ಭಾರತ ಅನೇಕ ಬುಡಕಟ್ಟುಗಳಿಂದ ಕೂಡಿರುವ ದೇಶ. ಸಾವಿರಾರು ಬುಡಕಟ್ಟುಗಳು ಇಲ್ಲಿ ವಾಸಿಸುತ್ತಿದ್ದು, ತಮ್ಮದೇ ಆದ ವೈಶಿಷ್ಟ್ಯಗಳಿಂದ ಕೂಡಿರುತ್ತವೆ. ಅಂಥವುಗಳಲ್ಲಿ ಈ ‘ಬೇಡ’ ಬುಡಕಟ್ಟು ಒಂದಾಗಿದೆ. ಇದರ ಮೂಲ ಪ್ರಾಚೀನ ಕಾಲದ್ದು. ಮೂಲತಃ ಆದಿಮಾನವನ ಕಾಲದಿಂದಲೂ ಈ ವರ್ಗ ಹಾಗೆಯೇ ಬಂದಿರುವಂಥದ್ದು. ಇವರ ವೃತ್ತಿ ಆದಿಯಿಂದಲೂ ‘ಬೇಟೆ’ಯಾಡುವುದು, ಗೆಡ್ಡೆ ಗೆಣಸುಗಳನ್ನು ಅಗೆಯುವುದು, ಇವೇ ಅವರ ಆಹಾರದ ಮೂಲಗಳಾಗಿದ್ದವು. ಆದರೆ ಇಂದು ನಾಗರಿಕ ಜಗತ್ತಿಗೆ ಹೊಂದಿಕೊಂಡಿ ದ್ದಾರೆ.

ಈ ‘ಬೇಟೆ’ಯಾಡುವ ವೃತ್ತಿಯಿಂದಲೇ ಇವರಿಗೆ ‘ಬೇಡ’ ಎನ್ನುವ ಹೆಸರು ಬಂದಿರು ವಂತಿದೆ. ಸಂಸ್ಕೃತದಲ್ಲಿನ ‘ವ್ಯಾಧ’ ಪದವು ಕನ್ನಡದಲ್ಲಿ ‘ಬೇಡ’ ಎಂಬುವ ರೂಪವನ್ನು ಪಡೆದಿದೆ. ಪ್ರಾಚೀನ ಕಾವ್ಯಗಳಲ್ಲಿ ಈ ರೀತಿಯ ಪದಗಳು ಬಳಕೆಯಾಗಿವೆ. ಬೇಡ, ಕಿರಾತ, ನಿಷಾಧ, ಶಬರ, ಪುಳಿಂದ ಇತ್ಯಾದಿ ಹೆಸರುಗಳಿಂದ ಇವರನ್ನು ಕರೆಯಲಾಗಿದೆ. ಹಾಗಾಗಿ ಇವರನ್ನು ಆದಿವಾಸಿಗಳೆಂದು ಗುರುತಿಸಲಾಗಿದೆ. ಬುಡಕಟ್ಟಿನ ಬಗ್ಗೆ ಅನೇಕ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ವೆರಿಯಲ್ ಎಲ್ವನ್‌ರೇ ಆದಿಯಾಗಿ ಬಿ.ಎಚ್. ಹಟ್ಸನ್, ಜೆ.ಪಿ. ಮಿಲ್ಸ್, ಸ್ಮಿಥ್, ಹೈಮಂಡ್ ಡಾರ್ಫ್ ಇಂಥವರೆಲ್ಲ ಉತ್ತರ ಭಾರತದ ಬುಡಕಟ್ಟುಗಳನ್ನು ಅಧ್ಯಯನ ಮಾಡಿದರು. ದಕ್ಷಿಣ ಭಾರತದ ಬುಡಕಟ್ಟುಗಳ ಬಗೆಗೆ ಮಾಡಿದ ವಿದ್ವಾಂಸರು ಎಡ್ಗರ್ ಥರ್‌ಸ್ಟನ್ ಮತ್ತು ಕೆ. ರಂಗಾಚಾರಿ. ಎಲ್.ಕೆ. ಅನಂತಕೃಷ್ಣ ಅಯ್ಯರ್ ಮತ್ತು ಎಚ್.ವಿ. ನಂಜುಂಡಯ್ಯ ಮುಂತಾದವರು. ಈ ಮಾನವಶಾಸ್ತ್ರಜ್ಞರ ಹಿನ್ನೆಲೆಯಲ್ಲಿ ನಾವು ಬೇಡರ ಬಗ್ಗೆ ಅಧ್ಯಯನ ಕೈಗೊಂಡಾಗ ಅನೇಕ ಪ್ರಮುಖ ಅಂಶಗಳು ಕಂಡುಬರುತ್ತವೆ. ಈ ಮೇಲಿನ ವಿದ್ವಾಂಸರು ಸೂಚಿಸಿರುವಂತೆ ಈ ಬುಡಕಟ್ಟಿನಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳನ್ನು ನಾವು ಕಾಣುತ್ತೇವೆ. ಈಗಲೂ ಇವರ ಉಳಿದುಕೊಂಡು ಬಂದಿರುವ ಸಂಪ್ರದಾಯ, ಆಚರಣೆಗಳು ಅವರ ಮೂಲದ ಪರಿಸರದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದವರೇ ಆದ ಡಾ. ಕೃಷ್ಣಮೂರ್ತಿ ಹನೂರು, ಪ್ರೊ. ಲಕ್ಷ್ಮಣ್ ತೆಲಗಾವಿ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಕರಿಶೆಟ್ಟಿ ರುದ್ರಪ್ಪ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಇತ್ಯಾದಿಯಾಗಿ ಅನೇಕ ಜನ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಈ ಎಲ್ಲಾ ವಿದ್ವಾಂಸರ ಅಭಿಪ್ರಾಯದಂತೆ ಬೇಡ ಬುಡಕಟ್ಟಿನ ವೈಶಿಷ್ಟ್ಯಗಳು ವಿಭಿನ್ನವಾಗಿರುವುದು ಕಂಡುಬರುತ್ತದೆ.

ಬೇಡ ಬುಡಕಟ್ಟಿನಲ್ಲಿ ಎರಡು ಪಂಗಡಗಳು ಬರುತ್ತವೆ. ಒಂದು ಮ್ಯಾಸಬೇಡರು, ಇನ್ನೊದು ಊರುಬೇಡರು. ಊರ ಹೊರಗಿನ ಹಟ್ಟಿ ಬೇಡರನ್ನು ಮ್ಯಾಸಬೇಡರೆಂದು, ಊರೊಳಗೆ ಬಂದು ನೆಲಸಿದವರನ್ನು ಊರುಬೇಡರೆಂದು ಕರೆದಿದ್ದಾರೆ. ಆದರೆ ಇಂದು ಮ್ಯಾಸನಾಯಕರೂ ಸಹ ನಾಗರಿಕತೆಯಲ್ಲಿ ಸೇರಿಹೋಗಿದ್ದು ಇಂದು ಎರಡೂ ಪಂಗಡಗಳೂ ಊರೊಳಗೆ ವಾಸಿಸುತ್ತವೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮ್ಯಾಸರ ಹಟ್ಟಿಗಳು ಪ್ರತ್ಯೇಕವಿದ್ದು ತಮ್ಮತನವನ್ನು ಇನ್ನು ಉಳಿಸಿಕೊಂಡಿವೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಲವು ಹಟ್ಟಿಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ದಾವಣಗೆರೆ ಜಿಲ್ಲೆಯ ಜಗಳೂರು ಪ್ರದೇಶಗಳಲ್ಲಿ ಅಲ್ಲಲ್ಲಿ ಈ ಮ್ಯಾಸನಾಯಕರು ತಮ್ಮ ಹಟ್ಟಿಗಳಲ್ಲೇ ವಾಸಿಸಿರುವುದನ್ನು ನೋಡುತ್ತೇವೆ.

ವೈಶಿಷ್ಟ್ಯಗಳು

೧. ಮ್ಯಾಸಬೇಡರ ಉಡುಗೆ-ತೊಡುಗೆಗಳು

೨. ಮ್ಯಾಸಬೇಡರ ಬೇಟೆ ವೃತ್ತಿ

೩. ಮ್ಯಾಸಬೇಡರ ಹಬ್ಬ ಹರಿದಿನ, ಆಚರಣೆಗಳು

೪. ಮ್ಯಾಸಬೇಡರ ಕಲೆಗಳು

೫. ಮ್ಯಾಸಬೇಡರ ಉಪಜೀವನ ವೃತ್ತಿಗಳು

೬. ಮ್ಯಾಸಬೇಡರ ಮದುವೆ ಪದ್ದತಿ

೭. ಮ್ಯಾಸಬೇಡರ ಶವಸಂಸ್ಕಾರ ಪದ್ಧತಿ ಇತ್ಯಾದಿ.

‘ಮ್ಯಾಸ’ ಎನ್ನುವ ಪದವೇ ಇವರ ಉಪಜೀವನದ ವೃತ್ತಿಯನ್ನು, ಕಾಯಕವನ್ನು ಸೂಚಿಸುತ್ತದೆ. ಅಂದರೆ ಇವರು ದನಕರುಗಳನ್ನು, ಮೇಕೆಗಳನ್ನು, ಕುರಿಗಳನ್ನು ಮೇಯಿಸಿ ಕೊಂಡು ಕಾಡುಗೊಲ್ಲರಂತೆಯೇ ಕೆಲವೊಂದು ಕಾಲದಲ್ಲಿ ಅಲೆಮಾರಿಯಾಗಿದ್ದವರು. ನಂತರದಲ್ಲಿ ಒಂದು ಕಡೆ ನೆಲೆಸಿ ಹಟ್ಟಿಗಳನ್ನು ನಿರ್ಮಿಸಿಕೊಂಡು ವಾಸಿಸತೊಡಗಿದರು. ಈ ರೀತಿಯಿಂದ ಇವರು ಮೇಸರು>ಮೇಯಿಸುವವರು>ಮೇಯಿಸುವ ಮ್ಯಾಸರು ಎಂದು ಕರೆದುಕೊಂಡಿದ್ದಾರೆ.

‘ಮ್ಯಾಸಬೇಡರು’ ಎಂಬ ಪದದಲ್ಲಿ ಎರಡು ವೃತ್ತಿಸೂಚಕ ಪದಗಳು ಕೂಡಿದ್ದು ಒಂದು ದನ ಮೇಯಿಸುವವರು, ಇನ್ನೊಂದು ಬೇಟೆಯಾಡುವುದು. ಈ ವೃತ್ತಿಗಳಿಂದ ಇವರ ಜಾತಿಯನ್ನು ‘ಮ್ಯಾಸಬೇಡರು’ ಎಂದು ಕರೆದುಕೊಂಡಿದ್ದಾರೆ ಅಥವಾ ಕರೆದಿದ್ದಾರೆ.

