ಗುಲಬರ್ಗಾದಲ್ಲಿ ಅಕ್ಟೋಬರ್ ೩೧ ೧೯೮೭ ರಂದು ನಡೆದ ಅಖಿಲ ಭಾರತ ೫೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಾಟಾಗಿದ್ದ ಕವಿ-ಕೃತಿ ವೈಶಿಷ್ಟ್ಯ ಎಂಬ ಗೋಷ್ಠಿಯ ಅಧ್ಯಕ್ಷ ಭಾಷಣ.

ಕವಿ-ಕೃತಿ ವೈಶಿಷ್ಟ್ಯವೆಂಬ ಹೆಸರಿನ ಈ ಸಾಹಿತ್ಯ ಗೋಷ್ಟೀ ಇತ್ತೀಚೆಗಿನ ಹತ್ತು ವರ್ಷಗಳ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಹೊಸದೊಂದು ತೋರುತ್ತದೆ. ಸಾಮಾನ್ಯವಾಗಿ ವಿಚಾರ ಸಂಕಿರಣಗಳ ಮಾದರಿಯಲ್ಲಿ ರೂಪಗೊಂಡ ವಿಷಯಗಳನ್ನು ಪಡೆದ ಸಾಹಿತ್ಯ ಗೋಷ್ಠಿಗಳು ಏರ್ಪಾಟಾಗುತ್ತಿದ್ದುವು. ಹಾಗೆಯೇ ಆ ಸಾಹಿತ್ಯ ಗೋಷ್ಠಿಗಳಲ್ಲಿ ಒಂದು ವರ್ಷದಿಂದ ಹಿಡಿದು ಹತ್ತು ವರ್ಷಗಳವರೆಗಿನ ಕಥೆ ಕಾದಂಬರಿ ಕಾವ್ಯ ಮೊದಲಾದ ವಿವಿಧ ಸಾಹಿತ್ಯ ಪ್ರಕಾರದಲ್ಲಿ ಆ ನಿರ್ದಿಷ್ಟ ಅವಧಿಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳ ಸಮೀಷಾತ್ಮಕ ಪ್ರಬಂಧಗಳು ಮಂಡಿತವಾಗುತ್ತಿದ್ದುವು. ಈ ವ್ಯವಸ್ಥೆ ಒಂದು ಶಿಷ್ಟ ವಾಡಿಕೆಯಾಗಿ ಬಹುಮಟ್ಟಿಗೆ ಸ್ಥಾಯಿಯಾಗಿತ್ತು. ಇಂದಿನ ಈ ಗೋಷ್ಠಿಯೂ, ಮೇಲುನೋಟಕ್ಕೆ ಆ ಹಿಂದಿನ ಸ್ವರೂಪಕ್ಕಿಂತ ತುಸು ಭಿನ್ನವಾಗಿದ್ದರೂ, ಒಂದರ್ಥದಲ್ಲಿ ಅದಕ್ಕೆ ಮಾರಕವಾಗಿಯೇ ಇದೆಯೆನ್ನಬಹುದು.

ಸುಮಾರು ಒಂದೂವರೆ ಸಾವಿರ ವರ್ಷಗಳ ಅವಿರತವಾದ ಲಿಖಿತ ದಾಖಲೆಗಳ ಆಧಾರವಿರುವ ಕನ್ನಡ ಸಾಹಿತ್ಯ ರಾಶಿಯಿಂದ ಈ ಐದು ಕೃತಿಗಳನ್ನು ಇಂಥದೊಂದು ಗೋಷ್ಠಿಯ ವಿಷಯವಾಗಿ ಆರಿಸಿಕೊಂಡ ಉದ್ದೇಶ ಸಾರ್ಥಕವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಮುಖವಾಗಿ ನಿಲ್ಲಬಹುದಾದ ಪುಸ್ತಕಗಳ ವಿವೇಚನೆಗೆ ಹಾಗೂ ಸಾಹಿತ್ಯ ಸಂವಾದಕ್ಕೆ ಈ ಬಗೆಯ ಗೋಷ್ಠಿಗಳು ಎಡೆಮಾಡಿಕೊಡಬೇಕಾದುದು ಉಚಿತ. ಆ ನೆಲೆಯಲ್ಲಿ ನಿಂತು ಇಲ್ಲಿ ಆರಿಸಿಕೊಂಡಿರುವ ಕವಿ ಕೃತಿ ವಿಶಿಷ್ಟತೆಯನ್ನು ಪರಿಶೀಲಿಸಬಹುದಾಗಿದೆ.

