ಭಾರತದಲ್ಲಿ ಐತಿಹಾಸಿಕ ಬರವಣಿಗೆಗಳು ವಸಾಹತುಶಾಹಿ ಆಡಳಿತದೊಂದಿಗೆ ಆರಂಭಗೊಂಡವು. ಮೊದಮೊದಲು ಪಾಶ್ಚೀಮಾತ್ಯರು ತಮ್ಮ ಆಡಳಿತದ ಭದ್ರತೆಗಾಗಿ ಮತ್ತು ಅದನ್ನು ಮುಂದುವರಿಸುವ ಉದ್ದೇಶದಿಂದ ಇಲ್ಲಿಯ ಜನರ ಭಾಷೆ, ಸಂಪ್ರದಾಯ, ಜನಾಂಗ, ಕಾನೂನು ಕಟ್ಟಲೆಗಳನ್ನು ಅಭ್ಯಸಿಸತೊಡಗಿದರು. ಇದರ ನಂತರ ಅವರು ರಾಜಕೀಯ ಇತಿಹಾಸಕ್ಕೆ ಹೆಚ್ಚು ಒತ್ತುಕೊಟ್ಟರು. ಕ್ರಮೇಣವಾಗಿ ರಾಜಕೀಯ ಇತಿಹಾಸದ ಜೊತೆಗೆ ಸಾಮಾಜಿಕ, ಆರ್ಥಿಕ, ಧರ್ಮ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಮನ ಹರಿಸಲಾ ರಂಭಿಸಿದರು. ಇದರೊಂದಿಗೆ ದೇಶಿಯ ಬರವಣಿಗೆಗಳು ಸಹ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟವು. ಇಪ್ಪತ್ತನೆಯ ಶತಮಾನದ ಅರ್ಧ ಭಾಗದಿಂದ ರಾಜಮನೆತನಗಳ ಕೇಂದ್ರೀಕೃತ ಇತಿಹಾಸ ಬಿಟ್ಟು ಸಮಾಜದ ಇತರ ವರ್ಗಗಳ ಅಧ್ಯಯನವು ಮಂದಗತಿಯಲ್ಲಿ ಪ್ರಾರಂಭವಾಯಿತು.

[1] ಇದರ ಫಲವಾಗಿ ನಂತರದ ದಶಕಗಳಲ್ಲಿ ಇತಿಹಾಸ ಲೇಖನದ ಸ್ವರೂಪದಲ್ಲಿ ಗಣನೀಯ ಪ್ರಮಾಣದ ಬದಲಾವಣೆಗಳು ಕಾಣಲಾರಂಭಿಸಿದವು.[2] ಇತ್ತೀಚಿನ ದಿನಗಳಲ್ಲಿ ಇತಿಹಾಸ, ಜನಾಂಗೀಯ ಮತ್ತು ಸಾಂಸ್ಕೃತಿಕ ಅಧ್ಯಯನಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ.

ಈ ಲೇಖನದಲ್ಲಿ ಕರ್ನಾಟಕ ಬುಡಕಟ್ಟು ಜನಾಂಗಗಳಲ್ಲಿ ಅತ್ಯಂತ ಪ್ರಮುಖವಾದ ಮತ್ತು ಪ್ರಾಚೀನವಾದ ಬೇಡ (ನಾಯಕ)[3] ಬುಡಕಟ್ಟಿನ ಆರ್ಥಿಕ ಸ್ಥಿತಿ-ಗತಿಗಳ ಸ್ವರೂಪ ವನ್ನು ಪ್ರಮುಖವಾಗಿ ಪರಿಶೀಲಿಸಲಾಗುವುದು. ಒಂದು ಜನಾಂಗ/ಸಮುದಾಯದ ಸಾಮಾಜಿಕ ಸ್ಥಾನಮಾನಗಳನ್ನು ತಿಳಿದುಕೊಳ್ಳಬೇಕಾದರೆ ಅವರ ಆರ್ಥಿಕ ಹಿನ್ನೆಲೆ ಅತ್ಯಾವಶ್ಯಕ. ಒಂದು ಜನಾಂಗದ ಆರ್ಥಿಕ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕಾದರೆ ಆ ಜನಾಂಗದ ನೆಲೆಗಳು (ವಾಸಿಸುವ ಸ್ಥಳ), ಮೂಲ ವೃತ್ತಿ ಹಾಗೂ ಆ ಕಸುಬನ್ನು ಮಾಡಲು ಬಳಸುತ್ತಿದ್ದ ಸಲಕರಣೆ ಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಕಾರ್ಲ್ ಮಾರ್ಕ್ಸ್‌ರ ಸಮಾಜವಾದದ ಸಿದ್ಧಾಂತದ ಪ್ರಕಾರ ಭೌತಿಕ ವಸ್ತುಗಳು ಒಬ್ಬ ವ್ಯಕ್ತಿಯ/ಸಮಾಜದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಯನ್ನು ನಿರ್ಧರಿಸುತ್ತವೆ. ಏಕೆಂದರೆ ಉತ್ಪಾದನಾ ಸಾಧನಗಳು ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯಾರಲ್ಲಿ ಹೆಚ್ಚು ಉತ್ಪಾದನಾ ಸಾಮರ್ಥ್ಯ ಅಥವಾ ಸಾಧನಗಳು ಇದ್ದವೋ ಅವರು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಹೊಂದಲು ಸಾಧ್ಯವಾಯಿತು. ಉತ್ಪಾದನಾ ಸಾಧನಗಳನ್ನು ಹೊಂದದವರು ಅದೇ ಸಮುದಾಯಕ್ಕೆ ಸೇರಿದ್ದರೂ ಕೂಡ ಆ ಸಮುದಾಯದಲ್ಲಿಯೇ ಅತ್ಯಂತ ಕೀಳುಮಟ್ಟದ (ಕೆಳಸ್ತರದ) ಸ್ಥಾನಮಾನಗಳನ್ನು ಹೊಂದುವಂತಾಯಿತು. ಅಂತಹವರನ್ನು ಅದೇ ಸಮುದಾಯ ದವರು ಶೋಷಣೆ ಮಾಡುವುದರ ಜೊತೆಗೆ ಉನ್ನತ ವರ್ಗದ/ಜಾತಿಯ ಸಮುದಾಯದವರು ಸಹ ಶೋಷಣೆಗೈದರು. ಎಲ್ಲಿಯವರೆಗೆ ಈ ವರ್ಗ ತನ್ನ ಉತ್ಪಾದನಾ ಶಕ್ತಿಯನ್ನು ಮತ್ತು ಸಾಧನಗಳನ್ನು ತನ್ನದಾಗಿಸಿಕೊಳ್ಳಲಿಲ್ಲವೋ ಅಲ್ಲಿಯವರೆಗೂ ಅದು ಎಲ್ಲಾ ರೀತಿಯ ಸಮುದಾಯಗಳಿಂದ ಶೋಷಿಸಲ್ಪಟ್ಟಿತು. ಈ ಲೇಖನದ ಕಾಲದ ಚೌಕಟ್ಟನ್ನು ಪ್ರಾಚೀನ ಕಾಲದಿಂದ ಸುಮಾರು ಕ್ರಿ.ಶ. ೧೩-೧೪ನೇ ಶತಮಾನದವರೆಗೆ ಮಿತಿಗೊಳಿಸಿ ಅಂದಿನ ಆರ್ಥಿಕ ಸ್ಥಿತಿ-ಗತಿಗಳನ್ನು ತಿಳಿಯಲು ಪ್ರಯತ್ನಿಸಲಾಗಿದೆ. ಇದನ್ನು ರಚಿಸಲು ಮುಖ್ಯವಾಗಿ ಶಾಸನ ಗಳು, ಕೈಫಿಯತ್ತುಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಬಳಸಿಕೊಳ್ಳಲಾಗಿದೆ.

ಬೇಡ ಬುಡಕಟ್ಟಿನವರು ಬೇರುಗಳನ್ನು ಪೌರಾಣಿಕ ಕಾಲದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕಾಣಬಹುದು. ಆದಿಕಾವ್ಯವಾದ ರಾಮಾಯಣ ವನ್ನು ರಚಿಸಿದ ವಾಲ್ಮೀಕಿ ಮತ್ತು ರಾಮನಿಗೆ ಹಣ್ಣುಹಂಪಲು ನೀಡಿದ ಶಬರಿ ಹಾಗೂ ಮತ್ತೊಂದು ಮಹಾಕಾವ್ಯ ರಚಿಸಿದ ವ್ಯಾಸ ಮತ್ತು ದ್ರೋಣಾಚಾರ್ಯರಲ್ಲಿ ಬಿಲ್ಲು ವಿದ್ಯೆ ಕಲಿತ ಏಕಲವ್ಯನು ಬೇಡ ಬುಡಕಟ್ಟಿಗೆ ಸೇರಿದವರೆಂದು ಪ್ರತೀತಿ ಇದೆ. ಮಹಾಭಾರತದ ಕಾಲದಲ್ಲಿ ಬೇಟೆಗಾರರನ್ನು ಪುಲಿಂದ, ನಿಷಾದ, ಕಿರಾತ, ವ್ಯಾಧ ಮುಂತಾದ ಹೆಸರುಗಳಿಂದ ಕರೆಯಲಾಗಿದೆ.

