ಬೆಳಗಾಗ ಬಾನಿನ ತುಂಬ ಚಿನ್ನದ ಚೆಲುವು,
ನಿಂತ ಬೆಟ್ಟದ ಮೇಲೆ ಬೆಳ್ಳಿ ಸೆರಗು
ಚಿಗುರು ಹೂವನು ತುಂಬಿ ಹೊರೆಯಾದ ಮರ ಮರದ
ಮೈತುಂಬ ಕಣ್ತೆರೆದು ನಗುವ ಬೆರಗು !

ಬೆಂಕಿಯಂಗಾಲಿಟ್ಟು ಬಂದ ಬಿಸಿಲಿನ ಕಂದ,
ಹುಟ್ಟಿದೊಡನೆಯೆ ಸಿಡುಕು, ಕೋಪ ತಾಪ !
ಮನೆಯಂಗಳದ ಹೂವಿನ ಮೇಲೆ ಕೆಂಡವ ಸುರಿದ
ಧಗೆಯ ಕುದುರೆಯನೇರಿ ಪಯಣ ಹೊರಟ.

ಹಗಲೆಲ್ಲ ತೆಂಗಿನ ಮರದ ದಿಂಡಿನ ಮೇಲೆ ಕಿರಲುವ ಅಳಿಲು,
ತಗಡುದನಿಯಲಿ ಅರಚಿ ಕರೆವ ಕಾಗೆ ;
ಮೈಮೇಲೆ ಎಲ್ಲೆಂದರಲ್ಲಿ ಕೂತು ಕಾಡಿ ಪೀಡಿಸುವ ನೊಣ,
ಒಂದೇ ಸಮನೆ ನೀಲಿಯಲಿ ಗಿರ್ಕಿ ಹೊಡೆಯುವ ಹದ್ದು.

ನೀರಿರದೆ ಗೊಕ್ಕೆಂದು ಬಿಕ್ಕುವ ಬೀದಿಯ ನಲ್ಲಿ,
ರಣಬಿಸಿಲಲ್ಲಿ ಬೊಬ್ಬೆ ಹೊಡೆಯುವ ನಾಯಿ.
ಮನೆಯಂಗಳದ ಹಸುರಿನ ಕಡೆಗೆ ತುಡುಗುದನಗಳ ಗೊರಸು,
ಸತ್ತ ಎಲೆಗಳನೆತ್ತಿ ಅಲೆವ ಗಾಳಿ.

ನಡುಹಗಲಿಂದ ಸಂಜೆಯ ಕಡೆಗೆ ಬೇಗೆಯ ಹೆಜ್ಜೆ,
ನಲ್ಲಿಯಲ್ಲೂ ಕೊನೆಗೆ ನೀರು ಬಂತು.
ಬಟ್ಟೆಯೊಗೆಯುವ, ಪಾತ್ರೆಯುಜ್ಜುವ ಸದ್ದು ಹಿತ್ತಿಲ ಕಡೆಗೆ
ಟೀ ಕಪ್ಪುಗಳ ಸದ್ದು ಬಳೆಯ ಜೊತೆಗೆ

ಬತ್ತಿರುವ ಕೆರೆಯಂಚಿನಲಿ ಕೊಂಚವೆ ನೀರು,
ಒಂದೆರಡು ಬೆಳ್ಳಕ್ಕಿ, ಮೀನು, ಕಪ್ಪೆ.
ಗತವೈಭವದ ಸ್ಮೃತಿಗೆ ಚ್ಯುತಿಯಿರದ ಮರ್ಯಾದೆ,
ಹಿಂದೊಮ್ಮೆ ತುಂಬಿದ್ದು ತನ್ನ ತಪ್ಪೆ ?

ಕಡೆಗು ಲಾಯಕ್ಕೆ ಧಾವಿಸಿತು ಕಿಚ್ಚಿನ ಕುದುರೆ,
ಪಡುವಣದ ಬಾನೆಲ್ಲ ಅವರ ಕೆನೆತ !
ಬಾನಂಚಿನಲಿ ಮೆಲ್ಲನೆ ಹೊಂಚುವ ಮಿಂಚು
ಸಫಲವಾದರೆ ಸಾಕು ಮಳೆಯ ಸಂಚು.

ವಿಫಲವಾಯಿತು ಕಡೆಗು ಮಳೆಯ ರಾಜ್ಯಕ್ರಾಂತಿ,
ಮತ್ತೆ ಬಾನಿನ ತುಂಬ ಸಿಡುಕು ಚಿಕ್ಕೆ.
ತೆಂಗು ಗರಿಗಳ ಮೇಲೆ ಶೂಲವೇರಿದೆ ಗಾಳಿ,
ಪಹರೆ ನಡಿಸುತ್ತಲಿದೆ ಧಗೆಯ ರೆಕ್ಕೆ !