ಪೀಠಿಕೆ

‘ಭಾಷೆ’ ಎನ್ನುವುದು ಮಾನವನು ತನ್ನ ಭಾವನೆಗಳನ್ನು ಅಭಿವ್ಯಕ್ತಿಸಲು ಕಂಡಕೊಂಡ ಮಾಧ್ಯಮ. ಭಾಷೆಯನ್ನು ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಕೇವಲ ಅಭಿವ್ಯಕ್ತಿ ಮತ್ತು ಸಂವಹನದ ಮಾಧ್ಯಮವಾಗಿ ಕಾರ್ಯನಿರ್ವಹಿಸದೇ; ಭಾಷಾ ಭಿನ್ನತೆ, ಪ್ರಾದೇಶಿಕತೆ, ಲಿಂಗತಾರತಮ್ಯ, ವರ್ಗಾಧಾರಿತವಾಗಿ, ಜಾತಿಯಾಧಾರಿತವಾಗಿ, ಶ್ರಮಾಧಾರಿತವಾಗಿ ಈ ಮೊದಲಾದ ಸಂಗತಿಗಳನ್ನು ಗರ್ಭೀಕರಿಸಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಭಾಷಿಕ ಅಧ್ಯಯನವೆಂದರೆ ಅದು ಕೇವಲ ಅಕ್ಷರ ರಚನೆಯ ಅಥವಾ ಪದಗಳ ರಚನೆಯ ಅಧ್ಯಯನವಾಗಿರುವುದಿಲ್ಲ. ಅದೊಂದು ಸಾಮಾಜಿಕವಾದ, ಸಾಂಸ್ಕೃತಿಕವಾದ ಆಧ್ಯಯನವೇ ಆಗಿರುತ್ತದೆ. ಭಾಷೆಯನ್ನು ಬಳಸುವಾಗ ಪ್ರಾದೇಶಿಕವಾಗಿ, ಶೈಕ್ಷಣಿಕವಾಗಿ, ಲಿಂಗಾಧಾರಿತವಾಗಿ ವ್ಯತ್ಯಾಸಗಳು ಇರುವುದನ್ನು ಕಾಣಬಹುದಾಗಿದೆ. ಸ್ತ್ರೀ ಮತ್ತು ಪುರುಷರು ಬಳಸುವ ಭಾಷೆಯಲ್ಲಿ ವ್ಯತ್ಯಾಸಗಳು ಕಾಣಬಂದರೂ ಸಹ ಭಾಷೆಗೆ ಈ ಬೇಧಗಳು ಇರುವುದಿಲ್ಲ. ಆದರೆ ಅಧ್ಯಯನದ ಅನುಕೂಲಕ್ಕಾಗಿಯೋ, ಸಾಮಾಜಿಕ ಆಯಾಮಗಳನ್ನು ಸೂಕ್ಷ್ಮವಾಗಿ ಗುರುತಿಸುವುದಕ್ಕಾಗಿಯೋ ನಾವು ಭಾಷೆಯಲ್ಲಿ ಸ್ತ್ರೀ ಭಾಷೆ ಮತ್ತು ಪುರುಷ ಭಾಷೆ ಎಂದು ವರ್ಗೀಕರಣ ಮಾಡಿಕೊಂಡಿರುತ್ತೆವೆ. ಈ ಬಗೆಯ ವರ್ಗೀಕರಣವೂ ಏಕಪಕ್ಷೀಯವಾಗಿದ್ದು; ಕೆಲವೊಮ್ಮೆ ಅಸಮಂಜಸವೂ ಎನಿಸಬಹುದು. ಹಾಗಾಗಿ ಈ ಬಗೆಯ ವರ್ಗೀಕರಣದ ಹಿಂದಿರುವ ಪುರುಷ ಮನೋಧರ್ಮದ ರಾಜಕಾರಣವನ್ನು ಬೈಗುಳುಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ನಂತರ ಭಾಷಿಕ ರಚನೆ ಬಳಕೆಗೊಳ್ಳುವ ಸಂದರ್ಭದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಮೌಲ್ಯಗಳು ಕೆಲಸ ಮಾಡಿರುತ್ತವೆ ಎನ್ನುವುದು ಖಚಿತ. ಈ ಭಾಷೆ ಸಾಮಾಜಿಕ ಸಂಬಂಧಗಳ ಸಂದರ್ಭದಲ್ಲಿ ಬೈಗುಳುಗಳನ್ನು ನೋಡುವಾಗ ಯಾವ ಹಿನ್ನೆಲೆಯಲ್ಲಿ ಮೈದಾಳುತ್ತವೆ? ಯಾಕಾಗಿ ಮೈದಾಳುತ್ತವೆ? ಇದರ ಹಿಂದಿನ ಉದ್ದೇಶವೇನು? ಎಂದು ಆಲೋಚಿಸಿದಾಗ ಕೆಲವೊಂದು ಅಮೂರ್ತ ಭಾವನೆಗಳನ್ನು ಮೂರ್ತರೂಪದಲ್ಲಿ ಹೊರಹಾಕಲಿಕ್ಕೆ ಭಾಷೆಯನ್ನು ಬಳಸಾಗುತ್ತದೆ ಎಂದು ಹೇಳಬಹುದು. ಪುರುಷನ ನೆಲೆಯಲ್ಲಿ ನಿಂತು ನೋಡಿದಾಗ ಪುರುಷ ಬಳಸುವ ಭಾಷೆ ಅಧಿಕಾರದ ವಾಣಿಯಲ್ಲಿ ಮತ್ತು ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಲಿಕ್ಕೆ ಹಾಗೂ ತನ್ನ ಹತೋಟಿಯಲ್ಲಿರಬೇಕು ಎನ್ನುವ ವಾಂಛೆಯಿಂದ ಅವನ ಭಾಷಿಕ ರಚನೆ ನಿಂತಿರುತ್ತದೆ. ಮತ್ತು ಸಮಾಜದಲ್ಲಿ ಅದು ಪರಂಪರೆಯೊಳಗಡೆ ನಿರಂತರವಾಗಿ ಹರಿದು ಬಂದಿರುವುದು ಕಾಣಿಸುತ್ತದೆ. ಹೆಣ್ಣಿನ ನೆಲೆಯಲ್ಲಿ ನಿಂತು ನೋಡಿದಾಗ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ; ನಿನ್ನನ್ನು ಬಿಟ್ಟರೆ ನನಗೆ ಯಾರು ದಿಕ್ಕು! ಎನ್ನು ಆತಂಕದಲ್ಲಿದ್ದಾಗ ತನ್ನ ಆತ್ಮರಕ್ಷಣೆಗಾಗಿ ಅವಳ (ಹೆಣ್ಣಿನ) ಭಾಷಿಕ ರಚನೆ ರೂಪಿತವಾಗಿರುತ್ತದೆ. ಇಲ್ಲಿ ಹೆಣ್ಣು ತನ್ನ ನೋವುಗಳನ್ನು ತೋಡಿಕೊಳ್ಳುವ ಸಂದರ್ಭದ ಉದಾಹರಣೆಯನ್ನು ನೋಡಬಹುದು. ಗಂಡನಾದವನು ಯಾವುದೋ ಒಂದು ಸಂದರ್ಭದಲ್ಲಿ (ಹೆಣ್ಣು ತಪ್ಪು ಮಾಡಿದ ಸಂದರ್ಭ ಎಂದು ಇಲ್ಲವೆ; ಗಂಡಸು ಹೆಣ್ಣನ್ನು ನೀನು ಮಾಡಿದ್ದು ತಪ್ಪು ಎಂದು ಬಲವಂತವಾಗಿ ಹೇರಿದ ಸಂದರ್ಭ ಎಂದು ಭಾವಿಸಿಕೊಳ್ಳಿ) ಹೆಂಡತಿಯನ್ನು ತುಚ್ಛವಾಗಿ ಬೈದಾಗ ಹೆಂಡತಿಯಾದವಳು ಗಂಡನಿಗೆ ಎನೆಲ್ಲ ಬೈದರೂ, ಅವನ ಎದೆಗೆ ದಬದಬ ಬಡಿದು ಗೊಳೋ ಎಂದು ಅತ್ತು ಅತ್ತು ಕೊನೆಗೆ ಅಧೀರಳಾಗಿ ತನ್ನ ಆಳದ ನೋವಿನ ಸಂಕಟವನ್ನು ಹೊರಹಾಕುವ ಸಂದರ್ಭದಲ್ಲಿಯೇ ಮತ್ತಷ್ಟು ಬಿಕ್ಕಿ ಬಿಕ್ಕಿ ಅಳಲಿಕ್ಕೆ ಪ್ರಾರಂಭಿಸುತ್ತಾಳೆ. ಇದರಿಂದ ನಾವು ಏನನ್ನು ಗ್ರಹಿಸಬಹುದು ಎಂದರೆ ತವರಿಗೆ ಹೋದರೂ ಅವಳಿಗೆ ಅಲ್ಲಿ ಸಿಗುವ ಸ್ಥಾನಮಾನ ಎಂಥದ್ದು ಎಂದು ಆಲೋಚಿಸಿದಾಗ ಉತ್ತರ ಸುಲಭವಲ್ಲ. ಗಂಡ ಎಷ್ಟೇ ಬೈದರೂ ಅದನ್ನು ಸಹಿಸಿಕೊಂಡು ಸುಮ್ಮನಾಗಿ ಅವನಿಗೆ ಶರಣಾಗುತ್ತಾಳೆ. ಯಾಕೆಂದರೆ ಗಂಡನನ್ನು ಬಿಟ್ಟರೆ ಈ ಸಮಾಜದಲ್ಲಿ ಅವಳಿಗೆ ಯಾರು ದಿಕ್ಕಿಲ್ಲ ಮತ್ತು ಅವಳಿಗೆ ಒಳ್ಳೆಯ ಸ್ಥಾನವಿಲ್ಲ. ಒಂದು ವೇಳೆ ಗಂಡನನ್ನು ಬಿಟ್ಟು ಹೋದಳೆಂದಿಟ್ಟುಕೊಳ್ಳಿ? ಆಗ ಸಾಮಾಜಿಕ ಸಂದರ್ಭದಲ್ಲಿ ಅವಳಿಗೆ ಸಿಗುವ ಸ್ಥಾನಮಾನಗಳು ಎಂಥವು ಎಂಬುದನ್ನು ಊಹಿಸಿಕೊಳ್ಳಿ …

ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ, ವರ್ಣ, ಜಾತಿ, ಲಿಂಗಬೇಧದ ನೆಲೆಯಲ್ಲಿ ತಾರತಮ್ಯ ಇರುವುದನ್ನು ಕಾಣುತ್ತೇವೆ. ಲಿಂಗಸಂಬಂಧಿ ಭಾಷೆಯನ್ನು ಮಾತ್ರ ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸಮಾಜದಲ್ಲಿ ಪುರುಷರನ್ನು ಮೇಲೆಂದು, ಹೆಣ್ಣನ್ನು ಕೀಳೆಂದು ಪರಿಭಾವಿಸಲಾಗಿದೆ. ಹೀಗಾಗಿ ಸಮಾಜದಲ್ಲಿ ಮಹಿಳಾ ಲಿಂಗ ಸಂಬಂಧಿಗಳಾದ ತಾಯಿ, ಹೆಂಡತಿ, ಮಗಳು, ಸೊಸೆ ಇವರುಗಳ ಪಾತ್ರ; ಅಪ್ಪ, ಗಂಡ, ಮಗ, ಮಗ ಇವರಿಗಿಂತ ಕೀಳಾಗಿರುತ್ತದೆ. ಜೊತೆಗೆ ವಿವಾಹದ ನಂತರದ ಸಂದರ್ಭದಲ್ಲೂ ಕೂಡ ಅವಳು ಅಧೀನ ಸ್ಥಿತಿಯಲ್ಲಿರುವುದರಿಂದ ಗಂಡನಿಗೆ ಇಷ್ಟವಾಗುವುದನ್ನು ಮಾತ್ರ ಮಾತನಾಡಬೇಕಾಗುತ್ತದೆ. ಈಗ ಸಮಾಜ ಎಷ್ಟೇ ಬದಲಾವಣೆ ಕಂಡರೂ ಪರಿಸ್ಥಿತಿ ಹಾಗೇ ಮುಂದುವರಿಯುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

ಬೈಗುಳುಗಳ ಸಂದರ್ಭದಲ್ಲಿ ಈ ಭಾಷಾ ಮಾಧ್ಯಮಕ್ಕೂ ಅದು ರವಾನಿಸುವ ಸಂದೇಶಕ್ಕೆ ನೇರ ಸಂಬಂಧವಿದೆ. ಈ ಸಂದೇಶ ಪುರುಷ ಮನೋಧರ್ಮದ ಅನುಕೂಲಕ್ಕೆ ತಕ್ಕಂತೆ ರೂಪಿತವಾಗಿರುತ್ತದೆ. ಸಮಾಜದಲ್ಲಿ ಕೆಲವೊಂದು ಚಟುವಟಿಕೆಗಳು ಅಂದರೆ ಕುಟುಂಬದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವಿಕೆ, ಆಸ್ತಿ ಹಂಚಿಕೆ ಮೊದಲಾದ ಸಂಗತಿಗಳು ಮಹಿಳೆಯ ಆಚರಣೆಯಾಗಿ ಉಳಿದುಬಿಡುತ್ತವೆ. ಮಹಿಳೆ ಆಗ ಮೌನವಹಿಸಬೇಕಾಗಿ ಬರುತ್ತದೆ. ಈ ಸ್ಥಿತಿಯನ್ನು ಸ್ತ್ರೀವಾದಿಗಳು ‘ಮಾತಿನಿಂದ ಮೌನದ ಕಡೆಗೆ ಪಯಣ’ ಎಂದು ಕರೆದಿರುವಲ್ಲಿ ಔಚಿತ್ಯವಿದೆ ಎಂದು ಅನಿಸುತ್ತದೆ.

ಪುರುಷ ಪ್ರಧಾನ ವ್ಯವಸ್ಥೆಯೊಳಗಿನ ಸಮಾಜದಲ್ಲಿ ಮಹಿಳೆಗೆ ತನ್ನ ದೇಹದ ಮೇಲೆ ಹಕ್ಕು ಇಲ್ಲದ್ದರಿಂದ, ಅವಳ ದೇಹದ ಲೈಂಗಿಕ ನಿಯಂತ್ರಣವನ್ನು ಭಾಷೆ ಸಮರ್ಥವಾಗಿ ಹಿಡಿದಿಟ್ಟಿದೆ. ಈ ವ್ಯವಸ್ಥೆಯ ಆದರ್ಶ ಪರಿಕಲ್ಪನೆಗಳಿಗೆ ಪತಿವ್ರತೆಯು ರೂಪಿಸಿದ ಶೀಲವಂತೆ, ಸಾದ್ವಿ, ಸತಿಶಿರೋಮಣಿ, ಮಹಾನ್ ಗರತಿ, ಸೀತೆ, ಸಾವಿತ್ರಿ ಇತ್ಯಾದಿ ಪದಗಳನ್ನು ಭಾಷೆ ಕಾಯ್ನ್ (Coin) ಮಾಡಿ ಮುಂದುವರಿಸಿಕೊಂಡು ಬಂದಿರುವುದು ಅಷ್ಟೇ ಅಲ್ಲ ಈ ಪದಗಳ ಮೂಲಕ ಇಡೀ ಮಹಿಳಾ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಹಿಳಾ ಅಧ್ಯಯನದಲ್ಲಿ ಸಮಾಜ ಮುಖ್ಯವಾದರೆ, ಸಮಾಜದ ಅಧ್ಯಯನದಲ್ಲಿ ಭಾಷೆಯ ಆದ್ಯಯನ ಮುಖ್ಯವಾಗುತ್ತದೆ.

ಉದ್ದೇಶ

ಪ್ರಸ್ತುತ ವಿಷಯದಲ್ಲಿ ಭಾಷಿಕ ರಚನೆಯೊಳಗಡೆ ಹಲವಾರು ವಿಧದಲ್ಲಿ ಭಾಷೆ ತನ್ನ ಇರುವಂತಿಕೆಯನ್ನು ಮೆರೆದಿದೆ. ಇಲ್ಲಿ ಮುಖ್ಯವಾಗಿ ಭಾಷಿಕ ರಚನೆಯೊಳಗಡೆ ಬೈಗುಳಗಳು ರೂಪು ಪಡೆದ ಸಂದರ್ಭವನ್ನು ಕೌಟುಂಬಿಕ ವಲಯ, ಸಾಮಾಜಿಕ ವಲಯಗಳಲ್ಲಿ ಅವುಗಳ ಪಾತ್ರವನ್ನು ಗಮನಿಸಿ ವಿವಿರಿಸಲಾಗುತ್ತದೆ. ಬೌಗುಳುಗಳ ಸಂದರ್ಭ ಯಾವುದು? ಯಾವ ಕಾರಣಕ್ಕಾಗಿ ಬೈಯ್ಯಲಾಗುತ್ತದೆ? ಅದರ ಹಿಂದಿನ ಮನೋಧರ್ಮವೇನು? ಹಾಗೇನೆ ಹೆಂಗಸು ಹೆಂಗಸಿಗೆ ಬೈಯ್ಯುವ ಬೈಗುಳು, ಹೆಂಗಸು ಗಂಡಸಿಗೆ ಬೈಯ್ಯುವ ಬೈಗುಳು, ಮತ, ವರ್ಗಾಧಾರಿತ ನೆಲೆಯಲ್ಲಿ ರೂಪ ಪಡೆದ ಬೈಗುಳು ಮತ್ತು ಆದರ್ಶದ ಪರಿಕಲ್ಪನೆಯಲ್ಲಿ ಮೈದಾಳಿದ ಬೈಗುಳುಗಳ ಹಿಂದಿನ ತಾತ್ವಿಕತೆಯ ಸ್ವರೂಪ ಏನಾಗಿರುತ್ತದೆ ಎನ್ನುವ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು, ಸಮಾಜದಲ್ಲಿ ಮಹಿಳೆಯನ್ನು ಈ ಬೈಗುಳುಗಳು ಹೇಗೆ ನಿಯಂತ್ರಿಸಿವೆ ಎನ್ನುವುದನ್ನು ಈ ಕೆಳಗಿನ ವಿಚಾರಗಳ ಮೂಲಕ ವಿಷದಪಡಿಸಲಾಗಿದೆ.

