ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಾಲ್ಮೀಕಿ ಅಧ್ಯಯನ ಪೀಠವು ೨೦೦೨ರಲ್ಲಿ ಸ್ಥಾಪನೆಯಾದರೂ, ಅಧಿಕೃತವಾಗಿ ೩ ನವೆಂಬರ ೨೦೦೩ರಂದು ಉದ್ಘಾಟನೆಯಾಯಿತು. ವಾಲ್ಮೀಕಿ ಸಮುದಾಯವನ್ನು ಕುರಿತು ಅಧ್ಯಯನ, ಸಂಶೋಧನೆ, ಚಿಂತನೆ ಮಾಡುವುದರ ಜೊತೆಗೆ ವಿಚಾರ ಸಂಕಿರಣ ನಡೆಸುವುದು ಮುಖ್ಯ ಉದ್ದೇಶವಾಗಿದೆ. ಪೀಠವು ವಾಲ್ಮೀಕಿ ಜೀವನ, ಕಾವ್ಯ, ಸಾಹಿತ್ಯ, ಸಂಸ್ಕೃತಿ,ಕಲೆ, ಇತಿಹಾಸ, ಜನಪದ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಿಂತನೆಗಳನ್ನು ಕುರಿತು ಅಧ್ಯಯನ ಮಾಡುವ ಪ್ರಧಾನ ಗುರಿಯನ್ನು ಹೊಂದಿದೆ. ವಾಲ್ಮೀಕಿಯ ಮೂಲಕ ರಾಮಾಯಣವನ್ನು ರಾಮಾಯಣದ ಮೂಲಕ ಭಾರತದ ಜನ ಜೀವನವನ್ನು ಕುರಿತು ಅಧ್ಯಯನ ಮಾಡಬೇಕಾಗಿರುವುದು ಇಂದಿನ ಅಗತ್ಯವೇ ಸರಿ. ಪೀಠವು ಪ್ರತಿ (ಶೈಕ್ಷಣಿಕ) ಸಾಲಿನಲ್ಲಿ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ರಾಜ್ಯ ಸರ್ಕಾರ ರೂ.೧೫.೦೦ ಲಕ್ಷಗಳನ್ನು (೨೦೦೨) ಕೊಟ್ಟಿರುತ್ತದೆ. ಈ ಹಣವನ್ನು ಠೇವಣಿಯಾಗಿಟ್ಟು ಬಂದ ಬಡ್ಡಿ ಹಣದಿಂದಲೇ ಪೀಠದ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ವಾಲ್ಮೀಕಿ ಅಧ್ಯಯನ ಪೀಠವು ೨೦೦೩ ರಿಂದ ಇಂದಿನವರೆಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಂಡಿದೆ. ದಿನಾಂಕ : ೦೨ – ೦೧ – ೨೦೦೪ ರಂದು ದಲಿತ ಅಧ್ಯಯನ ಪೀಠದ ಸಹಯೋಗದೊಂದಿಗೆ ‘‘ದಲಿತರು ಮತ್ತು ಭಾರತದ ಸಂವಿಧಾನ’’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ದಿನಾಂಕ : ೧೮ – ೧೦ – ೨೦೦೫  ರಂದು ವಾಲ್ಮೀಕಿ ಜಯಂತಿ ಆಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಅನಿವಾರ್ಯ ಕಾರಣಗಳಿಂದ ಮುಂದೂಡಲಾಯಿತು.

ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಯೋಜನೆಗಳನ್ನು ಪೂರೈಸಲಾಗಿದೆ. ವಾಲ್ಮೀಕಿ ಸಮುದಾಯದ ಪ್ರಾತಃ ಸ್ಮರಣೀಯರು, ತರೀಕೆರೆ ಪಾಳೆಯಗಾರ ಸರ್ಜಪ್ಪನಾಯಕನ ಕಥನ ಕಾವ್ಯ, ಕರ್ನಾಟಕದಲ್ಲಿ ತಳವಾರಿಕೆ ಮತ್ತು ಕಾಮಗೇತಿ ವಂಶಜರ ಚರಿತ್ರೆ. ಕೈಗೊಂಡ ಯೋಜನೆಗಳೇ ಅಂದು ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಬಿಡುಗಡೆಯಾದವು.

