ಗಂಡಸರ ಬೈಗುಳುಗಳ ಸ್ವರೂಪ ಮತ್ತು ಅವುಗಳ ಹಿಂದಿನ ಮನೋಧರ್ಮ

ಸಾಮಾನ್ಯವಾಗಿ ಗಂಡಸರು ಬೈಯುವ ಸ್ವರೂಪ ಗಢುಸಾಗಿ ಏರುಧ್ವನಿಯಲ್ಲಿ ಗಟ್ಟಿಯಾಗಿ ಬೈಯುವುದು ರೂಢಿ. ಇದನ್ನು ಗಂಡಸರು ಸಹಜವಾಗಿ ರೂಢಿಸಿಕೊಂಡು ಬಂದಿರುತ್ತಾರೆ. ಗಂಡಸರು ಮಾತೆತ್ತಿದರೆ ‘ಲೇ ಬೋಸುಡಿ ಮಗನೇ’, ‘ಬದ್ಮಾಷ್ ರಂಡೆ’, ‘ನಿನ ಬೋಸುಡನಾಡ’, ಇನ್ನೂ ಅಸಹ್ಯವೆನಿಸುವಂತಹ ಬೈಗುಳುಗಳನ್ನು ಬಳಸುವುದನ್ನು ನಾವು ಕಾಣುತ್ತೇವೆ. ಇವುಗಳನ್ನು ಗಮನಿಸಿದಾಗ ಅವನ ಮಾತಿನ ಧಾಟಿಯಲ್ಲಿ ತನ್ನ ಅಸ್ತಿತ್ವದ ಅಹಮಿಕೆಯನ್ನು, ದರ್ಪವನ್ನು ತೋರಿಸುವುದಾಗಿರುತ್ತದೆ. ಜೊತೆಗೆ ಗಂಡಸುತನದ ಗಡುಸನ್ನು ಇನ್ನೊಬ್ಬರು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯ ಪಡುವಂತೆ ಮಾಡುವುದಾಗಿರುತ್ತದೆ.

ಸಹಜವಾಗಿ ಗಂಡಸು ಸಮಾಜದಲ್ಲಿ ತನಗೆ ಉನ್ನತ ಸ್ಥಾನವಿದೆ. ನಾನು ಏನೇ ಅಂದರೂ, ಏನೇ ಮಾಡಿದರೂ ನಡೆದು ಹೋಗುತ್ತದೆ ಎನ್ನುವ ಗರ್ವದಲ್ಲಿರುತ್ತಾನೆ. ಹಾಗಾಗಿ ಅವನ ಬಾಯಿಂದ ಕೆಟ್ಟ ಕೆಟ್ಟ ಬೈಗುಳುಗಳು ಹೊರಬೀಳುತ್ತವೆ ಎಂದು ಶಂಕಿಸಬಹುದು. ಪುರುಷ ಪ್ರಧಾನ ವ್ಯವಸ್ಥೆಯ ಆಲೋಚನೆಗೆ ತಕ್ಕಂತೆ ಸಮಾಜದಲ್ಲಿ ಅವು ಆರ್ಥಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಕೌಟುಂಬಿಕವಾಗಿ ಈ ಎಲ್ಲಾ ವಲಯಗಳಲ್ಲಿ ಸ್ತ್ರೀಗಿಂತ ಮೇಲ್‌ಸ್ತರದ ಉತ್ತಮ ಸ್ಥಾನದಲ್ಲಿದ್ದೇನೆ ಎಂಬ ಅಹಂಕಾರದಿಂದ ಅವನ ವಕ್ರತೆ ನಿಂತಿರುವುದನ್ನು ಕಾಣಬಹುದು. ಇದರ ಜೊತೆಗೆ ಅವನು ಅಸ್ತಿತ್ವವನ್ನು ಉಳಿಸಿಕೊಂಡಿದ್ದಾನೆ. ಅದು ‘ಗಂಡಸು’ ಎನ್ನುವ ಪದದಲ್ಲಿ ಅಡಕವಾಗಿದೆ. ಇದನ್ನು ಗಮನಿಸಿದಾಗ ‘ಗಂಡಸು’ ಎನಿಸಿಕೊಂಡವನು ತನ್ನ ಅಸ್ತಿತ್ವಕ್ಕಾಗಿ ಸದಾ ಹುಡುಕಾಡವನ್ನು ನಡೆಸುತ್ತಿರುತ್ತಾನೆ. ಇದು ವರ್ಗಾಧಾರಿತವಾಗಿ, ಧಾರ್ಮಿಕವಾಗಿ ಇರುತ್ತದೆ. ಇಂಥಲ್ಲಿ ಅವನ ನೇರ ನೋಟದಲ್ಲಿ ‘ನಾನು ಮುಖ್ಯ’, ‘ಉಳಿದವರು ಅಮುಖ್ಯ’ ಎನ್ನುವುದಾಗಿರುತ್ತದೆಯೇ ವಿನಃ ಬೇರೆಯವರಲ್ಲ ಎನ್ನುವುದು ಎದ್ದುಕಾಣುವ ಅಂಶವಾಗಿದೆ. ಹಾಗಾಗಿ ಅವನ ಭಾಷಿಕ ಸ್ವರೂಪ ಮತ್ತು ಅವನ ನಡುವಳಿಕೆ ಹಾಗೂ ಮನೋಧರ್ಮಗಳು ಅವನ ಮೂಗಿನ ನೇರಕ್ಕೆ ಹೊಂದಿಕೊಂಡಂತೆ ನಿಂತಿರುತ್ತವೆ. ಬಹುತೇಕವಾಗಿ ಇದು ಎಲ್ಲಾ ಜಾತಿ, ಮತ, ಧರ್ಮಿಯರ ಪುರುಷರಿಗೆ ಅನ್ವಯಿಸುವ ಮಾತಾಗಿದೆ.

