ಬೇಲೂರು ಕೇಶವದಾಸರು ವಿಜಯದಾಸರ ಪೀಳಿಗೆಗೆ ಸೇರಿದ ಪ್ರಖ್ಯಾತ ಹರಿದಾಸರ ವಂಶದಲ್ಲಿ ೧೮೮೪ರಲ್ಲಿ ಮುಕ್ಕೋಟು ಏಕಾದಶಿಯಂದು ಜನಿಸಿದರು. ಇವರ ತಂದೆ ವೆಂಕಟಸುಬ್ಬದಾಸರು. ಕಮಲೇಶ ವಿಠಲಾಂಕಿತ ಸುರಪುರದ ಆನಂದದಾಸರ ಶಿಷ್ಯರು. ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಿಂದ ಬೇಲೂರಿಗೆ ವಲಸೆ ಬಂದು ಶ್ರೀ ಚನ್ನದೇಶವನ ಸನ್ನಿಧಿಯಲ್ಲಿ ಇವರ ಕುಟುಂಬ ನೆಲೆಸಿತು. ಹೀಗಾಗಿ ಇವರು ಬೇಲೂರು ಕೇಶವದಾಸರಾದರು. ಚೆನ್ನಕೇಶವನ ಪರಮ ಭಕ್ತರಾಗಿ ಹರಿದಾಸ ಪರಂಪರೆಯಲ್ಲಿ ವಿರಾಜಮಾನರಾದರು.

ಶ್ರೀಯುತರು ಬೇಲೂರಿನ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗಮಾಡಿ ಉಪನಯನವಾದ ಬಳಿಕ ಅಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ಕಾವ್ಯಮೀಮಾಂಸೆ, ವೇದಾಧ್ಯಯನಗಳನ್ನು ಮಾಡಿದರು. ತುಮಕೂರು, ಹಾಸನಗಳಲ್ಲಿ ಪ್ರೌಢಶಾಲೆಯ ತರಗತಿಗಳಲ್ಲಿ ವ್ಯಾಸಂಗ ಮಾಡಿ ಮೆಟ್ರಿಕ್ಯುಲೇಶನ್ನಿನಲ್ಲಿ ಉತ್ತೀರ್ಣರಾಗಿ ಹರಿದಾಸ ಸಾಹಿತ್ಯದ ಪ್ರಭಾವಕ್ಕೊಳಗಾಗಿ ಹರಿಸಂಕೀರ್ತನೆ ಮಾಡಲು ಪ್ರಾರಂಭಿಸಿದರು. ಸಂಗೀತ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದರು. ಕೀರ್ಥನಕರಾರರಾದರು, ಕವಿಯಾದರು, ಸಾಹಿತಿಯಾದರು, ಸಮಾಜಸೇವಕರೂ ಆದರು.

ಕರ್ನಾಟಕ ಕೀರ್ತನ ಕಲೆಯ ತವರೂರು ಎಂಬ ಉಲ್ಲೇಖವಿದ್ದರೂ, ಭಾರತೀಯ ಸಾಧುಸಂತರ ಇತಿಹಾಸದಲ್ಲಿ ಕರ್ನಾಟಕದ ಸಂತರಿಗೆ ಯಾವ ಸ್ಥಾನ ಲಭಿಸಿದೆ ಎಂಬ ಕುತೂಹಲದಿಂದ ಬೇರೆ ಭಾಷೆಗಳಲ್ಲಿರುವ ಭಕ್ತವಿಜಯ ಓದಿದ ಕೇಶವದಾಸರಿಗೆ ಅಲ್ಲಿ ನಮ್ಮ ದಾಸರ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ನಿರಾಶೆಯಾಯಿತು. ಇದರಿಂದಾಗಿ ಸಮಗ್ರ ಕರ್ನಾಟಕದ ಹರಿದಾಸ ಭವ್ಯಪರಂಪರೆಯ ಕುರಿತು ಬೃಹತ್‌ ಗ್ರಂಥವನ್ನೇ ಬರೆದರು. ಆ ಬೃಹತ್‌ ಗ್ರಂಥವೇ “ಶ್ರೀಕರ್ನಾಟಕ ಭಕ್ತವಿಜಯ’’. ಅದು ಈ ವರೆವಿಗೆ ಆರು ಮರುಮುದ್ರಣಗಳನ್ನು ಕಂಡಿದೆ. (ಪ್ರಕಾಶಕರು ಶ್ರೀ ಡಿ.ವಿ.ಕೆ. ಮೂರ್ತಿ, ಮೈಸೂರು)