೧. ಭಾಷೆಯ ರಚನೆ ಮತ್ತು ಬಳಕೆಯಲ್ಲಿ ಲಿಂಗತಾರತಮ್ಯ ಗುರುತಿಸುವುದು.

೨. ಭಾಷೆಯನ್ನು ಆಕರವಾಗಿಸಿಕೊಂಡು ಬೈಗುಳುಗಳಲ್ಲಿ ಮಹಿಳೆಯನ್ನು ಈ ಪುರುಷ ಪ್ರಧಾನ ವ್ಯವಸ್ಥೆ ಹೇಗೆ ಪ್ರತಿನಿಧಿಸಿದೆ.

೩. ಹೆಣ್ಣಿನ ಲೈಂಗಿಕತೆಯ ಬಗೆಗಿನ ಸಾಮಾಜಿಕ, ಸಾಂಸ್ಕೃತಿಕ ನಿಲುವುಗಳು ಭಾಷೆಯಲ್ಲಿ ಪಡೆದುಕೊಂಡ ಸ್ವರೂಪ ಎಂಥದ್ದು ಎಂಬುದನ್ನು ತಿಳಿಯುವುದು.

೪. ಬೈಗುಳುಗಳಲ್ಲಿ ನಿರೂಪಿತವಾದ ಲಿಂಗತಾರತಮ್ಯದ ನೆಲೆಗಳನ್ನು ಅರಿಯುತ್ತ ಅವುಗಳ ಹಿಂದಿರುವ ಸಾಮಾಜಿಕ ಲಿಂಗತಾರತಮ್ಯದ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದು.

೫. ಈ ಬೈಗುಳುಗಳಿಂದ ಮಹಿಳೆಯನ್ನು ನಿಯಂತ್ರಿಸುವ ಹಿಂದಿನ ಮನೋಧರ್ಮವನ್ನು ಅರಿಯುವುದು.

೬. ಒಟ್ಟಾರೆಯಾಗಿ ಪುರುಷ ಪ್ರಧಾನ ವ್ಯವಸ್ಥೆ ನಿರ್ಮಿಸಿದ ಭಾಷಾ ರಾಜಕಾರಣದ ಹಿಂದಿರುವ ತಾತ್ವಿಕತೆಯನ್ನು ತಿಳಿಯುವುದು.

ವ್ಯಾಪ್ತಿ

ಪ್ರಸ್ತುತ ವಿಷಯವು ಭಾಷೆಗೆ ಸಂಬಂಧಸಿದ್ದಾಗಿದೆ. ಕನ್ನಡ ಭಾಷೆಯನ್ನು ತನ್ನ ಆಕರವಾಗಿ ಪಡೆದಿದೆ. ಭಾಷೆಯಲ್ಲಿ ಮಹಿಳಾ ಬದುಕಿನ ವಸ್ತುನಿಷ್ಠ ಸ್ಥಿತಿಯನ್ನು ವಿಶ್ಲೇಷಣೆಗಾಗಿ ಬೈಗುಳುಗಳನ್ನು ಮಾತ್ರ ಇಲ್ಲಿ ಬಳಸಿಕೊಳ್ಳಲಾಗಿದೆ. ಕನ್ನಡದ ಬೈಗುಳುಗಳು ಬಹುತೇಕವಾಗಿ ಮೌಖಿಕ ರೂಪದಲ್ಲಿ ಸಿಗುವುದರಿಂದ ಅವುಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ ಬೈಗುಳುಗಳನ್ನು ಮುಖ್ಯವಾಗಿರಿಸಿಕೊಂಡು ಚರ್ಚಿಸಲಾಗಿದೆ.

ವೈಧಾನಿಕತೆ

ಯಾವುದೇ ಸಮಾಜದಲ್ಲಿ ಭಾಷೆಗೆ ತನ್ನದೇ ಆದ ಬಹುಮುಖ್ಯ ಸ್ಥಾನವಿದೆ. ಏಕೆಂದರೆ ಭಾಷೆ ಜನರಿಗೆ ಸಂಪರ್ಕ ಮಾತ್ರ ಕಲ್ಪಿಸದೆ, ಅವರ ಜ್ಞಾನವನ್ನು ವಿಸ್ತರಿಸಲು, ತಿಳುವಳಿಕೆ ನೀಡಲು, ಪ್ರಜ್ಞಾವಂತರನ್ನಾಗಿ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಅವರ ಬದುಕಿನ ಸಂದೇಶವನ್ನು ನೀಡುತ್ತದೆ. ಸಮಾಜದಲ್ಲಿನ ಎಲ್ಲಾ ಕ್ಷೇತ್ರಗಳು ಪುರುಷ ಪ್ರಧಾನವಾಗಿ ನಡೆಯುತ್ತಿವೆ. ಹಾಗಾಗಿ ಸಮಾಜದ ಇನ್ನೊಂದು ಭಾಗವಾಗಿರುವ ಮಹಿಳಾ ಸಮುದಾಯದ ಬಗ್ಗೆ ಭಾಷೆಯ ನಿಲುವುಗಳೇನು? ಈ ನಿಲುವುಗಳು ಮಹಿಳಾ ಪರವಾಗಿವೆಯೋ? ವಿರೋಧವಾಗಿವೆಯೋ? ಅಥವಾ ಲಿಂಗ ತಾರತಮ್ಯ ಮನೋಭಾವವನ್ನೇ ಮುಂದುವರಿಸುತ್ತಿವೆಯೋ? ಎಂಬುದನ್ನು ಅರಿಯಲು ಸ್ತ್ರೀವಾದಿ ದೃಷ್ಟಿಕೋನವನ್ನು ಪ್ರಸ್ತುತ ಚರ್ಚೆಯಲ್ಲಿ ಬಿಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಸಮಾಜದಲ್ಲಿ ಮಹಿಳೆಯನ್ನು ಕೇಂದ್ರವಾಗಿರಿಸಿಕೊಂಡು ಬೈಯುವ ಬೈಗುಳುಗಳ ಅವಲೋಕನವನ್ನು ಆಯ್ದ ಬೈಗುಳುಗಳನ್ನು ಉದಾಹರಿಸಿ ಅವುಗಳ ಸಾರವನ್ನು ಅರಿಯಲು ಮಹಿಳಾ ಸಂಬಂಧಿ ವಿಶ್ಲೇಷಣೆಗೆ ಗುಣಾತ್ಮಕ ವಿಧಾನವನ್ನು ಬಳಸಿಕೊಳ್ಳಲಾಗಿದೆ ಮತ್ತು ಪ್ರಾದೇಶಿಕವಾಗಿ ಬೈಗುಳುಗಳ ಸ್ವರೂಪ ಬೇರೆ ಬೇರೆಯಾಗಿದ್ದು, ಅವುಗಳು ಸ್ವಲ್ಪ ಹೆಚ್ಚುಕಮ್ಮಿ ಒಂದೇ ಮಾದರಿಯಲ್ಲಿ ಇವೆ. ಬೈಯುವ ಸ್ವರೂಪ, ಉಚ್ಛಾರದ ಧ್ವನಿಗಳಲ್ಲಿ ಭಾಷೆ ಬದಲಾಗಬಹುದು ಎಂಬ ಮಿತಿಯನ್ನು ಸಹ ಇಲ್ಲಿ ಗಮನಿಸಲಾಗುತ್ತದೆ.

ಭಾಷಿಕ ರಚನೆ ಮತ್ತು ಬಳಕೆಯಲ್ಲಿ ಬೈಗುಳುಗಳ ಸ್ವರೂಪ

ವ್ಯಕ್ತಿಯ ಮನೋಧರ್ಮದ ಅಭಿವ್ಯಕ್ತಿಗೆ ಮಾತ್ರವಲ್ಲದೆ; ಒಂದು ಸಮಾಜದ ಜನತೆಯ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಅರಿಯಲು ಭಾಷೆ ಸಹಾಯ ಮಾಡುತ್ತದೆ. ದಂಡಿ ಹೇಳುವಂತೆ ‘ಮಾನವನಿಗೆ ಭಾಷೆಯೆಂಬುದಿಲ್ಲದಿದ್ದರೆ ಅವನು ಕತ್ತಲೆಯ ಕೂಪದಲ್ಲಿ ನರಳಾಡುತ್ತಾ ಇರುತ್ತಿದ್ದನೆಂದು’ ಹಾಗೆಯೇ ‘ನುಡಿದಂತೆ ನಡೆ’, ‘ನಡೆದಂತೆ ನುಡಿ’ ಎಂಬ ಸೂಕ್ತಿಗಳನ್ನು ಗಮನಿಸಿದರೆ ಭಾಷೆ ಮಾನವನ ವ್ಯಕ್ತಿತ್ವವನ್ನು, ಅನುಭವಗಳನ್ನು, ಅನಿಸಿಕೆಗಳನ್ನು, ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ ಎನ್ನಬಹುದು. ಇದೇ ಸಂದರ್ಭದಲ್ಲಿ ‘ಮಾತೆಂಬುದು ಜ್ಯೋತಿರ್ಲಿಂಗ’, ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಮುಂತಾದ ಬಸವಣ್ಣನವರ ಸಾಲುಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಭಾಷೆ ಮಾನವನಿಗೆ ‘ಕಾಮಧೇನು ಕಲ್ಪವೃಕ್ಷ’ ವಿದ್ದಂತೆ ಎಂದು ಹೇಳಿರುವುದರಲ್ಲಿ ಬಹುಶಃ ಉತ್ಪ್ರೇಕ್ಷೆ ಇರಲಾರದು. ಅಂಥ ಶಕ್ತಿ ಭಾಷೆಗಿದೆ.

