ಕ್ರಿ.ಶ. ೧೩೩೬ರಲ್ಲಿ ಸ್ಥಾಪನೆಯಾದ ‘ವಿಜಯನಗರ ಸಾಮ್ರಾಜ್ಯ’ ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ವಿಜಯನಗರ ಪೂರ್ವ, ವಿಜಯನಗರ ಕಾಲ ಮತ್ತು ವಿಜಯನಗರೋತ್ತರ ಕಾಲದ ಬೇಡರ ಇತಿಹಾಸ ಕರ್ನಾಟಕ ಇತಿಹಾಸದಲ್ಲಿ ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೇ ಪ್ರಸಿದ್ದಿಯಾಗಿದೆ. ಬೇಡರು ಬೇಟೆ ಯಿಂದ ಗುರುತಿಸಲ್ಪಟ್ಟವರಾದರೂ ರಾಜ್ಯಗಳ ಸ್ಥಾಪನೆಯಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಬೇಡರ ಸಹಾಯದಿಂದ ಅನೇಕ ರಾಜ್ಯಗಳು ಹುಟ್ಟಿ ಬೆಳೆದವು. ಧೈರ್ಯ, ಸಾಹಸ, ನಂಬಿಕೆಗೆ ಬೇಡರು ಹೆಸರುವಾಸಿಯಾಗಿದ್ದರು. ಪ್ರಾಣವನ್ನು ಕೊಟ್ಟಾದರೂ ತಮ್ಮ ನಾಯಕರನ್ನು ರಕ್ಷಿಸುವ ಕೆಲಸ ಬೇಡರು ಮಾಡುತ್ತಿದ್ದರು. ಬೇಟೆಯಿಂದ ‘ಸೇನಾ’ ವೃತ್ತಿಯೆಡೆಗೆ ಬಂದ ಬೇಡರು ತಮ್ಮದೇ ಆದ ‘ಬೇಡ ಪಡೆ’ಗಳನ್ನು ಕಟ್ಟಿಕೊಂಡು ಪ್ರಸಿದ್ದಿಗೆ ಬಂದರು. ಮುಂದೆ ಆಳುವ ಅರಸರ ಬಂಟರಾಗಿ, ಅಮರನಾಯಕರಾಗಿ, ಗುರುತಿಸಲ್ಪಟ್ಟರು. ಕಾಲಕ್ರಮೇಣ ತಮ್ಮ ತಮ್ಮ ಪ್ರದೇಶಗಳಲ್ಲಿ ತಾವೇ ದೊರೆಗಳೆಂದು, ಪಾಳೆಯಗಾರರೆಂದೂ, ನಾಯಕ ರೆಂದೂ, ಘೋಷಿಸಿಕೊಂಡರು.

ವಿಜಯನಗರ ಪೂರ್ವ ಕನ್ನಡದ ಮೊದಲ ರಾಜ ಮಯೂರವರ್ಮನು ಬೇಡರ ಜಾತಿಗೆ ಸೇರಿದವನು ಎಂದು ಬುಕಾನಾನ್‌ನು ವರದಿ ಮಾಡಿರುವನು. ಅಷ್ಟೊತ್ತಿಗೆ ಶ್ರೀಶೈಲ ಪರ್ವತ ಪ್ರದೇಶದಲ್ಲಿ ಬೇಡರು ಸೈನಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಗಂಗರ ರಾಜಧಾನಿ ತಲಕಾಡು, ತಲ ಮತ್ತು ಕಾಡು ಎಂಬ ಬೇಡ ನಾಯಕರ ಹೆಸರಿನಿಂದ ಬಂದಿದೆ ಎಂದು ಕೈಫಿಯತ್ತು ತಿಳಿಸುತ್ತದೆ. ಬಿಲ್ಲುಗಾರಿಕೆಯಲ್ಲಿ ಬೇಡರು ಪ್ರಾವಿಣ್ಯತೆಯನ್ನು ಗಳಿಸಿದ್ದರು. ಗಂಗ ದೊರೆಗಳು ಬೇಡರಿಗೆ ಸೈನ್ಯದಲ್ಲಿ ಉನ್ನತ ಸ್ಥಾನಮಾನಗಳನ್ನು ಕೊಟ್ಟಿದ್ದರು. ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಬೇಡ ಪಡೆಗಳಿದ್ದವು. ಪುಲಕೇಶಿಯ ‘ಕರ್ನಾಟಕ ಸೈನ್ಯ’ದಲ್ಲಿ ಬೇಡರೇ ಅಧಿಕ ಸಂಖ್ಯೆಯಲ್ಲಿದ್ದರು. ರಾಷ್ಟ್ರಕೂಟರ ಕಾಲಕ್ಕೆ ನಾಡಗೌಡರಾಗಿ ಬೇಡರು ನೇಮಕವಾದುದು ಗೊತ್ತಾಗುತ್ತಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಾಲ್ದಳದಲ್ಲಿ ‘ಬೇಡರ ಪಡೆ’ಯು ಪ್ರಸಿದ್ದಿಯನ್ನು ಪಡೆದಿತ್ತು. ಹೊಯ್ಸಳ ದೊರೆಗಳೂ ಬೇಡ ಪಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ದೆಹಲಿ ಸುಲ್ತಾನರ ದಕ್ಷಿಣದ ದಾಳಿಗಳನ್ನು ಹಿಮ್ಮೆಟ್ಟಿದ ಕೀರ್ತಿ ಬೇಡರಿಗೆ ಸೇರುತ್ತದೆ. ಮುಮ್ಮಡಿಸಿಂಗ, ಕಂಪಿಲರಾಯ, ಗಂಡುಗಲಿ ಕುಮಾರರಾಮರು ಐತಿಹಾಸಿಕ ಪ್ರಸಿದ್ದಿಯನ್ನು ಪಡೆದ ಮಹಾಪುರುಷರು. ಕಂಪಿಲರಾಯನ ಬಾವ ಸಂಗಮನ ಮಕ್ಕಳೇ ಮುಂದೆ ವಿಜಯನಗರವನ್ನು ಸ್ಥಾಪಿಸಿದರು. ಈ ಕಾಲದಲ್ಲಿ ತೆಲುಗು ಸೀಮೆಯಲ್ಲಿ ಅನೇಕ ಬೇಡ ಸಂಸ್ಥಾನಗಳಿದ್ದವು. ವಿಜಯನಗರ ಕಾಲದಲ್ಲಿ ಬೇಡರು ಪ್ರಮುಖ ಸ್ಥಾನಮಾನಗಳನ್ನು ಗಳಿಸಿದ್ದರು. ವಿಜಯನಗರ ಅರಸರು ಅಲ್ಲಲ್ಲಿ ಸ್ಥಾಪನೆಗೊಂಡಿದ್ದ ಬೇಡ ರಾಜ್ಯಗಳನ್ನು ತಮ್ಮ ಕಡೆಗೆ ಸೆಳೆದುಕೊಂಡು ಅವರ ಸೈನ್ಯ ಸಹಾಯ, ಸಹಕಾರದಿಂದ ವಿಜಯನಗರವನ್ನು ಆಳಿದರು. ವಿಜಯನಗರವು ಅನೇಕ ಪಾಳೆಯಪಟ್ಟುಗಳನ್ನೊಳಗೊಂಡ ಒಕ್ಕೂಟ ವ್ಯವಸ್ಥೆ ಆಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಪ್ರಸಿದ್ದಿ ಪಡೆದಿದ್ದ ‘ಖಾಸ ಬೇಡರ ಪಡೆ’, ‘ಮೀಸಲು ಪಡೆ’ಗಳು ಬೇಡರಿಗೆ ಸಂಬಂಧಿಸಿದ್ದವು. ಪೆರಿಯ ಓಬಳನಾಯಕನು ಉನ್ನತ ಹುದ್ದೆಯಲ್ಲಿದ್ದನು. ನಿಡಗಲ್ಲು, ಚಿತ್ರದುರ್ಗ, ರತ್ನಗಿರಿ, ಹರ್ತಿಕೋಟೆ, ನಾಯಕನಹಟ್ಟಿ, ಗುಡೇಕೋಟೆ, ಜರಿಮಲೆ, ಬಸವಾಪಟ್ಟಣ, ಗುಮ್ಮನಾಯಕನಹಳ್ಳಿ (ಪಾಳ್ಯ), ಹರಪನಹಳ್ಳಿ, ಕನಕಗಿರಿ, ಮತ್ತೋಡು ಮುಂತಾದ ಅನೇಕ ಪಾಳೆಯಪಟ್ಟುಗಳು ಬೇಡರಿಗೆ ಸೇರಿದ್ದವು. ಬಹಮನಿ ಅರಸರ ವಿರುದ್ಧವಾಗಿ ಹೋರಾಡಲು ಬೇಡರನ್ನು ನೇಮಿಸಿದ್ದರು. ಕನಕಗಿರಿ ನಾಯಕರು ವಿಜಯನಗರ ಮೇಲಿನ ಮುಸ್ಲಿಂ ದಾಳಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಅವರಿಗೆ ವಿಜಯನಗರದ ಆಸ್ಥಾನದಲ್ಲಿ ಬಲಗೈ ಪಾರ್ಶ್ವ ರಾಜಮರ್ಯಾದೆಯನ್ನು ಕೊಟ್ಟಿದ್ದರು. ಕ್ರಿ.ಶ. ೧೫೬೫ರಲ್ಲಿ ನಡೆದ ತಾಳಿಕೋಟೆ ಕದನದಲ್ಲಿ ಅನೇಕ ಬೇಡ ಸಂಸ್ಥಾನಿಕರು ಭಾಗವಹಿಸಿದ್ದರು. ೭೨ ವಂಶದ ನಾಯಕರು ಆ ಯುದ್ಧದಲ್ಲಿ ವಿಜಯನಗರ ಪರವಾಗಿ ಭಾಗವಹಿಸಿದ್ದರು. ಮತ್ತು ಅನೇಕ ಕಷ್ಟ-ನಷ್ಟಗಳನ್ನು ಅನುಭವಿ ಸಿದರು. ಈ ಯುದ್ಧದಲ್ಲಿ ಸೋಲುಂಡ ವಿಜಯನಗರ ಸೈನ್ಯವು ದಿಕ್ಕುಪಾಲಾಯಿತು. ವಿಜಯ ನಗರ ಅರಸರ ಅಧೀನದಲ್ಲಿದ್ದ ಅನೇಕ ಪಾಳೆಯಗಾರರು ಈ ಸಂದರ್ಭದಲ್ಲಿ ಸ್ವತಂತ್ರರಾದರು. ಆದರೆ ಅವರಲ್ಲಿ ವಿಜಯನಗರ ಅರಸರಿಗೆ ತೋರಿದ ಒಗ್ಗಟ್ಟನ್ನು ತೊರದೇ ತಮ್ಮ ತಮ್ಮಲ್ಲಿಯೇ ಜಗಳಕ್ಕಿಳಿದರು. ಸ್ವತಂತ್ರಗೊಂಡ ಅನೇಕ ಬೇಡ ಸಂಸ್ಥಾನಿಕರು ನಂತರ ವಿಜಾಪುರ, ಆದಿಲ್‌ಷಾಹಿಗಳ, ಮೊಗಲರ, ಮರಾಠರ, ಹೈದರಾಲಿ-ಟಿಪ್ಪುಸುಲ್ತಾನರ, ನಿಜಾಮನ ಮತ್ತು ಬ್ರಿಟಿಷರ ರಾಜಕೀಯ ಪೈಪೋಟಿಯ ಒಳಜಗಳದಲ್ಲಿ ಬಳಲುವಂತಾದರು. ಹೋರಾಡುವುದು ಅವರಿಗೆ ಅನಿವಾರ್ಯವಾಯಿತು. ಮತ್ತೆ ವಿಜಯನಗರದ ವೈಭವದ ಸ್ಥಾಪನೆಯ ಕನಸಿನೊಂದಿಗೆ ವಿಜಯನಗರ ಅರಸರ ಪರವಾಗಿ ಹೋರಾಟಕ್ಕಿಳಿದ ಎಚ್ಚಮ ನಾಯಕನ ಪ್ರಯತ್ನವೂ ವಿಫಲವಾಯಿತು.