ಹೆಂಗಸರ ಬೈಗುಳುಗಳ ಸ್ವರೂಪ ಮತ್ತು ಹಿಂದಿನ ಮನೋಧರ್ಮ

ದಿನನಿತ್ಯದ ಜೀವನದಲ್ಲಿ ಮಹಿಳೆ ಆತಂಕದ ಬದುಕನ್ನು ಎದಿರಿಸುತ್ತಲೇ ಬರುತ್ತಿದ್ದಾಳೆ. ಅಂಥದರಲ್ಲೇ ಬದುಕನ್ನು ಸಾಗಿಸುತ್ತ ಬರುವ ಮಹಿಳೆ ಮಾತು ಎತ್ತುವ ಮುಂಚೆ ಮೊದಲು ತನ್ನ ಆತ್ಮ ರಕ್ಷಣೆಗಾಗಿ ಹುಡುಕಾಟ ನಡೆಸುತ್ತಾಳೆ ಎನ್ನುವುದನ್ನು ಗಮನಿಸಬೇಕಾದ ಸಂಗತಿ. ನಾವು ಯಾರೋ ಒಬ್ಬ ಮಹಿಳೆ ಚೆನ್ನಾಗಿ ಬೈದು ಗಂಡಸರನ್ನು ಮಾತಿಗೆ ಬರದಂತೆ ಮಾಡಿದ ಉದಾಹರಣೆಯನ್ನು ಹೇಳಿದರೆ ಇಲ್ಲಿ ಏನೂ ಹೇಳಿದಂತೆ ಆಗುವುದಿಲ್ಲ ಎಂದೆನಿಸುತ್ತದೆ. ಹಾಗಾಗಿ ಅದನ್ನು ಬದಿಗಿರಿಸಿ ಅವಳು ಒಟ್ಟಾರೆ ಸಾಮಾಜಿಕ ಸಂಬಂಧದಲ್ಲಿ ಮತ್ತು ಕೌಟುಂಬಿಕ ಸಂಬಂಧದಲ್ಲಿ ಮತ್ತು ವರ್ಗಾಧಾರಿತ ನೆಲೆಯಲ್ಲಿ ಯಾವ ರೀತಿಯಲ್ಲಿ ಕಟ್ಟಿ ಹಾಕಲ್ಪಟ್ಟಿದ್ದಾಳೆ (ಇಲ್ಲಿ ಬೈಗುಳುಗಳ ಸಂದರ್ಭ ಎಂದು ತಿಳಿದುಕೊಳ್ಳಬೇಕು). ಹೀಗಿರುವಾಗ ಮಹಿಳೆ ತಾನು ಗಂಡನಿಗೆ ಎನೆಲ್ಲ ಬೈದು ಎದೆಯನ್ನು ದಬದಬ ಹೊಡೆದರೂ ಕೊನೆಗೆ ಅವಳು ಅವನ ಮೇಲೆ ಬಿದ್ದೋ! ಇಲ್ಲವೇ ಕಾಲನ್ನು ಹಿಡಿದುಕೊಂಡೋ ನಾನು ಅಧೀರಳು, ನಿನ್ನನ್ನು ಹೊರತು ನನಗೆ ಯಾರು ದಿಕ್ಕಿಲ್ಲ. ನಿನ್ನನ್ನು ಬಿಟ್ಟರೆ ನನಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿಲ್ಲ. ನಿನ್ನನ್ನು ಬಿಟ್ಟರೆ ಸಮಾಜದ ಬದುಕಿನಲ್ಲಿ ನಾನು ‘ಗಂಡನನ್ನು ಬಿಟ್ಟವಳು’, ಬೋಳಿ, ಹಾದರದವಳೆ, ಲೇ ಬಂಡಿ ಎಂಬಿತ್ಯಾದಿ ಬಿರುದುಗಳನ್ನು ಹೊತ್ತುಕೊಂಡು ಭಂಡ ಬಾಳುವೆ ನಡೆಸಬೇಕು. ಇಲ್ಲದಿದ್ದರೆ ಕೆರೆಗೋ ಬಾವಿಗೋ ಬಿದ್ದು ಪ್ರಾಣ ಕಳೆದುಕೊಳ್ಳಬೇಕು. ಇದು ಸಮಾಜದಲ್ಲಿ ನಾವು ಹೆಣ್ಣಿಗೆ ಕೊಡುತ್ತ ಬಂದಿರುವ ವಿಶೇಷ ಬಹುಮಾನಗಳು. ಸ್ವಲ್ಪ ಮಾತಿನ ದಾಟಿ ಹೆಚ್ಚಿದಂತೆ ಅನಿಸಿದರೂ ವಾಸ್ತವದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಸ್ಥಿತಿಯನ್ನು ಗಮನಿಸಿ ಹೇಳಿದ್ದಾಗಿದೆ.

ಸಾಮಾಜಿಕ ಬದುಕಿನಲ್ಲಿ ಮಹಿಳೆಗೆ ಅಗಾಧ ಸ್ಥಾನವಿದೆ ಎಂದು ಮೇಲು ನೋಟಕ್ಕೆ ಹೆಣ್ಣನ್ನು ಭೂಮಿತಾಯಿಗೆ ಹೋಲಿಸಿ ಸಹನಶೀಲಳು, ಕ್ಷಮಯಾಧರಿತ್ರಿ ಎಂಬಿತ್ಯಾದಿ ಘನವಾದ ಮಾತುಗಳಿಂದ ಕರೆದು ಅವಳನ್ನು ಮಾತಾಡದಂತೆ ಮಾಡಿರುವ ಉದಾಹರಣೆಗಳು ಸಾಕಷ್ಷಿವೆ. ಅದೇ ರೀತಿ ಕೌಟುಂಬಿಕ ವಲಯದಲ್ಲೂ ಸಹ ಅವಳಿಗೆ ವಿಶೇಷ ಸ್ಥಾನವಿದೆ ಎಂದುಕೊಂಡರೂ ನಾಲ್ಕು ಗೋಡೆಗಳ ಮಧ್ಯನೇ ಅವಳು ಬದುಕು ಸವೆಸುತ್ತ ಬಾಳುವೆ ಮಾಡುತ್ತಿರುವುದು ಸತ್ಯದ ಸಂಗತಿಯಾಗಿದೆ.

ಬೈಗುಳುಗಳ ಸ್ವರೂಪದಲ್ಲಿ ಮಹಿಳೆ ಮೊದಲು ತನ್ನ ಆತ್ಮರಕ್ಷಣೆಯ ಬಗ್ಗೆ ಚಿಂತಿಸಿ ಬೈಯುವುದನ್ನು ಕಾಣಬಹುದು. ಉದಾಹರಣೆಗೆ ‘ಲೋ ನಿರ್ವಾಣಿ’, ‘ನೀ ನೆಕ್ಕಂದೋಗ, ‘ನಿನ್ನ ಸೊಲ್ಲಡಗ’, ‘ನಿನ್ನ ಹೆಂಡ್ತಿ ರಂಡ್ಯಾಗ’, ‘ನಿನ್ ಹೊತ್ಗೊಂಡೋಗ’, ಮುಂತಾದ ಬೈಗುಳುಗಳು ಅವನು ಇಲ್ಲದಂತೆ (ಸತ್ತು) ಇರುವ ಸ್ಥಿತಿಯನ್ನು ಅಂದರೆ ಅವನು ಸಾಯಬೇಕು ಎನ್ನುವ ದಾಟಿ ಎದ್ದು ಕಾಣುತ್ತದೆ. ಇದನ್ನು ಗಮನಿಸಿದಾಗ ಹೆಣ್ಣಿಗೆ ಗಂಡಿನಿಂದ ಹೆಚ್ಚಾದ ಕಿರುಕುಳ ಇರುವುದರಿಂದ ಸಹಜವಾಗಿ ಹೆಣ್ಣು ಇಂಥಹ ಬೈಗುಳುಗಳನ್ನು ಬೈಯುತ್ತಾಳೆ. ಅವನು ಸತ್ತ ಎಂದರೆ ಅವಳಿಗೆ ಮಾನಸಿಕವಾಗಿ ಸ್ವಲ್ಪ ಆಘಾತವೆನಿಸಬಹುದಾದರೂ ಕೊನೆಗೆ ಅವಳು ಮರುಗುವ ಸ್ಥಿತಿಯನ್ನು ನೋಡಿದರೆ ಅವಳ ಮನಃಸ್ಥಿತಿ ಎಂಥಹುದು ಎಂದು ಗೊತ್ತಾಗುತ್ತದೆ. ಇಂತಹ ಮಹಿಳೆಯನ್ನು ಬೈಗುಳುಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದಾಗ ಎಂಥೆಂಥ ಬೈಗುಳು ಸಮಾಜದಲ್ಲಿ ಇವೆ. ಈ ಬೈಗುಳುಗಳಿಂದ ಹೆಣ್ಣಿನ ಜೀವನದ ಸ್ಥಿತಿ ಮತ್ತು ಬದುಕಿನ ಸ್ಥಿತಿಯಲ್ಲಿ ಅವಳ ಪಾಡೇನಾಗಿದೆ ಎಂದು ಬೈಗುಳುಗಳ ಹಿನ್ನೆಲೆಯಲ್ಲಿ ಆಲೋಚಿಸಿದಾಗ ಅದರ ತಿರುಳನ್ನು ನಾವು ಗಮನಿಸಬಹುದು.

ಬೈಗುಳುಗಳು: ಶೀಲ

ಶೀಲವನ್ನು ಮುಖ್ಯವಾಗಿರಿಸಿಕೊಂಡು ಬಳಕೆಯಾಗುವ ಬೈಗುಳುಗಳನ್ನು ವಿಶ್ಲೇಷಿಸುವುದಕ್ಕಿಂತ ಪೂರ್ವದಲ್ಲಿ ‘ಶೀಲ’ದ ಕುರಿತು ಒಂದಷ್ಟು ತಿಳಿಯುವುದು ಇಲ್ಲಿ ಮುಖ್ಯವೆನಿಸುತ್ತದೆ. ಅನೇಕರು ಅನೇಕ ಸಂದರ್ಭಗಳಲ್ಲಿ ‘ಶೀಲ’ದ ಬಗೆಗೆ ಮಾತನಾಡುವುದುಂಟು. ‘ಶೀಲ’ ಎಂದರೇನು? ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ತಕ್ಷಣವೇ ಒಂದೇ ಮಾತಿನಲ್ಲಾಗಲೀ ಅಥವಾ ಒಂದೇ ವಾಕ್ಯದಲ್ಲಾಗಲಿ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ಒಂದು ಬಾರಿ ಶೀಲ ಎನ್ನುವುದರ ಕುರಿತು ಆಲೋಚಿಸಿ ಮಾತನಾಡಬೇಕಾಗುತ್ತದೆ. ‘ಹೆಣ್ಣು’ ವಿವಾಹಪೂರ್ವದಲ್ಲಿ ಕನ್ಯತ್ವವನ್ನು ಹಾಗೆಯೇ ಕಾಪಾಡಿಕೊಂಡು ಬಂದು ವಿವಾಹದ ನಂತರ ತನ್ನ ಗಂಡನೊಂದಿಗೆ ಮಾತ್ರ ಶಾರೀರಿಕ ಸಂಬಂಧವನ್ನು ಹೊಂದಿದ್ದರೆ ಮಾತ್ರ ಆ ‘ಹೆಣ್ಣ’ನ್ನು ‘ಶೀಲವಂತ’ ಹೆಣ್ಣು ಎಂದು ಭಾವಿಸಲಾಗುತ್ತದೆ. ಇದು ಸಾಮಾನ್ಯ ತಿಳುವಳಿಕೆಯಾಗಿದೆ. ಮೇಲಿನ ಈ ವ್ಯಾಖ್ಯಾನವು ‘ಶೀಲ’ದ ಬಗೆಗೆ ವಿವರಣೆ ನೀಡುತ್ತದೆಯೇ ಹೊರತು; ‘ಶೀಲ’ ಎಂದರೇನು? ಎಂಬುದನ್ನು ವ್ಯಾಖ್ಯಾನವನ್ನು ಮಾಡುವುದಿಲ್ಲ.

‘ಶೀಲ’ ಎಂಬುದು ಒಂದು ಅಮೂರ್ತ ಕಲ್ಪನೆಯಾಗಿದೆ. ಅದು ಶರೀರಕ್ಕೆ ಸಂಬಂಧ ಪಡದೆ, ಮನಸ್ಸಿಗೆ ಸಂಬಂಧಪಟ್ಟ ವಿಚಾರವಾಗಿದೆ. ಜನರು ಸಂದರ್ಭೋಚಿತವಾಗಿ ಬಳಸುವ ಕೆಲವು ನುಡಿಗಟ್ಟುಗಳನ್ನು ಗಮನಿಸಬಹುದು. ‘ಗಂಗೆಗೆ ಶೀಲವಿಲ್ಲ ಲಿಂಗಕ್ಕೆ ಪೂಜೆಯಿಲ್ಲ’.‘ಶೀಲ’ವಿಲ್ಲದ ಶಿಕ್ಷಣ ಎಂಬ ನುಡಿಗಟ್ಟುಗಳು ‘ಶೀಲ’ ಎಂದರೆ ಶುದ್ಧ, ಒಳ್ಳೆಯದು, ನೀತಿ, ಶ್ರೇಷ್ಠ ಎಂಬುದನ್ನೇ ಧ್ವನಿಸುತ್ತವೆ. ನೀರಿನಲ್ಲಿ ಏನೆಲ್ಲ ಕೊಳೆಯನ್ನು ಹಾಕಿದರೂ ಅದು ಕೊಳೆಯನ್ನು ತನ್ನಲ್ಲಿ ಅಡಗಿಸಿಕೊಂಡು ಮತ್ತೆ ತಿಳಿಯಾಗಿ ಶುದ್ಧವಾಗುತ್ತದೆ. ಹಾಗೆಯೇ ‘ಶಿಕ್ಷಣ’ವೆಂಬುದು ಬರೀ ಜ್ಞಾನವನ್ನು ಬೋಧಿಸಿದರೆ ಸಾಲದು ಆ ಜ್ಞಾನ ನೀತಿಯಿಂದ ಕೂಡಿರಬೇಕು. ಅದುವೇ ನಿಜವಾದ ಶಿಕ್ಷಣ ಎಂದು ಗಾಂಧೀಜಿಯವರು ಅಭಿಪ್ರಾಯಪಡುತ್ತಾರೆ. ಈ ಎಲ್ಲ ಚಿಂತನೆಗಳು ‘ಶೀಲ’ ಎಂಬುದು ‘ಪವಿತ್ರ’ವಾದುದು ಅದು ಮನಸ್ಸಿಗೆ ಸಂಬಂಧಪಟ್ಟದ್ದಾಗಿದೆ ಎಂಬುದನ್ನೇ ಪ್ರತಿಪಾದಿಸುತ್ತವೆ.

ಅಲ್ಲಮಪ್ರಭು ಶೀಲದ ಬಗೆಗೆ ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ;

ಸುಖವನರಿಯದ ಹೆಣ್ಣು, ಸೂಳೆಯಾದಳು
ಲಿಂಗವನರಿಯದಾತ ಶೀಲವಂತನಾದ
ಸುಖವಿಲ್ಲ ಸೂಳೆಗೆ, ಪಥವಿಲ್ಲ ಶೀಲಕ್ಕೆ
ಮಾಡಲಾಗದು ನೇಮವ, ನೋಡಲಾಗದು ಶೀಲವ
ಸತ್ಯ ಸಹಜ ಸತ್ಶೀಲ
ಗುಹೇಶ್ವರರನರಿಯ ಬಲ್ಲವಂಗೆ

ಈ ವಚನವನ್ನು ಗಮನಿಸಿದಾಗ ಶೀಲವನ್ನು ಕುರಿತು ಆಧ್ಯಾತ್ಮಿಕ ನೆಲೆಯಲ್ಲಿ ಅರ್ಥೈಸಿದರೂ ಸಹ ಶುದ್ಧ, ಪವಿತ್ರ ಎಂಬುದನ್ನೇ ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

‘ಶೀಲ’ ಎಂಬುದು ಶರೀರ ಸಂಬಂಧಿ ವಿಷಯವಾಗಿದ್ದು, ಅದು ಹೆಣ್ಣಿಗೆ ಮಾತ್ರ ಸೀಮಿತವಾದುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಆದರೆ ಶೀಲ ಎಂಬುದು ಶರೀರ ಸಂಬಂಧಿಯಾಗಿರದೆ, ಅದು ಮನಸ್ಸಿಗೆ ಸಂಬಂಧಪಟ್ಟ ಸಂಗತಿಯಾಗಿರುವುದರಿಂದ ಅದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅನ್ವಯಿಸುವ ಸಂಗತಿಯಾಗಿದೆ. ಸ್ವಚ್ಛವಾಗಿರುವ ವ್ಯಕ್ತಿ, ಗಲೀಜಿನಿಂದ ಕೂಡಿದ ವ್ಯಕ್ತಿಯನ್ನು ಮುಟ್ಟಿಸಿಕೊಳ್ಳದೆ ಇರುವಾಗ ‘ಇವನು ಬಹಳ ಶೀಲವಂತ’ ಎಂದು ದೂಷಿಸುವುದನ್ನು ಗಮನಿಸಬಹುದು.

