ಜ್ವರ ಬಂದವರೊಲು ಪರಿತಪಿಸುತ್ತಿವೆ
ಸುತ್ತಲು ತರು ಮರ ಸಂಸಾರ,
ನಕ್ಷತ್ರಾಗ್ನಿಯ ಚಿತೆಯೊಳು ನಡೆದಿದೆ
ಗಾಳಿಯ ಶವ ಸಂಸ್ಕಾರ.

ಮೌನದ ಪ್ರಪಾತದಾಳಕೆ ಬಿದ್ದಿದೆ
ಉಸಿರಿಲ್ಲದ ಸದ್ದು.
ಪಹರೆ ನಿಂತ ಈ ಬೀದಿ ದೀಪಗಳೊ
ಕೆಂಗಣ್ಣಿನ ಹದ್ದು.

ದೇಹಾದ್ಯಂತವು ನರನರವೂ
ಬೆಂಕಿಯ ಹೊಳೆ-ನಾಲೆ.
ಉರಿ-ಶೆಖೆ ಬೆಳೆ ಸಮೃದ್ಧವಾಗಿದೆ
ತೆನೆ ತೆನೆಗಳ ಜ್ವಾಲೆ.

ಸಾಸಿರ ಚಿಕ್ಕೆಯ ಉರಿ ಬಲೆಗಿಂತಲು
ಒಬ್ಬ ರವಿಯ ಹಗಲು,
ಎಷ್ಟೋ ತಂಪೆನಿಸಿದೆ, ಬರಬಾರದೆ
ಮತ್ತೆ ಹಗಲ ಹೊನಲು.