ಜನನ : ೨೨-೪-೧೯೪೯ ರಂದು ಬೇಳೂರಿನಲ್ಲಿ

ಮನೆತನ : ವೈದಿಕ ಸಂಪ್ರದಾಯದ ಮನೆತನ. ತಂದೆ ಅನಂತನಾರಾಯಣಯ್ಯ. ತಾಯಿ ಸೀತಾಲಕ್ಷ್ಮಮ್ಮ. ಪತಿ ಜಿ. ಆರ್. ರಾಮಚಂದ್ರನ್, ಸಂಗೀತ ವಿದುಷಿ ಜಿ. ಆರ್. ಜಯ ಅತ್ತಿಗೆ

ಶಿಕ್ಷಣ : ಬೇಲೂರಿನ ಉಪಾಧ್ಯಾಯ ಕೃಷ್ಣಮೂರ್ತಿಯವರಲ್ಲಿ ಕಥಾ ಕೀರ್ತನದಲ್ಲಿ ಶಿಕ್ಷಣ.

ಕ್ಷೇತ್ರ ಸಾಧನೆ: ೧೯೬೯ ರಲ್ಲಿ ಬೇಲೂರಿನ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ’ಸ್ಯಮಂತಕೋಪಾಖ್ಯಾನ’ ಪ್ರಸಂಗದೊಂದಿಗೆ ಕೀರ್ತನ ರಂಗಪ್ರವೇಶ. ಅನಂತರ ಬೆಂಗಳೂರಿನ ಕಾರ್ಯಕ್ರಮ ನಡೆದು ಅಪಾರ ಪ್ರಶಂಸೆಗೆ ಪಾತ್ರವಾಯಿತು. ಮುಂದೆ ತಮಿಳುನಾಡಿನ ಆಹ್ವಾನದ ಮೇರೆಗೆ ಶ್ರೀರಂಗ, ತಿರುಚಿರಪಳ್ಳಿ, ಸೇಲಂ, ಈರೋಡ್ ಮುಂತಾದೆಡೆಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿರುತ್ತಾರೆ. ಆಂಧ್ರ – ಕೇರಳದಲ್ಲೂ ಪ್ರವಾಸ ಮಾಡಿರುತ್ತಾರೆ. ಇವರ ಕಂಠಶ್ರೀಗೆ ಹಾಗೂ ನಿರರ್ಗಳ ನಿರೂಪಣೆಗೆ ಮರುಹೋದ ಬಿ.ಬಿ.ಸಿ. ಇವರ ’ಸೀತಾಕಲ್ಯಾಣ’ದ ಕಥಾ ಪ್ರಸಂಗವನ್ನು ಮೈಸೂರಿನ ಪ್ರಸಿದ್ಧ ವೆಂಕಟರಮಣ ದೇವಾಲಯದಲ್ಲಿ ಚಿತ್ರಿಸಿಕೊಂಡು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಿತು. ಇದು ವಸಂತಲಕ್ಷ್ಮಿ ಅವರ ಸಾಧನೆಯ ಮೈಲಿಗಲ್ಲು ಕಳೆದ ೩೫ ವರ್ಷಗಳಿಂದಲೂ ಕಥಾ ಕೀರ್ತನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿದಿದ್ದಾರೆ. ಆಕಾಶವಾಣಿ-ದೂರದರ್ಶನ ಕಲಾವಿದೆ.

ಪ್ರಶಸ್ತಿ – ಪುರಸ್ಕಾರಗಳು : ಜಗದ್ಗುರು ಶಿವರಾತ್ರಿ ರಾಜೇಂದ್ರ ಸ್ವಾಮಿಗಳಿಂದ ’ಕೀರ್ತನ ಚತುರೆ’, ಆದಿ ಚುಂಚನಗಿರಿ ಶ್ರೀಗಳವರಿಂದ ’ಕೀರ್ತನ ಶಾರದೆ’, ನ್ಯಾಮತಿಯ ಗುರು ಕೃಪಾ ಸಂಸ್ಥೆಯಿಂದ ’ಕೀರ್ತನ ಸುಧಾಮಣಿ’ ಬೆಂಗಳೂರು ಚಾಮರಾಜಪೇಟೆ ಶ್ರೀರಾಮ ಮಂದಿರದ ವತಿಯಿಂದ ’ಕೀರ್ತನ ರತ್ನ’, ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ’ಕೀರ್ತನ ಸರಸ್ವತಿ’, ಅಖಿಲ ಕರ್ನಾಟಕ ಕೀರ್ತನಕಾರರ ೩ನೇ ಸಮ್ಮೇಳನದಲ್ಲಿ (ಮುಳಬಾಗಿಲು) ’ಕೀರ್ತನ ಕಲಾ ತಿಲಕ’, ಚಿಕ್ಕನಾಯಕನಹಳ್ಳಿ ರಸಿಕ ವೃಂದದಿಂದ ’ಕೀರ್ತನ ಕೋಗಿಲೆ’, ಕರ್ನಾಟಕ ಗಾನ ಕಲಾ ಪರಿಷತ್ತಿನ ೩೬ನೇ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ಸನ್ಮಾನ, ದಿ. ಕೆ. ಹನುಮಂತಯ್ಯನವರಿಂದ ಪ್ರಶಂಸಾ ಪತ್ರ ಹೀಗೆ ಹತ್ತು-ಹಲವು ಬಿರುದು ಖಿಲ್ಲತ್ತು. ಸನ್ಮಾನಗಳನ್ನು ಪಡೆದಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೫-೦೬ ರ ಸಾಲಿನ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ.