ಬೇಡ ಬುಡಕಟ್ಟಿನ ಉಪಪಂಗಡವಾದ ತಳವಾರರನ್ನು ಶಾಸನಗಳು ತಳಾರ, ತಳವಾರ, ತಳವಾರಿಕೆಯವರು ಮತ್ತು ಕಾವಲುಗಾರ ಎಂದು ಉಲ್ಲೇಖಿಸಿವೆ. ತಳವಾರ ಎಂದರೆ ಒಂದು ಸ್ಥಳದ ವಾರಸುದಾರ. ತಳವಾರಿಕೆ ಎಂಬುದು ಅಧಿಕಾರದ ಸಂಕೇತ. ಕ್ರಿ.ಪೂ. ೧೦೦ರ ಆಂಧ್ರದ ಭಟ್ಟಿಪ್ರೊಳು ಶಾಸನವು

[1] ತಳವಾರರ ಬಗ್ಗೆ ಮೊದಲು ಬೆಳಕು ನೀಡಿದೆ. ಇದರ ಪ್ರಕಾರ ತಳವಾರ ಎಂಬುವವನು ಒಬ್ಬ ಅಧಿಕಾರಿಯಾಗಿದ್ದನು. ಕ್ರಿ.ಶ. ೧೦೧೮ರ ಕೊಪ್ಪಳ ಜಿಲ್ಲೆ ಮತ್ತು ಅದೇ ತಾಲ್ಲೋಕಿನ ಹಲಗೇರಿ ಶಾಸನವು[2] ತಳಾರ ನಾಯಕ ಎರೆಯಮ್ಮನು ಬೆಣ್ಣೆಕಲ್ಲು ಸೀಮೆ ಯುದ್ಧದಲ್ಲಿ ಸತ್ತಾಗ ಅವನ ಸ್ಮರಣೆಗೋಸ್ಕರ ಸ್ಮಾರಕವನ್ನು (ವೀರಗಲ್ಲು) ನಿಲ್ಲಿಸಿದುದನ್ನು ತಿಳಿಸುತ್ತದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೋಕಿನ ಚಿಕ್ಕಹನ ಸೋಗೆಯ ಕ್ರಿ.ಶ. ೧೨ನೇ ಶತಮಾನದ ಶಾಸನವು[3] ಹನಸೋಗೆಯಲ್ಲಿ ಹುಟ್ಟಿದ ಬಣ್ಣಜ್ಜನ ಮಗ ತಳಾ(ವಾ)ರ ಉತ್ತಜನು, ಗಾಳವನವಾಡಿ ಹನಿಬ್ಬನಾಯಕರು ಕೋಳಿಯೂರ ಕೋಟೆ ಯನ್ನು ಮುತ್ತಿದಾಗ ಅವರೊಡನೆ ಹೋರಾಡಿ ಸತ್ತಿದ್ದನ್ನು ತಿಳಿಸುತ್ತದೆ. ಅದೇ ಜಿಲ್ಲೆಯ ಚಾಮರಾಜನಗರ ತಾಲ್ಲೋಕಿನ ಮಲೆಯೂರು ಗ್ರಾಮದ ಕ್ರಿ.ಶ. ೧೪೨೨ರ ಶಾಸನವು[4] ತಳವಾರಿಕೆಯಿಂದ ಬರುತ್ತಿದ್ದ ಸುಂಕವನ್ನು ತಿಳಿಸುತ್ತದೆ. ಕ್ರಿ.ಶ. ೧೪೬೫-೬೬ರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೋಕಿನ ಬೆಳ್ಳಾಲೆ ಶಾಸನವು[5] ಹಳೆಯ ತಳವಾರಿಕೆಯನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೧೬೪೪ರ ಹಾಸನ ಜಿಲ್ಲೆ ಮತ್ತು ಅದೇ ತಾಲ್ಲೋಕಿನ ಗೊರೂರು ಶಾಸನವು[6] ತಳವಾರ ನರಸಿಂಗಣ್ಣನಿಗೆ ಅಲ್ಲಿಯ ಆಶೇಷ (ಎಲ್ಲಾ) ಮಹಾಜನಗಳು ಆ ಗ್ರಾಮವನ್ನು ಜೀರ್ಣೋದ್ಧಾರ ಮಾಡುವಂತೆ ಅರಿಕೆ ಮಾಡಿಕೊಂಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೪೬೭ರ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೋಕಿನ ಮುಳ್ಳೂರು ಶಾಸನವು[7] ತಳವಾರಿಕೆಯಿಂದ ಬರುತ್ತಿದ್ದ ಸುಂಕವನ್ನು ತಿಳಿಸುತ್ತದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೋಕಿನ ಕ್ರಿ.ಶ. ೧೫೨೮ ಮತ್ತು ೧೫೫೦-೫೧ರ ಮೇಲುಕೋಟೆಯ ಎರಡು ಶಾಸನಗಳು[8] ಸಿಂಧು ಘಟ್ಟದವರನ್ನು ತಳವಾರರನ್ನಾಗಿ ಇಟ್ಟುಕೊಂಡಿದ್ದು ಹಾಗೂ ಅದರಿಂದ ಬರುತ್ತಿದ್ದ ಆದಾಯ ೨೬ ಗದ್ಯಾಣಗಳೆಂದು ತಿಳಿಸುತ್ತದೆ. ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೋಕಿನ ದಾಸನಪುರದ ಕ್ರಿ.ಶ. ೧೫೩೬ರ ಶಾಸನವು[9] ತಳವಾರಿಕೆಯಿಂದ ಬರುತ್ತಿದ್ದ ಸುಂಕವನ್ನು ತಿಳಿಸುತ್ತದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೋಕಿನ ಅಮರಾಪುರಂನ ವೀರಗಲ್ಲು ಶಾಸನವು[10] ಕುರುಳೆಯ ನಾಯಕ ಎಂಬುವವನು ತುರುಗಳನ್ನು ಸೆರೆಹಿಡಿದಾಗ ತೈಲಂಗೆರೆಯ ತಳವಾರ ಬೊಮ್ಮಯ್ಯನಾಯಕನ ಮಗ ಮುಂಡಿನ ಬೊಮ್ಮಯ್ಯನು ಹೋರಾಟ ಮಾಡಿ ಸತ್ತಿದ್ದನ್ನು ತಿಳಿಸುತ್ತದೆ.