ಇಂದಿಗೂ ಯುಗಾದಿ ಹಬ್ಬದಲ್ಲಿನ ಆಚರಣೆ ಇವರ ಮೂಲದ ಬಗೆಗೆ, ಮೂಲವೃತ್ತಿಯ ಬಗೆಗೆ ವಿವರವನ್ನು ಸೂಚಿಸುತ್ತದೆ. ಯುಗಾದಿ ಹಬ್ಬದ ಎರಡನೇ ದಿನ ಬೇಡ ಜನಾಂಗದವರು ಬೇಟೆ ಹೋಗುವುದು ಸಂಭ್ರಮದ ಹಬ್ಬವಾಗಿದೆ. ಅಷ್ಟೇ ಏಕೆ ಇಂದು ಸಹ ಕೆಲವೊಂದು ಮ್ಯಾಸರಹಟ್ಟಿಗಳಲ್ಲಿ ಬೇಟೆಯಾಡುವುದು ಇನ್ನೂ ಇದೆ. ನಿತ್ಯವೂ ನಾಯಿ ಜೊತೆ ಬೇಟೆಗೆ ಹೋಗುವುದನ್ನು ನೋಡಬಹುದು.

ಮ್ಯಾಸನಾಯಕರೆಂದರೆ ಒಂದು ಕಾಲದಲ್ಲಿ ಸಮುದಾಯದ ನಾಯಕತ್ವವನ್ನು ಹೊಂದಿರು ವವರೆ ಕಾಲಾಂತರದಲ್ಲಿ ಹರಳುಗಟ್ಟಿ ಒಂದು ಬುಡಕಟ್ಟೆಂದು ಗುರುತಿಸಲ್ಪಟ್ಟರು. ನಾಯಕ ಎಂದರೆ ಇನ್ನೊಂದು ಅರ್ಥದಲ್ಲಿ ಆಳುವ ವರ್ಗವೆನ್ನಬಹುದು. ಆದರೆ ಇಂದು ತನ್ನ ಆ ಸ್ಥಾನ ಕಳೆದುಕೊಂಡು ಆಳಿಸಿಕೊಳ್ಳುವ ವರ್ಗವಾಗಿರುವುದು ಚಿಂತನಾರ್ಹ. ವಿಶ್ವದ ಮೂಲಿ ಗರೇ ಬೇಡರು. ಅಲ್ಲಿಂದಲೇ ಸಾಮಾಜಿಕ ವಿಕಸನದ ಘಟ್ಟಗಳನ್ನು ಗಣಿಸಬಹುದು. ಬೇಟೆ ಹಾಗೂ ಆಹಾರ ಸಂಗ್ರಹಣೆಯೇ ಇವರ ಮೂಲಕಸುಬು.

ಮ್ಯಾಸಬೇಡರ ಉಡುಗೆತೊಡುಗೆಗಳು

ಈ ಬುಡಕಟ್ಟಿನವರು ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಂಡುಬರುವಂತೆ ಇವರ ಉಡುಗೆ-ತೊಡುಗೆಗಳು ವಿಶಿಷ್ಟವಾದವು. ಇವರಲ್ಲಿ ಗಂಡಸರು ಚಲ್ಯಾಣವನ್ನು ತೊಡುತ್ತಾರೆ. ತಲೆಗೆ ದಪ್ಪನಾಗಿ ರುಮಾಲು ಸುತ್ತುತ್ತಾರೆ. ಹೆಗಲ ಮೇಲೆ ಅಡ್ಡವಲ್ಲಿ ಅಥವಾ ಕಂಬಳಿಯನ್ನು ಹಾಕಿಕೊಳ್ಳುತ್ತಾರೆ. ಇನ್ನು ಹೆಂಗಸರು ಕುಪ್ಪಸವನ್ನು ತೊಡುವುದಿಲ್ಲ. ಉಟ್ಟ ಸೀರೆಯ ಸೆರಗನ್ನೇ ಎದೆ ಮುಚ್ಚಿಕೊಳ್ಳಲು ಬಳಸುತ್ತಾರೆ. ಕೆಲವು ಕಡೆ ಗಂಡಸರು ಕಚ್ಚಪಂಜೆ ಹಾಕುತ್ತಾರೆ. ತೋಳಂಗಿ ತೊಡುತ್ತಾರೆ. ತಲೆಗೊಂದು ಟವೆಲ್ಲು ಸುತ್ತಿರುತ್ತಾರೆ. ಇವು ಈ ಬುಡಕಟ್ಟಿನವರ ಉಡುಗೆಗಳಾಗಿವೆ. ಆದರೆ ಇಂದು ಅನೇಕ ಕಡೆ ನಾಗರಿಕತೆಗೆ ಹೊಂದಿಕೊಂಡ ಜನರ ಉಡುಗೆ-ತೊಡುಗೆ ಬದಲಾಗಿದೆ.

ಇನ್ನು ತೊಡುಗೆಗಳೆಂದರೆ ಕೈಕಡಗ, ತೋಳ್ಬಂದಿ, ಮಣಿಸರಗಳು, ಮುತ್ತಿನ ಸರಗಳು, ಓಲೆಗಳು, ಮೂಗುತಿಗಳು, ಮೇಸರಿಗಳು ಇತ್ಯಾದಿ ಆಭರಣಗಳನ್ನು ತೊಡುಗೆಯಾಗಿ ಬಳಸು ತ್ತಾರೆ. ಆದರೆ ಇಂದು ಆಧುನಿಕ ಜಗತ್ತಿನಲ್ಲಿ ಎಲ್ಲಾ ಕಡೆಯೂ ಇತ್ತೀಚಿನ ತೊಡುಗೆಗಳು ಬಳಕೆಯಾಗುತ್ತಿರುವುದನ್ನು ಕಾಣುತ್ತೇವೆ. ಬಂಗಾರ, ಬೆಳ್ಳಿ ಆಭರಣಗಳು ಉಳ್ಳವರು, ಉಳ್ಳದವರೂ ಸಹ ಹಾಕುತ್ತಾರೆ.

ಬೇಡನಾಯಕರ ಮೈಬಣ್ಣ ಸಾಮಾನ್ಯವಾಗಿ ಕಪ್ಪು. ಉದ್ದ ಶರೀರ, ತಲೆ ಮೇಲೆ ಪೇಟ, ಬರಿಮೈ, ಹೆಗಲ ಮೇಲೆ ಒಂದು ಕಪ್ಪು ಕಂಬಳಿ. ಈ ಕಂಬಳಿ ಹಾಕಿಕೊಳ್ಳಲು, ಹೊದ್ದು ಕೊಳ್ಳಲು ಬೇಕಾದರೆ ಒಂದು ಕಡೆ ಗುಡ್ಡೆ ಇಟ್ಟು ಕೂತುಕೊಳ್ಳಲು ಬರುವಂಥದ್ದು. ಮಳೆಗಾಲ ದಲ್ಲಿ ಹೊದ್ದುಕೊಂಡು ಮಲಗಿದರೂ ನೆನೆಯದಂತೆ ಬಿದ್ದ ಹನಿ ಅತ್ತ ಇತ್ತ ಸೋರಿ ಹೋಗಿ ಬಿಡುವಂಥ ಕಂಬಳಿ ಇದು.

ಇವರು ಮೈಗೆ ಧರಿಸುವ ಉಡುಪು ಒಂದು ಚಲ್ಲಣ ನಡುವಿನಲ್ಲಿ, ಕೈಯಲ್ಲಿ ಒಂದು ಕೋಲು, ಹೆಂಗಸಾದರೆ ಬಿಳಿಯ ಸೀರೆ ಉಟ್ಟು ಅದರ ಸೆರಗನ್ನು ಹೆಗಲು ಬಳಸಿ ಎದೆ ಮುಚ್ಚಿಕೊಳ್ಳುವ ರೂಢಿ. ಇದ್ದು, ರವಿಕೆ ತೊಡುವ ರೂಢಿ ಇವರಲ್ಲಿರಲಿಲ್ಲ. ಆದರೆ ಈಗೀಗ ಬೇಡನಾಯಕ ಸಮಾಜ ಆಧುನಿಕತೆಗೆ ಹೊಂದಿಕೊಂಡು ಹಳೆಯ ಸ್ವರೂಪವನ್ನು ಬಿಟ್ಟುಕೊಡುತ್ತಿರುವುದನ್ನು ಎಲ್ಲ ಕಡೆ ಗಮನಿಸಬಹುದಾಗಿದೆ.

[1]

ಮ್ಯಾಸಬೇಡರ ಬೇಟೆ ವೃತ್ತಿ

ಈ ಬುಡಕಟ್ಟಿನವರ ಮೂಲಕಸುಬು ಬೇಟೆಯಾಡುವುದೇ ಆಗಿದ್ದರೂ, ಕೃಷಿಯನ್ನ ವಲಂಬಿಸಿದ್ದರು. ದನಕರುಗಳನ್ನು, ಮೇಕೆಗಳನ್ನು, ಕುರಿಗಳನ್ನು ಸಾಕುತ್ತಿದ್ದರು. ಈ ಜನಾಂಗದವರಲ್ಲಿ ಬೇಟೆಯಾಡುವುದು ಆಸಕ್ತ ವಿಷಯ. ಇವರಿಗೆ ಬೇಟೆ ಎಂದರೆ ಪರಮಾ ನಂದ. ಇವರು ತಮ್ಮ ಜೀವನದಲ್ಲಿ ಸಾಹಸ, ಶೌರ್ಯ ಪ್ರವೃತ್ತಿಯುಳ್ಳವರು. ಕಾಡುಪ್ರಾಣಿಗಳನ್ನು ಬೇಟೆಯಾಡುವುದಿರಲಿ, ಪಳಗಿಸುವಲ್ಲಿಯೂ ಸಹ ನಿಪುಣರಾಗಿದ್ದರು. ಹುಲಿಗಳನ್ನು ಪಳಗಿಸಿದ ಅನೇಕ ಉದಾಹರಣೆಗಳು ದೊರೆಯುತ್ತವೆ. ಮ್ಯಾಸಬೇಡರ ಕಥನಕಾವ್ಯಗಳನ್ನು ನೋಡಿದರೆ ಇಂಥ ಅನೇಕ ಸಂಗತಿಗಳು ದೊರೆಯುತ್ತವೆ.

ಮೊಲ, ಜಿಂಕೆ, ಕಾಡುಹಂದಿ, ಮುಳ್ಳುಹಂದಿ, ಚಿಪ್ಪುಹಂದಿ, ಉಡ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಇಂದಿಗೂ ಇವರಲ್ಲಿ ಈ ಪ್ರವೃತ್ತಿಯನ್ನು ಕಾಣುತ್ತೇವೆ. ಯುಗಾದಿ ಹಬ್ಬದಲ್ಲಿನ ಆಚರಣೆಯಲ್ಲಿ ಎರಡನೇ ದಿನ ಬೇಟೆಗೆ ಹೋಗುತ್ತಾರೆ. ಈ ಬೇಟೆಯು ಊರಿನ ಗೌರವ, ಸ್ವಾಭಿಮಾನ ಪ್ರಶ್ನೆಯಾಗಿರುತ್ತದೆ. ನಾಯಿಯನ್ನು ಬೇಟೆಯ ಸಹಾಯಕ್ಕಾಗಿ ಸಾಕುತ್ತಾರೆ.

