ವಿಜಯನಗರ ಕಾಲದ ಶಾಸನಗಳಲ್ಲಿ ನಾಯಕ, ನಾಯಕತನ, ಅಮರನಾಯಕ, ಮಹಾನಾಯಕಾಚಾರ್ಯಗಳ ಉಲ್ಲೇಖಗಳಿವೆ. ಈವರೆಗೆ ಅಧ್ಯಯನಕ್ಕೊಳಪಡದ ಸಾಮಾನ್ಯ ನಾಯಕರನ್ನು ಇಲ್ಲಿನ ವ್ಯಾಪ್ತಿಗೊಳಪಡಿಸಲಾಗಿದೆ. ಕ್ರಿ.ಶ. ೭ನೇ ಶತಮಾನದ (ಬೇಡರಾಜರ ಉಲ್ಲೇಖ) ಗದ್ದೆಮನೆ ಶಾಸನವನ್ನು ಹೊರತುಪಡಿಸಿದರೆ, ಕ್ರಿ.ಶ. ೯ನೇ ಶತಮಾನದಲ್ಲಿ ‘ನಾಯಕ’ ಪದ ಬಳಕೆಯಾಗಿರುವುದು ಗಮನಾರ್ಹ. ನಂತರ ಕುಮ್ಮಟದುರ್ಗವೇ ನಾಯಕರು ಪ್ರಭುತ್ವ ನಡೆಸಿದ ಮೊದಲ ಸಂಸ್ಥಾನ. ಮಹಾನಾಯಕಚಾರ್ಯ ಮುಮ್ಮಡಿ ಸಿಂಗೆಯ ನಾಯಕ, ಕಂಪಿಲರಾಯ (ಖಂಡೇರಾಯ) ಮತ್ತು ಕುಮಾರರಾಮನ ಆಳ್ವಿಕೆಯ ಪ್ರಭಾವವೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಅಡಿಗಲ್ಲಾಯಿತು. ಕುಮಾರರಾಮನ ಸಹೋದರಿ ಮಾರಾಂಬಿಕೆಯನ್ನು ಸಂಗಮ ಮದುವೆಯಾಗಿದ್ದ. ಈ ಸಂಗಮನ ಮಕ್ಕಳೇ ಹರಿಹರ, ಬುಕ್ಕರಾಯ, ಮಾದಪ್ಪ, ಮಾರಣ್ಣ ಮತ್ತು ಕಂಪಣ್ಣ. ವಿಜಯನಗರ ಪೂರ್ವದಲ್ಲಿದ್ದ ಇಂಥ ಸಣ್ಣ-ಪುಟ್ಟ ನಾಯಕ ಮನೆತನಗಳ ಚರಿತ್ರೆ, ಸಾಧನೆ ಪರಿಗಣನಾರ್ಹ. ಚದುರಿಹೋದ ನಾಯಕ ಪಾಳೆಯ ಪಟ್ಟುಗಳಿಗೆ ವೇದಿಕೆ ಸಿದ್ಧಪಡಿಸುವ ಕಾರ್ಯ ನಡೆಯಿತು. ವಾರಂಗಲ್ಲಿನ ಕಾಕತೀಯ ಗಣಪತಿದೇವ ನಾಯಕರ ಒಕ್ಕೂಟವನ್ನು ಮೊಟ್ಟಮೊದಲು ಮಾರ್ಪಡಿಸಿದನು. ಪದ್ಮನಾಯಕ ಸೇರಿದಂತೆ ೭೨ ಗೋತ್ರ, ೧೨ ಮನೆಗಳಿಗೆ ಪ್ರೋಕೊಟ್ಟನು. ಅದೇ ರೀತಿ ಪ್ರತಾಪರುದ್ರ ೭೭ ನಾಯಕರನ್ನು ಕರೆಯಿಸಿ ತನ್ನ ಸಾಮ್ರಾಜ್ಯವನ್ನು ಅವರಿಗೆ ವಿಭಾಗಿಸಿ ಕೊಟ್ಟು ಆಡಳಿತ ಸುಧಾರಣೆಗೆ ಶ್ರಮಿಸಿದನು.

[1] ಪ್ರತಾಪರುದ್ರ ಈ ೭೭ ಜನ ನಾಯಕರ ಹೆಸರಿನ ಮೂಲಕ ರಾಜ್ಯಾಳ್ವಿಕೆ ನಡೆಸಿದ್ದು ಸ್ಪಷ್ಟ. ಕಾಕತೀಯ ಅರಸರು ಸ್ಥಾಪಿಸಿದ ಈ ನಾಯಂಕಾರ ವ್ಯವಸ್ಥೆಯನ್ನು ವಿಜಯನಗರದವರು ಅಳವಡಿಸಿಕೊಂಡಿದ್ದರು.[2]

ಸಾಮಾನ್ಯ ನಾಯಕರು ಸೇವೆಸಲ್ಲಿಸಿದ ಉಲ್ಲೇಖಗಳನ್ನು ಈ ಕೆಳಗಿನಂತೆ ಅವಲೋಕಿಸ ಲಾಗಿದೆ. ಆಂಧ್ರಪ್ರದೇಶ, ಅನಂತಪುರ ಜಿಲ್ಲೆಯ ಮಡಕಶಿರಾ ತಾಲೂಕಿನ ಕೊಟ್ಟಶಿವರಂ ಗ್ರಾಮದ ಶಿವ ದೇವಾಲಯದ ಶಾಸನವು ೨೪.೧೦.೧೩೬೫ನೇ ಶುಕ್ರವಾರ ಬುಕ್ಕಣ್ಣ ಒಡೆಯ ರಾಜನದು. ‘ಬೆನಕೆಯ ನಾಯಕರ ಕುಮಾರ ಬೂಚೆಯ ನಾಯಕರು ನಿಡಗಲ್ಲು ರಾಜ್ಯಕ್ಕೆ ಗೋಪಸಮುದ್ರವನ್ನು ದಾನ ಮಾಡಿದ, ಮುಖ್ಯವಹಸಿವರದ ಪಟ್ಟಣದಲು ಸುಖಸಂ’ ಎಂಬ ಉಲ್ಲೇಖವಿದೆ.[3] ಇದೇ ಜಿಲ್ಲೆ, ಇದೇ ತಾಲ್ಲೂಕು ಹರೇಸಮುದ್ರಂನ ರೇವಣ್ಣ ದೇವಾಲಯದ ೨.೧೧.೧೩೯೭ (ಶುಕ್ರವಾರ) ವೀರ ಹರಿಹರನ ಆಳ್ವಿಕೆಗೆ ಸಂಬಂಧಿಸಿದ್ದಾಗಿದೆ. ಚೆಉಂಡಪ್ಪನ ಮಗ ಧೂಳೆಯನಾಯಂಕನು ಮತ್ತು ಬಸವೆನಾಯಕನ ಸ್ಥಾನಮಾನ ಕುರಿತ ವಿವರವಿದೆ.[4]

ವಿಜಯನಗರ ಕಾಲದಲ್ಲಿ ಒಬ್ಬ ಸಾಮಾನ್ಯ ಅಧಿಕಾರಿಯಾಗಿದ್ದ ನಾಯಕನ ಸಮಾಜ ಸೇವೆ ಅಮೋಘವಾದುದು. ಹಂಪಿಪರಿಸರದ ಮಲಪನಗುಡಿಯ ದೇವಾಲಯದ ೩.೨.೧೪೧೨ (ಬುಧವಾರ)ರ ದೇವರಾಯ ಮಹಾರಾಯಕಾಲದ ಶಾಸನವು ‘ಹೆಗ್ಗಡೆ ಸೋವಣ್ಣ ಅಣ್ಣ ಮಗ ಬುಲ್ಲೆನಾಯಕ ಬಿಸಿಲಹಳ್ಳಿ ಕಣಿವೆ ಮತ್ತು ಬಡವಿಲಿಯ ಕಣಿವೆ ಹತ್ತಿರ ನೀರಿನ ಉಪ್ಪರಿಗೆ ನಿರ್ಮಿಸುತ್ತಾನೆ’. ಇದು ಇಂದಿನ ಹಂಪಿಯಿಂದ ಹೊಸಪೇಟೆಗೆ ಬರುವಾಗ ಮಲಪನಗುಡಿ ಅನಂತಶಯನಗುಡಿ ಮಧ್ಯೆ ಬಲಭಾಗಕ್ಕಿದೆ.[5] ಮಲಪನಗುಡಿ ಗ್ರಾಮದ ಪಕ್ಕದಲ್ಲಿದ್ದು ಗ್ರಾಮದ ಪಶ್ಚಿಮಕ್ಕಿದೆ.

