ಪ್ರಸ್ತುತ ಸಂಶೋಧನಾ ಪ್ರಬಂಧದಲ್ಲಿ ವಿಜಯನಗರ ಕಾಲದ ಬೇಡ ನಾಯಕರ ಚರಿತ್ರೆ ಮತ್ತು ಸಂಸ್ಕೃತಿಯ ಸಂಗತಿಗಳನ್ನು ಕುರಿತು ಚರ್ಚಿಸಲಾಗುವುದು. ಮುಖ್ಯವಾಗಿ ಬೇಡ-ನಾಯಕರು ವಿಜಯನಗರವನ್ನು ಕಟ್ಟುವಲ್ಲಿ ನಾಯಕ, ಅಮರನಾಯಕ, ನಾಯಕತನ ಮೀಸಲು ನಾಯಕ ಹೀಗೆ ಅನೇಕ ಜವಾಬ್ದಾರಿಗಳನ್ನು ವಹಿಸಿದ ಪಾತ್ರ, ಸಾಮ್ರಾಜ್ಯದ ಔನ್ನತಿಗೆ ಶ್ರಮಿಸಿದವರನ್ನು ಇಲ್ಲಿ ಸ್ಮರಿಸುವುದು ಉಚಿತ. ಮರೆಯಾದ ಐತಿಹಾಸಿಕ ಸಂಗತಿ ಗಳನ್ನು ಇಲ್ಲಿ ವಿಶ್ಲೇಷಿಸಲಾಗುವುದು.

ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ವಂಶಗಳ ಆಳ್ವಿಕೆಯಲ್ಲಿ (೧೩೩೬-೧೫೬೫) ಬೇಡ-ನಾಯಕರು ರಾಜಪ್ರಭುತ್ವದ ಆಯಕಟ್ಟಿನ ಸ್ಥಾನದಲ್ಲಿದ್ದರು. ಇನ್ನು ಕೆಲವರು ಅಧಿಕಾರೇತರ ಜವಾಬ್ದಾರಿಗಳನ್ನು ಹೊಂದಿದ್ದರು. ಹೀಗಾಗಿ ಈ ಕಾಲಘಟ್ಟದಲ್ಲಿ ಅಧಿಕಾರ ರೂಢ ಮತ್ತು ಅಧಿಕಾರ ರಹಿತ ವರ್ಗವನ್ನು ಗುರುತಿಸುವ ಪ್ರಯತ್ನ ಮಾಡಲಾಗುವುದು. ಮತ್ತೊಂದು ವರ್ಗ ಇವೆರಡು ಸ್ಥಿತಿಗಳಿಂದ ದೂರವಾಗಿದ್ದಿತು. ಅಧಿಕಾರಶಾಹಿಯಲ್ಲಿದ್ದ ಬೇಡರು ತಳಮಟ್ಟದಿಂದ ರಾಜನವರೆಗೆ ವಿವಿಧ ಬಗೆಯ ಅನನ್ಯ ಸೇವಾಕಾರ್ಯಗಳನ್ನು ಮಾಡುವುದರ ಮೂಲಕ ರಾಜನಿಗೆ ಋಣಿಯಾಗಿದ್ದರು. ಅಧಿಕಾರ ರಹಿತ ವರ್ಗದವರು ಕುಲಕಸುಬುನೊಂದಿಗೆ ಗುರುತಿಸಿಕೊಂಡಿದ್ದರು. ಮೂರನೆಯ ವರ್ಗವು ವಾಣಿಜ್ಯ ವೃತ್ತಿಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದವು.

ಕುಲಕಸುಬು ರಕ್ಷಣೆ ಅಧಿಕಾರ ಇತರೆ
ಬೇಟೆಗಾರಿಕೆ(ಬೇಟೆ ತಿಪ್ಪನಾಯಕ) ಯೋಧ ನಾಯಕತನ ಪೂಜಾರಿ
ಮೀನುಗಾರಿಕೆ ಕ್ಷತ್ರಿಯ ಅಮರನಾಯಕ ಕಿಲಾರಿ
ಪಶುಪಾಲನೆ ಸೈನಿಕ ನಾಯಂಕಾರ ವ್ಯವಸ್ಥೆ
ಕೃಷಿ ಸೇನಾಪತಿ ಪಾಳೆಯಗಾರ ಪಲ್ಲಕ್ಕಿ ಹೋರುವುದು
ದಳವಾಯಿ ದಂಡನಾಯಕ ಮಹಾದಂಡನಾಯಕ
ಒಲೆಕಾರಿಕೆ ಖಾಸಪಡೆ
ಬೇಡ ಪಡೆ-ದೇವರ ಪಡೆ
ನೀರಗಂಟಿ ಮೀಸಲುಪಡೆ
ಕಾವಲುಗಾರ
ತಳವಾರ
ನಾಡ ತಳವಾರ
ಮಹಾನಾಡ ತಳವಾರ
ಮೀಸಲು ತಳವಾರ
ದೊರೆ-ದಳವಾಯಿ
ಸೇನಾಪತಿ
ರಾಜ, ಮಂತ್ರಿ, ಪಾಳೆಯಗಾರ

ಬಿ. ವಾಸದ ನೆಲೆ
ಬೇಟೆಕಾರರ ಹೆಬ್ಬಾಗಿಲು
ತಳವಾರಘಟ್ಟ
ಮ್ಯಾಸರಹಟ್ಟಿ
ನಾಯಕಹಟ್ಟಿ (ಹಳ್ಳಿ)
ಬೇಡರಹಟ್ಟಿ (ಹಟ್ಟಿ)
ಹಂಪೆ-ಆನೆಗೊಂದಿ ಇತ್ಯಾದಿ.