‘ಶೀಲ’ ಎಂಬುದು ಹೆಣ್ಣಿಗೆ ಬೇರೆ, ಗಂಡಿಗೆ ಬೇರೆ ಎಂದು ಪ್ರತ್ಯೇಕವಾಗಿಲ್ಲ. ಇಬ್ಬರಿಗೂ ಒಂದೆ ಇದೆಯಾದರೂ ಸಮಾಜದಲ್ಲಿ ಅದು ಹೆಣ್ಣಿಗಷ್ಟೆ ಸಂಬಂದಧಿಸಿದ್ದು ಎಂದು ಪ್ರತಿಪಾದಿತವಾಗಿಬಿಟ್ಟಿದೆ. ಇಷ್ಟೆಲ್ಲ ವಿಚಾರಗಳನ್ನು ಗಮನಿಸಿದ ಮೇಲೆ ಶೀಲವನ್ನು ಕುರಿತು ಬೈಗುಳುಗಳಲ್ಲಿ ಹೇಗೆ ಬಳಕೆಗೊಂಡಿವೆ ಎಂಬುದನ್ನು ಪರಿಶೀಲಿಸೊಣ.

ಹಾದರಗಿತ್ತಿ.
ನಿನ್ನಂಗ ನಾ ಹಾದರ ಮಾಡಿದವಳಲ್ಲ.
ಲೇ ಗಂಡನ್ನ ಬಿಟ್ಟವ್ಳೆ.
ಬೋಳಿ.
ಗೊಡ್ಡಿ.
ಬಂಜೆ.
ಗಂಡನ್ನ ಬಿಟ್ಟು ಓಡಿ ಬಂದವ್ಳೆ.
ಲೇ ಬಜಾರಿ.
ನಡತೆಗೆಟ್ಟವಳೆ ಇತ್ಯಾದಿ.

ಈ ಮೇಲಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ಗಮಿಸಿದಾಗ ಇವುಗಳು ಹೆಣ್ಣಿನ ‘ಶೀಲ’ವನ್ನು ಕುರಿತಾಗಿ ಬೈಯುವ ಬೈಗುಳುಗಳಲ್ಲಿ ಬಳಕೆಗೊಳ್ಳುತ್ತಿವೆ. ಸಮಾಜದಲ್ಲಿ ‘ಶೀಲ’ಕ್ಕೆ ಗೌರವ ಭಾವನೆ ಇದೆ ಎಂದು ಗೊತ್ತಿದ್ದರೂ ಸಹ ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಅದಕ್ಕೆ ಅಗೌರವದ ಭಾವನೆಯನ್ನು ಬಿತ್ತುತ್ತ ಬರಲಾಗಿದೆ. ಏಕೆಂದರೆ ನಮ್ಮ ಸಮಾಜ ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿದ ಮೌಲ್ಯಗಳ ಒಳಗೆ ಜೀವಿಸುತ್ತಿರುವುದರಿಂದ ಆ ಮೌಲ್ಯಗಳನ್ನು ಒಪ್ಪಿ ಮುಂದುವರೆಯಬೇಕಿದೆ, ಹಾಗಾಗಿ ಪುರುಷ ತನಗೆ ಎಲ್ಲಿ ಆತಂಕ ಬಂದು ಬಿಡುತ್ತದೋ ಎಂದು ಮುಂದಾಲೋಚನೆಯಿಂದ ತನಗೆ ಬೇಕಾದ ಮೌಲ್ಯಗಳನ್ನು ಸೃಷ್ಟಿಸುತ್ತಾ, ಜಾರಿಗೊಳಿಸುತ್ತಾ ಬಂದಿದ್ದಾನೆ. ಹೆಣ್ಣಿನ ವಿಚಾರಕ್ಕೆ ಬಂದಾಗ ಅವಳು ಸಹ ತನ್ನ ಹತೋಟಿಯಲ್ಲಿರಬೇಕು. ಅವಳು ನನಗೆ ಎದುರಾಡಬಾರದು ಎನ್ನುವುದನ್ನು ಗಮನಿಸಿ ಪುರುಷ ಮನಸ್ಸು ‘ಶೀಲ’ ಎಂಬ ಅಮೂರ್ತ ಭಾವನೆಗೆ ಮೂರ್ತ ಭಾವನೆಯನ್ನು ಬೆಳೆಸಿ ಅದರಿಂದ ಮಹಿಳೆಯನ್ನು ಬೈಯುವುದರ ಮೂಲಕ ಅಪಮಾನಗೊಳಿಸುತ್ತ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದಾನೆ ಮತ್ತು ಆ ಕುರಿತು ಬೇರೆ ಬೇರೆ ದಾರಿಗಳನ್ನು ಹುಡುಕುತ್ತಲೆ ಇದ್ದಾರೆ.

ಬೈಗುಳುಗಳು: ಅನೈತಿಕತೆ/ಲೈಂಗಿಕತೆ

ಸ್ತ್ರೀ ಪುರುಷರ ಲೈಂಗಿಕ ಚಟುವಟಿಕೆಯನ್ನು ಪ್ರತ್ಯೇಕವಾಗಿ ಪರಿಭಾವಿಸಿ ಪರಸ್ಪರ ತುಲನೆಗೊಳಪಡಿಸಿ ಬೆಲೆಕಟ್ಟುವ ಕ್ರಮದಲ್ಲಿ ಪಿತೃಪ್ರಧಾನತೆಯ ಸ್ತ್ರೀಯು ಸಂತಾನೋತ್ಪತ್ತಿ ಗುಣವನ್ನು ಒಂದೆಡೆ ಅತಿಮಾನುಷ ಅಂಶವಾಗಿ ಪರಿಭಾವಿಸುವ ಮೂಲಕ ತಾತ್ವಿಕವಾಗಿ ಗೌರವವನ್ನು, ಇನ್ನೊಂದೆಡೆ ಪ್ರಾಯೋಗಿಕವಾಗಿ ಬಳಕೆಯ ಸರಕಾಗಿಯೂ ಪರಿಭಾವಿಸಲಾಗಿದೆಯೇ ಹೊರತು, ಅದನ್ನೊಂದು ಮಾನವ ಸಹಜ ಗುಣಲಕ್ಷಣವಾಗಿ ಅಲ್ಲ. ಇಲ್ಲಿ ಪುರುಷ ತನ್ನ ಲೈಂಗಿಕತೆ ಶ್ರೆಷ್ಠತೆಯಿಂದ ಯಜಮಾನನಾಗುತ್ತಾನೆ ಹಾಗೂ ಯಜಮಾನ್ಯದಿಂದ ಲೈಂಗಿಕ ಶ್ರೇಷ್ಠತೆ ಪಡೆಯುತ್ತಾನೆ. ಹಾಗೆ ಸ್ತ್ರೀ ಲೈಂಗಿಕ ಸಾಮರ್ಥ್ಯದ ಅಪಮೌಲ್ಯದಿಂದ ಎರಡನೇ ದರ್ಜೆಗಿಳಿಯುತ್ತಾಳೆ ಹಾಗೂ ಈ ಎರಡನೇ ದರ್ಜೆಯಿಂದಾಗಿ ಅವಳ ಲೈಂಗಿಕ ಸಾಮರ್ಥ್ಯ ಅಪಮೌಲ್ಯಗೊಳ್ಳುತ್ತದೆ. ಈ ಎರಡು ವಿಚಾರಗಳು ತಮ್ಮಷ್ಟಕ್ಕೆ ತಾವೇ ವರ್ತುಲಗಳನ್ನು ನಿರ್ಮಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪಿತೃಪ್ರಧಾನತೆಯ ಆದಿ ಅಂತಿಮಗಳೆಲ್ಲವೂ ಲೈಂಗಿಕತೆ ಕುರಿತ ತಪ್ಪುಗ್ರಹಿಕೆಯಿಂದಲೇ ಅನೈತಿಕತೆಗೆ ದಾರಿ ಮಾಡಿಕೊಡುತ್ತದೆ. ಈ ಸಾಧಿತ ಗ್ರಹಿಕೆಯ ಭಾಗವಾಗಿಯೋ ಸ್ತ್ರೀ ತನ್ನನ್ನು ತಾನು ಅಧೀನ ಲೈಂಗಿಕತೆಯವಳಾಗಿ ಒಪ್ಪಿದ್ದಾಳೆ. ಒಪ್ಪುವ ಮೂಲಕ ಲೈಂಗಿಕಾಧೀನತೆಯನ್ನು ಹೊಂದಿದ್ದಾಳೆ. ಸ್ತ್ರೀಯ ಪ್ರಜ್ಞೆಯ ಭಾಗವಾಗಿ ಹೋಗಿರುವ ತನ್ನ ಲೈಂಗಿಕ ಸಾಮರ್ಥ್ಯ ಕುರಿತ ತಪ್ಪು ತಿಳುವಳಿಕೆ ಆಕೆಗೆ ಪುರುಷನನ್ನು ಅನುಸರಿಸುವಂತೆ, ತನ್ನ ಲೈಂಗಿಕತೆಯ ಮೇಲಿನ ಪುರುಷನ ಹಕ್ಕನ್ನು ಸ್ವೀಕರಿಸುವಂತೆ ಪ್ರೇರೇಪಿಸಿದೆ.