ಬೇಡ ಬುಡಕಟ್ಟು ಇಡೀ ಮಾನವ ಸಮುದಾಯದ ಹಲವು ಭಾಗಗಳಲ್ಲಿಒಂದು ಭಾಗ ಮಾತ್ರ. ಮಾನವ ಸಂಸ್ಕೃತಿ ಪೂರ್ವೇತಿಹಾಸ ಕಾಲದಲ್ಲಿ ಆರಂಭಗೊಂಡು ಕಾಲಾಂತರದಲ್ಲಿ ಹಲವು ಮಾರ್ಪಾಟುಗಳಿಗೆ ಒಳಗಾಯಿತು. ಹಳೆ ಶಿಲಾಯುಗದಲ್ಲಿ ಇಡೀ ಮಾನವನ ಮುಖ್ಯ ಕಸುಬು ಬೇಟೆಗಾರಿಕೆಯಾಗಿತ್ತು. ಈ ಅವಧಿಯಲ್ಲಿ ಮಾನವ ಅಲೆಮಾರಿಯಾಗಿದ್ದು, ಬೆಟ್ಟಗಳ ಕಲ್ಲಾಸರೆಗಳಲ್ಲಿ ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದನು. ಬೆಟ್ಟಗುಡ್ಡಗಳೇ ಅವನ ಚಟುವಟಿಕೆಯ ಕೇಂದ್ರಗಳಾಗಿದ್ದವು. ಏಕೆಂದರೆ ಅವು ಅಂದಿನ ಮಾನವನಿಗೆ ಬೇಕಾದ ವಸತಿ, ಕಲ್ಲಿನ ಆಯುಧಗಳು ಹಾಗೂ ಆಹಾರವನ್ನು (ಪ್ರಾಣಿ, ಪಕ್ಷಿಗಳು) ಒದಗಿಸುವ ನೆಲೆಗಳಾಗಿದ್ದವು. ಅದಕ್ಕಾಗಿಯೇ ನಾವು ಇಂದಿಗೂ ಸಹ ಕರ್ನಾಟಕದ ಹಲವು ಭಾಗಗಳಲ್ಲಿ ಬೆಟ್ಟಗುಡ್ಡಗಳ ಸಾಲಿನಲ್ಲಿರುವ ಕಲ್ಲಾಸರೆಗಳಲ್ಲಿ, ಗುಹೆಗಳಲ್ಲಿಅಂದಿನ ಮಾನವ ಬಿಡಿಸಿದ ಕೆಂಪು, ಬಿಳಿ ಮತ್ತು ಕಪ್ಪುವರ್ಣಚಿತ್ರಗಳನ್ನು ಕಾಣಬಹುದು.[4] ಈ ವರ್ಣಚಿತ್ರಗಳು ಹೆಚ್ಚಾಗಿ ಬೇಟೆಯ ಚಿತ್ರಣವನ್ನು ಹೊಂದಿವೆ. ಈ ವರ್ಣಚಿತ್ರಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಮತ್ತು ಬೇಟೆಯ ಆಯುಧಗಳನ್ನು ಕಾಣಬಹುದು. ಈ ಹಂತದ ಜೀವನವನ್ನು ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಿಸುವ ಹಂತ ಎಂದು ಪರಿಗಣಿಸಲಾಗಿದೆ. ಈ ಹಂತದಲ್ಲಿ ಮಾನವನ ಆರ್ಥಿಕ ಜೀವನವು ಕೇವಲ ದೈನಂದಿನ ಹಸಿವನ್ನು ನೀಗಿಸಿಕೊಳ್ಳುವುದಾಗಿತ್ತು. ಸಮುದಾಯ ಸಹ ಬೇಟೆಯು ಅಂದಿನ ಪ್ರಮುಖ ಆರ್ಥಿಕ ವ್ಯವಸ್ಥೆಯಾಗಿತ್ತು. ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅನಿವಾರ್ಯವಾದ್ದರಿಂದಲೂ ಹಾಗೂ ಬೇಟೆಯ ಸಾಧನಗಳು ಹೆಚ್ಚು ತಾಂತ್ರಿಕತೆಯಿಂದ ಕೂಡಿರದೆ ಇದ್ದುದರಿಂದಲೂ ಹಲವಾರು ಜನ ಒಟ್ಟಿಗೆ ಸೇರಿ ಬೇಟೆಯಾಡು ವುದು ಅನಿವಾರ್ಯವಾಗಿತ್ತು. ಈ ರೀತಿಯ ಬದುಕನ್ನು ಇಂದಿಗೂ ಬೇಡ ಬುಡಕಟ್ಟಿನಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಕಾಣಬಹುದು.

ನವಶಿಲಾಯುಗದಲ್ಲಿ ಮಾನವ ಅಲೆಮಾರಿ ಜೀವನವನ್ನು ತ್ಯಜಿಸಿ ಬೆಟ್ಟಗುಡ್ಡಗಳನ್ನು ತೊರೆದು ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಒಂದೆಡೆ ವಾಸಿಸತೊಡಗಿದನು. ಈ ಹಂತದಲ್ಲಿ ಬೇಟೆಯ ಜೊತೆಗೆ ಕೃಷಿ ಮತ್ತು ಪಶುಪಾಲನೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡನು. ಆದ್ದರಿಂದ ಜೀವನ ಶೈಲಿಯಲ್ಲಿ ವೈವಿಧ್ಯತೆಗಳು ಹುಟ್ಟಿಕೊಂಡವು. ಹೀಗಾಗಿ ಈ ಹಂತದಲ್ಲಿ ಯಾರು ಬೇಟೆಗಾರರು, ಯಾರು ಕೃಷಿಕರು ಮತ್ತು ಯಾರು ಪಶುಪಾಲಕರು ಎಂದು ನಿಖರವಾಗಿ ಗುರುತಿಸುವುದು ಕಷ್ಟಕರವಾದ ಕೆಲಸ. ಸಾಮಾನ್ಯವಾಗಿ ಎಲ್ಲರೂ ತಮ್ಮ ದಿನನಿತ್ಯದ ಬಯಕೆಗಳನ್ನು ಪೂರೈಸಿಕೊಳ್ಳುವುದಕ್ಕೋಸ್ಕರ ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿಸಿ ಕೊಂಡಿದ್ದರೂ ಬೇಟೆಯನ್ನು ತ್ಯಜಿಸಿರಲಿಲ್ಲವೆಂದು ಕಂಡುಬರುತ್ತದೆ.

ಕ್ರಿ.ಪೂ. ೧೦೦೦ ದಿಂದ ಅಂದರೆ ಬೃಹತ್ ಶಿಲಾಯುಗದಿಂದ ಮಾನವನ ವಿವಿಧ ಕಸುಬುಗಳನ್ನು ಗುರುತಿಸಲು ಸಾಕಷ್ಟು ಆಧಾರಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ : ಬೃಹತ್ ಶಿಲಾಗೋರಿಗಳಲ್ಲಿ ದೊರಕಿರುವ ಅಸ್ತಿಪಂಜರಗಳು, ಮಡಕೆ ಚೂರುಗಳು, ಕಬ್ಬಿಣದ ಆಯುಧಗಳು, ಕಲ್ಲು ಚಪ್ಪಡಿಗಳು, ಆಹಾರ ಧಾನ್ಯಗಳು ಮತ್ತಿತರ ವಸ್ತುಗಳು. ಇವುಗಳ ಆಧಾರದ ಮೇಲೆ ಸುಮಾರು ಕ್ರಿ.ಪೂ.೮೦೦ ರಿಂದ ಸಮಾಜದಲ್ಲಿ ಕಲ್ಲುಕುಟಿಗರು, ಕುಂಬಾರರು, ಕಮ್ಮಾರರು, ಅಕ್ಕಸಾಲಿಗರು, ಕೃಷಿಕರು, ಬೇಟೆಗಾರರು ಮತ್ತಿತರ ವರ್ಗಗಳಿದ್ದು ದನ್ನು ಗುರುತಿಸಬಹುದು. ಇದರಿಂದ ಅಂದಿನ ಸಮಾಜವು ಹಲವು ಸ್ತರಗಳಿಂದ ಕೂಡಿದ್ದಾ ಗಿತ್ತು ಎನ್ನಬಹುದು. ಬೃಹತ್ ಶಿಲಾಗೋರಿಗಳಲ್ಲಿ ದೊರಕಿರುವ ಕಬ್ಬಿಣದ ಆಯುಧಗಳಾದ ಈಟಿ, ಭರ್ಜಿ, ಖಡ್ಗ ಮುಂತಾದವುಗಳನ್ನು ಬಹುಶಃ ಕದನಕ್ಕಾಗಲಿ ಅಥವಾ ಬೇಟೆಗಾಗಲಿ ಬಳಸಿರಬಹುದು.[5] ಬೃಹತ್ ಶಿಲಾಯುಗದ ನಿರ್ಮಾಪಕರು ಪೂರ್ವ ಮೆಡಿಟರೆನಿಯನ್ ಸಮುದ್ರ ತೀರದಿಂದ ಬಂದವರಾಗಿದ್ದರಿಂದ ಅವರು ಅಲ್ಲಿಯ ಸಂಸ್ಕೃತಿಯನ್ನೇ ಇಲ್ಲಿಯೂ ಮುಂದುವರಿಸಿರುವುದು ಕಂಡುಬರುತ್ತದೆ. ಈ ಸಂಸ್ಕೃತಿಯ ಪ್ರಮುಖ ಲಕ್ಷಣವೆಂದರೆ ಸಾವಿನ ನಂತರ ಆತ್ಮದಲ್ಲಿ ನಂಬಿಕೆಯಿಡುವುದು. ಹೀಗಾಗಿ ಸತ್ತವರ ಜೊತೆಯಲ್ಲಿ ಅವರು ದಿನನಿತ್ಯ ಉಪಯೋಗಿಸುತ್ತಿದ್ದ ಪ್ರಮುಖ ಆಯುಧಗಳನ್ನು ಹೂಳುವುದು ನಂಬಿಕೆಯಾಗಿ ಬೆಳೆಯಿತು. ಅಂದರೆ ಈ ಸಮಯದಲ್ಲಿ ಕೃಷಿ, ಪಶುಪಾಲನೆ ಮತ್ತು ಕೆಲವು ವೃತ್ತಿಗಳು ಬೆಳವಣಿಗೆಯಾಗಿದ್ದರೂ ಬೇಟೆಯಾಡುವುದು ಸಂಪೂರ್ಣವಾಗಿ ತ್ಯಜಿಸಿದ್ದಂತೆ ಕಂಡು ಬರುವುದಿಲ್ಲ. ಇಂದಿನ ಬೇಡ ಜನಾಂಗದ ಮೂಲವನ್ನು ನವ ಶಿಲಾಯುಗದ ಮಾನವನೊಡನೆ ಪ್ರಾಕ್ತನ ಶಾಸ್ತ್ರಜ್ಞರು ಗುರುತಿಸಿದ್ದಾರೆ.[6] ಕರ್ನಾಟಕದಾದ್ಯಂತ ಇಂದಿಗೂ ಪ್ರತಿ ಹಳ್ಳಿಗಳಲ್ಲೂ ಒಂದಲ್ಲ ಒಂದು ರೀತಿಯ ಬೃಹತ್ ಶಿಲಾಯುಗದ ಸ್ಮಾರಕಗಳ ಕುರುಹುಗಳಿರುವುದನ್ನು ಕಾಣಬಹುದು.

ಬೃಹತ್ ಶಿಲಾಯುಗದ ಸಮಕಾಲೀನ ಅಥವಾ ಹತ್ತಿರದ ಸಂಗಮ್ ಸಾಹಿತ್ಯವು ದಕ್ಷಿಣ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿದ್ದ ವಿವಿಧ ಸಾಮಾಜಿಕ ಗುಂಪುಗಳನ್ನು ತಿಳಿಸುತ್ತದೆ. ಈ ಸಾಮಾಜಿಕ ರಚನೆಯ ಭೌಗೋಳಿಕ ಅಂಶದಿಂದ ಕೂಡಿದ್ದುದಾಗಿದೆ. ಅವುಗಳೆಂದರೆ, ಮುಲ್ಲೈ, ಕುರಿಂಜಿ, ಮರುದಮ್, ಪಾಲೈ ಮತ್ತು ನೆಯಿಂದಲ್. ಸಂಗಮ್ ಸಾಹಿತ್ಯವು ಬೇಟೆಗಾರರು, ಮೀನುಗಾರರು ಮತ್ತು ಕುರುಬರು ಮಾಡುತ್ತಿದ್ದ ಪೂಜಾ ವಿಧಾನಗಳನ್ನು ತಿಳಿಸುತ್ತದೆ. ಪೂಜಾ ವಿಧಾನವು ಜಾನಪದ ಸಂಗೀತ ಮತ್ತು ನೃತ್ಯಗಳಿಂದ ಕೂಡಿರುತಿತ್ತೆಂದು ತಿಳಿಸುತ್ತದೆ.[7] ಪತ್ತುಪಾಟ್ಟುವಿನ ನಾಲ್ಕನೆಯ ಪದ್ಯವು ಪೆರುಂಪನ್ನಾರ್ರುಪ್ಪಡೈ ಯೋಧರು, ಪಶುಪಾಲಕರು, ರೈತರು ಹಾಗೂ ಮೀನುಗಾರರ ಮನೆಗಳ ವಿವರಣೆಯನ್ನು ನೀಡುತ್ತದೆ.[8] ಎಟ್ಟುತೋಗೈನ ಮೂರನೆ ಪದ್ಯವು ಪಿಂಗುರುನೂರು ಮತ್ತು ೬ನೇ ಪದ್ಯ ಕಲಿತ್ತೊಗೈ ಐದು ಭೌಗೋಳಿಕ ಭಾಗಗಳನ್ನು ತಿಳಿಸುತ್ತದೆ.[9] ಅವುಗಳೆಂದರೆ;

        ಭೂಮಿಯ ಸ್ವರೂಪ   ಕಸುಬು  ಆಹಾರ  ಜನ

೧. ಮುಲ್ಲೈ= ಕಾಡು: ಜೇನು ಸಂಗ್ರಹಣೆ, ಗೆಡ್ಡೆ ಗೆಣಸು ಅಗೆಯುವುದು, ಗಿಳಿ ಸಾಕಾಣಿಕೆ: ರಾಗಿ: ಕುರುಬರು.

