ರಂಗ ಸಂಗೀತ

ರಂಗಭೂಮಿಯಲ್ಲಿ ಹಾಡು – ಸಂಗೀತ ಮುಖ್ಯವಾಗಿದ್ದರೂ ರಂಗಗೀತೆಗಳನ್ನು ಹಾಡುವ ಕಲಾವಿದರು ವೃತ್ತಿ – ಕಂಪನಿಗಳಲ್ಲಿ ಹೇರಳವಾಗಿ ಸಿಗುತ್ತದ್ದರು. ಅಲ್ಲಿ ಕಲಾವಿದರು ರಂಗ ಗೀತೆಗಳನ್ನು ಶಾಸ್ತ್ರೋಕ್ತವಾಗಿ ಹಾಡಿ ಮೈನವಿರೇಳಿಸುವಂತೆ ಮಾಡುತ್ತಿದ್ದರು. ಮೊದಲನೇಯ ತಲೆಮಾರಿನ ನಾಟಕಕಾರರಿಂದ ಹಿಡಿದು ಮೂರನೆಯ ತಲೆಮಾರಿನ ನಾಟಕಕಾರರವರಿಗೆ ತಮ್ಮ ತಮ್ಮ ಕೃತಿಗಳಲ್ಲಿ ಸ್ವತಃ ರಂಗ ಗೀತೆಗಳನ್ನು ಬರೆದು ಸ್ವರ ಸಂಯೋಜನೆಯನ್ನು ಕೂಡಾ ಮಾಡುವ ಪರಿಪಾಠವಿತ್ತು. ಮೂರನೇಯ ತಲೆಮಾರಿನ ನಾಟಕಕಾರರ ಪರಿಸರದಲ್ಲಿ ಬೇರೆ ಬೇರೆ ಭಾಷೆಯ ಹಾಡುಗಳು ಕನ್ನಡಕ್ಕೆ ರೂಪಾಂತರಗೊಂಡು ರಂಗಭೂಮಿಯನ್ನು ಅಲಂಕರಿಸಿದವು. ಅಂದಿನ ಹಾಡುಗಳಿಗೆ ಶಾಸ್ತ್ರೋಕ್ತವಾದ ನೃತ್ಯವಿರುತ್ತಿತ್ತು. ಪ್ರಭಾವಿ ಮಾಧ್ಯಮಗಳ ದಾಳಿ ಹೆಚ್ಚಿದ ಮೇಲೆ ಕ್ಯಾಬರೆ ಕಣ್ಣು ಕುಕ್ಕಿಸಿತು. ಹಳ್ಳಿಯ ರೈತಾಪಿ ವರ್ಗವೆಲ್ಲಾ ತಮ್ಮ ತಲೆಯ ಮೇಲಿನ ರುಮಾಲನ್ನು ತೂರಿ ಕೇಕೇ ಹಾಕಿ ಚಪ್ಪಾಳೆ ತಟ್ಟಿದ್ದುಂಟು. ಇನ್ನುಳಿದ ರಂಗಾಸಕ್ತರು ಒನ್ಸ್‌ಮೋರ್ ಅಂದದ್ದುಂಟು. ಹೀಗೆ ನಾಟಕಗಳಲ್ಲಿ ಹಾಡು, ಸಂಗೀತ, ಪ್ರಯೋಗಗಳಿಂದ – ಪ್ರಯೋಗಕ್ಕೆ ಪರಿವರ್ತನೆಯಾಗುತ್ತ ಸಾಗಿತು.

“ರಂಗಗೀತೆಗಳು ನನ್ನ ಉಸಿರು ಅಂತ ತಿಳಿದುಕೊಂಡೀನಿ, ಶಾಸ್ತ್ರೀಯ ಸಂಗೀತದ ಆಧಾರದ ರಂಗಗೀತೆಗಳು ಉಳಿಯಬೇಕೆನ್ನುವ ದೊಡ್ಡ ಹುಚ್ಚು ನನ್ನದು. ಮಹಾತ್ವಾಕಾಂಕ್ಷೆ ಅಲ್ಲ ಹುಚ್ಚು. ಈಗಲೂ ನನ್ನ ನಾಲಿಗೆ ಮೇಲೆ ಮೂರು ನೂರು ಹಾಡುಗಳು ಬರುತ್ತವೆ. ಅವನ್ನ ಧ್ವನಿಸುರುಳಿ ಮಾಡಿ ಇಟ್ಟಿದ್ದೀನಿ, ಅವನ್ನು ಕೇಳಿದವರಿಗೆ ರಂಗ ಸಂಗೀತದ ಮೇಲೆ ಪ್ರೀತಿ ಉಳಿದು ಅಮೂಲ್ಯ ಆಸ್ತಿ ಉಳಿಲಿ ಎನ್ನುವ ಕಾರಣಕ್ಕಾಗಿ ಈ ಕೆಲಸ ಮಾಡಿದೆ, ನಾನು ಬಹಳ ಛಲೋ ಹಾಡಿದಿನಿ ಅಂತಲ್ಲ. ಸಾಹಿತ್ಯ ಮತ್ತು ಹಾಡಿದ ರೀತಿ ಬಹಳ ಮುಖ್ಯ. ಉಳಿದವರು ಇದನ್ನು ಮುಂದುವವರಿಸಿಕೊಂಡು ಹೋಗ್ಲಿ ಅನ್ನುವ ಆಸೆ. ಇದಕ್ಕಾಗಿ ಇದನ್ನು ಉಳಿದವರು ಮುಂದುವರಿಸಿಕೊಂಡು ಹೋಗಲಿ”.[1] ಎಂಬುದು ನಾಡೋಜ ಏಣಗಿ ಬಾಳಪ್ಪನವರ ಅಭಿಮತ.

“ರಂಗಭೂಮಿ ಹುಟ್ಟಿದಾಗಿನಿಂದ ಇತಿಹಾಸವನ್ನು ಬರೆಯುತ್ತಲೇ ಇದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ರಂಗ ಸಂಗೀತದ ಬಗ್ಗೆ ಬರೆದವರು ಕಡಿಮೆ. ಪ್ರಸಂಗಕ್ಕೆ ಅನುಗುಣವಾಗಿ ಹಾಡು ಹೇಳಿದಾಗ ಪ್ರಶಂಸೆ ಮಾಡುವವರಿದ್ದಾರೆ. ಆದರೆ ರಂಗ ಸಂಗೀತದ ಬಗ್ಗೆ ಅಧಿಕೃತವಾಗಿ ಬರೆದವರು ಕಡಿಮೆ. ಯಾಕೆ ರಂಗ ಸಂಗೀತ ಉಳಿಯಬೇಕು?

