ಒಂದು ಪ್ರದೇಶದ ನಿಜವಾದ ಇತಿಹಾಸವೆಂದರೆ ಸಣ್ಣಪುಟ್ಟ ಸಂಸ್ಥಾನಿಕರ ಇತಿಹಾಸವೇ ಆಗಿದೆ. ಅವರು ಬದುಕಿನ ರೀತಿ, ನೀತಿ, ಅನುಸರಿಸಿದ ಧರ್ಮ, ಕಟ್ಟಿದ ಕಲೆ, ಅಳವಡಿಸಿಕೊಂಡ ಜೀವನದ ಮೌಲ್ಯಗಳೂ ಪ್ರಮುಖವಾದವುಗಳು. ಇಂತಹ ಸಣ್ಣಪುಟ್ಟ ಅರಸರಲ್ಲಿ ಬೇಡ ಪಾಳೆಯಗಾರರು ಪ್ರಮುಖರಾಗಿದ್ದಾರೆ. ಅದರಲ್ಲೂ ಈಶಾನ್ಯ ಕರ್ನಾಟಕದ ಭಾಗವಾದ, ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬೇಡ ಪಾಳೆಯಗಾರರು ಆಳ್ವಿಕೆಯನ್ನು ಮಾಡಿದ್ದಾರೆ. ಒಂದು ಕಾಲಕ್ಕೆ ಕರ್ನಾಟಕದ ಚರಿತ್ರೆಯೆಂದರೆ ಬೇಡರ ಚರಿತ್ರೆ ಎನ್ನುವಷ್ಟರಮಟ್ಟಿಗೆ ಇವರ ಪಾತ್ರ ಮಹತ್ವದ್ದಾಗಿದೆ. ಕಂಪಲಿ, ಆನೆಗೊಂದಿ ಪಾಳೆಯಗಾರರು ವಿಜಯನಗರ ಪೂರ್ವದಲ್ಲಿದ್ದರೆ, ಕನಕಗಿರಿ ಪಾಳೆಯಗಾರರು ವಿಜಯನಗರ ಸಂದರ್ಭದಲ್ಲಿ, ಸುರಪುರ, ಗುಡಗುಂಟಿ, ಗುಂತಗೋಳ, ದೇವದುರ್ಗದ ಪಾಳೆಯಗಾರರು ವಿಜಯನಗರೋತ್ತರದಲ್ಲಿದ್ದರು.

ವಿಜಯನಗರಕ್ಕಿಂತ ಪೂರ್ವದಲ್ಲಿ ತುಂಗಭದ್ರ ನದಿ ತೀರದ ಪ್ರದೇಶದಲ್ಲಿ ಕಮ್ಮಟ ದುರ್ಗದ ಅರಸರ ಕಾಲದಲ್ಲಿ ಬೇಡರು ಒಂದು ನಿಶ್ಚಿತ ನೆಲೆಯನ್ನು ಕಂಡುಕೊಳ್ಳು ವಂತಾಯಿತು. ಮುಮ್ಮಡಿಸಿಂಗನು ಕುಮ್ಮಟದುರ್ಗದ ಮೊದಲ ಪಾಳೆಯಗಾರ ಎಂಬುದನ್ನು ಕ್ರಿ.ಶ. ೧೨೮೦೧೨೮೭ ಶಾಸನಗಳು ಸಮರ್ಥಿಸುತ್ತವೆ. ಈತನ ಮಗ ಕಂಪಿಲರಾಯ ಮುಮ್ಮಡಿಸಿಂಗನ ತರುವಾಯ ಉತ್ತರಾಧಿಕಾರಿಯಾಗಿ, ಮಲ್ಲಿಕಾಫರನ ದಾಳಿಯನ್ನು ಎದುರಿಸಿದನು. ನಂತರ ಈತನ ಮಗ ಕುಮಾರರಾಮನು ಕುಮ್ಮಟದುರ್ಗವನ್ನು ಒಂದು ಹೊಸ ರಾಜಧಾನಿಯನ್ನಾಗಿ ಮಾರ್ಪಡಿಸಿದನು. ಓರಂಗಲ್ಲಿನ ಪ್ರತಾಪರುದ್ರನನ್ನು, ಹೊಸ್ಯಸಳ ದೊರೆ ವೀರಬಲ್ಲಾಳ ಅಲ್ಲದೆ ಕೊಂಗು, ಮಲೆಯಾಳ, ಮಧುರ, ಕೊಡಗು, ಕೋಲಾರ, ಪೆನುಗೊಂಡ, ನಿಡುಗಲ್ಲು, ಮಿಡಗೇಸಿ, ಮಾಗಡಿ, ಮಧುಗಿರಿ, ಕಡಪ, ಕರ್ನೂಲು, ರಾಮದುರ್ಗ, ಕೆಳದಿನಾಡು, ಹಾವನೂರು, ಹುಬ್ಬಳ್ಳಿ, ಜರಿಮಲೆ, ಕನಕಾದ್ರಿ, ರಾಮಪೀಠ, ಆನೆಗೊಂದಿ ಮುಂತಾದ ರಾಜರುಗಳನ್ನು ಹತ್ತಿಕ್ಕಿದನು. ಕೊನೆಗೆ ಮೂರನೇ ಬಾರಿಗೆ ಮಹ್ಮದ್ ಬಿನ್ ತುಘಲಕ್‌ನು ಕಂಪಲಿ ರಾಜ್ಯದ ಮೇಲೆ ದಾಳಿ ಮಾಡಿದನು. ಕಂಪಿಲರಾಯ ತೀರಾ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾಗ, ಕುಮಾರರಾಮನು ತಂದೆಯ ಜೊತೆಯಲ್ಲಿ ರಣರಂಗದಲ್ಲಿ ಹೋರಾಡುತ್ತಾ ವೀರಮರಣ ಹೊಂದಿದನು.

ಕುಮ್ಮಟದುರ್ಗ ಹಾಳಾದ ಮೇಲೆ ಚದುರಿ ಹೋಗಿದ್ದ ನಾಯಕ ಜನಾಂಗವು ಮತ್ತೆ ವಿಜಯನಗರದ ಆಶ್ರಯ ಪಡೆಯಿತು. ವಿಜಯನಗರದ ಅರಸರು ಇವರನ್ನು ಸೈನ್ಯದಲ್ಲಿ ಸೇರಿಸಿಕೊಂಡರು. ಸೈನ್ಯದ ಅನೇಕ ಹುದ್ದೆಗಳಲ್ಲಿ ಇವರು ಮುಖಂಡರಾಗಿ, ಅಧಿಕಾರಿಗಳಾಗಿ ಮೆರೆದರು. ಆಗ ಕೆಲವು ಉಪಜಾತಿಗಳ ಗಣ್ಯರನ್ನು ಮುಖ್ಯವಾಗಿ ಅಮರನಾಯಕರನ್ನಾಗಿ ಗೇಣಿರೈತರನ್ನಾಗಿ, ಕಾವಲುಗಾರರನ್ನಾಗಿ ನೇಮಕ ಮಾಡಲಾಗಿತ್ತು. ವಿಜಯನಗರದ ಅರಸರ ವಿಸ್ತಾರವಾದ ಸಾಮ್ರಾಜ್ಯಕ್ಕೆ ಸೇರಿದ ನಾನಾ ಭಾಗಗಳ ಆಳ್ವಿಕೆಯನ್ನು ತಾವೇ ನಿರ್ವಹಿಸುವುದು ಕಷ್ಟವಾದಾಗ ಆಯಾ ಪ್ರದೇಶಗಳ ಆಡಳಿತ ಉಸ್ತುವಾರಿ, ಕಂದಾಯ ವಸಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಯುದ್ಧದ ಸಮಯದಲ್ಲಿ ಸಹಾಯ ಮಾಡಲು ಬಲಿಷ್ಠ ಹಾಗೂ ಪ್ರಭಾವವುಳ್ಳ ಅಧಿಕಾರಿಗಳನ್ನು ನೇಮಿಸುತ್ತಿದ್ದರು. ಈ ಅಧಿಕಾರಿಗಳೇ ಕ್ರಮೇಣ ಪಾಳೆಯಗಾರರೆನಿಸಿಕೊಂಡರು.

ವಿಜಯನಗರದ ಅರಸರು ದುರ್ಬಲರಾದಂತೆ ಈ ಪಾಳೆಯಗಾರರು ದಿನದಿಂದ ದಿನಕ್ಕೆ ಸ್ಥಳೀಯವಾಗಿ ಪ್ರಬಲಗೊಳ್ಳುತ್ತಲೇ ಬಂದರು. ಕ್ರಿ.ಶ. ೧೫೬೫ರ ನಂತರ ವಿಜಯನಗರ ಪತನದ ನಂತರ ಪಾಳೆಯಗಾರರು ಸ್ವತಂತ್ರರಾದರು. ಅವರಲ್ಲಿ ಬೇಡ ಸಂಸ್ಥಾನಗಳೇ ಅಧಿಕವಾಗಿವೆ. ಹೀಗಾಗಿ ವಿಜಯನಗರೋತ್ತರಕಾಲೀನ ಕರ್ನಾಟಕದ ಇತಿಹಾಸವನ್ನು ಬೇಡರ ಇತಿಹಾಸವೆಂದು ಕರೆಯಬಹುದಾಗಿದೆ. ತಾಳಿಕೋಟೆ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡ ಹಲವು, ತರುವಾಯ ಸ್ವತಂತ್ರ ಸ್ಥಾಪಿಸಿಕೊಂಡ ಕೆಲವು ಒಟ್ಟು ೭೨೭೩ ಪಾಳೆಯಪಟ್ಟುಗಳನ್ನು ಗುರುತಿಸಲಾಗಿದೆ. ಇತಿಹಾಸ ತಜ್ಞರಾದ ಪ್ರೊ. ಲಕ್ಷ್ಮಣ್ ತೆಲಗಾವಿಯವರು ೭೭ ಪಾಳೆಯ ಪಟ್ಟುಗಳನ್ನು ಮೊಟ್ಟಮೊದಲಬಾರಿಗೆ ಗುರುತಿಸಿದ್ದಾರೆ.

ಈ ಪಾಳೆಯಪಟ್ಟುಗಳು ಮೂಲತಃ ಕೆಳವರ್ಗದ ಅದರಲ್ಲೂ ಬೇಡ ಜನಾಂಗದ ವ್ಯಕ್ತಿಗಳಿಂದ ಸ್ಥಾಪನೆಗೊಂಡು, ಅವರ ಅಧಿಪತ್ಯದಲ್ಲೇ ಸಾಗಿದವು. ಕೆಲದಿನಗಳ ತರುವಾಯ ಮೇಲ್ವರ್ಗದ ಮಡಿಲನ್ನು ಬಯಸಿಹೋದವು. ಬಹುಶಃ ಪ್ರಭುಸತ್ತೆಯಿಂದ ಮಾತ್ರ ಪ್ರಬಲರಾಗಿ ಗೌರವ, ಸಂಪತ್ತುಗಳಿಗೆ ಒಡೆಯರಾಗಿದ್ದ ಇವರು ಕೆಳಜಾತಿಯ ವಿಷಯ ಬಂದಾಗ ತಲೆತಗ್ಗಿಸುವ ವಾತಾವರಣ ಅಂದು ಉಂಟಾಗಿರಬಹುದು. ಅನಿವಾರ್ಯವಾಗಿ ತಮ್ಮ ಕೆಳಜಾತಿ ಯನ್ನು ತ್ಯಜಿಸಿ, ಮುಕ್ತಧೋರಣೆಯ ವೀರಶೈವ ಧರ್ಮವನ್ನು ಸ್ವೀಕರಿಸಿದರು. ಬೇಡನಾಂಗದ ಚಿತ್ರದುರ್ಗದ ಅರಸರು ಕ್ರಿ.ಶ. ೧೫೬೯ರಲ್ಲಿ ವೀರಶೈವ ಧರ್ಮವನ್ನು ಸ್ವೀಕರಿಸಿದರು, ಕೆಲವೇ ದಿನಗಳಲ್ಲಿ ತಮ್ಮ ಮೂಲ ಮತವನ್ನು ಅಪ್ಪಿಕೊಂಡರು. ಇದರಿಂದ  ಇನ್ನೂ ಉಳಿದ ಅನೇಕ ಸಮಕಾಲೀನ ಬೇಡರ ಮನೆತನಗಳಿಗೆ ಮರುಜೀವಬಂದಿತು.

ನಾನು ಈ ಲೇಖನದಲ್ಲಿ ಕೇವಲ ಇಂದಿಗೂ ಜೀವಂತವಾಗಿರುವ ಈಶಾನ್ಯ ಕರ್ನಾಟಕದ ಬೇಡ ಪಾಳೆಯಗಾರರ ಕುರಿತಾದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನೀಡಲು ಪ್ರಯತ್ನಿಸಿದ್ದೇನೆ.

