“ನನಗೆ ಚಿಕ್ಕಂದಿನಿಂದಲೇ ಕಾಡು ಅಂದರೆ, ಪ್ರಕೃತಿ ಅಂದರೆ ಗಾಢವಾದ ಪ್ರೀತಿ. ನಮ್ಮ ಕಡೆ ಊರು ಅಂದರೆ ಮನೆ. ಮತ್ತೆ ಮನೆ ಅಂದರೆ ಬರೀ ಮನೆ ಅಲ್ಲ , ಮನೆ ಅನ್ನೋದು ಕಾಡಿನ ಒಂದು ಭಾಗವೆ. ನನ್ನ ಒಂದು ಕವಿತೆಯಲ್ಲಿ ‘ಕಾಡು ಮುತ್ತು ಕೊಡುತಲಿರುವ ಸೊಗದ ಬೀಡು ನನ್ನ ಮನೆ’ ಅಂತ ಬರೆದಿದ್ದೀನಿ. ‘ಕಾವ್ಯಾಲಯ ಪ್ರಕಾಶನ’ದ ಕೂಡಲಿ ಚಿದಂಬರಂ ಇದ್ದರಲ್ಲ, ಅವರು ಪುಟ್ಟಪ್ಪನವರು ಹೀಗೆ ಬರೆದಿದಾರಲ್ಲ ನೋಡೋಣ ಅಂತ ಒಂದು ಸಲ ನಮ್ಮ ಮಲೆನಾಡಿನ ಕುಪ್ಪಳ್ಳಿಯ ಮನೆ ಕಡೆ ಹೋದಾಗ, ಕಾಡು ಮುತ್ತು ಕೊಡೋದಲ್ಲ, ಕಾಡೇ ಮನೇನ ಹಾದು ಬರ‍್ತಾ ಇದೆ. ಆಕ್ರಮಿಸಿಕೊಂಡಿದೆ ಅನ್ನಿಸ್ತಂತೆ. ಅಂಥ ಪರಿಸರದಿಂದ ಬಂದವನು ನಾನು. ನಾನು ಕಾಡನ್ನು ಕೇವಲ ವರ್ಣನೆಗೋಸ್ಕರ ವರ್ಣಿಸಿದೀನಿ ಅಂತ ತಿಳಕೊಂಡರೆ ಅದು ತಪ್ಪು. ಕಾಡಿನೊಂದಿಗಿದ್ದ ಅತ್ಯಂತ ಆತ್ಮೀಯವಾದ ಅನುಭವಗಳನ್ನೆ ನಾನು ವರ್ಣಿಸಿರೋದು.”

ಹೀಗೆ ಹೇಳಿದವರು ‘ಕಾಡಿನ ಕವಿ’ ಕುವೆಂಪು. ‘ಉದಯವಾಣಿ’ಗಾಗಿ ಸಂದರ್ಶನಕ್ಕೆ ಕೂತಾಗ ಮಾತಿನ ಮಧ್ಯೆ ಬಂದ ಒಂದು ತುಣುಕು ಇದು.

ಜುಲೈ ತಿಂಗಳ ಆಷಾಢದ ಮಬ್ಬು ಕವಿದ ಬೆಳಗಿನ ಹಾದಿಯಲ್ಲಿ, ಬೆಂಗಳೂರಿಂದ ಮೈಸೂರಿನ ಕಡೆ ಹೊರಟು ಉದ್ದಕ್ಕೂ ಮಳೆ ತೋಯಿಸಿದ ಹಸಿರು ಹೊಲಗದ್ದೆ ತೋಟಗಳ ನಡುವೆ ಹಾಯ್ದು, ಕಾವೇರಿಯನ್ನು ದಾಟಿ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಕುವೆಂಪು ಅವರ ಮನೆಯ ಗೇಟನ್ನು ತಳ್ಳಿದಾಗ ಬೆಳಗಿನ ಹತ್ತೂವರೆ ಗಂಟೆ. ಕುವೆಂಪು ತಮ್ಮ ಮನೆಯ ವೆರಾಂಡದಲ್ಲಿ ಎಂದಿನಂತೆ ಪುಸ್ತಕವೊಂದನ್ನು ಓದುತ್ತಾ, ಆಗಾಗ ತಮ್ಮ ಮನೆಯಂಗಳದ ತೋಟದ ಗಿಡಮರ ಬಳ್ಳಿಗಳ ಕಡೆಗೆ ನೋಡುತ್ತಾ ಕುಳಿತಿದ್ದರು. ಅವರ ಮನೆಗೆ ನಾನು ಬರುತ್ತಿರುವುದು ಇದು ಮೊದಲ ಸಲವೇನಲ್ಲ. ಹಿಂದೆ ನಾನು ಅವರ ಮನೆಯಂಗಳದ ತೋಟದಲ್ಲಿ ಕಂಡ ಎಷ್ಟೋ ಸಸಿಗಳು ಈಗ ತಕ್ಕಷ್ಟು ಬೆಳೆದು ತುಂಬು ಹಸಿರನ್ನು ಚಾಚಿಕೊಂಡಿವೆ. ಆದರೆ ಕುವೆಂಪು ಕೂತ ಸ್ಥಳದಿಂದ ಕೆಲವು ವರ್ಷಗಳ ಹಿಂದೆ ಮನೆ ಎದುರಿಗೇ ಕಾಣುತ್ತಿದ್ದ ಹಸಿರು ಹೊಲಗಳ ಹರಹು ಈಗ ಇಲ್ಲ. ಅದರ ಬದಲು ಮೈಸೂರು ನಗರ ತನ್ನ ಸಿಮೆಂಟು ಮನೆಗಳನ್ನು ಬೆಳೆದುಕೊಂಡಿದೆ. ನಾವು ಗೇಟು ದಾಟಿ ಒಳಕ್ಕೆ ಹೋದೊಡನೆ, ಈ ಮೊದಲೇ ನಾವು ಬರುವುದನ್ನು ತಿಳಿಸಿದ್ದರಿಂದ, ಕುವೆಂಪು ನಸುನಗೆಯಿಂದ ಬರಮಾಡಿಕೊಂಡರು. ಸಂದರ್ಶನಕ್ಕೆ ಸಿದ್ಧರಾಗಿ ನಾನು ಮತ್ತು ಶ್ರೀಮತಿ ವಿಜಯಾ ಕೂತೆವು. ಕೊಂಚ ಹೊತ್ತಿನಲ್ಲೆ ಗೆಳೆಯ ಡಾ. ಪ್ರಭುಶಂಕರ ಅವರೂ ಬಂದು ನಮ್ಮ ಜತೆ ಸೇರಿಕೊಂಡರು.

ಕುವೆಂಪು ಮೂಲತಃ ಕಾಡಿನ ಕವಿ. ೧೯೩೦ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಗ್ರಹ–‘ಕೊಳಲು’–ದಲ್ಲಿ ‘ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂದು ತಮ್ಮನ್ನು ಹಾಗೂ ತಮ್ಮ ಕಾವ್ಯವನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ಕಾಡಿನ ಕವಿ, ನಮ್ಮ ನಾಡಿನ ಕವಿಯಾಗಿ, ರಾಷ್ಟ್ರಕವಿ ಎಂಬ ಪ್ರಶಂಸೆಗೆ ಪಾತ್ರನಾದದ್ದು ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ.

ಮಲೆನಾಡಿನ ಅಪ್ರತಿಷ್ಠಿತ ಸಾಮಾಜಿಕ ಪರಿಸರದಿಂದ ಬಂದ ಈ ಕವಿ ತಮ್ಮ ಬಾಲ್ಯ ಹಾಗೂ ಹರೆಯದ ಬದುಕನ್ನು ತುಂಬಿಕೊಂಡದ್ದು ದಟ್ಟವಾದ ಮಲೆನಾಡಿನ ಕಾಡಿನ ಅನುಭವಗಳಿಂದ. ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಕವಿ, ಕಾಲೇಜು ಶಿಕ್ಷಣ ಮುಗಿಸಿ ಅಧ್ಯಾಪಕ ವೃತ್ತಿಯನ್ನು ಕೈಕೊಂಡು ನೆಲೆ ನಿಂತದ್ದು ಬಯಲುನಾಡಾದ ಮೈಸೂರಿನ ನಾಗರಿಕ ಪರಿಸರದಲ್ಲಿ. ಮುಂದಿನ ಅವರ ಬಹುಮಟ್ಟಿನ ಬರೆಹವೆಲ್ಲಾ ನಡೆದದ್ದು ಈ ನಗರ ಪರಿಸರದಲ್ಲೆ. ಆದರೂ ಅವರು ಬರೆದದ್ದು ಮುಖ್ಯವಾಗಿ ತಮ್ಮ ಮಲೆನಾಡಿನ ದಟ್ಟವಾದ ಅನುಭವಗಳನ್ನೆ ಮತ್ತು ಅನುಭವಗಳಿಂದಲೇ. ದೈಹಿಕವಾಗಿ ಅವರು ಮೈಸೂರಿನ ಪರಿಸರದಲ್ಲಿದ್ದರೂ, ಅವರು ಮಾನಸಿಕವಾಗಿ ಬದುಕಿದ್ದು ಮಲೆನಾಡಿನ ನೆನಪುಗಳಲ್ಲಿ. ಸಾಮಾನ್ಯವಾಗಿ ಇವತ್ತು ನಾವು ಗಮನಕ್ಕೆ ತೆಗೆದುಕೊಳ್ಳಬಹುದಾದ ಅನೇಕ ನಿಜವಾದ ಲೇಖಕರ ಬರವಣಿಗೆಯ ಒಂದು ಮುಖ್ಯ ಲಕ್ಷಣವೆಂದರೆ, ಅವರು ಬರೆಯುತ್ತಿರುವುದು, ತಮ್ಮ ಎಳೆಯಂದಿನ ದಟ್ಟವಾದ ಗ್ರಾಮೀಣ ಪರಿಸರದ ನೆನಪುಗಳಿಂದಲೇ. ಈ ಅಂಶ ಕುವೆಂಪು ಅವರ ಬರೆಹಗಳಲ್ಲಿ ಸಮೃದ್ಧವಾಗಿದೆ. ಅಂತಲೇ ಅವರನ್ನು ನಾನು ಕೇಳಿದ ಮೊದಲ ಪ್ರಶ್ನೆಯೇ ಇದು:

‘ನಿಮ್ಮ ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರೇರಣೆಗಳಲ್ಲಿ ನಿಮ್ಮ ಬಾಲ್ಯದ ನೆನಪುಗಳು ಮತ್ತು ಮೈಸೂರಿನ ಅನುಭವ-ಇವೆರಡರಲ್ಲಿ ಯಾವುದು ಹೆಚ್ಚು ಮಹತ್ವದ್ದು? ಮತ್ತು ಅವೆರಡರ ಸಂಬಂಧಗಳೇನು?’

ನನ್ನ ಪ್ರಶ್ನೆಗೆ ಕುವೆಂಪು ಒಂದೆರಡು ನಿಮಿಷ ಅಂತರ್ಮುಖಿಗಳಾದರು, ತಮ್ಮ ಮಲೆನಾಡಿನ ಅನುಭವ ಪ್ರಪಂಚವನ್ನು ಪ್ರವೇಶಿಸುವವರಂತೆ. ‘ಮಲೆಯ ನಾಡೆನಗೆ ತಾಯಿಮನೆ, ಕಾಡು ದೇವರ ಬೀಡು’ ಎಂದು ‘ರಾಮಾಯಣದರ್ಶನಂ’ದಲ್ಲಿ ಒಂದು ಕಡೆ ತಮ್ಮ ಹಾಗೂ ಮಲೆನಾಡಿನ ಸಂಬಂಧವನ್ನು ವರ್ಣಿಸಿಕೊಂಡಿದ್ದಾರೆ. ಒಂದೆರಡು ನಿಮಿಷದ ತರುವಾಯ:

“ನೋಡಿ, ಇದು, ಅಂದರೆ ನನ್ನ ಮೈಸೂರಿನ ಅನುಭವಕ್ಕೂ, ನನ್ನ ಮಲೆನಾಡಿನ ಬಾಲ್ಯದ ಅನುಭವಕ್ಕೂ ಇರುವ ಸಂಬಂಧ, ಮರದ ಬೇರಿಗೂ ಮರದ ಕೊಂಬೆಗಳಿಗೂ ಇರುವಂಥ ಸಂಬಂಧ ಅದು. ನನ್ನ ಎಳೆಯಂದಿನ ಅನುಭವ ಬೇರು-ಬುಡ ಇದ್ದ ಹಾಗೆ; ಆದರೆ ಜಗತ್ತಿನ ಗಮನಕ್ಕೆ ಬರೋದು ಹೂವು-ಹಣ್ಣು-ಕಾಯಿ-ಎಲೆ. ಆ ಬೇರು-ಬುಡ ಕಣ್ಣಿಗೆ ಕಾಣುವಂಥದಲ್ಲ. ಆದರೆ ಅದರ ಸತ್ವ ಇದೆಯಲ್ಲ, ಏನು ಸತ್ವ? ಆ ಪ್ರಕೃತಿ ಸೌಂದರ್ಯ, ಆ ಅನುಭವಗಳು ಸರ್ವವ್ಯಾಪಿಯಾಗಿ ಬರುತ್ತವೆ ನನ್ನ ಕಾವ್ಯದಲ್ಲಿ. ಇನ್ನು ಸಂಸ್ಕೃತಿ, ಆಲೋಚನೆ, ಸಾಹಿತ್ಯ ಇವೆಲ್ಲಾ ಇವೆಯಲ್ಲ ಅವು ಕೊಂಬೆಗಳಿದ್ದ ಹಾಗೆ. “ವಿಶ್ವ ವಿದ್ಯಾಲಯೆ ಭಗವತಿ ಶ್ರೀ ಸರಸ್ವತಿಗೆ” ಎಂಬ ಕವಿತೆಯಲ್ಲಿ ಹೇಳಿಕೊಂಡಿದ್ದೇನೆ ನೋಡಿ–