ಶ್ರೀಯುತರು ಕೀರ್ತನಕಾರರಾಗಿ ಕರ್ನಾಟಕದಲ್ಲೆಲ್ಲ ಸಂಚರಿಸಿ ನಾಲ್ಕು ದಶಕಗಳ ಕಾಲ ತಮ್ಮದೇ ಆದ ವಿಶಿಷ್ಟರೀತಿಯಲ್ಲಿ ಆರ್ಯಸಂಸ್ಕೃತಿಯಲ್ಲಿ ಗೌರವ ಮೂಡುವಂತೆ ಕೀರ್ತನ ಸೇವೆ ಸಲ್ಲಿಸಿದವರು. ಇವರ ಕೀರ್ತನ ಶೈಲಿಯನ್ನು ಮೆಚ್ಚಿಕೊಂಡ ಪಂಡಿತ ಮದನಮೋಹನ ಮಾಲವೀಯ ಅವರು ಇವರಿಗೆ “ಕೀರ್ತನಾಚಾರ್ಯ” ಎಂಬ ಬಿರುದನ್ನಿತ್ತು ಗೌರವಿಸಿದ್ದು ಉಲ್ಲೇಖನೀಯ.

ಶ್ರೀಯುತ ಕೇಶವದಾಸರಿಗೆ ದಾಸಸಂಕೀರ್ತನದೊಂದಿಗೆ ಕರ್ನಾಟಕದ ಬಗ್ಗೆ ಹೆಚ್ಚಿನ ಗೌರವಾದರಗಳು ಇದ್ದವೆಂದು ತಿಳಿದುಬರುತ್ತದೆ. ಪಂಢರಪುರದ ಸುತ್ತಮುತ್ತಲಿದ್ದ ಮಹರಾಷ್ಟ್ರದ ಭಕ್ತರ ಮತ್ತು ಉತ್ತರ ಹಿಂದುಸ್ಥಾನದ ಸಂತರಿಗೆ ಸಿಕ್ಕಿದಷ್ಟು ಗೌರವಾದರಗಳು ಕರ್ನಾಟಕದ ಸಂತರಿಗೆ ಸಿಕ್ಕಿಲ್ಲವಲ್ಲ ಎಂಬ ಕೊರಗು ಇವರನ್ನು ಕಾಡುತ್ತಿತ್ತು. ಅದೇ ಪಂಢರಪುರದಲ್ಲಿ ಬಹುಕಾಲವಿದ್ದು ಅಪಾರ ಮಹಿಮೆಗಳನ್ನು ತೋರಿಸಿ, ತಮ್ಮ ಸಕಲ ಕೃತಿಗಳನ್ನೂ, ಸಕಲ ಸಂಪತ್ತನ್ನೂ ಆ ಪಾಂಡುರಂಗನಿಗೆ ಅರ್ಪಿಸಿದ ಪುರಂದರ ದಾಸರೊಬ್ಬರ ಚರಿತ್ರೆಯು ಬೇರೆ ಭಾಷೆಯ ಭಕ್ತರ ಗ್ರಂಥಗಳಲ್ಲಿ ಕಾಣುವ ಆಸೆ ಹೊಂದಿದ್ದ ದಾಸರು ಅದು ಲಭ್ಯವಾಗದ ಕಾರಣ ಬಹಳ ನಿರಾಶರಾಗಿದ್ದರು.

“ಭಾಗವತ ಧರ್ಮ ಅಥವ ದಾಸಕೂಟ” ಎಂಬ ಗ್ರಂಥದಲ್ಲಿ ಶ್ರೀ ಅಚಲಾನಂದ ದಾಸರಿಂದ ಹಿಡಿದು ಕರ್ನಾಟಕದ ಎಲ್ಲ ಹರಿದಾಸರ ಬಗ್ಗೆ ಒಂದು ಚರಿತ್ರೆಯನ್ನೇ ಬರೆದು ಈ ನಾಡಿಗೆ ಸಮರ್ಪಿಸಿದ ಪ್ರತಿಭಾವಂತ ಕೀರ್ತನಕಾರರು, ಬೇಲೂರು ಕೇಶವದಾಸರು.

