ಎತ್ತಿನ ಹಬ್ಬ:

ಬೇಡರು ಪಶುಪಾಲಕರಾಗಿರುವುದರಿಂದ ಎತ್ತಿನ ಹಬ್ಬವನ್ನು ಮಾಡುತ್ತಾರೆ. ಇದು ಮ್ಯಾಸಬೇಡರಲ್ಲಿ ವಿಶಿಷ್ಟವಾಗಿ ಆಚರಣೆಯಾಗುತ್ತದೆ. ಎತ್ತಿನಹಬ್ಬ ಎಂದರೆ ಇಲ್ಲಿ ದನ-ಕರುಗಳ ಹಬ್ಬೆಂದೇ ಅರ್ಥ ಇದೆ. ಬಸವನ ಹಬ್ಬವನ್ನು ಬೇಡರಾಗಿ ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿರುವ ನಾಯಕ ಜನಾಂಗದವರಲ್ಲಿ ಉತ್ತರ ಕರ್ನಾಟಕದ ಬೇಡರು ಕಾರಹುಣ್ಣಿಮೆ ದಿನ ಆಚರಿಸದರೆ ಅದೇ ಮೈಸೂರು ಕರ್ನಾಟಕದ ಜನರು ಸಂಕ್ರಾಂತಿ ಹಬ್ಬದ ದಿನ ಆಚರಣೆ ಮಾಡುತ್ತಾರೆ. ಆದರೆ ಮಧ್ಯದಲ್ಲಿರುವ ಚಿತ್ರದುರ್ಗದ ಮ್ಯಾಸನಾಯಕರು ಇದನ್ನೇ ತುಂಬಾ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ.

ಮ್ಯಾಸಬೇಡರು ತಮ್ಮ ಮನೆದೇವರುಗಳಾದ ಗಾದ್ರಿಪಾಲನಾಯಕ, ಜಗಳೂರಜ್ಜ, ಯರಗಟನಾಯಕ, ಕಂಪಳರಾಯ, ಇನ್ನು ಮುಂತಾದ ದೇವರುಗಳಿಗೆ ದನ-ಕರುಗಳನ್ನು ದೇವರ ಹೆಸರಿನಲ್ಲಿ ಬಿಟ್ಟಿರುತ್ತಾರೆ. ಈ ದನಕರುಗಳನ್ನು ಕಣ್ಣಿ ಹಾಕಿ ಕಟ್ಟುವುದಿಲ್ಲ. ಅವುಗಳನ್ನು ರಪ್ಪದಲ್ಲಿ ಬಿಟ್ಟಿರುತ್ತಾರೆ. ಆ ರಪ್ಪವನ್ನು ದೇವರ ಎತ್ತಿನ ರಪ್ಪ ಎಂದು ಕರೆಯುತ್ತಾರೆ. ಆ ದನ-ಕರುಗಳನ್ನು ನೋಡಿಕೊಳ್ಳಲು “ಕಿಲಾರಿ” ಯನ್ನು ನೇಮಕ ಮಾಡುತ್ತಾರೆ. ಕಿಲಾರಿ ಎಂದರೆ ಗೋವುಗಳನ್ನು ಕಾಯುವವನು. ಕುಲದ ಹಿರಿಯ ನಾಯಕರು ಮನೆದೇವರ ಸನ್ನಿಧಿಯಲ್ಲಿ ಸೇರಿಕೊಂಡು ತಮ್ಮ ಕುಲದ ವ್ಯಕ್ತಿಯನ್ನು ಕಿಲಾರಿಯಾಗಿ ನೇಮಕ ಮಾಡಿಕೊಳ್ಳುತ್ತಾರೆ. ಆ ವ್ಯಕ್ತಿಗೆ ಶಾಸ್ತ್ರೋಕ್ತವಾಗಿ ಮುದ್ರೆಯನ್ನು ಒತ್ತುತ್ತಾರೆ. ಅಂದು ಆ ವ್ಯಕ್ತಿಗೆ ತಲೆಗೆ ಬಿಳಿಯ ರುಮಾಲು, ಹೆಗಲಿಗೆ ಕರಿಕಂಬಳಿ, ಸೊಂಟಕ್ಕೆ ಬಿಳಿಯ ನಿಕ್ಕರ್ ಉಡಿಸುತ್ತಾರೆ. ಕೈಗೆ ಬೆತ್ತವನ್ನು ಕೊಡುತ್ತಾರೆ. ಇದು ಮನೆ ದೇವರ ನಾಗಮುರಿ ಬೆತ್ತವನ್ನು ಪ್ರತಿಬಿಂಬಿಸುತ್ತದೆ. ಆ ವ್ಯಕ್ತಿ ಕಿಲಾರಿಯಾದ ಮೇಲೆ ತುಂಬಾ ಕಟ್ಟುನಿಟ್ಟಾಗಿ ಇರಬೇಕು. ಕಿಲಾರಿ ಮದುವೆ ಆಗಿರುತ್ತಾನೆ. ಇಲ್ಲಿ ಅವನ ಹೆಂಡತಿಯ ಪಾತ್ರವು ಮುಖ್ಯವಾಗುತ್ತದೆ. ಅವಳು ಎಷ್ಟೋ ದಿನ ಗಂಡನಾದ ಕಿಲಾರಿಯನ್ನು ಬಿಟ್ಟು ಇರಬೇಕಾಗುತ್ತದೆ. ಕಿಲಾರಿಯ ವಾಸ ಹೆಚ್ಚಿನ ಪಾಲು ದೇವರ ಎತ್ತುಗಳ ರಪ್ಪವೇ ಅಗಿರುತ್ತದೆ. ಕಿಲಾರಿಯು ಎರಡು ವಾರಕ್ಕೋ, ಮೂರು ವಾರಕ್ಕೋ ಒಂದೂ ಸಾರಿ ಮನೆಗೆ ಬಂದು ಹೋಗುತ್ತಾನೆ. ಎಲ್ಲಾ ಕುಲಸ್ಥರು ಸುಗ್ಗಿಯ ಕಾಲದಲ್ಲಿ ಗೌರವಪೂರ್ವಕವಾಗಿ ಜೀವನ ನಿರ್ವಹಣೆಗೆ ಕಾಳು-ಕಡಿಗಳನ್ನು ಕೊಡುತ್ತಾರೆ. ಅವರು ಕಿಲಾರಿಯನ್ನು ದೇವರ ಸಮಾನ ನೋಡುತ್ತಾರೆ. ದೇವರ ಎತ್ತುಗಳನ್ನೇ ಪ್ರಧಾನವಾಗಿಟ್ಟುಕೊಂಡು ದೇವರ ಎತ್ತಿನ ಜಾತ್ರೆ ಮಾಡುತ್ತಾರೆ. ಇಂದಿಗೂ ಚಿತ್ರದುರ್ಗ ತಾಲೂಕಿನ ಬೆಳಗಟ್ಟಿ ಗ್ರಾಮದ ಮ್ಯಾಸ ಬೇಡರು ಈ ಹಬ್ಬವನ್ನು ಮಾಡುತ್ತಾರೆ. ಊರಬೇಡರೂ ಈ ಹಬ್ಬವನ್ನು ಆಚರಿಸುತ್ತಾರೆ.

ಬೆಳಗಟ್ಟದಲ್ಲಿನ ಮ್ಯಾಸ ಬೇಡರು ಅಲ್ಲಿನ ಪ್ರಮುಖ ದೇವರಾದ ಯರಗಟನಾಯಕನನ್ನು ಹೊರಡಿಸಿಕೊಂಡು ಊರ ಸಮೀಪದ ಗುಡ್ಡಕ್ಕೆ (ದೇವರ ಎತ್ತಿನ ರಪ್ಪ ಇರುವ ಜಾಗ) ಹೋಗಿ ಅಲ್ಲಿ ಎರಡು ದಿನ ವಾಸ್ತವ್ಯ ಮಾಡುತ್ತಾರೆ. ಅವರು ದೇವರ ಎತ್ತುಗಳನ್ನು ಕಿಲಾರಿಯ ನೇತೃತ್ವದಲ್ಲಿ ಪೂಜಿಸುತ್ತಾರೆ. ಹರಕೆ ಹೊತ್ತು ಬಂದ ಭಕ್ತಾದಿಗಳು ಮನೆಯಿಂದ ರಟ್ಟಬುತ್ತಿಯನ್ನು ದೇವರ ಎತ್ತುಗಳಿಗೆ ಮಾಡಿಕೊಂಡು ತಂದಿರುತ್ತಾರೆ. ವಿಶೇಷವಾಗಿಯೇ ಸಜ್ಜೆ ರೊಟ್ಟಿಯನ್ನು ಮಹಿಳೆಯರು ಮಾಡಿಕೊಂಡು ತಂದಿರುತ್ತಾರೆ. ಈ ದೇವರ ಹತ್ತಿನ ಜಾತ್ರೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲವಾರ ನಡೆಯಸುತ್ತದೆ. ಯರಗಟನಾಯಕನ ಒಕ್ಕಲೋರು ಬಂದು ಇಲ್ಲಿ ಸೇರುತ್ತಾರೆ. ಅಲ್ಲಿ ದೇವರ ಪೂಜೆಯನ್ನು ಮಾಡುವಾಗ ಮತ್ತೈದೆಯರು ಆರತಿ ಬೆಳಗುತ್ತಾರೆ. ಅವರು ದೇವರನ್ನು ಸೋಬಾನೆಯ ಮೂಲಕ ಕೊಂಡಾಡುತ್ತಾರೆ. ಮಕ್ಕಳು ಆಗದೆ ಇರುವ ಹೆಂಗಸರು ಒಂದು ದಿನರಾತ್ರಿ ದೇವರ ಎತ್ತುಗಳ ರಪ್ಪದಲ್ಲಿ ನಿದ್ರೆಮಾಡುತ್ತಾರೆ. ಜೊತೆಗೆ ಬೇರೆ ಏನಾದರೂ ಕಾಯಿಲೆ ಇದ್ದಾಗಲೂ ಹೊಗಿ ರಪ್ಪದಲ್ಲಿ ಮಲಗುತ್ತಾರೆ. ಅವರ ದೇವರ ಮೇಲಿನ ಅತಿಯಾದ ನಂಬಿಕೆಯನ್ನು ಇದು ಬೆರಳು ಮಾಡಿ ತೋರಿಸುತ್ತದೆ. ದೇವರ ಎತ್ತಿನ ರಪ್ಪದಲ್ಲಿ ಒಂದು ರಾತ್ರಿ. ಹೆಂಗಸರು ನಿದ್ರೆ ಮಾಡಿ ಬಂದರೆ ತುಂಬಾ ಒಳ್ಳೆಯದಾಗುತ್ತದೆ ಎಂಬುದು ಬಲವಾದ ನಂಬಿಕೆ. ಇಂದಿಗೂ ಪ್ರತಿವರ್ಷ ಈ ಭಾಗದಲ್ಲಿ ಎತ್ತಿನಹಬ್ಬ ಮಾಡುತ್ತಾರೆ. ಈ ಜಾತ್ರೆಗೆ ನೆಂಟರಿಷ್ಟರು, ಬಂಧು-ಬಳಗ ಎಲ್ಲಾ ಸೇರುತ್ತಾರೆ. ಜೊತೆಗೆ ಊರಿನಲ್ಲಿರುವ ಬೇರೆ ಬೇರೆ ಜನಾಂಗದವರು ಈ ಹಬ್ಬವನ್ನು ಆಚರಿಸುತ್ತಾರೆ. ಕೆಳವರ್ಗದವರಲ್ಲಿನ ಮಾದಿಗರು, ಬೋವಿಗಳು, ಚಲವಾದಿಗಳು ಈ ಹಬ್ಬವನ್ನು ಮಾಡುತ್ತಾರೆ. ಅದರಲ್ಲೂ ಮಾದಿಗ ಜನಾಂಗದವರು ವಿಶೇಷವಾಗಿ ದೇವರ ಎತ್ತಿನ ಹಬ್ಬವನ್ನು ಆಚರಣೆ ಮಾಡುತ್ತಾರೆ.

