ಕೆಲವು ಬೆಳೆಗಳನ್ನು ಬೆಳೆಯುವ ಮೊದಲೇ ಬೇಲಿ ಕಟ್ಟುವುದು ಅಗತ್ಯ.  ಕೆಲವು ಬೆಳೆಗಳು ಸಸಿಗಳಾದ ಮೇಲೆ ಬೇಲಿ ನಿರ್ಮಿಸಿದರೂ ಸಾಕು.  ಕೆಲವಕ್ಕೆ ಬೇಲಿ ಬೇಕು.  ಆದರೆ ಸಜೀವ ಬೇಲಿ ಬೇಡ.  ಕೆಲವಕ್ಕೆ ಬೇಲಿಯೇ ಬೇಡ.

ಬೇಲಿಯು ತೋಟದ ಸಾರವನ್ನೆಲ್ಲಾ ನುಂಗುವಂತಿರಬಾರದು.  ಬೇಲಿಯಿಂದ ತೋಟದಲ್ಲಿ ನೀರಿನ ಉಳಿತಾಯ, ಗಾಳಿಯ ತಡೆ, ಹಸುರು ಸೊಪ್ಪು, ದನಕರುಗಳಿಂದ ರಕ್ಷಣೆ, ಹಕ್ಕಿಗಳಿಗೆ ಕೂರಲು, ಗೂಡುಕಟ್ಟಲು ಸಹಾಯ, ಸೊಳ್ಳೆ ನೊಣಗಳ ಶತ್ರು, ಔಷಧೀಯ ಸಹಾಯ, ರೋಗ, ಕೀಟಗಳಿಗೆ ಮಾರಕ ಹೀಗೆ ಏನೆಲ್ಲಾ ಸಾಧ್ಯವೋ ಅದೇ ರೀತಿಯಲ್ಲಿ ಬೇಲಿಗಳನ್ನು ಮಾಡಬಹುದು.

ಒತ್ತಾದ ಬೇಲಿ, ಅಗಲವಾದ ಬೇಲಿ, ಬಳ್ಳಿಗಳ ಬೇಲಿ, ಮುಳ್ಳು ಬೇಲಿ, ಕೆಟ್ಟವಾಸನೆಯ ಬೇಲಿ, ಸುವಾಸನೆಯ ಬೇಲಿ, ಕಹಿರುಚಿಯ ಬೇಲಿ, ತರಕಾರಿ ಬೇಲಿ, ಔಷಧಿ ಸೊಪ್ಪಿನ ಬೇಲಿ, ಕಲ್ಲಿನ ಬೇಲಿ, ಬೈನೆಮರದ ಬೇಲಿ, ಅಡಿಕೆ ದಬ್ಬೆ ಬೇಲಿ, ಸಾಲುಮರದ ಬೇಲಿ ಏನೆಲ್ಲಾ ರೀತಿಯ ಬೇಲಿಗಳಿವೆ.

ಬೇಲಿಯೆಂದರೆ ಜೀವವೈವಿಧ್ಯಗಳ ಆಗರವೂ ಹೌದು.  ಒಂದೇ ಜಾತಿಯ ಸಸ್ಯಗಳಿಂದ ಬೇಲಿ ಕಟ್ಟಲೇಬಾರದು.  ಕೇವಲ ಕಳೆ ಸಸ್ಯಗಳಿಂದ, ಕರಿಕೆ ಜಡ್ಡಿನಿಂದ ಕೂಡಿರಬಾರದು.  ಮುಳ್ಳುಕಂಟಿಗಳೊಂದೇ ಇರಬಾರದು.  ಜಾನುವಾರುಗಳಿಗೆ ಮೇವು ಇರುವುದು ಒಳ್ಳೆಯದಲ್ಲ.  ಮೇವಾಗಬಲ್ಲ ಸಸ್ಯಗಳೂ ಇರಬಾರದು.  ಮಂಗಗಳಿಗೆ ಕುಳಿತು ದಾಟಲು ಅನುಕೂಲವಾಗುವ ಮರಗಿಡಗಳಿಂದ ಕೂಡಿರಬಾರದು.  ಹಂದಿಗಳು, ಕುರಿಗಳು ಜಾಗ ಮಾಡಿಕೊಂಡು ನುಗ್ಗುವಂತಿರಬಾರದು.