ಭಾಷೆಯ ಬಗೆಗೆ ಇಷ್ಟೆಲ್ಲ ತಿಳಿದುಕೊಂಡ ನಾವುಗಳು ಒಂದು ಬಾರಿ ಬೈಗುಳುಗಳ ಕಡೆಗೆ ಕಣ್ಣಾಯಿಸಿ ನೋಡಿದಾಗ ಒಂದು ಕ್ಷಣ ಜೀವ ಅಲ್ಲಾಡಿ ಹೋಗುತ್ತದೆ. ಏಕೆಂದರೆ ಬೈಗುಳುಗಳ ಸ್ವರೂಪ ಹಾಗಿದೆ. ಜೊತೆಗೆ ಮಹಿಳೆಯನ್ನು ಕೇಂದ್ರವಾಗಿರಿಸಿಕೊಂಡು ಬೈಯುವ ಬೈಗುಳುಗಳ ಸ್ವರೂಪವನ್ನು ನೋಡಿದಾಗ ನಾವುಗಳು ಇನ್ನೂ ಅಲ್ಲೋಲ ಕಲ್ಲೋಲವಾಗಿಬಿಡುತ್ತೇವೆ. ಅಷ್ಟೊಂದು ಹೀನಾಯ ಸ್ಥಿತಿಯಲ್ಲಿ ಮಹಿಳೆಯನ್ನು ನಾವು ನಡೆಸಿಕೊಂಡಿದ್ದೇವೆ. ಅಂಥ ಹೀನ ಬದುಕನ್ನು ಬಾಳುತ್ತಿರುವ ಮಹಿಳೆಯನ್ನು ಕೇಂದ್ರವಾಗಿರಿಸಿಕೊಂಡು ರಚನೆಯಾದ ಬೈಗುಳುಗಳು ಚಿಂತನಾ ವಲಯದಲ್ಲಿ ಒಂದು ಹೊಸ ರೀತಿಯ ವಿಚಾರ ಸರಣಿಯನ್ನು ಎದುರು ನೋಡುತ್ತಿದೆ.

ಸಹಜವಾಗಿ ಎಲ್ಲ ಹಂತಗಳಲ್ಲಿ ಮಾನವನು ಭಾಷೆಯನ್ನು ಬಳಸಿ ಮಾತನಾಡಬಹುದು, ಇಲ್ಲವೆ ಸಂಕೇತಗಳನ್ನು ಬಳಸಬಹುದು. ಭಾಷೆಯೆನ್ನುವುದು ಕ್ರಿಯೆಯಾಗಿ ಮೊದಲು ಗೋಚರಿಸಿದರೂ ನಂತರ ಅದರ ಕಾರ್ಯ ಹತೋಟಿಯಲ್ಲಿಟ್ಟುಕೊಳ್ಳುವುದಾಗಿರುತ್ತದೆ. ಪ್ರತಿಯೊಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದಾಗಿರುತ್ತದೆ. ಇದನ್ನು ಗಮನಿಸಿದಾಗ ಅದರ ಹಿಂದಿನ ಮನೋಧರ್ಮ ಎಂದರೆ ನಾನು ಹೇಳುವುದನ್ನು ಕೇಳು, ನನ್ನ ಮಾತೆ ಮುಖ್ಯ ಎನ್ನುವ ಅಹಮಿಕೆಯಲ್ಲಿ ಮಾನವ ಬೀಗುತ್ತಿರುತ್ತಾನೆ. ಹಾಗಾಗಿ ಮಾತು ಭಾಷೆಯನ್ನು ಬಳಸಿಕೊಂಡ ಒಂದು ಸಾಧನ. ಈ ಭಾಷೆಯಲ್ಲಿ ಬೈಗುಳುಗಳನ್ನು ಮುಖ್ಯವಾಹಿನಿಯಲ್ಲಿ ಚರ್ಚಿಸಲಾಗಿದೆ.

ಬೈಗುಳುಗಳ ಸ್ವರೂಪ

ಭಾಷಿಕ ರಚನೆಯಲ್ಲಿ ಬೈಗುಳುಗಳ ಸ್ವರೂಪವನ್ನು ಗಮನಿಸಿದಾಗ ಬೈಗುಳುಗಳು ಮೇಲುನೋಟಕ್ಕೆ ಬುದ್ಧಿವಾದ ಹೇಳುವ, ಇನ್ನೊಬ್ಬರನ್ನು ಸರಿದಾರಿಗೆ ತರುವ, ಇದು ಹೀಗಲ್ಲ ಹೀಗೆ ಎಂದು ಹೇಳುವಾಗ ಸಾಮಾನ್ಯವಾಗಿ ಬೈಗುಳನ್ನು, ಗಾದೆಗಳನ್ನು ಬಳಸಿ ಹೇಳಲಾಗುತ್ತದೆ. ಇದಕ್ಕಿಂತ ಮಿಗಿಲಾಗಿ ಬೈಗುಳುಗಳಲ್ಲಿ ಮಹಿಳೆಯನ್ನು ಕೇಂದ್ರವಾಗಿರಿಸಿಕೊಂಡು ಬೈಗುಳುಗಳು ನಮಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಅವು ಗಂಡಸರಿಗೆ ಗಂಡಸರು ಬೈಯುವುದಾಗಿರಬಹುದು, ಹೆಂಗಸರು ಹೆಂಗಸರಿಗೆ ಬೈಯುವುದಾಗಿರಬಹುದು, ವರ್ಗಾಧಾರಿತ ನೆಲೆಯಲ್ಲಿ ಬೈಯುವುದಾಗಿರಬಹುದು. ಇಲ್ಲೆಲ್ಲ ಸೂಕ್ಷ್ಮವಾಗಿ ಅವಲೋಕಿಸಿದಾಗ ಹೆಣ್ಣನ್ನು ಮುಖ್ಯವಾಗಿರಿಸಿಕೊಂಡು ಬೈಯುವ ಬೈಗುಳುಗಳು ಹೆಚ್ಚಾಗಿ ಸಿಗುತ್ತವೆ. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಅವುಗಳ ಹಿಂದಿನ ಮನೋಧರ್ಮ ನಮಗೆ ಅರ್ಥವಾಗದೆ ಇರದು.

ಪುರುಷ ಪ್ರಧಾನವಾದ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ಸಮುದಾಯವನ್ನು ಅವು ವಿಭಿನ್ನ ನೆಲೆಗಳಲ್ಲಿ ತಾರತಮ್ಯಕ್ಕೆ ಒಳಗೆ ಮಾಡುತ್ತವೆ ಎಂಬುವುದನ್ನು ಗ್ರಹಿಸಸುವುದು ಅಷ್ಟು ಸುಲಭವಲ್ಲ. ಇಲ್ಲಿ ರೂಪಿತವಾಗಿರುವ ಸಂಸ್ಥೆಗಳು, ಕಾನೂನು, ರೂಢಿ, ಸಂಪ್ರದಾಯ, ನಿಯಮಗಳಲ್ಲಿ ಹಾಗೂ ಅವುಗಳನ್ನು ಅಭಿವ್ಯಕ್ತಿಗೊಳಿಸಲು ಬಳಕೆಗೊಳ್ಳುವ ಭಾಷೆಯಲ್ಲಿ ಮೇಲುನೋಟಕ್ಕೆ ಕಾಣುವ ನಿರ್ವಚನಗಳು, ವ್ಯಾಖ್ಯಾನಗಳು ಇಡೀ ಮಾನವ ಕುಲವನ್ನು ಒಂದಾಗಿ ಪರಿಗಣಿಸಿವೆ ಎಂದು ಅನಿಸಿದರೂ ಕೂಡ ಆಳವಾಗಿ ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿದರೆ ಗೊತ್ತಾಗುತ್ತದೆ; ಎಷ್ಟರಮಟ್ಟಿಗೆ ಬೈಗುಳುಗಳಲ್ಲಿ ಲಿಂಗ ತಾರತಮ್ಯ ಇದೆ ಎನ್ನುವುದು. ‘ಮಾನವ ಕುಲ’ ಎನ್ನುವಲ್ಲಿಯೇ ಮಹಿಳೆ ಗೈರು ಹಾಜರಿ ಇರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಭಾಷೆ ಎನ್ನುವುದು ಸಹ ಹೇಗೆ ಲಿಂಗತಾರತಮ್ಯವನ್ನು ಮೈಗೂಡಿಸಿಕೊಂಡಿದೆ; ಅದರ ನೆಲೆಗಳು ಯಾವ ಸ್ವರೂಪದಲ್ಲಿ ಹಾಗೂ ಹೆಣ್ಣಿನ ಭಾಷಾ ಸ್ವರೂಪ ಯಾವ ರೀತಿ ಇದೆ ಎಂಬುದರ ಕುರಿತು ಅನುಸಂಧಾನ ನಡೆಸಲಾಗಿದೆ.