ಈ ಗೋಷ್ಠಿಯ ಮೊದಲ ಪ್ರಬಂಧ ಕನ್ನಡದಲ್ಲಿ ಸಿಗುವ ಆರಂಭದ ಕೃತಿಯನ್ನು ಕುರಿತದ್ದಾಗಿದೆ. ಕವಿರಾಜಮಾರ್ಗವೇ ನಮಗೆ ಉಪಲಬ್ಧವಾಗಿರುವ ಆದಿಕೃತಿಯಾಗಿರುವುದಲ್ಲದೆ ಅದು ಈ ಸಮ್ಮೇಳನ ನಡೆಯುತ್ತಿರುವ ಗುಲ್ಬರ್ಗದ ಪರಿಸರದಲ್ಲಿ ಹುಟ್ಟಿದ ಕೃತಿಯೂ ಆಗಿದೆ. ಡಾ. ಹಂಪ ನಾಗರಾಜಯ್ಯನವರ ಸಂಶೋಧನೆಯಿಂದ ಭ್ರಾಜಿಷ್ಣುವಿನ ಆರಾಧನಾ ಕರ್ನಾಟಟೀಕಾ (ವಡ್ಡಾರಾಧನೆ) ಕ್ರಿ.ಶ. ೮೦೦ಕ್ಕೆ ರಚಿತವಾದದೆಂದು ಆಧಾರ ಸಹಿತ ನಿರೂಪಿಸಿದ್ದಾರೆ ಆದ್ದರಿಂದ ಕನ್ನಡ ಸಾಹಿತ್ಯದ ಉಪಲಬ್ಧ ಕೃತಿಗಳಲ್ಲಿ ಕವಿರಾಜಮಾರ್ಗ, ಕಾಲದ ಪರಿಗಣನೆಯಿಂದ ಎರಡನೆಯ ಕೃತಿಯಾಗುತ್ತದೆ.

ಮಾರ್ಗಕಾವ್ಯ ಅಥವಾ ದೇಶಿಕಾವ್ಯವೆಂಬ ಪರಾಮರ್ಶೆಗೆ ಕವಿರಾಜಮಾರ್ಗ ಸಿಗುವಂತಹುದಲ್ಲ. ಏಕೆಂದರೆ ಅದು ಕಾವ್ಯವಲ್ಲ. ಕಾವ್ಯಶಾಸ್ತ್ರವನ್ನು ವಿವೇಚಿಸುವ ಲಕ್ಷಣಶಾಸ್ತ್ರ ಗ್ರಂಥ. ಅದು ದಂಡಿಯೆಂಬ ಲಾಕಣಿಕನ ಸಂಸ್ಕೃತ ಕಾವ್ಯಾದರ್ಶವೆಂಬ ಗ್ರಂಥವನ್ನು ಆಕರವಾಗಿರಿಸಿಕೊಂಡು ಕನ್ನಡದಲ್ಲಿ ಕಾಣಿಸಿಕೊಂಡ ಕೃತಿ. ಹಾಗೆಂದು ಸಂಸ್ಕೃತ ಮೂಲದ ಮಕ್ಕಿಕಾಮಕ್ಕಿ ಕನ್ನಡ ಅನುವಾದವಲ್ಲ. ಕನ್ನಡದ ಜಾಯಮಾನಕ್ಕನುಗುಣವಾಗಿ ನಿರೂಪಣೆಯನ್ನು ತಿದ್ದಿಕೊಂಡಿರುವ ಮುಕ್ತಾನುವಾದ ಗ್ರಂಥ. ಕಾವ್ಯಮೀಮಾಂಸೆಗೆ ಸೇರಿದ ಕೃತಿಯಾದರೂ ಅದರ ಮೆಯ್ ಒಮ್ಮೊಮ್ಮೆ ಮಾರ್ಗ ಕಾವ್ಯಗಳ ರೀತಿಯಲ್ಲಿ ತೋರುವುದಾದರೂ, ಒಟ್ಟಾರೆ ಜನಾಭಿಮುಖಿಯಾದ ಲಕ್ಷಣಗಳಿರುವ ಶಿಷ್ಟಪದ ಕೃತಿಯೆಂದು ಕವಿರಾಜ ಮಾರ್ಗವನ್ನು ನಿರ್ದೇಶಿಸಬಹುದು.

