ರಂಗಭೂಮಿ ಮತ್ತು ಪರಿಕಲ್ಪನೆ

‘ರಂಗಭೂಮಿ’ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸಿ ವೈಭವವನ್ನು ಕಂಡುಂಡಿದೆ. ತನ್ನ ಮಾರ್ಗದಲ್ಲಿ ಏರಿಳಿತಗಳನ್ನು ಅನುಭವಿಸಿದೆ. ಹೀಗಾಗಿ ರಂಗಭೂಮಿಗೆ ಒಂದು ಇತಿಹಾಸ ಪರಂಪರೆ ಬೆಳೆದು ಬಂದಿದೆ. ವಿಶ್ವರಂಗಭೂಮಿ ಭಾರತೀಯ ರಂಗಭೂಮಿ ಹಾಗೂ ಕನ್ನಡ ರಂಗಭೂಮಿಯನ್ನು ಅವಲೋಕಿಸಿದಾಗ ಅವೆಲ್ಲ ರಂಗಭೂಮಿಗೆ ಒಂದು ಹಿನ್ನೆಲೆ ಇದೆ. ಸಾವಿರಾರು ವರ್ಷದ ಗತವೈಭವವಿದೆ. ಕನ್ನಡ ರಂಗಭೂಮಿಯನ್ನು ಪ್ರಮುಖವಾಗಿಟ್ಟುಕೊಂಡು ಸಿಂಹಾವಲೋಕನ ಮಾಡಿಕೊಂಡಾಗ ಈ ರಂಗಭೂಮಿಗೆ ತನ್ನದೇ ಆದ ಪ್ರಖರತೆ ಪ್ರಜ್ವಲಿಸುತ್ತದೆ.

ಇಂದು ರಂಗಭೂಮಿ ಸಂಕೀರ್ಣ ಸ್ವರೂಪದಲ್ಲಿದೆ. ಹಲವು ಕಲೆಗಳು ಕೂಡಿ ಕಟ್ಟುವ ಮೇಳ ಕಲೆ, ಸಾಹಿತ್ಯ, ಸಂಗೀತ, ಚಿತ್ರ, ನೃತ್ಯ, ಮೊದಲಾದ ಕಲಾವಿದರು ರಂಗ ಸಜ್ಜಿಕೆ, ವೇಷಭೂಷಣ, ಬಣ್ಣ – ಬೆಳಕು ಮೊದಲಾದ ರಂಗ ಪರಿಕರಗಳು ಇವೆಲ್ಲವುಗಳ ಸಾಮರಸ್ಯದಲ್ಲಿ ರಂಗಭೂಮಿ ಅವತರಿಸುತ್ತದೆ.

‘ನಾಟಕ’ ಎಂಬ ಪದವೇ ‘ನತ್’ ಎಂಬ ಧಾತುವಿನಿಂದ ಬಂದುದು. ‘ನತ್’ ಎಂಬುದು ನೃತ್, ನೃತ್ತ, ಎಂದೂ ಆಗುತ್ತದೆ. ‘ನೃತ್’ ಎಂದರೆ ‘ಕುಣಿತ’, ಕುಣಿತವೇ ನಾಟಕ ಕಲೆಯ ಉಗಮಕ್ಕೆ ಪ್ರೇರಣೆ.

“ಜಗತ್ತಿನಲ್ಲಿ ಗ್ರೀಕ್ ನಾಟಕವೇ ಪ್ರಾಚೀನವೆಂದು ಹೇಳಲಾಗುತ್ತದೆ. ಫಲ ಕೊಡುವ ಡಯೋನಿಸಸ್ ದೇವತೆಯ ಉತ್ಸವದಲ್ಲಿ ಜನ ಆವೇಶಭರಿತರಾಗಿ ಕುಣಿಯುತ್ತಿದ್ದರು. ಮೇಳ ಗೀತೆಗಳನ್ನು ಹಾಡುತ್ತಿದ್ದರು. ಮೇಳದ ನಾಯಕ ಸಮೂಹದ ಮಧ್ಯ ನಿಂತು ಮಾತನಾಡುತ್ತಿದ್ದ ಈ ಆಚರಣೆ ಮುಂದೆ ಗ್ರೀಕ್ ರಂಗಮಂದಿರಕ್ಕೆ ನಾಂದಿಯಾಯಿತು. ಕಥೆ, ಸಂಭಾಷಣೆ, ಪಾತ್ರ, ಹಾಡು – ಕುಣಿತ ಒಳಗೊಂಡ ಗ್ರೀಕ್ ನಾಟಕವು ಕ್ರಿ.ಶ.ಪೂ. ೫ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತೆಂದು ರಂಗಭೂಮಿ ಇತಿಹಾಸ ವಿವರಿಸುತ್ತದೆ. ಪ್ರಸಿದ್ಧ ತತ್ವಜ್ಞಾನಿ ಪ್ಲೇಟೋನ ಶಿಷ್ಯ ಅರಿಸ್ಟಾಟಲ್ ಬರೆದಿರುವ ಕಾವ್ಯ ಮಿಮಾಂಸೆ(Poetics) ಗ್ರಂಥವೇ ನಾಟಕ ವಿಮರ್ಶೆ ಸಾಹಿತ್ಯ ವಿಮರ್ಶೆಗೆ ಅಡಿಪಾಯ ಹಾಕಿತು.

ಈ ಗ್ರಂಥವು ಕಳೆದ ಎರಡು ಸಾವಿರ ವರ್ಷಗಳಿಂದ ಗ್ರೀಕ್ ನಾಟಕ ಪರಂಪರೆಯನ್ನು ಜೀವಂತವಾಗಿಬಿಟ್ಟಿದೆ.

ಭಾರತೀಯ ರಂಗಭೂಮಿ ಕೂಡಾ ಅತ್ಯಂತ ಪ್ರಾಚೀನವಾದುದು ಭರತಮುನಿಯ ನಾಟ್ಯಶಾಸ್ತ್ರವು ಇಲ್ಲಿ ಅಪರೂಪದ ಗ್ರಂಥವಾಗಿದೆ. ನಾಟ್ಯಶಾಸ್ತ್ರದ ಪ್ರಕಾರ “ನಾಟಕವು ಅಭಿನಯದ ಮೂಲಕವೇ ಅಭಿವ್ಯಕ್ತಿಗೊಳ್ಳುವ ಕಲೆ”.