೨. ಕುರಿಂಜಿ=ಬೆಟ್ಟಗಾಡುಗಳ ಪ್ರದೇಶ: ದನ, ಕುರಿ ಸಾಕಾಣಿಕೆ, ಕೃಷಿ: ರಾಗಿ, ಸಾಮೈ: ಬೇಟೆಗಾರರು.

೩. ಮರುದಮ್=ನೀರಾವರಿಯಿಂದ ಕೂಡಿದ ಭೂಮಿ: ಕೃಷಿ, ಗೂಳಿ ಕಾಳಗ: ಅಕ್ಕಿ: ರೈತರು.

೪. ನೆಯ್ದಲ್=ಕರಾವಳಿ ತೀರ ಪ್ರದೇಶ: ಮೀನುಗಾರಿಕೆ ಮತ್ತು ಉಪ್ಪು ತಯಾರಿಕೆ: ಮೀನು: ಪರಟವರ್.

೫. ಪಾಲೈ=ಒಣ/ಬಂಜರು ಭೂಮಿ: ದಾರಿ ಹೋಕರ ಮತ್ತು ಪ್ರಯಾಣಿಕರ ಲೂಠಿ : ಮರವನ್.

ಮೇಲಿನ ಐದು ಭೌಗೋಳಿಕ ಪ್ರದೇಶಗಳಲ್ಲಿ ಕುರಿಂಜಿ ಮತ್ತು ಪಾಲೈ ಪ್ರದೇಶಗಳ ಜನ, ಕಸುಬುಗಳು ಮತ್ತು ಆಹಾರವು ಬೇಡರ ಎಲ್ಲಾ ಲಕ್ಷಣಗಳನ್ನು ಹೋಲುತ್ತವೆ. ಕುರಿಂಜಿ ಪ್ರದೇಶದಲ್ಲಿ ಗಂಧ, ಶುಂಠಿ, ಹರಿಶಿನ ಮತ್ತು ಮೆಣಸನ್ನು ಸಂಗ್ರಹಿಸಿ ಬಂಡೆಗಳ ಮೇಲೆ ಒಣಗಿಸುವುದು,ಹಾಗೂ ಗಿಳಿ, ಹುಲಿ ಮತ್ತು ಹಂದಿಗಳನ್ನು ಖೆಡ್ಡಾ ವಿಧಾನದಿಂದ ಬೇಟೆಯಾಡುತ್ತಿದ್ದುದು ಕಂಡುಬರುತ್ತವೆ.[10] ಪಾಲೈ ಪ್ರಾಂತ್ಯದಲ್ಲಿ ಹುಲ್ಲಿನ ಚಾವಣಿ ಹೊಂದಿದ್ದ ಗುಡಿಸಲುಗಳಲ್ಲಿ ದರೋಡೆಕಾರರು ತಮ್ಮ ಬಾಣ ಬಿಲ್ಲುಗಳಿಂದ ಕೂಡಿದ್ದ ದಾರಿಹೋಕರನ್ನು ಲೂಠಿ ಮಾಡುತ್ತಿದ್ದರು. ಇವರ ಮನೆಗಳಲ್ಲಿ ಅಳಿಲು, ಇಲಿಗಳು ಸುಳಿದು ನೋಡುತ್ತಿರಲಿಲ್ಲ. ಏಕೆಂದರೆ ಇವರ ಮನೆಯ ತುಂಬೆಲ್ಲಾ ಬಿಲ್ಲು ಬಾಣಗಳು ಇರುತ್ತಿದ್ದವು. ರಾಶಿಗಟ್ಟಲೆ ಬಾಣಗಳು ಇವರ ಮನೆಯಲ್ಲಿ ಬಿದ್ದಿರುತ್ತಿದ್ದವು. ನಾಯಿಗಳ ಕೊರಳಿಗೆ ಸರಪಳಿಯನ್ನು ಹಾಕಲಾಗುತ್ತಿತ್ತು. ಇಲ್ಲಿಯ ಜನರು ಕಪ್ಪು ವರ್ಣದವರಾಗಿದ್ದು, ಧೃಡಕಾಯ ಶರೀರವನ್ನು ಹೊಂದಿದ್ದರು. ತಮ್ಮ ಮೀಸೆಗಳನ್ನು ಉದ್ದವಾಗಿ ಬೆಳೆಸಿ ಜಿಂಕೆಯ ಕೋಡಿನಂತೆ ಹುರಿ ಮಾಡಿಕೊಳ್ಳುತ್ತಿದ್ದರು. ಇವರು ಚರ್ಮದ ಚಪ್ಪಲಿಗಳನ್ನು ಹಾಕುತ್ತಿದ್ದರು. ದರೋಡೆ ಜೊತೆಗೆ ಕಾಡು ಹಂದಿಗಳನ್ನು ಮತ್ತು ಮೊಲಗಳನ್ನು ಬಲೆಗಳನ್ನು ಬಳಸಿ ನಾಯಿಗಳ ಸಹಾಯದಿಂದ ಅವುಗಳನ್ನು ಹಿಡಿಯುತ್ತಿದ್ದರು. ಇದಲ್ಲದೇ ದನಕರುಗಳನ್ನು ಒಯ್ಯುವಲ್ಲಿ / ಕದಿಯುವಲ್ಲಿ ನಿಸ್ಸೀಮರಾಗಿದ್ದರು. ಇವರ ಹೆಣ್ಣು ಮಕ್ಕಳು ಹುತ್ತಗಳಲ್ಲಿ ಇರುವೆಗಳು ತಂದಿಟ್ಟ ಕಾಳು ಕಡ್ಡಿಗಳನ್ನು ಸಂಗ್ರಹಿಸುತ್ತಿದ್ದರು. ಇವರ ಹೆಂಗಸರು ಬಾಣಂತಿತನದಲ್ಲಿ ಜಿಂಕೆಯ ಚರ್ಮದ ಮೇಲೆ ಮಲಗುತ್ತಿದ್ದರು. ಇವರು ನಾಯಿಗಳು ಬೇಟೆಯಾಡಿ ತಂದ ಉಡಗಳನ್ನು ತಿನ್ನುತ್ತಿದ್ದರು. ಇವರು ತಮ್ಮ ಪೂರ್ವಜರನ್ನು ಹೂತಿದ್ದ ಸಮಾಧಿಗಳಿಗೆ, ನಿಲುಗಲ್ಲುಗಳಿಗೆ ಹೂವಿನ ಹಾರ ಹಾಕಿ ಪೂಜಿಸುತ್ತಿದ್ದರು.[11] ಕುರಿಂಜಿ ಜನರು ತಮ್ಮ ನಾಯಿಗಳೊಡನೆ ಬೇಟೆಗೆ ಹೋಗುವುದು, ಬಿದಿರು ಕೊಳವೆಗಳಲ್ಲಿ ಹೆಂಡವನ್ನು ತುಂಬಿಸಿ ಕೊಂಡು ಕುಡಿಯುವುದು ರೂಢಿಯಲ್ಲಿತ್ತು. ಗುಡ್ಡಗಾಡಿನ ಜನರ ಮಕ್ಕಳು ತಮ್ಮಷ್ಟಕ್ಕೆ ತಾವೇ ಚಿಕ್ಕ ಚಿಕ್ಕ ಬಿಲ್ಲುಗಳಿಗೆ ಬಾಣದ ತುದಿಗೆ ಮುಳ್ಳನ್ನು ಕಟ್ಟಿ ಇಲಿಗಳ ಮೇಲೆ ಬಿಟ್ಟು ಬಿಲ್ಲು ವಿದ್ಯೆಯನ್ನು ಕಲಿಯುತ್ತಿದ್ದರು.[12] ಈ ವಿವರಗಳು ಇತಿಹಾಸ ಆರಂಭ ಕಾಲದ ಬೇಡ ಜನಾಂಗದ ಆರ್ಥಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಅತ್ಯುಪಯುಕ್ತವಾಗಿವೆ.

