ಕನ್ನಡ ವಿಶ್ವವಿದ್ಯಾಲಯವು ೧೯೯೨ರಲ್ಲಿ ಸ್ಥಾಪನೆಯಾಗಿ ಇಂದಿನವರೆಗೆ ಕನ್ನಡ ನಾಡು-ನುಡಿ ಸಂಸ್ಕೃತಿಗೆ ತನ್ನ ಅಭೂತಪೂರ್ವ ಕೊಡುಗೆಯನ್ನು ನೀಡಿದೆ. ಹೀಗೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆದು ಬರಲು ಅಧ್ಯಯನ ವಿಭಾಗ, ಪೀಠಗಳು ಪ್ರಾರಂಭವಾದವು. ಇಂಥ ಅಧ್ಯಯನ ಪೀಠಗಳಲ್ಲಿ ವಾಲ್ಮೀಕಿ ಅಧ್ಯಯನ ಪೀಠವು ಒಂದು. ಇದು ೨೦೦೩ರಲ್ಲಿ ಸ್ಥಾಪನೆಯಾಯಿತು. ಇದರ ಆಶಯವು ಸ್ಪಷ್ಟವಾಗಿ ವಾಲ್ಮೀಕಿ ಮತ್ತು ರಾಮಾಯಣ ಹಾಗೂ ವಾಲ್ಮೀಕಿ ಸಮುದಾಯವನ್ನು ಕುರಿತು ಅಧ್ಯಯನ, ಸಂಶೋಧನೆ ಮಾಡುವುದರ ಜೊತೆಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದಾಗಿರುತ್ತದೆ. ವಾಲ್ಮೀಕಿ ಒಬ್ಬ ಐತಿಹಾಸಿಕ ವ್ಯಕ್ತಿ. ಮಹರ್ಷಿಯಾಗಿ, ಆದಿಕವಿಯಾಗಿ ಈ ದೇಶದ ನಾಗರಿಕತೆ ಮತ್ತು ಸಂಸ್ಕೃತಿಯ ಸ್ಥಾಪಕ ಹರಿಕಾರರಾಗಿ ಕಂಡುಬರುತ್ತಾರೆ. ವಾಲ್ಮೀಕಿ ಬಿಟ್ಟು ಹೋಗಿರುವ ಆದರ್ಶಗಳು, ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ. ಈ ಕುರಿತು ದೇಶದಾದ್ಯಂತ ಚಿಂತನೆಗಳು ನಡೆದಿವೆ ಸದಾ ನಡೆಯುತ್ತಲಿವೆ. ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ, ದಕ್ಷಿಣ ಭಾರತದಲ್ಲಿ ವಾಲ್ಮೀಕಿ ಮತ್ತು ರಾಮಾಯಣದ ಬಗ್ಗೆ ಜನರಲ್ಲಿ ಏಕಾಭಿಪ್ರಾಯವಿಲ್ಲ. ತುಳಸಿ ರಾಮಾಯಣ, ಕಂಬ ರಾಮಾಯಣ, ಕುವೆಂಪು ರಾಮಾಯಣದರ್ಶನಂ, ವೀರಪ್ಪ ಮೊಯಿಲಿ ರಾಮಾಯಣ ಮಹಾನ್ವೇಷಣಂ ಹೀಗೆ ಯಾವ ಕವಿ ಕಾವ್ಯ ಬರೆದನೋ ಆತನ ಹೆಸರಿನಿಂದಲೇ ರಾಮಾಯಣಕ್ಕೆ ಕೀರ್ತಿ ಹೆಚ್ಚಾಯಿತು. ಹಾಗಾಗಿ ಸದಾ ಗೊಂದಲದಲ್ಲಿ ಕಥಾ ಸನ್ನಿವೇಶಗಳನ್ನು ವಿಶ್ಲೇಷಿಸಲಾಗಿದೆ. ವಾಲ್ಮೀಕಿ ರಚಿಸಿದ ಮೂಲರಾಮಾಯಣ ದೊರೆಯದೆ ಇರುವ ಕಾರಣ ಈ ರೀತಿ ಭಿನ್ನ ಕಥೆಗಳು ಹುಟ್ಟಲು ಕಾರಣವಾಗಿರಬೇಕು ಅಥವಾ ಮೇಲ್ವರ್ಗಗಳು ಶೂದ್ರರನ್ನು ಮಟ್ಟಹಾಕಲು ಹುನ್ನಾರದಿಂದ ವಾಲ್ಮೀಕಿ ರಾಮಾಯಣವನ್ನು ತಮ್ಮ ಜಾತಿ, ಧರ್ಮ, ಸಂಸ್ಕೃತಿಗೆ ತಕ್ಕಂತೆ ರೂಪಿಸಿಕೊಂಡಿರಬೇಕು. ಈ ಕಾರಣವಾಗಿ ಜಾತಿ-ಜಾತಿಗಳಲ್ಲಿ, ಧರ್ಮ-ಸಂಸ್ಕೃತಿಗಳಲ್ಲಿ ವೈರುಧ್ಯಗಳು, ಸಂಘರ್ಷಗಳು ಆರಂಭವಾಗಿ ತಾನು ಮೇಲು ತಾನು ಕೀಳು ಎಂಬ ಭಾವನೆ ಇಂದಿಗೂ ನಡೆಯುತ್ತಿದೆ.