ಒಡ್ಡು ಕಟ್ಟಿದ ಜಾಗದಲ್ಲಿ ಕಳ್ಳಿ ಜಾತಿಯ ಯಾವುದೇ ಗಿಡಗಳನ್ನೂ ನೆಡಬಹುದು.  ಅದರ ಪಕ್ಕದಲ್ಲಿ ಮತ್ತೊಂದು ಮುಳ್ಳುಗಳಿರುವ ಸಸ್ಯಜಾತಿಯನ್ನು ಬೆಳೆಸಬೇಕು.  ಬೋರೆಮುಳ್ಳು, ಸೀಗೆಮುಳ್ಳು, ಜಾಲಿಮುಳ್ಳು ಹೀಗೆ ಎಲ್ಲಾ ರೀತಿಗಳನ್ನು ಬೆಳೆಸಿದರೂ ಆದೀತು.  ಮಧ್ಯೆ ಮಧ್ಯೆ ಹುಚ್ಚು ಕೇದಗೆಯ ಗಿಡಗಳು ಇರಲಿ.

ಹೀಗೆ ಬೇಲಿಯನ್ನು ಗಟ್ಟಿಗೊಳಿಸಿದ ಮೇಲೆ ಒಳದಿಕ್ಕಿನಲ್ಲಿ ಬಿದಿರು ಜಾತಿಯ ಸಸ್ಯಗಳನ್ನು ಹಾಕಬಹುದು.  ಹೆಬ್ಬೇವನ್ನು ಹಾಕಿದರೆ ಬಲುಬೇಗ ಬೆಳೆಯುತ್ತದೆ.  ಸದಾ ಹಸುರಿನಿಂದ ಕೂಡಿರುತ್ತದೆ.   ತೋಟಕ್ಕೆ ನೆರಳು, ಹಸುರೆಲೆ, ಗೊಬ್ಬರ, ಗಾಳಿಗೆ, ಬಿಸಿಲಿಗೆ ತಡೆಯಾಗುತ್ತದೆ.  ಕಟ್ಟಿಗೆ, ನಾಟವಾಗುತ್ತದೆ.  ಬೇವನ್ನು ಸಹ ಬೆಳೆಸಬಹುದು.  ಬೇವಿನ ಬೀಜ ಗೊಬ್ಬರವೂ ಹೌದು, ಔಷಧ ಕೀಟನಾಶಕವೂ ಹೌದು.

ಒಳಮೈಯಲ್ಲಿ ಬೆಳೆಯುವ ಸಸ್ಯಗಳಿಗೆ ಮೂರು ವರ್ಷಗಳ ಕಾಲ ನೀರು ಕೊಟ್ಟು ಬೆಳೆಸಬೇಕು.  ಆಗಾಗ ಗೊಬ್ಬರ ಕೊಟ್ಟರೂ ಒಳ್ಳೆಯದು.  ಇವು ಬೆಳೆದಂತೆಲ್ಲಾ ಬಲವಾದ ಕೋಟೆಯಾಗುತ್ತದೆ.  ಮಳೆಗಾಲದಲ್ಲಿ ನೀರನ್ನು ಹೀರಿಕೊಂಡು ಬೇಸಿಗೆಯಲ್ಲಿ ತೇವಾಂಶ ಆರದಂತೆ ನೋಡಿಕೊಳ್ಳುತ್ತದೆ.  ಪುಟ್ಟ ಆದಾಯವನ್ನೂ ಕೊಡುತ್ತದೆ.

ಕಳ್ಳಿ ಬಿಟ್ಟರೆ, ಕತ್ತಾಳೆ ಬೇಲಿ ಬಲು ಗಟ್ಟಿ.  ಕತ್ತಾಳೆ ಚಿರಂಜೀವಿ ಸಸ್ಯ.  ಕತ್ತಾಳೆಯ ಪುಟ್ಟ ಗಿಡಗಳನ್ನು ಗಡಿ ಬದುಗಳ ಮೇಲೆ ಎರಡು ಅಡಿಗಳಿಗೆ ಒಂದರಂತೆ ಮಳೆ ಬೀಳುವ ಮೊದಲು ನೆಟ್ಟರೆ ಸಾಕು.  ಆಮೇಲೆ ಎಂದೂ ಅದಕ್ಕೆ ನೀರು ಬೇಕಿಲ್ಲ.  ಗಿಡ ಬೆಳೆದು ದೊಡ್ಡಾದಂತೆಲ್ಲ ಎಲೆಗಳೂ ಅಗಲವಾಗುತ್ತವೆ.  ಎಲೆ ತುದಿಯು ಗರಗಸದಂತಿರುತ್ತದೆ.  ಒತ್ತಾಗಿ ಬೆಳೆಯುತ್ತದೆ.  ಗಿಡದಿಂದ ಗಿಡಕ್ಕೆ ಜಾಗವೇ ಇರದಂತೆ ಬೆಳೆಯುತ್ತದೆ.  ಯಾವುದೇ ಜಾನುವಾರುಗಳೂ ಒಳನುಗ್ಗಲು ಅಸಾಧ್ಯ.