ಅನಂತವಾದ ಕಾಲದಲ್ಲಿ ಅನಂತನ ಮಹಿಮೆಯನ್ನು  ಅನಂತವಾಗಿ ಜನರು ಕೊಂಡಾಡಿರಬೇಕು. ಆ ಜನರು ಕೊಂಡಾಡಿದ ಮಾತುಗಳು ಆಯಾ ಕಾಲದ ಜನರಿಗೆ ಆಯಾ ಭಾಷೆಗಳಲ್ಲಿ ಪದ ಪದ್ಯಗಳಾಗಿರಬೇಕು. ಹಿಂದಿನ ಪೀಳಿಗೆಯವರು ಮುಂದಿನವರೆಗೆ ಮಾರ್ಗದರ್ಶಿಗಳಾಗಿರಬೇಕು. ಹಿಂದಿನವರು ಹಾಡಿದ್ದನ್ನು ಮುಂದಿನವರು ಹಾಡಬೇಕು. ಇದಕ್ಕಿಂತ ಹೆಚ್ಚಿನ ಪ್ರಮಾಣಗಳು ಏನೇ ಇದ್ದರೂ ಅದನ್ನು ಪ್ರತ್ಯಕ್ಷಿಸಲು ಸಾಧ್ಯವಿಲ್ಲ ಎಂಬುದು ಕೇಶವದಾಸರ ನಿಲುವಾಗಿತ್ತು.

ಹರಿಕಥಾ ವಿದ್ವಾಂಸರಿಗೆ ಹಾಗೂ ಕೀರ್ತನಕಾರರಿಗೆ ತಿಳಿವಳಿಕೆ ನೀಡುವ ಬಗ್ಗೆ ಕೇಶವದಾಸರ ಅಭಿಪ್ರಾಯ ಹೀಗಿದೆ:

“ಅರ್ಥಶಾಸ್ತ್ರ ವಿಶಾರದನಾದ ಚಾಣಕ್ಯನು ಅರಸನಾದ ಚಂದ್ರಗುಪ್ತನ ರಾಜ್ಯವನ್ನು ವಿಸ್ತರಿಸಲು ಸಹಾಯಕರಾದ ಒಂದು ಕೀರ್ತನಕಾರರ ತಂಡವನ್ನು ಬೆಂಬಲವಾಗಿಟ್ಟುಕೊಂಡಿದ್ದನಂತೆ! ಆ ಕೀರ್ತನಕಾರರು ಪರ ರಾಜ್ಯದ ರಾಷ್ಟ್ರಗಳಲ್ಲಿ ಸಂಚರಿಸಿ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯಗಳಿಂದ ಜನಾದರಣೆ ಪಡೆದು, ಆಯಾ ರಾಜರ ಆಸ್ಥಾನಗಳಲ್ಲಿ ಸನ್ಮಾನಿತರಾಗಿ ಅವರ ಬಲಾಬಲಗಳನ್ನು ತಮ್ಮ ತಮ್ಮ ಅರಸರಿಗೆ ತಿಳಿಸುತ್ತಿದ್ದರಂತೆ! ಹೀಗೆ ಕೇವಲ ಧರ್ಮೋಪದೇಶಕರಾಗಿದ್ದ ಭಾಗವತ ಧರ್ಮಾವಲಂಬಿಗಳು ರಾಜಕಾರ್ಯದಲ್ಲೂ ಭಾಗ ತೆಗೆದುಕೊಳ್ಳುವ ಅವಶ್ಯಕತೆಯು ಕಾಲಗತಿಯಿಂದುಂಟಾಯಿತೆಂದು ತಿಳಿಸುತ್ತಾ, ರಾಜರ ಈ ಆಮಿಷಗಳಿಂದ ಕೀರ್ತನಕಾರರು ವಂದಿಮಾಗಧರಾಗಿ ಶುದ್ಧವಾದ ಭಾಗವತ ಧರ್ಮ ಅವಲಂಬಿಸದೆ ತಮ್ಮ ನಿಜ ಸ್ವರೂಪ ಕಳೆದುಕೊಂಡು ಈ ಕಲೆಯನ್ನು ಕಲುಷಿತಗಳಿಸಿದರು ಎಂದು ಅಭಿಪ್ರಾಯಪಡುತ್ತಾರೆ. ಕಾಲಕ್ರಮೇಣ ಈ ಮಾತುಗಳು ಎಷ್ಟು ನಿಜ ಎಂಬುದನ್ನು ನಾವು ಮನಗಾಣಬಹುದಾಗಿದೆ.

