ಕುಟುಂಬ ಮತ್ತು ಮಹಿಳೆ:

ಬೇಡರ ಜನಾಂಗದಲ್ಲಿ ಕುಟುಂಬಕ್ಕೆ ಅತಿ ಪ್ರಾಮುಖ್ಯತೆ ಇದೆ. ಮೂಲಭೂತವಾಗಿ ಕುಟುಂಬದ ಆಧಾರಸ್ತಂಭ ಮಹಿಳೆ. ಮಗುವಿಗೆ ಮೊದಲ ಗುರು ತಾಯಿ, ಕುಟುಂಬದ ಒಳಗಿನ ಎಲ್ಲಾ ವಹಿವಾಟುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಹೆಣ್ಣು ಪುರುಷಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಿಯೋ ಒಂದು ಕಡೆ ಮೂಲೆಗುಂಪಾಗಿ ಇದ್ದಾಳೆ. ಈ ಬೇಡ ಜನಾಂಗದಲ್ಲಿ ಮಧ್ಯಮ ವರ್ಗದ ಕುಟುಂಬಗಳು ಮತ್ತು ಬಡತನದ ಕುಟುಂಬಗಳನ್ನು ಕಾಣುತ್ತೇವೆ. ಪ್ರತಿಯೊಂದು ಸಮಾಜದಲ್ಲಿಯೂ ಅಲ್ಲಿನ ಹೆಣ್ಣಿಗೆ ಆ ನಿಯಮ ಇದ್ದೇ ಇದೆ. ಅಂದರೆ, ಹೆಣ್ಣು ಹುಟ್ಟಿನಲ್ಲಿ ತಂದೆಯ ಆಶ್ರಯದಲ್ಲಿ ಇರಬೇಕು ಎಂಬ ನಿಯಮ. ಈಗಲೂ ಈ ನಿಯಮವನ್ನು ಬೇಡಜನಾಂಗದ ಕುಟುಂಬ ವ್ಯವಸ್ಥೆಯಲ್ಲಿ ಕಾಣುತ್ತೇವೆ.

ಬೇಡ ಜನಾಂಗದ ಕುಟುಂಬಗಳಲ್ಲಿ ತಂದೆಯೇ ಮನೆಯ ಯಜಮಾನ, ಅವನೇ ಮನೆಯ ವ್ಯವಹಾರವನ್ನು ನೋಡಿಕೊಳ್ಳುವುದು. ಒಂದು ವೇಳೆ ತಂದೆ ಇರದೆ ಇದ್ದರೆ ಹಿರಿಯ ಮಗ ಮನೆಯ ಯಜಮಾನ ಆಗುತ್ತಾನೆ. ಇದು ಬೇಡ ಜನಾಂಗದ ಒಂದು ನಿಯಮ. ಆದರೆ ಎಲೆಯ ಮರೆಯ ಕಾಯಿಯಂತೆ ಮನೆಯೊಳಗೆ ಇದ್ದ ಹೆಣ್ಣು ಕುಟುಂಬದಲ್ಲಿನ ಯಜಮಾನನ ಹೆಂಡತಿಯಾಗಿ, ತಾಯಿಯಾಗಿ ತನ್ನ ಸಲಹೆ ಸಹಕಾರವನ್ನು ಕೊಡುತ್ತಾಳೆ. ಇದು ನಾಲ್ಕು  ಗೋಡೆಯ ಮಧ್ಯೆ ಇರುವ ಕ್ರಿಯೆಯಾಗಿರುತ್ತದೆ. ಇದು ಕರ್ನಾಟಕದ ಬೇಡರ ಜಾತಿಯಲ್ಲಿ ಸಹಜವಾಗಿ ಕಂಡುಬರುತ್ತದೆ. ಮ್ಯಾಸ ಬೇಡ ಆಗಿರುಬಹುದು, ಪರಿವಾರದವರು ಆಗಿರಬಹುದು, ವಾಲ್ಮೀಕಿ ಆಗಿರಬಹುದು, ತಳವಾರ ಆಗಿರಬಹುದು, ಪಾಳೆಯಗಾರರಾಗಿರಬಹುದು, ನಾಯಕರಾಗಿರಬಹುದು, ಊರಬೇಡರಾಗಿರುಬಹುದು. ಈ ಎಲ್ಲಾ ಜನಾಂಗಗಳಲ್ಲಿಯೂ ಈ ವ್ಯವಸ್ಥೆಯನ್ನು ಕಾಣುತ್ತೇವೆ.

ಬೇಡ ಸಮಾಜವು ಪುರುಷ ಪ್ರಧಾನ ಸಮಾಜವಾಗಿರುವದರಿಂದ ಕುಟುಂಬಗಳಲ್ಲಿ ಗಂಡು ಮಗು ಜನನವಾದರೆ ತುಂಬಾ ಸಂತೋಷ ಪಡುತ್ತಾರೆ. ಈ ಸಮುದಾಯದಲ್ಲಿ ಹಬ್ಬದ ವಾತಾವರಣ ತುಂಬಿರುತ್ತದೆ. ಅದೇ ಹೆಣ್ಣು ಮಗು ಜನನವಾದರೆ ಸಹಜವಾಗಿ ಸ್ವೀಕರಿಸುತ್ತಾರೆ. ಮ್ಯಾಸಬೇಡ ಕುಟುಂಬಗಳಲ್ಲಿ “ಗಂಡು”ಮಗುವಿನ ಜನನದ ಬಗ್ಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಆ ಮಗು ಮುಂದಿನ ವಾರಸುದಾರ ಅಂತ ಪರಿಗಣಿಸಿ ಆ ಮಗುವಿನ ಬೆಳವಣಿಗೆಯಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ. ಈ ಕಾಳಜಿಯನ್ನು ವಾಲ್ಮೀಕಿ, ಪರಿವಾರದವರು, ನಾಯಕರು ಇನ್ನಿತರರಲ್ಲಿಯೂ ಕಾಣುತ್ತೇವೆ. ಒಂದು ವೇಳೆ ಕುಟುಂಬದಲ್ಲಿನ ಹೆಂಗಸು ಬರೀ ಹೆಣ್ಣು ಮಕ್ಕಳನ್ನು ಹೆರಿಗೆ ಆಗ್ತಾ ಇದ್ದರೆ, “ಗಂಡು” ಮಗು ಹುಟ್ಟುವವರೆಗೂ ಹೆರಿಗೆ ಆಗ್ತಾನೆ ಇರುತ್ತಾರೆ. ಹೀಗಾಗಿ ನಾವು ಮ್ಯಾಸಬೇಡರ ಸಮಾಜದಲ್ಲಿ ಒಬ್ಬೊಬ್ಬ ಹೆಂಗಸು ೬-೮-೧೦ ಹೆಣ್ಣು ಮಕ್ಕಳನ್ನು ಹೆರಿಗೆ ಆಗಿ ಕೊನೆಗೆ ಗಂಡು ಮಗು ಹುಟ್ಟಿರುವುದನ್ನು ಕಾಣುತ್ತೇವೆ. ಹಳೆಯ ಕಾಲದ ಪರಿವಾರದವರ ಸಮಾಜದಲ್ಲಿಯೂ ಇದು ಕಂಡುಬರುತ್ತದೆ. ಇದು ಸಂಪೂರ್ಣ ಅನಕ್ಷರಸ್ಥ ಕುಟುಂಬಗಳಲ್ಲಿ ಕಂಡುಬರುತ್ತದೆ. ಈ ಬೇಡರ ಪುರುಷನಿಗೆ ಕಿತ್ತು ತಿನ್ನುವ ಬಡತನವಿದ್ದರೂ ಗಂಡು ಮಗು ಹುಟ್ಟಬೇಕು. ಒಂದು ವೇಳೆ ಮೊದಲ ಹೆಂಡತಿಗೆ ಬರಿ ಹೆಣ್ಣು ಮಕ್ಕಳು ಹುಟ್ಟುತ್ತಾ ಇದ್ದರೆ, ಗಂಡು ಮಗುವಿಗಾಗಿ ಇನ್ನೊಂದು ಮದುವೆ ಆಗಿರುವುದು ಇಲ್ಲಿ ಕಂಡುಬರುತ್ತದೆ. ಆದರೆ, ಈ ಅನಕ್ಷರಸ್ಥ ಪುರುಷನಿಗೆ ಗಂಡು ಮಗು ಹುಟ್ಟುವಿಕೆಗೆ ಪುರಷನೇ ಕಾರಣನಾಗುತ್ತಾನೆ ಎಂಬುದು ತಿಳಿಯದೇ ಹೋಗಿರುತ್ತದೆ. ಗಂಡು ಮಗುವಿನ ಹುಟ್ಟಿಗೆ ಕಂಡ-ಕಂಡ ದೇವರಿಗೆ ಹರಕೆ ಹೊತ್ತು ಕೊಳ್ಳುತ್ತಾರೆ.