೧. ಆಂಗಿಕ ಅಭಿನಯ (ಅಂಗಗಳ ಚಲನವಲನ)

೨. ವಾಚಕ ಅಭಿನಯ (ಮಾತುಗಾರಿಕೆ)

೩. ಸಾತ್ವಿಕ ಅಭಿನಯ (ಭಾವಾಭಿನಯ)

೪. ಆಹಾರ್ಯ ಅಭಿನಯ (ಬಣ್ಣ, ವೇಷ, ರಂಗಸಜ್ಜಿಕೆ)

ನಾಟಕದಲ್ಲಿ ಬರಲಾರದ ವಿಷಯವಿಲ್ಲ, ವಿದ್ಯೆಯಿಲ್ಲ, ಕಲೆಯಿಲ್ಲ, ಯೋಗವಿಲ್ಲ, ಕರ್ಮವಿಲ್ಲ ಎಂದು ನಾಟಕ ಕಲೆಯ ವ್ಯಾಪ್ತಿಯನ್ನು ನಾಟ್ಯಶಾಸ್ತ್ರ ವಿವರಿಸುತ್ತದೆ. ಕಾಳಿದಾಸನ “ಮಾಳವಿಕಾಗ್ನಿಮಿತ್ರ” ನಾಟಕದಲ್ಲಿ ‘ನಾಟ್ಯಂ ಭಿನ್ನರುಚೋಜನ ನಸ್ಯ ಬಹುದಾಷ್ಯೇಕಂ’ ಸಮಾರಾಧನಂ ಎಂದು ಹೇಳಿದ್ದಾನೆ. ಇದರ ಅರ್ಥ ಭಿನ್ನ ಭಿನ್ನ ಸ್ವಭಾವ, ಅಭಿರುಚಿಗಳಿರುವ ಜನರಿಗೆ ಯಾವ ಕಲೆಯು ಕೊಡದಿರುವ ಸಂತೋಷ ನಾಟಕ ಕೊಡುತ್ತದೆ. ನಾಟಕಕ್ಕೆ ‘ರಂಗಭೂಮಿ’ ಎಂಬ ಹೆಸರೂ ಇದೆ.

ರಂಗ > ರಂಜನೆ ಭೂಮಿ > ಸ್ಥಳ
ರಂಗಭೂಮಿ > ರಂಜಿಸುವ ಸ್ಥಳ

ರಂಜಿಸುವುದಷ್ಟೇ ಅಲ್ಲ, ಲೋಕ ವ್ಯವಹಾರಕ್ಕೆ ತಕ್ಕಂತೆ ಜ್ಞಾನವನ್ನು ಒದಗಿಸುವುದು ರಂಗ ಭೂಮಿಯ ಉದ್ದೇಶ. ಸಮಾಜದ ಸುಖ ಸಂತೋಷ ಯೋಗಕ್ಷೇಮವನ್ನು ಕಾಯ್ದುಕೊಳ್ಳುವುದು ಇದರ ಮುಖ್ಯ ಉದ್ದೇಶ. “ಹೆನ್ರಿ ಅರ‍್ವಿಂಗ್ ಹೇಳುವಂತೆ” ಒಂದು ಪುಸ್ತಕ ಮಾಡುವುದಕ್ಕಿಂತ ನೂರು ಪಾಲು ಹೆಚ್ಚಿನ ಸಾಧನೆಯನ್ನು ನಾಟಕ ಮಾಡಬಲ್ಲುದಾಗಿದೆ. ವಿಚಾರವಂತನಿಗೆ ಬದುಕಿನ ರಹಸ್ಯವನ್ನು ಸಾಮಾನ್ಯನಿಗೆ ಜೀವನ ತತ್ವವನ್ನು, ಕಲಾವಿದನಿಗೆ ಕಲ್ಪನಾ ಸೃಷ್ಟಿಯ ವೈಭವವನ್ನು, ತಾಮಸಿನಗೆ ಭಾಷೆಯ ಬೆಳಕು ಬೆಡಗುಗಳನ್ನು, ರಸಿಕನಿಗೆ ಬಾಳಿನ ವಿನೋದವನ್ನು ಅದು ಉಣಿಸುತ್ತದೆ.”[1]

ಪ್ರಾಚೀನ ರಂಗಭೂಮಿ

ಪ್ರಾಚೀನ ರಂಗ ವೈಭವವನ್ನು ಅವಲೋಕಿಸಿದಾಗ ಇಲ್ಲಿ ಜಾನಪದ ಮತ್ತು ಶಿಷ್ಟವೆಂದು ವಿಭಾಗಿಸುವುದುಂಟು. ಜಾನಪದ ರಂಗಭೂಮಿಯ ಹರವು ವಿಸ್ತಾರ ವಿಫುಲವಾಗಿ ಕಂಡು ಬರುತ್ತದೆ. ಕರಾವಳಿ ಪ್ರದೇಶದಲ್ಲಿ ಯಕ್ಷಗಾನ, ಬಯಲು ಸೀಮೆಯಲ್ಲಿ ದೊಡ್ಡಾಟ, ಸಣ್ಣಾಟ, ರಾಧಾನಾಟ, ಶ್ರೀಕೃಷ್ಣ ಪಾರಿಜಾತ ಮುಂತಾದವುಗಳನ್ನು ಹೆಸರಿಸಬಹುದು. ಇದು ಜನ ಸಾಮಾನ್ಯರಿಗಾಗಿ ರಾತ್ರಿಯಿಡಿ ಮನರಂಜನೆ ನೀಡುವ ಪ್ರಮುಖ ಉದ್ದೇಶವನ್ನು ನಾವಿಲ್ಲಿ ಕಾಣುತ್ತೇವೆ.

ಶಿಷ್ಟ ಸಂಪ್ರದಾಯವು ರಾಜಾಶ್ರಯ ಹೊಂದಿದ ‘ನಟವರ್’ಗಳಿಂದ ಕಂಡು ಬರುತ್ತಿದ್ದು, ರಾಜರನ್ನು, ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಅವರು ಕುಣಿದು ಕುಪ್ಪಳಿಸುತ್ತಿದ್ದರು. ಚಾಲಿಕ್ಯರ ಕಾಲದಲ್ಲಿಯ ನಟ – ಅಚಲನ್‌ನ ಉಲ್ಲೇಖವನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಪುರಾಣದಂತ ಕೆಲವು ಪ್ರಸಂಗಗಳು ದೈವೀ ಆರಾಧನೆಯ ಜೊತೆಗೆ ಹಲವು ಪಗರಣಗಳನ್ನು ಸೃಷ್ಟಿಸಿ ಜಾನಪದ ರಂಗಭೂಮಿಯ ಅಡಿಪಾಯಕ್ಕೆ ತಳಹದಿ ಹಾಕಿರುವುದು ವಿಶಿಷ್ಟ ಸಂಗತಿ. ಈ ಎಲ್ಲ ಕಲಾ ಕುಟುಂಬದವರು ಕಲೆಯನ್ನೇ ತಮ್ಮ ಬದುಕಾಗಿಸಿಕೊಂಡು ಜೀವನ ಸಾಗಿಸಿರುವುದು. ಅವರ ಉಪಜೀವನಕ್ಕಾಗಿ, ಜಮೀನುಗಳನ್ನು “ಉಂಬಳಿ”ಯಾಗಿ ನೀಡಿರುವುದು ಹಲವು ಉಲ್ಲೇಖಗಳಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ.