ಇಂಥ ವಿಚಾರಗಳಿಂದಾಗಿ ಪುರುಷ ಪ್ರಧಾನ ವ್ಯವಸ್ಥೆ ಕಂಡುಕೊಂಡ ಅಸ್ತ್ರವೆಂದರೆ ತುಚ್ಛವಾಗಿ ಬೈಯುವುದು. ಲೈಂಗಿಕತೆಯನ್ನು ಅನೈತಿಕ ಸಂಬಂಧಗಳಿಗೆ ಹೋಲಿಸಿ ಬಳಕೆಗೊಳ್ಳುವ ಬೈಗುಳುಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಇದು ಸಮಾಜದಲ್ಲಿ ಹೆಣ್ಣನ್ನು ಹತ್ತಿಕ್ಕಲು ಪುರುಷ ವ್ಯವಸ್ಥೆ ರೂಪಿಸಿಕೊಂಡ ಒಂದು ಹರಿತವಾದ ಅಸ್ತ್ರ. ಸ್ತ್ರೀಯು ಏನಾದರೂ ಪುರುಷ ಧೋರಣೆಗೆ ಅಡ್ಡಿಪಡಿಸುವಂತಿದ್ದರೆ ಯಾವುದೋ ವಿಚಾರದಲ್ಲಿ ಜಗಳ ಬಂದಾಗ ಇಂಥಹ ಅನೈತಿಕ ಸಂಬಂಧದ ಕುರಿತು ಬೈಗುಳುಗಳು ಜನ್ಮ ಪಡೆಯುತ್ತವೆ. ಉದಾಹರಣೆಗಾಗಿ ಗಮನಿಸಿ:

ಲೇ ಬೋಸುಡಿ ಮಗ್ನೆ
ಲೇ ನಿಮ್ಮಪ್ಪನ ತುಣ್ಣಿಗೆ ನೀ ಹುಟ್ಟಿದವನಾಗಿದ್ರೆ ಬಾರ್ಲೆ
ಏಳು ಮಿಂಡ್ರಿಗೆ ಹುಟ್ಟಿದವ್ನೆ
ಲೇ ಒಬ್ಬೊನ್ಗೆ ಹುಟ್ಟಿದವನೇನ್ಲೆ ನೀನು
ಹಾದರಗಿತ್ತಿ ಮಗ್ನೆ
ಬೋಳಿ ಮಗ್ನೆ
ನಿಮ್ಮ ತಂಗಿ ಗುದ್ದು
ಬೇವರ್ಸಿ ಮಗ್ನೆ
ಲೌಡಿ ಮಗ್ನೆ
ಹಗ್ಗದ ರಂಡಿ ಮಗ್ನೆ

ಇತ್ಯಾದಿ ಇಂತಹ ಕೇಳಲು ಅಸಹ್ಯವಾದ ಬೈಗುಳುಗಳನ್ನು ಗಮನಿಸಿದಾಗ ಗಂಡಸರು ಗಂಡಸರಿಗೆ ಬೈಯುವಾಗಲೂ ಸಹ ಮಹಿಳೆಯನ್ನು ಕೇಂದ್ರವಾಗಿರಿಸಿಕೊಂಡು ಬೈಯುವುದನ್ನು ಕಾಣುತ್ತೇವೆ. ಬೋಸುಡಿ ಮಗ್ನೆ, ನಿಮ್ಮ ತಂಗಿ ಗುದ್ದು, ಮಾದರವ್ನಿಗೆ ಹುಟ್ಟಿದವ್ನೆ, ಏನ್ ಮಹಾನ್ ಗಂಡ್ಸು ಇವ್ನು, ಬೋಳಿ ಮಗ್ನೆ ಮುಂತಾದವುಗಳನ್ನು ಗಮನಿಸಿದಾಗ ಹೆಣ್ಣು ಎಂದ ತಕ್ಷಣ ಥಟ್ಟನೆ ನೆನಪಿಗೆ ಬರುವುದು ಅವಳೊಂದು ಭೋಗದ ವಸ್ತುವಾಗಿ. ಹಾಗೆ ನೋಡಿದಾಗ ಹೆಣ್ಣು ಕೇವಲ ಭೋಗಕ್ಕಷ್ಟೇ ಸೀಮಿತ ಎಂದುಕೊಂಡರೆ ಉಳಿದ ಕೆಲಸ ಕಾರ್ಯಗಳನ್ನು ಮಾಡುವವರು ಯಾರು? ಎಂಬ ಪ್ರಶ್ನೆ ಬರುತ್ತದೆ. ಶ್ರಮ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಮಹಿಳೆ ಇವತ್ತಿನ ದಿನಮಾನಗಳಲ್ಲಿ ಯಾವೆಲ್ಲ ವಲಯಗಳಲ್ಲಿ ಕಾರ್ಯ ಪ್ರವತ್ತಳಾಗಿರುವುದನ್ನು ಕಂಡರೆ; ಮಹಿಳೆ ಯಾವುದರಲ್ಲಿಯೂ ಕಡಿಮೆಯೇನೂ ಇಲ್ಲ. ಈ ಬೈಗುಳುಗಳಿಂದ ಅವಳು ಸಂಪೂರ್ಣವಾಗಿ ಕುಸಿದು ಹೋಗುತ್ತಿರುವ ಸ್ಥಿತಿಯನ್ನು ಕಾಣಬಹುದು.

ಗಂಡನನ್ನು ಉಳ್ಳ ಹೆಂಗಸಿಗೆ ‘ಯಾವನ ಹತ್ತಿರ ಹೋಗಿದ್ದಿ’ ಎಂದಾಗ ಅವಳ ಜೀವ ಬಹುಶಃ ಹೋಗಿ (ಸತ್ತು ಬದುಕಿದಂತೆ) ಬಂದಂತೆ ಆಗಬಹುದು. ನಮ್ಮ ಸಂಸ್ಕೃತಿಯಲ್ಲಿ ಲೈಂಗಿಕತೆಗೆ ಬಹು ಪ್ರಾಮುಖ್ಯತೆಯನ್ನು ಕೊಟ್ಟರೂ ಅದನ್ನು ಶಂಕಿಸುವ, ಅದರಲ್ಲೂ ಸ್ತ್ರೀಯ ಶೀಲವನ್ನು ಪರೀಕ್ಷೆ ಮಾಡುವುದನ್ನು ನಾವು ಕೇಳಿದ್ದೆವೆ. ಈ ಶೀಲ ಪರೀಕ್ಷೆಯಲ್ಲಿ ಗಂಡಿಗೆ ಪರಿಪೂರ್ಣವಾದ ಸ್ವಾತಂತ್ರ‍್ಯವಿದೆ. ಅವನು ಏನ್ ‘ಮಜಾ’ ಮಾಡಿದರೂ ಸಮಾಜದಲ್ಲಿ ಅವನಿಗೆ ‘ಅವನೇನು ಗಂಡ್ಸು ಬಿಡು; ನಡೆಯುತ್ತದೆ ಎನ್ನುವ ಮಾತಿನ ಹಿಂದೆ ಪುರುಷ ಮನೋಧರ್ಮದ ಪ್ರಧಾನ ಅಂಶ ಕೆಲಸ ಮಾಡಿರುವುದು ಕಂಡುಬರುತ್ತದೆ.

