾಳೆ ರಾತ್ರಿ ಚಾವಡಿಗೆ ಬರತೇನಿ ಮೈಮರೆತು ಮಲಗಬೇಡ. ಗಂಟು ಹಾಕಿಕೋ ಪದರಿನ್ಯಾಗ ಎಂದು ಗದರಿಸುತ್ತಾನೆ. ಆದರೇನು ಮಾಡು ವುದು ಮೊದಲೇ ಸಾಹೇಬ ಹೆದರಿ ದಣಿದು ಬಂದು ಮಲಗಿದ್ದ ಚೆನ್ನಾಗಿ ನಿದ್ದೆ ಮಾಡುತ್ತಿದ್ದ.

ಆಗ ಲಕ್ಷ್ಮಣ ಸಾಬ್ಯಾನ, ಗೋಪಾಲಗ, ನರಸ್ಯಾಗ, ಹೇಳಿ ಕತ್ತಿ, ಬರ್ಚಿ, ಪಿಸ್ತೂಲ, ಬಂದೂಕ ಕೈಯಲ್ಲಿ ತೆಗೆದುಕೊಂಡು ಬರುತ್ತಾರೆ. ರಾತ್ರಿ ಚೌಡಿಗೆ ಆಗ ಅವರು

“ಇಬ್ಬರ ಪೋಲಿಸರ ಮೀಸೆ ಬಳಿಸ್ಯಾಕ
ನಿಂತ ವದರ್ಯಾರ |
ಜಗ್ಗಿ ಎಬಿಸ್ಯಾರ ಮಲಗಿದ ಸಾಹೇಬಗ
ಕುದುರಿ ಹಗ್ಗ ಕೊಯ್ದ ಪಾರಾ ಆದರೋ ಸಿಗದಂಗೆ”

ಆಗ ಸಾಹೇಬ ಕೋಪ ತಾಳಿ ಗುಡ್ಡವನ್ನು ತಿರುಗುತ್ತಾನೆ. ಆದರೆ ಒಬ್ಬರು ಸಿಗುವುದಿಲ್ಲ. ಆದರೆ ಇವರು ತಮರಿ ಮಟ್ಟ ಗುಡ್ಡದಲ್ಲಿ ತಪ್ಪಿಸಿ ಕುಳಿತಿದ್ದರು. ಅಲ್ಲಿಂದ ಅಮೀನಗಡಕ್ಕೆ ಬಂದರು. ಆಗ ಒಂದು ಸ್ಥಳ ನೋಡಿ ಚಿಂತೆ ಇಲ್ಲದೆ ಆರಾಮದಿಂದ ಇರುತ್ತಾರೆ.

ಮುಂದೆ ಲಕ್ಷ್ಮಣ ತೆಗ್ಗಿನಾಯಕರ ಮನೆಗೆ ಹೋಗುತ್ತಾನೆ. ಆಗ ಸರಕಾರದವರು ಅವನಿಗೆ ಇನಾಮು ಕೊಡುವ ಆಸೆ ಹುಟ್ಟಿಸಿ ಪಿತೂರಿಯಿಂದ ಲಕ್ಷ್ಮಣನನ್ನು ಅವನ ಪಾರ್ಟಿಯ ಜನರನ್ನು ಹಿಡಿಯಲು ಯತ್ನಿಸಿ ವಿಫಲರಾಗಿರುತ್ತಾರೆ. ನಾಯಕ ತನಗೆ ಇನಾಮು ಬರುವುದೆಂದು ತೆಗ್ಗಿನಾಯಕ ಇವರಿಗೆ ಅನ್ನ ನೀರು ಕೊಡುತ್ತಾನೆ. ಆಗ ಇವನನ್ನು ನಂಬಿದ ಲಕ್ಷ್ಮಣ ಇಲ್ಲಿಯವರೆಗೆ ತಾನು ದರೋಡೆ ಮಾಡಿದ ಕಡೇವು, ಕಂತಿಸರ ಒಂದೂ ಉಳಿಯದಂಗ ದರೋಡೆ ಮಾಡಿದ್ದನ್ನು ತೆಗ್ಗಿ ನಾಯಕನಿಗೆ ಕೊಟ್ಟ ಬಿಡುತ್ತಾನೆ.