ಇದೇ ಬೇಡ ಜನಾಂಗದ ಅಕ್ಷರಸ್ಥ ಕುಟುಂಬ ಮತ್ತು ತಿಳಿವಳಿಕೆ ಇರುವ ಕುಟುಂಬಗಳಲ್ಲಿ ಹೆಣ್ಣು ಅಥವಾ ಗಂಡು ಎರಡರಲ್ಲಿ ಯಾವುದಾದರೂ ಸರಿ, ಒಂದು ಅಥವಾ ಎರಡು ಮಕ್ಕಳು ಸಾಕು ಎಂಬ ಅಭಿಪ್ರಾಯಕ್ಕೆ ಕೆಲವರು ಬಂದಿರುತ್ತಾರೆ. ಇತ್ತೀಚೆಗೆ ಅನಕ್ಷರಸ್ಥ ಕುಟುಂಬಗಳು ಇದನ್ನು ಅನುಸರಿಸುತ್ತಿವೆ.

ಕರ್ನಾಟಕದ ಬೇಡರ ಕುಟುಂಬಗಳಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದೆ. ಇವರ ಕುಟುಂಬಗಳಲ್ಲಿ ಅವಿಭಕ್ತ ಕುಟುಂಬಗಳೂ ಮತ್ತು ವಿಭಕ್ತ ಕುಟಂಬದ ಮಹಿಳೆಗಿಂತ ಹೆಚ್ಚಿನದಾಗಿರುತ್ತದೆ. ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಬೇರೆ ಬೇರೆ ಸಮಾಜಗಳಲ್ಲಿಯೂ ಬಹುಮಟ್ಟಿಗೆ ವಿಘಟನೆಯಾಗುತ್ತಿವೆ. ಅದು ಬೇಡರ ಸಮುದಾಯದಲ್ಲಿಯೂ ಕಂಡುಬರುತ್ತದೆ.

ಬೇಡರ ಮಹಿಳೆ ತನ್ನ ಕುಟಂಬದ ಶ್ರೇಯಸ್ಸಿಗೆ ತುಂಬಾ ಕಷ್ಟ ಪಡುತ್ತಾಳೆ. ಕುಟುಂಬದ ಯಜಮಾನನು ಹೊರಗಿನ ಕೆಲಸದಲ್ಲಿ ನಿರತನಾದರೆ ಅವನು ಆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮೇಲೆ ನೆರೆ-ಹೊರೆಯ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾನೆ. ಅದೇ ಅವನ ಹೆಂಡತಿಗೆ ಕೈತುಂಬಾ ಕೆಲಸವಿರುತ್ತದೆ. ಅವಳು ಅಡಿಗೆ ಮಾಡುವ ಕೆಲಸದಿಂದ ಹಿಡಿದು ಮಕ್ಕಳ ಆರೈಕೆ, ಲಾಲನೆ ಪಾಲನೆ ನೋಡಿಕೊಳ್ಳುತ್ತಾಳೆ. ಜೊತೆಗೆ ಗಂಡನ ಸರಿಸಮಾನವಾಗಿ ಹೊರಗಿನ ಕೃಷಿಕ್ಷೇತ್ರದಲ್ಲೂ ದುಡಿಯುತ್ತಾಳೆ. ಮನೆಯೊಳಗಿನ ಕೆಲಸ-ಕಾರ್ಯಗಳಲ್ಲಿ ಪುರುಷನಿಗಿಂತ ಅವಳ ಪಾತ್ರ ಹೆಚ್ಚಿನದಾಗಿರುತ್ತದೆ. ಅಷ್ಟೇ ಅಲ್ಲ, ತೋಟಗಾರಿಕೆ, ಪಶುಪಾಲನೆ ಇನ್ನಿತರ ಕ್ಷೇತ್ರಗಳಲ್ಲಿಯೂ ನಿರತಳಾಗುತ್ತಾಳೆ. ಈ ರೀತಿ ಬೇಡರ ಮಹಿಳೆ ಕೌಟುಂಬಿಕ ಜೀವನದಲ್ಲಿ ನಿರಂತರವಾಗಿ ಕೆಲಸದಲ್ಲಿ ಭಾಗಿಯಾಗಿರುತ್ತಾಳೆ. ಇದು ಬೇಡರ ಎಲ್ಲಾ ಸಮುದಾಯಗಳಲ್ಲಿಯೂ ಕಂಡುಬರುತ್ತದೆ.