ಹೇ ಅನಕ್ಷರೇ
ಹುಟ್ಟುವಂದು ತಾಯಿಯಾದೆ
ಹೊರೆಯುವಂದು ತೊಟ್ಟಿಲಾದೆ
ಬೆಳೆಯುವಂದು ಗದ್ದೆ ತೋಟ
ಸಹ್ಯಾದ್ರಿಯ ಚೆಲುವು ನೋಟ
ಬಾನು, ಮುಗಿಲು, ಬೆಟ್ಟ ಕಾಡು
ಹುಲಿಯ ಬೀಡು ಹಕ್ಕಿ ಹಾಡು
ಹೊಳೆಯ ಮಲೆಯ ಮಲೆಯ ನಾಡು
ನೂರು ರೂಪ ನೂರು ಭಾವಗಳಲ್ಲಿ ಕಾವ್ಯಬೋಧೆ
ಹೃದಯದಲ್ಲಿ ಸ್ಫುರಿಸುವಂತೆ ಪ್ರಕೃತಿಮಾತೆಯಾದೆ
ಭವ್ಯ ಸೃಷ್ಟಿರೂಪಿಣಿ
ಹೇ ಗುರು ಸ್ವರೂಪಿಣಿ

ಇದೇ ಶಕ್ತಿ ಮುಂದೆ ನನ್ನನ್ನು ಮೈಸೂರಿಗೆ ಕರೆದುತಂದಾಗ–

ಹುತ್ತಹೊಕ್ಕು ಕವಿಯನೆಳೆದು ದೂರ ಕರೆದು ತಂದೆ
ಸಹ್ಯ ಶಿಶುಗೆ ಚಾಮುಂಡಿಯೆ ಸ್ತನ್ಯವಾಗೆ ನಿಂದೆ

ಮೈಸೂರಿನ ನನ್ನ ಆಶ್ರಮ ಜೀವನ, ಗ್ರಂಥಾಲಯದಲ್ಲಿ ನಡೆಸಿದ ಅಧ್ಯಯನ, ಉಪನಿಷತ್ತಿನಿಂದ ಹಿಡಿದು ರಾಮಕೃಷ್ಣಾಶ್ರಮದವರೆಗಿನ ನನ್ನ ಅನುಭವ ಇದೆಲ್ಲಾ ನನ್ನ ಕೃತಿಗಳಲ್ಲಿ ಪ್ರವಹಿಸಿದೆ. ಈ ಬೇರು-ಬುಡದ ಅನುಭವ ಮತ್ತು ಕೊಂಬೆ-ರೆಂಬೆಯಲ್ಲಿರುವ ಅನುಭವ ಈ ಎರಡರಲ್ಲಿ ಯಾವುದು ಹೆಚ್ಚು ಮಹತ್ವದ್ದು ಅನ್ನೋದಕ್ಕೆ ಅರ್ಥವೇ ಇಲ್ಲ. ಇವು, ಅಂದರೆ ನನ್ನ ಎಳೆಯಂದಿನ ಕಾಡಿನ ಅನುಭವಗಳು ಮತ್ತು ಅನಂತರ ನಾನು ಮೈಸೂರಿನ ಪರಿಸರದಲ್ಲಿ ಪಡೆದ ಅನುಭವಗಳು, ಈ ಎರಡೂ ಸಮಾನ ಮಹತ್ವದವು…”

ಈ ಹಂತದಲ್ಲಿ ನಾನೆಂದೆ “ನಿಜ. ನಿಮ್ಮ ಮಲೆನಾಡಿನ ಅನುಭವ ನಿಮ್ಮ ಸಾಹಿತ್ಯ ನಿರ್ಮಿತಿಗೆ ಬೇರು-ಬುಡ ಇದ್ದ ಹಾಗೆ. ಆದರೆ ಒಬ್ಬ ಕವಿ ಸಮಕಾಲೀನ ಪರಿಸರವೊಂದರಲ್ಲಿ ಬದುಕುವಾಗ, ಈ ಸಮಕಾಲೀನವಾದ, ಸಾಮಾಜಿಕವಾದ, ನಾಗರಿಕವಾದ ಬೇರೆ ಬೇರೆಯ ಅನುಭವಗಳಿಗೆ ಅಷ್ಟಾಗಿ ಸ್ಪಂದಿಸದೆ – ಬೇರೆ ಮಾತಿನಲ್ಲಿ ಹೇಳಬಹುದಾದರೆ, ಈ ಸಮಕಾಲೀನತೆಗೆ ಬಾಗಿಲು ಮುಚ್ಚಿಕೊಂಡು ಕೇವಲ ಮಲೆನಾಡಿನ ಅನುಭವಗಳಿಗೆ ಮಾತ್ರ ಬಾಗಿಲು ತೆರೆದುಕೊಂಡಂತೆ ತೋರುತ್ತದೆಯಲ್ಲ ನಿಮ್ಮ ಬರವಣಿಗೆ. ಇದಕ್ಕೆ ಏನು ಕಾರಣ ಅನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನನಗೆ.”

ಕುವೆಂಪು ಮುಂದುವರಿದು ಹೇಳಿದರು, “ನಿಜ ನೀವು ಹೇಳೋದು ಒಂದರ್ಥದಲ್ಲಿ ನಿಜ. ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’ ಈ ಕಾದಂಬರಿಗಳಲ್ಲಿ ಬರುವ ವಿಷಯ, ಅನುಭವ, ಎಲ್ಲಾ ನನ್ನ ಎಳೆಯಂದಿನ ಕಾಲಕ್ಕೆ ಸಂಬಂಧಿಸಿದ್ದು. ಆದ್ದರಿಂದ ಅದನ್ನು ಅಲ್ಲಿ ನಾನು ದಾಟಿ ಹೋಗಿಲ್ಲ. ಇವತ್ತು ದಲಿತ ಬಂಡಾಯ ಇತ್ಯಾದಿ ಚಳವಳಿಯವರು ಸಾಹಿತ್ಯದಲ್ಲಿ ಏನೇನನ್ನು ನಿರೀಕ್ಷಿಸುತ್ತಾರೋ ಅದನ್ನೆಲ್ಲಾ ಅಲ್ಲಿ, ನನ್ನ ಬರವಣಿಗೆಯಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಇನ್ನು ಸಮಕಾಲೀನ ಇತ್ಯಾದಿ ಅಂದಿರಲ್ಲ? ನನಗೆ ಸ್ವಾತಂತ್ರ  ಸಂಗ್ರಾಮದ ಆ ಕಾಲದ ಅನುಭವಗಳನ್ನು ಕುರಿತು ಒಂದು ಬೃಹತ್ ಕಾದಂಬರಿಯನ್ನು ಬರೆಯುವ ಯೋಚನೆ ಇತ್ತು. ಅದನ್ನ ನಾನು ಬರೆದಿದ್ದರೆ ಬಹುಶಃ ನೀವು ಹೇಳೋದೆಲ್ಲಾ ಅದರಲ್ಲಿ ಬರ‍್ತಿತ್ತೇನೋ. ಇನ್ನು ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ಆದರೂ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’, ‘ಪಾಂಚಜನ್ಯ’ ಇಂಥ ಸಂಗ್ರಹದ ಕವಿತೆಗಳಲ್ಲಿ ಇನ್ನೂ ಬೇರೆಯಾದ ಅಂದಂದಿನ ಅನುಭವಗಳನ್ನು ಹಿಡಿದಿರಿಸಿದ್ದೇನೆ. ಆದರೆ ನನಗೆ ಮುಖ್ಯವಾದದ್ದು ಕಾಡಿನ ಅನುಭವಗಳೇ. ಮುಂಗಾರು ಮಳೆಯ ಸಂದರ್ಭವೊಂದನ್ನು ಕುರಿತು ನಾನು “ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ. ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತದ ವನ ಧಾತ್ರಿ” ಎಂದು ವರ್ಣಿಸಿದ್ದೇನಲ್ಲ, ಅಲ್ಲಿ ಆ ರಾತ್ರಿ, ಆ ಸಿಡಿಲು, ಆ ಮಿಂಚು ಇತ್ಯಾದಿಗಳನ್ನು ನಾನು ನರನರಗಳಲ್ಲೂ ಅನುಭವಿಸಿದ್ದರ ಪರಿಣಾಮ ಅದು. ಆದ್ದರಿಂದ ಆ ಶಬ್ದಗಳಿಗೆ ಭಾವಕೋಶ ಇದೆಯಲ್ಲ ಅದು ಮುಖ್ಯ. ನಾನು ಅಲ್ಲಿಂದ ಬಯಲು ಸೀಮೆಗೆ ಬಂದು, ೧೯೨೯ರಿಂದ ಅಧ್ಯಾಪಕನಾಗಿ ಇದ್ದರೂ, ಆಗಾಗ ಮಲೆನಾಡಿಗೆ ಹೋಗಿ ಬರ‍್ತಾ ಇದ್ದೆ. ನಾನು ಮದುವೆ ಆದಮೇಲೆ ಅಲ್ಲಿಗೆ ಹೋಗೋದು ಬಹಳ ಕಡಮೆಯಾಯ್ತು. ವರ್ಷಕ್ಕೆ ಒಂದ್ ಸರ್ತಿನಾದ್ರೂ ಹೋಗ್ತಾ ಇದ್ದೆನೋ ಇಲ್ಲವೋ…”

“ಅಂದರೆ ನೀವು ದೈಹಿಕವಾಗಿ ಮೈಸೂರಿನಲ್ಲೆ ಇದ್ದರೂ, ಮಾನಸಿಕವಾಗಿ ಸದಾ ಮಲೆನಾಡಿನಲ್ಲೆ ಇದ್ದ ಹಾಗೆ ಕಾಣ್ತದೆ”– ಎಂದೆ ನಾನು.