ನಾಯಕ ಮತ್ತು ಆತನ ಪತ್ನಿ ನಾಯಕಿತಿಯರ ಸೇವೆ ವಿಜಯನಗರ ಕಾಲದಲ್ಲಿದ್ದದ್ದು ವಿಶೇಷ. ೨೪.೪.೧೪೫೦ರ ಶಾಸನದಲ್ಲಿ (ಶುಕ್ರವಾರ) ವೀರ ಪ್ರತಾಪ ಮಲ್ಲಿಕಾರ್ಜುನ ಮಹಾರಾಯರು ಆಳ್ವಿಕೆಯಲ್ಲಿ ‘ಬಾರಕೂರು ರಾಜ್ಯವನ್ನು ಲಿಂಗಪ ಒಡೆಯ ಆಳುತ್ತಿದ್ದನು. ಕೋಟೆಯನಾಯಕ ಆತನ ಹೆಂಡತಿ ಕೋಟೆಯ ನಾಯಕಿತ್ತಿ ಮಗ ಭೂದಾನ ಮಾಡಿದ ವಿವರಗಳಿವೆ.[6] ಭುಜಬಲ ನರಸಿಂಹ ಮಹಾರಾಯನ ಆಳ್ವಿಕೆಯಲ್ಲಿ ೧೯.೪.೧೪೮೨ರ ಶಾಸನ ದಲ್ಲಿ ಮಲ್ಲಪ್ಪನಾಯಕ ಇವನ ಮಗ ಸೋಮಣ್ಣನಾಯಕನ ಉಲ್ಲೇಖವಿದೆ.

ಮಡಕಶಿರಾ ತಾ. ಅಗಳಿ ಗ್ರಾಮದ ೧೮.೩.೧೪೯೭ (ಶನಿವಾರ)ರ ಶಾಸನದಲ್ಲಿ ‘ನರಸಣ್ಣ ನಾಯಕನಿಗೆ ರಾಯದುರ್ಗ ಚಾವಡಿಯ ನಾಯಕತನ ಕೊಡಲಾಗಿತ್ತು. ಆದವಾನಿಯ ಇಮ್ಮಡಿ ಕಚ್ಚಪನಾಯಕ ಇತರರ ಹೆಸರುಗಳಿವೆ.[7] ಇದೇ ತಾಲೂಕಿನ ಗೂಳ್ಯಾಂನ ೨೬.೭.೧೫೦೯ರ (ಗುರುವಾರ)ಲ್ಲಿ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ‘ಗಂಡಿಕೋಟೆ ಸೀಮೆ ಮಂತ್ರಿ ವೀರಣ್ಣನಾಯಕ, ಸೇನಾಧಿಪತಿ ಸೋಮಣ್ಣನಾಯಕ ವಿರೂಪಾಕ್ಷ ದೇವಾಲಯ ನಿರ್ಮಾಣಕ್ಕೆ ಭೂದಾನ ಮಾಡಿದ್ದರು.[8] ಕಲ್ಯಾಣದುರ್ಗ ತಾಲೂಕಿನ (ಆಂಧ್ರ ಪ್ರದೇಶ) ಬೆಳಗುಪ್ಪ ಗ್ರಾಮದ ಆಂಜನೇಯ ದೇವಾಲಯದಲ್ಲಿನ ಶಾಸನವು ‘ನರಸಿಂಗ ದೇವ ಮಹಾರಾಯ ಹಡಪದ ಗೌರುನಾಯಕ’ನ ಬಗ್ಗೆ ಬೆಳಕು ಚೆಲ್ಲುತ್ತದೆ. ಮತ್ತೊಂದು ಶಾಸನದಲ್ಲಿ ಕಾಮಣ ನಾಯಕರೂ ಮಹಾರಾಯರು ಗ್ರಾಮದಾನ ಮಾಡಿದ ಉಲ್ಲೇಖವಿದೆ.

ಕೃಷ್ಣದೇವರಾಯನ ಕಾಲದ ೧೧.೧.೧೫೧೧ರ (ಗುರುವಾರ) ಶಾಸನದಲ್ಲಿ ನಿರುವಿಡಿ ಜಕ್ಕೆಯನಾಯಕನ ಬಗ್ಗೆ ತಿಳಿಸಲಾಗಿದೆ. ಹಾಗೆಯೇ ಈತನ ತಂದೆ (ಕೃಷ್ಣದೇವರಾಯ) ನರಸಣ್ಣನಾಯಕ ಒಡೆಯ ತಾಯಿ ನಾಗಾಜಿದೇವಿ ಅಮ್ಮನವರ ಉಲ್ಲೇಖಗಳು ವ್ಯಾಪಕ ವಾಗಿವೆ.[9]

ಅನಂತಪುರ ಜಿಲ್ಲೆ ಆದೋನಿ ತಾಲೂಕಿನ ೧೬.೧.೧೫೧೮ರ ಒಂದು ಶಾಸನದಲ್ಲಿ (ಶನಿವಾರ) ‘ಕಟಾರಿ ತಿಪ್ಪಣನಾಯಕರ ಮಕ್ಕಳು ರಾಮಣನಾಯಕರು ಆದವಾನಿಯ ಮೇಗೋಟೆಯಲು ಪ್ರಸನ್ನ ರಾಮದೇವರ ಗುಡಿ ಕಟ್ಟಿಸಿ ಪ್ರತಿಷ್ಠೆ ಮಾಡಿಸಿದ್ದರು. ಪ್ರೌಢದೇವ ರಾಯನಿಗೆ ಇವನು ಅಧಿಕಾರಿಯಾಗಿದ್ದನು.[10] ಅನಂತಪುರ ಜಿಲ್ಲೆ ಆಲೂರು ತಾಲೂಕಿನ ಬೆಳಗೊತಿ ಗ್ರಾಮದ ಬಸವೇಶ್ವರ ದೇವಾಲಯದ ಶಾಸನವು ‘ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಆದವಾನಿಯ ದುರ್ಗವನೂ ಕಟ್ಟಿಗೆಯ ಕಾಮಣ ನಾಯಕರಿಗೆ ಕೊಟ್ಟಿದ್ದರ ವಿಷಯವನ್ನು ಹೊಂದಿದೆ.

ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ೭.೧೧.೧೫೨೪ (ಸೋಮವಾರ)ರ ಶಾಸನವು ‘ಉಚ್ಚಂಗಿ ವೇಂಟೆಯ ಕವಿಲಿ ಚೆರವಿನಾ ಚಟನಹಳ್ಳಿಯನ್ನು ನಾಯಕತನಕ್ಕೆ ದೇವರು ಭಟ್ಟರ ಮಗ ನಾರಾಯಣ ಭಟ್ಟರಿಗೆ ಕೊಟ್ಟ ಸಂಗತಿಯಿದೆ. ಶ್ರೀ ಕೃಷ್ಣದೇವರಾಯ’ ನಮಗೆ ನಾಯಕತನಕೆ ಪಾಲಿಸಿದ……. ಎಂಬ ಉಲ್ಲೇಖ ಗಮನಾರ್ಹ. ೬.೬.೧೫೨೭ (ಗುರುವಾರ) ಕೃಷ್ಣದೇವರಾಯ ‘ದಾಡಿನಾಯಕನ ಮಗ ಸುಂಕಣ್ಣನಾಯಕನು ಆದವಾನಿ ದುರ್ಗ ಕೆಳಗಿನ ಕೆರೆಬೆಳಗಲ್ಲುನ್ನು ಅಮರವಾಗಿ ಸೇವೆಗೆಂದು ಪಡೆದ ಉಲ್ಲೇಖವಿದೆ. ಅಚ್ಯುತ ರಾಯನ ಕಾಲದಲ್ಲಿ ವರದಪ್ಪನಾಯಕ ತಿರುವೆಂಗಳನಾಯಕರ ಬಗ್ಗೆ ತಿಳಿಸಲಾಗಿದೆ.