ದೇವರ ಎತ್ತಿನ ಜಾತ್ರೆಯಲ್ಲಿ ಕಿಲಾರಿಯು ದೇವರ ಎತ್ತು-ಹಸುಗಳಲ್ಲಿ ಪ್ರಮುಖ ಹೋರಿಗೆ ಕಾಲಿಗೆ ಗಗ್ರ, ಮೈಯಿಗೆ ಜೂಲು, ಕೊರಳಿಗೆ ಘಂಟೆಸರ, ಕೋಡಿಗೆ ಕೋಡಣಸು ಹಾಕಿ ಹೂವಿನ ಅಲಂಕಾರ ಮಾಡಿ ದೇವರ ರೀತಿಯಲ್ಲಿ ಪೂಜಿಸುತ್ತಾನೆ. ಅಲ್ಲಿ ಸೇರಿರುವ ಭಕ್ತಾದಿಗಳು ಪೂಜೆ ಮಾಡಿ ಹಣ್ಣು-ಕಾಯಿ ಮಾಡಿಸುತ್ತಾರೆ. ಹೆಂಗಸರು ಆ ದೇವರ ಎತ್ತಿಗೆ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಹೀಗೆ ಅಲಂಕಾರ ಮಾಡಿರುವ ದೇವರ ಎತ್ತನ್ನು ಇನ್ನಿತರ ಎತ್ತುಗಳ ಗುಂಪಿನಲ್ಲಿ ಓಡಿಸುತ್ತಾರೆ. ಆ ದೇವರ ಎತ್ತು ಕಾಲಿಗೆ ಗಗ್ರ ಧರಿಸಿದಾಗ ಅದು ದೇವರ ಸ್ವರೂಪವೇ ಎಂದು ಭಕ್ತಾದಿಗಳು ಭಾವಿಸಿಕೊಳ್ಳುತ್ತಾರೆ. ಆ ದೇವರ ಎತ್ತು ಓಡುವುದನ್ನು ನೋಡುವುದೇ ಒಂದು ರೋಮಾಂಚನವಾದ ಅನುಭವ. ಹೊಸದಾಗಿ ಮದುವೆಯಾದ ಹೆಂಗಸು ತನ್ನ ಗಂಡನೊಂದಿಗೆ ಜಾತ್ರೆಗೆ ಬರಲೇಬೇಕು ಎಂಬುದು ರೂಢಿಯಾಗಿದೆ. ಈ ಹಬ್ಬವನ್ನು ಮ್ಯಾಸಬೇಡರು ಹೆಚ್ಚಾಗಿ ವಾಸಿಸುವ ನನ್ನಿವಾಳ, ಗಂಜಿಗಟ್ಟಿ, ಕಂಪಳ ದೇವರಹಟ್ಟಿ, ಮುಚ್ಚುಗುಂಟೆ ಇನ್ನೂ ಮುಂತಾದ ಕಡೆ ಆಚರಿಸುತ್ತಾರೆ.

ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬೇರೆ ರೀತಿ ಈ ಹಬ್ಬವನ್ನು ಆಚರಿಸುತ್ತಾರೆ. ಗುಲ್ಬರ್ಗದ ಶೋರಾಪುರ, ಬೆಳಗಾವಿಯ ಯಮಕನ ಮರಡಿ, ಬಳ್ಳಾರಿ ಹಾಗೂ ರಾಯಚೂರು, ಧಾರವಾಡ, ಗದಗ, ಹಾವೇರಿ ಇನ್ನೂ ಮುಂತಾದ ಉತ್ತರಕರ್ನಾಟಕದ ಬೇಡರು ಕಾರಹುಣ್ಣಿಮೆ ಎನ್ನು ಹಬ್ಬವನ್ನು ಆಚರಿಸುತ್ತಾರೆ. ಆ ಹಬ್ಬದಲ್ಲಿ ಕರ್ನಾಟಕದ ಮಧ್ಯಭಾಗದಲ್ಲಿನ ಮ್ಯಾಸಬೇಡರು ಆಚರಿಸುವ ಎತ್ತಿನ ಹಬ್ಬದಲ್ಲಿ ಹೋರಿಗೆ ಅಲಂಕಾರ ಮಾಡುವಂತೆ ಅವರು ಅಲ್ಲಿನ ಹೋರಿಗೆ ಅಲಂಕಾರ ಮಾಡಿ ಓಡಿಸುತ್ತಾರೆ. ಇದು ಅಲ್ಲಿನ ಒಂದು ವಿಶೇಷ ಹಬ್ಬವಾಗಿದೆ. ಹಾಗೆಯೇ ಮೈಸೂರು, ಚಾಮರಾಜನಗರ, ಹಾಸನ ಭಾಗಗಳಲ್ಲಿ ಹೋರಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಸಂಕ್ರಾಂತಿ ಹಬ್ಬವನ್ನು ಮಾಡುತ್ತಾರೆ. ಹೀಗೆ ಬೇಡರ ಸಂಸ್ಕೃತಿಯಲ್ಲಿ ಎತ್ತಿನ ಹಬ್ಬ ವಿಶೇಷವಾಗಿ ಆಚರಣೆಗೊಳ್ಳುತ್ತಿದೆ.

ಹಿರಿಯ ಹಬ್ಬ:

ಆಶ್ವಯುಜ ಮಾಸದಲ್ಲಿ ಈ ಹಬ್ಬ ಬರುತ್ತದೆ. ಬೇಡರ ಪ್ರತಿಯೊಂದು ಕುಟುಂಬದಲ್ಲಿ ಈ ಹಬ್ಬ ಮಾಡುತ್ತಾರೆ. ತಮ್ಮ ತಮ್ಮ ಕುಟುಂಬಗಳಲ್ಲಿ ಮರಣ ಹೊಂದಿದ ಹಿರಿಯ ಸದಸ್ಯರನ್ನು ನೆನಪು ಮಾಡಿಕೊಳ್ಳುವುದು ಇಲ್ಲಿನ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ತಮ್ಮ ಸಾಂಸ್ಕೃತಿಕ ವೀರರಿಗೂ ಪೂಜೆ ಸಲ್ಲಿಸುತ್ತಾರೆ. ಪರಂಪರೆಯುದ್ದಕ್ಕೂ ತಮ್ಮೊಡನೆ ಬಂದ ಆಯುಧಗಳು, ನಾಗಮುರಿಬೆತ್ತ, ಬಿಲ್ಲು, ಬಾಣ, ಭರ್ಜಿ, ಕಡಾರಿ, ಕತ್ತಿಯನ್ನು ಪೂಜಿಸುವರು. ಇದು ಪ್ರಮುಖವಾಗಿ ಮ್ಯಾಸಬೇಡರಲ್ಲಿ ಕಂಡು ಬರುತ್ತದೆ. ಕರ್ನಾಟಕದ ಎಲ್ಲಾ ಬೇಡರು ಈ ಹಬ್ಬವನ್ನು ಮಾಡುತ್ತಾರೆ. ವಾಲ್ಮೀಕಿ ಮತ್ತು ಬೇಡರು ದೀಪಾವಳಿ ಹಬ್ಬ ದಿನ ಈ ಹಿರಿಯರ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಕಿರಿದಿಹುಣ್ಣಿಮೆಯಲ್ಲಿ ಮಾಡುತ್ತಾರೆ. ಹಾಗೆಯೇ ಪರಿವಾರದವರು ಪಕ್ಷ ಅಂತ ದಸರಾ ಹಬ್ಬದ ಸಮಯದಲ್ಲಿ ಆಚರಿಸುತ್ತಾರೆ. ಅವರು ಪಕ್ಷದ ಹಬ್ಬದಲ್ಲಿ ಮಾಂಸದ ಊಟವನ್ನು ಮಾಡಿ ಹಿರಿಯರ ಹಬ್ಬವನ್ನು ಮಾಡುತ್ತಾರೆ. ಅದರಲ್ಲೂ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ಪರಿವಾರದವರು ಪಕ್ಷದ ಹಬ್ಬವನ್ನು ತುಂಬಾ ಜೋರಾಗಿ ಮಾಡುತ್ತಾರೆ. ಆ ಹಬ್ಬದಲ್ಲಿಯೂ ಹಿರಿಯರನ್ನು ನೆನಪು ಮಾಡಿಕೊಳ್ಳುವುದೇ ಪ್ರಧಾನ ಅಂಶವಾಗಿರುತ್ತದೆ. ಈ ಹಬ್ಬಗಳಲ್ಲಿ ಬೇಡರ ಮನೆಗಳಲ್ಲಿ ಹಿರಿಯ ಸೊಸೆ ಒಂದ್ಹೊತ್ತು ಉಪವಾಸ ಇರಬೇಕು. ಅವಳು ಉಪವಾಸ ಇದ್ದುಕೊಂಡೇ ಅಂದಿನ ಅಡಿಗೆ ಮಾಡಬೇಕು. ಆ ದಿನ ಮನೆದೇವರ ನೆನೆಯುತ್ತಾ, ಹಿರಿಯ ತಲೆಮಾರಿನ ಮರಣಹೊಂದಿದ ವ್ಯಕ್ತಿಗಳನ್ನು ಹೆಚ್ಚಿನದಾಗಿ ನೆನಪು ಮಾಡಿಕೊಳ್ಳುತ್ತಾರೆ. ಮನೆಯ ಸದಸ್ಯರೆಲ್ಲರೂ ಈ ಹಬ್ಬದಲ್ಲಿ ಪಾಲ್ಗೊಳ್ಳುವರು. ಹಿರಿಯರನ್ನು ಪೂಜಿಸಲು ದೇವರ ಸನ್ನಿಧಿಯಲ್ಲಿ ಎರಡು ಮಣ್ಣಿನ ಮಡಿಕೆ (ಗಂಗೆ ತುಂಬಿದ)ಗೆ ಅಲಂಕಾರ ಮಾಡುತ್ತಾರೆ. ಒಂದು ಮಡಿಕೆಗೆ ಅಜ್ಜ ಧರಿಸುವ ಬಟ್ಟೆಗಳನ್ನು ಉಡಿಸಿದರೆ (ಸುತ್ತಿದರೆ), ಮತ್ತೊಂದು ಮಡಿಕೆಗೆ ಅಜ್ಜಿ ಧರಿಸುವ ಬಟ್ಟೆ ಸುತ್ತುತ್ತಾರೆ. ಮನೆಯ ಹಿರಿಯ ಸೊಸೆಯ ಮಾಂಗಲ್ಯಸರವನ್ನು ಅಜ್ಜಿಯನ್ನಾಗಿ ಅಲಂಕಾರ ಮಾಡಿರುವ ಮಣ್ಣಿನ ಮಡಿಕೆಗೆ ಹಾಕುತ್ತಾರೆ. ಹೀಗೆ ಮರಣ ಹೊಂದಿದ್ದ ಮನೆಯ ಹಿರಿಯರನ್ನು ದೇವರ ಸ್ವರೂಪದಲ್ಲಿ ಆರಾಧನೆ ಮಾಡುತ್ತಾರೆ. ಇಲ್ಲಿ ಕುಟುಂಬದಲ್ಲಿನ ಹಿರಿಯ ಸೊಸೆಯ ಪಾತ್ರ ಬಹಳ ಮುಖ್ಯವಾಗುತ್ತದೆ. ಅಂದು ಅಣ್ಣ-ತಮ್ಮಂದಿರು ನೆಂಟರಿಷ್ಟರು ಎಲ್ಲಾ ಒಟ್ಟಿಗೆ ಸೇರಿಕೊಂಡು ಮಾಡಿದ ಸಿಹಿ ಅಡಿಗೆಯನ್ನು ಒಟ್ಟಿಗೆ ಸೇವಿಸುತ್ತಾರೆ. ಇದು ಬೇಡರಲ್ಲಿ ಪ್ರಮುಖ ಹಬ್ಬವಾಗಿದೆ. ಈ ಹಬ್ಬಕ್ಕೆ ಮನೆಯ ಹೆಣ್ಣು ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬಂದು ಹೊಸಬಟ್ಟೆ ತೊಡಿಸಿ ಮಡಿಲಿಗೆ ಒಡ್ಲಕ್ಕೆ ಹಾಕುತ್ತಾರೆ. ಇದು ಪರಂಪರೆಯ ಉದ್ದಕ್ಕೂ ನಡೆದು ಬಂದ ನಂಬಿಕೆ ಮತ್ತು ಆಚರಣೆಯಾಗಿದೆ.