“ಹೌದು ಮಾನಸಿಕವಾಗಿ ಅಲ್ಲೇ ಇದ್ದೆ. ಅಷ್ಟೇ ಅಲ್ಲ, ೧೯೭೫ನೇ ಇಸವಿಯವರೆಗೂ, ಮಾನಸಗಂಗೋತ್ರಿ ಆಗುವ ಮೊದಲು ಮತ್ತು ಆಮೇಲೆ, ಪ್ರತಿದಿನಾ ಸೂರ್ಯೋದಯ ಸೂರ್ಯಾಸ್ತಮಾನಗಳನ್ನ ನೋಡ್ತಾ ಇದ್ದೆ. ಕಾರಂಜಿ ಕೆರೆ ಏರಿ ಮೇಲೆ ಹೋಗಿ, ಅಲ್ಲಿಂದ ಶ್ಮಶಾನಕ್ಕೆ ಹೋಗಿ, ಆಮೇಲೆ ಬೆಟ್ಟ ಹತ್ತಿ, ಮತ್ತೆ ಇನ್ನೆಷ್ಟೋ ಸಲ ಕಾಲೇಜು ಮುಗಿಸಿಕೊಂಡು ಅವಸರವಸರವಾಗಿ ಬಂಡೆ ಹತ್ತಿ ಕೂತು ಸೂರ್ಯಾಸ್ತವನ್ನು ನೋಡ್ತಾ ಇದ್ದೆ. ಅದು ಕಣ್ಣು ಕಾಣುವಷ್ಟು ಮಿತಿಯ ಅನುಭವವಲ್ಲ. ಯಾವಾಗ ನೋಡಿದರೂ ಅದು ಮೊದಲಿನ ಹಾಗೇ ಅದ್ಭುತವಾಗೇ ಇತ್ತು. ಸೂರ್ಯ, ಆ ಸೂರ್ಯನ ಗೋಲ, ಅದು ನೋಡ್ತಾ ನೋಡ್ತಾ ಆಕಾಶದ ಅಸೀಮದಲ್ಲಿ ಅದು ಮುಳುಗುವ ರೀತಿ ಇದೆಲ್ಲಾ ಕೇವಲ ಸೌಂದರ್ಯಾನುಭವ ಅಲ್ಲ; ಆಧ್ಯಾತ್ಮಿಕ ಅನುಭವವೂ ಆಗಿತ್ತು ನನ್ನ ಪಾಲಿಗೆ. ನನ್ನ ಎಪ್ಪತ್ತೈದನೆ ವಯಸ್ಸಿನವರೆಗೆ ದೈಹಿಕವಾಗಿ ನಾನು ಗಟ್ಟಿಮುಟ್ಟಾಗಿರೋ ತನಕ ಸೂರ್ಯೋದಯ ಸೂರ‍್ಯಾಸ್ತಮಾನ ನೋಡೋದಕ್ಕೆ ಹೋಗೇಹೋಗ್ತಿದ್ದೆ. ಇಲ್ಲಿ ನನಗಾಗುವ ಈ ಅನುಭವಕ್ಕೆ ಅದೇ ಮೂಲ. ಅದೇ, ಅಂದರೆ ಮಲೆನಾಡಿನ ಅನುಭವ. ಒಂದರ್ಥದಲ್ಲಿ ಆ ಅನುಭವವೇ ಇಲ್ಲಿಯೂ ಮುಂದುವರಿಯಿತೆಂದು ಹೇಳಬಹುದು. ಅಲ್ಲಿನ ನನ್ನ ಪ್ರಕೃತಿ ಅನುಭವ, ನನ್ನ ಕನ್ನಡ ಕವಿತೆಗಳಿಗಿಂತ ಹೆಚ್ಚಾಗಿ, ನಾನು ಬರೆದ ಇಂಗ್ಲಿಷ್ ಕವನಗಳಲ್ಲಿ ಕಾಣಿಸಿಕೊಂಡಿದೆ. ನನ್ನ ‘ನೆನಪಿನ ದೋಣಿಯಲ್ಲಿ’ ಅಷ್ಟೊಂದು ಇಂಗ್ಲಿಷ್ ಕವನಗಳನ್ನು ನಾನು ಕೊಟ್ಟಿರುವ ಕಾರಣವೇ ಅದು– ಪ್ರಕೃತಿಗೆ ನನ್ನ ಸ್ಪಂದನ ಏನಿತ್ತು ಅನ್ನೋದನ್ನ ತಿಳಿಸೋದಕ್ಕೆ. ನನ್ನ ಈ ಮೂಲಾನುಭವವನ್ನು ನಾನು ಬೇರೆ ಯಾರಿಂದಲೋ ಪಡೆದದ್ದಲ್ಲ; ಪ್ರಕೃತಿಯಿಂದಲೇ ಪಡೆದದ್ದು. ಆದರೆ ನಾನು ಮೈಸೂರಿಗೆ ಬಂದ ಮೇಲೆ ಇಂಗ್ಲಿಷ ಸಾಹಿತ್ಯದ ಪ್ರಭಾವದಿಂದ, ಯಾವುದು ಅನುಭವ ಮಾತ್ರವಾಗಿತ್ತೋ, ಅದು ಆಲೋಚನೆಯ ಕಡೆಗೂ ತಿರುಗಿತು. ಅಂದರೆ, ಇವತ್ತೂ ನಾನು ಸೂರ್ಯಾಸ್ತ ಇತ್ಯಾದಿಗಳನ್ನು ಅನುಭವಿಸಿದರೂ, ಆ ಅನುಭವದಿಂದ ಪಡೆಯುವ ರಸಾನುಭವ ಇದೆಯಲ್ಲಾ ಅದನ್ನು, ವಿಶೇಷವಾಗಿ ವರ್ಡ್ಸ್‌ವರ್ತ್  ಮೊದಲಾದವರನ್ನು ಓದಿದ ಮೇಲೆ ಮೆಲುಕು ಹಾಕುವುದನ್ನು ಕಲಿತೆ. ಆದ್ದರಿಂದ ನಾನು ಏನು ಹೇಳಬಹುದು ಅಂದರೆ, ಅಲ್ಲಿ – ಮಲೆನಾಡಲ್ಲಿ-ಬರೀ ಮೇಯೋ ಕೆಲಸವೇ ಆಯ್ತು; ಇಲ್ಲಿ ಅದನ್ನು ಮೆಲುಕು ಹಾಕೋದೇ ಕೆಲಸ….

ನೀವು ಸಮಕಾಲೀನತೆ ಅದೂ ಇದೂ ಅನ್ನುತ್ತೀರಲ್ಲ? ನೋಡಿ, ನನಗೂ ಬೇರೆಯ ಸಾಹಿತಿಗಳಿಗೂ ಬಹಳ ವ್ಯತ್ಯಾಸ ಇದೆ. ಪಟ್ಟಣದಲ್ಲಿ ಹುಟ್ಟಿಬೆಳೆದವರಿಗೂ ನನಗೂ ವ್ಯತ್ಯಾಸವಿದೆ. ಒಂದರ್ಥದಲ್ಲಿ ನಾನು ಒಂಟಿ ಜೀವಿ. Even in the crowd I am alone. ತಿಳೀತೆ? ನಾನು ಒಂಟಿಜೀವಿಯಾಗೋದಕ್ಕೆ ಬೇಕಾದಷ್ಟು ಅವಕಾಶಗಳಿದ್ದುವು ನನಗೆ. ಅಲ್ಲಿಂದ, ಮಲೆನಾಡಿನಿಂದ ಇಲ್ಲಿಗೆ ಬಂದ ಮೇಲೆ ಕೂಡ. ಆ ಅರ್ಥದಲ್ಲಿಯೆ ನಾನು ಒಂಟಿಜೀವಿ ಅಂತ ಕಾಣ್ತದೆ.”

ಈ ಮಾತು ಸಾಗಿದ್ದಾಗ, ವಿಜಯಾ ಅವರೊಂದು ಪ್ರಶ್ನೆ ಹಾಕಿದರು. “ಸರ್, ಔದ್ಯೋಗೀಕರಣದಂಥ ಬದಲಾವಣೇನ ಕವಿಯೊಬ್ಬ ಇನ್ನೂ ಕೇವಲ ಕುತೂಹಲದ ಕಣ್ಣಿಂದ ನೋಡ್ತಿದಾನೇ ಹೊರತು, ಅದರ ಅನುಭವಗಳನ್ನ ಇನ್ನೂ ತನ್ನದಾಗಿಸಿಕೊಳ್ಳುತ್ತಿಲ್ಲ ಯಾಕೆ?”

“ಏನಂದಿರಿ? ಔದ್ಯೋಗೀಕರಣವೆ?” ಕುವೆಂಪು ಹೇಳಿದರು “ಔದ್ಯೋಗೀಕರಣವನ್ನು ನಾನು ಯಂತ್ರ ಮತ್ತು ಅದರ ಪ್ರಯೋಜನ ಇತ್ಯಾದಿ ದೃಷ್ಟಿಗಿಂತ ಹೆಚ್ಚಾಗಿ, ಮನುಷ್ಯನಾದವನಿಗೆ ಅದರಿಂದ ಏನು ಸುಖ ನೆಮ್ಮದಿ ಸಂತೋಷ ಉಂಟಾಗಿದೆ ಅನ್ನೋದರ ದೃಷ್ಟಿಯಿಂದ ನೋಡ್ತೇನೆ. ಯಂತ್ರದಿಂದ ಮನುಷ್ಯನ ಮೇಲೆ ಏನು ಪರಿಣಾಮ ಆಗ್ತಿದೆ ಅನ್ನೋದು ಮುಖ್ಯ ನನಗೆ.”

ಆ ಮಾತನ್ನು ಅಲ್ಲಿಗೇ ಬಿಟ್ಟು ಮುಂದಿನ ಪ್ರಶ್ನೆಗೆ ಬಂದೆವು. ಸಾಮಾನ್ಯವಾಗಿ ಹಳ್ಳಿಗಾಡಿನ ಪರಿಸರದಿಂದ ಬಂದ ಕವಿ, ತನ್ನ ಜನಸಮೂಹದ ಮಾನಸಿಕ ಜಗತ್ತಿನ ವಾಸ್ತವಗಳಾದ ಪುರಾಣ (Local myths), ಧಾರ್ಮಿಕ ಆಚರಣೆ (Rituals). ನಂಬಿಕೆ ಇತ್ಯಾದಿಗಳನ್ನು ತನ್ನ ಕಾವ್ಯದ ಸಾಮಗ್ರಿಯನ್ನಾಗಿ ಮಾಡಿಕೊಳ್ಳುತ್ತಾನೆ. ಬೇಂದ್ರೆಯವರ ಕವಿತೆಗಳಲ್ಲಂತೂ ಇದು ಸಾಕಷ್ಟಿದೆ. ಆದರೆ ಕುವೆಂಪು ಅವರಲ್ಲಿ–ಅದೂ ಅವರ ಕಾವ್ಯದಲ್ಲಿ–ತೀರಾ ಕಡಮೆ; ಇಲ್ಲವೇ ಇಲ್ಲವೇನೋ ಅನ್ನುವಷ್ಟು ಕಡಮೆ. ಅದರ ಬದಲು ಅವರ ನಿಸರ್ಗ ಕವಿತೆಗಳಲ್ಲಿ, ವೈದಿಕ ಯಜ್ಞಕ್ರಿಯೆ ಹಾಗೂ ಉಪಾಸನೆಗಳನ್ನು ನೆನಪಿಗೆ ತರುವಂಥ, ‘ಕುಂಕುಮಧೂಳಿಯ ದಿಕ್ತಟ ವೇದಿಕೆ’, ‘ಹೋಮಾಗ್ನಿ’ ‘ತಪಸ್ವಿನಿ’ ‘ಧ್ಯಾನ’ ‘ಸಮಾಧಿ’ ‘ಆಶ್ರಮದ ಪ್ರಶಾಂತಿ’ – ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನಾನು ಎತ್ತಿದ ಪ್ರಶ್ನೆ ಇದು:

“ನೀವು ಮಲೆನಾಡಿನ ಶೂದ್ರ ಸಮುದಾಯದಿಂದ ಬಂದವರು. ಶೂದ್ರರ ಮಾನಸಿಕ ಜಗತ್ತಿನ ವಾಸ್ತವಗಳಾದ ಐತಿಹ್ಯ, ಪುರಾಣ, ಆಚರಣೆ ಇತ್ಯಾದಿಗಳ ಬಗ್ಗೆ ನಿಮ್ಮ ಸಾಹಿತ್ಯದಲ್ಲಿ ತಾದಾತ್ಮ ವನ್ನು ಕಾಣಲಾಗುವುದಿಲ್ಲ. ಯಾಕೆ? ವಿಚಾರವಾದಿಯಾದವನು ಇಂಥವುಗಳನ್ನು ಮೂಢನಂಬಿಕೆ ಇತ್ಯಾದಿಯಾಗಿ ವ್ಯಾಖ್ಯಾನಿಸುತ್ತಾನೆ; ಕವಿಯಾದವನು ಅವುಗಳ ಬೇರನ್ನು ಶೋಧಿಸುತ್ತಾನೆ. ನೀವು ವಿಚಾರವಾದಿಯೂ ಕವಿಯೂ ಆಗಿರುವುದರಿಂದ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಯುವ ಆಸೆ ನನಗೆ.”