ಈ ಮೇಲಿನ ಶಾಸನಗಳಿಂದ ತಿಳಿದುಬರುವುದೇನೆಂದರೆ, ಸಾಮಾನ್ಯವಾಗಿ ಈ ಜವಾಬ್ದಾರಿಯನ್ನು ಅಂದರೆ ಒಂದು ಸ್ಥಳದ ರಕ್ಷಣೆಯ ಹೊಣೆಯನ್ನು ಆಡಳಿತಾಧಿಕಾರಿಗಳು ಬೇಟೆಯ ವೃತ್ತಿಯಲ್ಲಿ ಪರಿಣತಿಯನ್ನು ಮತ್ತು ಆಯುಧಗಳನ್ನು ಬೇಟೆಗಾರರು ಹೊಂದಿದ್ದ ರಿಂದ ಬೇಡರಿಗೆ ವಹಿಸಿ ಅವರಿಂದ ಕಂದಾಯವನ್ನು ಸಂಗ್ರಹಿಸುತ್ತಿದ್ದರು. ಈ ರೀತಿ ಒಂದು ಸ್ಥಳದ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರಿಂದ ಅಲ್ಲಿಯ ಉತ್ಪತ್ತಿಯ ಮೇಲೆ ಇವರ ಹತೋಟಿಯಿತ್ತು. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ನೆರವಾಗಿರಬಹುದು.