ಬೇಡ ಬುಡಕಟ್ಟನ್ನು ವಿದ್ವಾಂಸರು ವೃತ್ತಿಗಳ ಆಧಾರದ ಮೇಲೆ ಊರು ಬೇಡರು ಮತ್ತು ಮ್ಯಾಸ ಬೇಡರು ಎಂದು ಎರಡು ಪಂಗಡಗಳಾಗಿ ವಿಂಗಡಿಸಿದ್ದಾರೆ.[13] ಊರು ಬೇಡರಲ್ಲಿ ಮತ್ತು ಮ್ಯಾಸ ಬೇಡರಲ್ಲಿ ಕೆಲವು ಉಪಪಂಗಡಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ವಾಲ್ಮೀಕಿ, ತಳವಾರ, ಪರಿವಾರ, ನಾಯಕ, ಬೇರಾದ್, ವೇದಾನ್, ಭೋಯಾ, ರಾಮೋಶಿ. ಈ ಉಪ ಪಂಗಡಗಳನ್ನು ಕುರಿತು ವಿದ್ವಾಂಸರಾದ ಎಡ್ಗರ್ ಥರ್ಸ್ಟ್ನ್[14] ಈ ರೀತಿ ಹೇಳಿದ್ದಾರೆ : ‘ಬೇಡರನ್ನು ಮುಖ್ಯವಾಗಿ ಊರು ಅಥವಾ ಹಳ್ಳಿಯ ಬೇಡರು ಮತ್ತು ಮ್ಯಾಸ ಬೇಡರು ಅಥವಾ ಹುಲ್ಲುಗಾವಲಿನ ಬೇಡರು ಎಂದು ವಿಂಗಡಿಸಬಹುದು. ಈ ಪಂಗಡಗಳು ಮತ್ತೆ ಹಲವು ಬೆಡಗುಗಳಾಗಿ ವಿಂಗಡಣೆಯಾಗಿವೆ. ಅವುಗಳಲ್ಲಿ ನಾಲ್ಕು ಪ್ರಮುಖವಾದವು. ಅವುಗಳೆಂದರೆ ಯಮ್ಮಲವರು ಅಥವಾ ಎಮ್ಮೆಯವರು, ಮಂದಲದವರು ಅಥವಾ ಮಂದೆಯವರು, ಪುಲವರು ಅಥವಾ ಹೂವಿನವರು ಮತ್ತು ಮಿನಲವರು ಅಥವಾ ಮೀನುಗಾರರು’. ಇದರಿಂದ ತಿಳಿದು ಬರುವುದೇನೆಂದರೆ ಬೇಡರು ಪ್ರಾಣಿ, ಪಕ್ಷಿ ಮತ್ತು ಮೀನಿನ ಬೇಟೆಯ ಜೊತೆಗೆ ದನಕರುಗಳನ್ನು ಹೊಂದಿದ್ದು, ಅವರವರ ಉಪವೃತ್ತಿಗಳ ಆಧಾರದ ಮೇಲೆ ಜೀವನ ಸಾಗಿಸುತ್ತಿದ್ದರು. ಇವರೆಲ್ಲರ ಕುಲಕಸುಬು ಬೇಟೆಗಾರಿಕೆಯಾಗಿದ್ದು ಬೆಟ್ಟಗುಡ್ಡಗಳ ತಪ್ಪಲಲ್ಲಿ, ನದಿ, ಹಳ್ಳ ಕೊಳ್ಳಗಳ ಅಕ್ಕಪಕ್ಕದಲ್ಲಿ ಇವರ ನೆಲೆಗಳನ್ನು ಗುರುತಿಸಬಹುದು. ಪ್ರಾಚೀನ ಕಾಲದಲ್ಲಿ ಇವರ ಕಸುಬು ಬೇಟೆಗಾರಿಕೆ ಆದ್ದರಿಂದ ಬೇಟೆ ಯಾಡುವ ಉಪಕರಣಗಳೇ ಅಂದರೆ ಬಿಲ್ಲು, ಬಾಣ, ಬಲೆ, ಈಟಿ, ಭರ್ಜಿ, ಖಡ್ಗ, ಚೂರಿ ಮತ್ತು ನಾಯಿ ಇವರ ಪ್ರಮುಖ ಆಸ್ತಿಗಳಾಗಿದ್ದವು. ಮೊದಮೊದಲು ಈ ಸಲಕರಣೆಗಳನ್ನು ಒಟ್ಟಾಗಿ ಹೊಂದಿದ್ದು, ಕಾಲಕ್ರಮೇಣ ಅವುಗಳನ್ನು ವೈಯಕ್ತಿಕವಾಗಿ ಹೊಂದಲಾರಂಭಿಸಿದರು. ಈಗಲೂ ಬಲೆಯ ಮಾಲೀಕರಿಗೆ ಸಮುದಾಯದ ಬೇಟೆಯಾದ ಮೇಲೆ ಮಾಂಸವನ್ನು ಹಂಚುವಾಗ ಬಲೆಗೆ ಪ್ರತ್ಯೇಕವಾದ ಪಾಲನ್ನು ಕೊಡುವ ಪದ್ಧತಿಯಿದೆ. ಯಾರು ಹೆಚ್ಚಾಗಿ ಎಲ್ಲಾ ಆಯುಧಗಳನ್ನು ಹೊಂದಿದ್ದರೋ ಅಂತಹವರನ್ನು ನಾಯಕ ಅಥವಾ ಮುಖಂಡ ಎಂದು ಗುರುತಿಸಲಾಗಿತ್ತು. ಇದರಿಂದಾಗಿಯೋ ಏನೋ ಈ ಜನಾಂಗದವರನ್ನು ನಾಯಕ ರೆಂದು ಕರೆದಿರಲೂಬಹುದು.

ಈ ಜನಾಂಗವು ಬೇಟೆಯಿಂದ ತನ್ನ ದಿನನಿತ್ಯದ ಆಹಾರವನ್ನು ಪೂರೈಸಿಕೊಳ್ಳುತ್ತಿದ್ದು ದಲ್ಲದೇ ಬೇಟೆಯಿಂದ ಹೆಚ್ಚಾಗಿ ಸಿಕ್ಕಿದ ಪ್ರಾಣಿ, ಪಕ್ಷಿ, ಮೀನನ್ನು ಮಾರಿ ಅದಕ್ಕೆ ಪ್ರತಿಯಾಗಿ ದವಸ ಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಏಕೆಂದರೆ ಪ್ರತಿ ದಿನ ಕೇವಲ ಮೀನು ಮಾಂಸವನ್ನು ತಿಂದು ಬದುಕುವುದು ದುಸ್ತರವಾಗಿತ್ತು. ದವಸ ಧಾನ್ಯದ ಅವಶ್ಯಕತೆಯಿದ್ದು ದರಿಂದ ಅವರು ಬೇಟೆಗಾರಿಕೆಯಿಂದ ಸಿಕ್ಕಿದ ಪ್ರಾಣಿ, ಪಕ್ಷಿ ಮತ್ತು ಮೀನುಗಳನ್ನು ಸಾಟಿ ಪದ್ಧತಿ ಮೂಲಕ ಪಡೆದುಕೊಳ್ಳುತ್ತಿದ್ದರು. ಈ ರೀತಿಯ ವಿನಿಮಯ ಪದ್ಧತಿಯನ್ನು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದು. ಉದಾ. ಕುಂಬಾರರು, ಗಾಣಿಗರು, ಚರ್ಮಕಾರರು, ಇತ್ಯಾದಿ.

ಅಂದಿನ ಬೇಡ ಬುಡಕಟ್ಟಿನ ಪ್ರಮುಖ ವೃತ್ತಿ ಬೇಟೆಗಾರಿಕೆ. ಬೇಟೆಗಾರಿಕೆಯ ಮುಂದು ವರಿದ ರೂಪವೇ ಮೀನುಗಾರಿಕೆ. ಈ ಜನಾಂಗದ ಪ್ರಮುಖ ಉತ್ಪಾದನಾ ಸಾಧನಗಳು ಪ್ರಾಚೀನ ಕಾಲದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಂತೆ ಕಂಡುಬರುತ್ತದೆ. ಬೇಟೆ ಮತ್ತು ಆಹಾರ ಸಂಗ್ರಹದ ಹಂತದಲ್ಲಿ (Hunting and gathering stage) ಅವನ ಕಲ್ಲಿನ ಆಯುಧಗಳು ದಿನನಿತ್ಯದ ಬೇಡಿಕೆಗಳನ್ನು ಪೂರೈಸುತ್ತಿದ್ದವು. ಪಶುಸಂಗೋಪನೆ ಹಂತದಲ್ಲಿ (pastoralism) ತನ್ನ ಪ್ರಮುಖ ಸಂಪತ್ತಾದ ದನಕರುಗಳನ್ನು ಕಾಡು ಪ್ರಾಣಿ ಗಳಿಂದ ಸಂರಕ್ಷಿಸಲು ಈ ಆಯುಧಗಳನ್ನು ಹೆಚ್ಚಾಗಿ ಬಳಸಿಕೊಂಡಂತೆ ಕಂಡುಬರುತ್ತದೆ. ಇದಲ್ಲದೆ ತಮ್ಮ ನೆಲ, ಜಲ, ದನಕರುಗಳನ್ನು ಶತ್ರುಗಳಿಂದ ಮತ್ತು ಕಾಡು ಪ್ರಾಣಿಗಳಿಂದ ಕಾಪಾಡಲು ಬೇಟೆಯಲ್ಲಿ ಪಳಗಿದವರನ್ನು ಹೆಚ್ಚಾಗಿ ನಿಯೋಗಿಸಿಕೊಂಡಿರುವುದು ಕಂಡು ಬರುತ್ತದೆ. ಮುಂದಿನ ಉತ್ಪಾದನಾ ಹಂತದಲ್ಲಿ (pastoral cum agrarian stage) ಬೇಟೆಯನ್ನು ಸಂಪೂರ್ಣವಾಗಿ ತ್ಯಜಿಸದೇ ಅದನ್ನು ಉಪಕಸುಬನ್ನಾಗಿ ಮುಂದುವರಿಸಿದ. ಹೀಗಾಗಿ ಈ ಬುಡುಕಟ್ಟಿನ ಜನರು ಕಾಲಕ್ರಮೇಣ ಕಾಡು, ಬೆಟ್ಟ ಗುಡ್ಡ ಹಳ್ಳ-ಕೊಳ್ಳದ ಪ್ರದೇಶಗಳನ್ನು ಬಿಟ್ಟು ಕ್ರಮೇಣವಾಗಿ ಬಯಲು ಪ್ರದೇಶಕ್ಕೆ ಸ್ಥಳಾಂತರಗೊಳ್ಳತೊಡಗಿದರು. ನಾಗರೀಕ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಗರೀಕತೆಯ ಲಕ್ಷಣ ಗಳನ್ನು/ ಅಂಶಗಳನ್ನು ಮೈಗೂಡಿಸಿಕೊಳ್ಳತೊಡಗಿದರು. ಈ ಬದಲಾವಣೆಗಳಿಂದಾಗಿ ಇವರು ಇಂದು, ಕಡಲ ತೀರದಲ್ಲಿರುವ ಮೀನುಗಾರರನ್ನು ಬಿಟ್ಟರೆ, ತನ್ನ ಮೂಲವೃತ್ತಿಯಾದ ಬೇಟೆಯನ್ನು ಬಿಟ್ಟು ಕೃಷಿ, ಪಶುಪಾಲನೆ ಮತ್ತಿತರ ಕಸುಬುಗಳನ್ನು ಆಧರಿಸಿ ತಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಬೇಡರು ಮತ್ತು ಅವರ ಕಸುಬಿನ ಬಗ್ಗೆ ಅಂದಿನ ಸಮಾಜದಲ್ಲಿದ್ದ ದೃಷ್ಟಿಕೋನದ ಬಗ್ಗೆ ಅಂದಿನ ಚಿಂತಕರು ಬೆಳಕು ಚೆಲ್ಲಿದ್ದಾರೆ. ಪಿಸೂನನ ಪ್ರಕಾರ ಮನುಷ್ಯ ಅತಿ ಆಸೆಯಿಂದ ನಾಲ್ಕು ದುರ್ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ. ಅವುಗಳೆಂದರೆ ಬೇಟೆಗಾರಿಕೆ, ಜೂಜು, ಹೆಣ್ಣಿನ ಸಹವಾಸ ಮತ್ತು ಕುಡಿತ. ಇವುಗಳಲ್ಲಿ ಜೂಜಾಟ ಮತ್ತು ಬೇಟೆಯು ಅತ್ಯಂತ ಪಾಪಕರವಾದದ್ದು. ಏಕೆಂದರೆ ಬೇಟೆಯಿಂದಾಗಿ ಇಡೀ ಸಮಾಜಕ್ಕೆ ಶತ್ರುಗಳಿಂದ, ಕಳ್ಳಕಾಕ ರಿಂದ, ಕಾಡಾನೆಗಳಿಂದ, ಕಾಳ್ಗಿಚ್ಚಿನಿಂದ, ಭಯ, ಹಸಿವು, ಬಾಯಾರಿಕೆ ಮತ್ತು ಜೀವಹಾನಿ ಆಗುವ ಸಂಭವವಿದೆ.[15] ಆದರೆ ಕೌಟಿಲ್ಯನ ಪ್ರಕಾರ ಬೇಟೆಯಾಡುವುದರಿಂದ ಮನುಷ್ಯನ ಹೊಟ್ಟೆ, ಕೊಬ್ಬು, ಬೆವರು ಹೋಗಿ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿಯನ್ನು ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾದದ್ದು. ಆದರೆ ಜೂಜಾಟದಿಂದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ.[16] ಇದಲ್ಲದೆ ಅರ್ಥಶಾಸ್ತ್ರವು ಮುಂದು ವರಿದು ಶತ್ರುವಿನ ಸೈನ್ಯವು ಗುಡ್ಡಗಾಡು ಪ್ರದೇಶದಲ್ಲಿ ಚಲಿಸುವಾಗ ಮತ್ತು ಶತ್ರುವಿನ ಸೈನ್ಯವು ಬಳಸಬೇಕೆಂದು ತಿಳಿಸುತ್ತದೆ. ಏಕೆಂದರೆ ಕಾಡುಜನರ ಸೈನ್ಯವು ಲೂಠಿ ಮಾಡುವುದರಲ್ಲಿ ಬಹಳ ನಿಪುಣತೆಯನ್ನು ಹೊಂದಿರುತ್ತದೆ.[17]