ಬೇಡರ ಮಹಿಳೆ ಕೌಟುಂಬಿಕ ಜೀವನದಲ್ಲಿ ಸಂಸಾರವನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾಳೆ. ಇದು ಗಂಡ ದುಡಿದು ಹಾಕುವುದಕ್ಕಿಂತ ಮಿಗಿಲಾದದು. ಕುಟುಂಬದಲ್ಲಿ ಬೇಕು-ಬೇಡಗಳ ಬಗ್ಗೆ ಅವಳಿಗೆ ಸರಿಯಾದ ಪ್ರಜ್ಞೆ ಇರುತ್ತದೆ. ಇವಳು ನೆರೆಯೊರೆಯವರ ಜೊತೆ ಕೊಡು-ಕೊಳ್ಳುವಿಕೆಯ ಸಂದರ್ಭದಲ್ಲಿ ಜಾಗೃತಳಾಗಿರುತ್ತಾಳೆ. ಅವಳಿಗೆ ಸೂಕ್ಷ್ಮಪ್ರಜ್ಞೆ ಇರುತ್ತದೆ. ಪ್ರತಿಯೊಂದು ಬೇಡರ ಮನೆಗೆ ಬಂದು ಹೋಗುವ ನೆಂಟರಿಷ್ಟರನ್ನು ಜಾಗರೂಕತೆಯಿಂದ ನೋಡಿ ಕಳುಹಿಸುವ ಜವಾಬ್ದಾರಿ ಹೆಣ್ಣಿಗೆ ಇರುತ್ತದೆ. ಆಮೇಲೆ ಅವಳಲ್ಲಿ ಸ್ವಲ್ಪ ಸ್ವಾರ್ಥವು ಇರುತ್ತದೆ. ಬೇಡರ ಪುರುಷರಿಗೆ ಯಾವಾಗಲೂ ಸ್ವಲ್ಪ ಧಾರಾಳತನ ಇದೆ. ಆದರೆ ಬೇಡರ ಮಹಿಳೆಯರು ಜಿಪುಣರಾಗಿರುತ್ತಾರೆ. ಏಕೆಂದರೆ ಅವರಿಗೆ ಮನೆಯ ಆರ್ಥಿಕ ಸ್ಥಿತಿ ಪುರುಷರಿಗಿಂತ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದಲೇ ಅವಳು ಯಾವಾಗಲೂ ಮನೆಗೆ ಬರುವ ಆದಾಯದ ಕಡೆ ಸದಾ ಗಮನ ಹರಿಸುತ್ತಾಳೆ. ಇದು ಬೇಡ ಜನಾಂಗದ ಕುಟುಂಬದಲ್ಲಿನ ಮಹಿಳೆಯರ ಪ್ರಮುಖ ಲಕ್ಷಣವಾಗಿರುತ್ತದೆ.

ಬೇಡರ ಕುಟುಂಬದ ಮಹಿಳೆ ಶ್ರಮಜೀವಿ. ಅವಳು ಕುಟುಂಬದಲ್ಲಿ ಸಾಕಷ್ಟು ಕಷ್ಟ ಪಟ್ಟು ಬಿಸಿಲು, ಮಳೆಯನ್ನದೆ ದುಡಿಯುತ್ತಾಳೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬೇಡರ ಹೆಣ್ಣುಮಕ್ಕಳು ನಗರ ಪ್ರದೇಶದ ಹೆಣ್ಣುಮಕ್ಕಳಗಿಂತ ಹೆಚ್ಚಿನ ಶ್ರಮಜೀವಿಗಳು. ಬೇಡರ ಹೆಂಗಸು ಎಷ್ಟೇ ದುಡಿದರೂ ಅದರ ಶ್ರೇಯಸ್ಸು ಮನೆಯ ಯಜಮಾನನಿಗೆ ಸಿಗುತ್ತದೆ. ಅವಿಭಕ್ತ ಕುಟುಂಬಗಳಲ್ಲಿನ ಯಜಮಾನನು ಬರೀ ಉಸ್ತುವಾರಿ ಕೆಲಸ ಮಾಡುತ್ತಿರುತ್ತಾನೆ. ಉಳಿದ ಸದಸ್ಯರು ಶ್ರಮ ಪಟ್ಟು ದುಡಿಯುತ್ತಿರುತ್ತಾರೆ. ಅದರಲ್ಲೂ ಮಹಿಳೆ ತುಂಬಾ ಕೆಲಸ ಮಾಡುತ್ತಾಲೆ. ದೊಡ್ಡ ದೊಡ್ಡ ಕುಟುಂಬ ವರ್ಗದವರು ತಮ್ಮ ಮನೆಗೆ ಸೊಸೆಯನ್ನು ತರುವಾಗ ಎಂಥ ಕೆಲಸ ಇದ್ದರೂ ಮಾಡುವಂತಹ ಶಕ್ತಿಯುತ ಹೆಣ್ಣನ್ನು ಬಯಸುತ್ತಾರೆ. ಮಗನಿಗೆ ಹೆಣ್ಣು ನೋಡಲು ನೆಂಟರ ಮನೆಗೆ ಹೋದಾಗ ಆ ಹುಡುಗಿಯನ್ನು ನೋಡಿ ಇವಳು ದೈಹಿಕವಾಗಿ ಸಮರ್ಥಳಿದ್ದಾಳೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಮಾನಿಸುತ್ತಾರೆ. ಇದನ್ನೂ ಇಂದಿಗೂ ಪ್ರತಿಯೊಂದು ಗ್ರಾಮೀಣ ಪ್ರದೇಶದ ಬೇಡರ ಅವಿಭಕ್ತ ಕುಟುಂಬದ ಸಮಾಜದಲ್ಲಿ ಕಾಣುತ್ತೇವೆ. ಮ್ಯಾಸ ಬೇಡರ ಕುಟುಂಬಗಳಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸುತ್ತಾರೆ. ಹಾಗೆಯೇ ಮೈಸೂರು ಮತ್ತು ಚಾಮರಾಜ ನಗರಗಳ ಪರಿವಾರದ ನಾಯಕರು ಹೀಗೆಯೇ ತೀರ್ಮಾನಿಸುತ್ತಾರೆ. ಒಟ್ಟಿನಲ್ಲಿ ಎಲ್ಲಾ ಬೇಡರ ಕೌಟುಂಬಿಕ ವ್ಯವಸ್ಥೆಯಲ್ಲಿ ಇದು ಕಂಡುಬರುತ್ತದೆ. ಬೇಡರ ಮಹಿಳೆಯ ಶ್ರಮದ ಪ್ರತಿಫಲ ಕುಟುಂಬದ ಯಜಮಾನನಿಗೆ ಸಿಗುತ್ತದೆ. ಅವಳ ಕುಟುಂಬದ ಏಳಿಗೆಯನ್ನು ನೋಡುತ್ತ ಇರುವ ಸಮಾಜ ತನ್ನ ಮನೆಯ ಯಜಮಾನನನ್ನು ಹೊಗಳಿದರೆ ಅವಳಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ, ಅಷ್ಟೇ ಅಲ್ಲ, ಆ ಸಮಾಜ ಅವನ ಶ್ರೇಯಸ್ಸಿಗೆ ದಾರಿದೀಪವಾದ ಆ ಹೆಂಗಸನ್ನು ಕೊಂಡಾಡದೆ ಇರಲಾರದು. ಅವನ ಹೆಂಡತಿ, ತಾಯಿ ಇಲ್ಲದಿದ್ದರೆ ಅವನ ಜೀವನ ನಡೆಯುವುದೇ ಇಲ್ಲ ಅಂತ ಹೆಮ್ಮೆಯಿಂದ ಅವಳನ್ನು ಸಮರ್ಥಿಸಿ ಕೊಳ್ಳುತ್ತಾರೆ. ಇಂತಹ ಕಡೆ ಹೆಣ್ಣಿನ ಸ್ವಾತಂತ್ಯ್ರ, ಶ್ರಮ ಪರಿಣಾಮಕಾರಿಯಾಗಿರುತ್ತದೆ. ಹೀಗೆ ಬೇಡರ ಕುಟುಂಬಗಳಲ್ಲಿನ ಹೆಣ್ಣಿನ ಪಾತ್ರ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಮ್ಯಾಸ ಬೇಡರ ಕುಟುಂಬದ ಮಹಿಳೆಯರನ್ನು ದಾಖಲೆ ಮಾಡಬಹುದು. ತುರವರನೂರಿನ ಭಾಗ್ಯಮ್ಮ, ಕೂನಬೇವಿನ ಬೋರಮ್ಮ, ಬೆಳಗಟ್ಟದ ತಳವಾರ ಬೋರಮ್ಮಾ, “ನೆಲಗೇತನ ಹಟ್ಟಿಯ  ಚೆನ್ನಮ್ಮ, ನನ್ನಿವಾಳದ ಪಾಲವ್ವ, ಬಚ್ಚುಬೋರನ ಹಟ್ಟಿಯ ಪಾಪಮ್ಮ, ಹುಣಸೆಕಟ್ಟೆಯ ಸೂರಮ್ಮಾ, ರುಮಾಗಟ್ಟೆಯ ಮೀನಾಕ್ಷಮ್ಮ ಮುಂತಾದ ಕುಟುಂಬಗಳನ್ನು ನೆನಪು ಮಾಡಿಕೊಳ್ಳಬಹುದು.