ಮಾರಮ್ಮನ ಹಬ್ಬ:

ಚಿತ್ರದುರ್ಗದ ಭಾಗದಲ್ಲಿ ಇರುವ ಮ್ಯಾಸಬೇಡರು ಮತ್ತು ಊರಬೇಡರು ಈ ಹಬ್ಬವನ್ನು ತಪ್ಪದೆ ಆಚರಣೆ ಮಾಡುತ್ತಾರೆ. ಮಾರಮ್ಮ ಹೆಣ್ಣುದೇವತೆ ಸಾಮಾಜಿಕ ಸಂದರ್ಭದಲ್ಲಿ ಮಕ್ಕಳಿಗೆ ದಡಾರದಮ್ಮ, ಅಮ್ಮ, ಪ್ಲೇಗು, ಸಿಡುಬುಗಳು ಏಳುತ್ತಿದ್ದವು. ಇಂತಹ ಅಮ್ಮಗಳ ಆದಿದೇವತೆ ಈ ಮಾರಮ್ಮ ಎಂಬ ನಂಬಿಕೆ ಜನಪದರಲ್ಲಿ ಬಲವಾಗಿ ಬೇರೂರಿದೆ. ಚಿತ್ರದುರ್ಗ, ತುಮಕೂರು, ದಾವಣಗೆರೆ ಭಾಗದ ಬಹುತೇಕ ಬೇಡರು ಮಕ್ಕಳಿಗೆ ಏನಾದರೂ ಈ ರೀತಿಯ ಪಿಡುಗುಗಳು ಸಂಭವಿಸಿದರೆ ಮಾರಮ್ಮನಿಗೆ ಮೀಸಲು ಕಟ್ಟಿಕೊಳ್ಳುತ್ತಾರೆ. ಅಂದರೆ, ಬರುವ ವರ್ಷದ ಮಾರಮ್ಮನ ಹಬ್ಬದಲ್ಲಿ ಮಕ್ಕಳಿಗೆ ಬೇವಿನ ಸೀರೆ ಸೇವೆ ಮಾಡಿಸುತ್ತೇವೆ ಅಂತ ಹರಕೆ ಮಾಡಿಕೊಳ್ಳುತ್ತಾರೆ. ಇದು ಪ್ರಮುಖವಾಗಿ ಮ್ಯಾಸಬೇಡರು ಮತ್ತು ಊರಬೇಡರಲ್ಲಿ ಕಂಡು ಬರುತ್ತದೆ. ಹಾಗೆಯೇ ಮನೆಯ ಹೆಂಗಸರು ಆರೋಗ್ಯವಾಗಿ ಇಲ್ಲದೆ ಇದ್ದರೆ ಅಂತಹ ಸಮಯದಲ್ಲಿಯೂ ಮಾರಮ್ಮನಿಗೆ ಬೇವಿನ ಸೀರೆ ಉಡಿಸುತ್ತೇವೆ ಎಂದು ಮೀಸಲು ಕಟ್ಟಿಕೊಳ್ಳುತ್ತಾರೆ. ಸಂಪೂರ್ಣ ಮೂಢನಂಬಿಕೆಗಳಿಗೆ ಬದ್ಧರಾಗಿ ಬದುಕುವ ಅನಕ್ಷರಸ್ಥ ಬೇಡರ ಸಮುದಾಯದಲ್ಲಿ ಈ ಆಚರಣೆಯನ್ನು ನೋಡುತ್ತೇವೆ. ಮಾರಮ್ಮನ ಹಬ್ಬ ಚಿತ್ರದುರ್ಗ ಭಾಗದ ಬೇಡರಲ್ಲಿ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ.

ಮಾರಮ್ಮನ ಮೂಲ ಸ್ಥಾನ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಗೌರಸಮುದ್ರದಲ್ಲಿದೆ. ಹಾಗಾಗಿ ಈ ಹೆಣ್ಣು ದೇವತೆಯನ್ನು ಗೌರಸಮುದ್ರದ ಮಾರಮ್ಮ ಎಂದು ಕರೆಯುತ್ತಾರೆ. ಗೌರಸಮುದ್ರದಲ್ಲಿ ಮಾರಮ್ಮನ ಜಾತ್ರೆ ಶ್ರಾವಣ ಮುಗಿದ ನಂತರ ಬರುವ ಮೊದಲನೆ ಮಂಗಳವಾರ ನಡೆಯುತ್ತದೆ. ನಂತರದ ಮೂರು ವಾರಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬೇಡರು ಆಚರಿಸುತ್ತಾರೆ. ಬೇರೆ ಜನಾಂಗದವರು ಮಾರಮ್ಮನ ಹಬ್ಬ ಮಾಡುತ್ತಾರೆ. ಮೊಳಕಾಮ್ಲೂರು ಮತ್ತು ಚಳ್ಳಕೆರೆ ತಾಲೂಕಿನ ಬೇಡರುಗಳಲ್ಲಿ ಈ ದೇವರ ಹೆಸರಿನ ಕುಲದವರು ಇದ್ದಾರೆ. ಅವರನ್ನು ಮಾರಮ್ಮನ “ಬುಟಗಲೋರು” ಅಂತ ಕರೆಯುತ್ತಾರೆ. ಇವರು ತುಂಬ ಭಕ್ತಿಯಿಂದ ಮಾರಮ್ಮನ ಹಬ್ಬ ಮಾಡುತ್ತಾರೆ.

ಮಾರಮ್ಮನ ಹಬ್ಬದ ದಿನ ಬೇಡರ ಹೆಂಗಸರ ಪಾತ್ರ ಮುಖ್ಯವಾಗುತ್ತದೆ. ಅಂದು ಮನೆಯ ಹಿರಿಯ ಸೊಸೆಯಂದಿರು ಒಂದ್ಹೊತ್ತಿನ ಉಪವಾಸವಿದ್ದು ಮಡಿಯಾಗಿ ಮಾರಮ್ಮನಿಗೆ ಬೇಳೆ, ಅಕ್ಕಿ, ಕಾಯಿ, ಹಣ್ಣು, ಊದಿನಕಡ್ಡಿ ಕರ್ಪೂರ, ಹೂವು, ಬೇವಿನ ಸೊಪ್ಪು ಹಾಗೂ ಎಡೆ ತೆಗೆದುಕೊಂಡು ದೇವರ ಸನ್ನಿಧಿಗೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ. ಜೊತೆಗೆ ಹರಕೆ ಹೊತ್ತ ಮಕ್ಕಳು, ಹೆಂಗಸರು ಬೇವಿನ ಸೀರೆ ಧರಿಸಿ, ಬರುತ್ತಾರೆ. ಅವರು ದೇವಸ್ಥಾನವನ್ನು ಮೂರು ಸಾರಿ ಸುತ್ತಿ ಆಮೇಲೆ ಸ್ವಲ್ಪ ದೂರಕ್ಕೆ ಹೋಗಿ ಬೇವಿನ ಸೀರೆ ಕಳಚಿ ಹೊಸಬಟ್ಟೆ ಧರಿಸಿ ಮನೆಗೆ ಬಂದು ಒಂದ್ಹೊತ್ತು ಊಟ ಬಿಡುತ್ತಾರೆ. ಇದು ಇಂದಿಗೂ ಸಾಂಪ್ರದಾಯಿಕ ಕುಟುಂಬವರ್ಗದವರಲ್ಲಿ ನಡೆಯುತ್ತದೆ. ಇದು ಒಂದು ನಂಬಿಕೆ ಅಷ್ಟೆ. ಮಾರಮ್ಮ ಮಾಂಸಾಹಾರಿ ಆಗಿರುವುದರಿಂದ ಬೇಡರು ಮೇಕೆ (ಆಡು) ಕುರಿಗಳನ್ನು ಕಡಿದು ಸಂತೋಷದಿಂದ ಹಬ್ಬ ಮಾಡುತ್ತಾರೆ. ಹಬ್ಬದ ದಿನ ಮಹಿಳೆಯರು ಭಕ್ತಿಯಿಂದ ದೇವರ ಸ್ತುತಿ ಮಾಡುತ್ತಾ ಕೆಲಸದಲ್ಲಿ ನಿರತರಾಗಿರುತ್ತಾರೆ.