ವಚನ ಸಾಹಿತ್ಯವಿದೆ, ದಾಸ ಸಾಹಿತ್ಯವಿದೆ, ಜಾನಪದವಿದೆ. ಇವೆಲ್ಲವೂ ಅಮೂಲ್ಯವಾದುದು ಎಂದು ತಿಳಿದಿದ್ದಾರೆ. ಅವು ಉಳಿಯಬೇಕು. ಬೇಳೆಯಬೇಕು ಎಂದು ಶ್ರಮಿಸಿದವರಿದ್ದಾರೆ. ಅದರಂತೆ ರಂಗ ಸಂಗೀತದ ಬಗ್ಗೆಯೂ ಕಾಳಜಿ ಬೇಕು ಶಾಸ್ತ್ರೀಯ ಸಂಗೀತವನ್ನಾಧರಿಸಿದ ರಂಗಸಂಗೀತವನ್ನು ಉಳಿಸಲು ಯಾಕೆ – ಕಾಳಜಿವಹಿಸಿಲ್ಲ?

“ರಂಗ ಸಂಗೀತ ಚೆನ್ನಾಗಿರುತ್ತದೆ. ಆಯಾ ಸಂದರ್ಭಕ್ಕೆ ಅನುಸರಿಸಿ ಸಾಹಿತ್ಯ ರಚನೆ ಮಾಡಿರುತ್ತಾರೆ. ಅದಕ್ಕಾಗಿ ಕರುಣೆ, ದುಃಖ, ರೋಷ, ಹೀಗೆ ಸಂಬಂಧಪಟ್ಟ ಅಂಶಗಳು ಹಾಡಿನಲ್ಲಿರುತ್ತವೆ. ಇದಕ್ಕಾಗಿ ರಂಗ ಸಂಗೀತ ಉಳಿಯಬೇಕು. ಇನ್ನು ಶಾಸ್ತ್ರೀಯ ಸಂಗೀತದಲ್ಲಿ ಹಿಂದುಸ್ತಾನಿ ಚೀಜುಗಳಿರುತ್ತವೆ. ಬೆಂಗಳೂರು ಆಕಾಶವಾಣಿಯವರು ಕೆಲವು ದಕ್ಷಿಣಾದಿ ಸಂಗೀತವನ್ನು ಸಂಗ್ರಹಿಸಿದವರು. ಧಾರವಾಡ ಆಕಾಶವಾಣಿಯವರು ೧೩೦ ಹಾಡುಗಳನ್ನು ಸಂಗ್ರಹಿಸಿದವರು. ಸಂಸ್ಕೃತಿ ಇಲಾಖೆಯವರು ಕರ್ನಾಟಕ ಮತ್ತು ಹಿಂದೂಸ್ತಾನಿ ಹೀಗೆ ಎರಡು ಬಗೆಯ ಸಂಗೀತವನ್ನು ಸಂಗ್ರಹಿಸಿದ್ದಾರೆ. ಆದರೂ ಅಪೂರ್ಣವಾಗಿದೆ. ಇದು ಅಧಿಕೃತವಾಗಬೇಕಾದರೆ ಪರಪೂರ್ಣವಾಗಬೇಕು. ಈ ಹಿಂದಿನ ಎಲ್ಲಾ ನಾಟಕಗಳ ಹಾಡುಗಳನ್ನು ಹೇಳಿ ಕೊಡುವವರು ಬೇಕಾಗಿದ್ದಾರೆ. ಆದರೆ ವ್ಯಸನದಿಂದ ಹೇಳುತ್ತನೆ. ಅತಿಶಯೋಕ್ತಿಯಲ್ಲ. ಅತಿರೇಕವಲ್ಲ. ಅಹಂಭಾವದಿಂದಲೂ ಅಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ ರಂಗ ಗೀತೆಗಳನ್ನು ಹಾಡುವವರು, ಹಾಡಿದವರು ಯಾರೂ ಉಳಿದಿಲ್ಲ. ಉಳಿದವರು ಹಾಡುತ್ತಿಲ್ಲ, ಮಾತಾಡಿಯೂ ಹಾಡಿಯೂ ಒತ್ತಾಯಿಸಬೇಕಾದವರು ಇಲ್ಲ. ಉಳಿದವ ನಾನೊಬ್ಬನೇ. ಇದಕ್ಕಾಗಿ ರಂಗ ಸಂಗೀತ ಉಳಿಯ ಬೇಕಿದೆ. ಎಲ್ಲಾ ಪ್ರಕಾರಗಳಲ್ಲಿ ಹಾಡುವಂತೆ ರಂಗ ಗೀತೆಗಳನ್ನು ಹಾಡಬೇಕು”.[2] ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕ್ರತರು ಏಣಗಿ ಬಾಳಪ್ಪವನರು ರಂಗ ಗೀತೆಗಳ ಹಿನ್ನೆಲೆ ಮಹತ್ವ ಮತ್ತು ಅದರ ಉದ್ದೇಶಗಳನ್ನು ಕುರಿತು ಚಿಂತನ – ಮಂಥನ ಮಾಡಿರುವುದು ಕಂಡು ಬರುತ್ತದೆ.

“ಮೊದಲು ರಂಗಗೀತೆಗಳು ಕರ್ನಾಟಕೀ ಶೈಲಿಯಲ್ಲಿದ್ದವು. ಬಯಲಾಟದಲ್ಲೂ ಕರ್ನಾಟಕೀ ಶೈಲಿಯನ್ನು ಆ ಮ್ಯಾಲ ಹಿಂದೂಸ್ತಾನಿ ಹಾಡುವ ಗವಾಯಿಗಳು ಧಾರವಾಡ, ಬೆಳಗಾವಿಗೆ ಬಂದ ಮ್ಯಾಲ ಹಿಂದೂಸ್ತಾನಿ ಪದ್ಧತಿ ರೂಢಿಗೆ ಬಂತು. ಹಿಂದೂಸ್ತಾನಿಯಲ್ಲಿ ಸ್ವರಕ್ಕೆ ಪ್ರಾಧಾನ್ಯತೆ. ಕರ್ನಾಟಕದಲ್ಲಿ ತಾಳಕ್ಕೆ ಪ್ರಾಧಾನ್ಯತೆ. ಸಂಗೀತದೊಳಗನ ಕಂದ, ಪದ್ಯ, ಸಾಕಿ, ಸೀಸ ಎನ್ನುವ ವೈವಿದ್ಯಗಳಿದ್ದವು.”[3] ಎಂಬುದು ರಂಗಭೂಮಿಯ ಹಲವು ಸಂಶೋಧಕರ ಅಭಿಪ್ರಾಯ.

