ಕರ್ನಾಟಕದಲ್ಲಿ ನಾಯಕ, ತಳವಾರ, ವಾಲ್ಮೀಕಿ, ಬೇಡ ಇವೇ ಮೊದಲಾದ ಹೆಸರುಗಳಿಂದ ಗುರುತಿಸಲ್ಪಡುವ ಬೇಡ ಸಮುದಾಯವನ್ನು ಬುಡಕಟ್ಟು ನೆಲೆಯಲ್ಲಿ ಪರಿಶೀಲಿಸುವುದು ಇಲ್ಲಿಯ ಪ್ರಧಾನ ಉದ್ದೇಶ. ಬೇಡರು ಕಾಲಗತಿಯಲ್ಲಿ ಬುಡಕಟ್ಟಿನ ಅನನ್ಯತೆಯನ್ನು ಎಷ್ಟು ಉಳಿಸಿಕೊಂಡಿದ್ದಾರೆ ಎಂದು ಗುರುತಿಸುವ ಕ್ರಮ ಒಂದೆರಡು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಂಥವುಗಳಲ್ಲಿ ಒಂದು ಹೊರಗಿನಿಂದ ಬರುವಂತ ಹದ್ದು. ಮತ್ತೊಂದು ಒಳಗಿನಿಂದ ಬರುವಂತಹದ್ದು. ಬೇಡರು ಬುಡಕಟ್ಟು ಲಕ್ಷಣಗಳನ್ನು ಅಷ್ಟಾಗಿ ಉಳಿಸಿಕೊಂಡಿಲ್ಲ ಎಂದರೆ ಹೊರಗಿನವರು ಹಾಗಾದರೆ ಬೇಡರು ಮೀಸಲಾತಿಗೆ ಅರ್ಹರಲ್ಲ ಎನ್ನಬಹುದು (ನಾಯಕ ಅನ್ನುವ ಪದವನ್ನು ಶ್ರೇಷ್ಠವಾಗಿ ವ್ಯಾಖ್ಯಾನಿಸಿ, ಈ ನಾಯಕರಿಗೆ ಮೀಸಲಾತಿ ಪಟ್ಟಿಯಿಂದ ಹೊರಗಿಡಬೇಕೆಂದು ಕೆಲವು ತಿಂಗಳುಗಳ ಹಿಂದೆ ವಾದಿಸಿದ ದಾಸನೂರು ಕೂಸಣ್ಣ ಅವರ ವಿಚಾರಗಳನ್ನು ಇಲ್ಲಿ ಸ್ಮರಿಸಬಹುದು). ಇಲ್ಲ ಬೇಡರಲ್ಲಿ ಯಾವುದೋ ಒಂದು ಗುಂಪು ಮಾತ್ರ ಸ್ವಷ್ಟ ಬುಡಕಟ್ಟು ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದರೆ ಒಳಗಿನವರು ಅಸೂಯೆ ಪರರಾಗುತ್ತಾರೆ -(ಸೋದರ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ನಡೆಯುವ ಒಳ ಮೀಸಲಾತಿ ಗದ್ದಲ ಇಲ್ಲಿಯೂ ಆರಂಭವಾಗುತ್ತದೆ). ಹಾಗಾಗಿ ನನ್ನ ಇಲ್ಲಿಯ ಶೋಧನೆಗೆ ಸಂವಿಧಾನಾತ್ಮಕವಾಗಿ ದತ್ತವಾಗುವ ಮೀಸಲಾತಿ ಮತ್ತಿತರ ವಿಶೇಷ ಸೌಲಭ್ಯಗಳನ್ನು ಉಳಿಸಿಕೊಳ್ಳುವ ಅಥವಾ ಬಿಡುವ ಪ್ರಶ್ನೆಯಾಗದೆ, ಇಂಥ ಸೀಮಿತ ಪರಿಕಲ್ಪನೆಯನ್ನು ದಾಟುವ ಸಾಂಸ್ಕೃತಿಕ ಅಸ್ಮಿತೆಯ ಪ್ರಶ್ನೆ ಮುಖ್ಯವಾಗಿದೆ.

ಶೋಧನೆಗೆ ಮೊದಲು ಬುಡಕಟ್ಟು ಎಂದರೇನು? ಬುಡಕಟ್ಟಿನ ಪ್ರಧಾನ ಲಕ್ಷಣಗಳು ಯಾವುವು? ಎಂದು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಬುಡಕಟ್ಟುಗಳ ಬಗ್ಗೆ ಅಧ್ಯಯನ ಆರಂಭಿಸಿದವರಲ್ಲಿ ಭಾರತದ ಮಟ್ಟಿಗೆ ಬ್ರಿಟಿಷರೆ ಮೊದಲೆನ್ನಬಹುದು. ಅಧಿಕಾರಿಗಳು, ಕ್ರೈಸ್ತ ಪಾದ್ರಿಗಳು ಕ್ರಮವಾಗಿ ಆಡಳಿತ ಹಾಗೂ ಧರ್ಮ ಪ್ರಚಾರಗಳಿಗೆ ಅನುಕೂಲವಾಗುವಂತೆ ಬುಡಕಟ್ಟುಗಳ ಅಧ್ಯಯನ ನಡೆಸಿದ್ದಾರೆ. ಇಂಥವರ ಜೊತೆಗೆ ಕುತೂಹಲ ಹಾಗೂ ಅಪಾರ ಮಾನವೀಯ ಅಂತಃಕರಣದಿಂದ ಅಧ್ಯಯನ ನಡೆಸಿದ ವೆರಿಯರ್ ಎಲ್ವಿನ್ ಅಂಥವರು ಇದ್ದಾರೆ. ಬ್ರಿಟಿಷ್ ವಿದ್ವಾಂಸರು ‘Tribe’ ಎನ್ನುವ ಹೆಸರಿನಿಂದ ಗುರುತಿಸಿದ ಸಮುದಾಯ ಗಳನ್ನು ಸ್ವಾತಂತ್ರ್ಯ ನಂತರ ಅಧ್ಯಯನ ಮಾಡಿದ ದೇಶಿ ವಿದ್ವಾಂಸರು ಗಿರಿಜನರು, ಆದಿವಾಸಿ ಗಳು, ಬುಡಕಟ್ಟುಗಳು ಮೊದಲಾದ ಹೆಸರುಗಳಿಂದ ಕರೆದರು. ಮೇಲಿನ ಹೆಸರುಗಳೇ ಸೂಚಿಸುವಂತೆ ಮನುಕುಲದ ಮೂಲಪುರುಷರು, ಗಿರಿಗಳಲ್ಲಿ ವಾಸಮಾಡುವವರು ಬುಡಕಟ್ಟು ಜನ ಎನಿಸಿಕೊಂಡರು. ಬುಡಕಟ್ಟು ಎಂಬ ಪದಶಃ ಅರ್ಥವೂ ಕೂಡ ಅದೇ ಆಗಿದೆ. “ಬುಡ ಅಂದರೆ ಮೂಲ, ಕಟ್ಟು ಎಂದರೆ ಸಾಂಸ್ಕೃತಿಕ ಮೌಲ್ಯಗಳ ಕಟ್ಟುಕಟ್ಟಳೆ ಆಚರಣೆ. ಒಂದೇ ಮೂಲಕ್ಕೆ ಸೇರಿದ ಸಂಪ್ರದಾಯವನ್ನು ಪಾಲಿಸುವವರು ಬುಡಕಟ್ಟು ಜನ” (ಎಚ್.ಜೆ. ಲಕ್ಕಪ್ಪಗೌಡ, ೧೯೯೭; ೩೫೦) ಇಂಥ ವ್ಯಾಖ್ಯಾನಗಳು ಬುಡಕಟ್ಟನ್ನು ನಿಖರವಾಗಿ ವ್ಯಾಖ್ಯಾ ನಿಸಲಾರವು. ಆದ್ದರಿಂದ ಬುಡಕಟ್ಟು ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದಕ್ಕಿಂತ ಬುಡಕಟ್ಟು ಎಂದರೆ ಯಾವುದು ಎಂದು ಹೇಳುವುದು ಸುಲಭ. ಕರ್ನಾಟಕದ ಬುಡಕಟ್ಟೊಂ ದನ್ನು ಪ್ರಥಮವಾಗಿ ದೀರ್ಘ ಅಧ್ಯಯನಕ್ಕೆ ಒಳಪಡಿಸಿದ ತೀ.ನಂ.ಶಂಕರನಾರಾಯಣ ಅವರು ಅಂಥದೊಂದು ಪ್ರಯತ್ನ ಮಾಡಿದ್ದಾರೆ. ಅವರು ಹೇಳುವಂತೆ “ಭಾರತದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ಜಾತಿಗಳು ಮಾತ್ರವಲ್ಲದೆ ಹರಿಜನರಿಂದ ಕೂಡಿದ ಐದನೇ ಜಾತಿಯೂ ಇದೆ. …….ಈ ಜಾತಿಗಳನ್ನು ಬಿಟ್ಟು ಉಳಿದ ಹಿಂದೂ ಸಾಮಾಜಿಕ ವರ್ಗಗಳನ್ನೆಲ್ಲ ಭಾರತದಲ್ಲಿ ಬುಡಕಟ್ಟುಗಳೆಂದು ಕರೆಯಬಹುದು” (ತಿಣ.ನಂ. ಶಂಕರನಾರಾಯಣ, ೧೯೮೨; ೦೨). ಈ ತರಹದ ವ್ಯಾಖ್ಯಾನ ಕೂಡ ಇಂದು ಅಷ್ಟೊಂದು ಸಮಂಜಸವಾಗಿ ಕಾಣುವುದಿಲ್ಲ. ಏಕೆಂದರೆ ಬುಡಕಟ್ಟು ಜಾತಿಗಳಾಗುವ, ಜಾತಿ ಬುಡಕಟ್ಟುಗಳಾಗುವ ಈಗಿನ ಸಂಕೀರ್ಣ ಸಂದರ್ಭದಲ್ಲಿ ಮೇಲೆ ಸೂಚಿಸಿದಂತೆ ಬುಡಕಟ್ಟು ಗಳನ್ನು ಗುರುತಿಸುವುದು ಅಸಾಧ್ಯ.

ಬುಡಕಟ್ಟು ಎನಿಸಿಕೊಳ್ಳಬೇಕಾದರೆ ಒಂದು ಸಮುದಾಯ ಹೊಂದಿರಬೇಕಾದ ಅನೇಕ ಲಕ್ಷಣಗಳನ್ನು ವಿದ್ವಾಂಸರು ಪಟ್ಟಿ ಮಾಡಿದ್ದಾರೆ. ಅವುಗಳನ್ನು ಮುಂದಿನಂತೆ ಪಟ್ಟಿ ಮಾಡಬಹುದು.