ಬೇಟೆಗಾರಿಕೆ

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕೆ ಬೇಟೆ ಸನ್ನಿವೇಶ ಒಂದು ಕಾರಣ. ಯುದ್ಧಕ್ಕೆ ಹೊರಡುವ ಸಂಭ್ರಮದಂತೆ ಬೇಟೆಗೂ ಹೋಗುವ ಪರಿಪಾಟ ಇಟ್ಟುಕೊಂಡಿದ್ದರು. ಬೇಡಪಡೆ, ಮೀಸಲುಪಡೆ ಹಾಗೂ ಗುರಿಕಾರನ ನೆರವಿನೊಂದಿಗೆ ಅರಸ ಬೇಟೆಗೆ ಹೊರಡುತ್ತಿದ್ದ. ಉದಾ. ಹರಿಹರ, ೨ನೇ ದೇವರಾಯ. ವಿಜಯನಗರ ಕಾಲದ ದೇವಾಲಯಗಳಲ್ಲಿ ಬೇಟೆ ಉಲ್ಲೇಖವಿದೆ. ಶೃಂಗೇರಿ, ಭಾಗಮಂಡಲ, ಲೇಪಾಕ್ಷಿ, ಮೇಲುಕೋಟೆ, ನಂದಿಬೆಟ್ಟ, ಎಡೆಯೂರು, ಕಲ್ಲೂರು, ಹಿರಿಯೂರು, ಶ್ರೀಶೈಲಂ, ಯಗಂಟಿ, ಪುಷ್ಪಗಿರಿ, ಶಂಕರಗಿರಿಗಳ ದೇವಾಲಯಗಳಲ್ಲಿ ಕಿರಾತಾರ್ಜುನೀಯ ಪ್ರಸಂಗವಿದೆ. ಎಂದಾಗ ಬೇಟೆ ಲೌಕಿಕ ಮತ್ತು ಅಲೌಕಿಕವಾಗಿ ಪ್ರಚಲಿತದಲ್ಲಿತ್ತು ಎಂಬುದು ಸ್ವಷ್ಟ. ಈ ಕಾಲದ ಬೇಟೆ ಆಹಾರ ಸಂಪಾದನೆ, ಸ್ವಯಂ ರಕ್ಷಣೆ, ಮನೋರಂಜನೆ, ಪ್ರಕೃತಿ ಸಮತೋಲನಕ್ಕಾಗಿ ಜನಸಾಮಾನ್ಯರಿಂದ ರಾಜ ಪ್ರಭುತ್ವದವರೆಗೆ ಕ್ರೀಡೆಯಾಗಿ, ಆಹಾರ ಮಾಧ್ಯಮವಾಗಿ ಪ್ರಸ್ತುತತೆಯನ್ನು ಪಡೆದಿತ್ತು. ವಿದೇಶಿ ಯಾತ್ರಿಕರಾದ ವೇರ್ಥಮ, ಅಬ್ದುಲ್ ರಜಾಕ್, ಬಾರ್ಬೊಸ, ಪೆರ್ನಾಂವ್, ನೂನಿಜ್ ಮೊದಲಾದವರು ವಿಜಯನಗರ ಕಾಲದ ಬೇಟೆ ಬಗ್ಗೆ ತಿಳಿಸಿದ್ದಾರೆ.

[1]