“ಸಾಮಾನ್ಯವಾಗಿ ನಾಂದಿ ಹಾಡನ್ನು ಭೀಮ್ ಪಲಾಸ್, ಯಮನ, ಬಿಹಾನ್, ದೇಶಕಾರ್, ಹಮೀರ್ ರಾಗದಲ್ಲಿ ಹಾಡುತ್ತಾರೆ. ಇದರಲ್ಲೆ ಯಾಕೆ ಹಾಡ್ತಾರಂದ್ರ ನಾಟಕ ಆರಂಭವಾಗುವ ವ್ಯಾಳೆ ರಾತ್ರಿ ೧೦ರಿಂದ ೧೧ ಗಂಟೆಕ್ಕ. ದಿನದ ವ್ಯಾಳೆದಾಗ ಮೂರು ತಾಸಿನ ಪ್ರಹರ್ ಅಂತ ಇರ‍್ತದ ಅದಕ್ಕೆ ಹೊಂದಿಕೊಂಡು ಹಾಡ್ತಿದ್ರು. ಮಧ್ಯರಾತ್ರಿಗೆ ಮಾಲ್‌ಕಂಸ, ಬೆಳಗಿನ ಜಾವಕ್ಕೆ ಬಿಬಾಶ್, ತೋಡಿ, ಭೈರವ, ಭೈರವಿ, ಜೀವನ್‌ಪುರಿ, ಜೋಗಿ ರಾಗಗಳನ್ನು ಹಾಡ್ತಿದ್ರು. ಮಂಗಳಕ್ಕೆ ಯಾವ ರಾಗದಲ್ಲೂ ಹಾಡಬಹುದು”.[4]

ಸಂಗೀತದಲ್ಲಿ ತೊಡಗಿಕೊಂಡ ಗಾಯಕರು ಸಮಯ ಸಂದರ್ಭಗಳನ್ನು ಅನುಸರಿಸಿ ರಾಲಾಲಾಪನೆಯನ್ನು ಮಾಡುತ್ತಿದ್ದರು. ಆ ಒಂದು ಸಂಗೀತದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಬಂದಿರುವುದನ್ನು ಕಾಣಬಹುದು.

“ಹಿಂದಿನ ಕಾಲದಲ್ಲಿ ಸಂಗೀತ ಕೇಳೂದಕ್ಕಾಗಿಯೇ ನಾಟಕ ನೋಡಾಕ ಬರತಿದ್ರು. ಶಾಸ್ತ್ರೀಯ ಸಂಗೀತದ ನಿಯಮ, ಪದ್ಧತಿಗಳನ್ನು ಬಳಸಿಕೊಂಡಿತು ರಂಗ ಸಂಗೀತ. ಸ್ವಲ್ಪ ಹೊತ್ತಿನಲ್ಲೇ ರಂಜನೆ ಸಿಗಬೇಕು ಅನ್ನೋ ಸಲುವಾಗಿ ರಂಗ ಸಂಗೀತ ಸ್ವಲ್ಪ ಬದಲಾವಣೆ ಆಯಿತು. ಆದ್ರೆ ಅದರ ಮೂಲಕ ಶಾಸ್ತ್ರೀಯ ಸಂಗೀತವನ್ನು ವಾಮನ ರಾಯರು ಉಳಿಸಿ ಬೆಳೆಸಿದ್ರು”.

ಬಸವರಾಜ ಮನ್ಸೂರ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಗುರುರಾವ ದೇಶಪಾಂಡೆ, ಬಾದಶಹಾ ಸಾಹೇಬ್ ಬೇವೂರ… ಇವರನ್ನೆಲ್ಲ ತಮ್ಮ ಸಂಘದಲ್ಲಿಟ್ಟುಕೊಂಡು, ತಾವೂ ಹಾಡಿ ಸಂಗೀತ ಪರಂಪರೆ ಬೆಳೆಸಿದ್ರು, ಗವಾಯಿಗಳ ಸಂಗೀತ ಕೇಳಬೇಕಂದ್ರ ಆಗ ಸಹಜವಾಗಿ ಸಿಗ್ತಿರಲಿಲ್ಲ, ಗೌಡ್ರು ಮನೆತನದವರು, ಸಾಹುಕಾರರು ಸಂಗೀತ ಕಛೇರಿ ಏರ್ಪಡಿಸುತ್ತಿದ್ರು. ಆದ್ರ ಸಾಮಾನ್ಯರಿಗೆ ಸಂಗೀತ ಕೇಳಾಕ ಸಿಗ್ತಿರಲಿಲ್ಲ. ಸಂಗೀತ ಕೇಳಾಕ ಸಾಮಾನ್ಯರು ನಾಟಕ ನೋಡಾಕ ಹೋಗ್ತಿದ್ರು. ೪ ರಿಂದ ೫ ತಾಸು ನಾಟಕ ನೋಡಿ ಸಂಗೀತ ಕೇಳಿ ತೃಪ್ತಿ ಪಡುತಿದ್ರು.[5] ನಾಟಕಗಳನ್ನು ನೋಡುವ ಪ್ರೇಕ್ಷಕ ವರ್ಗ ಭಿನ್ನ ಭಿನ್ನರುಚಿಗಳನ್ನು ಇಟ್ಟುಕೊಂಡು ರಂಗಮಂದಿರಕ್ಕೆ ಬರುವುದುಂಟು. ಇಂಥಾ ಒಂದು ಸಂದರ್ಭದಲ್ಲಿ ರಂಗ ಸಂಗೀತ ಕೇಳುವುದಕ್ಕಾಗಿಯೇ ಪ್ರೇಕ್ಷಕವರ್ಗವು ಬಂದು ಕುಳಿತುಕೊಳ್ಳುವುದು ನಾಟಕದ ದೃಶ್ಯಗಳಿಗೆ ತಕ್ಕಂತೆ ಹಾಡು ಸಂಗೀತವಿರದಿದ್ದರೆ ಆ ನಾಟಕಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರತಿಯೆ ದೊರೆಯುತ್ತಿರಲಿಲ್ಲ. ಹೀಗಾಗಿ ರಂಗಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥೈಸಿಕೊಂಡು ನಾಟಕ ಪ್ರಯೋಗಗಳನ್ನು ಪ್ರಯೋಗಿಸುತ್ತಿದ್ದರು.