ಪ್ರಸ್ತುತ ಸಾಲಿನಲ್ಲಿ ‘‘ವಾಲ್ಮೀಕಿ ಸಮುದಾಯದ ಸಾಂಸ್ಕೃತಿಕ ಕೋಶ’’  ಎಂಬ ಯೋಜನೆ ಯನ್ನು ಕೈಗೆತ್ತಿಕೊಳ್ಳಲು ಸಿದ್ದತೆ ನಡೆಸಲಾಗಿದೆ. ಇಂದಿನ ಜಾಗತೀಕರಣ ಪ್ರಕ್ರಿಯೆಗಳಿಂದ ನಮ್ಮ ಪ್ರಾಚೀನ ಪರಂಪರೆ, ಸಂಸ್ಕೃತಿ, ಚರಿತ್ರೆ ಮೊದಲಾದ ಕ್ಷೇತ್ರಗಳ ಅರಿವು-ತಿಳುವಳಿಕೆ ಎಂದರೆ ನಮ್ಮ ಜನ ಜೀವನ, ಭಾಷೆ, ಸಂಸ್ಕೃತಿ ಅರಿತುಕೊಳ್ಳುವುದು ಎಂದರ್ಥ. ನಮ್ಮ ಚರಿತ್ರೆಯಿಂದ ಸದಾ ಪಾಠ ಕಲಿಯುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹಾಗಾಗಿ ಗತ ಕಾಲದ ನೆನಪುಗಳು ಮಾಸಿ ಹೋದಾಗ ವರ್ತಮಾನ ಕಣ್ಣಿಗೆ ಕಾಣುವುದಿಲ್ಲ. ಇನ್ನು ಭವಿಷ್ಯವು ಕತ್ತಲೆ ಎಂಬುದು ನಿಜ. ಹಿಂದೆ ಹೇಗಿದ್ದರು, ಇಂದು ಹೇಗಿದ್ದಾರೆ, ಮುಂದೆ ಹೇಗಿರಬೇಕೆಂಬ ಚಿಂತನೆ ಅಗತ್ಯ. ಇಂದು ಪ್ರತಿಯೊಂದು ಸಮುದಾಯವು ತಮ್ಮ ಛಾಯೆಗಳನ್ನು ಚರಿತ್ರೆ ಎಂಬ ಕನ್ನಡಿಯಲ್ಲಿ ನೋಡಲು ಇಚ್ಚಿಸುವುದು ಸಾಮಾನ್ಯ. ಜಾಗೃತಗೊಂಡ ಇಂಥ ಸಮುದಾಯಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಲುವಾಗಿ  ಚರಿತ್ರೆಯುದ್ದಕ್ಕೂ ಸಂಘರ್ಷ ಮತ್ತು ಹೋರಾಟ ನಡೆಸುತ್ತಾ ಬಂದಿರುವುದು ವಾಸ್ತವ ಸಂಗತಿ.

ಮೇಲಿನಂತೆ, ಅನೇಕ ಸಮುದಾಯಗಳು ಈ ನೆಲದ ಮೇಲೆ ತಲೆ ಎತ್ತಿದ ಬಳಿಕ ಆದ ಪರಿವರ್ತನೆಗಳು ಹಲವು.  ತಮ್ಮ ಜೀವನ ವಿಧಾನವನ್ನು ರೂಪಿಸಿಕೊಳ್ಳುವ ಕಾತರ, ಆತುರ ದಿಂದ ಅನೇಕ ಪಲ್ಲಟಗಳಾಗಿವೆ. ಇಂಥ ಪಲ್ಲಟಗಳನ್ನು ಕಂಡ ಸಮುದಾಯ ಬೇಡ, ನಾಯಕರದು. ಬೇಡರು ಕರ್ನಾಟಕದ ವಿವಿಧ ಭಾಗಗಳಲ್ಲಿ ವೈವಿಧ್ಯಮಯವಾಗಿ ಬದುಕುತ್ತಿ ರುವುದು ಗಮನಾರ್ಹ. ಇವರ ಚರಿತ್ರೆ, ಸಾಮಾಜಿಕತೆ, ಆರ್ಥಿಕ ಸ್ಥಿತಿ, ರಾಜಕೀಯ ಸ್ಥಿತಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ತೀವ್ರತರವಾದ ಬದಲಾವಣೆಗಳಾಗಿವೆ. ಆದರೂ ಬಡತನ, ನಿರುದ್ಯೋಗ, ಅನಕ್ಷರತೆ ಇವರಿಗೆ ಪೆಡಂಭೂತವಾಗಿ ಕಾಡುತ್ತದೆ.