ಕುವೆಂಪು ಸ್ವಲ್ಪ ಹೊತ್ತು ಮೌನಿಯಾದರು. “ನನ್ನ ಕಾದಂಬರಿಗಳಲ್ಲಿ ಈ ಬಗೆಯ ಸ್ಥಳೀಯ ಆಚರಣೆ ಇತ್ಯಾದಿಗಳನ್ನು ತಂದಿದೇನಲ್ಲ? ಆದರೆ ಮರೆಯಬೇಡಿ, ಮಲೆನಾಡಿನಂಥ, ದಟ್ಟ ಅರಣ್ಯಗಳ ಬೀಡಿನಲ್ಲಿ ಸಾಂಘಿಕ ಬದುಕಿಗೆ ಅವಕಾಶ ತೀರಾ ಕಡಿಮೆ. ಅಲ್ಲೊಂದು ಇಲ್ಲೊಂದು ಒಂಟಿ ಮನೆ. ನಮ್ಮ ಮನೆಯಲ್ಲೂ ಅದು ಇದೂ ಪೂಜೆ-ಪುನಸ್ಕಾರ ಮಾಡ್ತಾನೇ ಇದ್ರು. ಇಂಥ ಪರಿಸರಕ್ಕೆ ಕೆಸ್ತ ಉಪಾಧ್ಯಾಯರೊಬ್ಬರು ಬಂದಮೇಲೆ, ಅವರು ಮಾರ್ಕನ ಸುವಾರ್ತೆ, ಬೈಬಲ್ ಇತ್ಯಾದಿಗಳನ್ನು ನಮಗೆ ಪರಿಚಯ ಮಾಡಿಕೊಟ್ಟ ಮೇಲೆ, ಅದು ಇನ್ನೂ ಎಳೆಯರಾಗಿದ್ದ ನಮ್ಮ ಮೇಲೆ ತುಂಬಾ ಪರಿಣಾಮ ಬೀರಿತು. ನಮ್ಮ ಮನೇಲಿ ತುಳಸಿಕಟ್ಟೆ, ಕಲ್ಲು, ಇತ್ಯಾದಿಗಳನ್ನ ಪೂಜೆ ಮಾಡ್ತಾ ಇದ್ದರೂ ಬೌದ್ಧಿಕವಾಗಿ ಅವುಗಳನ್ನೆಲ್ಲ ದ್ವೇಷಿಸಬೇಕು ಅನ್ನುವ ರೀತಿಯಲ್ಲಿ, ನಮ್ಮ ಮನೆಗೆ ಬಂದ ಆ ಕೆಸ್ತ ಉಪಾಧ್ಯಾಯರೇನೂ ಹೇಳುತ್ತಿರಲಿಲ್ಲ. ಆದರೂ ಮತದ ವಿಚಾರದಲ್ಲಿ, ಮೌಢ್ಯಗಳ ವಿಚಾರದಲ್ಲಿ ನನಗೆ ಬಹು ಬೇಗ ತಿರಸ್ಕಾರ ಬೆಳೆಯಿತು. ಅವರು, ನಮ್ಮನ್ನು ನಮ್ಮ ಮನೇ ಹಿಂದಿರುವ ಗುಡ್ಡದ ಮೇಲೆ ಕರೆದುಕೊಂಡು ಹೋಗಿ, ಜತೆ ಹುಡುಗರನ್ನು ಸೇರಿಸಿಕೊಂಡು ಮೊಳಕಾಲೂರಿ “ಪರಲೋಕದಲ್ಲಿರುವ ಓ ನನ್ನ ತಂದೆಯೇ” ಅಂತ ಪ್ರಾರ್ಥನೆ ಮಾಡಿಸಿದಾಗ, ಆ ಘಟನೆಯ ಪರಿಣಾಮ ನನ್ನ ಮನಸ್ಸಿನ ಮೇಲೆ ಏನಾಗಿರಬಹುದು ಅಂತ ಯೋಚನೆ ಮಾಡಿ. ತೀರ್ಥಹಳ್ಳೀಲಿ ನಾನು ಏನೇನೋ ಪುಸ್ತಕಗಳನ್ನೂ ಓತ್ತಾ ಇದ್ದೆ. ಅದು ಹ್ಯಾಗೋ ಬಹು ಬೇಗ ದೇವರು ಅನ್ನೋನು ಒಬ್ಬನೇ; ಮತಗಳು ಅವನನ್ನು ತಲಪಲು ಇರುವ ಬೇರೆ ಬೇರೆ ದಾರಿಗಳು ಅನ್ನೋದು ಅರ್ಥವಾಯಿತು. ಅದರಿಂದಾಗಿ ನನ್ನ ಸ್ನೇಹಿತರಿಗೆ ನಾನು ಹೇಳ್ತಾ ಇದ್ದೆ ‘ನಾನು ಯಾವ ಮತದ ಪರವಾಗಿ ಬೇಕಾದರೂ ಮಾತಾಡಬಲ್ಲೆ, ಯಾವ ಮತದ ಪರವಾಗಿಯೂ’ ಅಂತ. ಯಾಕೆ ಅಂದ್ರೆ ಈ ಭಾವನೆ ನನಗೆ ಬಹಳ ಹಿಂದಿನಿಂದಲೂ ಇದ್ದದ್ದೆ. ಅದು ಪುಷ್ಟಿಪಡೆದದ್ದು, ಬೌದ್ಧಿಕವಾಗಿಯೂ ಸಮೃದ್ಧವಾದ ಅನುಭವವನ್ನು ಕೊಟ್ಟದ್ದು ರಾಮಕೃಷ್ಣಾಶ್ರಮದಲ್ಲಿ. ಹಿಂದೆ ಯಾವುದು ‘ಇಂಟ್ಯೂಷನಲ್’ (Intuitional) ಆಗಿತ್ತೋ, ಅದನ್ನು ‘ಇಂಟಲೆಕ್ಚುಯಲ್’ (Intellectual) ಆಗಿಸಿದ್ದು ರಾಮಕೃಷ್ಣಾಶ್ರಮ. ಈಗ ನಾನು ಏನು ಹೇಳ್ತಾ ಇದೇನೆ ವಿಶ್ವಮಾನವ ಇತ್ಯಾದಿ, ಇದು ಬಾಲ್ಯದಿಂದಲೂ ಯಾವ ಭಾವನೆ ಅಸ್ಪಷ್ಟವಾಗೇ ಇತ್ತೋ ಅದು ಈಗ ಸ್ಪಷ್ಟ ಹಾಗೂ ಖಚಿತ ಆಗಿದೆ. ವಿಶ್ವಮಾನವತ್ವವನ್ನು ಸಾಧಿಸದೆ ಇರೋತನಕ, ಈ ಜಗತ್ತಿನ ಕೋಟಲೆಗಳು ತಪ್ಪೋದೇ ಇಲ್ಲ. ಅದು ನಿಶ್ಚಯ. ಈ ಮತಗಳು ಇರೋತನಕ, ಆ ಸ್ಥಿತಿಯನ್ನು ಸಾಧಿಸುವುದು ಸಾಧ್ಯವೇ ಇಲ್ಲ.

ಇತ್ತೀಚೆಗೆ ಜನಪದ ಹಾಡುಗಳನ್ನು ಸಂಗ್ರಹಿಸಿಕೊಂಡು ಬಂದವರು, ಕೆಲವನ್ನು ನನಗೆ ಕೇಳಿಸಿದರು, ಅವರಿಗೆ ನಾನು ಹೇಳಿದೆ: ‘ನೋಡಿ, ನಾಲ್ಕು ಸಾವಿರ ವರ್ಷಗಳಿಂದ ಅತ್ಯಂತ ಉದಾತ್ತವಾದ ತತ್ವಗಳು ಘೋಷಿಸಲ್ಪಟ್ಟಿವೆ. ಆದರೆ ಭಾಷೆಯಲ್ಲಾಗಲಿ ಮತ್ಯಾವುದೇ ರೀತಿಯಲ್ಲಾಗಲಿ, ಆ ತತ್ವಗಳು ಸಾಮಾನ್ಯ ಜನಕ್ಕೆ ತಲುಪದಂತೆ ನೋಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಯಾರಾದರೂ ಸಾಮಾನ್ಯ ಜನ ಅವುಗಳನ್ನು ತಿಳಕೊಳ್ಳೋಕೆ ಪ್ರಯತ್ನಪಟ್ಟರೆ ನಾಲಗೆ ಕತ್ತರಿಸಿ, ಕಿವಿ ಕತ್ತರಿಸಿ ಅಂತ ಹೇಳ್ತಾರೆ. ಆದ್ದರಿಂದ ನಮ್ಮಲ್ಲಿ ಸಾಮಾನ್ಯ ಜನಕ್ಕೆ ಉಪನಿಷತ್ತು ಮೊದಲಾದವುಗಳು ಸಿಕ್ಕಲಿಲ್ಲ. ಆಮೇಲೆ ಪುರಾಣ-ಗಿರಾಣ ಬಂದವು. ಅವುಗಳಲ್ಲಿ ಕಟ್ಟುಕತೆ ಅದೂ ಇದೂ ಸ್ವಾರಸ್ಯವಾಗಿ ಹೇಳಿದಾರೆ. ಎಷ್ಟೋ ಮೌಢ್ಯಗಳನ್ನೂ ಅವುಗಳಲ್ಲಿ ಈ ನೆಪದಲ್ಲಿ ಹಾಗೇ ಹಾಗೇ ತಂದು ತುಂಬಿದರು. ಇದನ್ನೆಲ್ಲಾ ಆಶ್ರಯಿಸಿಕೊಂಡು ಈ ಜನಪದ ಸಾಹಿತ್ಯ ಹುಟ್ಟಿತು. ಜನಪದ ಸಾಹಿತ್ಯಾನ ಸಂಗ್ರಹ ಮಾಡೋ ನೀವು, ಸಂಗ್ರಹಮಾಡಿ; ಅದನ್ನೊಂದು ಕಲೆ ಅಂತ ಹೇಳಿ. ಆದರೆ ಈ ಜನ ಯಾವ ಮೌಢ್ಯ ಹಾಗೂ ಅವಿಚಾರಕ್ಕೆ ವಶವಾಗಿ, ಈ ಬಗೆಯ ಜೀವನವನ್ನು ನಡೆಸಿದರು ಅನ್ನೋದನ್ನ ನೀವು ಹೇಳದೆ ಬಿಡಬೇಡಿ. ಆ ಜನಪದ ಹಾಡುಗಳಲ್ಲಿ ಆ ಅಂಶಗಳು ಬಹಳ ಇವೆ. ನಮ್ಮಲ್ಲಿ ಮತದ ವಿಚಾರವಾಗಿ ಬಹಳ ಉದಾರವಾಗಿದೀವಿ ಅಂತೀವಲ್ಲ, ಅದರರ್ಥ ಏನೂ ಅಂದ್ರೆ, ಈ ಹೆಸರಿನಲ್ಲಾಗಿರೋ ಅನ್ಯಾಯಗಳನ್ನೆಲ್ಲಾ ನಾವು ದಾಖಲೆ ಮಾಡಿಲ್ಲ ಅಂತ ಅಷ್ಟೆ. ಕೆಲವೆಡೆ ದಾಖಲೆ ಇರಬಹುದು. ಆದ್ದರಿಂದ ಜನಪದ ಸಾಹಿತ್ಯದಲ್ಲಿ ತಾಯಿ-ಮಗ, ತಾಯಿ-ಮಗಳು, ಗಂಡ-ಹೆಂಡತಿ ಇವರ ಸಂಬಂಧಗಳನ್ನ ಕುರಿತ ವಿಷಯಗಳು ಚೆನ್ನಾಗಿರುತ್ತವೆ. ಆದರೆ ಮೌಢ್ಯ ಇತ್ಯಾದಿಗಳು ಬಂದಾಗ ಖಂಡಿಸಬೇಕು, ಅವು ಸಾಹಿತ್ಯವಾಗಿ, ಕಲೆ ಆಗಿ ಚೆನ್ನಾಗೇ ಇರಬಹುದು. ಆದರೆ ಅವುಗಳಲ್ಲಿರೋದೆಲ್ಲಾ ನಿಜ ಅಂತ ತಿಳಕೋ ಬೇಡಿ, ಅವುಗಳಿಗೆ ಎದುರಾಗಿ ಹೋಗಿ ಅಂತ ಹೇಳಬೇಕು. ಮತ ಮೌಢ್ಯ, ಮೂಢನಂಬಿಕೆ ಇಂಥವುಗಳನ್ನು ಹೇಳೋದು. ಎಷ್ಟೇ ಸುಂದರವಾಗಿದ್ದರೂ, ಅದು ಸಾಹಿತ್ಯ, ಕಲೆ ಅಂತ ಮೆಚ್ಚಿದರೂ, ಬದುಕಿಗೆ ವಿರೋಧವಾಗುವಂಥ ಅಂಶಗಳನ್ನ ಸ್ವಾಗತಿಸಲೇಬಾರದು.”

ಕುವೆಂಪು ಅವರ ಕಾವ್ಯಭಾಷೆಯನ್ನು ಕುರಿತು ವಿಮರ್ಶಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಅವರ ಕಾವ್ಯದ ಭಾಷೆ ಅತಿ ಸಂಸ್ಕೃತಮಯ ಎಂದು ಸಲೀಸಾಗಿ ಆಕ್ಷೇಪಿಸುವವರು ಬಹಳ ಮಂದಿ. ಆದರೆ, ಅವರ ಗದ್ಯದ, ಅದರಲ್ಲಿಯೂ ಕಾದಂಬರಿಗಳ ಭಾಷೆ ಮಲೆನಾಡಿನ ವಿವಿಧ ಸ್ತರಗಳ ಯಥಾವತ್ತಾದ ಆಡು ನುಡಿಯ ಸಮೃದ್ಧಿಯನ್ನು ಅನನ್ಯವಾದ ರೀತಿಯಲ್ಲಿ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ, ಮಲೆನಾಡಿನ ಜನಜೀವನದ ಭಾಷೆಯಲ್ಲಿ ಬೇರೂರಿ ಬೆಳೆದ ಕುವೆಂಪು, ಮಲೆನಾಡಿನ ಜಾನಪದೀಯ ಭಾಷೆಯನ್ನು, ಯಾಕೆ ಅವರ ಕಾವ್ಯಮಾಧ್ಯಮವನ್ನಾಗಿ ದುಡಿಸಿಕೊಳ್ಳಲಿಲ್ಲ ಎನ್ನುವುದು ಹಲವರ ಪ್ರಶ್ನೆಯಾಗಿದೆ. ವಾಸ್ತವವಾಗಿ ಯಾವುದೇ ಕವಿಯನ್ನು ಯಾಕೆ ನಿಮ್ಮ ಭಾಷೆ ಹೀಗಿದೆ ಎಂದು ಕೇಳುವುದೇ ಸರಿಯಲ್ಲವೆಂದು ತೋರುತ್ತದೆ. ಹಾಗೆ ಕೇಳುವುದು ಬಹುಶಃ ಅಸಾಹಿತ್ಯಕ ಕೂಡ. ಕವಿ ಬಳಸಿದಂಥ ಭಾಷೆ, ಆತ ನಿರ್ವಹಿಸುವ ವಸ್ತು ಹಾಗೂ ಭಾವಕ್ಕೆ ಉಚಿತವಾದ ಸಂವಹನ ಮಾಧ್ಯಮವಾಗಿದೆಯೆ ಎಂದು ನೋಡುವುದು ಸರಿಯಾದದ್ದು. ಆದರೆ ಇಂಥ ಸಮೃದ್ಧವಾದ ಹಾಗೂ ದಟ್ಟವಾದ ಸೊಗಡಿನಿಂದ ಕೂಡಿದ ಪ್ರಾದೇಶಿಕ ಭಾಷೆಯನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ ಕುವೆಂಪು, ತಮ್ಮ ಕಾವ್ಯದ ಸಂದರ್ಭದಲ್ಲೂ ಅದನ್ನು ದುಡಿಸಿಕೊಳ್ಳದೆ ಹೋದದ್ದರ ಹಿಂದೆ ಅವರದೇ ಆದ ವೈಯಕ್ತಿಕ ಕಾರಣಗಳೇನಾದರೂ ಇರಬಹುದೇ ಎಂದು ಈ ಹೊತ್ತಿನಲ್ಲಿ ವಿಚಾರ ಮಾಡುವುದು ತಪ್ಪಲ್ಲವಲ್ಲ? ಈ ಎಲ್ಲ ಹಿನ್ನೆಲೆಯಲ್ಲಿ ನಾನು ಕೇಳಿದೆ:

“ನಿಮ್ಮ ಕಾವ್ಯದ ಭಾಷೆ ಜಾನಪದ ಮತ್ತು ಆಡು ನುಡಿಯ ಬಳಕೆಯನ್ನು ಬಹುಮಟ್ಟಿಗೆ ದೂರವಿಟ್ಟಿದೆ. ಇದಕ್ಕೆ ಹಿನ್ನೆಲೆಯಾದ ಕಾರಣಗಳನ್ನು ವಿವರಿಸುವಿರಾ?”