“ಸಂಗೀತ ನಾಟಕ ಅಂದ ಕೂಡಲೇ ಬಲ್ಲವರು ಇರತಿದ್ರು. ಒಂದು ಸನ್ನಿವೇಶದಿಂದ ಮತ್ತೊಂದು ಸನ್ನಿವೇಶ ಬದಲಾಗುವ ಸಂಗೀತ ಇರ್ತಿತ್ತು. ಮತ್ತು ಮಂದಿಗೆ ರಂಜನೆ ಬೇಕಂಥ ರಸ್ತೆ ಪಡದಾ ಬಿಟ್ಟಾಗ ಹಾಸ್ಯ ಪಾತ್ರಧಾರಿಗಳು ಬರ‍್ತಿದ್ರು. ಈ ರೀತಿ ಒಂದೇ ನಾಟಕದಲ್ಲಿ ಆಡ್ತಿದ್ವಿ. ಆದ್ರ ಮರಾಠಿ ರಂಗಭೂಮಿಯವರು ತಮಾಷೆಗೆ ಸಂಗೀತಕ್ಕೆ ಬುದ್ಧಿವಂತರಾಗಿ ಬೇರೆ ವಿಧಾನಗದ ನಾಟಕವಗಳನ್ನಾಡತಿದ್ರು. ನಮ್ಮಲ್ಲಿ ಎಲ್ಲಾ ಕೂಡಿ ಒಂದೇ ಆತು. ನಮಗ ಎಲ್ಲಾ ಬೇಕು ರಂಜನೆ ಬೇಕು ನಿಜ ಆದ್ರ ಎಷ್ಟು ಕೊಡಬೇಕನ್ನೂದು ಅಳತೆ ಹತ್ತಲಿಲ್ಲ. ಮೊದಲು ಪೌರಾಣಿಕ ಐತಿಹಾಸಿಕ ನಾಟಕ ಆಡುವಾಗ ಸನ್ನಿವೇಶದಿಂದ ಸನ್ನಿವೇಶ ಬದಲಾಗುವ ೧೦ ನಿಮಿಷ ಬೇಕಾಗುತ್ತಿತ್ತು. ಹಿಂಗ ೧೫ ನಿಮಿಷ ಬೇಕಾಗುವಾಗ ಹಾಡು ಹಾಡುತಿದ್ರು. ಒಳ್ಳೆ ಗಾಯಕ ಬಂದು ಹಾಡುತ್ತಿದ್ದ ಇದರಿಂದ ಸನ್ನಿವೇಶ ಬದಲಾಗಿ ಸಂಗೀತ ಪ್ರಿಯರಿಗೆ ತೃಪ್ತಿ ಆಗುತ್ತಿತ್ತು”.[6] ರಂಗ ಪ್ರಯೋಗಗಳನ್ನು ಕಲಾವಿದರು ಮುಂದಿನ ಸನ್ನಿವೇಶಗಳಿಗೆ ತಕ್ಕಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಡು ಸಂಗೀತ ಏರ್ಪಡುತ್ತಿತ್ತು. ಈ ಹಾಡು ಸಂಗೀತ ಮುಗಿಯುವುದರೊಳಗಾಗಿ ಮುಂದಿನ ದೃಶ್ಯದ ಪ್ರಯೋಗದ ಸಿದ್ಧತೆ ನಡೆಯುತ್ತಿತ್ತು.

“ಬಾದಶಹ ಮಾಸ್ತರರು ಒಮ್ಮೆ ರಾಣಿ ರುದ್ರಮ್ಮ ನಾಟಕದಲ್ಲಿ ಮಲ್ಲಸರ್ಜನೆ ಪಾತ್ರ ಮಾಡ್ತಿದ್ರು. ಆ ಪಾತ್ರದ ಒಂದು ಹಾಡು ಮಾಲ್‌ಕಂಸ ರಾಗದಲ್ಲಿ ಕೂಡಿಸಲಾಗಿತ್ತು. ಬಾದಶಹ ಹಾಡಿದ್ರು. ಒಡನೇ ಪ್ರೇಕ್ಷಕರಿಂದ ಶಹಬ್ಬಾಸ್ ಗಿರಿ ಬಂತು. ಹಿಂದೆಯೇ ಒನ್ಸ್‌ಮೋರ್ ಕೇಳಿತು. ಆದ್ರ ರಂಗಭೂಮಿಯ ಬಾದಶಾಹ ಮೊದಲು ಹಾಡಿದ ಹಾಡನ್ನೇ ಹಾಡಿದ್ರು. ಆದ್ರ ಮಾಲ್‌ಕಂಸ ರಾಗದಲ್ಲಿ ಅಲ್ಲ. ಭೈರವಿಯಲ್ಲಿ, ಜನ ಅದನ್ನೂ ಕೇಳಿ ಮೆಚ್ಚಿದ್ರು. ಮತ್ತೆ ಮೆಚ್ಚುಗೆಯಿಂದ ಒನ್ಸ್‌ಮೋರ್ ಅಂದ್ರು, ಮತ್ತೆ ಬಾದಶಾಹ ಲಲಿತ ರಾಗದಲ್ಲಿ ಹಾಡಿದ್ರು.[7] ಪ್ರಬುದ್ಧ ಸಂಗೀತ ಕಲಾವಿದ ಒಂದು ಗೀತೆಯನ್ನು ವಿವಿಧ ರಾಗಗಳಲ್ಲಿ ರಾಗ ಸಂಯೋಜನೆ ಮಾಡಿ ಹಾಡುವ ವೈಖರಿ ಕೆಲವೇ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಬೇವೂರ ಬಾದಶಾಹ ಅಂಥ ಪ್ರಭಾವಿ ಕಲಾವಿದರಾಗಿ ಗಮನ ಸೆಳೆಯುತ್ತಾರೆ.

“ಸಾವಿನ ದವಡೆಯಲ್ಲಿ ಮಗುವಿನ ತಾಯಿ ಶೋಕಗೀತದ ಎರಡು ಸಾಲುಗಳನ್ನು ರಾಗಮಾಲಿಕೆಯಲ್ಲಿ ಹಾಡಿ ಮುಗಿಸುವವರೆಗೆ ಆ ಮಗು ಸಾಯುತ್ತಿರಲಿಲ್ಲ. ಕೆಲವು ವೃತ್ತಿ ಕಂಪನಿಗಳಲ್ಲಿ ರಂಗ ಸಂಗೀತದ ಹಾವಳಿ ಎಷ್ಟರಮಟ್ಟಿಗೆ ಹೆಚ್ಚಾಗಿತ್ತೆಂದರೆ ಪಾತ್ರಗಳೂ ಸಾಯುವಾಗಲೂ ಹಾಡಿಯೇ ಸಾಯುತ್ತಿದ್ದವು”.[8] ರಂಗಭೂಮಿಯಲ್ಲಿ ಸಂಗೀತದ ಪ್ರಭಾವ ಎಷ್ಟಿತ್ತೆಂದರೆ ಕಲಾವಿದರು ಹೆಜ್ಜೆ ಹೆಜ್ಜೆಗೂ ಹಾಡುಗಳನ್ನು ಹೇಳಬೇಕಾದ ಅನಿವಾರ್ಯತೆ ಇತ್ತು. ಸಂತೋಷದಿಂದ ಹಿಡಿದು ದುಃಖ ಸನ್ನಿವೇಶದಲ್ಲಿಯೂ ಕೂಡಾ ಹಾಡುಗಳನ್ನು ಹೇಳುತ್ತಿದ್ದರು. ನಾಟಕದ ಸನ್ನಿವೇಶದ ಪಾತ್ರಧಾರಿ ಕೊನೆಯುಸಿರೆಳೆಯುವ ಸಂದರ್ಭದಲ್ಲಿಯೂ ಹಾಡಿಯೇ ಸಾಯಬೇಕು. ಈ ಸನ್ನಿವೇಶವು ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮ ಬೀರಿ ಯಾರಾದರೂ ಒನ್ಸ್‌ಮೋರ್ ಎಂದರೆ ಸತ್ತವನು ಎದ್ದು ಹಾಡಬೇಕು ಇಂಥ ಅಸಂಬದ್ಧ ಚಟುವಟಿಕೆಗಳು ಮೂಲ ಕಥೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದವು.