ಜಮೀನಿನ ಮಧ್ಯೆ ಎಷ್ಟೇ ನೀರು ಬಿದ್ದರೂ ಹೊರಹೋಗಲು ಕೊಡುವುದಿಲ್ಲ.  ಬೇರುಗಳಂತೂ ಒಂದು ಕಣ ಮಣ್ಣನ್ನೂ ಕೊಚ್ಚಿ ಹೋಗಲು ಬಿಡದೆ ನಿಲ್ಲಿಸುತ್ತದೆ.  ಇದು ರಾಕ್ಷಸ ಜಾತಿ.  ಗಿಡಗಳಿಂದಲೇ ಗಿಡಗಳು ಹುಟ್ಟುತ್ತಾ ಸುತ್ತೆಲ್ಲಾ ಬೆಳೆಯುತ್ತಿರುತ್ತದೆ. ಇದರಿಂದ ನಾರು ತೆಗೆಯಬಹುದು.  ಹಗ್ಗ ಬಲು ಗಟ್ಟಿ.  ಉಳಿದದ್ದು ಗೊಬ್ಬರ ಹಾಗೂ ಕೀಟನಾಶಕವಾಗಿಯೂ ಬಳಕೆಯಲ್ಲಿದೆ.

ಲಾಂಟಾನ ಹಾಗೂ ಚದುರಂಗಿಯ ಬೇಲಿಗಳು ಒತ್ತೊತ್ತಾಗಿ, ಮುಳ್ಳುಕಂಟಿಗಳಿಂದ ಕೂಡಿರುತ್ತವೆ.  ಇದರ ಮಧ್ಯೆ ಹಕ್ಕಿಗಳು ಗೂಡು ಕಟ್ಟುತ್ತವೆ.  ಕೂತು ಹಾರಲು ಉಪಯುಕ್ತ.  ಹಕ್ಕಿಗಳು ಬಂದರೆ ಅಪಕಾರಿ/ಉಪಕಾರಿ ಕೀಟಗಳನ್ನೆಲ್ಲಾ ತಿನ್ನುತ್ತವೆ.

ಲಾಂಟಾನ ಹಾಗೂ ಚದುರಂಗಿ ಸೊಪ್ಪು ಬಲುಬೇಗ ಕೊಳೆಯುತ್ತದೆ.  ಉತ್ತಮ ಸಾರಜನಕ ನೀಡುತ್ತದೆ.  ಇವುಗಳ ಗೊಬ್ಬರ, ಕಷಾಯಗಳು ಕೆಲವು ಜಾತಿಯ ನೊಣ ಮತ್ತು ಸೊಳ್ಳೆಗಳನ್ನು ನಾಶಮಾಡುತ್ತವೆ.  ಇವುಗಳನ್ನು ಹೂವಾಗಲು ಮಾತ್ರ ಬಿಡಬಾರದು.  ಬೀಜಗಳು ತೋಟದ ತುಂಬಾ ಹರಡಿ ಗಿಡಗಳೆದ್ದು ಮುಖ್ಯಬೆಳೆಯನ್ನೇ ಹಾಳು ಮಾಡುತ್ತವೆ.  ಇವುಗಳ ನಿಯಂತ್ರಣ ಅಗತ್ಯ.

ಜತ್ರೋಪಾ, ವಿಷಮಧಾರಿ ಸಸ್ಯಗಳು ಕಹಿ, ವಿಷ.  ಇವುಗಳನ್ನು ಯಾವುದೇ ಜಾನುವಾರುಗಳು, ಕುರಿಗಳು ತಿನ್ನುವುದಿಲ್ಲ.  ಇವು ಸಸ್ಯ ಔಷಧಿಗಳು.  ಕೆಲವು ಬಗೆಯ ಕೀಟನಾಶಕಗಳಿಗೆ ಉಪಯುಕ್ತ.  ಇವುಗಳನ್ನು ಬೀಜದಿಂದ ಅಥವಾ ಕಡ್ಡಿಗಳನ್ನು, ಮರಿಕಂದುಗಳನ್ನು ನೆಟ್ಟು ಬದುಕಿಸಬಹುದು.  ನೀರು, ಗೊಬ್ಬರ ನೀಡುವುದಾಗಲೀ, ಆರೈಕೆಯಾಗಲೀ ಬೇಕಿಲ್ಲ.  ಆದರೆ ಚಾಟ್ನಿ ಮಾಡುತ್ತಿರಬೇಕು.  ಜತ್ರೋಪಾವು ನೀರು ಇಂಗಿಸುತ್ತದೆ.  ಎಂತಹ ಬರದಲ್ಲೂ ಬದುಕಿರುತ್ತದೆ.