ಬಿಜಾಪುರ ಆದಿಲ್‌ಷಾಹಿಗಳು ಮತ್ತು ಬೇಡರು

ವಿಜಾಪುರದ ಆದಿಲ್‌ಷಾಹಿಗಳ ಕಾಲಕ್ಕೆ ಬೇಡರು ಅನೇಕ ಸಂಕಷ್ಟಗಳಿಗೆ ಒಳಗಾದರು. ಮಹಮ್ಮದ್ ಆದಿಲ್‌ಷಾಹಿಯ ಸೇನಾಪತಿಗಳ ದಾಳಿಯಿಂದ ಜನರು ತತ್ತರಿಸಿಹೋದರು. ಹರಪನಹಳ್ಳಿ, ಸಂಡೂರು, ಕನಕಗಿರಿ, ಉಜ್ಜನಿ ಪ್ರದೇಶಗಳ ನಾಯಕರು ಸೋಲುಂಡು ಸೇನಾಪತಿ ರಣದುಲ್ಲಾಖಾನನ ಸಹಾಯಕರಾಗಿ ನಂತರದ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರು ಮತ್ತು ಸಾಕಷ್ಟು ಕಪ್ಪಕಾಣಿಕೆಯನ್ನು ಕೊಟ್ಟರು. ಆದಿಲ್‌ಷಾಹಿಯು ಸಂಪತ್ತಿನ ಆಸೆಗಾಗಿ ಎಂಟು ಬಾರಿ ದಕ್ಷಿಣದ ಕಡೆ ದಾಳಿಮಾಡಿದನು. ಇವನು ಇಕ್ಕೇರಿ ನಾಯಕರ ಮೇಲೆ ದಾಳಿ ಮಾಡುವಾಗ ಬಸವಾಪಟ್ಟಣದ ನಾಯಕರ ಸಹಾಯವನ್ನು ಪಡೆದನು. ಹಾಗೆಯೇ ಬಸವಾಪಟ್ಟಣದ ಮೇಲೆ ದಾಳಿ ಮಾಡಿದಾಗ ಇಕ್ಕೇರಿ ನಾಯಕರ ಸಹಾಯವನ್ನು ಪಡೆದನು. ಬಸವಾಪಟ್ಟಣದ ಚಿಕ್ಕಕೆಂಗ ಹನುಮಪ್ಪನಾಯಕನು ಸೋತು ಅದಿಲ್‌ಷಾಹಿಯ ಜೊತೆ ಚಿತ್ರದುರ್ಗ, ಶಿರಾ, ಹಾಗಲವಾಡಿ, ಬೆಂಗಳೂರು, ಮೈಸೂರು ಮುಂತಾದ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದನು. ಈ ಸಹಾಯಕ್ಕಾಗಿ ೧೬೩೭ರಲ್ಲಿ ಅದಿಲ್‌ಷಾಹಿಯು ಬಸವಾಪಟ್ಟಣವನ್ನು ಹನುಮಪ್ಪನಾಯಕನಿಗೆ ನೀಡಿದನು ಮತ್ತು ಇವನ ಸಹಾಯದಿಂದ ಹರಪನಹಳ್ಳಿ, ಸಂಡೂರು, ರಾಯದುರ್ಗ, ದೊಡ್ಡೇರಿ, ಕುಂದರ್ಪೆ, ಹಿರಿಯೂರು, ಚಿಕ್ಕನಾಯಕನಹಳ್ಳಿ, ಬೇಲೂರು, ಸಿರಾ, ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ, ಯಲಹಂಕ ಮುಂತಾದ ಸ್ಥಳಗಳನ್ನು ಅದಿಲ್‌ಷಾಹಿಯು ಗೆದ್ದನು. ಚಿಕ್ಕಣ್ಣನಾಯಕನು (ಚಿತ್ರದುರ್ಗ ಅರಸ) ಒಮ್ಮೆ ಆದಿಲ್‌ಷಾಹಿಯ ಸೈನ್ಯವನ್ನು ಅತ್ಯಂತ ಚಾಣಕ್ಷತೆಯಿಂದ ಸೋಲಿಸಿದ್ದಷ್ಟೇ ತೃಪ್ತಿ. ಇವನ ನಂತರ ದಳವಾಯಿಗಳ ಪ್ರಾಬಲ್ಯ ಹೆಚ್ಚಾಗಿ ಮತ್ತಿ ಸಂತತಿ ಕೊನೆಯಾಯಿತು. ನಂತರ ಅಧಿಕಾರಕ್ಕೆ ಬಂದ ಬಿಳಿಚೋಡು ಮನೆತನದ ಬಿಚ್ಚುಗತ್ತಿ ಭರಮಪ್ಪ ನಾಯಕನು ಆದಿಲ್‌ಷಾಹಿಗಳ ಮೇಲೆ ದಾಳಿ ಮಾಡಬೇಕು ಎಂದನಾದರೂ ಅಷ್ಟೊತ್ತಿಗೆ ಬಿಜಾಪುರ ಮೊಗಲರ ವಶಕ್ಕೆ ಹೋಗಿತ್ತು ಮತ್ತು ಶಿರಾ ಅದರ ದಕ್ಷಿಣದ ಕೇಂದ್ರವಾಗಿತ್ತು. ಬೂದಿಹಾಳು, ಚಿತ್ರದುರ್ಗದ ಕೆಲವು ಭಾಗ ಬಸವಾಪಟ್ಟಣ ಇನ್ನು ಕೆಲವು ಪಾಳೆಯಗಾರರ ಸಂಸ್ಥಾನಗಳು ಮೊಗಲರ ವಶಕ್ಕೆ ಹೋಗಿದ್ದವು. ಔರಂಗ ಜೇಬನು ಅದಿಲ್‌ಷಾಹಿಗಳ ಮೇಲೆ ದಾಳಿ ಮಾಡುವಾಗ ಸುರಪುರದ ನಾಯಕರ ಸೈನ್ಯ ಸಹಾಯವನ್ನು ಕೇಳಿದನು. ಈ ಸಂದರ್ಭದಲ್ಲಿ ಬಿದನೂರಿನ ನಾಯಕರಿಗೂ ಮತ್ತು ಚಿತ್ರದುರ್ಗ ನಾಯಕರಿಗೂ ಅನೇಕ ಯುದ್ಧಗಳು ನಡೆದವು. ಹಿರೇಮದಕರಿನಾಯಕನ ಕಾಲದಲ್ಲಿ ನಡೆದ (ಕ್ರಿ.ಶ. ೧೭೪೮) ಮಾಯಕೊಂಡ ಕದನದಲ್ಲಿ ಹರಪನಹಳ್ಳಿ ನಾಯಕ ಸೋಮಶೇಖರ ನಾಯಕನು ಹಿರೇಮದಕರಿನಾಯಕನನ್ನು ಕೊಂದನು. ಚಂದಸಾಹೇಬನ ಮಗ ಈ ಯುದ್ಧದಲ್ಲಿ ಭಾಗವಹಿಸಿದ್ದುದು ಒಂದು ವಿಶೇಷ. ಕೊನೆಯ ವೀರಮದಕರಿ ನಾಯಕನು ಅಧಿಕಾರಕ್ಕೆ ಬರುವ ಮುನ್ನ ಗಂಡಿಲ ಓಬವ್ವ ನಾಗತಿಯು ಆಡಳಿತವನ್ನು ನಡೆಸಿರುವುದು ಕಂಡುಬರುತ್ತದೆ. ‘ನಾಗತಿ’ ಎಂಬ ವಿಶೇಷ ಪದ ಬೇಡನಾಯಕರ ಇತಿಹಾಸ ದಲ್ಲಿ ಮಾತ್ರ ಕಾಣುತ್ತೇವೆ (ನಾಗತಿ-ಪಾಳೆಯಗಾರನಾಯಕನ ರಾಣಿ ಎಂದರ್ಥ). ೧೬೩೭ರಲ್ಲಿ ಶಿರಾ ಅದಿಲ್‌ಷಾಹಿಯ ವಶವಾಯಿತು. ೧೬೩೮ರಲ್ಲಿ ಪುನಃ ರಣದುಲ್ಲಾಖಾನ್ ಮತ್ತು ಅಫಜಲ್‌ಖಾನ್‌ರು ಶಿರಾದ ಮೇಲೆ ದಾಳಿ ಮಾಡಿ ಸರ್ಜಾರಂಗಪ್ಪನಾಯಕನನ್ನು ಯುದ್ಧದಲ್ಲಿ ಕೊಂದರು. ನಂತರ ಶಿರಾ ಪಾಳೆಯಗಾರರ ವಂಶವು ಎರಡು ಶಾಖೆಗಳಾಗಿ ಮಿಡಿಗೇಶಿಯಲ್ಲಿ, ರತ್ನಗಿರಿಯಲ್ಲಿ ನೆಲೆಸಿದವು.