“ಕವಿಗಳು ಒಂದು ನಾಟಕದಲ್ಲಿ ಒಂದು ನೂರು ಹಾಡುಗಳು, ನಲವತ್ತು, ಐವತ್ತು, ಕಂದ ಪದ್ಯಕ್ಕಿಂತಲೂ ಕಡಿಮೆ ಬರೆಯುತ್ತಿರಲಿಲ್ಲ. ಹಾಡು ಎಂದರೆ ಪಲ್ಲವಿ ಮೂರು ಚರಣಗಳಿರುತ್ತಿದ್ದವು”.[9] ಎಂದು ಗುಬ್ಬಿವೀರಣ್ಣನವರ ಅಭಿಪ್ರಾಯವಾಗಿದೆ. “ಶಿವಮೂರ್ತಿ ಸ್ವಾಮಿಗಳು (೧೯೦೧) ಕಂಪನಿಯಲ್ಲಿ ನೇರವಾಗಿ ಹಿಂದುಸ್ತಾನಿ (ಉತ್ತರಾದಿ) ಚಾಲುಗಳನ್ನೇ ತೆಗೆದುಕೊಂಡು ಅವುಗಳಿಗೆ ತಕ್ಕ ಕನ್ನಡ ಪದಗಳನ್ನು ರಚಿಸಿ ನಾಟಕಗಳಲ್ಲಿ ಬಳಸುತ್ತಿದ್ದರು. ಶ್ರೀ ವಾಮನ್‌ರಾವ್ ಮಾಸ್ತರರು, ಆಡುತ್ತಿದ್ದ ನಾಟಕಗಳು ಮರಾಠಿ ನಾಟಕಗಳ ಅನುವಾದವೇ ಆದುದರಿಂದ ಅವುಗಳಲ್ಲಿಯ ಮೂಲ ಮರಾಠಿ ಪದಗಳನ್ನು ಭಾಷಾಂತರಿಸಿಕೊಂಡು ಹಾಡುವುದನ್ನು ರೂಢಿಸಿದರು. ಶಿರಹಟ್ಟಿಯ ವೆಂಕೋಬರಾಯರು, ಕಂದಗಲ್ಲ ಹನುಮಂತರಾಯರು, ನಲವಡಿ ಶ್ರೀಕಂಠಶಾಸ್ತ್ರೀಗಳು ಮೊದಲಾದ ರಂಗ ನಾಟಕಕಾರರು ಮರಾಠಿ ಧಾಟಿಗಳನ್ನು ಅನುಸರಿಸಿ ಕೆಲವು ರಂಗ ಗೀತೆಗಳನ್ನು ರಚಿಸಿದರು”.[10] ಎಂದು ಡಾ. ಬಸವರಾಜು ಜಗಜಂಪಿ ಅವರ ಅಭಿಪ್ರಾಯ.

ಕನ್ನಡ ವೃತ್ತಿ – ರಂಗಭೂಮಿಯಲ್ಲಿ ಹೆಸರಾಂಥ ನಾಟಕ ಕಂಪನಿಯವರು ಗವಾಯಿಗಳನ್ನು ಕರೆಯಿಸಿ ತಮ್ಮ ಕಂಪನಿಯ ಕಲಾವಿದರಿಗೆ ಸಂಗೀತದ ಶಾಸ್ತ್ರೋಕ್ತ ಸಂಸ್ಕಾರ ನೀಡುತ್ತಿದ್ದರು. ಕಲಾವಿದರೆಲ್ಲರೂ ಆಯಾ ಪಾತ್ರಕ್ಕೆ ತಕ್ಕಂತೆ ಹಾಡುಗಳನ್ನು ಹಾಡಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಉತ್ತರ ಕರ್ನಾಟಕದ ಕಂಪನಿಯ ನಾಟಕಗಳನ್ನೆಲ್ಲ ಅವಲೋಕಿಸಿದಾಗ ಆ ಕಂಪನಿಯ ಹೆಸರುಗಳಲ್ಲಿ ಸಂಗೀತ ಶಬ್ದವು ಸೇರ್ಪಡೆಯಾಗಿದೆ. ಈ ಶೀರ್ಷಿಕೆಯನ್ನು ನೋಡಿಕೊಂಡಾಗ ರಂಗಭೂಮಿಯಲ್ಲಿ ರಂಗ ಗೀತೆಗಳಿಗೆ ಮತ್ತು ಸಂಗೀತಕ್ಕೆ ವಿಶೇಷವಾದ ಸ್ಥಾನಮಾನವಿತ್ತು. ಐತಿಹಾಸಿಕ ಪೌರಾಣಿಕ ನಾಟಕಗಳಲ್ಲಿ ಪ್ರಶ್ನೋತ್ತರ ಮಾಲಿಕೆಯಲ್ಲಿ ರಂಗ ಸಂಗೀತವು ಪ್ರವಾಹದಂತೆ ಹರಿದು ಬಂದಿರುವುದು ರಂಗಭೂಮಿಯ ಇತಿಹಾಸದಿಂದ ಸ್ಪಷ್ಟವಾಗುತ್ತದೆ.

ಆಧುನಿಕತೆ ಬೆಳೆದಂತೆಲ್ಲ ರಂಗಗೀತೆಗಳಿಗೆ ಮತ್ತು ಸಂಗೀತಕ್ಕೆ ಎಷ್ಟು ಮಹತ್ವ ಕೊಡಬೇಕೋ ಅಷ್ಟು ಮಹತ್ವ ಕೊಟ್ಟು ಸಾಹಿತ್ಯ ಮತ್ತು ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡದಂತಹ ಸಂದರ್ಭಗಳು ಕಂಡು ಬರುತ್ತದೆ. ಸಾಹಿತ್ಯ ಪ್ರಧಾನವಾದ ನಾಟಕಗಳಲ್ಲಿಯೂ ಕೂಡ ರಂಗಗೀತೆಗಳು ತನ್ನ ಹಿರಿಮೆಯನ್ನು ಕಾಯ್ದುಕೊಂಡು ಬಂದಿವೆ.

ಅದ್ಧೂರಿಯ ವಾದ್ಯ ಪರಿಕರಗಳ ನಡುವೆ ರಂಗಗೀತೆಗಳು ತನ್ನ ಮಾಧುರ್ಯವನ್ನು ಕಳೆದುಕೊಂಡಿತು. ಪ್ರಭಾವಿ ಮಾಧ್ಯಮಗಳ ಪ್ರಾಬಲ್ಯವು ಹೆಚ್ಚಾಯಿತು. ಚಿತ್ರಗೀತೆಗಳೇ ರಂಗಭೂಮಿಯನ್ನು ಅಲಂಕರಿಸಿಕೊಂಡವು. ಒಂದು ಜನಪದ ಪರಂಪರೆಯಿಂದ ಬೆಳೆದು ಬಂದ ಸಂಗೀತ ಅಯಾ ಕಾಲದ ಘಟ್ಟದಲ್ಲಿ ಪರಿವರ್ತನೆಯನ್ನು ಪಡೆಯುತ್ತ ತನ್ನ ಜೀವಂತಿಕೆಯನ್ನು ಕಾಯುದುಕೊಂಡಿದೆ.

