ಬುಡಕಟ್ಟು ಜನಾಂಗಗಳ ಅಧ್ಯಯನಗಳು ಸಾಂಸ್ಕೃತಿಕ ತಿಳಿವಳಿಕೆ ತುಂಬಾ ಸಹಕಾರಿ. ಈ ಬುಡಕಟ್ಟು ಸಮಾಜ ಮತ್ತು ಸಂಸ್ಕೃತಿಗಳು ಜೀವನ ಶೈಲಿಯ ವೈವಿಧ್ಯತೆಯಲ್ಲಿ ಏಕತೆಯನ್ನು ಉಳಿಸಿಕೊಂಡಿವೆ. ಇವರ ಸಂಸ್ಕೃತಿಯಲ್ಲಿ ಹೆಚ್ಚಿನದಾಗಿ ಅಧೀನ ಸಮುದಾಯದ ಕನಸು ಮತ್ತು ಸ್ಮೃತಿಗಳನ್ನು ಕಾಣುತ್ತೇವೆ. ಇವರ ಸ್ಮೃತಿಗಳು ಯುಗ-ಯುಗಗಳನ್ನು ದಾಖಲಿಸುತ್ತವೆ. ಸಮಷ್ಟಿಪ್ರಜ್ಞೆಯನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವಂತಹ ಬುಡಕಟ್ಟಿನ ಸಮೂಹದಲ್ಲಿ ವಿಸ್ಮಯವಾದ ಸಾಂಸ್ಕೃತಿಕ ಅನನ್ಯತೆಯನ್ನು ನೋಡುತ್ತೇವೆ. ಇಲ್ಲಿನ ವ್ಯಕ್ತಿ-ಸಮಾಜ-ಸಂಸ್ಕೃತಿ-ಪ್ರಕೃತಿ ಇವೆಲ್ಲವು ಒಂದಕ್ಕೊಂದು ಪೂರಕವಾಗಿ ಬೆರೆತು ಪಾರಂಪರಿಕ ಜೀವನ ಮೌಲ್ಯಗಳನ್ನು ಗಟ್ಟಿ ಮಾಡಿವೆ. ಇಂತಹ ಅಪ್ಯಾಯಮಾನವಾದ ಬುಡಕಟ್ಟು ಸಂಸ್ಕೃತಿಯಲ್ಲಿ ಭೂಮಿಯ ವಾಸನೆ ಸಿದ್ದಿಯಾಗಿದೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಸಾವಿರಾರು ಬುಡಕಟ್ಟುಗಳು ಉಸಿರಾಡುತ್ತಿವೆ. ಆಫ್ರಿಕಾದ ಬುಡಕಟ್ಟಿನ ಜನರಿಗೂ ಮತ್ತು ಭಾರತೀಯ ಬುಡಕಟ್ಟಿನ ಜನರಿಗೂ ಅವರವರ ಸಂಸ್ಕೃತಿಯಲ್ಲಿ ಸಾಕಷ್ಟು ಉಳವಿಗೆ ಸಹಕಾರಿಯಾಗಿದೆ. ಹಾಗೆಯೆ ಭಾರತೀಯ ಸಂಸ್ಕೃತಿಯಲ್ಲಿ ಅಸಂಖ್ಯಾತ ಬುಡಕಟ್ಟು ಸಂಸ್ಕೃತಿಗಳು ವಿಶಿಷ್ಟ ಶೈಲಿಯಲ್ಲಿ ರೂಪಗೊಂಡಿರುತ್ತವೆ. ಇಲ್ಲಿನ ಪ್ರತಿಯೊಂದು ಬುಡಕಟ್ಟು ಜನಾಂಗಗಳ ಜೀವನಶೈಲಿ, ಮೂಢನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ವಿಧಿ-ನಿಯಮ, ವೃತ್ತಿ, ಕಾನೂನು, ಕಟ್ಟಳೆ, ಸಂಸ್ಕೃತಿ ಹೀಗೆ ಇನ್ನೀತರ ಹತ್ತು ಹಲವು ಆಚರಣೆಗಳಲ್ಲಿ ಬಹುರೂಪಿಯಾದಂತಹ ವಿಸ್ಮಯ ಲೋಕವನ್ನೇ ನೋಡುತ್ತೇವೆ. ಇಂತಹ ವಿಸ್ಮಯ ಲೋಕದೊಳಗಿನ ಸಂಸ್ಕೃತಿಯ ಅಧ್ಯಯನವನ್ನು ಕೈಗೊಳ್ಳುವುದರಿಂದ ಸಮಾಜದ ಒಳನೋಟಗಳು ನಮ್ಮ ಅರಿವಿಗೆ ಬರುತ್ತವೆ. ಆದ್ದರಿಂದಲೇ ಭಾರತವನ್ನು ಆಳಲು ಬಂದ ಬ್ರಿಟಿಷರು ಇಲ್ಲಿನ ಸಂಸ್ಕೃತಿಯ ಅಧ್ಯಯನವನ್ನು ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ವೆರಿಯರ್, ಎಲ್ಲಿನ್‌ರಂತಹ ಸಂಶೋಧಕರು ಭಾರತದ ಬುಡಕಟ್ಟುಗಳು ಬಗ್ಗೆ ಅಧ್ಯಯನ ಕೈಗೊಂಡು ಅವರ ಉದ್ಧಾರಕ್ಕಾಗಿ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯವು ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾದುದು. ಈ ರಾಜ್ಯವು ತನ್ನ ಒಡಲಲ್ಲಿ ಅನೇಕ ಬುಡಕಟ್ಟು ಜನಾಂಗಗಳನ್ನು ಗರ್ಭೀಕರಿಸಿಕೊಂಡಿದೆ. ಕರ್ನಾಟಕವು ಪ್ರಾದೇಶಿಕವಾಗಿ ವಿಭಿನ್ನ ಸಂಸ್ಕೃತಿಯ ಬುಡಕಟ್ಟು ಜನಾಂಗಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಬಹು ಮುಖ್ಯವಾಗಿರುವ ಬುಡಕಟ್ಟುಗಳೆಂದರೆ ಸೋಲಿಗರು, ಗೊಂಡರು, ಕೊರಗರು, ಸಿದ್ಧಿಯರು, ಜೇನು ಕುರುಬರು, ಕಾಡು ಕುರುಬರು, ಹಸಲರು, ಹಾಲಕ್ಕಿ ಒಕ್ಕಲಿಗರು, ಯರವರು, ಮುಕ್ರಿಯರು, ಕಾಡುಗೊಲ್ಲರು ಮತ್ತು ಮ್ಯಾಸಬೇಡರು. ಈ ಎಲ್ಲಾ ಬುಡಕಟ್ಟುಗಳು ಕಲ್ಮಾತಕವಾದ ಸಾಂಸ್ಕೃತಿಕ ಅನನ್ಯತೆ ಹೊಂದಿ, ಸಮಾಜ ಮತ್ತು ಸಂಸ್ಕೃತಿಯ ಜೊತೆ ವಿಶಿಷ್ಟವಾದ ಮೌಲ್ಯಗಳನ್ನು ರೂಢಿಸಿಕೊಂಡಿವೆ. ಹಾಗಾಗಿ ಇಂತಹ ಬುಡಕಟ್ಟಿನ ಸಂಸ್ಕೃತಿಯ ಮೇಲೆ ವಿಶಿಷ್ಟವಾದ ಅಧ್ಯಯನಗಳು ನಡೆದಿವೆ. ಆ ಅಧ್ಯಯನಗಳು ಬುಡಕಟ್ಟು ಸಂಸ್ಕೃತಿಯ ಸಮಷ್ಟಿ ಪ್ರಜ್ಞೆಯನ್ನು ಗುರುತಿಸಿರುತ್ತವೆ.