. ಸುರಪುರದ ಬೇಡ ಪಾಳೆಯಗಾರರು

ಗುಲಬರ್ಗಾ ಜಿಲ್ಲೆಯಿಂದ ದಕ್ಷಿಣಕ್ಕೆ ೧೦೬ ಕಿ.ಮೀ ದೂರದಲ್ಲಿರುವ ಸುರಪುರ ಕೃಷ್ಣಾ ಹಾಗೂ ಭೀಮಾನದಿಯ ಮಧ್ಯದಲ್ಲಿದೆ. ಕ್ರಿ.ಶ. ೧೬೩೬ ರಿಂದ ೧೮೫೮ರವರೆಗೆ ೧೨ ಜನ ಬೇಡ ಪಾಳೆಯಗಾರರು ಸುರಪುರ ಸಂಸ್ಥಾನದಲ್ಲಿ ಆಳ್ವಿಕೆ ಮಾಡಿದ್ದಾರೆ. ಈ ಪಾಳೆಯಗಾರರಿಗೆ ಗೋಸಲ ವಂಶದವರೆಂದು ಕರೆಯುವ ರೂಢಿಯಿದೆ. ಜಕ್ಕಪ್ಪದೇಸಾಯಿಯು ಕಕ್ಕೇರಿ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆಯನ್ನು ಪ್ರಾರಂಭಿಸುತ್ತಾನೆ. ಈತನಿಗೆ ಇಬ್ಬರು ಮಕ್ಕಳಿದ್ದರು. ಅವರೇ ಗಡ್ಡಿಲಿಂಗನಾಯಕ ಮತ್ತು ಗಿಡ್ಡಿಪಿಡ್ಡನಾಯಕ. ಗಡ್ಡಿಲಿಂಗನಾಯಕ ಗುಡಗುಂಟಿಯ ಮೂಲಪುರುಷನಾದರೆ, ಗಡ್ಡಿಪಿಡ್ಡನಾಯಕ ಸುರಪುರದ ಮೂಲಪುರುಷ ನಾಗುತ್ತಾನೆ. ಈತ ಬಿಜಾಪುರದ ಮಹ್ಮದ್ ಆದಿಲ್‌ಶಾಹನಿಂದ ಸರದೇಶಗತಿಗಳನ್ನು ಸಂಪಾದಿಸಿದನು. ವಾಗಿನಗೇರಿ ಕೋಟೆಯನ್ನು ನಿರ್ಮಿಸಿ, ೫೦೦ ಕುದುರೆ, ೪,೦೦೦ ಕಾಲಾಳು ಗಳೊಡನೆ ಸಗರನಾಡಿನ ಕೇಂದ್ರಕೋಟೆಯಾದ ಶಹಪುರ ಕಿಲ್ಲೆಯನ್ನು ಬಿಜಾಪುರ ಆದಿಲ್‌ಶಾಹಿ ಕಿಲ್ಲೆದಾರನಿಂದ ಕಸಿದುಕೊಂಡನು. ನಂತರ ಈತ ಆನೆಯ ಸೊಕ್ಕನ್ನು ಅಡಗಿಸಿ ‘ಮದಗಜ ಮಲ್ಲ’ನೆಂಬ ಬಿರುದನ್ನು ಧರಿಸುತ್ತಾನೆ. ನಂತರ ವಿಜಾಪುರದ ಆದಿಲ್‌ಶಾಹನಿಂದ ‘ಗಜದಂಡ ಬಹರಿ ಪಿಡ್ಡನಾಯಕ’ ಎಂಬ ಬಿರುದೂ ಪ್ರಾಪ್ತವಾಗುತ್ತದೆ. ಮೊಘಲ್ ದೊರೆ ಔರಂಗಜೇಬನು ದಕ್ಷಿಣಕ್ಕೆ ದಾಳಿಯಿಟ್ಟಾಗ, ಪಿಡ್ಡನಾಯಕ ಬಿಜಾಪುರದ ಆದಿಲ್‌ಶಾಹಿಗಳ ಪರವಾಗಿ, ಮೊಘಲ್‌ರ ವಿರುದ್ಧ ಹೋರಾಡಿದನು. ಈತನ ಶೌರ್ಯವನ್ನು ಮೆಚ್ಚಿ ಔರಂಗ ಜೇಬನು ಒಂದು ಪತ್ರವನ್ನು ಬರೆದಿದ್ದಾನೆ. ಅದು ಸುರಪುರದ ಅರಮನೆಯಲ್ಲಿ ಇಂದಿಗೂ ಇದೆ.

ಈತನ ತರುವಾಯ ಈತನ ದತ್ತುಪುತ್ರ ಹಸರಂಗಿ ಪಾಮನಾಯಕ (ಕ್ರಿ.ಶ. ೧೬೬೬-೧೬೮೭)ನು ಅಧಿಕಾರಕ್ಕೆ ಬಂದನು. ಈತ ಆದಿಲ್‌ಶಾಹಿಗಳಿಂದ ಅನೇಕ ಸನದುಗಳನ್ನು ಸಂಪಾದಿಸಿದನು. ಶಹಪುರ ಕಿಲ್ಲೆಯು ಪಾಪನಾಯಕನ ಅಧೀನದಲ್ಲಿತ್ತು. ಕ್ರಿ.ಶ. ೧೬೮೦ರ ಫೆಬ್ರವರಿ ೨೦, ೨೧ರಂದು ಈ ಕಿಲ್ಲೆಯ ಮೇಲೆ ಔರಂಗಜೇಬನ ಸರದಾರ ದಿಲೇರಖಾನ್ ಭೀಕರವಾಗಿ ಆಕ್ರಮಣ ಮಾಡಿದನು. ಪ್ರಯೋಜನವಾಗಲಿಲ್ಲ. ಮರುದಿನ ಕಿಲ್ಲೆಯನ್ನು ಮುತ್ತಿದಾಗ, ಪಾಮನಾಯಕನ ೧೨,೦೦೦ ನುರಿತ ಬೇಡಪಡೆ ಗುಂಡಿನ ಸುರಿಮಳೆಗೈದನು. ಈ ಆಕ್ರಮಣದಿಂದ ಮೊಘಲ್ ಸೈನ್ಯ ತತ್ತರಿಸಿ ಹೋಯಿತು. ಆಗ ದಿಲೇರ್‌ಖಾನ್ ಪಾಮನಾಯಕನಿಂದ ಜೀವಭಕ್ಷೆ ಪಡೆದು ಪಾರಾಗುತ್ತಾನೆ. ಮೊಘಲರು ಪುನಃ ಬಿಜಾಪುರದ ಮೇಲೆ ದಾಳಿಗೈದರು. ಶರಣಾಗತನಾದ ಸಿಕಂದರ ಕ್ರಿ.ಶ. ೧೩೪೭ರಲ್ಲಿ ಬಿಜಾಪುರವನ್ನು ಮೊಘಲರಿಗೆ ಬಿಟ್ಟುಕೊಟ್ಟನು. ಇದರಿಂದ ಆದಿಲ್‌ಶಾಹಿಗಳ ಸಾಮ್ರಾಜ್ಯವೆಲ್ಲ ಮೊಘಲ್‌ರ ಒಡೆತನಕ್ಕೆ ಒಳಪಟ್ಟಿತು. ಅವರ ಆಡಳಿತದ ಸುಬೆಯಾಗಿ ಪರಿಣಮಿಸಿತು. ಆಗ ಅನೇಕರು ಮೊಘಲರ ಸಾಮಂತಿಕೆಯನ್ನು ಒಪ್ಪಿಕೊಂಡರು. ಅದರಲ್ಲಿ ಪಾಮನಾಯಕನೂ ಒಬ್ಬ. ಆದರೆ ಸಾಮಂತಿಕೆ ಒಪ್ಪಿಕೊಂಡ ೫ನೇ ದಿನದಲ್ಲಿ ಅನಿರೀಕ್ಷಿತ ಸಾವಿಗೆ ಗುರಿಯಾದನು.

ನಂತರ ಗುಡಗುಂಟಿಯ ಅನ್ನದಾನಿ ಸೋಮಪ್ಪನಾಯಕನ ಮಗ ಪೀತಾಂಬರಿ ಬಹರಿ ಪಿಡ್ಡನಾಯಕ (ಕ್ರಿ.ಶ. ೧೯೮೭-೧೭೨೬)ನು ಅಧಿಕಾರಕ್ಕೆ ಬಂದನು. ಈತ ಔರಂಗಜೇಬನ ಅಧಿಪತ್ಯವನ್ನು ಧಿಕ್ಕರಿಸಿ, ತಂದೆ ಪಾಮನಾಯಕ ಸಂಪಾದಿಸಿದ್ದ ರಾಜ್ಯದ ಮೇಲೆ ಸ್ವಾತಂತ್ರ್ಯ ಸಾರಿದ. ಆಗ ಔರಂಗಜೇಬನು ತನ್ನ ಮಗ ‘ಕಾಮಭಕ್ಷ’ನನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ೨ನೇ ಬಾರಿಗೂ ಆತ ಸೋಲನ್ನು ಅನುಭವಿಸಿದ. ಸೋಲುಗಳನ್ನು ಸಹಿಸದ ಔರಂಗಜೇಬನು ತನ್ನ ಇನ್ನೋರ್ವ ಮಗನಾದ ‘ಅಜಮ’ನನ್ನು ಕಳುಹಿಸಿದನು. ಈತನಿಂದ ಒಂದು ವರ್ಷದವರೆಗೆ ವಾಗಿನಗೇರಿ ಸುತ್ತ ಮುತ್ತಲಿನ ಪ್ರದೇಶ ಧ್ವಂಸಗೊಂಡಿತು. ಆಗ ಪಿಡ್ಡನಾಯಕ ಸಂಧಾನ ಬಯಸಿದನು. ಎರಡು ಲಕ್ಷ ನಾಣ್ಯ ಕಾಣಿಕೆ ಕೊಡಲು ಮುಂದೆ ಬಂದನು.

[1]

ಈ ಪೂರ್ವದಲ್ಲಿ ಆದಿಲ್‌ಶಾಹಿಗಳಿಗೆ ಸಲ್ಲಿಸಿದಂತೆ ಕಂದಾಯದ ಎಲ್ಲಾ ಬಾಬತ್ತುಗಳನ್ನು ತಮಗೂ ನೀಡಬೇಕೆಂದು ಔರಂಗಜೇಬನು ಫರ್ಮಾನು ಹೊರಡಿಸಿದಾಗ ಪಿಡ್ಡನಾಯಕನು ಇದನ್ನು ಒಪ್ಪಲಿಲ್ಲ. ಕ್ರಿ.ಶ. ೧೬೯೬ರಲ್ಲಿ ಮೊಘಲ್‌ರ ವಿರುದ್ಧ ಸ್ವಾತಂತ್ರ್ಯ ಘೋಷಿಸಿದ. ಇದನ್ನರಿತ ಔರಂಗಜೇಬನು, ಸಗರನಾಡನ್ನು ಪ್ರವೇಶಿಸಿ, ಪಿಡ್ಡನಾಯಕ ವಾಗಿನಗೇರಿ ಕೋಟೆಯನ್ನು ವಶಪಡಿಸಿಕೊಂಡನು. ಆಗ ಪಿಡ್ಡನಾಯಕ ಕನಕಗಿರಿಯ ಎಮ್ಮಿಗುಡ್ಡಕ್ಕೆ ತೆರಳಿದನು. ಅಲ್ಲಿ ಸೈನ್ಯವನ್ನು ಸಂಘಟಿಸಿ, ಮರಳಿ ಕ್ರಿ.ಶ. ೧೭೬೭ರಲ್ಲಿ ಸುರಪುರವನ್ನು ನಿರ್ಮಿಸುತ್ತಾನೆ. ಇದಕ್ಕೆ ರಾಜಧಾನಿಯ ಪಟ್ಟಸಿಕ್ಕಿತು. ಈತ ಕ್ರಿ.ಶ. ೧೬೨೬ರಲ್ಲಿ ಮೃತನಾದ. ತರುವಾಯ ಹಿರಿಯ ಮಗ ಇಮ್ಮಡಿ ಪಾಮನಾಯಕ (ಕ್ರಿ.ಶ. ೧೭೨೭)ನು ಪಟ್ಟವೇರಿದನು. ಆಗ ದಕ್ಷಿಣದ ಚಿಕ್ಕಪುಟ್ಟ ಸಂಸ್ಥಾನಗಳು ಹೈದ್ರಾಬಾದ್ ನಿಜಾಮನ ಅಧೀನಕ್ಕೊಳಪಟ್ಟವು. ಅದರಲ್ಲಿ ಸುರಪುರವೂ ಒಂದಾಗಿತ್ತು. ಹೀಗಾಗಿ ತನ್ನ ಸಂಸ್ಥಾನದ ಸುಭದ್ರತೆ ಮತ್ತು ಅಭಿವೃದ್ದಿಗಾಗಿ ನಿಜಾಮನಿಗೆ ಪಾಮನಾಯಕ ಮರಾಠರೊಂದಿಗೆ ನಡೆದ ಯುದ್ಧದಲ್ಲಿ ಬೆಂಬಲಿಸಿ ೪,೦೦೦ ಸೈನ್ಯದೊಂದಿಗೆ ತೆರಳಿ ಜಯ ತಂದುಕೊಟ್ಟನು.