ಕರ್ನಾಟಕದ ಬೇರೆ ಭಾಗದಲ್ಲಿರುವ ಬೇಡರು ಮಾರಮ್ಮನ ಹಬ್ಬ ಮಾಡುತ್ತಾರೆ. ಮೈಸೂರು ಭಾಗದ ಪರಿವಾರದವರು ಮಾರಮ್ಮನ (ಮಾರಿ) ಜಾತ್ರೆಯನ್ನು ಏಪ್ರಿಲ್‌ಮೇ ತಿಂಗಳಲ್ಲಿ ಆಚರಿಸುತ್ತಾರೆ. ಅದೇ ರೀತಿ ಬಳ್ಳಾರಿ ಭಾಗದಲ್ಲಿಯೂ ಆಚರಿಸುತ್ತಾರೆ. ಪ್ರಾದೇಶಿಕವಾಗಿ ವಾಸಿಸುತ್ತಿರುವ ಬೇಡರು ವಿವಿಧ ರೀತಿಯ ಹಬ್ಬ-ಹರಿದಿನಗಳನ್ನು ಮಾಡುತ್ತಾ ಬಂದಿದ್ದಾರೆ. ಇವರು ಬೇರೆ ಜಾತಿ, ಜನಾಂಗ, ಧರ್ಮದ ಜನರ ಜೊತೆಗೆ ಬದುಕ್ತಾ ಇರುವುದರಿಂದ ಅವರು ಆಚರಿಸುವ ಹಬ್ಬಗಳನ್ನು ಮಾಡುತ್ತಾರೆ. ಹಾಗಾಗಿ ಪ್ರತಿಯೊಂದು ಜಿಲ್ಲೆಯ ಬೇಡರು ಅಲ್ಲಿನ ಗ್ರಾಮದೇವತೆಗಳನ್ನು, ಸುತ್ತ ಮುತ್ತಲಿನ ವಿವಿಧ ರೀತಿಯ ಹೆಸರಿನ ದೇವರನ್ನು ಪೂಜೆ ಮಾಡುತ್ತಾರೆ. ಬೇಡರು ಹಿಂದೂ ಧರ್ಮದವರಾಗಿರುವುದರಿಂದ ಬಹುದೇವರ ಆರಾಧನೆಯನ್ನು ಮಾಡುತ್ತಾ ಇದ್ದಾರೆ. ಧರ್ಮಸ್ಥಳದ ಮಂಜುನಾಥ, ತಿರುಪತಿ ತಿಮ್ಮಪ್ಪ, ಮಂತ್ರಾಲಯದ ರಾಘವೇಂದ್ರ, ಹೀಗೆ ಇನ್ನೂ ಹತ್ತು ಹಲವು ಪುಣ್ಯಕ್ಷೇತ್ರಗಳಿಗೆ ಹೋಗಿ ಪೂಜೆ ಮಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿ ಬೇಡರ ಮೇಲೆ ಸಾಕಷ್ಟು ದೇವರ ಪ್ರಭಾವ ಆಗಿರುತ್ತದೆ. ಚಿತ್ರದುರ್ಗದ ಬೇಡರು ಇತ್ತೀಚೆಗೆ ಅಜ್ಜಯ್ಯ ದೇವರ ಆರಾಧಕರಾಗಿದ್ದಾರೆ. ಈ ದೇವರ ಮೂಲ ಸ್ಥಾನ ಉಕ್ಕಡಗಾತ್ರಿ, ಅಜ್ಜಯ್ಯ ದೇವರು ಸಾಮಾನ್ಯ ವರ್ಗದ ಜನರ ಜೀವನಕ್ರಮದಲ್ಲಿ ದಟ್ಟವಾಗಿ ಬೇರೂರಿದೆ. ಹೀಗೆ ಪ್ರತಿಯೊಂದು ಊರುಗಳಲ್ಲಿಯೂ ಸ್ಥಳೀಯ ಕೆಲವು ದೇವರ ಪ್ರಭಾವ ಬೇಡರ ಮೇಲೆ ಆಗಿರುತ್ತದೆ. ಅಜ್ಜಯ್ಯ ದೇವರಿಗೆ ಮಹಿಳೆಯರು ಹೆಚ್ಚಿನ ಆರಾಧಕರಾಗಿದ್ದಾರೆ.

ಬೆಳಗಟ್ಟದ ಮಹದೇವಮ್ಮ ವಿಶೇಷವಾಗಿ ಈ ದೇವರನ್ನು ಆರಾಧನೆ ಮಾಡುತ್ತಾಳೆ. ಮಹದೇವಮ್ಮ ಮ್ಯಾಸಬೇಡರ ಮಹಿಳೆ. ಈಕೆ ಸಂಸಾರಿ ಮತ್ತು ಅನಕ್ಷರಸ್ಥ ಮಹಿಳೆ ಇವರು ಸುಮಾರು ೧೦ ವರ್ಷದಿಂದ ಅಜ್ಜಯ್ಯನ ಆರಾಧಕಳಾದಳು. ಮಹದೇವಮ್ಮನ ಮೇಲೆ ಅಜ್ಜಯ್ಯ ದೇವರು ಬರಲು ಪ್ರಾರಂಭವಾಯಿತು. ಕ್ರಮೇಣ ಭಕ್ತಾದಿಗಳು ದೇವರ ಹತ್ತಿರ ಬರಲು ಪ್ರಾರಂಭಿಸಿದರು. ಭಕ್ತಾದಿಗಳು ಪ್ರಭಾವದಿಂದ ಆ ಊರಿನಲ್ಲಿ ಅಜ್ಜಯ್ಯನ ದೇವಸ್ಥಾನ ನಿರ್ಮಿತವಾಯಿತು. ಸಾವಿರಾರು ಭಕ್ತಾದಿಗಳು ಹುಟ್ಟಿಕೊಂಡರು. ಪ್ರತಿದಿನ ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರ ಪ್ರಾರಂಭವಾಯಿತು. ಅದರಲ್ಲಿಯೂ ಸೋಮವಾರ, ಗುರುವಾರ ವಿಶೇಷ ಪೂಜೆ ಆರಂಭವಾಗಿದೆ. ಈಗ ಇಲ್ಲಿ ಪ್ರತಿವರ್ಷಕ್ಕೆ ಒಂದುಸಾರಿ ಶಿವರಾತ್ರಿ ಹಬ್ಬದ ದಿನ ರಥೋತ್ಸವ ನಡೆಯುತ್ತದೆ. ಅಂದು ಸಾವಿರಾರು ಭಕ್ತಾದಿಗಳು ಬಂದು ಸೇರುತ್ತಾರೆ. ಇಂದು ಆ ಅಜ್ಜಯ್ಯನ ದೇವಸ್ಥಾನ ದೊಡ್ಡ ಧಾರ್ಮಿಕ ಕೇಂದ್ರವಾಗಿದೆ. ಈ ದೇವರನ್ನು ನಿರ್ಮಿಸಿರುವ ಮತ್ತು ಪೂಜೆಯನ್ನು ಮಾಡುವ ಮ್ಯಾಸಬೇಡರ ಮಹಿಳೆ. ಇಂದು ಮಹದೇವಮ್ಮ ಅಜ್ಜಯ್ಯನ ಪೂಜಾರಿಣಿಯಾಗಿ ದೇವರ ಸ್ವರೂಪಿಣಿಯಾಗಿ, ಕಂಡು ಬರುತ್ತಾಳೆ. ಆ ಮಹದೇವಮ್ಮನ ಮೇಲೆ ಅಜ್ಜಯ್ಯದೇವರು ಬಂದು ಭಕ್ತಾದಿಗಳ ಕಪ್ಪಗಳಿಗೆ ಒಳ್ಳೆಯ ದಾರಿ ತೋರಿಸುತ್ತಾನೆ. ಹೀಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ “ದೇವರು” ವಿವಿಧ ರೂಪವನ್ನು ತಾಳಿ ಸಾಂಸ್ಕೃತಿಕವಾಗಿ ಭದ್ರಕೋಟೆ ಸೃಷ್ಟಿಸುತ್ತದೆ. ಹಿಂದೂ ಧರ್ಮದವರು ಮೂಢನಂಬಿಕೆ, ಸಂಪ್ರದಾಯ, ದೇವರು-ಧರ್ಮಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿರುತ್ತಾರೆ. ಈ ಕ್ರಿಯೆಗಳು ಬೇಡರ ಸಂಸ್ಕೃತಿಯಿಂದಲೂ ದೂರವಾಗಿಲ್ಲ. ಅಲ್ಲಿಯೂ ಎಲ್ಲಾ ಕಡೆಯಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ದೇವರು ಕಂಡುಬರುತ್ತಾರೆ. ಹೀಗೆ ದೇವರು ಮತ್ತು ಧರ್ಮ ಮನುಷ್ಯನ ಒಂದು ಭಾಗವಾಗಿ ಕಂಡುಬರುತ್ತದೆ. ಜನಸಾಮಾನ್ಯರ ಜೀವನದಲ್ಲಿ, ಬುಡಕಟ್ಟಿನ ಜನರಲ್ಲಿ ದೇವರು-ಧರ್ಮಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕಂಡು ಬರುತ್ತವೆ.

ಉತ್ತರ ಕರ್ನಾಟಕದ ಬೆಳಗಾಂ, ಧಾರವಾಡ, ರಾಯಚೂರು, ಗುಲ್ಬರ್ಗಾ, ದಾವಣಗೆರೆ, ಹಾವೇರಿ ಇನ್ನಿತರ ಜಿಲ್ಲೆಗಳಲ್ಲಿನ ಬೇಡರ ಮಹಿಳೆ ಎಲ್ಲಮ್ಮನ ಆರಾಧಕಳಾಗಿದ್ದಾಳೆ. ಎಲ್ಲಮ್ಮ ದೇವತೆಯ ಮೂಲಸ್ಥಾನ ಬೆಳಗಾವಿ ಜಿಲ್ಲೆಯ ಸವದತ್ತಿ, ಬೇಡರನ್ನು ಸೇರಿಸಿಕೊಂಡಂತೆ ಕೆಳವರ್ಗದ ಮಹಿಳೆಯರು ಈ ದೇವರ ಮುದ್ರೆ ಹೊತ್ತಿಸಿಕೊಂಡು ಆ ದೇವರ ಸಾಂಕೇತಿಕವಾಗಿ ತಲೆಯ ಮೇಲೆ ಬಿಂದಿಗೆ ಸ್ವರೂಪದಲ್ಲಿ ಅಥವಾ ಬಿದಿರಿನ ಚಪ್ಪಟೆಯಾಕಾರದ ಪುಟ್ಟಿಯನ್ನು ಹೊರುತ್ತಾರೆ. ಆ ತಲೆಯ ಮೇಲಿನ ದೇವರಿಗೆ ಬೇವಿನ ಸೊಪ್ಪು ಮುಡಿಸಿ, ಹಸಿರಿನ ಗಾಜಿನಬಳೆ ತೊಡಿಸಿ ಅಲಂಕಾರ ಮಾಡಿ ಕುಂಕುಮ ಅರಿಶಿಣದಿಂದ ರೂಪಿಸಿರುತ್ತಾರೆ. ಚಿತ್ರದುರ್ಗದ ಮ್ಯಾಸಬೇಡ ಮತ್ತು ಊರಬೇಡ ಮಹಿಳೆಯರನ್ನು ಸೇರಿಸಿಕೊಂಡಂತೆ ಕೆಳವರ್ಗದ ಮಹಿಳೆಯರಲ್ಲಿಯೂ ಎಲ್ಲಮ್ಮ ದೇವತೆಯನ್ನು ಹೊತ್ತುಕೊಳ್ಳುವವರನ್ನು ನೋಡುತ್ತೇವೆ. ಈ ಎಲ್ಲಮ್ಮನ ಮುದ್ರೆ ಹೊತ್ತಿರುವವರು ತುಂಬಾ ಬಡತನದಿಂದ ಬದುಕುತ್ತಾರೆ. ಇವರು ಹೆಚ್ಚಿನ ಪಾಲು ಅನಕ್ಷರಸ್ಥರಾಗಿರುತ್ತಾರೆ. ಮ್ಯಾಸಬೇಡರಲ್ಲಿ ಮುಖ್ಯವಾಗಿ ಬಳ್ಳಕಟ್ಟೆಯ ರೇವಮ್ಮ, ಸುಲ್ತಾನಿಪುರದ ಬೋರಮ್ಮ, ಹನುಮಕ್ಕ, ಜಾನಕೊಂಡದ ತಿಪ್ಪಮ್ಮ, ಹೀಗೆ ಇನ್ನೂ ಅನೇಕ ಮಹಿಳೆಯರ ಹೆಸರನ್ನು ದಾಖಲಿಸಬಹುದು. ಪ್ರತಿ ಮಂಗಳವಾರ, ಶುಕ್ರವಾರ ಈ ದೇವರ ಪೂಜೆ ನಡೆಯುತ್ತದೆ. ಇಲ್ಲಿಯೂ ಜನಸಾಮಾನ್ಯರು ಭಕ್ತಾದಿಗಳಾಗಿರುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ನಡೆಯುವಾಗ ಭಕ್ತಾದಿಗಳು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಅಲ್ಲಿಗೆ ಹೋಗುತ್ತಾರೆ. ಇವರಿಗೆ ಕಾಯಿಲೆಗಳು ಕಾಣಿಸಿಕೊಂಡರೆ ಹೆಚ್ಚಿನದಾಗಿ ತಾವು ವಾಸಿಸುವ ಪ್ರದೇಶದಲ್ಲಿನ ಇಂತಹ ದೇವರ ಮೊರೆ ಹೋಗುತ್ತಾರೆ. ಇತ್ತೀಚೆಗೆ ಪ್ರತಿಯೊಂದು ಹಳ್ಳಿಗಳಲ್ಲಿ ಆಸ್ಪತ್ರೆ ವ್ಯವಸ್ಥೆ ಇರುವುದರಿಂದ ಸ್ವಲ್ಪ ಮಟ್ಟಿಗೆ ದೇವರ ಮೊರೆ ಹೋಗುವುದು ಕಡಿಮೆಯಾಗಿದೆ. ಆದರೂ ಇನ್ನೂ ಈ ನಂಬಿಕೆಗಳು ಜನಸಾಮಾನ್ಯರಿಂದ ದೂರವಾಗಿಲ್ಲ.