ಯೋಧರು

ಬೇಡ ಜನಾಂಗದ ಮತ್ತೊಂದು ಉಪ ಪಂಗಡವಾದ ಪರಿವಾರದವರ ಬಗ್ಗೆ ತಮಿಳು ಶಾಸನಗಳು ಬೆಳಕು ಬೀರುತ್ತವೆ. ಕನ್ನಡ ನಿಘಂಟಿನ ಪ್ರಕಾರ ಪರಿವಾರ ಎಂದರೆ ಸುತ್ತಲಿನ ಜನ. ಪರಿಚಾರಕ ಎಂದರೆ ಸೇವಕ. ಅಂದರೆ ಯಾರು ಆಳರಸರ ಸೇವೆಯಲ್ಲಿದ್ದರೋ ಅಂತಹವರನ್ನು ಪರಿವಾರ ಅಥವಾ ರಾಜಪರಿವಾರದವರೆಂದು ಕರೆಯಲಾಗಿದೆ. ಎಡ್ಗರ್ ಥರ್ಸ್ಟನ್‌ರವರು ಕ್ರಿ.ಶ. ೧೮೯೧ರ ಮದ್ರಾಸ್ ಜನಗಣತಿ ಆಧಾರದ ಮೇಲೆ ಇವರು ಮೂಲತಃ ತೆಲುಗಿನವರಾಗಿದ್ದು, ಬೇಟೆಯ ವಂಶಪರಂಪರೆಯಾದ ಕುಲಕಸುಬೆಂದು ಅಭಿಪ್ರಾಯಪಟ್ಟಿದ್ದಾರೆ. ಇವರು ಮುಂದುವರಿದು ಕ್ರಿ.ಶ. ೧೯೦೧ರ ಜನಗಣತಿಯ ಆಧಾರದ ಮೇಲೆ ಇವರು ಸಹ ಪಲ್ಲಕ್ಕಿ ಅಥವಾ ಮೇಣಿಯನ್ನು ಹೊರುವ ಕೆಲಸದಲ್ಲಿ ನಿಯೋಜಿತ ರಾಗಿದ್ದು, ಬೋಯಿ ಅಥವಾ ಪರಿವಾರದವರೆಂದು ಕರೆದಿದ್ದಾರೆ.[11] ದಕ್ಷಿಣ ಭಾರತದ ಪ್ರಸಿದ್ಧ ಇತಿಹಾಸಕಾರ ಕೆ.ಎ. ನೀಲಕಂಠಶಾಸ್ತ್ರಿಯವರುಇವರ ಬಗ್ಗೆಹೆಚ್ಚು ಬೆಳಕು ಚೆಲ್ಲಿದ್ದಾರೆ. ಇವರು ತಮ್ಮ ಪುಸ್ತಕ ‘ದಿ ಚೋಳಾಸ್’ದಲ್ಲಿ ಚೋಳ ರಾಜರಾಜನ ಮನೆಯ ಸಿಬ್ಬಂದಿಯು (Royal household) ಹಲವಾರು ರೀತಿಯ ಸೇವಕರನ್ನು ಒಳಗೊಂಡಿದ್ದು, ಅದರಲ್ಲಿ ರಾಜನ ಪ್ರಮುಖ ಅಂಗರಕ್ಷಕರಾಗಿದ್ದವರನ್ನು ಪರಿವಾರದವರೆಂದು ತಂಜಾವೂರಿನ ಶಾಸನವನ್ನಾಧರಿಸಿ ಹೇಳಿದ್ದಾರೆ.[12] ಈ ಶಾಸನವು ಒಂದನೇ ರಾಜರಾಜನ (ಕ್ರಿ.ಶ. ೯೮೫-೧೦೧೪) ಕಾಲಕ್ಕೆ ಸೇರಿ ದ್ದಾಗಿದೆ. ಇವರ ನಂತರ ದಕ್ಷಿಣ ಭಾರತದ ಇತಿಹಾಸದ ಬಗ್ಗೆಹೆಚ್ಚು ಬೆಳಕು ಬೀರಿದವರೆಂದರೆ ಟಿ.ವಿ. ಮಹಾಲಿಂಗಮ್ ಅವರು. ಇವರು ತಮ್ಮ ‘ಸೌಥ್ ಇಂಡಿಯನ್ ಪಾಲಿಟಿ’ಯಲ್ಲಿ ಚೋಳರ ಕಾಲದ ಸೈನಿಕ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವನ್ನು ಚರ್ಚಿಸುವಾಗ ಚೋಳರ ಕಾಲ್ದಳವು (Infantry) ಹಲವಾರು ತುಕಡಿಗಳನ್ನು (Regiments) ಹೊಂದಿತ್ತು ಎಂದಿದ್ದಾರೆ.[13] ಒಂದನೇ ರಾಜರಾಜನ ತಂಜಾವೂರು ಶಾಸನದ ಪ್ರಕಾರ ಅವನ ಸೈನ್ಯದಲ್ಲಿ ೩೧ ತುಕಡಿಗಳಿ ದ್ದವು. ಅವುಗಳೆಂದರೆ, ಮುಮ್ಮಡಿ ಸೋಳ ತೇರಿಂದ ಪರಿವಾರಟ್ಟರ್, ಕೇರಳಾಂತಕ ತೇರಿಂದ ಪರಿವಾರಟ್ಟಾರ್, ಮೂಲ ಪರಿವಾರ ವಿಟ್ಟೇರು ಅಥವಾ ಜನನಾಥ ತೇರಿಂದ ಪರಿವಾರಟ್ಟಾರ್, ಸಿಂಗಳಾಂಕ ತೇರಿಂದ ಪರಿವಾರಟ್ಟಾರ್ ಮತ್ತು ಪರಿವಾರ ಮೆಯಕಪ್ಪಾರಗಲ್ ಇತ್ಯಾದಿ. ಈ ತುಕಡಿಗಳಿಗೆ ರಾಜನ ಬಿರುದು ಅಥವಾ ಹೆಸರನ್ನು ಇಡಲಾಗಿತ್ತು. ಇಲ್ಲಿಯೂ ಸಹ ಗಮನಿಸ ಬೇಕಾದ ಅಂಶವೆಂದರೆ, ಬೇಟೆಗಾರರು ಆಯುಧಗಳನ್ನು ಉಪಯೋಗಿಸುವುದರಲ್ಲಿ ಪರಿಣತ ರಾಗಿದ್ದರಿಂದ ಅವರನ್ನು ಆಳರಸರು ತಮ್ಮ ಸೇವೆಯಲ್ಲಿ ನಿಯೋಜಿಸಿಕೊಂಡು ಅವರ ತಂಡಕ್ಕೆ ಪರಿವಾರ ಎಂಬ ಹೆಸರನ್ನು ಇಟ್ಟಿರುವುದು. ಚೋಳರ ಕ್ರಿ.ಶ. ೯೪೯-೫೦ರಲ್ಲಿ ತಕ್ಕೋಳಂ ಯುದ್ಧದಲ್ಲಿ ರಾಷ್ಟ್ರಕೂಟರೊಡನೆ ಹೋರಾಡಾಲು ಇಂತಹ ತುಕಡಿ (ಪರಿವಾರ ದವರನ್ನು)ಗಳನ್ನು ಬಳಸಿರುವುದು ಗಮನಾರ್ಹವಾದದ್ದು. ಇಲ್ಲಿಯೂ ಸಹ ಬೇಡರು ಆಳರಸರ ಸೇವೆಯಲ್ಲಿ ಸೇರಿಕೊಂಡು ಜೀವನ ಸಾಗಿಸುತ್ತಿದ್ದುದು ಕಂಡುಬರುತ್ತದೆ.

ಆಳರಸರ ಸೇವೆ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೋಕಿನ ಕಣಕಟ್ಟೆಯ ಶಾಸನಗಳು ಬೇಡರಿಗೆ ಬೋಯಾ ಮತ್ತು ಬೋವ ಎಂಬ ಹೆಸರಿದ್ದುದನ್ನು ತಿಳಿಸುತ್ತವೆ.[14] ಕನ್ನಡ ನಿಘಂಟಿನ ಪ್ರಕಾರ ಬೋಯಾ ಅಥವಾ ಬೋವಾ ಎಂದರೆ ಪಲ್ಲಕ್ಕಿ/ಮೇಣಿಯನ್ನು ಹೊರುವವರು ಎಂದರ್ಥ. ಇವರು ಆಳರಸರ ಪಲ್ಲಕ್ಕಿಯನ್ನು ಹೊರುವ ಸೇವೆಯಲ್ಲಿದುದರಿಂದ ಇವರಿಗೂ ಸಹ ಕೆಲಕಾಲ ನಂತರ ಕೆಲವು ಸ್ಥಾನಮಾನಗಳನ್ನು ನೀಡಿ ಗೌರವಿಸಿದಂತೆ ಕಾಣುತ್ತದೆ.