ಅದರಲ್ಲೂ ಮುಖ್ಯವಾಗಿ ಮ್ಯಾಸ ಬೇಡರ ಸಂಸ್ಕೃತಿಯ ಮೇಲೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಬೇಡ ಜನಾಂಗದವರು ಬಯಲು ಸೀಮೆಯಾದ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಈ ಅಧ್ಯಯನಗಳು ಅವರ ಸಂಸ್ಕೃತಿ ಮೇಲೆ ವಿಸ್ಮಯಕಾರಿಯಾದ ಬೆಳಕು ಚೆಲ್ಲಿದೆ. ಮ್ಯಾಸಬೇಡರ ಸಂಸ್ಕೃತಿಯನ್ನು ಪ್ರಧಾನ ಅಂಶವಾಗಿಟ್ಟುಕೊಂಡು ಅನೇಕ ವಿದ್ವಾಂಸರು ಸಂಶೋಧನೆ ನಡೆಸಿ ಬೇರೆ ಜಗತ್ತಿಗೆ ಆ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಪ್ರಮುಖವಾಗಿ ಇ. ಧರ್ಸ್‌‌ಟನ್‌,

[1] ಎಲ್‌.ಕೆ. ಅನಂತಕೃಷ್ಣ ಅಯ್ಯರ್ ಮತ್ತು ಹೆಚ್‌.ವಿ.ನಂಜುಂಡಯ್ಯ,[2] ಡಾ.ಕೃಷ್ಣಮೂರ್ತಿ ಹನೂರು,[3] ಡಾ.ಎಂ.ಜಿ. ಈಶ್ವರಪ್ಪ,[4] ಪ್ರೊ. ಲಕ್ಷ್ಮಣ್ ತೆಲಗಾವಿ,[5] ಡಾ. ಮೀರಾಸಾಬಿಹಳ್ಳಿ ಶಿವಣ್ಣ,[6] ಡಾ.ಕರಿಶೆಟ್ಟಿ ರುದ್ರಪ್ಪ,[7] ಪ್ರಭಾಕರ ಎ.ಎಸ್‌.,[8] ಡಾ. ಪೂಜಾರಹಳ್ಳಿ ವಿರೂಪಾಕ್ಷಿ,[9] ಇನ್ನು ಮುಂತಾದವರು ಕೈಗೊಂಡಿದ್ದಾರೆ. ಈ ಎಲ್ಲಾ ವಿದ್ವಾಂಸರು ಮ್ಯಾಸಬೇಡರ ಸಂಸ್ಕೃತಿಯನ್ನು ಸಾಮಾಜಿಕ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ, ಮನೋವಿಶ್ಲೇಷಣೆಯ ದೃಷ್ಟಿಯಿಂದ ತಾತ್ವಿಕವಾಗಿ, ಸಾಂಸ್ಕತಿಕವಾಗಿ ಅಧ್ಯಯನವನ್ನು ಮಾಡಿದ್ದಾರೆ.