ಭಾಷಾಶಾಸ್ತ್ರದ ಇತ್ತೀಚಿನ ಅಧ್ಯಯನಗಳಲ್ಲಿ ಸಮಾಜವನ್ನು ಮತ್ತು ಸಾಮಾಜಿಕ ಸಂಬಂಧಗಳನ್ನು ಅದು ಬಳಸುವ ಭಾಷೆಯ ಮೂಲಕ ಅರ್ಥಮಾಡಿಕೊಳ್ಳಬಹುದೆಂಬ ಒಂದು ಚಿಂತನೆ ರೂಪುಗೊಂಡು ‘ಸಮಾಜೋಭಾಷಾಶಾಸ್ತ್ರ’ ಎಂಬ ಒಂದು ಪ್ರತ್ಯೇಕ ಅಧ್ಯಯನ ಶಿಸ್ತು ಬೆಳೆದು ಬಂದಿದೆ. ಸಮಾಜದ ವಿವಿಧ ಸ್ತರದ ಸಮುದಾಯಗಳ ನಡುವೆ ಇರುವ ಅಸಮಾನತೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಅಧ್ಯಯನಗಳು ಸಾಕಷ್ಟು ನಡೆದಿವೆ. ಜಾತಿ, ವರ್ಗ, ವರ್ಣ, ಪ್ರಾದೇಶಿಕತೆ, ಶೈಕ್ಷಣಿಕ ಸ್ಥಾನಮಾನ ಹಾಗೂ ಲಿಂಗಬೇಧಗಳಿಗನುಸಾರವಾಗಿ ಒಂದೇ ಭಾಷೆಯಲ್ಲಿ ಹಲವು ವಿಕಲ್ಪಗಳು ತೋರಿ ಬರುವ ಬಗ್ಗೆ, ಹಲವು ಸೈದ್ಧಾಂತಿಕ ವಿಚಾರಗಳನ್ನು ನಿದರ್ಶನ ಸಹಿತ ನಿರೂಪಿಸುವ ಕ್ಷೇತ್ರಾಧ್ಯನಗಳೂ ನಡೆದಿವೆ.

ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದಲ್ಲಿ ಹೆಣ್ಣು ಮತ್ತು ಗಂಡುಗಳ ಬಗ್ಗೆ ಇರುವ ಕೆಲವು ಅಭಿಪ್ರಾಯಗಳು, ಅವರಿಗೆ ಸಮಾಜವು ನೀಡುವ ಹಲವು ನಿರ್ದೇಶನಗಳು ಹಾಗೂ ಅವರನ್ನು ಕುರಿತು ಸಮಾಜವು ಕಟ್ಟಿಕೊಡುವ ಮೌಲ್ಯಗಳು ಕನ್ನಡ ಭಾಷೆಯ ಸಂದರ್ಭದಲ್ಲೂ ಸಹ ಪಡೆದುಕೊಂಡಿರುವ ಆಕರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದೆ. ಹಾಗೆ ಸಿಕ್ಕ ನಿದರ್ಶನ, ಮೌಲ್ಯಗಳು, ನಿರ್ವಚನಗಳಲ್ಲಿ ಹೆಣ್ಣು – ಗಂಡುಗಳ ಬೈಗುಳಗಳ ಸಂದರ್ಭದಲ್ಲಿ ಹೇಗೆ ಪ್ರತಿನಿಧಿಗೊಂಡಿದ್ದಾರೆ ಎಂಬುದಕ್ಕೆ ಅವರು ಬಳಸುವ ಭಾಷೆಯ ಸ್ವರೂಪ ಸೂಚನೆಗಳಿಂದ ಕಂಡುಕೊಳ್ಳಬಹುದಾಗಿದೆ.

ಬೈಗುಳುಗಳ ಭಾಷಾ ಸ್ವರೂಪ

ವಿಶ್ವದ ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ ಎನ್ನುವ ಸಂಗತಿ ಗೊತ್ತಿದ್ದರೂ, ನಮ್ಮ ಸಮಾಜದಲ್ಲಿ ‘ಹೆಣ್ಣು’ ಎಂದ ತಕ್ಷಣ ನೆನಪಿಗೆ ಬರುವುದು ಅವಳು ಅಸಮರ್ಥಳು ಎಂದು. ಜೊತೆಗೆ ಲಿಂಗಾಧಾರಿತವಾಗಿ ಬಲಹೀನಳು ಎಂಬ ನೆಲೆಯಲ್ಲಿ ಗ್ರಹಿಸುತ್ತ ಬರಲಾಗಿದೆ. ಹಾಗೇನೆ ಹೆಣ್ಣು ಇರುವುದು ಭೋಗಿಸಲೆಂದು ನಂಬಿರುವ ಈ ಸಂಸ್ಕೃತಿಗೆ ನೀತಿ, ನಿಯಮಗಳ ಕಟ್ಟುಪಾಡುಗಳು ಮುರಿದು ಬಿದ್ದಾಗ ಹೆಣ್ಣಿನ ಬದುಕು ಘೋರವಾಗುತ್ತದೆ ಎಂದು ಗೊತ್ತಿದ್ದರೂ ಹೆಣ್ಣಿನ ಅಸಹಾಯಕತೆಯನ್ನು ಲಾಭಮಾಡಿಕೊಂಡು ಹೆಣ್ಣಿನ ಮೇಲೆ ಮಾನಸಿಕ ಅತ್ಯಾಚಾರ, ಹೊಡೆಯುವುದು, ಲೈಂಗಿಕ ಕಿರುಕುಳದ ಜೊತೆಗೆ ಅವಳನ್ನು ಹತ್ತಿಕ್ಕುವ ಸಾಧನವಾದ ತೀರ ಅಸಹ್ಯವಾಗಿ ಬೈಯುವುದರ ಮೂಲಕ ಅವಳನ್ನು ಇನ್ನಷ್ಟು ಹತ್ತಿಕ್ಕುವುದರ ಮೂಲಕ ಪುರುಷ ಪ್ರಧಾನ್ಯವನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ಭಾಷಿಕವಾಗಿ ಮತ್ತು ಲಿಂಗ ತಾರತಮ್ಯದ ನೆಲೆಯಲ್ಲಿ ಗ್ರಹಿಸಿದಾಗ ಪ್ರಕೃತಿ ಸಹಜವಾದ ನಿರ್ಮಾಣದಲ್ಲಿ ರಚಿತವಾದ ಅವಳ ದೇಹದ ರಚನೆಯನ್ನು ಯಾರು ಎನು ಮಾಡಲಿಕ್ಕಾಗದು. ಆದರೂ ಇಂಥಹ ದೇಹದ ರಚನೆಯನ್ನು ಪುರುಷ ಪ್ರಧಾನ ಮೌಲ್ಯಗಳು ತನ್ನ ಮನಸ್ಸಿನ ನೇರದೃಷ್ಟಿಯಂತಿರುವ ನಿಯಮಗಳಿಗೆ ಹೆಣ್ಣು ತಲೆಬಾಗಿ, ತಾನು ಹೇಳಿದಂತೆ ಕೇಳಿಕೊಂಡು, ತಾನು ಅಂದಂತೆ ಅನ್ನಿಸಿಕೊಂಡು ಕೂಪಮಂಡೂಕದ ಹಾಗೆ ಈ ಮನೆಯೇ ನನ್ನ ಸರ್ವಸ್ವ, ನನ್ನ ಪ್ರಪಂಚ, ಪತಿಯೇ ಪರಮದೈವವೆಂದು ನಂಬಿ ಸುಮ್ಮನಿರುವ ಮಹಿಳೆಯ ಸ್ಥಿತಿ ಹೇಳತೀರದು. ಇಂಥಹ ಸಂದರ್ಭಗಳಲ್ಲಿ ಆಕೆ ಅಗೋಚರವಾಗಿಯೇ ಉಳಿದು ಬಿಡುತ್ತಾಳೆ. ಮಾನವನ ಇತಿಹಾಸವನ್ನು ನಾವು ನಿರೂಪಿಸುವುದು ‘ಶಿಲಾಯುಗದಿಂದ ಮಾನವ ಹೀಗೆ ಹೀಗೆ ಸಾಗಿ ಬಂದ’ ಎಂಬಂತಹ ಸಿದ್ಧ ಮಾದರಿಯನ್ನು ನಿರೂಪಣೆಯ ರೀತಿಯಲ್ಲಿಯೇ ಎಂಬ ಪುರುಷ ಧ್ವನಿಯ ಪ್ರಧಾನ್ಯತೆಯೇ ಕೇಳಿಬರುತ್ತದೆ. ಇತಿಹಾಸದ ಮಹಾನ್ ಪುರುಷ ಎಂಬಂತಹ ಪದ ಪ್ರಯೋಗವೂ ಮಾಮೂಲು. ಈ ಮುಂಚೆ ಹೇಳಿದಂತೆ ‘ಮಾನವರನ್ನು’, ‘ಅವನು’ ಎಂಬಂತಹ ಪರಿಕಲ್ಪನೆಯಲ್ಲಿ ಬಳಸುವುದು, ಮಹಿಳೆಯ ಅಸ್ತಿತ್ವವನ್ನು ಕಡೆಗಣಿಸಿರುವಂಥದ್ದೇ ಆಗಿದೆ. ಇದು ಕೇವಲ ಇತಿಹಾಸದಲ್ಲಿ ಮಾತ್ರವಲ್ಲ, ಎಲ್ಲಾ ಜ್ಞಾನವಲಯಗಳಲ್ಲಿ, ಬದುಕಿನ ಹಲವು ಮಗ್ಗಲುಗಳಲ್ಲಿ ಸಾಮಾಜಿಕ ಸಂಬಂಧಗಳು ಮತ್ತು ಕೌಟುಂಬಿಕ ವಲಯಗಳಲ್ಲಿ ಪುರುಷ ಪ್ರಧಾನ್ಯತೆಯೇ ಗಾಢವಾಗಿರುವುದನ್ನು ಕಾಣುತ್ತೇವೆ.