ಕವಿರಾಜ ಮಾರ್ಗ ಕೇವಲ ಒಂದು ಶಾಸ್ತ್ರ ಗ್ರಂಥವಾದರೂ ಕೆಲವು ವಿಶಿಷ್ಟವಾದ ಸಾಹಿತ್ಯೇತರ ಕಾರಣಗಳಿಂದಾಗಿ ಮಹತ್ವದ ಕೃತಿಯಾಗಿದೆ. ಕಾಲಮಾನದ ದೃಷ್ಟಿಯಿಂದಷ್ಟೇ ಅಲ್ಲದೆ ಇನ್ನೂ ಅನೇಕ ವಿಷಯಗಳಲ್ಲಿ ಅದಕ್ಕೆ ‘ಆದ್ಯಕೃತಿ’ ಎಂಬ ವಿಶೇಷಣ ಅರ್ಥಪೂರ್ಣವಾಗಿ ಅನ್ವಯಿಸುತ್ತದೆ. ನಿದರ್ಶನಕ್ಕೊಂದು ಹೇಳುವುದಾದರೆ

೧) ಒಂಬತ್ತನೆಯ ಶತಮಾನದ ಈ ಗ್ರಂಥ ಕನ್ನಡದಲ್ಲಿ ದೊರೆತಿರುವ ಮತ್ತು ಜೈನ ಕವಿಯೊಬ್ಬ ಬರೆದ ಮೊದಲನೆಯ ಕೃತಿ. ಆ ಕಾಲದ ಕನ್ನಡನಾಡಿನ ಉತ್ತರ ಮತ್ತು ದಕ್ಷಿಣದಲ್ಲಿ ಭಾಷಾ ಗಡಿಯಾಗಿ ನಿಂತ ನದಿಗಳನ್ನು ಹೆಸರಿಸಿದೆ, ತೆಂಕಣದ ಕಾವೇರಿಯಿಂದ ಬಡಗಣಕ್ಕೆ ಗೋದಾವರಿ ನದಿಯವರೆಗೂ ಮೈಚಾಚಿಕೊಂಡ ನೆಲವೆಲ್ಲ ಕನ್ನಡ ನಾಡೆಂದು ಸೀಮಾ ರೇಖೆಯೆಳೆದು ಗಡಿಯ ಕಲ್ಲನ್ನು ಶಿಲಾಶಾಸನದಂತೆ ನೆಟ್ಟಿದೆ.

೨) ಅಂದಿನ ವ್ಯಾವಹಾರಿಕ ಕನ್ನಡ ಭಾಷೆಯಲ್ಲಿದ್ದ ಉಪಭಾಷೆ ಅಥವಾ ಭಾಷಾ ಪ್ರಭೇದಗಳನ್ನು ಪ್ರಸ್ತಾಪಿಸಿರುವುದು ವಿಶೇಷ ಗಮನಿಕೆಗೆ ಅರ್ಹವಾಗಿದೆ.

೩) ಅದರಂತೆ ಕನ್ನಡ ಸಂಸ್ಕೃತಿ ಭಾಷೆಗಳ ಬಾಂಧವ್ಯ ಸಂಬಂಧವಾಗಿ ಮೌಲಿಕವಾದ ಅಭಿಪ್ರಾಯ ಮಂಡಿಸುವುದರ ಮೂಲಕ ಎಂದು ಸಂಪರ್ಕ ಭಾಷೆಗಳ ನಡುವೆ ಏರ್ಪಡಬೇಕಾದ ಭಾಷಾ ಸಂಬಂಧವನ್ನು ಪರಾಮರ್ಶಿಸಿರುವುದು ಔಚಿತ್ಯ ಪೂರ್ಣವಾಗಿದೆ :

ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ತಾ
ಯ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕರಂಗಳೊಳ್
ತೊಡರದೆ ಸಕ್ಕದಂಗಳ್ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ
ಗುಡಿವಿಡುವಂತೆ ನೀಳ್ದು ನಿಲೆ ಪೇೞ್ದುದು ನೀತಿ ನಿರಂತರ ಕ್ರಮಂ || ೧೪೯

ಕನ್ನಡ ಸಂಸ್ಕೃತ ಭಾಷೆಗಳ ನಿಕಟ ಸಂಪರ್ಕದಿಂದ ಉದ್ಭವಿಸಿದ ಭಾಷಾಪ್ರಶ್ನೆಗೆ ಇಲ್ಲಿ ಉಲ್ಲೇಖವಾಗಿರುವ ಪರಿಹಾರ ಇಂದಿಗೂ ಪರಿಭಾವಿಸುವಂತಿದೆ.