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಚಿಗುರು ಗೂಟದ ಬೇಲಿ ಕಟ್ಟುತ್ತಾರೆ.  ಬೇಲಿ ದಾಸವಾಳ, ಗ್ಲಿರಿಸೀಡಿಯಾ ಸರ್ವೆ, ಬಕುಳ ಮುಂತಾದ ಗಿಡಗಳ ದಪ್ಪ ಕೊಂಬೆಗಳನ್ನು ಕಡಿದು ಬೇಲಿಯ ಗೂಟಗಳಾಗಿ ನೆಡುತ್ತಾರೆ.  ಅದಕ್ಕೆ ತೆಂಗಿನಸಿಪ್ಪೆಯಿಂದ ನಾರು ತೆಗೆದು ಹಗ್ಗ ಮಾಡಿ ಕಟ್ಟುತ್ತಾರೆ.   ಕೆಲವರು ಅಡಿಕೆ ದಬ್ಬೆ ಕಟ್ಟಿದರೆ ಕೆಲವರು ಕವಳಿ, ಪರಿಗೆ, ಬಿದಿರು ಮುಳ್ಳುಗಳನ್ನು ಕಟ್ಟುತ್ತಾರೆ.  ತೋಟಕ್ಕೆ ಜಾನುವಾರು, ಮನುಷ್ಯರು ಸುಲಭವಾಗಿ ಹಾರದಂತೆ ರಕ್ಷಣೆಯಿದು.  ಮಳೆಗಾಲ ಕಳೆಯುತ್ತಿದ್ದಂತೆ ನೆಟ್ಟ ಗೂಟಗಳೆಲ್ಲಾ ಚಿಗುರಿ ನೆಲಕ್ಕೆ ಬೇರಿಳಿಸಿರುತ್ತದೆ.  ಇವು ಬಲುಬೇಗ ಬೆಳೆದು ಗಿಡಗಳಾಗುತ್ತವೆ.

ಈ ರೀತಿಯ ಗೂಟಗಳನ್ನು ನೆಡುವಾಗ ಬುಡದಲ್ಲಿ ಮಣ್ಣನ್ನು ಅರ್ಧ ಅಡಿ ಏರಿಸಿ ನೆಡಬೇಕು.  ಪ್ರತಿ ಮಳೆಗಾಲದಲ್ಲೂ ಬುಡಕ್ಕೆ ಮಣ್ಣು ಕೊಡುತ್ತಿರಬೇಕು.  ಬಕುಳ, ಸರ್ವೆ ಗೂಟಗಳು ಬೆಳೆದು ಮರಗಳಾಗುತ್ತವೆ.  ಮುಂದೆ ಈ ಮರಗಳೇ ಗಾಳಿ, ಬಿಸಿಲಿನಿಂದ [ನೈರುತ್ಯದ ಬಿಸಿಲಿನಿಂದ] ತೋಟವನ್ನು ರಕ್ಷಿಸುತ್ತದೆ.  ಹಸುರು ಸೊಪ್ಪು, ತರಗೆಲೆಗಳು ಚೆನ್ನಾಗಿ ಸಿಗುತ್ತವೆ.  ಇವು ತಾವಾಗಿಯೇ ಸಾಯುವುದೇ ಇಲ್ಲ.  ಮುಂದೆ ಉರುವಲಿಗೆ ಉಪಯುಕ್ತ.

ಗ್ಲಿರಿಸೀಡಿಯಾವು ಗೊಬ್ಬರದ ಗಿಡವೆಂದೇ ಜನಪ್ರಿಯ.  ಇದರ ಹಸುರೆಲೆ ಗೊಬ್ಬರ, ಹೂವಿನ ಗೊಬ್ಬರ, ಕಡ್ಡಿ ಗೊಬ್ಬರ ಎಲ್ಲಾ ರೀತಿಯ ಬೆಳೆಗೂ ಉಪಯುಕ್ತ.  ಇವು ಬಲು ಬೇಗ ಕೊಳೆತು, ಕಳಿತು ಗೊಬ್ಬರವಾಗುತ್ತದೆ.  ಇದರೊಂದಿಗೆ ಹಾಕಿದ ಯಾವುದೇ ತ್ಯಾಜ್ಯವಸ್ತುವೂ ಸಹ ಬಲುಬೇಗ ಕಳಿತುಹೋಗುತ್ತದೆ.

ಈ ಬೇಲಿಯಿರುವಲ್ಲಿ ಇಲಿಗಳು ಬರುವುದಿಲ್ಲ.  ಇದರ ವಾಸನೆ ಹಾವುಗಳಿಗೂ ಹಿಡಿಸದು.  ಕೆಲವೇ ಜಾತಿಯ ಹಕ್ಕಿಗಳು ಮಾತ್ರ ಇದರ ಮೇಲೆ ಕೂರುತ್ತವೆ.

