Categories
ಅಂಕಣಗಳು ಡಾ. ಸಿ ಆರ್ ಚಂದ್ರಶೇಖರ್

ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್(ಮೇನಿಯಾ- ಖಿನ್ನತೆ ಕಾಯಿಲೆ)

ಒಂದು ಅವಧಿಯಲ್ಲಿ ಖಿನ್ನತೆ(ಡಿಪ್ರೆಶನ್), ಮತ್ತೊಂದು ಅವಧಿಯಲ್ಲಿ ಮೇನಿಯಾ(ಅತಿ ಸಂತೋಷ ಅಥವಾ ಕೋಪ, ಅತಿ ಚಟುವಟಿಕೆ); ಇದು ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ವೈಶಿಷ್ಟ್ಯ. ಪ್ರತಿ ಸಾವಿರ ಜನರಲ್ಲಿ ಐದಾರು ಮಂದಿಗೆ ಇರುವ ಅಪರೂಪದ ಮಾನಸಿಕ ಕಾಯಿಲೆ. ಸಾಮಾನ್ಯವಾಗಿ 25-30 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು. ಎಲ್ಲಾ ವರ್ಗಗಳ ಜನರಲ್ಲೂ ಕಾಣಿಸುತ್ತದೆ.

ಖಿನ್ನತೆ ಅವಧಿಯಲ್ಲಿ ಯಾವ ಕಾರಣವಿಲ್ಲದೆ ಅಥವಾ ಚಿಕ್ಕ ಕಾರಣದಿಂದ ವ್ಯಕ್ತಿ ವಿಪರೀತ ದುಃಖ, ಬೇಸರ, ಚಿಂತೆ, ವ್ಯಥೆ ನಿರಾಶೆ ಅನುಭವಿಸುತ್ತಾನೆ. ಬಹುತೇಕ ಚಟುವಟಿಕೆಗಳಲ್ಲಿ ನಿರಾಸಕ್ತಿ ಅಥವಾ ನಿರುತ್ಸಾಹ ಕಂಡುಬರುತ್ತದೆ. ಊಟ- ತಿಂಡಿ ಸೇವನೆ, ತನ್ನ ಅಲಂಕಾರ, ಆಸಕ್ತಿಯ ಹವ್ಯಾಸಗಳಲ್ಲಿ, ಮನರಂಜನಾ ಚಟುವಟಿಕೆಗಳಲ್ಲಿ ಕೂಡ ರೋಗಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಮಾಡಬೇಕಾದ ಕೆಲಸ- ಕರ್ತವ್ಯಗಳನ್ನು ಮಾಡದೇ ನಿಷ್ಕ್ರಿಯನಾಗುತ್ತಾನೆ.

ಜಡನಾಗಿ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಉಳಿಯತೊಡಗುತ್ತಾನೆ. ಕೀಳರಿಮೆ, ಅಸಹಾಯಕತೆ, ನಿರಾಶಾವಾದದಿಂದ ಕಂಗೆಡುತ್ತಾನೆ. ಏತಕ್ಕೆ ಜೀವಿಸಬೇಕು, ಬದುಕಿ ಏನು ಪ್ರಯೋಜನ, ಸಾಯುವುದೇ ಮೇಲು ಎನ್ನತೊಡಗುತ್ತಾನೆ. ಸುಸ್ತು, ನಿಃಶಕ್ತಿ, ಮೈ-ಕೈ ನೋವು, ತಲೆ ಸುತ್ತು, ಕೈಕಾಲುಗಳಲ್ಲಿ ಜೋಮು ಎಂದು ವೈದರಲ್ಲಿಗೆ ಹೋಗುತ್ತಾನೆ. ವೈದ್ಯರು ಪರೀಕ್ಷಿಸಿದಾಗ ದೇಹದಲ್ಲಿ ಯಾವುದೇ ನ್ಯೂನ್ಯತೆಯಾಗಲೀ, ಕಾಯಿಲೆಯಾಗಲೀ ಕಂಡುಬರುವುದಿಲ್ಲ. ಎಲ್ಲ ಪರೀಕ್ಷೆಗಳಲ್ಲೂ ‘ನಾರ್ಮಲ್’ ಆಗಿರುತ್ತವೆ.