“ಬುದ್ಧಿ ಶಕ್ತಿ ಮತ್ತು ಕಲ್ಪನಾ ಶಕ್ತಿ ಬೆಳೆ ಬೆಳೆಯುವಂತೆ, ಕಾಲ ಕಾಲಕ್ಕೆ ರಂಗಭೂಮಿಯು ಬೆಳೆಯುವುದು. ಆ ಶಕ್ತಿಗಳ ಸೃಷ್ಟಿ ಬದಲಾಯಿಸಿದಂತೆ ರಂಗಭೂಮಿಯು ಬದಲಾಯಿಸುವುದು. ಆದರೆ ಎಷ್ಟು ಬೆಳೆದರೂ ಹೇಗೆ ಬದಲಾಯಿಸಿದರೂ ಅನುಕರಣ ಮತ್ತು ರಂಜನಗಳು ಬೇರಿನಂತೆ ಭದ್ರವಾಗಿಯೇ ಉಳಿಯುವವು ಮತ್ತು ಬೇರಿನಂತೆ ಗರ್ಭದಲ್ಲಿಯೇ ವ್ಯಾಪಿಸಬಹುದು. ಈ ವಿಚಾರಗಳ ಹಿನ್ನೆಲೆಯಲ್ಲಿ ನೋಡುವಾಗ ರಂಗಭೂಮಿಯು ಕಲಾ ಸೃಷ್ಟಿಯಾಗಿ ಅಸ್ತಿತ್ವದಲ್ಲಿ ಬಂದುದು, ಮೊದಲು ಯಾವಾಗ ಎಂದು ಹೇಳುವಂತೆ ಸುಲಭವಲ್ಲ”.[2]

“ನೃತ್ಯ, ನಾಟಕ, ಸಂಗೀತ, ಈ ಮೂರು ಅವಿಭಾಜ್ಯವಾಗಿ ಸೇರಿಕೊಂಡಿರುವುದು ನಮ್ಮ ಪ್ರಾಚೀನ ರಂಗಭೂಮಿ ಸ್ವರೂಪ ಮತ್ತು ವೈಶಿಷ್ಠ್ಯವೆಂಬುದೇ ಈ ಸಿದ್ಧಾಂತ”.[3]

“ರಂಗಭೂಮಿಯ ಬಗ್ಗೆ ಪರಪಂಪರೆಯನ್ನು ಕಾಯ್ದುಕೊಂಡು ಬಂದ ಗ್ರಂಥವೆಂದರೆ ಭರತಮುನಿಯ ನಾಟ್ಯಶಾಸ್ತ್ರ. ಅಲ್ಲಿ ನಾಟ್ಯವು ನಾಲ್ಕು ವೇದಗಳಿಂದ ಒಂದೊಂದು ಅಂಶವನ್ನು ಆಯ್ದುಕೊಂಡು ಬ್ರಹ್ಮನು ನಾಟಕವನ್ನು ರಚಿಸಿದನು ಎಂದು ಹೇಳಿದ್ದರಿಂದಾಗಲಿ, ಋಗ್ವೇದದಲ್ಲಿಯೋ ಸುರಾಮತ್ತನಾದ ಇಂದ್ರನನ್ನು ಋಷಿಯೊಬ್ಬನು ಮಾತು, ಕೃತಿಗಳಿಂದ ಅನುಕರಿಸಿದ, ದೃಷ್ಟಾಂತ, ಇವುಗಳಿಂದಾಗಲಿ ನಮ್ಮ ರಂಗಭೂಮಿಯ ಧರ್ಮದ ಆಚರಣಕ್ಕೆ ಆನುಷಂಗಿಕ ಹುಟ್ಟಿದೆ ಎಂದು ಹೇಳಲಾಗದು. ಅದೇ ನಾಟ್ಯಶಾಸ್ತ್ರದಲ್ಲಿ ಸಂಸ್ಕ್ರತ ನಾಟ್ಯವು ಹೇಗೆ ಮತ್ತು ಏಕೆ ಹುಟ್ಟಿತು ಎಂಬುದನ್ನು ಮೊದಲ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಲಾಗಿದೆ”.[4]

ರಂಗಭೂಮಿಯಲ್ಲಿ ಜನಪದ ಮತ್ತು ಶಿಷ್ಟ್ಯ ಪ್ರಕಾರಗಳಾಗಿ ಕವಲೊಡೆದು ಜನಪದದಲ್ಲಿ ಕರಾವಳಿಯ ಯಕ್ಷಗಾನ ಮತ್ತು ಬಯಲುಸೀಮೆಯ ಬಯಲಾಟಗಳೆಂದು ಪ್ರಭೇದ ಪಡೆದು ಅಲ್ಲಿಯ ಪರಿಸರ – ಸ್ಥಿತಿಗತಿಗೆ ತಕ್ಕಂತೆ ಪ್ರಯೋಗಗೊಳ್ಳುತ್ತ ತಮ್ಮ ಪ್ರಭಾವವನ್ನು ಬೀರಿವೆ.

ಕನ್ನಡ ರಂಗಭೂಮಿಯ ಸಾಹಿತ್ಯದ ಪರಿಕಲ್ಪನೆಯಲ್ಲಿ ಸಿಂಗರಾರ್ಯನ “ಮಿತ್ರವಿಂದ ಗೋವಿಂದ” ನಾಟಕ ಪ್ರಥಮ ನಾಟಕವಾಗಿ ಕಂಡುಬಂದರೂ ಮುಂದೆ ರಂಗಭೂಮಿಯ ಸಾಹಿತ್ಯಕ್ಕೆ ಕಾರ್ಗತ್ತಲೆ ಬಂದು ಆವರಿಸಿದೆ. ಹಲವಾರು ಸಾಹಿತ್ಯಿಕ ಕೃತಿಗಳಲ್ಲಿ ನಾಟಕೀಯ ಅಂಶಗಳು ಕಂಡು ಬಂದಿರುವುದನ್ನು ಗಮನಿಸಬಹುದು. ಆದರೆ ಸ್ವತಂತ್ರ ನಾಟಕ ಕೃತಿಗಳು ಆ ಅವಧಿಯಲ್ಲಿ ಬೆಳಕು ಕಾಣದೇ ಇರುವುದು ವಿಷಾದದ ಸಂಗತಿ.

ಉತ್ತರ ಕರ್ನಾಟಕವನ್ನು ಪ್ರಮುಖವಾಗಿಟ್ಟುಕೊಂಡು ಗಮನಿಸಿದಾಗ ಇಲ್ಲಿಯ ರಂಗಭೂಮಿ ಜನಾಶ್ರಯವನ್ನು ಆಶ್ರಯಿಸಿತು. ಮರಾಠಿಗರ ಭಾಷೆಯ ವಿರುದ್ಧ ಧ್ವನಿ ಎತ್ತಿದ ಗದುಗಿನ ಸಕ್ಕರಿ ಬಾಳಾಚಾರ್ಯರು, ಶಾಂತಕವಿಗಳು ಸ್ವತಃ ಸ್ವತಂತ್ರ ನಾಟಕಗಳನ್ನು ರಚಿಸಿ ಸ್ನೇಹಿತರೊಡಗೂಡಿ ನಾಟಕಗಳನ್ನು ಪ್ರಯೋಗಿಸಿ ವೃತ್ತಿ ರಂಗಭೂಮಿಗೆ ಪಿತಾಮಹರೆನಿಸಿದರು. ಮೊದಲ ತಲೆಮಾರಿನ ನಾಟಕಕಾರರೇನ್ನುವ ಪ್ರೀತಿಗೆ ಪಾತ್ರರಾದರು. ಮುಂದೆ ವೃತ್ತಿ – ರಂಗಭೂಮಿಯ ಕಂಪನಿಗಳು ಒಂದೊಂದಾಗಿ ತಲೆಯೆತ್ತಿದವು. ಮೈಸೂರು ಭಾಗದಲ್ಲಿ ಅವುಗಳಿಗೆ ರಾಜಾಶ್ರಯವೂ ಸಿಕ್ಕಿತು. ಉತ್ತರ ಕರ್ನಾಟಕದ ಕೆಲವು ಕಂಪನಿಗಳು ರಾಜ್ಯ ಮತ್ತು ನೆರೆರಾಜ್ಯಗಳಲ್ಲಿಯೂ ನಾಟಕಗಳನ್ನು ಪ್ರಯೋಗಿಸಿ ಖ್ಯಾತಿ ಪಡೆದ ಹಿರಿಮೆ – ಗರಿಮೆ ಇದೆ.

ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು ಪ್ರಯೋಗಗೊಳ್ಳುವ ಸಂದರ್ಭದಲ್ಲಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಸಂಗೀತವೂ ಪ್ರಧಾನವಾಗಿ ರಂಗಭೂಮಿಯನ್ನು ಅಲಂಕಿರಿಸಿತು. ಪ್ರೇಕ್ಷಕರು ಹಾಡು – ಸಂಗೀತಗಳನ್ನು ಕೇಳಿ ಆನಂದಿಸಿ ಚಪ್ಪಾಳೆ ತಟ್ಟುತ್ತಿದ್ದರು. ಸ್ವರ ಮಾಧುರ್ಯದಿಂದ ತುಂಬಿ ತುಳುಕುವ ಗೀತಗಾಯನಕ್ಕೆ ತಲೆದೂಗದವರೇ ಇಲ್ಲ. ಕೆಲವು ಸಂದರ್ಭಗಳಲ್ಲಿ ನಾಟಕಗಳ ಪ್ರಯೋಗವೋ? ಅಥವಾ ಸಂಗೀತ ಕಛೇರಿಯೋ? ಎನ್ನುವಷ್ಟರ ಮಟ್ಟಿಗೆ ರಂಗಭೂಮಿ ಅಲಂಕೃತಗೊಳ್ಳುತ್ತಿತ್ತು. ಹೀಗೆ ಕಲಾವಿದರೆನ್ನುವವರಲ್ಲಿ ರಾಗ – ತಾಳ – ಲಯಗಳ ಪ್ರಜ್ಞೆ ಇರಬೇಕಾಗುತ್ತಿತ್ತು. ಸಾಕಷ್ಟು ದೈಹಿಕ ಸಂಪತ್ತಿನ ಜೊತೆಗೆ ಕಂಚಿನ ಕಂಠವನ್ನು ಹೊಂದಿರಬೇಕಿತ್ತು. ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತದ ಗಾಢವಾದ ಅನುಭವವಿರಬೇಕಿತ್ತು ಅಂಥ ಮಹಾನ್ – ಮಹಾನ್ ಕಲಾವಿದರು ಸಂಗೀತಗಾರರು ಹಾಗೂ ನಾಟಕಕಾರರು ಎರಡನೇ ತಲೆಮಾರಿನವರಲ್ಲಿ ಕಂಡು ಬರುತ್ತಾರೆ. ಅಂಥ ಮಹತ್ವದ ಕಲಾವಿದರಲ್ಲಿ ಸಂಗೀತ ಸಾಮ್ರಾಟ್, ರಂಗಕೋಗಿಲೆ ಬೇವೂರು ಬಾದಶಹರು ಒಬ್ಬರು.

ನವೋದಿತ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿರುವ “ಬೇವೂರ” ಒಂದು ಪುಟ್ಟಗ್ರಾಮ, ಸಂಗಮನಾರ್ಥ ಸನ್ನಿಧಿ ಸಮೀಪವಿರುವುದರಿಂದ ಸಾಹಿತ್ಯ ಸಂಗೀತದ ಜೊತೆಗೆ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನಿರಂತರವಾಗಿದೆ. ಶೈಕ್ಷಣಿಕ ಮತ್ತು ರಾಜಕೀಯವಾಗಿಯೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ.

“ಬೇವೂರು” ಗ್ರಾಮದ ಹೆಸರನ್ನೇ ತಮ್ಮ ಉಸಿರನ್ನಾಗಿಸಿಕೊಂಡ ಎರಡು ಮನೆತನಗಳಿವೆ. ಒಂದು ದೇಶಸೇವೆಗಾಗಿ ಮುಡಿಪಾದ ಬೇವೂರ ಮನೆತನ, ಇನ್ನೊಬ್ಬರು ರಂಗಭೂಮಿಯ ಕ್ಷೇತ್ರಕ್ಕಾಗಿ ಮೀಸಲಿಟ್ಟ ಬೇವೂರ ಬಾದಶಹ ಮಾಸ್ತರರ ಮನೆತನ. ಇವೆರಡು ಮನೆತನಗಳು ಬೇವೂರಿನ ಇತಿಹಾಸದಲ್ಲಿಯೇ ಗಟ್ಟಿಯಾಗಿ ನಿಲ್ಲುವ ಹೆಸರುಗಳಾಗಿವೆ.

“ತಿಳಿಯಾದ ಬಣ್ಣ, ತೀಡಿದ ಮೂಗು, ಕೋಲು ಮುಖ, ಎತ್ತರದ ನಿಲುವು, ತುಸು ಎತ್ತರದ ಕರಿ ಟೋಪಿ…. ಇದನ್ನು ದೂರದಿಂದ ನೋಡಿದರೆ ಬಾದಶಹ ಮಾಸ್ತರರು ಬಂದರೆಂದು ಗೊತ್ತಾಗಬೇಕು. ಸಂಗೀತ ಅವರ ಮನೆತನದ ಬಳುವಳಿ, ನಟನೆ ಸ್ವಂತ ಮುನ್ನಡೆಯ ಸಾಧನೆ, ರಂಗಭೂಮಿಯ ಮ್ಯಾಲೆ ಈ ನಟ ತನ್ನ ಅಭಿನಯ, ಸಂಗೀತ, ರೂಪದಿಂದ ಹೆಸರಿಗೆ ತಕ್ಕಂತೆ ಬಾದಶಹನಾಗಿಯೇ ತನ್ನ ಕಾಲದಲ್ಲಿ ಮೆರೆದ”.[5]

ಬೇವೂರ ಬಾದಶಹರ ಕುರಿತು ಸಾಕಷ್ಟು ಚಿಂತನೆಯಲ್ಲಿ ತೊಡಗಿಕೊಂಡಾಗ ಸಂಪೂರ್ಣವಾದ ಸ್ಪಷ್ಟವಾದ ಮಾಹಿತಿ ಲಭ್ಯವಾಗುವುದೇ ಇಲ್ಲ. ರಂಗಭೂಮಿಯ ಕ್ಷೇತ್ರದಲ್ಲಾಗಲಿ ಅಥವಾ ಸಂಗೀತ ಕ್ಷೇತ್ರದಲ್ಲಾಗಲಿ ಬೇವೂರ ಬಾದಶಹರ ಹೆಸರು ಮಿಂಚಿನಂತೆ ಮಿಂಚಿ ಮಾಯವಾಗುತ್ತದೆ. ಸಿಕ್ಕಿರುವ ಕೆಲವು ಮಾಹಿತಿಯನ್ನು ದಾಖಲಿಸಿ ಬೇವೂರ ಬಾದಶಹರ ಬಣ್ಣ ಬಣ್ಣದ ಬದುಕಿಗೆ ಬೆನ್ನು ಹತ್ತುವುದು. ಸಂಗೀತ ಸ್ವರದ ಗಂಧರ್ವಲೋಕದ ಸಾಧಕನ ಸಾಧನೆಯನ್ನು ಸೆರೆ ಹಿಡಿಯುವುದು ತುಂಬಾ ಕಷ್ಟದ ಕೆಲಸ. ಆದರೂ ಬೇವೂರ ಬಾದಶಹರ ಕುರಿತು ಅವರ ವ್ಯಕ್ತಿತ್ವ ಮತ್ತು ಸಾಧನೆಯ ಕುರಿತು ಚಿಂತನೆಯಲ್ಲಿ ತೊಡಗಿದಾಗ ಇದು ಒಂದು ಮಹತ್ವದ ಕೃತಿಯಾಗಿ ಹೊರಹೊಮ್ಮಬಹುದೆಂಬ ಆಶಯ ಚಿಗುರೊಡೆಯಿತು.