ನಂತರ ಈತನ ಮಗ ಮುಮ್ಮಡಿ ಪಿಡ್ಡನಾಯಕ ಕ್ರಿ.ಶ. ೧೭೪೨ರಲ್ಲಿ ಅಧಿಕಾರಕ್ಕೆ ಬಂದನು. ಈತ ಅಸಮರ್ಥ ಅರಸನಾದುದರಿಂದ, ಈತನ ತಮ್ಮನಾದ ಮೊಂಡಗೈ ವೆಂಕಟಪ್ಪ ನಾಯಕನು ಸಿಂಹಾಸನವನ್ನೇರಿದನು. ಫ್ರೆಂಚ್ ಗೌರ್ವನರ್ ಡೂಪ್ಲೆಯ ಹೈದ್ರಾಬಾದ್ ನಿಜಾಮನ ವಿರುದ್ಧ ಚಂದಾಸಾಹೇಬನನ್ನು ಎತ್ತಿಕಟ್ಟಿ ಪಾಂಡಿಚೇರಿ ಕಾಳಗಕ್ಕೆ ಕಾರಣವಾದಾಗ ವೆಂಕಟಪ್ಪನಾಯಕನು ನಾಸರಜಂಗನಿಗೆ ಬೆಂಬಲಿಸಿದನು.[2] ಪಾಂಡಿಚೇರಿ ಕಿಲ್ಲೆಯನ್ನು ವಶಪಡಿಸಿಕೊಳ್ಳಲು ಕಾರಣನಾದನು. ಈತನ ತರುವಾಯ ಮಗ ಮುಮ್ಮಡಿ ಪಾಮನಾಯಕನು ಕ್ರಿ.ಶ. ೧೭೫೦ರಲ್ಲಿ ಪಟ್ಟವೇರಿದನು. ಈತನ ಕಾಲದಲ್ಲಿ ಪೇಶ್ವೆ ಹಾಗೂ ಹೈದ್ರಾಬಾದ್ ನಿಜಾಮರ ಸೈನ್ಯ ಸುರಪುರದ ಮೇಲೆ ಬಿತ್ತು. ಅನೇಕ ಗ್ರಾಮಗಳನ್ನು ಸುಲಿತು. ಕೊನೆಗೆ ಒಪ್ಪಂದದ ಪ್ರಕಾರ ನಿಜಾಮ ಸರಕಾರಕ್ಕೆ ೭೯,೧೬೬ ರೂ ಮತ್ತು ಪೇಶ್ವೆಗಳಿಗೆ ೯೪,೦೦೦ ರೂ.ಗಳನ್ನು ಸುರಪುರ ಕೊಡಬೇಕೆಂದು ತೀರ್ಮಾನಿಸಲಾಯಿತು. ಅಂದಿನಿಂದ ಸುರಪುರ ಸಾಲಗಾರ ಸಂಸ್ಥಾನವಾಯಿತು. ಈತನ ತರುವಾಯ ಹಿರಿಯ ಮಗ ಇಮ್ಮಡಿ ವೆಂಕಟಪ್ಪ ನಾಯಕ (ಕ್ರಿ.ಶ. ೧೭೭೩-೧೮೦೨)ನು ಅಧಿಕಾರ ರೂಢನಾದ. ಆಗ ಹೈದ್ರಾಬಾದ್ ನಿಜಾಮ, ಇನ್ನೊದೆಡೆ ಪೇಶ್ವೆ ಮತ್ತು ಇಂಗ್ಲೀಷ್‌ರ ಅಧಿಕಾರವನ್ನು ಒಪ್ಪಿಕೊಳ್ಳಬೇಕಾದ ಸಂದರ್ಭವೂ ಇತ್ತು. ಆಗ ಪೇಶ್ವೆಗಳು ರುಸುಮಿನ ನೆಪಮಾಡಿಕೊಂಡು ಕ್ರಿ.ಶ. ೧೭೭೯ರಲ್ಲಿ ಸಗರನಾಡನ್ನು ಪ್ರವೇಶಿಸಿದರು. ಆಗ ಇಮ್ಮಡಿ ವೆಂಕಟಪ್ಪನಾಯಕ ಇವರನ್ನು ಹಿಮ್ಮೆಟ್ಟಿಸಿದನು. ನಂತರ ಹೈದ್ರಾಬಾದ್ ನಿಜಾಮನಿಗೆ ಮರಾಠರನ್ನು ಸೋಲಿಸಲು ಸಹಾಯ ಮಾಡಿದ. ಕ್ರಿ.ಶ. ೧೮೦೨ರಲ್ಲಿ ತೀರಿಕೊಂಡನು. ಆಗ ಇಮ್ಮಡಿ ಪಿಡ್ಡನಾಯಕ (ಕ್ರಿ.ಶ. ೧೮೨-೧೮೧೮)ನನ್ನು ಸುರಪುರದ ಅರಸನನ್ನಾಗಿ ಪಟ್ಟಗಟ್ಟಲಾಯಿತು. ಆಗ ಬ್ರಿಟಿಷರು ಸುರಪುರ ಸಂಸ್ಥಾನದಲ್ಲಿ ಕಾರ್ಯಭಾರಕ್ಕಾಗಿ ತಮ್ಮ ಪ್ರತಿನಿಧಿಯೆಂದು ಮಹಿಪತಿರಾಯನೆಂಬುವನನ್ನು ಕಳುಹಿಸಿದರು. ಆಗ ಈ ಸಂಸ್ಥಾನ ನಿಜಾಮರಿಗೂ ಹಾಗೂ ಪೇಶ್ವೆಗಳಿಗೂ ಕಾಣಿಕೆಯನ್ನು ಸಲ್ಲಿಸಬೇಕಾಗಿತ್ತು. ಇವೆಲ್ಲವುಗಳ ಮಧ್ಯೆ ಕ್ರಿ.ಶ. ೧೮೧೩ರಲ್ಲಿ ಸುರಪುರ ಸಂಸ್ಥಾನದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತು.[3] ನಿಜಾಮನಿಗೆ ಸಲ್ಲಿಸಬೇಕಾಗಿದ್ದು ೮ ಲಕ್ಷ ರೂ. ಬಾಕಿ ಈಗ ೧೩ ಲಕ್ಷ ರೂ. ಆಗಿತ್ತು. ಆದರೂ ಮುಮ್ಮಡಿ ಪಿಡ್ಡಪ್ಪನಾಯಕ ರೈತರ ಅಭಿವೃದ್ದಿಗಾಗಿ ಶ್ರಮಿಸಿ ಅವರ ಹಿತಾಸಕ್ತಿಯನ್ನು ಕಾಪಾಡಿದ.

ನಂತರ ಈತನ ಹರಿಯ ಮಗ ಮುಮ್ಮಡಿ ವೆಂಕಪ್ಪಟನಾಯಕ (ಕ್ರಿ.ಶ. ೧೮೧೮-೧೮೨೭)ನು ಸುರಪುರದ ಅಧಿಕಾರ ಸ್ವೀಕರಿಸಿದ. ರಾಜ್ಯದಲ್ಲಿ ಬರಗಾಲ ಬಿದ್ದಿದ್ದರಿಂದ ರೈತರ ಕಂದಾಯ ವಸೂಲಿ ಆಗಲಿಲ್ಲ. ಹೀಗಾಗಿ ಹೈದ್ರಾಬಾದ್ ನಿಜಾಮನಿಗೆ ಸಲ್ಲಿಸಬೇಕಾದ ೧೫ ಲಕ್ಷ ಸಾಲ ಹಾಗೆಯೇ ಉಳಿಯಿತು. ಆಗ ಪೇಶ್ವೆಯವರ ರುಸುಮು ಮುಟ್ಟಿದ್ದಕ್ಕಾಗಿ ಅವರ ರುಸುಮಿನ ಪ್ರಾಂತ್ಯಗಳನ್ನು ಮುಮ್ಮಡಿ ವೆಂಕಟಪ್ಪನಾಯಕನಿಂದ ಬ್ರಿಟಿಷರು ವಶಪಡಿಸಿಕೊಂಡರು. ಹೀಗೆ ಸುರಪುರದ ಹಣಕಾಸು ವ್ಯವಹಾರಗಳನ್ನು ಮೊಟಕುಗೊಳಿಸುತ್ತಾ ತಮ್ಮ ಅಧಿಕಾರವನ್ನು ವೃದ್ದಿಸಲು ಪ್ರಯತ್ನಿಸುತ್ತಿದ್ದರು. ಪೂರ್ವದ ಷರತ್ತಿನಂತೆ ೧,೪೫,೦೦೦ ರೂ. ಜೊತೆಗೆ ಈಗ ಅಪ್ಪಾದೇಸಾಯಿಯ ಚೌಥ ೩೦ ಸಾವಿರ ರೂ. ಸೇರಿಸಿ, ಒಟ್ಟು ೧ ಲಕ್ಷ ೭೫ ಸಾವಿರ ರೂ.ಗಳನ್ನು ಪ್ರತಿವರ್ಷ ಕಂದಾಯದ ಜೊತೆ ಹೈದ್ರಾಬಾದ್ ನಿಜಾಮನಿಗೆ ನೀಡಬೇಕೆಂದು ಸುರಪುರಕ್ಕೆ ಒತ್ತಡ ತರಲಾಯಿತು.

ಈ ರೀತಿ ಕ್ರಿ.ಶ. ೧೮೨೩ ರಿಂದ ಕಂಪನಿ ಸರಕಾರವು ಹೈದ್ರಾಬಾದ್ ನಿಜಾಮನ ಚೌಥನ್ನು ಒಂದು ವರ್ಷಕ್ಕೆ ೧೫ ಸಾವಿರ ರೂ.ಗಳನ್ನು ಏರಿಸುವದರೊಂದಿಗೆ ಸಂಸ್ಥಾನದ ವಿರುದ್ಧ ಹೈದ್ರಾಬಾದ್ ಹೈದ್ರಬಾದ್ ನಿಜಾಮನ ಕೈ ಬಲಪಡಿಸಿದರು. ಬ್ರಿಟಿಷ್ ಸರಕಾರವು ತನ್ನ ಕೈವಾಡದಿಂದ ಹೈದ್ರಾಬಾದ್ ನಿಜಾಮನಿಗೆ ಹೆಚ್ಚುವರಿ ಆದಾಯ ಸಿಗುವಂತೆ ಇದ್ದ ಅವಕಾಶ ಗಳನ್ನು ಉಪಯೋಗಿಸಿಕೊಂಡಿತ್ತು.[4] ಹೈದ್ರಾಬಾದ್ ನಿಜಾಮ ಮತ್ತು ಬ್ರಿಟಿಷರ ಕಿರುಕುಳದ ಈ ದ್ವಂದ್ವನೀತಿ ಸಂಸ್ಥಾನವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಆ ಸಂದರ್ಭದಲ್ಲಿ ಹೈದ್ರಾಬಾದ್ ರೆಸಿಡೆಂಟನು ಮೌನ ತಾಳಿದ್ದುದು ವಿಶೇಷವಾಗಿತ್ತು. ಅನೇಕ ಅಡೆತಡೆಗಳ ನಡುವೆಯೂ ಈತನ ಆಡಳಿತ ಉತ್ತಮ ರೀತಿಯಲ್ಲಿ ನಡೆದಿತ್ತು. ಕ್ರಿ.ಶ. ೧೮೨೭ರಲ್ಲಿ ಮುಮ್ಮಡಿ ವೆಂಕಟಪ್ಪ ನಾಯಕನು ನಿಧನನಾದನು.