ಹೈದರಾಲಿ, ಟಿಪ್ಪೂಸುಲ್ತಾನ ಮತ್ತು ಬೇಡರು

ಮೈಸೂರು ಇತಿಹಾಸದಲ್ಲಿ ಏಳ್ಗೆಗೆ ಬಂದ ಹೈದರಾಲಿಯು ಬೇಡರ ಶೌರ್ಯ ಸಾಹಸಗಳನ್ನು ಅರಿತಿದ್ದನು. ಅವನು ಹೈದ್ರಾಬಾದ್‌ನಿಂದ ಸಂಪತ್ತನ್ನು ಲೂಟಿ ಮಾಡಿಕೊಂಡು ಬಂದಿದ್ದು ೩೦೦ ‘ಬೇಡರ ಪಡೆ’ಯ ಸಹಾಯದಿಂದಲೇ. ಚಿತ್ರದುರ್ಗದ ೫ನೇ ಮದಕರಿ ನಾಯಕನ ಸೈನ್ಯ ಸಹಾಯದಿಂದ ತನ್ನಿಂದ ಗೆಲ್ಲಲಾಗದ ಬಂಕಾಪುರ, ನಿಡಗಲ್ಲು ಕೋಟೆಗಳನ್ನು ಗೆದ್ದುಕೊಂಡನು. ಕ್ರಿ.ಶ. ೧೭೬೩ರಲ್ಲಿ ಬಿದನೂರನ್ನು ಗೆಲ್ಲುವಲ್ಲಿಯೂ ಹೈದರಾಲಿ ಮದಕರಿನಾಯಕನ ಸಹಾಯವನ್ನು ಪಡೆದಿದ್ದನು. ತೀರಾ ಹತ್ತಿರದಿಂದ ಮದಕರಿನಾಯಕನ ಶೌರ್ಯ, ಸಾಮರ್ಥ್ಯವನ್ನು ನೋಡಿದ್ದ ಹೈದರಾಲಿ ತನ್ನ ‘ಸ್ನೇಹ ನೀತಿ’ಗೆ ಬದಲಾಗಿ ‘ವೈರಿ ನೀತಿ’ಯನ್ನು ಅನುಸರಿಸಿದನು. ಇದೇ ವೇಳೆಗೆ ಮರಾಠರು ಮದಕರಿನಾಯಕನ ಸ್ನೇಹ ಕೋರಿ ಬಂದರು. ಕ್ರಿ.ಶ. ೧೭೬೪ರಲ್ಲಿ ಹೈದರಾಲಿ ಮತ್ತು ಪೇಶ್ವೆ ಮಾಧವರಾಯನಿಗೂ ಯುದ್ಧ ನಡೆಯಿತು. ಆಗ ಮದಕರಿನಾಯಕನು ಮರಾಠರಿಗೆ ಸಹಾಯ ಮಾಡಿದನು. ಇದರಿಂದ ಕೋಪಿತನಾದ ಹೈದರಾಲಿ ಇದೇ ನೆಪ ಮಾಡಿಕೊಂಡು ಈ ಹಿಂದೆ ಮದಕರಿನಾಯಕನು ಮಾಡಿದ ಸಹಾಯವನ್ನೆಲ್ಲಾ ಮರೆತು ಕ್ರಿ.ಶ. ೧೭೬೨ರಲ್ಲಿ ಚಿತ್ರದುರ್ಗದ ಮೇಲೆ ದಾಳಿ ಮಾಡಿದನು. ನಂತರ ೧೭೭೪, ೧೭೭೭ ಮತ್ತು ಕ್ರಿ.ಶ. ೧೭೭೯ರಲ್ಲಿ ನಾಲ್ಕನೇ ಬಾರಿಗೆ ಚಿತ್ರದುರ್ಗದ ಮೇಲೆ ದಾಳಿ ಮಾಡಿ ಕುತಂತ್ರದಿಂದ ಚಿತ್ರದುರ್ಗವನ್ನು ಗೆದ್ದುಕೊಂಡನು. ನಂತರ ಚಿತ್ರದುರ್ಗದ ವೈಭವ ಕಣ್ಮರೆಯಾಯಿತು. ಚಿತ್ರದುರ್ಗಕ್ಕೆ ಹೈದರಾಲಿ ‘ಫರ‌್ರಾಕಾ ಬಾದ್’ ಎಂಬ ಹೊಸ ಹೆಸರಿಟ್ಟು ಒಂದು ವರ್ಷ ಕಾಲ ಇಲ್ಲಿಯೇ ಉಳಿದನು. ಚಿತ್ರದುರ್ಗದ ಅಧಿಕಾರವನ್ನು ಪುನಃ ಪಡೆಯಲು ಮದಕರಿನಾಯಕನ ವಂಶಸ್ಥರು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದು ಹೈದರಾಲಿಯ ವಿರುದ್ಧ ಧ್ವನಿ ಎತ್ತಿದ ದೊಡ್ಡ ಮದಕರಿ ನಾಯಕನ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಅವನು ಸಾವಿರ ಸೈನ್ಯದ ನಾಯಕನಾಗಿ ೩೦೦ ರೂ.ಗಳ ಸಂಬಳಕ್ಕೆ ನೇಮಕವಾದನು. ಚಿತ್ರದುರ್ಗದಂತೆಯೇ ತರೀಕೆರೆ ಪಾಳೆಯ ಗಾರರಿಗೂ ಆಯಿತು. ಸರ್ಜಾಹನುಮಪ್ಪನಾಯಕನು ಹೈದರಾಲಿಯನ್ನು ಸೋಲಿಸಲಾಗಲಿಲ್ಲ. ನಂತರದ ಮಾತುಕತೆಯಂತೆ ೧೮ ಸಾವಿರ ವಾರ್ಷಿಕ ಪೊಗದಿ ಕೊಡುವಂತೆ ಹೇಳಿ ತರೀಕೆರೆ ಸಂಸ್ಥಾನವನ್ನು ಸರ್ಜಾಹನುಮಪ್ಪನಾಯಕನಿಗೆ ಬಿಟ್ಟುಕೊಟ್ಟನಾದರೂ, ಈ ಹಣವನ್ನು ನಾಯಕನು ಕೊಡಲಾಗದೇ ಇದ್ದುದರಿಂದ ನಂತರ ೧೦೦ ಹೈದರಿ ವರಹಗಳಿಗೆ ಗೊತ್ತು ಮಾಡಿ ಮಂಜರಾಬಾದ ಅನ್ನು ಆಳಲು ನಾಯಕನನ್ನು ಕಳುಹಿಸಿದನು. ಹೈದರಾಲಿಯ ಕೊಯಮತ್ತೂರು ದಾಳಿಯಲ್ಲಿ ಈ ನಾಯಕನು ಹೈದರಾಲಿಯ ಪರ ಭಾಗವಹಿಸಿದ್ದನಲ್ಲದೆ ಹೋರಾಡುತ್ತಲೇ ಮರಣ ಹೊಂದಿದನು. ಹರಪನಹಳ್ಳಿ ಪಾಳೆಯಗಾರರೂ ಸಹ ಹೈದರಾಲಿಯನ್ನು ಎದುರು ಹಾಕಿಕೊಳ್ಳಲಿಲ್ಲ. ನಿಡಗಲ್ಲು ಅರಸರೂ ಸಹ ಹೈದರಾಲಿಯ ಅಧೀನಕ್ಕೊಳಪಟ್ಟರು. ವೀರತಿಮ್ಮಣ್ಣನಾಯಕನು ಹೈದರಾಲಿಗೆ ವಾರ್ಷಿಕ ೭,೦೦೦ ಪಗೋಡ ಗಳನ್ನು ಕೊಡಲು ಒಪ್ಪಿದನಲ್ಲದೇ ೩೦೦ ಜನ ಸೈನಿಕರ ಸಹಾಯವನ್ನು ಮಾಡಿದನು. ಮಿಡಗೇಶಿ ನಾಯಕನು ೧೭೬೫ರಲ್ಲಿ ಹೈದರಾಲಿಯಿಂದ ಜಾಗೀರು ಪಡೆದು ಅವನ ಅಧೀನದಲ್ಲಿ ಉಳಿದನು. ಹೈದರಾಲಿಯ ಪರವಾಗಿ ಚಿತ್ರದುರ್ಗದ ವಿರುದ್ಧ ಮತ್ತೋಡಿನ ಹಾಲಪ್ಪನಾಯಕನು ಸೈನ್ಯ ಸಹಾಯ ಮಾಡಿದನು. ೩ನೇ ಚನ್ನಬಸಪ್ಪನು ಹಾಗಲವಾಡಿಯ ದೊರೆಯಾಗಿದ್ದಾಗ ಹೈದರಾಲಿ ಈ ನಾಯಕನನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡು ಐವತ್ತೂ ಸಾವಿರ ರೂ.ಗಳನ್ನು ಕಾಣಿಕೆಯಾಗಿ ನೀಡುವಂತೆ ಒತ್ತಾಯಿಸಿದನು. ಆದರೆ ಅವನು ಹದಿನೆಂಟು ಸಾವಿರ ಕೊಡಲು ಒಪ್ಪಿದನು. ಆದರೆ ಈ ಹಣವನ್ನು ಕೊಡಲಾಗದ ಪರಿಸ್ಥಿತಿ ಎದುರಾದಾಗ ಹೈದರಾಲಿ ಚನ್ನಬಸಪ್ಪ ನಾಯಕನನ್ನು ಬಂಧಿಸಿ ಸೆರೆಮನೆಯಲ್ಲಿಟ್ಟನು. ನಂತರ ಹಾಗಲವಾಡಿ ಸೀಮೆಯ ಅರ್ಧಭಾಗವನ್ನು ತನ್ನಲ್ಲಿಟ್ಟುಕೊಂಡು ಇನ್ನರ್ಧವನ್ನು ಹಾಗಲವಾಡಿ ಉತ್ತರಾಧಿ ಕಾರಿ ಬಾಲಕ ೨ನೇ ಮುದ್ದೀರಪ್ಪನಾಯಕನಿಗೆ ಕೊಡಲು ಒಪ್ಪಿದನಾದರೂ ನಾಯಕ ಅಪ್ರಾಪ್ತ ನೆಂಬ ಒಂದೇ ಕಾರಣದಿಂದ ಹಾಗಲವಾಡಿಯನ್ನು ವಶಪಡಿಸಿಕೊಂಡನು. ರತ್ನಗಿರಿಯ ನಾಯಕ ರಂಗಪ್ಪರಾಜನ ಕಾಲದಲ್ಲಿ ಹೈದರಾಲಿ ರತ್ನಗಿರಿಯ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿ ಕೊಂಡು ಅವನ ನಾಲ್ಕು ಮಕ್ಕಳನ್ನು ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಕರೆದೊಯ್ದನು. ನಂತರ ಅವರಿಗೆ ಶ್ರೀರಂಗಪಟ್ಟಣದ ಬಳಿ ಬೆಳಗುಂದಿ ಗ್ರಾಮವನ್ನು ರಂಗಪ್ಪ ರಾಜನಿಗೆ ಕೊಟ್ಟು ಅಲ್ಲಿಯೇ ನೆಲೆಸುವಂತೆ ಮಾಡಿ ರತ್ನಗಿರಿಯನ್ನು ತನ್ನ ಅಧೀನದಲ್ಲಿಯೇ ಉಳಿಸಿ ಕೊಂಡನು. ಗುಮ್ಮನಾಯಕನಹಳ್ಳಿಯೂ ೧೭೬೦ರಲ್ಲಿ ಹೈದರಾಲಿಯ ದಾಳಿಗೆ ತುತ್ತಾಗಿತ್ತು. ಅಲ್ಲಿಯ ಅರಸ ನರಸಿಂಹನಾಯಕನು ಕೋಟೆಯನ್ನು ಬಿಟ್ಟು ಓಡಿಹೋದನು. ದಿವಾನ್ ಪೂರ್ಣಯ್ಯನ ಸಲಹೆ ಮೇರೆಗೆ ಹೈದರಾಲಿ ಚಿತ್ರದುರ್ಗ ಅರಸರನ್ನು ಎದುರಿಸಲು ಜರಿಮಲೆ ಪಾಳೆಯಗಾರರ ಸಹಾಯವನ್ನು ಪಡೆದನು. ತಮ್ಮ ರಕ್ಷಣೆಗಾಗಿ ತಮ್ಮ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಜರಿಮಲೆ ಪಾಳೆಯಗಾರರು ಹೈದರಾಲಿಗೆ ಸಹಾಯ ಮಾಡಿದರು. ಗುಡೇಕೋಟೆ ನಾಯಕರೂ ಹೈದರಾಲಿಯ ಪರನಿಂತರು. ೩,೦೦೦ ವಾರ್ಷಿಕ ಪಗೋಡಗಳನ್ನು ಕೊಡಲು ಒಪ್ಪಿ ಜರಿಮಲೆ ನಾಯಕರು ಹೈದರಾಲಿಯಿಂದ ಜರಿಮಲೆಯನ್ನು ಆಳಲು ಅನುಮತಿ ಪಡೆದರು. ಪಾಲ್ಗಾಟಿನ ಮೇಲೆ ಹೈದರಾಲಿ ದಾಳಿ ಮಾಡಿದಾಗ ಜರಿಮಲೆ ನಾಯಕನು ಹೈದರ್‌ನ ಸಹಾಯಕ್ಕೆ ಹೋಗಿದ್ದನು. ಅಲ್ಲಿ ನಾಯಕನ ಸಾಹಸ ನೋಡಿದ ಹೈದರಾಲಿ ಜರಿಮಲೆ ಪಾಳೆಯಗಾರರನ್ನು ಮುಗಿಸಲು ಅವರನ್ನು ಬಂಧನದಲ್ಲಿಟ್ಟನು. ಗುಡೇಕೋಟೆಯ ಮೇಲೆಯೂ ಹೈದರಾಲಿ ಎರಡು ಬಾರಿ ದಾಳಿ ಮಾಡಿದ್ದನು. ಹೈದರಾಲಿಯ ದಾಳಿಗೆ ತತ್ತರಿಸಿದ ಅನೇಕ ಪಾಳೆಯಗಾರರು ತಮ್ಮ ತಮ್ಮ ರಕ್ತ ಸಂಬಂಧ ಮರೆತು ಹೋರಾಡುವಂತಾಯಿತು. ಅದನ್ನು ಉಳಿವಿಗೆ ಅದು ಅನಿವಾರ್ಯವೂ ಆಗಿತ್ತು.