ಬೇಡರ ಮಹಿಳೆ ವಿವಿಧ ರೀತಿಯ ದೇವರ ಹೆಸರಿನಲ್ಲಿ ತಮ್ಮ ಕಾಯಕಗಳನ್ನು ಮಾಡಿಕೊಂಡು ಹೋಗುತ್ತಿದ್ದಾಳೆ. ಬೇಡ ಜನಾಂಗದಲ್ಲಿ ದೇವರು, ಧರ್ಮ, ನಂಬಿಕೆ, ಸಂಪ್ರದಾಯ, ಮೂಢ ನಂಬಿಕೆ, ಆಚರಣೆ, ವಿಧಿ-ನಿಯಮಗಳು ಹೆಚ್ಚಿನ ಕುಟುಂಬಗಳಲ್ಲಿ ಇನ್ನೂ ರೂಢಿಯಲ್ಲಿವೆ. ಅದರಲ್ಲಿಯೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತರೆ. ಈ ಮಹಿಳೆ ವರ್ಷದ ೩೬೫ ದಿನವು ಒಂದಲ್ಲಾ ಒಂದು ದೇವರ ಸ್ತುತಿಸುತ್ತಾ, ಆರಾಧನೆ ಮಾಡುತ್ತ ಬದುಕುತ್ತಾಳೆ. ಇವರಲ್ಲಿ ಶಿಕ್ಷಣದ ಕೊರತೆ, ಸಾಲದ್ದಕ್ಕೆ ಕಿತ್ತು ತಿನ್ನುವ ಬಡತನ ಕೆಲವರಲ್ಲಿ ಕಂಡು ಬರುತ್ತದೆ. ಅಂತಹ ಸಮಯದಲ್ಲಿ ಏನಾದರೂ ತೊಂದರೆ ಮಹಿಳೆಯರಿಗೆ ಕಂಡುಬಂದರೆ ಅವರು ದೇವರ ಮೊರೆ ಹೋಗುತ್ತಾರೆ. ಅಲ್ಲಿ ದೇವರ ಹೆಸರಿನಲ್ಲಿ ನೆಮ್ಮದಿ ಕಾಣುತ್ತಾರೆ. ಹೀಗೆ ಬೇಡರ ಮಹಿಳೆಗೆ ಮತ್ತು ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮವು ಇವರಲ್ಲಿ ಜೀವನದ ಒಂದು ಭಾಗವಾಗಿದೆ.

ವಿವಾಹ ಪದ್ಧತಿ:

ಬೇಡರಲ್ಲಿ ಮದುವೆಯೆಂಬುದು ಒಂದು ಪ್ರಮುಖ ಸಾಂಸ್ಕೃತಿಕ ಆಚರಣೆ. ಇವರು ತಮ್ಮ ಮಕ್ಕಳಿಗೆ ೧೮-೨೦ರ ವಯಸ್ಸಿನಲ್ಲಿ ಮದುವೆ ಮಾಡಲು ತೀರ್ಮಾನಿಸುತ್ತಾರೆ. ಅನಕ್ಷರಸ್ಥ ಮನೆಗಳಲ್ಲಿ ಮಗಳು ಮೈ ನೆರೆಯುವುದಕ್ಕಿಂತ ಮುಂಚೆ ಮದುವೆ ಮಾಡಿರುವ ದಾಖಲೆಗಳು ದೊರೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರಲ್ಲಿಯೂ ಸ್ವಲ್ಪ ಮಟ್ಟಿನ ಸುಧಾರಣೆ ಕಾಣುತ್ತಿದ್ದೇವೆ.

ಬೇಡರಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುವಾಗ ಕುಲ, ಮನೆದೇವರು ಮತ್ತು ಕಟ್ಟಿಮನೆಗಳನ್ನು ಪ್ರಧಾನ ಅಂಶಗಳನ್ನಾಗಿ ಪರಿಗಣಿಸುತ್ತಾರೆ.

ಮ್ಯಾಸ ಬೇಡ ಮತ್ತು ಊರ ಬೇಡರ ಹುಡಗ-ಹುಡುಗಿ ಕೊಡುಕೊಳ್ಳುವಿಕೆ ಮದುವೆಗಳು ನಡೆಯುವುದಿಲ್ಲ. ಇಬ್ಬರಲ್ಲಿಯೂ ನಿಷಿದ್ದ. ಮ್ಯಾಸಬೇಡರು ಹುಡುಗ ಅಥವಾ ಹುಡುಗಿ ಊರಬೇಡರಲ್ಲಿನ ಹುಡುಗಿ-ಹುಡುಗರನ್ನು ಮದುವೆ ಮಾಡಿಕೊಂಡರೆ ಅವರು ನಿಯಮವನ್ನು ಮುರಿದಂತೆಯೇ ಲೆಕ್ಕ. ನಮ್ಮ ಕುಲವನ್ನು ಭಂಗಗೊಳಿಸಿದವರು ಅಂತ ಭಾವಿಸಿಕೊಳ್ಳುತ್ತಾರೆ. ಮದುವೆಯಾದ ಗಂಡು-ಹೆಣ್ಣನ್ನು ಹಬ್ಬ-ಹರಿದಿನ, ಮುದುವೆ-ಮುಂಜಿ, ಯಾರಾದರೂ ಸತ್ತಾಗ ಆಚರಣೆಗಳಲ್ಲಿ ಸೇರಿಸಿಕೊಳ್ಳುವುದಿಲ್ಲ. ಅಂತಹ ಸಮಾಜದಲ್ಲಿ ಮದುವೆ ಮಾಡಿಕೊಂಡವರು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇತ್ತೀಚೆಗೆ ಇವರಲ್ಲಿ ನಿಯಮ ಮೀರಿ ಮದುವೆ ಮಾಡಿಕೊಂಡಿದ್ದಾರೆ. ಹೀಗೆ ಮದುವೆಯಾಗಲು ಸಾಮಾಜಿಕ ಸಂದರ್ಭ, ಇಬ್ಬರಲ್ಲಿನ ಪ್ರೀತಿ ಕಾರಣ ಇರಬಹುದು. ನಿದರ್ಶನಕ್ಕೆ ಹೇಳುವುದಾದರೆ ಧನಂಜಯ ಮ್ಯಾಸಬೇಡರ ಹುಡುಗ, ಕವಿತಾ ಊರಬೇಡರ ಹುಡುಗಿ (ಇವರಿಬ್ಬರು ಬೆಳಗಟ್ಟಿ ಗ್ರಾಮದವರು) ಮದುವೆಯಾಗಿ ಬೇರೆ ಊರಿನಲ್ಲಿ ವಾಸ ಮಾಡುತ್ತಾ ಇದ್ದಾರೆ. ಒಂದು ವೇಳೆ ಅದೇ ಊರಿನಲ್ಲಿ ವಾಸಮಾಡಿದರೆ ಕುಲಸ್ಥರು ಅವರನ್ನು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ಅಲ್ಪಸ್ವಲ್ಪ ಶಿಕ್ಷಣ ಪಡೆದ ಅವರಿಬ್ಬರೂ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಹೀಗೆ ಮ್ಯಾಸಬೇಡರು ಮತ್ತು ಊರ ಬೇಡರಲ್ಲಿ ಮದುವೆ ನಡೆಯುವುದಿಲ್ಲ. ಆದರೆ ಇತ್ತೀಚೆಗೆ ಶಿಕ್ಷಣ ಪಡೆದು ನೌಕರಿಯಲ್ಲಿರುವವರು ಕಟ್ಟು ಪಾಡುಗಳನ್ನು ಮೀರಿ ಇಬ್ಬರು ನಾಯಕರೇ ಎಂಬುದನ್ನು ಪರಿಗಣಿಸಿಕೊಂಡು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇವರು ಮನೆ ದೇವರು, ಕಟ್ಟಿಮನೆಗಳಿಂದ ದೂರವಿರುತ್ತಾರೆ. ಅಂದರೆ ಅವರ ಒಡನಾಟ ಹೆಚ್ಚಾಗಿ ಇರುವುದಿಲ್ಲ. ಮೇಲಾಗಿ ಇವರು ಸರ್ಕಾರಿ ಕೆಲಸ ತೆಗೆದುಕೊಂಡು ಬೇರೆ ನಗರಗಳಲ್ಲಿ ವಾಸಿಸುತ್ತಿರುವುದರಿಂದ ಜನಾಂಗದಲ್ಲಿನ ಕಟ್ಟುಪಾಡುಗಳು, ನಿಯಮಗಳು ಹೆಚ್ಚಿನ ರೀತಿಯಲ್ಲಿ ಅವರ ಮೇಲೆ ಪ್ರಭಾವ ಬೀರುವುದಿಲ್ಲ. ಇತ್ತೀಚೆಗೆ ಅಂತರ್ಜಾತಿ ವಿವಾಹಗಳು ಇವರಲ್ಲಿ ಕಂಡುಬರುತ್ತವೆ. ಹಾಗೆಯೇ ಪರಿವಾರದವರು, ವಾಲ್ಮೀಕಿಯರು, ಪಾಳೆಗಾರರು, ಬೇಡರು ಇವರಲ್ಲಿ ಕುಲದ ನಿಯಮದಂತೆ ಬೇರೆ ಕುಲದಿಂದ ಹೆಣ್ಣು ತಂದು ಮದುವೆ ಮಾಡುತ್ತಾರೆ. ಅವರಲ್ಲಿಯೂ ಒಂದೇ ಕುಲದಲ್ಲಿ ಮದುವೆ ಮಾಡುವುದಿಲ್ಲ. ಒಂದೇ ಕುಲದವರನ್ನು ಇವರು ಅಣ್ಣ-ತಮ್ಮಂದಿರು ಎಂದು ಭಾವಿಸಿಕೊಳ್ಳುತ್ತಾರೆ.