ಬಾದಶಹರ ಜನನ ಮತ್ತು ಮನೆತನ

ಖ್ಯಾತ ಕಲಾವಿದ ಬಾದಶಹರ ಜನನದ ಕುರಿತ ಜಾಡನ್ನು ಹುಡುಕುತ್ತ ಹೊರಟಾಗ ಬೇವೂರ ಕನ್ನಡ ಮಾದರಿ ಪ್ರಾಥಮಿಕ ಶಾಲಾ ದಾಖಲೆಯ ಪ್ರಕಾರ ನಂ – ೧ ರ ರಜಿಸ್ಟರದಲ್ಲಿ ಬಾದಶಹ ಪೀರಸಾಹೇಬ ಕಲಾದಗಿ ಮುಸಲ್ಮಾನ ಅಂತ ದಾಖಲಾತಿ ಇದೆ.
– ಜನ್ಮ ದಿನಾಂಕ : ೦೩.೦೬.೧೯೦೩.

ಶಾಲಾ ದಾಖಲಾತಿ ಸಂ. ೦೭.೦೭.೧೯೦೩ ಹಾಗೂ ಬಾದಶಹರ ತಂಗಿ ಜನ್ಮ ತ. ಬಿ.(ಹುಸೇನ ಬಿ.) ಪೀರಸಾಹೇಬ ಕಲಾದಗಿ ಅದೇ ಎಂ.ಪಿ.ಎಸ್. ಶಾಲಾ ದಾಖಲಾತಿಯಲ್ಲಿ ರಜಿಸ್ಟರ್ ನಂ. ೫ ರ ಪ್ರಕಾರ ಸಂ. ೧೩೩, ಇದೆ.
– ಜನ್ಮ ದಿನಾಂಕ : ೧೨.೦೧.೧೯೦೭

ಶಾಲೆಗೆ ದಾಖಲು : ೧೨.೦೯.೧೯೧೨. ಮುಂದೆ ೧೯೧೪ರಲ್ಲಿ ಕನ್ನಡ ಹೆಣ್ಣು ಮಕ್ಕಳ ಸರಕಾರಿ ಪ್ರಾಥಮಿಕ ಶಾಲೆ ಪ್ರತ್ಯೇಕವಾಗಿದೆ. ಬೇವೂರಿನ ಪ್ರಾಥಮಿಕ ಶಾಲೆಯ ದಾಖಲೆಯ ಪ್ರಕಾರ ಬಾದಶಹರ ಜನನ ಮತ್ತು ತಂದೆ ಹಾಗೂ ತಂಗಿಯ ಹೆಸರುಗಳು ದಾಖಲೆಗಳ ಮುಖಾಂತರ ಸ್ಟಷ್ಟವಾಯಿತು.

ಬಾದಶಹರ ತಂದೆ ಪೀರಸಾಬ ಕಲಾದಗಿ ತಾಯಿ ಚಾದಂಬಿ ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗುವಿತ್ತೆಂದು ತಿಳಿದು ಬರುತ್ತದೆ. ಅಂದರೆ ಬಾದಶಹರಿಗೆ ಒಬ್ಬ ತಂಗಿ ಹುಸೇನ ಬಿ (ಜನ್ನ ತಬಿ) ಇದ್ದಳು. ತಾಯಿಯ ತಮ್ಮನಾದ ಬೀಳಗಿ ಎಂಬ ಮನೆತನಕ್ಕೆ ಹುಸೇನಬಿ (ಜನ್ನ ತಬಿ) ಯನ್ನು ಕೊಟ್ಟು ಮದುವೆ ಮಾಡಿದರು. ಆಕೆಯ ಗಂಡ ದರ್ಜಿ ಕೆಲಸ ಮಾಡಿಕೊಂಡು ಬಾಗಲಕೋಟದ ವಲಧಬಾಯಿ ಚೌಕದ ಪಕ್ಕದಲ್ಲಿ ಅಂಗಡಿ ಮಾಡಿಕೊಂಡಿದ್ದನೆಂದು ಹಲವರಿಂದ ತಿಳಿದ ಸಂಗತಿ. ಹುಸೇನಬಿಯ ಮಗನೇ ಮೌಲಾಸಾಬ್ (ಬಾಬು) ಬೀಳಗಿ ಅಂದರೆ “ಬಾಬು ಪೇಂಟರ್ ಬೀಳಗಿ” ಎಂದೇ ಪ್ರಸಿದ್ಧಿ ಪಡೆದಿದ್ದನು. ಶಕ್ತಿ – ಟಾಕೀಜ್‌ದಲ್ಲಿ ಪೇಂಟಿಗ್ ಕೆಲಸ ಮಾಡುತ್ತಿದ್ದನು, ನಿಂತಲ್ಲಿ ಕುಳಿತಲ್ಲಿ ಚಿತ್ರ ಬಿಡಿಸುವುದು, ಎಂದೂ ಶಾಲೆಯ ಕಡೆಗೆ ಮುಖ ಮಾಡದ ಆತ ಹುಟ್ಟಾ ಪ್ರತಿಭಾವಂತ ಕಲಾಕಾರನಾಗಿದ್ದನೆಂದೂ ಆತನ ಕಲೆ ಅದ್ಭುತವಾಗಿತ್ತೆಂದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಬಾದಶಹರಿಗೆ ೪ ಜನ ಹೆಣ್ಣುಮಕ್ಕಳಿದ್ದರು. ಅವರಲ್ಲಿ ಲೀಲಾಬಾಯಿ, ಆನಂದಿಬಾಯಿ, ತಾರಾಬಾಯಿ – ಲಕ್ಷ್ಮೀಬಾಯಿ ಇವರು ಕೂಡಾ ಸಂಗೀತ, ನೃತ್ಯ, ಹಾಡುಗಳ ಮೂಲಕ ಜನಸಾಮಾನ್ಯರಾಗಿದ್ದು ತಮ್ಮದೇ ಆದ ಛಾಪನ್ನು ಮೂಡಿಸಿದವರು.