ಮ್ಯಾಸಬೇಡರು ಅಂದರೆ ಯಾರು? ಅವರ ಮೂಲ ಏನು? ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಒಂದು ಅಭಿಪ್ರಾಯವನ್ನು ಇಲ್ಲಿ ಹೇಳಬೇಕಾಗುತ್ತದೆ. ಈ ಮ್ಯಾಸಬೇಡರು ಮ್ಯಾಸ ಮಂಡಲದಲ್ಲಿ ವಾಸಿಸುವ ಜನರು. ಇಂದಿನ ದಿನಗಳಲ್ಲಿ ಹಟ್ಟಿ (ಊರು) ಎಂದು ಕರೆಯುತ್ತಾರೆ. “ಈ ಮ್ಯಾಸಮಂಡಲ ಪ್ರಾರಂಭ ಆಗಿದ್ದೇ ದ್ವಾಪರಯುಗದ ಕೊನೆಯಲ್ಲಿ ಶ್ರೀ ಕೃಷ್ಣ ಮೂಗನಾಯಕ ಅಂತಕ್ಕಂತವನಿಗೆ ಗೋವುಗಳನ್ನೆಲ್ಲ ಪಾಲನೆ ಮಾಡುವ ಜವಾಬ್ದಾರಿಕೊಟ್ಟು ಆತ ವೈಕುಂಠ ಸೇರಿದ ಅಂತ ಪ್ರತೀತಿ. ಮೂಗನಾಯಕನೇ ನಮ್ಮ ಮ್ಯಾಸ ಮಂಡಲದ ಪೂರ್ವಜ”.[10] ಮೂಗನಾಯಕನಿಂದ ಪಶುಪಾಲನೆ ಪ್ರಾರಂಭವಾಯಿತು. “ಮ್ಯಾಸಬೇಡ” ಎಂಬ ವಿಶೇಷಣ ಪಶುಗಳನ್ನು “ಮೇಯಿಸುವ” ಈ ಶಬ್ದವೇ ಕ್ರಮೇಣ ಮೇಸು>ಮೈಸು>ಮ್ಯಾಸ ಎಂದು ರೂಪಾಂತರಗೊಂಡಂತೆ ಕಾಣುತ್ತದೆ.[11] ಮ್ಯಾಸಬೇಡರನ್ನು ಇನ್ನೊಂದು ರೀತಿಯಲ್ಲಿಯೂ ವ್ಯಾಖ್ಯಾನ ಮಾಡಬಹುದು. ಸಾಮಾನ್ಯವಾಗಿ ಮ್ಯಾಸಬೇಡರು ಮೂಲತಃ ಬೇಡರು. ಇವರು ಪ್ರಾಚೀನಕಾಲದಲ್ಲಿ ಕಿರಾತರಾಗಿ ಕಾಡಿನಲ್ಲಿ ವಾಸಿಸುತ್ತಿದ್ದರು. ಇವರ ವೃತ್ತಿ ಬೇಟೆಯಾಡುವುದು. ಹೀಗೆ ಇವರು ಬೇಟೆಯಾಡಿ ಅರಣ್ಯಗಳಲ್ಲಿ ಜೀವಿಸುತ್ತಿದ್ದರಿಂದ ಬೇಡರು ಎಂದು ಕರೆದರು. ಕ್ರಮೇಣ ಬೇಡ ಎಂಬುದು ಇವರಿಗೆ ಜಾತಿ ಸೂಚಕ ಪದವಾಗಿ ಬಳಕೆ ಆಯಿತು. ಆಮೇಲೆ ಬೇಡರು ಒಂದೇ ಕಡೆ ವಾಸಿಸಲು ಪ್ರಾರಂಭ ಮಾಡಿದರು. ಆಗ ಅಲ್ಲಿನ ಬೇಡರು ಬೇಟೆ, ಪಶುಪಾಲನೆ ಮತ್ತು ಕೃಷಿಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಬದುಕತೊಡಗಿದರು. ತರುವಾಯ ಇದೇ ಬೇಡರು ನಾಡಿನಾದ್ಯಂತ ಚದುರಿ ಬೇರೆ ಬೇರೆ ಹೆಸರುಗಳಿಂದ ಗುರ್ತಿಸಿಕೊಂಡಿದ್ದಾರೆ. ಆದರೆ ಆ ಎಲ್ಲಾ ಹೆಸರಿನ ಮೂಲವೇ ಬೇಡ. ಈ ಬೇಡ ಎಂಬ ಪದವೇ ಜನಪದರ ಸಂಸ್ಕೃತಿಯಲ್ಲಿ ಇಂದಿಗೂ ಉಳಿದಿದೆ.

ಶಿಷ್ಟ ಸಮಾಜದಲ್ಲಿನ ಇತಿಹಾಸ ದಾಖಲೆಗಳನ್ನು ಪರಿಶೀಲಿಸಿದಾಗ ಬೇಡರನ್ನು ವಿವಿಧ ರೀತಿಯಲ್ಲಿ ಗುರುತಿಸಿರುವುದು ನಮಗೆ ತಿಳಿಯುತ್ತದೆ. ಕದಂಬರು ಇವರನ್ನು ಬೇಡ ಎಂದು ಗುರುತಿಸಿದರೆ, ಶಾತವಾಹನರು ತಳವಾರ ಎಂದು ಗುರುತಿಸಿದ್ದಾರೆ. ಅದೇ ರೀತಿ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ “ತಳವಾರ” ಎಂಬ ಹೆಸರು ಬರುತ್ತದೆ. ಕ್ರಮೇಣ ರಾಷ್ಟ್ರಕೂಟರು “ನಾಯಕ” ಪದವಿಗೆ ಬಡ್ತಿ ಕೊಟ್ಟಿದ್ದಾರೆ. ಹಾಗೆಯೇ ಮುಂದುವರೆಯದಂತೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಜೆಗಳು, ಸೈನಿಕರು, ಸೇವಕರು ಹೆಚ್ಚಿನ ಪಾಲು ಬೇಡರೇ ಆಗಿದ್ದರು ಎಂಬ ಮಾಹಿತಿ ನಮಗೆ ಇತಿಹಾಸದಿಂದ ತಿಳಿಯುತ್ತದೆ. ನಂತರ ಹೀಗೆಯೇ ಕಾಲಚಕ್ರ ತಿರುಗಿದಂತೆ ಬೇಡರು ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡರು. ಇವರು ರಾಜಕೀಯ ನಿಪುಣತೆಯನ್ನು ಪಡೆದು ತಮ್ಮದೆ ಆದ ದುರ್ಗ ಕೋಟೆಗಳನ್ನು ಕಟ್ಟಿ ತಮ್ಮ ಅಸ್ತಿತ್ವವನ್ನು ಭದ್ರಮಾಡಿಕೊಂಡರು. ಕಂಪಿಲರಾಯ, ಕುಮಾರರಾಮ, ಹಲಗಲಿಯ ಬೇಡರು, ಸಿಂಧೂರಿನ ಬೇಡರು, ಚಿತ್ರದುರ್ಗದ ನಾಯಕರು ಹೀಗೆ ಅನೇಕ ಬೇಡನಾಯಕರು ಸಾಮ್ರಾಜ್ಯವನ್ನು, ಪಾಳೆ-ಪಟ್ಟುಗಳನ್ನು ಕಟ್ಟಿಕೊಂಡು ದೇಶ ಆಳಿದರು. ಈ ಬೇಡರು ಹೆಚ್ಚು ಕಡಿಮೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ತಮ್ಮನ್ನು ಬೇರೆ ಬೇರೆ ಹೆಸರುಗಳಿಂದ ಗುರ್ತಿಸಿಕೊಂಡಿದ್ದಾರೆ.