ಟಿಪ್ಪೂ ಸುಲ್ತಾನನು ಪಾಳೆಯಗಾರರ ಕಡುವಿರೋಧಿಯಾಗಿದ್ದನು. ಹರಪನಹಳ್ಳಿ, ರಾಯದುರ್ಗ, ಕನಕಗಿರಿ, ಚಿತ್ರದುರ್ಗ, ಜರಿಮಲೆ, ಗುಡೇಕೋಟೆ, ಸಂತೇಬೆನ್ನೂರು ಪ್ರಾಂತ್ಯಗಳನ್ನು ಟಿಪೂ್ಪಸುಲ್ತಾನ ಕೊಳ್ಳೆ ಹೊಡೆದನು. ಚಿತ್ರದುರ್ಗದ ದೊಡ್ಡ ಮದಕರಿ ನಾಯಕನು ಟಿಪೂ್ಪ ವೈರಿಗಳ ತಲೆಗಳನ್ನು ಚಂಡಾಡಿದನು. ಇದರಿಂದ ಟಿಪ್ಪೂ ಚಿತ್ರದುರ್ಗದ ಅಧಿಕಾರವನ್ನು ಬಿಟ್ಟು ಕೊಡುವ ಮತೊಂದನ್ನು ಆಡಿದನು. ಆದರೆ ಆ ಮಾತು ಮಾತೇ ಆಗಿ ಉಳಿಯಿತು. ಅಷ್ಟೇ ಅಲ್ಲದೆ ಮದಕರಿನಾಯಕನನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚಿತ್ರದುರ್ಗದಲ್ಲಿ ಮಹಮ್ಮದ್ ಭಕ್ಷಿ ಎಂಬ ಅಧಿಕಾರಿಯನ್ನು ನೇಮಕ ಮಾಡಿದನು. ಈ ಸಂದರ್ಭದಲ್ಲಿ ಹಿರೇಮದಕರಿನಾಯಕನು ತಲೆ ತಪ್ಪಿಸಿಕೊಂಡು ಅಲೆಮಾರಿಯಾಗ ಬೇಕಾಯಿತು. ಮತ್ತೋಡು ನಾಯಕರು ಟಿಪ್ಪೂವಿನ ಪರವಿದ್ದರೂ ಅವರಿಗೆ ಏನೂ ಲಾಭವಾಗಲಿಲ್ಲ. ಸಿರಾ ಪಾಳೆಯಗಾರ ರಂಗಪ್ಪನಾಯಕನು ಕಂಠೀರವ ನರಸರಾಜರಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟನು. ಹೈದರಾಲಿಯಿಂದ ಜಾಗೀರು ಪಡೆದುಕೊಂಡಿದ್ದ ಇವರು ಟಿಪ್ಪೂವಿನ ಕಾಲಕ್ಕೆ ಅವನ ಅಧೀನದಲ್ಲಿ ಉಳಿಯಬೇಕಾಯಿತು. ರತ್ನಗಿರಿಯ ತಿಮ್ಮಣ್ಣ ನಾಯಕನನ್ನು ಸೋಲಿಸಿ ಅವನ ಮಗ ಹೊಟ್ಟೆಣ್ಣ ನಾಯಕ, ಅವನ ಸಹೋದರರನ್ನು ಶ್ರೀ ರಂಗಪಟ್ಟಣಕ್ಕೆ ಕರೆದೊಯ್ದು ಕೊಂದನೆಂದು ತಿಳಿಯುವುದು. ಜರಿಮಲೆ, ಗುಡೇಕೋಟೆ ಪ್ರದೇಶಗಳೂ ಟಿಪ್ಪೂವಿನ ದಾಳಿಗೆ ತುತ್ತಾದವು. ಕನಕಗಿರಿಯ ಪ್ರದೇಶದಲ್ಲಿ ಟಿಪ್ಪೂ ಸಂಚರಿಸಿ ಭೀತಿಯನ್ನುಂಟು ಮಾಡಿದನು ಮತ್ತು ಸಂಪತ್ತನ್ನು ದೋಚಿದನು. ಮಂಗಳೂರಿನ ಮೇಲೆ ದಾಳಿ ಮಾಡಿದಾಗ ನಿಡಗಲ್ಲು ಅರಸನಿಗೆ ಸೈನ್ಯ, ಹಣ ಸಮೇತ ಬರುವಂತೆ ಟಿಪ್ಪೂ ಆಜ್ಞೆ ಮಾಡಿದನು. ಮತ್ತು ಆ ನಾಯಕ ಸಾಮರ್ಥ್ಯಕ್ಕಿಂತಲೂ ಹೆಚ್ಚು ಹಣ ಕೊಡುವಂತೆ ಒತ್ತಾಯಿಸಿದನು. ಇದರಿಂದ ವೀರತಿಮ್ಮಣ್ಣನಾಯಕನು ಹಣವನ್ನು ಕೊಡಲಾಗದೇ ತನ್ನ ನಿಡಗಲ್ಲು ಕೋಟೆಯನ್ನಾಗಿ ಒಪ್ಪಿಸಿದನು. ನಿಡಗಲ್ಲು ದೊರೆಗಳನ್ನು, ಇತರ ಅನೇಕ ಪಾಳೆಯ ಗಾರರನ್ನು ಸೆರೆಹಿಡಿದು ತಂದು ಶ್ರೀರಂಗಪಟ್ಟಣದಲ್ಲಿ ಕೊಲ್ಲುತ್ತಿದ್ದಾನೆಂಬ ಸುದ್ದಿಯಿಂದ ಸಿಟ್ಟಿಗೆದ್ದ ನಿಡಗಲ್ಲು ಜನರು ದಂಗೆ ಎದ್ದರು. ಅವರಲ್ಲಿ ಕೆಲವರನ್ನು ಸೆರೆಹಿಡಿದು ತಂದು ಶಿಕ್ಷಿಸಿದನು. ಕೆಲವರು ತಪ್ಪಿಸಿಕೊಂಡು ದಿಕ್ಕು ಪಾಲಾದರು. ಬಲಿಷ್ಠ ರತ್ನಗಿರಿ ಕೋಟೆಯು ಟಿಪ್ಪೂವಿನ ವಶವಾಗಲಿಲ್ಲ. ಆಗ ಸೈಯದ್ ಕಾಫರ್ ಮತ್ತು ಮೀರ್ ಕಫರ್ದಿಖಾನ್‌ಎಂಬ ಸರದಾರರನ್ನು ರತ್ನಗಿರಿ ಕೋಟೆಯನ್ನು ವಶಪಡಿಸಿಕೊಳ್ಳಲು ಕಳುಹಿಸಿದನು. ಒಂಬತ್ತು ತಿಂಗಳಾದರೂ ಕೋಟೆ ಟಿಪ್ಪೂವಿನ ವಶವಾಗಲಿಲ್ಲ ನಂತರ ಮೈಸೂರಿನಿಂದ ಸಾಕಷ್ಟು ಸೈನ್ಯವನ್ನು ತರಿಸಿಕೊಂಡು ದಳವಾಯಿ ರಂಗಪ್ಪನಾಯಕನನ್ನು ಸೆರೆಹಿಡಿದು ಗಲ್ಲಿಗೇರಿಸ ಲಾಯಿತು. ತಪ್ಪಿಸಿಕೊಂಡ ಕೆಲವರು ಸುರಪುರದ ಅರಸರ ಆಶ್ರಯ ಕೋರಿ ಹೋದರು. ಗುಮ್ಮನಾಯಕನಹಳ್ಳಿ ಪಾಳೆಯಗಾರ ನರಸಿಂಹನಾಯಕ ಜನರಲ್ ಹ್ಯಾರಿಸ್‌ನೊಡನೆ ಒಪ್ಪಂದ ಮಾಡಿಕೊಂಡು ಟಿಪ್ಪೂವಿನ ವಿರುದ್ಧ ಹೋರಾಡಿದ. ಹರಪನಹಳ್ಳಿಯ ಬಸಪ್ಪ ನಾಯಕನನ್ನು ಟಿಪ್ಪೂ ಸೆರೆ ಹಿಡಿದನು. ಇದರಿಂದ ಹೆದರಿದ ರಾಣಿ ಬಸಮ್ಮಾಜಿ ಮರಾಠರ ಪರುಶುರಾಂಬಾವೆ ಪೆಶ್ವೆಯಲ್ಲಿಗೆ ಆಶ್ರಯ ಕೋರಿ ಹೋದಳು. ಟಿಪ್ಪೂವಿನ ಮರಣದ ನಂತರ ಆಕೆ ಹರಪನಹಳ್ಳಿಗೆ ಬಂದಳು. ತರೀಕೆರೆಯ ಕೃಷ್ಣಪ್ಪನಾಯಕನು ಟಿಪ್ಪೂವಿನ ವಿರೋಧಿ ಎಂಬ ಒಂದೇ ಕಾರಣಕ್ಕೆ ದಿವಾನ್ ಪೂರ್ಣಯ್ಯನವರು ಇವರಿಗೆ ವಿಷ ಕುಡಿಸಿ ಕೊಲ್ಲಿಸಿದರೆಂದು ಹೇಳಲಾಗಿದೆ.