ಈ ಎಲ್ಲ ಕಾರಣಗಳಿಂದ ಭಾರತ ಮತ್ತು ನೆರೆಹೊರೆಯ ದೇಶಗಳಲ್ಲಿ ಪ್ರಚಲಿತವಿರುವ ರಾಮಾಯಣ ಮಹಾಕಾವ್ಯದ ಬಗ್ಗೆ ವಿವರಗಳನ್ನು ಸಂಗ್ರಹಿಸುವ ಅಗತ್ಯವಿದೆ. ಸಹಸ್ರಾರು ಕೃತಿಗಳು ಈ ಬಗ್ಗೆ ಬೆಳಕು ಚೆಲ್ಲಿದರೂ ಇನ್ನು ಸಂಶೋಧನೆ-ಅಧ್ಯಯನಗಳು ನಡೆಯುತ್ತಲಿವೆ. ನಾವು ಸಹಾ ವಾಲ್ಮೀಕಿ ಮತ್ತು ರಾಮಾಯಣ ಕುರಿತು ಅನೇಕ ಬಗೆಯಲ್ಲಿ ಚಿಂತಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಬೇಡ (ವಾಲ್ಮೀಕಿ) ಬುಡಕಟ್ಟಿನ ಚರಿತ್ರೆ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣವನ್ನು ೧೬ ಮತ್ತು ೧೭ ಆಗಸ್ಟ್ ೨೦೦೬ ರಂದು ಕೂಡ್ಲಿಗಿಯಲ್ಲಿ ನಡೆಸಲಾಯಿತು. ಎರಡು ದಿನಗಳ ಕಾಲ ನಡೆದ ಈ ವಿಚಾರ ಸಂಕಿರಣದಲ್ಲಿ ನಾಲ್ಕು ಗೋಷ್ಠಿಗಳು ಒಂದು ಸಂವಾದ ಕಾರ್ಯಕ್ರಮ ಜರುಗಿತು. ಸುಮಾರು ನಲವತ್ತು ಜನಕ್ಕು ಹೆಚ್ಚು ವಿದ್ವಾಂಸರು, ಸಹಸ್ರಾರು ಜನ ಕೇಳುಗರು ಆಗಮಿಸಿದ್ದರು. ಮಹರ್ಷಿ ವಾಲ್ಮೀಕಿ ಬಿಟ್ಟು ಹೋಗಿರುವ ಆದರ್ಶಗಳು, ಮಾನವೀಯ ಮೌಲ್ಯಗಳನ್ನು ಕುರಿತು ಚರ್ಚಿಸಲಾಯಿತು. ಬೇಟೆ, ಪಶು ಪಾಲನೆ, ಸಮುದಾಯಗಳ ಚರಿತ್ರೆ ರಚನೆ ಇಂದು ನಡೆಯಬೇಕಾಗಿದೆ. ಎಷ್ಟೋ ಅಲಕ್ಷಿತ, ಶೋಷಿತ ಸಮುದಾಯಗಳು ಈ ನಾಡು-ನುಡಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರೂ  ಚರಿತ್ರೆಯಲ್ಲಿ ಅವರು ದಾಖಲಾಗಿಲ್ಲ. ಹೀಗೆ ಬೇಡ, ನಾಯಕ, ವಾಲ್ಮೀಕಿ ಬುಡಕಟ್ಟಿನ ಚರಿತ್ರೆ ಕೂಡ ನಿರ್ಲಕ್ಷೆಗೊಳಗಾಗಿದೆ. ಭವ್ಯವಾದ ಚಾರಿತ್ರಿಕ ಪರಂಪರೆ ಪಡೆದ ಈ ಸಮುದಾಯ ವಿವಿಧ ರಾಜ್ಯ-ಸಂಸ್ಥಾನಗಳಲ್ಲಿ  ತಳವಾರರಾಗಿ, ಸೈನಿಕರಾಗಿ, ಪಾಳೆಯಗಾರರಾಗಿ ಆಳ್ವಿಕೆ ನಡೆಸಿರುವುದು ಸ್ಮರಣೀಯ. ಮೌರ್ಯ ಸಾಮ್ರಾಜ್ಯ, ವಿಜಯನಗರ ಪೂರ್ವ- ನಂತರ ಹಾಗೂ ಬ್ರಿಟಿಷರ ಕಾಲದವರೆಗಿನ ಇವರ ಚಾರಿತ್ರಿಕ ಸನ್ನಿವೇಶಗಳನ್ನು ಇಲ್ಲಿ ಬೆಳಕಿಗೆ ತರುವ ಪ್ರಯತ್ನವನ್ನು ವಿವಿಧ ಲೇಖಕರು ಮಾಡಿದ್ದಾರೆ. ವಾಸ್ತವಕ್ಕೆ ಹತ್ತಿರವಾದ ಸಂಗತಿಗಳ ಮೂಲಕ ಇಲ್ಲಿನ ವಿಷಯಗಳ ನಿರೂಪಣೆ, ಚರಿತ್ರೆ ಪುನರ್‌ರಚನೆಗೆ ಆಸ್ಪದ ನೀಡಿದಂತಾಗಿದೆ. ಈ ಒಂದು ಕಾರ್ಯವನ್ನು ಮಾಡಲು ಪ್ರೋಹಿಂದಿನ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ, ಶ್ರೀ ಬಿ. ಶ್ರೀರಾಮುಲು, ಮಂತ್ರಿಗಳು, ಶ್ರೀ ತಿಪ್ಪೇಸ್ವಾಮಿ, ಶಾಸಕರು, ಚಳ್ಳಕೆರೆ, ಶ್ರೀ ಎನ್.ಟಿ. ಬೊಮ್ಮಣ್ಣ, ಮಾಜಿಶಾಸಕರು, ಕೂಡ್ಲಿಗಿ, ಶ್ರೀ ಟಿ. ಸೋಮಪ್ಪ, ಮಾಜಿಶಾಸಕರು, ಕೂಡ್ಲಿಗಿ, ಪ್ರೊ. ಸುಕನ್ಯಾ ಮಾರುತಿ, ಧಾರವಾಡ, ಪ್ರೊ. ಆರ್. ರಾಜಣ್ಣ, ಮೈಸೂರು, ಕೂಡ್ಲಿಗಿಯ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಕೆ. ಮಲ್ಲಣ್ಣ, ಈ ಕೃತಿಯ ಎಲ್ಲಾ ಲೇಖಕರಿಗೆ ಹಾಗೂ ಈ ವಿಚಾರ ಸಂಕಿರಣಕ್ಕೆ ಆಗಮಿಸಿದ, ಪ್ರೋಎಲ್ಲಾ ಹಿತೈಶಿಗಳಿಗೆ ಕೃತಜ್ಞತೆಗಳು.

ವಿಚಾರ ಸಂಕಿರಣದ ಲೇಖನಗಳನ್ನು ಒಂದೆಡೆ ಸಂಕಲಿಸಿ ಪ್ರಕಟಿಸಿಲು ಪ್ರೋನೆಚ್ಚಿನ ಕುಲಪತಿಗಳಾದ ಪ್ರೊ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಮುಖಪುಟ ವಿನ್ಯಾಸಗಾರರಾದ ಶ್ರೀ ಕೆ.ಕೆ. ಮಕಾಳಿ, ಅಕ್ಷರ ಸಂಯೋಜನೆ ಮಾಡಿದ ವಿದ್ಯಾರಣ್ಯ ಗಣಕ ಕೇಂದ್ರ ಜೆ. ಶಿವಕುಮಾರ, ಮೊದಲಾದ ಅನೇಕ ಮಹನೀಯರಿಗೆ ಮತ್ತೊಮ್ಮೆ ಕೃತಜ್ಞತೆಗಳನ್ನು ಹೇಳಬಯಸುತ್ತೇನೆ.

ಡಾ. ವಿರೂಪಾಕ್ಷಿ ಪೂಜಾರಹಳ್ಳಿ