ಇಂದಿನ ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಈ ಬೇಡರು (ನಾಯಕರು) ಇದ್ದಾರೆ. ರಾಯಚೂರು, ಗುಲ್ಬರ್ಗ, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಇನ್ನೂ ಮುಂತಾದ ಎಲ್ಲಾ ಜಿಲ್ಲೆಗಳಲ್ಲಿಯೂ ಇವರು ಬೇರೆ ಬೇರೆ ಹೆಸರಿನಲ್ಲಿ ವಾಸವಾಗಿದ್ದಾರೆ. ಬೇಡ, ವಾಲ್ಮೀಕಿ, ತಳವಾರ, ಬೆಸ್ತ, ನಾಯಕ, ಪಾಳೆಗಾರ, ಮ್ಯಾಸಬೇಡ, ಪರಿವಾರದವ ಊರುಬೇಡ, ಎಂದು ಮುಖ್ಯವಾಗಿ ಇವರು ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಹೆಸರುಗಳಿಂದ ಕರೆದಿದ್ದರೂ “ನಾಯಕ” ಜನಾಂಗವೆಂಬುದು ಇಡೀ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ. ಈ ಬೇಡರು “ಕರ್ನಾಟಕದಲ್ಲಿ ಹಾವನೂರು ವರದಿ ಪ್ರಕಾರ ೧೭ ಪರ್ಯಾಯ ಹೆಸರುಗಳಿಂದ ಇವರು ಗುರುತಿಸಿಕೊಂಡಿದ್ದಾರೆ. ೧೯೯೧ ಡಿಸೆಂಬರನಲ್ಲಿ ೪ (ಜಾತಿಯ ಪ್ರಭೇದ) ಹೆಸರುಗಳನ್ನು ಸಂವಿಧಾನದಲ್ಲಿ ಪುನಃ ಅಂಗೀಕರಿಸಿ ಪರಿಶಿಷ್ಟ ವರ್ಗಕ್ಕೆ ಸೇರಿಸಲಾಗಿದೆ.[12] ಕರ್ನಾಟಕ ಸರ್ಕಾರದ ಮೀಸಲಾಯತಿಯ ನಿಯಮಾನುಸಾರ ಬೇಡ (ನಾಯಕ) ಜನಾಂಗದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿದ್ದಾರೆ. ಇವರು ಸರ್ಕಾರದ ಯಾವುದೇ ಸರ್ಕಾರಿ ಹುದ್ದೆಗಳನ್ನು ತೆಗೆದುಕೊಳ್ಳುವಾಗ ೩% ಮೀಸಲಾತಿಯಲ್ಲಿಯೇ ತೆಗೆದುಕೊಳ್ಳಬೇಕು. ಹೀಗೆ ಕರ್ನಾಟಕ ಸರ್ಕಾರ ನಾಯಕ ಜನಾಂಗದವರಿಗೆ ಶೇ. ೩ರಷ್ಟು ಮೀಸಲಾತಿಯನ್ನು ಕೊಟ್ಟು ತನ್ನ ಜವಾಬ್ದಾರಿಯನ್ನು ಕಳೆದುಕೊಂಡಿದೆ.

ಬೇಡ ಜನಾಂಗದ ಸಾಂಸ್ಕೃತಿಕ ವಿವರಗಳು ಹೆಚ್ಚಿನದಾಗಿ ಮ್ಯಾಸಬೇಡರಲ್ಲಿ ಕಂಡು ಬರುವುದರಿಂದ ಇಲ್ಲಿನ ಅಧ್ಯಯನಕ್ಕೆ ಪ್ರಧಾನವಾಗಿ ಮ್ಯಾಸಬೇಡರನ್ನು ಆಯ್ಕೆ ಮಾಡಿಕೊಂಡು ಪೂರಕವಾಗಿ ವಿವಿಧ ರೀತಿಯಲ್ಲಿ ಗುರುತಿಸಿಕೊಂಡಿರುವ ಬೇಡ ಸಮುದಾಯವನ್ನು ತೆಗೆದುಕೊಳ್ಳಲಾಗಿದೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ವಾಸಿಸುವ ಬೇಡರು ಸಾಂಸ್ಕೃತಿಕವಾಗಿ ಏಕ ರೀತಿಯ ಸಂಸ್ಕೃತಿ ಹೊಂದಿದ್ದಾರೆ. ಇಂತಹ ಏಕರೀತಿ ಸಂಸ್ಕೃತಿಯ ವೈಶಿಷ್ಟತೆಯನ್ನು ಮ್ಯಾಸಬೇಡರಲ್ಲಿ ಕಾಣುತ್ತೇವೆ. ಹಾಗಾಗಿ ಇವರನ್ನು ಮುಖ್ಯವಾಹಿನಿಯಲ್ಲಿ ಇಟ್ಟುಕೊಂಡು ಅಲ್ಲಿನ ಸಾಂಸ್ಕೃತಿಕ ವಿವರಗಳನ್ನು ಕುರಿತು ಚರ್ಚೆ ಮಾಡಲಾಗುತ್ತದೆ. ನಾಯಕ ಜನಾಂಗವೆಂದೇ ಗುರುತಿಸಿಕೊಂಡಿರುವ ಮ್ಯಾಸಬೇಡರು ಹೆಚ್ಚಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಕರ್ನಾಟಕದ ಮಧ್ಯಭಾಗದಲ್ಲಿದೆ. ಈ ಜಿಲ್ಲೆ ಬರಗಾಲ ಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿದ್ದರೂ ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ, ಐತಿಹಾಸಿಕವಾಗಿ, ಪರಂಪರೆಯ ಉದ್ದಕ್ಕೂ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವಾಸಮಾಡುವ ಮುಖ್ಯ ಬುಡಕಟ್ಟು ಜನಾಂಗಗಳೆಂದರೆ ನಾಯಕರು ಮತ್ತು ಗೊಲ್ಲರು. ಇಲ್ಲಿನ ನಾಯಕರನ್ನು ಮ್ಯಾಸಬೇಡರು (ಮ್ಯಾಸನಾಯಕರು) ಮತ್ತು ಊರಬೇಡರು (ಊರನಾಯಕರು) ಎಂದು ಗುರುತಿಸಿದರೆ, ಗೊಲ್ಲರನ್ನು ಕಾಡುಗೊಲ್ಲರು ಮತ್ತು ಊರಗೊಲ್ಲರು ಎಂದು ಗುರುತಿಸಿರುತ್ತಾರೆ. ಮ್ಯಾಸಬೇಡರು ಮತ್ತು ಕಾಡುಗೊಲ್ಲರಿಗೆ ಸಹೋದರ ಸಂಬಂಧಗಳಿವೆ. ಎರಡು ಬುಡಕಟ್ಟುಗಳಲ್ಲಿ ಜೀವನ ಶೈಲಿ, ಆಹಾರ, ಉಡುಪು, ಕೃಷಿ, ಆಚರಣೆ, ಸಂಪ್ರದಾಯ, ನಂಬಿಕೆ, ಹಬ್ಬ-ಹರಿದಿನ, ಮದುವೆ ಇನ್ನೂ ಮುಂತಾದ ಸಂದರ್ಭಗಳಲ್ಲಿ ಸಾಕಷ್ಟು ಸಾಮ್ಯತೆ ಕಾಣುತ್ತೇವೆ. ಹೇಗೆಂದರೆ, “ಹಳೆಯ ತಲೆಮಾರಿನ ಮ್ಯಾಸನಾಯಕರ ಯಜಮಾನರು ಕಾಡುಗೊಲ್ಲರಂತೆ ತಲೆಕೂದಲನ್ನು ಕತ್ತರಿಸದೆ “ತುರುಬು” ಕಟ್ಟುವುದನ್ನು ಇಂದೂ ಕಾಣಬಹುದು (ಆದರೆ ಮುಂದಲೆಯ ಕೂದಲನ್ನು ಚಂದ್ರಾಕಾರವಾಗಿ ಕತ್ತರಿಸುತ್ತಾರೆ). ಕಾಡುಗೊಲ್ಲ ಹೆಂಗಸರು ಮೇಲುರವಿಕೆ (ಕುಪ್ಪಸ) ತೊಡದಿರುವಂತೆ, ಹಳೆಯ ಕಾಲದ ಮ್ಯಾಸಬೇಡರ ಹೆಂಗಸರೂ ರವಿಕೆ ತೋಡುವುದಿಲ್ಲ. ಕಾಡುಗೊಲ್ಲರ ಹೆಂಗಸರು ಮುಂಗೈಗೆ “ಗೊಲ್ಲಕಡಗ” ಧರಿಸಿದರೆ, ಅದನ್ನೇ ಹೋಲುವಂತಹ “ಬುದ್ದು” ಎಂಬ ಹಿತ್ತಾಳೆಯ ಆಭರಣವನ್ನು ಇವರು ಮುಂಗೈಗೆ ತೊಡುತ್ತಾರೆ.[13] ಹೀಗೆ ಮ್ಯಾಸಬೇಡರು ಮತ್ತು ಕಾಡುಗೊಲ್ಲರ ಸಂಸ್ಕೃತಿಯಲ್ಲಿ ಅನನ್ಯವಾದಂತಹ ಸಾಮ್ಯತೆ ಕಾಣುತ್ತೇವೆ. ಹಾಗಾಗಿ ಈ ಎರಡೂ ಬುಡಕಟ್ಟು ಸಂಸ್ಕೃತಿಯಲ್ಲಿ ಒಂದೇ ರೀತಿಯ ಜೀವನ ಕ್ರಮವಿದೆ.