ಮರಾಠರು ಮತ್ತು ಬೇಡರು

ಶಿವಾಜಿಯ ಕಾಲದಲ್ಲಿ ಬಳ್ಳಾರಿಯ ಕೆಲವು ಪ್ರದೇಶಗಳು ಮರಾಠರ ವಶಕ್ಕೆ ಹೋಗಿದ್ದವು. ಶಿವಾಜಿಯ ನಂತರದ ಪೆಶ್ವೆಗಳ ಕಾಲದಲ್ಲಿ ಕರ್ನಾಟಕವು ಮರಾಠರ ದಾಳಿಗಳಿಗೆ ತುತ್ತಾಗಿತ್ತು. ಈ ಸಂದರ್ಭದಲ್ಲಿ ಹೈದರಾಲಿ ಮತ್ತುಟಿಪೂ್ಪ ವಿರೋಧಿಗಳು ಮರಾಠರಿಗೆ ಸಹಾಯ ಮಾಡಿ ದರು. ಸ್ಥಳೀಯ ನಾಯಕರು ಕೆಲವೊಮ್ಮೆ ಪೇಶ್ವೆಗಳ ಸಹಾಯ ಪಡೆದು ತಮ್ಮ ವಿರೋಧಿ ಗಳನ್ನು ಹೆದರಿಸಿದರು. ಮರಾಠರ ದಂಡನಾಯಕ ಸಿದ್ದೋಜಿ ಘೋರ್ಪಡೆಯು ಕ್ರಿ.ಶ. ೧೭೨೮ರಲ್ಲಿ ಗುತ್ತಿಯಿಂದ ಬಂದು ಸಂಡೂರು, ಕುಡುತಿನಿ ಮುಂತಾದ ಪ್ರದೇಶಗಳನ್ನು ಗೆದ್ದುಕೊಂಡು ಎಂಟು ವರ್ಷಗಳ ಚೌತ್ ಕೊಡುವಂತೆ ಒತ್ತಾಯಿಸಿದನು. ಕ್ರಿ.ಶ. ೧೭೪೮ರಲ್ಲಿ ಮರಾಠ ಪೆಶ್ವೆಯಾದ ಬಾಲಾಜಿ ಬಾಜೀರಾವ್ ತನ್ನ ದಳಪತಿಯಾದ ಮುರಾರಿರಾವ್‌ವನ್ನು ಮೈಸೂರು ಮತ್ತು ಹೈದ್ರಾಬಾದ್ ಪ್ರಾಂತ್ಯಗಳ ಮೇಲೆ ದಾಳಿ ಮಾಡಲು ಕಳುಹಿಸಿದನು. ಇದೇ ಸಮಯದಲ್ಲಿ ಗುಮ್ಮನಾಯಕನಹಳ್ಳಿ ನರಸಿಂಹನಾಯಕನ ಪತ್ನಿ ರಾಣಿ ರಾಮಕ್ಕ ಮುರಾರಿರಾವ್‌ನೊಂದಿಗೆ ಒಪ್ಪಂದ ಮಾಡಿಕೊಂಡು ದಳವಾಯಿಗಳ ಸಂಚುಗಳನ್ನು ವಿಫಲ ಗೊಳಿಸಲು ಪ್ರಯತ್ನಿಸಿದಳಾದರೂ ವಿಫಲಳಾದಳು. ಮರಾಠರು ದಳವಾಯಿಗಳ ಹಣದ ಆಮೀಶಕ್ಕೆ ಒಳಗಾಗಿ, ಗೋರೆಂಟ್ಲ, ಕೊಂಡಿಕೊಂಡು ಪ್ರದೇಶಗಳನ್ನು ಹಣಕ್ಕೆ ಮಾರಿಕೊಂಡು ಸನ್ನದು ಬರೆದುಕೊಟ್ಟರು. ಆದರೆ ಇದರಿಂದ ಸಿಟ್ಟಿಗೆದ್ದ ರಾಣಿ ರಾಮಕ್ಕ ತನ್ನ ಸಾಮಂತರನ್ನು ಸೇರಿಸಿ ದಳವಾಯಿ ಸಾನಿನರಸಿಂಹಯ್ಯನನ್ನು ಸೋಲಿಸಿ ಗಡಿಪಾರು ಶಿಕ್ಷೆಗೆ ಒಳಪಡಿಸಿದಳು. ಕ್ರಿ.ಶ. ೧೭೫೨ರಲ್ಲಿ ಪೇಶ್ವೆ ನಾನಾಸಾಹೇಬ್ ಬಾಲಾಜಿರಾವ್ ರತ್ನಗಿರಿಯ ಸುತ್ತಮುತ್ತಲ ಪ್ರದೇಶವನ್ನು ವಶಪಡಿಸಿಕೊಂಡನು. ಕ್ರಿ.ಶ. ೧೭೭೯ರ ನಂತರ ಜರಿಮಲೆಯು ಕೆಲವು ಕಾಲ ಮರಾಠರ ಅಧೀನಕ್ಕೆ ಒಳಪಟ್ಟಿತ್ತು. ಜರಿಮಲೆ ನಾಯಕರು ಇಪ್ಪತ್ತು ಸಾವಿರ ಖಂಡಣಿ ಹಣವನ್ನು ಅವರಿಗೆ ಕೊಟ್ಟು ಜರಿಮಲೆಯನ್ನು ವಾಪಸ್ಸು ಪಡೆದರು.

ಬ್ರಿಟೀಷರು ಮತ್ತು ಬೇಡರು

ದಕ್ಷಿಣ ಭಾರತದಲ್ಲಿ ಬ್ರಿಟೀಷರು ಅನೇಕ ಪ್ರತಿಭಟನೆ, ಹೋರಾಟಗಳನ್ನು ಎದುರಿಸಿ ಅಧಿಕಾರವನ್ನು ಹಿಡುದುಕೊಳ್ಳಬೇಕಾಯಿತು. ಹೈದಾರಾಬಾದಿನ ನಿಜಾಮ, ಮರಾಠರು ಮತ್ತು ಬ್ರಿಟೀಷರ ದೊಸ್ತಿಯಿಂದ ಸು. ೨೩೫ ವರ್ಷಗಳ ಕಾಲ ಅಧಿಕಾರದ ಗದ್ದುಗೆಯಲ್ಲಿ ರಾಜ ಮರ್ಯಾದೆಯನ್ನು ಅನುಭವಿಸಿದ್ದ ಬೇಡರು ಬ್ರಿಟೀಷರ ಪ್ರವೇಶದಿಂದಾಗಿ ಅವರ ಬದುಕು ಚಿಂತಾಜನಕವಾಯಿತು. ಅವರು ಪಾಳೆಯಗಾರರನ್ನು ಸಂಬಳ ಪಡೆಯುವ ಅಧಿಕಾರಿಗಳ ಸ್ಥಾನಕ್ಕೆ ತಂದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಕೆಲವು ಪಾಳೆಯಗಾರರು ನಮ್ಮ ಸಂಸ್ಥಾನ ಗಳು ಮರಳಿ ಸಿಗಬಹುದೆಂಬ ಆಸೆಯಿಂದ ಬ್ರಿಟೀಷರ ಪರ ನಿಂತರು. ಆದರೆ ಅವರಿಗೆ ಯಾವ ಲಾಭವೂ ಆಗಲಿಲ್ಲ. ಅನೇಕ ಬೇಡರು ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದರು. ೧೮೨೪ರ ನಂತರ ಸಂಗೊಳ್ಳಿ ರಾಯಣ್ಣನು ಸುರಪುರದ ೩೦೦ ಬೇಡರ ಸಹಾಯ ಪಡೆದು ಕಿತ್ತೂರಿನಲ್ಲಿ ಬಂಡಾಯ ಮಾಡಿದನು. ಕ್ರಿ.ಶ. ೧೮೩೧ರಲ್ಲಿ ತರೀಕೆರೆ ಸರ್ಜಾ ರಂಗಪ್ಪನಾಯಕ, ಸರ್ಜಾ ಹನುಮಪ್ಪನಾಯಕರು ಬ್ರಿಟೀಷರ ವಿರುದ್ಧ ಹೋರಾಡಿದರು. ಅವರ ಹೋರಾಟದ ಯಶೋಗಾಥೆಗಳು ಜನರ ಮನದಾಳದಲ್ಲಿ ಇಂದಿಗೂ ಉಳಿದಿವೆ. ರಂಗಪ್ಪನಾಯಕನನ್ನು ಹಿಡಿದುಕೊಟ್ಟವರಿಗೆ ೧,೦೦೦ ಪಗೋಡಗಳ ಬಹುಮಾನ ಕೊಡುವುದಾಗಿ ರೆಸಿಡೆಂಟ್‌ನು ೧೮೩೧ ಏಪ್ರಿಲ್ ೧ ರಂದು ಪ್ರಕಟಿಸಿದನು. ಸರ್ಜಾರಂಗಪ್ಪ ನಾಯಕನು ಆಂಗ್ಲರನ್ನು ಭಾರತದಿಂದಲೆೀ ಓಡಿಸಬೇಕೆಂಬ ಮಹಾದಾಸೆಯಿಂದ ಬೇಡರ ಸೈನ್ಯವನ್ನು ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರಮರಣ ಹೊಂದಿದನು. ಸರ್ಜಾಹನುಮಪ್ಪನಾಯಕನೂ ಸಹಾ ತಂದೆಯಷ್ಟೇ ಶೂರ-ಸ್ವಾಭಿಮಾನಿ. ಅವನು ಸಹಾ ಬ್ರಿಟೀಷರನ್ನು ಕಂಡರೆ ಉರಿದೇಳು ತ್ತಿದ್ದನು. ಬ್ರಿಟೀಷರಿಂದ ಅವನನ್ನು ಹಿಡಯಲಾಗಲಿಲ್ಲ. ಕೊನೆಗೆ ಕುತಂತ್ರದಿಂದ ಅವನ ಸೂಳೆಯ ಸಹಾಯದಿಂದ ಸೆರೆಹಿಡಿದು ಕ್ರಿ.ಶ. ೧೮೩೨ರಲ್ಲಿ ಗಲ್ಲಿಗೇರಿಸಲಾಯಿತು. ಇವರ ಬಂಡಾಯದ ಪ್ರಭಾವದಿಂದ ಕ್ರಿ.ಶ. ೧೮೩೧ರಲ್ಲಿ ಮೈಸೂರು ಭಾಗದಲ್ಲಿ ‘ನಗರ ದಂಗೆ’ ಆಯಿತು. ಇದರ ಪರಿಣಾಮ, ಮೈಸೂರು ಅರಸರಿಂದ ಬ್ರಿಟೀಷರು ಅಧಿಕಾರವನ್ನು ಕಿತ್ತು ಕೊಂಡರು. ಬೇಡರ ಅನೇಕ ಕೂಟ ಸೈನ್ಯಗಳು ಮೈಸೂರು ಭಾಗದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದವು. ಆದರೆ, ಅವರಾರು ಗೆಲುವನ್ನು ಸಾಧಿಸಲಿಲ್ಲ.