ಬಿಲ್ಲರು[18] ಮೂಲತಃ ಆದಿ-ಆರ್ಯ ಬುಡಕಟ್ಟು ಆಗಿದ್ದು, ಅರೆ ಬುಡಕಟ್ಟು ರೈತರಾಗಿ ಒಣ ಬಂಜರು ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಆದರೂ ಅವರು ಒಳ್ಳೆಯ ಬಿಲ್ಲುಗಾರರು, ಬೇಟೆಗಾರರು, ಮೀನುಗಾರರು ಮತ್ತು ಆಹಾರ ಸಂಗ್ರಹಕರಾಗಿದ್ದರು. ಇವರ ವಿಶೇಷವೆಂದರೆ ಸಮಯ ಬಂದಾಗ ಹೋರಾಡುತ್ತಿದ್ದರು. ಆದರೆ ಅವರು ಸಂಘಟಿತ ಯೋಧರಾಗಿರಲಿಲ್ಲ. ಇವರಲ್ಲಿ ಕೆಲವರು ಕ್ರಿ.ಪೂ. ಒಂದನೆ ಶತಮಾನದಲ್ಲಿ ಮಾಳವದ ಸಮೀಪ ದೊರೆಗಳಾಗಿದ್ದರು. ಆದರೆ ಇವರ ಆಡಳಿತ ಸ್ವಲ್ಪ ಕಾಲದಲ್ಲಿಯೇ ಕಣ್ಮರೆ ಯಾಯಿತು. ಅದೇರೀತಿ ಗೋಂಡ್ ಬುಡಕಟ್ಟಿನವರು ಸಹ ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ರಾಜರಾದರು.[19] ಇದರಿಂದ ತಿಳಿದು ಬರುವುದೇನೆಂದರೆ, ಪ್ರಾಚೀನ ಸಮುದಾಯ/ ಬುಡಕಟ್ಟು ಪ್ರಬಲವಾದ ಸಮಾಜಗಳ ಸಂಪರ್ಕದಿಂದಾಗಿ ಪರಿಣಾಮಕಾರಿಯಾದ ಮಾರ್ಪಾಟನ್ನು ಹೊಂದಿದವು.

ಪ್ರಾಚೀನ ಬುಡಕಟ್ಟುಗಳ ಸಮಾಜದಲ್ಲಿ ಹೆಂಗಸರು ಕೃಷಿಯನ್ನು ಮಾಡಿದರೆ ಗಂಡಸರು ಬೇಟೆಯಾಡುತ್ತಿದ್ದರು. ಈ ಸಮಯದಲ್ಲಿ ಮೀನುಗಾರರು ವಿಶೇಷ ಜಾತಿಯಾಗಿ ಹೊರ ಹೊಮ್ಮಿದರು. ಹಲವು ಬುಡಕಟ್ಟುಗಳು ಮತ್ತು ರೈತರು ಮೀನನ್ನು ಬಲೆಯಿಲ್ಲದೇ ಬರೀ ಕೈಯಲ್ಲಿ ಹಿಡಿಯುತ್ತಿದ್ದರು.[20] ಬೇಟೆಯಿಂದ ಹೆಚ್ಚು ಜನರಿಗೆ ಆಹಾರ ಒದಗಿಸಲಾಗು ತ್ತಿರಲಿಲ್ಲವಾದ್ದರಿಂದ ಕೃಷಿಗೆ ಹೆಚ್ಚು ಒತ್ತುಕೊಡಲಾಯಿತು. ಸಿಂಧೂ ನದಿ ಕೊಳ್ಳದಲ್ಲಿ ಪ್ರಪ್ರಥಮ ಬಾರಿಗೆ ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಬೆಳೆಯಲಾಯಿತು. ಇದರ ನಂತರ ಗಂಗಾ ನದಿಯ ಬಯಲಿನಲ್ಲಿ ಹೆಚ್ಚು ಪ್ರಮಾಣದ ಆಹಾರ ಪದಾರ್ಥಗಳನ್ನು ಬೆಳೆಯಲಾಯಿತು. ಇದರಿಂದಾಗಿ ಇಲ್ಲಿ ಹೊಸ ಸಾಮಾಜಿಕ ಗುಂಪುಗಳು ಅಸ್ತಿತ್ವಕ್ಕೆ ಬಂದವು. ಇಂತಹ ಬುಡಕಟ್ಟುಗಳಿಗೆ ಬ್ರಾಹ್ಮಣರು ಪುರಾಣಗಳ ಮುಖಾಂತರ ಕೆಲವು ಸಾಮಾಜಿಕ ಸ್ಥಾನಮಾನಗಳನ್ನು ನೀಡಲಾರಂಭಿಸಿದರು. ಇದರಿಂದಾಗಿ ಬುಡಕಟ್ಟಿನ ಮುಖ್ಯಸ್ಥರು ರಾಜ ರಾಗಿ, ಅಧಿಕಾರಿಗಳಾಗಿ ಬುಡಕಟ್ಟು ಜನಾಂಗವನ್ನು ಆಳಲಾರಂಭಿಸಿದರು.[21]

ಪ್ರಾಚೀನ ಭಾರತದ ಸಮಾಜವು ಚತುರ್ವಣಗಳಿಂದ ಕೂಡಿದ್ದು, ಅದರಲ್ಲಿ ಕೊನೆಯ ದಾದ ಶೂದ್ರ ವರ್ಗವು ಹಲವು ವೃತ್ತಿ ಆಧಾರಿತ ಹಾಗೂ ಬುಡಕಟ್ಟು ಜನಾಂಗಗಳನ್ನು ಹೊಂದಿತ್ತು. ಅವುಗಳೆಂದರೆ ರಥಕಾರ, ಬಡಗಿ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಗೊಲ್ಲ, ಕುರುಬರು, ರೈತರು, ಮೀನುಗಾರರು ಮತ್ತು ಬೇಟೆಗಾರರು. ಇದಲ್ಲದೆ ನಿಶಾದ, ಕಿರಾತ, ಪರ್ಣಿಕ ಮತ್ತಿತರರು ಇದ್ದರು.[22] ಗುಪ್ತರ ಕಾಲದಲ್ಲಿ ಗುಡ್ಡಗಾಡು ಬುಡಕಟ್ಟುಗಳಾದ ಕಿರಾತರು, ಶಬರರು ಮತ್ತು ಪುಲಿಂದರು ಮ್ಲೇಚ್ಚರೊಡನೆ ಶೂದ್ರರಲ್ಲಿ ಸೇರಿಕೊಂಡರು. ಮಾರ್ಕಾಂಡೇಯ ಪುರಾಣದ ಪ್ರಕಾರ ಈ ಕಾಲದಲ್ಲಿ ಚಾಂಡಾಲರನ್ನು ಮಾತ್ರ ಅಸ್ಪ್ರಶ್ಯರೆಂದು ಪರಿಗಣಿಸಲಾಗಿತ್ತು. ಆದರೆ ಚರ್ಮ ಹದ ಮಾಡುವವರನ್ನು ಅಸ್ಪ್ರಶ್ಯರೆಂದು ಪರಿಗಣಿಸಿರಲಿಲ್ಲ. ಚಾಂಡಾಲರನ್ನು ಬೀದಿ ಗುಡಿಸುವುದಕ್ಕೆ, ಸ್ಮಶಾನದಲ್ಲಿ ಕೆಲಸ ಮಾಡುವುದಕ್ಕೆ, ಕೈದಿಗಳನ್ನು ಹತ್ಯೆ ಮಾಡುವುದಕ್ಕೆ ರಾತ್ರಿಯಲ್ಲಿ ಕಳ್ಳಕಾಕರನ್ನು ಕಾಯುವುದಕ್ಕೆ ನಿಯೋಜಿಸಲಾಗುತ್ತಿತ್ತು.[23] ಕೆಳವರ್ಗದ ಶೂದ್ರರ ಮುಖ್ಯ ಕಸುಬು ಬೇಟೆಗಾರಿಕೆಯಾಗಿತ್ತು. ಅಮರಕೋಶವು ಕೇವಲ ಬೇಟೆಗಾರರನ್ನು ಶೂದ್ರರಾಗಿ ಪರಿಗಣಿಸದೇ ಅವರು ಬಳಸುವ ಆಯುಧಗಳಾದ ಬಲೆ, ಹಗ್ಗ, ಹಕ್ಕಿಯ ಗೂಡು ಇತ್ಯಾದಿಗಳನ್ನು ಅಪವಿತ್ರವೆಂದು ತಿಳಿಸಿದೆ.[24]

ಫಾಹಿಯಾನನ ಪ್ರಕಾರ ಚಾಂಡಾಲರೆಂದರೆ ಮೀನುಗಾರರು ಮತ್ತು ಬೇಟೆಗಾರರು. ಇವರು ಮೀನು ಮತ್ತು ಮಾಂಸವನ್ನು ಮಾರುತ್ತಿದ್ದರು ಹಾಗೂ ಮತ್ತುಬರುವ ಪಾನೀಯ ಗಳನ್ನು ಕುಡಿಯುತ್ತಿದ್ದರು. ಮೂಲತಃ ಬೇಟೆಗಾರರಾದ್ದರಿಂದ ಇವರು ಸ್ವಾಭಾವಿಕವಾಗಿಯೇ ಮಾಂಸಹಾರಿಗಳಾಗಿದ್ದರು.[25] ಆದರೆ ಕಾಳಿದಾಸನ ಪ್ರಕಾರ ಚಾಂಡಾಲರು, ಬೇಟೆಗಾರರು ಮತ್ತು ಮೀನುಗಾರರಿಗಿಂತ ಭಿನ್ನವಾದವರು. ಆದರೆ ಅವರೆಲ್ಲಾ ಒಂದೇ ವಂಶಕ್ಕೆ ಸೇರಿದವರು. ಆದ್ದರಿಂದ ಈ ಕಾಲದಲ್ಲಿ ಚಾಂಡಾಲರು ಪ್ರಮುಖವಾಗಿ ಬೇಟೆಗಾರರಾಗಿದ್ದಂತೆ ಕಂಡು ಬರುವುದಿಲ್ಲ. ಆದರೆ ಅವರ ಉಪಕಸುಬು ಬೇಟೆಗಾರಿಕೆಯಾಗಿತ್ತು.[26] ಬೃಹತ್ ಕಲ್ಪ ಭಾಷ್ಯದ (ಜೈನ ಕೃತಿ) ಪ್ರಕಾರ ಮೇಡರು ಪ್ರಾಣಿಗಳನ್ನು ಹಗಲು-ರಾತ್ರಿ ಬಾಣ ಮತ್ತು ಬಿಲ್ಲುಗಳಿಂದ ಬೇಟೆಯಾಡುತ್ತಿದ್ದರು.[27] ಮನುವಿನ ಪ್ರಕಾರ ೧೨ ಕ್ಷತ್ರಿಯ ಜಾತಿಗಳು ಬ್ರಾಹ್ಮಣರ ಪದ್ಧತಿಗಳನ್ನು ಬಿಟ್ಟ ಪರಿಣಾಮವಾಗಿ ಶೂದ್ರರಾಗಿ ಮಾರ್ಪಾಟಾದವು. ಅವು ಗಳಲ್ಲಿ ಒಂದು ಕಿರಾತ. ಹಳೆಯ ಬುಡಕಟ್ಟು ಜನಾಂಗಗಳು ತಮ್ಮ ವೃತ್ತಿಯಲ್ಲಿ ಸುಧಾರಣೆ ಮತ್ತು ಪ್ರಾವೀಣ್ಯತೆ ಪಡೆದುಕೊಂಡಂತೆ ಜಾತಿಯ ರೂಪಪಡೆಯಲಾರಂಭಿಸಿದವು. ಮನುವಿನ ೧೮ ಮಿಶ್ರ ಜಾತಿಗಳಲ್ಲಿ ಚಾಂಡಾಲರು, ಮೇಡರು, ನಿಶಾದರು ಸೇರಿಕೊಂಡಿದ್ದಾರೆ.[28] ಪ್ರಾಚೀನ ಭಾರತದ ಬುಡಕಟ್ಟು ಜನಾಂಗಗಳಲ್ಲಿ ಕಿರಾತರು ಪ್ರಮುಖರು. ಇವರನ್ನು ವೇದಗಳಲ್ಲಿ, ಮಹಾಕಾವ್ಯಗಳಲ್ಲಿ ಮತ್ತು ನಂತರದ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಕಿರಾತರು ನೇಪಾಲವನ್ನು ಗೆದ್ದು ಆಕ್ರಮಿಸಿಕೊಂಡಿದ್ದರು. ಅವರ ಪೈಕಿ ಸುಮಾರು ೨೯ ದೊರೆಗಳು ನೇಪಾಳವನ್ನು ಆಳಿದರು.[29]