ವಿಜಯನಗರ ಕಾಲದಲ್ಲಿ ಪ್ರಾಣಿ ಬೇಟೆ ಮಾತ್ರವಲ್ಲದೆ, ಮೀನುಗಾರಿಕೆ ಸಹಾ ರೂಢಿ ಯಲ್ಲಿತ್ತು. ಕೃಷ್ಣಾ, ತುಂಗಭದ್ರಾ, ಕಾವೇರಿ, ಮಲಪ್ರಭಾ ಮೊದಲಾದ ನದಿ ಹಾಗೂ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಗಳಲ್ಲಿ ಹಿಂದಿನಿಂದಲೂ ಮೀನುಗಾರಿಕೆ ಇತ್ತು. ಭಟ್ಕಳ, ಹೊನ್ನಾವರ, ಬಾರಕೂರು, ಮಂಗಳೂರು ಬಂದರುಗಳಲ್ಲಿ ಮೀನುಗಾರಿಕೆ ಅವ್ಯಹತವಾಗಿ ನಡೆದಿತ್ತು. ಮೀನುಬೇಟೆ ವಿಜಯನಗರ ಕಾಲದಲ್ಲಿ ಯುದ್ಧದಷ್ಟೇ ಸಂಭ್ರಮವನ್ನು ಬಯಸಿತ್ತು. ಇದು ಉಪವೃತ್ತಿಯಾಗಿದ್ದರೂ ಕೆಲವೊಂದು ವರ್ಗಗಳಿಗೆ ಜೀವನಾವಶ್ಯಕ ವೃತ್ತಿಯಾಗಿ, ರಾಜ್ಯಕ್ಕೆ ಆದಾಯ ತರುವ ಕಸುಬಾಗಿತ್ತು. ಇದೊಂದು ಲಾಭದಾಯಕ ಉದ್ಯಮವಾಗಿತ್ತು. ಹರಿಹರನ ಗಿರಿಜಾಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣದಲ್ಲಿ ಮೀನಿನ ಬೇಟೆ ಪ್ರಸಂಗಗಳಿವೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಮೀನಿನ ಗೊಂಚಲು ಮತ್ತು ೨೪ ವಿವಿಧ ಬಲೆಗಳನ್ನು ರಾಘವಾಂಕ ತಿಳಿಸಿದ್ದಾನೆ. ಕನಕದಾಸರು ಮೋಹನ ತರಂಗಿಣಿಯಲ್ಲಿ ಜಲಗಾರ, ಮೀನುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿಜಯನಗರ ಕಾಲದಲ್ಲಿ  ಬಹುತೇಕ ಜನರಿಗೆ ಮೀನು ಇಷ್ಟ. ಬ್ರಾಹ್ಮಣರು ಮೀನನ್ನು ತಿನ್ನುತ್ತಿರಲಿಲ್ಲ. ಬಲೆ, ಕೂಳೆ, ಗಾಣ, ಬಾಣ-ಬಿಲ್ಲುಗಳ ಪ್ರಸ್ತಾಪವಿದೆ. ಮೀನುಗಾರಿಕೆ ನಡೆಸುವ ಬೆಸ್ತ ಸಮುದಾಯ ಇಂದು ಅಂಬಿಗತನವನ್ನು ರೂಢಿಸಿಕೊಂಡಿದ್ದಾರೆ. ಕಬ್ಬೇರ, ಗಂಗಮತಸ್ಥ,ಬಾರಿಕೇರ ಎಂದು ಇವರನ್ನು ಕರೆಯುತ್ತಾರೆ.[2]

ರಾಜಮನ್ನಣೆಯಾದ ಬೇಟೆ

ಸಂಗಮ ವಂಶದ ಅರಸ ಹರಿಹರ ಬೇಟೆಗೆ ಮತ್ತು ಬೇಟೆಗಾರರಿಗೆ ಮಾನ್ಯತೆ ನೀಡಿ ಪ್ರೋವಿಜಯನಗರದ ಅರಸರು ಬೇಟೆಯಲ್ಲಿ ನಿಪುಣರಾಗಿದ್ದರು. ಎರಡನೇ ದೇವರಾಯ ಬೇಟೆಯಾಡಿದ್ದು ಆತನಿಗೆ ಗಜ ಬೇಟೆಗಾರ ಎಂಬ ಬಿರುದಿತ್ತು. ಬೇಟೆಗಾರರು ರಾಜನ ಪ್ರತಿನಿಧಿಗಳಾಗಿ ಬೇಟೆಯಾಡಿ ಜೀವಿಸುತ್ತಿದ್ದರು. ಕ್ರೂರ ಮೃಗಗಳ ಹಾವಳಿ ಹೆಚ್ಚಿದಾಗ ರಾಜ ಬೇಟೆಗೆ ತಪ್ಪದೆ ಹೋಗಬೇಕಾಗಿತ್ತು. ವರಾಹ ಚಿಹ್ನೆ ಕಾರಣ ಹಂದಿಗೆ ಇಲ್ಲಿ ವಿಶೇಷ ಸ್ಥಾನವಿದೆ.

ವಿಜಯನಗರ ಕಾಲದ ಬೇಡರು ಬೇಟೆಯಲ್ಲಿ ನಿಪುಣರು. ಹಂಪಿ ವಿರೂಪಾಕ್ಷ ದೇವಸ್ಥಾನ ದಲ್ಲಿ ಬೇಡರ ಕಣ್ಣಪ್ಪನ ಶಿಲ್ಪಗಳಿವೆ. ರಾಜ ಬೇಟೆಗೆ ಹೊರಡುವಾಗ ೧೦,೦೦೦ ಅಶ್ವಾಳು, ೫,೦೦,೦೦೦ ಕಾಲಾಳು ಮತ್ತು ೨೦೦ ಗಜಗಳ ಪರಿವಾರವನ್ನು ಒಯ್ಯುತ್ತಿದ್ದರು. ಹುಲಿ ಬೇಟೆ (ವಿಠಲ), ಜಿಂಕೆ ಬೇಟೆ (ಮಹಾನವಮಿ), ಹಂದಿ ಬೇಟೆ ಇತರೆ ಬೇಟೆ ಪ್ರಕಾರಗಳಿದ್ದವು. ಹಂಪೆಯಲ್ಲಿ ಮಹಾನವಮಿ ಹಬ್ಬ ಆಚರಿಸುವ ಮೊದಲು ಬೇಟೆ ಹಬ್ಬವನ್ನು ಆಚರಿಸು ತ್ತಿದ್ದರು. ಬೇಟೆ ಹಬ್ಬ ತಿರುಪತಿಯಲ್ಲಿ ನಡೆಯುತ್ತಿತ್ತು.