ಬೇಟೆಗಾರಿಕೆ ಈಗ ಕಡಿಮೆಯಾಗಿದೆ. ಸರಕಾರದ ಕಾನೂನು ಇರುವುದರಿಂದ ಬೇಟೆ ಯಾಡುವುದು ಇಂದು ಅಪರಾಧವಾಗುವುದರಿಂದ ಈ ಜನಾಂಗದವರು ಬೇಟೆಯನ್ನು ಕಡಿಮೆ ಮಾಡಿದ್ದಾರೆ. ಎಲ್ಲೋ ಕೆಲವು ಕಡೆ ಈ ಸಂಸ್ಕೃತಿ ಉಳಿದ ಕಡೆ ಬೇಟೆಗಾರಿಕೆ ಇರುವುದನ್ನು ನೋಡುತ್ತೇವೆ. “ಬೇಟೆಯೇ ಪ್ರಮುಖ ಉದ್ಯೋಗವಾಗಿದ್ದ ಬೇಡರು ದಾರಿಹೋಕರನ್ನು ದೋಚುವುದನ್ನು ಬಹುಶಃ ಜಗತ್ತು ಹೆಚ್ಚುಚ್ಚು ವ್ಯಾವಹಾರಿಕವಾಗುತ್ತ ಬಂದಂತೆಲ್ಲಾ ಕಲಿತಿರ ಬೇಕಷ್ಟೆ. ಅತ್ಯಂತ ಪ್ರಾಚೀನ ಕಾಲದಲ್ಲಿ ಮಾನವ ಬೇಟೆ ಜೀವನವನ್ನು ಕೈಗೊಂಡು ಒಂದು ಕಡೆ ನೆಲೆಯಾಗಿ ನಿಂತು ನಾಗರಿಕತೆಯ ಹಾದಿಹಿಡಿದ. ಆದರೆ ಮಾನವ ಜನಾಂಗವೆಲ್ಲ ಏಕಪ್ರಕಾರವಾಗಿ ನಾಗರಿಕತೆಯ ಹಾದಿಯಲ್ಲಿ ನಡೆಯಲಿಲ್ಲ. ಏಕೆಂದರೆ ಹತ್ತೊಂಬತ್ತನೆಯ ಶತಮಾನದ ಯಂತ್ರಯುಗದ ಆರಂಭದಲ್ಲಿಯೂ ಅರಣ್ಯವಾಸಿಗಳು ತಮ್ಮ ಪ್ರಾಚೀನ ಮಾದರಿಯ ಬೇಟೆಯ ಬದುಕನ್ನೇ ನಡೆಸುತ್ತಿರುವ ಸಂಗತಿ ನಮಗೆ ಇಂದಿಗೂ ಸಿಗುತ್ತದೆ (ಕೃಷ್ಣಮೂರ್ತಿ ಹನೂರು, ೧೯೭೭, ಪು. ೩೪).

ಪಶುಪಾಲನೆ, ಬೇಟೆಯನ್ನು ಮುಖ್ಯವೃತ್ತಿಯನ್ನಾಗಿಸಿಕೊಂಡಿದ್ದ ಬೇಡ ನಾಯಕರು ಈಗಲೂ ತಮ್ಮ ದೇವತೆಗಳ ಮುಖ್ಯ ಉತ್ಸವಗಳು ಮುಗಿದ ಬಳಿಕ ಬೇಟೆಯಾಡುವ  ಸಂಪ್ರದಾಯವನ್ನಿರಿಸಿಕೊಂಡಿದ್ದಾರೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಗಾದ್ರಿಪಾಲನಾಯಕನ ಉತ್ಸವ ನಡೆದ ಮಾರನೆಯ ದಿನ ಜಾತ್ರೆಯಲ್ಲಿ ಸೇರಿದ ಮ್ಯಾಸ ಮಂಡಳಿಯ ಯುವಕರೆಲ್ಲ ಬೇಟೆಗೆ ಹೊರಡುವರು. ಹಾಗೆ ಬೇಟೆಗೆ ಹೋಗುವಾಗ ಉರಿಮೆ, ತಪ್ಪಡಿ ಬಡಿಸಿಕೊಂಡು ಒಂದು ಬಂಡೆಯ ಕಡೆ ಬರುತ್ತಾರೆ. ಆ ಬಂಡೆಯ ಕಡೆಗೆ ಮನಮ ಲೋರ ಕೋಮಿನವರು ಹೊಂಬಾಳೆ, ಎಲೆ, ಅಡಿಕೆ ತಂದಿಟ್ಟುಕೊಂಡು ಕೂತಿರುತ್ತಾರೆ. ಬೇಟೆಯಾಡಲು ಹೋಗುವ ಪ್ರತಿಯೊಬ್ಬರಿಗೂ ವೀಳ್ಯ ಕೊಡುವರು. ವೀಳ್ಯ ತೆಗೆದುಕೊಂಡ ವರು ದೇವರಿಗೆ ಕೈಮುಗಿದು ಅರಣ್ಯದ ಕಡೆಗೆ ಹೊರಡುತ್ತಾರೆ. ನನ್ನಿವಾಳಕ್ಕೆ ಹತ್ತಿರವಿರುವ ಸೋಮಲಬಂಡೆ ಕಾಡಿನಲ್ಲಿ ಒಂದೋ ಎರಡೋ ಮೊಲ ಬೇಟೆಯಾಡುತ್ತಾರೆ. ಹಿಂದೆ ಅರಣ್ಯವು ಸಮೃದ್ಧವಾಗಿ ಇದ್ದಾಗ ಜಿಂಕೆ, ಕಡವೆ, ಸಾರಂಗ, ಹಂದಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು (ಕೃಷ್ಣಮೂರ್ತಿ ಹನೂರು, ೧೯೯೩, ಪು. ೧೭೭).

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಇಂದಿಗೂ ಬೇಟೆ ಸಂಸ್ಕೃತಿ ಇರುವುದನ್ನು ನೋಡಬಹುದು ಮತ್ತು ಸಂಡೂರು ತಾಲೂಕಿನ ಕೆಲವು ಹಳ್ಳಿಗಳಲ್ಲಿ, ಇಂದಿಗೂ ಚಿತ್ರದುರ್ಗ ಜಿಲ್ಲೆಯ ಹಟ್ಟಿಗಳಲ್ಲಿಯೂ ಬೇಟೆಗಾರಿಕೆಯು ಉಳಿದಿರುವುದನ್ನು ನೋಡುತ್ತೇವೆ.

ಮ್ಯಾಸಬೇಡರ ಹಬ್ಬಹರಿದಿನ ಮತ್ತು ಆಚರಣೆಗಳು

ಈ ಜನಾಂಗದವರು ಅರಣ್ಯವಾಸಿಗಳಾಗಿದ್ದರು. ಇವರು ತಮ್ಮದೇ ಆದ ಹಬ್ಬ ಹರಿದಿನ ಗಳನ್ನು ಆಚರಿಸುತ್ತಿದ್ದರು. ಇಂದಿಗೂ ಈ ಹಬ್ಬಗಳು ಆಚರಣೆಯಲ್ಲಿರುವುದನ್ನು ನೋಡು ತ್ತೇವೆ. ಮ್ಯಾಸರು ಹಟ್ಟಿವಾಸಿಗಳಾಗಿದ್ದು, ಅವರು ತಮ್ಮ ಹಟ್ಟಿಗಳಲ್ಲಿ ತಮ್ಮ ಕುಲದೇವತೆಯ ಆರಾಧನೆ ಪ್ರಮುಖವಾಗಿತ್ತು. ಒಂದೊಂದು ಹಟ್ಟಿಯವರೂ ಅವರ ಜನಾಂಗದ ದೇವತೆಗಳ ಹೆಸರಿನಲ್ಲಿ ಆಚರಿಸುವ ಜಾತ್ರೆಗಳೇ ಅವರಿಗೆ ಹಬ್ಬದಂತೆ. ಆದರೆ ಈಗ ಹಟ್ಟಿಯೊಳಗಿನ ಬೇಡನಾಯಕರು ಸಹ ನಾಗರಿಕತೆಯಿಂದಾಗಿ ಎಲ್ಲರೂ ಆಚರಿಸುವ ಹಬ್ಬಗಳನ್ನು ಆಚರಿಸು ತ್ತಾರೆ. ಹಿಂದಿನ ದಿನಗಳಲ್ಲಿ ಅವರು ಹಿರಿಯರ ಹಬ್ಬ, ಗುಗ್ಗರಿಹಬ್ಬ, ಪಂಚಮಿಹಬ್ಬ (ನಾಗಪ್ಪನ ಪೂಜೆ), ಮುಂಗಾರಿನಲ್ಲಿನ ಸುಗ್ಗಿಹಬ್ಬ (ಸುಗ್ಗಿಮಾರಮ್ಮನ ಹಬ್ಬ), ಮನೆದೇವರ ಜಾತ್ರೆ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಿದ್ದರು.

. ಹಿರಿಯರ ಹಬ್ಬ : ಈ ಹಬ್ಬವನ್ನು ಪಿತೃದೇವತಾ ಆರಾಧನೆಯಾಗಿ, ತಮ್ಮ ಹಿರಿಯರ ಸ್ಮರಣಾರ್ಥವಾಗಿ ಆಚರಿಸುತ್ತಿದ್ದರು. ಸಾಮಾನ್ಯವಾಗಿ ಈ ಹಬ್ಬ ಆಶ್ವೀಜ ಮಾಸದಲ್ಲಿ ಬರುವಂಥದ್ದು. ಆ ದಿನದಂದು ಮ್ಯಾಸನಾಯಕರು ತಮ್ಮ ಪೂರ್ವಜರಿಂದ ಬಂದಂತಹ ಆಯುಧಗಳು, ಬಿಲ್ಲು, ಬಾಣ, ಭರ್ಚಿ, ಕಠಾರಿ, ಕತ್ತಿ ಎಲ್ಲವನ್ನು ಇಡುವರು. ಈ ವಸ್ತುಗಳು ತಮ್ಮ ಹಿರಿಯರಿಗೆ ಬೇಟೆಯಾಡುವುದರಲ್ಲಿ ನೆರವಾಗಿವೆ. ಅವರಿಗೆ ಈ ಆಯುಧಗಳು ತುಂಬ ಬೇಕಾದ ವಸ್ತುಗಳಾಗಿದ್ದವು. ಅದರಿಂದ ಹಿರಿಯರ ಹೆಸರಿನಲ್ಲಿ ಅವರ ಆಯುಧಗಳನ್ನೇ ಪೂಜಿಸುತ್ತಾರೆ. ಒಂದು ತುಂಬಿದ ಬಿಂದಿಗೆ ಅಂದರೆ ಹೊಳೆಯಿಂದಲೋ ಕೆರೆಯಿಂದಲೂ ತಂದ ಗಂಗಾಜಲವನ್ನು ತುಂಬಿದ ಬಿಂದಿಗೆಯನ್ನು ಇಟ್ಟಿರುತ್ತಾರೆ. ಇಲ್ಲಿ ಹಿರಿಯರಿಗೆ ಬಟ್ಟೆಗಳನ್ನು ಹಾಕಿ ಅಂದರೆ ಗಂಡಸರಿಗೆ ಪಂಚೆ (ಧೋತಿ), ರುಮಾಲು (ಟವೆಲ್ಲು) ಒಂದು ಅಂಗಿ ಬಟ್ಟೆಯನ್ನು ಹಾಕಿರುತ್ತಾರೆ. ಅಂತೆಯೇ ಹೆಂಗಸರಿಗೆ ಸೀರೆಯನ್ನು ಹಾಕಿಕೊಳ್ಳುತ್ತಾರೆ. ಹೀಗೆ ಹಾಕಿದ ಬಟ್ಟೆಗಳನ್ನು ಮನೆಯ ಯಜಮಾನ ಮತ್ತು ಯಜಮಾನಿಯರು ತೊಟ್ಟುಕೊಳ್ಳುತ್ತಾರೆ.