ಕರ್ನಾಟಕವು ವಿವಿಧ ರೀತಿಯ ಕುಲ, ಜಾತಿ, ಮತ, ಧರ್ಮಗಳನ್ನು ಹೊಂದಿದೆ. ಇದರಲ್ಲಿ ನಾಯಕ ಜನಾಂಗವು ಒಂದು ಭಾಗವಾಗಿ ಉಸಿರಾಡುತ್ತಿದೆ. ಉತ್ತರ ಕರ್ನಾಟಕ, ಮಧ್ಯಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಂಗಳೂರು ಕರ್ನಾಟಕಗಳಲ್ಲಿ ನಾಯಕ ಜಾತಿಯವರು ತಮ್ಮದೇ ಆದ ರೀತಿಯಲ್ಲಿ ವೃತ್ತಿಗಳಲ್ಲಿ ಸೇರಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ರಾಯಚೂರು, ಬೆಳಗಾವಿ, ಗುಲ್ಬರ್ಗಗಳಲ್ಲಿ ಬೇಡ, ವಾಲ್ಮೀಕಿ, ನಾಯಕ, ಪಾಳೆಗಾರ ಎಂದು ಗುರುತಿಸಿದರೆ, ಅದೇ ಮೈಸೂರು ಕರ್ನಾಟಕದಲ್ಲಿ ಪರಿವಾರದವರು, ನಾಯಕರು, ತಳವಾರ, ಪಾಳೆಯಗಾರರು ಎಂದು ಗುರುತಿಸಿದ್ದಾರೆ. ಹಾಗೆಯೇ ಮಧ್ಯ ಕರ್ನಾಟಕದಲ್ಲಿ ನಾಯಕ, ತಳವಾರ, ಪಾಳೆಯಗಾರ ಎಂದು ಕರೆಸಿಕೊಂಡಿದ್ದಾರೆ. ಮಂಗಳೂರು ಕರ್ನಾಟಕದಲ್ಲಿಯೂ ನಾಯಕರು ತುಂಬಾ ಕಡಿಮೆ ಪ್ರಮಾಣದಲ್ಲಿದ್ದಾರೆ. ಅಲ್ಲಿಯ ನಾಯಕರು “ಬೆಸ್ತರು” ಎಂದು ಗುರುತಿಸಿಕೊಂಡಿದ್ದಾರೆ. ಹೀಗೆ ಇರುವ ನಾಯಕರು ಚಿತ್ರದುರ್ಗ ಭಾಗದಲ್ಲಿ ಸಾಂಸ್ಕೃತಿಕವಾಗಿ ತುಂಬಾ ವಿಶಿಷ್ಟವಾಗಿ ಇದ್ದಾರೆ. ಈ ಚಿತ್ರದುರ್ಗ ಜಿಲ್ಲೆಯ ನಾಯಕರುಗಳು ತಮ್ಮನ್ನು ಊರುನಾಯಕರು (ಊರುಬೇಡ) ಮತ್ತು ಮ್ಯಾಸ ನಾಯಕರು (ಮ್ಯಾಸಬೇಡ) ಎಂದು ವಿಭಾಗ ಮಾಡಿಕೊಂಡಿದ್ದಾರೆ. ಆದರೆ ಬೇಡ, ವಾಲ್ಮೀಕಿ, ತಳವಾರ, ಪರಿವಾರದವರು ಪಾಳೆಯಗಾರರಲ್ಲಿ ಈ ರೀತಿಯ ವಿಭಜನೆ ಕಂಡು ಬರುವುದಿಲ್ಲ. ಇಲ್ಲಿನ ಪ್ರತಿಯೊಂದು ಭಾಗದ ನಾಯಕರುಗಳಲ್ಲಿ ಅಣ್ಣ-ತಮ್ಮಂದಿರಾಗಿ ಗುರುತಿಸಿಕೊಳ್ಳುವ ಕುಲಗಳು. ನೆಂಟರಿಷ್ಟರಾಗಿ ಗುರುತಿಸಿಕೊಳ್ಳುವ ಕುಲಗಳು ಮಾತ್ರ ಕಂಡುಬರುತ್ತವೆ. ಈ ರೀತಿಯ ಕುಲಗಳನ್ನು ಮ್ಯಾಸಬೇಡರು ಮತ್ತು ಊರ ಬೇಡರಲ್ಲಿಯೂ ನೋಡುತ್ತೇವೆ.