ಪಶುಪಾಲನೆ

ವಿಜಯನಗರದಲ್ಲಿ ಗೋವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ೨.೩.೧೪೮೨ರಂದು ಹರಿಹರ ಮಹರಾಯ ಎತ್ತು, ಎಮ್ಮೆ, ಕರಕುಶಲ ಕರ್ಮಿಗಳಿಗೆ ತೆರಿಗೆ ವಸೂಲಿ ಮಾಡುವ ಹೊಸ ವಿಧಾನವನ್ನು ಜಾರಿಗೆ ತಂದಿದ್ದರು. ಗೋವುಗಳಿಗೆ ತೆರಿಗೆ ವಿಧಿಸುವುದು ಅದನ್ನು ದಾನ ಮಾಡುವುದು ಪ್ರಚಲಿತವಿತ್ತು. ಗೋದಾನದ ಉಲ್ಲೇಖಗಳಿವೆ. ಹೊಳಲ್ಕೆರೆ ತಾಲೂಕು ಲೋಕದೊಳಲು ಗ್ರಾಮದಲ್ಲಿ ೨ ವಿಶಿಷ್ಟವಾದ ಪಶುಪಾಲನಾ ವೀರಗಲ್ಲುಗಳಿವೆ (ಕನ್ನಡ ವಿಶ್ವವಿದ್ಯಾಲಯ, ಹಂಪಿ ವಸ್ತುಸಂಗ್ರಹಾಲಯದವರು ತಂದಿದ್ದಾರೆ). ಅಲ್ಲದೆ, ಇದೇ ತಾಲೂಕು ಗಂಜಿಗಟ್ಟೆ ಪಶುಪಾಲಕ ಗಾದರಿಪಾಲನಾಯಕ ಇತರರನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಚಿನ್ನಹಗರಿ ನದಿ ಹತ್ತಿರ ಮುತ್ತಿಗಾರ ಎತ್ತುಗಳಿಗೆ (ದೇವರ ಎತ್ತುಗಳು), ಮುತ್ತಿಗಾರ ಹಳ್ಳಿ ಅರಣ್ಯದಲ್ಲಿ ೩೦೦ ಎಕರೆ ಭೂಮಿ ಉಂಬಳಿ ಕೊಟ್ಟ ಪ್ರಸ್ತಾಪವಿದೆ. ಪಶುಪಾಲಕ ವೀರರು ದಡ್ಡಿಸೂರನಾಯಕ, ಯರಗಾಟನಾಯಕ, ಪಾಪನಾಯಕ, ಕೊಡಗಲು ಬೊಮ್ಮಯ್ಯ, ಗಾಜನಾಯಕ ಇತರರು ಕಂಡುಬರುತ್ತಾರೆ. ಡೋಮಿಂಗೊ ಪಯಸ್ ವಿಜಯನಗರ ಕಾಲದ ಪಶುಪಾಲನೆ ಬಗ್ಗೆ ತಿಳಿಸಿದ್ದಾನೆ. ಆಕಳು, ಎಮ್ಮೆ ಮತ್ತು ಕುರಿ ಇತರ ಪ್ರಾಣಿಗಳ ಬಗ್ಗೆ ತಿಳಿಸಿದ್ದಾನೆ. ಇಲ್ಲಿ ದೇವರೆತ್ತುಗಳನ್ನು ಕಾಯುವವನಿಗೆ ಕಿಲಾರಿ ಎನ್ನುತ್ತಾರೆ.

ಬೇಡರು, ನಾಯಕರು, ವಾಲ್ಮೀಕಿ ಸಮುದಾಯ : ಸಂಕ್ಷಿಪ್ತ ಪರಿಚಯ

ಪ್ರಾಚೀನ ಭಾರತದ ಚರಿತ್ರೆಯಲ್ಲಿ ಕಿರಾತ, ಶಬರ, ಪುಳಿಂದ, ನಿಷಾಧ, ವಾಲ್ಮೀಕಿ ಎಂದು ಖ್ಯಾತಿಪಡೆದ ಯೋಧ ಬುಡಕಟ್ಟು ಇದಾಗಿದೆ. ಕ್ಷತ್ರಿಯರಾದ ಬೇಡರು ಆರ್ಯರನ್ನು ಹೊರದೂಡಲು ಪ್ರಯತ್ನಿಸಿದ್ದರು. ವೀರ, ಶೌರ್ಯ, ಪರಾಕ್ರಮ ಲಕ್ಷಣಗಳಿಂದ ಇವರು ಪ್ರಸಿದ್ದಿಯಾಗಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಉತ್ತರ ಭಾರತದಿಂದ ದಕ್ಷಿಣ ಭಾರತದ ಒರಿಸ್ಸಾ, ಆಂಧ್ರ ಪ್ರದೇಶಗಳಿಂದ ಕರ್ನಾಟಕಕ್ಕೆ ಬಂದು ನೆಲಸಿದ್ದಾರೆ. ಸಂಗಮ, ಸಾಳುವ, ತುಳುವ ಮತ್ತು ಅರವೀಡು ಂಶಗಳ ಕಾಲದಲ್ಲಿ ಬೇಡರು ಬೇಟೆ-ಪಶುಪಾಲನೆ, ತಳವಾರರು, ಸೈನಿಕರು ಮತ್ತು ನಾಯಕರಾಗಿದ್ದು ಸ್ಪಷ್ಟ.

