ಮೊದಲು ಕೇಳಿದೆನವನ ಮಾಟದ
ಕೊಳಲಿನುಲಿಯನು ದೂರದಿ,
ಬಳಿಕ ಆತನ ಹಾಡು ಮನವನು
ತಟ್ಟಿ ಆತನ ವಿಷಯವೆಲ್ಲವ-
ನೊರೆದುದೆನ್ನೀ ಕಿವಿಯಲಿ.

ಮತ್ತೆ ನೀನೇ ಬಂದು ಓ ಸಖಿ
ಹೆಸರನುಸುರಿದೆ ಕಿವಿಯಲಿ
‘ಕೃಷ್ಣ’ – ಎನ್ನುವ ಹೆಸರು ಜೇನನು
ಕರೆವುದೆನ್ನೀ ಎದೆಯಲಿ !

ಅವನ ಅಗಣಿತ ಗುಣವನೊರೆದರು
ಅವನನರಿತಿಹ ಗೆಳೆಯರು.
ನಾನು ಅಬಲೆಯು ಮತ್ತೆ ಕುಲವಧು,
ಕಠಿಣರೆನ್ನೀ ಹಿರಿಯರು.

ದಿನವು ದಿನವೂ ಪ್ರಿಯನ ಒಲವಿಗೆ
ಇಂತು ತುಡಿದರೆ ನನ್ನೆದೆ,
ನಾನು ಜೀವವ ಬಿಡುವುದೊಳ್ಳಿತು,
ಬೇರೆ ಹಾದಿಯು ಏನಿದೆ ?
ಹೇಳು ಕೆಳದೀ ನನ್ನ ಕೃಷ್ಣನ
ಕಾಣಲಾವುದು ಪಥವಿದೆ?