ಕರ್ನಾಟಕ ರಾಜ್ಯದಲ್ಲಿ ಇರುವ ನಾಯಕ ಸಮುದಾಯದ ಜನಸಂಖ್ಯೆ ಸುಮಾರು ೬೫ ಲಕ್ಷ. ಇಂಥ ಒಂದು ಜಾತಿ ೧೯೯೧ರ ಜನಗಣತಿ ವರದಿ ಪ್ರಕಾರ ಕೇವಲ ೨೦ ಲಕ್ಷದಷ್ಟು, ಮಾತ್ರ, ಇದನ್ನು ಜಾತಿಯ ಬುದ್ದಿಜೀವಿಗಳು ಒಪ್ಪಿಕೊಂಡಿಲ್ಲ. ಏಕೆಂದರೆ ಈ ಗಿರಿಜನರ ಜನಸಂಖ್ಯೆಯನ್ನು ಕೆಲವು ನರಿಜನರು ನಿಖರವಾಗಿ ದಾಖಲು ಮಾಡಿಲ್ಲ ಎಂಬುದು ಜನಾಂಗದ ಹಿರಿಯರ ವಾದ ಇರಲಿ, ಸ್ವಾತಂತ್ರ್ಯಾನಂತರದಲ್ಲಿ ಇವರಲ್ಲಿ ಸಾಕಷ್ಟು ಸುಧಾರಣೆ ಆದದ್ದೂ ನಿಜ.ಆದರೆ ಇವತ್ತು ಗ್ರಾಮಗಳಲ್ಲಿ ವಾಸಿಸುವ ಇವರ ಪರಿಸ್ಥಿತಿ ನಿರೀಕ್ಷಿಸಿದ ಮಟ್ಟದಲ್ಲಿ ಬದಲಾವಣೆಗೊಂಡಿಲ್ಲ. ಆರ್ಥಿಕ ಬೆಂಬಲವಿಲ್ಲದೆ, ಶಿಕ್ಷಣದ ಬೆಂಬಲವಿಲ್ಲದೆ ರಾಜಕೀಯವಾಗಿ ಅರಿವು ಮಾರ್ಗದರ್ಶನಗಳ ನೆರವಿಲ್ಲದೆ ಬವಣೆ ಅನುಭವಿಸುತ್ತಿದ್ದಾರೆ. “ಖಡ್ಗ ಹಿಡಿದ ಕೈಗಳು ಪೆನ್ನು ಹಿಡಿಯಬೇಕು” ಎನ್ನುವ ಸಮಷ್ಟಿ ಪ್ರಜ್ಞೆ ಬರಬೇಕಾಗಿದೆ.

ಕೇವಲ ವಾಲ್ಮೀಕಿ ಜಯಂತಿ, ಸಭೆ, ಸಮಾರಂಭಗಳಷ್ಟೇ ಸಂಘಟನೆಯಲ್ಲಿ ಪ್ರಯೋಜನ ಕಾರಿಯಲ್ಲ. ಆವೇಶಭರಿತವಾದ ಮಾತುಗಳಿಂದ ನ್ಯಾಯ ದೊರೆಯುವುದಿಲ್ಲ. ಪ್ರಾದೇಶಿಕ ವಾಗಿ ಬೇಡರಲ್ಲಿ ಬೇರೂರಿರುವ ತಾರತಮ್ಯವನ್ನು ಗುರುತಿಸಲಾಗುತ್ತಿಲ್ಲ. ಈ  ಇವರಿಗಾಗಿ ಪ್ರತ್ಯೇಕವಾದ ಯಾವುದೇ ಸಂಸ್ಥೆ, ಆಯೋಗ ಅಥವಾ ಅಭಿವೃದ್ದಿ ನಿಯಮಗಳು ಇಲ್ಲ. ಆದರೆ ಜಾತಿಯ ಬಗ್ಗೆ ಕಳಕಳಿ ಇರುವ ಕೆಲವೆ ಈ ಸಮಾಜದ ಹಿರಿಯರು, ಮುಖಂಡರು, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪ್ರಯತ್ನ ನಿರಂತರವಾಗಿ ಸಾಗಿರುವುದುಂಟು. ಯಾವ ಪಕ್ಷ ತಮ್ಮ ಜಾತಿಗೆ ಗರಿಷ್ಠ ಪ್ರಾತಿನಿಧ್ಯ ನೀಡುತ್ತವೆಯೋ ಆ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಮಹಾಸಂಘ ಹಲವಾರು ಬಾರಿ ಕರೆಕೊಟ್ಟಿದೆ. ಯಾವುದೇ ಪಕ್ಷವಿರಲಿ ಆದರೆ ಒಂದು ಎಚ್ಚರಿಕೆಯ ಮನವಿಯನ್ನು ಜನಾಂಗದ ರಾಜಕಾರಣಿ ಗಳಿಗೆ ನೀಡಿದ್ದನ್ನು ನೋಡಬಹುದು.

“ಸಹಸ್ರಾರು ವರುಷಗಳಿಂದಲೂ ಅತ್ಯಂತ ಉತ್ಸಾಹಿ ಸಮುದಾಯವೆಂದು ಪ್ರಖ್ಯಾತ ವಾಗಿದ್ದು ವೀರಜೀವನ ನಡೆಯಿಸಿ ಬಯಲು ಹುಲಿಗಳಾಗಿ ಚರಿತ್ರೆಯಲ್ಲಿ ಹೆಸರು ಮಾಡಿರುವ ನಮ್ಮ ಪೂರ್ವಪಿತೃಗಳ ಧವಳ ಕೀರ್ತಿಗೆ ಕಳಂಕ ತರಬೇಡಿರೆಂದು ನಮ್ಮ ಕಳಕಳಿಯ ಪ್ರಾರ್ಥನೆ”. ಎಂದು ಸಮುದಾಯದ ಸ್ವಾಭಿಮಾನವನ್ನು ಮರೆಯಬಾರದು ಎನ್ನುವ ಇವರ ಹಿನ್ನೆಲೆಯಿಂದ ಬಂದ ಕೆಲವು ರಾಜಕೀಯ ಕ್ಷೇತ್ರದ ವ್ಯಕ್ತಿ ಚಿತ್ರಣ ಅವರ ಸಾಧನೆ ಕುರಿತು ಅವಲೋಕಿಸಿದಾಗ ಮುಖ್ಯವಾಗಿ ನಾಯಕರ ರಾಜಕೀಯ ಪ್ರವೇಶವನ್ನು  ಈ ವಿವರಿಸಬಹು ದಾಗಿದೆ.

ಸುರಪುರದ ರಾಜ ಪಿಡ್ಡನಾಯಕ

ಸುರಪುರದ ರಾಜ ವಂಶಜರಾದ ರಾಜಾ ಪಿಡ್ಡನಾಯಕ ಇವರು ಅತ್ಯಂತ ಕೋಮಲ ಹೃದಯದ ಮುಗ್ಧ ಸ್ವಭಾವದವರಾಗಿದ್ದರು. ಇವರು ಸುರಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೨೦ ವರ್ಷಗಳ ಕಾಲ ಶಾಸಕರಾಗಿ ಸೇವೆಸಲ್ಲಿಸಿದ್ದಾರೆ. ೧೯೯೨ರಲ್ಲಿ  ಇವರು ಮರಣ ಹೊಂದಿದರು. ಆದರೆ ಇವರ ಅಧಿಕಾರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಕೆಲಸ ಕಾರ್ಯಗಳು ಈ ಸಮುದಾಯದ ಅಭಿವೃದ್ದಿಗೆ ಗಮನ ಹರಿಸಲಿಲ್ಲ ಎನ್ನುವುದು ಇಲ್ಲಿ ಮುಖ್ಯ.

ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ

ಇವರು ಹೈದ್ರಾಬಾದಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ, ಉಚ್ಛ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿ ಅಲ್ಲಿಂದ ಬ್ಯಾರಿಸ್ಟರ್ ಪದವಿ ಪಡೆದು ಹೈದ್ರಾಬಾದ್ ನಿಜಾಮರ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿರುವಾಗಲೇ ೧೯೪೮ರಲ್ಲಿ ನಿಜಾಮನಿಂದ ಪ್ರೇರಿತನಾದ ಮತಾಂಧ ಕಾಶೀಮು ರಜವಿಯು ನಿಜಾಮ ರಾಜ್ಯದ ಹಿಂದೂ ಪ್ರಜೆಗಳ ಮೇಲೆ ಅನ್ಯಾಯ ಅತ್ಯಾಚಾರವನ್ನು ಪ್ರಾರಂಭಿಸಿದಾಗ ತಮ್ಮ ವಕೀಲಿ ವೃತ್ತಿಯನ್ನು ಬಿಟ್ಟು ಹೈದ್ರಾಬಾದ್ ವಿಮೋಚನಾ ಚಳುವಳಿಯ ನೇತೃತ್ವವನ್ನು ವಹಿಸಿ ಜನರ ರಕ್ಷಣೆಗಾಗಿ ತಾಳಿಕೋಟೆಯಲ್ಲಿ ತರುಣರ ಕ್ಯಾಂಪನ್ನು ಪ್ರಾರಂಭಿಸಿದರು. ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲ್ ಹಾಗೂ ಕೃಷ್ಣ ಮೆನನ್, ಜೊತೆ ಗರಿಷ್ಠ ಸಂಬಂಧ ಹೊಂದಿದ್ದು, ಹೈದ್ರಾಬಾದ್ ವಿಮೋಚನೆಗಾಗಿ ಕೇಂದ್ರ ಸರಕಾರ, ಮಿಲಿಟರಿ ಕಾರ್ಯಚರಣೆ ನಡೆಸಬೇಕೆನ್ನುವ ಇವರ ಪ್ರಯತ್ನದಲ್ಲಿ ಯಶಸ್ವಿಯಾಗಿ ನಿಜಾಮನಿಂದ ಹೈದ್ರಾಬಾದ್ ಪ್ರಾಂತ್ಯವನ್ನು ಸ್ವತಂತ್ರಗೊಳಿಸಿ ಸ್ವಾತಂತ್ರ್ಯ ಹೋರಾಟಗಾರರ ಕೀರ್ತಿಗೆ ಪಾತ್ರರಾದವರು. ೧೯೬೭ರಲ್ಲಿ ಒಂದೇ ಸಲಕ್ಕೆ ಸಂಸದ ಹಾಗೂ ವಿಧಾನಸಭೆಗೆ ಆಯ್ಕೆಯಾಗಿ ಒಂದು ಹೊಸ ದಾಖಲೆಯನ್ನೇ ಸ್ಥಾಪಿಸಿ ನಂತರ ವಿಧಾನಸಭೆಗೆ ರಾಜೀನಾಮೆ ನೀಡಿ ಸಂಸದ ಸದಸ್ಯನಾಗಿ ಸೇವೆಸಲ್ಲಿಸಿದ್ದಾರೆ. ಇವರಿಗೆ ತಮ್ಮ ಜಾತಿಯ ಬಗ್ಗೆ ಅಪಾರವಾದ ಕಳಕಳಿ ಇತ್ತು ಇವರು ಸ್ವಾಭಿಮಾನದಿಂದ ಬದುಕಿದವರು.

ಬಿಳಿಚೋಡು ಭೀಮಪ್ಪನಾಯಕರು

ಬಿಳಿಚೋಡು ಅಂದಿನ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಹೋಬಳಿಗ್ರಾಮ. ಇಂದು ದಾವಣಗೆರೆ ಜಿಲ್ಲೆಯಲ್ಲಿದೆ. ಇತಿಹಾಸ ಪ್ರಸಿದ್ಧವಾದ ಊರು ಜೊತೆಗೆ ಚಿತ್ರದುರ್ಗದ ಪಾಳೆಯಗಾರರ ಕೇಂದ್ರಸ್ಥಾನ. ಚಿತ್ರದುರ್ಗದ ಪಾಳೆಯಗಾರ ದೈವಭಕ್ತ ಬಿಚ್ಚುಗತ್ತಿ ಭರಮಣ್ಣ ನಾಯಕರ ಹುಟ್ಟು ಊರು. ಇಂಥ ಊರಿನ ಸುಸಂಸ್ಕೃತ ಮನೆತನದಲ್ಲಿ ಜನಿಸಿದವರು ವಕೀಲ ಭೀಮಪ್ಪನಾಯಕರು. ದೊಡ್ಡ ನಿಲುವಿನ ಅಜಾನು ಬಾಹುವಿನ ಕಾಂತಿಯುಕ್ತ ಮುಖಭಾವದ ಭೀಮಪ್ಪನಾಯಕರು ಅಂದಿನ ಕಾಲಕ್ಕೆ ಸ್ವತಂತ್ರ ಚಳುವಳಿಯಲ್ಲಿ ಧುಮುಕಿ ಸುಭಾಷ ಪಂಥದ ನೇತಾರರು ಎಂದು ಪ್ರಸಿದ್ದಿ ಹೊಂದಿದವರು. ದೀನ ದುರ್ಬಲರ ಮೇಲೆ ಅಪಾರವಾದ ಕಳಕಳಿಯನ್ನು ಹೊಂದಿದವರು. ನೇರ ನಡೆ ನುಡಿಗೆ ನಾಡಿಗೆ ಹೆಸರಾದವರು. ಇವರು ವಕೀಲಿ ವೃತ್ತಿಯಲ್ಲಿ ಅತ್ಯಂತ ಸಲಿಗೆಯಿಂದ ಮಾತಾನಾಡಿಸುವ ಗೆಳೆಯರಾದ ಎಸ್. ನಿಜಲಿಂಗಪ್ಪನವರ ಜೊತೆ ಸೇರಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿ ಬಾರಿ ಬಹುಮತದಿಂದ ಆಯ್ಕೆಯಾದವರು. ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿ ಮಣ್ಣಿನ ಮಗನಾದ ನಾನು ಮೆರವಣಿಗೆಯಲ್ಲಿ ನಾನು ಮೆರೆಯುವುದಕ್ಕಿಂತ ನೆಲದ ಜೀವಗಳಾದ ೨೦೦ ಜೋಡಿ ಎತ್ತುಗಳ ಮೆರವಣಿಗೆ ಮಾಡಿ ಪ್ರಾಣಿ ಪ್ರೀತಿಯನ್ನು ಮೆರೆದವರು. ಇವರು ಸದಾ ಪಾದರಸದಂತೆ ವ್ಯಕ್ತಿತ್ವ, ನ್ಯಾಯ ನಿಷ್ಟುರಿ ವಿಧಾನ ಸಭೆಯಲ್ಲಿ ನಿಷ್ಟ, ಗೌರವ, ುದ್ಧತನಕ್ಕೆ ಹೆಸರಾದವರು. ಎಂತಹ ಹಿರಿಯರೇ ರಾಜಕಾರಣಿಗಳೇ ಇರಲಿ ಇವರನ್ನು “ನಾಯಕರೇ”, “ದುರ್ಗದ ದೊರೆಗಳೇ” ಎಂದು ಅತ್ಯಂತ್ಯ ಗೌರವ ಪ್ರೀತಿಯಿಂದ ಕರೆಯುತ್ತಿದ್ದುಂಟು. ಪಕ್ಷದಲ್ಲಿ ಇವರಿಗೆ ಬಹಳ ಗೌರವ ಭಾವನೆಯಿತ್ತು. ಇಂದಿರಾಗಾಂಧಿಯವರೆ ಭೀಮಪ್ಪನಾಯಕರ ವ್ಯಕ್ತಿತ್ವ ಗಮನಿಸಿ ಸ್ವಾಗತಿಸಿ ಪಕ್ಷದ ಆಗೂ ಹೋಗುಗಳ ಬಗ್ಗೆ ಚರ್ಚಿಸುವಷ್ಟು ಭಾಷೆ, ಜ್ಞಾನ ಮತ್ತು ಹಿರಿತನವನ್ನು ಉಳಿಸಿಕೊಂಡು ಬಂದವರು.