೧೮೫೭ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೇಡರ ಪಾತ್ರ ಅವಿಸ್ಮರಣೀಯವಾದುದು. ಬ್ರಿಟೀಷರ ನಿಶ್ಯಸ್ತ್ರೀಕರಣ ಶಾಸನ ನಮ್ಮ ಬದುಕಿಗೆ ಮಾರಕ ಎಂದು, ನಮ್ಮ ಮೂಲವೃತ್ತಿ ಬೇಟೆ, ಬೇಟೆಯಾಡಲು ಯುದ್ಧದಲ್ಲಿ ಹೋರಾಡಲು ಬೇಕಾಗುವ ಅಸ್ತ್ರಗಳು ನಮ್ಮ ಜನ್ಮಸಿದ್ಧ ಆಸ್ತಿ. ಅವುಗಳನ್ನು ನಿಮಗೆ ಒಪ್ಪಿಸಲು ಸಾಧ್ಯವೇ ಇಲ್ಲ ಎಂಬುದು ಬೇಡರು ಕೂಗಾಗಿತ್ತು. ಬೇಡರ ಶೌರ್ಯ, ಬೇಡರಿಂದ ಅಸ್ತ್ರಗಳನ್ನು ಕಿತ್ತುಕೊಂಡರೆ ಅವರನ್ನು ಹೆದರಿಸುವುದು ಸುಲಭ, ಅವರು ನಮ್ಮ ಅಧೀನರಾಗುವರು ಎಂಬುದು ಬ್ರಿಟೀಷರ ತಂತ್ರವಾಗಿತ್ತು. ಈ ಶಾಸನವನ್ನು ವಿರೋಧಿಸಿ ಹಲಗಲಿ ಬೇಡರು ತೋರಿದ ಸಾಹಸ ಮೈನವಿರೇಳಿಸುತ್ತದೆ. “ನಮ್ಮ ಜೀವ ಕೊಟ್ಟೇವು, ಹೊರತು ನಮ್ಮ ಅಸ್ತ್ರಗಳನ್ನು ನಿಮಗೆ ಒಪ್ಪಿಸಲಾರೆವು” ಎಂಬುದು ಬೇಡರ ಸ್ಪಷ್ಟ ಮಾತಾಗಿತ್ತು. ನೇರವಾಗಿ ಹಲಗಲಿ ಬೇಡರನ್ನು ಸೋಲಿಸಲಾಗದೇ ಬ್ರಿಟೀಷರು ಬೇಡರ ಗುಡಿಸಲುಗಳಿಗೆ ಬೆಂಕಿ ಇಟ್ಟರು. ‘ಶಸಸ್ತ್ರಗಳನ್ನು ಒಪ್ಪಿಸುವುದಕ್ಕಿಂತ ಸಾವೇ ಮೇಲು’ ಎಂದು ಬೇಡರು ತಮ್ಮ ಗುಡಿಸಲು ಒಳಗಿನಿಂದಲೇ ಬಿಲ್ಲುಗಳಿಂದ ಹೋರಾಡಿದರು. ಅನೇಕರು ಜೀವಂತವಾಗಿ ಬೆಂದು ಹೋದರು. ಅನೇಕರನ್ನು ಸೆರೆಹಿಡಿದು ಗಲ್ಲಿಗೇರಿಸಿದರು.

ಸುರಪುರದ ವೀರ ವೆಂಕಟಪ್ಪನಾಯಕನು ಬ್ರಿಟೀಷರ ವಿರುದ್ಧ ಹೋರಾಡಿದ ಕಲಿ. ಸುರಪುರದಲ್ಲಿ ಬ್ರಿಟೀಷ್ ರಾಜಕೀಯ ಸಲಹೆಗಾರರನ್ನು ನೇಮಿಸಿಕೊಳ್ಳಬೇಕು ಹಾಗೂ ಅವನ ಖರ್ಚು ವೆಚ್ಚಗಳನ್ನು ಭರಿಸಬೇಕೆಂಬ ಡಾಲ್ ಹೌಸಿಯ ಸಲಹೆಯನ್ನು ತಿರಸ್ಕರಿಸಿ ಬ್ರಿಟೀಷರ ವಿರುದ್ಧ ಹೋರಾಡಲು ಸಿದ್ಧನಾದನು. ಕುತಂತ್ರದಿಂದ ಬ್ರಿಟೀಷರು ಯಾವುದೇ ಸಮಯದಲ್ಲಿ ದಾಳಿ ಮಾಡಬಹುದೆಂದು ಅರಿತಿದ್ದ ವೆಂಕಟಪ್ಪನಾಯಕನು ಸಾಕಷ್ಟು ಸೈನ್ಯವನ್ನು ಸಂಘಟಿಸಿದನು. ನೇರವಾಗಿ ನಾಯಕನನ್ನು ಗೆಲ್ಲುವುದು ಅಸಾಧ್ಯವೆಂದು ಭಾವಿಸಿದ ಬ್ರಿಟೀಷರು ನಿಜಾಮನನ್ನು ತಮ್ಮ ಕಡೆ ಸೇರಿಸಿಕೊಂಡರು ಮತ್ತು ವಾಗಿನಗೇರಿ ಭೀಮರಾಯ ಎಂಬ ಮಂತ್ರಿಯನ್ನು ತಂತ್ರಗಾರಿಕೆಯಿಂದ ತಮ್ಮ ಕಡೆ ಮಾಡಿಕೊಂಡು ಸುರಪುರ ಕೋಟೆಯನ್ನು ಬೇಧಿಸಿ ವೆಂಕಟಪ್ಪನಾಯಕನನ್ನು ಸೆರೆಹಿಡಿದರು. ವೈರಿಗಳ ಸೆರಯಾಳಾಗಿರುವುದಕ್ಕಿಂತ ಸಾವೇ ಮೇಲೆಂದು ನಾಯಕ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಸಿಂಧೂರ ಲಕ್ಷ್ಮಣನೂ ಸಹ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಶ್ರೀಮಂತರು ಬ್ರಿಟೀಷರ ಕಡುವೈರಿಯಾಗಿ ಬಡವರ, ದೀನದಲಿತರ ಪ್ರಿಯ ಮಗನಾಗಿ ಹೋರಾಡಿರುವ ಇತಿಹಾಸ ಇಂದಿಗೂ ಜನಪದರ ನಾಲಿಗೆಯ ಮೇಲಿದೆ. ಎಷ್ಟೋ ಜನ ಬೇಡ ಶೂರರು ಬ್ರಿಟೀಷರ ವಿರುದ್ಧ ಹೋರಾಡಿ ವೀರಮರಣ ಹೊಂದಿರುವುದು ಚರಿತ್ರೆಯಿಂದ ಹೊರಗುಳಿದಿದೆ. ಅಂತಹ ಬೇಡ ನಾಯಕರ, ಶೂರರ ಇಘಿಉಟಈ್ಜ ಸಂಗ್ರಹ ಕೆಲಸ ಅತ್ಯಗತ್ಯವಾಗಿ ಆಗಬೇಕಾಗಿದೆ.