“ಕಾರಣ ಏನು ಹೇಳೋದು?”–ಹೀಗೆ ಶುರುವಾಯಿತು ಅವರ ಉತ್ತರ. “ನನ್ನ ಕಾವ್ಯಭಾಷೆಯ ಮೇಲೆ ಪರಿಣಾಮ ಮಾಡಿದ್ದು ಜಾನಪದದ್ದಲ್ಲ: ಲಕ್ಷಿ ಶ, ಕುಮಾರವ್ಯಾಸ ಇವರದ್ದು. ನಮ್ಮ ಪರಿಸರದಲ್ಲಿ ಯಕ್ಷಗಾನ ಇತ್ತಲ್ಲ. ಅದರ ಭಾಷೆ ಕೂಡ ಸಾಹಿತ್ಯಭಾಷೆಯೆ ಆಗಿತ್ತು. ನಮ್ಮ ಮನೆಯಲ್ಲಿ ಸಾಕಷ್ಟು ಹಳೆಕಾಲದ ಗ್ರಂಥಗಳು, ಒಂದು ಬೆತ್ತದ ಪೆಟ್ಟಿಗೆ  ತುಂಬಾ ಇದ್ದುವು. ಹಬ್ಬದ ದಿನಗಳಲ್ಲಿ ಅವುಗಳನ್ನು ತೆಗೆದು ಎಣ್ಣೆ ಸವರಿ ಪೂಜೆ ಮಾಡಿ ಮತ್ತೆ ಕಟ್ಟಿ ಇಡತಾ ಇದ್ರು. ದೇವರ ಪೂಜೆಗೆ ಸಂಬಂಧಪಟ್ಟ ಹಾಡುಗಳು, ಅವು ಸಾಕಷ್ಟು ಕಲಾತ್ಮಕ ಸೌಂದರ್ಯವನ್ನು ಪಡೆದವು, ಆಗಾಗ ಕಿವಿಗೆ ಬೀಳ್ತಾ ಇದ್ದವು. ನನ್ನ ಕೆಲವು ಕಥನ ಕವನಗಳಲ್ಲಿ ಲಾವಣಿ ಥರದ ರಚನೆಗಳಿವೆ, ಅವು ಕೂಡಾ ಜಾನಪದದ ಪ್ರೇರಣೆಯಿಂದ ಮೂಡಿದ್ದಲ್ಲ…”

ನಾನು ಇಲ್ಲೊಂದು ಉಪಪ್ರಶ್ನೆಯನ್ನೆತ್ತಿದೆ. “ನಿಮ್ಮ ಕಾವ್ಯದ ಭಾಷೆ, ನಿಮ್ಮ ಗದ್ಯದ ಭಾಷೆಗಿಂತ ಪ್ರೌಢವೂ, ಸಂಸ್ಕೃತಮಯವೂ ಆಗಿರುವುದಕ್ಕೆ ಕಾರಣ, ಮಲೆನಾಡಿನ ಅಪ್ರತಿಷ್ಠಿತ ವರ್ಗದಿಂದ ಬಂದ ಲೇಖಕನೊಬ್ಬ, ಪ್ರತಿಷ್ಠಿತ ವರ್ಗದವರೊಂದಿಗೆ, ಸಾಹಿತ್ಯಕವಾಗಿ ಸೆಣಸಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಬೇಕಾದಂಥ ಸಂದರ್ಭದಲ್ಲಿ, ಪ್ರತಿಷ್ಠಿತ ವರ್ಗದವರ ಪ್ರತಿಷ್ಠೆ ಯಾವ ಪರಂಪರೆಯ ಭಾಷೆಯಿಂದ ಪ್ರಾಪ್ತವಾಗಿತ್ತೋ, ಅದನ್ನೆ ತಮ್ಮ ಅಸ್ತ್ರವನ್ನಾಗಿ ಅಥವಾ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕಾಗಿ ಬಂದದ್ದೆ ಇರಬಹುದೆ?”

ಈ ಅಭಿಪ್ರಾಯಕ್ಕೆ ಕುವೆಂಪು ಸಮ್ಮತಿಸಲಿಲ್ಲ. “ಅದು ಸಂಪೂರ್ಣವಾಗಿ ನಿರಾಧಾರವಾದದ್ದು. ನಾನೆಂದೂ ಆ ‘ಪ್ರತಿಷ್ಠಿತವರ್ಗ’ ದವರನ್ನ ಆ ಥರ ಗೌರವಿಸಿ, ಅವರೊಡನೆ ಸ್ಪರ್ಧಿಸಲು ಪ್ರಯತ್ನಪಟ್ಟೋನಲ್ಲ. ಆದರೂ, ನೀವು ಹೇಳಿದ್ದು ಅಪ್ರಜ್ಞಾಪೂರ್ವಕ ವಾಗಿ ಕೆಲಸ ಮಾಡಿರಬಹುದೇನೋ. ಆದರೆ ನಿಜವಾದ ಕಾರಣ ಅಂದರೆ, ನಾನು ಮೈಸೂರಿಗೆ ಬಂದ ನಂತರ ಕುಮಾರವ್ಯಾಸ, ಜೈಮಿನಿಭಾರತ ಓದುತ್ತಾ ಇದ್ದೆ. ಅದರಲ್ಲೂ ನಾನು ಕುಮಾರವ್ಯಾಸನ ಭಾಷೆಗಿಂತ ಜೈಮಿನಿ ಭಾರತದ ಭಾಷೆ ಬಗ್ಗೆ ಹೆಚ್ಚು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದೇನೆ. ನನ್ನ ‘ರಾಮಾಯಣದರ್ಶನ’ದ ಮೇಲೆ ಜೈಮಿನಿ ಭಾರತದ ಭಾಷೆ ಹೆಚ್ಚು ಪ್ರಭಾವ ಬೀರಿದೆ ಅಂತ ಹೇಳಬಲ್ಲೆ. ಲಕ್ಷಿ ಶನ ಭಾಷೆಗೆ ಕುಮಾರವ್ಯಾಸನ ಭಾಷೆಯ ಒಡ್ಡತನ ಇಲ್ಲ. ಅದು ತುಂಬ ಸಾಹಿತ್ಯಕವಾದ, ಪರಿಷ್ಕೃತವಾದ ಭಾಷೆ. ಹಾಗೆ ನೋಡಿದರೆ ನಾನು ಸಾಹಿತ್ಯವನ್ನು ಪ್ರವೇಶಿಸಿದ್ದೇ ಸಾಹಿತ್ಯದ ದಿಕ್ಕಿನಿಂದ ಅಲ್ಲ, ಸಾಹಿತ್ಯ, ಸಾಹಿತಿಗಳ ಸಂಪರ್ಕ, ಸಾಹಿತ್ಯ ಪರಿಷತ್ತು ಇತ್ಯಾದಿಗಳು ನನಗೆ ಗೊತ್ತೇ ಇರಲಿಲ್ಲ. ನಾನು ಇಂಗ್ಲಿಷಿನಲ್ಲೇ ಓದಿಕೊಂಡು, ಬರಕೊಂಡು ಇದ್ದವನು. ಅಕಸ್ಮಾತ್ತಾಗಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಭೆಟ್ಟಿಯಾದಾಗ, ಅವರು ನನ್ನನ್ನು ಕನ್ನಡದಲ್ಲಿ ಬರೆಯಲು ಹೇಳಿದರು. ಅಥವಾ ನನ್ನ ಒಳ ಅಂತರಾತ್ಮದಲ್ಲಿ ಆ ಬಗೆಯ ಒಂದು ಭಾವನೆ ಇದ್ದದ್ದರಿಂದ, ಅವರು ಒಂದು ನೆಪ ಆದರು ಅಂತ ಕಾಣುತ್ತದೆ.”

ಮಾತು ಅವರ ಕಾದಂಬರಿಗಳ ಕಡೆ ಹೊರಳಿತು. ಅವರ ಮೊದಲ ಕಾದಂಬರಿ ‘ಕಾನೂರು ಹೆಗ್ಗಡಿತಿ’ಗೂ ಮತ್ತು ಅವರ ಅನಂತರದ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಇದಕ್ಕೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಕಾನೂರು ಹೆಗ್ಗಡಿತಿಯಲ್ಲಿ ಒಂದು ಕೇಂದ್ರ ಪಾತ್ರ ಇದೆ. ಆ ಪಾತ್ರವೆ ಹೂವಯ್ಯ. ಅನೇಕರು ಹೂವಯ್ಯನೆ ಕುವೆಂಪು ಎಂದು ಹೇಳುತ್ತಾರೆ. ಅದರಲ್ಲಿ ಎಲ್ಲ ಘಟನೆಗಳನ್ನೂ, ಪರಿಸರವನ್ನೂ ಕುವೆಂಪು ಆ ಕೇಂದ್ರ ಪಾತ್ರವಾದ ಹೂವಯ್ಯನ ಮುಖಾಂತರವೆ ನೋಡುತ್ತಾರೆ. ಆದರೆ ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಅಂತಹ ಯಾವ ಕೇಂದ್ರಪಾತ್ರವೂ ಇಲ್ಲ. ಕಾದಂಬರಿಕಾರರೇ ಹೇಳಿದ್ದಾರೆ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಇತ್ಯಾದಿ. ಸ್ವಾರಸ್ಯವೆಂದರೆ, ಯಾವುದೇ ಒಂದು ಕೇಂದ್ರ ಪಾತ್ರ ಇಲ್ಲದೆಯೂ ಇಡೀ ಕಾದಂಬರಿ ತನ್ನ ಸಜೀವ ಐಕ್ಯತೆಯನ್ನು ಕಾಯ್ದುಕೊಂಡಿದೆ. ಇದನ್ನೆಲ್ಲ ಹೇಳಿ, “ನಿಮ್ಮ ಕಾದಂಬರಿಯಲ್ಲಿ ಕಾಣುವ ಈ ವ್ಯತ್ಯಾಸಕ್ಕೆ ನಿಮ್ಮ ಸ್ವಂತ ಅನಿಸಿಕೆಗಳೇನು?” ಎಂದು ಕೇಳಿದೆ.

‘ಮಲೆಗಳಲ್ಲಿ ಮದುಮಗಳು’ ಬರೆಯೋ ಹೊತ್ತಿಗೆ ನನ್ನ ದೃಷ್ಟಿಯಲ್ಲೇ ಬದಲಾವಣೆ ಆಗಿತ್ತು. ಜೀವ-ಜಗತ್ತು-ಬ್ರಹ್ಮ ಈ ವಿಚಾರಗಳಲ್ಲಿ ಒಂದು ಅತ್ಯಂತ ಪರಿಣತ ಸ್ಥಿತಿಗೆ ಬಂದಮೇಲೆ ನಾನು ಅದನ್ನು ಬರೆದದ್ದು. ಈ ಒಂದು ಮನೋಧರ್ಮ ಇದಕ್ಕೂ ಹಿಂದೆಯೇ ರೂಪುಗೊಂಡಿತ್ತಾದರೂ, ಈ ಕಾದಂಬರಿ ಬರೆಯೋ ಹೊತ್ತಿಗೆ ನಾನು ಸಂಪೂರ್ಣ ಬದಲಾಗಿದ್ದೆ. ಈ ಕಾದಂಬರಿಯ ಮೊದಲಲ್ಲೆ ಹೇಳಿದೀನಲ್ಲ, ಇಲ್ಲಿ ಯಾವುದೂ ಸಣ್ಣದಲ್ಲ, ಇಲ್ಲಿ ಯಾರೂ ಮುಖ್ಯರಲ್ಲ ಇತ್ಯಾದಿ. ಅದು ಕೇವಲ ಕಾದಂಬರಿಯ ಮಾತಲ್ಲ. ಪೂರ್ಣದೃಷ್ಟಿಯಿಂದ ನೋಡಿದಾಗ ಜೀವನದಲ್ಲೂ ನನಗೆ ಮೇಲು-ಕೀಳು ಎಂಬುದಕ್ಕೆ ಅರ್ಥವಿಲ್ಲ…”

ಈ ಮಾತನ್ನು ಕೇಳುತ್ತ ಕುಳಿತಿದ್ದ ಪ್ರಭುಶಂಕರ್ ಹೇಳಿದರು, “ನೋಡಿ, ಒಂದು ವಿಲಕ್ಷಣವಾದ ಸಂಗತಿ ಅಂದರೆ,–ಬೇಕಾದರೆ ಇದನ್ನು ಮನಸ್ ಶಾಸ್ತ್ರೀಯವಾದ ಪವಾಡ ಎನ್ನಿ. ಕಾಲದ ದೃಷ್ಟಿಯಿಂದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ, ‘ಕಾನೂರು ಹೆಗ್ಗಡಿತಿ’ಗಿಂತ ಹಿಂದಿನದು. ಆದರೆ ಬರವಣಿಗೆಯ ದೃಷ್ಟಿಯಿಂದ ಅದು ‘ಕಾನೂರು ಹೆಗ್ಗಡಿತಿ’ ಬರೆದ ಕಾಲದಿಂದ ಎಷ್ಟೋ ವರ್ಷ ಈಚಿನದು. ಆದರೆ ಇವೆರಡೂ ಮೂಲತಃ ಒಂದೇ ವಸ್ತುವಿನ ಬೇರೆ ಬೇರೆ ನಿರ್ವಹಣೆಗಳು ಮತ್ತು ಎರಡನ್ನೂ ಸಂಪೂರ್ಣವಾಗಿ ಬೇರೆ ಬೇರೆಯಾಗಿಯೂ ತೆಗೆದಿರಿಸಬಹುದು…”

