ಮಿಡಿಮಾವಿನ ಉತ್ಸವ ಸಂಘಟಿಸಿದ ಬಳಿಕ ವಿಶೇಷ ಜಾತಿಯ ಮಿಡಿಮಾವಿನ ತೋಟ ಬೆಳೆಸುವ ಕನಸು. ದಿನವಿಡೀ ಬಿಸಿಲು ಬೀಳುವ  ಸೊಪ್ಪಿನ ಬೆಟ್ಟದ ತುತ್ತ ತುದಿಯಲ್ಲಿ ಗಿಡಗಳಿಗೆ ಆಶ್ರಯ ಕಲ್ಪಿಸಿದೆ. ಎರಡಡಿ ಅಗಲ, ಎರಡೂವರೆ ಅಡಿ ಆಳದ ಕುಳಿ ತೆಗೆದು ಮಳೆಗಾಲದಲ್ಲಿ ಸಸಿ ನಾಟಿ ಮಾಡಿದೆವು. ನಮ್ಮ ಮಲೆನಾಡಿನಲ್ಲಿ ಮಳೆ ನೀರು ಸುಮಾರು ಆರು ತಿಂಗಳು ಗಿಡ ಬೆಳೆಯಲು ನೆರವಾಗುತ್ತದೆ. ನರ್ಸರಿಯಲ್ಲಿ ಬೆಳೆಸಿದ ಕಸಿಗಿಡಗಳಿಗೆ ತಾಯಿ ಬೇರು ಅಂಕುಡೊಂಕು, ನೇರಕ್ಕೆ ಭೂಮಿ ಆಳಕ್ಕೆ ಇಳಿಯುವದಿಲ್ಲ! ಹೀಗಾಗಿ ಚಳಿಗಾಲದ ಆರಂಭದಿಂದ ನೀರಾವರಿ ಅವಲಂಬನೆ. ವಾರಕ್ಕೆ ೨೦-೨೫ಲೀಟರ್ ನೀರು ನೀಡಿದರೆ ಮಾತ್ರ ಗಿಡ ಬದುಕುವ ಬೋಳು ಗುಡ್ಡ, ನೀರು ಹಾಕಿದರೆ ಗಿಡಕ್ಕೆ ಪ್ರಯೋಜನವಾಗುವದಕ್ಕಿಂತ ಬಿಸಿಲಿನ ಪ್ರಖರತೆಗೆ ಆರುವದೇ ಹೆಚ್ಚು.   ಇದನ್ನು ತಡೆಯಲು ಗಿಡ ನಾಟಿ ಸಮಯದಲ್ಲಿ  ಗುಂಡಿ ಪೂರ್ತಿ ಮಣ್ಣು ಹಾಕಲಿಲ್ಲ,  ಗಿಡದ ಬುಡ ಮುಚ್ಚಿದ ಬಳಿಕವೂ ಒಂದೂವರೆ ಅಡಿ ಆಳ ಹಾಗೇ ಬಿಟ್ಟು ಗಿಡದ ಬುಡದ ಸುತ್ತ ಮತ್ತೆ ಒಣ ಎಲೆ, ಸೊಪ್ಪು, ಹುಲ್ಲು, ಒಣಕಟ್ಟಿಗೆ  ಮುಚ್ಚಿಗೆಮಾಡಿ ಮೇಲ್ಗಡೆ ಪುನಃ ಎರಡಡಿ ಮಣ್ಣು ಹಾಕಿದೆವು. ಬೇಸಿಗೆಯಲ್ಲಿ ಗಿಡ ಬುಡದ ಮಣ್ಣಿನ ತೇವಾಂಶ ಆರದಂತೆ ಮಳೆಗಾಲದ ಕೊನೆಯಲ್ಲಿ ಅನುಸರಿಸಿದ ಸರಳ ತಂತ್ರ  ಇದು. ಈಗ ತಿಂಗಳಿಗೆ ಒಮ್ಮೆ ೨೫ ಲೀಟರ್  ಮಾತ್ರ ನೀರು ನೀಡುತ್ತೇವೆ, ವಿವಿಧ ಜಾತಿಯ ೬೦ ಮಾವಿನ ಗಿಡಗಳು ಬದುಕಿ ಚೆನ್ನಾಗಿ ಬೆಳೆದಿವೆ. ಟೊಂಗೆಗಳ ಬೆಳವಣಿಗೆ ಗಮನಿಸಿದರೆ ಒಂದು ವರ್ಷದ ಸಸಿ ಬೆಳವಣಿಗೆ  ಅಚ್ಚರಿಪಡುವಂತಿದೆ.

ಧಾರವಾಡ ಸುರಶೆಟ್ಟಿಕೊಪ್ಪದಲ್ಲಿ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ರೈತರು ಹಣ್ಣು ಹಂಪಲಿನ ತೋಟ ಬೆಳೆಸಿದ್ದಾರೆ. ನೀರಿಲ್ಲದೇ ಗಿಡ ಬೆಳೆಸುವ ವಿಧಾನ ಅಲ್ಲಿ ಕಲಿತಿದ್ದೇನೆ.  ಒಮ್ಮೆ  ಕೃಷಿ ವಿಧಾನ ಪರಿಚುಸುತ್ತಿದ್ದ ಮುಖ್ಯ ಕಾರ್ಯಕ್ರಮ ಸಂಯೋಜಕ ಡಾ. ಪ್ರಕಾಶ್ ಭಟ್  ಇದು ‘Ring Trench With Biomass’ ವಿಧಾನವೆಂದು ಗಮನ ಸೆಳೆದರು. ಮಳೆಗಾಲದಲ್ಲಿ ಸಸಿ ನಾಟಿ ಬಳಿಕ ಗಿಡದ ಸುತ್ತ ಒಂದೂವರೆ ಅಡಿ ಆಳ, ಒಂದೂವರೆ ಅಗಲದ ಕಾಲುವೆ ತೆಗೆದು ಅದರಲ್ಲಿ ತೆರಕು, ಸೊಪ್ಪು, ಹುಲ್ಲು ,ಕೃಷಿ ತ್ಯಾಜ್ಯಗಳನ್ನು ಭರ್ತಿ ಮಾಡಿ ಮಣ್ಣು ಮುಚ್ಚಲಾಗುತ್ತದೆ. ತೇವಾಂಶ ರಕ್ಷಣೆ, ಸಸ್ಯದ ಬೇರಿನ ಉಸಿರಾಟಕ್ಕೆ  ಇದು ಅನುಕೂಲ. ಜಲಕ್ಷಾಮದ ಬಯಲು ಭೂಮಿಯಲ್ಲೂ ನೀರಿನ ಅಗತ್ಯವಿಲ್ಲದೇ ಗಿಡ ಬೆಳೆಯುತ್ತದೆಂದು ಪ್ರಾತ್ಯಕ್ಷಿಕೆ ಸಹಿತ ಪ್ರಕಾಶ್ ಭಟ್ ವಿವರಿಸಿದ್ದರು.  ಕಳೆದ ಕ್ರಿ.ಶ. ೨೦೦೨-೦೩ರ ಬರಗಾಲದಲ್ಲಿ ಸುರಶೆಟ್ಟಿಕೊಪ್ಪದ ಹೊಲದ ಸಸಿಗಳು ಹಸಿರು ನಗೆ ಬೀರುತ್ತಿದ್ದವು! ಇಲ್ಲಿನ ೫೦೦ ಕುಟುಂಬಗಳು ಚಿಕ್ಕು, ಮಾವು, ಪೇರಲೆ ಜಾತಿಯ ೨೦,೦೦೦ ಸಸಿಗಳನ್ನು  ಹೊಲದಲ್ಲಿ ಇದೇ ವಿಧಾನದಲ್ಲಿ  ನಾಟಿ ಮಾಡಿ ಗೆದ್ದಿದ್ದರು. ಇವುಗಳಲ್ಲಿ ನೂರಕ್ಕೆ ನೂರು ಸಸಿಗಳು ಈಗ ಬೆಳೆದು ಮರವಾಗಿ ಫಲ ನೀಡುತ್ತಿವೆ. ಹಾಸನದಲ್ಲಿ ರೈತರೊಬ್ಬರು ಹಿಪ್ಪು ನೇರಳೆ ಬೆಳೆಯಲು ಈ ಕ್ರಮ ಅನುಸರಿಸಿದ್ದರಂತೆ, ಇದನ್ನು ಬೈಫ್‌ನವರು ಕಳೆದ ೨೦೦೧ರಲ್ಲಿ ಸುರಶೆಟ್ಟಿಕೊಪ್ಪದಲ್ಲಿ ತೋಟಗಾರಿಕೆಯಲ್ಲಿ ಪ್ರಪ್ರಥಮವಾಗಿ ಪ್ರಯೋಗಿಸಿದರು. ತೋಟ ಬರ ನಿರೋಧಕವಾಯಿತು, ಅಂತರ್ಜಲ ಉಳಿದು ಬಡವರ ನೆಲದಲ್ಲಿ ಕಡಿಮೆ ವೆಚ್ಚದಲ್ಲಿ ತೋಟಗಾರಿಕೆ ಯಶಸ್ಸಿಯಾಯಿತು.