ನಂತರ ಹೈದ್ರಾಬಾದ್ ನಿಜಾಮ ಕೇಳಿದ ೧೫೦ ಲಕ್ಷ ರೂ. ನಜರಾಣಿಯನ್ನು ಮತ್ತು ೨,೩೦,೬೦೦ರೂ. ವಾರ್ಷಿಕ ಕಂದಾಯವನ್ನು ಕೊಡಲು ಒಪ್ಪದ ಕೃಷ್ಣನಾಯಕ, ಸುರಪುರದ ಅಧಿಕಾರ ವಹಿಸಿಕೊಂಡ, ಆದರೆ, ಸಂಸ್ಥಾನಕ್ಕೆ ಸಾಲದ ಹೊರೆ ಹೆಚ್ಚಾಯಿತು. ಆಗ ಹೈದ್ರಾ ಬಾದ್ ನಿಜಾಮರು ಮತ್ತು ಬ್ರಿಟಿಷರು ಹೈದ್ರಾಬಾದ್ ಲೇವಾದೇವಿ ವ್ಯವಹಾರಸ್ಥ ಸಾಲದ ಸುಲಿಯಲ್ಲಿ ಸಿಲುಕಿಸಿದರು. ಬ್ರಿಟಿಷ್ ಸರಕಾರಕ್ಕೆ ಸುರಪುರದ ಸ್ಥಿತಿಗತಿಯ ಕುರಿತು, ಕ್ಯಾಪ್ಟನ್ ಫ್ರಾನ್ಸಿಸ್‌ಗ್ರಿಸ್ಲೆ ವರದಿ ಸಲ್ಲಿಸಿದ. ಈ ವರದಿಯ ಮೂಲಕ ಗ್ರಿಸ್ಲೆ ರೆಸಿಡೆಂಟನಿಗೆ ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಸರಕಾರ ನಿಯಂತ್ರಿಸಲು ಅನುವು ಮಾಡಿಕೊಟ್ಟಿತ್ತು. ಅನೇಕ ಅಪರಾಧಗಳ ಸುಳುವಿನಲ್ಲಿ ಕೃಷ್ಣನಾಯಕನನ್ನು ಕೆಡುಹಿದರು. ಆತನ ವ್ಯಕ್ತಿತ್ವಕ್ಕೆ ಅಪಮಾನ ಮಾಡಿದರು. ಇಂಥ ವಾತಾವರಣದಲ್ಲಿಯೆ ಕ್ರಿ.ಶ. ೧೮೪೨ರ ಆಗಸ್ಟ್‌ನಲ್ಲಿ ಕೃಷ್ಣನಾಯಕನು ತೀರಿಕೊಂಡನು. ನಂತರ ಜೂನ್ ೧೨,ರಂದು ಈತನ ಮಗ ನಾಲ್ವಡಿ ವೆಂಕಟಪ್ಪನಾಯಕನಿಗೆ ಪಟ್ಟಗಟ್ಟಲಾಯಿತು. ರಾಜನ ಪ್ರತಿಯಾಗಿ ಆತನ ಪ್ರತಿನಿಧಿಯಾಗಿ ಆತನ ತಾಯಿ ರಾಣಿ ಈಶ್ವರಮ್ಮ ಅಧಿಕಾರ ಚಲಾಯಿಸುತ್ತಿದ್ದಳು. ಈಗಾಗಲೇ ಮೆಡೋಸ್ ಟೇಲರ್‌ನಿಗೂ ವೈಮಸ್ಸುಂಟಾಯಿತು. ರಾಣಿ ಈಶ್ವರಮ್ಮ ಬ್ರಿಟಿಷರ ಆಡಳಿತದ ವಿರುದ್ಧ ಪಡೆಯನ್ನು ಸಜ್ಜುಗೊಳಿಸುತ್ತಿದ್ದಳೆಂದು ಮೆಡೋಸ್ ಟೇಲರ್ ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದ. ತನಿಖೆಯಾಯಿತು. ಕೊನೆಗೆ ಅಧಿಕಾರ ನಾಲ್ವಡಿ ವೆಂಕಟಪ್ಪನಾಯಕನಿಗೆ ಹಸ್ತಾಂತರವಾಯಿತು.

ನಾಲ್ವಡಿ ವೆಂಕಟಪ್ಪನಾಯಕ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಡಿಕಾರಿದ. ಇದೇ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ದೇಶದ ನಾನಾ ಭಾಗಗಳಲ್ಲಿ ಬಂಡಾಯಗಳು ನಡೆದವು. ಈ ಎಲ್ಲಾ ಘಟನೆಗಳಿಂದ ಪ್ರೇರಿತನಾದ ನಾಲ್ವಡಿ ವೆಂಕಟಪ್ಪನಾಯಕ ಇಂಗ್ಲೀಷರ ವಿರುದ್ಧ ಹೋರಾಡಲು ಭೂಗತ ಕಾರ್ಯಗಳನ್ನು ನಡೆಸತೊಡಗಿದ. ಇದನ್ನು ತಿಳಿದ ಬ್ರಿಟಿಷ್ ಅಧಿಕಾರಿ ಥಾರ್ನ್‌ಹಿಲ್‌ನು ಡಿಸೆಂಬರ್ ೧೮೫೭ರಂದು ಕ್ಯಾಪ್ಟನ್ ಕ್ಯಾಂಬೆಲ್‌ಗೆ ಪತ್ರ ಬರೆದು ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು ಆದೇಶಿಸಿದ. ೧೮೫೮ರ ಜನವರಿ ೩೧ರ ವರೆಗೆ ಶಾಂತವಾಗಿದ್ದ ಸುರಪುರದ ಮೇಲೆ ನುಗ್ಗಿತು. ಎರಡೂ ಬಣಗಳ ನಡುವೆ ಗುಂಡಿನ ಚಕಮಕಿ ನಡೆಯತು. ರೊಚ್ಚಿಗೆದ್ದ ಸುರಪುರದ ರೋಹಿಲರು ಸ್ಟೂವರ್ಟ್‌ನ ಮೂಳೆ ಮುರಿದರು. ನ್ಯೂಬೆರಿ ನೆಲಕ್ಕುರುಳಿದ. ಆತನ ರುಂಡವನ್ನು ನೋಡಿ ನಾಲ್ವಡಿ ವೆಂಕಟಪ್ಪನಾಯಕ ಭಯಭೀತನಾದ. ತನ್ನ ಪರಿವಾರವನ್ನು ರಾತ್ರೋರಾತ್ರಿ ಬೇರಡೆಗೆ ಕಳುಹಿಸಿ, ಆದ ಹೈದ್ರಾಬಾದ್‌ಗೆ ತೆರಳಿದ. ಫೆಬ್ರವರಿ ೯, ೧೮೫೮ರಂದು ಬೆಳಗಿನ ಜಾವ ಗಡಿಯಲ್ಲಿದ್ದ ಬ್ರಿಟಿಷ್ ಪಡೆ ಸುರಪುರದೊಳಗೆ ನುಗ್ಗಿತು, ಸುರಪುರ ಸಂಸ್ಥಾನ ಪತನವಾಯಿತು. ಹೈದ್ರಾಬಾದ್‌ನಲ್ಲಿ ಸುತ್ತಾಡುತ್ತಿದ್ದ ನಾಲ್ವಡಿ ವೆಂಕಟಪ್ಪನಾಯಕನ ಕುರಿತಾಗಿ ವನಪರ್ತಿ ರಾಜನಿಂದ ಸುದ್ದಿ ತಿಳಿದ ಹೈದ್ರಾಬಾದ್ ನಿಜಾಮ ಸಾಲರ್‌ಜಂಗ್, ನಾಲ್ವಡಿ ವೆಂಕಟಪ್ಪನಾಯಕನನ್ನು ಬಂಧಿಸಿ ಫೆಬ್ರವರಿ ಗಡಿಪಾರು ಶಿಕ್ಷೆ ವಿಧಿಸಿ ಅರಸರನನ್ನು ಮದ್ರಾಸ್ ಸಮೀಪದ ಚಂಗಲ್‌ಪೇಟೆ ದುರ್ಗದಲ್ಲಿಡಲು ಹೋಗುತ್ತಿದ್ದಾಗ ಹಾದಿಯಲ್ಲಿ ವಿಶ್ರಾಂತಿಗೆಂದು ತಂಗಿದ್ದಾಗ, ಮೋಸದಿಂದ ನಾಲ್ವಡಿ ವೆಂಕಟಪ್ಪ ನಾಯಕನನ್ನು ಗುಂಡುಹಾಕಿ ಕೊಲೆಮಾಡಲಾಯಿತು. ಇದು ಬ್ರಿಟಿಷ್ ಸರಕಾರ ಮತ್ತು ಹೈದ್ರಾಬಾದ್ ನಿಜಾಮ ಸರಕಾರದ ಕುಟಿಲ ತಂತ್ರವಾಗಿತ್ತು.

ಹೀಗೆ ಭಾರತದ ಪ್ರಥಮ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ದಕ್ಷಿಣಭಾರತದ ರಾಜರನ್ನೆಲ್ಲಾ ಒಂದುಗೂಡಿಸಿ, ಬ್ರಿಟಿಷರನ್ನು ಎದುರಿಸಲು, ಅವರನ್ನು ದೇಶದಿಂದ ಹೊಡೆದೋಡಿಸಬೇಕೆಂಬ ಸಂಕಲ್ಪದಿಂದ ೨೩ ವರ್ಷದ ತರುಣ ರಾಜಾ ನಾಲ್ವಡಿ ವೆಂಕಟಪ್ಪನಾಯಕ ತನ್ನೆಲ್ಲಾ ಸರ್ವಸ್ವ ವನ್ನು ಕೇವಲ ಸ್ವರಾಷ್ಟ್ರ ಹಾಗೂ ಸ್ವಧರ್ಮಕ್ಕಾಗಿ ಬಲಿದಾನಗೈದು ಹುತಾತ್ಮನಾದ. ದೇಶದ ಭವ್ಯ ಇತಿಹಾಸದ ರಾಷ್ಟ್ರಭಕ್ತರ ಸಾಲಿನಲ್ಲಿ ಸೇರಿ ಸುರಪುರಕ್ಕೆ ರಾಷ್ಟ್ರೀಯ ಮಹತ್ವ ತಂದು ಕೊಟ್ಟ. ಈತನ ಸಾವಿನೊಂದಿಗೆ ಸುರಪುರ ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಪಟ್ಟಿತು. ಇವರು ಕ್ರಿ.ಶ. ೧೮೬೧ರಲ್ಲಿ ಸುರಪುರದ ಆಡಳಿತವನ್ನು ನೋಡಿಕೊಳ್ಳಲು ‘‘ಹೈದ್ರಾಬಾದ್ ನಿಜಾಮನಿಗೆ ಒಪ್ಪಿಸಿದರು’’ ನಾಲ್ವಡಿ ವೆಂಕಟಪ್ಪನಾಯಕನಿಗೆ ೮ ಜನ ರಾಣಿಯರಿದ್ದರು. ಅವನಿಗೆ ನಿಜಾಮ ಸರ್ಕಾರ ಸುಖವೇತನವನ್ನು ಜೀವಿತದ ಕಾಲದವರೆಗೂ ನೀಡಿತು. ಈತನ ಪಟ್ಟದರಾಣಿ ರಂಗಮ್ಮ ಮುಜುಮದಾರ ವೆಂಕಟಪ್ಪನೊಂದಿಗೆ ಕ್ರಿ.ಶ. ೧೮೯೦ರಲ್ಲಿ ಲಂಡನ್ನಿನಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸ್ಥಾನವನ್ನು ಮರಳಿ ಪಡೆಯಲು, ಪ್ರಶ್ನೆ ಕೇಳುವಂತೆ ಕಳುಹಿಸಿದ್ದಳು. ಇವಳ ಬೇಡಿಕೆ ತಿರಸ್ಕೃತಗೊಂಡಿತು. ತನಗೆ ಗಂಡು ಮಕ್ಕಳಿಲ್ಲದ ಕಾರಣ, ನಾಲ್ವಡಿ ವೆಂಕಟಪ್ಪನಾಯಕನ ಚಿಕ್ಕಪ್ಪ ರಾಜಾಪಿಡ್ಡನಾಯಕನ ಮಗ, ವೆಂಕಟಪ್ಪ ನಾಯಕನ ಪುತ್ರ ಕೃಷ್ಣಪ್ಪನಾಯಕನನ್ನು ದತ್ತಕ ತೆಗೆದುಕೊಂಡು, ಪೂರ್ವಜರ ಜಹಗೀರು ಗ್ರಾಮಗಳನ್ನು ಈತನಿಗೆ ನೀಡಿದಳು. ಕ್ರಿ.ಶ. ೧೯೦೬ರಲ್ಲಿ ಮರಣ ಹೊಂದಿದಳು. ಕೃಷ್ಣಪ್ಪ ನಾಯಕನು ಹೈದ್ರಾಬಾದ್ ವಿಮೋಚನೆಯಲ್ಲಿ ಪಾಲ್ಗೊಂಡಿದ್ದನು. ಈ ಸಂಸ್ಥಾನ ಕ್ರಿ.ಶ. ೧೯೪೮ ಸೆಪ್ಟಂಬರ್ ೧೮ರಂದು ಭಾರತದ ಭಾರತದ ಒಕ್ಕೂಟವನ್ನು ಸೇರಿತು. ಹೀಗೆ ಸುರಪುರದ ಪಾಳೆಗಾರರು ಚಿತ್ರದುರ್ಗದ ಪಾಳೆಗಾರರಂತೆ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದರು. ಇವರು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡವರು. ಕೆರೆ, ಬಾವಿ, ದೇವಾಲಯ, ಕೋಟೆ ಕೊತ್ತಲುಗಳನ್ನು ಕಟ್ಟಿಸಿದ್ದಾರೆ. ಅನೇಕರಿಗೆ ಜಹಗೀರಗಳನ್ನು ನೀಡಿ ದ್ದಾರೆ. ಅಲ್ಲದೆ ಇವರ ಉತ್ಸವಗಳಿಗೆಗಾ ಜಾಗೀರು, ಇನಾಮು ಭೂಮಿಯನ್ನು ನೀಡಿದ್ದಾರೆ. ಇವರ ಆಸ್ಥಾನದಲ್ಲಿ ಅನೇಕ ಕಲಾವಂತರು, ಗಾಯಕರು, ಚಿತ್ರಗಾರರು, ಶಿಲ್ಪಿಗಳು ಆಶ್ರಯ ದಾತರಾಗಿದ್ದರು.