ಬೇಲಿ ದಾಸವಾಳದ ಗಿಡಗಳು ಬಳ್ಳಿಯಂತೆ ಸಪೂರವಾಗಿರುತ್ತವೆ.  ಎಷ್ಟೇ ಕಡಿದರೂ ಮತ್ತೆ ಮತ್ತೆ ಚಿಗುರುತ್ತವೆ.  ಇದರ ಸೊಪ್ಪ ದನಕರುಗಳಿಗೆ ಸಮೃದ್ಧ ಮೇವು.  ಆದರೆ ಇದನ್ನು ಒತ್ತೊತ್ತಾಗಿ ಬೆಳೆದರೆ ದನಕರುಗಳು ಒಳನುಗ್ಗಲು ಸಾಧ್ಯವಿಲ್ಲ.

ಬೇಲಿ ದಾಸವಾಳವು ಸಪೂರವಾಗಿ ಬಳುಕುವ ಕೊಂಬೆಗಳಿಂದ ಕೂಡಿರುತ್ತದೆ.  ಇವುಗಳ ಮಧ್ಯೆ ಸಪೂರವಾದ ಎತ್ತರದ ಕಂಬಗಳನ್ನು ನಿಲ್ಲ್ಲಿಸಬೇಕು.  ಅದಕ್ಕೆ ಒಂದು ಅಡಿ ಅಂತರದಲ್ಲಿ ಕತ್ತದ ಹಗ್ಗ ಅಥವಾ ತಂತಿಯನ್ನು ಕಟ್ಟಬೇಕು.  ಬುಡಕ್ಕೆ ಮಣ್ಣು ಏರಿಸಿ ಬೇಲಿ ದಾಸವಾಳದ ಕೊಂಬೆಗಳನ್ನು ನೆಡಬೇಕು.  ಇವು ಮಳೆಗಾಲ ಕಳೆಯುತ್ತಿದ್ದಂತೆ ಮೇಲೆದ್ದುಬಿಡುತ್ತವೆ.  ಚಿಗುರಿ ಬರುವ ಹೊಸ ಚಿಕ್ಕ ಚಿಕ್ಕ ಕೊಂಬೆಗಳನ್ನು ತಂತಿಗಳಿಗೆ ಸುತ್ತುತ್ತಾ ಬರಬೇಕು.  ಒಳಗೆ-ಹೊರಗೆ ಜೋಡಿಸಲೂ ಬಹುದು.  ಒಮ್ಮೆ ಹೀಗೆ ಮಾಡಿದರೆ ಸಾಕು.  ಅನಂತರ ಕೊಂಬೆಗಳಿಂದ ಒಡೆವ ಟಿಸಿಲುಗಳೆಲ್ಲಾ ಒಂದಕ್ಕೊಂದು ಸುತ್ತಿಕೊಳ್ಳುತ್ತಾ ಗಟ್ಟಿಯಾಗುತ್ತಾ ಹೋಗುತ್ತದೆ.  ಮುಂದೆಲ್ಲಾದರೂ ಹಗ್ಗ ಹರಿದುಹೋದರೂ ಕೊಂಬೆಗಳೆಲ್ಲಾ ಹೆಣೆದುಕೊಂಡಿದ್ದಕ್ಕಾಗಿ ನೆಲಕ್ಕೆ ಬೀಳುವುದಿಲ್ಲ.  ಬಳುಕುತ್ತಾ ನಿಂತೇ ಇರುತ್ತದೆ.  ಕುರಿಗಳು, ದನ, ಎಮ್ಮೆಗಳು ಎಲೆಗಳಿಗೆ ಬಾಯಿ ಹಾಕಿ ತಿಂದರೂ ಅಚೆ ಏನಿದೆಯೆಂದು ಕಾಣುವುದಿಲ್ಲ.  ಹೆಣಿಗೆಯನ್ನು ಛೇದಿಸಿ ಒಳನುಗ್ಗಲು ಸಾಧ್ಯವಾಗುವುದಿಲ್ಲ.  ಮಂಗಗಳಿಗೆ ಇದನ್ನೇರಿ ಕೂರಲು ಸಾಧ್ಯವಾಗದು.  ಮಂಗಗಳ ಭಾರಕ್ಕೆ ಬಳುಕಿ ಬಗ್ಗುತ್ತವೆ.  ಮಂಗಗಳು ಬೀಳುತ್ತವೆ.  ಒತ್ತಾಗಿ ಹೆಣೆದಿರುವ ಕಾರಣ ಆಚೆಯ ಬಾಳೆಗೊನೆಗಳು ಕಾಣದು.  ಇದರಲ್ಲಿ ಕೆಂಪನೆಯ ದಾಸವಾಳದ ಹೂ ಬಿಡುತ್ತದೆ.