ವಿಜಯನಗರ ಸಾಮ್ರಾಜ್ಯ ಅಂದರೂ ಹಂಪಿ ಪರಿಸರ ಇಲ್ಲಿನ ವ್ಯಾಪ್ತಿ. ಇಂದಿನ ರಾಯಲ ಸೀಮಾದ ಜೊತೆಗೆ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳನ್ನು ಅನುಲಕ್ಷಿಸಲಾಗಿದೆ.

ಕೃಷ್ಣದೇವರಾಯನ ಆಮುಕ್ತಮಾಲ್ಯದ ಕೃತಿಯಲ್ಲಿ (ಆಮುಕ್ತ-ಅಲಂಕರಿಸಿಕೊಂಡು ಮಾಲ್ಯ-ಹೂಮಾಲೆಯನ್ನು ದ-ತಾನು ಕೊಟ್ಟಳು) ವಿಷ್ಣು ಚಿತ್ತೀಯ ಕಥೆ (೫೦) ಕನಸಿನಲ್ಲಿ ಆಂಧ್ರ ವಿಷ್ಣುವಿನ ಪ್ರಸ್ತಾಪವಿದೆ. ಇದರಲ್ಲಿ ಬೋಯಿಗಳು (೮೦), ಜಿಂಕೆ ಮಾಂಸ ಕಾಡು ಪ್ರಾಣಿಗಳ (೧೨೪), ಬೇಟೆಗಾರರ ಕಷ್ಟದ (೧೩೪), ಭಿಲ್ಲರು (೧೩೭), ಮೀನುಗಾರರು (೧೪೩), ದಾಸಯ್ಯ ಬೇಟೆಗಾರ (೧೭೧) ಮೋಸ, ಉಪಾಯದ ಬೇಟೆ (೧೭೬), ಬೇಡರು (೪೪), ತಳವಾರರು (೪೨), ಬೇಟೆಯಾಡುವರೊಂದಿಗೆ (೪೬) ಮೊದಲಾದ ಸಂಗತಿಗಳಿವೆ.

ತಳವಾರಘಟ್ಟ

ಹಂಪಿಯಿಂದ ಪೂರ್ವಕ್ಕೆ ಹೋಗಿ ನಂತರ ಉತ್ತರಕ್ಕೆ ಆನೆಗೊಂದಿಗೆ ಹೋಗುವ ಮಾರ್ಗ ದಲ್ಲಿ ತಳವಾರಘಟ್ಟವಿದೆ. ತಳವಾರರು ಕಾರ್ಯನಿರ್ವಹಿಸುತ್ತಿದ್ದ ಸ್ಥಳ. ಹಂಪಿ, ಕಮಲಾಪುರ ಗ್ರಾಮಗಳಲ್ಲಿ ತಳವಾರರು ಇದ್ದು, ಅವರು ವಿಜಯನಗರದ ಮೂಲಕ ತಮ್ಮನ್ನು ಗುರುತಿಸಿ ಕೊಳ್ಳುತ್ತಾರೆ. ತಳಾರಿಘಟ್ಟ, ತಳವಾರನ ಕಟ್ಟೆ ಎಂದೆಲ್ಲಾ ಇದಕ್ಕೆ ಕರೆಯಲಾಗಿದೆ. ಇದರ ಸುತ್ತಮುತ್ತ ಬೇಡ-ನಾಯಕರು ನೆಲಸಿದ್ದು, ಕಾವಲು ರಕ್ಷಣೆಯ ಕೆಲಸ ಮಾಡುತ್ತಿದ್ದರು. ಇಲ್ಲಿ ತಳವಾರ ಕುಳಿತುಕೊಳ್ಳುವ ಕಟ್ಟೆ, ಚಾವಡಿ, ಮಂಟಪಗಳಿವೆ. ವೀರಗಲ್ಲು-ಶಾಸನ, ಆಂಜನೇಯ ಗುಡಿಗಳಿರುವುದು ಗಮನಾರ್ಹ.

ಬೇಟೆಕಾರರ ಹೆಬ್ಬಾಗಿಲು

ಇದು ಮಾಲ್ಯವಂತ ರಘುನಾಥ ದೇವಾಲಯದ ಆಗ್ನೇಯಕ್ಕಿದೆ. ಇಲ್ಲಿ ಬೇಟೆಕಾರರು ವಾಸವಾಗಿದ್ದರು. ವಿಜಯನಗರ ರಾಜಧಾನಿಯಾದ ಹಂಪಿಯಲ್ಲಿ ಇದು ೨ನೇ ದೊಡ್ಡ ಬಾಗಿಲು. ೨ನೇ ಹರಿಹರನ ಕಾಲದಲ್ಲಿ ಇದು ನಿರ್ಮಾಣವಾಗಿದೆ. ಚಿಕ್ಕ ಚಿಕ್ಕ ವರ್ತಿಗಳು, ಕೊಂಡಗಳು, ಬಾವಿಗಳು ಇಲ್ಲಿವೆ. ಇದರ ಪೂರ್ವಕ್ಕೆ ಮೈಲಾರ ದೇವಾಲಯವಿದೆ. ಲಿಂಗ ಬಾವಿ ಮತ್ತು ರಂಗನಾಥ ಬಾವಿಗಳನ್ನು ಚಿನ್ನಪನಾಯುಂಡು ನಿರ್ಮಿಸಿದ್ದನು.