ಅನಂತಪುರ ಜಿಲ್ಲೆ ಗೂಟಿಯ ಕಸಾವಪುರಂ ಗ್ರಾಮದ ಸದಾಶಿವರಾಯನ ಶಾಸನದಲ್ಲಿ (೧೫೪೭) ‘ದಳವಾಯಿ ಯಲ್ಲಪ್ಪನಾಯಕರಿಗೆ ಉಂಬಳಿಯಾಗಿ ಕೊಟ್ಟ ಕಸವಾಪುರದಲ್ಲಿ ಬೆಸ್ತ, ಬೋವುಗಳಿಗೆ ಪುಲಿಅ… ಕೊಟ್ಟ ಎಂಬ ವಿಷಯ ಪ್ರಸ್ತಾಪವಿದೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿ (ದಾವಣಗೆರೆ) ತಾಲೂಕಿನ ಹಗರನೂರು ಶಾಸನದಲ್ಲಿ ‘ಮುದುಗಂಡಲ  (ಬೆಡಗು) ತಿಮ್ಮರಸನಾಯಕನ ಮಗ ಬೊಮ್ಮನಾಯಕ ಅಮರಗೆರೆ ಕೊಟ್ಟೂರು ಸೀಮೆ(ರಂಗಾಪುರ ಸ್ಥಳದ)ಗೆ ಗ್ರಾಮವನ್ನು (ಕೊಟ್ಟೂರು ಸೀಮೆಗೆ) ದಾನ ಮಾಡಿದ್ದು ಗಮನಾರ್ಹ.

ಹಡಗಲಿ ತಾಲೂಕಿನ ನಕ್ಕರಹಾಳು ಶಾಸನ ೨೯.೪.೧೫೪೮ರ (ಅಥವಾ ಮೇ ೬ ಭಾನುವಾರ) ಶ್ರೀ ಸದಾಶಿವ ಮಹಾರಾಯರು ಆಳ್ವಿಕೆಯಲ್ಲಿ ಕೃಷ್ಣಪ ನಾಯಕರು ತಮ್ಮ ಕೋಗಳೆವಳಿಥದ (ಕುಂಟೆ) ನೂರ ಸೀಮೆ ವಳಗನ ನಗರೆಹಳಿಗೆ ಪ್ರತಿನಾಮವಾದ ನಗರು ರನು ಬೊಂಮ(ಪು)ರ ದಕ ಗ್ರಾಮವನ್ನು ತಿಮಪ್ಪಗೆ ಕೊಡುತ್ತಾರೆ.[11] ಗೂಟಿ ತಾಲೂಕು ವೆಲ್ಪು ಮಡುಗು (ಅನಂತಪುರ ಜಿಲ್ಲೆ)ವಿನ ೭.೧೦.೧೫೪೮ರ ಸದಾಶಿವ ಮಹಾರಾಯರು ಮಹಾಮಂಡಲೇಶ್ವರ ಅಯ್ಯಪ್ಪದೇವನಿಗೆ ಉರವಕೊಂಡ ಸೀಮೆಯ ಅಪಲಾಪುರ ಗ್ರಾಮವನ್ನು ಅಮರನಾಯಕಕ್ಕೆ ದಾನ ಕೊಡಲಾಗಿದೆ.[12] ಹಿಂದೂಪುರ ತಾಲೂಕಿನ ಕೊಟ್ನೂರು ಚೌಡೇಶ್ವರಿ ದೇವಾಲಯ ಶಾಸನವು ೬.೧೨.೧೫೫೦ (ಶನಿವಾರ) ಸದಾಶಿವ ಮಹಾರಾಯರು ಕೊಟ್ನೂರು ಗುಂಡಮರಸಯ್ಯನ ನಿಯೋಗಿ(Agent)ಸಿರಿಯಪನಾಯಕ ದಳವಾಯಿ ಕ್ರಿಷ್ಣಪ್ಪ ನಾಯಕ ದೇವಾಲಯದ ಸೇವಕರಿಗೆ ಬಿಟ್ಟು ಬಿರಾಡ ತೆರಿಗೆ ವಿನಾಯ್ತಿ ನೀಡಿದ ವಿವರವಿದೆ.

ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ದೇವಾಲಯದ ಶಾಸನವು ೨೩.೧೨.೧೫೫೦ (ಮಂಗಳವಾರ) ಸದಾಶಿವ ಮಹಾರಾಯ ವಿಜಯನಗರಿ ಹಡಪದ ಬಯ್ಯಪನಾಯಕರ ಮಕ್ಕಳು ಕೃಷ್ಣಪನಾಯಕರಿಗೆ ಅಮರ ಮಾಗಣಿಯಾಗಿ ಪಾಲಿಸಿದ ಕೋಗಳಿ ಸಲುವ ಕೊಟ್ಟೂರು ಸೀಮೆ ಎಂದಿದೆ. ಬಾಗುಳಿ ಆಳುತ್ತಿದ್ದ ಹಾಳವಿ ನಾಯಕ ಕೊಟ್ಟೂರು ವಲಿಟಲಕ್ಕಿ ಶೆಟ್ಟಿ ಲಿಂಗಮ್ಮ ಆತನ ಹೆಂಡತಿ, ಬಾಗಳಿಯ ಪಟ್ಟಣಸ್ವಾಮಿ ಭತ್ತ, ಬಂಗಾರವನ್ನು ಕಲಿದೇವರಿಗೆ ಕೊಟ್ಟ ಸಂಗತಿಯಿದೆ. ಸದಾಶಿವರಾಯ ಮಹಾರಾಯರ ೧೧.೨.೧೫೫೧ (ಬುಧವಾರ) ಹಡಪದ ಕೃಷ್ಣಪ್ಪನಾಯಕರಿಗೆ ಕೊಟ್ಟ ಕೊಟ್ಟೂರ ಸೀಮೆಗೆ ಸಲುವ ಬಾಗುಳಿಯ ಚಾಮಿನಾಯಕರ ಮಗ ಹೆಳವಿ ನಾಯಕರೂ ಬಾಗುಳಿಯ ಕುಮಕರ ಬಸವಿಗೌಂಡನ ಮಗ ಲಿಂಗಗೊಂಡ….. ಇತರ ವಿವರಗಳಿವೆ.[13]

ಕೂಡ್ಲಿಗಿ ತಾಲೂಕಿನ ಗಜಾಪುರದ ಹತ್ತಿರ ಬೇಚರಾಕು ಗ್ರಾಮವಾದ ದೇವಲಾಪುರ ವಸಂತ ಮಲ್ಲಿಕಾರ್ಜುನ ದೇವಾಲಯದ ಶಾಸನ ೨೫.೧.೧೫೫೨ (ಸೋಮವಾರ) ಸದಾಶಿವ ಮಹಾರಾಯರು ಬೈಯಪನಾಯಕರ ಕೃಷ್ಣನಾಯಕ ಅಯ್ಯನವರ ಕಾರ್ಯಕ್ಕೆ ಕರ್ತರಾದ ವೇಲೂರು ತಿಂಮಪ್ಪನಾಯಕನ ಕುಮಾರ ರಾಮಪ್ಪ ನಾಯಕರು ನ(ಂ)ಮ್ಮ ಕೃಷ್ಣಪನಾಯಕರ ಅಮರ ಮಾಗಣಿಗೆ(ಳಿ) ಸಲ್ಲುವ ಮೊರಬದ ಸೀಮೆಯೊಳಗಣ ಪಂನುಲ ನುಂಕನಹಳ್ಳಿಯನು ದೇವಲಾಪುರದ ವಸಂತ ಮಲ್ಲಿಕಾರ್ಜುನ ದೇವರಿಗೆ ೨ ಡೊಳ್ಳು, ೨ ನಾಗಸ್ವರವನ್ನು ನಡೆಸು ಎಂದು ಬಿಳಿಚೇಡ ಗ್ರಾಮ ಬಿಟ್ಟ ಸಂಗತಿಯಿದೆ. ಈ ಬಿಳಿಚೋಡು ಈಗ ಜಗಳೂರು ತಾಲ್ಲೂಕಿನಲ್ಲಿದೆ (ದಾವಣಗೆರೆ ಜಿಲ್ಲೆ).