ಈ ಹಿರಿಯರ ಹಬ್ಬದ ದಿನ ವಿಶೇಷವಾದ ಅಡಿಗೆಯನ್ನು ಮಾಡಿರುತ್ತಾರೆ. ಹೆಚ್ಚಾಗಿ ಮಾಂಸಾಹಾರ ಮಾಡುತ್ತಾರೆ. ಜೊತೆಗೆ ಕೆಲವೊಬ್ಬರು ಸಿಹಿ ಅಡಿಗೆಗಳನ್ನು ಮಾಡಿಸುವುದುಂಟು. ಬಂಧು ಬಳಗವನ್ನೆಲ್ಲ ಕರೆಸಿ ಊಟ ಹಾಕಿಸಿ ವೀಳ್ಯೆಯನ್ನು ಕೊಡುವ ಪದ್ಧತಿ ಇಂದಿಗೂ ಇರುವುದನ್ನು ನೋಡುತ್ತೇವೆ.

. ಗುಗ್ಗರಿ ಹಬ್ಬ : ಮ್ಯಾಸಬೇಡರ ಆಚರಣೆಗಳಲ್ಲಿ ಈ ಗುಗ್ಗರಿ ಹಬ್ಬ ವಿಶೇಷವಾದುದು. ತಮ್ಮ ಹೊಲದಲ್ಲಿ ಬೆಳೆದ ಹುಳ್ಳಿ, ತೊಗರಿ, ಹಲಸಂದೆ, ಹೆಸರುಕಾಳು, ಮಡಕೆ ಮುಂತಾದ ಗುಗ್ಗರಿ ಬೇಯಿಸಲು ಬರುವಂತಹ ದ್ವಿದಳ ಧಾನ್ಯಗಳನ್ನು ಬೆಳೆದರೂ, ಗುಗ್ಗರಿಹಬ್ಬ ಮಾಡುವ ವರೆಗೂ ಒಂದು ಕಾಳನ್ನು ಬಳಸುವಂತಿಲ್ಲ ಬೇಯಿಸುವಂತಿಲ್ಲ.

ಗುಗ್ಗರಿಹಬ್ಬದ ದಿನ ಎಲ್ಲರೂ ತಾವು ಬೆಳೆದ ಈ ಧಾನ್ಯಗಳನ್ನು ತಂದು ದೇವಸ್ಥಾನದಲ್ಲಿ ಸುರಿಯುತ್ತಾರೆ. ಬೇಯಿಸಿದ ನಂತರ ದೇವರುಗಳಿಗೆ ಎಡೆ ಹಾಕುತ್ತಾರೆ. ನಂತರ ಪ್ರಸಾದವೆಂದು ತಿನ್ನುತ್ತಾರೆ. ನಂತರ ಮುಂದಿನ ಗುಗ್ಗರಿ ಹಬ್ಬದವರೆಗೂ ಬಳಸುತ್ತಾರೆ.

ಈ ಹಬ್ಬವನ್ನು ಸಾಮಾನ್ಯವಾಗಿ ಎಲ್ಲಾ ಭಾಗದ ಮ್ಯಾಸನಾಯಕರು ಆಚರಿಸುತ್ತಾರೆ. ಆದರೆ ಅಲ್ಪಸ್ವಲ್ಪ ವ್ಯತ್ಯಾಸ ಆಚರಣೆಯಲ್ಲುಂಟು. ಕೆಲವು ಕಡೆ ಗುಗ್ಗರಿಹಬ್ಬ ಮಾಡಿ ಅಂದು ಹುರುಳಿ ಗುಗ್ಗರಿ ಹಾಕಿ, ಹುರುಳಿ ಹೂರಣ ಮಾಡಿ ಓಣಿಯೊಳಗಿನ ಜನರನ್ನು ತಮ್ಮ ಬಂಧುಬಳಗವನ್ನು ಕರೆದು ಗುಗ್ಗರಿ ಹಂಚಿ, ಊಟ ಮಾಡಿಸುತ್ತಾರೆ. ಹೀಗೆ ಊಟಕ್ಕೆ ಬಂದವರು ಅವರ ಮನೆದೇವರಿಗೆ ನಮಸ್ಕರಿಸಿ, ಲೋಬಾನ ಹಾಕಿಯೋ ಅಥವಾ ಅಕ್ಷತೆಯನ್ನು ಹಾಕಿಯೋ ಹೋಗುವುದುಂಟು. ಇದೊಂದು ಇವರ ವೈಶಿಷ್ಟ್ಯವಾಗಿದೆ.

. ಪಂಚಮಿಹಬ್ಬ ಅಥವಾ ನಾಗರಪೂಜೆ : ಈ ಹಬ್ಬವನ್ನು ಎಲ್ಲಾ ಜಾತಿ ಸಮುದಾಯದವರು ಆಚರಿಸುತ್ತಾರೆ. ಆದರೆ ಮ್ಯಾಸನಾಯಕರಿಗೆ ಇದು ಅತ್ಯಂತ ಸಂಭ್ರಮದ ಹಬ್ಬ. ಏಕೆಂದರೆ ಇವರಿಗೆ ಇದು ಪೂರ್ವಜರು ಆಚರಿಸಿಕೊಂಡು ಬಂದಂತಹ ಹಬ್ಬ. ಒಂದು ಕಾಲಕ್ಕೆ ನಾಗಾರಾಧನೆಯನ್ನು ವಿಶೇಷವಾಗಿ ಆಚರಿಸಿದ್ದು ಬೇಡ ಬುಡಕಟ್ಟಿನ ವೈಶಿಷ್ಟ್ಯವಾಗಿದೆ. ಅರಣ್ಯವಾಸಿಗಳಾಗಿದ್ದಾಗಲೇ ಇದು ಆಚರಣೆಗೆ ಬಂದಿರಬೇಕು.

ಇದು ಶ್ರಾವಣಮಾಸದಲ್ಲಿ ಆಚರಿಸುವಂತಹ ಹಬ್ಬವಾಗಿದೆ. ಪಂಚಮಿ ತಿಥಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ನಾಗರಪಂಚಮಿ ಹಬ್ಬವೆಂದು ಹೆಸರಾದ ಈ ದಿನದಂದು ಸ್ತ್ರೀಯರು ಬೆಳಗಿನ ಜಾವದಲ್ಲಿ ನಾಗಪೂಜೆಯನ್ನು ಮಾಡುತ್ತಾರೆ. ಊರ ಮುಂದಿನ ನಾಗಶಿಲ್ಪಗಳಿಗೋ ಅಥವಾ ತಮ್ಮ ಹೊಲಗಳಲ್ಲಿನ ಹುತ್ತಗಳಿಗೂ ಅಥವಾ ದೇವಸ್ಥಾನದಲ್ಲಿನ ನಾಗಶಿಲ್ಪಗಳಿಗೂ ಹಾಲು ಎರೆದು, ನೂಲುಸುತ್ತಿ, ದೀಪ ಹಚ್ಚಿ, ವಡೆ ಗಾರಿಗೆಯ ಎಡೆಯನ್ನು ಇಟ್ಟು ನಾಗಾರಾಧನೆಯನ್ನು ಮಾಡುತ್ತಾರೆ. ಈ ಆಚರಣೆಯನ್ನು ಬಹಳ ಭಕ್ತಿಯಿಂದ ಮಡಿಯಿಂದ ಆಚರಿಸುವುದುಂಟು. ಎರಡನೇ ದಿವಸ ಹೋಳಿಗೆ ಅಥವಾ ಕರಿಗಡುಬು ಮಾಡುತ್ತಾರೆ. ಮೂರನೇ ದಿವಸ ತಂಬಿಟ್ಟು, ನಾಲ್ಕನೇ ದಿವಸ ಬೇಟೆ, ಮಾಂಸಾಹಾರದ ದಿನವಾಗಿರುತ್ತದೆ. ಹೀಗೆ ಇಡೀ ವಾರಾಂತ್ಯವೂ ಈ ಹಬ್ಬ ಜರುಗುತ್ತಿರುವುದನ್ನು ಇಂದಿಗೂ ನೋಡಬಹುದು.

. ಮುಂಗಾರಿ ಹಬ್ಬ (ಕಾರಹುಣ್ಣಿಮೆ) :  ಇದು ಎತ್ತುಗಳಿಗೆ ಸೀಮಿತವಾದ ಹಬ್ಬ. ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿಯೂ ದನಕರುಗಳನ್ನು ಅಲಂಕರಿಸಿ ಪೂಜಿಸುವ, ಕಿಚ್ಚು ಹಾಯಿಸುವ ಹಬ್ಬ. ಬೇರೆ ಬೇರೆ ಹೆಸರುಗಳಲ್ಲಿ ಪ್ರಚಲಿತವಿದೆ. ಉತ್ತರ ಕರ್ನಾಟಕದ ಕಡೆ ಇದನ್ನು ಕಾರಹುಣ್ಣಿಮೆ ಹಬ್ಬ ಎಂತಲೂ ಕರೆಯುತ್ತಾರೆ. ಈ ಹಬ್ಬದ ದಿನ ಎತ್ತುಗಳನ್ನು ಮೈತೊಳೆದು ಅವುಗಳ ಕೋಡುಗಳಿಗೆ ಹಬ್ಬ ಎಂತಲೂ ಕರೆಯುತ್ತಾರೆ. ಈ ಹಬ್ಬದ ದಿನ ಎತ್ತುಗಳನ್ನು ಮೈತೊಳೆದು ಅವುಗಳ ಕೋಡುಗಳಿಗೆ ಬಣ್ಣ ಬಳಿದು ಅಲಂಕರಿಸುತ್ತಾರೆ. ಕೊಂಬುಗಳಿಗೆ ಮತ್ತು ಮೈಗೆ ಕೆಂಪು ಬಣ್ಣವನ್ನು ಬಳಿದು, ವಿಭೂತಿ, ಕುಂಕುಮ, ಹೂವಿಟ್ಟು ಪೂಜಿಸುತ್ತಾರೆ. ಪೂಜೆಯಾದ ಮೇಲೆ ಎತ್ತುಗಳಿಗೆಂದೇ ಮೀಸಲಾಗಿ ಹೊನ್ನುಗ್ಗಿ ಅಂದರೆ ಜೋಳದ ಹುಗ್ಗಿ ಮಾಡಿರುತ್ತಾರೆ. ಗುಗ್ಗರಿ ಹಾಕಿರುತ್ತಾರೆ. ಈ ಹೊನ್ನುಗ್ಗಿಯನ್ನು ಎತ್ತುಗಳಿಗೆ ತಿನ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಗಾದೆ ಮಾತು ಸಹ ಇದೆ. “ಹೂಡಿ ಬಂದ ಎತ್ತಿಗೆ ಹೊನ್ನುಗ್ಗಿ, ಆಡಿ ಬಂದ ಎತ್ತಿಗೆ ಹೋಳಿಗಿ ಹುಗ್ಗಿ” ಎಂದು ಹೇಳುತ್ತಾರೆ.