ಅ. ಪ್ರತ್ಯೇಕ ಸಂಸ್ಕೃತಿ

ಆ. ರಕ್ತ ಸಂಬಂಧದ ಅತಿಯಾದ ಅವಲಂಬನೆ

ಇ. ಅನ್ಯವನ್ನು ಅನುಮಾನದಿಂದ ನೋಡುವ ದೃಷ್ಟಿ

ಈ. ಅತಿಯಾದ ಪಾವಿತ್ರ್ಯತೆ

ಉ. ದೈವದ ವಿಶಿಷ್ಟ ಕಲ್ಪನೆ ಹಾಗೂ ಅಪಾರ ಭಕ್ತಿ

ಊ. ಕಾಡಿಗೆ/ಪ್ರಕೃತಿಗೆ ಹತ್ತಿರವಾದ ಹಾಗೂ ಅವಲಂಬನೆಯ ಬದುಕು

ಋ. ಪ್ರತ್ಯೇಕ ಭಾಷೆ

ಈ ಎಲ್ಲಾ ಲಕ್ಷಣಗಳನ್ನು ಒಂದೇ ಸಮುದಾಯದಲ್ಲಿ ದೊರೆಯುವುದು ವಿರಳ. ಇಂದು ಶುದ್ಧ ಬುಡಕಟ್ಟುಗಳೆಂದು ಕರೆಸಿಕೊಂಡು ಸಮುದಾಯಗಳಲ್ಲಿ ಕೂಡ ಈ ಎಲ್ಲಾ ಅಂಶಗಳು ಪೂರ್ಣ ಪ್ರಮಾಣದಲ್ಲಿ ಸಿಗಲಾರವು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೇಡ ಸಮುದಾಯ ದಲ್ಲಿ ದೊರೆಯುವ ಬುಡಕಟ್ಟು ಅಂಶಗಳನ್ನು ಗುರುತಿಸಬಹುದಾಗಿದೆ. ಇಲ್ಲಿಯೇ ಪ್ರಬಂಧದ ಮಿತಿಯನ್ನು ತಿಳಿಸುವುದು ಸೂಕ್ತ. ಪ್ರಸ್ತುತ ಪ್ರಯತ್ನದಲ್ಲಿ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಮ್ಯಾಸಬೇಡರ/ನಾಯಕರ ಹಟ್ಟಿಗಳ ಸಂಪ್ರದಾಯ, ಆಚರಣೆಗಳನ್ನು ವಿಶೇಷವಾಗಿ ಕ್ಷೇತ್ರಾಧ್ಯಯನದ ಹಿನ್ನೆಲೆಯಲ್ಲಿ ಗ್ರಹಿಸಲಾಗಿದೆ. ಹಾಗೆಯೇ ಆರಂಭದಿಂದ ಇಲ್ಲಿಯವರೆಗೆ ನಡೆದ ವಿದ್ವಾಂಸರ ಅಧ್ಯಯನಗಳಿಂದಲೂ ಹಲವಾರು ಮಾಹಿತಿಗಳನ್ನು ಬಳಸಿಕೊಳ್ಳಲಾಗಿದೆ.

ಸಾಂಸ್ಕೃತಿಕ ಅನನ್ಯತೆ

ಪ್ರತ್ಯೇಕ ಸಂಸ್ಕೃತಿಯನ್ನು ಹೊಂದಿರುವುದು ಬುಡಕಟ್ಟು ಸಮುದಾಯಗಳ ಪ್ರಧಾನ ಲಕ್ಷಣ. ಸಮುದಾಯ ಒಂದರ ಉಗಮದಿಂದ ಆರಂಭಗೊಂಡ ಸಂಸ್ಕೃತಿ ನಿರಂತರವಾಗಿ ತನ್ನ ವಿಶಿಷ್ಟತೆಗಳೊಂದಿಗೆ ಮುಂದುವರೆಯುತ್ತದೆ. ಬುಡಕಟ್ಟುಗಳ ಇಂಥ ಸಂಗತಿಗಳು ಪುರಾಣ-ಆಚರಣೆ-ನಂಬಿಕೆ-ಸಂಪ್ರದಾಯಗಳ ಮೂಲಕ ಉಳಿದು ಬೆಳೆದಿರುತ್ತವೆ. ಈ ಹಿನ್ನೆಲೆಯೊಳಗೆ ಬೇಡರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗಮನಿಸಬಹುದಾಗಿದೆ.

ಜನನ : ಬೇಡರ ಸಮುದಾಯಗಳಲ್ಲಿ ಜನನ ಸಂಬಂಧೀ ಆಚರಣೆಗಳು ಹಲವು ಸಾಮಾನ್ಯ ಸಂಗತಿಗಳಾದರೂ ಕೆಲವು ವೈಶಿಷ್ಟಪೂರ್ಣವಾಗಿವೆ. ಅಂಥವುಗಳಲ್ಲಿ ಜನನದ ಬಗ್ಗೆ ಇಟ್ಟುಕೊಂಡ ಮೈಲಿಗೆ ಭಾವ. ಕಾಡುಗೊಲ್ಲರಂತೆ ಬಾಣಂತಿಯನ್ನು ಪ್ರತ್ಯೇಕ ಗುಡಿಸಲಲ್ಲಿ ಇಡುವುದಿಲ್ಲ. ಆದರೂ ಹೆರಿಗೆಯಾದ ದಿನದಿಂದ ಮೂರು, ಐದು, ಏಳು, ಒಂಬತ್ತು, ಹನ್ನೊಂದು ದಿನಗಳಲ್ಲಿ ‘ಮುಟ್ಟು ಹೊರಡಿಸುವ’ ಆಚರಣೆ ಮಾಡುತ್ತಾರೆ. ಬೇವಿನ ಸೊಪ್ಪು, ಗೋವು ಗಂಜಳದ ಮೂಲಕ ಬಾಣಂತಿಯನ್ನು ಶುದ್ದೀಕರಿಸುತ್ತಾರೆ. ಈ ಸಮಯದಲ್ಲಿ ಮಗುವನ್ನು ಮೊರದಲ್ಲಿಟ್ಟು ಪೋಷಿಸುತ್ತಾರೆ. ಹಾಗೆಯೇ ಅನೇಕ ರೀತಿಯ ಭವಿಷ್ಯದ ಭಯಂಕರ ಕಾಯಿಲೆಗಳ ನಿಷೇಧಕ್ಕೆ ಕೆಲವೊಂದು ಪೂರ್ವಯೋಜಿತ ಮದ್ದುಗಳನ್ನು ಮಗುವಿಗೆ ಕುಡಿಸುತ್ತಾರೆ. ಇಲ್ಲಿಯೇ ಹೇಳಿಬಿಡಬಹುದಾದ ಸಂಗತಿ ಮಗುವಿನ ನಾಮಕರಣದ್ದು. ಮಗು ವಿನ ಸೋದರತ್ತೆ ಹುರುಳಿ ಗುಗ್ಗುರಿ ಗಂಟು ಹೊತ್ತು ಹೆಸರನ್ನು ಕರೆಯುತ್ತಾಳೆ. ಗುಗ್ಗರಿ ಗಂಟು ಹೊತ್ತು ಮೂರು ಬಾರಿ ಮನೆಯ ಹೊಸ್ತಿಲನ್ನು ದಾಟಿ ಹೆಸರು ಹೇಳುವ ಕ್ರಮ ಅತ್ಯಂತ ಗಮನಾರ್ಹವಾದುದಾಗಿದೆ.

ಋತುಮತಿ ಆಚರಣೆ : ಋತುಮತಿ, ಹೆರಿಗೆ ಮೊದಲಾದವು ಕೃಷಿ ಮೂಲ ಸಂಸ್ಕೃತಿಗಳಲ್ಲಿ ಫಲವಂತಿಕೆಯ ಸಂಕೇತಗಳು. ಆದರೆ ಬುಡಕಟ್ಟು ಸಮುದಾಯಗಳಲ್ಲಿ ಇವು ಮೈಲಿಗೆಯ ಸಂಗತಿಗಳು. ಬೇಡರಲ್ಲಿ ಋತುಮತಿಯಾದ ಹೆಣ್ಣನ್ನು ತಕ್ಷಣವೇ ಹೊರಗೆ ಕಳುಹಿಸಿ, ಹಸಿರು ಸೊಪ್ಪಿನ (ವಿಶೇಷವಾಗಿ ಬೇವು/ಹೊಂಗೆ) ಗುಡಿಸಲು ನಿರ್ಮಿಸಿ ಅದರೊಳಗೆ ಬಿಡುತ್ತಾರೆ. ಒಂಬತ್ತು ಅಥವಾ ಹನ್ನೊಂದು ದಿನಗಳ ಕಾಲ ಋತುಮತಿಯಾದ ಹೆಣ್ಣುಮಗಳು ಆ ಗುಡಿಸಲಲ್ಲಿ ವಾಸಿಸುತ್ತಾಳೆ. ಈ ಮಧ್ಯೆ ನೆಂಟರಿಷ್ಟರು ರುಚಿ ರುಚಿಯಾದ ಬಗೆಬಗೆಯ ತಿಂಡಿ ತಿನಿಸುಗಳನ್ನು ಆಕೆಗೆ ಒದಗಿಸುವ ಕ್ರಮವಿದ್ದು, ಇದನ್ನು ಒಸಗೆ ಎನ್ನುತ್ತಾರೆ. ಸಮಯ ಮುಗಿದ ದಿನ ಸ್ನಾನ ಮಾಡಿಸಿ, ಸೋದರ ಮಾವನ ಹತ್ತಿರ ಬೇವಿನ ಕಡ್ಡಿಯಿಂದ ನಾಲಗೆ ಸುಡಿಸಿ, ಗೋವು ಗಂಜಳವನ್ನು ಪ್ರೋಮನೆಯ ಒಳಗೆ ಕರೆದುಕೊಳ್ಳುತ್ತಾರೆ. ಗಮನಾರ್ಹ ಸಂಗತಿ ಎಂದರೆ ಕೆಲವು ಬೇಡರ ಪ್ರದೇಶಗಳಲ್ಲಿ ಋತುಮತಿಯಾದ ತಕ್ಷಣ ಗುಡಿಸಲಿಗೆ ಕೂರಿಸದೆ, ಮದುವೆಯ ಸಂದರ್ಭಕ್ಕೆ ಆ ಸಂಪ್ರದಾಯವನ್ನು ನಡೆಸುತ್ತಾರೆ. ಗುಂಪು ಗುಂಪಾಗಿ ಮದುವೆ ಮಾಡುವ ಅಲ್ಲಿ ಎಲ್ಲಾ ಹೆಣ್ಣುಗಳನ್ನು ಒಂದೇ ಗುಡಿಸಲಿಯೊಳಗೆ ಇರಿಸುತ್ತಾರೆ. ಈ ಗುಂಪು ಗುಡಿಸಲಲ್ಲಿ ಇರುವಾಗ ಬಂಡೆಯಲ್ಲಿ ಆಹಾರ ಸ್ವೀಕರಿಸುವುದು ವಿಶೇಷ.