ತಾರಾಬಾಯಿ ರಂಗಭೂಮಿಯ ಸುಪ್ರಸಿದ್ಧ ಕಲಾವಿದೆಯಾಗಿ ಹೆಸರುಗಳಿಸಿದವಳು. ಅವಳು ಹಾಡಿದ ಹಲವಾರು ಸುಪ್ರಭಾತಗಳನ್ನು ಗುಲಬರ್ಗಾ ಆಕಾಶವಾಣಿ ಕೇಂದ್ರದಿಂದ ಆಗಾಗ ಪ್ರಸಾರಗೊಳ್ಲುತ್ತವೆ. “ತಾರಾಬಾಯಿಯವರು ಸಿದ್ಧರಾಮ ಜಂಬಲ ದಿನ್ನಿ ಅವರಂಥ ಮಹಾನ್ ಕಲಾವಿದರನ್ನು ಮದುವೆಯಾದ ಮೇಲೆ ಹಲವಾರು ವರ್ಷಗಳ ಕಾಲ ತಮ್ಮ ಬದುಕನ್ನು ರಾಯಚೂರಿನಲ್ಲಿ ಕಳೆದಿರುವುದು ಕಂಡು ಬರುತ್ತದೆ”.[6] ಎಂದು ಡಾ. ಬಿ. ಸಿ. ಹದ್ಲಿ ಅವರ ಅಭಿಪ್ರಾಯ.

ಲೀಲಾಬಾಯಿ ಆನಂದಿಬಾಯಿಯವರು ಮಹಾರಾಷ್ಟ್ರದ ಹೃದಯಭಾಗವಾದ ಮುಂಬಯಿಯಂಥ ಮಹಾನಗರದಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತ ತಮ್ಮ ಜೀವನದ ನೆಲೆಯನ್ನು ಕಂಡುಕೊಂಡರು. ಬಾದಶಹರು ಮಕ್ಕಳ ವಿಷಯದಲ್ಲಿ ನಾಟಕ ಸಂಗೀತ ಬೇಡ ಎಂದರು. ಆದರೆ ಕಲೆ ರಕ್ತಗತವಾಗಿದ್ದರಿಂದ ಅವರು ಕಲಾವಿದರಾದರು ಎಂಬುದು ತಿಳಿದು ಬರುವುದು. ಬೇವೂರು ಬಾದಶಹರು ಹೈದ್ರಾಬಾದ್‌ಗೆ ಹೋಗುವಾಗ “ಸರ್ವತ ಅಲಿಖಾನ್” ಎಂದು ಹೆಸರಿಟ್ಟುಕೊಂಡರು. ಅಲ್ಲಿ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಿ ನೂರಾರು ಜನ ಶಿಷ್ಯ ಬಳಗವನ್ನು ಕಟ್ಟಿದರು. ಸಾಕಷ್ಟು ಸಂಗೀತ ಕಛೇರಿಗಳನ್ನು ನಡೆಸಿದರು.

ಹೆಂಡತಿ ಯವನವ್ವಳಿಂದ ದೂರವಾಗಿ ಹೈದ್ರಾಬಾದ್ ಸೇರಿದ ಮೇಲೆ ಯವನವ್ವ ಹೈದ್ರಾಬಾದ್ ಕರ್ನಾಟಕದ ಕಡೆಗೆ ಸಂಚಾರ ಬೆಳೆಸಿದಳು. ಹೀಗೆ ಬೇವೂರ ಬಾದಶಹರ ಕೌಟುಂಬಿಕ ವ್ಯವಸ್ಥೆ ಸಂಚಾರದಲ್ಲಿಯೇ ಸಾಗಿ ಬಂದಿದ್ದು. ಬೇವೂರ ಬಾದಶಹರು ಹೈದ್ರಾಬಾದ್ ಮತ್ತು ಕರ್ನಾಟಕದ ನಡುವೆ ಒಂದು ಸೇತುವೆಯಾದರು. ಬದುಕಿನ ನೆಲೆ ಕಂಡುಕೊಳ್ಳಲು ನಿರಂತರ ಸಂಚರಿಸಿದರು. ಯಾವುದು ಫಲಿಸಲಿಲ್ಲ.

ಕೌಟುಂಬಿಕ ಕಲಹದಲ್ಲಿ ಕಾಲ ಕಳೆದ ಬೇವೂರ ಬಾದಶಹರ ಮನಸ್ಸು ಕಾಯ್ದ ಎಣ್ಣೆಯಂತೆ ತಳಮಳಿಸಿತು. ಹೆಂಡತಿಯ ಪ್ರೀತಿ ವಾತ್ಸಲ್ಯದಿಂದ ದೂರ ಸರಿದರು. ಮಕ್ಕಳ ಮಮತೆಯಿಂದ ವಂಚಿತರಾದರು. ಬೇವೂರ ಬಾದಶಹರಿಗೆ ಹೈದ್ರಾಬಾದ್‌ದ ಸಂಬಂಧವನ್ನು ಹರಿದುಕೊಂಡ ಮೇಲೆ ದಿಕ್ಕು ತೋಚದಂತಾಯಿತು. ಆಗ ಅವರ ನೆರವಿಗೆ ಬಂದದ್ದು ಕಂಪನಿ ನಾಟಕಗಳು.

ಚಂದವ್ವನ ಪಟ್ಟಿ: ಒಂದು ಚಿಂತನೆ

ಗ್ರಾಮೀಣ ಬದುಕಿನ ಸಂವೇದನೆಯಲ್ಲಿ ಹೊಲ, ಗದ್ದೆ, ಜಮೀನುಗಳನ್ನು ಹೆಸರಿಸಬೇಕಾದರೆ ಅವರ ಮಾಲೀಕರ ಹೆಸರನ್ನು ಹೇಳುತ್ತೇವೆ. ಗ್ರಾಮೀಣ ಮಟ್ಟದಿಂದ ಹಿಡಿದು ತಮ್ಮ ಆಡಳಿತ ಸೂತ್ರವನ್ನು ತಮ್ಮ ಕೈಯಲ್ಲಿಯೇ ಹಿಡಿದುಕೊಂಡ ಅದೆಷ್ಟೋ ಅರಸು ಮನೆತನಗಳು ಭೂಮಿಯನ್ನು ಕೆಲವು ವಂಶಸ್ಥರಿಗೆ “ಇನಾಂ” ನೀಡಿದ್ದು ಅವರ ಮುಖಾಂತರ ಕಂದಾಯವನ್ನು ಕೊಡಿಸುವುದಲ್ಲದೇ ಆಡಳಿತವನ್ನು ನಿರ್ವಹಿಸಲು ಅಧಿಕಾರ ನೀಡಿರುವುದು ಕಂಡುಬರುತ್ತದೆ. ಈ ವ್ಯವಸ್ಥೆಯನ್ನು ಬ್ರಿಟಿಷ್ ಸರ್ಕಾರದವರಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಯೂ ಮುಂದುವರಿದುಕೊಂಡು ಬಂದಿರುವುದನ್ನು ನೋಡಿದರೆ ನಮ್ಮ ಸಂಸ್ಕೃತಿ ಪರಂಪರೆಗಳು ನಮ್ಮ ಕಣ್ಮುಂದೆ ಬಂದು ನಿಂತತಾಗುತ್ತದೆ.