ಆಗ ಲಕ್ಷ್ಮಣನಿಂದ ಅಪಾರ ಸಂಪತ್ತು ಪಡೆದಿದ್ದು ಬ್ರಿಟಿಷರಿಗೆ ಗೊತ್ತಾಗಿ ಸರಕಾರ ತಪಾಸಣೆ ಮಾಡಿಸುತ್ತಾರೆ. ಪಿತೂರಿ ನಡೆಸಿ ತೆಗ್ಗಿ ನಾಯಕನನ್ನು ಹಿಡಿಯುತ್ತಾರೆ. ಅವನಿಗೆ ಲಕ್ಷ್ಮಣನನ್ನು ಹಿಡಿದು ಕೊಡದೆ ಇದ್ರೇ ನಿನ್ನ ಪ್ರಾಣವನ್ನೇ ತೆಗೆದುಕೊಳ್ಳುತ್ತೇನೆ. ಅವರು ಅಂದಾಗ ತೆಗ್ಗಿ ನಾಯಕನಿಗೆ ಮತ್ತಷ್ಟು ಎಚ್ಚರಿಕೆ ಹುಟ್ಟಿ ಆಗ ತೆಗ್ಗಿ ನಾಯಕ

“ಕಬಲಾದ ತೆಗ್ಗಿನಾಯಕ ಅಂಜಿ ತನ್ನ ಮನಕ್ಕ
ಲಕ್ಷ್ಮಣನ ಕೊಲ್ಲಿಸುದಕ |ಹಾಕಿದಾನ ಲೆಕ್ಕ
ವಚನ ಕೊಟ್ಟನಾಗ”

ಬ್ರಿಟಿಷರ ಪ್ರಾಣ ಬೆದರಿಕೆಯಿಂದ ದ್ರೋಹ ಮಾಡಲಿಕ್ಕೆ ಆತ ಹೇಳುತ್ತಾನೆ. ನಾಳೆ ಶನಿವಾರ ತೋಟದಾಗ ಔತಣಕೂಟ ಇಡುತ್ತೇನೆ. ಅಲ್ಲೇ ನಾನು ದೇವರಿಗೆ ಮಾಡುತ್ತೇನೆ. ಟಗರು ಕಡಿಸುತ್ತೇನೆ. ಶೇರೆ, ಸಿಂದಿ ತರಿಸುತ್ತೇನೆ. ಯಾರದೇನು ಅಂಜಿಕೆ. ತಿಂದು ಮಜಾ ಮಾಡೋನು ಎನ್ನುತ್ತಾನೆ. ಆಗ ನಾಯಕನನ್ನು ನಂಬಿದ ಲಕ್ಷ್ಮಣ ಒಪ್ಪಿಕೊಂಡು ಆ ಔತಣ ಕೂಟಕ್ಕೆ ಹೋಗುತ್ತಾನೆ ಆಗ ನಾಯಕ.

“ಶೆರೆ, ಸಿಂದಿ ಸಾಕಷ್ಟು ಕಳಿಸ್ಯಾನ
ಕುರಿಕೋಳಿ ಮಾಡಸ್ಯಾನ
ಊಟಕ ಕುಂದಿರಸ್ಯಾನ
ಮನಿಯಾಗ ಉಳಿದಾನ”

ಹೀಗೆ ಎಲ್ಲ ಸಜ್ಜು ಮಾಡಿ ತಾನು ಮನೆಯಲ್ಲಿ ಉಳಿದು ವಾಲಿರಾಡಗ ಪಿತೂರಿ ಮಾಡಿ ಎಲ್ಲಿ ಹೇಗೆ ಕೊಲ್ಲಬೇಕೆಂದು ಎಲ್ಲವನ್ನು ತಿಳಿಸುತ್ತಾನೆ. ಊಟ ಮಾಡಲಿಕ್ಕೆ ಆರಂಭಿಸಿದಾಗ ರಾತ್ರಿ ಆಗಿರುತ್ತದೆ. ಆಗ ಲಕ್ಷ್ಮಣನ ಎದುರಿಗೆ ಹತ್ತಿರದಲ್ಲಿ ಒಂದು ಕಂದೀಲು ಇರುತ್ತದೆ. ಅದೇ ಬೆಳಕಿಗೆ ಗುರಿ ಇಟ್ಟು ನೀನು ಗುಂಡು ಹೊಡಿ ಎಂದು ಹೇಳಿರುತ್ತಾನೆ. ಆಗ ಊಟ ಮಾಡಲು ಆರಂಭಿಸುತ್ತಾರೆ.