ಸ್ಥಳೀಯ ಅಧಿಕಾರಿಗಳು

ಕ್ರಿ.ಶ. ೧೪ನೇ ಶತಮಾನದಿಂದ ಬೇಡರ ಸ್ಥಳೀಯ ಅಧಿಕಾರಿಗಳಾಗಿ ಆಡಳಿತ ನಡೆಸಿದ್ದನ್ನು ಶಾಸನಗಳು ತಿಳಿಸುತ್ತವೆ. ಉದಾ. ಮೈಸೂರು ಜಿಲ್ಲೆ ಚಾಮರಾಜನಗರ ತಾಲೋಕಿನ ಹರದನ ಹಳ್ಳಿಯ ಕ್ರಿ.ಶ. ೧೩೨೪ರ ಶಾಸನವು[15] ಬೇಡಗಂಪಣ ರಾಯಣ್ಣ ನಾಯಕನು ಕುನ್ನಪನಾಗರ ಸೀಮೆಯಿಂದ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಆಳುತ್ತಿದ್ದುದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೦೧೩ರ ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲ್ಲೋಕಿನ ಶಾಸನವು[16] ಕುರುವತ್ತಿಯ ಬೇಡಗಾವುಂಡನು ಭೂಮಿಯನ್ನು ದಾನಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೧೫೭ರ ಬೇಲೂರು ತಾಲ್ಲೋಕಿನ ಕಟ್ಟೆಸೋಮನಹಳ್ಳಿಯ ಶಾಸನವು[17] ಹೊಯ್ಸಳ ದೊರೆ ಒಂದನೇ ನರಸಿಂಹನ ಸಾಮಂತ ಬೇಟೆಯ ಉದಯಾದಿತ್ಯ ನಾಯಕನು ಉತ್ತರಾಯಣ ಸಂಕ್ರಮಣದಂದು ಬಿಲ್ಲೇಶ್ವರ ದೇವರಿಗೆ ಭೂಮಿಯನ್ನು ದತ್ತಿ ಬಟ್ಟಿದ್ದನ್ನು ತಿಳಿಸುತ್ತದೆ. ಹಂಪಿ ಪರಿಸರದ ರಘುನಾಥ ದೇವಾಲಯ ಪರಿಸರದ ಕ್ರಿ.ಶ. ೧೩೮೦ರ[18] ಶ್ರೀ ವೀರಪ್ರತಾಪ ಹರಿಹರ ಮಹಾರಾಯರ ಮನೆಯ ಎಡವಂಕದ ಬೇಟೆಗಾರ ಮಲಗೆಯನಾಯ್ಕನ ಮಗ ಬದ್ದೆಯನಾಯ್ಕನು ಬೇಟೆಗಾರರ ಹೆಬ್ಬಾಗಿಲು ಮೂಡಣ ದಿಕ್ಕಿನ ಬರತೆಯ ಮೈಲಾರ ದೇವರ ಪ್ರತಿಷ್ಟೆ ಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೪೧೩ರ ಮೈಸೂರು ಜಿಲ್ಲೆ ಚಾಮರಾಜ ನಗರ ತಾಲ್ಲೋಕಿನ ಮೂಡಲ ಅಗ್ರಹಾರದ ಶಾಸನವು[19] ಬಿಲ್ಲಗಾವುಂಡನು ಉಮ್ಮತ್ತೂರಿನ ಬಳಿ ಅಗ್ರಹಾರವೊಂದನ್ನು ಸ್ಥಾಪಿಸಿದುದನ್ನು ತಿಳಿಸುತ್ತದೆ. ಅದೇ ಜಿಲ್ಲೆಯ ಕೆ.ಆರ್.ನಗರ ತಾಲ್ಲೋಕಿನ ಕ್ರಿ.ಶ. ೧೫೫೭ರ ಗಳಿಗೆಕೆರೆ ಶಾಸನವು[20] ಹೊಳೆನರಸೀಪುರದ ದೊರೆ ವೆಂಕಟಪ್ಪ ನಾಯಕನು ಹಂಪಾಪುರವನ್ನು ಅವನ ತಾಯಿಯ ಪುಣ್ಯಕ್ಕೋಸ್ಕರ ರಾಮಪುರ ಎಂಬ ಅಗ್ರಹಾರವಾಗಿ ಮಾಡಿ ಗಳಿಗೆಕೆರೆಯನ್ನು ವಿಟ್ಟಲಭಟ್ಟರಿಗೆ ಅಲ್ಲಿಯ ಬೇಟೆ ಮತ್ತು ಬೇಟೆಗಾರರ ಸುಂಕದಿಂದ ಬಂದ ಆದಾಯವನ್ನು ಸರ್ವಮಾನ್ಯವಾಗಿ ಬಿಟ್ಟಿದ್ದನ್ನು ತಿಳಿಸುತ್ತದೆ. ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೋಕಿನ ಕ್ರಿ.ಶ. ೧೬೫೮ರ ಕಲ್ಲುಬ್ಯಾಡರಹಳ್ಳಿ ಶಾಸನವು[21] ರಂಗಪ್ಪನಾಯಕನ ಮಗ ನರಸಿಂಹನಾಯಕನು ನರಸಿಂಹಪುರಕ್ಕೆ ಸೇರಿದ (ನರಸಿಂಹ ಸಮುದ್ರ) ಬೇಡರಹಳ್ಳಿಯನ್ನು ಹರಿಪಂಡಿತನಿಗೆ ದಾನ ಮಾಡಿದ್ದನ್ನು ತಿಳಿಸುತ್ತದೆ.

