ಸಮಾಜದಲ್ಲಿ ಲಿಂಗಭೇದದ ನೆಲೆ ಅಥವಾ ಜೈವಿಕ ಅಂಶದ ಎರಡು ಸಮೂಹಗಳಿದ್ದು, ಈ ಎರಡು ಸಮೂಹಗಳ ಮಧ್ಯ ಪ್ರಕೃತಿ ದತ್ತವಾಗಿ ಕೆಲ ಭಿನ್ನತೆಗಳಿವೆ. ಈ ಭಿನ್ನತೆಯಿಂದಾಗಿಯೇ ಮಾನವನ ಹುಟ್ಟು ಸಮಾಜದ ಉಳಿವು, ನಿರಂತರತೆಗೆ ಕಾರಣವಾಗಿದೆ. ಸ್ತ್ರೀಪುರುಷರಿಬ್ಬರೂ ಸಮಾಜದ ಎರಡು ಕಣ್ಣುಗಳು, ಒಂದು ನಾಣ್ಯದ ಎರಡು ಮುಖಗಳು ಅಥವಾ ಸಮಾಜವೆಂಬ ರಥದ ಎರಡು ಗಾಲಿಗಳಿದ್ದಂತೆ. ಹೆಣ್ಣಿಗೆ ಗಂಡಿನ ಅಗತ್ಯತೆ ಎಷ್ಟಿದೆಯೋ, ಗಂಡಿಗೂ ಹೆಣ್ಣಿನ ಅವಶ್ಯಕತೆ ಅಷ್ಟೇ ಇದೆ. ಈ ರೀತಿ ಇವರಿಬ್ಬರ ಮಧ್ಯೆ ಅಗತ್ಯತೆ, ಅವಶ್ಯಕತೆ, ಸಮಾನತೆ ಇದ್ದರೂ ವಾಸ್ತವಿಕವಾಗಿ ಕೆಲ ಅನುಭವ, ಸತ್ಯ ಹಾಗೂ ಸಂಗತಿ ಸಂಶೋಧನೆಗಳ ಆಧಾರದ ಮೇಲೆ ಸ್ತ್ರೀಯೇ ಪುರುಷನಿಗಿಂತ ಹೆಚ್ಚು ಶ್ರೇಷ್ಠತೆ ಹೊಂದಿದ್ದಾಳೆನ್ನಬಹುದು.

ನಮ್ಮ ಸಮಾಜವು ಬಹು ಧರ್ಮ, ಜಾತಿ ಸಂಸ್ಕೃತಿಯನ್ನು ಹೊಂದಿದ್ದು, ಇಲ್ಲಿನ ಮಹಿಳೆಯರನ್ನು ಸಮಾನ ರೂಪದ ಒಂದೇ ವರ್ಗವಾಗಿ ಚಿತ್ರಿಸಿರುವುದು ಅಥವಾ ನೋಡು ವುದು ಸರಿಯಲ್ಲ. ಕಾಲದಿಂದ ಕಾಲಕ್ಕೆ, ವರ್ಗದಿಂದ ವರ್ಗಕ್ಕೆ, ಧರ್ಮದಿಂದ ಧರ್ಮಕ್ಕೆ, ಭಿನ್ನವಾದ ಮಹಿಳೆಯರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೇಡ ಬುಡಕಟ್ಟು ಮಹಿಳೆಯ ಸ್ಥಿತಿಗತಿಯನ್ನು ವಿಶ್ಲೇಷಿಸಬಹುದಾಗಿದ್ದು ಇವರ ಇತಿಹಾಸವೆಂದರೆ, ಅವರಿಗಿದ್ದ ಗೌರವ ಮತ್ತು ಸ್ವಾತಂತ್ರ್ಯ ಗತಿಸಿ ಹೋದ ಇತಿಹಾಸವೇ ಆಗಿದ್ದು ವೇದಗಳ ಕಾಲದವರೆಗೂ ಭಾರತೀಯ ಆದಿವಾಸಿಗಳು ಸ್ತ್ರೀಯನ್ನು ದೈವ ಸೃಷ್ಟಿಯಲ್ಲಿ ಒಂದು ಅಸಂಗತ ಪವಾಡ ಎಂದು ನಂಬಿ ವಿಶೇಷ ಸ್ಥಾನ ನೀಡಿ ದೈವೀ ಸ್ವರೂಪದಲ್ಲಿ ಪೂಜ್ಯತೆಯಿಂದ ಕಾಣಲಾಗುತ್ತಿತ್ತು. ಈಕೆ ಮನೆಯ ಒಡತಿಯಾಗಿದ್ದು ಅಸ್ತಿಯ ಮಾಲೀಕಳಾಗಿ ಹಿಂದಿನ ಸಮಾಜವು ಮಾತೃ ಪ್ರಾಧಾನತೆಯ ವ್ಯವಸ್ಥೆಯಿಂದ ಕೂಡಿತ್ತು. ಸ್ತ್ರೀಯು ಬರೆ ಬೀಸಿ ಬೇಟೆಯಾಡುವ ಗುಂಪು ಕ್ರಿಯೆಯಲ್ಲಿ ಗಂಡಸಿನ ಜೊತೆ ಸೇರಿ ದುಡಿಯುತ್ತಿದ್ದು ಕೆಲವೊಮ್ಮೆ ತಾವೇ ಬೇಟೆಯಾಡಿ ಕುಟುಂಬ ಸಾಕುತ್ತಿದ್ದುದಕ್ಕೆ ಸಾಕ್ಷಿಗಳಿವೆ. ಯುದ್ಧ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದುದಕ್ಕೆ ನಿದರ್ಶನಗಳಿವೆ. ಕುಟುಂಬದ ಪೋಷಣೆಯ ಜವಾಬ್ದಾರಿ ಹೊತ್ತ ಈಕೆ ಕೃಷಿಯನ್ನು ಕಂಡು ಹಿಡಿದ ಮೊದಲಿಗಳಾಗಿ ಆಹಾರೋತ್ಪಾದನೆಯ ಅನ್ವೇಷಕಿ ಎಂಬ ವಾದವೂ ಇದೆ. ತನ್ನ ವಿಶಿಷ್ಟ ಗುಣಗಳಾದ ತಾಳ್ಮೆ, ಜಾಣೆ್ಮ, ಸಹಿಷ್ಣುತೆ, ದೈಹಿಕ ದಣಿವನ್ನು ಗೌಣವಾಗಿಸಿ ಮುನ್ನಡೆಯುವ ದಿಟ್ಟತನವಿದ್ದು, ಜನ್ಮತಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾಳೆ, ಕುಟುಂಬ ವನ್ನು ಪೋಷಿಸುವ, ಪಾಲಿಸುವ ಸದಸ್ಯರನ್ನು ಕ್ಷಮಿಸುವ ಪ್ರೀತಿಸುವ, ತಿದ್ದುವ ಭಾವ ಸಂಪತ್ತನ್ನು ಸಮೃದ್ಧವಾಗಿ ಹೊರಹೊಮ್ಮಿಸುವ ಈಕೆಯೇ ಸತ್ಯವಾಗಿ, ತಂದೆಗಿಂತ ಸಾವಿರ ಪಾಲು ಪೂಜ್ಯನೀಯಳಾಗಿದ್ದಾಳೆ. ಈಕೆಯು ಮಗುವಿಗೆ ಮೊಲೆಯುಣಿಸುವ ಕ್ರಿಯೆ ಸರಳ ವಾದುದಲ್ಲ. ಈ ಕ್ರಿಯೆಗೆ ಆಕೆ ಕನಿಷ್ಟ ದಿನವೊಂದಕ್ಕೆ ೫೦೦ ಕ್ಯಾಲರಿಗಳನ್ನು ವ್ಯಯ ಮಾಡಬೇಕು. ಇದು ಹೆಚ್ಚು ಕಡಿಮೆ ೮ ಕಿ.ಮೀ. ಗಳ ನಡಿಗೆಗೆ ತಿನ್ನುವ ಹದ್ದುಗಳ ಸಂಕೇತ ಎನ್ನುವುದು ಮಹಿಳೆಯರ ಪಾಲಿಗೆ ಅಕ್ಷರಶಃ ನಿಜವಾಯಿತು. ವಿದ್ಯೆಯ ಆಧಿದೇವತೆ ಶಾರದೆ ಎನಿಸಿಕೊಂಡ ಈಕೆಯನ್ನು ಅಕ್ಷರಸ್ಥಳನ್ನಾಗಿ ಮಾಡಲಾಯಿತು. ಐಶ್ವರ್ಯ ಸಂಪತ್ತಿನ ಅಧಿದೇವತೆ ಲಕ್ಷ್ಮಿಗೆ ಹೋಲಿಸಿಕೊಂಡ ಈಕೆ ಆರ್ಥಿಕ ಸ್ವಾತಂತ್ರ್ಯವಿಲ್ಲದೇ ಪರಾವಲಂಬಿ ಜೀವಿಯಾಗಬೇಕಾಯಿತು. ಶಕ್ತಿ ಸ್ವರೂಪಿಣಿ ಎಂದು ಹೆಸರು ಪಡೆದ ಈಕೆಯನ್ನು ನಿಶ್ಯಕ್ತಿಗೆ ದೂಡಿ ಶೋಷಣೆ, ದೌರ್ಜನ್ಯ, ತುಳಿತರಲ್ಲಿ ಒಳಗಾಗುವ ಪರಿಸ್ಥಿತಿಯನ್ನು ತಂದು, ವಿಧೆವೆಯಾಗಿ, ಮಹಾಸತಿಯಾಗಿ, ದೇವದಾಸಿಯಾಗಿ, ದಾಸಿ, ಗುಲಾಮಳಾಗಿ ಅನುಭಸಿದ ಹಿಂಸೆ, ನೋವು ನರಳಾಟಗಳಿಗೆ ಎಣೆಯೇ ಇಲ್ಲದಂತಾಗಿ, ಗಂಡಿನ ಭೋಗದ ಸಾಧನವಾಗಿ ಅವನಿಗಾಗಿ ಮಕ್ಕಳನ್ನು ಹೇರುವ ಯಂತ್ರವಾಗಿ ವೈದಿಕರು ಧರ್ಮ ಸ್ತ್ರೀ ಪರಾಧೀನತೆ ಎತ್ತಿ ಹಿಡಿದು, ಗಂಡು ಸಂತಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದು ಸುಪುತ್ತೋಕುಲದೀಪಕ, ಸಂಸಾರದ ಆಶಾಜ್ಯೋತಿ, ತಂದೆ ತಾಯಿಯರನ್ನು ಪೋಷಿಸುವುದು ಎಂದು ಗಂಡು ಮಕ್ಕಳಿಗೆ ಹಂಬಲಿಸಿ, ದೇವರಿಗೆ ಹರಿಕೆ ಹೊತ್ತ ನಿದರ್ಶನಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಗಾದೆಯೊಂದು ಹೀಗಿದೆ. ‘ಮಗ ಸತ್ತರೆ ಮನೆಹಾಳು, ಸೊಸೆ ಸತ್ತರೆ ಶೋಬಾನ’ ಎನ್ನುವಂತೆ ಸ್ತ್ರೀ ಸತ್ತರೆ ಮರುಕಪಡದೇ ಪುನರ್ ವಿವಾಹ ಮಾಡುವರು. ಸ್ತ್ರೀಯ ಈ ಸ್ಥಿತಿಯನ್ನು ಕಂಡು ಕವಯಿತ್ರಿ ಒಬ್ಬರು ತನ್ನ ಅಳಲನ್ನು ಈ ರೀತಿ ತೋಡಿಕೊಂಡಿದ್ದಾರೆ. ನಾವು ಅಪ್ಪಟ ನಾರಿಯರು ತತ್ವಗಳಲ್ಲಿ ದೇವಿಯಾದವರು, ಭ್ರೂಣವಿರುವಾಗಲೇ ಬೇಡವಾದವರು, ಬೆಳೆಯುತ್ತಾ ಹೊರೆಯಾದವರು. ಮದುವೆ ಮಾರುಕಟ್ಟೆಯಲ್ಲಿ ಸರಕಾದವರು. ಬದುಕಿಡೀ ಯಾರದೋ ದಯೆಗೆ ಕೈಯೊಡ್ಡಿ ಬಗ್ಗಿ ಹೋದವರು, ನಾವು ಮಗಳಾದೆವು, ಹೆಂಡತಿಯಾದೆವು, ತಾಯಿ ಯಾದವು, ಬದಿಕಿಡೀ ಯಾರದೋನೆರಳಾದವು. ಕೊನೆಗೂ ನಾವು ನಾವಗಲೇ ಇಲ್ಲ. ಎಂಬ ಪಾಪಜೀವನಕ್ಕಾಗಿಯೇ ಹುಟ್ಟಿದವರು ನಾವೆಂಬ ನೋವನ್ನು ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣದ ಯೋಜನೆಗಳಂತೂ ಸ್ತ್ರೀಯ ಮೇಲೆ ದೌರ್ಜನ್ಯಗಳನ್ನೇ ನಡೆಸಿ, ಆಕೆಯ ಬೇಕು, ಬೇಡ, ಒತ್ತಡ ಮಾನಸಿಕ ತಯಾರಿ, ಈ ಯಾವುದಕ್ಕೂ ಗಮನ ಕೊಡದೇ ಆಕೆಯ ಗರ್ಭದ ಮೇಲೆ ಆಕ್ರಮಣವನ್ನೇ ಮಾಡಿವೆ.

ಸ್ತ್ರೀಯರ ಹುಟ್ಟಿನೊಂದಿಗೆ ಬೆಳೆದುಕೊಂಡ ಬಂದ ಬದುಕನ್ನು ಕಸಿದುಕೊಂಡು ಈ ನೆಲೆಯಿಂದ ಹೊರಬಂದು ಅಪರಿಚಿತ ನೆಲೆಯಲ್ಲಿ ಬಾಳಬೇಕಾದ ಅನಿವಾರ್ಯತೆ, ಇದನ್ನು ಪ್ರಶ್ನಿಸಲು ಅವಕಾಶವಿಲ್ಲದಂತೆ ಅದಕ್ಕೊಂದು ಭಾವನಾತ್ಮಕ ನೆಲೆ ಬೆಲೆ ಸೃಷ್ಟಿಸಿ, ಗಂಡ ಮನೆ ಮಕ್ಕಳು ಎಂದು ಹಲಬುತ್ತಾ ತನ್ನನ್ನು ದುಡಿಸಿಕೊಳ್ಳುವವರ ಕಟುನುಡಿಗಳನ್ನು ನಿತ್ಯ ಸುರಿಮಳೆಯಾಗುತ್ತಿದ್ದರೂ ಮನಸ್ಸನ್ನು ಮುಕ್ತವಾಗಿ ಬಿಚ್ಚಿಕೊಳ್ಳುವಂತಿಲ್ಲ. ಬಿಚ್ಚಿಕೊಂಡರೆ ತನ್ನ ಮತ್ತು ಮಕ್ಕಳ ಭವಿಷ್ಯದ ಭಯ ಕಾಡುವುದು. ಪರಿಣಾಮ ತನ್ನದೇ ಆದ ಭಾವ ಲಯಗಳಲ್ಲದೇ, ಅಭಿರುಚಿಗಳಲ್ಲದೇ, ಅವರ ಬದುಕು ಜಿಡ್ಡುಗಟ್ಟಿದ ವ್ಯವಸ್ಥೆಯಡಿ ನಿಂತ ನೀರಾಗಿ ನಾರುತ್ತಿದೆ. ಪುರುಷರು, ವರ್ಗ, ವರ್ಣ, ಜಾತಿ ವೈಷಮ್ಯಗಳಿಗಾಗಿ ಹೋರಾಡಿ ಬಡಿದಾಡಿ ಸತ್ತರೆ, ಸ್ತ್ರೀ ಆಶ್ರಯಕ್ಕಾಗಿ ಬಡಿದಾಡಬೇಕಾಗಿ ಬಂದಿರುವುದು ಅವರ ಜೀವನದಲ್ಲಿ ಶೋಷಣೆ, ಅಗತ್ಯ, ಅನಿವಾರ್ಯವೆನ್ನುವಂತೆ ಮಾಡಿ ಅವರ ನಿಟ್ಟುಸಿರು ಇಂದು ದಟೈಸಿದೆ. ಅದ್ದರಿಂದ ಚಿಂತಕ ಲಕನ್ ಹೇಳುತ್ತಾರೆ ‘‘ಮಹಿಳೆ ಎಂದರೆ ಅಸ್ತಿತ್ವದಲ್ಲಿದ್ದು ಅದೊಂದು ಖಾಲಿ ಸ್ಥಳ ಒಂದು ಮಾನ, ಅದೃಶ್ಯ, ಕಣ್ಣೀರಿನ ತೊಟ್ಟಿ, ಮಾಲ್ಯರಹಿತ ವಸ್ತು, ಭೋಗಕ್ಕೆ ಮಾತ್ರ ಸೀಮಿತ, ನೋವಿನ ಕಡಲನ್ನು ಹೊತ್ತ ಅಸಹಾಯಕ” ಎಂದಿದ್ದಾರೆ.