ಮದುವೆಯ ಆಚರಣೆಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ. ಪೋಷಕ ವರ್ಗದಲ್ಲಿ ಹೆಂಗಸು ತುಂಬಾ ಕೆಲಸ ಮಾಡುತ್ತಾಳೆ. ಮ್ಯಾಸಬೇಡರು ಮದುವೆ ಮಾಡುವಾಗ ಪ್ರಾರಂಭದ ದಿನಗಳಲ್ಲಿ ಹೆಣ್ಣಿನ ಮನೆಗೆ ಹೋಗಿ ವಧುದಕ್ಷಿಣೆ ಕೊಟ್ಟು ಹೆಣ್ಣು ತರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹೆಣ್ಣಿನ ಕಡೆಯವರು ವರದಕ್ಷಿಣೆ ಕೊಟ್ಟು ಹೆಣ್ಣು ತರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹೆಣ್ಣಿನ ಕಡೆಯವರು ವರದಕ್ಷಿಣೆ ಕೊಟ್ಟು ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಇದು ಇಂದು ಸಹಜವಾಗಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳ ಪರಿವಾರದ ಹೆಣ್ಣಿನ ಪೋಷಕರು ಗಂಡಿನ ಕಡೆಯವರಿಗೆ ವರದಕ್ಷಿಣೆ ಕೊಟ್ಟು ಖರ್ಚಿಟ್ಟು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಉತ್ತರ ಕರ್ನಾಟಕದ ಧಾರವಾಡ, ಬೆಳಗಾಂ, ರಾಯಚೂರು ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಗಂಡಿನ ಕಡೆಯವರೆ ಖರ್ಚು ಇಟ್ಟು ಹೆಣ್ಣನ್ನು ಮದುವೆ ಮಾಡಕೊಳ್ಳುತ್ತಾರೆ.

ಹೆಣ್ಣಿನ ಹಿನ್ನೆಲೆಯಲ್ಲಿ ಮದುವೆಯ ಆಚರಣೆಯನ್ನು ಹೀಗೆ ಇರುತ್ತದೆ ಅಂತ ಹೇಳಬಹುದು: ಹೆಣ್ಣನ್ನು ಮದ್ಲಿಂಗಿತ್ತಿ ಮಾಡುವಾಗ ಐದು ಜನ ಮುತ್ತೈದೆಯರು ಸೇರಿಕೊಳ್ಳುತ್ತಾರೆ. ಪೂಜಾರಿ ಗದ್ದಿಗೆ (ಕರಿಕಂಬಳಿ) ಹಾಸುತ್ತಾನೆ. ಮನೆದೇವರ ಹೆಸರಿನಲ್ಲಿ ಗದ್ದಿಗೆ ಪೂಜೆ ಮಾಡಿ ಹುಡುಗಿಯನ್ನು ಗದ್ದಿಗೆ ಮೇಲೆ ಕೂರಿಸುತ್ತಾನೆ. ಐದು ಜನ ಮುತ್ತೈದೆಯರು ಮದ್ಲಿಂಗಿತ್ತಿ ಮೈಕೈಗೆ ಅರಿಶಿಣ ಲೇಪನ ಮಾಡುತ್ತಾರೆ. ತಲೆಗೆ ಹಾಲು-ತುಪ್ಪ ಹಾಕುತ್ತಾರೆ. ಶಾಸ್ತ್ರ ಮಾಡುತ್ತಾರೆ. ಆಮೇಲೆ ಸ್ನಾನ ಮಾಡಿಸುತ್ತಾರೆ. ನಂತರ ದೇವಿ ಸನ್ನಿಧಿಯಲ್ಲಿಯೇ ಹುಡುಗಿಯ ಕೈಗೆ ಕಂಕಣ ಕಟ್ಟುತ್ತಾರೆ. ಆಮೇಲೆ ಮುತ್ತೈದೆಯರು ಶಾಸ್ತ್ರ ಮಾಡುತ್ತಾರೆ. ಈ ಶಾಸ್ತ್ರ ಮುಗಿದ ಮೇಲೆ ಮದುವೆಯಾಗಿ ಮಾಮನೆ ಶಾಸ್ತ್ರ ಮುಗಿಯುವವರೆಗೂ ಒಬ್ಬಳೇ ಎಲ್ಲಿಯೂ ಹೋಗುವ ಹಾಗಿಲ್ಲ. ಐದು ಜನ ಮುತ್ತೈದೆಯರು ಕೈಗೆ ಕಂಕಣ ಕಟ್ಟಿ ಕೊಳ್ಳುತ್ತಾರೆ. ಅವರು ಅವಳ ಮದುವೆ ಶಾಸ್ತ್ರ ಮುಗಿಯುವವರೆಗೂ ಜೊತೆಯಲ್ಲಿಯೇ ಇರಬೇಕು. ಹೀಗೆ ಆ ಮುತ್ತೈದೆ ಹೆಣ್ಣು ಮಕ್ಕಳ ಪಾತ್ರ ಆ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ದೇವರಮನೆಯಿಂದ ವಾಪಸು ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅಂದು ರಾತ್ರಿ ಐದು ಬಾರಿ ಮದ್ಲಿಂಗಿತ್ತಿ ಶಾಸ್ತ್ರ ಮಾಡುತ್ತಾರೆ. ಅದೇ ರೀತಿ ಗಂಡಿನ ಮನೆಯಲ್ಲಿ ನಡೆಯುತ್ತದೆ.

ಮ್ಯಾಸ ಬೇಡರಲ್ಲಿ ಮೊದಲ ದಿನದ ಕಾರ್ಯಕ್ರಮವನ್ನು ದೇವರ ಊಟದ ದಿನ ಅಂತ ಕರೆದರೆ, ಪರಿವಾರದವರು ಚಪ್ಪರದೂಟ ಅಂತ ಕರಿಯುತ್ತಾರೆ. ಬೇಡರಲ್ಲಿ ಬಹುಪಾಲು ಮೊದಲ ದಿನದ ಮದುವೆಯ ಕಾರ್ಯಕ್ರಮವನ್ನು ದೇವರಿಗೆ ಹೆಚ್ಚಿನ ಪಾಲು ಮೀಸಲಿಡುತ್ತಾರೆ. ಆ ದಿನದಲ್ಲಿ ಕುಲಸ್ಥರು ಎಲ್ಲ ಸೇರಿಕೊಳ್ಳುತ್ತಾರೆ. ಮದುವೆಯ ಕಾರ್ಯಕ್ರಮದಲ್ಲಿ ಮುಹೂರ್ತ ಬಹಳ ಮುಖ್ಯವಾದ ಘಟ್ಟ. ಈ ಮುಹೂರ್ತಕ್ಕೆ ನೆಂಟರಿಷ್ಟರು, ಬಂಧು-ಬಳಗ, ಪರಿಚಯದವರು, ಬೇರೆ ಬೇರೆ ಜನಾಂಗದವರು ಬಂದು ಸೇರುತ್ತಾರೆ. ಮ್ಯಾಸಬೇಡರಲ್ಲಿ ಕೆಲವು ಕಡೆ ಮನೆದೇವರ ಪೂಜಾರಿ ಕೆಲವು ಕಡೆ ಕುಲದ ಹಿರಿಯವ್ಯಕ್ತಿ, ಕೆಲವುಕಡೆ ಊರಿನ ಹೈನೇರು, ಕೆಲವು ಕಡೆ ಬ್ರಾಹ್ಮಣ ಪುರೋಹಿತ ಬಂದು ಹುಡುಗನಿಂದ ಹುಡುಗಿಗೆ ತಾಳಿ ಕಟ್ಟಿಸುವ ಶಾಸ್ತ್ರ ಮಾಡುತ್ತಾರೆ. ಇದು ಎಲ್ಲಾ ಬೇಡರಲ್ಲಿ ಇದೆ.

ತಾಳಿ ಕಟ್ಟುವ ಶಾಸ್ತ್ರ ಮಾಡುವ ಮೊದಲು ಮದ್ಲಿಂಗನ ಎದುರಿಗೆ ಮದುವೆ ಮಂಟಪದ ಕೆಳಗೆ (ಚಪ್ಪರದ ಕೆಳಗೆ) ಕುಲದ ಮುಖ್ಯಸ್ಥರು ಸೇರಿಕೊಂಡು ಅನುಭವಿ ವ್ಯಕ್ತಿಯಿಂದ ಗದ್ದಿಗೆ ಹಾಸಿ ವೀಳ್ಯೆದೆಲೆಶಾಸ್ತ್ರ ಮಾಡುತ್ತಾರೆ. ಈ ಶಾಸ್ತ್ರದಲ್ಲಿ ಎಲ್ಲಾ ಕುಲಸ್ಥರಿಗೆ, ದೇವರ ಒಕ್ಕಲರಿಗೆ ವೀಳ್ಯೆದೆಲೆ ಮತ್ತು ಅಡಿಕೆ ಕೊಡುತ್ತಾರೆ. ಇದು ಎಲ್ಲರ ಒಪ್ಪಿಗೆಯನ್ನು ಮದುವೆಗೆ ತೆಗೆದುಕೊಂಡಂತೆ ಅಂತ ಭಾವಿಸಿಕೊಳ್ಳುತ್ತಾರೆ. ಕರ್ನಾಟಕದ ಎಲ್ಲಾ ಬೇಡರ ಮದುವೆಯ ಆಚರಣೆಯಲ್ಲಿ ಇದು ಕಂಡುಬರುತ್ತದೆ. ಈ ವೀಳ್ಯೆದೆಲೆ ಶಾಸ್ತ್ರ ಬಂದವರಲ್ಲಿ ಸೌಹಾರ್ದತೆಯ ಬೆಸುಗೆಯನ್ನು ಬೆಸೆಯುವುದಾಗಿದೆ. ಈ ಗದ್ದಿಗೆಯ ಮೇಲೆಯೇ ಗಂಡಿನವರು ತಂದಿರುವ ಧಾರೆಸೀರೆ, ಮದುವೆಸೀರೆ, ತಾಯಿಸೀರೆಗಳನ್ನು ಹೆಣ್ಣಿನ ಕಡೆಯ ಮೂರು ಜನ ಹೆಂಗಸರನ್ನು ಕರೆಸಿಕೊಂಡು ಒಂದೊಂದಾಗಿ ಕೊಡುತ್ತಾರೆ. ಆ ಹೆಂಗಸರು ಸೀರೆಗಳನ್ನು ತೆಗೆದುಕೊಂಡು ಹೋಗಿ ಮದ್ಲಿಂಗಿತ್ತಿಯ ಅದರಲ್ಲಿನ ಧಾರೆಸೀರೆ ಹುಡುಗಿ ಒಡ್ಲಕ್ಕಿ ಹಾಕಿ ತಾಯಿಯ ತವರುಮನೆಯಿಂದ (ಮದ್ಲಿಂಗಿತ್ತಿಯ ತಾಯಿಯ ತವರುಮನೆ) ಸೋದರ ಮಾವ ತಂದಿದ್ದ (ಹೆಣ್ಣುತಾಳಿ) ತಾಳಿಯನ್ನು ಅಲ್ಲಿಯೇ ಕಟ್ಟಿಸುತ್ತಾರೆ. ಆ ಸಂದರ್ಭದಲ್ಲಿ ಸೋದರ ಮಾವನ ಹೆಗಲ ಮೇಲೆ ಹೊಸ ಬಟ್ಟೆ ಹಾಕುತ್ತಾರೆ. ಆಮೇಲೆ ಸೋದರ ಮಾವ ತನ್ನ ಸೊಸೆಯ ಕೈಹಿಡಿದುಕೊಂಡು ಮದ್ಲಿಂಗ ಇರುವ ಜಾಗಕ್ಕೆ (ಮದುವೆ ಮಂಟಪ) ಬರುತ್ತಾನೆ. ಮದ್ಲಿಂಗಿತ್ತಿಗೆ ತಲೆಯ ತುಂಬಾ ಹೂಗಳನ್ನು ಮುಡಿಸುತ್ತಾರೆ. ಬಿಳಿಯಧಾರೆ ಸೀರೆ ಉಟ್ಟು-ಹಣೆಗೆ ಬಾಸಿಂಗವನ್ನು ಕಟ್ಟಿಕೊಂಡು ಮೇಲು ಮುಸುಕು ಹಾಕಿಕೊಂಡಿರುತ್ತಾಳೆ. ಆ ಸಂದರ್ಭದಲ್ಲಿ ಮದ್ಲಿಂಗಿತ್ತಿಯ ಅಭಿಮುಖವಾಗಿ ಮದ್ಲಿಂಗ ಇರುತ್ತಾನೆ. ಅವನಿಗೂ ತಲೆಗೆ ರುಮಾಲು, ಬಿಳಿಯ ಅಂಗಿ, ಕಚ್ಚೆ ಪಂಚೆ ತೊಟ್ಟು ಹಣೆಗೆ ಬಾಸಿಂಗ ಕಟ್ಟಿರುತ್ತಾರೆ. ಆಮೇಲೆ ಪುರೋಹಿತನೋ, ಪೂಜಾರಿಯೋ, ಕುಲದ ಹಿರಿಯವ್ಯಕ್ತಿಯೋ ಹೈನೆರೋ ಯಾರಾದರೂ ಇವರಲ್ಲಿ ಒಬ್ಬರು ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿಸುತ್ತಾರೆ. ಬಂದು ಸೇರಿದ್ದ ಜನರು ತಾಳಿಕಟ್ಟುವಾಗ ಅಕ್ಷತೆ ಕಾಳನ್ನು ಮದ್ಲಿಂಗ-ಮದ್ಲಿಂಗಿತ್ತಿಗೆ ಹಾಕಿ ಶುಭ ಹಾರೈಸುತ್ತಾರೆ. ಆಮೇಲೆ ಬಂಧು-ಬಳ, ನೆಂಟರಿಷ್ಟರು ನವದಂಪತಿಗಳಿಗೆ ಹಾಲು-ತುಪ್ಪ ಬಿಡುತ್ತಾರೆ. ಇದು ನವ ದಂಪತಿಗಳಿಗೆ ಶುಭ ಹಾರೈಸುವಂತಹ ಆಚರಣೆ.