ಕನ್ನಡದ ಹರಿದಾಸರುಗಳು ಶ್ರೇಷ್ಠರು ಎಂಬ ಹೆಗ್ಗಳಿಕೆ ದಾಸರದು. ಸತ್ಪುರುಷರು ಯವ ರಾಜ್ಯದವರಾಗಿದ್ದರೂ, ಯಾವುದೇ ಭಾಷೆಯವರಾಗಿದ್ದರೂ, ಅವರೆಲ್ಲರಿಗೂ ಕರ್ನಾಟಕದಲ್ಲಿ ಮನ್ನಣೆಗೆ ಕೊರತೆಯಿಲ್ಲ. ಹಾಗೆಯೆ ಕರ್ನಾಟಕದವರಿಗೆ ಬೇರೆ ರಾಜ್ಯಗಳಲ್ಲಿ ಮನ್ನಣೆ ಏಕಿಲ್ಲ ಎಂಬುದು ಅವರ ಸಾಮಾಜಿಕ ಕಳಕಳಿಯಾಗಿತ್ತು. ದೇಶವಿಸ್ತಾರ ಪ್ರಜಾಸಂಖ್ಯೆಗಳ ಮಾನದಿಂದ ನೋಡಿದರೆ ಇತರ ಭಾಷಾ ಪ್ರಾಂತ್ಯಗಳಿಗಿಂತ ಕರ್ಣಾಟಕದಲ್ಲಿ ದಶಾಂಶ ಅಧಿಕ ಸತ್ಪುರುಷರ ಅವತಾರವಾಗಿದೆ. ಆದರೆ ಕನ್ನಡಿಗರಿಗಿನ್ನೂ ಕಣ್ದೆರೆಯುವ ಕಾಲ ಬರಲಿಲ್ಲವಲ್ಲ ಎಂಬ ಕೊರಗು ಅವರನ್ನು ೧೯೩೨ರಲ್ಲೆ ಕಾಡಿತ್ತು. ಈ ಪ್ರಶ್ನೆ ಇನ್ನೂ ನಮ್ಮನ್ನು ಕಾಡುತ್ತಲೇ ಇದೆ. ದಾಸರು ಮುಂದುವರಿಯುತ್ತಾ ಕರ್ನಾಟಕದಲ್ಲಿ ಶಿವಶರಣರು ಹರಿಶರಣರು ಎಂಭ ಎರಡು ವಿಭಾಗ ಮಾಡಿ ದೊಡ್ಡ ದೊಡ್ಡ ವಹಿಗಳನ್ನು ವಾಚಕರ ಮುಂದೆ ಬರೆದಿಡಲು ಅವಕಾಶವಿದೆ. ಮಹಾರಾಷ್ಟ್ರರು ತಮ್ಮಲ್ಲವತರಿಸಿದ ರಾಮದಾಸ್‌, ತುಕಾರಾಮ್‌, ನಾಮದೇವ, ಮೋರೋಪಂತ, ವಾಮನಪಂಡಿತ ಮೊದಲಾದವರ ದಿವ್ಯ ಗ್ರಂಥಗಳನ್ನು ಶೇಖರಿಸಿದರು. ಚಿತ್ರ ವಿಚಿತ್ರವಾಗಿ ತಮ್ಮ ಜನರಲ್ಲಿ ಪ್ರಚಾರ ಮಾಡಿದರು. ಆದರೆ ನಮ್ಮ ಕರ್ನಾಟಕದಲ್ಲಿ ಅಂಥ ವ್ಯವಸ್ಥಿತ ಪ್ರಯತ್ನ ನಡೆದಿಲ್ಲ. ಪ್ರಯತ್ನ ಮಾಡುವವರಿಗೆ ಸಮಾಜದಲ್ಲಿ ಉತ್ತೇಜನವಿಲ್ಲ. ಸತ್ಪುರುಷರ ಹೆಸರೆತ್ತಿದರೆ ಇಲ್ಲಿ ಸಹ ಜಾತಿಮತಗಳು ಸಂಕುಚಿತ ಭಾವನೆಗಳು ಜನರಲ್ಲಿ ತಲೆಯೆತ್ತುವ ಸ್ಥಿತಿ ಬಗ್ಗೆ ಅವರು ಆಗಲೆ ತಿಳಿಸಿದ್ದರೆಂದರೆ ಕೇಶವದಾಸರು ಬರಿಯ ಕೀರ್ತನಕಾರರಾಗಿರಲಿಲ್ಲ, ಸಮಾಜದ ಅಂಕು ಡೊಂಕುಗಳನ್ನು ಬಹಿರಂಗವಾಗಿ ಸಮಾಜಕ್ಕೆ ತಿಳಿಸುವ ಓರ್ವ ಕ್ರಾಂತಿಪುರುಷರಾಗಿದ್ದರು.