ಬೇಟೆಯ ದೃಶ್ಯವನ್ನು ವೀರಗಲ್ಲುಗಳು ಸಹ ಸುಂದರವಾಗಿ ಚಿತ್ರಿಸಿವೆ. ಇಲ್ಲಿಯೂ ಸಹ ವಿವಿಧ ರೀತಿಯ ಆಯುಧಗಳಿಂದ ಕಾಡು ಪ್ರಾಣಿಗಳಾದ ಹುಲಿ, ಹಂದಿಗಳನ್ನು ಬೇಟೆ ಯಾಡುವ ದೃಶ್ಯವನ್ನು ಕಾಣಬಹುದು. ನಾಯಿಯು ಸಹ ಅತ್ಯಂತ ಪ್ರಮುಖ ಪಾತ್ರವನ್ನು ಬೇಟೆಯಲ್ಲಿ ಮಾಡಿತ್ತು. ಶಾಸನಗಳು ಬೇಟೆಯ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತವೆ. ಅವುಗಳಲ್ಲಿ ಪ್ರಮುಖವಾದವು ಆತಕೂರು ಮತ್ತು ಮುಳಬಾಗಿಲಿನ ಶಾಸನ. ಮುಳಬಾಗಿಲಿನ ಶಾಸನದ ಪ್ರಕಾರ ಎರಡು ನಾಯಿಗಳಾದ ಲೋಗ ಮತ್ತು ದಳಗ ತಮ್ಮ ಯಜಮಾನನೊಡನೆ ಹಂದಿ ಬೇಟೆಗೆ ಹೋದಾಗ ಬೇಟೆಯನಂತರ ಆ ಎರಡು ನಾಯಿಗಳು ಸತ್ತು ಹೋದವು. ಈ ಶಾಸನದ ಪ್ರಕಾರ ಲೋಗ ೭೫ ಹಂದಿಗಳನ್ನು ಮತ್ತು ದಳಗ ೨೬ ಹಂದಿಗಳನ್ನು ಬೇಟೆಯಾಡಿ ದ್ದವು.[30] ಇಲ್ಲಿಯ ಮತ್ತೊಂದು ಶಾಸನದ ಪ್ರಕಾರ ಕಂಬಲದಗ ಎಂಬುವವನು ಹುಲಿಯ ಬೇಟೆಗೆ ತನ್ನ ನಾಯಿಯೊಡನೆ ಹೋದಾಗ ಇಬ್ಬರು ಸತ್ತು ಹೋದದ್ದನ್ನು ತಿಳಿಸುತ್ತದೆ.[31] ಬೇಟೆಯ ಮುಖ್ಯ ಆಯುಧಗಳು ಖಡ್ಗ, ಕತ್ತಿ, ಈಟಿ, ಭರ್ಜಿ, ಗುರಾಣಿ ಇತ್ಯಾದಿ. ಇಲ್ಲಿ ಸತ್ತವರು ಬೇಡರೆ ಅಥವಾ ಬೇರೆಯವರೆ ಎಂಬುದು ತಿಳಿದುಬರುವುದಿಲ್ಲ.

ಕ್ರಿ.ಶ. ೧೦೧೨-೪೪ರ ವೀರಗಲ್ಲಿನ ಶಾಸನವು ಕನ್ನಾಲ ಗ್ರಾಮದ ಪಲ್ಲವಗಾವುಂಡ ಎಂಬ ಬೇಟೆಗಾರನ ಮಾದಕೇಸರಿ ಎಂಬ ಹೆಸರಿನ ನಾಯಿ ಹಂದಿಯೊಡನೆ ಹೋರಾಡಿ ಸತ್ತ ವಿಷಯವನ್ನು ತಿಳಿಸುತ್ತದೆ.[32] ಮರಸಣಿಗೆಯ ವೀರಗಲ್ಲಿನಲ್ಲಿ ಮೊದಲನೆಯ ಹಂತದಲ್ಲಿ ಬಲಭಾಗಕ್ಕೆ ಇಬ್ಬರು ಪುರುಷರು ಬಿಲ್ಲುಗಳನ್ನು ಹಿಡಿದು ಜಿಂಕೆ ಮತ್ತು ಹಂದಿಯ ಬೇಟೆ ಯಾಡುತ್ತಿದ್ದಾರೆ. ಬೇಟೆಗಾರರ ಎರಡು ನಾಯಿಗಳು ಹಂದಿಯ ಮುಂದೆ ಮತ್ತು ಹಿಂದಿನಿಂದ ಆಕ್ರಮಣ ಮಾಡಿವೆ. ಎರಡನೆಯ ಹಂತದಲ್ಲಿ ಇಬ್ಬರು ವ್ಯಕ್ತಿಗಳು ಕುದುರೆಯ ಮೇಲೆ ಕುಳಿತಿದ್ದಾರೆ. ಬಲಭಾಗದಲ್ಲಿರುವ ಯೋಧ ಬಿಲ್ಲನ್ನು ಮಾತ್ರ ಹಿಡಿದಿದ್ದು ಬಾಣವನ್ನು ಕೈಯಲ್ಲಿ ಹಿಡಿದಿದ್ದಾನೆ. ಎಡ ಭಾಗದಲ್ಲಿರುವ ಯೋಧನ ಬಳಿ ಬಿಲ್ಲು ಬಾಣದ ಜೊತೆಗೆ ಕಠಾರಿಯೂ ಇದೆ.[33] ಕೈದಾಳದ ಹುಲಿಬೇಟೆಯ ೧೧೫೧ರ ವೀರಗಲ್ಲು ಶಾಸನವು ಗೂಳಿ ಬಾಚನ ಬಂಟ ಚಂದನು ಊರಿನ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹುಲಿ ಯನ್ನು ಇರಿದು ಸಾಯಿಸಿದ್ದನ್ನು ಇಳಿಸುತ್ತದೆ.[34] ಶಿಲ್ಪಗಳಲ್ಲಿ ಸಾಮಾನ್ಯವಾಗಿ ಬೇಟೆಯ ದೃಶ್ಯಗಳಾದ ಕಿರಾತಾರ್ಜುನೀಯ, ಬೇಡರ ಕಣ್ಣಪ್ಪ, ಹಂದಿ ಬೇಟೆ, ಚಿಗರೆ ಬೇಟೆ, ಬೇಟೆಯ ಆಯುಧಗಳು, ಬೇಟೆಗಾರನ ಹೆಂಡತಿ (ಬೇಡತಿ) ಎಡಗೈಯಲ್ಲಿ ಉದ್ದವಾದ ಕೋಲು ಅಥವಾ ಭರ್ಜಿಯಂತಹ ಆಯುಧವನ್ನು ಹಿಡಿದಿರುವ ದೃಶ್ಯಗಳಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.[35]