ನಾಯಕ ಸಮುದಾಯವನ್ನು ಎಸ್.ಟಿ. (ಪರಿಶಿಷ್ಟ ಪಂಗಡಕ್ಕೆ)ಗೆ ಸೇರಿಸಲು ರಾಜ್ಯದ್ಯಾಂತ ಸುದ್ದಿಯಾದಾಗ ಮುಂದುವರೆದ ಕೆಲಶಕ್ತಿಗಳು ಇದನ್ನು ವಿರೋಧಿಸಿದಾಗ ರಾಜರು, ದೊರೆಗಳು ಇವರಿಗೆ ಮೀಸಲಾತಿ ಕೊಡಬಾರದೆಂದು ಇಲ್ಲಸಲ್ಲದ ಆರೋಪಗಳು ಬಂದಾಗ ಭೀಮಪ್ಪನಾಯಕರು, ರಾಜ್ಯಮಟ್ಟದ ನಾಯಕ ಜನಾಂಗದ ಸಭೆ ಕರೆದು ಸಭೆಯಲ್ಲಿ ನಾವು ೭೮ ಪಾಳೆಯ ಪಟ್ಟುಗಳನ್ನು ಆಳಿದ ನಮಗೆ ಕೋಟೆ ಕೊತ್ತಲುಗಳನ್ನು ಕಟ್ಟಿದ ನಮ್ಮ ಜನಾಂಗಕ್ಕೆ ತಮ್ಮ ಜೀವನವನ್ನು ಹೇಗೆ ನಡೆಸಬೇಕೆಂದು ಗೊತ್ತು. ಇಲ್ಲ ಸಲ್ಲದವರ ಕೈಯಲ್ಲಿ ನಮ್ಮ ಪೂರ್ವಿಕರ ಕೀರ್ತಿಗೆ ಧಕ್ಕೆ ಬರದಂತೆ ಬದುಕಬೇಕು ಅವರು ಕೊಡುವ ಮೀಸಲಾತಿ ಯಾವನಿಗೆ ಬೇಕು ನಮಗೆ ಬೇಡ ಎಂದು ಖಂಡತುಂಡಾಗಿ ನಿರಾಕರಿಸಿದರು. ನೂರಾರು ಯುವಕರನ್ನು ಉರಿದುಂಬಿಸಿ ರಾಜಕೀಯ ಕ್ಷೇತ್ರದಲ್ಲಿ ಬೆಳೆಸಿದರು. ಬೇಡರು ಎಂದರೆ ಎಂದು ಯಾವತ್ತೂ ಯಾರನ್ನು ಬೇಡರು ಏನಿದ್ದರೂ ಸ್ವಬಲದ ಮೇಲೆಯೇ ಪಡೆಯಬೇಕು ಎನ್ನುವ ದಿಟ್ಟತನದ ಸ್ವಾಭಿಮಾನಿ ಅವರಾಗಿದ್ದರು.

ಜಗಳೂರು ತಾಲ್ಲೂಕಿನ ನಾಯಕ ಮುಖಂಡರು ತಿಪ್ಪೇರುದ್ರ ಸ್ವಾಮಿ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಎಸ್.ಬಿ. ತಿಪ್ಪನಾಯಕರ ಮಾತಿನಲ್ಲಿ ಹೇಳುವುದಾದರೆ ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಶಿಕ್ಷಣ ಕೊರತೆಯಿಂದ ಅಜ್ಞಾತವಾಗಿ ಬದುಕುತ್ತಿದ್ದ ನಾಯಕ ಜಾತಿಯ ಮೇಲೆ ಮುಂದುವರೆದ ಕೋಮಿನ ಜನಗಳು ದೌರ್ಜನ್ಯ ಎಸಗುತ್ತಿದ್ದರು. ಅದನ್ನು ಸಹಿಸಲಾರದ ಬೇಡ ಜಾತಿಯ ತಿಪ್ಪನಾಯಕರು, ಹೀರೇಮಲ್ಲನಹೊಳೆ ಸಿದ್ದಬಸಪ್ಪ ನಾಯಕರು ಜೊತೆಗೂಡಿ ವಕೀಲರಾಗಿದ್ದ ಭೀಮಪ್ಪ ನಾಯಕರಿಗೆ ತಮ್ಮ ಕಷ್ಟವನ್ನು ಹೇಳಿದಾಗ ಭೀಮಪ್ಪ ನಾಯಕರು ತಿಪ್ಪನಾಯಕರನ್ನು ಸಿದ್ದಬಸಪ್ಪ ನಾಯಕರನ್ನು ತಮ್ಮ ಕೋಣೆಯಿಂದ ಹೊರಗೆ ಕರೆದು ಚಿತ್ರದುರ್ಗದ ಕೋಟೆಯನ್ನು ತೋರಿಸುತ್ತಾ ನೋಡಿ ಇಂತಹ ಕೋಟೆಯನ್ನು ಕಟ್ಟಿದ ವೀರಜಾತಿಯಲ್ಲಿ ಜನಿಸಿ ನಿಮಗೆ ಬೇರೆಯವರು ಬಂದು ನಿಮ್ಮ ಮೇಲೆ ಕೈ ಮಾಡುತ್ತಾರೆ ಎಂದರೆ ನಿಮಗೆ ನಾಚಿಕೆಯಾಗುವುದಿಲ್ಲವೆ.

ನೀವು ಊರಿಗೆ ಹೋಗಿ ಮೊದಲು ಸ್ವಾಭಿಮಾನದಿಂದ ಸಂಘಟಿತರಾಗಿ ಬೇದಭಾವ ಮರೆತು ಒಂದಾಗಿ ಎಂದು ಸ್ವತಹ ಕಾನನಕಟ್ಟೆಗೆ ಹೋಗಿ ಜನರನ್ನು ಜಾಗೃತಗೊಳಿಸಿ ಅವರಿಗೆ ಶಿಕ್ಷಣದ ಮಹತ್ವ ಹೇಳಿ ತಿಳಿಸಿ ಶಾಲ, ಕಾಲೇಜು ತೆರೆದು ಓದುವುದಕ್ಕೆ ನೆರವು ನೀಡಿದರು. ಕೊನೆಗೆ ಎಸ್.ಬಿ. ತಿಪ್ಪನಾಯಕರು ಪ್ರಥಮ ದರ್ಜೆ ಕಾಲೇಜು, ಹಾಸ್ಟಲ್‌ಗಳನ್ನು ಸ್ವತಹ ಸ್ಥಾಪಿಸಿ ಜಿಲ್ಲೆಯಲ್ಲಿ ಮಾದರಿಯನ್ನಾಗಿ ಮಾಡಲು ಭೀಮಪ್ಪನಾಯಕರು, ಹೋ.ಚಿ. ಬೋರಯ್ಯನವರು ಸಹಕರಿಸಿದರು ಎಂದು ಹೇಳುತ್ತಾರೆ. ಇಂತಹ ಕಷ್ಟಗಳನ್ನು ಬಹಳ ಅರಿತು ಭೀಮಪ್ಪನಾಯಕರು ಒಬ್ಬ ವಾಲ್ಮೀಕಿ ಜನಾಂಗದ ಧೀಮಂತ ನಾಯಕ, ಇವರ ಮನೆತನಕ್ಕೆ ವಕೀಲರ, ಅಂಚೆ ಮನೆಯೆಂದೆ ಜಿಲ್ಲೆಗೆ ಇವತ್ತೂ ಪ್ರಸಿದ್ದಿ.