ಕಲ್ಯಾಣದುರ್ಗ ತಾಲೂಕಿನ ಕಂಬದೂರು ಶಾಸನದಲ್ಲಿ ವಿರುಪಣ್ಣನಾಯಕ ೫೦ ವರಹ ಕೊಟ್ಟು ಮಾನ್ಯಗ್ರಸ ತನ್ನ ತಂದೆ ತಿಮ್ಮಪ್ಪ ನಾಯಕರ ಹೆಸರಲ್ಲಿ ಮಲ್ಲಿಕಾರ್ಜುನ ದೇವರಿಗೆ ೫೦ ವರಹ ದಾನ ಮಾಡಿದ ವಿವರವಿದೆ. ಈ ಕಾಲಘಟ್ಟದ ಶಾಸನಗಳಲ್ಲಿ ಮಹಾನಾಯಕ ಚಾರ್ಯ, ಮಲ್ಲಪ್ಪನಾಯಕ, ಬೇಡರ ಮರಿಯಪ್ಪ, ನಾಯಂಕಾರಚಾರ್ಯ ಎಂಬ ಉಲ್ಲೇಖ ಗಳಿವೆ.

ನಾಯಕತನ

ಹರಪನಹಳ್ಳಿ ತಾಲೂಕಿನ ಚಟ್ನಹಳ್ಳಿಯ ಆಂಜನೇಯ ದೇವಸ್ಥಾನದ ಹತ್ತಿರ ನಿಲ್ಲಿಸಿದ ಕಲ್ಲಿನ ಶಾಸನವು ವಿಜಯನಗರದ ಕೃಷ್ಣರಾಯ ಮಹಾರಾಯರಿಗೆ ಸೇರಿದೆ. ೭.೧೧.೧೫೨೪ ಸೋಮವಾರ ಮುರಾರಿ-ರಾವುತ್ತನ ಮಗ ವಿಸಣ ರಾವುತ್ತನು ಅರಸನಿಗೆ ಪುಣ್ಯವಾಗಲೆಂದು ತನ್ನ ನಾಯಕತನದಲ್ಲಿ ಉಚ್ಚಂಗಿ-ವೇಂಠೆಯ ಉಪವಿಭಾಗದವಾದ ಕವಿಳಿ ಚೆರ್ವಿನ ಸೀಮೆ ಯಲ್ಲಿನ ಚಟ್ನಹಳ್ಳಿಯನ್ನು ತೆರಿಗೆ ರಹಿತವಾಗಿ ದೇವರು ಭಟ್ಟನ ಮಗ ನಾರಾಯಣ ಭಟ್ಟನಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ (ಬಳ್ಳಾರಿ ಜಿಲ್ಲೆಯ ಶಾಸನಗಳು, ಚನ್ನಬಸಪ್ಪ ಪಾಟೀಲ, ೧೯೯೭, ಪು. ೧೦೬, ನಂ. ೩೨೯). ಈ ಬಗ್ಗೆ ನೂರಾರು ಉಲ್ಲೇಖಗಳು ಲಭ್ಯ ಇವೆ.

ಮಹಾನಾಯಕಚಾರ್ಯ

ಕನ್ನಡ ಶಾಸನಗಳಲ್ಲಿ ಕ್ರಿ.ಶ. ೯-೧೦ನೇ ಶತಮಾನದಲ್ಲಿ ಮಹಾನಾಯಕಚಾರ್ಯ ಎಂದು ಉಲ್ಲೇಖವಿದೆ. ಕುಮ್ಮಟದುರ್ಗದ ಮುಮ್ಮಡಿ ಸಿಂಗೆಯನಾಯಕರಿಗೆ ಈ ಬಿರುದಿತ್ತು. ಇದನ್ನು ಹೊರತುಪಡಿಸಿದರೆ ವಿಜಯನಗರದ ಉತ್ತರಾರ್ಧದಲ್ಲಿ ಪುನಃ ಇದು ಪ್ರಯೋಗ ವಾಗಿದೆ. ಸದಾಶಿವರಾಯ ಮಹಾರಾಯರ ಕ್ರಿ.ಶ. ೧೦.೧೨.೧೫೫೬ರ ಪೈಲಬಂಡ (ಮಡಕಶಿರಾ ತಾ.) ಶಾಸನವು ಮಹಾನಾಯಕಚಾರ್ಯ ನಿಡಗಲ್ಲು ತಿಮ್ಮಣ್ಣನಾಯಕನು ಸೇನಬೋವ ಇತರರಿಗೆ ಗುತ್ತಿ ತಿರುಮರಾಜಯ್ಯದೇವ ಮತ್ತು ಕೆಂಚಪ್ಪ ನಾಯಕರು ದಾನ ಮಾಡಿದ ಸಂಗತಿಗಳಿವೆ.

ಹರಪನಹಳ್ಳಿ ತಾಲೂಕಿನ ಮುತ್ತಗೆ ಗ್ರಾಮದ ಆಂಜನೇಯ ದೇವಾಲಯದ ೨.೧೧. ೧೫೫೭ (ಬುಧವಾರ) ಸದಾಶಿವಮಹಾರಾಯರು ಮಹಾನಾಯಕಚಾರ್ಯ ಕೃಷ್ಣಪ್ಪನಾಯಕ ಮುತ್ತಿಗ್ರಾಮದ ಬೇಸಾಯ(ಕೃಷಿ)ಗಾರರಿಗೆ, ತಳವಾರರಿಗೆ, ಸೇನಾ ಭೋಗರಿಗೆ, ಕುರಿಗಳಿಗೆ ತೆರಿಗೆ ವಿಧಿಸಿದ ವಿವರಗಳಿವೆ.[14]

ಮಡಕಶಿರಾ ತಾಲೂಕು ರತ್ನಗಿರಿಯ ಶಾಸನದಲ್ಲಿ ಶ್ರೀ ರಂಗದೇವಮಹಾರಾಯ ಪೆನುಗೊಂಡೆಯಲ್ಲಿ ಆಳುತ್ತಿರುವಾಗ ಮಹಾನಾಯಕಚಾರ್ಯ ರಂಗಪ್ಪನಾಯಕ ಮಗ ಲಕ್ಷ್ಮಿಪತಿನಾಯಕ ಹರತಿ ದುಂಡಪ್ಪನಾಯಕ ಇವರದು ವಾಲ್ಮೀಕಿ ಗೋತ್ರ ಯನುಮಲ ಬೆಡಗು (ಕುಟುಂಬ) ಆಗಿದ್ದು, ರಂಗಾಪುರ ಗ್ರಾಮವನ್ನು ದಾನಬಿಟ್ಟ ವಿಷಯವಿದೆ.[15] ಈ ಹರತಿ ಪಾಳೆಯಪಟ್ಟು ಇಂದಿನ ಹಿರಿಯೂರು ತಾಲೂಕು ಹರತಿಕೋಟೆಯಾಗಿದ್ದು, ಇಲ್ಲಿ ನಾಯಕ ಪಾಳೆಯಗಾರರು ಆಳ್ವಿಕೆ ನಡೆಸಿದ ಬಗ್ಗೆ ಸ್ಮಾರಕಗಳು ಸಾಕ್ಷಿಯಾಗಿವೆ. ಹರತಿ ನಾಯಕರಿಗೂ ಮಹಾನಾಯಕಚಾರ್ಯ ಬಿರುದು ಇತ್ತು ಎಂಬುದು ಇಲ್ಲಿ ಗಮನಾರ್ಹ.

ವೆಂಕಟಪತಿದೇವ ಮಹಾರಾಯರು ಪೆನುಗೊಂಡೆಯಲ್ಲಿರುವಾಗ ಚಳ್ಳಕೆರೆ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಶಾಸನ ಹಾಕಿಸಿದ್ದು : ಮಹಾನಾಯಕಚಾರ್ಯ ರಂಗಪ್ಪನಾಯಕ ಹರತಿ ಲಕ್ಷ್ಮೀಪತಿನಾಯಕರ ಉಲ್ಲೇಖವಿದೆ. ವಾಲ್ಮೀಕಿ ಗೋತ್ರ ಲಕ್ಷ್ಮೀಪತಿನಾಯಕರ ಕುಮಾರ ರಂಗಪ್ಪನಾಯಕರು ಶ್ರೀ ಮದ್ದೆವದೇವೋಮಾನುರಾದ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ರಾಯದುರ್ಗ ಸೀಮೆ (ವೇಂಠೆ) ಅಮರನಾಯಂಕ ತನಕೆ ಸಲುವ ಅಗಳಿ ಸೀಮೆಯೊಳಗೆ ಅರ್ಕೆಯ ಕೋಟೆ ಸೀಮೆ ಎಂದು ತಿಳಿದುಬರುತ್ತದೆ.[16]

ಆರಂಭದಲ್ಲಿ ನಾಯಕ, ನಾಯಕತನ ಇದ್ದು ಸೇವೆ ದೀರ್ಘಾವಧಿಯಲ್ಲಿ ಆ ಮನೆತನ ದವರಿಗೆ ಅಮರನಾಯಕರಾಗಿ ನೇಮಿಸಿದ್ದು ಶಾಸನಗಳಲ್ಲಿ ಉಲ್ಲೇಖವಾಗಿದ್ದು ಗಮನಾರ್ಹ.