ಪ್ರಾಚೀನ ಕಾಲದಲ್ಲಿ ಮ್ಯಾಸಬೇಡರು ಅರಣ್ಯ (ಅಡವಿ) ಗಳಲ್ಲಿ ವಾಸವಾಗಿದ್ದಾರೆ. ಊರಬೇಡರು ಊರುಗಳಲ್ಲಿ ವಾಸವಾಗಿದ್ದರು. ಈ ಎರಡು ಪಂಗಡಗಳ ಕುಟುಂಬಗಳು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಭಾಗದಲ್ಲಿ ಕಂಡು ಬರುತ್ತವೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಚಿತ್ರದುರ್ಗಗಳಲ್ಲಿ ಮ್ಯಾಸಬೇಡರು ಹೆಚ್ಚಿನದಾಗಿ ಇದ್ದಾರೆ. ಅದೇ ರೀತಿ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಊರನಾಯಕರು ಹೆಚ್ಚಾಗಿ ಸಿಗುತ್ತಾರೆ. ಮ್ಯಾಸ ಮಂಡಲಗಳಲ್ಲಿ ವಾಸಿಸುವ ನಾಯಕರನ್ನು ಎಂದು ಗುರುತಿಸಿದ್ದಾರೆ. ಆದರೆ ಎರಡೂ ಜನಾಂಗದವರು ಇಂದು ಹೆಚ್ಚಿನದಾಗಿ ಊರುಗಳಲ್ಲಿ ವಾಸವಾಗಿದ್ದಾರೆ. ಇವರು ವಾಸಮಾಡುವ ಕೇರಿಗಳನ್ನು ಮ್ಯಾಸ ಬೇಡರ ಕೇರಿ, ಊರ ಬೇಡರ ಕೇರಿ ಎಂದು ಇವತ್ತಿಗೂ ಕರೆಯುತ್ತಾರೆ. “೨೦೦೧ರ ಜನಗಣತಿ ಪ್ರಕಾರ ಸು. ೩,೪೬೩೯೮೬ ಜನ ಈ ಪರಿಶಿಷ್ಟ ವರ್ಗದ ಜನರಿದ್ದಾರೆ.” ಇದರಲ್ಲಿ ೧೭೫೬೨೩೮ ಪುರುಷರು, ೧೭೦೭೭೪೮ ಮಹಿಳೆಯರಿದ್ದಾರೆ. ಈ ಊರಬೇಡರಿಗಿಂತ ಮ್ಯಾಸಬೇಡರು ಸಾಂಸ್ಕೃತಿಕ ಜೀವನದ ಬಗ್ಗೆ ಇಲ್ಲಿಯವರೆಗೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಾ ಬಂದಿವೆ. ಇಡಿಯಾಗಿ ಮ್ಯಾಸಬೇಡರ ಸಮಾಜ ಮತ್ತು ಸಂಸ್ಕೃತಿ ಕುರಿತು ಅಧ್ಯಯನಗಳು ನಡೆದಿವೆಯಾದರೂ ಬೇಡರ ಮಹಿಳಾ ಸಂಸ್ಕೃತಿ ಬಗ್ಗೆ ಪ್ರತ್ಯೇಕ ಸಂಶೋಧನೆಗಳು ಇದುವರೆಗೂ ನಡೆದಿಲ್ಲ. ಹಾಗಾಗಿ, ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು “ಸಂಸ್ಕೃತಿ ಮಹಿಳಾ ಮಾಲಿಕೆ” ಎಂಬ ಯೋಜನೆ ಕೈಗೆತ್ತಿಕೊಂಡು ಮಹಿಳೆಯರ ಸಾಂಸ್ಕೃತಿಕ ಪರಿಸರದ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹವಾದುದು.

ಇಂದು ಮಹಿಳಾ ಅಧ್ಯಯನವೆಂಬುದು ಜಾಗತಿಕ ಮಟ್ಟದಲ್ಲಿ ಅಂತರ್ಶಾಸ್ತ್ರೀಯ ವಿಷಯವಾಗಿ ರೂಪಿತವಾಗಿದೆ.

ಸ್ವಾತಂತ್ರ್ಯದ ಸಂದರ್ಭದಲ್ಲಿ ಸಮಾಜದಲ್ಲಿನ ಕುಟುಂಬ ವಿವಾಹ, ಜಾತಿ ಮತ್ತು ಇನ್ನಿತರ ಅಂಶಗಳ ಮೇಲೆ ಅಧ್ಯಯನ ಮಾಡುವಾಗ ಮಹಿಳೆಯರ ಅಧ್ಯಯನವನ್ನು ಮಾಡಿದ್ದಾರೆ. ಅಲ್ಲಿನ ಅಧ್ಯಯನದಲ್ಲಿ ಮೇಲುವರ್ಗದ, ಮಧ್ಯಮ ವರ್ಗದ, ಗ್ರಾಮೀಣ ಮತ್ತು ನಗರ ಸಂಸ್ಕೃತಿಯ ಮಹಿಳಾ ಅಧ್ಯಯನಗಳು ನಡೆದಿದ್ದರೂ ಕೂಡ ಸ್ತ್ರೀಪರ ದೃಷ್ಟಿಕೋನಗಳು ಸರಿಯಾದ ರೀತಿಯಲ್ಲಿ ಇರಲಿಲ್ಲ. ಅದರಲ್ಲೂ ಬುಡಕಟ್ಟು ಜನಾಂಗಗಳ ಮಹಿಳಾ ಅಧ್ಯಯನಗಳು ಶಿಸ್ತುಬದ್ಧವಾಗಿ ನಡೆಯಲು ಸಾಧ್ಯವಾಗಿಲ್ಲ. ೧೯೬೦ರ ದಶಕದಲ್ಲಿ ಅಮೆರಿಕಾದಲ್ಲಿ ಮಹಿಳಾ ಅಧ್ಯಯನ ಶಿಸ್ತು ಬದ್ಧವಾಗಿ ಉಗಮವಾಯಿತು. ಆ ನಂತರ ಜಾಗತಿಕ ಮಟ್ಟದಲ್ಲಿ ಹೊಸ ಅಂದೋಲನ ಸೃಷ್ಟಿಯಾಯಿತು. ಇತ್ತೀಚಿನ ದಿನಗಳಲ್ಲಿ ಮಹಿಳಾ ಅಧ್ಯಯನವು ಹೊಸ ಹೊಸ ಆಯಾಮಗಳನ್ನು ಪಡೆದು ತನ್ನ ವಿಸ್ತಾರವನ್ನು ವ್ಯಾಪಕವಾಗಿ ಬೆಳೆಸಿಕೊಂಡಿದೆ.