ಚಿತ್ರಕಲೆಯಲ್ಲಿ ಸುರಪುರ ಪಾಳೆಗಾರರ ಮನೆತನಕ್ಕೆ ಅಗ್ರಸ್ಥಾನವಿತ್ತು. ಅಲ್ಲಿಯ ಚಿತ್ರಗಳ ತಂತ್ರ ಮತ್ತು ವಿನ್ಯಾಸ ಉನ್ನತ ಸ್ಥಾನ ಪಡೆದಿದೆ. ಮೈಸೂರಿನ ಸಾಂಪ್ರದಾಯಕ ಕಲಾಕೃತಿಗಳು, ವಿಜಯನಗರ ಶೈಲಿಯ ಚಿತ್ರಗಳು, ಬಿಜಾಪುರದ ಆದಿಲ್‌ಶಾಹಿ ಮನೆತನದವರಿಂದ ಬಂದ ಕಲಾಕೃತಿಗಳಿಗಿಂತ ಸುರಪುರ ಪಾಳೆಗಾರರ ಕಲಾಕೃತಿಗಳು ತಮ್ಮದೇ ಆದ ವಿಶಿಷ್ಟತೆಯನ್ನು ಪಡೆದಿದೆ. ಲಂಡನ್‌ನಿನ ಕಲಾ ಸಂಗ್ರಹಾಲಯ, ಇಂಗ್ಲಿಂಡಿನ ವಿವಿಧ ನಗರಗಳಲ್ಲಿ, ದೆಹಲಿ, ಮುಂಬೈ, ಹೈದ್ರಾಬಾದ್‌ನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಾಲಾರಜಂಗ ವಸ್ತುಸಂಗ್ರ ಹಾಲಯದಲ್ಲಿ ಇಂತಹ ಕಲಾಕೃತಿಗಳನ್ನು ನೋಡಬಹುದು. ಇಂದು ಇವರ ಪುತ್ರರಾದ ರಾಜಾ ವೆಂಕಟಪ್ಪನಾಯಕ (ತಾತಾ) ಸುರಪುರದ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

. ಆನೆಗೊಂದಿ ಬೇಡ ಪಾಳೆಗಾರರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಿಂದ ನೈರುತ್ಯಕ್ಕೆ ೧೨ ಕಿ.ಮೀ. ಅಂತರದಲ್ಲಿರುವ ಆನೆಗೊಂದಿ ಒಂದು ಪ್ರಸಿದ್ಧ ಐತಿಹಾಸಿಕ ತಾಣ. ಬೇಡ ಜನಾಂಗದ ಪಾಳೆಗಾರಿಕೆಯ ಮೂಲ ಸ್ಥಳವಾಗಿರುವ ಆನೆಗೊಂದಿಯನ್ನು ಅನೇಕ ಪಾಳೆಗಾರ ವಂಶಸ್ಥರು ತಮ್ಮ ಮೂಲ ಸ್ಥಳವೆಂದು ಹೇಳಿಕೊಳ್ಳುವುದುಂಟು. ಈ ಆನೆಗೊಂದಿಯ ಬೇಡ ಪಾಳೆಯಗಾರರ ಇತಿಹಾಸವನ್ನು ‘ವಿಜಯನಗರ ಪೂರ್ವದ ಆನೆಗೊಂದಿ ಬೇಡ ಪಾಳೆಯಗಾರರು’, ವಿಜಯನಗರ ಅವಧಿಯ ಆನೆಗೊಂದಿಯ ಬೇಡ ಪಾಳೆಗಾರರು’, ಮತ್ತು ‘ವಿಜಯನಗರೋತ್ತರ ಆನೆಗೊಂದಿ ಬೇಡ ಪಾಳೆಯಗಾರರು ಎಂದು ಮೂರು ಭಾಗಗಳಾಗಿ ವಿಭಾಗಿಸಬಹುದಾಗಿದೆ. ವಿಜಯನಗರ ಸಾಮ್ರಾಜ್ಯಕ್ಕಿಂತ ಮೊದಲು, ತುಂಗಭದ್ರ ನದಿ ದಂಡೆಯ ಮೇಲಿನ ಕುಮ್ಮಟದುರ್ಗದ ಅರಸರ ಕಾಲದಲ್ಲಿ ಬೇಡರು ಒಂದು ನಿಶ್ಚಿತವಾದ ನಿರ್ದಿಷ್ಟ ನೆಲೆಯನ್ನು ಕಂಡುಕೊಂಡರು. ಈ ಸಂದರ್ಭದಲ್ಲಿ ಬೇಡರು ಕುಮ್ಮಟದುರ್ಗದ ಸುತ್ತಮುತ್ತ ನೆಲೆಯೂರಿದರು. ಆನೆಗೊಂದಿ ಮೂಲತಃ ಬೇಡರದ್ದೇ ಆಗಿದೆ. ಆನೆಗೊಂದಿಯಲ್ಲಿ ಮೊದಲು ಸಂಸ್ಥಾನ ಸ್ಥಾಪಿಸಿದ ಮುಮ್ಮಡಿ ಸಿಂಗೇಯನಾಗಲಿ ಅವನ ಮಗನಾದ ಕಂಪಿಲರಾಯ ಮತ್ತು ಮೊಮ್ಮಗನಾದ ಕುಮಾರರಾಮನು ಬೇಡರೇ ಆಗಿದ್ದರು.[5] ಇದು ಅವರ ರಾಜ್ಯದ ಆಯಕಟ್ಟಿನ ಸ್ಥಳವಾಗಿತ್ತು.

ಆನೆಗೊಂದಿಯ ಬೇಡ ಪಾಳೆಯಗಾರರು ಕ್ರಿ.ಶ. ೧೩೫೦ಕ್ಕೂ ಮುಂಚೆ ಆಳ್ವಿಕೆ ನಡೆಸಿದ್ದರು ಎಂದು ಫೆರಿಸ್ತಾನ ಹೇಳಿಕೆಯಿಂದ ತಿಳಿದುಬರುತ್ತದೆ.[6] ಪೋರ್ಚುಗೀಸ್ ಪ್ರವಾಸಿ ‘ಪೆರ್‌ನೋವ್ ನ್ಯೂನಿಜ್’ ಪ್ರತಿನಿಧಿಯಾಗಿದ್ದ ಮಹ್ಮದ್ ಬಿನ್ ತೊಘಲಕ್ ಆನೆಗೊಂದಿಯ ಅರಸರ ಮೇಲೆ ದಾಳಿ ಮಾಡಿದನು. ಅಪಾರ ಸೈನ್ಯದೊಂದಿಗೆ ಆನೆಗೊಂದಿ ಅರಸರು ಅವರ ವಿರುದ್ಧ ಹೋರಾಡಿ ಗೆಲ್ಲುವುದು ಅಸಾಧ್ಯವಾದಾಗ, ಹತ್ತಿರದ ಚಿನ್ನಮಗೋಟದ ಪರಿಸರಕ್ಕೆ ತೆರಳುತ್ತಾನೆ. ನಂತರ ತನ್ನ ೫೦,೦೦೦ ಸೈನಿಕರಲ್ಲಿ ೫೦೦೦ ಸೈನಿಕರನ್ನು ಆಯ್ದುಕೊಂಡು ೧೨ ವರ್ಷ ಸತತವಾಗಿ ದೆಹಲಿಯ ಸುಲ್ತಾನರೊಂದಿಗೆ ಯುದ್ಧ ಮಾಡಿದ. ಈತನಿಗೆ ಅಪಾರ ನಷ್ಟವಾಯಿತು. ಕೊನೆಯಲ್ಲಿ ಆರು ಜನವೃದ್ಧರು ಉಳಿದುಕೊಂಡರು. ಆಗ ಸಾಮ್ರಾಜ್ಯದ ಬಹುಭಾಗ ದೆಹಲಿ ಸುಲ್ತಾನರ ದಂಗೆಗೆ ತುತ್ತಾಯಿತು. ದೆಹಲಿ ಸುಲ್ತಾನರು ವಾಪಸ್ಸು ಹೋಗಲು ತಯಾರಾದಾಗ ಸಮೃದ್ಧವಾದ ಈ ಪ್ರದೇಶವನ್ನು ಕಳೆದುಕೊಳ್ಳಲು ಇಷ್ಟಪಡದೆ ಸ್ಥಳೀಯರ ಮಾಹಿತಿ ಮೇರೆಗೆ ಈತನ ಸಲಹೆಗಾರರ ಸೂಚನೆಯಂತೆ ಉಳಿದಿದ್ದ ಆರು ಮಂದಿಯಲ್ಲಿ ಒಬ್ಬನಾದ ದೇವರಾಯನಿಗೆ ಪಟ್ಟಕಟ್ಟಲಾಯಿತು.[7]

ಇತ್ತ ಕ್ರಿ.ಶ. ೧೩೩೬ರಲ್ಲಿ ವಿಜಯನಗರ ಸ್ಥಾಪನೆಯಾಯಿತು. ಈ ವಿಜಯನಗರದ ತೊಟ್ಟಿಲಾಗಿ, ಮತ್ತು ಅದರ ಅವಿಭಾಜ್ಯ ಅಂಗವಾಗಿ, ಮೊದಲ ರಾಜಧಾನಿಯಾಗಿ ಆನೆಗೊಂದಿ ಪರಿಣಮಿಸಿತು. ಆಗ ಆನೆಗೊಂದಿಯಲ್ಲಿದ್ದ ನಾಯಕ ಅರಸರು ವಿಜಯನಗರದವರ ಅಧೀನ ರಾಗಿದ್ದರು. ಇಲ್ಲಿ ಆಶ್ವಿಕೆ ಮಾಡಿದವರು, ನಾಯಕ ಜನಾಂಗಕ್ಕೆ ಸೇರಿದವರೇ ವಿನಃ ಬೇರೆ ಜನಾಂಗದವರಲ್ಲವೆಂದು ನಿರ್ಧಾರವಾಗಿದೆ. ಇದಕ್ಕೆ ಪೂರಕವಾಗಿ ಆನೆಗೊಂದಿ ಸಂಸ್ಥಾನದ ಜಯರೇಖೆಯ ನಕಲು ಈ ರೀತಿ ಇದೆ: ‘‘ಶ್ರೀಗುರು ಪಂಪಾವಿರೂಪಕ್ಷನೇ ನಮಃ ಶಾಲಿವಾಹನ ಶಕ ವರ್ಷಂಗಳು ೧೫೩ಕ್ಕೆ ಸರಿಯಾದ ವಿರೋಧಿನಾಮ ಸಂವತ್ಸರದ ಚೈತ್ರ ಶುದ್ಧ ೫ ಭಾನುವಾರ ಚಂದನಾವತಿಯೆಂಬ ಆನೆಗೊಂದಿ ನರಪತಿ ದೊರೆಗಳ ಜಯರೇಖೆ ನಕಲು. ಶ್ರೀಮಾನ್ ರಾಜಾಧಿರಾಜ, ರಾಜತೇಜೋನಿಧಿ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ, ಕಸ್ತೂರಿ ತಿಲಕ, ಕಾಮಕೇತನ, ಚಂಡಪ್ರಚಂಡ, ಕುಲ ಭೇರುಂಡ, ನರಪತಿ ಮಂಡಲಾಧರ ಶ್ರೀಮಾನ್ ‘ನಾಯಕವಂಶ’ ನಿತ್ಯಾಚಾರ ಸತ್ಯಾಚಾರ, ಲಿಂಗಾಚಾರ, ಪ್ರವರ್ತನ ಸದ್ಧರ್ಮವುಳ್ಳ ಚಂದ್ರವಂಶ, ಮಹೀಪತಿಗೋತ್ರ, ಮನುಮುನಿಸೂತ್ರ ಸಂಜನಿತರಾದ ಮಂಜಪ್ಪನಾಯ್ಕ ಭೂಮೀಪತಿಯು ಶ್ರೀ ಲಕ್ಷ್ಮಿದೇವಿ ಹಿರೇರಾಜರ ಪೆಟ್ಟಿಗೆಯನ್ನು ಪೂಜಿಸುತ್ತಾ ಪಂಪಾಕ್ಷೇತ್ರ ನಿವಾಸಿಗಳಾದ ಹರಿಹರಸ್ವಾಮಿಗಳವರ ವರವಂ ಪಡೆದು ಸುಖದಿಂದ ರಾಜ್ಯಪಾಲನೆ ಮಾಡುತ್ತಿ ದ್ದರು’’[8]. ಎಂಬ ವಿವರಣೆ ನೀಡುತ್ತದೆ.