ಬೈಗುಳುಗಳ ಹಿನ್ನೆಲೆಯಲ್ಲಿ ಭಾಷಿಕ ರಚನೆಯನ್ನು ಗಮನಿಸಿದಾಗ ಸ್ತ್ರೀಕೇಂದ್ರಿತವಾದ ನಿರ್ದೇಶನಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಸೂಳೆ, ಪತಿವ್ರತೆ, ಮಹಾನ್ ಸಾಧ್ವಿ, ಸತಿಶಿರೋಮಣಿ, ತುಡುಗಿ, ಬೆಂಡ್ಲಿ, ಹಾದರಗಿತ್ತಿ, ತಾಟಗಿತ್ತ, ಹಡಸ್ಲಿ, ಮಾದರವನ ಸೂಳೆ ಹೀಗೆ ಮುಂತಾದ ಪದಗಳನ್ನು ಗಮನಿಸಿದಾಗ ಸಮಾಜದಲ್ಲಿ ಪುರುಷ ನಿಯಮಿಸಿದ ಪದಗಳು ಹೇಗಿದ್ದರೂ ಸ್ವೀಕೃತವಾಗುತ್ತವೆ. ಹಾಗೇನೆ ಒಂದು ವೇಳೆ ಪುರುಷನಿಗೆ ಮಹಿಳೆ ಬಳಸುವ ಪದಗಳು ಸಹ ಮಿಂಡರಿಗೆ ಹುಟ್ಟಿದವನೆ, ಹಾದರಗಿತ್ತಿ ಮಗನೆ, ಸೂಳೆ ಮಗನೆ, ಏನ್ ಮಹಾನ್ ಗಂಡ್ಸು ಇವ್ನು ಮುಂತಾದ ಪದಗಳನ್ನು ಬಳಸಿದಾಗಲೂ ಮಹಿಳೆ ತನಗರಿವಿಲ್ಲದಂತೆ ತನ್ನನ್ನೇ ತಾನು ಬೈದುಕೊಳ್ಳುವ ನೆಲೆಯಲ್ಲಿಯೇ ಈ ಪುರುಷ ಪ್ರಧಾನ ವ್ಯವಸ್ಥೆ ವ್ಯವಸ್ಥಿತವಾಗಿ ಭಾಷಿಕ ರಚನೆಯನ್ನು ರೂಪಿಸಿಬಿಟ್ಟಿದೆ.

ಬೈಗುಳುಗಳನ್ನು ಮುಖ್ಯವಾಗಿರಿಸಿಕೊಂಡು ‘ಬೈಗುಳುಗಳ ಭಾಷಿಕ ಅಧ್ಯಯನ’ ವನ್ನು ಡಾ. ಕೆ.ಜಿ. ನಾಗರಾಜಪ್ಪ ಅವರು ಭಾಷೆಯನ್ನು ಪ್ರಧಾನವಾಗಿರಿಸಿಕೊಂಡು ಸಮಗ್ರವಾಗಿ ಅಧ್ಯಯನವನ್ನು ನಡೆಸಿದ್ದಾರೆ. ಅದೇ ರೀತಿ ಶ್ರೀನಿವಾಸ ಬೇಂದ್ರೆಯವರು ‘ಬೀದರ್ ಜಿಲ್ಲೆಯ ಕನ್ನಡ ಉಪಭಾಷಿಕ ಪ್ರಬೇಧಗಳು’ ಎಂಬ ಮಹಾಪ್ರಬಂಧದಲ್ಲಿ ಬೀದರ್ ಭಾಗದ ಕಡೆಗೆ ಯಾವ ರೀತಿ ಬೈಗುಳುಗಳು ಇವೆ ಎನ್ನುವುದರ ಪಟ್ಟಿಯನ್ನು ಕೊಟ್ಟಿದ್ದಾರೆ. ಅದು ಕೂಡ ಭಾಷಿಕ ಅಧ್ಯಯನದ ನೆಲೆಯಲ್ಲಿ ಡಾ. ಕೆ.ವಿ. ನಾರಾಯಣ ಅವರ ಮಾರ್ಗದರ್ಶನದಲ್ಲಿ ರೂಪಿತವಾಗಿದೆ. ಅದೇ ರೀತಿ ಭಾಷೆಗೆ ಸಂಬಂಧಿಸಿದಂತೆ ಡಾ. ಕೆ.ವಿ. ನಾರಾಯಣ, ಡಾ. ಎಚ್.ಎಸ್. ಶ್ರೀಮತಿಯವರು ಮಹಿಳಾ ಭಾಷೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು, ಲೇಖನಗಳನ್ನು ಬರೆದಿದ್ದಾರೆ. ಇದರಲ್ಲಿ ಅವರು ಭಾಷೆಯಲ್ಲಿನ ರಚನೆಯ ತಾರತಮ್ಯಗಳನ್ನು ಗುರುತಿಸಿದ್ದಾರೆ. ಸಾಮಾಜಿಕ ಸ್ತರಗಳಾದ ವೃತ್ತಿ, ಶಿಕ್ಷಣ, ಪ್ರದೇಶ, ವರ್ಗ, ವರ್ಣ, ಲಿಂಗತಾರತಮ್ಯಗಳು ಹೇಗೆ ಸ್ವರೂಪ ಪಡೆದುಕೊಂಡಿವೆ ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಎಚ್. ಎಸ್. ರಾಘವೇಂದ್ರ ರಾವ್, ಡಾ. ಲಿಂಗದೇವರು ಹಳೇಮನಿ ಇನ್ನಿತರ ಭಾಷಾ ವಿದ್ವಾಂಸರು ಭಾಷೆ ಸಂವಹನ ಮತ್ತು ಮಹಿಳೆ ಕುರಿತು ಹಲವಾರು ಉಪನ್ಯಾಸ ನೀಡಿದ್ದಾರೆ. ಸಾಹಿತ್ಯ, ಗಾದೆ, ಒಡಪು, ಕವಿತೆಗಳಲ್ಲಿ, ಚಲನಚಿತ್ರಗಳಲ್ಲಿ ಲಿಂಗ ತಾರತಮ್ಯದ ನೆಲೆಯನ್ನು ಲೈಂಗಿಕವಾಗಿ ಭಾಷೆ ಎಂಬುದಾಗಿ ಗುರಿತಿಸಿದ್ದಾರೆ. ಇವುಗಳನ್ನು ಗಮನಿಸಿ ಬೈಗುಳುಗಳಲ್ಲಿ ಭಾಷೆಯ ಬಗೆಗಿನ ಮನೋಧರ್ಮ, ದೃಷ್ಟಿಕೋನ, ತಾತ್ವಿಕ ನಿಲುವುಗಳು ಏನು? ಎಂಬುವುದರ ಕುರಿತು ಗಂಭೀರವಾದ ಚರ್ಚೆ ನಡೆಯಬೇಕಿದೆ.