ಮದುವೆ ಸಂಪ್ರದಾಯಗಳು : ಬೇಡರ ವಿಶೇಷವಾಗಿ ಮ್ಯಾಸಬೇಡರಲ್ಲಿ ಪ್ರಚಲಿತವಿರುವ ಮದುವೆ ಸಂಪ್ರದಾಯಗಳು ಆ ಸಮುದಾಯದ ಬುಡಕಟ್ಟು ಅನನ್ಯತೆಯನ್ನು ಪ್ರತಿಪಾದಿ ಸುತ್ತವೆ. ಮುಖ್ಯವಾಗಿ ಇಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಹೆಣ್ಣಿನ ಕಡೆಯವರು ಗಂಡಿನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳುವುದು ಈಗಿರುವ ಕ್ರಮ. ಹಾಗೆಯೇ ಹೆಣ್ಣಿನ ಕಡೆಯವರು ವರದಕ್ಷಿಣೆ ಕೊಡಬೇಕಾದುದು ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಆದರೆ ಈಗಲೂ ಬೇಡರ ಕೆಲವು ಗುಂಪುಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಗತಿಗಳಿವೆ. ಹೆಣ್ಣಿದ್ದ ಮನೆಗೆ ಗಂಡಿನ ಕಡೆಯವರು ಔಪಚಾರಿಕ ವಾಗಿ ಹಾಗೂ ಅನೌಪಚಾರಿಕವಾಗಿ ಮೊದಲು ತೆರಳಿ ಹೆಣ್ಣು ಕೇಳುವ ಕ್ರಮವಿದೆ. ವರದಕ್ಷಿಣೆ ಈಗೀಗ ಸ್ವಲ್ಪ ಪ್ರಮಾಣದಲ್ಲಿ ಚಾಲ್ತಿಗೆ ಬಂದಿದ್ದರೂ ವಧು ದಕ್ಷಿಣೆ ಕೊಡುವ ಪದ್ಧತಿ ಕಡ್ಡಾಯವಾಗಿದೆ. ‘ಸುಖಮಂಚಿ’ (ಕ್ಷೇಮ, ಸವಲತ್ತು) ಎನ್ನುವ ಹೆಸರಲ್ಲಿ ಗಂಡಿನ ಕಡೆಯ ವರು ಒಂದಿಷ್ಟು ಧಾನ್ಯವನ್ನು ಊರಿನ ಹಿರಿಯರ ಸಮ್ಮುಖದಲ್ಲಿ ಹೆಣ್ಣಿನ ಕಡೆಯವರಿಗೆ ಅಳೆದುಕೊಡುವುದು ಒಂದು ಸಂಪ್ರದಾಯವಾಗಿದೆ.

ಮುಂಜಿ ಮ್ಯಾಸಬೇಡರ ಮದುವೆ ಸಂಪ್ರದಾಯಗಳ ಮತ್ತೊಂದು ವಿಶೇಷ. ‘ಮುಂಜಿ’ ಎನ್ನುವ ಈ ಸಂಪ್ರದಾಯವನ್ನು ಥರ್ಸ್ಟನ್ ಮೊದಲಾದ ಆರಂಭಿಕ ಅಧ್ಯಯನಕಾರರು ಮುಸ್ಲಿಂ ಸಮಾಜಗಳಲ್ಲಿ ಪ್ರಚಲಿತವಿರುವ ‘ಮುಂಜಿ ಮಾಡಿಸುವ’ ಪದ್ಧತಿಯೊಡನೆ ನಂಟು ಕಲ್ಪಿಸಿದ್ದಾರೆ. ಆದರೆ ಈಗಿರುವ ಕ್ರಮದಲ್ಲಿ ಅಂಥ ಯಾವ ಅಂಶವು ಕಂಡುಬರುವುದಿಲ್ಲ. ಮದುವೆಗೆ ಗಂಡನ್ನು ಸಿದ್ಧಮಾಡುವ ಕ್ರಮ ಇದಾಗಿದೆ. ಮದುವೆಯ ಮೊದಲಶಾಸ್ತ್ರದ ಮುನ್ನದಿನ ರಾತ್ರಿ ಮದುವೆಯ ಗಂಡಿಗೆ ದೇವರ ನೀರು ಹಾಕಿಸಿಕೊಂಡು ವಿಶಿಷ್ಟ ವೇಷದಲ್ಲಿ (ಬರೀಮೈ, ಒಂದು ಚೆಡ್ಡಿ ಧರಿಸಿ ಮೈಗೆ ಒಂದು ಕಂಬಳಿ ಕೋವಿ ಹೊದ್ದು, ಕೈಯಲ್ಲಿ ಕವೆ ಕಟ್ಟಿಗೆ, ಈ ಕವೆ ಕಟ್ಟಿಗೆಗೆ ಎಲೆ ಅಡಿಕೆ ಬೀಡಿ ಗಂಟು ಕಟ್ಟಿರುತ್ತಾರೆ). ಊರ ಹೊರಗೆ ಹೋಗುತ್ತಾರೆ. ಮರುದಿನ ಬೆಳಗ್ಗೆ ನೆಂಟರಿಷ್ಟರು ಒಸಗೆ ರೂಪದಲ್ಲಿ ತಿಂಡಿ ತಿನಿಸುಗಳನ್ನು ಒಯ್ದು ಕೊಡುತ್ತಾರೆ. ಹೀಗೆ ಸಂಗ್ರಹವಾದ ತಿನಿಸುಗಳನ್ನು ಬೇರೆ ಯಾರೂ ತಿನ್ನುವುದಿಲ್ಲ. ಹಾದಿ ಹೋಕರ ಹತ್ತಿರ ಮದುವೆಯ ಗಂಡು ಹಣ ಸಂಗ್ರಹಿಸುತ್ತಾನೆ. ಹೀಗೆ ಒಂದು ದಿನ ಕಳೆದು (ಈಗ ಈ ಸಂಪ್ರದಾಯ ಒಂದು ದಿನ ಮಾತ್ರವಿದ್ದು ಮೊದಲು ಹನ್ನೊಂದು ದಿನ ನಡೆಯುತ್ತಿದೆಂದು ಹಿರಿಯರು ಹೇಳುತ್ತಾರೆ. ಹನ್ನೊಂದು ದಿನ ಊರಿಂದ ಹೊರಗೆ ಇರುತಿದ್ದ ಮದುವೆಯ ಗಂಡುಗಳು ಕಾಡಲ್ಲಿ ಬೇಟೆಯಾಡಿ ಮಾಂಸ ಮತ್ತಿತರ ವಸ್ತುಗಳನ್ನು ತಿನ್ನುತ್ತಿದ್ದರಂತೆ) ಅಂದು ಸಾಯಂಕಾಲ ಸ್ನಾನಮಾಡಿ ಶುದ್ಧರಾಗುತ್ತಾರೆ. ಹಿಂದೆ ಮದುವೆಯ ಋತುಮತಿ ಹೆಣ್ಣುಗಳನ್ನು ಗುಡಿಸಲಿಗೆ ಕೂರಿಸಿ ಒಳಗೆ ಕರೆದುಕೊಳ್ಳುವಾಗ ಮಾಡುವ ಕ್ರಮವನ್ನೇ ಇವರಿಗೂ ಅನುಸರಿಸಿ ಮನೆಯ ಒಳಗೆ ಕರೆದುಕೊಳ್ಳುತ್ತಾರೆ. ಇದನ್ನೇ ಮುಂಜಿ ಸಂಪ್ರದಾಯ ಎನ್ನುತ್ತಾರೆ.

ಬೇಡರಲ್ಲಿ ಮಧುಮಗ ಕೈಯಲ್ಲಿ ಬಾಕು (ಚಿಕ್ಕ ಕತ್ತಿ) ಹಿಡಿಯುವ ಪದ್ಧತಿ ಪ್ರಚಲಿತವಿದ್ದು, ಇದು ಸ್ಪಷ್ಟವಾಗಿ ಬೇಡರ ಲೋಕದೃಷ್ಟಿಯನ್ನು ಬಿಂಬಿಸುತ್ತದೆ. ಇಲ್ಲಿ ಬಾಕನ್ನು ಮಧುಮಗನ ಪ್ರತಿನಿಧಿ ಎಂದು ಭಾವಿಸುವುದು ವಿಶೇಷ.

‘ವೀಳ್ಯದ ಎಲೆ’ ಬೇಡರ ಮದುವೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ವಸ್ತುವಾಗಿದೆ. ಬೇಡರ ಮದುವೆಗಳಿಗೆ ಬ್ರಾಹ್ಮಣ ಪುರೋಹಿತರ ಬದಲಿಗೆ ಸಮುದಾಯದ ಹಿರಿಯರೇ ಪೌರೋಹಿತ್ಯ ವಹಿಸುವರು.

ಸಾವಿಗೆ ಆಚರಣೆಗಳು : ಬೇಡರಲ್ಲಿ ಸಾವಿನ ಸಂದರ್ಭಕ್ಕೆ ನಡೆಯುವ ಆಚರಣೆಗಳಲ್ಲಿ ಬುಡಕಟ್ಟು ಲಕ್ಷಣಗಳ ಹಿನ್ನೆಲೆಯಲ್ಲಿ ಮುಖ್ಯವಾಗುವ ಕೆಲವನ್ನು ಹೆಸರಿಸಬಹುದು.

ಅ.    ಹೆಣಗಳನ್ನು ಕಲ್ಲು ಪೊಟರುಗಳಲ್ಲಿಟ್ಟು ಕಲ್ಲು ಮುಚ್ಚುವ ಪದ್ದತಿ ಅನೇಕ ಬೇಡ ಗುಂಪುಗಳಲ್ಲಿ ಇಂದಿಗೂ ಕಾಣಬಹುದು.