ಒಬ್ಬ ಗಂಡಸು ಇನ್ನೊಬ್ಬ ಗಂಡಸನ್ನು ಬೈಯುವಾಗ ಸಾಮಾನ್ಯವಾಗಿ ಹೆಣ್ಣು ಕೇಂದ್ರವಾಗಿರಿಸಿಕೊಂಡೆ ಬೈಯುವುದು ರೂಢಿ. ಈ ಗಂಡಸರ ಜಗಳದಲ್ಲೂ ಸಹ ಮಹಿಳೆಯನ್ನು ಅಂದರೆ ಅವನ ಅಕ್ಕನನ್ನೋ, ತಂಗಿಯನ್ನೋ ಇಲ್ಲವೇ ತಾಯಿಯನ್ನೋ, ಹೆಂಡತಿಯನ್ನೋ ಬೈಯುವುದರಿಂದ ಅವನ ಎದುರಾಳಿಯನ್ನು ಅಧೀರನನ್ನಾಗಿ (ಸಫರ್) ಮಾಡುವುದು. ಅವನು ಕುಸಿದು ಮುಂದೆ ಮಾತಾಡದಂತೆ ಮಾಡಬೇಕು ಎನ್ನುವ ಅವನ ಮನೋಧರ್ಮಕ್ಕೆ, ದೃಷ್ಟಿಕೋನಕ್ಕೆ ನೇರವಾಗಿ ಸಿಗುವುದು ಹೆಂಗಸರು. ಹಾಗಾಗಿ ಹೆಂಗಸರನ್ನು ಕೇಂದ್ರವಾಗಿರಿಸಿಕೊಂಡು ಬೈಯುತ್ತಾನೆ. ಮತ್ತೆ ಲೇ ಹೆಣ್ಗ, ಹೆಂಗಸರಂತವ್ನೆ, ರಂಡ್ಮುಂಡೆ ಮಕದಂತವ್ನೆ ಇತ್ಯಾದಿ ಬೈಗುಳುಗಳು ಅವನು ಕೈಲಾಗದವನು ಎನ್ನುವುದಕ್ಕೆ ಹೆಂಗಸರಿಗೆ ಹೋಲಿಸಿ ಬೈಯುವುದು, ಏಕೆಂದರೆ ಈಗಾಗಲೇ ಸಿದ್ಧವಾದ ಒಂದು ಮಾದರಿ ನಮ್ಮ ಪರಂಪರೆಯಲ್ಲಿ ರೂಢಿಗೆ ಬಂದುಬಿಟ್ಟಿದೆ. ಅದೆಂದರೆ ಹೆಂಗಸು ಎಂದ ಕೂಡಲೇ ಕೈಲಾಗದವಳೆ ಎಂಬುದು. ಅದು ಜನಮನಸ್ಸಿನಲ್ಲಿ ಮತ್ತು ನಮ್ಮ ಸಂಸ್ಕೃತಿಯಲ್ಲಿ ಗಟ್ಟಿಯಾಗಿ ಬೇರೂರಿಬಿಟ್ಟಿದೆ.

ವರ್ಗಾಧಾರಿತ ಗಮನಿಸಿದಾಗಲೂ ಮೇಲ್ವರ್ಗ ಮತ್ತು ಕೆಳವರ್ಗ ಈ ಎರಡು ವರ್ಗಗಳಲ್ಲಿ ಮಹಿಳೆಯನ್ನು ‘ಅದಮಳು’ ಎಂದೇ ಭಾವಿಸಿವೆ. ಮೇಲ್ವರ್ಗದ ಮಹಿಳೆ ಕೇವಲ ಬರಿ ಮೇಲ್ವರ್ಗದ ಪುರುಷರಿಂದ ಬೈಯಿಸಿಕೊಂಡರೆ; ಕೆಳವರ್ಗದ ಮಹಿಳೆ ಪುರುಷ ಮತ್ತು ಮೇಲ್ವರ್ಗದ ಪುರುಷ ಇಬ್ಬರಿಂದಲೂ ಬೈಯಿಸಿಕೊಂಡು ಅವಮಾನಕ್ಕೆ ಒಳಗಾಗುತ್ತಿರುವ ಕೆಳವರ್ಗದ ಮಹಿಳೆಯರ ಪಾಡು ಹೇಳತೀರದು.

ಬೈಗುಳುಗಳು: ಆದರ್ಶ

ಆದರ್ಶ ನಾರಿ ಎಂಬ ಪರಿಕಲ್ಪನೆಯನ್ನು ಪುರುಷ ಸಮಾಜವು ಹೆಣ್ಣಿಗಾಗಿ ಕಲ್ಪಿಸಿ ಸ್ಥಿರ ಮಾದರಿ ಪಾತ್ರಗಳನ್ನು ಜಾರಿಗೆ ತರಲು ಸಮಾಜೀಕರಣ ತರಬೇತಿಯನ್ನು ಬಳಸುವುದು ಒಂದು ವಿಧಾನವಾದರೆ, ಈ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುವ ಹೆಣ್ಣಿಗೆ ಮಾನ ಸಮ್ಮಾನಗಳ ಸರ್ಟಿಫಿಕೇಟುಗಳನ್ನು ದಯಪಾಲಿಸುವ ಮೂಲಕ ಅವಳನ್ನು ಪ್ರೋತ್ಸಾಹಿಸುವುದು ಇನ್ನೊಂದು ರೂಪವೇ ಆಗಿರುತ್ತದೆ. ತನ್ನ ಬದುಕು ಎರಡನೆಯ ದರ್ಜೆಯದು ಎಂಬುದನ್ನು ಒಪ್ಪಿಕೊಂಡ ಹೆಣ್ಣಿಗೆ, ಈಗ ತನ್ನ ಯಜಮಾನನಿಂದ ಶಹಬಾಸ್ ಪಡೆಯುವ ತವಕವಷ್ಟೆ ಉಳಿದಿರುತ್ತದೆ. ಇಂಥ ಪ್ರಶಂಸೆಯನ್ನು ಪಡೆಯಲು ಗಳಿಸಬೇಕಾದ ಅರ್ಹತೆಗಳಾವುವು ಎಂಬುದನ್ನು ಯಜಮಾನ ನಿಗದಿ ಪಡಿಸುತ್ತಾನೆ. ಅವನ ಕಲ್ಪನೆಯಲ್ಲಿ ಹೆಣ್ಣಿನ ಆದರ್ಶ ಮಾದರಿಯೂ ಸಿದ್ಧಗೊಂಡಿವೆ. ಪುರಾಣ, ಐತಿಹ್ಯ, ಕಾವ್ಯ, ಬೈಗುಳುಗಳು, ಆಧುನಿಕ ಕಾಲಕ್ಕೆ ಸಿನಿಮಾ ಟಿ.ವಿ.ಗಳೆಂಬ ಹಲವು ಮಾಧ್ಯಮಗಳ ಮೂಲಕ ಈ ಆದರ್ಶ ನಾರಿಯ ಚಿತ್ರಣವನ್ನು ಯಥೇಚ್ಛವಾಗಿ ಕಾಣಬಹುದು.