ಸೀತಿಮನಿಯಲ್ಲಿ ಸಂಗೀತ ಪಾಠಶಾಲೆ

ಸೀತಿಮನಿ “ಧರ್ಮರ ಮಠ”ದಿಂದಾಗಿ ಪುಣ್ಯಕ್ಷೇತ್ರವಾಗಿ, ಧರ್ಮ ಜಾಗೃತಿಯ ಕೇಂದ್ರಬಿಂದುವಾಗಿ, ಸಂಸ್ಕೃತಿ ಸಂಪ್ರದಾಯಕ್ಕೆ ತನ್ನದೇ ಆದ ವಿಶಿಷ್ಟ ಕಾಣಿಕೆ ನೀಡಿರುವುದು, ಸೀತಿಮನಿಯಂಥ ಸಣ್ಣ ಗ್ರಾಮದಲ್ಲಿ ಮಹಾನ್ ಮಹಾನ್ ಸಾಧು – ಸಂತರು, ಸತ್ಪುರುಷರು ಬಾಳಿ ಬೆಳಗಿದ ಊರು ಸೀತಿಮನಿ”. ಈ ಮಹಾನ್ ಪುರುಷರ ತಪೋಭೂಮಿಯ ಸನ್ನಿಧಿಯಲ್ಲಿ ಬೇವೂರ ಬಾದಶಾಹ ಗವಾಯಿಗಳು ಮೈಮರೆತು ಹಾಡುತ್ತಿದ್ದರೇ ಜನಸ್ತೋಮವೆಲ್ಲಾ ಆ ಸಂಗೀತ ಮಾಧುರ್ಯಕ್ಕೆ ತಲೆದೂಗುತ್ತಿದ್ದರು. ಬೇವೂರು ಬಾದಶಹರು ಹಲವಾರು ವರ್ಷಗಳ ಕಾಲ ಸೀತಿಮನಿಯಲ್ಲಿಯೇ ಗಟ್ಟಿಯಾಗಿ ನೆಲೆನಿಂತರು. ಇವರು ಹಲವಾರು ವರ್ಷಗಳವರೆಗೆ ಸಂಗೀತ ಪಾಠಶಾಲೆಯನ್ನ ಪ್ರಾರಂಭಿಸಿ ಸಾಕಷ್ಟು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.

“ಬಾದಶಹ ನಿರಕ್ಷರಿಯಾಗಿದ್ದರೂ ಅಭಿಜಾತ ಕಲಾವಿದ ಪಿಯಾನೋ ಡೋಲಕ, ವೀಣಾ ವಾದ್ಯಗಳನ್ನು ನುಡಿಸುವದು, ಸುಶ್ರಾವ್ಯವಾಗಿ ಹಾಡುವುದು ಅದಕ್ಕೆ ಸಂಗೀತ ಸಂಯೋಜನೆ ಮಾಡುವುದು ನಟನೆ ನಿರ್ದೇಶನದಂತ ಜವಾಬ್ದಾರಿ ಕೆಲಸಗಳನ್ನು ಲಿಲಾಜಾಲವಾಗಿ ಮಾಡುತ್ತಲೇ ಬೆಳೆದ ಬಾದಶಹ ಉತ್ತಮ ದರ್ಜೆಯ ನಟ, ನೀರ್ದೆಶಕನೆಂದು ಸಾಬೀತು ಮಾಡಿದರು. ಅಲ್ಲಿಂದ ಬೇರೆ ಬೇರೆ ಊರುಗಳಲ್ಲಿ ನಡೆಯುವ ನಾಟಕಗಳಿಗೆ ನಿರ್ದೇಶನ, ಸಂಗೀತ ಸಂಯೋಜನೆ ಮಾಡುತ್ತ ಹತ್ತಾರು ತಂತ್ರ ನಾವಿನ್ಯತೆಯನ್ನು ಕಲಿತು ಕೊಂಡರು. ವ್ಯಕ್ತಿ ಬೆಳೆದಂತೆ ಆತನಲ್ಲಿ ಕಲೆಯೂ ಹದವರಿತು ವಿಕಸನಗೊಂಡಿತು. ಕಲೆಯ ಗುಂಗು ಆತನನ್ನು ಒಂದೆಡೆ ಇರಗೊಡಲಿಲ್ಲ. ಮನೆ ಮಾರು ಮರೆತು ಊರೂರು ಅಲೆಯ ಹತ್ತಿದರು. ಇದ್ದ ಒಬ್ಬ ಮಗ ಮುಪ್ಪಾವಸ್ಥೆಯಲ್ಲಿ ಆಸರೆಯಾಗುತ್ತಾನೆ ಎಂದು ಅಂದುಕೊಂಡಿದ್ದ ಚಾಂದಬಿಗೆ ಆ ವಿಶ್ವಾಸ ಇಲ್ಲವಾದಾಗ ಇದ್ದ ಮನೆಯನ್ನು ಮಾರಿ ತನ್ನ ಮಗಳ ಮನೆಗೆ ಹೋಗಿ ಕೊನೆಯುಸಿರೆಳೆದಳು”.[11] ಎಂಬುದು ಡಾ. ಬಿ. ಸಿ. ಹದ್ಲಿಯವರ ಹೇಳಿಕೆ.

ವಿವಿಧ ನಾಟಕ ಕಂಪನಿಗಳಿಗೆ ಅದ್ಭುತ ಸೇವೆ

ವಿವಿಧ ಕಲಾವಿದರು ತಾವೇ ಸ್ವತಃ ನಾಟಕ ಕಂಪನಿಗಳನ್ನು ಕಟ್ಟಿ ಕೈ ಸುಟ್ಟುಕೊಂಡಂತೆ ಬೇವೂರ ಬಾದಶಹರು ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಹಲವು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಇದ್ದರೂ ಕಂಪನಿಯ ಮಾಲೀಕರಾಗಿ ಮೆರೆಯುವ ಯೋಗ ಫಲಿಸಲೇ ಇಲ್ಲ. ಇವರನ್ನು ಅದ್ಭುತ ಕಲಾವಿದರೆಂದು ಜನ ಗುರ್ತಿಸಿದರು. ವಿಶ್ವಗುಣಾರ್ಹ, ವಾಣಿ – ವಿಲಾಸ, ಶ್ರೀರಂಜನೆ ಜಮಖಂಡಿ ಏಣಗಿ ಕಂಪನಿಗಳಲ್ಲಿ ಅದ್ಭುತ ರಂಗ ಸೇವೆಯನ್ನು ಸಲ್ಲಿಸಿದ ಕೀರ್ತಿ ಇದೆ.