ಹೋ.ಚಿ. ಬೋರಯ್ಯನವರು

ಚಿತ್ರದುರ್ಗದಲ್ಲಿ ವಕೀಲರಾಗಿದ್ದ ಬೋರಯ್ಯನವರು ಮೂಲತಃ ಶಾಂತ ಸ್ವಭಾವದವರು. ವಕೀಲ ವೃತ್ತಿಯಲ್ಲಿ ಹೆಸರುಗಳಿಸಿ ಇವರು ಅಪ್ಪಟ ಗಾಂಧಿ ವಾದಿಗಳು. ಇವರು ರಾಜಕೀಯ ರಂಗ ಪ್ರವೇಶಿಸಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ವಿಧಾನ ಸಭೆ ಚುನಾವಣೆಗೆ ನಿಂತು ವಿಜಯ ಸಾಧಿಸಿ ಶಾಸಕರಾಗಿ ವೈಯಕ್ತಿಕ ವರ್ಚಸ್ಸಿನಿಂದ ಸಚಿವರಾಗಿ ನಾಡಿಗೆ ಹೆಸರಾದವರು. ಬಡವರ ಪಾಲಿಗೆ ದುರ್ಗದ ಜನತೆಗೆ ಇವರು ಗಾಂಧಿಯಂತೆ ಕಂಡವರು. ತಮ್ಮ ಉಸಿರು ಇರುವವರೆಗೆ ಕೈ ಬಾಯಿಯನ್ನು ಶುದ್ಧವಾಗಿಟ್ಟುಕೊಂಡ ಸಿದ್ಧಹಸ್ತರು. ಹಿಂದುಳಿದ ಜಾತಿಗಳ ಶಿಕ್ಷಣ, ಸಾಮಾಜಿಕ ಬೆಳವಣಿಗೆಯನ್ನು ಮಾಡಲು ಶಕ್ತಿ ಮೀರಿ ಶ್ರಮಿಸಿದವರು. ರಾಜ್ಯದಲ್ಲಿ ಹಿಂದುಳಿದ ಜಾತಿಯ ಯುವಕರಿಗೆ ಶಿಕ್ಷಣ ಸಂಸ್ಥೆ ತೆರೆಯಲು ಪ್ರೋಜೊತೆಗೆ ಬೆಂಬಲವಾಗಿ ನಿಂತವರು. ಅವರ ಪರಿಣಾಮದಿಂದ ಚಿತ್ರದುರ್ಗದ ಬಹಳಷ್ಟು ಶಿಕ್ಷಣ ಸಂಸ್ಥೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಧೀನದಲ್ಲಿ ಇರುವುದನ್ನು ಕಾಣಬಹುದಾಗಿದೆ. ಎಲ್ಲಾ ಜಾತಿಯ ಬಡವರ ಅಭಿವೃದ್ದಿಗೆ ಶ್ರಮಿಸಿದರು. ಅವರನ್ನು ಕಂಡು ನೋಡಿದ ಮುಖಂಡರನ್ನು ದುರ್ಗದ ಹಿರಿಯರನ್ನು ಕೇಳಿದಾಗ ಅವರಿಗೆ ಹೋಲಿಸು ವಂತೆ ರಾಜಕಾರಣಿಗಳು ಇವತ್ತೂ ಯಾರೂ ಇಲ್ಲ ಎಂದೇ ಹೇಳುತ್ತಾರೆ.

ಎಲ್.ಜಿ. ಹಾವನೂರು

ಖ್ಯಾತ ನ್ಯಾಯವಾದಿ ಎಂದು ದೇಶಕ್ಕೆ ಹೆಸರಾದ ಲಕ್ಷ್ಮಣ ಜಿ. ಹಾವನೂರರು ಕರ್ನಾಟಕ ವಾಲ್ಮೀಕಿ ಸಮಾಜದ ರಾಜಕಾರಣಿಗಳಲ್ಲೇ ಮೊತ್ತಮೊದಲ ಕ್ಯಾಬಿನೆಟ್ ಮಂತ್ರಿ. ದೇವರಾಜ ಅರಸು ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಇವರು ಆಫ್ರಿಕಾ ದೇಶದ ಸಂವಿಧಾನದ ಸಮಿತಿಯ ಸದಸ್ಯರು ಹೌದು. ಕರ್ನಾಟಕದಲ್ಲಿ ಅರಸು ಅವರ ಜೊತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಮೂಲಕ ಅವರುಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯನ್ನು ಮೂಡಿಸಲು ಕಾರಣರಾದವರು. ಹಾವನೂರರ ಜ್ಞಾನವನ್ನು ಸಮಾಜ ಮತ್ತು ಕಾನೂನನ್ನು ಅರ್ಥೈಹಿಸಿಕೊಂಡ ವಿಧಾನವನ್ನು ಮನಗಂಡು ಅರಸರು ಹಾವನೂರರನ್ನು ಹಿಂದುಳಿದ ಸಮುದಾಯದ ಅಭಿವೃದ್ದಿಗೆ ಸಂಬಂಧಿಸಿದಂತೆ ಮಹತ್ವದ ಜವಬ್ದಾರಿಯನ್ನು ಹೆಗಲಿಗೆ ಹಾಕಿದರು. ಅವರ ಜೊತೆಯಲ್ಲಿ ಒಂದು ನಿಯೋಗವನ್ನು ರಚಿಸಿ ಹಾವನೂರರ ಅಧ್ಯಕ್ಷತೆಯಲ್ಲಿ, ವೈ. ರಾಮಚಂದ್ರ, ಕೆ.ಆರ್. ಘೇನಿವಾಸಲು ನಾಯ್ಡು, ಕೆ.ಎಸ್. ನಾಗಣ್ಣ, ಎ. ಮಸಣಶೆಟ್ಟಿ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಪಿ.ಟಿ. ಹಬೀಬ್ ಇವರುಗಳನ್ನು ಸದಸ್ಯರನ್ನಾಗಿ ಆಯೋಗಕ್ಕೆ ನೇಮಿಸಲಾಯಿತು. ಮುಖ್ಯವಾಗಿ ಹಾವನೂರು ಆಯೋಗವು ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಸಿದೆ.

೧. ಹಿಂದುಳಿದ ವರ್ಗಗಳ ಆಯೋಗವು “ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಯನ್ನು ಯಾವ ಆಧಾರದ ಮೇಲೆ ನಿರ್ಧರಿಸಬೇಕು ಎಂಬುದರ ಬಗ್ಗೆ ಸಲಹೆ ಕೊಡುವುದು.

೨. ಹಿಂದುಳಿದ ವರ್ಗಗಳ ಪಟ್ಟಿ ತಯಾರಿಸುವುದು.

೩. ಇವುಗಳ ಉನ್ನತಿಗಾಗಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡು ವುದು.

೪. ಹಿಂದುಳಿದ ವರ್ಗಗಳಿಗೆ ಕಲ್ಪಿಸಬೇಕಾದ ಮೀಸಲಾತಿ ಪ್ರಮಾಣದ ಬಗ್ಗೆ ಸಲಹೆ ನೀಡು ವುದು.