ವೆಂಕಟಪತಿದೇವ ಮಹಾರಾಯರು ಪೆನುಗೊಂಡೆಯಲ್ಲಿ ಆಳುತ್ತಿರುವಾಗ ಅನೇಕ ಬಗೆಯ ಶ್ಲಾಘನೀಯ ಸೇವೆ ಮಾಡಿರುವುದು ಸ್ಮರಣೀಯ. ಮಡಕಶಿರಾ ತಾಲೂಕಿನ ರವುಡಿ ಗ್ರಾಮದ ಆಂಜನೇಯ ದೇವಾಲಯದ ಶಾಸನವು (೨೮.೧೨.೧೬೦೪ ಶುಕ್ರವಾರ) ಹರತಿಯ ಲಕ್ಷ್ಮೀಪತಿನಾಯಕ, ರಂಗಪ್ಪನಾಯಕರ ಮಗ ಇಮ್ಮಡಿ ರಂಗಪ್ಪನಾಯಕರು ರಾವಿಡಿ ಗ್ರಾಮವನ್ನು ಅಗಳಿ ಸೇವೆಗೆ ಕೊಟ್ಟ ವಿಚಾರವಿದೆ. ಇಲ್ಲಿ ಅರಸ ಕೊಡದೇ ಒಬ್ಬ ನಾಯಕನೇ ಅಧಿಕಾರ ಚಲಾಯಿಸುವ ಸನ್ನಿವೇಶ ನೋಡಿದರೆ ಅಂದು ನಾಯಕರಿಗೆ ಸ್ವಾತಂತ್ರ್ಯವನ್ನು ನೀಡಲಾಗಿತ್ತು ಎಂದು ತಿಳಿಯಬಹುದಾಗಿದೆ. ರಾಜನ ಹತ್ತಿರ ಸರ್ವಾಧಿಕಾರ ಇರಲಿಲ್ಲ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಕೇಂದ್ರದ ಬೆಟ್ಟದ ಮೇಲೆ ಕೆರೆಯ ಬಳಿ ಇರುವ ಶಾಸನವು ‘ಸಿಧಾರ್ತಿ ಸಂವತ್ಸರದ ಮಾಗ ಬ.೧೦ ಶ್ರೀ ಮನ್ಮಹಾನಾಯಕ ಚಾರ್ಯದ ಹಟ್ಟಿ ಕಸ್ತೂರಿ ಮಲ್ಲಪ್ಪನಾಯಕನವರ ತಾಯಿ ಲಕ್ಷ್ಮಮ್ಮ ನಾಗತಿ ಹೆಸರಕೆರೆ…..’ ಎಂಬ ಉಲ್ಲೇಖವು ನಾಯಕನಹಟ್ಟಿ ಪಾಳೆಯಗಾರರ ಚರಿತ್ರೆಯನ್ನು ತೋರಿಸುತ್ತದೆ.

ವಿಜಯನಗರ ಕಾಲದ ಕೊಡಗು ಎಂಬ ಲೇಖನದಲ್ಲಿಡಾ. ಎಂ.ಜಿ. ನಾಗರಾಜ ಅವರು ವಿಜಯನಗರ ಕಾಲದಲ್ಲಿ ಅಮರನಾಯಕ ವ್ಯವಸ್ಥೆ ಆಂಧ್ರದ ನಾಯಕರ ವ್ಯವಸ್ಥೆಯ (ನಾಯಕರ-ಪಾಳೆಯಗಾರರ ಒಕ್ಕೂಟ), ಕೇವಲ ಅನುಕರಣೆ ಅಲ್ಲ. ಪ್ರಭಾವಿತವಾಗಿದ್ದಿರ ಬಹುದು ಅಷ್ಟೆ. ಕಾರಣ ವಿಜಯನಗರ ಪೂರ್ವದಲ್ಲಿಯೇ ಗುಮ್ಮನಾಯಕನ ಪಾಳ್ಯ (ಕೋಲಾರ ಜಿಲ್ಲೆ) ಪಾಳೆಯಪಟ್ಟು ನಮ್ಮಲ್ಲಿತ್ತು. ಇದು ಹೊಯ್ಸಳರ ಕಾಲದಲ್ಲಿ ಕ್ರಿ.ಶ. ೧೨೪೨ರಲ್ಲಿ ಉಗಮಗೊಂಡ ಪಾಳೆಯ ಸಂಸ್ಥಾನವಾಗಿತ್ತು. ಒಟ್ಟಾರೆ ಅಮರನಾಯಕರು ವಿಜಯನಗರ ಸಾಮ್ರಾಜ್ಯಕ್ಕೆ ಅಧೀನ ಪಾಳೆಯಪಟ್ಟಿನ ನಾಯಕರಾಗಿದ್ದರು. ಕೇವಲ ಸೈನ್ಯಾಧಿಕಾರಿಗಳು ಎನ್ನುವಂತಿಲ್ಲ. ಸಾಮಾನ್ಯವಾಗಿ ವಾರ್ಷಿಕ ಪೊಗದಿ ಸಲ್ಲಿಕೆ ಹಾಗೂ ಸಾಮ್ರಾಜ್ಯಕ್ಕೆ ಅಗತ್ಯ ಬಿದ್ದಾಗ ಸೈನಿಕ ಸೇವೆ ಒದಗಿಸುವುದು ಎಂದು ಆ ಶಬ್ದಕ್ಕೆ (ಅಮರನಾಯಕತನ) ಅರ್ಥೈಸಲಾಗಿದೆ. ಎಂ.ಎಸ್. ಪುಟ್ಟಣ್ಣನವರು ‘ದಂಡಿನೊಡನೆ ಪಾಳೆಯವನ್ನು ಹಾಕಿ ಇಳಿದು ಕೊಂಡು ಕದನಕ್ಕೆ ಸಿದ್ಧವಾಗಿರುವವನು’ ಎಂದು ಹೇಳಲಾಗಿದೆ.

ಅಮರನಾಯಕರಲ್ಲಿ ಮೂರು ವರ್ಗಗಳಿವೆ. ೧ನೇ ವರ್ಗ ಅಮರನಾಯಕರಿಗೆ ಪಂಚ ವಾದ್ಯಗಳ ಹಕ್ಕು, ಸಾಮಂತ ಸಿಂಹಾಸನ, ಚಕ್ರವರ್ತಿಗಳಿಗೆ ತಿಳಿಸದೆಯೇ ಶಾಸನೋಕ್ತವಾದ ದಾನ ನೀಡುವ ಸ್ವಾತಂತ್ರ್ಯ, ಸ್ವಂತ ನಾಣ್ಯ ಚಲಾವಣೆಯ ಸ್ವಾತಂತ್ರ್ಯ ಮತ್ತು ಡೋಲಿ, ಪಲ್ಲಕ್ಕಿ, ರಾತ್ರಿ ಪಂಜು ನಿಂತರವಾಗಿ ಉರಿಸುವ ಅವಕಾಶ. ಸೈನ್ಯದ ವರಮಾನ ರಾಜನಿಗೆ ಸಲ್ಲಿಸುವ ಹಣ, ಹೊರಬೇಕಾದ ಹೊಣೆ ಇತ್ತು. ಪಂಚವಾದ್ಯಗಳ ಬಳಕೆ, ಅರ್ಹತೆ, ಸಾಮಂತ ಸಿಂಹಾಸನ, ಚಾಮರ ಪಲ್ಲಕ್ಕಿ, ಅಶ್ವಾರೋಹಿಪಡೆ ಆನೆಗಳನ್ನಿಟ್ಟು ಕೊಳ್ಳಬಹುದು. ಕೋಟೆ, ಸೇನಾ ನಿರ್ವಹಣೆ, ನಾಣ್ಯ ಚಲಾವಣೆ ಇವರ ಅಧಿಕಾರಗಳಿದ್ದವು. ೨ ಮತ್ತು ೩ನೇ ವರ್ಗದ ಅಮರನಾಯಕರು ಚಕ್ರವರ್ತಿಯ ಹೆಸರನ್ನು ನಮೂದಿಸಿಯೇ ಶಾಸನಗಳನ್ನು ದಾನ, ಪಾರಭಾರೆ ಇತ್ಯಾದಿ ಸಂದರ್ಭಗಳಲ್ಲಿ ಹಾಕಿಸಬೇಕಿತ್ತು. ಅಮರನಾಯಕ ರಲ್ಲಿ ದಂಡನಾಯಕರೂ ಸೇರಿದ್ದರು. ಅನೇಕ ಅಮರನಾಯಕರು ಮಹಾಮಂಡಲೇಶ್ವರರ ಅಧೀನದಲ್ಲಿದ್ದರು ಎಂದು ತಿಳಿಸಿದ್ದಾರೆ.[17]