ನ್ಯಾಯ ಶಾಸ್ತ್ರ, ಧರ್ಮ ಶಾಸ್ತ್ರಗಳು, ಪುರುಷ ಪ್ರಾಧಾನ್ಯತೆಯನ್ನು ಎತ್ತಿಹಿಡಿದು ಹೊಸ ವಿಚಾರಗಳನ್ನು ವ್ಯಕ್ತಪಡಿಸಿ, ಸ್ತ್ರೀ ಹಿತಕ್ಕೆ ದಕ್ಕೆ ತಂದು ಆ ಮೂಲಕ ಸ್ತ್ರೀ ಸಂಬಂಧಿತ ಹಲವಾರು ಸಮಸ್ಯೆಗಳು ಬಾಲ್ಯ ವಿವಾಹ, ವರದಕ್ಷಿಣೆ, ಸತಿಪದ್ಧತಿ ವಿಧವಾ ಸಮಸ್ಯೆ, ದೇವದಾಸಿ ಪದ್ದತಿ ಮುಂತಾದವುಗಳ ಬೆಳವಣಿಗೆಗೆ ಕಾರಣವಾದವು. ಉದಾಹರಣೆಗೆ ಇವರ ಕೆಲವು ಹೇಳಿಕೆಗಳು ಹೀಗಿವೆ.

೧. ದಕ್ಷ: ಎಂಬ ಶಾಸ್ತ್ರಕಾರ ಪತಿ ಪೌನೌಸಶ ವ್ಯಭಿಚಾರಿಯಾಗಿದ್ದರೂ ಪತ್ನಿ ಆತನನ್ನು ಸೇರಬೇಕು ಸಣ್ಣ ಜಿಗಣಿ ಕೇವಲ ರಕ್ತ ಹೀರುತ್ತದೆ. ಆದರೆ ಸ್ತ್ರೀ ಒಬ್ಬ ಪುರುಷನ ಆಸ್ತಿ ಸತ್ವ, ಶಕ್ತಿ, ಬಲ ಎಲ್ಲಾ ಹೀರುತ್ತಾಳೆ ಎಂದಿದ್ದಾನೆ.

೨. ಅತ್ರಿ: ಎಂಬ ಮತ್ತೊಬ್ಬ ಶಾಸ್ತ್ರಕಾರ ‘‘ಪತ್ನಿ ಪುಣ್ಯ ಸಂಪಾದನೆ ಮಾಡಲು ತನ್ನ ಗಂಡನ ಪಾದ ತೊಳೆದು ಆ ನೀರನ್ನು ಕುಡಿಯಬೇಕಷ್ಟೇ’’ ಎಂದಿದ್ದಾರೆ.

೩. ಗೌತಮ, ನಾರದ, ಮನು, ಯಾಜ್ಞವಲ್ಕ ಮುಂತಾದ ಶಾಸ್ತ್ರಕಾರರು ‘‘ಸ್ತ್ರೀಯರು ಸ್ವಭಾವತಃ ಸುಳ್ಳನು ಹೇಳುವವರಾಗಿದ್ದರಿಂದ ಅವರನ್ನು ಕೊಲೆಗಡುಕರು, ಹಾವಾಡಿಗರು, ಹುಚ್ಚರು ಬಾಲಕರ ಪಟ್ಟಿಯಲ್ಲಿ ಸ್ತ್ರೀಯರು ಸೇರಿದ್ದಾರೆ’’ ಎನ್ನುವರು.

೪. ಮನು: ‘‘ಗಂಡನು ಕೋಪಿಸಿಕೊಂಡರೂ ಸರಿಯೇ ನೀನು ಕೋಪಗೊಳ್ಳಬೇಡ, ಗಂಡನ ಮನೆಯಲ್ಲಿ ದಾಸಿಯಾಗಿದ್ದರೂ ಸರಿಯೇ ನಿನ್ನ ಮೇಲಿನ ಒಡೆತನವನ್ನು ಅವನಿಗೆ ಒಪ್ಪಿಸಬೇಕು’’ ಎಂದಿದ್ದಾನೆ.

ಹೀಗೆ ಸ್ತ್ರೀಯನ್ನು ಅತಂತ್ರ, ಅಭದ್ರತೆ, ಪರಾವಲಂಬಿ, ಅಸಮಾನತೆಯ ಜೀವನಕ್ಕೆ ಸಿಲುಕಿಸಿದ್ದು ವಿಷಾದನೀಯವಾಗಿದೆ.

ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಂಡು ಆಕೆಯ ದೇಹ ಮತ್ತು ಮನಸ್ಸಿನ ಮೇಲೆ ಅತಿಯಾದ ನಿರ್ಬಂಧಗಳನ್ನು ಹೇರಿ ಆಕೆಯ ದೇಹ, ಭಯ ಆತಂಕಗಳ ಮೂಲವಾಗಿ ಮಾಡಿ, ಆ ಮೂಲಕ ಸ್ತ್ರೀಯ ದೇಹ ಸಂರಕ್ಷಿಸಲ್ಪಡುವ ವಸ್ತುವಾಗಿರುವುದರಿಂದ, ಅದು ಕೆಡುವ ಕಳೆದುಹೋಗುವ ಭಯ ಒಡ್ಡಿದೆ. ಈ ಭಯದ ನೆಲೆಯಲ್ಲಿ ಹೆಣ್ಣಿನ ದೇಹ ಸಂಪತ್ತಾಯಿತು. ಈ ಸಂಪತ್ತು ಒಡೆಯನನ್ನು ಪಡೆಯಿತು. ಆ ಒಡೆತನ ಪಡೆದ ಪುರುಷ ಆಕೆಯನ್ನು ಆತನ ಸ್ವತ್ತಾಗಿ ಮಾಡಿಕೊಂಡ. ಆದರೂ ಸ್ತ್ರೀಯು ಯಾವುದೇ ಸ್ಥಳದಲ್ಲಾಗಲೀ ಸುರಕ್ಷಿತಳಲ್ಲ. ಭೀತಿಯ ನೆರಳು ಆಕೆ ಹೋದೆಡೆಯಲ್ಲೆಲ್ಲ ಅಟ್ಟಿಸಿಕೊಂಡು ಬರುತ್ತದೆ. ಸಾರ್ವಜನಿಕ ಸ್ಥಳದಲ್ಲಾಗಲೀ ಕಾನೂನು ಮತ್ತು ವ್ಯವಸ್ಥೆಯ ರಕ್ಷಕರೆನಿಸಿಕೊಂಡವರ ಆಶ್ರಯದಲ್ಲಾಗಲೀ ಎಲ್ಲೂ ಸುರಕ್ಷತವಲ್ಲ. ಸ್ತ್ರೀಯರ ಮೇಲೆ ದಾಖಲಾದ ಅಪರಾಧಗಳ ಸಂಖ್ಯೆಯು ಒಂದು ವರ್ಷದಲ್ಲಿ ೧,೪೪,೦೦೦ ವನ್ನು ಮೀರಲಿದೆ. ಎನ್ನಬಹುದಾಗಿದೆ. ಮೇಲ್ಜಾತಿಯ ಮಹಿಳೆಗಿಂತಲೂ ಬೇಡ ಬುಡಕಟ್ಟು ಮಹಿಳೆ ಹೆಚ್ಚು ಸ್ವಾತಂತ್ರ್ಯರಾಗಿದ್ದು ಜಾತಿಯ ಬಿಗುವಿನಿಂದ ಸ್ವಲ್ಪ ಮಟ್ಟಿಗೆ ಮುಕ್ತಾರಾಗಿದ್ದಾರೆ. ಹಾಗೇ ಸಾರ್ವಜನಿಕ ಜೀವನಕ್ಕೂ ಅವಕಾಶವಿದ್ದು ಕೆಲ ಮಹಿಳೆಯರನ್ನು ತಮ್ಮ ಗಂಡಂದಿರೊಂದಿಗೆ ಕೃಷಿ ಕಾರ್ಯಗಳಲ್ಲಿ ಕರಕುಶಲ ವೃತ್ತಿಗಳಲ್ಲಿ ತೊಡಗಿ ಚಲನವಲನಗಳ ಸ್ವಾತಂತ್ರ್ಯ ಸ್ವಲ್ಪಮಟ್ಟಿಗೆ ಅನುಭವಿಸು ವುದೂ ಇದೆ. ಆದರೂ ಕೆಲವು ಕಡೆ ದಲಿತ ಹೆಣ್ಣುಗಳನ್ನು ಹಾಡು ಹಗಲೇ ಬೆತ್ತಲೆಗೊಳಿಸುವ ಲೈಂಗಿಕ ಕಿರುಕುಳ ನೀಡುವ ಗಂಡಸರು ನಾಡಿನುದ್ದಕ್ಕೂ ಆವರಿಸಿಕೊಂಡಿದ್ದು, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಿಕ ಕ್ಷೇತ್ರಗಳಲ್ಲೂ ಇವರನ್ನು ಅನುಕೂಲಸಿಂಧುವಾಗಿ ಬಳಸಿಕೊಳ್ಳಲಾಗುತ್ತಿದೆ. ಕಾರಣ ಆರ್ಥಿಕ ದಮನಕ್ಕೆ ಒಳಗಾದ ಈ ಸ್ತ್ರೀಯರು ಇಂದು ಸಾಮಾಜಿಕ ದಮನಕ್ಕೂ ಒಳಗಾಗಿರುವುದು ಸಹಜವೆನಿಸಿದೆ. ಮೇಲಿನ ಎಲ್ಲಾ ಬಗೆಯ ಶೋಷಣೆಗಳು ಸಾಮಾನ್ಯವಾಗಿ ಬೇಡ ಬುಡಕಟ್ಟು ಸ್ತ್ರೀಯರ ಸಹಿತ ಎಲ್ಲಾ ಸ್ತ್ರೀಯರು ಅನುಭವಿಸುತ್ತಿರುವುದು ದುರದೈವದ ಸಂಗತಿ. ಈ ಸಾಮಾನ್ಯ ಶೋಷಣೆಯ ಜೊತೆಗೆ ಸಮಾಜದ ದ್ವಿಮುಖ ನೀತಿಯಿಂದಾಗಿ ಬೇಡ ಮಹಿಳೆಯರಿಗಾಗಿ ಕೆಲವು ವಿಶೇಷ, ಪ್ರತ್ಯೇಕ ಸಮಸ್ಯೆಗಳು ಇವೆ. ಅವುಗಳೆಂದರೆ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ವೇಶ್ಯಾವೃತ್ತಿ, ಇವುಗಳನ್ನು ಗುರುತಿಸಬಹುದಾಗಿದೆ.