ಈ ಹಿನ್ನಲೆಯಲ್ಲಿ ಬೇಡರ ಮಹಿಳೆಯನ್ನು ಕುರಿತು ನಿರ್ಧಿಷ್ಟವಾಗಿ ಅಧ್ಯಯನ ಮಾಡುವುದು ಒಂದು ರೀತಿಯ ಹೊ ಸವಿಷಯವಾಗಿದೆ. ಪಿತೃ ಪ್ರಧಾನ ಸಮಾಜದ ಪರಂಪರೆಯಲ್ಲಿ ಇಲ್ಲಿಯವರೆವಿಗೂ ಮಹಿಳೆಯನ್ನು ಕುರಿತು ಚಿಂತನೆ ನಡೆದಿಲ್ಲ ಅಂತ ಅಲ್ಲ. ಅಲ್ಲಿಯೂ ಒಟ್ಟು ಸಮಾಜದ ಅಧ್ಯಯನದ ಸಂದರ್ಭದಲ್ಲಿ ಮಹಿಳೆಯನ್ನು ಗುರುತಿಸಿದ್ದಾರೆ. ಬೇಡ ಜನಾಂಗದ ಸಂಸ್ಕೃತಿಯನ್ನು ಕುರಿತು ವಿಶ್ಲೇಷಣೆ ಮಾಡಿ ಚರ್ಚೆ ಮಾಡ್ತಾ ಇರುವಾಗ ಸಂಶೋಧಕರು ಪುರುಷಕೇಂದ್ರಿತ ನೆಲೆಯಲ್ಲಿ ನೋಡಿದ್ದಾರೆ. ಆದರೆ ಇಂದು ಮಹಿಳೆಯನ್ನೇ ಪ್ರಧಾನವಾಗಿಟ್ಟುಕೊಂಡು ಅಧ್ಯಯನಗಳು ನಡೆಯುತ್ತಿವೆ. ಮಹಿಳೆಯ ಬದುಕಿನ ವಿವಿಧ ಮುಖಗಳಾದ ಅವಳ ಜೀವನ, ವೃತ್ತಿ, ಕಷ್ಟ-ಸುಖ, ನೋವು-ನಲಿವು ವಿವಿಧ ಆಚರಣೆಗಳಲ್ಲಿ ಇವಳ ಸ್ಥಾನಮಾನ, ಹೀಗೆ ಇನ್ನೂ ಕೆಲವು ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡು ಇಲ್ಲಿ ಅಧ್ಯಯನ ಮಾಡಲಾಗಿದೆ. ಸಮಾಜ ಸಂಸ್ಕೃತಿಯ ಕಾಲಗರ್ಭದಲ್ಲಿ ಸಿಲುಕಿ ನಿರಂತರವಾಗಿ ಬದಲಾವಣೆಗೊಳಪಟ್ಟಿರುತ್ತದೆ. ಇಂತ ವ್ಯವಸ್ಥೆಯಲ್ಲಿನ ಮಹಿಳೆಯ ಸ್ಥಾನಮಾನಗಳು ಹೇಗೆ ಇವೆ? ಅವಳು ಪುರುಷನಷ್ಟೇ ಪ್ರಧಾನಳಾಗಿ ಹೇಗೆ ನಿಲ್ಲುತ್ತಾಳೆ? ಎನ್ನುವ ಕಡೆ ಇಲ್ಲಿ ಯೋಚಿಸಲಾಗಿದೆ. ಹೆಣ್ಣು-ಗಂಡು ಜೈವಿಕ ಕ್ರಿಯೆಯಲ್ಲಿ ಪ್ರಕೃತಿದತ್ತವಾಗಿ ಬದಲಾವಣೆಹೊಂದಿರಬಹುದು. ಆದರೆ ಶಕ್ತಿ-ವ್ಯಕ್ತಿ ಚಿಂತನೆಯಲ್ಲಿ ಮಹಿಳೆಗೆ ಪುರುಷನನ್ನು ಮೀರಿ ನಿಲ್ಲುವ ಶಕ್ತಿ ಇದೆ. ಇಲ್ಲಿ ಮಹಿಳೆ ಸಾಮಾಜಿಕ ವ್ಯವಸ್ಥೆಯ ಬಂದಿಯಾಗಿ ಅವನು ಕೊಟ್ಟಂತಹ ಸ್ಥಾನಮಾನಗಳನ್ನು ಸ್ವೀಕರಿಸುತ್ತಾ ಬಂದಿದ್ದಾಳೆ. ಇಂದು ಈ ಎಲ್ಲಾ ಸ್ಥಿತಿಯನ್ನು ಮೀರಿ, ಗಂಡು-ಹೆಣ್ಣು ಇಬ್ಬರು ಸರಿಸಮಾನರು ಎಂಬುದನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಗುರುತಿಸಬೇಕಾಗಿದೆ. ಈ ಮಾದರಿಯನ್ನು ಸಂಕ್ರಮಣ ಸ್ಥಿತಿಯಲ್ಲಿರುವ ಬೇಡ ಮಹಿಳೆಗೂ ಅನ್ವಯಿಸಬಹುದಾಗಿದೆ.