ಈಗ ಬೇಸಿಗೆಯ ಬಿಸಿಲು  ಎಲ್ಲೆಡೆ ತೀವ್ರವಾಗುತ್ತಿದೆ.ನೆಲದ ತೇವ ಆರುತ್ತ ಭೂಮಿು ಬಿಸಿ ಹೆಚ್ಚುತ್ತಿದೆ. ನಿಮ್ಮ ಜಮೀ ುನಿನಲ್ಲಿ  ಕಳೆದ ಮಳೆಯಲ್ಲಿ  ನೀವು ನೆಟ್ಟ ಸಸಿಗಳು ಏನಾದವು ? ನೋಡಬೇಕು. ಅಬ್ಬರದ ಮಳೆ ಸುರಿದು ನೋಡಿದಲ್ಲೆಲ್ಲ ನೀರು ಕಾಣುತ್ತಿದ್ದ ಹೊತ್ತಿನ  ಉತ್ಸಾಹದಲ್ಲಿ ಸಸಿ ನೆಟ್ಟು ಮರೆತಿರಬಹುದು! ನೆಟ್ಟ ಗಿಡಗಳ ಸುತ್ತ ಪುಟ್ಟ ಅವಲೋಕನ ಮಾಡಿದರೆ  ಅಲ್ಲಿ ಸಾವಿನ ಮನೆಯ ಪಂಚನಾಮೆ!. ಒಣಗಿವೆ, ಬಾಡಿವೆ, ಅರ್ಧ ಸತ್ತಿವೆ, ಇನ್ನೇನು ಸಾವಿ ನ ದಾರಿಯಲ್ಲಿ ಹಲವು ನಿಂತಿವೆ ಎನ್ನುವಂತೆ ಸಸಿಗಳ ಪರಿಸ್ಥಿತಿ. ಗಿಡವೊಂದಕ್ಕೆ ನೂರಾರು ರೂಪಾಯಿ ತೆತ್ತು  ಮಾವು, ಹಲಸು, ಚಿಕ್ಕು, ಪೇರಲೆ ಹೀ ಗೆ ತರತರಹದ ಸಸಿ ಪ್ರತಿ ವರ್ಷ ನೆಡುತ್ತೇವೆ. ‘ನಮ್ಮನ್ನೇಕೆ ನಿಮ್ಮ ಜಮೀುನಿಗೆ ತಂದು ನೀರು-ನೆರಳಿಲ್ಲದೇ ಕ್ರೂರ ಶಿಕ್ಷೆ  ವಿಧಿಸಿದ್ದೀರಿ?’ ಎದೆಗೆ ನಾಟುವಂತೆ  ನೆಟ್ಟ ಸಸಿಗಳ ನೇರ ಪ್ರಶ್ನೆಗಳಿವೆ.

ಸಸಿ ನೆಡುವದಕ್ಕಿಂತ ಸಸಿ  ಉಳಿಸುವ ತಂತ್ರ ಮುಖ್ಯವಾದುದು. ಬೇಸಿಗೆ ಬರ ಎದುರಿಸಿ ಗಿಡ ಬೆಳೆಸುವ ಮಾರ್ಗದಲ್ಲಿ ನೆಲದ ತೇವಾಂಶ ರಕ್ಷಣೆಗೆ ಮಹತ್ವವಿದೆ. ಮಣ್ಣಿನ ತೇವ ಆರದಂತೆ ಹುಲ್ಲು, ಸೊಪ್ಪು, ತೆರಕುಗಳ ಮುಚ್ಚಿಗೆ ಪರಿಣಾಮಕಾರಿ ಎಂಬುದನ್ನು  ಪರಂಪರೆ ವಿಧಾನಗಳು  ಸಾರುತ್ತವೆ. ಸುರಶೆಟ್ಟಿಕೊಪ್ಪದಲ್ಲಿ ಬೈಫ್ ನೇತ್ರತ್ವದಲ್ಲಿ ಬೆಳೆಸಿದ  ರೈತರ ತೋಟಗಳಂತೂ ಕೃಷಿ ಗೆಲ್ಲಿಸುವ ಸರಳ ಮಾರ್ಗ ಕಲಿಸುವ ಪಾಠ ಶಾಲೆಗಳಂತಿವೆ.