ಅಲ್ಲದೆ ಆನೆಗೊಂದಿ ಕೆಲವು ಪಾಳೆಯಗಾರರ ಪೂರ್ವಜರ ತಾಣವಾಗಿತ್ತು. ರತ್ನಗಿರಿಯ ನಾಯಕನಾದ ಇರಸಪ್ಪನಾಯಕನ ಮಗ ಹಿರೇಗೌಡ ಕ್ರಿ.ಶ. ೧೩೯೯-೧೪೧೮ರಲ್ಲಿ ಆನೆಗೊಂದಿ ಯಲ್ಲಿ ಕಂಡು ಬಂದ ವಿಲ್ಲಂಚ್ಛರ ಹಾವಳಿಯನ್ನು ಎದುರಿಸುವಲ್ಲಿ ಸಹಾಯ ಮಾಡಿದನು. ಇದರಿಂದ ಸಂತೋಷಗೊಂಡ ಆನೆಗೊಂದಿ ಅರಸ ಈತನಿಗೆ ಅನೇಕ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದ.[9] ಹರತಿಯ ದೊರೆ ತಿಪ್ಪರಾಜನ ತಂದೆ, ಇಲ್ಲವೆ ತಾತ ಆನೆಗೊಂದಿಯ ಕಡೆಯಿಂದ ವಲಸೆ ಬಂದವರು. ಹಾಗೆಯೇ ನಾಯಕನಹಟ್ಟಿ ಮನೆತನದ ಸ್ಥಾಪಕ ಕಾಟೇಮಲ್ಲ ನಾಯಕನು ಆನೆಗೊಂದಿಯ ಕಡೆಯಿಂದ ವಲಸೆ ಬಂದವನು.[10] ತರೀಕೆರೆಯ ಪಾಳೆಯಗಾರರ ವಂಶವೃತ್ತಾಂತದ ಪ್ರಕಾರ ಧೂಮರಾಜ ಎಂಬುವನು ವಿಜಯನಗರದಿಂದ ಬಂದವನು.[11] ಚಿತ್ರದುರ್ಗದ ಮೂಲಪುರಷ ಚಿತ್ರನಾಯಕ ಆನೆಗೊಂದಿಯ ಕಡೆಯಿಂದ ಬಂದು ಉಚ್ಛಂಗಿ ದುರ್ಗ, ಬಿಳಿಚೋಡು, ಕೋಗುಂಟೆ, ಹೆಬ್ಬಾಳು ಮಾರ್ಗವಾಗಿ ನೀರ್ಥಡಿಗೆ ಬಂದನು.[12] ವಿಜಯನಗರ ಅಸ್ತಿತ್ವದಲ್ಲಿದ್ದರೂ ಅವರ ಅಧೀನದಲ್ಲಿ ಆನೆಗೊಂದಿ ಬೇಡ ಪಾಳೆಯಗಾರರು ಅಧಿಕಾರದಲ್ಲಿದ್ದರು. ಆಗ ಆನೆಗೊಂದಿ ವಿಜಯನಗರದ ಕೊನೆಯ ಠಾಣೆಯಾಗಿತ್ತು. ಕ್ರಿ.ಶ. ೧೫೬೫ರಲ್ಲಿ ವಿಜಯನಗರ ಪತನವಾದ ಮೇಲೆ ಅರವೀಡುವಂಶ, ಪೆನುಗೊಂಡೆ, ಚಂದ್ರಗಿರಿ ಮತ್ತು ವೆಲ್ಲೂರಿನಲ್ಲಿ ನೆಲೆಯೂರಿದರು. ಆಗ ವಿಜಯನಗರದವರ ಅಧೀನದಲ್ಲಿದ್ದ ಆನೆಗೊಂದಿ ಸ್ವತಂತ್ರವಾದ ಸಣ್ಣರಾಜ್ಯವಾಗಿ ರೂಪುಗೊಂಡಿತು. ಆಗ ಇದು ೧೨೧ ಹಳ್ಳಿಗಳನ್ನು ಒಳಗೊಂಡಿದ್ದು, ವಾರ್ಷಿಕ ವರಮಾನ ೧,೭೮,೭೨೫ ಬಂಗಾರದ ಪಗೋಡಗಳಾಗಿತ್ತು. ಕೆಲವೇ ದಿನಗಳಲ್ಲಿ ಆನೆಗೊಂದಿಯು ಬಿಜಾಪುರ ಮತ್ತು ಗೋಲ್ಕೊಂಡ ಅರಸರ ಅಧಿಕಾರ ವ್ಯಾಪ್ತಿಗೆ ಬಂದಿತು.[13] ಕ್ರಿ.ಶ. ೧೬೮೯ರಲ್ಲಿ ಆನೆಗೊಂದಿಯು ಔರಂಗಜೇಬನ ವಶವಾಗುತ್ತದೆ. ಆಗ ಅವರ ಸಾಮಂತಿಕೆಯನ್ನು ಒಪ್ಪಿಕೊಂಡ ಆನೆಗೊಂದಿಯೂ ಔರಂಗಜೇಬನ ವಶವಾಗುತ್ತದೆ. ಆಗ ಅವರ ಸಾಮಂತಿಕೆಯನ್ನು ಒಪ್ಪಿಕೊಂಡ ಆನೆಗೊಂದಿ ಸಂಸ್ಥಾನಕ್ಕೆ ೯ ವಿಭಾಗಗಳನ್ನು ಕ್ರಿ.ಶ. ೧೭೦೭ರಲ್ಲಿ ಅಸಫ್‌ಜಾ ಎಂಬ ಹೈದ್ರಾಬಾದಿನ ವೈಸರಾಯ್ ಆನೆಗೊಂದಿ ಎಲ್ಲಾ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಆದರೂ ಆನೆಗೊಂದಿ ಅರಸರು ತಮ್ಮ ಸಂಬಂಧಿನಾಯಕ ಅರಸು ಮನೆತನಗಳ ಕೆಲವು ಸಣ್ಣಪುಟ್ಟ ದಾಳಿಗಳಲ್ಲಿ ಅವನಿಗೆ ಬೆಂಬಲವನ್ನು ನೀಡುತ್ತಿದ್ದುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ವಡ್ಡು, ದರೋಜಿ, ಬಾಣಾರಾವಿ, ಪಾಳೆಯಗಾರರಿಗೆ ಆನೆಗೊಂದಿ ಅರಸರು ಪ್ರೋನೀಡಿದ್ದುದು ಕಂಡುಬರುತ್ತದೆ.

ಆನೆಗೊಂದಿ ಬೇಡ ಪಾಳೆಗಾರರು ಚಿತ್ರದುರ್ಗದ ಹಿರೇಮದಕರಿನಾಯಕ (ಕ್ರಿ.ಶ. ೧೭೨೧-೧೭೪೯) ನಿಗೆ ತನ್ನ ಮಗಳಾದ ಗಂಡೋಬವ್ವ, ಅಥವಾ ಗಂಡಿಲ ಓಬವ್ವ, ನಾಗತಿಯನ್ನು ಕೊಟ್ಟು ವೈವಾಹಿಕ ಸಂಬಂಧ ಬೆಳೆಸಿದ್ದರು.[14] ಈಕೆ ಪಟ್ಟದರಾಣಿಯಾಗಿದ್ದು, ಮಗ ಕಸ್ತೂರಿ ರಂಗಪ್ಪನಾಯಕನ ತರುವಾಯ ಎರಡು ವರ್ಷಗಳವೆರಗೆ ಚಿತ್ರದುರ್ಗದ ಅಧಿಕಾರ ವಹಿಸಿ ಕೊಂಡಿದ್ದಳು. ಕ್ರಿ.ಶ. ೧೭೪೯ರಲ್ಲಿ ಆನೆಗೊಂದಿಯ ಭೂಪ್ರದೇಶಗಳು ಮರಾಠರ ದಾಳಿಗೊಳ ಪಟ್ಟವು. ಸೋತ ಆನೆಗೊಂದಿ ಅರಸರಿಗೆ ವಾರ್ಷಿಕವಾಗಿ ೭೦೦೦ ಪಗೋಡ ತೆರಿಗೆಯನ್ನು ಹೇರಿದರು.[15] ಕ್ರಿ.ಶ. ೧೭೯೯ರ ತರುವಾಯ ಹೈದ್ರಾಬಾದ್ ನಿಜಾಮ ಮತ್ತು ಬ್ರಿಟಿಷರ ಒಪ್ಪಂದದ ಮೇರೆಗೆ ಆನೆಗೊಂದಿಯು ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ವರ್ಗಾವಣೆ ಯಾಯಿತು. ಆಗ ಇವರಿಗೆ ನಿಜಾಮರು ನೀಡುತ್ತಿದ್ದ ಮಾಸಾಶನವನ್ನು ತೆಗೆದು ಹಾಕಿ ಮೊತ್ತಕ್ಕೆ ಸಮನಾದ ಆದಾಯುವುಳ್ಳ ೫ ಗ್ರಾಮಗಳನ್ನು ಜಹಗೀರಾಗಿ ನೀಡಿದರು. ಆಗ ಆನೆಗೊಂದಿಯ ಅರಸರು ಇನ್ನೂ ೧೪ ಗ್ರಾಮಗಳನ್ನು ಹೊಸದಾಗಿ ನಿರ್ಮಿಸಿಕೊಂಡರು.

ಕ್ರಿ.ಶ. ೧೮೨೪ರಲ್ಲಿ ತುಂಗಭದ್ರ ನದಿಯ ದಕ್ಷಿಣ ದಂಡೆಯ ಮೇಲಿನ ಭೂಮಿಯ ಬದಲಾಗಿ, ಬ್ರಿಟಿಷರಿಂದ ಮೊದಲ ವಿಶ್ರಾಂತಿ ವೇತನ ಪಡಿದವನು ಆನೆಗೊಂದಿಯ ಅರಸ ತಿರುಮಲರಾಯ. ಈತನ ನಂತರ ಮಗ ವೀರವೆಂಕಟಪತಿ ನಂತರ ಈತನ ಮಗ ವೆಂಕಟ ರಾಯಲು, ನಂತರ ಆತನ ಸಹೋದರ ಕೃಷ್ಣದೇವರಾಯ (ಕ್ರಿ.ಶ. ೧೮೭೧-೧೮೭೨) ಈತನು ತರುವಾಯ ಈತನ ಚಿಕ್ಕಮ್ಮಳ ಮಗ ಪೆದ್ದ ನರಸಿಂಹರಾಜು ಆನೆಗೊಂದಿಯ ಅರಸನಾದ. ಈತನ ಮಗ ಮರಣದ ನಂತರ ರಾಣಿನರಸಿಂಗಮ್ಮ, ಈಕೆಯ ನಂತರ ಈಕೆಯ ಸಹೋದರಿ ಕುಪ್ಪಮ್ಮ ಪ್ರಾಭಾರಿ ರಾಣಿಯಾಗುತ್ತಾಳೆ. ತನ್ನ ಕಿರಿಯ ಸಹೋದರ ಪಂಪಾಪತಿ ರಾಜನನ್ನು ದತ್ತಕ ತೆಗೆದುಕೊಳ್ಳುತ್ತಾಳೆ. ನಂತರ ಶ್ರೀರಂಗರಾಯ (ಕ್ರಿ.ಶ. ೧೮೮೯-೧೯೧೮) ದುರ್ಬಾರ್ ಕೃಷ್ಣರಾಯ, ಶ್ರೀರಂಗದೇವರಾಯ ಕ್ರಮವಾಗಿ ಅಧಿಕಾರ ಸ್ವೀಕರಿಸುತ್ತಾರೆ. ಆಗ ನಿಜಾಮ ರಾಜ್ಯದ ಭಾಗವಾಗಿದ್ದ ಆನೆಗೊಂದಿಯು ಭಾರತದ ಸ್ವಾತಂತ್ರ್ಯದ ನಂತರ ೧೯೪೮ ಸೆಪ್ಟಂಬರ್ ೧೮ರಲ್ಲಿ ಭಾರತದ ಒಕ್ಕೂಟ ಸೇರಿತು. ಆನೆಗೊಂದಿ ಪಾಲೆಗಾರರ ಮನೆದೇವರು ಶ್ರೀರಂಗನಾಥ ಪ್ರತಿವರ್ಷ ಚಿತ್ರಭಾನು ನಾಮ ಸಂವತ್ಸರ ಚೈತ್ರ ಕೃಷ್ಣ ಪಂಚಮಿ ದಿನದಂದು ಜಾತ್ರೆ ನಡೆಯುತ್ತದೆ. ಅಂದು ಅರಸರ ಸಮ್ಮುಖದಲ್ಲಿ ಅನೇಕ ಕುಸ್ತಿ, ಕಲ್ಲು ಎತ್ತುವುದು, ಉಸುಕಿನ ಚೀಲ ಎತ್ತವುದು ಮುಂತಾದ ಶಕ್ತಿ ಪ್ರದರ್ಶನ, ಆಟೋಟಗಳು ಜರುಗುತ್ತಿದ್ದವು. ಗೆದ್ದವರಿಗೆ ಅರಸರು ಬೆಳ್ಳಿಯ ಕಡಗಗಳನ್ನು ನೀಡಿ ಸನ್ಮಾನಿಸುತ್ತಿದ್ದರು. ಇವರ ಆರಾಧ್ಯ ದೈವಗಳು ತಿರುಪತಿ ತಿಮ್ಮಪ್ಪ, ವರಮಹಾಲಕ್ಷ್ಮಿ, ಮೇಗೋಟಾದ ದುರ್ಗಾದೇವಿ, ಗಣೇಶ ಮುಂತಾದವು ಗಳು, ಇಂದು ಆನೆಗೊಂದಿಯ ಅರಸು ಮನೆತನದ ವಂಶಸ್ಥರು, ಆನೆಗೊಂದಿ, ಗಂಗಾವತಿ ಮತ್ತು ಹೊಸಪೇಟೆಯಲ್ಲಿ ವಾಸವಾಗಿದ್ದಾರೆ. ರಾಜಕೀಯವಾಗಿ ಆರ್ಥಿಕವಾಗಿಯೂ ಪ್ರಬಲ ರಾಗಿದ್ದಾರೆ.