೪) ಇಂದು ನಮಗೆ ಏನೇನೂ ದೊರೆಯದೆ ಮರೆಯಾಗಿರುವ ಪ್ರಾಚೀನ ಕನ್ನಡ ಸಾಹಿತ್ಯದ ಹಾಗೂ ಪೂರ್ವದ ಹಳಗನ್ನಡವೆಂದು ಪರಿಗಣಿಸಬಹುದಾದ ಅವಧಿಗೆ ಅಳವಡುವ ಗದ್ಯಪದ್ಯ ಕವಿಗಳನ್ನು ಹೆಸರಿಸುವುದರ ಉಪಯುಕ್ತತೆಯನ್ನು ಉತ್ಪ್ರೇಕ್ಷಿಸಬೇಕಾದ ಅಗತ್ಯವಿಲ್ಲ. ಸುತ್ತ ಕತ್ತಲೆ ಕವಿದಿದ್ದ ಭಾಗದತ್ತ ಬೆಡುದೀಪ ಹಾಯಿಸುವ ಒಂದು ದೀಪಸ್ಥಂಭವನ್ನು ಕವಿರಾಜ ಮಾರ್ಗ ನಿಲ್ಲಿಸಿದಂತಾಗಿದೆ.

೫) ಕನ್ನಡ ನಾಡಿನ ಜನಪದರನ್ನೂ, ಅವರ ಜೀವನವನ್ನೂ, ಸ್ವಭಾವ ಸಂವೇದನೆಗಳನ್ನೂ ದಾಖಲಿಸಿರುವ ಮೊದಲನೆಯ ಗಣ್ಯ ಗ್ರಂಥ ಕೂಡ ಇದೇ ಆಗಿದೆ. ಕನ್ನಡ ನಾಡು ನುಡಿ ಜನರ ವಿಚಾರವಾಗಿ ಇಲ್ಲಿ ಪುಟಿಯುವ ಉತ್ಕಟವಾದ, ಅಷ್ಟೇ ಪ್ರಾಂಜಲವಾದ ಕಳಕಳಿ, ಅಭಿಮಾನ ಇಡೀ ಕನ್ನಡ ಸಾಹಿತ್ಯದಲ್ಲಿ ಅಪರೂಪವೆನಿಸುವಂತಹುದು.

೬) ಈ ಕೃತಿಯ ಕರ್ತೃ ಜೈನನಾದರೂ ಎಲ್ಲಿಯೂ ಮತಾಂಧತೆಗೆ ವಶನಾಗದೆ ಸರ್ವ ಧರ್ಮ ಸಹಿಷ್ಣುತೆ ಸಮನ್ವಯ ದೃಷ್ಟಿ ಹೊಂದಿ ಕನ್ನಡ ಸಾಹಿತ್ಯದ ಆರಂಭದಲ್ಲೇ ಇಂಥದೊಂದು ಆರೋಗ್ಯಕರ ನಿಲುವನ್ನು ಪ್ರಕಟಿಸಿರುವುದು ಮನನೀಯವಾಗಿದೆ.

ಕವಿರಾಜ ಮಾರ್ಗದಲ್ಲಿ ಒಟ್ಟಾರೆ ಸಾರಾಂಶ ರೂಪದಲ್ಲಿ ವ್ಯಕ್ತವಾಗಿರುವ ಕಾವ್ಯ ಪ್ರಜ್ಞೆ, ಭಾಷಾಪ್ರಜ್ಞೆ, ಶಾಸ್ತ್ರಪ್ರಜ್ಞೆ, ಐತಿಹಾಸಿಕ ಪ್ರಜ್ಞೆ, ಸಮಕಾಲೀನ ಪ್ರಜ್ಞೆ, ದೇಶ ಪ್ರೇಮ, ವೈದೃಷ್ಯ ಮಾನವೀಯ ನೆಲೆಗೆ ಸಂವಾದಿಯಾಗುವ ಸಂವೇದನೆಗಳು – ಇವೆಲ್ಲ ಶ್ಲಾಘ್ಯವಾಗಿವೆ. ಈ ಎಲ್ಲ ಗುಣ ಹಾಗೂ ಕಾರಣಗಳ ಸಮುದಾಯ ಶೋಭೆಯಿಂದ ಸಮಗ್ರ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕವಿರಾಜ ಮಾರ್ಗ ಚಿರಂತನ ಕೃತಿಯಾಗಿ ಉಳಿದಿದೆ. ಜತೆಗೆ ಅದು ಇಂದಿಗೂ ಪ್ರಸ್ತುತವಾಗಬಲ್ಲ ಸತ್ವವನ್ನೊಳಗೊಂಡಿದೆ. ಕವಿರಾಜ ಮಾರ್ಗಕಾರನ ಉನ್ನತ ವ್ಯಕ್ತಿತ್ವದ ಆಯಾಮಗಳಾದ ಸ್ವಂತಿಕೆ, ದಿಟ್ಟತನ ಹಾಗೂ ವೈಚಾರಿಕತೆ ಆಧುನಿಕ ಬುದ್ಧಿಗೆ ಪ್ರಿಯವಾಗುವ ಗುಣಗಳಾಗಿವೆ. ಇಷ್ಟು ಮಹತ್ವದ ಕೃತಿಯ ಕರ್ತೃತ್ವ ಇನ್ನೂ ಸಂಶಯದ ತಕ್ಕಡಿಯಲ್ಲಿ ತೂಗಾಡುತ್ತಿರುವುದು ಕೂಡ ಸ್ವಾರಸ್ಯವನ್ನೂ ಸಮಸ್ಯೆಯನ್ನೂ ಜೀವಂತವಾಗಿರಿಸಿದಂತಾಗಿದೆ. ಶ್ರೀವಿಜಯನೇ ಬಹುಮಟ್ಟಿಗೆ ಈ ಕೃತಿಯ ಕರ್ತೃವೆನ್ನಬಹುದು. ಶ್ರೀ ವಿಜಯನೊ ನೃಪತುಂಗನೊ ಮತ್ತೊಬ್ಬನೊ ಯಾರೇ ಆಗಿರಲಿ, ಆತ ಅದ್ಭುತ ವ್ಯಕ್ತಿಯೆಂಬುದರಲ್ಲಿ ಮಾತ್ರ ಅನುಮಾನಗಳಿಲ್ಲ.