ಈ ಹಬ್ಬದ ಮೊದಲನೇ ದಿನ ಎತ್ತು ಹಾಗೂ ದನಕರುಗಳನ್ನು ಪೂಜಿಸುತ್ತಾರೆ. ಅದೇ ದಿನ ಹೊನ್ನುಗ್ಗಿ ನೀಡುತ್ತಾರೆ. ಆದರೆ ಎರಡನೇ ದಿನ ‘ಕರಿ ಹರಿಯುವುದು’ ಎನ್ನುವ ಒಂದು ವಿಶೇಷ ಕಾರ್ಯಕ್ರಮ ಇರುತ್ತದೆ. ಅಂದರೆ ಎತ್ತುಗಳನ್ನು, ಹೋರಿಗಳನ್ನು ಓಟದಲ್ಲಿ ಜೂಜು ಬಿಡುವುದು. ಊರಿನ ಮುಂದೆ ಒಂದು ಪ್ರಮುಖ ಸ್ಥಳದಲ್ಲಿ ಅಂದರೆ ಊರನ್ನು ಪ್ರವೇಶಿಸುವಂತಹ ಜಾಗದಲ್ಲಿ ಅಡ್ಡವಾಗಿ ಒಂದು ಬೆಳ್ಳಿಯಿಂದ ತಯಾರಿಸಿದ ಉದ್ದನೆಯ ಎಣಿಕೆಯನ್ನು ಕಟ್ಟಿರುತ್ತಾರೆ. ದೂರದಿಂದ ಓಡಿ ಬಂದ ಎತ್ತುಗಳು ಅದನ್ನು ದಾಟಬೇಕು. ಯಾವುದು ಮೊದಲು ದಾಟುವುದೋ ಅದಕ್ಕೆ ಮೊದಲ ಸ್ಥಾನ. ಅದನ್ನು ಮೆರವಣಿಗೆ ಮಾಡುತ್ತಾರೆ. ಇದು ಮುಂಗಾರಿ ಹಬ್ಬದ ವಿಶಿಷ್ಟವಾಗಿದೆ.

. ಮನೆದೇವರ ಜಾತ್ರೆ : ಮ್ಯಾಸಬೇಡರ ಪ್ರಮುಖ ಹಬ್ಬಗಳಲ್ಲಿ ಈ ಮನೆದೇವರ ಜಾತ್ರೆಯು ಒಂದು. ಇವರ ಒಳಪಂಗಡಗಳಿಗನುಸಾರವಾಗಿ, ಬೆಡಗುಗಳಿಗನುಸಾರವಾಗಿ ಒಬ್ಬೊಬ್ಬ ದೇವರನ್ನು ಮನೆದೇವರನ್ನಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಆಯಾಯ ದೇವರ ಜಾತ್ರೆ ಗಳಂದು ಅವರು ಸಂಭ್ರಮದಿಂದ ಮನೆದೇವರ ಜಾತ್ರೆಯನ್ನು ಆಚರಿಸುತ್ತಾರೆ.

ಈ ಬೇಡ ಬುಡಕಟ್ಟಿನ ದೇವರುಗಳ ಮೂಲಸ್ಥಾನ ಚಿತ್ರದುರ್ಗ ಜಿಲ್ಲೆಯ ಕಂಪಳದೇವ ಹಟ್ಟಿ, ಚಳ್ಳಕೆರೆ, ಜಗಳೂರು ಮುಂತಾದ ಸ್ಥಳಗಳು ಮಾತ್ರ. ಇವರು ಪೂಜಿಸುವ ಪ್ರಮುಖ ದೈವಗಳು ಕಾಟಂಲಿಂಗ, ಚಿತ್ರಲಿಂಗ, ಗಂಗಿಮಾಳವ್ವ, ಬೋರೆದೇವರು, ಬೋಸೇದೇವರು, ಗಾದ್ರಿಪಾಲನಾಯಕ, ಜಗಳೂರು ಪಾಪನಾಯಕ, ಮಾರಮ್ಮ, ಬಂಗಾರದೇವರು, ಬೊಮ್ಮ ಲಿಂಗ, ಓಬಳನರಸಿಂಹಸ್ವಾಮಿ ಮುಂತಾದವು.

ಮನೆದೇವರ ಜಾತ್ರೆಯಂದು ಅವರವರ ಯೋಗ್ಯತಾನುಸಾರ ಹಬ್ಬ ಮಾಡಿ, ತಮ್ಮ ಬಂಧು ಬಾಂಧವರನ್ನು ಕರೆದು ಉಣಬಡಿಸುತ್ತಾರೆ. ಇದು ಗೌರವ, ಸ್ವಾಭಿಮಾನದ ಪ್ರಶ್ನೆಯೂ ಆಗಿರುತ್ತದೆ. ಇದನ್ನು ನಾವು ಇಂದೂ ಸಹ ಈ ಜನಾಂಗದಲ್ಲಿ ನೋಡಬಹುದಾಗಿದೆ. ಈ ಜಾತ್ರೆಗಳಿಗೆ ಸಕುಟುಂಬ ಸಮೇತರಾಗಿ ಬಂಡಿಯನ್ನು ಕಟ್ಟಿಕೊಂಡು ಹೋಗುತ್ತಾರೆ.

ಮ್ಯಾಸಬೇಡರ ಹನ್ನೆರಡು ಪೆಟ್ಟಿಗೆ ದೇವತೆಗಳು ಮತ್ತು ಸ್ಥಳಗಳು

೧. ಮಾಕನಡುಕು ಓಬಳದೇವರು, ಮಾಕನಡುಕು, ಕೂಡ್ಲಿಗಿ ತಾ., ಬಳ್ಳಾರಿ ಜಿ.

೨. ಗೆದ್ದಲಗಟ್ಟೆ ಓಬಳದೇವರು, ಗೆದ್ದಲಗಟ್ಟೆ, ಕೂಡ್ಲಿಗಿ ತಾ., ಬಳ್ಳಾರಿ ಜಿ.

೩. ನಲ್ಲಿಜರುವು ಓಬಳದೇವರು, ರುದ್ರಮ್ಮನಹಳ್ಳಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೪. ಗಾದ್ರಿಪಾಲನಾಯಕ ದೇವರು, ಬೊಮ್ಮಗೊಂಡನಕೆರೆ, ಮೊಳಕಾಲ್ಮೂರು ತಾ., ಚಿತ್ರದುರ್ಗ ಜಿ.

೫. ಸೂರಲಿಂಗೇಶ್ವರ ದೇವರು, ಕಾಮಗೇತನಹಳ್ಳಿ, ಜಗಳೂರು ತಾ., ಚಿತ್ರದುರ್ಗ ಜಿ.

೬. ರಾಜಲದೇವರು, ಮಲ್ಲೂರಹಳ್ಳಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೭. ಬೋರೆದೇವರು, ಬೋರೆದೇವರಹಟ್ಟಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೮. ಬೋಸೇದೇವರು, ಬೋಸೇದೇವರಹಟ್ಟಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೯. ಚಿಂತಲಗುಟ್ಟ ಬೋರಸ್ವಾಮಿ, ಚಿಂತಲಗುಟ್ಟ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೧೦. ಬಂಜಗೆರೆ ಓಬಳದೇವರು, ಥಳಕು, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

೧೧. ಕುರಹಟ್ಟಿ ಬೊಮ್ಮದೇವರು, ಕುರಿಹಟ್ಟಿ, ಕೂಡ್ಲಿಗಿ ತಾ., ಬಳ್ಳಾರಿ ಜಿ.

೧೨. ದಡ್ಡಿಸೂರನಾಯಕ, ಹಿರೇಹಳ್ಳಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ.

ಈ ಮೇಲಿನ ಹನ್ನೆರಡು ದೇವತೆಗಳು ಮ್ಯಾಸನಾಯಕರ ಮನೆದೇವರುಗಳಾಗಿವೆ. ಆಯಾಯ ಒಳಪಂಗಡದವರು, ಒಬ್ಬೊಬ್ಬ ದೇವತೆಯನ್ನು ಆರಾಧಿಸುತ್ತಾರೆ. ಜಾತ್ರಾ ಸಮಯದಲ್ಲಿ ಭಾಗವಹಿಸುತ್ತಾರೆ. ಇದು ಇವರ ವೈಶಿಷ್ಟ್ಯವಾಗಿದೆ.

ಮ್ಯಾಸಬೇಡರ ಕಲೆಗಳು

ಮ್ಯಾಸಬೇಡ ಬುಡಕಟ್ಟಿನ ಸ್ತ್ರೀ-ಪುರುಷರೂ ಕಲಾವಂತಿಕೆ ಉಳ್ಳವರಾಗಿದ್ದರು. ಹಾಡು, ಕತೆಗಳನ್ನು ಕಟ್ಟುತ್ತಿದ್ದರು. ಬೇರೆ ಬೇರೆ ಆಚರಣೆ ಸಂದರ್ಭದಲ್ಲಿ ವಿಶೇಷವಾದಂತಹ ಕಲೆಗಳನ್ನು ಪ್ರದರ್ಶಿಸುತ್ತಿರುವುದನ್ನು ಇಂದಿಗೂ ಸಹ ಕಾಣುತ್ತೇವೆ. ದೇವರ ಮೇಲಿನ ತ್ರಿಪದಿ ಹಾಡುಗಳನ್ನು ಹೆಂಗಸರು ಇಂದೂ ಹಾಡುತ್ತಾರೆ. ಸ್ತುತಿ ಗೀತೆಗಳನ್ನು ಹಾಡುತ್ತಾರೆ. ಮಳೆ ಬಾರದೇ ಇದ್ದಾಗ ಮಳೆರಾಯನ ಮೇಲೆ ಪದಕಟ್ಟಿ ಹಾಡುತ್ತಾರೆ. ಸೋಬಾನೆ ಪದಗಳು, ಮದುವೆ ಸಂದರ್ಭದ ಹಾಡುಗಳು ಇವರಲ್ಲಿನ ಕಲೆಯನ್ನು ಸೂಚಿಸುತ್ತವೆ.