ನಾನೆಂದೆ “ಅಷ್ಟೇ ಅಲ್ಲ ಪ್ರಭುಶಂಕರ್, ಇನ್ನೂ ಒಂದು ವಿಶೇಷ ಅಂದರೆ ‘ರಾಮಾಯಣ ದರ್ಶನ’ದಂಥ ಮಹಾಕಾವ್ಯವನ್ನು ಬರೆದಾದ ಮೇಲೆ ಬರೆದದ್ದು ಇದು. ‘ರಾಮಾಯಣದರ್ಶನ’ದಂಥ ಕೃತಿ ಸುಮಾರು ಹತ್ತು ವರ್ಷಗಳ ಕಾಲ ಅವರನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರಿಸಿಕೊಂಡಾಗ, ಅದನ್ನು ಬರೆದಾದನಂತರ, ಅದರ ಪ್ರಭಾವದಿಂದ ಬಿಡಿಸಿಕೊಂಡು, ಅದಕ್ಕೂ ಹಿಂದಿನ, ಅಷ್ಟೇ ಯಾಕೆ ‘ಕಾನೂರು ಹೆಗ್ಗಡಿತಿ’ಗಿಂತ ಹಿಂದಿನ ಕಾಲಕ್ಕೆ ಹೋಗಿ ‘ಮಲೆಗಳಲ್ಲಿ ಮದುಮಗಳು’ ಬರೆದದ್ದು ಇನ್ನೂ ಆಶ್ಚರ್ಯದ ಸಂಗತಿ.”

ಪ್ರಭುಶಂಕರ್ ಹೇಳಿದರು, “ಅಂದರೆ ನಮ್ಮ ಮನಸ್ಸಿನ ಕೋಶಗಳಲ್ಲಿ ಇವೆಲ್ಲಾ ಬೇರೆ ಬೇರೆಯಾಗಿರೋಕೆ ಸಾಧ್ಯ ಅಂದಂತಾಯಿತು.”

ನಮ್ಮ ಈ ಸಂವಾದವನ್ನು ಕೇಳಿಸಿಕೊಳ್ಳುತ್ತಿದ್ದ ಕುವೆಂಪು ಹೇಳಿದರು “ಮನಸ್ಸಿನ ವಿಷಯ ಇದೆ ನೋಡಿ, ಇದು ಬಹಳ ವಿಚಿತ್ರವಾದದ್ದು. ಜನ್ಮಾಂತರಗಳಲ್ಲಿ ಏನೇನಾಗ್ತದೆ, ಹೇಗೆ ಆಗ್ತದೆ ಅನ್ನೋದು ಇನ್ನೂ ವಿಚಿತ್ರವಾದದ್ದು. ಮನಸ್ಸು ಅನ್ನೋದನ್ನ ಈ ಬುರುಡೆಯೊಳಗಿನ ಮೆದುಳಿನ ಕ್ರಿಯೆ ಅಂತ ತಿಳಕೊಳ್ಳೋದು ಅತ್ಯಂತ ಅವಿವೇಕ ಅನ್ನೋದು ನನಗೆ ಸಂಪೂರ್ಣ ಅರ್ಥವಾಗ್ತಾ ಇದೆ. ಮೆದುಳು ಕೇವಲ ಒಂದು ತಾತ್ಕಾಲಿಕ ಉಪಕರಣ ಮಾತ್ರ. ಯಾಕೆ ಅಂದರೆ, ಮನುಷ್ಯ ಸತ್ತಮೇಲೆ ಇದನ್ನ ಸುಟ್ಟು ಹಾಕ್ತಾರಲ್ಲ, ಆದರೂ ಕೆಲವರು ಹಿಂದಿನ ಜನ್ಮದ ವಿವರಗಳನ್ನೆಲ್ಲ ಹೇಳ್ತಾರಲ್ಲ, ಇದು ಹೇಗೆ ಸಾಧ್ಯ? ಒಂದು ಪುಸ್ತಕದಲ್ಲಿ, ಹೆಸರು ನೆನಪಿಲ್ಲ, ಓದಿದ್ದೆ. ಒಂದು ಪುಟ್ಟ ಮಗು, ಒಂದೂವರೆ ಎರಡು ವರ್ಷದ್ದು, ಅದು ಕೂಡಾ ತನ್ನ ಹಿಂದಿನ ಜನ್ಮ, ಊರು, ಕೇರಿ, ತಂದೆ, ತಾಯಿ ಇತ್ಯಾದಿ ವಿಷಯಗಳನ್ನು ಹೇಳಿತಂತೆ. ತಾನು ಹಿಂದೆ ಹುಟ್ಟಿದ್ದು ಆಮ್‌ಸ್ಟರ್‌ಡಾಮ್ ಅಂತ ಹೇಳಿತಂತೆ. ಆಮ್‌ಸ್ಟರ್‌ಡಾಮ್ ಯಾವುದು ಗೊತ್ತೆ? ಈಗಿನ ನ್ಯೂಯಾರ್ಕ್‌ಗೆ ಹಿಂದೆ  ಆಮ್‌ಸ್ಟರ್‌ಡಾಂ ಅಂತ ಹೆಸರಿತ್ತಂತೆ. ಅಷ್ಟು ಹಿಂದಿನ ವಿಚಾರಗಳನ್ನ ಪುಟ್ಟ ಮಗೂಗೆ ಹೇಗೆ ಹೇಳೋದಕ್ಕೆ ಸಾಧ್ಯವಾಯ್ತು?

ಮನಸ್ಸು, ಜೀವ, ಆತ್ಮ ಇವುಗಳ ವಿಚಾರದಲ್ಲಿ ನಮಗೆ ತಿಳಿದಿರುವುದು ಎಲ್ಲೋ ಸಾವಿರದಲ್ಲಿ ಒಂದು ಪಾಲು, ಅಷ್ಟೆ. ಆದ್ದರಿಂದ ‘ಕಾನೂರು ಹೆಗ್ಗಡಿತಿ’ ಬರೆಯೋವಾಗ ಇದ್ದ ನನ್ನ ಮನೋಧರ್ಮಕ್ಕೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ‘ಕಾನೂರು ಹೆಗ್ಗಡಿತಿ’ ಬರೆಯೋವಾಗ ನನ್ನ ವೈಚಾರಿಕ ದೃಷ್ಟಿ ಇತ್ತಲ್ಲ, ಅದು ಹೆಚ್ಚೂ ಕಡಮೆ ಇತರೆಯವರದಷ್ಟೆ ಇತ್ತು. ಇವತ್ತು ನನ್ನ ವೈಚಾರಿಕ ದೃಷ್ಟಿಯನ್ನು ಸರಿಯಾಗಿ ಪರೀಕ್ಷಿಸಿಕೊಂಡರೆ, ಅಲ್ಲಿ ಈಗ ವಿಚಾರವೇ ಇಲ್ಲ! ಆ ಸ್ಥಿತಿಗೆ ಬಂದಿದೆ. ಅಂದರೆ, ಜಗತ್ತಿನಲ್ಲಿ ಏನಿರುತ್ತದೆ, ಏನಾಗುತ್ತದೆ ಎಂಬುದನ್ನು ನಾವು ಹೇಳೋಕಾಗೋದಿಲ್ಲ. ದೆವ್ವ ಕಂಡೆ ಅಂತ ಯಾರಾದರೂ ಹೇಳಿದರೆ ಅದನ್ನು ಸುಳ್ಳು ಅಂತೀವಿ; ರಾಮಕೃಷ್ಣ ಪರಮಹಂಸರು ವೃಕ್ಷಭೈರವನನ್ನು ನಾನು ಕಂಡೆ ಅಂದರೆ, ಅದು ಸುಳ್ಳು ಅನ್ನೋಕಾಗ್ತದೆಯೆ? ಏನೇನು ಅದ್ಭುತಗಳಿದಾವೋ, ಯಾರು ಕಂಡಿದ್ದಾರೆ? It is a regular confusion–ಯೋಚಿಸ್ತಾ ಹೋದರೆ ಎಲ್ಲಾ ಗೊಂದಲ-ಗೋಜಲು. ಯಾವುದು ಇದೇ ಸರಿ ಅಂತ ತಿಳಕೊಳ್ಳೋಕೆ ಹೋದರೆ ಸಾಧ್ಯವಿಲ್ಲ ಅಂದ ಹಾಗಾಯಿತು. ಆದ್ದರಿಂದ ಅದು ಸರಿ ಅಂತ ಕಾಣೋತನಕ, ಅದು ಇದ್ರೂ ಇರಬಹುದು, ಇಲ್ಲದೇನೂ ಇರಬಹುದು ಅಂತ ಹೇಳಿಕೊಂಡು ಸುಮ್ಮನೆ ಇರಬೇಕು, ಅಷ್ಟೆ. ವಿಚಾರವಾದಿಯಾದವನು ನಾಸ್ತಿಕವಾದಿಯಾಗಲು ಸಾಧ್ಯವೇ ಇಲ್ಲ; ಆಜ್ಞೇಯತಾವಾದಿ ಆಗಬಹುದು.”

ಕುವೆಂಪು ಅವರ ವಿಶಿಷ್ಟತೆ ಇರುವುದು ಎಲ್ಲಿ? ಅವರಿಗೂ ಇನ್ನಿತರ ಸಾಹಿತಿಗಳಿಗೂ ಏನು ವ್ಯತ್ಯಾಸ ಎಂಬುದನ್ನು ಅವರ ಸಾಹಿತ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದವರಿಗೆ ಗೊತ್ತು, ಈ ವಿಚಾರವನ್ನು ಕುರಿತು ಅವರನ್ನೆ ಕೇಳುವುದು ಕೊಂಚ ಸೂಕ್ಷ ವಾದ ಸಂಗತಿ. ಆದರೂ ಕೊಂಚ ಸಂಕೋಚದಿಂದಲೇ,

“ನವೋದಯ ಸಂದರ್ಭದ ಇತರ ಸಾಹಿತಿಗಳಿಗಿಂತ ನಿಮ್ಮ ವಿಶಿಷ್ಟತೆ ಯಾವುದರಲ್ಲಿದೆ, ದಯಮಾಡಿ ತಿಳಿಸುವಿರಾ?” ಎಂದು ಕೇಳಿದ್ದಾಯಿತು.

ಕುವೆಂಪು ಸ್ಪಷ್ಟವಾಗಿ ಹೇಳಿದರು. “ನನಗೂ ಇತರ ಸಾಹಿತಿಗಳಿಗೂ ಯಾವ ವಿಧವಾದ ಹತ್ತಿರವಾದ ಸಂಬಂಧವೂ ಇಲ್ಲ. ನಾನೀಗ ವಿಶ್ವಮಾನವತೆಯ ಮಟ್ಟಕ್ಕೆ ಬಂದು ಕೂತಿದೀನಿ. ಜಾತಿ-ಮತ-ಧರ್ಮ-ವರ್ಣ ವ್ಯವಸ್ಥೆ ಎಲ್ಲದಕ್ಕೂ ನಾನು ವಿರೋಧಿ. ಪ್ರತಿಯೊಂದು ಮಗುವೂ ಹುಟ್ಟುವಾಗ ವಿಶ್ವಮಾನವನೇ. ಅದು ಬೆಳೆಯುವಾಗ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಈ ಅಲ್ಪಮಾನವನನ್ನು ಮತ್ತೆ ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆ. ನಿಜವಾದ ವಿದ್ಯೆ ಅಂದರೆ ಅದೇ. ಅನೇಕ ಸಿದ್ಧ ವ್ಯಕ್ತಿಗಳು, ಸಂಪ್ರದಾಯವನ್ನು ಬಿಟ್ಟು ಮಾತನಾಡಿದವರೆಲ್ಲಾ ಹೀಗೇ ಹೇಳಿದಾರೆ. ಮುಪ್ಪಿನ ಷಡಕ್ಷರಿಯ ಪದ್ಯ ಇದೆಯಲ್ಲ ‘ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ್ಬನೇ’… ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೆ’. ಅದು, It is a great poem. ಅದು ಎಷ್ಟೊಂದು ಸರಳವಾಗಿದೆ ಅಂದರೆ, ಅನೇಕರಿಗೆ ಅದರ greatness ಗೊತ್ತಾಗೋದೇ ಇಲ್ಲ.”