ಮೇಲಿನ ವಿವರಣೆಗಳಿಂದ ತಿಳಿದುಬರುವುದೇನೆಂದರೆ ಬೇಡರು ಸ್ಥಳೀಯ ಅಧಿಕಾರಿಗಳಾಗಿ ಕಾರ್ಯವಹಿಸಿಕೊಂಡಿದ್ದರಿಂದ ಸಹಜವಾಗಿ ಉತ್ಪಾದನಾ ವಸ್ತುಗಳಾದ ಭೂಮಿ, ಮತ್ತಿತರ ವಸ್ತುಗಳು ಇವರ ಹಿಡಿತಕ್ಕೊಳಪಟ್ಟವು. ಇದರಿಂದಾಗಿ ಇವರು ಸಹ ಕಾಲಕ್ರಮೇಣ ಭೂಮಾಲೀಕರಾದರು. ಇದರಿಂದಾಗಿ ಆಡಳಿತದ ಜೊತೆಗೆ ಕೃಷಿ ಚಟುವಟಿಕೆಗಳನ್ನು ತೀವ್ರ ಗೊಳಿಸಿ ಆರ್ಥಿಕವಾಗಿ ಸಬಲರಾದರು. ಸಮಾಜದಲ್ಲಿ ತಮ್ಮ ಸ್ಥಾನ ಮಾನಗಳನ್ನು ಪಡೆದು ಕೊಳ್ಳಲು ಮತ್ತು ಇದ್ದ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು  ಇವರು ಸಹ ಸಮಾಜದ ಉನ್ನತ ವರ್ಗದವರಂತೆ ಬ್ರಾಹ್ಮಣರಿಗೆ, ದೇವಾಲಯಗಳಿಗೆ ಭೂಮಿಯನ್ನು ದಾನ ಮಾಡುವುದನ್ನು ಪ್ರಾರಂಭಿಸಿದರು.

ಶಾಸನಗಳ ಜೊತೆಗೆ ಕರ್ನಲ್ ಕೊಲಿನ್ ಮೆಕೆಂಜಿಯವರು ಕ್ರಿ.ಶ. ೧೯ನೇ ಶತಮಾನದ ಪ್ರಾರಂಭದಲ್ಲಿ ಸಂಗ್ರಹಿಸಿದಂತಹ ಕೈಫಿಯತ್ತುಗಳು (ಸ್ಥಳಪುರಾಣಗಳು) ಸಹ ಬೇಡ ಸಮುದಾಯದ ಆರ್ಥಿಕ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತವೆ. ಉದಾ. ಹತ್ತಿಬೆಳೆಗಲ್ಲು ಕೈಫಿಯತ್ತು[22] ಬೇಡರು ಮಾಡುತ್ತಿದ್ದ ಕೆಲಸ ಮತ್ತು ಅವರು ಅಧಿಕಾರಕ್ಕೆ ಬರಲು ನೆರವಾದ ಅಂಶಗಳನ್ನು ತಿಳಿಸುತ್ತದೆ. ಇದರ ಪ್ರಕಾರ ಬೆಳಕಲ್ಲುಗುಡ್ಡದಲ್ಲಿ ‘ಬೇಡರು ಪ್ರಾಬಲ್ಯ ಆಗಲಿಕ್ಕೆ ಕಾರಣ ವಿಜಯನಗರವು ತುರುಕರಿಂದ ಹಾಳಾದ ಮೇಲೆ ಈ ಬ್ಯಾಡರು (ಕೋಟೆ) ಕಟ್ಟಿಸಿಕೊಂಡರು. ಈ ಬ್ಯಾಡರು ೧೫ ಗ್ರಾಮಕ್ಕೆ ಕಾವಲಿ ತಳವಾರಿಕೆ ಮಾಡಿಕೊಂಡು ಅಧಿಕಾರ ಯಿವರೆ ಮಾಡಿಕೊಂಡು, ದಿವಾಣಕ್ಕೆ ಹಣ ಕೊಡುತಾಯಿದ್ದರು…. ಯೀ ದಿನದಲ್ಲು ಕಾವಲ ಸೋಮೆಳನಾಯಕನು ಕಾವಲ ಮಾಡಿಕೊಂಡು ಯಿದ್ದನು…. ಕಾವಲಿ ಬುಚ್ಚಪ್ಪ ನಾಯಕ ಮಗ ಚಿಕ್ಕ ಸೋಮೆಳನಾಯಕ ಕಾವಲಿ ಮಾಡಿಕೊಂಡು ಯಿದ್ದನು….’. ಇದರ ಪ್ರಕಾರ ಬೇಡರು ತಮ್ಮ ಜೀವನ ಸಾಗಿಸಲು ಕಾವಲುಗಾರಿಕೆ ಮತ್ತು ತಳವಾರಿಕೆ ಕೆಲಸ ಮಾಡುತ್ತಿದ್ದರು. ಬಳ್ಳಾರಿ ತಾಲ್ಲೋಕಿನ ಭಟ್ಟರಹಳ್ಳಿ ಕೈಫಿಯತ್ತು[23] ಬೇಡರ ಕಸುಬು ಮತ್ತು ಸಾಮಾಗ್ರಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರ ಪ್ರಕಾರ ‘ಕೆಲಮಂದಿ ಬ್ಯಾಡರ ನಾಯಕರು ನಾಯಿ, ಬಡಿಕೋಲು, ತಲೆಮೇಲೆ ಗಂಟು, ಕೈಯಲ್ಲಿ ಡ್ಯಾಗಿ ತೆಗೆದುಕೊಂಡು ಹೋದರು. ಕೈಯಲ್ಲಿ ಹಕ್ಕಿಪಂಜರ ಸಹಾ ತೆಗೆದುಕೊಂಡು ಹೋದರು. ಬಲೆಗಳು ಸಹ ಅವರವರ ಬೇಟೆಗಾರ್ರು ಅವರ ಸಾಮಾನು ತೆಗೆದುಕೊಂಡು ಹೋದರು…’. ಅರಿಕುಟಾರದ (ಉಮ್ಮತ್ತೂರು) ಕೈಫಿಯತ್ತು[24] ವೀರಭದ್ರನಾಯಕನು ಬೇಟೆ ಮಾರ್ಗವಾಗಿ ನಾಯಿ ಕಟ್ಟಿಕೊಂಡು ಬಂದು ಬೇಡರಪುರ ಗ್ರಾಮದಲ್ಲಿ ನೆಲೆಸಿದ್ದನ್ನು ತಿಳಿಸುತ್ತದೆ. ತಲಕಾಡಿನ ಎರಡು ಕೈಫಿಯತ್ತುಗಳು[25] ಗಂಗರ ರಾಜಧಾನಿಯಾದ ತಲಕಾಡನ್ನು ಹೇಗೆ ಇಬ್ಬರು ಬೇಡರಾದ ತಲ ಮತ್ತು ಕಾಡ ಎಂಬುವರು ಕಟ್ಟಿದರೆಂಬುದನ್ನು ತಿಳಿಸುತ್ತದೆ. ಇದರ ಪ್ರಕಾರ ‘…. ಯೀಶ್ವರಗೆ ಪೂಜೆಯನ್ನು ಮಾಡಿಕೊಂಡು ಇರಲಾಗಿ, ತಲ ಕಾಡ ಯೆಂಬ ಯಿಬ್ಬರು ಕಿರಾತರು ಬೇಟೆಗೋಸ್ಕರ ಬಂದಂತವರಾಗಿ ಯೀ ಗಜಗಳು ವೃಕ್ಷಪೂಜೆಯನ್ನು ಮಾಡುತ್ತಾಯಿದ್ದುದನ್ನು ನೋಡಿ ಆಶ್ಚರ್ಯಪಟ್ಟು ಗಜಗಳು ಹೊರಟುಹೋದ ಬಳಿಕ ಕೊಡಲಿಯಿಂದ ಆ ಮರವನ್ನು ಭೇದಿಸಿದಲ್ಲಿ ಸ್ವಾಮಿ ಶಿರಸ್ಸಿನ ಮೇಲೆ ಪೆಟ್ಟು ಬೀಳಲಾಗಿ ರಕ್ತಪ್ರಹಾರವಾಗಲು ಆ ಕಿರಾತಕರು ಮೂರ್ಚಿತರಾಗಲು….. ತಲಕಾಡ ಎಂಬ ಯಿಬ್ಬರು ಬೇಡರಿಗೆ ಸಾಯುಜ್ಯ ಪದವಿಯನ್ನು ಕೊಟ್ಟು ಈ ಕ್ಷೇತ್ರವು ನಿಮ್ಮ ಹೆಸರಿನಿಂದ ತಲಕಾಡು ಎಂಬ ನಾಮಧೇಯವುಳ್ಳದ್ದಾಗಲಿ ಎಂದು ಅಪ್ಪಣೆಕೊಟ್ಟರು…’. ಇದರಿಂದ ದಕ್ಷಿಣ ಕರ್ನಾಟಕದಲ್ಲಿಯೂ ಸಹ ಬೇಡರಿಗೆ ಕಿರಾತಕ ಎಂದು ಕರೆಯುತ್ತಿದ್ದುದು ಕಂಡುಬರುತ್ತದೆ.