ಬೇಡ ಬುಡಕಟ್ಟಿನ ಸ್ತ್ರೀಯರು ವೇದಗಳ ಕಾಲದಿಂದ ಇಂದಿನವರೆಗೂ ಈ ಪ್ರತ್ಯೇಕ ಸಮಸ್ಯೆಗಳಿಂದ ಬಳಲುತ್ತಿದ್ದು ಇದರಲ್ಲಿ ಸಾವಿರಾರು ಮಹಿಳೆಯರು ತಮ್ಮ ಬದುಕಿನ ಮೂಲ ಭೂತ ಅಗತ್ಯಗಳಿಗಾಗಿ ದೇವದಾಸಿ ಸಂಪ್ರದಾಯದ ಹೆಸರಿನಲ್ಲಿ ದೇಹ ಮಾರಿಕೊಳ್ಳಬೇಕಾದ ಪರಿಸ್ಥಿತಿ ಇದ್ದು, ಮೇಲ್ವರ್ಗ, ಮೇಲ್ಜಾತಿ ಮಹಿಳೆಯರನ್ನು ನೈತಿಕ ನೆಲೆಗಟ್ಟಿನಲ್ಲಿ ಪ್ರತಿನಿಧಿಕರಿಸಿದೆ. ಇವರು ಸುಲಭವಾಗಿ ಎಲ್ಲರಿಗೂ ಲೈಂಗಿಕವಾಗಿ ಲಭ್ಯ. ಅವರ ಕೌಟುಂಬಿಕ ಸಾಮಾಜಿಕ ಹಿನ್ನೆಲೆಯನ್ನು ಹಾಗೆ ರೂಪಿಸಲಾಗಿದೆ. ಪುರುಷ ಪ್ರಾಧಾನ್ಯ ವ್ಯವಸ್ಥೆಯನ್ನು ಲೈಂಗಿಕ ಸ್ವೇಚ್ಚಾಚಾರಕ್ಕಾಗಿಯೇ ಸೃಷ್ಟಿಸಿಕೊಂಡ ಸೂಳೆ ವ್ಯವಸ್ಥೆ. ತಳ ಸಮುದಾಯದ ಮಹಿಳೆಯರನ್ನು ದಾಸಿ ನೆಲೆಯಲ್ಲಿ ಪ್ರತಿನಿಧಿಕರಿಸಿ ಪುರುಷರನ್ನು ಗುಲಾಮರಂತೆ ನಡೆಸಿ ಕೊಳ್ಳುತ್ತಾ ಧರ್ಮ, ಜಾತಿ, ಬಡತನ, ಲಿಂಗ ವ್ಯವಸ್ಥೆಗಳು ಅವರನ್ನು ನಿಸ್ಸಹಾಯಕನ್ನಾಗಿಸಿ ಮೇಲ್ಜಾತಿ ಪುರುಷರನ್ನು ಪ್ರಶ್ನಿಸುವ ಧೈರ್ಯ ಕೆಳಜಾತಿಗಳಿಗೆಲ್ಲ ತಮ್ಮ ಕನ್ಯೆಯರನ್ನು ಅಪಹರಿಸಿದರೂ, ಅವರನ್ನು ಸೂಳೆಯನ್ನಾಗಿಸಿಕೊಂಡರೂ ಅಸಹಾಯಕತೆಯಿಂದ ಮಾನವಾಗಿರುವರು. ಮಾನವಿಯತೆಗೆ ಮಸಿಬಳಿಯುವ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ವೇಶ್ಯಾವೃತ್ತಿ, ಮುಂತಾದ ದುಷ್ಟಪದ್ಧತಿಗಳು, ಈ ಸಮುದಾಯದ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ನೆಲೆ ಇಲ್ಲದೇ ಸಾವಿರಾರು ಸ್ತ್ರೀಯರನ್ನು ಕಾಡುತ್ತಿದ್ದ ಇವರನ್ನು ವಿವಾಹ ಸಂಸಾ್ಕರದಿಂದ ದೂರವಿಟ್ಟು, ದಾಂಪತ್ಯ ಸುಖ ಜೀವನದ ಅನುಭವದಿಂದ ವಂಚಿತರನ್ನಾಗಿ ಮಾಡಿ. ಪತಿ ಪತ್ನಿ ಮಕ್ಕಳು ಎಂಬ ಪವಿತ್ರ ಪದ ಮೌಲ್ಯಗಳಿಂದ ಹೊರಗಿಟ್ಟು, ಲೈಂಗಿಕ ಶೋಷಣೆಗೆ ಒಳಪಡಿಸಿ ಇವರಿಗೆ ಹುಟ್ಟಿದ ಮಕ್ಕಳು ತಂದೆ ಇಲ್ಲದೇ ಹಟ್ಟಿದವರೆಂಬ ಕಳಂಕ ಹೊತ್ತು ಅವಮಾನದಿಂದ ನಗೆಪಾಟಲಿಗೆ ಗುರಿಯಾಗುವಂತೆ ಮಾಡುವ ಮೂಲಕ ಜನಾಂಗದ ಸ್ವಾಭಿಮಾನವನ್ನು ನಾಶಪಡಿಸಲಾಗುತ್ತಿದೆ. ಇಂಥ ಮೌಲ್ಯಗಳನ್ನು ನಾವಿಂದು ಪ್ರಶ್ನಿಸುವ ಆತ್ಮಾವಲೋಕನ ಮಾಡಿಕೊಳ್ಳುವ ಜವಾಬ್ದಾರಿ ಈ ಜನಾಂಗದ ಮೇಲಿದೆ. ಈ ಬಗ್ಗೆ ಇಂದಿಗೂ ಮಾನವೀಯ ಅನುಕಂಪವಲ್ಲದೇ ರಾಜಕೀಯವಾಗಿ ಕಾಡಿಕೊಂಡು