ಕುವೆಂಪು ತಮ್ಮ ಒಂದು ಕವಿತೆಯಲ್ಲಿ ಹೇಳಿದಾರೆ “ಶಿವ ಕಾವ್ಯದ ಕಣ್ಣೋ” ಎಂದು. ಶಿವದ ಹಾಗೆ, ಅಶಿವ ಅಥವಾ ಕೆಡುಕೂ (Evil) ಬದುಕಿನ ಮೂಲಭೂತ ಶಕ್ತಿಗಳಲ್ಲಿ  ಒಂದಾಗಿದೆ. ಅನೇಕ ಪ್ರಮುಖ ಲೇಖಕರು, ಕೆಡುಕಿನೊಂದಿಗೆ ತಮ್ಮ ಮುಖಾಮುಖಿಯನ್ನೂ ಮತ್ತು ತಮ್ಮ ಕೃತಿಗಳಲ್ಲಿ ಅದರ ಶೋಧನೆಯನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರನ್ನು ಕುರಿತು, ನಾನು ಎತ್ತಿದ ಪ್ರಶ್ನೆ ಇದು: “ಸಾಹಿತ್ಯದಲ್ಲಿ ಕೆಡುಕಿನ (Evil) ಶೋಧನೆ ಎಂಥದ್ದಾಗಿರಬೇಕು? ಮತ್ತು ಅದನ್ನು ಶೋಧಿಸುವುದು ದೊಡ್ಡ ಸಾಹಿತ್ಯವಾದೀತೆ?”

“ನನ್ನ ರಾಮಾಯಣದರ್ಶನದ ಮೂಲಭಾವಗಳು ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ – ಇವುಗಳು. ಈ ಹಿನ್ನೆಲೆಯಿಂದ ನೋಡಿದಾಗ ಕೆಡುಕು (Evil) ನಿತ್ಯವಸ್ತು ಅಲ್ಲ; ಅದು ಅನಿತ್ಯವಸ್ತು. ಆದ್ದರಿಂದ ಬರೀ ಕೆಡುಕನ್ನೆ ಹೇಳ್ತಾ ಹೋಗೋದು ಸರಿ ಅಲ್ಲ. ಹಾಗೆ ಮಾಡಿದರೆ ಉದ್ಯಾನ ಇರೋವಾಗ ಚರಂಡೀಲಿ ಆಟ ಆಡಿದಹಾಗೆ. ಚರಂಡಿ ಇಲ್ಲಾ ಅಂತ ಅಲ್ಲ; ಆದರೆ ಸದಾ ಚರಂಡಿ ಹತ್ತಾರಾನೇ ಕೂತ್ಕೊಂಡ್ರೆ? ನನ್ನ ಕಾದಂಬರಿಗಳಲ್ಲಿ ಎರಡನ್ನೂ ಚಿತ್ರಿಸಿದ್ದೇನೆ. ಕೆಡುಕು ಒಳಿತು ಎರಡೂ ಇವೆ. ಆದರೆ ಕೆಡುಕು ಇವತ್ತಲ್ಲ ನಾಳೆ ಬದಲಾಯಿಸುತ್ತಾ ನಿತ್ಯಸತ್ಯದ ಕಡೆ ಹೋಗುತ್ತೆ. ನಿತ್ಯಸತ್ಯ ಅನ್ನೋದನ್ನು ಬಹುಶಃ ನಾವು ವರ್ಣಿಸೋದಕ್ಕೆ ಆಗೋದಿಲ್ಲ ಅಂತ ಕಾಣುತ್ತೆ. ಆದರೆ ಕೆಡುಕೇ ನಿತ್ಯ ಅಲ್ಲ. ಮಧ್ವಾಚಾರ್ಯರು ಹೇಳ್ತಾರಲ್ಲ, ನಿತ್ಯ ಸಂಸಾರಿಗಳು, ನಿತ್ಯ ನಾರಕಿಗಳು ಇತ್ಯಾದಿ- ಇದೆಲ್ಲ ಅಜ್ಞಾನಿಗಳ ಮಾತು. ಅದನ್ನೆ ನಾನು ಬಹಳ ಹಿಂದೇನೇ ಬರವಣಿಗೆಯಲ್ಲಿ ಹಾಕಿದೀನಿ. ಆ ಮಾತು ಹೇಳಿದರಲ್ಲ, ಆಚಾರ್ಯರು ಅವರೇನೂ ಫಿಲಾಸಫರ್ ಅಲ್ಲ, ಬರೀ ಥಿಯೋಲಜಿಸ್ಟ್ ಅಷ್ಟೆ. ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಹೆಂಡತಿ ಶಾರದಾ ದೇವಿಯನ್ನು ತಾಯಿ ಎಂದು ಪೂಜಿಸಿದ್ದು ಹೆಚ್ಚೇನಲ್ಲ; ಅವರು ವೇಶ್ಯೆಯನ್ನೂ ಸಾಕ್ಷಾತ್ ಭಗವತೀ ಅಂತಲೇ ಕಂಡರಲ್ಲ, ಅದು ಹೆಚ್ಚಿನದು. ಈಗ ಇನ್ನೂ ಒಂದು ಸಲ ‘ಶ್ರೀರಾಮಕೃಷ್ಣ ವಚನವೇದ’ವನ್ನು ಓದಿ ನೋಡಿ.”

ಈ ಮಾತು ಅಲ್ಲಿಗೇ ನಿಂತಿತು. ಮುಂದಿನ ಸಂಭಾಷಣೆ ಸಮಕಾಲೀನ ಸಾಹಿತ್ಯಕ ಆಂದೋಲನಗಳ ಕಡೆ ಹೊರಳಿತು. ಈಚೆಗೆ ಮತ್ತೆ ಮತ್ತೆ ಒಂದು ಮಾತು ಕೇಳಿ ಬರುತ್ತಿದೆ. ದಲಿತವರ್ಗದ ಬದುಕನ್ನು, ಆ ವರ್ಗದೊಳಗಿನಿಂದ ಹುಟ್ಟಿ ಬಂದವರೇ ಬರೆದಾಗ, ಬೇರೆಯವರು ಬರೆದದ್ದಕ್ಕಿಂತ ಅದು ಹೆಚ್ಚು ಅಧಿಕೃತವಾಗಿರುತ್ತದೆ ಎನ್ನುವುದು ಆ ಮಾತು. ಬೆಂಗಳೂರು ವಿಶ್ವವಿದ್ಯಾಲಯ ಕೆಲವು ವರ್ಷಗಳ ಹಿಂದೆ ನಡೆಯಿಸಿದ ಒಂದೆರಡು ವಿಚಾರ ಸಂಕಿರಣಗಳಲ್ಲಿ (ಕುವೆಂಪು ಹಾಗೂ ಕಾರಂತರನ್ನು ಕುರಿತ ಸಂಕಿರಣಗಳಲ್ಲಿ) ದಲಿತವರ್ಗದ ವಿಮರ್ಶಕರೇ ಈ ಬಗೆಯ ಪ್ರಶ್ನೆಯನ್ನೆತ್ತಿದ್ದರು. ಕಾರಂತರ ‘ಚೋಮನ ದುಡಿ’, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಈ ಎರಡರಲ್ಲೂ ದಲಿತವರ್ಗದ ಬದುಕಿನ ಚಿತ್ರಣವಿದೆಯಲ್ಲ, ಅದು ಎಷ್ಟು ಅಧಿಕೃತ ಎಂಬ ಪ್ರಶ್ನೆ ಆಗ ಪ್ರಾಸಂಗಿಕವಾಗಿ ಚರ್ಚೆಯ ವಿಷಯವಾಗಿತ್ತು.

“ದಲಿತ ಹಾಗೂ ಶೋಷಿತರ ಬದುಕನ್ನು ಆಯಾ ಬದುಕಿನೊಳಗಣಿಂದ ಬಂದವರೇ ಬರೆದಾಗ, ಅದು ಹೆಚ್ಚು ಅಧಿಕೃತವಾಗುತ್ತದೆ ಎಂಬ ಒಂದು ವಾದವಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು”– ಎಂದು ಕುವೆಂಪು ಅವರನ್ನು ಕೇಳಿದಾಗ, ಕುವೆಂಪು ಗಟ್ಟಿಯಾಗಿ ನಕ್ಕುಬಿಟ್ಟರು.

“ನಿಮಗೆ ಪ್ರತಿಭೆ, ಕಲ್ಪನಾಶಕ್ತಿ ಇವುಗಳನ್ನೆಲ್ಲ ಕೊಟ್ಟಿರೋದು ಯಾಕೆ? ನಾವಲ್ಲದೆ ಇರೋದನ್ನು ಅನುಭವಿಸೋದಕ್ಕೆ ತಾನೆ? ಅದೊಂದು ರೀತಿಯಲ್ಲಿ ಪರಕಾಯ ಪ್ರವೇಶ. ನನ್ನ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹೊಲೆಯರ ಬಿಡಾರ, ಅವರ ಬದುಕು, ಅವರ ಪಾತ್ರ ಇದೆಲ್ಲಾ ಬರುತ್ತೆ. ಇದನ್ನೆಲ್ಲಾ ಬರೆಯೋಕೆ ನಾನೂ ಹೊಲೆಯನಾಗೇ ಹುಟ್ಟಬೇಕಾಗಿತ್ತೇನು? ಇರಬಹುದು, ನಾನೂ ಒಬ್ಬ ಹೊಲೆಯನಾಗೆ ಹುಟ್ಟಿದ್ರೆ, ಹಾಗೆ ಅನುಭವಿಸಿದ್ರೆ, ಅದು ಇನ್ನೂ ಅಧಿಕೃತವಾಗುತ್ತಾ ಇತ್ತು ಅನ್ನೋದು ಸ್ವಲ್ಪ ನಿಜ ಇರಬಹುದು. ಆದರೆ ತನ್ನದಲ್ಲದ ಬದುಕನ್ನು ಬೇರೆಯವರು ಬರೆಯಲಾರರು, ಬರೆಯಬಾರದು ಅನ್ನೋದು ತಪ್ಪಾಗ್ತದೆ. ಒಂದು ವೇಳೆ ಅಲ್ಲೇ ಹುಟ್ಟಿ ಬಂದವನು ಆಯಾ ವರ್ಗದ ಬದುಕನ್ನು ಚಿತ್ರಿಸಿದರೆ, ಆ ಘಟನೆಯ, ಪರಿಸರದ ಒಳ ವಿವರಗಳನ್ನು ಕೊಡುವಲ್ಲಿ ಅಧಿಕೃತವಾಗುತ್ತಾನೆ,  ನಿಜ. ಆದರೆ ಕಲೆಯಲ್ಲಿ ಅಲ್ಲ. ಕೇವಲ ಅಧಿಕೃತ ಆಗೋದು ಅಲ್ಲ; ಕಲೇನೂ ಆಗಬೇಕು. ಕಲೆಯಲ್ಲಿ ದಲಿತನ ಹಾಗೂ ದಲಿತನಲ್ಲದವನ ಬರವಣಿಗೆ ಸಮಾನವಾಗಬಹುದು. ಆದರೆ ದಲಿತನಾದವನು ವಿವರಗಳನ್ನು ಅಧಿಕೃತವಾಗಿ ನಿರೂಪಿಸಿದ ಮಾತ್ರಕ್ಕೆ ಅದು ಕಲಾದೃಷ್ಟಿಯಿಂದ ಹೆಚ್ಚು ಅಂತೇನೂ ಅಲ್ಲ.”

“ನೀವು, ಕಾದಂಬರಿಯ ಬೇರೆಬೇರೆ ರೂಪಗಳು ಉಂಟಲ್ಲ. ನವ್ಯ ಸಾಂಕೇತಿಕ ಇಂಥವುಗಳನ್ನೇನಾದರೂ ಓದಿದೀರಾ? ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?”- ಎಂಬ ಉಪಪ್ರಶ್ನೆಯೊಂದನ್ನು ಈ ಹಂತದಲ್ಲಿ ಎತ್ತಲಾಯಿತು.

ಕುವೆಂಪು ಹೇಳಿದರು: “ನನಗೆ ಅದೂ ಇದೂ ಅಂತ ಅಲ್ಲ. ಚೆನ್ನಾಗಿದ್ರೆ ಸರಿ. ಅದು ನವ್ಯವೋ ಸಾಂಕೇತಿಕವೋ ಅದು ಮುಖ್ಯ ಅಲ್ಲ. ನಾನು ಮೊದಮೊದಲು ಕಾದಂಬರಿಗಳ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಇಟ್ಟುಕೊಂಡವನಲ್ಲ. ಅದೇನು ಮಹಾ ಅಂತ ಓದುತ್ತಲೇ ಇರಲಿಲ್ಲ. ಅಕಸ್ಮಾತ್ತಾಗಿ ಟಾಲ್‌ಸ್ಟಾಯ್ ಅವರ ‘ರಿಸರಕ್ಷನ್’ ಕಾದಂಬರಿ ಓದಿದೆ. ಆ ಮೇಲೆ ಅದೂ ಮಹತ್ತಾದ ಕಲಾವಿಧಾನ ಅನ್ನಿಸಿತು. ನಾನೂ ಬರೆದೆ. ನನ್ನ ಕಾದಂಬರಿಯ ದಾರಿ ಮುಖ್ಯವಾಗಿ ಟಾಲ್‌ಸ್ಟಾಯ್, ಹಾರ್ಡಿ ಇವರದು. ಇದರ ಮೇಲೆ ನೀವು ಹೇಳಿದಿರಲ್ಲ, ನವ್ಯ, ಸಾಂಕೇತಿಕ ಇತ್ಯಾದಿ ಆ ರೀತಿಯ ಕಾದಂಬರಿಗಳನ್ನು ನಾನು ಅಷ್ಟಾಗಿ ಓದಿಲ್ಲ. ಹೀಗಿರುವಾಗ ಅವುಗಳ ಬಗ್ಗೆ ಏನು ಹೇಳಲಿ?”