ಹಂಪಿ ಪರಿಸರ

ಕಮಲಾಪುರದ ನಾಯಕರ ಏಳು ಕೇರಿಗಳು, ಹೊಸಪೇಟೆಯ ನಾಯಕರ ಏಳು ಕೇರಿಗಳು ಮತ್ತು ಹಂಪಿಯಲ್ಲಿ ನೆಲಸಿರುವ ಬೇಡ-ನಾಯಕ ಕುಟುಂಬಗಳು ಹಾಗೂ ತಳವಾರರನ್ನು ಈ ಕುರಿತು ಸಂದರ್ಶಿಸಲಾಗಿದ್ದು, ಇವರಲ್ಲಿ ವಿಜಯನಗರ ಕಾಲದ ಕುರುಹುಗಳನ್ನು ಗುರುತಿಸಬಹುದಾಗಿದೆ.

ಕಂಪ್ಲಿ : ಇದು ಹೊಸಪೇಟೆ ತಾಲೂಕಿನ ಒಂದು ಪಟ್ಟಣ. ತುಂಗಭದ್ರಾ ನದಿ ದಂಡೆಯ ಮೇಲಿದ್ದು, ವಿಜಯನಗರದ ಸ್ಮಾರಕಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬೇಡ-ನಾಯಕರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಕುಮ್ಮಟನಾಯಕರ ಪ್ರಭಾವದಿಂದ ಖ್ಯಾತಿ ಪಡೆದ ಕಂಪ್ಲಿ ಪಟ್ಟಣ ವಿಜಯನಗರ ಅರಸರ ಕಾಲದಲ್ಲಿ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಬೇಡ-ನಾಯಕರು ಇಲ್ಲಿ ನೆಲಸಿದ್ದು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ್ದಾರೆ.

ಕಮಲಾಪುರ : ಹೊಸಪೇಟೆ-ಕಂಪ್ಲಿ ಮಾರ್ಗ ಮಧ್ಯದಲ್ಲಿ ಕಮಲಾಪುರವಿದೆ. ಇಲ್ಲಿ ಪ್ರೌಢದೇವರಾಯ ತನ್ನ ಹೆಂಡತಿ ಕಾಮಲಾದೇವಿ ನೆನಪಿಗಾಗಿ ಒಂದು ಕೆರೆಯನ್ನು ಕಟ್ಟಿಸಿದ್ದಾನೆ. ಈ ಸ್ಥಳದಲ್ಲಿ ಬೇಡ-ನಾಯಕರ ಏಳು ಕೇರಿಗಳಿದ್ದು, ಸುಮಾರು ೧೦ ಸಾವಿರ ಜನಸಂಖ್ಯೆಯನ್ನು ಹೊಂದಿದ್ದಾರೆ.

ಹಂಪಿ : ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಬೇಟೆ, ಪಶುಪಾಲನೆಯಲ್ಲಿದ್ದ ಬೇಡ- ನಾಯಕರು ಇಲ್ಲಿದ್ದರು. ನಾಡರಕ್ಷಣೆ ಮಾಡುವ ತಳವಾರ, ಮೀಸಲು ತಳವಾರರು ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂತತಿಯವರು ಇಂದಿಗೂ ಇದ್ದಾರೆ.

ಆನೆಗೊಂದಿ : ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ. ಬೇಡ-ನಾಯಕರಿಗೆ ಇದು ಅರಮನೆ-ಗುರುಮನೆಯಾಗಿದ್ದಿತು. ವಿಜಯನಗರ ಸಾಮ್ರಾಜ್ಯಕ್ಕೆ ಮೊದಲು ಮತ್ತು ಆನಂತರ ಇಲ್ಲಿ ನಾಯಕರು ನಡೆಸಿದ ಪ್ರಭುತ್ವವನ್ನು ಕಾಣಬಹುದು.

ಹೊಸಪೇಟೆ : ಕೃಷ್ಣದೇವರಾಯನ ತಾಯಿ ನಾಗಲಾದೇವಿ ಸ್ಮಾರಣಾರ್ಥ ಇದನ್ನು ನಿರ್ಮಿಸಿ ದರು. ಇಲ್ಲಿ ನಾಯಕರು, ತಳವಾರರು ಬಂದು ನೆಲಸಿದ್ದರು.