ಮದುವೆಯಾದ ಹುಡುಗ-ಹುಡುಗಿಯರನ್ನು ಸೂರ್ಯ ನಮಸ್ಕಾರ ಮಾಡಿಸಲು ತಾಳಿ ಕಟ್ಟಿಸಿದ ಪೂಜಾರಿ ಮದುವೆ ಮಂಪಟದಿಂದ ಹೊರಗೆ ಕರೆತರುತ್ತಾನೆ. ಆಮೇಲೆ ಅವರು ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ಬಂದಿದ್ದ ಜನರು ಹೊಸ ಜೋಡಿಗಳಿಗೆ ಮುಯ್ಯಿ ಮಾಡುತ್ತಾರೆ. ಮುಯ್ಯಿ ಎಂದರೆ ಏನಾದರೂ ವಸ್ತುಗಳನ್ನೋ, ಹಣವನ್ನೋ ನೆನಪಿಗೋಸ್ಕರ ಕೊಡುವುದು. ಅಲ್ಲಿ ಸೇರಿದ್ದ ಜನರು ಮದುವೆಯ ಊಟ ಮಾಡದೆ ಹೋಗುವುದಿಲ್ಲ. ಗಂಡು ಮತ್ತು ಹೆಣ್ಣಿನ ತಂದೆ-ತಾಯಿಗಳ ಪಾತ್ರ ಮಿಗಿಲಾಗಿರುತ್ತದೆ. ಇಬ್ಬರ ಕಡೆಯ ಪೋಷಕರು ಬಂದಿದ್ದ ಸಂಬಂಧಿಕರಿಗೆ ಆತಿಥ್ಯ ಮಾಡಿ ಕಳುಹಿಸುತ್ತಾರೆ.

ಮದುವೆಯ ದಿನ ಹೆಣ್ಣಿನ ಪಾತ್ರ ತುಂಬಾ ಮುಖ್ಯವಾಗುತ್ತದೆ. ಇಲ್ಲಿ ಕೆಲವು ಮುಖ್ಯ ಆಚರಣೆಯಲ್ಲಿ ಪುರುಷರು ಪ್ರಧಾನರಾಗುತ್ತಾರೆ. ಅದರಲ್ಲೂ ಮದುವೆಯ ಮಂಟಪದ ಕೆಳಗೆ ಗದ್ದಿಗೆ ಹಾಸಿ ವೀಳ್ಯೆದೆಲೆ ಶಾಸ್ತ್ರ ಮಾಡುವಾಗ ಪುರಷರ ಪಾತ್ರ ಹಿರಿದಾದುದು. ಆದರೆ ಮದುವಣಗಿತ್ತಿ ಮಾಮನೆ ಶಾಸ್ತ್ರ, ಗಂಗಮ್ಮನ ಶಾಸ್ತ್ರ ಮಾಡುವಾಗ ಹೆಣ್ಣು ಮಕ್ಕಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಹೆಂಗಸರು ಮದುವೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ.

ಮುಹೂರ್ತ ಮುಗಿದ ಮೇಲೆ ಹೆಣ್ಣು ಗಂಡನೊಂದಿಗೆ ಅವನ ಮನೆಗೆ ಹೋಗಬೇಕು. ಮೊದಲಿಗೆ ಮನೆಯ ಒಳಗೆ ಹೆಂಡತಿ ಹೋಗುವ ಮೊದಲು ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿಗೆ ಗಂಡ-ಹೆಂಡತಿಯ ಎಡ/ಬಲ ಪಾದಗಳನ್ನು ಇಟ್ಟು ಪೂಜೆಮಾಡಿ ಆ ಜಾಗದಲ್ಲಿ ಮೊಳೆಯನ್ನು ಹೊಡೆಯುತ್ತಾರೆ. ಈ ಮೊಳೆ ಒಡೆಯುವ ಶಾಸ್ತ್ರ ಮ್ಯಾಸಬೇರಡ ಮತ್ತು ಊರಬೇಡರಲ್ಲಿ ಪ್ರಮುಖ ಆಚರಣೆಯಾಗಿದೆ. ಆ ಮನೆಗೆ ಮದುವೆಯಾದ ಹೊಸ ಹೆಣ್ಣು ಬಾಗಿಲಿಗೆ ಮೊಳೆ ಹೊಡೆಸಿಕೊಂಡು ಒಳಗೆ ಬಂದ ಮೇಲೆ ಅವಳಿಗೆ ಆ ಮನೆಯಲ್ಲಿ ಸಂಪೂರ್ಣ ಅಧಿಕಾರ ಸಿಕ್ಕಿರುತ್ತದೆ. ಗ್ರಾಮೀಣ ಪ್ರದೇಶದ ಕೆಲವು ಕುಟುಂಬಗಳಲ್ಲಿ ಅತ್ತೆ-ಸೊಸೆಯರು ಜಗಳ ಮಾಡುವಾಗ ಅತ್ತೆಗೆ ಸೊಸೆಯಾದವಳು ಜಗಳ ಅತಿರೇಕವಾದಾಗ ಹೀಗೆ ಅನ್ನುವುದುಂಟು ನಾನು ಈ ಮನೆಗೆ ಸುಮ್ಮನೆ ಬಂದಿಲ್ಲ: ಮೊಳೆ ಹೊಡ್ಕೊಂಡು ಬಂದಿದೀನಿ ಅಂತ ಅಧಿಕಾರವಾಣಿಯಿಂದ ಮಾತನಾಡುವುದುಂಟು. ಮದುವಣಗಿತ್ತಿ ಮೊದಲಿಗೆ ಒಳಗೆ ಪ್ರವೇಶ ಮಾಡುವಾಗ ಮೊಳೆಹೊಡೆದ ಮೇಲೆ ಅಕ್ಕಿ ತುಂಬಿರುವ ಸೇರನ್ನು ಕಾಲಲ್ಲಿ ಹೊಡೆದು ಒಳಗೆ ಹೋಗುತ್ತಾಳೆ. ಇದು ಬೇಡರ ಪರಿವಾರ, ವಾಲ್ಮೀಕಿ, ಮುಂತಾದ ಜನಾಂಗಗಳಲ್ಲಿ ಕಂಡುಬರುತ್ತದೆ.

ಬೇಡರಲ್ಲಿ ಹೆಣ್ಣಿಗೆ ಮಾಮನೆ ಶಾಸ್ತ್ರ ಮಾಡಿಸಿ ಹೊಳೆಯಿಂದ ಗಂಗಮ್ಮನನ್ನು ಮಾಡಿಸಿಕೊಂಡು ಮನೆಗೆ ಬಂದರೆ ಅಲ್ಲಿಗೆ ಮದುವೆ ಆಚರಣೆ ಮುಗಿಯುತ್ತದೆ.

ಋತುಮತಿಯಾದಾಗ:

ಬೇಡರು ಮೂಲದಲ್ಲಿ ಚಿಕ್ಕ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದರಿಂದ ಋತುಮತಿಯಾದ ಹೆಣ್ಣನ್ನು ಹತ್ತು ಹನ್ನೆರಡು ದಿನಗಳ ಕಾಲ ಗುಡಿಸಲಿನಿಂದ ಹೊರಗೆ ಇಡುವರು. ಹೆಣ್ಣಿನ ಸೋದರ ಮಾವನಿಂದ ಹೊಂಗೆ ಅಥವಾ ಬೇವಿನ ಸೊಪ್ಪಿನ ಹಸಿರು ಗುಡಿಸಲು ಹಾಕಿಸುವರು. ಇದನ್ನು ಪರಿವಾರದಲ್ಲಿ ಸೊಪ್ಪೊ ಹಾಕೋದು ಅಂತ ಕರೀತಾರೆ. ಆ ಹಸಿರುಗುಡಿಸಲಲ್ಲಿ ಮೈನೆರೆತ ಹೆಣ್ಣು ಹತ್ತು-ಹನ್ನೆರಡು ದಿನ ಒಬ್ಬಳೇ ಇರಬೇಕು. ಇವಳಿಗೆ ಈ ದಿನಗಳು ಸೂತಕದಿನವಾಗಿರುತ್ತವೆ. ಪ್ರಕೃತಿದತ್ತವಾಗಿ ಆ ಹೆಣ್ಣಿನ ದೇಹದಲ್ಲಿ ಋತುಚಕ್ರದ ಚಲನೆ ಉಂಟಾಗಿದ್ದರಿಂದ ಆ ಸಮಯದಲ್ಲಿ ದೇಹದಿಂದ ರಕ್ತಮಿಶ್ರಿತ ಮುಟ್ಟು ಆಗುತ್ತಿರುತ್ತದೆ. ನಿರಂತರವಾಗಿ ಸು. ೫-೬ದಿನ ಆಗಬಹುದು. ಹಾಗಾಗಿ ಇವರು ಚಿಕ್ಕ-ಚಿಕ್ಕ ಗುಡಿಸಲಿನಲ್ಲಿ ಒಟ್ಟಿಗೆ ವಾಸಿಸುವಾಗ ಅವಳನ್ನು ಇಂತಹ ಸಂದರ್ಭದಲ್ಲಿ ತೊಂದರೆಯಾಗುತ್ತದೆ ಎಂದು ತಿಳಿದು ತಾತ್ಕಾಲಿಕ ಹಸಿರು ಗುಡಿಸಲಿನಲ್ಲಿ ಅವಳನ್ನು ಇಡುತ್ತಾರೆ. ಆಮೇಲೆ ಕ್ರಮೇಣ ಇದು ಒಂದು ಆಚರಣೆಯಾಗಿದೆ. ಹೆಣ್ಣು ಋತುಮತಿಯಾದಳೆಂದರೆ ಅವಳು ತಾಯ್ತನ ಕಾಣಲು ಅರ್ಹತೆ ಹೊಂದಿದಂತೆ ಆಮೇಲೆ ಅವಳ ದೈಹಿಕ ಚರ್ಯೆಗಳು ಸಂಪೂರ್ಣ ಬದಲಾವಣೆಗೊಳಪಡುತ್ತವೆ.