ಕುವೆಂಪು ಮೊದಲಿನಿಂದಲೂ ಸಾಂಸ್ಥಿಕ ಧರ್ಮಗಳ ವಿರೋಧಿ. ಅವರ ಹಲವಾರು ವೈಚಾರಿಕ ಬರೆಹಗಳಲ್ಲಿ ಮತ್ತು ಸೃಜನಶೀಲ ಬರೆಹಗಳಲ್ಲಿ, ಮತ-ಮೌಢ್ಯ, ದೇವಸ್ಥಾನ- ಪುರೋಹಿತಶಾಹಿಇತ್ಯಾದಿ ಶೋಷಕ ತಂತ್ರಗಳ ವಿರುದ್ಧವಾಗಿ, ಜನತೆಯನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಈ ದೃಷ್ಟಿಯಿಂದ ಅವರನ್ನೊಂದು ಪ್ರಶ್ನೆ ಕೇಳಿದೆ: “ನೀವು ನಿಮ್ಮ ಬರೆಹಗಳಲ್ಲಿ ಸಾಂಸ್ಥಿಕ ಮತಧರ್ಮಗಳನ್ನು ತೀವ್ರವಾಗಿ ನಿರಾಕರಿಸುತ್ತೀರಿ. ಸಾಂಸ್ಥಿಕ ಮತಧರ್ಮಗಳು ಒಂದು ವೇಳೆ ಹೋದರೆ ಜನಸಾಮಾನ್ಯರ ದಿನನಿತ್ಯದ ಆಧಾರಕ್ಕೆ ಪರ‍್ಯಾಯವಾಗಿ ಏನನ್ನು ಸೂಚಿಸುತ್ತೀರಿ?”

“ಇದು ಯೋಚನೆ ಮಾಡಬೇಕಾದದ್ದೇ. ನಾನು ಮೊದಲಿನಿಂದಲೂ ಈ ದೇವಸ್ಥಾನ, ಮತ-ಧರ್ಮ ಇತ್ಯಾದಿಗಳ ಕಡುವಿರೋಧಿ. I hated the Priests and Priesthood ಪುರೋಹಿತಶಾಹಿ ಹಾಗೂ ಪುರೋಹಿತರ ಬಗ್ಗೆ ನನ್ನ ದ್ವೇಷವನ್ನು ಕಡಿಮೆ ಮಾಡಿದವರು ರಾಮಕೃಷ್ಣ ಪರಮಹಂಸರೇ. ನೀವು ಕೇಳಿದಿರಲ್ಲ ಈ ಸಾಂಸ್ಥಿಕ ಮತಧರ್ಮಗಳು ಅಳಿದರೆ ಆ ಜಾಗಕ್ಕೆ ಪರ್ಯಾಯವಾಗಿ ಇನ್ನೇನು ತರಬೇಕು ಅಂತ. ಅದನ್ನು ಈಗಲೇ ಯೋಚನೆ ಮಾಡಿ ಹೇಳುವುದಕ್ಕೆ ಆಗಲ್ಲ. ಸೋವಿಯೆಟ್ ಯೂನಿಯನ್ ಏನು ಮಾಡಿದೆ ಹೇಳಿ? ಜನರ ಮನಸ್ಸನ್ನು ರಾಷ್ಟ್ರೀಯತೆ, ಸೌಂದರ್ಯೋಪಾಸನೆ, ಕ್ರೀಡೆಗಳು ಇತ್ಯಾದಿಗಳ ಕಡೆಗೆ ತಿರುಗಿಸಿಲ್ಲವೇನು? ಮತಧರ್ಮಗಳು ಹೋದರೆ ಪರ್ಯಾಯವಾಗಿ ಮುಂದೇನು ಅಂತ ಹೇಳೋದು ಕಷ್ಟ. ಮೊದಲು ಈಗ ಇರೋ ಸ್ಥಿತಿಯಿಂದ ನಾವು ಪಾರಾದರೆ ಸಾಕು. ಆಮೇಲೆ ಪರ್ಯಾಯವಾದದ್ದನ್ನ ಕಂಡುಕೋಬಹುದು. ಮೊದಲು ಮತ ತೊಲಗಿ, ಅದರ ಜಾಗದಲ್ಲಿ ಅಧ್ಯಾತ್ಮ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.”

ಈ ದೇಶದ ಬದುಕು ನಿಜವಾಗಿಯೂ ಬದಲಾದದ್ದು ಪಾಶ್ಚಾತ್ಯದ ಪ್ರೇರಣೆ- ಪ್ರಭಾವಗಳಿಂದ. ಸ್ವಾತಂತ್ರ  ಪಡೆದು ಮೂರೂವರೆ ದಶಕಗಳ ನಂತರವೂ ನಮ್ಮ ಮೇಲೆ ಪಶ್ಚಿಮದ ಪ್ರಭಾವದ ಬಿಗಿ ಕಡಿಮೆಯಾಗಿದೆ ಎಂದು ಅನ್ನಿಸುವುದಿಲ್ಲ. ನಾವು, ನಮ್ಮ ಬದುಕು, ನಮ್ಮ ಬರೆಹ ಭಾರತೀಯವಾಗಿದೆಯೇ ಎಂಬ ಪ್ರಶ್ನೆಗಳೂ, ಚರ್ಚೆಗಳೂ ನಡೆಯುತ್ತಿವೆ. ಈ ದೃಷ್ಟಿಯಿಂದ ಕುವೆಂಪು ಅವರನ್ನು ಕುರಿತು,

“ಪಶ್ಚಿಮದಿಂದ ಸಾಂಸ್ಕೃತಿಕವಾಗಿ ನಾವು ಬಿಡಿಸಿಕೊಂಡು ಭಾರತೀಯವಾಗುವುದು ಹೇಗೆ?” ಎಂದು ಕೇಳಿದೆ.

“ಏನಂದಿರಿ?”, ಕುವೆಂಪು ಹೇಳಿದರು, “ಪಶ್ಚಿಮದಿಂದ ಸಾಂಸ್ಕೃತಿಕ”ವಾಗಿ ಬಿಡಿಸಿಕೊಳ್ಳುವುದೇ? ಅದು ತೀರಾ ಅನಾವಶ್ಯಕ. ಪಶ್ಚಿಮದಿಂದ ಸಾಂಸ್ಕೃತಿಕವಾಗಿ ನಾವು ಬಿಡಿಸಿಕೊಳ್ಳಲೇಬಾರದು. ಉತ್ತಮವಾದುದನ್ನು ನಾವು ಪೂರ್ತಿಯಾಗಿ ಉಳಿಸಿಕೊಳ್ಳಲೇಬೇಕು. ಇನ್ನು ಭಾರತೀಯತೆ ಅಂದರೆ ಏನು? ಭಾರತೀಯತೆಯ ಹೆಸರಿನಲ್ಲಿ ಎಲ್ಲ ಜಾತಿ-ಮತ-ಇತ್ಯಾದಿ ಗಲೀಜುಗಳನ್ನ ಉಳಿಸಿಕೊಳ್ಳೋದಾದರೆ, ಆ ಭಾರತೀಯತೇನೇ ಬೇಡ. ಮತ್ತೆ ಉಪನಿಷತ್ತುಗಳು ಹೇಳೋ ತತ್ವಗಳಿಗೆ, ಎಲ್ಲಿ ಜಾತಿ-ಮತ ಏನೂ ಇಲ್ಲವೋ ಅಲ್ಲಿಗೆ ಹೋಗೋದಾದ್ರೆ ಹೋಗಿ. ಭಾರತೀಯನಾಗೋದು ಅಂದ್ರೆ ವಿಶ್ವಮಾನವನಾಗೋದು. ಮತ್ತೆ ಮೂಢನಂಬಿಕೆ, ಜಾತಿ-ಮತ-ಪುರಾಣ-ಸಂಪ್ರದಾಯ ಇತ್ಯಾದಿಗಳಲ್ಲಿ ಸಿಕ್ಕಿಹಾಕ್ಕೊಳ್ಳೋದು ಭಾರತೀಯತೆ ಆಗೋದಿಲ್ಲ. ಇದನ್ನೆಲ್ಲ ಹೇಳೋರು ಯಾರು? ವಿಚಾರವಂತರೋ ಮಠಾಧಿಪತಿಗಳೋ ಯಾರು? ನಮ್ಮ ಮಠಾಧಿಪತಿಗಳೋ, ಬಿಡಿಬಿಡಿ, ಇವರ ಅರ್ಥದ ಭಾರತೀಯತೆಯಿಂದ ನಾನು ದೂರವೇ. ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೇ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ? ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ. ಇನ್ನು ಗೋವು, ಕಡೀಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ? ಬೇರೆ ಪ್ರಾಣಿಗಳೇನು ಪಾಪ ಮಾಡಿದ್ದಾವೆ? ಅವೂ ಅಷ್ಟೇ ಮುಖ್ಯ. ಪೂಜೆ, ಪುನಸ್ಕಾರ, ವಿಧಿ ಇಂಥವುಗಳನ್ನು ಮಾಡೋರು ಹಿಂದುಗಳಾದರೆ, ಇದಾವುದನ್ನೂ ನಾನೂ ಮಾಡೋದಿಲ್ಲ. ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ. ಹಾಗಾದರೆ ನಾನೆಂಥ ಹಿಂದು! ಎಂಥಾ ದೊಡ್ಡ ಸಾಹಿತೀನೇ ಆಗಲಿ-ಅವನು ಅನುಷ್ಠಾನಕ್ಕೆ ತರೋದಕ್ಕೆ ಆಗದೇ ಇದ್ರೂ ಚಿಂತೆ ಇಲ್ಲ- ವಿಶ್ವಮಾನವತ್ವವನ್ನು ಭಾವದ ಮಟ್ಟದಲ್ಲಾದರೂ ಒಪ್ಪಿಕೊಳ್ಳದೆ ಹೋದರೆ ಅಂಥವನನ್ನು ಮೂರನೇ ದರ್ಜೆ ಅಥವಾ ನಾಲ್ಕನೇ ದರ್ಜೆಯವನೆಂತಲೇ ತಿಳಕೊಳ್ಳಬೇಕು.”

“ಆದರೆ ಜಾತಿ ಪದ್ಧತಿ ಕೂಡ ಸೃಜನಶೀಲತೆಗೆ ಇಂಬಾಗಬಲ್ಲದೆಂಬ ಒಂದು ಅಭಿಪ್ರಾಯ ಕೇಳಿಬರುತ್ತಿದೆಯಲ್ಲಾ. ನೀವು ಒಬ್ಬ ಲೇಖಕರಾಗಿ ಏನನ್ನುತ್ತೀರೀ?” ಎಂದೆ ನಾನು.

ಈ ಪ್ರಶ್ನೆಗೆ, ಕುವೆಂಪು ಗಟ್ಟಿಯಾಗಿ ನಕ್ಕರು. “ಅಂದ್ರೆ, ಅದು ಜಾತಿಪದ್ಧತೀನ ಉಳಿಸೋ ಜಾಣತನದ ವಾದ ಇರಬೇಕು. ಜಾತಿ-ಮತ ಇವೆಲ್ಲಾ ಇರಬೇಕು ಅನ್ನುವವನು, ಅವನು ಎಂಥಾ ಸಾಹಿತಿಯೆ ಆಗಲಿ, ಅವನಿಗೆ ಧಿಕ್ಕಾರ. He should be condemned.”

ಆಗಲೇ ಸಾಕಷ್ಟು ಸಮಯವಾಗಿತ್ತು. ಸಂದರ್ಶನದ ಉದ್ದಕ್ಕೂ ಮುಖ್ಯವಾದ ಒಂದು ಧಾರೆ ಎಂದರೆ ‘ವಿಶ್ವಮಾನವತ್ವ’ದ ಕಲ್ಪನೆ. ಆದ್ದರಿಂದ ಕಡೆಯದಾಗಿ ಕೇಳಿದ ಪ್ರಶ್ನೆಯೆಂದರೆ: “ಪ್ರಾದೇಶಿಕ ಭಾಷೆ-ಸಂಸ್ಕೃತಿ ಇತ್ಯಾದಿಗಳನ್ನು ಎತ್ತಿಹಿಡಿಯುವ ನಿಮ್ಮ ನಿಲುವು, ನೀವು ಪ್ರತಿಪಾದಿಸುವ ‘ವಿಶ್ವಮಾನವ’ ಕಲ್ಪನೆಯೊಂದಿಗೆ ಹೇಗೆ ಹೊಂದಿಕೊಳ್ಳುತ್ತದೆ?”

“ವಿಶ್ವಮಾನವ ಅಂದ ಕೂಡಲೇ ನನ್ನ ದೇಹವನ್ನು ನಿರ್ಲಕ್ಷಿಸುತ್ತೇನೇನು? ನನ್ನ ಮನೆಯನ್ನು ನಿರ್ಲಕ್ಷಿಸುತ್ತೇನೇನು? ಅಥವಾ ನನ್ನ ಹತ್ತಿರದವರನ್ನ, ನನ್ನ ಭಾಷೆಯನ್ನು ನಿರ್ಲಕ್ಷಿಸುತ್ತೇನೇನು? ವಿಶ್ವಮಾನವತೆಯ ಕಲ್ಪನೆ ಯಾವುದಕ್ಕೂ ವಿರುದ್ಧವಾದುದಲ್ಲ; ಅದು ಎಲ್ಲವನ್ನೂ ಒಳಗೊಳ್ಳುತ್ತದೆ. It is not a negative idea, it is a positive idea.

* * *