ಬೇಡರ ಪಡೆ

ವಿಜಯನಗರ ಕಾಲದಲ್ಲಿ ಬೇಡ ಪಡೆ (ಸಮೃದ್ಧವಾಗಿದ್ದು) ಹೆಚ್ಚಿನ ಸಂಖ್ಯೆಯಲ್ಲಿದ್ದು ಸಾಮ್ರಾಜ್ಯದ ಆಗುಹೋಗುಗಳ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಬೇಡ ಪಡೆ ಹಂಪಿಯಲ್ಲೂ ನೆಲಸಿದ್ದ ಬಗ್ಗೆ ಕುರುಹುಗಳಿವೆ. ರಾಜನು ಬೇಟೆಗೆ ಹೋಗುವಾಗ ಬೇಡ ಪಡೆಯನ್ನು ಸಿದ್ಧ ಗೊಳಿಸಿ ಬೇಟೆಗೆ ಹೊರಡುತ್ತಿದ್ದರು. ಸುಮಾರು ೪೦,೦೦೦ ಬೇಡರ ಪಡೆ ರಕ್ಕಸಗಿ-ತಂಗಡಗಿ ಯುದ್ಧದಲ್ಲಿ ಪಾಲ್ಗೊಂಡು ಹತವಾಯಿತೆಂದು, ಸ್ಥಳೀಯರಲ್ಲದೆ, ವಿದೇಶಿ ಪ್ರವಾಸಿ ಪೆರಿಸ್ತಾ ತಿಳಿಸುತ್ತಾನೆ. ಈ ಪಡೆಯ ಸೈನಿಕರ ಮಡದಿಯರು, ಮಕ್ಕಳು ದಿಕ್ಕಪಾಲಾಗಿ ಛಿದ್ರಗೊಂಡು ತೀರಾ ಹೀನಾಯವಾದ ಬದುಕನ್ನು ಹರಪನಹಳ್ಳಿ, ಮರಿಯಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಹೊಸಪೇಟೆ ಇತರೆಡೆಗಳಲ್ಲಿ ನಡೆಸಿದ್ದರು. ಕೃಷ್ಣದೇವರಾಯನ ಪ್ರಧಾನ ಅಶ್ವಪತಿಯಾಗಿ ದ್ದವನು ಮಲಪ್ಪನಾಯಕ. ಕೋಲಾರ ಜಿಲ್ಲೆ ಮೊರಸು ಒಕ್ಕಲು ಪ್ರದೇಶದ ದೊರೆಯಾಗಿ ದ್ದನು. ಕೃಷ್ಣದೇವರಾಯನ ಕಾಲದಲ್ಲಿ ಪ್ರಧಾನ ದಂಡನಾಯಕ ಪೆರಿಯ ಓಬಳ್ಳನಾಯಕರ್ ಇದ್ದನು. ಮೀಸಲು ಪಡೆಯಂತೆ ‘ಬೇಡರ ಪಡೆ’ ಮಹಾಭಾರತದ ಕಾಲದಿಂದಲೂ ಇತ್ತೆಂಬುದು ಗಮನಾರ್ಹ. ಕನ್ನಡ ಕಾವ್ಯಗಳಲ್ಲಿಯೂ ಈ ಸಂಗತಿಯಿದೆ. ಪಂಪಭಾರತ, ಹರಿಶ್ಚಂದ್ರ ಕಾವ್ಯ, ಗಿರಿಜಾಕಲ್ಯಾಣ ಕೃತಿಗಳಲ್ಲಿ ಬೇಡರ ದಂಡು, ಶಬರ ಬಲ, ಬೇಡರ ಪಡೆ (ಖಾಸಬೇಡ ಪಡೆ), ಕಿರಾತಪಡೆಗಳ ಉಲ್ಲೇಖವಿದೆ. ಷಡಕ್ಷರದೇವನ ಶಬರಶಂಕರ ವಿಳಾಸದಲ್ಲಿ ಬೇಡಪಡೆ, ದೇವಪಡೆಗಳ ಪ್ರಸ್ತಾಪವಿದೆ. ಕನಕದಾಸರ ಮೋಹನ ತರಂಗಣಿ ಯಲ್ಲಿ ಬೇಡ, ಪುಳಿಂದ, ಶಬರ ಪಡೆಗಳ ವರ್ಣನೆ, ಪ್ರಸಂಗ ದಟ್ಟವಾಗಿದೆ.

ಮ್ಯಾಸ ಬ್ಯಾಡ್ಕಿನಾಯಕತನ

ಕಮಲಾಪುರದ ಗುರಿಕಾರ ಕಾಟಯ್ಯನ ಬಳಿ ಇರುವ ತಾಮ್ರ ಶಾಸನದಲ್ಲಿ ‘ಶ್ರೀ ರಾಮಾರಣ ಮಂಡ್ಲದ ಮಂದಯ್ಯ ಚಿತ್ತಯ್ಯಗೆ ಮ್ಯಾಸಬ್ಯಾಡ್ಕಿ ನಾಯಕತಾನ ಕೊಟ್ಟ ಶಾಸನಾ ಶಕ ೧೬೧೪ ಮಾಘ ಶು.೧ ನಳಸ’ ಎಂದಿದೆ. ವಿಜಯನಗರ ಮತ್ತು ಆನೆಗೊಂದಿ ಅರಸರಿಗೆ ಮಂದಯ್ಯ-ಚಿತ್ತಯ್ಯನವರು ಯುದ್ಧ, ಬೇಟೆ ಇತರ ಕಾರ್ಯಗಳಲ್ಲಿ ಸಹಕರಿಸಿದ್ದಾಗಿ ಅವರಿಗೆ ‘ಮ್ಯಾಸ ಬ್ಯಾಡ್ಕಿನಾಯಕ ತನಾ’ವನ್ನು ಕೊಡಲಾಗಿದೆ. ಇದು ಆನೆಗೊಂದಿ ಅರಸರು ಕೊಟ್ಟ ಪದವಿ. ಮ್ಯಾಸಪಡೆ ಮತ್ತು ಖಾಸಬೇಡರ ಪಡೆಗಳಲ್ಲಿ ವೀರಯೋಧರು, ರಾಜ್ಯ ರಕ್ಷಣೆಯಲ್ಲಿ ವಹಿಸಿದ ಪಾತ್ರ ದೊಡ್ಡದು. ಇವರು ಗೆರಿಲ್ಲಾ ಯುದ್ಧ ಮಾದರಿಯನ್ನು ಅನುಸರಿಸಿದ್ದರು. ಬಳ್ಳಾರಿ ಜಿಲ್ಲೆಯ ಕಮಲಾಪುರ, ಸೊಂಡೂರು ಮತ್ತು ಕೂಡ್ಲಿಗಿ ಭಾಗಗಳಲ್ಲಿ ಇವರು ದಟ್ಟವಾಗಿ ನೆಲಸಿದ್ದಾರೆ.