ಈ ಕೈಫಿಯತ್ತುಗಳಿಂದ ತಿಳಿದುಬರುವುದೇನೆಂದರೆ, ಬೇಡರ ಕಸುಬು ಬೇಟೆಯಾಗಿದ್ದು, ಬೇಟೆಗಾಗಿ ನಾಯಿ, ಬಲೆ, ಪಂಜರ, ಕೊಡಲಿ ಮುಂತಾದ ಆಯುಧಗಳನ್ನು ಹೊಂದಿದ್ದರು. ಬೇಡರು/ಬೇಟೆಗಾರರು ವಿಜಯನಗರದ ಕಾಲದಲ್ಲಿ ಮತ್ತು ಅದಕ್ಕೆ ಮುಂಚೆ ಆಳರಸರ ಸೇವೆಯಲ್ಲಿದ್ದು ಕೆಲವು ಸೈನಿಕ ಮತ್ತು ಆಡಳಿತ ಸ್ಥಾನಮಾನಗಳನ್ನು ಹೊಂದಿದ್ದರು. ಆದರೆ ಕ್ರಿ.ಶ. ೧೫೬೫ರ ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯವು ಹಾಳಾಗಲು, ಇವರು ತಮ್ಮ ಸ್ಥಳಗಳಲ್ಲಿ ಅಥವಾ ಪ್ರಾಂತ್ಯಗಳಲ್ಲಿ ಸ್ವತಂತ್ರ ರಾಜರಾಗಿ (ತುಂಡರಸರು) ಕರ್ನಾಟಕದ ಹಲವು ಭಾಗಗಳಲ್ಲಿ ಅಧಿಕಾರಕ್ಕೆ ಬಂದರು.