ಕೆಲವರು ಇದೇ ರೀತಿ ಬಳ್ಳಿಯಂತೆ ಹಬ್ಬುವ ಒಂದು ಜಾತಿಯ ಕಳ್ಳಿಗಿಡವನ್ನೂ ಬೆಳೆಸುತ್ತಾರೆ.  ಬೋಗನ್‌ವಿಲ್ಲಾ, ಕಾಗದದ ಹೂವಿನ ಗಿಡವೂ ಸಹ ಕೊಂಬೆಯಿಂದಲೇ ನೆಟ್ಟು ಬೆಳೆಸಬಹುದು.  ಇದೂ ಬಳ್ಳಿಯಂತೆ ಬೇಲಿಯ ತುಂಬಾ ಬೆಳೆದುಕೊಂಡು ದಟ್ಟವಾಗಿ ಹಬ್ಬುತ್ತದೆ.  ವರ್ಷದ ಎಲ್ಲಾ ಕಾಲವೂ ಹೂವುಗಳಿರುತ್ತವೆ.  ಗಿಡದ ತುಂಬಾ ಮುಳ್ಳುಗಳಿರುವ ಕಾರಣ ಬೇಲಿ ನುಗ್ಗಲು ಜಾನುವಾರುಗಳಿಗೆ, ಮಂಗಗಳಿಗೆ ಸಾಧ್ಯವಾಗದು.

ಲಕ್ಕಿ [ನೆಕ್ಕಿ] ಗಿಡ ಕಹಿ.  ಸೊಳ್ಳೆಗಳಿಗೆ ಇದರ ವಾಸನೆ ಆಗದು.  ಶಂಖಪುಷ್ಪ, ಕರವೀರ ಹೀಗೆ ಕಹಿ ಎಲೆಯ, ಕೀಟನಾಶಕಗಳಾಗುವ ಅನೇಕ ರೀತಿಯ ಗಿಡಗಳು ಬೇಲಿಸಾಲಿನಲ್ಲಿಯೇ ಚೆನ್ನಾಗಿ ಬೆಳೆಯುತ್ತವೆ.

ಮುಳ್ಳಿಲ್ಲದ ಬೇಲಿಗಿಡಗಳ ಪಕ್ಕ ನಿಂಬೆ, ಗಜನಿಂಬೆ, ಮಾದಲ, ಇಳಿ, ಕಂಚಿ, ಚಕ್ಕೋತ, ದೊಡ್ಲಿ ಹೀಗೆ ಮುಳ್ಳಿನ ಗಿಡಗಳನ್ನು ಬೆಳೆಸುತ್ತಾರೆ.  ಬಿದಿರನ್ನು, ಬೆತ್ತವನ್ನು ಬೆಳೆಸುವವರೂ ಇದ್ದಾರೆ.

ಮುಳ್ಳಿನ ಗಿಡಗಳ ಬೇಲಿಯೂ ಇದೆ.  ಕವಳಿ ಮುಳ್ಳು, ಪರಿಗೆ ಮುಳ್ಳು, ಜಾಲಿ ಮುಳ್ಳು, ಕುಡ್ತೆ ಮುಳ್ಳು, ಹಲಗೆ ಮುಳ್ಳು ಹೀಗೆ ವಿವಿಧ ರೀತಿಯ ಮುಳ್ಳಿನ ಪೊದೆಗಳು ಬೇಲಿಗೆ ಉತ್ತಮ.  ಆಳೆತ್ತರ ಬೆಳೆಯುವ ಇದನ್ನು ಆಗಾಗ ಸವರುತ್ತಾ ಬೇಕಾದಷ್ಟೇ ಉಳಿಸಿಕೊಳ್ಳಬೇಕು.  ಬೋರೆಯನ್ನೂ ಬೆಳೆಸಬಹುದು.  ಮುಳ್ಳುಬೇಲಿಯ ಒಳಭಾಗದಲ್ಲಿ ಹಲಸು, ತೇಗ, ಬಕುಳ, ದೇವಧಾರಿ, ಅಮಟೆ, ಬಿಂಬುಳಿ, ಕರಿಮಾದಲ, ಸಾಲುಧೂಪ, ನುಗ್ಗೆ, ಮಾವು, ತೆಂಗು, ಪೇರಲ, ದೊಡ್ಡಗೌರಿ ಮುಂತಾದ ನೇರವಾಗಿ ಮೇಲೇಳುವ ಗಿಡಗಳನ್ನು ಬೆಳೆಸಬಹುದು.  ಇವುಗಳನ್ನು ಬೇಲಿಯ ಸಾಲಿನಲ್ಲೂ ನೆಡಬಹುದು.  ಬೇಲಿಯಿಂದ ಒಂದು ಅಡಿ ಅಂತರ ಬಿಟ್ಟು ನೆಡಬಹುದು.  ಗಿಡಗಳು ಮೇಲೇರುವವರೆಗೆ ಆರೈಕೆ ಮಾಡಬೇಕು.  ಮುಂದೆ ದೊಡ್ಡ ಆದ ಮೇಲೆ ಮಲೆನಾಡಿನ ವಿಪರೀತ ಗಾಳಿ ಮಳೆಯನ್ನು ತಡೆಯುತ್ತವೆ.  ಬಿಸಿಲಿನ ತಾಪ ಕಡಿಮೆ ಆಗುತ್ತದೆ.

ಅಡಿಕೆ ಮರದ ಗೂಟ, ದಬ್ಬೆಗಳಿಂದಲೂ ಬೇಲಿ ಕಟ್ಟುವ ಪದ್ಧತಿಯಿದೆ.  ಗಡಿಯಲ್ಲಿ ಗೂಟ ಹುಗಿದು, ಗೂಟಗಳಿಗೆ ಅಡ್ಡಲಾಗಿ ದಬ್ಬೆ ಇಟ್ಟು ಕುಮುಸನ ಬಳ್ಳಿಯಿಂದ ಬಿಗಿದು ಕಟ್ಟುತ್ತಾರೆ.  ಇದು ಒಂದೆರಡು ವರ್ಷಗಳು ಬಾಳುತ್ತದೆ.  ಇದೇ ರೀತಿ ಬೈನೆಮರವನ್ನೂ ಸಿಗಿದು ದಬ್ಬೆ ಮಾಡಿ ಬೇಲಿ ಕಟ್ಟುತ್ತಾರೆ.  ಬಿದಿರಿನ ಉದ್ದ ಗಳಗಳನ್ನು ಸಿಗಿದು ಬೇಲಿ ಕಟ್ಟುತ್ತಾರೆ.

ಈ ದಬ್ಬೆ, ಗಳಗಳನ್ನು ಕೋನ ಕೋನವಾಗಿಟ್ಟು, ವಾರೆಕೋರೆಯಲ್ಲಿಟ್ಟು, ಕಲಾತ್ಮಕವಾಗಿ ಬೇಲಿ ಕಟ್ಟುವವರೂ ಇದ್ದಾರೆ.  ಒತ್ತೊತ್ತಾಗಿ ದಬ್ಬೆಗಳನ್ನು ಸೇರಿಸಿ ಕಟ್ಟುವುದು, ಚೌಕ ಚೌಕ ಕಿಂಡಿಗಳು ಬರುವಂತೆ ಬೇಲಿ ಕಟ್ಟುವುದು, ಬಳ್ಳಿಗಳನ್ನು ಕಟ್ಟುವಾಗ ಹೂ ಕುಚ್ಚು ಬರುವಂತೆ ಗಂಟು ಹಾಕುವುದು, ಮುಳ್ಳುಗಳನ್ನು ಲಂಟಾನ ಗಿಡಗಳನ್ನು ಸೇರಿಸಿ ಕಟ್ಟುವುದು, ಗೂಟಗಳ ಬದಲು ದೊಡ್ಡ ಕುಂಟೆಗಳನ್ನು ನಿಲ್ಲಿಸಿ ಬೇಲಿ ಕಟ್ಟುವುದು ಹೀಗೆ ಎಷ್ಟೆಲ್ಲಾ ವಿಧಗಳು.

ಬಯಲುಸೀಮೆಯಲ್ಲಿ ಹೆಚ್ಚಾಗಿ ಕಲ್ಲುಗಳೇ ಒಡ್ಡುಗಳಾಗಿಯೂ, ಬೇಲಿ ತಡೆಗಳಾಗಿಯೂ ಇರುತ್ತವೆ.  ಜಮೀನನ್ನು ಹದ ಮಾಡಿಕೊಳ್ಳುವಾಗ ಮೊದಲು ಉಳುಮೆಯಲ್ಲಿ ಕಲ್ಲುಗಳೆಲ್ಲಾ ಮೇಲೇಳುತ್ತವೆ.  ಅವುಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಆರಿಸಿ ಗಡಿಗಳಲ್ಲಿ ಪೇರಿಸುತ್ತಾ ಬರುತ್ತಾರೆ.  ಶಹಾಪುರ, ತಾಳಿಕೋಟೆ ಮುಂತಾದ ಕಡೆ ಚಪ್ಪಟೆಯಾದ ಕಲ್ಲುಗಳೇ ಸಿಗುತ್ತವೆ.  ಅವುಗಳನ್ನು ಜಿಗ್‌ಜಾಗ್ ಮಾದರಿಯಲ್ಲಿ ಪೇರಿಸುತ್ತಾರೆ.  ಹೀಗೆ ಪೇರಿಸಿದ ಕಲ್ಲಿನ ಮೇಲೆ ಕಳ್ಳಿಜಾತಿಯ ಗಿಡಗಳನ್ನು ಬೆಳೆಸಬಹುದು.