ಪ್ರತ್ಯೇಕ ಹಸಿರು ಗುಡಿಸಲಿನಲ್ಲಿ ವಾಸಿಸುವ ಆ ಹೆಣ್ಣು ದೈಹಿಕವಾಗಿ ಬ್ಲಿಡಿಂಗ್‌ಹೋಗುವುದರಿಂದ ಅವಳು ತುಂಬಾ ಕೃಶಳಾಗುತ್ತಾಳೆ. ಅಂತಹ ಸಂದರ್ಭದಲ್ಲಿ ನೆಂಟರಿಷ್ಟರು, ಸಂಬಂಧಿಕರು ಒಳ್ಳೊಳ್ಳೆ ಊಟ, ಸಿಹಿತಿಂಡಿಗಳನ್ನು ಮಾಡಿ ತಂದು ಕೊಡುವರು. ಇದು ಬೇಡರಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಪದ್ಧತಿ ಆಗಿದೆ. ಹೆಣ್ಣು ಋತುಮತಿಯಾದ ದಿನ, ಸೋದರ ಅತ್ತೆ ಅಥವಾ ಜಾಕೀಟಿನ ಬಟ್ಟೆ ಕೊಟ್ಟು ಅವಳ ಮಡಿಲಿಗೆ ಒಡ್ಲಕ್ಕಿ ಹಾಕುವರು. ೧೨ನೇ ದಿನ ಮುಗಿಯುವವರೆಗೆ ಋತುಮತಿಯಾದ ಹೆಣ್ಣು ಹಸಿರು ಗುಡಿಸಲಿನಲ್ಲಿ ವಾಸ ಇರುತ್ತಾಳೆ. ಆ ದಿನಗಳಲ್ಲಿ ಅವಳ ದೇಹಕ್ಕೆ ಅರಿಶಿಣ ಬಳಿಯುವರು. ಅಂದಿನ ದಿನಗಳಲ್ಲಿ ಯಾರೂ ಅವಳನ್ನು ಮುಟ್ಟುವುದಿಲ್ಲ. ಹಸಿರು ಗುಡಿಸಲಿನಲ್ಲಿ ವಾಸಿಸುವ ಋತುಮತಿಯಾದ ಹೆಣ್ಣು ಸಂಪೂರ್ಣ ದಿನಪೂರ್ತಿ ವಿಶ್ರಾಂತಿಯಿಂದ ಇರುತ್ತಾಳೆ. ಇದು ಒಂದು ರೀತಿಯಲ್ಲಿ ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಮ್ಯಾಸಬೇಡರಲ್ಲಿ ಶುಚಿಯನ್ನು ಬಯಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಕೊನೆಯ ದಿನ ಹಸಿರುಗುಡಿಸಲಿನಿಂದ ಋತುಮತಿಯಾದ ಹೆಣ್ಣನ್ನು ಎಬ್ಬಿಸುವ ಶಾಸ್ತ್ರ ಮಾಡುತ್ತಾರೆ. ಅಂದು ಪೋಷಕರು ಸಿಹಿ ಅಡಿಗೆ ಮಾಡಿಸಿರುತ್ತಾರೆ. ಶಾಸ್ತ್ರಮಾಡುವಾಗ ಋತುಮತಿಯಾದ ಹೆಣ್ಣಿಗೆ ಹೊಸಬಟ್ಟೆ ಉಡಿಸಿ ಊರ ಹೊರಗಿನ ತಂಗಟಿ ಗಿಡ ದಾಟಿಸುವರು. ಆಮೇಲೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸುವರು. ನಂತರ ಮನೆ ಹತ್ತಿರ ಅವಳ ಸೋದರಮಾವನಿಂದ ಅವರ ನಾಲಿಗೆಗೆ ಬೆಂಕಿಯಿಂದ ಕಾಸಿದ ಬೇವಿನ ಕಡ್ಡಿ ಮುಟ್ಟಿಸುವರು. ಅಲ್ಲಿಗೆ ಅವಳ ಮೈಲಿಗೆ ಹೋಯಿತು ಅಂತ ಭಾವಿಸುತ್ತಾರೆ. ಅಂದು ರಾತ್ರಿ ಆ ಹೆಣ್ಣನ್ನು ಕೂರಿಸಿ ಆರತಿ ಮಾಡುವರು. ಅಂತಹ ಸಂದರ್ಭದಲ್ಲಿ ಅಲ್ಲಿಗೆ ಬಂದು ಸೇರಿದ್ದ ಹೆಂಗಸರ ಪಾತ್ರ ಮುಖ್ಯವಾಗುತ್ತದೆ. ಮುತ್ತೈದೆಯರು ಸೇರಿಕೊಂಡು ಸೊಬಾನೆ ಹಾಡುವರು. ಹೊಸ ಸೀರೆಯನ್ನು ಋತುಮತಿಯಾದ ಹುಡುಗಿಗೆ ಉಡಿಸಿ ಸಂಭ್ರಮಿಸುವರು. ನಂತರ ಹತ್ತಿರದ ಹಳ್ಳಕ್ಕೆ ಹೋಗಿ ಗಂಗಾದೇವತೆ ಮಾಡಿಕೊಂಡು ಬರುವರು. ವಾಲ್ಮೀಕಿ, ಬೇಡ, ನಾಯಕ, ಪರಿವಾರದವರೆಲ್ಲರೂ ಈ ಆಚರಣೆ ಮಾಡುವರು.

ಋತುಮತಿಯಾದ ಹೆಣ್ಣು ಊಟ ಮಾಡುವ ಪದ್ಧತಿಯನ್ನು ಮ್ಯಾಸಬೇಡ ಹೆಣ್ಣುಮಗಳಾದ ಜಯಮ್ಮ (ಪೇಲಠಹಟ್ಟಿ) ಹಿಗೆ ವಿವರಿಸುವರು: ಋತುಮತಿಯಾದಾಕೆ ಮೊದಲನೆ ದಿನ ಕಿರುಬೆರಳಿನಿಂದ ಒಂದೊಂದೆ ಅಗಳು ತೆಗೆದುಕೊಂಡು ತಿನ್ನಬೇಕು. ಎರಡನೆ ದಿನ ಮೂರುಬೆರಳು, ನಾಲ್ಕುನೆದಿನ ನಾಲ್ಕು ಬೆರಳು, ಐದನೆ ದಿನ ಐದುಬೆರಳು ಉಪಯೊಗಿಸಿ ಆಹಾರವನ್ನು ತಿನ್ನಬೇಕು ಅಂತ ಹೇಳುತ್ತಾರೆ. ಬಹುತೇಕ ಮ್ಯಾಸಬೇಡ, ಊರಬೇಡ ಹೆಂಗಸರು ಋತುಮತಿಯಾದಾಗ ಹೀಗೆ ಮಾಡುತ್ತಾರೆ. ಸಂಪ್ರದಾಯ ಮತ್ತು ಮೂಢನಂಬಿಕೆಗೆ ಬದ್ಧರಾಗಿರುವ ಮನೆಗಳಲ್ಲಿ ಈ ಪದ್ಧತಿ ಇಂದಿಗೂ ಇದೆ. ಆದರೆ ಶಿಕ್ಷಣ ಪಡೆದ ಮಹಿಳೆಯರಲ್ಲಿ ಮತ್ತು ಮುಂದುವರೆದ ಕುಟುಂಬಗಳಲ್ಲಿ ಹೆಚ್ಚಿನದಾಗಿ ಕಂಡುಬರುವುದಿಲ್ಲ. ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರಲ್ಲಿ ಇಂತಹ ಆಚರಣೆಗಳು ಹೆಚ್ಚಿನದಾಗಿ ಕಂಡುಬರುವುದಿಲ್ಲ.

ಮ್ಯಾಸಬೇಡರು ಹೆಚ್ಚಿನ ಪಾಲು ವಾಸಿಸುವ ನೆಲಗೆತ್ತನಹಟ್ಟಿ (ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು)ಯಲ್ಲಿ ಋತುಮತಿಯಾದ ಹೆಣ್ಣು ಮಗಳಿಗೆ ಅವಳ ಸೋದರ ಅತ್ತೆಯಿಂದ ನೀರು ಹಾಕಿಸಿ ಆ ದಿನವೇ ತಾವು ವಾಸಿಸುವ ಮನೆಗೆ ಬಿಟ್ಟು ಕೊಳ್ಳುತ್ತಾರೆ. ಆಮೇಲೆ ಆ ಹೆಣ್ಣಿಗೆ ಮದುವೆ ನಿಗದಿಯಾದ ದಿನಕ್ಕೆ ೧೦-೧೨ದಿನ ಮುಂಚಿತವಾಗಿ ಅವಳನ್ನು ಮನೆಯಲ್ಲಿ ಒಂದು ವಾಸಿಸಲು ಬಿಡುತ್ತಾರೆ. ಋತುಮತಿಯಾದಾಗ ಮಾಡುವ ಆಚರಣೆಯನ್ನು ಈಗ ಮಾಡುತ್ತಾರೆ. ಆವಾಗ ಅವಳ ದೇಹಕ್ಕೆ ಅರಿಶಿಣ ಲೇಪನ ಮಾಡುತ್ತಾರೆ. ನೆಂಟರಿಷ್ಟರು, ನೆರೆ-ಹೊರೆಯವರು, ಸಂಬಂಧಿಕರು, ಅಣ್ಣ ತಮ್ಮಂದಿರ ಮನೆಯವರು ಅವಳಿಗೆ ಸಿಹಿ ಅಡಿಗೆ ಮಾಡಿ ತಂದುಕೊಡುತ್ತಾರೆ. ಆ ದಿನಗಳಲ್ಲಿ ವಿಶೇಷವಾದ ಊಟವನ್ನು ಆ ಹೆಣ್ಣಿಗೆ ಕೊಡುತ್ತಾರೆ. ೧೦-೧೨ದಿನ ಹೀಗೆ ಮಾಡಿ ಕೊನೆಯ ದಿನ ಶಾಸ್ತ್ರ ಮಾಡುತ್ತಾರೆ. ಪರಿವಾರದವರಲ್ಲಿಯೂ ಹೀಗೆ ಕೆಲವು ಕಡೆ ಮಾಡ್ತಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಕೋಳದ ಕಡೆಯ ಪರಿವಾರದವರಲ್ಲಿ ಕೆಲವರು ಹುಡುಗಿ ಕುಳ್ಳಿ ಹಾಕ್ತಾಳೆ ಅಂತ ಋತುಮತಿಯಾದಾಗ ಮಾಡುವ ಆಚರಣೆಯನ್ನು ಮದುವೆಗೆ ಮುಂಚಿನ ೧೦-೧೨ದಿವಸದಲ್ಲಿ ಮಾಡುತ್ತಾರೆ. ಕರ್ನಾಟಕದ ಎಲ್ಲಾ ಬೇಡರಲ್ಲಿ ಹೆಚ್ಚಿನದಾಗಿ ಈ ಆಚರಣೆಯನ್ನು ಮಾಡುತ್ತಾರೆ.