ಕವಿರಾಜ ಮಾರ್ಗ ಬಿಟ್ಟಿದೆ ಇಲ್ಲಿ ಪ್ರಸ್ತಾಪಿತವಾಗಿರುವ ಇನ್ನಿತರ ನಾಲ್ಕು ಕೃತಿಗಳೂ ರಾಜಾಶ್ರಯದ ಕೃತಿಗಳಲ್ಲ, ಅವೆಲ್ಲ ಪ್ರಜಾಶ್ರಯದಲ್ಲಿ ಅರಳಿವೆ. ಈ ಗೋಷ್ಠಿಯಲ್ಲಿ ಮಂಡಿತವಾದ ಎರಡನೆಯ ಪ್ರಬಂಧ ಲಕ್ಷ್ಮೀಶನ ಜೈಮಿನಿ ಭಾರತ ಕುರಿತದ್ದು. ಜೈಮಿನಿ ಭಾರತ ಬರೆದ ಲಕ್ಷ್ಮೀಶ ಕವಿಯ ಜೀವನ, ಪರಿಸರ, ಸಂಬಂಧವಾದ ಇತಿವೃತ್ತ ಖಚಿತವಾಗಿ ತಿಳಿಯದು. ಆ ಕವಿಯ ಸ್ಥಳ ಮತ್ತು ಜಾತಿ ಯಾವುದೆಂಬುದು ಇಂದಿಗೂ ಚರ್ಚಾಸ್ಪದವಾಗಿವೆ. ಲಕ್ಷ್ಮೀಶ ಕವಿಯ ಜಾತಿ ಮತ್ತು ಜನ್ಮಸ್ಥಳ ವಿಚಾರವನ್ನು ಇನ್ನೂ ತೆರೆದ ಬಾಗಿಲಾಗಿ ಇಡುವುದು ಉತ್ತಮ. ಪೂರ್ವ ನಿಶ್ಚಿತಾರ್ಥ ಪ್ರಯತ್ನದಿಂದ ಒಂದು ಸ್ಥಳವನ್ನು ಒಪ್ಪಿದವರು ತಾವೆಲ್ಲ ಒಳಗೆ ಸೇರಿ ಬಾಗಿಲು ಮುಚ್ಚಿರುವ ಕೆಲಸವೊಂದು ನಡೆದಂತೆ ತೋರುತ್ತದೆ. ಅದು ಸರಿಯಲ್ಲ. ಚಿಕ್ಕಮಗಳೂರು ಜಿಲ್ಲೆಯ ದೇವನೂರೇ ಲಕ್ಷ್ಮೀಶನ ಹುಟ್ಟೂರೆಂದೂ, ಗುಲ್ಬರ್ಗ ಜಿಲ್ಲೆಯ ಸುರಪುರಕ್ಕೂ ಲಕ್ಷ್ಮೀಶನಿಗೂ ಏನೇನೂ ಸಂಬಂಧವಿಲ್ಲವೆಂದೂ ಸಾಧಿಸುವ ಹಟತೊಟ್ಟ ಸಾಧನೆಯೊಂದು ಕಳೆದ ಐವತ್ತು ವರ್ಷಗಳಲ್ಲಿ ವ್ಯವಸ್ಥಿತವಾಗಿ ನಡೆದಂತೆ ಗುಮಾನಿಪಡಲು ಅವಕಾಶವಿದೆ. ವಿದ್ವಾಂಸರೆನಿಸಿಕೊಂಡವರು ಈ ಬಗ್ಗೆ ತಳೆದಿರುವ ತೀರ್ಮಾನಗಳಿಗೆ ಪುಷ್ಟಿಯಾಗಿವೆಯೆಂದು ಕೊಟ್ಟಿರುವ ಅಂತರಬಾಹ್ಯ ಪ್ರಮಾಣಗಳು ವಸ್ತುಸ್ಥಿತಿಯನ್ನು ನಿಖರವಾಗಿ ಸ್ಥಾಪಿಸಲು ವಿಫಲವಾಗಿದೆಯೆಂಬುದೇ ನನ್ನ ಪ್ರಾಮಾಣಿಕ ಗ್ರಹಿಕೆ. ಕವಿಯ ಸ್ಥಳವನ್ನು ನಿರ್ಧರಿಸುವ ಈ ಚರ್ಚೆಯಲ್ಲಿ, ಗಡಿಗಳನ್ನೇ ಬದಲಾಯಿಸುವ ಗಡಿ ಬಿಡಿಯಲ್ಲಿ ಪೂರ್ವನಿಯೋಜಿತ ತೀರ್ಮಾನಗಳನ್ನು ಕೈಗೊಂಡು ಅದಕ್ಕೆ ತಕ್ಕ ಹಾಗೆ ತಾಳ ಹಾಕುವ ಮಾಹಿತಿಗಳನ್ನು ಕಲೆ ಹಾಕಿ ಪೋಣಿಸಿ ಸರಕಟ್ಟುವ ಬುದ್ಧಿಯ ಕಸರತ್ತು ನಡೆದಿದೆಯೆಂಬ ಸಂಶಯ ನನಗಿದೆ.