ಮ್ಯಾಸ ಬೇಡರ ಮತ್ತು ಊರ ಬೇಡರ ಕುಟುಂಬಗಳಲ್ಲಿ ಹೆಣ್ಣು ಬಂಜೆಯಾದರೆ ಅವಳನ್ನು ಮಕ್ಕಳನ್ನು ಹಡೆಯುವ ಗೊಡ್ಡಿ ಎಂದು ಕರೆಯುತ್ತಾರೆ. ಅಂತಹ ಎಷ್ಟೋ ಹೆಂಗಸರು ಬೇಡರ ಸಮುದಾಯಗಳಲ್ಲಿ ಸಿಗುತ್ತಾರೆ. ಬಂಜೆಯಾದ ಹೆಂಗಸರು ಎಷ್ಟೇ ಕಷ್ಟ ಪಟ್ಟು ದುಡಿದು ಸಂಸಾರ ನಡೆಸಿದರೂ ಕೂಡ ಅವಳಿಂದ ತಾಯ್ತನವನ್ನು ನಿರೀಕ್ಷೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅವಳ ಗಂಡನಿಗೆ ಪುನಃ ಇನ್ನೊಂದು ಮದುವೆ ಮಾಡುತ್ತಾರೆ. ಹಿರಿಯ ತಂದೆ-ತಾಯಿಗಳಿಗೆ ತಮ್ಮ ಮಕ್ಕಳಿಂದ ಮೊಮ್ಮಕ್ಕಳನ್ನು ಕಾಣುವ ಬಯಕೆ ಹೆಚ್ಚಾಗಿರುತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಮನೆಯ ವಾರಸುದಾರನ ನಿರೀಕ್ಷೆ ಹೆಚ್ಚಾಗಿರುತ್ತದೆ. ಬೇಡರ ಕುಟುಂಬಗಳಲ್ಲಿನ ಹಿರಿಯ ತಂದೆ-ತಾಯಿಗಳು ಸೊಸೆಯ ಒಪ್ಪಿಗೆ ಪಡೆದು ಅವಳ ನೇತೃತ್ವದಲ್ಲಿ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತಾರೆ. ಇಂತಹ ಕಡೆ ಬಂಜೆಯಾದ ಹೆಣ್ಣು ಮಾನಸಿಕವಾಗಿ ಸಂಘರ್ಷಕ್ಕೆ ಗುರಿಯಾದರೂ ತಮ್ಮ ಸಮಾಜದ ನೀರಿಕ್ಷೆಯನ್ನು ಮೀರಿ ಪ್ರತಿಭಟಿಸಲಾರದೆ ಅಸಹಾಯಕಳಾಗಿ ವ್ಯವಸ್ಥೆಯ ಬಂಧಿಯಾಗಿರುತ್ತಾಳೆ. ಇದು ನಾನು ಪಡೆದು ಬಂದ ಕರ್ಮ ಅಂತ ಭಾವಿಸಿಕೊಳ್ಳುತ್ತಾಳೆ. ಆಮೇಲೆ  ಆ ಬಂಜೆ ಹೆಣ್ಣುಮಕ್ಕಳೇ ತನ್ನ ಗಂಡನಿಗೆ ಮದುವೆ ಮಾಡುವಲ್ಲಿ ಸಹಾಯ ಹಸ್ತ ನೀಡುತ್ತಾರೆ. ಮ್ಯಾಸಬೇಡರ ದೊಡ್ಡಗಟ್ಟದ ಜಯಮ್ಮ, ನಂದೀಪುರದ ಸಣ್ಣಮ್ಮ, ಸೊಂಡೆಕೊಳದ ಕೆಂಚಮ್ಮ (ಚಿತ್ರದುರ್ಗದ ಭಾಗದವರು) ಇವರು ತಮ್ಮ ತಮ್ಮ ಗಂಡಂದಿರಿಗೆ ಮಕ್ಕಳ ಸಲುವಾಗಿ ಎರಡನೆ ಮದುವೆ ಮಾಡಿದ್ದಾರೆ. ಮುಂದೆ ಇವರಲ್ಲಿ ಒಬ್ಬ ಗಂಡನಿಗೆ ಇಬ್ಬರು ಹೆಂಡಿತಿಯರಾಗಿ ಕೆಲವು ಕಡೆ ಅನ್ಯೂನ್ಯವಾಗಿದ್ದರೆ, ಇನ್ನು ಕೆಲವರಲ್ಲಿ ವಿರಸವನ್ನು ಕಾಣುತ್ತೇವೆ. ಈ ರೀತಿಯ ಕ್ರಿಯೆಗಳು ಬೇಡರ ಬಹುತೇಕ ಕುಟುಂಬಗಳಲ್ಲಿ ಕಂಡುಬರುತ್ತವೆ.