ಈ ಮೇಲಿನ ದಾಖಲೆಗಳಿಂದ ತಿಳಿದುಬರುವುದೇನೆಂದರೆ, ಬೇಡ (ನಾಯಕ) ಜನಾಂಗವು ಇತರ ಜನಾಂಗಗಳಂತೆ ತನ್ನದೇ ಆದ ಇತಿಹಾಸ ಹೊಂದಿದೆ. ಇವರ ಮುಖ್ಯ ಕಸುಬು ಬೇಟೆಗಾರಿಕೆ. ಆದ್ದರಿಂದ ಇವರು ಹೆಚ್ಚಾಗಿ ಗುಡ್ಡಗಾಡು ಮತ್ತು ನದಿ, ಹಳ್ಳ ಕೊಳ್ಳಗಳ ಪ್ರದೇಶಗಳಲ್ಲಿ ವಾಸವಾಗಿದ್ದರು. ಅದಕ್ಕಾಗಿಯೇ ಇವರನ್ನು ಮಲೆಪರ್ ಎಂದು ಕ್ರಿ.ಶ. ೭ನೇ ಶತಮಾನದಲ್ಲಿ ಕರೆಯಲಾಗಿದೆ. ತಮ್ಮ ಆಹಾರವನ್ನು ಪಡೆಯಲು ಬೇಟೆಯನ್ನು ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡು, ಬೇಟೆಗಾಗಿ ನಾಯಿ, ಬಲೆ, ಪಂಜರ, ಬಿಲ್ಲು ಮುಂತಾದ ಆಯುಧಗಳನ್ನು ಕಾಲಕ್ರಮೇಣ ಹೊಂದಿಸಿಕೊಂಡರು. ಬೇಟೆ ಸಿಗದಿದ್ದ ಸಮಯ ದಲ್ಲಿ ಇವರು ದಾರಿಹೋಕರನ್ನು ಲೂಟಿ ಮಾಡಿ ತಮ್ಮ ಹಸಿವನ್ನು ನಿವಾರಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರು ನಾಗರೀಕ ಸಮಾಜಕ್ಕೆ ಒಂದು ರೀತಿಯ ಪಿಡುಗಾಗಿ ಬೇಡವಾದರು. ಆದರೆ ಆಳರಸರಿಗೆ ಇವರ ಅವಶ್ಯಕತೆ ಹೆಚ್ಚಾಗಿದ್ದಂತೆ ಕಂಡುಬರುತ್ತದೆ. ಏಕೆಂದರೆ ಇವರು ಪ್ರಾಣಿಗಳನ್ನು ಕೊಲ್ಲುವುದರಲ್ಲಿ ಮತ್ತು ದಾರಿಹೋಕರನ್ನು ತಡೆದು ಹೆದರಿಸಿ ಲೂಟಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದರಿಂದ ಆಳರಸರು ಮೊದಮೊದಲು ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಇವರನ್ನು ತಮ್ಮ ಅಂಗರಕ್ಷಕರನ್ನಾಗಿ ಸೇರಿಸಿಕೊಂಡರು. ನಂತರ ತಮ್ಮ ನಾಡನ್ನು ಶತ್ರುವಿನಿಂದ ಕಾಪಾಡಲು ಹಾಗೂ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಶತ್ರು ನೆಲ, ಜಲ, ಹೆಣ್ಣು ಮತ್ತು ದನಕರುಗಳನ್ನು ಅಪಹರಿಸಲು ಇವರನ್ನು ಹೆಚ್ಚುಹೆಚ್ಚಾಗಿ ತವ್ಮು ಸೇವೆಯಲ್ಲಿ ನಿಯೋಜಿಸಿಕೊಂಡು, ಇವರ ಸ್ವಾಮಿನಿಷ್ಟೆ ಮತ್ತು ಕರ್ತವ್ಯಗಳನ್ನು ಗಮನಿಸಿ ಇವರಿಗೆ ರಾಯ, ವೀರ, ಗಾವುಂಡ, ನಾಯಕ, ದಣ್ಣಾಯಕ ಇತ್ಯಾದಿ ಬಿರುದುಗಳನ್ನು ನೀಡಿ ಗೌರವಿಸಲಾರಂಭಿಸಿದರು. ಕ್ರಿ.ಶ. ೭ನೇ ಶತಮಾನದಲ್ಲಿ ಇವರನ್ನು ಮೊತ್ತಮೊದಲ ಬಾರಿಗೆ ನಾವು ಶಾಸನಗಳಲ್ಲಿ ನೋಡುವುದು ತುರುಗಳನ್ನು ಅಪಹರಿಸುವುದಕ್ಕೋಸ್ಕರ ತುರುಗಾಳಗ ಗಳಲ್ಲಿ ಬಳಸಿಕೊಂಡಿರುವುದು. ನಂತರದ ಕಾಲದಲ್ಲಿ ಇವರು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಆಯುಧಗಳಲ್ಲಿ ನಿಪುಣತೆ ಸಾಧಿಸಿದ್ದರಿಂದ ಇವರನ್ನು ತಳವಾರರನ್ನಾಗಿ, ಸೈನಿಕರಾಗಿ (ಪರಿವಾರ) ಮತ್ತು ಆಡಳಿತಾಧಿಕಾರಿಗಳಾಗಿ ಹಲವಾರು ರಾಜಮನೆತನಗಳು ನೇಮಿಸಿ ಕೊಂಡವು. ಅಂದಿನಿಂದ ಅವರು ಕ್ರಮೇಣವಾಗಿ ಭೂಮಾಲೀಕರಾದರು. ಕ್ರಿ.ಶ. ೧೬ನೇ ಶತಮಾನದಲ್ಲಿ ವಿಜಯನಗರದ ಪತನದ ನಂತರ ಈ ಅಧಿಕಾರಿಗಳು ತಮ್ಮ ತಮ್ಮ ಪ್ರಾಂತ್ಯದ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿ ಸ್ವತಂತ್ರ ರಾಜರಾಗಿ ಹೊರಹೊಮ್ಮಿ ೧೮ನೇ ಶತಮಾನದಲ್ಲಿ ಪ್ರಬಲ ರಾಜಸಂಸ್ಥಾನಗಳಾಗಿ ಬೆಳೆದವು.