ಜೈಮಿನಿ ಭಾರತದಲ್ಲಿ ಬರುವ ಅಡಿಕೆ ತೆಂಗು ಬಾಳೆ ಮೊದಲಾದ ಪ್ರಕೃತಿ ವರ್ಣನೆಯಲ್ಲಿ ಚಿಕ್ಕಮಗಳೂರು ಸಮೀಪದ ದೇವನೂರು ಪರಿಸರದಲ್ಲಿ ಈಗಲೂ ಅಲ್ಲಲ್ಲಿ ಕಂಡುಬರುತ್ತದೆಂದೂ, ಈ ವರ್ಣನೆಗೆ ಅನುಗುಣವಾದ ಲಕ್ಷಣಗಳು ಗುಲ್ಬರ್ಗದ ಸುರಪುರ ಪ್ರದೇಶದ ವ್ಯಾಪ್ತಿಯಲ್ಲಿ ಕಂಡು ಬರುವುದಿಲ್ಲವೆಂದೂ ಪ್ರತಿಪಾದಿಸಿ ಇದನ್ನು ಪ್ರಬಲವಾದ ಆಧಾರವೆಂದು ಮುಂದೊಡ್ಡಿದ್ದಾರೆ. ಈ ವಾದ ತುಂಬ ಪೊಳ್ಳಾದುದು. ಕೆಲವು ಪ್ರಕೃತಿ ವರ್ಣನೆಗಳು ಕೇವಲ ಪರಂಪರೆಯಿಂದ ರೂಢಿಯಲ್ಲಿ ಬಂದಿವೆಯೆಂಬುದನ್ನು ಮರೆಯಬಾರದು. ಎರಡನೆಯದಾಗಿ ಲಕ್ಷ್ಮೀಶನಿಗೂ ನಮಗೂ ನಡುವೆ ಸಂದುಹೋಗಿರುವ ಸುಮಾರು ಐನೂರು ವರ್ಷಗಳ ಅಂತರದಲ್ಲಿ ಎಷ್ಟೆಷ್ಟೋ ವ್ಯತ್ಯಾಸಗಳು ನೆಲಜಲ ಬೆಳೆ ಪರಿಸರಗಳಲ್ಲಿ ಸಹಜವಾಗೇ ಸಂಭವಿಸಿವೆ. ಪಟ್ಟಣಗಳು ನೆಲಸಮವಾಗಿವೆ. ಕಾಡುಗಳು ನಿರ್ನಾಮವಾಗಿವೆ. ಗುಲ್ಬರ್ಗಾ ಜಿಲ್ಲೆಯ ಸೇಡಂ ಮತ್ತು ಮಳಖೇಡದ ಸುತ್ತುಮುತ್ತಲು ಇಂದು ಯಾವ ಸಾಮ್ರಾಜ್ಯದ ಕುರುಹುಗಳೂ ಇಲ್ಲ. ಅರಮನೆ ಕೋಟೆ ಕೊತ್ತಲಗಳು ಭೂಗತವಾಗಿವೆ. ಅಂದಮಾತ್ರಕ್ಕೆ ರಾಷ್ಟ್ರಕೂಟರ ಸಾಮ್ರಾಜ್ಯ ಮತ್ತು ಅವರ ರಾಜಧಾನಿ ಇಲ್ಲಿ ಇರಲೇ ಇಲ್ಲವೆನ್ನಲು ಆಗುವುದಿಲ್ಲ. ಲಕ್ಷ್ಮೀಶ ಕವಿ ಆ ದೇವನೂರಿನವನಾಗದೆ ಈ ಸುರಪುರದವನೇ ಇರಬೇಕೆಂಬ ವಾದವನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ.