ಬೇಡರ ಇತ್ತೀಚಿನ ಕೆಲವು ಕುಟುಂಬಗಳಲ್ಲಿ ಅವಿಭಕ್ತಿ ಕುಟುಂಬದ ವಿಘಟನೆ ಕಾಣುತ್ತೇವೆ.

ಬೇಡರ ಕುಟುಂಬಗಳಲ್ಲಿ ಗಂಡ ಅತಿ ಕುಡುಕನಾಗಿದ್ದರೆ, ಜೂಜು ಕೋರನಾಗಿದ್ದರೆ, ವ್ಯಭಿಚಾರಿಯಾಗಿದ್ದರೆ ಅಂತಹ ಸಂದರ್ಭದಲ್ಲಿ ಮನೆಯ ಒಡೆತನವನ್ನು ಮಹಿಳೆ ವಹಿಸಿಕೊಂಡಿರುವದನ್ನು ನಾವು ನೋಡುತ್ತೇವೆ. ಇದು ಇತ್ತೀಚಿನ ಬೆಳವಣಿಗೆ ಆಗಿದೆ. ಕುಟುಂಬದ ಸದಸ್ಯರೆಲ್ಲರೂ ದುಡಿದು ಹಣ ಸಂಪಾದನೆ ಮಾಡಿದರೆ ಆ ಹಣವನ್ನೆಲ್ಲಾ ಮನೆಯ ಯಜಮಾನ ಹಾಳು ಮಾಡುವ ಸಮಯದಲ್ಲಿ ಹೆಂಡತಿ ಜಾಗೃತಳಾಗುತ್ತಾಳೆ. ಆ ಹೆಣ್ಣೇ ಅವನಿಗೆ ಮಟ್ಟ ಹಾಕುತ್ತಾಳೆ. ಇಂತಹ ಕಡೆ ಶಿಷ್ಟ ಸಮಾಜದ ಮಹಿಳಾವಾದವಾಗಲಿ, ಸ್ತ್ರೀವಾದವಾಗಲಿ ಬಂದು ಯಾವುದೇ ರೀತಿಯ ಹೋರಾಟ ಮಾಡಿಲ್ಲ. ಆ ಮೆಲೆ ಅರಿವನ್ನೂ ಮೂಡಿಸಿರುವುದಿಲ್ಲ. ಇಂತಹ ವಾತಾವರಣದಲ್ಲಿಯೇ ಇದ್ದ ಬೇಡರ ಅನಕ್ಷರಸ್ಥ ಮಹಿಳೆಯು ಇಂದು ಜಾಗೃತಳಾಗಿದ್ದಾಳೆ. ಅವಳು ಸಹಜವಾಗಿಯೇ ತಪ್ಪು-ಸರಿಯನ್ನು ಗುರುತಿಸುವಂತಹ ಕಾರ್ಯತಂತ್ರವನ್ನು ಬಳಸಿಕೊಂಡಿದ್ದಾಳೆ. ಅವಳಿಗೆ ತನ್ನ ಕುಟುಂಬದ ಅಳಿವು ಮತ್ತು ಉಳಿವಿನ ಬಗ್ಗೆ ಸದಾ ಯೋಚನೆ ಇರುತ್ತದೆ. ತನ್ನ ಗಂಡ ಕೆಟ್ಟ ಮಾರ್ಗವನ್ನು ಹಿಡಿದಾಗ ಅವಳು ಒಳ್ಳೆಯ ಮಾರ್ಗದಲ್ಲಿಯೇ ಶ್ರಮಪಟ್ಟು ಒಂದು ಬಂಡಾಯವನ್ನು ಸೃಷ್ಟಿಮಾಡಿ ಮನೆತನದ ಅಧೋಗತಿಯನ್ನು ತಪ್ಪಿಸಿ ಒಂದು ತಹಬದಿಗೆ ತಂದುಕೊಳ್ಳುತ್ತಾಳೆ. ಇದನ್ನು ಮ್ಯಾಸಬೇಡರ, ಊರಬೇಡರ, ಮತ್ತು ವಾಲ್ಮೀಕಿ ಪರಿವಾರದವರ ತುಂಬಾ ಬಡತನದ ಕುಟುಂಬಗಳಲ್ಲಿ ಕಾಣುತ್ತೇವೆ. ಈ ಬೇಡರ ಕುಟುಂಬಗಳು ಎಲ್ಲಾ ಭಾಗಗಳಲ್ಲಿಯೂ ಹೆಚ್ಚಿನ ಪಾಲು ಆರ್ಥಿಕವಾಗಿ ದಿವಾಳಿ ಹೊಂದಿವೆ. ಹಾಗಾಗಿ ಇಂತಹ ಸಂಸಾರಗಳಲ್ಲಿ ಮಹಿಳೆಯೇ ವಾಮಮಾರ್ಗವನ್ನು ಹಿಡಿದ ಗಂಡನನ್ನು ಮಿಟ್ಟಿ ನಿಲ್ಲುತ್ತಾಳೆ. ಇದು ಸಂಸಾರದ ಒಳಗಿನ ಕ್ರಿಯೆ. ಆದರೆ ಅದೇ ಗ್ರಾಮಸ್ಥರು ಸೇರಿಕೊಂಡು ಯಾವುದಾದರೂ ಸಂದರ್ಭದಲ್ಲಿ ಅಂತಹ ಕುಟುಂಬಗಳನ್ನು ಗುರುತಿಸುವಾಗ ಅವಳ ಗಂಡನ ಹೆಸರನ್ನೇ ಪ್ರಮುಖವಾಗಿ ತೆಗೆದುಕೊಳ್ಳುತ್ತಾರೆ. ತನ್ನ ಗಂಡನ ಅಧಿಕಾರ ಮನೆಯಲ್ಲಿ ಏನೂ ನಡೆಯುವುದಿಲ್ಲ ಅಂತ ಗೊತ್ತಿದ್ದರೂ ಸಾಮಾಜಿಕವಾಗಿ ಅದನ್ನು ಆ ಮಹಿಳೆ ತೋರ್ಪಡಿಸುವುದಿಲ್ಲ. ಇಂತಹ ಕಡೆಯ ಮಹಿಳೆ ಗಂಡಸಿನ ಸರಿಸಮನಾಗಿ ಬದುಕುತ್ತಾಳೆ. ಮೂಲತಃ ಅವಳು ಅನಕ್ಷರಸ್ಥಳಾದರೂ ಅವಳಿಗೆ ನೈತಿಕ ಜವಾಬ್ದಾರಿ ಇದೆ. ಆದರೂ ಇದನ್ನು ಒಟ್ಟು ಬೇಡರ ಜನಾಂಗಗಳಿಗೆ ಸಾರ್ವತ್ರೀಕರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮಧ್ಯಮವರ್ಗದ ಕುಟುಂಬಗಳಲ್ಲಿ ಇಂತಹ ಸ್ಥಿತಿ ಇಲ್ಲ. ಯಾವ ಕುಟುಂಬಗಳಲ್ಲಿ ದಿವಾಳಿತನ ಕಾಣುತ್ತೇವೆಯೋ ಅಂತಹ ಕಡೆ ಹೆಂಗಸರು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ನಾವು ನೆರೆಹೊರೆಯವರಂತೆ ಬದುಕಬೇಕು ಎಂಬ ಗುರಿ ಇಟ್ಟುಕೊಂಡು ಛಲದಿಂದ ಬದುಕುತ್ತಿದ್ದಾರೆ.