ಬೇಡರ ಹೆಣ್ಣು ಪುರುಷಕೇಂದ್ರಿತ ಸಮಾಜದಲ್ಲಿದ್ದರೂ ಅವಳಿಗೆ ಸ್ವತಂತ್ರಯ ಇದೆ. ಅವಳು ಆ ಸಮುದಾಯದಲ್ಲಿ ಜೀವನಪೂರ್ತಿ ದುಡಿಯುತ್ತಾಳೆ. ಅವಳಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ತಿಳಿವಳಿಕೆ ಇದೆ. ಜೀವನ ಮೌಲ್ಯಗಳು ಅವಳ ರಕ್ತದ ಕಣಕಣಗಳಲ್ಲಿ ಭದ್ರವಾಗಿ ನೆಲೆಯೂರಿವೆ. ಇವಳಿಗೆ ಸ್ತ್ರೀವಾದ, ಸ್ತ್ರೀಶೋಷಣೆ, ಸ್ತ್ರೀಪರಚಿಂತನೆ ಇಂತಹ ಯಾವ ಸಿದ್ಧಾಂತಗಳ ಅರಿವು ಆಗಲಿ ಇಲ್ಲ. ಇವು ಶಿಷ್ಟ ಸಮಾಜದಲ್ಲಿ ಹುಟ್ಟಿಕೊಂಡ ಸಿದ್ಧಾಂತವಾಗಿವೆ. ಆದರೆ ಅನಕ್ಷರಸ್ಥ ಸಮುದಾಯದ ಹೆಣ್ಣು ಜಾನಪದ ಸಂಸ್ಕೃತಿಯಲ್ಲಿ ಇದ್ದರೂ ಅವಳು ನೈಜತೆಯನ್ನು ಬೆಳೆಸಿಕೊಂಡಿದ್ದಾಳೆ. ಬೇಡರ ಕೆಲವು ಹೆಣ್ಣು ಮಕ್ಕಳು ಪುರುಷನಷ್ಟೇ ಸಮರ್ಥವಾಗಿ ಕೌಟುಂಬಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಮಹಿಳೆ ಹೇಗೆ ಬದುಕುತ್ತಿದ್ದಾಳೆ ಮತ್ತು ಅವಳು ಸಾಮಾಜಿಕ ಸಂಸ್ಥೆಗಳಲ್ಲಿ ಹೇಗೆ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಎನ್ನುವುದನ್ನು ಪ್ರಧಾನವಾಗಿ ಇಲ್ಲಿ ನೋಡಬೇಕಾಗಿದೆ.



[1]        E. Thurston: casts and Tribes of Southern India, Vol. I, A/B, Cosmo publications, Delhi, 1975.

[2]        L.K. Anatha Krishana Iyer and H.V. Nujundiah : The Mysore Tribes and Castes, Mysore University, Mysore.

[3]        ಡಾ. ಕೃಷ್ಣಮೂರ್ತಿ ಹನೂರು: ಮ್ಯಾಸಬೇಡರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೩.

[4]        ಡಾ. ಈಶ್ವರಪ್ಪ, ಎಂ.ಜಿ.: ಮ್ಯಾಸಬೇಡರು, ಐ.ಬಿ.ಹೆಚ್ ಪ್ರಕಾಶನ, ಬೆಂಗಳೂರು, ೧೯೮೨.

[5]      ಲಕ್ಷ್ಮಣ ತೆಲಗಾವಿ: ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆಯಲ್ಲಿ ಪಾಳೆಯಗಾರರ ಆಳ್ವಿಕೆ) ಜಿಲ್ಲಾ ಇತಿಹಾಸ ಸಂಶೋಧನೆ ಮಂಡಲಿ, ಚಿತ್ರದುರ್ಗ, ೧೯೭೬

[6]        ಡಾ. ಮೀರಾಸಾಬಿಹಳ್ಳಿ ಶಿವಣ್ಣ: ಮ್ಯಾಸ ಮಂಡಲ: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ೨೦೦೩.

[7]        ಡಾ. ಕರಿಶೆಟ್ಟಿ ರುದ್ರಪ್ಪ: ಮ್ಯಾಸನಾಯಕರು ಒಂದು ಜನಾಂಗಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

[8]        ಪ್ರಭಾಕರ. ಎ.ಎಸ್‌.ಸಂಪಾದಕರು: ಬುಡಕಟ್ಟು ಮಹಾಕಾವ್ಯ ಮಾಲೆ: ಪಾಲಮ್ಮ ಮತ್ತು ಸಂಗಡಿಗರು ಹಾಡಿದ ಮ್ಯಾಸಬೇಡರ ಕಥನಗಳು. ಪ್ರಕಾಶಕರು:    ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೧೯೯೯.

[9]      ಡಾ. ವಿರುಪಾಕ್ಷಿ ಪೂಜಾರಹಳ್ಳಿ: ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩.

[10]     ಪ್ರಭಾಕರ್ ಎ.ಎಸ್‌. ಸಂಪಾದಕರು: ಬುಡಕಟ್ಟುಮಹಾಕಾವ್ಯಮಾಲೆ: ಪಾಲಮ್ಮ ಮತ್ತು ಸಂಗಡಿಗರು ಹಾಡಿದ ಮ್ಯಾಸಬೇಡರ ಕಥನಗಳು: ಪ್ರಕಾಶಕರು  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೧೯೯೯, ಪುಟ ಸಂಖ್ಯೆ ೩೫.

[11]     ಡಾ. ಮೀರಾಸಾಬಿಹಳ್ಳಿ : ಚಿತ್ರದುರ್ಗ ಜಿಲ್ಲೆಯು ಬುಡಕಟ್ಟು ವೀರರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩, ಪುಟಸಂಖ್ಯೆ ೨೦.

[12]     ಡಾ. ವಿರುಪಾಕ್ಷಿ ಪೂಜಾರಹಳ್ಳಿ: ಚಿತ್ರದುರ್ಗ ಜಿಲ್ಲೆಯು ಬುಡಕಟ್ಟು ವೀರರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩, ಪುಟಸಂಖ್ಯೆ ೨೦.

[13]     ಡಾ. ಮೀರಾಸಾಬಿಹಳ್ಳಿ ಶಿವಣ್ಣ: ಮ್ಯಾಸಮಂಡಲ: ಕ.ಪು.ಪ್ರಾ, ಬೆಂಗಳೂರು, ೨೦೦೩, ಪುಟಸಂಖ್ಯೆ ೦೫.