ವ್ಯಕ್ತಿ ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಆತ್ಮಹತ್ಯಾ ಯೋಚನೆ ಹಾಗೂ ಕೆಲವೊಮ್ಮೆ ಪ್ರಯತ್ನವನ್ನೂ ಮಾಡಬಹುದು. ಕೆಲವು ಖಿನ್ನತೆ ರೋಗಿಗಳಲ್ಲಿ ಚಡಪಡಿಕೆ, ಸಂಶಯ ಪ್ರವೃತ್ತಿ, ಭ್ರಮೆಗಳೂ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಒಂದೆರಡು ತಿಂಗಳಿಂದ ಐದಾರು ತಿಂಗಳವರೆಗೆ ಇರಬಹುದು. ಅನಂತರ ಖಿನ್ನತೆ ಕಡಿಮೆಯಾಗಿ ರೋಗಿ ಸಾಮಾನ್ಯ ಸ್ಥಿತಿಗೆ ಬರುತ್ತಾನೆ. ಸ್ವಲ್ಪ ಕಾಲದ ನಂತರ ಮತ್ತೆ ಖಿನ್ನತೆಯೇ ಮರುಕಳಿಸಬಹುದು ಅಥವಾ ಮೇನಿಯಾ ಕಾಯಿಲೆ ಕಾಣಿಸಿಕೊಳ್ಳಬಹುದು.

ಮೇನಿಯಾ ಅವಧಿಯಲ್ಲಿ ತಡೆಯಿಲ್ಲದ ವಿಪರೀತ ಮಾತು, ಅನಿಯಂತ್ರಿತ ಹೆಚ್ಚಿನ ಚಟುವಟಿಕೆ ಮತ್ತು ವರ್ತನೆ, ಒಮ್ಮೆಗೇ ಹಲವು ಚಟುವಟಿಕೆಗಳು ಅಥವಾ ಕೆಲಸಗಳನ್ನು ಆರಂಭ ಮಾಡಿ ಯಾವುದನ್ನೂ ಮುಗಿಸದೇ ನಿಲ್ಲಿಸುತ್ತಾರೆ. ಅಗತ್ಯವಿರಲಿ, ಇಲ್ಲದಿರಲಿ ಇತರರೊಡನೆ ವಾದ- ವಿವಾದಗಳಲ್ಲಿ ತೊಡಗುತ್ತಾರೆ. ಧ್ವನಿ ಎತ್ತರಿಸಿ ಮಾತನಾಡುತ್ತಾರೆ. ವಿಪರೀತ ಕರ್ಚು ಮಾಡುತ್ತಾರೆ. ಉದಾರವಾಗಿ ದಾನ- ಧರ್ಮ ಮಾಡುವುದು, ವಸ್ತುಗಳನ್ನು ಖರೀದಿಸುವುದು, ತಾನೇ ಸರಿ ಎಂಬ ಅಹಂ ತೋರಿಸುವುದು, ತಾನೊಬ್ಬನೇ ಮಹಾನ್ ವ್ಯಕ್ತಿ, ತನಗೆ ವಿಪರೀತ ಬುದ್ಧಿ, ಹಣ, ಅಧಿಕಾರವಿದೆ ಎನ್ನುವುದು. ತನಗೆ ಎಲ್ಲಾ ಗಣ್ಯವ್ಯಕ್ತಿಗಳ ಪರಿಚಯವಿದೆ ಎನ್ನುವುದು, ಸಿನಿಮಾ ನಟರಂತೆ ಅಲಂಕಾರ ಮಾಡಿಕೊಳ್ಳಬಹುದು. ತನ್ನ ಮಾತನ್ನು ಒಪ್ಪದವರ ಮೇಲೆ ಕೋಪಿಸಿಕೊಂಡು ಆಕ್ರಮಣ ಮಾಡಬಹುದು. ಹಿಂಸಾಚಾರಕ್ಕೂಇಳಿಯಬಹುದು.