. ಗುಡಗುಂಟಿ ಬೇಡ ಪಾಳೆಗಾರರು

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಿಂದ ೧೯ ಕಿ.ಮೀ ದೂರದಲ್ಲಿರುವ ಗುಡಗುಂಟಿಯಲ್ಲಿ ಒಂದು ಬೇಡ ಪಾಳೆಯಗಾರರು ಮನೆತವಿತ್ತು. ಸುರಪುರ ಹಾಗೂ ಗುಡಗುಂಟಿ ನಾಯಕ ಅರಸರು ಒಂದೇ ಮೂಲಕ್ಕೆ ಸೇರಿದವರು. ಇವರು ‘ಗೋಸಲ’ ವಂಶದವರು. ಜಕ್ಕಪ್ಪದೇಸಾಯಿಯ ಹಿರಿಯ ಮಗನಾದ ಗಡ್ಡಿಲಿಂಗನಾಯಕನೇ ಗುಡಗುಂಟಿ ಮನೆತನದ ಸ್ಥಾಪಕ. ಈ ಮೊದಲು ಕಕ್ಕೇರಿ ಭಾಗವು ಬಿಜಾಪುರ ಆದಿಲ್‌ಷಾಹಿಗಳ ಸಾಮ್ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಲಿಂಗನಾಯಕ ಗುಡಗುಂಟಿಯ ಪರಗಣಿಯ ಸರದೇಸಾಯಯಾಗಿ ಬಡ್ತಿ ಹೊಂದಿ ಇಲ್ಲಿ ಆಳ್ವಿಕೆ ಪ್ರಾರಂಭಿಸಿದ. ಈತ ತನ್ನ ರಾಜ್ಯವನ್ನು ವಿಸ್ತರಿಸುವುದಕ್ಕಾಗಿ ಬಿಜಾಪುರದ ಆದಿಲ್‌ಷಾಹಿಗಳೆಡೆಗೆ ಹೋದಾಗ ಷೇಖಮಿನಹಾಜ ಸರದಾರನಿಂದ ಕೊಲ್ಲಲ್ಪಟ್ಟನು. ಈತನ ಮರಣದ ತರುವಾಯ ಆತನ ಮಗ ಜಡಿಸೋಮಪ್ಪ ನಾಯಕ ಬಿಜಾಪುರದ ಸುಲ್ತಾನರಲ್ಲಿ ತನ್ನ ಶೌರ್ಯ, ಸಾಹಸಗಳನ್ನು ತೋರಿಸಿದ್ದಕ್ಕಾಗಿ ‘ಸರ್ಜಾಬಹುದ್ದೂರ’ ಎಂಬ ಬಿರುದನ್ನು ಪಡೆದನು. ಜೊತೆಗೆ ಕ್ರಿ.ಶ. ೧೬೬೯ರಲ್ಲಿ ಇಮ್ಮಡಿ ಅಲಿ ಆದಿಲ್‌ಶಾಹನಿಂದ ಒಂದು ಫಾರಸಿ ಸನದು ದೊರಕಿದೆ. ಈ ಸನದಿನಲ್ಲಿ ಸಮತ ಹೈಚಬಾಳು ಮತ್ತು ಕಕ್ಕೇರಿಯ, ಗುಡಗುಂಟಿ ಕೆಲವು ಹಳ್ಳಿಗಳನ್ನು ಜಡಿಸೋಮನಾಯಕನಿಗೆ ಇನಾಮು ಕೊಡಲಾಗಿದ್ದು ಇದನ್ನು ಗುಡಗುಂಟಿ ಅಥವಾ ಮಾದರಾಯನ ಕೋಟೆಯ ದೇಸಾಯಿ ಮತ್ತು ನಾಡಗೋಡರಿಗೆ ಸಂಬೋಧಿಸಲಾಗಿದೆ.[16] ಹೀಗಾಗಿ ಗುಡಗುಂಟಿ ಸಂಸ್ಥಾನವು ಕ್ರಿ.ಶ. ೧೬೬೯ರಲ್ಲಿ ಸ್ಥಾಪನೆಯಾಗಿದೆ.

ಈತನ ತರುವಾಯ ಇಮ್ಮಡಿಲಿಂಗನಾಯಕ, ಸೋಮಪ್ಪನಾಯಕರು ಅನುಕ್ರಮವಾಗಿ ಅಧಿಕಾರಕ್ಕೆ ಬರುತ್ತಾರೆ. ವಾಗಿನಗೇರಿಯು ಔರಂಜೇಬನ ವಶವಾದಾಗ ಸುರಪುರದ ಪೀತಾಂಬರಿ ಪಿಡ್ಡನಾಯಕನು ತಪ್ಪಿಸಿಕೊಂಡು ಕೃಷ್ಣಾನದಿಯನ್ನು ದಾಟಿ ಗುಡಗಂಟಿಗೆ ತಲುಪಿದನು. ಗುಡಗುಂಟಿ ಸೋಪಮಪ್ಪನಾಯಕನು ಈತನನ್ನು ರಕ್ಷಿಸಿದನು. ಅಲ್ಲದೇ ಪೀತಾಂಬರಿ ಪಿಡ್ಡ ನಾಯಕನೊಂದಿಗೆ ಸೋಮಪ್ಪನಯಕ ಕನಕಗಿರಿಯ ಉಡಚನಾಯಕನ ರಕ್ಷಣೆಗೆ ತೆರಳಿ ದನು. ಅಷ್ಟೊತ್ತಿಗೆ, ಬಿಜಾಪುರವು ಮೊಘಲ್‌ರ ರಾಜ್ಯದ ಒಂದು ಸುಬೆ (Division) ಯನ್ನಾಗಿ ಮಾಡಲಾಗಿತ್ತು. ಚೀನಕುಲಿಚಖಾನನು ಸುಬೇದಾರನಾಗಿದ್ದನು. ಅವನ ನಂತರ ಈ ಸುಬೆಯು ಅಸಫಜಾಹನ ವಶದಲ್ಲಿತ್ತು. ಅವನು ಗುಡಗುಂಟಿಯಲ್ಲಿ ಹಿಮ್ಮತ್‌ಯಾರ್ ಖಾನ್ ಎಂಬುವವನನ್ನು ಅಧಿಕಾರಿಯನ್ನಾಗಿ ನೇಮಿಸಿದ್ದನು. ಆಗ ಪೀತಾಂಬರಿಪಿಡ್ಡನಾಯಕ, ಹಿಮ್ಮತ್‌ಯಾರ್‌ಖಾನ್‌ನನ್ನು ಹೊಡೆದೋಡಿಸಿ, ಪುನಃ ಸೋಮಸರ್ಜನಾಯಕನಿಗೆ ಗುಡಗುಂಟಿ ಸಂಸ್ಥಾನವನ್ನು ಮರಳಿಸಿದನು.

ಗುಡಗುಂಟಿಯ ಮೇಲೆ ಗಜೇಂದ್ರಗಡದವರು ಆಕ್ರಮಣ ಮಾಡಿದ್ದರಿಂದ ಅಪಾರ ಹಾನಿಯಾಯಿತ್ತು. ಆಗ ಗುಡಗುಂಟಿಯ ಅರಸ, ಸುರಪುರದ ಇಮ್ಮಡಿ ವೆಂಕಟಪ್ಪನಾಯಕನಲ್ಲಿ ಆರ್ಥಿಕ ಸಹಾಯವನ್ನು ಬೇಡಿದನು. ವೆಂಕಟಪ್ಪನಾಯಕ ಸೂರಕ್ಕೆ ಒಂದು ರೂಪಾಯಿಯ ಬಡ್ಡಿಯಂತೆ ೩೦ ಸಾವಿರ ರೂಪಾಯಿಗಳನ್ನು ನೀಡಿದನು. ಗುಡಗುಂಟಿ ಅರಸ ಹಣದ ಸಲುವಾಗಿ ತಮ್ಮ ಭಾಗದ ಹುಣಸಗಿ ಮತ್ತು ೩೭ ಗ್ರಾಮಗಳನ್ನು ಒತ್ತೆ ಹಾಕಿದರು. ಈ ಹಳ್ಳಿಗಳನ್ನು ಬಿಟ್ಟು ಕೊಡಲು ಗುಡಗುಂಟಿ ಅರಸ ವೆಂಕಟಪ್ಪನಾಯಕನನ್ನು ಕೇಳಿಕೊಂಡನು. ವೆಂಕಟಪ್ಪನಾಯಕನು ತಾನು ನೀಡಿದ ಹಣವನ್ನು ಬಡ್ಡಿಸಮೇತ ಮರಳಿಸಿದರೆ ಗ್ರಾಮಗಳನ್ನು ಬಿಡುವುದಾಗಿ ಉತ್ತರಕೊಟ್ಟನು. ಗುಡಗುಂಟಿಯ ಅರಸ, ವೆಂಕಟಪ್ಪನಾಯಕನ ಉತ್ತರಕ್ಕೆ ಸಿಟ್ಟಿಗೆದ್ದನು. ಅರಕೇರಿಯ ೫ ಗ್ರಾಮಗಳು, ಕಕ್ಕೇರಿ, ರಾಜನ ಕೋಳೂರು, ಹುಣಸಗಿ, ಕಲ್ದೇವನಹಳ್ಳಿಗಳನ್ನು ಲೂಟಿಮಾಡಿದರು. ಇದನ್ನು ಕೇಳಿದ ವೆಂಕಟಪ್ಪನಾಯಕ ಸೈನ್ಯದೊಂದಿಗೆ ಗುಡಗುಂಟಿಗೆ ದಾಳಿಮಾಡಿದನು. ಇದನ್ನು ಅರಿತ ಗುಡಗುಂಟಿ ಅರಸ ಗೆಜ್ಜಲಗಟ್ಟಿ, ನೀರಲಕೇರಿ, ರೌಡಲಬಂಡಿಯ ನಾಡಗೌಡರ ಸಹಾಯವನ್ನು ಪಡೆದು ಸುರಪುರದ ಸೈನ್ಯವನ್ನು ಎದುರಿಸಿದರು. ಆದರೆ ಸುರಪುರದವರಿಗೆ ಜಯ ಲಭಿಸಿತು. ಗುಡಗುಂಟಿ ಅರಸ ಕನಕಗಿರಿಗೆ ಓಡಿ ಹೋದನು. ನಂತರ ಕನಕಗಿರಿಯ ಅರಸರ ಮಧ್ಯಸ್ಥಿಕೆಯಿಂದ ಗುಡಗುಂಟಿಯನ್ನು ಸುಪುರದರಸರು ಗುಡಗುಂಟಿಯ ಅರಸರಿಗೆ ಬಿಟ್ಟುಕೊಟ್ಟರು.