ದನಕರುಗಳ ಮತ್ತು ಹೆಂಗಸರ ಲೂಠಿಗಾರರಾಗಿ ಬೇಡರ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರಿ.ಶ. ೭ನೇ ಶತಮಾನದಿಂದ ಶಾಸನಗಳಲ್ಲಿ ಕಾಣಬಹುದು. ಕ್ರಿ.ಶ. ೭೦೦ ರ ಗದ್ದೆಮನೆ ಶಾಸನವು[36] ಬೇಡರ ವೀರವೃತ್ತಿಯನ್ನು ಮತ್ತು ಅವರ ಕಾಡಿನಿಂದ ನಾಡಿಗೆ ಬಂದಿದ್ದನ್ನು ಕೆಳಗಿನಂತೆ ತಿಳಿಸುತ್ತದೆ. ‘ಸ್ವಸ್ತಿ ಶ್ರೀ ಶೀಲ ಆದೀತ್ಯನ್ ದಿಶಾಮನ್ ಭಾಗವಾನ್ ಅಗ್ಗಳಕಣ್ಣನ್ ಪೇರಾಳ್ಖೆವರೆ ಪೆಟ್ಟಣಿಸತ್ಯಂಕರ್ ಅಟ್ಟಳ್ವಭಟರ್ ಬೆದರೆ ಮಹೇಂದ್ರನ್ ಬೇಡರಾಯರ ಮಲಪರ್ ಕಾಳೆಗದುಲೆ ವಿರಿದು ಸ್ವರ್ಗಾಲಕ್ಕೇರಿದನ್’. ಈ ಶಾಸನದಿಂದ ತಿಳಿದುಬರುವುದೇನೆಂದರೆ, ಏಳನೆ ಶತಮಾನದಲ್ಲಿ ಬೇಡರನ್ನು ಮಲಪರು ಎಂದು ಕರೆಯಲಾಗಿದ್ದು, ಇವರು ಆ ಕಾಲಕ್ಕೆ ಅಳರಸರ ಸೇವೆಯಲ್ಲಿ, ಕಾಳಗ/ಯುದ್ಧಗಳಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೋಕಿನ ಕಂಬದಹಳ್ಳಿಯ ಕ್ರಿ.ಶ. ೯೭೭ರ ಶಾಸನವು[37] ಬೇಡರ ಪಡೆಯು ಬಿಂಡಿಗನವಿಲೆ ಯನ್ನು ದಾಳಿ ಮಾಡಿ ಅಲ್ಲಿಯ ಹೆಂಗಸರನ್ನು ಎತ್ತಿಕೊಂಡು ಹೋಗುವಾಗ ಗವರೆಸೆಟ್ಟಿಯೆಂಬು ವವನು ಇವರೊಡನೆ ಹೋರಾಡಿ ಸತ್ತಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೯೮೫ರ ಹಾಸನ ಜಿಲ್ಲೆಯ ಆಲೂರು ತಾಲ್ಲೋಕಿನ ನಲ್ಲೂರು ಗ್ರಾಮದ ಶಾಸನವು[38] ಬೇಡರ ಬೀರಮ್ಮನು ತನ್ನ ಕುದುರೆ ಪಡೆಯೊಂದಿಗೆ ನಲ್ಲೂರನ್ನು ದಾಳಿ ಮಾಡಿದಾಗ ಗುಂಡಯ್ಯನು ಸತ್ತಿದ್ದನ್ನು ತಿಳಿಸು ತ್ತದೆ. ಕ್ರಿ.ಶ. ೧೧೪೦ರ ಹಾಸನ ಜಿಲ್ಲೆ ಬೇಲೊರು ತಾಲ್ಲೋಕಿನ ಹಳೇಬೀಡು ಶಾಸನವು[39] ಬೇಟೆಯ ತಿಪ್ಪೆಯನಾಯಕನನ್ನು ಉಲ್ಲೇಖಿಸುತ್ತದೆ. ಇದೇ ತಾಲ್ಲೋಕಿನ ಮತ್ತೊಂದು ಹೊಯ್ಸಳ ದೊರೆ ಬಿಟ್ಟಿದೇವನ (ವಿಷ್ಣುವರ್ಧನ) ಕಾಲದ ಕೊನೇರಿಲು ಶಾಸನವು[40] ಕೊನೇರಿಲದ ಮಸಣಗೌಡನ ಅಳಿಯ ಬೇಡಗೌಡನು ತುರುಗಾಳಗದಲ್ಲಿ ಹೋರಾಡಿ ತುರುಗಳನ್ನು ಮರುಪಡೆದು ಸತ್ತಿದ್ದನ್ನು ತಿಳಿಸುತ್ತದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೋಕಿನ ಮುದಿಗೆರೆ ಗ್ರಾಮದ ಕ್ರಿ.ಶ. ೧೨೦೯ರ ಶಾಸನವು[41] ಬೇಡರು ಕಲ್ಲಿಕೆರೆಯ ತುರುಗಳನ್ನು ಮತ್ತು ಹೆಂಗಸರನ್ನು ಲೂಟಿ ಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೧೨೬-೨೭ರ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೋಕಿನ ಬ್ಯಾಡರಹಳ್ಳಿ ಶಾಸನವು[42] ಅಲ್ಲಿಯ ಬಮ್ಮಾರನು ಬೋಕಿಮಯ್ಯ ಎಂಬ ಶತ್ರುವನ್ನು ಇರಿದು ತುರುಗಳನ್ನು ಗೆದ್ದು ಕೊಂಡು ಹೋದದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೨೮೭ರ ಚಿಕ್ಕಮಗಳೂರು ಜಿಲ್ಲೆ ಮತ್ತು ಅದೇ ತಾಲೋಕಿನ ಅರಿಶಿನಗುಪ್ಪೆ ಶಾಸನವು[43] ಬೇಡರು ಬೋಕಿಯಣ್ಣನ ತುರುಗಳನ್ನು ಒಯ್ಯುವಾಗ ಅವನು ಬೇಡರೊಡನೆ ಹೋರಾಡಿ ಸತ್ತಿದ್ದನ್ನು ತಿಳಿಸುತ್ತದೆ.

ಈ ಮೇಲಿನ ಶಾಸನಗಳಿಂದ ಮುಖ್ಯವಾಗಿ ತಿಳಿದುಬರುವುದೇನೆಂದರೆ, ಕ್ರಿ.ಶ. ೭ನೇ ಶತಮಾನದಿಂದ ಕ್ರಿ.ಶ. ೧೩ನೇ ಶತಮಾನದವರೆಗೆ (ಬಾದಾಮಿ ಚಾಲುಕ್ಯರ ಕಾಲದಿಂದ ಹೊಯ್ಸಳರ ಕಾಲದವರೆಗೆ) ಈಗಿನ ಕರ್ನಾಟಕದುದ್ದಕ್ಕೂ ಬೇಡರ ವೃತ್ತಿ ಬೇಟೆಯಾಗಿತ್ತು. ಇವರು ತಮ್ಮ ಬೇಟೆ ವೃತ್ತಿಯಲ್ಲಿ ಆಯುಧಗಳನ್ನು ಉಪಯೋಗಿಸುವುದರಲ್ಲಿ ಪರಿಣತರಾಗಿ ದ್ದರಿಂದ ಮತ್ತು ದೈಹಿಕ ಸಾಮರ್ಥ್ಯವನ್ನು ಹೊಂದಿದ್ದರಿಂದ ಆಳರಸರು ಇವರನ್ನು ತಮ್ಮ ರಾಜ್ಯವನ್ನು ಶತ್ರುಗಳಿಂದ ಕಾಪಾಡಲು ಹಾಗೂ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಶತ್ರುವಿನ ನೆಲ, ಜಲ, ಹೆಣ್ಣು ಮತ್ತು ದನಕರುಗಳನ್ನು ವಶಪಡಿಸಿಕೊಳ್ಳಲು  ನಿಯೋಜಿಸಿ ಕೊಂಡಿದ್ದರು. ನಂತರ ಅವರ ಧೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಗಮನಿಸಿ ಇವರನ್ನು ಕೂಲಿಯ ಸಿಪಾಯಿಗಳಾಗಿ (Mercenaries) ನಿಯೋಜಿಸಿಕೊಂಡು ಅವರಿಗೆ ರಾಯ, ವೀರ (ಬೀರ), ಗಾವುಂಡ (ಗೌಡ), ಮತ್ತು ನಾಯಕ ಎಂಬ ಬಿರುದುಗಳನ್ನು ನೀಡಿ ಉತ್ತೇಜನ ನೀಡಿದರು.


[1]       ಎ. ಅಪ್ಪಾದೊರೈಯವರು ದಕ್ಷಿಣ ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ೧೯೩೬ರಲ್ಲಿ ಮೊತ್ತಮೊದಲ ಬಾರಿಗೆ ಸಮಗ್ರ ಅಧ್ಯಯನ ನಡೆಸಿದ್ದಾರೆ. ಇವರು ತಮ್ಮ ಕೃತಿಯಲ್ಲಿ ವಿವಿಧ ಉತ್ಪಾದಕ ವರ್ಗಗಳು ಹಾಗೂ ಅವರ ಸಂಘಟನೆಗಳ ಚಟುವಟಿಕೆಗಳನ್ನು ಚರ್ಚಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೊ. ಎಕಾನಮಿಕ್ ಕಂಡೀಷನ್ಸ್ ಇನ್ ಸದರನ್ ಇಂಡಿಯಾ, ೨ ಸಂಪುಟಗಳು, ಮರುಮುದ್ರಣ, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸ್, ೧೯೯೦.

[2]       ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ ಅಂದರೆ ೧೯೧೧ರಲ್ಲಿ ಸಿ. ಹಯವದನ ರಾವ್‌ರ ಅರ್ಲಿ ಸೌಥ್ ಇಂಡಿಯನ್ ಫೈನಾನ್ಸ್ ಅಂಡರ್ ವಿಜಯನಗರ್ ಕಿಂಗ್ಸ್, ಇನ್ ಇಂಡಿಯನ್ ಆಂಟಿಕ್ವೇರಿ, ಬಾಂಬೆ, ಪುಟಗಳು ೨೬೨-೭೨, ಲೇಖನದೊಂದಿಗೆ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ ಮುಖ್ಯವಾದು ವುಗಳೆಂದರೆ;ಚಂದ್ರಶೇಖರ ಶಾಸ್ತ್ರಿ ಎಸ್. ‘ಎಕನಾಮಿಕ್ ಕಂಡೀಷನ್ಸ್ ಅಂಡರ್ ದಿ ಹೊಯ್ಸಳಾಸ್’, ಇನ್ ಹಾಫ್ ಯಿಯರ್ಲಿ ಜರ್ನಲ್ ಆಫ್ ಮೈಸೂರು ಯೂನಿವರ್ಸಿಟಿ (ಆರ್ಟ್ಸ್), ೨ (೨), ಮೈಸೂರು, ೧೯೨೮, ಪುಟಗಳು. ೧೯೬-೨೨೩, ಜೆ.ಎನ್. ಚೌಧರಿ, ‘ಸೋಷಿಯಲ್ ಅಂಡ್ ಎಕನಾಮಿಕ್ ಕಂಡಿಷನ್ಸ್ ಆಫ್ ದಿ ಪೀಪಲ್ ಅಂಡರ್ ದಿ ಬಹಮನಿ ಸುಲ್ತನೇಟ್, ಇನ್ ಇಂಡಿಯನ್ ಹಿಸ್ಟಾರಿಕಲ್ ಕ್ವಾರ್ಟರ್ಲಿ, ೪, ಕಲ್ಕತ್ತಾ, ೧೯೨೮, ಪುಟಗಳು. ೭೨೦-೨೪, ಸಾಲೆತೂರ್ ಆರ್.ಎನ್., ‘ದಿ ಕೆಳದಿ ರೆವಿನ್ಯೂ ಸಿಸ್ಟಮ್’, ಇನ್ ಜರ್ನಲ್ ಆಫ್ ಇಂಡಿಯನ್ ಹಿಸ್ಟ್ರಿ, ೧೮ (೧), ಟ್ರವೇಂಡ್ರಮ್, ೧೯೩೯, ಪುಟಗಳು. ೭೦-೮೮, ಮತ್ತು ಕುರ್ಮಾರ್ಕರ್ ಎ.ಪಿ., ‘ಎಕನಾಮಿಕ ಕಂಡೀಷನ್ಸ್ ಇನ್ ಮೆಡಿವಲ್ ಕರ್ನಾಟಕ’, ಇನ್ ಕ್ವಾರ್ಟಲಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ, ಸಂ. ೩೯ (೩), ಬೆಂಗಳೂರು, ೧೯೪೯, ಪುಟಗಳು. ೧೫೮-೧೭೧.

[3]       ಅ. ಈ ಲೇಖನವು ಪ್ರಾಚೀನ ಕಾಲದ ಬೇಡ ಬುಡಕಟ್ಟಿನ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿ ರುವುದರಿಂದ ಎಲ್ಲಾ ರೀತಿಯ ಬೇಟೆಗಾರರನ್ನು ಅಂದರೆ ಕಾಡಿನಲ್ಲಿ, ಬೆಟ್ಟಗುಡ್ಡಗಳಲ್ಲಿ ಕಾಡುಪ್ರಾಣಿಗಳನ್ನು ಮತ್ತು ನೀರಿನಲ್ಲಿ ಮೀನನ್ನು ಬೇಟೆಯಾಡುವವರನ್ನು ಬೇಡರೆಂದು ತಿಳಿಯಲಾಗಿದೆ. ಕಾಲಾಂತರದಲ್ಲಿ ಬೇಟೆಯ ವಿಧಾನ ಮತ್ತು ಉಪಕರಣಗಳು ಬದಲಾದಂತೆ ಬೇಟೆಗಾರರಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸಗಳುಂಟಾದವು. ಈ ಜನಾಂಗ ಇಂದು ಮೀಸಲಾತಿ ವಿಷಯದಲ್ಲಿ ಬೇರೆ ಬೇರೆಯಾಗಿ ಕಂಡುಬಂದರೂ, ಪ್ರಾಚೀನ ಕಾಲದಲ್ಲಿ ಇವರೆಲ್ಲಾ (ಬೇಟೆ ಗಾರರು)ಸಾಂಸ್ಕೃತಿಕವಾಗಿ ಮತ್ತು ಜನಾಂಗೀಯವಾಗಿ ಒಂದೇ ವರ್ಗಕ್ಕೆ ಸೇರಿದವರಾಗಿದ್ದರು. ಆದ್ದರಿಂದ ಈ ಲೇಖನದಲ್ಲಿ ಬೇಡ, ಬೇಟೆ ಮತ್ತು ಬೇಟೆಗಾರರು ಎಂಬ ಪದಗಳನ್ನು ಬೇಡರಿಗೆ ಸಮಾನವಾದದ್ದೆಂದು ಅರ್ಥೈಸಿಕೊಳ್ಳಬೇಕು.