ಧಾರ್ಮಿಕ ಆಚರಣೆ ಮತ್ತು ಮಹಿಳೆ:

ಬೇಡರು ಮೂಲದಲ್ಲಿ ಅರಣ್ಯವಾಸಿಗಳಾಗಿದ್ದರಿಂದ ಗಂಡು-ಹೆಣ್ಣು ಎನ್ನುವ ವ್ಯತ್ಯಾಸ ತೋರಿಸದೆ ಎಲ್ಲರೂ ಸಕ್ರಿಯವಾಗಿ ಧಾರ್ಮಿಕವಾಗಿ ಆಚರಣೆಯಲ್ಲಿ ತೊಡುತ್ತಿದ್ದರು. ಹೀಗೆ ಬೆಳೆದು ಬಂದ ಈ ಬೇಡರ ಸಂಸ್ಕೃತಿಯಲ್ಲಿ ಸಾಂಸ್ಕೃತಿಕ ವೀರರು ಜನ್ಮ ತಾಳಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಸಾಂಸ್ಕೃತಿಕ ವೀರರಲ್ಲಿ ಮಹಿಳೆ ಇರುವುದು ಇವರೆಲ್ಲರೂ ಮ್ಯಾಸ ನಾಯಕರೆಂಬುದನ್ನು ಮರೆಯುವಂತಿಲ್ಲ.

ಮ್ಯಾಸನಾಯಕ ಸಾಂಸ್ಕೃತಿಕ ವೀರಾದ ಯರಮಂಚಿನಾಯಕ, ಗಾದರಪಾಲನಾಯಕ, ಜಗಳೂರು ಪಾಪನಾಯಕ (ಜಗಳೂರಜ್ಜ) ಕಂಪಳರಾಯ, ಯೆರಗಟನಾಯಕ , ಕೊಡಗಲು ಬೊಮ್ಮಯ್ಯ, ನಾಯ್ಕನಹಟ್ಟಿ ತಿಪ್ಪೇಸ್ವಾಮಿ, ದಡ್ಡಿ ಸೂರನಾಯಕ, ಮೊಮ್ಮದೇವರು, ಗೌರಸಮುದ್ರ ಮಾರಮ್ಮ, ದಡ್ಲು ಮಾರಮ್ಮ, ಕಂಪಳಮಾರಮ್ಮ, ಗುಡ್ಡದ ಮಾರಮ್ಮ ಇವರೆಲ್ಲರೂ ಮ್ಯಾಸಬೇಡರ ಸಾಂಸ್ಕೃತಿಕ ವೀರರಾಗಿ ಕಂಡುಬರುತ್ತಾರೆ. ಕಾಲ ಕ್ರಮೇಣ ಈ ವೀರರು ಮ್ಯಾಸ ಬೇಡರ ಮನೆದೇವರುಗಳಾಗಿ ರೂಪ ತಾಳಿದ್ದಾರೆ.

ಕರ್ನಾಟಕದ ಬೇಡ ಜನಾಂಗದಲ್ಲಿ ಮ್ಯಾಸ ಬೇಡರು ತುಂಬಾ ಮುಖ್ಯರಾಗುತ್ತಾರೆ. ಇವರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ತುಂಬಾ ವಿಶಿಷ್ಟವಾಗಿ ಕಂಡುಬರುತ್ತಾರೆ. ಬೇಡರಲ್ಲಿ ವಾಲ್ಕ್ಮೀಕಿ, ಬೇಡ ಮತ್ತು ಪರಿವಾರದವರಿಗಿಂತ ಮ್ಯಾಸಬೇಡರು ಸಾಂಸ್ಕೃತಿಕ ಅನನ್ಯತೆ ಉಳಿಸಿಕೊಂಡಿದ್ದಾರೆ.

ಇವರ ಮುಖ್ಯವಾದ ಅಂತಹ ಸಾಂಸ್ಕೃತಿಕ ಆಚರಣೆಗಳ ಹಿನ್ನೆಲೆಯಲ್ಲಿ ಮಹಿಳೆಯನ್ನು ಗುರುತಿಸಬಹುದು. ಅಂತಹ ಆಚರಣೆಗಳಲ್ಲಿ ಮುಖ್ಯವಾದವುಗಳೆಂದರೆ ಗುಗ್ಗರಿ ಹಬ್ಬ, ಎತ್ತಿನ ಗಬ್ಬ, ಹಿರಿಯರ ಹಬ್ಬ, ಮಾರಮ್ಮನ ಹಬ್ಬಗಳಾಗಿವೆ.