ಈ ಆಯೋಗವು ೧೯೩ ಗ್ರಾಮಗಳಲ್ಲಿ ೧೮೫ ನಗರ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ಕೈಗೊಂಡಿತು. ಹಾವನೂರರು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಈ ಕೆಳಕಂಡ ಮಾನದಂಡಗಳನ್ನು ಬಳಸಲಾಗಿದೆ.

೧. ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುವುದು.

೨. ಬಡತನದಿಂದಾಗಿ ಜಮೀನು, ಮನೆ, ಮತ್ತಿತರ ಯಾವುದೇ ಆಸ್ತಿಯನ್ನು ಹೊಂದಲು ಅಸಮರ್ಥರಾಗಿರುವುದು.

೩. ಸಾಮಾಜಿಕವಾಗಿ ನಿಕೃಷ್ಟವಾದ, ಆರ್ಥಿಕವಾಗಿ ಲಾಭದಾಯಕವಲ್ಲದ ವೃತ್ತಿಗಳಲ್ಲಿ ನಿರತರಾಗಿರುವುದು.

೪. ಮೇಲ್ಜಾತಿಯವರಿಂದ ಹೀನಯವಾಗಿ ನಡೆಸಿಕೊಳ್ಳಲ್ಪಟ್ಟವರು.

೫. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಸ್ಥಳಗಳಿಗೆ ಪ್ರವೇಶ ಸಿಗದಂತವರು.

೬. ಉತ್ತಮ ಜಾತಿಯರೊಡನೆ ಸಹಭೋಜನ, ವಿವಾಹ ಹಾಗೂ ಇತರ ಸಹಜೀವನಕ್ಕೆ ಸಾಮಾಜಿಕ ನಿಷೇಧಕ್ಕೆ ಒಳಪಟ್ಟವರು.

೭. ಶಿಕ್ಷಣಕ್ಕೆ ಉತ್ತೇಜನ ಇಲ್ಲದ ಕಾರಣಕ್ಕಾಗಿ ಅನಕ್ಷರಸ್ಥರಾಗಿರುವವರು.

ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿತು. ಅವುಗಳೆಂದರೆ

೧. ಹಿಂದುಳಿದ ಸಮುದಾಯಗಳು

೨. ಹಿಂದುಳಿದ ಜಾತಿಗಳು

೩. ಹಿಂದುಳಿದ ಬುಡಕ್ಟುಗಳು

ಈ ರೀತಿಯಾಗಿ ಸಮಾಜದ ಕೆಳವರ್ಗಗಳಿಗೆ ಅವಿಶ್ರಾಂತವಾಗಿ ದುಡಿದ ಹಾವನೂರರು ಬೇಡ ಸಮುದಾಯದ ಗಣ್ಯರಲ್ಲಿ ಮುಖ್ಯರಾಗಿದ್ದಾರೆ.

ತಿಪ್ಪೇಸ್ವಾಮಿಯವರು

ಚಳ್ಳಕೆರೆಯ ಶಾಸಕರಾಗಿ, ಚಿತ್ರದುರ್ಗದ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ, ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿಯಾಗಿ, ಸಮಾಜವಾದದ ಹಿನ್ನೆಲೆಯಿಂದ, ಬಂದ ತಿಪ್ಪೇಸ್ವಾಮಿಯವರು ಮುಖ್ಯವಾಗಿ ಶಾಂತಪ್ರಿಯರು. ಬಡತನದ ಹಂತದಿಂದ ಬೆಳೆದು ಬಂದವರು. ಅಬಕಾರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಸಚಿವರಾಗಿ ನಾಡಿಗೆ ಸೇವೆ ಸಲ್ಲಿಸಿದವರು. ಈ ಸಮಾಜದ ಬಗ್ಗೆ ಅಪಾರ ಕಳಕಳಿ ಜೊತೆಗೆ ನೋವನ್ನು ಅನುಭವಿಸಿದವರು. ಶತಮಾನಗಳ ಕಾಲ ನಾಯಕರಿಗೆ ಕನಸಾಗಿಯೇ ಉಳಿದಿದ್ದ, ಚಿತ್ರದುರ್ಗದ ದೊರೆ ರಾಜ ವೀರ ಮದಕರಿನಾಯಕರ ಕಂಚಿನ ಪುತ್ತಳಿಯನ್ನು ಚಿತ್ರದುರ್ಗದ ಹೃದಯ ಭಾಗದಲ್ಲಿ ಸ್ಥಾಪಿಸಬೇಕೆಂಬ ಆಸೆಯನ್ನು ಪೂರೈಸಿದವರು. ಕರ್ನಾಟಕದ್ಯಾಂತ ಸುತ್ತುವರೆದು ಸಮಾಜದ ಬೆಳವಣಿಗೆಗೆ ಶ್ರಮಿಸಿದವರು. ಚಳ್ಳಕೆರೆಯಲ್ಲಿ ಭವ್ಯವಾದ ವಾಲ್ಮೀಕಿ ಮಂಗಲ ಮಂದಿರವನ್ನು ನಿರ್ಮಿಸುವಲ್ಲಿ ಕಾರಣಿಭೂತರಾದವರು. ಜೊತೆಗೆ ನಾಡಿನ ಸಮುದಾಯಕ್ಕೆ ಮುಂದೆ ಗುರಿ ಇಲ್ಲ ಹಿಂದೆ ಗುರುವಿಲ್ಲ ಎನ್ನುವುದನ್ನು ಮನಗಂಡು ಹಿರಿಯ ಶಾಸಕರಾದ ಎಂ. ಬಸಪ್ಪನವರನ್ನು ಜೊತೆ ಗೂಡಿಸಿಕೊಂಡು ರಾಜ್ಯಾದ್ಯಾಂತ ಪ್ರವಾಸ ಮಾಡಿ ನಾಯಕ ಸಮಾಜಕ್ಕೆ ಒಂದು ಗುರುಪೀಠವನ್ನು ಮಾಡಬೇಕೆಂದು ತೀರ್ಮಾನ ಮಾಡಿ ಎಲ್ಲಾ ರಾಜಕಾರಣಿಗಳ, ಸಾಹಿತಿಗಳ, ಹಿರಿಯರ, ಗುರುಗಳ, ಅಭಿಪ್ರಾಯವನ್ನು ಸಂಗ್ರಹಿಸಿ ತಮ್ಮ ಕಾರ್ಯಗಳನ್ನು ಬದಿಗೊತ್ತಿ ಹಣಸಂಗ್ರಹಣೆ, ಭೂಮಿ ಖರೀದಿ, ಗುರುಗಳ ನೇಮಕ, ಎಲ್ಲಾ ಜವಾಬ್ದಾರಿಗಳನ್ನು ಸಮಾಜ ಮುಖಂಡರ ಎದುರಲ್ಲಿ ಹಣಕಾಸು ಸಮಿತಿ, ಸ್ವಾಗತ ಸಮಿತಿ, ಪೂಜಾ ಮತ್ತು ಪಟ್ಟಾಭಿಷೇಕ ಸಮಿತಿ, ಸನ್ಮಾನ ಸಮಿತಿ, ಪ್ರಚಾರ ಸಮಿತಿ ರಚಿಸಿ ಶ್ರೀ ವಾಲ್ಮೀಕಿ ನಾಯಕ ಸಮಾಜದ ಶ್ರೀ ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನದ ಗುರು ಪೀಠವನ್ನು ರಾಜನಹಳ್ಳಿ ಹರಿಹರ ತಾಲೂಕು, ಮಧ್ಯನದಿ ದಂಡೆಯಲ್ಲಿ ರಾಜ್ಯದ ಮಂತ್ರಿಗಳ, ಶಾಸಕರ, ಹಿರಿಯರ ಸಮ್ಮುಖದಲ್ಲಿ ದಿನಾಂಕ ೯.೨.೧೯೯೮ರಂದು ಪ್ರಾಂತಃಕಾಲ ೫.೧೫ ಗಂಟೆಯಿಂದ ೬ ಗಂಟೆಯವರೆಗೆ ಪಟ್ಟಾಭಿಷೇಕವು ನೆರೆವೇರಿತು.