ಎಂ.ಜಿ. ನಾಗರಾಜ ಅವರು ಕಾಕತೀಯರ ನಾಯಂಕಾರ ವ್ಯವಸ್ಥೆ (ಓಬಣ್ಣನಾಯಕನಿಗೆ ದುರ್ಗದ ನಾಯಕತನವನ್ನು ನೀಡಲಾಯಿತು) ವಿಜಯನಗರದಲ್ಲಿ ಕಂಡುಬಂದಿತ್ತು. ಕಾಕತೀಯ ಗಣಪತಿ ದೇವನ (೧೧೯೯-೧೨೬೨) ಮರಿಮೊಮ್ಮಗ (೧೨೮೯-೧೩೨೩) ಇಮ್ಮಡಿ ಪ್ರತಾಪರುದ್ರ ತನ್ನ ಕಾಲದ ಪ್ರಬಲ ಪದ್ಮನಾಯಕ ಕುಲಕ್ಕೆ ಸೇರಿದ ೭೭ ನಾಯಕ ಸಮೂಹದ ನೆರವಿನಿಂದ ಆಡಳಿತ ನಡೆಸಿದ ಬಗ್ಗೆ ಮೆಕೆಂಜಿ ತಿಳಿಸುತ್ತಾನೆ. ಹಾಗೆಯೇ ಹಕ್ಕ-ಬುಕ್ಕರು ಕಾಕತೀಯರಲ್ಲಿ ಭಂಡಾರಿಗಳಾಗಿದ್ದರು.

೨ನೇ ವರ್ಗದ ಅಮರನಾಯಕರಿಗೆ ರಾಜನ ಹೆಸರನ್ನು ಬಿಟ್ಟು ಭೂಮಿಯನ್ನು ದಾನ ಮಾಡುವ ಅಧಿಕಾರ ಇರಲಿಲ್ಲ. ೩ನೇ ವರ್ಗದ ಅಮರನಾಯಕರು ಚಕ್ರವರ್ತಿಯ ನೇರ ನಿಯಂತ್ರಣ ಅಥವಾ ಅಧೀನದಲ್ಲಿದ್ದರು. ಭೂದಾನ ಮಾಡಲು ರಾಜನ ಅಪ್ಪಣೆಬೇಕು. ಯುದ್ಧಕ್ಕೆ ಸೈನ್ಯ ಕಳುಹಿಸುತ್ತಿದ್ದರು. ಅನೇಕ ದಂಡನಾಯಕರಿದ್ದರು. ಯುದ್ಧ, ದಂಡಯಾತ್ರೆ, ಸಾಮ್ರಾಜ್ಯ ಸಂಘಟನೆಯಲ್ಲಿದ್ದರು.

ಕ್ರಿ.ಶ. ೧೬೦೩ ಜನವರಿ ೨೧ರ ಶಾಸನ ವಿಜಯನಗರದ ದೊರೆ ವೆಂಕಟಪತಿರಾಯನು ಮುತಿನಗಧಿಗೆಯಿಂದ ರಾಜ್ಯಭಾರ ಮಾಡುತ್ತಿದ್ದನೆಂಬುದಾಗಿ ಹೇಳಿದೆ. ಮುದಿಯಣನಾಯಕರ ಸೀಮೆಯೊಳಗಿನ ನಾಗೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಹೆಂಜೇರಿನ ಬಡಗಿ ದೊಡ್ಡ ಹಲಗಯ್ಯನ ಮಗ ಚಿಗಚಿಕ್ಕಯ್ಯನು ಮುದಿಯಪನಾಯಕರಿಗೆ ಸ್ಥಿರ ರಾಜ್ಯವಾಗಲಿಯೆಂದು ಶ್ರೀಶೈಲದ ಮಲ್ಲಿಕಾರ್ಜುನ ದೇವರಿಗೆ ಕಬ್ಬಿಣದ ದೀಪಮಾಲೆಯನ್ನು ಮಾಡಿಸುತ್ತಾನೆ.[18]

ಅರಮನಾಯಕರು (೩ ವರ್ಗಗಳು)

ಪ್ರದೇಶ ವಿಸ್ತಾರ ಸಂಪನ್ಮೂಲ ಬಲ ಸಾಮಂತರಿಂದ ಯುದ್ಧಕ್ಕೆ ಸೇನೆ ದಂಡನಾಯಕರು ಸಣ್ಣ ಅಮರನಾಯಕರಿದ್ದರು. ಯುದ್ಧ ದಂಡೆಯಾತ್ರೆಯಲ್ಲಿ ಸಾಮ್ರಾಜ್ಯದ ಸಂಘಟನೆಯಲ್ಲಿ ಚಕ್ರವರ್ತಿಯ ಸೈನ್ಯವನ್ನು ಸೇರಿಕೊಳ್ಳುತ್ತಿದ್ದರು.

ಚಿತ್ರದುರ್ಗ ನಾಯಕ ಯಲಹಂಕದ ರಾಜ ಇವರನ್ನು ಅಮರನಾಯಕ ವ್ಯವಸ್ಥೆ ಯುರೋಪಿನ ಫ್ಯೂಡಲಸಂಗೆ ವಿದ್ವಾಂಸರು ಹೋಲಿಸು ತ್ತಾರೆ.

ದಂಡನಾಯಕ, ಮಹಾಪ್ರಧಾನ ಇತರ ಅಧಿಕಾರಿಗಳು

ವಿಜಯನಗರ ಸಾಮ್ರಾಜ್ಯ ಆಳ್ವಿಕೆಯಲ್ಲಿ ದಂಡನಾಯಕ, ಪ್ರಧಾನರ ಪಾತ್ರ ಮುಖ್ಯ. ರಾಯದುರ್ಗ ತಾಲೂಕು ಕಚೇರಿ ಬಳಿ (ಅನಂತಪುರ ಜಿಲ್ಲೆ) ಶಾಸನದಲ್ಲಿ ‘ಅಮರ ಕೀರ್ತಿ’ ಬಗ್ಗೆ ಉಲ್ಲೇಖಿಸಿದ್ದಾರೆ. ಬಹುಶಃ ಇದು ಅಮರನಾಯಕರಿಗೆ ಸಲ್ಲುವ ಗೌರವ ಇರಬೇಕು.