* * *


[1]       ಸುದರ್ಶನ ಶೆನಿವರತ್ನೆ, ಕಳಿಂಗ ಅಂಡ್ ಆಂಧ್ರ :ದಿ ಪ್ರೊಸೆಸ್ ಆಫ್ ಸೆಕೆಂಡರಿ ಸ್ಟೇಟ್ ಫಾರ್ಮೇಶನ್ ಇನ್ ಆರ್ಲಿ ಇಂಡಿಯಾ, ಇನ್ ಇಂಡಿಯನ್ ಹಿಸ್ಟಾರಿಕಲ್ ರೆವಿವ್ಯೆ, ಸಂ. ೭, (ದೆಹಲಿ, ೧೯೮೧), ಪುಟಗಳು. ೫೪-೬೯.

[2]       ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೨, ಕೊಪ್ಪಳ. ಪುಟ. ೨೧.

[3]       ಎ.ಕ. ಸಂಪುಟ. ೫, ಕೃಷ್ಣರಾಜನಗರ, ಪು. ೪೩.

[4]       ಎ.ಕ. ಸಂಪುಟ ೪, ಚಾಮರಾಜನಗರ, ಪುಟ. ೩೫೫.

[5]       ಎ.ಕ. ಸಂಪುಟ. ೬, ಪಾಂಡವಪುರ, ಪುಟ. ೧೨೩.

[6]       ಅದೇ., ಸಂಪುಟ ೮, ಹಾಸನ, ಪುಟ. ೨೦೧.

[7]       ಅದೇ., ಸಂಪುಟ ೩, ನಂಜನಗೂಡು, ಪುಟ. ೧೮೧.

[8]       ಅದೇ., ಸಂಪುಟ ೬, ಪಾಂಡವಪುರ, ಪುಟಗಳು. ೧೩೩-೧೩೪.

[9]       ಅದೇ., ಸಂಪುಟ ೪, ಚಾಮರಾಜನಗರ, ಪುಟ. ೩೦೨.

[10]      ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೫, ಭಾಗ. ೧, ಅಮರಾಪುರಂ, ಪುಟ. ೬೩.

[11]      ಎಡ್ಗರ್ ಥರ್ಸ್ಟನ್, ಪೂರ್ವೋಕ್ತ, ಪುಟ. ೨೧೮.

[12]      ನೀಲಕಂಠಶಾಸ್ತ್ರಿ ಕೆ.ಎ., ದಿ ಚೋಳಾಸ್, ಮರುಮುದ್ರಣ, (ಮದ್ರಾಸ್, ೧೯೮೪), ಪುಟ. ೪೫೦.

[13]      ಮಹಾಲಿಂಗಮ್ ಟಿ.ವಿ., ಸೌಥ್ ಇಂಡಿಯನ್ ಪಾಲಿಟಿ, (ಮದ್ರಾಸ್, ೧೯೬೭), ಪುಟಗಳು. ೨೬೪-೬೮.

[14]      ಎ.ಕ. ಸಂಪುಟ ೧೦, ಅರಸೀಕೆರೆ, ಪುಟ. ೮೬, ೮೭, ೮೮ ಮತ್ತು ೯೦.

[15]      ಅದೇ., ಸಂಪುಟ ೪, ಚಾಮರಾಜನಗರ, ಪುಟ. ೨೯೨.

[16]      ಅದೇ., ಸಂಪುಟ ೩, ಗುಂಡ್ಲುಪೇಟೆ, ಪುಟ. ೪೮.

[17]      ಅದೇ., ಸಂಪುಟ ೯, ಬೇಲೂರು, ಪುಟ. ೪೨೩.

[18]      ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೩, ಹಂಪಿ ಶಾಸನಗಳು, ಸಂಖ್ಯೆ. ೨೬೫.

[19]      ಎ.ಕ., ಸಂಪುಟ. ೪, ಚಾಮರಾಜನಗರ, ಪುಟ. ೧೦೪.

[20]      ಅದೇ., ಸಂಪುಟ ೫. ಕೃಷ್ಣರಾಜನಗರ, ಪುಟ. ೧೦೪.

[21]      ಅದೇ., ಸಂಪುಟ ೮, ಹೊಳೆನರಸೀಪುರ, ಪುಟ. ೫೫.

[22]      ಕಲ್ಬುರ್ಗಿ ಎಂ.ಎಂ., ಸಂಪಾದಿಸಿದ ಕರ್ನಾಟಕ ಕೈಫಿಯತ್ತುಗಳು, ಬಳ್ಳಾರಿ ಪ್ರಾಂತ್ಯದ ಕೈಫಿಯತ್ತುಗಳು, ಸಂಖ್ಯೆ. ೨೫೧, ಪುಟಗಳು. ೫೫೬-೫೮.

[23]      ಅದೇ., ಸಂಖ್ಯೆ. ೧೦೬, ಪುಟ. ೪೭೭.

[24]      ಅದೇ., ಸಂಖ್ಯೆ. ೩೫೧, ಪುಟಗಳು. ೪೧೦-೧೧.

[25]      ಅದೇ., ಸಂಖ್ಯೆ. ೧೭ ಮತ್ತು ೧೮, ಪುಟಗಳು. ೫೯-೬೫.