ಆ.    ಸತ್ತ ವ್ಯಕ್ತಿಯು ಕಾಗೆಯ ರೂಪದಲ್ಲಿ ಮೂರನೇ ದಿನ ತನ್ನ ಸಮಾಧಿ ಸ್ಥಳದಲ್ಲಿ ಕುಟುಂಬದವರು ಹಾಕಿದ ಕೂಳನ್ನು ತಿನ್ನುತ್ತಾನೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ‘ಕೂಳು ಹಾಕುವ’ ಸಂಪ್ರದಾಯ ಸಾಮಾನ್ಯವಾಗಿ ಕಂಡುಬರುತ್ತದೆ.

ಇ.    ಬೇಡ ಸಮುದಾಯದಲ್ಲಿ ‘ದಿವಸ’ ಮಾಡುವಾಗ ಅದರ ಕಾರ್ಯವನ್ನು ‘ಗುಡ್ಡೆ ಪೂಜಾರಿ’ಗಳೇ ನೆರವೇರಿಸಬೇಕು ಇದು ಗುಂಪಿನ ಐಕ್ಯತೆಯ ಭಾವವನ್ನು ಸೂಚಿಸುತ್ತದೆ.

ಹಬ್ಬಗಳು : ಬೇಡರಲ್ಲಿ ಪ್ರಚಲಿತವಿರುವ ಹಬ್ಬಗಳಲ್ಲಿ ಕೆಲವು ಅವರಿಗೆ ಮಾತ್ರ ಸೀಮಿತ ವಾದಂತಹವುಗಳಿವೆ. ಇನ್ನೂ ಕೆಲವು ಜನಪ್ರಿಯ ಹಬ್ಬಗಳಾಗಿವೆ. ಆದರೆ ಜನಪ್ರಿಯ ಹಬ್ಬಗಳ ಸಂಪ್ರದಾಯಗಳೊಳಗೆ ತಮ್ಮ ವಿಶಿಷ್ಟ ಸಂಪ್ರದಾಯಗಳನ್ನು ಬೆರಸಿ ಆಚರಿಸುತ್ತಿರುವುದು ಇಲ್ಲಿ ಗಮನಾರ್ಹವಾಗುತ್ತದೆ. ಈ ಎರಡೂ ಮಾದರಿಗಳ ಸ್ಪಷ್ಟತೆಗಾಗಿ ಒಂದೆರಡು ಉದಾ ಹರಣೆಗಳನ್ನು ನೋಡಬಹುದು.

ಪದಿಯಾಗಳ ದೇವರು : ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ ಬೇಡರ ಕೆಲವು ಗುಂಪುಗಳಲ್ಲಿ ಈ ‘ಪದಿಯಾಗಳ ದೇವರು’ ಆಚರಣೆಯಲ್ಲಿದೆ. ದೇವರು, ದೇವರೆತ್ತುಗಳನ್ನು ಮುಂದಿರಿಸಿಕೊಂಡು ಇಡೀ ಹಟ್ಟಿಗೆ ಹಟ್ಟಿಯೇ ಕಾಡಿಗೆ ಹೋಗಿ ಅಲ್ಲೇ ಮೂರು ದಿನ ವಾಸಿಸುವ ಸಂಪ್ರದಾಯವಿದು. ದೇವರಿಗೆ ಹಾಗೂ ಜನರಿಗೆ ತಾತ್ಕಾಲಿಕ ಗುಡಿ ಹಾಗೂ ಕೆಲವು ಮನೆಗಳನ್ನು ನಿರ್ಮಿಸಿ ಊಟ, ವಸತಿ ವ್ಯವಸ್ಥೆಯೊಂದಿಗೆ ಕಾಡಲ್ಲಿ ಮೂರು ದಿನವಿದ್ದು ನಂತರ ಹಟ್ಟಿಗೆ ವಾಪಸ್ಸು ಬರುವುದುಂಟು. ಇದು ಈ ಸಮುದಾಯ ಅಲೆಮಾರಿ ಬುಡಕಟ್ಟಾ ಗಿದ್ದರ ಸೂಚನೆಗಳನ್ನು ನೀಡುತ್ತದೆ. ಬುಡಕಟ್ಟೊಂದು ತನ್ನ ಬದುಕಿನ ಕೆಲವು ಮಹತ್ವದ ಕ್ರಮಗಳು ಕಾಲಗತಿಯಲ್ಲಿ ಕಳಚಿಕೊಂಡಾಗ ಅಂಥ ಕ್ರಮಗಳನ್ನು ಆಚರಣೆ ರೂಪದಲ್ಲಿ ಉಳಿಸುತ್ತದೆ ಎಂಬುದಕ್ಕೆ ಇದೊಂದು ಸ್ವಷ್ಟ ಉದಾಹರಣೆ. ಹಾಗಾಗಿ ಇಂಥ ಪದ್ಧತಿಗಳು ಬೇರೆ ಎಲ್ಲಾ ಸಮುದಾಯಗಳಲ್ಲಿ ದೊರೆಯಲಾರವು.

ಯುಗಾದಿ : ಯುಗಾದಿ ಭಾರತದ ಜಾತಿ ಹಾಗೂ ಸಮುದಾಯದ ಸೀಮೆಗಳನ್ನು ಕಳಚಿಕೊಂಡು ಎಲ್ಲರೂ ಆಚರಿಸುವ ಒಂದು ಹಬ್ಬ. ಇಂಥ ಹಬ್ಬದಲ್ಲೂ ಬೇಡ ಸಮುದಾಯ ತನ್ನ ಗುರುತುಗಳನ್ನು ದಾಖಲಿಸಿದೆ ಎಂಬುದನ್ನು ಗಮನಿಸಬೇಕು. ಅಂಥ ಗುರುತುಗಳು ಹೀಗಿವೆ.

ಅ. ಯುಗಾದಿಯಲ್ಲಿ ಬೇವು ಬೆಲ್ಲದ ಬದಲಿಗೆ ಹುಣಸೆ ರಸ ಹಾಗೂ ಬೇವನ್ನು ಬೆರಸಿ ಕುಡಿಯುವುದು ಬೇಡರ ವಿಶೇಷತೆ. ದೇವರ ಗುಡಿಯ ಮುಂದೆ ಹಿರಿಯರು ಹುಣಸೆ ರಸದ ಜೊತೆ ಬೇವನ್ನು ಸ್ವಲ್ಪ ಬೆಲ್ಲದೊಂದಿಗೆ ಬೆರಸಿದ ಪಾನಕವನ್ನು ಸಿದ್ಧ ಮಾಡುತ್ತಾರೆ. ಅದನ್ನು ಹಟ್ಟಿಯ ಪ್ರತಿಯೊಂದು ಮನೆಯವರು ತಂದು ಮನೆಯಲ್ಲಿ ಸೇವಿಸುತ್ತಾರೆ. ಬೇವು ಬೆಲ್ಲದ ಆಧುನಿಕ ಕಲ್ಪನೆಗೆ ಹುಣಸೆ-ಬೇವು-ಬೆಲ್ಲದ ಈ ಪರ್ಯಾಯ ಕಲ್ಪನೆ ಬೇಡರ ವೈಶಿಷ್ಟ್ಯತೆಯಾಗಿದೆ.

ಆ. ಯುಗಾದಿಯ ಮೊದಲ ದಿನವೇ ಬೇಡರ ಗುಂಪುಗಳು ದೇವರ ಮುಖಂಡತ್ವದಲ್ಲಿ ಬೇಟೆ ಹೊರಡುತ್ತವೆ. ಮುಖ್ಯವಾಗಿ ‘ಕಂಪಳ ರಂಗ’ ದೇವರ ಜೊತೆ ಹಟ್ಟಿಗಳ ಮುಖಂಡರು ಮೊಲದ ಬೇಟೆ ಹೋಗುವುದು ಬೇಡರ ಮತ್ತೊಂದು ವಿಶೇಷ.

ಇ. ಯುಗಾದಿಯ ಚಂದ್ರನನ್ನು ದರ್ಶಿಸಿ ಧನ್ಯರಾಗುವುದರ ಜೊತೆಗೆ, ಅಂದಿನ ಅರ್ಧ ಚಂದ್ರನ ಮೂಲಕ ವರ್ಷದ ಧನ ಧಾನ್ಯ ಸೌಲಭ್ಯಗಳ ಬಗ್ಗೆ ತಿಳಿಯುವ ಪ್ರಯತ್ನವಿರುವುದು ಗಮನಾರ್ಹವಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಕಾಣುವ ಅರ್ಧ ಚಂದ್ರ ತೆಂಕ ದಿಕ್ಕುವನ್ನು ಬಡಗ ದಿಕ್ಕುವನ್ನು ಪ್ರತಿನಿಧಿಸುತ್ತವೆ ಎಂಬುದು ಇವರ ನಂಬಿಕೆ. ಇದರ ಆಧಾರದ ಮೇಲೆ ಅರ್ಧ ಚಂದ್ರ ಎರಡು ತುದಿಗಳಲ್ಲಿ ಯಾವ ತುದಿ ಎದ್ದಿದೆ ಯಾವು ತುದಿ ಬಿದ್ದಿದೆ ಎನ್ನುವುದನ್ನು ಗಮನಿಸಿ ಪ್ರಸ್ತುತ ವರ್ಷ ಧನ, ಧಾನ್ಯ ಹೆಚ್ಚು-ಕಡಿಮೆ-ಸಮ ಎಂಬುದನ್ನು ನಿರ್ಧರಿಸುತ್ತಾರೆ. ಪ್ರಕೃತಿಯಲ್ಲಿ ಭವಿಷ್ಯ ನೋಡುವ ಬುಡಕಟ್ಟಿನ ವಿಶಿಷ್ಟ ದೃಷ್ಟಿ ಇದಾಗಿದೆ.

ಹೀಗೆ ಬೇಡರು ತಮಗೆ ವಿಶಿಷ್ಟವೆನಿಸುವ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆಯೇ ಬೇರೆ ಸಮೂಹಗಳಿಗೂ ಸಾಮಾನ್ಯವಾಗಿರುವ ಹಬ್ಬಗಳಲ್ಲಿ ತಮ್ಮ ವೈಶಿಷ್ಟ್ಯತೆಗಳನ್ನು ದಾಖಲಿಸುತ್ತಾರೆ.

ಇನ್ನು ಇವರು ಹಬ್ಬಗಳಲ್ಲಿ ಮಾಡುವ ಆಚರಣೆಗಳು ಇವರಲ್ಲಿ ಇನ್ನೂ ಗಟ್ಟಿಯಾಗಿರುವ ಬುಡಕಟ್ಟು ಅಸ್ಮಿತೆಗಳನ್ನು ಕಾಣಿಸುತ್ತವೆ.

ಅ. ಹಬ್ಬಗಳಲ್ಲಿ ವಿಶಿಷ್ಟವಾದ ಭರ್ಚಿ, ಛತ್ರಿಗಳ ಬಳಕೆ.