ಬರುತ್ತವೆ. ವೀರಶೈವ ಧರ್ಮದ ತತ್ವಗಳು, ಧಾರ್ಮಿಕ ಚಳುವಳಿ, ಸಮಾಜ ಸುಧಾರಣಾ ಅಂದೋಲನ ಪಾತ್ರ ಜೊತೆಗೆ ಭಕ್ತಿ ಪಂಥದ ಪ್ರಯತ್ನಗಳಿಂದಾಗಿ ಸ್ತ್ರೀಯರ ಸ್ವಾತಂತ್ರ್ಯದ ಅಗತ್ಯತೆ ಮನಗಂಡು ಉತ್ತಮಪಡಿಸಲು ಶ್ರಮಿಸಿದರು. ಬ್ರಿಟಿಷರ ಆಳ್ವಿಕೆಯಲ್ಲಿ ಬುಡಕಟ್ಟು ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಪ್ರೋನೀಡಲಾಯಿತು. ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆಯ ಮಹತ್ವ ಅರಿತು, ತಮ್ಮ ಹೋರಾಟದಲ್ಲಿ ಈ ಸ್ತ್ರೀಯರನ್ನು ಭಾಗವಹಿಸಲು ಮನ ಒಲಿಸಿ ಆ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನಗರೀಕರಣ, ವಿಭಕ್ತ ಕುಟುಂಬಗಳ ಹೆಚ್ಚಳ, ಶಿಕ್ಷಣ, ಉದ್ಯೋಗವಕಾಶಗಳ ಪರಿಣಾಮ ದಿಂದ ಸ್ತ್ರೀಯರು, ಮನೆಯಿಂದ, ಹೊರಬಂದು ಕಾರ್ಖಾನೆ, ಕಛೇರಿ ಕೈಗಾರಿಕೆಗಳಲ್ಲಿ, ವ್ಯಾಪಾರ, ಕೃಷಿ, ಹೈನುಗಾರಿಕೆ, ಕೂಲಿ ಜೊತೆಗೆ ಮಿಸಲಾತಿ ವ್ಯವಸ್ಥೆಯಿಂದಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾವಹಿಸುವ ಅಧಿಕಾರ ಪಡೆಯುವಲ್ಲಿಯೂ ಸಮರ್ಥಳಾಗಿ ಹಲವಾರು ಸಂಘ ಸಂಸ್ಥೆಗಳನ್ನು, ಸ್ತ್ರೀ ಶಕ್ತಿ, ಸ್ವಶಕ್ತಿಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿಯಾಗಿ ಬದುಕು ತ್ತಿದ್ದಾರೆ. ತಮ್ಮ ಮನೆಯ ಕೆಲವು ಪುರುಷರು ಹಲವಾರು ದಶ್ಚಟಗಳಿಗೆ ದಾಸರಾಗಿ, ಮನೆಯ ಜವಾಬ್ದಾರಿಯಿಂದ ಜಾರಿಕೊಂಡು ತಮ್ಮ ಸ್ತ್ರೀಯರನ್ನು  ಪೀಡಿಸುತ್ತಾ ಕಾಡಿಸುತ್ತಾ ಅಲೆದಾಡುವುದು ಕಂಡುಬರುತ್ತದೆ. ಇಂಥ ಕುಟುಂಬಗಳ ಸ್ತ್ರೀಯರು ಸಾವಿರಾರು ಸಂಖ್ಯೆ ಯಲ್ಲಿದ್ದು ತಮ್ಮ ಮನೆ ಮಕ್ಕಳ ಜವಾಬ್ದಾರಿಯನ್ನು ಹೊತ್ತು ತಮ್ಮ ಕುಟುಂಬ ಬೆಳಗುವ ಜ್ಯೋತಿಯಾಗಿ ಆ ಮೂಲಕ ಇಡೀ ಸಮಾಜವನ್ನು ಜಗಮಗಿಸುತ್ತಿದ್ದಾಳೆ. ಕುಟುಂಬದಲ್ಲಿ ಮೊದಲೇ ಎದ್ದು ದಿನವಿಡೀ ದುಡಿದು ಕೊನೆಯಲ್ಲಿ ಮಲಗುವವಳು ಇವಳೇ ಆಗಿದ್ದಾಳೆ. ಕುಟುಂಬ ವೃದ್ದಿಯಾಗಲು ಅಥವಾ ಪತನವಾಗಲು ಹೆಣ್ಣು ಕಾರಣವಾಗುತ್ತಿದ್ದು ಕುಟುಂಬಗಳ ಆಧಾರ ಸ್ಥಂಭವಾಗಿ ಉಳಿತಾಯದ ರೂವಾರಿಯಾಗಿ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗುವ ಮೂಲಕ ಸ್ವಸ್ಥ್ಯ ಸಮಾಜಕ್ಕೂ ಕಾರಣವಾಗಿದ್ದಾರೆ.