ಕುಂದಾಪುರ ತಾಲೂಕಿನ ಕೋಟೇಶ್ವರ ದೇವಾಲಯದ ಶಾಸನದಲ್ಲಿ ೭.೭.೧೩೫೭ (ಶುಕ್ರವಾರ) ಮಲೆಯ ದಣ್ಣಾಯಕ ಎಂಬುವನು ರಾವಲದೇವನ ಮಂತ್ರಿ ಇವನ ಮಗ ಸಬುತಿಯನಾಯಕನ ವಿವರಗಳಿವೆ. ಇಲ್ಲಿನ ಮತ್ತೊಂದು ಶಾಸನದಲ್ಲಿ ೨.೧೦.೧೩೬೫ರಲ್ಲಿ (ಗುರುವಾರ) ವೀರ ಬುಕ್ಕಣ್ಣರಾಯನ ಕಾಲಕ್ಕೆ ಇಲ್ಲಿ ಮಲ್ಲೆಯ ದಣ್ಣಾಯಕ ಕಾರ್ಯನಿರ್ವ ಹಿಸುತ್ತಿದ್ದ.[19]

ಕೊಯಮತ್ತೂರು ಜಿಲ್ಲೆ ಸಿಂಗನಲ್ಲೂರು ಬಸವೇಶ್ವರ ದೇವಾಲಯದ ಶಾಸನ ೪.೮. ೧೪೦೮ರಂದು ವೀರ ದೇವರಾಯ ಮಹಾರಾಯರ ಮಹಾಪ್ರಧಾನ ನಾಗಣ್ಣನಾಯಕ ಒಡೆಯನ ವಿವರವಿದೆ.[20] ೨೭.೩.೧೪೨೫ರಂದು ಹರಿಯಪ್ಪ ದಣ್ಣಾಯಕ ಆಳ್ವಿಕೆ ನಡೆಸಿದ್ದು ಗಮನಾರ್ಹ. ಇವನಂತೆ ಮಹಾಪ್ರಧಾನ ಸಿಂಗಾಣ್ಣ ದಣ್ಣಾಯಕನು ೩.೨.೧೪೮೨ರಲ್ಲಿ ವಿರೂಪಾಕ್ಷರಾಯ ಮಹಾರಾಯರ ಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದನು.[21]

ಕೃಷ್ಣದೇವರಾಯನ ಕಾಲದ ೩೦.೧೦.೧೫೧೬ (ಗುರುವಾರ)ರ ಶಾಸನದಲ್ಲಿ ಪಾರ್ವತಿ ಅಮ್ಮ-ಇಮ್ಮಡಿ ಬಸಪ್ಪನಾಯಕ ಒಡೆಯರ ಪುತ್ರ ಅರುಹ ತಿಮ್ಮಣ್ಣನಾಯಕ ಅಧಿಕಾರಿ (ಪ್ರಧಾನ)ಯಾಗಿದ್ದನು. ಸೋಗೆ ಮತ್ತು ದಣ್ಣಾನಾಯಕ ಪುರವನ್ನು ಕೊಟ್ಟೂರು ಸೀಮೆಗೆ ಕೊಡುತ್ತಾನೆ.[22] ಇದೇ ಕಾಲಕ್ಕೆ (೧೬.೧.೧೫೧೮) ಕಠಾರಿ ತಿಪ್ಪಣ್ಣನಾಯಕನ ಮಗ ರಾಮಣ್ಣ ನಾಯಕ ಅಧಿಕಾರಿಯಾಗಿದ್ದನು.

ಅನಂತಪುರ ಜಿಲ್ಲೆ ಗೂಟಿ ತಾಲೂಕಿನ ಚೈಬಲದ ಚನ್ನಕೇಶವ ದೇವಾಲಯ ಶಾಸನವು ದಳವಾಯಿ ಅಪ್ಪಲನಾಯಕರಿಗೆ ಸದಾಶಿವರಾಯರು ಅಮರ ಮಾಗಾಣಿ ನೀಡಿದ ಬಗ್ಗೆ ಉಲ್ಲೇಖವಿದೆ.[23] ರಕ್ಷಣೆಯಲ್ಲಿ ಸೇವೆಗೈದ ರಾಹುತ ಲಿಂಗಪನಾಯಕರು ಆದವಾನಿಯ ಬೆಲದೊಣಿ ಗ್ರಾಮವನ್ನು ಸೇವೆಗೆಂದು ಪಡೆದುಕೊಳ್ಳುತ್ತಾರೆ.

ಕೃಷ್ಣದೇವರಾಯನ ಕಾಲದಲ್ಲಿ ಪೆರಿಯ ಓಬಳ್ಳನಾಯಕರ್ ಎಂಬ ಪ್ರಧಾನ ದಂಡನಾಯಕ ನಿದ್ದನು. ಹೀಗೆ ಬೇಡ-ನಾಯಕರ ಸೇವೆ ವಿಜಯನಗರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿರುವುದನ್ನು ತಿಳಿಯಬಹುದಾಗಿದೆ.

ಅಧಿಕಾರೇತರ ಸೇವೆ

ಅಧಿಕಾರ ಚಲಾಯಿಸುವ ಹುದ್ದೆಗಳಲ್ಲಿರದೆ, ಕೇವಲ ಅಧಿಕಾರಿಗಳು ಹೇಳಿದ ಸೇವೆಯನ್ನು ಮಾಡಿದ ಬೇಡ-ನಾಯಕರ ಚಿತ್ರಣವಿದೆ. ಕೊಳ್ಳೆಗಾಲ ಪಟ್ಟಣದ ಲಕ್ಷ್ಮೀನಾರಾಯಣ ದೇವಾಲಯದ ೧೮.೧೨.೧೫೬೯ರ ಶಾಸನವು ಸದಾಶಿವರಾಯ ಮಹಾರಾಯರಿಗೆ ಸೇರಿದೆ. ಪಲ್ಲಕ್ಕಿ ಹೋರುವ ಸೇವೆಗೆ ರಾಮರಾಜನಾಯಕರಿಗೆ ಹದಿನಾಡು ಸೀಮೆಯನ್ನು ಉಂಬಳಿ ಯಾಗಿ ಕೊಟ್ಟ ವಿಷಯವಿದೆ.

ನಾಯಕ ಪ್ರಭುತ್ವ ಮತ್ತು ಊಳಿಗಮಾನ್ಯ ಪದ್ಧತಿ : ಅವಲೋಕನ

ಜಪಾನಿನ ವಿದ್ವಾಂಸ ನೊಬುರು ಕರಾಶಿಮ ವಿಜಯನಗರ ಸಾಮ್ರಾಜ್ಯದಲ್ಲಿ ‘ನಾಯಕ’ ರನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಕರಾಶಿಮ ಆಡಂಬರವಿಲ್ಲದೆ, ಸರಳವಾಗಿ ಬರೆಯು ತ್ತಾರೆ. ಅನೇಕ ವ್ಯಾಖ್ಯಾನಗಳಲ್ಲಿ ಅವರು ಬರ್ಟನ್ ಸ್ಟೀನನ ನಿಲುವನ್ನು ಒಪ್ಪುವುದಿಲ್ಲ. ಉದಾಹರಣೆಗೆ ಬರ್ಟನ್ ಸ್ಟೀನನಂತಲ್ಲದೆ ಅವರು ವಿಜಯನಗರದ ಕೇಂದ್ರಾಡಳಿತವು ‘ಧಾರ್ಮಿಕ’ವಾಗಿರಲಿಲ್ಲ. ಸಂಪ್ರದಾಯ ಪಾಲನೆಯದಾಗಿರಲಿಲ್ಲ. ನಿಜವಾದ ಅಧಿಕಾರ ಅಲ್ಲಿರಲಿಲ್ಲ ಎಂದು ನಂಬುತ್ತಾನೆ. ಅಮರನಾಯಕರು ಮತ್ತು ಇತರ ವಿಕೇಂದ್ರೀಕೃತ ಅಂಗ ಗಳಿದ್ದರೂ ಕೇಂದ್ರ ಪ್ರಭುತ್ವವು ಅಧೀನ ಘಟಕಗಳ ಮೇಲೆ ಸ್ವಲ್ಪಮಟ್ಟಿಗೆ ನಿಜವಾದ ಹತೋಟಿಯನ್ನು ಹೊಂದಿದ್ದಿತು.[24] ಬರ್ಟನ್ ಸ್ಟೀನ್ (ಅಮೇರಿಕಾದ ವಿದ್ವಾಂಸ) ತಮ್ಮ ವಿಜಯನಗರ (ಕೆಂಬ್ರಿಡ್ಜ್ ಹಿಸ್ಟರಿ) ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ನಾಯಕರು ವಹಿಸಿದ ಪಾತ್ರವನ್ನು ಕುರಿತು ಚರ್ಚಿಸಿದ್ದಾರೆ. ವಿಜಯನಗರ ಸಾಮ್ರಾಜ್ಯ ಏಕಕಾಲದಲ್ಲಿ ಸಾಮಂತ, ಒಕ್ಕೂಟ ಹಾಗೂ ವಿಕೇಂದ್ರಿಕೃತ ಅಂಶಗಳನ್ನು ಒಳಗೊಂಡಿದ್ದಿತು. ಊಳಿಗಮಾನ್ಯ ಪದ್ಧತಿ ಕುರಿತು ಚರ್ಚಿಸಿದ್ದಾರೆ. ದೊಡ್ಡ, ಚಿಕ್ಕರಾಜ್ಯ ಭಾಗಗಳನ್ನು ಅನೇಕ ಸಂದರ್ಭಗಳಲ್ಲಿ ಒಂದೇ ಒಂದು ಹಳ್ಳಿಯನ್ನು ಗಣ್ಯ ಜನರಿಗೆ ವಹಿಸಲಾಗುತ್ತಿತ್ತು. ಅಗತ್ಯ ಬಂದಾಗ ನಿರ್ದಿಷ್ಟ ಪಡಿಸಿರುವ ಸಂಖ್ಯೆಯ ಸೇನೆಯನ್ನು ಅವರು ಒದಗಿಸತಕ್ಕದ್ದು ಎಂಬುದೊಂದೇ ಷರತ್ತು. ಈ ಭೂಹಿಡುವಳಿಗಳನ್ನು ಅಮರಂ ಎಂದು ಕರೆಯುತ್ತಿದ್ದರು. ಅದನ್ನು ಪಡೆದಿದ್ದವರನ್ನು ಅಮರನಾಯಕರೆಂದು ಕರೆಯಲಾಗುತ್ತಿತ್ತು. ಒಂದು ರೀತಿಯಲ್ಲಿ ಇವರು ವಿಜಯನಗರ ರಾಜ್ಯಾಡಳಿತದ ಆಧಾರ ಸ್ಥಂಭಗಳಾಗಿ ವರ್ತಿಸುತ್ತಿದ್ದರು ಎಂಬ ಮಾತು ನಿಜ.[25]