ತಾಟ ತಂದ ಮುಂದಿಟ್ಟಾನ ಹಾಲಕ್ಕಿ ನುಡಿದಿತಾಗ |
ನರಸ್ಯಾ ಹೇಳತಾನ ಲಕ್ಷ್ಮಣಗ |ಹಾಲಕ್ಕಿ ನುಡಿಯತೈತಿ
ಸಂಶೆ ಬರತೈತಿ | ನಂಗ ತಿಳಿತೈತಿ |ಮೋಸ ಇದರಾಗ |
ಲಕ್ಷ್ಮಣ ಕಬಲಾಗಲಿಲ್ಲ ಒಂದು ತುತ್ತು ಹಾಕಿದ ಬಾಯಾಗ |
ಡಮ್ಮನ್ನು ಶಬ್ದ ಕೇಳಿತ |ಗುಂಡು ಬಡದೀತು |ಘಾತ ಆದೀತ |
ಲಕ್ಷ್ಮಣನ ಎದಿಯಾಗ | ಎದಿಯಾಗ |ಮೋಸ ಮಾಡಿ
ಅಭಿಮನ್ಯುನ ಕೌರವರು ಕೊಲ್ಲಿಸಿದಂಗ |

ನರಸ್ಯಾ ಏಳೋ ಮಾವ ಹಿಡಿಯಾಕ ಬಂದಾರ ಎನ್ನತ್ತಿರುವಂತೆ ಬಂದು ಮುತ್ತಿಗೆ ಹಾಕಿ ಸಾವ್ಯಾ ಗೋಪಾಲರನ್ನು ಹಿಡಿದರು ಅವರನ್ನು ತೆಗೆದುಕೊಂಡು ಜಮಖಂಡ್ಯಾಗ ಘಾಸಿ  (ಪಾಸಿ) ಶಿಕ್ಷೆ ಕೊಟ್ಟರು.

ಈ ರೀತಿ ಲಕ್ಷ್ಮಣನು ಸ್ವಾಭಿಮಾನಕ್ಕೆ ಧಕ್ಕೆ ಬಂದು ಅಯ್ಯನ ಮೇಲೆ ಸೇಡು ತೀರಿಸಿ ಕೊಂಡರೆ ಅದೇ ಮುಂದೇ ದೊಡ್ಡದಾಗಿ ಇಷ್ಟೇಲ್ಲಾ ಅನಾಹುತವಾಯಿತು. ಲಕ್ಷ್ಮಣ ಎಂದಿಗೂ ಕೂಡ ಕೊಟ್ಟ ಮಾತಿಗೆ ತಪ್ಪಿ ನಡೆಯದೇ ಬ್ರಿಟಿಷರ ಕೂಡ ತನ್ನ ಛಲವನ್ನೇ ಸಾಧಿಸುತ್ತ ತನ್ನ ಪ್ರಾಣವನ್ನು ಬಲಿಯಾಗಿಸಿಕೊಂಡು ಬಿಡುತ್ತಾನೆ. ಧೀರೋದ್ಧಾತ ಲಕ್ಷ್ಮಣನಂಥವರು ನಮ್ಮ ದೇಶದಲ್ಲಿ ಇದ್ದರೆ ಬ್ರಿಟಿಷರು ಇನ್ನು ಬೇಗ ನಮ್ಮ ದೇಶ ಬಿಟ್ಟು ಹೊರಡುತ್ತಿದ್ದರೋ ಏನೋ? ಏನೇ ಆಗಲಿ ಆತ ತನ್ನ ಹಿತೈಷಿಗಳಿಗಾಗಿ ಹೋರಾಡಿದ ಬಡಬಗ್ಗರಿಗೆ ದರೋಡೆ ಮಾಡಿದುದರಲ್ಲಿ ಹಂಚಿ ಚಿರವಾಗಿ ನಮ್ಮೆಲ್ಲರ ಮಧ್ಯ ಅಮರರಾಗಿ ಉಳಿದಿದ್ದಾರೆ. ಇದು ಸಿಂಧೂರ ಲಕ್ಷ್ಮಣನ ಶೌರ್ಯಕ್ಕೆ ಸಾಕ್ಷಿಯಾಗಿದೆ. 

ಪರಾಮರ್ಶನ ಗ್ರಂಥಗಳು

೧. ವಾಲ್ಮೀಕಿ ಬಂಧು, ಅಕ್ಟೋಬರ್ ೨೦೦೨, ಸಂ.ಟಿ.ವಿ. ಕಟ್ಟಿಮನಿ.

೨. ಉತ್ತರ ಕರ್ನಾಟಕ ಜನಪದ ವೀರಗೀತೆಗಳು, ಲೇ. ಡಾ. ವೈ.ಎಫ್. ಸೈದಾಪೂರ.

೩. ಜನಪದ ವೀರಗೀತೆಗಳು, ಲೇ. ಬಿ.ಬಿ. ಮಹೀಶವಾಡಿ

೪. ಸಿಂಧೂರ ಲಕ್ಷ್ಮಣ, ಲೇ. ಡಾ. ಆರ್.ಸಿ. ಮುದ್ದೇಬಿಹಾಳ.

೫. ಬಿಜಾಪೂರ ಜಿಲ್ಲೆಯ ಲಾವಣಿಗಳು.

೬. ಧಾರವಾಡ ಜಿಲ್ಲೆಯ ಲಾವಣಿಗಳು.