ಇನ್ನೂ ಈ ಕವಿಯ ಜಾತಿಯ ವಿಚಾರಕ್ಕೆ ಬರೋಣ. ಲಕ್ಷ್ಮೀಶನ ಜಾಗವನ್ನೇ ಬದಲಿಸಿದ ಈ ಬಲ್ಲಿದರು ಅವನ ಜಾತಿ ಜಾತಕವನ್ನು ಜನ್ಮಕುಂಡಲಿಯನ್ನೂ ಮುಟ್ಟದೆ ಬಿಟ್ಟಾರೆ? ವಾಸ್ತವ ಸಂಗತಿಯಷ್ಟೆ; ಲಕ್ಷ್ಮೀಶ ಕವಿಯ ಜಾತಿ ವಿಚಾರವೂ ಖಚಿತವಾಗಿ ತಿಳಿಯದು. ಜೈಮಿನಿ ಭಾರತದಲ್ಲಿ ವಿಷ್ಣು ಮಹೇಶ್ವರಾದಿ ಭಗವನ್ನಾಮ ಸಂಕೀತನ ಪರವಾದ ಪದ್ಯಗಳಿರುವುದು ನಿಜ. ಶಿವನನ್ನು ಸ್ತುತಿಸಿದವರೆಲ್ಲ ಶೈವರಾಗಬೇಕಾಗಿಲ್ಲ. ವಿಷ್ಣುವನ್ನು ಸ್ತೋತ್ರ ಮಾಡಿದವರೆಲ್ಲ ವೈಷ್ಣವರೆಂದಲ್ಲ. ಭಗವಂತನನ್ನು ನೆನೆದವರೆಲ್ಲ ಭಾಗವತರೇನಲ್ಲ. ಪಂಪರನ್ನಾದಿ ಕವಿಗಳ ಲೌಕಿಕ ಕೃತಿಗಳಲ್ಲಿ ತ್ರಿಮೂರ್ತಿಗಳ ಪ್ರಾರ್ಥನಾ ಪದ್ಯಗಳಿವೆ. ಅವರ ಧಾರ್ಮಿಕ ಕೃತಿಗಳೇನಾದರೂ ಒಂದು ವೇಳೆ ನಮಗೆ ದೊರೆಯದೆ ಕೇವಲ ವಿಕ್ರಮಾರ್ಜುನ ವಿಜಯ ಮತ್ತು ಸಾಹಸಭೀಮ ವಿಜಯ ಕಾವ್ಯಗಳು ಮಾತ್ರ ಸಿಕ್ಕಿದ್ದರೆ ಆಗ ಅವರ ಜಾತಿ ವಿಚಾರದಲ್ಲೂ ಯಾವ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದೆವೆಂಬುದನ್ನೂ ಕ್ಷಣಕಾಲ ವಸ್ತುನಿಷ್ಠ ದೃಷ್ಟಿಯಿಂದ ಪರ್ಯಾಲೋಚಿಸಬೇಕು. ಜನಿವಾರ, ಶಿವದಾರ, ಕಡೆಗೆ ಉಡಿದಾರ ಕೂಡ ಹಾಕಿಕೊಳ್ಳದ ಕೋಟಿಗಟ್ಟಲೆ ಭಾರತೀಯರು ರಾಮ, ಕೃಷ್ಣ, ಹರಿ, ಹರ ಪಾರ್ವತೀಪತಿ, ಮಾರುತಿ, ಗೋವಿಂ – ಎಂಧು ಭಜನೆ ಮಾಡುತ್ತಾರೆಂಬುದು ಚೆನ್ನಾಗಿ ನೆನಪಿಡಬೇಕು. ಮೇಲುವರ್ಗದವರಲ್ಲದೆ ಶೂದ್ರದಲಿತರೂ ಕೂಡ ಶ್ರೇಷ್ಠ ಕೃತಿಗಳನ್ನು ರಚಿಸಿ ಭಾರತೀಯ ವಾಙ್ಮಯವನ್ನು ಬೆಳಗಿದ್ದಾರೆ. ರಾಮನಾಮ ಮಹಿಮೆಯನ್ನು ಲೋಕಕ್ಕೆ ನೀಡಿದ ವಾಲ್ಮೀಕಿ ಬೇಡರವನು. ಕೃಷ್ಣನ ಘನಮಹಿಮೆಗಳನ್ನು ಬಿತ್ತರಿಸಿದ ವ್ಯಾಸನು ಬೆಸ್ತರವನು. ಕೈಲಾಸವನ್ನು ಸಾಕ್ಷಾತ್ಕರಿಸಿದ ಕಾಳಿದಾಸ ಕುರುಬರವನು. ಇವೆಲ್ಲ ಕಣ್ಮುಂದೆ ಕಂಗೊಳಿಸುತ್ತಿರುವಾಗ ಸುಮ್ಮನೆ ಜಾತಿ ಹುತ್ತವನ್ನು ಬಡಿಯುವ ಕೆಲಸ ಸಾಕು. ಲಕ್ಷ್ಮೀಶನ ಜಾತಿ ಕುಲ ಗೋತ್ರ ಖಚಿತವಾಗಿ ಗೊತ್ತಿಲ್ಲವೆಂದು ಇರುವ ಸಂಗತಿಯನ್ನು ಒಪ್ಪಿಕೊಳ್ಳುವುದಕ್ಕೆ ಸಂಕೋಚವೇಕೆ? ದೈವಭಕ್ತನಾದ, ಶೂದ್ರವರ್ಗಕ್ಕೆ ಸೇರಿದ ಲಕ್ಷ್ಮೀಶನು ಆ ಕಾವ್ಯದ ಕರ್ತೃವಾಗಿರುವುದು ಸಾಧ್ಯವಿದೆಯೆಲ್ಲವೆ?