ಬೈಗುಳುಗಳಲ್ಲಿ ಲಿಂಗ ತಾರತಮ್ಯದ ನೆಲೆಗಳು

ಸಮಾನತೆಯ ಹೊರಾಟಗಳೇ ಪ್ರಮುಖ ಲಕ್ಷಣವಾಗಿರುವ ಇಂದಿನ ಯುಗಮಾನದಲ್ಲಿ ಮಹಿಳೆಯರೂ ಕೂಡ ತಾವು ಪುರುಷರಿಗಿಂತ ಕೆಳಶ್ರೇಣಿಯವರೆಂದು ಗುರುತಿಸಿಕೊಳ್ಳಲು ನಿರಾಕರಿಸುತ್ತಿರುವುದು ಸಹಜವೇ ಆಗಿದೆ. ಇಷ್ಟಾದರೂ ಪುರುಷ ಪ್ರಧಾನವೇ ಆದ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ಸಮುದಾಯವನ್ನು ಅವೆಷ್ಟು ವಿಭಿನ್ನ ನೆಲೆಗಳಲ್ಲಿ ಶೋಷಣೆ ಮಾಡುತ್ತಿದೆ ಎಂಬುದನ್ನು ಗ್ರಹಿಸುವುದು ಅಷ್ಟು ಸುಲಭವಲ್ಲ. ಈ ಲಿಂಗ ತಾರತಮ್ಯದ ನೆಲೆಗಳು ಆದಿಮ ಕಾಲದಲ್ಲಿ ಮನುಷ್ಯ ಒಂದೆಡೆ ನೆಲೆಯೂರಲು ಯಾವಾಗ ಪ್ರಾರಂಭಿಸಿದನೋ ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಈ ಲಿಂಗ ತಾರತಮ್ಯ ನಡೆದುಕೊಂಡು ಬರುತ್ತಲೇ ಇದೆ. ಇದು ಹಾಗೆ ಮುಂದುವರಿಯುತ್ತಲೇ ಇರುತ್ತದೆ.

ಈ ದೃಷ್ಟಿಯಲ್ಲಿ ಹೆಣ್ಣು ಸಮಾಜದ ಪಾಲಿಗೆ ಒಂದು ವಸ್ತುವಲ್ಲದೆ ಬೇರೆನೂ ಅಲ್ಲ. ಒಮ್ಮೊಮ್ಮೆ ಅವಳನ್ನು ಮಹಾತಾಯಿ, ಮಹಾಸತಿ ಅಥವಾ ಕನ್ಯಾಕುಮಾರಿ ಎಂದು ಗುರುತಿಸುವುದು ಇದೆಯಾದರೂ ಅವಳ ಮಹತ್ವವನ್ನು ಒಪ್ಪಿಕೊಂಡಂತೇನು ಆಗಲಿಲ್ಲ. ಇವು ಅವಳನ್ನು ಕುರಿತು ಕಲ್ಪಿಸಿರುವ ಮಿಥ್‌ಗಳು ಅಷ್ಟೆ. ಪುರುಷನ ಸ್ವಭಾವದಲ್ಲಿ ಹೆಣ್ಣನ್ನು ಹೊಗಳಿ ಮಣಿಸುವ ತಂತ್ರ ಪರಿಣಾಮಕಾರಿಯೇನು ಅಲ್ಲ. ಆದರೆ ಅದಕ್ಕಿಂತ ಮಿಗಿಲಾಗಿ ಬೈಯುವುದರಿಂದ ಅವಳನ್ನು ಮಣಿಸುವುದು ತುಂಬಾ ಪರಿಣಾಮಕಾರಿಯಾಗಿ ಕಂಡಿರಬೇಕು. ಹೇಗೆಂದರೆ; ಹೊಗಳಿದಾಗ ಅವರ ಮುಖದಲ್ಲಿ ಇದ್ದ ಮಂದಹಾಸ ಬೈದಾಗ ಮಾಯವಾಗಿ ಮುಖ ಸಪ್ಪಗೆ ಮಾಡಿಕೊಂಡು ಏನೂ ಪ್ರತಿಕ್ರಿಯೆ ತೋರದವಳಂತೆ ಮಂಕಾಗಿ ಬಿಡುತ್ತಾಳೆ. ಅದೇ ರೀತಿ ಹೆಣ್ಣಿನ ಮಾಂಸ, ದೇಹದ ರಚನೆ, ಅವಳ ಲೈಂಗಿಕತೆಗಳೇನು ಕಲ್ಪಿತ ರಚನೆಗಳಲ್ಲ ಅವು ಜನ್ಮಜಾತ ಸತ್ಯಗಳು. ಲೈಂಗಿಕತೆಯ ಅನುಭವದಲ್ಲಿ ಯಾವ ಕಲ್ಪಕತೆಯೂ ಇರುವುದಿಲ್ಲ. ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಪರಸ್ಪರ ಮಾಂಸದ ಮುದ್ದೆಗಳೇ. ಇಬ್ಬರಿಗೂ ತೀರಾ ಸಹಜವಾದದ್ದು. ಈ ಸಹಜ ವಾಸ್ತವವನ್ನು ಕೂಡ ಪುರುಷ ಪ್ರಧಾನ ವ್ಯವಸ್ಥೆ ಒಪ್ಪಲು ಸಿದ್ಧವಿಲ್ಲ. ಇಲ್ಲಿ ದುರಂತ ಅಡಗಿರುವುದು ಎದ್ದು ಕಾಣುವ ಅಂಶವಾಗಿದೆ. ಇದನ್ನು ಅರಿಯದ ಪುರುಷ ಪ್ರಧಾನ ಸಮಾಜ ಹೆಣ್ಣಿನ ಸುತ್ತ ಸಹಸ್ರಾರು ಮಿಥ್‌ಗಳನ್ನು, ಗಾದೆಗಳನ್ನು, ಬೈಗುಳುಗಳನ್ನು ರೂಪಿಸುತ್ತ ಅವಳನ್ನು ನಿಯಂತ್ರಿಸುವ, ಬಂಧನದಲ್ಲಿಡುವ ಬಗೆಗಳನ್ನೇ ಧ್ಯಾನಿಸುತ್ತಿರುವ ಅವನಿಗೆ ಲೈಂಗಿಕತೆಯ ಸಹಜ ಸಂತೋಷದ ಅನುಭವಗಳನ್ನು ವಿರೂಪಗೊಳಿಸುವುದು ಕೂಡ ಒಪ್ಪಿಗೆಯಾಗಿಬಿಟ್ಟಿದೆ ಎನಿಸುತ್ತದೆ.

ಹೀಗೆ ಸಾಮಾಜಿಕ ವಲಯದಲ್ಲಿ ಮಿಥ್‌ಗಳು, ಗಾದೆಗಳು, ಬೈಗುಳುಗಳು ಪ್ರಯೋಗಗೊಂಡಾಗ ಪಡೆಯುವ ವಿಭಿನ್ನ ಅರ್ಥಗಳನ್ನು ಬೈಗುಳುಗಳ ಹಿನ್ನೆಲೆಯಲ್ಲಿ ಮಾತ್ರ ನೋಡಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ‘ಎನೋ ಬೋಳಿ ಮಗನೆ ಈಗ ಬರ್ತಾಯಿದ್ದೀಯಾ?’

ಈ ಮಾತಿನ ಸಂದರ್ಭ ನೋಡಿ; ಕೆಲಸಕ್ಕೆ ತಡವಾಗಿ ಬರುತ್ತಿರುವ ಆಳನ್ನು ಕುರಿತು ಯಜಮಾನ ಆಡುವ ಮಾತಿದು. ಇದನ್ನು ಗಮನಿಸಿದಾಗ ಇಲ್ಲಿ ತಡವಾಗಿ ಬರುವುದು ಗಂಡಾಳು. ಯಜಮಾನ ಬೈಯುವುದು ಆಳಿನ ತಾಯಿಯನ್ನು. ಯಾಕೆ ಈ ತರಹ ಲಿಂಗ ತಾರತಮ್ಯ ಎಂದು ಆಲೋಚಿಸಿದಾಗ ಹೆಣ್ಣನ್ನು ಕುರಿತು ಬೈದಾಗ ಅವನಿಗೆ ಕೋಪ ಬಂದರೂ ಏನು ಮಾಡುವುದಿಲ್ಲ. ವಿಪರೀತಕ್ಕೆ ಹೋದಾಗ ಆಳು ಯಜಮಾನನಿಗೆ ಬೈದಾಗಲೂ ಅವನು ಸಹ ಹೆಣ್ಣನ್ನೇ ಕೇಂದ್ರವಾಗಿರಿಸಿಕೊಂಡು ಬೈಯುತ್ತಾನೆ. ಇದು ವಿಚಿತ್ರವೆನಿಸಿದರೂ ಸತ್ಯ. ಹೆಣ್ಣನ್ನು ಬೈಯುವುದರ ಮೂಲಕ ಎದುರಾಳಿಯ ಮನಸ್ಸನ್ನು ಮತ್ತಷ್ಟು ಅಧೀನವಾಗಿಸುವುದು ಯಾಕೆಂದರೆ ಅವನು ಆಳಾಗಿರುವ ಕಾರಣ ಅವನು ಎದುರಾಡುವಂತಿಲ್ಲ. ಯಾಕೆಂದರೆ ಜೀವನ ಅವನು ಕೊಡುವ ಕೂಲಿಯ ಮೇಲೆ ನಿಂತಿರುತ್ತದೆ. ಹಾಗೆ ಅವನು ಸುಮ್ಮನಿರಬೇಕಾಗಿ ಬರುತ್ತದೆ. ಇಂಥಲ್ಲಿ ಕೊನೆ ಇರದ ಕಾರಣ ಪರಪಂರೆಯಲ್ಲಿ ಹಾಗೆ ಮುಂದುವರಿದುಕೊಂಡು ಬಂದಿವೆ. ಒಂದು ರೀತಿಯಲ್ಲಿ ರೂಢಿಗತವಾದ ಸಿದ್ಧ ಮಾದರಿಗಳಾಗಿ ರೂಪಿತವಾಗಿ ಬಿಟ್ಟಿವೆ. ಪರಿಸ್ಥಿತಿ ಹೀಗಿರುವಾಗ ಹೆಣ್ಣಿನ ಗೋಳು ಯಾರು ಕೇಳಬೇಕು.