ರಾಜಾಸೋಮಲಿಂಗನಾಯಕರಿಗೆ ಮಕ್ಕಳಿರಲಿಲ್ಲ. ಅಷ್ಟೊತ್ತಿಗೆ ನಿಜಾಮ ಸರ್ಕಾರ ಗುಡಗುಂಟಿಯನ್ನು ಆಕ್ರಮಿಸಿಕೊಂಡಿತು. ಆಗ ಅವರ ಆಜ್ಞೆಯಂತೆ ರಾಜಾವೆಂಕಟಪ್ಪನಾಯಕನ ಪತ್ನಿ ರಾಣಿ ಕಾಟಮ್ಮ ಅಧಿಕಾರವನ್ನು ವಹಿಸಿಕೊಂಡಳು. ನಂತರ ಅವರ ಆಜ್ಞೆಯ ಮೇರೆಗೆ ರಾಣಿ ಕಾಟಮ್ಮ ತನ್ನ ಮೈದುನನ ಮಗನಾದ ರಾಜಾ ಜಡಿಸೋಮಪ್ಪನಾಯಕನನ್ನು ದತ್ತಕ ತೆಗೆದುಕೊಂಡಳು. ಆಗ ನಿಜಾಮ ಸರ್ಕಾರ ಸಂಸ್ಥಾನದ ಆಡಳಿತದ ನಿರ್ವಹಣೆಗಾಗಿ ನಾಜಿಮ್ ಎಂಬ ಅಧಿಕಾರಿಯನ್ನು ನೇಮಿಸಿತು. ರಾಜಾಜಡಿಸೋಮಪ್ಪನಾಯಕ ತೀರಿದ ಬಳಿಕ ಈ ಸಂಸ್ಥಾನವನ್ನು ನಿಜಾಮ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ೮ ತಿಂಗಳಿನ ನಂತರ ಈ ಮನೆತನದ ರಾಣಿ ಗೌರಮ್ಮನಿಗೆ ಸಂಸ್ಥಾನದ ಆಡಳಿತವನ್ನು ವಹಿಸಿಕೊಟ್ಟರು. ರಾಣಿ ಗೌರಮ್ಮ ನಿಜಾಮ ಸರ್ಕಾರದ ಅನುಮತಿಯ ಮೇರೆ ತನ್ನ ಮೊಮ್ಮಗನಾದ ರಾಜಾತಿಪ್ಪ ರಾಜ ಜಡಿಸೋಮನಾಯಕ (ಕ್ರಿ.ಶ. ೧೯೦೧-೧೯೫೬ )ನನ್ನು ದತ್ತಕ ತೆಗೆದು ಕೊಂಡಳು. ಈತನೇ ಈ ಸಂಸ್ಥಾನದ ಕೊನೆಯ ಅರಸ. ಈ ಸಂಸ್ಥಾನದ ಅಧೀನದಲ್ಲಿ ೪೪ ಹಳ್ಳಿಗಳಿದ್ದವು. ಈ ಸಂಸ್ಥಾನದ ಕಂದಾಯ ೫೦,೦೦೦ರೂ ಆಗಿತ್ತು. ಅದರಲ್ಲಿ ೭೦೦೦ರೂ. ಗಳನ್ನು ನಿಜಾಂ ಸರ್ಕಾರಕ್ಕೆ ಕೊಡಬೇಕಾಗಿತ್ತು. ಈ ಸಂಸ್ಥಾನದಲ್ಲಿ ಆಡಳಿತದ ಅನುಕೂಲಕ್ಕಾಗಿ ೪ ವಿಭಾಗ ಗಳಿದ್ದವು. ಮೌಲ್, ಫೌಜದಾರಿ, ದಿವಾನಿ ಮತ್ತು ಪೋಲೀಸ್. ಈ ವಿಭಾಗಗಳಿಗೆ ಪ್ರತ್ಯೇಕ ಕಾರ್ಯಗಳಿದ್ದವು. ಈ ಅರಸರು ತಮ್ಮ ಅಧಿಕಾರಾವಧಿಯಲ್ಲಿ ವಿನೋಬಾಭಾವೆಯರ ಭೂದಾನ ಚಳುವಳಿಗೆ ಸ್ಪಂದಿಸಿ ೨೦೦ ಎಕರೆ ಭೂಮಿಯನ್ನು ಭೂದಾನ ಮಾಡಿದ್ದಾರೆ. ದೇಶ ಸ್ವಾತಂತ್ರ್ಯ ಗಳಿಸಿದ ನಂತರ ದೇಶದ ಎಲ್ಲಾ ಅರೊಸತ್ತಿಗೆಗಳು ಭಾರತದ ಒಕ್ಕೂಟದಲ್ಲಿ ಲೀನವಾದರೂ ಹೈದ್ರಾಬಾದ್ ಸಂಸ್ಥಾನದ ಸಮಕಾಲೀನ ಗುಡಗುಂಟಿ ಸಂಸ್ಥಾನವು ೧೯೪೮ ಸೆಪ್ಟಂಬರ್ ೧೮ರವರೆಗೆ ಅಧಿಕಾರವನ್ನು ಬಿಟ್ಟುಕೊಟ್ಟಿರಲಿಲ್ಲ.

ಈ ಮನೆತನದ ಅರಸರು ಪ್ರಜೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದವ ರಾಗಿದ್ದು, ಸರ್ವಧರ್ಮ ಸಹಿಷ್ಣುತ ಗುಣವನ್ನು ಹೊಂದಿದವರಾಗಿದ್ದರು. ಎಲ್ಲ ಧರ್ಮೀಯ ಹಬ್ಬ ಹರಿದಿನಗಳಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದ ಇವರು ಮೊಹರಂ, ಉರುಸು, ದೀಪಾವಳಿ, ಮಹಾನವಮಿ ಹಾಗೂ ಯುಗಾದಿಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಅಂದು ಬಡಬಗ್ಗರಿಗೆ ದಾನ ನೀಡುತ್ತಿದ್ದರು. ತಮ್ಮ ರಾಜಾಶ್ರಯದಲ್ಲಿದ್ದವರಿಗೆ ಜಮೀನನ್ನು ಇನಾಮವಾಗಿ ನೀಡಿದ್ದಾರೆ. ಅವರಲ್ಲಿ ಮುಜುಂದಾರರು, ಜೋಪಾದಾರರು, ಹವಾಲ್ದಾರರು, ಸುಬೇದಾರರು, ಆನೆಮಾವುತರು, ಕಮತರರು, ನೀರು ಹೊರುವವರು, ತಲೆಮಂಡಿ ತೆಗೆಯುವವರು, ಮುರ್ಷದ್ ಖಾಜಿಗಳು ಮುಂತಾದವರು.

ಇವರು ಮನೆದೇವರು ಕಕ್ಕೇರಿಯ ಶ್ರೀ ಸೋಮನಾಥ, ಆರಾಧ್ಯದೇವರು ಗುಡಗುಂಟಿಯ ಶ್ರೀ ಅಮರೇಶ್ವರ ಪ್ರತಿ ಸಂವತ್ಸರದ ಫಾಲ್ಗುಣ ಮಾಸರದ ಶುಕ್ಲ ಪೌರ್ಣಿಮೆಯೆಂದು ಶ್ರೀ ಅಮರೇಶ್ವರನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ಗುಡುಗುಂಟಿ ಸಂಸ್ಥಾನದ ಪಾಳೆಯಗಾರರು ಫಲಪುಷ್ಪಗಳನ್ನು ಅರ್ಪಿಸಿದ ಬಳಿಕವೇ ರಥ ಸಾಗುತ್ತದೆ.

ಇವರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವಾಲಯಗಳನ್ನು ಮಸೀದಿಗಳನ್ನು ಕೋಟೆ ಕೊತ್ತಲುಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ವೆಂಕಟೇಶ್ವರ ಸೋಮನಾಥ ರಾಜಗುರುಮಠ, ಈಶ್ವರ, ರಾಮಲಿಂಗೇಶ್ವರ, ಹನುಮ, ಉಗ್ರಣಪ್ಪ, ಕಳಸ ದೇವಾಲಯಗಳು, ಹುಸೇನ ಬಾಷಾದರ್ಗಾ, ಈದಗಾ ಮಸೀದಿ, ಜಾಮಾಮಸೀದಿಗಳನ್ನು ನಿರ್ಮಿಸಿದ್ದಾರೆ. ಇವರ ಆಸ್ಥಾನದಲ್ಲಿ ಜ್ಯೋತಿಷಿ, ಪುರಾಣಿಕ, ವಿದ್ವಾಂಸರಿಗೆ, ಕಲಾವಿದರಿಗೆ ರಾಜಾಶ್ರಯ ನೀಡಿದ್ದರು. ಅಂದು ಬರಹಗಾರರೂ ಸಾಹಿತಿಗಳೂ ಆಗಿದ್ದ ಶ್ರೀರಾಮಾಚಾರ್ಯ ಜೋಶಿ ಎಂಬುವರು ಇವರ ಆಸ್ಥಾನದಲ್ಲಿದ್ದರು.

ಕಲಾಪ್ರಿಯರಾಗಿದ್ದ ಈ ಪಾಳೆಯಗಾರರು ತಮ್ಮ ಸಂಸ್ಥನಾದಲ್ಲಿ ಅನೇಕ ನಾಟಕಗಳನ್ನು ಆಡಿಸಿದ್ದರಲ್ಲದೇ ಸ್ವತಃ ತಾವೇ ಬೆಳಗಿನವರೆಗೆ ನಾಟಕಗಳನ್ನು ಕುಳಿತು ನೋಡುತ್ತಿದ್ದರು. ಕಲಾವಿದರಿಗೆ ಅನೇಕ ಗೌರವ ಸನ್ಮಾನಗಳನ್ನು ಮಾಡುತ್ತಿದ್ದರು.

ಇಂದು ಈ ಮನೆತನದ ವಂಶಸ್ಥರಾದ ರಾಜಾ ಅಮರಪ್ಪನಾಯಕರು ಗುಡಗುಂಟಿಯ ಅರಮನೆಯಲ್ಲಿ ವಾಸವಾಗಿದ್ದಾರೆ. ಇವರು ಎರಡು ಸಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆ ಯಾಗಿದ್ದರು, ಹಾಗೂ ಲಿಂಗಸುಗೂರು ಭಾಗದ ಪ್ರಜೆಗಳು ಇವರನ್ನು ‘ರಾಜಕೀಯ ಗುರು’ ಎಂದೇ ಕರೆಯುತ್ತಾರೆ. ಸದ್ಯ ಇವರ ಪುತ್ರ ರಾಜಾ ಸೋಮನಾಧನಾಯಕರು ಗುಡಗುಂಟಿ ಗ್ರಾಮಪಂಚಾಯತಿಯ ಅಧ್ಯಕ್ಷರಾಗಿದ್ದಾರೆ.


[1]      ರಂಗರಾಜ ದೇವೇಂದ್ರಪ್ಪ, ಸುರಪುರ ಸಂಸ್ಥಾನ: ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಕ್ಕೆ ಸಾದರಪಡಿಸಿದ ಪಿಹೆಚ್.ಡಿ ಮಹಾಪ್ರಬಂಧ, ೧೯೯೨ ಪು. ೪೦

[2]      ದೇಸಾಯಿ ಪಿ.ಬಿ. ಮದಗಜಮಲ್ಲ, ೧೯೫೧ ಪು. ೭೪

[3]      Nawab Framurz Jung, Shorapur An Ancient Beyder Raj, ೧೯೦೭ PP.೮

[4]      ರಂಗರಾಜ ದೇವೆಂದ್ರಪ್ಪ, ಪೂರ್ವೋಕ್ತ, ೧೯೯೫ ಪು. ೭೨

[5]      ಪುರಷೋತ್ತಮ ಬಿಳಿಮಲೆ, ಚಲುವರಾಜು, ಹಂಪಿ ಜಾನಪದ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬, ಪು. ೧೦೫

[6]      ಸೂರ್ಯನಾರಾಯಣರಾವ್.ಬಿ. (ಮೂಲ) ಬಾಲಸುಬ್ರಹ್ಮಣ್ಯ (ಕನ್ನಡಕ್ಕೆ): ಮರೆಯ ಲಾಗದ ಮಹಾಸಾಮ್ರಾಜ್ಯ, ೨೦೦೦, ಪು. ೬

[7]      ರಾಜಾ ಅಚ್ಯುತದೇವರಾಯ, ಜೆ.ಆರ್. ರಾಮಮೂರ್ತಿ, ಟಿ.ಪರಮೇಶ್ವರಪ್ಪ: ಆನೆಗೊಂದಿ, ಹಂಪಿ ಉತ್ಸವ ಸಮಿತಿ ೧೯೯೮, ಪು. ೯

[8]      ವೀರನಾಯಕ ಹೆಚ್.ವಿ., ಕ್ಷಾತ್ರಾಂಶ ಪ್ರಬೋಧ, ೧೯೮೭ ಪು. ೯

[9]      ಪದ್ಮಪ್ರಸಾದ್ ಎಸ್.ಪಿ., ರತ್ನಗಿರಿ ನಾಯಕರು, ದಕ್ಷಿಣ ಕರ್ನಾಟಕದ ಅರಸು ಮನೆತನಗಳು, ೨೦೦೧, ಪು. ೨೬೪

[10]     ಮೀರಾಸಾಬಿಹಳ್ಳಿ ಶಿವಣ್ಣ, ನಾಯಕನಹಟ್ಟಿ ಪಾಳೆಗಾರರು, ದಕ್ಷಿಣ ಕರ್ನಾಟಕದ ಅರಸು ಮನೆದನಗಳು ೨೦೦೧ ಪು. ೭೯

[11]     ಅಬ್ದುಲ್ ಸತ್ತಾರ್.ಪಿ. ತರೀಕೆರೆ ಪಾಳೆಗಾರರು, ೧೯೯೭ ಪು. ೩

[12]     ಲಕ್ಷ್ಮಣ್ ತೆಲಗಾವಿ, ಕಾಮಗೇತಿ ಅರಸರು ಕೆಲವು ವಿಚಾರಗಳು: ಪ್ರತಿಕ್ರಿಯೆ, ಮಾನವಿಕ ಕರ್ಣಾಟಕ, ೧೯೮೭ ಪು. ೬

[13]     Natalie Tobert (Ed) Anegondi, ೨೦೦೦ Pp. ೧೯೫

[14]     ಲಕ್ಷ್ಮಣ್ ತೆಲಗಾವಿ, ಚಿತ್ರದುರ್ಗ ನಾಯಕ ಅರಸರು: ರಾಜಕೀಯ ಚಿತ್ರ, ದವನಸಿರಿಸ್ಮರಮಸಂಚಿಕೆ, ೧೯೯೨, ಪು. ೮೩

[15]     Sewell Robert, A Forgotten Empire, ೧೯೮೮, Pp. ೨೩೪

[16]     ಹರ್ತಿಕೋಟೆ ವೀರೇಂದ್ರಸಿಂಹ, ತೇಜಸ್ವಿ ಕಟ್ಟಿಮನಿ (ಸಂ): ಘಟ್ಟಿಹೊಸಹಳ್ಳಿ ಗಟ್ಟಿಗ, ೨೦೦೨ ಪು. ೨೫