ಸಂಗೀತ ದೀಕ್ಷೆ

ಖ್ಯಾತ ಕಲಾವಿದೆಯರಾದ ಅಮೀತ್‌ಬಾಯಿ ಮತ್ತು ಗೋಹರ್ ಜಾನ್ ಕರ್ನಾಟಕಿಯವರಿಗೆ ಬೇವೂರ ಬಾದಶಹ ಸಂಗೀತ ದೀಕ್ಷೆ ನೀಡಿದ್ದು ಸ್ಪಷ್ಟವಾಗಿದೆ. “ಅವರ ಸೋದರ ಮಾವ ಅಂದಿನ ಹಿಂದುಸ್ತಾನಿ ಸಂಗೀತಗಾರ ಬೇವೂರ ಬಾದಶಹ ಆಕೆಯಲ್ಲಿನ ಗಾಯನ ಪ್ರತಿಭೆಗೆ ಶಾಸ್ತ್ರೀಯ ಸ್ಪರ್ಶವನ್ನು ನೀಡಿದರು. ರಂಗಭೂಮಿಯಲ್ಲಿ ಅವರೀರ್ವರಿಗೂ ಸಿಕ್ಕ ಉತ್ತೇಜನದಿಂದ ಗವಾಯಿ ಬೇವೂರ ಬಾದಶಹರ ಪ್ರೋತ್ಸಾಹದ ಪರಿಣಾಮ ನಾಟಕದ ಕಂಪನಿಯೊಂದನ್ನು ಆರಂಭಿಸಿದರು. ಅವರ ಕಂಪನಿಗಳಿಗೆ ಸಂಗೀತ ನಾಟಕಗಳದ್ದೇ ಪ್ರಧಾನ ಆಕರ್ಷಣೆ. ಬೇವೂರ ಬಾದಶಹರಂಥ ಶ್ರೇಷ್ಠ ಗವಾಯಿಗಳು ನಟರಾಗಿ ಹಾಗೂ ಗಾಯಕರಾಗಿ ಈ ಕಂಪನಿಗೆ ಬೆನ್ನೆಲುಬಾಗಿ ನಿಂತರು”.[12] ಎಂಬುದು ದ. ರಾ. ಪುರೋಹಿತರ ಅಭಿಪ್ರಾಯವಾಗಿದೆ.

“ಗುರು ಸೇವಾ ಸಂಗೀತ ನಾಟಕ ಮಂಡಳಿ ಸಂಸ್ಥಾನ ಕಿತ್ತೂರು” ಪ್ರಾರಂಭಿಸಿದೆವು ಮೊದಲ ನಾಟಕವಾಗಿ “ಬಿ. ಎ” ಆಡಿದೆವು. ಅನಂತರ “ಕಿತ್ತೂರು ರುದ್ರಮ್ಮ”, “ಅಸ್ಪ್ರಶ್ಯತಾ ನಿವಾರಣೆ” ಪ್ರದರ್ಶನಗೊಂಡವು. ಬೇವೂರು ಬಾದಶಹಾ ಗವಾಯಿಗಳು “ಅಸ್ಪ್ರಶ್ಯತಾ ನಿವಾರಣೆ”ಯಲ್ಲಿ ಬಸವೇಶ್ವರನ ಪಾತ್ರ ಮಾಡುತ್ತಿದ್ದರು. ನನ್ನದು ಹರಿಜನ ಕನ್ಯೆಯ ಪಾತ್ರ.

ಗುರುಸೇವಾ ಸಂಗೀತದ ಕಂಪನಿಯಲ್ಲಿರುವಾಗಲೇ ಸಂಗೀತದ ಶಾಸ್ತ್ರೀಯ ಜ್ಞಾನ ಹೇಳಿಕೊಡುವ ಗುರುವನ್ನು ಪಡೆದ ನನಗೆ ದೇಹಸಿರಿಯ ಜೊತೆಗೆ ಕಂಠಸಿರಿಯು ದೈವದತ್ತವಾಗಿ ಬಂದಿತ್ತು. ಅದುವರೆಗೆ ಅನುಕರಣೆಯಿಂದಲೇ ರಂಗಗೀತೆಗಳನ್ನು ಹಾಡುತ್ತಿದ್ದೆ. ಬೆಳಗಾವಿ ಸಮೀಪದ ಕುಡಚಿಯಲ್ಲಿ ಕ್ಯಾಂಪ್ ಮಾಡಿದಾಗ ಒಬ್ಬ ಗವಾಯಿಗಳು ನಾಟಕಕ್ಕೆ ಬಂದಿದ್ದರು. ನನ್ನದು ಹೇಮರೆಡ್ಡಿ ಮಲ್ಲಮ್ಮನ ಪಾತ್ರ. ಗವಾಯಿಗಳು ಮೆಚ್ಚುಗೆ ಸೂಚಿಸಬಹುದೆಂದು ಹಾಡುವಾಗಲೆಲ್ಲ ಅವರ ಕಡೆಗೆ ನೋಡುತ್ತಿದ್ದೆ. ಯಾವ ಪ್ರತಿಕ್ರಿಯೆ ಇರಲಿಲ್ಲ. ಆದರೆ ಮಲ್ಲಿಕಾರ್ಜುನ ಪಾತ್ರದಲ್ಲಿದ್ದ ಭಾಷಾ ಸಾಹೇಬರು ಹಾಡಿದಾಗ ತಲೆದೂಗುತ್ತ ಮೆಚ್ಚುಗೆ ಸೂಚಿಸಿದರು. ಗವಾಯಿಗಳ ಈ ಪ್ರತಿಕ್ರಿಯೆ ನನಗೆ ಒಗಟಾಯಿತು. ಮರುದಿನ ಭಾಷಾ ಸಾಹೇಬರನ್ನು ಹೀಗೇಕೆಂದು ಕೇಳಿದೆ. ಅವರು “ನೀನು ಚೆನ್ನಾಗಿ ಹಾಡುವಿ ಆದರೆ ರಾಗ – ತಾಳದಲ್ಲಿ ಶಾಸ್ತ್ರೀಯ ಜ್ಞಾನದ ಕೊರತೆ ಇರುತ್ತದೆ. ಆದ್ದರಿಂದ ಅವರು “ಯಾರು ನಿನ್ನ ಹಾಡಿಗೆ ಮೆಚ್ಚುಗೆ ತೋರಿಸಲಿಲ್ಲವೋ ಅವರಿಂದಲೇ ಮೆಚ್ಚುಗೆ ಬರುವಂತೆ ಸಾಧನೆ ಮಾಡು ಎಂದರು. ಇಬ್ಬರೂ ಮಿರಜಕ್ಕೆ ಹೋಗಿ ಎರಡು ತಂಬೂರಿಗಳನ್ನು ತಂದೆ. ಬಾದಶಹಾ ಗುರುಗಳಿಂದಲೇ ಸಂಗೀತದ ಪ್ರಾಥಮಿಕ ಪಾಠ ಆರಂಭವಾಯಿತು. ರಂಗಕ್ಕೆ ತಕ್ಕಷ್ಟು ಶಾಸ್ತ್ರೀಯ ಜ್ಞಾನ ಸಂಪಾದಿಸಿದೆ. ಮುಂದೊಮ್ಮೆ ಅಲಕ್ಷ್ಯ ಮಾಡಿದ್ದ ಗವಾಯಿಗಳಿಂದಲೇ ಮೆಚ್ಚುಗೆ ಪಡೆದೆ. ಹಿಂದೊಮ್ಮೆ ಕೇಳಿದಾಗ ಹಾಡುವವನಲ್ಲ ಎಂದು ತಿಳಿದಿದ್ದೆ. ಈಗ ಕೇಳಿದರೆ “ನೀನು ಹಾಡುವವನೆ, ಚೆನ್ನಾಗಿ ಹಾಕಿದೆ” ಎಂದು ಗವಾಯಿಗಳು ಬೆನ್ನುತಟ್ಟಿ ಹಾರೈಸಿದರು. ಅಂದು ರಂಗಭೂಮಿಯ ಮತ್ತೊಂದು ಪದವಿ ಪಡೆದುಕೊಂಡಂಥ ಧನ್ಯತೆ ನನ್ನದಾಗಿತ್ತು.”[13] ಎಂದು ನಾಟ್ಯಭೂಷಣ ಏಣಗಿ ಬಾಳಪ್ಪನವರು ಬಾದಶಹರನ್ನು ಸ್ಮರಿಸುತ್ತಾರೆ.