ಜಾನಪದ ಕಲೆಗಳೆಂದು ಗುರುತಿಸಲಾದ ಕೋಲಾಟ, ಜಾತ್ರೆ ಸಂದರ್ಭದಲ್ಲಿ ಅಂದರೆ ಉದಾ. ಮಾರಿ ಜಾತ್ರೆ, ದುರ್ಗಿ ಜಾತ್ರೆ ಮುಂತಾದ ಜಾತ್ರೆಗಳಲ್ಲಿ ‘ಗಾವು’ ಜಿಗಿಯುವುದು, ಇದನ್ನು ಪೋತರಾಜರು ಮಾಡುತ್ತಾರೆ. ವರ್ಣಾಲಂಕೃತವಾಗಿ ಕೇಕೆ ಹಾಕಿಕೊಂಡು ಅದರಿಂದ ತಮ್ಮ ಮೈಯನ್ನು ಒಡೆದುಕೊಳ್ಳುತ್ತಾ ಕುಣಿಯುತ್ತಾ ಗಾವು ಜಿಗಿಯುತ್ತಾರೆ. ಇದೊಂದು ವಿಶೇಷವಾದ ರೌದ್ರಮಯ ಕಲೆಯಾಗಿರುತ್ತದೆ.

ಮ್ಯಾಸಬೇಡರ ಉಪಜೀವನ ವೃತ್ತಿಗಳು

ಮ್ಯಾಸಬೇಡರು ಅವಲಂಬಿಸಿರುವ ಉಪಜೀವನ ವೃತ್ತಿಗಳೆಂದರೆ ಕೃಷಿ, ಕೃಷಿ ಕೂಲಿ, ಕುರಿಸಾಕಾಣಿಕೆ, ಮೇಕೆ ಸಾಕಾಣಿಕೆ, ಹಸುಗಳ ಸಾಕಾಣಿಕೆಗಳು ಪ್ರಮುಖವಾದುವು. ಇವುಗಳ ಜೊತೆ ಬೇಟೆಯಾಡುವುದು ಇವರ ಹವ್ಯಾಸದ ವೃತ್ತಿಯಾಗಿದೆ. ಈಗ ಹೆಚ್ಚಾಗಿ ಕೃಷಿಯನ್ನ ವಲಂಬಿಸಿ ಜೀವನ ಸಾಗಿಸುತ್ತಾರೆ. ಕೃಷಿಯ ಜೊತೆಗೇನೇ ಕುರಿ ಸಾಕುವುದು, ದನ ಸಾಕುವುದು ಇತ್ಯಾದಿ ಉಪವೃತ್ತಿಗಳನ್ನು ಅವಲಂಬಿಸಿದ್ದಾರೆ. ಅಲೆಮಾರಿಯಾದ ಕಾಲದಿಂದ ಇಂದಿಗೂ ಈ ವೃತ್ತಿಗಳು ಉಳಿದುಕೊಂಡು ಬಂದಿವೆ. ಅಂದು ಹುಲ್ಲು ನೀರು ಹುಡುಕುತ್ತಾ ಸ್ಥಳದಿಂದ ಸ್ಥಳಕ್ಕೆ, ಕಾಡಿನಿಂದ ಕಾಡಿಗೆ ಹೋಗುತ್ತಿದ್ದ ಜನರು ಇವರು. ಆದರೆ ನಾಗರಿಕತೆಗೆ ಹೊಂದಿ ಕೊಂಡು ಇಂದು ಜೀವನ ಸಾಗಿಸುತ್ತಿದ್ದಾರೆ. ಆದರೂ ತಮ್ಮ ಕುಲಕಸುಬುಗಳನ್ನು ಸಂಪೂರ್ಣ ತ್ಯಾಗ ಮಾಡಿಲ್ಲ.

ಈಗ ಶೈಕ್ಷಣಿಕವಾಗಿ ಬಹಳ ಮುಂದುವರಿದಿದ್ದರೂ, ಇನ್ನೂ ಕೆಲವು ಕಡೆ ಮಾತ್ರ ಈ ಸಂಸ್ಕೃತಿ ಉಳಿದಿರುವುದನ್ನು ಕಾಣುತ್ತೇವೆ. ಮಧ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ಹಟ್ಟಿ ಗಳಿರುವ ಕಡೆಯಲ್ಲಿ ಇನ್ನೂ ಸಂಸ್ಕೃತಿ ಉಳಿದಿದೆ. ಸಂಪ್ರದಾಯ, ಆಚರಣೆಗಳಿವೆ. ಆದರೆ ಬಹುತೇಕ ಜನರು ಇಂದು ಆಧುನಿಕತೆಗೆ ಬದಲಾಗಿರುವುದನ್ನು ನೋಡುತ್ತೇವೆ. ಉಪಜೀವನಕ್ಕೆ ಬೇರೆ ಬೇರೆ ವೃತ್ತಿಗಳನ್ನು ಕೈಗೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಪಶುಪಾಲನೆ ಮಾತ್ರ ಬಿಟ್ಟಿಲ್ಲ. ಹಸು, ಕುರಿ, ಮೇಕೆಗಳನ್ನು ಇನ್ನೂ ಇವರು ಸಾಕುತ್ತಿರುವುದನ್ನು ಕಾಣುತ್ತೇವೆ.

ಮ್ಯಾಸಬೇಡರ ಮದುವೆ ಪದ್ಧತಿ

ಬೇಡನಾಯಕ ಬುಡಕಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಪಡೆದವರು ಗಂಡನ್ನು ಹುಡುಕಿಕೊಂಡು ಹೋಗುವಂತಿಲ್ಲ. ಗಂಡಿನ ಕಡೆಯವರೇ ಹೆಣ್ಣುಗಳಿರುವ ಮನೆಯನ್ನು ಹುಡುಕಿಕೊಂಡು ಹೋಗುವುದು ಹೆಚ್ಚು. ಹಾಗೆ ಗಂಡಿನವರು ಒಸಗೆ ತೆಗೆದುಕೊಂಡು ಹೆಣ್ಣಿನ ಮನೆಗೆ ಹೋಗುವ ಪದ್ಧತಿಯನ್ನು ಈಗಲೂ ಕಾಣಬಹುದು. ಒಸಗೆ ಎಂದರೆ ಎಲೆ, ಅಡಿಕೆ, ಐದು ಚಿಪ್ಪು ಬಾಳೆಹಣ್ಣು, ಐದು ಉತ್ತತ್ತಿ, ಐದು ಕೊಬ್ಬರಿ, ಅರಿಶಿಣ ಕೊಂಬು, ಜತೆಗೆ ಉಡಿ ಸಾಮಾನು ಎಂದು ಎರಡು ಕಾಯಿ ಮತ್ತು ಅಕ್ಕಿ ಇವುಗಳ ಜೊತೆಗೆ ಹೆಣ್ಣು ಹುಡುಕಿದ್ದು, ತೀರ್ಮಾನ ಮಾಡಿಕೊಂಡು ಬರಲು ಹೋಗುವಾಗ ಒಂದು ದೊಡ್ಡ ಪುಟ್ಟಿಯ ತುಂಬ ನಾಲ್ಕು ಐದು ಸೇರು ಹಸಿ ಅಕ್ಕಿ ಹಿಟ್ಟಿನ ಒಂದೇ ಉಂಡೆ, ಐದು ಸೇರು ಕಾಳು ಬೀಸಿ ಮಾಡಿದ ಐವತ್ತು ಸಜ್ಜೆ ರೊಟ್ಟಿ ಇವಿಷ್ಟು ತೆಗೆದುಕೊಂಡು ಹೋಗಬೇಕು. ಇದನ್ನೆಲ್ಲ ಹೆಣ್ಣಿನವರು ಹೆಣ್ಣು ಒಪ್ಪಂದದ ನಂತರ ತಮ್ಮ ಕುಲಸ್ಥರಿಗೆ ಹಂಚುತ್ತಾರೆ.

ಇಂದಿಗೂ ಬೇಡನಾಯಕ ಸಮೂಹದಲ್ಲಿ ವರದಕ್ಷಿಣೆ ಪದ್ಧತಿ ಇಲ್ಲ. ಬದಲಾಗಿ ಹೆಣ್ಣಿನವರಿಗೇ ಗಂಡಿನವರು ವಧುವಿನ ತೆರವು ಕೊಟ್ಟು ಮಾಡಿಕೊಳ್ಳಬೇಕು. ಬೇಡನಾಯಕರು ವಿವಾಹಪೂರ್ವ ಹೆಣ್ಣಿಗೆ ಹಣದ ರೂಪದಲ್ಲಿ ತೆರ ಸಲ್ಲಿಸುವುದಲ್ಲದೆ ಗಂಡಿನವರು ಎರಡು ಚೀಲ ದವಸವನ್ನು ‘ಸುಖ ಮಂಚಿಕೆ’ ದವಸ ಎಂದು ಕೊಡಬೇಕು. ಅಲ್ಲದೆ ಇವರ ಮದುವೆ ಗಳಲ್ಲಿ ಎಲೆ ಅಡಿಕೆ ಅತಿಯಾಗಿ ಖರ್ಚಾಗುತ್ತದೆ. ನಾಯಕರ ಮದುವೆಗಳಲ್ಲಿ ಖರ್ಚೆಲ್ಲ ಬಹುಮಟ್ಟಿಗೆ ಗಂಡಿನ ಕಡೆಯವರಿಗೆ ಬೀಳುತ್ತದೆ. ಬೇಡನಾಯಕರು ಹೆಣ್ಣಿಗೆ ಕೊಟ್ಟಿರುವ ಅವಕಾಶ, ಸ್ಥಾನಮಾನಗಳೂ ವಿಶೇಷವಾಗಿವೆ. ಹುಟ್ಟಿದ ಮಗು ಸಹಜವಾಗಿ ತಂದೆಯ ಕುಲಕ್ಕೆ ಸೇರುತ್ತದೆ. ಒಂದು ವೇಳೆ ಮಕ್ಕಳಿರುವ ಹೆಂಗಸಿಗೆ ಗಂಡ ತೀರಿಕೊಂಡರೆ ತಂದೆಯಿಂದ ಆಕೆಗೆ ಬರಬೇಕಾದ ಆಸ್ತಿಯ ಭಾಗವು ವಿಧವೆಯಾದವಳಿಗೆ ಬರುತ್ತದೆ. ಆದರೆ ಆಕೆ ಅದನ್ನು ಪಡೆದು ತಂದೆಯ ಮನೆಗೆ ಬಂದು ಜೀವಿಸುವಂತಿಲ್ಲ. ಬಹಳಮಟ್ಟಿಗೆ ಅತ್ತೆ ಮಾವಂದಿರ ಮನೆಯಲ್ಲಿಯೇ ಇರಬೇಕಾಗುತ್ತದೆ. ಒಂದು ವೇಳೆ ಮಕ್ಕಳಿಲ್ಲದಿದ್ದರೆ ಆಸ್ತಿಯ ಭಾಗ ಬರುವುದಿಲ್ಲ. ಜೀವನಾಂಶ ಬರುತ್ತದೆ ಅಷ್ಟೆ.

ಬೇಡರಲ್ಲಿ ವಿಧವಾ ವಿವಾಹ ಇತ್ತು ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಇಂದಿಗೂ ಸೀರುಡಿಕೆ ಮನೆತನವು ಅದನ್ನೇ ಸೂಚಿಸುತ್ತದೆ. ಅಂದರೆ ವಿಧವೆಯಾದ ಹೆಂಗಸು ಮತ್ತೆ ಸೀರುಡಿಕೆ ಲಗ್ನ ಆಗಬಹುದು. ಕೆಲವರು ಈ ಸೀರುಡಿಕೆಯವರ ಮನೆಯಲ್ಲಿ ಮದುವೆ ಆಗುವುದಿಲ್ಲ. ಕನ್ಯೆ ತರುವುದಿಲ್ಲ.