ಬೇಡ – ನಾಯಕರ ಸಮಸ್ಯೆ – ಸವಾಲುಗಳನ್ನು ಕುರಿತು ಚಿಂತಿಸುವ ಅಗತ್ಯ ಇಂದಿನ ದಾಗಿದೆ. ಏನೆಲ್ಲ ಸಂಶೋಧನೆ, ಚಿಂತನೆ ಅಧ್ಯಯನಗಳು ನಡೆದರೂ ಬೇಡರ ಸ್ಥಿತಿ ಸುಧಾರಣೆ ಗೊಂಡಿಲ್ಲ. ಈ ಫಲಿತಾಂಶಗಳು ಜನ ಸಾಮಾನ್ಯರ ಮಟ್ಟಕ್ಕೆ ತಲುಪಿಲ್ಲ. ಬೇಡರ ಸ್ಥಿತಿ – ಗತಿಯನ್ನು ಕುರಿತು ಇಂದು ಸಮಗ್ರವಾಗಿ ಅರ್ಥೈಸುವ, ವಿಶ್ಲೇಷಿಸುವ ನಿಟ್ಟಿನಲ್ಲಿ ‘‘ಬೇಡ  ಬುಡಕಟ್ಟಿನ : ಚರಿತ್ರೆ ಮತ್ತು ಸಂಸ್ಕೃತಿ’’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳ ಲಾಗಿತ್ತು. ಇಲ್ಲಿ ಪ್ರಾಚೀನ, ಮಧ್ಯ ಕಾಲ ಮತ್ತು ಆಧುನಿಕ ಕಾಲಘಟ್ಟಗಳಲ್ಲಿ ಬೇಡರ ವೈವಿಧ್ಯಮಯ ಚಿತ್ರಣವನ್ನು ಕುರಿತು ಪ್ರಬಂಧಗಳು ಮಂಡನೆಯಾದವು. ಐದು ಗೋಷ್ಠಿಗಳು ಮತ್ತು ಒಂದು ಸಂವಾದ ಕಾರ್ಯಕ್ರಮ ನಡೆಯಿತು. ಇದರಲ್ಲಿ ಬಹುದೊಡ್ಡ ಚಿಂತಕರು, ಲೇಖಕರು, ವಿದ್ವಾಂಸರು, ಸಂಶೋಧಕರು ಭಾಗವಹಿಸಿದ್ದು ಸಂತೋಷದ ಸಂಗತಿ. ಬೇಡ ಸಮುದಾಯದ ಸರ್ವತೋಮುಖ ಅಭಿವೃದ್ದಿ ಕುರಿತು ಚಿಂತಿಸುವುದು ಇಲ್ಲಿನ ಮುಖ್ಯ ಆಶಯಗಳಲ್ಲೊಂದಾಗಿತ್ತು.

ವಾಲ್ಮೀಕಿ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ವಾಲ್ಮೀಕಿ ಸಂಘ ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ‘‘ಬೇಡ ಬುಡಕಟ್ಟಿನ : ಚರಿತ್ರೆ ಮತ್ತು ಸಂಸ್ಕೃತಿ’’ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂಕ್ಷಿಪ್ತ ವರದಿ ಹೀಗಿದೆ :

ದಿನಾಂಕ: ೧೬ – ೦೮ – ೨೦೦೬ ರಂದು ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಮಾನ್ಯ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು ನೆರವೇರಿಸಿದರು. ಕೂಡ್ಲಿಗಿ ಮಾಜಿ ಶಾಸಕರಾದ ಶ್ರೀಯುತ ಎನ್.ಟಿ. ಬೊಮ್ಮಣ್ಣನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡ್ಲಿಗಿ ವಾಲ್ಮೀಕಿ ಸಂಘಟನೆಯ ಅಧ್ಯಕ್ಷರಾದ ಶ್ರೀಯುತ ಕೆ. ಮಲ್ಲಣ್ಣನವರು ಭಾಗವಹಿಸಿ ದ್ದರು.

ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಹಾಗೂ ಸ್ವಾಗತ ಕೋರುವಿಕೆಯನ್ನು ಪೀಠದ ಸಂಚಾಲಕರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಯವರು ನಡೆಸಿಕೊಟ್ಟರು. ಶ್ರೀಮತಿ ಗೀತಾ ಅವರು ಪ್ರಾರ್ಥಿಸಿದರು, ವಂದನಾರ್ಪಣೆಯನ್ನು ಟಿ. ಓಂಕಾರಪ್ಪ ಮತ್ತು ಡಾ. ಎಸ್.ಎಂ. ಮುತ್ತಯ್ಯನವರು ನಿರೂಪಣೆ ನಡೆಸಿಕೊಟ್ಟರು.

ದಿನಾಂಕ ೧೬-೦೮-೨೦೦೬ ಪೂರ್ವಹ್ನ ೧೧-೩೦ಕ್ಕೆ ವಿಚಾರ ಸಂಕಿರಣದ ಗೋಷ್ಠಿ ೧ ಆರಂಭವಾಯಿತು. ಇದರಲ್ಲಿ ವಿಜಯನಗರ ಕಾಲಕ್ಕೆ ಸಂಬಂಧಿಸಿದ ಮೂರು ಪ್ರಬಂಧಗಳು ಮಂಡನೆಯಾದವು. ಪ್ರೊ. ಆರ್. ರಾಜಣ್ಣ ಇತಿಹಾಸ ವಿಭಾಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು ಇವರ ಅಧ್ಯಕ್ಷತೆಯಲ್ಲಿ ‘ವಿಜಯನಗರ ಪೂರ್ವಕಾಲೀನ ಬೇಡರು’ ಎಂಬ ಪ್ರಬಂಧವನ್ನು ಡಾ. ಹನುಮನಾಯಕರವರು ಮಂಡಿಸಿದರು. ‘‘ವಿಜಯನಗರ ಕಾಲದ ಬೇಡರು ಪ್ರಬಂಧವನ್ನು ಡಾ. ವಿರೂಪಾಕ್ಷಿ ಪೂಜಾರಹಳ್ಳಿಯವರು, ‘‘ವಿಜಯನಗರೋತ್ತರ ಕಾಲದ ಬೇಡರು’’ ಪ್ರಬಂಧವನ್ನು ಡಾ.ಎಂ.ಕೆ. ದುರುಗಪ್ಪನವರು ಮಂಡಿಸಿದರು. ಸಭಿಕರು ಚರ್ಚೆ ಯಲ್ಲಿ ಪಾಲ್ಗೊಂಡಿದ್ದರು.

ಎರಡನೆಯ ಗೋಷ್ಠಿ ಮಧ್ಯಾಹ್ನ ೨.೦೦ಕ್ಕೆ ಆರಂಭವಾಯಿತು. ‘ವಸಾಹತುಕಾಲದ ಬೇಡ ನಾಯಕರ ಆಳ್ವಿಕೆ’ಗೆ ಸಂಬಂಧಿಸಿದ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ರಂಗರಾಜು ವನದುರ್ಗ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇವರು ವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬೇಡರು ಎಂಬ ಪ್ರಬಂಧವನ್ನು ಶ್ರೀ. ಓ. ದೇವರಾಜು, ‘‘ಬ್ರಿಟಿಷರ ವಿರುದ್ಧ ಹಲಗಲಿ ಬೇಡರ ಪ್ರತಿಭಟನೆ’’ ಎಂಬ ಪ್ರಬಂಧವನ್ನು ಡಾ. ಡಿ.ಬಿ. ಕರಡೋಣಿ ಅವರು ‘‘ಸುರಪುರದ ವೆಂಕಟಪ್ಪನಾಯಕ ಮತ್ತು ಬ್ರಿಟಿಷರು’’ ಎಂಬ ಪ್ರಬಂಧವನ್ನು ಶ್ರೀ ಜಗದೀಶ, ‘‘ಸಿಂಧೂರ ಲಕ್ಷ್ಮಣ ಮತ್ತು ಬ್ರಿಟಿಷರ ಆಳ್ವಿಕೆ’’ ಎಂಬ ಪ್ರಬಂಧವನ್ನು ಡಾ. ಎಫ್.ವೈ. ಸೈದಾಪುರ ಅವರು ಮಂಡಿಸಿದರು.