ಬೇವೂರ ಬಾದಶಹರು ರಂಗಭೂಮಿಯ ಸಂಗೀತದಲ್ಲಿ ಅಮೀರ್‌ಬಾಯಿ, ಹಾಗೂ ಗೋಹರ್‌ ಜಾನ್ ಕರ್ನಾಟಕಿ ಮತ್ತು ಏಣಗಿ ಬಾಳಪ್ಪರಂಥ ಮೇರು ಪ್ರತಿಭೆಗಳನ್ನು ಸೃಷ್ಟಿಸಿ ರಂಗಭೂಮಿಗೆ ಕಾಣಿಕೆಯಾಗಿ ಕೊಟ್ಟಿರುವುದು ಹಲವು ಉಲ್ಲೇಖದಿಂದ ಸ್ಪಷ್ಟವಾಗುತ್ತದೆ. ಬೇವೂರ ಬಾದಶಹರಿಂದ ಸಂಗೀತದೀಕ್ಷೆ ಪಡೆದ ಈ ಮಹಾನ್ ಕಲಾವಿದರಲ್ಲಿ ಈಗ ನಮ್ಮ ಕಣ್ಮುಂದೆ ಇರುವವರು ಏಣಗಿ ಬಾಳಪ್ಪನವರು ಮಾತ್ರ.

ಶಿಷ್ಯರ ಬಳಗ

ಬಾದಶಹರ ಶಿಷ್ಯ ವರ್ಗ ಅಪಾರವಾಗಿತ್ತು ಎಂಬುದು ತಿಳಿದುಬರುತ್ತದೆ. ಶ್ರೇಷ್ಠ ನಟರನ್ನು ಗವಾಯಿಗಳನ್ನು ನೀಡಿದ ಕೀರ್ತಿ ಬಾದಶಹರಿಗೆ ಸಲ್ಲುತ್ತದೆ. ನಾಡೋಜ ಏಣಗಿ ಬಾಳಪ್ಪ, ನೃತ್ಯ ಕಲಾವಿದೆಯರಾದ ಅಮೀರ್‌ಬಾಯಿ ಮತ್ತು ಗೋಹರ್‌ ಜಾನ್ ಕರ್ನಾಟಕಿ ಸಹೋದರಿಯರು ಹಾರ‍್ಮೋನಿಯಂ ಪಟು ಕಮತಗಿ ಹನುಮಂತಪ್ಪ ಮಾಸ್ತರು, ಬಿಜಾಪುರದ ಹೆರಕಲ್ಲು ಬಸಪ್ಪ ವೀರಭದ್ರಪ್ಪ ಪಟ್ಟಣಶೆಟ್ಟಿ, ಬಾದಾಮಿಯ ಸಾಖರೆ ಅದೃಶ್ಯಪ್ಪ ಖಟವಟೆ, ಲಾಠಿಗುಂಡಪ್ಪ, ಚಂದಪ್ಪ, ಧೋತರೆ, ಹೂವಿನ ಹಡಗಲಿ ವೀರಭದ್ರಪ್ಪ, ಡಿ. ದುರ್ಗಾದಾಸ್, ಸೂಳಿಬಾವಿಯ ಗೈಡರ ಬಸಪ್ಪ, ಯಮನಪ್ಪ ಪೂಜಾರಿ, ಆರ್. ಎಚ್. ಮೋರೆ ಹಾಗೂ ಬೇವೂರಿನ ಕಲಾವಿದರಾದ ಹನುಮಪ್ಪ ಮಾಗನೂರ, ಹುಗಾರ ಸಹೋದರರು, ಅಯ್ಯಪ್ಪ ಮಠಪತಿ, ಪಡದಯ್ಯ ಹಿರೇಮಠ, ಹುಚ್ಚಯ್ಯ ಮಳೀಮಠ, ಇನ್ನು ಅಸಂಖ್ಯಾತ ಕಲಾವಿದರ ಹೆಸರು ಕಣ್ಮರೆಯಾಗಿರಬಹುದು. ಏಣಗಿ ಬಾಳಪ್ಪ ಹಾಗೂ ಮಲ್ಲಿಕಾರ್ಜುನ ಮನ್ಸೂರ ಅವರಿಗೆ “ಮಲ್ಲು – ಬಾಳು” ಎಂದೇ ಪ್ರೀತಿಯಿಂದ ಬಾದಶಹರು ಕರೆಯುತ್ತಿದ್ದರು, ಹೈದ್ರಾಬಾದ್‌ದಲ್ಲಿಯೂ ಕೂಡಾ ಇವರ ಶಿಷ್ಯ ಪರಂಪರೆ ಅಗಣಿತ.

[1] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೭೨

[2] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೭೩ – ೭೪

[3] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೭೬

[4] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೭೭

[5] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೮೬

[6] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೮೯

[7] ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು, ಪುಟ.೧೨೧

[8] ಡಾ.ಎಚ್.ಕೆ. ರಂಗನಾಥ, ಕರ್ನಾಟಕ ರಂಗಭೂಮಿ, ಪುಟ. ೨೮೨

[9] ಗುಬ್ಬಿ ವೀರಣ್ಣ, ಕಲೆಯೇ ಕಾಯಕ, ಪುಟ. ೧೫ – ೧೬

[10] ಡಾ. ಬಸವರಾಜ ಜಗಜಂಪಿ, ಗರೂಡ ಸದಾಶಿವರಾಯರು, ನಾಟಕ ಸಾಹಿತ್ಯ ಹಾಗೂ ವೃತ್ತಿ ರಂಗಭೂಮಿ ಅಧ್ಯಯನ, ಪುಟ.೧೮೫ – ೧೮೬

[11] ಡಾ. ಬಿ.ಸಿ. ಹದ್ಲಿ, ಬೇವೂರಿನ ಅಪರೂಪದವರು, ಪುಟ.೬೯ – ೭೦

[12] ದ.ರಾ.ಪುರೋಹಿತರ ಲೇಖನ ಪ್ರಜಾವಾಣಿ ಪತ್ರಿಕೆ – ಸುಶ್ರಾವ್ಯ ಕಂಠದ ಶೃಂಗಾರ ಪಾತ್ರ

[13] ಹುನ್ನಾರ ಹೊನ್ನು ಸ್ಮರಣ ಸಂಪುಟ, ನಾಟ್ಯಭೂಷಣ ಏಣಗಿ ಬಾಳಪ್ಪ