ಅಂತರ್ಜಾತಿಯ ವಿವಾಹವಾದರೆ ನಾಯಕ ಸಮಾಜ ಗಂಡು ಹೆಣ್ಣಿಗೆ ಬಹಿಷ್ಕಾರ ಹಾಕುವುದುಂಟು. ಒಂದು ವೇಳೆ ಈ ಮಾದರಿಯ ವಿವಾಹ ಆದವನು ಮತ್ತೆ  ಈ ಜಾತಿ ಯೊಳಗೆ ಬರಬೇಕಾದರೆ ಕಟ್ಟಿಕೊಂಡ ಅನ್ಯಜಾತಿಯ ಹೆಂಡತಿಯನ್ನು ಬಿಟ್ಟುಬಿಡಬೇಕಾ ಗುತ್ತದೆ. ಇದು ಸಂಪ್ರದಾಯಸ್ಥರಲ್ಲಿ ಮಾತ್ರ. ಆದರೆ ಇಂದು ಆಧುನಿಕ ಯುಗದಲ್ಲಿ ಅನೇಕ ಅಂತರ್ಜಾತಿಯ ವಿವಾಹಗಳನ್ನು ನೋಡುತ್ತೇವೆ.

ಮ್ಯಾಸಬೇಡರಾಗಿರಲಿ, ಊರುನಾಯಕರಾಗಿರಲಿ ಮದುವೆ ಸಂದರ್ಭದಲ್ಲಿ ಚಪ್ಪರ ಹಾಕುವರು. ಅಲ್ಲದೆ ಇವರು ಮದುವಣಗಿತ್ತಿಯ ಪಕ್ಕದಲ್ಲಿ ಚಿಕ್ಕಮ್ಮನನ್ನು ಕೂರಿಸುವ ಸಂಪ್ರದಾಯವಿದೆ. ಊರನಾಯಕರು ಮದುವೆಯ ತರುವಾಯದಲ್ಲಿ ಕೋಳಿ ಮಾಂಸ, ಮಧ್ಯ ಸೇವನೆ ಮಾಡಬಹುದು. ಆದರೆ ಮ್ಯಾಸಬೇಡನಾಯಕರಿಗೆ ಇದು ನಿಷೇಧವಿರುವು ದರಿಂದ ಈ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ರೀತಿಯಲ್ಲಿ ಮದುವೆ ಸಂಭ್ರಮವನ್ನು ಕಾಣುತ್ತೇವೆ.

ಈ ಸಮುದಾಯದಲ್ಲಿ ಅನೇಕ ಬೆಡಗುಗಳುಂಟು. ತಮ್ಮ ಬೆಡಗನ್ನು ಹೊರತುಪಡಿಸಿ ಇತರೆ ಬೆಡಗುಗಳಲ್ಲಿ ಕನ್ನೆಯನ್ನು ತಂದು ಮದುವೆಯಾಗಬಹುದು. ಇಂದು ಮ್ಯಾಸನಾಯಕರು ಮತ್ತು ಊರನಾಯಕರಲ್ಲಿ ಸಂಬಂಧಗಳು ನಡೆದಿರುವ ಅನೇಕ ಉದಾಹರಣೆಗಳಿವೆ. ಇಂದು ಈ ಎರಡೂ ಪಂಗಡಗಳೂ ಒಂದಾಗುವ ಲಕ್ಷಣಗಳು ಕಂಡುಬರುತ್ತಿವೆ.

ಬೇಡರ ಉಪಪಂಗಡಗಳು

ಬೇಡರಲ್ಲಿ ಹಲವು ಉಪಪಂಗಡಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು. ೧. ಊರನಾಯಕರು (ಚಿನ್ನಬೋಯಿ), ೨. ಮ್ಯಾಸಬೇಡರು (ಪೆದ್ದಬೋಯಿ), ೩. ಗುಡ್ಲಬೇಡ (ಗುಡಿಸಲು ಬೇಡ), ೪. ಮತ್ಯಮ್ಮ ಅಥವಾ ಉರಸಿಬೇಡ ಮತ್ತು ಸಾದರಬೇಡ, ೫. ಹಾಲುಬೇಡ ಮತ್ತು ೬. ಮೊಂಡಬೇಡ ಎಂಬ ಪ್ರಮುಖ ಉಪಪಂಗಡಗಳನ್ನು ಕಾಣಬಹುದು (ಅನಂತಕೃಷ್ಣ ಎಲ್.ಕೆ., ೧೯೮೮, ಪು. ೨೦೫).

ಒಂದೇ ಕುಲಕ್ಕೆ ಅಥವಾ ಪಂಗಡಕ್ಕೆ ಸೇರಿದ್ದರೋ ಈ ಉಪಪಂಗಡಗಳ ನಡುವೆ ವೈವಾಹಿಕ ಸಂಬಂಧಕ್ಕೆ ಅವಕಾಶವಿಲ್ಲ. ಅಲ್ಲದೆ ಉಪಪಂಗಡಗಳಲ್ಲೇ ಅನೇಕ ಬೆಡಗುಗಳಿವೆ. ಸ್ವಬೆಡಗಿನಲ್ಲಿ ವೈವಾಹಿಕ ಸಂಬಂಧವಿಲ್ಲ. ಒಂದೇ ಬೆಡಗಿನವರು ಅಣ್ಣತಮ್ಮಂದಿರಾಗುವರು. ಮ್ಯಾಸಬೇಡರಲ್ಲಿ ಮಂದಲರು ಮತ್ತು ಮಲ್ಲಿನಾಯಕರು ಎಂದು ಎರಡು ಪ್ರಮುಖ ವಿಭಾಗಗಳಿವೆ. ಇವು ತಮ್ಮನ್ನು ಚಂದ್ರವಂಶ ಮತ್ತು ಸೂರ್ಯವಂಶಗಳಿಗೆ ಸೇರಿದವರು ಎಂದು ಕರೆದುಕೊಳ್ಳುತ್ತಾರೆ. ಇವೆರಡೂ ಗುಂಪುಗಳಲ್ಲಿಯೂ ಸಂಬಂಧ ಬೆಳಿಸಿಕೊಂಡ ಬೆಡಗುಗಳೂ ಇವೆ.

ಬೆಡಗುಗಳು

೧. ನೆಲ್ಲಬಾಮುಡ್ಲು

೨. ಮಳೇಲೂರು

೩. ಎನುಮುಲರು

೪. ಬೋಸುರ್ಲು

೫. ದೊಣಮಂಡ್ಲು

೬. ಮುನ್ನುಲು

೭. ಗಟ್ಟಮತ್ತೆ

೮. ಕುಂಟ್ರೀಲು

೯. ಸೂರ್ಯಕಾಮ

೧೦. ಕಾಮಗೇತ್ಲರು

೧೧. ಮಂದ್ಲಾರು

೧೨. ಎತ್ತಿನವರು

೧೩. ದಡ್ಡಿದಾಸರಿ

೧೪. ಪಾಲಜ್ಜಿಯವರು

೧೫. ಓಬಲಿನಾಯಕರು

೧೬. ಗಾಡವುಲು

೧೭. ಪೂಲಾರು (ಪುವ್ವಲರು)

೧೮. ಕೋಸಲವರು

೧೯. ಕುರುಬರು

೨೦. ಗುಜ್ಜುಡ್ಲು

೨೧. ಪಟ್ಟಪಲ್ಲಾರು

೨೨. ಭಾನೂರು

೨೩. ಉರೆಬಲಾದ್ಯ

೨೪. ಬೋನಹಳ್ಳಿ ಮೂರು

೨೫. ಚಿನ್ನನಾಯ್ಕ

೨೬. ಬಂಟುಗ್ಲು

೨೭. ಪಾಮಿಡಲು

೨೮. ಬಡಸಲೋರು

೨೯. ಮುಮ್ಮುಡ್ಲು

೩೦. ರಾಯಬೋರು

೩೧. ಒಕ್ಲಾರು

೩೨. ಅಜ್ಜಡ್ಲು

೩೩. ಕುಂಡ್ರುಲು

ಸೂರ್ಯವಂಶ ಮತ್ತು ಚಂದ್ರವಂಶ ಬೆಡಗುಗಳು

ಅ. ಮಲ್ಲಿನಾಯಕರ ಉಪಬೆಡಗುಗಳು ಆ. ಮಂದಲಾರ ಉಪಬೆಡಗುಗಳು
೧. ಈಶ್ವರನೋರು ೧. ಕಾಮಗೇತಿ
೨. ಎನುಮಲೋರು ೨. ಗಾದ್ರಿಪಾಲೋರು
೩. ಓಬನಾಯಕನೋರು ೩. ಬುಲ್ಲುಡ್ಲು
೪. ಕಾಟಮಲ್ಲನಾಯಕರನೋರು ೪. ಮ್ಯಾಸಲೋರು
೫. ಚೆನ್ನಕೌದನೋರು ೫. ಸಾಕಲರು
೬. ಪೆದ್ದನಾಯಕನೋರು ಆ. ಬುಡಗ್ಲೋರಲ್ಲಿನ ಉಪಪಂಗಡಗಳು
೭. ಪೇಯಲೋರು ೧. ಕುರಿಹಟ್ಟಿ ಬುಡಗ್ಲು
೮. ಬಂಗಾರುನೋರು ೨. ನಲ್ಲದೇವರಬುಡುಗ್ಲು
೯. ಮೇಸಲೋರು ೩. ಬೊಮ್ಮದೇವರು ಬುಡುಗ್ಲು
೧೦. ವಡೇಲೂರು ೪. ಮಾರವ್ವನ ಬುಟುಗ್ಲು
ಆ. ಯರಮಂಚನಾಯಕರ ಉಪಬೆಡಗುಗಳು ೫. ಸಂಗವರ ಬುಟುಗ್ಲು
೧. ಅಚ್ಚಪಲೋರು ೬. ಸಿದ್ಧಪಲ್ಲಿ ಬುಟುಗ್ಲು
೨. ಕರಿನೋರು ಇ. ಮಂಡ್ಲೋರು ಉಪಪಂಗಡಗಳು
೩. ನಲಗೇತಿ ೧. ಜರಕಡ್ಲು ಪಾಮುಡ್ಲು
೪. ಯರಗೋತಿ ೨. ನಲ್ಲಿಪಾಮುಡ್ಲು
೫. ಯರಗಾಟ್ಲವರು ೩. ಪೂಜಾರಹಳ್ಳಿ ಪಾಮುಡ್ಲು
೬. ಎಡೇಲರು ೪. ಯಕಪಾಮುಡ್ಲು
ಇತರೆ ಬೆಡಗುಗಳು  
೧. ಅಜ್ಜಡ್ಲೋರು  
೨. ಅಲಕೇರು  
೩. ಕರಿನೋರು  

 

ದಾಸರಲ್ಲಿ ಕೆಲವು ಉಪಪಂಗಡಗಳಿವೆ.