ನಮ್ಮ ಪುರಾಣ ಮಹಾಕಾವ್ಯಗಳಲ್ಲಿ ನಮಗಾಗಿ ಕಡೆದು ನಿಲ್ಲಿಸಿರುವ ಇಂಥಾ ಆದರ್ಶನಾರೀ ಮಾದರಿಗಳನ್ನು ಗಮನಿಸಿ. ಮೊದಲಿನ ಗುಂಪು ಪ್ರಾತಃಸ್ಮರಣೀಯರಾದ, ಪಂಚಕನ್ಯೆಯರಾದ ಅಹಲ್ಯಾ, ದ್ರೌಪದಿ, ತಾರಾ, ಮಂಡೋದರಿಯರು ಹೆಂಗಸರ ಲೈಂಗಿಕತೆಯ ವಿವಾಹದ ನಿಯಮದಲ್ಲಿ ಒಬ್ಬ ಗಂಡಸಿನ ಅಧೀನವಾಗಬೇಕೆಂಬ ರೂಢಿಗತ ಸಾಮಾಜಿಕ ಸಂದರ್ಭದಲ್ಲಿ ಈ ನಿಯಮಕ್ಕೆ ಅತೀತವಾಗುವ ಬದುಕನ್ನು ಎದುರಿಸಲೇಬೇಕಾಗಿ ಬಂದವರು. ಅದೇನೂ ಮಹಿಳೆಯರು ಮಾಡಿಕೊಂಡ ಆಯ್ಕೆಯಲ್ಲ. ಅಲ್ಲದೇ ಈ ಸಂದರ್ಭದಲ್ಲಿನ ಅವರ ನಿಲುವು ಕೂಡಾ ಅವರ ಧೈರ್ಯ ಹಾಗೂ ಸ್ವಂತಿಕೆಯ ಫಲವು ಅಲ್ಲ. ಹಾಗೇನೆ ಈ ಆದರ್ಶ ನಾರಿಯ ಮಾದರಿಯನ್ನು ನಿಲ್ಲಿಸುವ ಎರಡನೆಯ ಪಟ್ಟಿಯಲ್ಲಿ ಸೀತೆ, ಸಾವಿತ್ರಿ, ಪಾರ್ವತಿಯರಿದ್ದಾರೆ. ಪತಿಯೇ ಪರಮದೈವವೆಂಬ ಸಾಮಾಜಿಕ ಆದೇಶವನ್ನು ಮಹಿಳಾ ಸಮುದಾಯಕ್ಕೆ ಮನದಟ್ಟು ಮಾಡಿಕೊಡಲೆಂದೆ ಸೃಷ್ಟಿಗೊಂಡಂಥವರು.

ಹೀಗೆ ಪುರುಷ ವ್ಯವಸ್ಥೆ ಇಂಥ ಪಾತ್ರಗಳನ್ನು ಹುಡುಕುತ್ತ ಆದರ್ಶನಾರೀ ಪರಿಕಲ್ಪನೆಯನ್ನು ಬೆಳೆಸುತ್ತಲೇ ಹೋಗುತ್ತದೆ. ಆದರೆ ಇದರಿಂದ ಮಹಿಳಾ ಸಮುದಾಯಕ್ಕೆ ಯಾವ ಲಾಭವೂ ಇಲ್ಲ. ಬದಲಿಗೆ ಅವರು ಆತಂಕವನ್ನು ಎದುರಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ರೂಪಗೊಂಡ ಬೈಗುಳಗಳನ್ನು ಗಮನಿಸಿದಾಗ ಆ ಕುರಿತು ಆಲೋಚಿಸಲು ಸಹಾಯ ಮಾಡುತ್ತದೆ.

ಪತಿವ್ರತೆ
ಮಹಾನ್ ಪತಿವ್ರತೆ
ಏನ್ ಸತಿ ಸಾವಿತ್ರಿ ಇವ್ಳು
ಸತಿ ಶಿರೋಮಣಿ
ಮಹಾನ್ ಸಾದ್ವಿ
ದೇವಿ
ಗರತಿ
ಮಾತೆ
ಸೀತೆ

ಎಂಬಿತ್ಯಾದಿ ಪದಗಳಿಂದ ಹೆಣ್ಣನ್ನು ವೈಭವೀಕರಿಸಿ ಹೊಗಳಲಾಗುತ್ತದೆ. ಇದು ಪಾರಂಪರಿಕವಾಗಿ ಬೆಳೆದು ಬಂದಂತಹ ಕ್ರಮ. ಅದು ಮೇಲು ನೋಟಕ್ಕೆ ಹೆಣ್ಣನ್ನು ವೈಭವೀಕರಿಸಿ ಹೊಗಳುತ್ತದೆಂದೆನಿಸಿದರೂ ಅದರ ಹಿಂದಿನ ಧ್ವನಿ ಅತ್ಯಂತ ಅಮಾನವೀಯವಾದುದು. ಹೀಗೆ ಹೊಗಳುವುದರಿಂದ ಹೆಣ್ಣಿನ ಸ್ವಾತಂತ್ರ‍್ಯವನ್ನು ಅವಳ ಸಹಜ ಬಯಕೆಗಳನ್ನು ಸೀಮಿತ ಚೌಕಟ್ಟಿನಲ್ಲಿ ಇರಿಸದಂತಾಗುತ್ತದೆ. ಹೊಗಳಿಕೆಯ ಬದಲು ಈ ಪದಗಳು ಹೆಣ್ಣನ್ನು ಬಂಧನದಲ್ಲಿಡುವ ತಂತಿ ಬೇಲಿಗಳಾಗಿ, ಕಾರಗೃಹಗಳಾಗಿ ಕೆಲಸ ಮಾಡುತ್ತಿವೆ. ಇದು ಪುರುಷ ಪ್ರಧಾನ ಸಮಾಜ ಹೆಣ್ಣನ್ನು ನಡೆಸಿಕೊಂಡು ಬಂದ ಕ್ರಮ.

ಈ ಮೇಲಿನ ಎಲ್ಲಾ ಬೈಗುಳುಗಳನ್ನು ಗಮನಿಸಿದಾಗ ಬಹುತೇಕವಾಗಿ ಅಶ್ಲೀಲ ಬೈಗುಳುಗಳೇ ಹೆಚ್ಚಾಗಿವೆ. ಇವು ಅವಳ ನಡತೆಯನ್ನು ಮತ್ತು ಶೀಲವನ್ನು ಪ್ರಶ್ನಿಸುವಂತವು ಮತ್ತು ಅವಳು ಮನಸ್ಸಿಗೆ ನೋವನ್ನುಂಟು ಮಾಡುವಂಥವುಗಳಾಗಿವೆ. ಇವುಗಳನ್ನು ನೋಡಿದರೆ ಹೆಂಗಸರಾದವರು ಹೆಂಗಸರಿಗೆನೇ ಈ ರೀತಿ ಬೈಯುವುದು ಸರಿನಾ ಎಂದು ಪ್ರಶ್ನೆ ಹಾಕಿಕೊಂಡರೆ ಉತ್ತರ ಸುಲಭವಲ್ಲ. ತಾರ್ಕಿಕವಾಗಿರುವಂಥದ್ದು, ಹೇಗೆಂದರೆ ಸಮಾಜದಲ್ಲಿ ಹೆಣ್ಣೆಂದರೆ ಒಂದು ಕೀಳು ಭಾವನೆ ಬೆಳೆದುಕೊಂಡು ಬಂದಿದೆ.ಸಮಾಜದಲ್ಲಿ ಹೆಣ್ಣಿಗೆ ಎರಡನೇ ದರ್ಜೆಯ ಸ್ಥಾನವನ್ನು ಕೊಡಲಾಗಿದೆ. ಹಾಗಾಗಿ ಹೆಣ್ಣು ಯಾವುದೇ ರಂಗಕ್ಕೆ ಬರಬೇಕಾದರೆ ಪುರುಷಪ್ರಧಾನ ವ್ಯವಸ್ಥೆಯ ಮನೋಧರ್ಮಕ್ಕೆ ಎಲ್ಲಿ ಲಗ್ಗೆ ಇಟ್ಟಾಳು ಎಂಬ ಭಯ ಇರುವುದರಿಂದ ಅವಳಿಗೆ ಕೆಲವೊಂದು ಸ್ಥಾನಗಳನ್ನು ಮೀಸಲಿಟ್ಟು ಅವಳನ್ನು ಅಲ್ಲೆ ಕೊಳೆಯುವಂತೆ ಮಾಡಿವೆ. ಏನಾದರೂ ಅಪ್ಪಿತಪ್ಪಿ ಬಂದಾಗ ಇಂಥಹ ಬೈಗುಳುಗಳನ್ನು ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿದೆ. ಹಾಗಾಗಿ ಮಹಿಳೆಯಾಗಲಿ, ಪುರುಷರಾಗಲಿ ಬೈಯುವಾಗ ಹೆಚ್ಚಾಗಿ ಮಹಿಳೆಯನ್ನೇ ಕೇಂದ್ರವಾಗಿರಿಸಿಕೊಂಡು ಬೈದು ಬೈದು ತುಂಬ ತುಚ್ಛವಾದ ಬೈಗುಳುಗಳನ್ನು ಸಮಾಜದಲ್ಲಿ ಖಾಯಂ ಆಗಿ ಸ್ಥಿರಗೊಳಿಸಿದ್ದಾರೆ. ಅವು ಹಾಗೆನೇ ಮುಂದುವರಿದುಕೊಂಡು ಬಂದಿವೆ ಎನಿಸುತ್ತದೆ.