ಅಲ್ಲೀಪುರದ ಹನುಮಂತಪ್ಪ

ಬಳ್ಳಾರಿ ಜಿಲ್ಲೆಯ ತಾತರೆಂದು ಪ್ರಖ್ಯಾತರಾಗಿದ್ದ ಅಲ್ಲೀಪುರ ಹನುಮಂತಪ್ಪನವರು ರಾಜ್ಯ ವಾಲ್ಮೀಕಿ ಸಮಾಜದ ಧುರೀಣರು. ಈ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದ್ದವರು  ಸಮಾಜಕ್ಕೆ ಶಿಕ್ಷಣ, ರಾಜಕೀಯ, ಸಾಮಾಜಿಕ ಸ್ಥಿತಿ-ಗತಿಗಳನ್ನು ತಿಳಿಸಿಕೊಟ್ಟ ಹರಿಕಾರ ಈ ಜಾತಿಯ ಅಭಿವೃದ್ದಿಗಾಗಿ ೧. ವಾಲ್ಮೀಕಿ ಶಿಕ್ಷಣ ಸಂಸ್ಥೆ ೨. ವಾಲ್ಮೀಕಿ ಆಶ್ರಮ, ವಾಲ್ಮೀಕಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಮಾದರಿ ವ್ಯಕ್ತಿಯಾಗಿ ಬಾಳಿದವರು. ಯಾವುದೇ ಸ್ವಾರ್ಥವಿಲ್ಲದೆ ಶಾಲೆಗೆ, ಹಾಸ್ಟೆಲ್‌ಗೆ ತಮ್ಮದೇ ಬೆಲೆ ಬಾಳುವ ಭೂಮಿಯನ್ನು ಪುಕ್ಕಟೆಯಾಗಿ ಕೊಟ್ಟವರು. ಅಲ್ಲದೆ ಸಮಾಜದ ಕಳಕಳಿಯಿದ್ದ ಇವರು ಅಲ್ಲೀಪುರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೂ ಊರ ಮುಂದಿನ ಜಾಗವನ್ನು ದಾನವಾಗಿ ಕೊಟ್ಟು ಗ್ರಾಮೀಣ ಬಡಮಕ್ಕಳಿಗೆ ನೆರವಾದವರು. ಈಗಲೂ ಆ ಶಾಲೆಗೆ ಗಂಗಾಲಾಪುರದ ಹನುಮಂತಪ್ಪ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಲಾಗಿದೆ.

ನಾಯಕ ಸಮಾಜದ ರಾಜಕಾರಣಿಗಳಿಗೆ ಬೆಂಬಲವಾಗಿ ನಿಂತವರು ಇಂತಹ ಗುಣದ ಹನುಮಂತಪ್ಪನವರು ಎಂದೂ ರಾಜಕಾರಣಿಯಾಗಲು ಬಯಸಲಿಲ್ಲ. ಅವರು ಮನಸ್ಸು ಮಾಡಿದ್ದರೆ ಜಿಲ್ಲೆಗೆ ಎಂದೂ ಶಾಸಕರಾಗಿ ಸಚಿವರಾಗಿ ಅಧಿಕಾರ ಅನುಭವಿಸಬಹುದಾಗಿತ್ತು. ಆದರೆ ಸುತ್ತಣ ಯುವಕರನ್ನು ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮುಖ್ಯವಾಗಿ ಇವರು ಗಾಂಧೀವಾದಿಗಳಾಗಿ ಶಾಂತ ಸ್ವಭಾವದವರಾಗಿದ್ದರು.

ತೆಕ್ಕಲಕೋಟೆ ಸಿದ್ದಪ್ಪನವರು

ಹಾಲಿ ಶಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪನವರ ತಂದೆಯವರಾದ ಈ ಸಿದ್ಧಪ್ಪನವರು “ಬಳ್ಳಾರಿ ಜಿಲ್ಲೆಯ ದೇವರಾಜ ಅರಸರು” ಎಂದೆ ಪ್ರಖ್ಯಾತರಾದವರು. ಹಿಂದುಳಿದ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ ಅಜ್ಞಾತವಾಗಿ ಬದುಕುತ್ತಿದ್ದ ಹಿಂದುಳಿದ ವರ್ಗಗಳನ್ನು ಕಂಡು ಅವರ ನೋವುಗಳನ್ನು ಉಂಡವರು. ಇಂತಹ ಅನಿಷ್ಟ ಪದ್ಧತಿಯ ವಿರುದ್ಧ ಸಿಡಿದೆದ್ದ ಸಿದ್ದಪ್ಪನವರು ಸಾಮಾಜಿಕ ಕ್ರಾಂತಿಯನ್ನು ಮಾಡಿದವರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಿಂದುಳಿದವರನ್ನು ಸಂಘಟಿಸಿ ಹೋರಾಟ ನಡೆಸಿದವರು. ಈ ಮೂಲಕ ನಮ್ಮ ಜನಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ನಮಗೆ ರಾಜಕೀಯ ಮುಖ್ಯ ಎಂಬುದನ್ನು ಮನಗಂಡು ಸಿದ್ದಪ್ಪನವರು ಗ್ರಾಮ ಪಂಚಾಯ್ತಿಯಿಂದ ತಾಲ್ಲೂಕು ಪಂಚಾಯ್ತಿಯವರೆಗೆ ರಾಜಕಾರಣವನ್ನು ಮಾಡಿದವರು. ಸಣ್ಣ ಅಧಿಕಾರದಲ್ಲಿ ಇದ್ದರು ಜಿಲ್ಲೆಯಲ್ಲಿ ಯಾವೊಬ್ಬ ಶಾಸಕ, ಸಚಿವರು ಮಾಡದಂತ ಗಣನೀಯವಾದ ಸಮಾಜ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಬಡವರಿಗೆ ಆತ್ಮಾಭಿಮಾನವನ್ನು ತುಂಬಿದವರು ಅವರು ಎಂದೂ ಶ್ರೀಮಂತರ ಮನೆ ಬಾಗಿಲಲ್ಲಿ ನಿಲ್ಲಲಿಲ್ಲ. ಕೆಳವರ್ಗದ ಹರಿಜನ ಕೇರಿಗಳಿಗೆ ಹೋಗಿ ಗುಡಿ ಗುಂಡಾರಗಳಲ್ಲಿ ಕುಳಿತು ಸಮಸ್ಯೆಗಳನ್ನು ತಿಳಿದುಕೊಂಡು ನ್ಯಾಯವನ್ನು ಕೊಡಿಸಿದವರು, ಸಿದ್ಧಪ್ಪನವರು ಬರುತ್ತಾರೆ ಎಂದು ತಿಳಿದರೆ ಸಾಕು ಜನಸ್ತೋಮ ಇಂತಹ ವ್ಯಕ್ತಿ ರಾಜ್ಯ ರಾಜಕಾರಣ ಕನಸು ಕಂಡಿದ್ದರು. ಭೀಮಪ್ಪನಾಯಕರು, ಹೋ.ಚಿ. ಬೋರಯ್ಯ, ನಿಜಲಿಂಗಪ್ಪನಂತವರ ಸಂಪರ್ಕವು ಇತ್ತು. ಆದರೆ ಇವರ ಏಳಿಗೆಯನು್ನ ಸಹಿಸಲಾರದ ಮುಂದುವರೆದ ಶಕ್ತಿಗಳ ಜಾತಿಗಳ ಪಿತೂರಿ, ವಂಚಕತನಕ್ಕೆ ಇವರ ಅಪಾರವಾದ ವ್ಯಕ್ತಿತ್ವ ಬಲಿಯಾಗಬೇಕಾಯಿತು ಎಂಬುದು ದುರಂತ.