ಹೀಗೆ ಲಿಂಗತಾರತಮ್ಯದ ಹಲವಾರು ಆಯಾಮಗಳಲ್ಲಿ ಹೆಣ್ಣಿನ ಮೇಲೆ ಅವಹೇಳನಕಾರಿಯಾದ ಮಾತಿನ ಪ್ರಹಾರ ನಡೆಯುತ್ತಲೇ ಇದೆ. ಅವುಗಳನ್ನು ಹೆಕ್ಕಿ ತೆಗೆದು ಅವುಗಳ ಕುರಿತು ಇನ್ನಷ್ಟು ಆಳಕ್ಕೆ ಇಳಿದಾಗ ಮತ್ತಷ್ಟು ಒಳನೋಟಗಳು ನಮಗೆ ವೇದ್ಯವಾಗುತ್ತವೆ.

ಮಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವ ಆತ್ಮವು ಹೆಣ್ಣು ಅಲ್ಲ
ಗಂಡೂ ಅಲ್ಲ ಕಾಣಾ ರಾಮನಾಥ

ಎಂಬ ಜೇಡರದಾಸೀಮಯ್ಯನ ಈ ವಚನ ಮಹಿಳೆ ಮತ್ತು ಪುರುಷನ ನಡುವೆ ಮಹಾಗೋಡೆಯಾಗಿ ನಿಂತಿರುವ ಲಿಂಗತಾರತಮ್ಯದ ಅಸಮಾನ ಮತ್ತು ಅಮಾನವೀಯವಾದ ವಾತಾವರಣಕ್ಕೆ ಈ ಮೇಲಿನ ವಚನವು ಮತ್ತೆ ಮತ್ತೆ ಪಸ್ತಾಪಿಸಲ್ಪಡುತ್ತದೆ. ಉತ್ಪಾದನಾ ಸಂಬಂಧ ಮತ್ತು ಉತ್ಪಾದನೆಯ ಮೇಲಿನ ಹಿಡಿತದ ಹಿನ್ನೆಲೆಯಲ್ಲಿ ಸೃಷ್ಟಿಸಲ್ಪಟ್ಟ ಈ ಬೇಧದ ನೀತಿಯ ಬೇರು ಖಾಸಗಿ ಆಸ್ತಿಯ ಉಗಮದೊಂದಿಗೆ ತಳುಕು ಹಾಕಿಕೊಂಡಿದೆ. ಇದರೊಂದಿಗೆಯೇ ಶುರುವಾಗಿ ಈ ಲಿಂಗತಾರತಮ್ಯದ ನೆಲೆಗಳು ಒಟ್ಟಾಗಿ ಕೂಡಿಕೊಂಡು ಮಹಿಳೆಯ ಅಸ್ತತ್ವದ ಮೇಲೆ ಪ್ರಹಾರಮಾಡಿ ಗಟ್ಟಿಯಾದ ಹಿಡಿತ ಸಾಧಿಸತೊಡಗಿದವು.

ಮಾತೆಯರು ಮಾನ್ಯರಾಗಿದ್ದ ವ್ವವಸ್ಥೆಯಲ್ಲಿ ಮಹಿಳೆಯನ್ನು ‘ತಾಯಿ’ಯೆಂದು ಗೌರವಿಸುತ್ತಿದ್ದರು. ಮಾನವ ಜನಾಂಗವನ್ನು ವೃದ್ಧಿಸುವ, ತನ್ನೊಡಲಿನಿಂದ ಹೊಸ ಜೀವವನ್ನು ಜಗತ್ತಿಗೆ ಕೊಡುವ ‘ಮಾಹಾತಾಯಿ’ ಅವಳಾಗಿದ್ದಳು. ಆದರೆ ಆಹಾರ ಅರಸಿ ಭೂಮಂಡಲದ ಉದ್ದಗಲಕ್ಕೂ ಓಡಾಡುವ ಸಂಚಾರಿ ಮಾನವ, ಒಂದೆಡೆ ನೆಲೆಗೊಂಡು ಆಸ್ತಿಯ ಮೇಲೆ ಒಡೆತನ ಹೊಂದಿ ಮಹಿಳೆಯನ್ನು ಸಾಮಾಜಿಕ, ಆರ್ಥಿಕ ಸಮಬಂಧದಿಂದ ವಿಮುಖಗೊಳಿಸಿ ಅವಳನ್ನು ಕೇವಲ ಮನೆಯ ಕೆಲಸಕ್ಕೆ ಸೀಮಿತಗೊಳಿಸಿದನು. ಸಂಪತ್ತಿನಂತೆ ಮಹಿಳೆಯನ್ನು ಖಾಸಗಿ ಆಸ್ತಿಯಾಗಿಸಲಾಯಿತು. ಧಾರ್ಮಿಕ ವಲಯದಲ್ಲಿ ‘ಮಾಯೆ’ ಎಂದು ಸಾಮಾಜಿಕ ಸಂದರ್ಭದಲ್ಲಿ ಮಕ್ಕಳನ್ನು ಹೇರುವ ಯಂತ್ರವಾದಳು. ಹೀಗೆ ಎಲ್ಲಾ ವಿಧದಲ್ಲಿ ಮಹಿಳೆಯನ್ನು ಕೀಳಾಗಿ ಕಾಣುವ ಸಮಾಜದಲ್ಲಿ ಬೈಗುಳುಗಳಿಂದ ಅವಳ ಮೇಲೆ ಮತ್ತಷ್ಟು ಹಲ್ಲೆ ನಡೆಸುವುದರ ಮೂಲಕ ಅವಳನ್ನು ಮತ್ತಷ್ಟು ಅಂಚಿಗೆ ತಳ್ಳಲಾಯಿತು.

ಸಾಮಾಜಿಕ ಸಂಬಂಧಗಳಲ್ಲಿ ಲಿಂಗತಾರತಮ್ಯ ತುಂಬಾ ವ್ಯಾಪಕವಾಗಿ, ಹೆಣ್ಣು ಬೇರೆ, ಗಂಡು ಬೇರೆ. ಗಂಡಿಗಿರುವ ಸ್ಥಾನಮಾನಗಳು ಹೆಣ್ಣಿಗಿಲ್ಲ. ಅದು ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಭಾಷಿಕವಾಗಿ, ಉಡುಗೆ ತೊಡುಗೆಯಲ್ಲಾಗಲಿ, ಊಟ ಉಪಚಾರದಲ್ಲಾಗಲಿ ಹೀಗೆ ನಾನಾ ವಲಯಗಳಲ್ಲಿ ಸ್ತ್ರೀಗೆ ಯಾವುದೇ ರೀತಿಯ ಪ್ರಾಶಸ್ತ್ಯವಿಲ್ಲ. ಸಮಾಜದಲ್ಲಿ ಯಾವುದೇ ವರ್ಗದ ಜನರು ಬೈಯುವಾಗಲೂ ಹೆಣ್ಣನ್ನು ಕೇಂದ್ರವಾಗಿರಿಸಿಕೊಂಡು ಬೈಯುವುದು ಒಂದು ರೂಢಿ ನಿಯಮದಂತೆ ಜಾರಿಗೆ ಬಂದುಬಿಟ್ಟಿದೆ.

ಅನೇಕ ಸಂದರ್ಭಗಳಲ್ಲಿ ವಿಭಿನ್ನವಾದ ಮತ್ತು ಹೇಸಿಕೆಯೆನಿಸುವ್ಷಟು ಕೆಟ್ಟ ಬೈಗುಳುಗಳು ನಮ್ಮ ಸಾಮಾಜಿಕ ವಲಯದಲ್ಲಿ ಸಿಗುತ್ತವೆ. ಅಂಥವುಗಳಲ್ಲಿ ಮುಖ್ಯವಾಗಿ ಇಲ್ಲಿ ಸ್ತ್ರೀ ಕೇಂದ್ರವಾಗಿರಿಸಿಕೊಂಡು ಬಳಕೆಗೊಳ್ಳುವ ಬೈಗುಳುಗಳ ಸ್ವರೂಪ ಮತ್ತು ಅವುಗಳ ಹಿಂದಿರುವ ಮನೋಧರ್ಮದ ಜೊತೆಗೆ ಲಿಂಗ ತಾರತಮ್ಯದ ತಾತ್ವಿಕ ನೆಲೆಗಳನ್ನು ಈ ಕೆಳಗಿನಂತೆ ನೋಡಬಹುದು.