ಮೇನಿಯಾ ಇರುವ ವ್ಯಕ್ತಿಯನ್ನು ನಿಭಾಯಿಸುವುದು ಮನೆಯವರಿಗೆ, ಸಹೋದ್ಯೋಗಿಗಳಿಗೆ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಮೇನಿಯಾ ಎರಡರಿಂದ ನಾಲ್ಕು ತಿಂಗಳ ಕಾಲ ಇರಬಹುದು. ಆನಂತರ ವ್ಯಕ್ತಿ ಸಹಜ ಸ್ಥಿತಿಗೆ ಮರಳುತ್ತಾನೆ. ಸ್ವಲ್ಪ ಕಾಲಾನಂತರ ಮೇನಿಯಾ ಮರುಕಳಿಸಲೂಬಹುದು. ಅಥವಾ ಖಿನ್ನತೆ ಕಾಣಿಸಿಕೊಳ್ಳಬಹುದು. ಹೀಗೆ ಮೇನಿಯಾ ಮತ್ತು ಖಿನ್ನತೆ ಆಗಿಂದಾಗ್ಗೆ ಅವಧಿಗೊಂದಾವರ್ತಿ ವ್ಯಕ್ತಿಯನ್ನು ಕಾಡತೊಡಗುತ್ತವೆ. ಈ ಪರಿವರ್ತನೆಯ ವೇಗ ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತದೆ. ಒಂದು ವರ್ಷದಲ್ಲಿ ನಾಲ್ಕಕ್ಕಿಂತ ಹೆಚ್ಚು ಸಲ ಪುನರಾರ್ತನೆಯಾದರೆ ಅದಕ್ಕೆ ‘ರಾಪಿಡ್ ಸೈಕ್ಲಿಂಗ್ ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್’ ಎನ್ನಲಾಗುತ್ತದೆ.

ಕಾರಣ: ಮಿದುಳಿನಲ್ಲಿನ ರಾಸಾಯನಿಕ ಬದಲಾವಣೆಯೇ ಈ ರೋಗಕ್ಕೆ ಮುಖ್ಯ ಕಾರಣ. ನರಕೋಶದಲ್ಲಿ ಡೋಪಮಿನ್ ಪ್ರಮಾಣ ಹೆಚ್ಚಾದಾಗ ಮೇನಿಯಾ, ಕಡಿಮೆಯಾದಾಗ ಖಿನ್ನತೆ ಬರುತ್ತದೆ. ಈ ರೋಗ ಕೆಲವರಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳಬಹುದು. ತಂದೆ- ತಾಯಿ ಇಬ್ಬರಲ್ಲೂ ಅಥವಾ ಎರಡೂ ಕಡೆಯ ಕುಟುಂಬಗಳಲ್ಲಿ ಈ ರೋಗವಿದ್ದರೆ ಶೇ.50ರಷ್ಟು ಮಕ್ಕಳಿಗೆ ರೋಗ ಬರುವ ಸಂಭವ ಇದೆ ಎನ್ನಲಾಗಿದೆ.

ಚಿಕಿತ್ಸೆ: ಖಿನ್ನತೆ ಇದ್ದಾಗ ಖಿನ್ನತೆ ನಿವಾರಕ ಮಾತ್ರೆ, ಮೇನಿಯಾ ಇದ್ದಾಗ ಅದರ ಶಮನಕಾರಿ ಮಾತ್ರೆ ಕೊಡಬೇಕಾಗುತ್ತದೆ. ಇಮಿಪ್ರಮಿಸ್, ಅಮಿಟ್ರಿಪೈಲಿನ್, ಫ್ಲೂಯಾಕ್ಸಿಟಿನ್, ಎಸ್ಸಿಟಲೋಪ್ರಾಮ್ ಬಳಕೆಯಲ್ಲಿರುವ ಖಿನ್ನತೆ ನಿವಾರಕಗಳು. ಹೆಲೋಪಿರಿಡಾಲ್, ರಿಸ್ಪಿರಿಡಾನ್, ಒಲಾಂಜಿಪಿನ್ ಬಳಕೆಯಲ್ಲಿರುವ ಶಮನಕಾರಕಗಳು. ಕನಿಷ್ಟ ನಾಲ್ಕರಿಂದ ಆರು ತಿಂಗಳ ಕಾಲ ಔಷಧ ನೀಡಬೇಕಾಗುತ್ತದೆ.