ಕೇಶವದಾಸರು ಮುಂದೆ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಪಾಲುಗೊಂಡ ಸ್ವಾತಂತ್ಯ್ರ ಯೋಧರೂ  ಆಗಿದ್ದರು. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಅಸಹಕಾರಕ ಚಳುವಳಿಗಳನ್ನು ಕೀರ್ತನದ ಮೂಲಕ ಸಂಘಟಿಸಿ, ಪ್ರಚಾರ ಮಾಡಿದರು. ಶ್ರೀಯುತರ ಆಹ್ವಾನದ ಮೇರೆಗೆ ಮಹಾತ್ಮಾ ಗಾಂಧೀಜಿಯವರು ೧೯೨೭ರಲ್ಲಿ ಬೇಲೂರಿಗೆ ಭೇಟಿ ನೀಡಿದ್ದರು ಎಂಬುದು ಇತಿಹಾಸ ಪ್ರಸಿದ್ಧ.

ಕೀರ್ತನಕಾರರಷ್ಟೇ ಅಲ್ಲದೆ ಉತ್ಕೃಷ್ಟ ಗ್ರಂಥಕಾರರಾಗಿ ಬೇಲೂರು ಕೇಶವದಾಸರು ಕರ್ನಾಟಕ ಭಕ್ತ ವಿಜಯವೇ ಅಲ್ಲದೆ ಶ್ರೀರಾಘವೇಂದ್ರವಿಜಯ, ಶ್ರೀ ಕನ್ಯಕಾಪರಮೇಶ್ವರೀ ಪುರಾಣ, ಹರಿದಾಸ ಸಾಹಿತ್ಯ ವಿಮರ್ಶೆ, ಶ್ರೀ ರಾಮಕೃಷ್ಣವಚನಾಮೃತ ಮುಂತಾದ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೪೮ರಲ್ಲಿ ಆಶ್ವಯುಜ ಬಹುಳ ತ್ರಯೋದಶಿಯಂದು ಇಹಲೋಕದ ವ್ಯಾಪಾರ ಮುಗಿಸಿ ಕೀರ್ತಿಶೇಷರಾದರು.

ಶ್ರೀಯುತರ ಕೃತಿ ಹಾಗೂ ಕೀರ್ತನ ಕೈಂಕರ್ಯಗಳಲ್ಲಿ ಮಾನವತಾ ಕಳಕಳಿಯಿಂದ ಕೂಡಿದ ಭಾಗವತ ಧರ್ಮದ ಲೌಕಿಕಕ ಮೌಲ್ಯಗಳನ್ನೂ ಸಮಾಜೋದ್ಧಾರದ ಆಶಯವನ್ನೂ ಸತತವಾಗಿ ಕಾಣಬಹುದಾಗಿದೆ.

ಪುಸ್ತಕವಾಗಲಿ, ಕಲೆಯಾಗಲಿ ಸಮಾಜವನ್ನು ತಿದ್ದುವ ಆವೇಶ ಹುಟ್ಟಿಸುವಂತರಬೇಕು ಎಂಬ ಅವರ ಅಮರವಾಣಿ ಇಂದಿನ ದಿನಕ್ಕೆ ಎಷ್ಟು ಪ್ರಸ್ತುತವಾಗಿದೆ! ಸಮಾಜದ ಅನೀತಿಯನ್ನು ಭೂತಗನ್ನಡಿಯಲ್ಲಿ ಹುಡುಕಿ ಸುಧಾರಣೆಗೆ ಅನುವು ಮಾಡಿಕೊಡುವವನೇ ನಿಜವಾದ ಪ್ರಜೆ ಎಂಬ ವಾಣಿ ಒಬ್ಬ ಕೀರ್ತನಕಾರನ ಧ್ಯೇಯವಾಗಿದ್ದರೆ ಆತನ ಸಮಾಜ ಕಳಕಳಿ ಮೆಚ್ಚಬೇಕಾದದ್ದೆ ಅಲ್ಲವೆ?

­­­­­­­­­ಆಕರ:ಶ್ರೀ ಕರ್ನಾಟಕಭಕ್ತವಿಜಯ