ತಳವಾರ ಸಣ್ಣ ವೆಂಕಟಪ್ಪನವರು

ಹೂವಿನಹಡಗಲಿಯ ವಾಲ್ಮೀಕಿ ಸಮಾಜಕ್ಕೆ ಸೇರಿದ ಶ್ರೀ ತಳವಾರ ಸಣ್ಣ ವೆಂಕಟಪ್ಪನವರು ಪಂಚಾಯ್ತಿ ಮುಖಂಡನಾಗಿ ತನ್ನ ಊರಿನ ಪರಿಸರದ ಎಲ್ಲಾ ವರ್ಗದ ಜಾತಿಯ ಜನರ ನ್ಯಾಯ ನಿರ್ಣಯವನ್ನು ಮಾಡುವುದರಲ್ಲಿ ಹೆಸರು ಮಾಡಿದವರು. ಈ ಪಂಚಾಯ್ತಿ “ತಳವಾರ ವೆಂಕಟಪ್ಪನವರ ಪಂಚಾಯ್ತಿ” ಎಂದು ಪ್ರಸಿದ್ದಿ ಪಡೆದಿದ್ದವರು ಶ್ರೀಮಂತರಲ್ಲದಿದ್ದರೂ ಕೃಷಿಕ ಕಾಯಕವನ್ನು ಮಾಡುತ್ತಾ ಊರಿನಲ್ಲಿ ಸಮಾಜದ ಸುಧಾರಣೆಗಳು, ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದವರು.

ಹೊಸಪೇಟೆಯ ಗುಜ್ಜಲ ಹನುಮಂತಪ್ಪನವರು

ಅಪ್ಪಟ ಗಾಂಧೀವಾದಿಯಾಗಿದ್ದ ಗುಜ್ಜಲ ಹನುಮಂತಪ್ಪನವರು ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸರಳಜೀವಿಗಳು, ಮಿತಭಾಷಿಗಳು ಜೊತೆಗೆ ಜಿಪುಣ ಸ್ವಭಾವದವರು. ಗ್ರಾಮ ಪಂಚಾಯ್ತಿ ಹಾಗೂ ನಗರಸಭೆಯಿಂದ ಪದವಿಯ ಎಲ್ಲಾ ರಾಜಕೀಯ ಅಧಿಕಾರವನ್ನು ಅನುಭವಿಸಿದವರು. ಅಧಿಕಾರವನ್ನು ಜನಕ್ಕೆ ಮೀಸಲಿಟ್ಟವರು ಎಂದು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ. ಅವರ ಜೀವನ ನೋಡುವುದಾದರೆ ಅವರ ಮನೆ ಯಲ್ಲಿ ಒಂದು ರೇಡಿಯೊ ಸಹ ಇರಲಿಲ್ಲ. ಟಿ.ವಿ., ಟೆಲಿಪೋನ್, ಕಾರು ದೂರದ ಮಾತು. ಶಾಸಕರಾಗಿದ್ದಾಗ ಅಭಿಮಾನಿಗಳು ಒತ್ತಡ ತಂದು ದೂರವಾಣಿ ಸಂಪರ್ಕ ಕಲ್ಪಿಸಿದರು. ಬಡತನ ಬಗ್ಗೆ ಬಹಳಷ್ಟು ಮಮತೆ ಇದ್ದ ಇವರು ಶಿಕ್ಷಣಕ್ಕೆ ಒತ್ತುಕೊಡುತ್ತಿದ್ದರು. ಆದರೆ ನೌಕರಿ ಬೇಕು ಎನ್ನುವವರಿಗೆ ಕೋಪದಿಂದ ಟೀಕಿಸುತ್ತಿದ್ದು ಉಂಟು. ನಾವು ನೆಲದ ಮಕ್ಕಳು ನೆಲವನ್ನು ನಂಬಬೇಕು ಎಂದು ಬದುಕಿದವರು ರಾಮಕೃಷ್ಣ ಹೆಗಡೆಯವರ ನಿಕಟವರ್ತಿಗಳು ಆಗಿದ್ದರು. ಈ ಸಮಾಜದ ಮೇಲೆ ಅಪಾರ ಮಮತೆ, ಪ್ರೀತಿ ಬೆಳಸಿಕೊಂಡವರು ಇಂತಹ ಹನುಮಂತಪ್ಪನವರು ೧೯೮೯ರಲ್ಲಿಶಾಸಕರಾಗಿದ್ದಾಗ ಹೃದಯಘಾತದಿಂದ ನಿಧನ ಹೊಂದಿದರು.

ಎನ್.ಟಿ. ಬೊಮ್ಮಣ್ಣನವರು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿಂದುಳಿದ ಗ್ರಾಮವಾದ ನರಸಿಂಹಗಿರಿ ಎನ್ನುವ ಊರಿನ ಸಾಮಾನ್ಯ ಕುಟುಂಬದಿಂದ ಬಂದವರು. ಎನ್.ಟಿ. ಬೊಮ್ಮಣ್ಣನವರು ಬಳ್ಳಾರಿ ಜಿಲ್ಲೆಯ ನಾಯಕ ಸಮಾಜದ ನಾಡಿ ಮಿಡಿತ ಅರಿತ ಗುಣವಂತರು ಕಪಟತೆ ಇಲ್ಲದೆ, ನೇರ ನಡೆ ನುಡಿಗೆ ಹೆಸರಾದವರು. ಕೂಡ್ಲಿಗಿ ವಿಧಾನ ಸಭೆಗೆ ೧೦ ವರ್ಷಗಳ ಕಾಲ ಶಾಸಕರಾಗಿ ಜನತೆಯ ಸೇವೆಯನ್ನು ಮಾಡಿದವರು. ಈ ಮಣ್ಣಿನ ಹದವನ್ನು ಅರಿತವರು ಅಧಿಕಾರ ಅವಧಿಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸಿದವರು.

ಎಂ.ಎಸ್. ಸೋಮಲಿಂಗಪ್ಪನವರು

ತಂದೆಯಾದ ಸಿದ್ದನವರ ಗುಣಗಳನ್ನು ಮೈಗೂಡಿಸಿಕೊಂಡು ತಂದೆ ಕಂಡ ಕನಸನ್ನು ನನಸು ಮಾಡಿದವರು. ಸಿರುಗುಪ್ಪ ಶಾಸಕ ಎಂ.ಎನ್. ಸೋಮಲಿಂಗಪ್ಪನವರು, ತಂದೆಯಂತೆ ಸದಾ ಬಡವರ ಪರಧ್ವನಿ ಮಾಡುತ್ತಲೆ ಬಂದಿದ್ದಾರೆ. ದಿನ ದುರ್ಬಲರಿಗೆ ಬಹಳಷ್ಟು ನೇರವಾಗಿದ್ದಾರೆ.