ವಿಜಯನಗರ ಸಾಮ್ರಾಜ್ಯದಲ್ಲಿ ಅಮರನಾಯಕರಾಗಿದ್ದು, ಆನಂತರ ಸ್ವತಂತ್ರ ಪಾಳೆಯ ಗಾರರಾದರು. ಕೆಳದಿ ನಾಯಕರು, ಚಿತ್ರದುರ್ಗ, ಹಾಗಲವಾಡಿ, ತರೀಕೆರೆ, ಯಲಹಂಕ, ಮಾಗಡಿ ಇತರರು ವಿಜಯನಗರ ಕಾಲದ ಅಮರನಾಯಕರಾಗಿದ್ದರು. ಅಮರನಾಯಕ ‘ಅಮರಂ’ಗೆ ಒಡೆಯನಾಗಿರಲಿಲ್ಲ. ರೈತ ಅವನ ಊಳಿಗದವನೂ ಆಗಿರಲಿಲ್ಲ. ಅಮರ ನಾಯಕನಿಗೆ ಕೃಷಿಯ ಹೆಚ್ಚುವರಿ ಫಸಲಿನ ಮೇಲೆ ಆಸಕ್ತಿಯಿತ್ತೇ ಹೊರತು ನೇರವಾಗಿ ಕೃಷಿಯನ್ನು ಕುರಿತಲ್ಲ, ಅಮರಂ ಹಿಡುವಳಿಗಳಲ್ಲಿ ಅಮರನಾಯಕನಿಗೂ ರೈತನಿಗೂ ನಡುವೆ ಘರ್ಷಣೆಯಿರಲಿಲ್ಲ.

ಈ ಚೆರ‌್ಲಾನಾಯಕರು ಬಹಮನಿಗಳಿಗೆ ಪ್ರೋಕೊಟ್ಟಾಗ, ವಿಜಯನಗರದ ಹರಿಹರ ಆಳ್ವಿಕೆಯಲ್ಲಿ ರಾಮದೇವ ಹಾಗೂ ನಾಯಂಕರಾಚಾರ್ಯ ಕಂಪಣರನ್ನು ೨ನೇ ಬುಕ್ಕನ ನಾಯಕತ್ವ ದಲ್ಲಿ ಕಳಿಸಿಕೊಟ್ಟನು. ವಿಜಯನಗರ ಕಾಲದ ನಾಯಕರು ನಿಷ್ಠೆ, ಪ್ರಾಮಾಣಿಕತೆಯನ್ನು ಬಿಟ್ಟು ಅವಕಾಶ ಬಂದಂತೆ ವರ್ತಿಸುತ್ತಿರಲಿಲ್ಲ. ಇಲ್ಲಿ ನಾಯಕರನ್ನು ಬೇಡ ಬುಡಕಟ್ಟಿ ನವರೆಂದು ಪರಿಗಣಿಸಲಾಗಿದೆ.

ತುಳು ವಂಶದ ಈಶ್ವರನಾಯಕ ಸಮರ್ಥ ಅರಸ, ಅವನು ವಿಜಯಗಿರಿ, ನೆಲ್ಲೂರು, ಚೆಂಗಲ್ ಪೇಟೆ, ಶ್ರೀರಂಗಂ, ಭುವನಗಿರಿ ಮತ್ತು ಜಿಂಜಿಗಳನ್ನು ವಶಪಡಿಸಿಕೊಳ್ಳುತ್ತಾನೆ. ಇವನ ಮಗ ನರಸನಾಯಕ ರಾಜಪ್ರತಿನಿಧಿ. ದಳಪತಿ ಮತ್ತು ಮಹಾಪ್ರಧಾನನೂ ಆಗಿದ್ದನು. ಈ ಕಾಲಘಟ್ಟದಲ್ಲಿ ನಾಯಕತನಕ್ಕೆ ಒಂದು ಹೊಸ ಆಯಾಮ ಸಿಕ್ಕಿತು.

* * *


[1]      ಇತಿಹಾಸ ದರ್ಶನ, ಸಂ. ೨, ೧೯೮೮.

[2]      ಲಕ್ಷ್ಮಣ್ ತೆಲಗಾವಿ, ಎಪ್ಪತ್ತೇಳು ಪಾಳೆಯಗಾರರು, ಪು. ೨೨೭.

[3]      SII part II, ನಂ. ೪೧೦, ಪು. ೪೧೬.

[4]      ಅದೇ, ೪೨೯.

[5]      SII, IX, part II, p. ೪೪೫.

[6]      ಅದೇ, ೪೬೧ (ನಂ. ೪೫೨).

[7]      ಅದೇ, ೪೮೯ (ನಂ. ೪೭೪).

[8]      ಅದೇ, (ನಂ. ೪೭೭), ಪು. ೪೯೧-೯೨.

[9]      ಅದೇ, (ನಂ. ೪೯೦, ೪೯೧, ೪೯೩, ೪೯೯), ಪು. ೫೦೪.

[10]     SII, IX, part II, (No. ೫೦೮), p. ೫೨೧.

[11]     ಅದೇ, ಪು. ೬೩೨, (ನಂ. ೬೩೦).

[12]     ಅದೇ, ಪು. ೬೩೪, (ನಂ. ೬೩೩).

[13]     SII, IX, part II, p. ೬೩೭. (No. ೬೩೯).

[14]     SII, Vol. IX, p. ೬೫೯. (No. ೬೬೬).

[15]     ಅದೇ, ಪು. ೬೮೦, (ನಂ. ೬೮೯).

[16]     ಅದೇ, ಪು. ೬೮೧, (ನಂ. ೬೯೦).

[17]     ವಿಜಯನಗರ ಅಧ್ಯಯನ ೭, ಪು. ೧೮ (ವಿಜಯನಗರ ಕಾಲದ ಕೊಡಗು).

[18]     ವಿಜಯನಗರ ಅಧ್ಯಯನ ಸಂ.೧೦, ಪು. ೨೮೪.

[19]     SII, Vol. IX, Part II, p. ೪೧೬. (No. ೪೦೯).

[20]     ಅದೇ, ಪು. ೪೪೧ (ನಂ. ೪೩೩).

[21]     ಅದೇ, ಪು. ೪೮೩ (ನಂ. ೪೭೦).

[22]     ಅದೇ, ಪು. ೫೧೬ (ನಂ. ೫೦೩).

[23]     ಅದೇ, ಪು. ೬೭೩ (ನಂ. ೬೮೧).

[24]     ಕರ್ನಾಟಕ ಚರಿತ್ರೆ ಸಂಪುಟ ೩, ಪ್ರೊ. ಕೆ.ಎಸ್. ಶಿವಣ್ಣ (ಸಂ), ಪು. ೩.

[25]     ಅದೇ, ಪು. ೬.