ಆ. ದೇವರ ಎತ್ತುಗಳಿಗೆ (ಉದಿ-ಪದಿ) ಇನ್ನಿಲ್ಲದ ಪ್ರಾಮುಖ್ಯತೆ.

ಇ. ದೂಪಾರತಿ ಮಾಡುವಾಗ ಬಾಯಿಗೆ ಬಿಳಿ ಬಟ್ಟೆ ಕಟ್ಟಿಕೊಳ್ಳುವುದು.

ಈ. ಹಬ್ಬ ಮುಗಿದ ನಂತರ ಕುಣಿಯುವುದು ಇತ್ಯಾದಿ.

ವಿಶಿಷ್ಟ ದೈವ ಕಲ್ಪನೆ : ಬುಡಕಟ್ಟುಗಳಲ್ಲಿ ಸಮುದಾಯಕ್ಕೆ ದುಡಿದ ವೀರರು/ಹಿರಿಯರನ್ನೇ ದೇವರೆಂದು ಪರಿಭಾವಿಸುವ ಕ್ರಮವಿದೆ. ಈ ಹಿನ್ನೆಲೆಯಲ್ಲಿ ಮ್ಯಾಸಬೇಡರ/ಬೇಡರ ಸಾಂಸ್ಕೃತಿಕ ವೀರರದೊಡ್ಡ ಪಟ್ಟಿಯೇ ಇದೆ. ಈ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ. ಇಂಥ ನಾಯಕರನ್ನು ದೈವವಾಗಿ ಪೂಜಿಸುವ ಸಂದರ್ಭದಲ್ಲಿ ವೀರರು ಬಳಸಿದ ವಸ್ತುಗಳನ್ನೇ ದೇವರ ಮೂರ್ತಿಗಳಂತಾಗಿಸುವುದು ವಿಶೇಷ. ಈ ಬಗ್ಗೆ ಅಧ್ಯಯನ ನಡೆಸಿದ ಡಿ.ಡಿ. ಕೊಸಾಂಬಿ ಅವರು ಬುಡಕಟ್ಟು ದೈವಗಳಿಗೆ ಯಾವುದೇ ಸ್ಪಷ್ಟ ಮನುಷ್ಯ ರೂಪವಿಲ್ಲದಿರು ವುದರ ಬಗ್ಗೆ ಗಮನ ಸೆಳೆಯುತ್ತಾರೆ. ಇಂದು ಬೇಡರಲ್ಲಿ ಮುಖ್ಯವಾಗಿರುವ ಗಾದ್ರಿಪಾಲ ನಾಯಕ ದೇವರೆಂದರೆ ಆತ ಬಳಸಿದ ಬಿಲ್ಲು ಬಾಣ, ಬಡಿಗೆಗಳೇ ಆಗಿವೆ. ಈ ವಸ್ತುಗಳನ್ನು ಕಂಬಳಿ ಕೋರಿಯಲ್ಲಿ ಸುತ್ತಿ ಕಟ್ಟಿ ದೇವರಾಗಿಸಿರುವುದು ಗಮನಾರ್ಹ ಸಂಗತಿ.  ಹಾಗೆಯೇ ಬೊಮ್ಮದೇವರು, ಓಬಳದೇವರು ಮೊದಲಾದ ಹನ್ನೆರಡು ಪೆಟ್ಟಿಗೆ ದೇವರುಗಳಲ್ಲಿ ಪುಟ್ಟಿಯ ಒಳಗೆ ಆಯಾ ವೀರರು ಬಳಸಿದ ವಸ್ತುಗಳಿರುವುದನ್ನು ನೋಡಬಹುದಾಗಿದೆ.

ಇನ್ನೂ ಹಿರಿಯರನ್ನು ಪೂಜಿಸುವಾಗಲೂ ಅವರ ಭಾವಚಿತ್ರವನ್ನು ಈ ಆಧುನಿಕ ಯುಗದಲ್ಲೂ ಬಳಸುವುದಿಲ್ಲ ಎಂಬುದು ವಿಶೇಷ. ಹಿರಿಯರ ಹೆಸರಲ್ಲಿ ಒಂದು ಕಲ್ಲೋ ಅಥವಾ ಮರವೋ ಪೂಜೆಗೊಳ್ಳುತ್ತದೆ. ಮಣ್ಣಿನ ಮಗಿ, ಹಿತ್ತಾಳೆ ಚೆಂಬು, ಬಿದಿರಿನ ಕೋಲು ಮೊದಲಾದವು ಹಿರಿಯರ ಪ್ರತಿನಿಧಿಗಳಾಗಿ ಪೂಜೆಗೊಳ್ಳುತ್ತವೆ.

ಬೆಡಗುಗಳ ವೈಶಿಷ್ಟ್ಯ : ಬೇಡರ ಬೆಡಗುಗಳನ್ನು ಸೂರ್ಯವಂಶ-ಚಂದ್ರವಂಶ ಎಂದು ಎರಡು ಮುಖ್ಯ ಭಾಗಗಳನ್ನಾಗಿ ಗುರುತಿಸಲಾಗಿದೆ. ಮತ್ತೆ ಸಂಬಂಧ ಬೆಳೆಸುವ ಕ್ರಮದ ಒಳಗೆ ಎನುಮುಲೋರು, ಮಂದಲೋರು, ಮಳೆಲೋರು ಎಂಬುದಾಗಿ ವಿಂಗಡಿಸಿಕೊಳ್ಳಲಾಗಿದೆ. “ಬೇಡನಾಯಕ ಕುಲಗಳನ್ನೆಲ್ಲ ಗಮನಿಸಿದರೆ ಬಹುಪಾಲು ಕುಲಗಳು ಪ್ರಾಣಿಗಳ ಹೆಸರಿನಲ್ಲಿ ಬರುತ್ತವೆ. ಇದು ಎಲ್ಲಾ ಬುಡಕಟ್ಟಿನ ಕುಲ ಲಕ್ಷಣವೇ ಆಗಿದೆ. ಮುಖ್ಯವಾಗಿ ವೃಕ್ಷಾರಾಧನೆ ಪ್ರಾಣಿಗಳ ಆರಾಧನೆ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಲಕ್ಷಣ ಆಗಿದೆ. ನಿಸರ್ಗದಲ್ಲಿ ಅಪರಿಮಿತವಾಗಿ ಹರಡಿರುವ ವಸ್ತುಗಳಲ್ಲಿ ಯಾವುದೋ ಒಂದು ಕಲ್ಲು ಬಂಡೆ, ದೊಡ್ಡಮರ ಅಥವಾ ಪ್ರಾಣಿ ಆದಿ ಮಾನವ ಗುಂಪಿಗೆ ರಕ್ಷಣೆಯನ್ನು ಒದಗಿಸಿರಬಹುದು ಅಥವಾ ಭಯಕ್ಕೆ ಕಾರಣವಾಗಿರಬಹುದು ಇಂಥ ಒಂದೊಂದು ವಸ್ತುವು ಆಯಾ ಬುಡಕಟ್ಟು ಗುಂಪಿಗೆ ಯಾವುದೋ ಶಕ್ತಿಯ ಸಂಕೇತವಾಗಿ ಕಂಡಿರಬಹುದು. ಈ ಸಂದರ್ಭದಲ್ಲಿಯೇ ಪ್ರಾಣಿ, ಮರ, ಗುಡ್ಡ, ಬೆಟ್ಟ ಬಂಡೆ ಗುಂಪಿನ ಗುರುತಾಗಿ, ಕುಲಸಂಕೇತವಾಗಿ ಸ್ವೀಕರಿಸಲ್ಪಟ್ಟು ಅದು ಪೂಜಾರ್ಹ ವಸ್ತುವೂ ಆಗಿಬಿಟ್ಟಿತು. ಒಂದೊಂದು ಬುಡಕಟ್ಟಿನ ಒಂದೊಂದು ಕುಲಕ್ಕೆ ಅವವೇ ಹೆಸರು ಉಳಿದುಕೊಂಡು ಬಂದಂತೆ ಕಾಣುತ್ತದೆ (ಹನೂರು ಕೃಷ್ಣಮೂರ್ತಿ; ೧೯೯೩:೯೩).

ಪ್ರತ್ಯೇಕ ನ್ಯಾಯ ಪಂಚಾಯ್ತಿ : ಬೇಡರಲ್ಲಿ ತಮ್ಮ ಸಮುದಾಯಕ್ಕೆ ಮಾತ್ರ ಮೀಸಲಾದ ಪಂಚಾಯ್ತಿ ವ್ಯವಸ್ಥೆ ಇದೆ. ಹಟ್ಟಿ ಪಂಚಾಯ್ತಿ ಕಟ್ಟೆಮನೆ ಪಂಚಾಯ್ತಿ ಗುರುಮನೆ. ಸಮಸ್ಯೆ ಮೊದಲಿಗೆ ಹಟ್ಟಿ ಪಂಚಾಯ್ತಿಗೆ ಬರಬೇಕು. ಇಲ್ಲಿ ಸಮಸ್ಯೆ ಬಗೆಹರಿಯಲಿಲ್ಲ ಅಥವಾ ಹಟ್ಟಿ ಪಂಚಾಯ್ತಿ ನೀಡಿದ ತೀರ್ಮಾನ ಒಪ್ಪಿತವಾಗದಿದ್ದರೆ ಕಟ್ಟೆಮನೆಗೆ ಮುಂದಕ್ಕೆ ಗುರುಮನೆಗೆ ಹೋಗಬೇಕು. ಮ್ಯಾಸಗಂಪಳಕ್ಕೆ ಕಂಪಳದೇವರಹಟ್ಟಿ ‘ಗುರುಮನೆ’ ಎಂಬುದಾಗಿ ಹೇಳಲಾಗಿದೆ. ಇನ್ನೂ ನನ್ನಿವಾಳ, ನಾಯ್ಕನಹಟ್ಟಿ, ಗೋಣೂರು ಮೊದಲಾದ ಹನ್ನೆರಡು ಕಟ್ಟೆಮನೆಗಳಿದ್ದವೆಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮ್ಯಾಸಬೇಡರಿಗೆ ನನ್ನಿವಾಳ, ನಾಯ್ಕನಹಟ್ಟಿ, ಗೋನೂರು ಕಟ್ಟೆಮನೆಗಳಾಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ನನ್ನಿವಾಳ ಕಟ್ಟೆಮನೆ ಈಗಲೂ ಕಾರ್ಯ ನಿರ್ವಹಿ ಸುತ್ತಿದೆ ಎಂಬುದು ಗಮನಾರ್ಹ.

ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಕಂಡುಬರುವ ಜಾತಿ ಪಂಚಾಯ್ತಿಗಳಿಗಿಂತ ಭಿನ್ನವಾಗಿರುವ ಈ ನ್ಯಾಯ ವ್ಯವಸ್ಥೆ ಕೇವಲ ಧರ್ಮದ ರಕ್ಷಕ ವ್ಯವಸ್ಥೆಯಾಗಿ ಕೆಲಸ ಮಾಡದೆ ಸಾಮಾಜಿಕ ನ್ಯಾಯಕ್ಕಾಗಿಯೂ ಕಾರ್ಯನಿರ್ವಹಿಸಿರುವುದು ಕಂಡುಬರುತ್ತದೆ.

ಅನನ್ಯ ಮನೆಗಳ ನಿರ್ಮಾಣ : ಬೇಡರು ವಿಶೇಷವಾಗಿ ಮ್ಯಾಸಬೇಡರು ಇತ್ತೀಚಿನವರೆಗೆ ಸಂಪೂರ್ಣ ‘ಸುತ್ತುಗುಡಿಸಲಲ್ಲೇ’ ವಾಸಿಸುತ್ತಿದ್ದರು. ಕೇವಲ ಮರ ಹಾಗೂ ಹುಲ್ಲಿನಿಂದ ದುಂಡಾಗಿ ನಿರ್ಮಿಸುತ್ತಿದ್ದ ಅಂಥಮನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲು ಅನುಕೂಲವಾಗಿದ್ದವು. ಮನುಷ್ಯರಿಗಲ್ಲದೆ ದೇವರಿಗೂ ಕೂಡ ಇಂಥ ಸುತ್ತು ಗುಡಿಸಲನ್ನೇ ನಿರ್ಮಿಸಲಾಗುತ್ತಿತ್ತು (ಈಗಲೂ ಹಲವಾರು ಹಟ್ಟಿಗಳಲ್ಲಿ ಮ್ಯಾಸಬೇಡರ ದೈವಗಳು ಇಂಥ ಗುಡಿಸಲುಗಳಲ್ಲಿ ನೆಲಸಿವೆ ಎಂಬುದು ವಿಶೇಷವಾಗಿ ಗಮನಿಸಬೇಕಾದ ಸಂಗತಿ).

ಇವರ ಮನೆಗಳು ಸುತ್ತು ಗುಡಿಸಲಿಂದ, ಸ್ವಲ್ಪಪ್ರಮಾಣ ಗೋಡೆ ಎಬ್ಬಿಸಿ ಮೇಲೆ ಕಾಡಿನ ಹುಲ್ಲನ್ನು ಹೊದಿಸುವ ಕ್ರಮದ ಮನೆಗಳಿಗೆ ಬೆಳವಣಿಗೆ ಸಾಧಿಸಿದೆ. ಒಂದು ಕಡೆ ನೆಲೆ ನಿಂತ ನಂತರ ಗೋಡೆ ಗುಡಿಸಲುಗಳನ್ನು ನಿರ್ಮಿಸಿರುವುದು ನಿರ್ವಿವಾದದ ಸಂಗತಿ. ಈಗ ಮಾಳಿಗೆ ಮನೆಗಳು ಬೇಡರ ವಿಶೇಷವಾಗಿದೆ.

ಬೇಡರ ಮನೆಗಳ ಬಾಗಿಲಿನ ಎತ್ತರ ಅತೀ ಕಡಿಮೆ. ಯಾರೂ ಮನೆಯ ಒಳಗೆ ಹಾಗೆ ನೆಟ್ಟಗೆ ಪ್ರವೇಶಿಸುವಂತಿಲ್ಲ. ಶಿರವನ್ನು ಸಾಕಷ್ಟು ಬಗ್ಗಿಸಿ ಒಳಹೋಗಬೇಕು. ಇದು ಬೇಡ ಬುಡಕಟ್ಟಿನ ಲೋಕ ದೃಷ್ಟಿ. ಮನುಷ್ಯರಿಗೆ ಬೇಡವಾದ ಜಂಭವನ್ನು/ಅಹಂಕಾರವನ್ನು ತೊರೆದು ವಿನಯವನ್ನು ಕಲಿಯಬೇಕೆಂಬ ಸರಳ ಸಂದೇಶ ಇಲ್ಲಿನದು.

ಈಚೆಗೆ ಬೇಡರು ನಿರ್ಮಿಸುತ್ತಿರುವ ಮಾಳಿಗೆ ಮನೆಗಳಲ್ಲಿ ಜಗಲಿ ನಿರ್ಮಾಣ ಸಾಮಾನ್ಯ. ಸಾಮಾನ್ಯವಾಗಿ ಮನೆಯ ಪ್ರವೇಶದ ಬಲಗಡೆಗೆ ಜಗಲಿ ನಿರ್ಮಾಣ. ಬೇರೆಯವರಿಗೆ ಜಗಲಿಯ ಪ್ರವೇಶ ತೀರಾ ವಿರಳ.

ಆಹಾರ ಪದ್ದತಿ : ಬೇಡರ ಆಹಾರ ಪದ್ಧತಿಯ ಕೆಲವು ವಿಶಿಷ್ಟತೆಗಳು ಈ ಮುಂದಿನಂತಿವೆ.

ಅ. ಸಜ್ಜೆ ಅನ್ನ-ಮಜ್ಜಿಗೆ ಇವರಿಗೆ ಬಹುಪ್ರಿಯ.

ಆ. ಬೇಡರ ಕೆಲವು ಬೆಡಗಿನವರು (ಉದಾ. ಬೊಮ್ಮದೇವಡ್ಲು) ನವಣೆ ತಿನ್ನುವುದಿಲ್ಲ, ಮುಟ್ಟುವುದೂ ಇಲ್ಲ, ಬೆಳೆಯುವುದು ಮೊದಲೇ ಇಲ್ಲ. ಅಕಸ್ಮಾತ್ ಮುಟ್ಟಿದರೆ ಶುದ್ದಿ ಮಾಡಿಕೊಳ್ಳದೆ ಒಳಗೆ ಹೋಗುವಂತಿಲ್ಲ.

ಇ. ಇವರಲ್ಲಿ ಈಚಲು ಚಾಪೆ ಬಳಕೆ ನಿಷೇಧ. ಈಚಲು ಹಣ್ಣು ತಿನ್ನುವುದು ಕೂಡ ನಿಷೇಧ.

ಈ. ಹಂದಿ, ಕೋಳಿ ಸಾಕುವುದು/ತಿನ್ನುವುದು ನಿಷೇಧ.

ಇಲ್ಲಿ ಕೆಲವು ಧಾನ್ಯ ಹಾಗೂ ಪ್ರಾಣಿಗಳನ್ನು ತಿನ್ನುವುದನ್ನು ನಿಷೇಧ ಮಾಡಿರುವ ಸಂಗತಿ ಬುಡಕಟ್ಟು ಲಕ್ಷಣಗಳ ಹಿನ್ನೆಲೆಯಲ್ಲಿ ಬಹುಮುಖ್ಯವಾಗುತ್ತದೆ. “ವಾಸ್ತವವಾಗಿ ಒಂದೊಂದು ಬುಡಕಟ್ಟಿಗೂ ಇಂಥದೊಂದು ನಂಬಿಕೆ ಅಥವಾ ನಿಷೇಧವಿದ್ದುಎಲ್ಲರೂ ಒಂದು ಬಗೆಯ ಪ್ರಾಣಿಯನ್ನು ಕೊಂದು ಆಹಾರವಾಗಿ ಉಪಯೋಗಿಸುವುದನ್ನು ಬಿಟ್ಟು ಕೊಂಡು ಬಂದಿರುವಂತೆ ತಿಳಿದುಬರುತ್ತದೆ. ಇದು ಬಹುಮಟ್ಟಿಗೆ ಪ್ರಪಂಚದ ಎಲ್ಲಾ ಬುಡಕಟ್ಟುಗಳಲ್ಲಿಯೂ ಕಂಡುಬರುವ ಸಾಮಾನ್ಯ ಲಕ್ಷಣ” (ಕೃಷ್ಣಮೂರ್ತಿ ಹನೂರು:೧೯೯೩ :೮೦).

ವಿಶಿಷ್ಟ ಭವಿಷ್ಯ ಕ್ರಮಗಳು : ಬೇಡರಲ್ಲಿ ವಿಶೇಷವಾಗಿ ಮ್ಯಾಸಬೇಡರಲ್ಲಿ ಅನನ್ಯವೆನಿಸುವ ಭವಿಷ್ಯ ಕೇಳುವ ಕ್ರಮಗಳಿವೆ. ಅವುಗಳಲ್ಲಿ ಮಳೆ ಕುರಿತು ಕೇಳುವ ಭವಿಷ್ಯ ಕ್ರಮಗಳಲ್ಲಿ ಒಂದೆರಡನ್ನು ಇಲ್ಲಿ ಪ್ರಸ್ತಾಪಿಸಬಹುದು.

ಅ. ಕೊಡ ಹಿಡಿಯುವುದು : ದೇವರ ಗುಡಿಯ ಮುಂದೆ ಸಗಣಿಯಲ್ಲಿ ನೆಲ ಬಳಿದು ಅಲ್ಲಿಗೆ ಹಟ್ಟಿಯ ಎಲ್ಲರೂ ಮನೆಗಳಿಂದ ತಂದ ಧಾನ್ಯವನ್ನು ರಾಶಿಯನ್ನಾಗಿ ಸುರಿದು, ದೊಡ್ಡರಾಶಿ ಮಾಡುತ್ತಾರೆ. ಆ ರಾಶಿ ಮೇಲೆ ತುಂಬಿದ ಮಣ್ಣಿನ ಗಡಿಗೆಯನ್ನು ಇರಿಸುತ್ತಾರೆ. ನಂತರ ದೇವರಿಗೆ ಕೈಮುಗಿದು, ಪ್ರತಿಯೊಂದು ಮಳೆಯ ಹೆಸರು ಹೇಳಿ ಆ ಗಡಿಗೆಯನ್ನು ಇಬ್ಬರು ವ್ಯಕ್ತಿಗಳಾಗಿ ಎದುರು ಬದರಾಗಿ ನಿಂತು ಮುಟ್ಟುತ್ತಾರೆ. ಆಗ ಗಡಿಗೆ ತಿರುಗುವ ಸ್ವರೂಪದ ಮೇಲೆ ಆ ವರ್ಷದ ಮಳೆ ಪ್ರಮಾಣವನ್ನು ನಿಧರಿಸುತ್ತಾರೆ. ಕೊಡ ಜೋರಾಗಿ ತಿರುಗಿ ನೀರು ಚೆಲ್ಲಿದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುವುದೆಂಬ ನಂಬಿಕೆ ಇದೆ.