ವಿಚಾರ ಸಂಕಿರಣ ಮೂರನೆಯ ಗೋಷ್ಠಿಯು ದಿನಾಂಕ ೧೭.೦೮.೨೦೦೬ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಆರಂಭವಾಯಿತು. ‘‘ಕರ್ನಾಟಕದ ಪಾಳೆಯಗಾರರು: ಅವಲೋಕನ’’ ಎಂಬ ವಿಷಯಕ್ಕೆ ಸಂಬಂಧಿಸಿದ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಲಕ್ಷ್ಮಣ್ ತೆಲಗಾವಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ – ಹಂಪಿ ಇವರು ವಹಿಸಿದ್ದರು.

ಶ್ರೀ ರಮೇಶ ನಾಯಕ್ ಅವರು ‘ವಾಯವ್ಯ ಕರ್ನಾಟಕದ ಬೇಡ ಪಾಳೆಯಗಾರರು’ ಕುರಿತ ಪ್ರಬಂಧವನ್ನು ಮಂಡಿಸಿದರು. ಡಾ. ಅಮರೇಶ ಯತಗಲ್ ಅವರು ‘ಈಶಾನ್ಯ ಕರ್ನಾಟಕದ ಬೇಡ ಪಾಳೆಯಗಾರರ’ ಕುರಿತು ಪ್ರಬಂಧ ಮಂಡಿಸಿದರು. ಅದೇ ದಿನಾಂಕ ಮಧ್ಯಾಹ್ನ ೧೨.೦೦ ಗಂಟೆಗೆ ‘‘ಬೇಡರ ಸಂಸ್ಕೃತಿ’’ಗೆ ಸಂಬಂಧಿಸಿದ ಮೂರನೆಯ ಗೋಷ್ಠಿ ಆರಂಭವಾಯಿತು. ಇದರ ಅಧ್ಯಕ್ಷತೆಯನ್ನು ಡಾ. ಎಂ.ಜಿ. ಈಶ್ವರಪ್ಪ, ಪ್ರಾಧ್ಯಾಪಕರು, ಎಂ.ಎಸ್.ಬಿ. ಕಾಲೇಜು, ದಾವಣಗೆರೆ ಇವರು ವಹಿಸಿದ್ದರು. ಈ ಗೋಷ್ಠಿಯಲ್ಲಿ ಡಾ. ಎಸ್.ಎಂ. ಮುತ್ತಯ್ಯನವರು ‘ಬುಡಕಟ್ಟುನೆಲೆಯಲ್ಲಿ ಬೇಡರು’ ಎಂಬ ಪ್ರಬಂಧ ಮಂಡಿಸಿ ದರು. ಶ್ರೀಅರುಣ್ ಜೋಳದ ಕೂಡ್ಲಿಗಿಯವರು ‘ಬೇಡರ ಸಾಂಸ್ಕೃತಿಕ ನಾಯಕರು’ ಎಂಬ ಪ್ರಬಂಧ ಮಂಡಿಸಿದರು. ಹಾಗೆಯೇ ಶ್ರೀಮತಿ ಕೊತ್ತಲಮ್ಮನವರು ‘ಬೇಡ ಬುಡಕಟ್ಟಿನ ಮಹಿಳೆ’ ಕುರಿತ ಪ್ರಬಂಧ ಮಂಡಿಸಿದರು. ಹೊಲೆಪ್ಪ ಸಂಡೂರು ‘ಬೇಡ ಬುಡಕಟ್ಟಿನ ವೈಶಿಷ್ಟ್ಯ ಗಳು’ ಕುರಿತು ಪ್ರಬಂಧ ರಚಿಸಿರುವರು.

ಗೋಷ್ಠಿ ೫ ಮಧ್ಯಾಹ್ನ ೨.೦೦ ಗಂಟೆಗೆ ಆರಂಭವಾಯಿತು. ಪ್ರೊ. ಸುಕನ್ಯಾ ಮಾರುತಿ ಜೆ.ಎಸ್.ಎಸ್. ಕಾಲೇಜ್ ಧಾರವಾಡ ಇವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಮೇಶ್ ಕುಮಾರ ವಾಲ್ಮೀಕಿಯವರು ರಾಜಕೀಯ ಕ್ಷೇತ್ರದಲ್ಲಿ ಬೇಡರು ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು. ಶ್ರೀ ಪಿ.ಕೋಟ್ರೇಶ್ ಅವರು ಬೇಡರು ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಡಾ. ಕರಿಯಪ್ಪ ಜಿ.ಮಾಳಗಿಯವರು ‘‘ಬೇಡರ ಶೈಕ್ಷಣಿಕ ಸ್ಥಿತಿ-ಗತಿಗಳ’’ ಕುರಿತು ಪ್ರಬಂಧ ಮಂಡಿಸಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬೇಡರು ಎಂಬ ಪ್ರಬಂಧವನ್ನು ಡಾ. ಜಿ. ಪ್ರಶಾಂತ ನಾಯಕ ಇವರು ಮಂಡಿಸಿದರು.