ಮೀಸಲು ಪಡೆ

ಬೇಡರು ವಿಜಯನಗರ ಸಾಮ್ರಾಜ್ಯದಲ್ಲಿ ಮೀಸಲು ಪಡೆಯಲ್ಲಿದ್ದರು. ಸೈನಿಕ, ದಂಡನಾಯಕ, ತಳವಾರರಂತೆ ‘ಮೀಸಲು ಪಡೆ’ಯು ವಿಜಯನಗರದಲ್ಲಿತ್ತು. ಒಂದು ರೀತಿಯಲ್ಲಿ ರಿಸರ್ವ್ ಪೊಲೀಸ್ ಪಡೆಯಂತೆ ಇದ್ದಿರಬೇಕು. ಮ್ಯಾಸಪಡೆ ಮತ್ತು ಖಾಸ ಬೇಡರ ಪಡೆಗಳು ಗೆರಿಲ್ಲಾ ಮಾದರಿಯ ಯುದ್ಧವನ್ನು ಮಾಡುತ್ತಿದ್ದವು. ಖಾಸಬೇಡರ ಪಡೆ ಕೈಯಲ್ಲಿ ಚಂದ್ರಾಯುಧವಿದ್ದು ಹೆಗಲ ಮೇಲೆ ಕಂಬಳಿ, ಚಲ್ಯಾಣ ತೊಟ್ಟು ಬರಿಮೈ ಯಲ್ಲಿರುತ್ತಾರೆ. ಚಳ್ಳಕೆರೆ ತಾಲೂಕಿನ ಸೊಂಡೆಕೆರೆಯಲ್ಲಿ ಇವರು ನೆಲಸಿದ್ದಾರೆ. ಮ್ಯಾಸಪಡೆ ಮೂಲಕ ಯುದ್ಧದಲ್ಲಿ ಭಾಗವಹಿಸುವುದು, ರಾಜನಿಗೆ ಪ್ರಿಯನಾಗಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ರಾಜ್ಯದ ಸಂಪತ್ತನ್ನು ವೃದ್ದಿಸುವುದಾಗಿತ್ತು. ಯುದ್ಧಕ್ಕಾಗಿಯೇ ಮೀಸಲಾಗಿದ್ದ ಒಂದು ಪಂಗಡಕ್ಕೆ ‘ಮೀಸಲು ಪಡೆ’ ಎಂದು ಕರೆಯಲಾಯಿತು.[3] ಈ   ಮೀಸಲು ಪಡೆಯ ಒಡೆಯ ಅಥವಾ ನಾಯಕನಿಗೆ ಮ್ಯಾಸ ಬ್ಯಾಡ್ಕಿನಾಯಕ ಎಂದು ಅಧಿಕಾರ ಕೊಟ್ಟ ಉದಾ ಹರಣೆಯಿದೆ.

ರಾಜನ ಪಡೆ

ಬೇಡ ಸೈನಿಕರು ರಾಜನ ಪಡೆಯಲ್ಲಿದ್ದರು. ಪೆರಿಯ ಓಬಳ್ಳ ನಾಯಕರು ಉನ್ನತ ಮಟ್ಟದ ಸೈನಿಕ-ರಕ್ಷಣ ಹುದ್ದೆ ಅಲಂಕರಿಸಿದ್ದ. ರಾಜ, ರಾಣಿಯರ ಆಂತರಿಕ ರಕ್ಷಣೆಗಾಗಿ ಶಿಖಂಡಿಗಳನ್ನು,ಧೈರ್ಯಶಾಲಿ ಬೇಡರನ್ನು ನೇಮಿಸಿದ್ದರು.


[1]      ಇತಿಹಾಸ ದರ್ಶನ ೧೪, ೧೯೯೯, ಪು. ೧೬೭.

[2]      ವಿಜಯನಗರ ಅಧ್ಯಯನ, ಸಂಪುಟ. ೬, ೨೦೦೧, ಪುಟಗಳು. ೭೫-೭೬.

[3]      ವಿಜಯನಗರ ಅಧ್ಯಯನ, ಸಂಪುಟ ೫, ೨೦೦೦, ಪುಟ. ೯೩.