“ಇನಾಂ” ಜಮೀನುಗಳನ್ನು ಪಡೆದ ವಂಶಸ್ಥರು ರಾಜ ಮಹಾರಾಜರಿಂದ ಉಂಬಳಿಯಾಗಿ ಪಡೆದಕೊಂಡು ಅಲ್ಲಲ್ಲಿ ಬದುಕಿನ ನೆಲೆ ಕಂಡುಕೊಂಡುವರೇ ಆಗಿದ್ದಾರೆ. ಚಂದವ್ವನ ಪಟ್ಟಿಯಂತೆ ಇನ್ನೊಂದು ದಾಖಲೆಯ ಇನ್ನೊಂದು ದಾಖಲೆಯ ಸುಳಿವು ಸಿಗುವುದು. ಚಾಂದಬಿ ಹೆಸರು ಮನೆಯೊಂದಿಗೆ ಅವಿನಾಭಾವದ ಸಂಬಂಧ ಹೊಂದಿದೆ. ರೂಢಿಯಿಂದ “ಚಾಂದಬಿ” ಮರೆಯಾಗಿ ಲಿಂಗಾಯಂತರ ಬಾಯಲಿ ಚಂದವ್ವ ಆಗಿ ರೂಪಾಂತರ ಪಡೆದಿದೆ. ಇವತ್ತಿಗೂ ಆ ಮನೆಯ ಅಸ್ತಿತ್ವದ ಜೊತೆಗೆ ಚಂದವ್ವನ ಹೆಸರು ಗಟ್ಟಿಯಾಗಿ ಜನಮನದಲ್ಲಿ ಉಳಿದಿದೆ. ಚಂದವ್ವನ ಮನೆ ಈಗ ಸಿದ್ದಪ್ಪ ಆದಾಪೂರ ಅವರ ಒಡೆತನಕ್ಕೆ ಸೇರಿದೆ. ಮನೆ ನವೀಕರಣವಾಗಿದೆ. ಎಂದು ಡಾ. ಬಿ.ಸಿ. ಹದ್ಲಿ ಅಭಿಪ್ರಾಯ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಬೇವೂರಿನ ಕಂಡುಬರುವ “ಚಂದವ್ವನ ಪಟ್ಟಿ” (ಚಂದವ್ವನ ಹೊಲ) ಕಲಾವದಿರಿಗೆ “ಇನಾಂ” ಕೊಟ್ಟ ಭೂಮಿಯೇ ಆಗಿದೆ. ಈ ಹಿನ್ನೆಲೆಯಿಂದ ನೋಡಿದಾಗ ಬೇಔಊರ ಬಾದಶಹರ ವಂಶಸ್ಥರ ಕಲಾವಿದರೇ ಆಗಿದ್ದರೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸಂಗೀತ ಪರಂಪರೆ

ಖ್ಯಾತ ಕಲಾವಿದರೆನ್ನುವವರೆಲ್ಲ ಸಂಗೀತ ಕಾರ್ಯಕ್ರಮ ನೀಡುವಾಗ ವಿಘ್ನಗಳ ನಿವಾರಕ ಗಣೇಶನನ್ನು ಸ್ಮರಿಸಿಕೊಳ್ಳುತ್ತಾರೆ. ವಾತಾಪಿಯ ಗಣಪತಿಯನ್ನು ಮನದೊಳಗೆ ನೆನೆದು ಕಾರ್ಯಕ್ರಮ ಪ್ರಾರಂಭಿಸುತ್ತಾರೆ. “ಚಾಲಿಕ್ರ ರಾಜಧಾನಿ ವಾತಾಪಿ ಕರ್ನಾಟಕೀ ಸಂಗೀತದ ಉಗಮ ಸ್ಥಳ ಕರ್ನಾಟಕೀ ಸಂಗೀತದ ವಾರಸುದಾರಿಕೆಯನ್ನು ನಾವು ಪಡೆದಿರುವಂತೆಯೇ. ಹಿಂದೂಸ್ಥಾನಿ ಸಂಗೀತದ ವಾರಸುದಾರಿಕೆಯನ್ನು ಪಡೆದಿದ್ದೇವೆ. ಭಾರತದ ಎರಡೂ ಸಂಗೀತ ಪರಂಪರೆಗೂ ಕರ್ನಾಟಕವೇ ಜನ್ಮಭೂಮಿ. ಕರ್ನಾಟಕೀ ಸಂಗೀತಕ್ಕೆ ಚಾಲುಕ್ರ ಬಾದಾಮಿ ಉಗಮಸ್ಥಾನವಾಗಿರುವಂತೆ ಹಿಂದೂಸ್ಥಾನಿ ಸಂಗೀತಕ್ಕೆ ಬಹುಮನಿಯರ ವಿಜಾಪೂರ ಉಗಮಸ್ಥಾನವಾಗಿದೆ”.[7]

ಬೇವೂರ ಬಾದಶಹ ಸಾಕಷ್ಟು ಕಲಾವಿದರ ಗರಡಿಯನ್ನು ನಿರ್ಮಾಣ ಮಾಡಿದರೆಂಬ ಹೆಗ್ಗಳಿಕೆ ಇದೆ. ಆದರೆ ಬೇವೂರ ಬಾದಶಹರಿಗೆ ಸಂಗೀತದ ದೀಕ್ಷೆ ಕೊಟ್ಟವರು ಯಾರು? ಹಿಂದೂಸ್ಥಾನಿ ಮತ್ತು ಕರ್ನಾಟಕೀ ಸಂಗೀತವನ್ನು ಮನಮುಟ್ಟಿ ಹಾಡುವ ಬಾದಶಹರ ಬನ್ನುತಟ್ಟಿ ಆಶೀರ್ವದಿಸಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿದೆ.

ಬೇವೂರಿನ ಪರಿಸರ

“ಊರ ದೊರೆಯ ವಾಡೆಯಲ್ಲಿ ಚರ್ಮವಾದ್ಯ ಮತ್ತು ಸಂಗೀತದ ಅಭ್ಯಾಸ ನಡೆಯುತ್ತಿತ್ತು. ಅಲ್ಲಿಂದ ಪ್ರತಿವರ್ಷವೂ ಸೀತಿಮನಿಯ ಧರ್ಮದ ಮಠದ ಜಾತ್ರಗೆ ಬಾದಶಹರು ಹೋಗುತ್ತಿದ್ದರು. ಪ್ರತಿವರ್ಷ ಶ್ರಾವಣ ಸೋಮವಾರ ಮತ್ತು ಉರುಸು ನಿಮಿತ್ತವಾಗಿ ಹವ್ಯಾಸಿ ಕಲಾವಿದರಿಂದ ನಾಟಕ ಪ್ರದರ್ಶನ ಮತ್ತು ಭಜನಾ ಹಾಡುಗಳ ಪ್ರದರ್ಶನ ನಡೆಯುತ್ತಿತ್ತು. ಆ ತಂಡದೊಂದಿಗೆ ಒಡನಾಟವನ್ನು ಬೆಳೆಯುತ್ತ ಕಾಲಹರಣ ಮಾಡುತ್ತಿದ್ದ ಚಾಂದಬಿಯ ಮಗನಿಗೆ ಸಹಜವಾಗಿಯೇ ಕಲೆಯ ಬಗ್ಗೆ ಆಕರ್ಷಣೆ ಬೆಳೆಯಿತು”.[8] ಹೀಗೆ ಜಾನಪದದ ಸಂಗೀತವೇ ತಾಯಿಬೇರಾಗಿ ಬೇವೂರ ಬಾದಶಹರ ಮನದಾಳದಲ್ಲಿ ಬೇರೂರಿ ಬಿಟ್ಟಿತು.