ಅದೇ ದಿನಾಂಕ ಮಧ್ಯಾಹ್ನ ೩.೩೦ಕ್ಕೆ ‘ಬೇಡ ಸಮುದಾಯ: ಸಮಸ್ಯೆ-ಸವಾಲುಗಳು’ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಶ್ರೀ ಹರ್ತಿಕೋಟೆ ವೀರೇಂದ್ರಸಿಂಹ ಕಾರಾಗೃಹ ಆಧೀಕ್ಷಕರು, ಬಳ್ಳಾರಿ ಇವರು ವಿಷಯ ಮಂಡಿಸಿದರು. ಶ್ರೀಮತಿ ಗೀತಾ, ಶ್ರೀ ವೀರಭದ್ರಪ್ಪ, ಶ್ರೀ ಆರ್.ಬಿ. ಕಿತ್ತೂರ, ಶ್ರೀ ಎಚ್.ಎಂ.ಎಸ್. ನಾಯಕ, ಶ್ರೀದಳವಾಯಿ ಚಕ್ರಪಾಣಿ, ಡಾ. ಎಸ್. ಮಾರುತಿ, ಶ್ರೀ ದೇವೇಂದ್ರ ಮಾಧವನವರ, ಶ್ರೀ ದೇವರ ಓಬಯ್ಯ, ಶ್ರೀ ಬಿ. ತಿಪ್ಪೇಸ್ವಾಮಿ, ಎಚ್,ಆರ್, ತಿಪ್ಪೇಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

ಅದೇ ದಿನಾಂಕ ಸಂಜೆ, ೫.೩೦ಕ್ಕೆ ಸಮಾರೋಪ ಸಮಾರಂಭ ನಡೆಯಿತು. ಪ್ರೊ. ಸುಕನ್ಯಾ ಮಾರುತಿ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಮಲ್ಲಣ್ಣನವರು ಭಾಗವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀಮತಿ ಬಿ.ಕೆ. ಜಯಮ್ಮ, ಶ್ರೀಮತಿ ಕೆ. ನಾಗರತ್ನಮ್ಮ, ಶ್ರೀ ಟಿ. ಓಂಕಾರಪ್ಪ, ಹೆಚ್. ವೀರಣ್ಣ, ವೀರಭದ್ರಪ್ಪ, ನಾಗರಾಜ, ಶ್ರೀ ಎ. ಓಬಯ್ಯ, ಕೆ. ಮಾರಪ್ಪ, ಎನ್. ಮುದ್ದಪ್ಪ, ಸಿದ್ದಪ್ಪ, ಭೀಮಣ್ಣ, ರಾಜು, ಡಾ. ರಾಮಚಂದ್ರ ನಾಯಕ, ಕಾವಲಿ ಶಿವಪ್ಪ ನಾಯಕ, ಎಸ್.ಪಿ. ಪ್ರಕಾಶ, ತಮ್ಮಣ್ಣ ಹಾಗೂ ಮೊದಲಾದವರು ಪಾಲ್ಗೊಂಡಿದ್ದರು. ಸಮಾರೋಪದ ಅಧ್ಯಕ್ಷತೆಯನ್ನು ಕೂಡ್ಲಿಗಿಯ ಮಾಜಿ ಶಾಸಕರಾದ ಟಿ. ಸೋಮಪ್ಪ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಪಾಲ್ಗೊಂಡ ವಿದ್ವಾಂಸರಿಗೆ, ಪತ್ರಕರ್ತರಿಗೆ, ವಿಶೇಷ ಆಹ್ವಾನಿತ ಗಣ್ಯರಿಗೆ ನೆನಪಿನ ಕಾಣಿಕೆ ಕೊಡಲಾಯಿತು. ಪೀಠದ ಸಂಚಾಲಕಾರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಎಲ್ಲರನ್ನು ವಂದಿಸಿದರು. ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.