ಬಿ. ಶ್ರೀ ರಾಮುಲು

ಬಳ್ಳಾರಿ ಜಿಲ್ಲೆಯ ನಾಯಕ ಸಮಾಜದ ಮೊದಲ ಕ್ಯಾಬಿನೆಟ್ ಮಂತ್ರಿಯಾದ ಬಿ. ಶ್ರೀರಾಮುಲು ರಾಜ್ಯ ರಾಜಕಾರಣದಲ್ಲಿಯೇ ಚಿಕ್ಕ ವಯಸ್ಸಿನವರು. ತೀರ ಬಡತನದ ಕುಟುಂಬದಿಂದ ಬಂದವರು. ಸ್ವಬಲದಿಂದಲೇ ನಗರಸಭೆ ಸದಸ್ಯರಾಗಿ ಜನಮನ್ನಣೆಗೆ ಪಾತ್ರರಾದವರು. ನಂತರ ಕಾಂಗ್ರೆಸ್ ತೊರೆದು ಬಿ.ಜೆ.ಪಿಯನ್ನು ಸೇರಿ ಬಳ್ಳಾರಿಯ ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಿ ಬಿ.ಜೆ.ಪಿಯ ನಾಯಕ ಎಂದು ಅಭಿಮಾನಿಗಳಿಂದ ಘೋಷಣೆ ಗಳನ್ನು ಕೂಗಿಸಿಕೊಂಡವರು. ಅಜ್ಞಾನವಾಗಿ ಕಗ್ಗತ್ತಲೆಯ ನಗರವಾಗಿದ್ದ ಬಳ್ಳಾರಿಯನ್ನು ಬೆಳಕಿನ ನಗರವಾಗಿ ನಿರ್ಮಿಸಿ ಬಳ್ಳಾರಿ ಶ್ರೇಷ್ಠ ರಾಜಕಾರಣಿ ಎಂದು ಹೆಸರಾಗಿದ್ದಾರೆ. ಜಿಲ್ಲೆಯ ಹಿರಿಯರ ಸಾವಿನ ನಂತರ ಅನಾಥವಾಗಿ ಹೋಗಿದ್ದ ವಾಲ್ಮೀಕಿ ಸಂಘದ ಜಾಗ ಹಾಸ್ಟಲ್‌ನ ಜಾಗವನ್ನು ಹೀಗೆ ಸುಂದರಿಕರಣಗೊಳಿಸಿ ಕಟ್ಟಡ ಕಟ್ಟಲು ಜವಬ್ದಾರಿಯನ್ನು ಮಾನ್ಯ ಮಂತ್ರಿಗಳು ಸಹಕರಿಸುತ್ತಿದ್ದಾರೆ. ಆದರೆ ನಿರೀಕ್ಷಿಸಿದಂತೆ ಕೆಲಸ ಇನ್ನು ಆಗಬೇಕಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾಯಕ ಸಮಾಜದ ಗಣ್ಯರು

ಎಂ.ಬಸಪ್ಪ ಜಗಳೂರು ಶಾಸಕರಾಗಿದ್ದರು
ವಿ. ಎಸ್. ಉಗ್ರಪ್ಪ ತುಮಕೂರು ಎಂ.ಎಲ್.ಸಿ
ಡಿ.ಎಮ್. ಸಾಲಿ ಹಿರೇಕೆರೂರು ಎಂ.ಎಲ್.ಸಿ
ಶ್ರೀ ಗಂಗಾಧರ ನಾಯಕ ಮಾನ್ವಿ ಎಂ.ಎಲ್.ಎ
ಶ್ರೀ ಎನ್.ವೈ. ಗೋಪಾಲಕೃಷ್ಣ ಮೊಳಕಾಲ್ಮೂರು ಎಂ.ಎಲ್.ಎ
ಶ್ರೀ ಸತೀಶ್ ಜಾರಕಿಹೋಳಿ ಗೋಕಾಕ್ ಎಂ.ಎಲ್.ಸಿ., ಮಾಜಿ ಸಚಿವರು
ಶ್ರೀ ಕೆ.ಎನ್. ರಾಜಣ್ಣ ತುಮಕೂರು ಎಂ.ಎಲ್.ಎ (ಬೆಳ್ಳಾವಿ)
ಶ್ರೀ ರಾಜವೆಂಕಟಪ್ಪ ನಾಯಕ ಸುರಪುರ ಮಾಜಿ ಎಂ.ಎಲ್.ಎ
ಶ್ರೀ ರಾಜರಂಗಪ್ಪನಾಯಕ ರಾಯಚೂರು ಮಾಜಿ ಎಂ.ಪಿ
ಶ್ರೀ ಎ. ವೆಂಕಟೇಶ ನಾಯಕ ರಾಯಚೂರು ಎಂ.ಪಿ
ಶ್ರೀ ಎನ್.ಟಿ. ಬೊಮ್ಮಣ್ಣ ಕೂಡ್ಲಿಗಿ ಮಾಜಿ ಎಂ.ಎಲ್.ಎ
ಶ್ರೀ ಟಿ. ಸೋಮಪ್ಪ ಕೂಡ್ಲಿಗಿ ಮಾಜಿ ಎಂ.ಎಲ್.ಎ
ಶ್ರೀ ಸೋಮಲಿಂಗಪ್ಪ ನಲವಾಗಿಲ ರಾಣಿಬೆನ್ನೂರು ಮಾಜಿ ಎಂ.ಎಲ್.ಎ
ಶ್ರೀ ರಾಜಾಮದನ ಗೋಪಾಲನಾಯಕ ಸುರಪುರ ಎಂ.ಎಲ್.ಎ., ಸಚಿವರು
ಶ್ರೀ ರಾಜ ಅಮರೇಶ ನಾಯಕ ಗುರುಗುಂಟಾ-ಗುಂತಗೋಳ ಮಾಜಿ ಮಂತ್ರಿಗಳು
ಶ್ರೀ ಸಾ. ಲಿಂಗಯ್ಯ ಸಿರಾ ಮಾಜಿ ಶಾಸಕರು
ಶ್ರೀ ಎಂ.ಎಲ್. ಮುತ್ತಣ್ಣನವರು ಗೋಕಾಕ್ ಮಾಜಿ ಶಾಸಕರು
ಶ್ರೀ ರಮೇಶ ಜಾರಕಿಹೋಳಿ ಗೋಕಾಕ್ ಶಾಸಕರು
ಶ್ರೀ ಎಂ.ಬಿ. ಕರಿನಿಂಗ ಗೋಕಾಕ್ ಮಾಜಿ ಶಾಸಕರು
ಶ್ರೀ ಬಾಲಚಂದ್ರ ಜಾರಕಿಹೋಳಿ ಅರಭಾವಿ ಕ್ಷೇತ್ರ ಗೋಕಾಕ್ ಸಚಿವರು
ಶ್ರೀ ಚಂದ್ರಶೇಖರ ಗುಡ್ಡಕಾಯಿ ಗೋಕಾಕ್ ಮಾಜಿ ಶಾಸಕರು
ಶ್ರೀ ಸಿ. ವೀರಣ್ಣ ಕೊರಟೆಗೆರೆ ಮಾಜಿ ಮಂತ್ರಿಗಳು
ಶ್ರೀ ಗೋವಿಂದಪ್ಪ ಜುಟ್ಟಲ್ ಕುಂದಗೋಳ್ ಮಾಜಿ ಶಾಸಕರು
ಶ್ರೀ ಶಾಂತಕ್ಕ ಗುಜ್ಜಲ ಧಾರವಾಡ ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ
ಶ್ರೀ ಎಸ್. ಚಿಕ್ಕಮಾದು ಹುಣಸೂರು ಶಾಸಕರು
ಶ್ರೀ ಪುರ‌್ನ ಮುತ್ತಪ್ಪ ಮೊಳಕಾಲ್ಮೂರು ಮಾಜಿ ಶಾಸಕರು
ಶ್ರೀ ಎನ್.ಜಿ. ನಾಯಕ ಮೊಳಕಾಲ್ಮೂರು ಮಾಜಿ ಶಾಸಕರು
ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು
ಶ್ರೀ ಪಟೇಲ್ ಪಾಪನಾಯಕ ಮೊಳಕಾಲ್ಮೂರುಮಾಜಿ ಶಾಸಕರು

ಇನ್ನು ಅನೇಕರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ನೋಡಬಹುದು.