ಗುಗ್ಗರಿ ಹಬ್ಬ: ಈ ಹಬ್ಬ ಮ್ಯಾಸಬೇಡರ ವಿಶಿಷ್ಟವಾದ ಹಬ್ಬವಾಗಿದೆ. ಮ್ಯಾಸಬೇಡರು ತಮ್ಮ ಜಮೀನುಗಳಲ್ಲಿ ಹೊಸದಾಗಿ ಬೆಳೆದಂತಹ ದ್ವದಳ ಧಾನ್ಯಗಳಾದ ಹುರುಳಿ, ತೊಗರಿ, ಹಲಸಂದೆ, ಹೆಸರುಕಾಳು ಮುಂತಾದವುಗಳನ್ನು “ಗುಗ್ಗರಿ ಹಬ್ಬ” ಮಾಡುವವರೆಗೂ ಒಂದು ಕಾಳನ್ನು ಯಾರೂ ಬಳಸುವಂತಿಲ್ಲ ಮತ್ತು ಬೇಯಿಸುವಂತಿಲ್ಲ. ಈ ದ್ವಿದಳಧಾನ್ಯಗಳನ್ನು ಕುಲಸ್ಥರೆಲ್ಲಾ ಸೇರಿ ಒಂದು ದಿನ ಮನದೇವರ ಸನ್ನಿಧಿಯಲ್ಲಿ ಬೇಯಿಸಿ (ಮಡಿಕೆಯಲ್ಲಿ ಕಾಳು ಮತ್ತು ನೀರು ಹಾಕಿ ಕಟಟಿಗೆಯ ಬೆಂಕಿಯಿಂದ ಬೇಯಿಸುವುದು) ಎಲ್ಲರೂ ಪೂಜೆ ಮಾಡಿ ಸಂತೋಷದಿಂದ ಹಂಚಿಕೊಂಡು ತಿನ್ನುವುದು. ಇವರ ಮನೆದೇವರುಗಳು ಪೆಟ್ಟಿಗೆ ದೇವರಗಳಾಗಿರುತ್ತವೆ. ಪ್ರಾರಂಭದಲ್ಲಿ ಮ್ಯಾಸಬೇಡರು ಪಶೂಪಾಲಕರಾಗಿದ್ದರು. ಹಾಗಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗುತ್ತಿದ್ದರು. ಅಂತಹ ಸಂದರ್ಭದಲ್ಲಿ ಬಿದುರಿನ ಪೆಟರಟಿಗೆಯಲ್ಲಿ ತಮ್ಮ ದೇವರುಗಳನ್ನು ಇಟ್ಟುಕೊಂಡು ನೀರು-ನೆರಡಳು-ಆಹಾರ ಸಿಗುವ ಕಡೆ ವಾಸವಾಗುತ್ತಿದ್ದರು. ಆದ್ದರಿಂದ ಇವರ ದೇವರುಗಳು ಪೆಟ್ಟಿಗೆ ದೇವರುಗಳಾಗಿರುತ್ತವೆ. ಈ ದೇವರುಗಳಿಗೆ ಪ್ರಮುಖ ಹಬ್ಬವಾಗಿ ಆಚರಿಸುವುದೇ ಗುಗ್ಗರಿ ಹಬ್ಬ. ಚಳ್ಳಕೆರೆಯ ಸಮೀಪದ ನನ್ನಿವಾಳದಿಂದ ಹಿಡಿದು ದಾವಣಗೆರೆ ಸಮೀಪದ ಮಿಂಚೇರಿ ಗುಡ್ಡದವರೆಗೂ ಮ್ಯಾಸಬೇಡರು ಈ ಗುಗ್ಗರಿ ಹಬ್ಬ ಆಚರಿಸುತ್ತಾರೆ.

ಗುಗ್ಗರಿ ಹಬ್ಬ ಮ್ಯಾಸಬೇಡರ ವಿಶಿಷ್ಟಹಬ್ಬ. ಈ ಮ್ಯಾಸಬೇಡರುಗಳಲ್ಲಿ ಮುಖ್ಯವಾಗಿ ಕುಲಸ್ಥರು ಒಟ್ಟಿಗೆ ಸೇರಿಕೊಳ್ಳುತ್ತಾರೆ. ಗುಗ್ಗರಿ ಹಬ್ಬದ ದಿನ ಮನೆದೇವರ ಸನ್ನಿಧಿಯಲ್ಲಿ ಇವರೆಲ್ಲರು ಸೇರಿ ಹಬ್ಬ ಆಚರಿಸುತ್ತಾರೆ. ಅಂದು ಕುಟುಂಬದ ಪ್ರಮುಖ ಸದಸ್ಯರು ಅಲ್ಲಿಗೆ ಹೋಗುತ್ತಾರೆ. ಹಬ್ಬದ ದಿನ ಮಹಿಳೆಯರ ಪಾತ್ರ ತುಂಬಾ ಮುಖ್ಯವಾಗುತ್ತದೆ. ಆ ಹೆಂಗಸರು ಮನೆಯಿಂದ ಹೊರಡುವಾಗ ಅಕ್ಕಿ ಮೀಸಲುಧಾನ್ಯಗಳು, ಹಣ್ಣು-ಕಾಯಿ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಂದು ಹಬ್ಬದ ದಿನ ಉಪವಾಸದಿಂದ ಇರುತ್ತಾರೆ.