ಆ. ಗಣೆ ಊದುವುದು : ಉದ್ದವಾದ ಕೊಳಲನ್ನೇ ‘ಗಣೆ’ ಎಂದು ಕರೆಯುತ್ತಾರೆ. ದೇವರ ಎರಡು ಗಣೆಗಳನ್ನು ದೇವರ ಗುಡಿಯ ಮುಂದೆ ಪೂಜಿಸಿ ಹಟ್ಟಿಯ ಹಿರಿಯರ ಸಮ್ಮುಖದಲ್ಲಿ ಇಬ್ಬರು ನುರಿತ ಗಣೆವಾದಕರು ಗಣೆ ಊದುತ್ತಾರೆ. ಮಳೆ ಬರುವುದೆಂದಾದರೆ ಗಣೆ ಸರಾಗವಾಗಿ ನುಡಿಯಬೇಕು ಇಲ್ಲವೇ ನುಡಿಯಬಾರದು ಎಂದು ಕುರುಹು ಕೇಳಲಾಗುತ್ತದೆ. ಅದರಂತೆ ಆ ವರ್ಷದ ಮಳೆಯ ಪ್ರಮಾಣವನ್ನು ತಿಳಿಯಲಾಗುತ್ತದೆ.

ರಕ್ತ ಸಂಬಂಧದ ಅತಿಯಾದ ಅವಲಂಬನೆ

ಬುಡಕಟ್ಟುಗಳ ಜೀವಾಳವೇ ರಕ್ತಸಂಬಂಧ. ಇದರ ಹೊರತಾಗಿ ಇವರಿಗೆ ಬೇರೆ ಯಾವುದೇ ಮನುಷ್ಯ ಸಂಬಂಧಗಳಿರುವುದಿಲ್ಲ. ಇವರ ವಿವಾಹಗಳು ರಕ್ತ ಸಂಬಂಧದಲ್ಲಿ ಮಾತ್ರ ನಡೆಯಬೇಕು. ಒಳ ಬೆಡಗುಗಳಲ್ಲಿಯೂ ಮದುವೆ ಸಂಬಂಧಗಳು ನಿಷಿದ್ಧ. ಒಂದು ಊರಿಂದ ಮತ್ತೊಂದು ಊರಿಗೆ ಹೆಣ್ಣು ತರುವುದು ಹಾಗೂ ಕೊಡುವುದು ಕೆಲವೆಡೆ ನಿಷೇಧ. ಹೆಣ್ಣು ತರುವುದು ಮತ್ತು ಕೊಡುವುದರಲ್ಲಿ ಸೋದರತ್ತೆ ಹಾಗೂ ಸೋದರ ಮಾವಂದಿರಿಗೆ ವಿಶೇಷ ಹಕ್ಕು ಬಾಧ್ಯತೆಗಳಿರುವುದು ಇಲ್ಲಿಯ ವಿಶೇಷ. ಇವರು ಬೇರೆ ಜಾತಿ-ಸಮುದಾಯಗಳೊಡನೆ ಸಂಬಂಧ ಬೆಳೆಸುವ ಅನಿವಾರ್ಯತೆ ಬಂದಾಗ ಮಾವ, ಅಣ್ಣ, ಅಕ್ಕ ಅನ್ನುವ ಸ್ವರೂಪದಲ್ಲೇ ಎನ್ನುವುದು ಗಮನಾರ್ಹ.

ಅತಿಯಾದ ಪಾವಿತ್ರ್ಯತೆ

ಬೇಡರ ಪಾವಿತ್ರ್ಯ ಕಲ್ಪನೆ ಎಷ್ಟು ಜಟಿಲವಾದುದು ಎಂಬುದು ಇವರ ಕಟ್ಟೆಮನೆಗಳಲ್ಲಿ ನಡೆದಿರುವ ವ್ಯಾಜ್ಯಗಳಿಂದಲೇ ತಿಳಿದುಬರುತ್ತದೆ. ಈ ಸಮುದಾಯದ ಒಬ್ಬ ವ್ಯಕ್ತಿ ಬೇರೊಂದು ಜಾತಿಯವರ ಮನೆಯ ಒಳಗೆ ಪ್ರವೇಶಿಸಿದ್ದು ಒಂದು ದೊಡ್ಡ ಅಪರಾಧ ಎಂದು ಭಾವಿಸುವುದು, ಇನ್ನೊಂದು ಜಾತಿಯವರನ್ನು ಸ್ಪರ್ಶಿಸಿದರು ಎಂದು ಸಮುದಾಯ ದಿಂದ ಹೊರ ಹಾಕುವುದು. ಇಂಥ ಹಲವಾರು ಸಂಗತಿಗಳನ್ನು ಗಮನಿಸಿದರೆ ಬೇಡರ ಪಾವಿತ್ರ್ಯತೆಯ ಸ್ವರೂಪ ಅರ್ಥವಾಗುತ್ತದೆ. ಇವರ ಪಾವಿತ್ರ್ಯತೆಯನ್ನು ಇನ್ನು ಕೆಲವೊಂದು ಅಂಶಗಳು ಮುಂದಿನಂತಿವೆ.

ಅ. ಸಮುದಾಯದ ಒಳಗೇ ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನುವಂತಿಲ್ಲ. ‘ಎಂಜಲು ಏಳು ಮನೆ ಕೆಡಿಸಿತು’ ಎಂಬ ನಂಬಿಕೆಯಿಂದಾಗಿ ಇವರಲ್ಲಿ ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನುವುದು ಕಡ್ಡಾಯವಾಗಿ ನಿಷಿದ್ಧವಾಗಿದೆ.

ಆ. ಯಾರದೋ ಬೇರೆ ಸಮುದಾಯದ ಮನೆಯಲ್ಲಿ ಊಟ ಮಾಡುವಂತಿಲ್ಲ. ಅಷ್ಟೇ ಅಲ್ಲ ಕಿಲಾರಿಗಳು, ಪೂಜಾರಿಗಳು ಮೊದಲಾದ ಸಾಂಸ್ಕೃತಿಕ ಪುರುಷರು ಅವರ ಸ್ವಂತ ಮನೆಯಲ್ಲೇ ಎಲ್ಲರೂ ಉಣ್ಣುವ ತಟ್ಟೆಗಳಲ್ಲಿ ಉಣ್ಣುವಂತಿಲ್ಲ. ಇವರಿಗೇ ಪ್ರತ್ಯೇಕ ತಟ್ಟೆ ಯಿರಬೇಕು.

ಇ. ಇನ್ನು ವಿಶೇಷವೆಂದರೆ ಒಂದು ಊರಿಂದ ಇನ್ನೊಂದೂರಿಗೆ ಪ್ರಯಾಣಿಸುವಾಗ ಸಾರ್ವಜನಿಕ ವಾಹನದ ಬಳಕೆ ನಿಷೇಧ ಮಾಡಿಕೊಂಡಿದ್ದು ಈಗ ಈ ನೀತಿ ಸ್ವಲ್ಪ ಸಡಿಲಗೊಂಡಿದೆ. ಇತ್ತೀಚಿಗೆ ಸಾರ್ವಜನಿಕ ವಾಹನವೇರಿದರೆ ನಾವು ಮಲಿನರಾಗುತ್ತೇವೆ ಎಂದು ಭಾವಿಸಿ ನಡೆದು ಪಟ್ಟಣಗಳಿಗೆ ಹೋಗಿ ಬರುತ್ತಿದ್ದವರನ್ನು ನಾವೆಲ್ಲರೂ ನೋಡಿದ್ದೇವೆ. ಈಗಲೂ ಈ ಮೊದಲೇ ಹೇಳಿದ ಸಾಂಸ್ಕೃತಿಕ ಪುರುಷರು ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸದೇ ಇರುವುದನ್ನು ನೋಡಬಹುದಾಗಿದೆ.

ಇಂಥ ನಿರ್ಬಂಧದ ಹಿನ್ನೆಲೆ ಇರುವ ಈ ಸಮುದಾಯದ ಜನ ಬೇರೊಂದು ಸಮುದಾಯ ದವರ ಜೊತೆ ವೈವಾಹಿಕ ಮೊದಲಾದ ಸಾಮಾಜಿಕ ಸಂಬಂಧಗಳನ್ನು ಬೆಳೆಸುವುದು ದೂರದ ಮಾತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನಡವಳಿಕೆಗಳಲ್ಲಿ ಪಾವಿತ್ರ್ಯತೆ ಕಳೆದುಕೊಂಡ ವರನ್ನು ಸಮುದಾಯದಿಂದ ಹೊರಹಾಕುವುದು ಸಾಮಾನ್ಯ ಹಾಗೂ ಸಹಜ ಸಂಗತಿ. ಆದರೂ ಎಲ್ಲಾ ತರಹದ ತಪ್ಪಿಗೂ ಇಲ್ಲಿ ಕ್ಷಮೆ ಇದೆ. ಶುದ್ದೀಕರಿಸುವ ಕೆಲವು ಮಾದರಿಗಳಿದ್ದು, ಶಿಕ್ಷೆಗೊಳಗಾದ ವ್ಯಕ್ತಿ ಮರಳಿ ಸಮುದಾಯದೊಳಗೆ ಬರಲು ಇಚ್ಚಿಸಿದರೆ ಆತನನ್ನು ಶುದ್ದಿ ಮಾಡಿ ಕರೆದುಕೊಳ್ಳುವ ಉದಾರ ಕ್ರಮಗಳೂ ಇಲ್ಲಿವೆ.