ಜೇಮ್ಸ ಮಿಲ್‌ರವರು ಒಂದು ಸಮಾಜದ ಅಭಿವೃದ್ದಿಯಲ್ಲಿ ಅಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ಲಕ್ಷಿಸಿ ಗುರುತಿಸಬಹುದು ಎಂದಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ನಮ್ಮ ಸಂವಿಧಾನವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿ ಆಚರಣೆಗೆ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ತ್ರೀಯರ ಹಿತರಕ್ಷಣೆಗಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಕಲ್ಯಾಣಭಿವೃದ್ದಿಯಿಂದ, ಅನೇಕ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸಿದ್ದು, ಇಡೀ ಜಗತ್ತಿನಲ್ಲಿ ಅತೀ ಹೆಚ್ಚಿನ ರಾಜಕೀಯ, ಆರ್ಥಿಕ, ಸಾಮಾಜಿಕ ಹಕ್ಕುಗಳನ್ನು ಹೊಂದಿದ್ದು ಜೊತೆಗೆ ಕಾನೂನು ಶಾಸನಗಳಿದ್ದರೂ ಪುಡಾರಿ ರಾಜಕಾರಣಿಗಳು ಅಧಿಕಾರಿಗಳ ಅಸಡ್ಡೆತೆ ಅನಾಸಕ್ತಿಯಿಂದ ಅಂದುಕೊಂಡ ಮಟ್ಟಿಗೆ ಸುಧಾರಣೆ ತರಲಾಗಿಲ್ಲ. ಕೆಲವರಿಗೆ ಯೋಜನೆಗಳು ಪೂರ್ಣ ತಿಳಿದು, ಅವುಗಳಾವುವು ಎನ್ನುವುದು ತಿಳಿಯದಾಗಿದೆ. ಕಾರಣ ಇವರು ಸ್ತ್ರೀ ಸುಧಾರಣೆಯ ಹಾದಿಯಲ್ಲಿ ಮುಳ್ಳುಗಳಾಗಿದ್ದಾರೆ. ಅದರೂ ಕೆಲವು ನಗರ ಪಟ್ಟಣದ ಬೇಡ ಬುಡಕಟ್ಟು ಮಹಿಳೆಯರು ಇತರ ಸಮುದಾಯದ ಮಹಿಳೆಯರಿಗಿಂತ ಕಡಿಮೆ ಇಲ್ಲ. ಶಿಕ್ಷಣ ಪಡೆದು ಪ್ರಜ್ಞಾವಂಥರಾಗಿ ರಾಜಕೀಯವಾಗಿ ಅಧಿಕಾರ ಪಡೆದವರಿದ್ದು ಇನ್ನು ಕೆಲವರು ವಿಜ್ಞಾನಿಗಳು, ಅಧ್ಯಾಪಕರು, ಎಂಜಿನಿಯರಗಳು, ವಕೀಲರು, ನ್ಯಾಯಾಧೀಶರು, ಅಭಿಯೋಜಕರು, ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಾ ವಿದೇಶಕ್ಕೋ, ಉದ್ಯೋಗಗಳ ನಿಮಿತ್ತ ಹೋದವರು, ಹೋಗಿ ಬಂದವರು ಇದ್ದಾರೆ.

ಆದರೂ ಪುರುಷ ಪ್ರಧಾನತೆಯ ಈ ಸಮಾಜದಲ್ಲಿ ಜೀವಿಸುವ ಈ ಸ್ತ್ರೀಯು ಬುದ್ದಿ ಮನಸ್ಸು, ಎಷ್ಟೇ ವೈಚಾರಿಕವಾಗಿದ್ದರೂ ಅನಿವಾರ್ಯವಾಗಿ ಪುರುಷ ಪ್ರಧಾನ್ಯತೆಯ ಮೌಲ್ಯ ಕಟ್ಟುಪಾಡುಗಳನ್ನು ಮೈಗೂಡಿಸಿಕೊಂಡು ಅವುಗಳಂತೆ ನಡೆದು ಪುರುಷರ ಪರವಾಗಿಯೇ ಕೆಲಸ ಮಾಡುತ್ತಾ, ಪುರುಷ ಪ್ರಾಧಾನ್ಯತೆ ವಿರುದ್ಧ ನಡೆದರೆ ಅಥವಾ ಕಾಲಿಟ್ಟರೆ ಎದುರಿಸ ಬಹುದಾದ ಆಘಾತಗಳನ್ನು, ಭಯಾನಕ ಪರಿಸ್ಥಿತಿಯನ್ನು ಅರಿತು ಸದಾ ತನ್ನ ಕೊರಳಿಗೆ ಎಚ್ಚರಿಕೆಯ ಕರಗಂಟೆ ತೂಗು ಹಾಕಿಕೊಂಡು ತಮ್ಮನ್ನು ತಾವೇ ಬಂಧಿಸಿಕೊಂಡು ಬಳಲುತ್ತಾ, ಬಿಡುವಿಲ್ಲದೇ ನರಳುವ ಅವಸ್ಥೆಯನ್ನು ತಲುಪಿದ್ದಾರೆ. ಇದು ಭಾರತದ ಮಹಿಳೆಯರ ರಾಷ್ಟ್ರೀಯ ಫೆಡರೇಷನ್ ಸ್ತ್ರೀಯರ ಸುಧಾರಣೆ ಮತ್ತು ಸ್ಥಿತಿ-ಗತಿ ಉತ್ತರಿಸಲು ಪ್ರಯತ್ನಿ ಸುತ್ತಿದೆ. ಜೊತೆಗೆ ವಿಶ್ವ ಸಂಸ್ಥೆಯು ೧೯೭೫ರ ವರ್ಷವನ್ನು ಅಂತರ ರಾಷ್ಟ್ರೀಯ ಮಹಿಳಾ ವರ್ಷ ವೆಂದು ಘೋಷಿಸುವ ಮೂಲಕ ಮಹಿಳಾ ಶೋಷಣೆ, ಅಸಮಾನತೆ ದಬ್ಬಾಳಿಕೆ, ವಿರುದ್ದ ಸಿಡಿದೆದ್ದು, ಸಂಘಟಿತರಾಗಿ ಹೋರಾಡುವ ಮೂಲಕ ಎಲ್ಲಾ ವರ್ಗಗಳ ಸ್ತ್ರೀಯರ ಘನತೆ, ಗೌರವ ಹೆಚ್ಚಳಕ್ಕೆ ಕಾರಣವಾಗುವ ಮಂದಗತಿಯ ಸುಧಾರಣೆಯ ಮೆಟ್ಟಿಲು ಎರುತ್ತಿರುವುದು ಸಮಾಧಾನಕರ ವಿಷಯವಾಗಿದೆ.