ಅಂದು ಮ್ಯಾಸಬೇಡರ ಮಹಿಳೆಯ ಕೆಲಸ ಮುಖ್ಯವಾಗುತ್ತದೆ. ಕುಲದ ಹೆಂಗಸರು ದೇವರ ಸಾನ್ನಿಧ್ಯದಲ್ಲಿ ದ್ವಿದಳ ಧಾನ್ಯದ ಗುಗ್ಗರಿಯನ್ನು ಬೇಯಿಸಿ ದೇವರಿಗೆ ಗುಗ್ಗರಿಯ ಎಡೆ ಹಾಕಿ ಆಮೇಲೆ ಪಾಯಸ, ಅನ್ನ, ಸಾರು ನೈವೇದ್ಯ ಮಾಡಿ ಪೂಜೆ ಮಾಡಿ ಊಟಮಾಡುತ್ತಾರೆ. ಗುಗ್ಗರಿಹಬ್ಬದ ದಿನ ಊರ ಹೊರಗಿನ ಜನಿಗಿ ಹಳ್ಳಕ್ಕೆ ದೇವರನ್ನು ಕರೆದುಕೊಂಡು ಹೋಗಿ ಗಂಗಾದೇವತೆ ಪೂಜೆ ಮಾಡಿಕೊಂಡು ಬರುತ್ತಾರೆ. ಮ್ಯಾಸಬೇಡರು ದೇವರನ್ನು ಹೊಳೆಗೆ ಕರೆದಕೊಂಡು ಹೋಗುವಾಗ ವಾದ್ಯ-ಗೋಷ್ಠಿಗಳ ನಾದದೊಂದಿಗೆ ಕರೆದುಕೊಂಡು ಹೋಗುತ್ತಾರೆ. ಇಂತಹ ಕಡೆ ಪೂಜಾರಿ ಮನೆಯ ಹೆಂಗಸರು ಮತ್ತು ಕುಲದ ಹೆಂಗಸರು ಅಲ್ಲಿ ಸೇರಿರುತ್ತಾರೆ. ಯಾರಾದರೂ ಒಬ್ಬಳು ಪೂಜಾರಿ ಮನೆಯ ಹೆಂಗಸು ದೇವರ ಕಳಸ ಹಿಡಿದುಕೊಂಡು ದೇವರ ಮುಂದೆ ಮುಂದೆ ಹೋಗುತ್ತಾಳೆ. ಹಾಗೆಯೇ ಹಿಂದೆ ಬರುವ ಹೆಂಗಸರು ದೇವರನ್ನು ಮುಖದಯವಾಗಿ ಭಾವಿಸಿಕೊಂಡು ಸೋಬಾನೆಪದಗಳ ಮುಖಾಂತರ ಹಾಡಿ ಹೊಗಳುತ್ತಾರೆ. ಕೆಲವರು ದೇವರಿಗೆ ಓಕಳಿನೀರು ತೆಗೆಯುತ್ತಾರೆ. ನನ್ನಿವಾಳ, ಪೆತ್ತಂಬರಹಟ್ಟಿಯಿಂದ ಪ್ರಾರಂಭವಾದ ಗುಗ್ಗರಿಹಬ್ಬ ಮಧ್ಯದಲ್ಲಿನ ಹುಣಸೆಕಟ್ಟಿ, ಸುಲ್ತಾನಿಪುರ, ಬೊಮ್ಮಕ್ಕನಹಳ್ಳಿ, ಮಿಂಚೇರಿ ಆಚೇಗಿನ ಗಂಜಿಗ್ಟಿ, ಇಲ್ಲಿಯವರೆಗೂ ಈ ಹಬ್ಬ ನಡೆಯಸುತ್ತದೆ. ಮ್ಯಾಸಬೇಡರ ಸಾಂಸ್ಕೃತಿಕ ವೀರರಾದ ಗಾದ್ರಿಪಾಲನಾಯಕ ಜಗಳೂರಜ್ಜನ ಉತ್ಸವದ ದಿನ ಗುಗ್ಗರಿ ಹಬ್ಬ ನಡೆಯುತ್ತದೆ. ದ್ವಿದಳ ಧಾನ್ಯಗಳನ್ನು ಇಲ್ಲಿ ಬಳಸಿದ ಮೇಲೆಯೇ ಮನೆಗಳಲ್ಲಿ ಅಡಿಗೆ ಮಾಡಲು ಬಳಸುತ್ತಾರೆ. ಈ ವಿಷಯದಲ್ಲಿ ಹೆಂಗಸರು ಜಾಗೃತರಾಗಿರುತ್ತಾರೆ. ಇದು ಮಧ್ಯ ಕರ್ನಾಟಕದ ಬಯಲು ಸೀಮೆಯ ಬಹುಪಾಲನ್ನು ಆವರಸಿಕೊಂಡಿದೆ. ಈ ಹಬ್ಬವು ಪ್ರತಿವರ್ಷ ಶಿವರಾತ್ರಿ ಆಸುಪಾಸಿಗೆ ಶರುವಾಗಿ ಆಮೇಲೆ ಯುಗಾದಿ ಹತ್ತಿರದವರೆಗೂ ನಡೆಯುತ್ತದೆ. ಇನ್ನು ಕೆಲವು ಕಡೆ ಕಾರ್ತೀಕ ಮಾಸದಲ್ಲಿ ಆಚರಿಸುತ್ತಾರೆ.

ಚಳ್ಳಕೆರೆ ಸಮೀಪದ ನನ್ನಿವಾಳ ಮ್ಯಾಸಬೇಡರ ಸಾಂಸ್ಕೃತಿಕ ಕೇಂದ್ರ. ಅಲ್ಲಿ ಗುಗ್ಗರಿಹಬ್ಬ ನಡೆಯುವಾಗ ಜೊತೆಗೆ ಢಿಕ್ಕಿ ಹಬ್ವು ನಡೆಯುತ್ತದೆ. ಮ್ಯಾಸಬೇಡರ ಪೆಟ್ಟಿಗೆ ದೇವರುಗಳಲ್ಲಿ ಬಂಗಾರ (ಹುಲಿ) ದೇವರಿಗೆ ತೆಂಗಿನಕಾಯಿ ಒಡೆಸುವ ಹಾಗಿಲ್ಲ. ಆದರೆ ಹೆಂಗಸರು ಅದರ ನಿಮಿತ್ತವಾಗಿ ತಲೆಯ ಢಿಕ್ಕಿ ಹಬ್ಬ ಆಚರಿಸುತ್ತಾರೆ. ಆ ದೇವರಿಗೆ ಹರಕೆ ಹೊತ್ತ ಅತ್ತೆ-ಸೊಸೆಯರು ಒಬ್ಬರಿಗೊಬ್ಬರು ತಲೆಯ ಕೂದಲು ಹಿಡದು ಫಟ್‌ಫಟ್‌ಎಂದು ಢಿಕ್ಕಿ ಹೊಡೆಯುತ್ತಾರೆ. ಇದನ್ನು ಢಿಕ್ಕಿ ಒಡೆಯುವ ಹಬ್ಬವೆಂದು ಕರೆಯುತ್ತಾರೆ. ಹೀಗೆ ಢಿಕ್ಕಿ ಹೊಡೆದುಕೊಳ್ಳುವ ಮೂಲಕ ತೆಂಗಿನಕಾಯಿ ಒಡೆಸಿದ ತೃಪ್ತಿ ಪಟ್ಟುಕೊಳ್ಳುತ್ತಾರೆ. ಇದೊಂದು ಸಾಂಸ್ಕೃತಿಕ ಆಟವೂ ಆಗಿದೆ. ಬದುಕಿನ ಸಂದರ್ಭದಲ್ಲಿ ಅತ್ತೆ-ಸೊಸೆಯರಿಗೆ ಯಾವಾಗಲೂ ಬಹುಪಾಲು ಮೈಮನಸ್ಸು ಇದ್ದೇ ಇರುತ್ತದೆ. ದೇವರ ಹರಕೆ ತೀರಿಸಕೊಳ್ಳುವ ಸಂದರ್ಭದಲ್ಲಿ ಈ ಢಿಕ್ಕಿ ಹೊಡೆದುಕೊಳ್ಳುವ ಕ್ರಿಯೆಯನ್ನು ಕಂಡುಕೊಳ್ಳುತ್ತಾರೆ.  ಇದು ಅತ್ತೆ-ಸೊಸೆಯರಲ್ಲಿ ಪರೋಕ್ಷವಾಗಿ ವೈಮನಸ್ಸುಗಳನ್ನು ದೂರ ಮಾಡುತ್ತದೆ. ಢಿಕ್ಕಿ ಹೊಡೆದುಕೊಳ್ಳುವ ಕ್ರಿಯೆಯನ್ನು ಅತ್ತೆ-ಸೊಸೆಯರು ಮಾತ್ರ ಮಾಡುತ್ತಾರೆ. ಹೀಗೆ ಗುಗ್ಗರಿ ಹಬ್ಬದಲ್ಲಿ ಢಿಕ್ಕಿ ಹಬ್ಬು ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ. ಇದು ನನ್ನಿವಾಳ ಎಂಬ ಊರಿನಲ್ಲಿ ನಡೆಯುವುದು.