ಕಾಡಿಗೆ ಹತ್ತಿರವಾದ ಬದುಕು

“ಬುಡಕಟ್ಟು ಜನ ಸಾಮಾನ್ಯವಾಗಿ ತಮ್ಮ ಸಂತೋಷದ ದುಃಖದ ಸಂದರ್ಭಗಳನ್ನು ಪ್ರಕೃತಿಯ ಮುಂದೆಯೇ ನಿವೇದಿಸಿಕೊಳ್ಳುವುದುಂಟು. ಅಲ್ಲಿ ಪರಿಹಾರವೂ ದೊರೆಯುವುದೆಂಬ ಖಚಿತ ನಂಬಿಕೆಯೂ ಅವರಿಗೆ ಇದೆ” (ಕೃಷ್ಣಮೂರ್ತಿ ಹನೂರು:೧೯೯೩:೯೮). ಇದಕ್ಕೆಲ್ಲ ಕಾರಣ ಬುಡಕಟ್ಟು ಸಮುದಾಯಗಳು ಹುಟ್ಟಿದ್ದು ಕಾಡಲ್ಲಿ ಬೆಳೆದದ್ದು ಕಾಡಲ್ಲಿ. ಬೇಡರ ಈ ಸಮುದಾಯವೂ ಕೂಡ ಕಾಡಿಗೆ ಹತ್ತಿರವಾಗಿ ಬದುಕಿದ ಬದುಕುತ್ತಿರುವ ಬುಡಕಟ್ಟಾಗಿದೆ. ಬೇಡರ/ಮ್ಯಾಸಬೇಡರ ಮೂಲಪುರುಷ “ಚೆಟ್ಲುಗೊಟ್ಲು ಮಲ್ಲಿನಾಯಕ” ಹುಟ್ಟಿದ್ದು ಕಾಡಲ್ಲಿ. ಒಂಟಿಕೊಂಬಿನ ಹಸುವಿನ ಗೊರಸಲ್ಲಿ ಬಿದ್ದ ವಿಭೂತಿ ದೂಳಿನ ಕಣವೊಂದರಿಂದ ಜನಿಸಿದ ಈತ ತಾಯಿಯ ಹಾಲಿನ ಬದಲಿಗೆ ಜೇನು ತುಪ್ಪವನ್ನು ಕುಡಿದು ಬದುಕಿದವನು.

ಇಂದು ಬೇಡರು ವಾಸಿಸುವ ಹಟ್ಟಿಗಳನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸಿದರೆ ಹಿಂದೆ ಆ ಪ್ರದೇಶಗಳು ದಟ್ಟ ಕಾಡಿನಿಂದ ಕೂಡಿದ್ದವೆಂಬುದಾಗಿ ತಿಳಿದುಬರುತ್ತದೆ. ಅಷ್ಟೇ ಅಲ್ಲ ಇಂದಿಗೂ ಮ್ಯಾಸಬೇಡರ ಅನೇಕ ಹಟ್ಟಿಗಳು ಅರಣ್ಯದಿಂದ ಸುತ್ತುವರೆದಿವೆ. ಹಾಗೆಯೇ ಬೇಡರ ಬದುಕು ಅರಣ್ಯ ಪರಿಕರಗಳಿಂದ ಸಾಕಷ್ಟು ಪ್ರಭಾವಿತಗೊಂಡಿದೆ ಮತ್ತು ಅವಲಂಬಿತ ವಾಗಿದೆ.

ಪ್ರತ್ಯೇಕ ಭಾಷೆ

ವಿಶೇಷವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ಸುತ್ತಲಿನ ಮ್ಯಾಸಬೇಡರ ಸಮುದಾಯಗಲ್ಲಿ ‘ಕಂದೆಲಗು’ ಎಂಬ ಪ್ರತ್ಯೇಕ ಭಾಷೆ ಪ್ರಚಲಿತವಾಗಿದೆ. ತೆಲುಗು ಹಾಗೂ ಕನ್ನಡ ಮಿಶ್ರಿತವಾದ ಈ ಭಾಷೆ ಮುಖ್ಯವಾಗಿ ತೆಲುಗು. ಈ ತೆಲುಗಿಗೆ ಕನ್ನಡ ಮಿಶ್ರಣಗೊಂಡು ‘ಕಂದೆಲಗು’ ಆಗಿ ಮಾರ್ಪಾಟಾಗಿರುವುದನ್ನು ಅಧ್ಯಯನಕಾರರು ಗುರುತಿಸಿದ್ದಾರೆ.

ಇಷ್ಟೆಲ್ಲಾ ಸಾಂಸ್ಕೃತಿಕ ವೈಶಿಷ್ಟತೆಗಳೊಂದಿಗೆ ಬದುಕುತ್ತಿರುವ ಬೇಡರು ಕರ್ನಾಟಕ ಬುಡಕಟ್ಟುಗಳಲ್ಲೇ ಒಂದು ವಿಶಿಷ್ಟ ಸ್ಥಾನ ಉಳಿಸಿಕೊಂಡಿದ್ದಾರೆ. ಆಧುನಿಕ ಕಾಲದ ಈ ಸಂದರ್ಭದಲ್ಲಿ ಬುಡಕಟ್ಟು ಜಾತಿಗಳ ಸ್ಪಷ್ಟಗೆರೆ ಮಾಯವಾಗುತ್ತದೆ. ಆದರೂ ಕೆಲವೊಂದು ಸಮುದಾಯಗಳು ಬುಡಕಟ್ಟಾಗಿ ಮುಂದುವರೆಯುವ ಬದ್ಧತೆಯನ್ನು ತೋರ್ಪಡಿಸಿವೆ. ಬುಡಕಟ್ಟೊಂದು ಸಂಪೂರ್ಣ ಜಾತಿಯಾಗಿದೆ ಎಂದು ತೀರ್ಮಾನಿಸುವುದು ಯಾವ ಸಂದರ್ಭಕ್ಕೆ ಎಂಬುದರ ಬಗ್ಗೆ ವಿಚಾರ ಮಾಡುತ್ತಾ ನಿರ್ಮಲ್ ಕುಮಾರ್ ಬೋಸ್ ಅವರು ಹೇಳಿದ ಮತ್ತೊಂದು ಇಲ್ಲಿ ಉಲ್ಲೇಖಾರ್ಹ. “ಬುಡಕಟ್ಟಿನ ಹುಟ್ಟು, ಮದುವೆ, ಸಾವು ಈ ಮೂರು ಸಂದರ್ಭಗಳಲ್ಲಿ ಬ್ರಾಹ್ಮಣರ ಪುರೋಹಿತ್ಯಕ್ಕೆ ಅವಕಾಶ ಕೊಡದೆ ತಾವೇ ನಡೆಸಿಕೊಂಡು ಹೋಗುತ್ತಾರೆ. ಎಲ್ಲಿಯವರೆಗೆ ಈ ಪರಿಸ್ಥಿತಿ ಉಳಿದಿರುವುದೋ ಅಲ್ಲಿಯವರೆಗೆ ಬುಡಕಟ್ಟು ತನ್ನ ಮೂಲ ರೂಪದಲ್ಲಿ ಉಳಿದಿರುತ್ತದೆ. ಹುಟ್ಟು-ಮದುವೆ ಹಾಗೂ ಸಾವು ಈ ಸಂದರ್ಭಗಳಲ್ಲಿ ಬ್ರಾಹ್ಮಣರ ಪುರೋಹಿತ್ಯಕ್ಕೆ ಅವಕಾಶ ಕೊಡುವುದೋ ಆಗ ಬುಡಕಟ್ಟು ತನ್ನ ಮೂಲ ಸ್ವರೂಪವನ್ನು, ಸ್ವಾತಂತ್ರ್ಯವನ್ನು ಕಳೆದುಕೊಂಡು ಜಾತಿಯಾಗಿ ಪರಿವರ್ತಿತ ವಾಗುತ್ತದೆ (ಉಲ್ಲೇಖ : ತಿಣ.ನಂ. ಶಂಕರನಾರಾಯಣ : ೧೯೮೨ : ೦೨).

ಈ ಮಾತನ್ನು ಬೇಡ ಸಮುದಾಯಕ್ಕೆ ಅನ್ವಯಿಸಿ ನೋಡಿದರೆ ಫಲಿತಾಂಶ ಸ್ಪಷ್ಟವಾಗಿ ರುತ್ತದೆ. 

ಆಕರಗಳು

೧. ಕ್ಷೇತ್ರ ಕಾರ್ಯಾಧಾರಿತ ಮಾಹಿತಿಗಳು.

೨. ‘ಬುಡಕಟ್ಟು ಅಧ್ಯಯನ ನೆಲೆಯಲ್ಲಿ ಬೇಡನಾಯಕರು’(ಲೇಖನ)ಕೆ.ಎಂ. ಮೈತ್ರಿ (ಇದರಲ್ಲಿ:“ಘಟ್ಟಿ ಹೊಸಳ್ಳಿ ಘಟ್ಟಿಗ”, ಸಂ. ಲಕ್ಷ್ಮಣ್ ತೆಲಗಾವಿ, ವಾಸಾಸಂ, ಹರ್ತಿಕೋಟೆ).

೩. “ಮ್ಯಾಸಬೇಡರ ಸಂಸ್ಕೃತಿ”, ಕೃಷ್ಣಮೂರ್ತಿ ಹನೂರು, ೧೯೯೩, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೪. “ಮ್ಯಾಸ ಮಂಡಲ”, ಮೀರಾಸಾಬಿಹಳ್ಳಿ ಶಿವಣ್ಣ, ೨೦೦೩, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

೫. “ಕಾಡುಗೊಲ್ಲರ ನಂಬಿಕೆ ಮತ್ತು ಸಂಪ್ರದಾಯಗಳು”, ತೀ.ನಂ.ಶಂಕರ ನಾರಾಯಣ, ೧೯೮೨, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

೬. “ಬುಡಕಟ್ಟು ಸಮಾಜ ಹುಟ್ಟು ಸಾವಿನ ನಡುವೆ”, ಗಂಗಾಧರ ದೈವಜ್ಞ, ೨೦೦೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. “ಮನೆ-ಸಮಾಜ-ಸಂಸ್ಕೃತಿ”, ಎಂ.ಪಿ. ವೀಣಾ, ೧೯೯೯, ನೆಲಮನೆ ಪ್ರಕಾಶನ, ಬೆಂಗಳೂರು.

೮. “ಪ್ರಾಚೀನ ಭಾರತದ ಚರಿತ್ರೆ”(ಡಿ.ಡಿ. ಕೊಸಂಬಿಯವರ ಚಿಂತನೆಗಳು), ಮೂಲ. ಬಾಲಗೋಪಾಲ್, ಅನು. ಎಚ್.ಎಸ್. ಶ್ರೀಮತಿ, ೧೯೯೮, ಬೆಳ್ಳಿ-ಚುಕ್ಕಿ ಟ್ರಸ್ಟ್, ಬೆಂಗಳೂರು.

೯. “ಜಾನಪದ ಕೈಪಿಡಿ”, ಸಂ. ಎಚ್.ಜೆ. ಲಕ್ಕಪ್ಪಗೌಡ, ೧೯೯೭, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

೧೦. ಬುಡಕಟ್ಟು ಅಧ್ಯಯನ-೧, ಸಂ. ಹಿ.ಚಿ. ಬೋರಲಿಂಗಯ, ಎ.ಎಸ್. ಪ್ರಭಾಕರ, ೨೦೦೩, ಕನ್ನಡ ವಿಶ್ವವಿದ್ಯಾಲಯ, ಹಂಪಿ.