ಕರಾವಳಿ ತೀರದಲ್ಲಿ ಕೆಲವು ಕಡೆ ಮಣ್ಣಿನ ಬೇಲಿ ಕಟ್ಟುತ್ತಾರೆ.  ಮರಳುಮಿಶ್ರಿತ ಕೆಂಪು ಮಣ್ಣು ಹಾಗೂ ಗೋಡುಮಣ್ಣುಗಳಲ್ಲಿ ಇಂತಹ ಬೇಲಿಗಳ ನಿರ್ಮಾಣ.  ಇದನ್ನು ಕಟ್ಟಲು ತಜ್ಞತೆ ಬೇಕು.  ಸರಿಯಾದ ಆಕಾರ, ಗಾತ್ರಗಳಲ್ಲಿ ನಿರ್ಮಿಸಬೇಕು.  ಇಲ್ಲದಿದ್ದರೆ ಒಂದೇ ಮಳೆಗೆ ಕುಸಿದುಹೋಗುತ್ತದೆ.  ಈ ಕಟ್ಟೆಬೇಲಿಯ ಮೇಲೆ ಮುಳ್ಳಿನಕೊನೆ(ಕಡ್ಡಿ)ಗಳನ್ನು ಊರುತ್ತಾರೆ.

ಆಡುಸೋಗೆ, ಉಮ್ಮತ್ತಿನ ಗಿಡ, ಸರ್ಪಗಂಧಿ, ನೆಗ್ಗಿನಮುಳ್ಳು ಮುಂತಾದ ಔಷಧೀಯ ಗಿಡಗಳನ್ನು ಬೇಲಿಸಾಲಿನಲ್ಲಿಯೇ ಬೆಳೆಯಲೂಬಹುದು.  ಬೇಲಿಯಾಗಿಯೂ ಉಪಯುಕ್ತ.   ಇದನ್ನೆಲ್ಲಾ ದನಕರುಗಳು ತಿನ್ನುವುದಿಲ್ಲ.  ಪೊದೆಗಳಂತೆ ಬೆಳೆಯುವ ಕಾರಣ ನುಗ್ಗಲೂ ಆಗದು.  ಬೇಕಾದಾಗ ಕೆಲವು ರೋಗಗಳಿಗೆ, ಮನುಷ್ಯರಿಗೆ, ಜಾನುವಾರುಗಳಿಗೆ ಔಷಧಿಯೂ ಆಗುತ್ತದೆ.

ಬೇಲಿಯು ಕೇವಲ ತೋಟದೊಳಗಿನ ಆದಾಯವನ್ನು ಹೆಚ್ಚಿಸುವುದರೊಂದಿಗೆ ತಾನೇ ಸ್ವತಃ ಆದಾಯದ ಮೂಲವೂ ಆಗುತ್ತದೆ.

ಹಸುರೆಲೆ ಗೊಬ್ಬರವಾಗಿ, ಸೀಗೆ, ಕೌವಳಿ, ಕುಡ್ತೆ, ಪರಿಗೆ ಹಣ್ಣುಗಳಿಂದ, ಉರುವಲಾಗಿ, ಮರಮಟ್ಟುಗಳಿಂದ ನಾಟ, ಗೂಟಗಳಾಗಿ, ಔಷಧಿಗಳಾಗಿ ಕಿರು ಉತ್ಪನ್ನವಾಗಿ ಹೀಗೆ ಏನೆಲ್ಲಾ ರೀತಿಯಿಂದ ಉಪಯೋಗ ಪಡೆಯುವ ಮೂಲಕ ಆದಾಯವಾಗಿಯೂ ಮಾರ್ಪಡಿಸಿಕೊಳ್ಳಬಹುದು.

ನೆನಪಿಡಲೇಬೇಕಾದದ್ದೆಂದರೆ ಎಲ್ಲಾ ಸೊಪ್ಪುಗಳು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ.  ಕೆಲವು ವಿಷದ ಸೊಪ್ಪುಗಳು ಬೇಲಿಗೆ ಮಾತ್ರ ಯೋಗ್ಯ, ತೋಟಕ್ಕಲ್ಲ.  ಕೆಲವು ಔಷಧಿಗಳಿಗೆ ಮಾತ್ರ ಯೋಗ್ಯ, ನೆಲಕ್ಕಲ್ಲ.