ಬೇಡರು ನಾಯಕರಾಗಿ, ಅಮರನಾಯಕರಾಗಿ, ದೊರೆಗಳಾಗಿ, ಪಾಳೆಯಗಾರರಾಗಿ ಆಳಿದ್ದು ಒಂದು ಇತಿಹಾಸ. ಇಂತಹ ನಾಯಕರ ವಂಶಸ್ಥರು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದಿರುವುದು ಕಂಡುಬರುತ್ತದೆ. ಒಂದು ಕಾಲಕ್ಕೆ ರಾಜ್ಯದ ಜನತೆಯ ಹಿತಕ್ಕೆ, ಜನಾಂಗದ ಹಿತಕ್ಕೆ ಹೋರಾಡಿದಂತಹ ಅನೇಕ ದೊರೆಗಳ ಬದುಕು ಶೋಚನೀಯವಾಗಿ ಕೊನೆಗೊಂಡಿದ್ದು ದುರಂತವೇ ಸರಿ. ನಾವು ದೊರೆಗಳು, ಪಾಳೆಯಗಾರರು ಎಂದು ಬೇಡರಿಂದ ಒಂದುಹಂತ ಮೇಲೇರಿದ ಇವರು ಮತ್ತೆ ಬೇಡರಾಗಿ ಗುರುತಿಸಿಕೊಳ್ಳ ದಿರುವುದು ಒಂದು ಕಾರಣವಾದರೂ ಅವರಾರು ಮತ್ತೆ ಬದಲಾದ ರಾಜಕೀಯಕ್ಕೆ ಹೊಂದಿ ಕೊಳ್ಳುವ ಮನಸ್ಸೇ ಮಾಡಲಿಲ್ಲ. ಅವರು ಈಗಲೂ ಕೂಲಿ, ಕೃಷಿಯಿಂದ ಜೀವನ ಮಾಡುತ್ತಿ ದ್ದರೂ ದೊರೆಗಳಾದ ನಾವು ಶ್ರೇಷ್ಠರು, ನಮ್ಮ ಮನೆಯ ಹತ್ತಿರವೇ ಎಲ್ಲವೂ ನಿರ್ಣಯ ವಾಗಬೇಕು. ನಾವು ಬೇಡರೊಡನೆ ವೈವಾಹಿಕ ಸಂಬಂಧ ಮಾಡುವುದಿಲ್ಲ. ನಮ್ಮದು ಕ್ಷತ್ರಿಯ ಸ್ಥಾನಮಾನದ ಮನೆತನ ಬೇಡ ಅರಸು ಮನೆತನದೊಡನೆ ಮಾತ್ರ ಸಂಬಂಧ ಎಂದು ಅರಮನೆಗೇ ಸೀಮಿತವಾಗಿ, ತಮ್ಮ ಮುಂದೆ ಭಗ್ನಗೊಂಡು ನಿಂತ ಕೋಟೆ-ಕೊತ್ತಲ, ಅರಮನೆ, ದೇವಾಲಯ ಇತರ ಸ್ಮಾರಕಗಳನ್ನು ನೋಡುತ್ತಾ ತಮ್ಮ ಪೂರ್ವಜರು ಆಳಿದ ದಿನಗಳನ್ನು ಮೆಲುಕು ಹಾಕುತ್ತಾ ಬದುಕು ಸವೆಸುತ್ತಿದ್ದಾರೆ. ಇಂತಹ ಅನೇಕ ಸ್ಮಾರಕಗಳ ಕಡೆ ಸರಕಾರ ಗಮನಕೊಟ್ಟಷ್ಟು ಅಂತಹ ಸ್ಮಾರಕಗಳನ್ನು ನಿರ್ಮಿಸಿದವರ ಬಗ್ಗೆಯೂ ಯೋಚಿಸಬೇಕು. ಆ ಸ್ಮಾರಕಗಳನ್ನು ನಿರ್ಮಿಸಿದವರಂತೂ ನಮ್ಮ ಮುಂದೆ ಇಲ್ಲ ಅವರ ವಂಶಸ್ಥರಾದರೂ ಇದ್ದರಲ್ಲ ಅವರನ್ನು ಗುರುತಿಸಿದರೆ, ಗೌರವಿಸಿದರೆ ಇತಿಹಾಸವನ್ನೇ ಗೌರವಿಸಿದಂತೆ. 

ಗ್ರಂಥಋಣ

೧.  ಕೃಷ್ಣಶರ್ಮ ಬೆಟಗೇರಿ, ೧೯೩೯, ಕರ್ನಾಟಕ ಜನಜೀವನ, ಸಮಾಜ ಪುಸ್ತಕಾಲಯ, ಧಾರವಾಡ.

೨.  ತಿರುಮಲತಾತಾಚಾರ್ಯ ಶರ್ಮ, ೧೯೫೭, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಮೈಸೂರು ಸರಕಾರ, ಬೆಂಗಳೂರು.

೩.  ಕೇಶವರಾವ್ ಎಂ.ವಿ., ಕೇಶವಭಟ್ಟ ಎಂ. (ಸಂ), ೧೯೭೦, ಕರ್ನಾಟಕದ ಇತಿಹಾಸ ದರ್ಶನ, ಕರ್ನಾಟಕ ಸಹಕಾರಿ ಪ್ರಕಾಶನ, ಕೇಶವಭಟ್ಟ ಮಂದಿರ, ಬೆಂಗಳೂರು.

೪.  ವೆಂಕಟರತ್ನ ಎ.ವಿ., ೧೯೭೪, ವಿಜಯನಗರ ಸಾಮ್ರಾಜ್ಯದಲ್ಲಿ ಸ್ಥಳೀಯ ಸರಕಾರ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೫.  ಜಯತೀರ್ಥರಾಜ ಪುರೋಹಿತ, ೧೯೭೫, ಕನಕಗಿರಿ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

೬.  ಮುದ್ದಾಚಾರಿ ಬಿ., ೧೯೭೫, ಮೈಸೂರು ಮರಾಠ ಬಾಂಧವ್ಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೭.  ಲಕ್ಷ್ಮಣ್ ತೆಲಗಾವಿ, ಶ್ರೀನಿವಾಸ ಎಂ.ವಿ. (ಸಂ.), ೧೯೭೬, ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು, ಚಿತ್ರದುರ್ಗ.

೮.  ಕಪಟರಾಳ ಕೃಷ್ಣರಾವ್, ೧೯೭೭, ಸುರಪುರ ಸಂಸ್ಥಾನ ಇತಿಹಾಸ, ಮಂಜುನಾಥ ಪ್ರಕಾಶನ, ಬೆಂಗಳೂರು.

೯.  ಈಶ್ವರಪ್ಪ ಎಂ.ಜಿ., ೧೯೮೨, ಮ್ಯಾಸಬೇಡರು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

೧೦. ರಾಜಣ್ಣ ಜಿ., ೧೯೮೨, ನಾಯಕ ಜನಾಂಗದ  ಇತಿಹಾಸ, ಚಳ್ಳಕೆರೆ.

೧೧. ಬಾಗೂರು ಆರ್. ನಾಗರಾಜಪ್ಪ, ೧೯೮೪, ಹೊಸದುರ್ಗದ ಸುತ್ತಮುತ್ತ, ಅಭಿವ್ಯಕ್ತಿ ವೇದಿಕೆ, ಹೊಸದುರ್ಗ.

೧೨. ಸಮೇತನಹಳ್ಳಿ ರಾಮರಾಯ, ೧೯೮೮, ಟಿಪ್ಪೂಸುಲ್ತಾನನ ಇತಿಹಾಸ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೧೩. ಶರಣಬಸಪ್ಪ ಕೋಲ್ಕಾರ, ೧೯೯೪, ಕನಕಗಿರಿ ಪ್ರದೇಶದ ಸ್ಮಾರಕಗಳು, ಮೂರ್ತಿಶಿಲ್ಪಗಳು (ಅಪ್ರಕಟಿತ ಎಂ.ಫಿಲ್ ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ).

೧೪. ಸದಾಶಿವಪ್ಪ ಕುಂ.ಬಾ., ೧೯೯೬, ಹರಪನಹಳ್ಳಿ ಪಾಳೆಯಗಾರರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೫. ಯೋಗೀಶ್ವರಪ್ಪ ಡಿ.ಎನ್., ೧೯೯೯, ಹಾಗಲವಾಡಿ ನಾಯಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬.

೧೬. ರಾಜಶೇಖರಪ್ಪ ಬಿ., ೨೦೦೧, ಇತಿಹಾಸ ಕಥನ, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು.

೧೭. ವಸು ಎಂ.ವಿ. (ಸಂ.), ೨೦೦೧, ದಕ್ಷಿಣ ಕರ್ನಾಟಕದ ಅರಸು ಮನೆತನಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬.

೧೮. ರಾಜಾರಾಮ ಹೆಗಡೆ, ಅಶೋಕ ಶೆಟ್ಟರ್ (ಸಂ.), ೨೦೦೧, ಮಲೆ ಕರ್ನಾಟಕದ ಅರಸು ಮನೆತನಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೫೮೩ ೨೭೬.

೧೯. ಹರ್ತಿಕೋಟೆ ವೀರೇಂದ್ರಸಿಂಹ, ತೇಜಸ್ವಿ ಕಟ್ಟಿಮನಿ (ಸಂ.), ೨೦೦೨, ಘಟ್ಟಿ ಹೊಸಹಳ್ಳಿ ಗಡ್ಡಿಗ, ಹರ್ತಿಕೋಟೆ, ಚಿತ್ರದುರ್ಗ.

೨೦. ಫ್ರಾನ್ಸಿಸ್ ಬುಕಾನನ್, ೧೯೮೮ (ಮರು ಮುದ್ರಣ), ಎ ಜರ‌್ನಿ ಫರ್ಮ್ ಥ್ರೋ ದ ಕಂಟ್ರಿಸ್ ಆಫ್ ದಿ ಮೈಸೂರು, ಕೆನರಾ, ಮಲ್ಬಾರ್, ವ್ಯಾಲ್ಯೂಮ್. ೧, ಏಶಿಯನ್ ಪಬ್ಲಿಕೇಷನ್ಸ್, ನ್ಯೂದೆಹಲಿ.