ಹಾದರಗಿತ್ತಿ, ಬೆಂಡ್ಲಿ, ಬೋಸುಡಿ, ತುಡುಗಿ, ಬಂಜೆ, ಮುಂತಾದ ಬೈಗುಳುಗಳು ತೀರ ಅಶ್ಲೀಲವಾದಂಥವು ಮತ್ತು ಅವುಗಳನ್ನು ಬೈಯುವವಳಿಗೆ ನಾನು ಪುರುಷ ಪ್ರಧಾನ ವ್ಯವಸ್ಥೆಯ ಪರವಾಗಿ ನಿಂತು ಬೈಯುತ್ತಿದ್ದೇನೆ ಎಂದು ಅನಿಸುವುದೇ ಇಲ್ಲ. ಏಕೆಂದರೆ ಅಷ್ಟೊಂದು ವ್ಯವಸ್ಥಿತವಾಗಿ ಈ ಪುರುಷ ಪ್ರಧಾನ ವ್ಯವಸ್ಥೆ ತನ್ನೊಳಗೆ ಗರ್ಭೀಕರಿಸಿಕೊಂಡು ನನ್ನ ನಿರ್ದೇಶನದಂತೆ ನಡೆಯಬೇಕು ಎಂದು ಒತ್ತಡ ಹೇರುತ್ತಿರುತ್ತದೆ. ಆ ನೆಲೆಯಲ್ಲಿಯೇ ಅವಳು ಬದುಕನ್ನು ನಡೆಸುತ್ತಾ ಬಂದಿದ್ದಾಳೆ. ಈ ಎಲ್ಲಾ ಬೈಗುಳುಗಳನ್ನು ಮಹಿಳೆ ಸಲೀಸಾಗಿ ನೀನು ನನಗಿಂತ ಕೀಳು. ನನ್ನ ಮಾತಿಗೆ ನೀ ಬಗ್ಗಬೇಕು. ನಾ ಮಾತಾಡಿದರೆ ನೀ ಎದುರಾಡಬಾರದು ಎನ್ನುವ ಧೋರಣೆ ಇದ್ದರೂ ನಾನು ಇಂಥ ಬೈಗುಳುಗಳನ್ನು ಬೈಯಬಾರದು ಎನಿಸುವುದಿಲ್ಲ. ಇದು ವಿಚಿತ್ರವೆನಿಸಿದರೂ ವ್ಯವಸ್ಥೆ ರೂಪಿಸಿದ ಮೌಲ್ಯಕ್ಕೆ ವಿರುದ್ಧವಾಗಿ ನಡೆಯುವಂತಿಲ್ಲ. ಹಾಗಾಗಿ ಅವಳು ಅನಿವಾರ್ಯವೆಂಬಂತೆ ತನ್ನ ಬದುಕನ್ನು ಸಾಗಿಸುತ್ತಾ ಬರುತ್ತಿದ್ದಾಳೆ.

ಒಟ್ಟಾರೆಯಾಗಿ ಈ ಬೈಗುಳುಗಳನ್ನು ಗಮನಿಸಿದಾಗ ಭಾಷೆಗೆ ಹಲವು ಹೊಸ ಪದಗಳ ಸೇರ್ಪಡೆ ಮತ್ತು ಭಾಷಾ ನಿಯಮಗಳನ್ನು ರೂಪಿಸಲಿಕ್ಕೆ ಸಹಕಾರಿಯಾಗಬಹುದು. ಆದರೆ ಇಂಥ ಬೈಗುಳುಗಳಿಂದ ಮಹಿಳೆ ಜರ್ಜಿತವಾಗಿ ಹೀಗಿರುವುದನ್ನು ನಾವು ಕಾಣುತ್ತೇವೆ. ಇಂಥ ಹೀನಾಯ ಬದುಕನ್ನು ನಡೆಸುವ ಮಹಿಳೆ ಇಪ್ಪತ್ನಾಲ್ಕು ಗಂಟೆಗಳ ಕಾಲ ತನ್ನ ಜೀವನವನ್ನು ಕೈಯಲ್ಲಿಡಿದುಕೊಂಡು ನಡೆಯಬೇಕಾದ ಪರಿಸ್ಥಿತಿ ಇನ್ನೂ ಸಮಾಜದಿಂದ, ಸಮುದಾಯಗಳಿಂದ ದೂರವಾಗಿಲ್ಲದಿರುವುದು ನಮ್ಮ ದೌರ್ಬಾಗ್ಯವೇ ಸರಿ. ಆಧುನಿಕತೆಯಿಂದ ಎಷ್ಟೆಲ್ಲ ಬದಲಾವಣೆ ಕಂಡ ನಮ್ಮ ಸಮಾಜ ಈ ಒಂದು ವಿಚಾರದಲ್ಲಿ ಯಾಕೆ ಹಾಗೆ ಮುಂದುವರಿದಿದೆ. ಇಲ್ಲಿ ಬದಲಾವಣೆ ತರಲಿಕ್ಕೆ ಸಾಧ್ಯವಿಲ್ಲವಾ? ಅಥವಾ ಓದಿರುವ ಮನಸುಗಳು ಅದನ್ನು ಬದಲು ಮಾಡುವ ಪ್ರಯತ್ನದಲ್ಲಿ ಸೋತಿದ್ದಾರಾ? ಈ ಎಲ್ಲಾ ವಿಚಾರಗಳನ್ನು ಗಮನಿಸಿ ವಿಚಾರವಂಥರು, ಬುದ್ಧಿಜೀವಿಗಳು, ಸಮಾಜ ಸುಧಾಕರು ಅದರ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ತೋರುತ್ತದೆ.

ಮನುಷ್ಯ ತಾನು ಬದಲಾಗದ ಹೊರತು, ಕುಟುಂಬವನ್ನು, ಸಮುದಾಯವನ್ನು, ಸಮಾಜವನ್ನು ಬದಲು ಮಾಡಲು ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ನಾವು ಬದಲಾವಣೆ ಮಾಡುವುದರ ಕಡೆಗೆ ನಮ್ಮ ಮನಸ್ಸು ತುಡಿಯಬೇಕು. ಆಗ ಸಮಾಜದಲ್ಲಿ ಮನೆಮಾಡಿಕೊಂಡಿದ್ದ ಇಂಥ ಕೆಟ್ಟದಾದಂಥ ಬೈಗುಳುಗಳು, ಅನಿಷ್ಟ ಪದ್ಧತಿಗಳಿಗೆ ಒಂದು ತೆರೆ ಎಳೆದಂತೆ ಆಗುತ್ತದೆ. ಆಗ ನಮ್ಮ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.