ಮೇನಿಯಾ- ಖಿನ್ನತೆ ಪುನರಾರರ್ತನೆಗೊಳ್ಳುವುದನ್ನು ತಪ್ಪಿಸಲು ಔಷಧ ಲಭ್ಯವಿದೆ. ಇವನ್ನು ಮೂಡ್ ಸ್ಟೆಬಿಲೈಸರ್ಸ್ ಎಂದು ಕರೆಯುತ್ತಾರೆ. ಲೀಥಿಯಂ ಲವಣ, ಕಾರ್ಬಮಜೆಪಿನ್, ಸೋಡಿಯಂ ವಾಲ್ಟ್ರೋಯೇಟ್ ಇತ್ಯಾದಿ ಮೂಡ್ ಸ್ಟೆಬಿಲೈಸರ್ಸ್ ಬಳಕೆಯಲ್ಲಿವೆ. ಈ ಔಷಧಗಳಲ್ಲಿ ಒಂದನ್ನು ಹಲವಾರು ವರ್ಷಗಳ ಕಾಲ ಅಥವಾ ಜೀವನಪೂರ್ತಿ ರೋಗಿ ಕ್ರಮಬದ್ಧವಾಗಿ ಸೇವಿಸಬೇಕಾಗುತ್ತದೆ. ಆಗಿಂದಾಗ್ಗೆ ರಕ್ತ ಪರೀಕ್ಷೆ ಮಾಡಿಸಿ ರಕ್ತದಲ್ಲಿ ಔಷಧ ಪ್ರಮಾಣವನ್ನು ತಿಳಿದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಈ ಔಷಧಗಳು ಸುರಕ್ಷಿತವೆಂದೇ ಪರಿಗಣಿಸಲಾಗಿದೆ. ಅಡ್ಡ ಪರಿಣಾಮಗಳುಂಟಾದರೆ ಔಷಧವನ್ನು ಬದಲಿಸಲು ಸೂಚಿಸಲಾಗುತ್ತದೆ. ಹೀಗಾಗಿ ಅವಧಿಗೊಂದಾವರ್ತಿ ವೈದ್ಯರನ್ನು ಕಾಣುವುದು ಅವಶ್ಯ.

ಖಿನ್ನತೆ ಅಥವಾ ಮೇನಿಯಾ ಇದ್ದಾಗ ರೋಗಿ ಪ್ರಮುಖ ನಿರ್ಧಾರಗಳನ್ನು ಮತ್ತು ದೊಡ್ಡ ಮೊತ್ತದ ವ್ಯವಹಾರಗಳನ್ನು ಮಾಡದಿರುವಂತೆ ಮನೆಯವರು ಎಚ್ಚರವಹಿಸಬೇಕು.

ನೆನಪಿಡಿ; ಬೈಪೋಲಾರ್ ಅಫೆಕ್ವಿವ್ ಡಿಸಾರ್ಡರ್ ಹತೋಟಿಗೆ ಬರುವಂತಹ ಮಾನಸಿಕ ಕಾಯಿಲೆ. ಮೇನಿಯಾ- ಖಿನ್ನತೆ ಇಲ್ಲದಿದ್ದಾಗ ವ್ಯಕ್ತಿ ಎಲ್ಲರಂತೆಯೆ ಕೆಲಸ ಮಾಡಬಲ್ಲ. ದೀರ್ಘ ಕಾಲ ಅಥವಾ ಜೀವನವಿಡೀ ಔಷಧ ಸೇವನೆ ಮಾಡಬೇಕಾಗುತ್ತದೆ.