[4]       ಅ. ಸುಂದರ, ಕರ್ನಾಟಕ ಪ್ರಾಗೈತಿಹಾಸಿಕ ಕಾಲದ ಕಲೆ, ಬೆಂಗಳೂರು, ೧೯೯೪, ಪುಟಗಳು. ೧೦-೧೫.

[5]       ಈಗಿನ ಹಾವೇರಿ ಜಿಲ್ಲೆಯಲ್ಲಿ (ಅಂದು ಧಾರವಾಡ ಜಿಲ್ಲೆ)ರುವ ಹಳ್ಳೂರಿನಲ್ಲಿ ಉತ್ಖನನ ನಡೆಸಿದಾಗ ಉದ್ದವಾದ ಕಬ್ಬಿಣದ ಖಡ್ಗಗಳು ದೊರೆತಿವೆ. ಹೆಚ್ಚಿನ ಮಾಹಿತಿಗಾಗಿ ನೋಡಿ. ಗುರುರಾಜ ರಾವ್ ಬಿ.ಕೆ., ಮೆಗಾಲಿಥಿಕ್ ಕಲ್ಚರ್ ಇನ್ ಸೌಥ್ ಇಂಡಿಯಾ, ಯೂನಿವರ್ಸಿಟಿ ಆಫ್ ಮೈಸೂರು, ೧೯೭೨, ಪುಟಗಳು ೧೭೩-೧೮೦, ಮತ್ತು ಸುಂದರ ಅ., ದಿ. ಅರ್ಲಿ ಛೇಂಬರ್ ಟೂಂಬ್ಸ್ ಆಫ್ ಸೌಥ್ ಇಂಡಿಯಾ, ದೆಹಲಿ, ೧೯೭೫, ಪುಟ. ೧೯೨.

[6]       ನಾಗರಾಜ ರಾವ್ ಎಂ.ಎಸ್., ಮತ್ತು ಮಲ್ಹೋತ್ರ ಕೆ.ಸಿ., ಯವರು ತೆಕ್ಕಲಕೋಟದ ಹೊಸ ಶಿಲಾಯುಗದ ನೆಲೆಗಳನ್ನು ಉತ್ಖನನ ಮಾಡಿದ ಸಮಯದಲ್ಲಿ ದೊರೆತ ಮಾನವ ಆಸ್ತಿ ಪಂಜರಗಳು ಇಂದಿನ ಬೋಯಾ ಜನಾಂಗದ ಶರೀರದ ಎಲ್ಲಾ ಆಕರಗಳನ್ನು ಹೋಲುತ್ತವೆಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೋಡಿ ಅವರ ಪುಸ್ತಕ ‘ದಿ ಸ್ಟೋನ್ ಏಜ್ ಹಿಲ್‌ಲ್ ಡ್ವೆಲ್ಲರ್ಸ್ ಆಫ್ ತೆಕ್ಕಲಕೋಟಾ’, ಪುನಾ, ೧೯೬೫ ಎ, ಪುಟ. ೧೫೯. ಸೈಟೆಡ್ ಇನ್ ಸುಂದರ ಅ., ದಿ ಅರ್ಲಿ ಛೇಂಬರ್ ಟೂಂಬ್ಸ್ ಆಫ್ ಸೌಥ್ ಇಂಡಿಯಾ, ದೆಹಲಿ, ೧೯೭೫, ಪು. ೧೯೫.

[7]       ನೀಲಕಂಠ ಶಾಸ್ತ್ರಿ ಕೆ.ಎ., ಸಂಗಮ್ ಲಿಟರೇಚರ್ :ಇಟ್ಸ್ ಕಲ್ಟ್ಸ್ ಅಂಡ್ ಕಲ್ಚರ್ಸ್, ಮದ್ರಾಸ್, ೧೯೭೨, ಪು. ೭

[8]       ಅದೇ., ಪು. ೨೧.

[9]       ಅದೇ., ಪು. ೩೧.

[10]      ಅದೇ., ಪು. ೩೨.

[11]      ಅದೇ., ಪು. ೩೮.

[12]      ಅದೇ., ಪು. ೩೩.

[13]      ಎಡ್ಗರ್ ಥರ್ಸ್ಟನ್, ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ, ಸಂ. ೧, ಮರುಮುದ್ರಣ, (ದೆಹಲಿ, ೧೯೭೫), ಪು. ೧೮೪.

[14]      ಅದೇ

[15]      ಶಾಮಶಾಸ್ತ್ರಿ ಆರ್., ಅನುವಾದಿಸಿರುವ ಕೌಟಿಲ್ಯನ ಅರ್ಥಶಾಸ್ತ್ರ, ೯ನೇ ಆವೃತ್ತಿ, ಮೈಸೂರು, ೧೯೮೮, ಪು. ೩೬೦.

[16]      ಅದೇ., ಪು. ೩೬೦.

[17]      ಅದೇ., ಪುಟಗಳು. ೩೭೬-೭೭.

[18]      ರಾಜರಾಮ ಹೆಗ್ಡೆಯವರು ಬಿಲ್ಲರು ಮೂಲತಃ ಬೇಡರು ಎಂದು ತಮ್ಮ ಲೇಖನದಲ್ಲಿ ಇತ್ತೀಚೆಗೆ ಪ್ರತಿಪಾದಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೋಡಿ. ‘ಬಿಲ್ಲಮೂನೂರ್ವರು :ಕನ್ನಡ ಶಾಸನಗಳಲ್ಲಿ ಸಮುದಾಯಗಳ ಇತಿಹಾಸ’ಇನ್ ಪ್ರೊ. ಲಕ್ಷ್ಮಣ್ ತೆಲಗಾವಿ ಸಂಪಾದಿಸಿ ರುವ ಚರಿತ್ರೆ ಅಧ್ಯಯನ, ಸಂ. ೧, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬, ಪುಟಗಳು. ೯೧-೧೦೧.

[19]      ಕೊಸಾಂಬಿ ಡಿ.ಡಿ., ಏನ್ಸಿಯಂಟ್ ಇಂಡಿಯಾ, ಮರುಮುದ್ರಣ, ನವದೆಹಲಿ, ೧೯೯೦, ಪು. ೪೩.

[20]      ಅದೇ., ಪು. ೪೫.

[21]      ಅದೇ., ಪು. ೫೧.

[22]      ಶರ್ಮಾ ಆರ್.ಎಸ್., ಶೂದ್ರಾಸ್ ಇನ್ ಏನ್ಸಿಯಂಟ ಇಂಡಿಯಾ, ಮರುಮುದ್ರಣ, ನವದೆಹಲಿ, ೧೯೯೦, ಪು. ೫೦.

[23]      ಅದೇ., ಪು. ೨೯೧.

[24]      ಅದೇ

[25]      ಅದೇ

[26]      ಅದೇ

[27]      ಅದೇ., ಪುಟಗಳು. ೨೯೧-೯೨.

[28]      ಅದೇ., ಪುಟಗಳು. ೩೩೫-೩೭.

[29]      ಮಜುಮ್‌ದಾರ್ ಆರ್.ಸಿ., ಏನ್ಸಿಯಂಟ್ ಇಂಡಿಯಾ, ದೆಹಲಿ, ೧೯೭೭, ಪು. ೩೫೧.

[30]      ಎಪಿಗ್ರಾಫಿಯಾ ಕರ್ನಾಟಿಕಾ, ಸಂ. ೧೦., ಮುಳಬಾಗಿಲು. ೮೫ (ಹಳೆಯ ಆವೃತ್ತಿ).

[31]      ಅದೇ., ಪು. ೧೬೨.

[32]      ಚಿದಾನಂದಮೂರ್ತಿ ಎಂ., ‘ಬೇಟೆಯ ವೀರಗಲ್ಲುಗಳು’, ಉದಯವಾಣಿ, ದೀಪಾವಳಿ ಸಂಚಿಕೆ, ೧೯೭೩, ಪುಟ. ೬೫.

[33]      ಭಾರತಿ ಬಿ.ಆರ್. ಮತ್ತು ಗುರು ಎ.ಆರ್., ‘ಮರಸಣಿಗೆಯ ಅಪರೂಪದ ಬೇಟೆ ವೀರಗಲ್ಲು’, ಇತಿಹಾಸ ದರ್ಶನ, ಸಂ. ೧೬, ಬೆಂಗಳೂರು, ೨೦೦೧, ಪುಟಗಳು. ೪೮-೫೧.

[34]      ಗೋಪಾಲರಾವ್ ಹೆಚ್.ಎಸ್., ‘ಕೈದಾಳದ ಹುಲಿ ಬೇಟೆಯ ವೀರಗಲ್ಲು ಶಾಸನ’, ಇತಿಹಾಸ ದರ್ಶನ, ಸಂ. ೪, ಬೆಂಗಳೂರು, ೧೯೮೯, ಪು. ೧೭.

[35]      ವಿರೂಪಾಕ್ಷಿ ಪೂಜಾರಹಳ್ಳಿ, ‘ವಿಜಯನಗರ ಕಾಲದ ವಾಸ್ತು ಶಿಲ್ಪದಲ್ಲಿ ಬೇಟೆ ಚಿತ್ರಣ’, ಇತಿಹಾಸ ದರ್ಶನ, ಸಂ. ೧೪, ಬೆಂಗಳೂರು, ೧೯೯೯, ಪುಟಗಳು. ೧೬೬-೧೭೩.

[36]      ಮೈಸೂರು ಆರ್ಕಿಯಾಲಾಜಿಕಲ್ ರಿಪೋರ್ಟ್ಸ್, ೧೯೨೩, ಪು. ೮೩.

[37]      ಎ.ಕ. ಸಂ.೭, ನಾಗಮಂಗಲ, ಪುಟ. ೩೪.

[38]      ಅದೇ., ಸಂ.೮, ಆಲೂರು, ಪುಟ. ೩೫.

[39]      ಅದೇ., ಸಂ. ೯, ಬೇಲೂರು, ಪುಟ. ೩೪೦.

[40]      ಅದೇ., ಸಂಖ್ಯೆ. ೫೫೦.

[41]      ಅದೇ., ಸಂ. ೬, (ಹ), ತರೀಕೆರೆ, ಪುಟ. ೮೪.

[42]      ಅದೇ., ಸಂ. ೫, ಕೃಷ್ಣರಾಜನಗರ, ಪುಟ. ೮.

[43]      ಅದೇ., ಸಂ. ೧೧, ಚಿಕ್ಕಮಗಳೂರು, ಪುಟ. ೫೩.