ಸಂಗೀತದ ಮಾಧುರ್ಯಕ್ಕೆ ಹರಿದು ಹೋಗುವ ಹಾವು ಕೂಡಾ ಹೆಡೆಯೆತ್ತಿ ರಾಗಸವಿಯನ್ನು ಸವಿಯುತ್ತದೆ. ಸಂಗೀತಕ್ಕೆ ಮನಸೋಲದವರಿಲ್ಲ. ತಲೆದೂಗದವರಿಲ್ಲ. ಈ ಹಿನ್ನೆಲೆಯಲ್ಲಿ ರಂಗಭೂಮಿಯೂ ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಮೆರೆದಿದೆ. ರಾಗ – ತಾಳ ಲಯಬದ್ಧವಾದ ಸಂಗೀತದಲ್ಲಿ ವಿವಿಧ ಪರಿಕರಗಳನ್ನು ಮೇಳೈವಿಸಿಕೊಂಡು ಪ್ರವಾಹದಂತೆ ಪ್ರಜ್ವಲಿಸುತ್ತದೆ. ಸಂಗೀತದೊಂದಿಗೆ ಸಾಹಿತ್ಯ ಸೇರಿ ತನ್ನ ಗಾಳಿ ಗಂಧವನ್ನು ಸುತ್ತುಮುತ್ತೆಲ್ಲಾ ಹರಡುವಂತೆ ಮಾಡಿದೆ. ಹೀಗಾಗಿ ರಂಗ ಸಂಗೀತದಲ್ಲಿ ವಿವಿಧ ವಾದ್ಯ ಪರಿಕರಗಳು ರಂಗಭೂಮಿಗೆ ರಂಗು ನೀಡುತ್ತಿವೆ. ಪ್ರಮುಖವಾಗಿ ಹಾರ್ಮೋನಿಯಂ, ತಬಲಾ, ಡಗ್ಗಾ, ಮುಖ್ಯವಾಗಿದ್ದರೂ ಇನ್ನುಳಿದ ವಾದ್ಯ ಪರಿಕರಗಳು ಅವುಗಳನ್ನು ಅನುಸರಿಸುತ್ತ ಪೂರಕವಾಗುತ್ತ ಸಾಗುವುದುಂಟು. ಬೇವೂರ ಬಾದಶಹರು ಸಂಗೀತದ ಹಲವು ಪರಿಕರಗಳನ್ನು ನುಡಿಸುತ್ತಿದ್ದರು. ಅವುಗಳಲ್ಲಿ ಚರ್ಮವಾದ್ಯ – ತಂತಿವಾದ್ಯಗಳನ್ನು ನುಡಿಸುವ ಶಾಸ್ತ್ರೋಕ್ತ ಹಿನ್ನೆಲೆ ಪಡೆದುಕೊಂಡಿದ್ದರು. ಅವರಿಗೆ ಅತ್ಯಂತ ಅಚ್ಚುಮೆಚ್ಚಿನ ಸಂಗೀತವೆಂದರೆ ವೀಣೆ, ತಂಬೂರಿ, ಹಾರ್ಮೋನಿಯಂ, ಪಿಯಾನೋ, ಡೋಲಕ ಮುಂತಾದ ವಾದ್ಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಸ್ವತಃ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಲ್ಲದೇ ರಂಗಭೂಮಿಯ ಮೇಲೆ ವಿಭಿನ್ನ ಪಾತ್ರಗಳನ್ನು ಅಭಿನಯಿಸುತ್ತ ಹಾಡುಗಳನ್ನು ಶಾಸ್ತ್ರೋಕ್ತವಾಗಿ ಹಾಡುತ್ತಿದ್ದರೆ ಬೇವೂರ ಬಾದಶಹರಿಗೆ ಸರಿಸಾಟಿಯಾಗಿ ನಿಲ್ಲುವ ರಂಗ ಗಂಧರ್ವರುಂಟೇ? ಎನ್ನುವ ಹಾಗೆ ಹುಬ್ಬೇರುವಂತೆ ಮಾಡುತ್ತಿದ್ದರು. ಅಂಥ ಬಹುಮುಖಿ ಪ್ರತಿಭೆಯ ವ್ಯಕ್ತತ್ವ ಬೇವೂರ ಬಾದಶಹರದು.

ಹಾರ್ಮೋನಿಯಂ ಯಾರಾದರೂ ನುಡಿಸುವಾಗ ಅಪಸ್ವರವಾದರೆ ಸ್ವತಃ ಬಾದಶಹರೇ ಹಾಂಗಲ್ಲ – ಹೀಂಗ ನುಡಿಸಬೇಕು ಎಂದು ತಿಳಿಸಿ ರಾಗ – ತಾಳ – ಲಯಗಳ ಜ್ಞಾನವನ್ನು ಮೂಡಿಸುತ್ತಿದ್ದರು. ಬಾದಶಹರು ಸಂಗೀತದ ಹೋಸ ಚೀಜ್‌ಗಳ ಪುಸ್ತಕವೊಂದನ್ನು ರಚಿಸಿದ್ದರು. ಪ್ರಕಟಿಸಲು ಹಣದ ಕೊರತೆ ಸ್ಥಳೀಯ ಕಲಾವಿದರೆಲ್ಲ ಕೂಡಿ ನಾಟಕವಾಡಿ ಹಣ ಸಂಗ್ರಹಿಸಿಕೊಟ್ಟರು ಬಾದಶಹರು ಅದನ್ನು ಸ್ವಂತಕ್ಕೆ ಬಳಸಿಕೊಂಡರು. ಪುಸ್ತಕ ಪ್ರಿಂಟ್ ಆಗಲಿಲ್ಲ ಎಂದು ಸಿ.ಎಂ. ಚನಗೊಂಡಿಯವರು ಅಭಿಪ್ರಾಯ ಪಡುತ್ತಾರೆ.

[1] ಡಾ. ರಾಮಕೃಷ್ಣ ಮರಾಠೆ, ನಾಟಕ ಮತ್ತು ವಿಚಾರ ಸಾಹಿತ್ಯ – ಪ್ರಸ್ತಾವನೆ

[2] ಆದ್ಯರಂಗಾಚಾರ್ಯ ಕೆ.ಯು.ಡಿ., ರಂಗಭೂಮಿ ಪ್ರರೋಭಿವೃದ್ಧಿ, ಪುಟ. ೩,೪

[3] ಅದೇ ಪುಟ. ೫

[4] ಅದೇ ಪುಟ. ೯

[5] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ. ೧೨೦

[6] ಡಾ. ಬಿ.ಸಿ.ಹದ್ಲಿ, ಬೇವೂರಿನ ಅಪರೂಪದವರು, ಪುಟ. ೭೭

[7] ಪಾಟೀಲ ಪುಟ್ಟಪ್ಪನವರು, ಚೆಲುವು ಕನ್ನಡನಾಡು

[8] ಡಾ. ಬಿ.ಸಿ.ಹದ್ಲಿ, ಬೇವೂರಿನ ಅಪರೂಪದವರು, ಪುಟ. ೬೯