೧. ಗುಗ್ರಿ ದಾಸರು

೨. ಗೊಡಗು ದಾಸರು

೩. ಬೋಡ ದಾಸರು

೪. ದಡ್ಡಿದಾಸರು

ಬೆಡಗು ದೇವರು
ಮಳೇಲಾರು ಓಬಳದೇವರು (ಅಹೋಬಲ ನರಸಿಂಹಸ್ವಾಮಿ)
ಎನುಮ್ಲಾರು ಗಾದ್ರಿಪಾಲನಾಯಕ
ಬುಟುಗ್ಲಾರು ಮಾರೆಮ್ಮ
ಮಂದ್ಲಾರು ಓಬಳ
ಪೋಲಾರು ಗುಂಡು ಬೋರದೇವರು
ಪೊಟ್ಟಿಪೊಲ್ಲಾರು ಬೋರದೇವರು
ಕಾಮಗೇತಿ ಸೂರಪ್ಪದೇವರು (ಕರಿಶೆಟ್ಟಿ ರುದ್ರಪ್ಪ, ೧೯೯೯, ಪು. ೨೨).

ಮ್ಯಾಸಬೇಡರ ಶವಸಂಸ್ಕಾರ ಪದ್ಧತಿ

ಮ್ಯಾಸಬೇಡರ ಹಟ್ಟಿಗಳಲ್ಲಿ ಯಾರಾದರೂ ತೀರಿಕೊಂಡರೆ ಆತನ ಶವ ಬೀಳುತ್ತಿ ದ್ದಂತೆಯೇ ಅದರ ತಲೆಯನ್ನು ದಕ್ಷಿಣಕ್ಕೆ ಇಟ್ಟು ಉತ್ತರಕ್ಕೆ ಕಾಲು ಇರಿಸಿ ಶಿರದ ಬಳಿ ಒಂದು ದೀವಿಗೆ ಹಚ್ಚಿ ಇಡುವರು. ಅತ್ತ ಗುಡಿಸಿಲ ಮುಂದೆಯೂ ಕಟ್ಟಿಗೆಯಿಟ್ಟು ಬೆಂಕಿ ಹಾಕುವರು. ಅದೇ ಬೆಂಕಿಯ ಮೇಲೆ ಒಂದು ಮೊಗೆ ಇಟ್ಟು ನೀರು ಕುದಿಸಿ, ಅದರೊಳಗೆ ಒಂದಿಷ್ಟು ಅಕ್ಕಿಹಾಕಿ ಅದು ಬೇಯಲು ಬಿಡುವರು. ಇದನ್ನು ಕೂಳು ಕುಚ್ಚುವುದು ಎನ್ನುತ್ತಾರೆ. ಸಾವಿನ ಸುದ್ದಿಯನ್ನು ಕೇಳಿದ ನಂತರ ಅವನ ಬೀಗರು ಹೆಣ್ಣುಮಕ್ಕಳು ಸಾಯುವ ಮೊದಲೇ ಆರೋಗ್ಯ ಸರಿಯಿಲ್ಲವೆಂದು ಸಮಾಚಾರ ಕೇಳಿಬಂದಿದ್ದರೆ ತಮ್ಮ ಕೈಯ ಸೇವೆ ಮಾಡಿಕೊಂಡು ಸ್ವಲ್ಪಕಾಲ ಅವನ ಬಳಿ ಇರುತ್ತಾರೆ.

ಗಂಡಸರು ಕಳ್ಳಿಕಟ್ಟಿಗೆ ಅಥವಾ ಬಿದಿರು ಬೊಂಬುಗಳಿಂದ ಸಿದಿಗೆ ಕಟ್ಟಲು ಆರಂಭಿಸು ವರು. ಸಿದಿಗೆಗೆ ಮೂಲೆ ಮೂಲೆಗೆ ಸೇರಿಸಿ ಹಗ್ಗ ಬಿಗಿದು ಕಟ್ಟುತ್ತಾರೆ. ಅತ್ತ ಮಾದಿಗರು ಹಟ್ಟಿಯಾಚೆ ಹೋಗಿ ಸ್ಮಶಾಸನದಲ್ಲಿ ಏಳು ಹೆಜ್ಜೆ ಭೂಮಿಯನ್ನು ಕಾಲಿನಿಂದ ಅಳೆದು ಅಷ್ಟು ಅಳತೆಯ ಭೂಮಿಯನ್ನು ಒಂದು ಆಳುಮಟ್ಟ ಇಳಿಸುತ್ತಾರೆ. ಅಂದರೆ ಅಗೆಯುತ್ತಾರೆ. ಅಥವಾ ಜಾಗವನ್ನು ಅಳತೆ ಮಾಡಿಬಿಡುತ್ತಾರೆ. ಇವರೇ ಕುಣಿಯನ್ನು ತೋಡಿ ಶವವನ್ನು ಹೂಳುತ್ತಾರೆ.

ಮನೆಯ ಯಜಮಾನ ಅಥವಾ ಯಜಮಾನಿ ಸತ್ತರೆ ಮಗ ಅಥವಾ ಮೊಮ್ಮಗನೋ ಕೂಳನ್ನು ಹೊತ್ತಿರುತ್ತಾನೆ. ಇಲ್ಲ ಅಣ್ಣತಮ್ಮಂದಿರಾದರೂ ಕೂಳು ಹಿಡಿದಿರುತ್ತಾರೆ. ಶವವನ್ನು ಕುಣಿಯಲ್ಲಿ ಇಡುವಾಗ ಶವದ ತಲೆಯನ್ನು ದಕ್ಷಿಣ ದಿಕ್ಕಿಗೆ ಮಾಡಿಕೊಂಡು ಸಮಾಧಿ ಕುಣಿದು ಹತ್ತಿರ ತಂದು ಸಂಪ್ರದಾಯದ ಪ್ರಕಾರ ತಂಗಡಿಕೆ ಪತ್ರಿಯಿಂದಲೋ ಲೆಕ್ಕಿಪತ್ರಿ ಯಿಂದಲೋ, ಶವದ ಮೇಲೆ ಹಾಕಿ ಎಡಗೈಯಿಂದ ಮೂರು ಹಿಡಿ ಮಣ್ಣನ್ನು ಹಾಕಿ ಶವಸಂಸ್ಕಾರ ಮಾಡುತ್ತಾರೆ. ಆದ ಬಳಿಕೆ ಎಲ್ಲರೂ ಹಿಂದಕ್ಕೆ ತಿರುಗಿ ನೋಡದೇ ಕೆರೆಗೋ, ಬಾವಿಗೋ ಅಥವಾ ಮನೆಗೋ ಹೋಗಿ ಸ್ನಾನ ಮಾಡಿ ಆಂಜನೇಯದ ದೇವಸ್ಥಾನಕ್ಕೆ ಹೋಗುತ್ತಾರೆ.

ಮಣ್ಣು ಮಾಡಿದ ಮೂರು ದಿನದಲ್ಲಿ ಒಂದು ಕಾರ್ಯವನ್ನು ಆಚರಿಸುತ್ತಾರೆ. ಅಣ್ಣ ತಮ್ಮಂದಿರೆಲ್ಲ ಕೂಡಿ ಇಂಡಿ ಮೂರು ಕೂಳು ಮಾಡಿ ಬಂದು, ಅವರೆಲ್ಲ ಕೂಳು ತಿಂದು ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ನಂತರ ಒಂಬತ್ತು ದಿವಸದಲ್ಲಾಗಲೀ, ತಿಂಗಳು ತುಂಬುವಾಗಾಗಲೀ ಇನ್ನೊಂದು ಕಾರ್ಯವನ್ನು ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಅದರ ಮುಕ್ತಾಯವಾಗುತ್ತದೆ. ಕೆಲವೊಬ್ಬರು ವಾರ್ಷಿಕಾಚರಣೆಯನ್ನು ಮಾಡುವುದುಂಟು. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿರುತ್ತದೆ. ಇಷ್ಟು ಬೇಡನಾಯಕರ ಶವಸಂಸ್ಕಾರ ವಿಧಿ ಯಾಗಿರುತ್ತದೆ.

ಒಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿಯಲ್ಲೇ ಈ ಬೇಡ ಬುಡಕಟ್ಟಿನ ಸಂಸ್ಕೃತಿ ವೈಶಿಷ್ಟ್ಯ ವಾದುದು. ಇವರ ಜೀವನ ಮತ್ತು ಸಮಾಜ ವ್ಯವಸ್ಥೆ, ಆಚರಿಸುವ ಹಬ್ಬಗಳು, ಸಂಪ್ರದಾಯದ ಆಚರಣೆಗಳು, ವೃತ್ತಿ, ಉಪವೃತ್ತಿ ಕಲೆ ಹಾಗೂ ಬೇಟೆಗಾರಿಕೆ, ಮದುವೆ ಸಂಪ್ರದಾಯ ಇತ್ಯಾದಿ ಆಚರಣೆಗಳು ಬಹುವಿಶಿಷ್ಠವಾಗಿವೆ. ಇದೊಂದು ಅಧ್ಯಯನಶೀಲ ಬುಡಕಟ್ಟು ಎಂಬುದರಲ್ಲಿ ಸಂಶಯವೇ ಇಲ್ಲ. ಇನ್ನೂ ಸಾಕಷ್ಟು ವಿಧಾನದಲ್ಲಿ ಅಧ್ಯಯನ ಮಾಡುವ ಅಗತ್ಯವೂ ಇದೆ. 

ಪರಾಮರ್ಶನ ಗ್ರಂಥಗಳು

೧. ಮ್ಯಾಸಬೇಡರ ಸಂಸ್ಕೃತಿ, ಡಾ. ಕೃಷ್ಣಮೂರ್ತಿ ಹನೂರು, ೧೯೯೩.

೨. ಮ್ಯಾಸಮಂಡಲ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ೨೦೦೩.

೩. ವಾಲ್ಮೀಕಿ ಸಂಪದ, (ಸಂ.)ಡಾ. ಮಂಜುನಾಥ ಬೇವಿನಕಟ್ಟಿ, ಡಾ. ತಾರೀಹಳ್ಳಿ ಹನುಮಂತಪ್ಪ.

೪. ಘಟ್ಟ ಹೊಸಹಳ್ಳಿ ಗಟ್ಟಿಗ, (ಸಂ.)ಹರ್ತಿಕೋಟೆ ವೀರೇಂದ್ರಸಿಂಹ, ಡಾ. ತೇಜಸ್ವಿ ಕಟ್ಟಿಮನಿ.

೫. ಮನೆ, ಸಮಾಜ ಮತ್ತು ಸಂಸ್ಕೃತಿ, ಎಂ.ಪಿ. ವೀಣಾ.

೬. ಮ್ಯಾಸನಾಯಕರು ಒಂದು ಜನಾಂಗೀಯ ಅಧ್ಯಯನ, ಡಾ. ಕರಿಶೆಟ್ಟಿ ರುದ್ರಪ್ಪ.

೭. ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ.

೮. ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ.


[1]