ಮಹಾಭಾರತದ ಒಂದು ಘಟ್ಟದ, ಕುರುಕ್ಷೇತ್ರದ ಯುದ್ಧಾನಂತರದ ಅಶ್ವಮೇಧ ಪರ್ವದ ಘಟನೆಯನ್ನು ನೆಪವಾಗಿಟ್ಟು, ರಾಮಾಯಣದ ಸಾರವತ್ತಾದ ಭಾವವನ್ನೂ ನಿರೂಪಿಸುತ್ತಾ, ಪರಿಶುದ್ಧ ಚಾರಿತ್ರ್ಯವನ್ನು ಎತ್ತಿ ಹಿಡಿಯುವ ಹಲವು ಕಥೆಗಳ ಸಂಕಲನ ರೂಪದಲ್ಲಿರುವ ಜೈಮಿನಿ ಭಾರತ ಕನ್ನಡದಲ್ಲಿ ಒಂದು ವಿಶಿಷ್ಟ ಕಾವ್ಯ. ಮಹಾಭಾರತದಲ್ಲಿ ಅಶ್ವಮೇಧಯಾಗ ನಡೆಯುವುದು ಕಡೆಯಭಾಗದಲ್ಲಿ; ರಾಮಾಯಣದಲ್ಲಿ ರಾಮನು ಲೋಕಾಪವಾದ ಭೀತಿಯಿಂದ ಸೀತೆಯನ್ನು ಕಾಡಿಗಟ್ಟುವುದು ಕೂಡ ಕಡೆಯ ಭಾಗದಲ್ಲಿ. ಅಂದರೆ ಭರತವರ್ಷದ ಎರಡು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳ ಕಟ್ಟಕಡೆಯ ಭಾಗದಲ್ಲಿ ಬರುವ ಕಥ ಪ್ರಸಂಗವನ್ನು ಲಕ್ಷ್ಮೀಶ ಕವಿ ತನ್ನ ಕಾವ್ಯದ ವಸ್ತುವಾಗಿ ಸ್ವೀಕರಿಸಿದ್ದಾನೆ.

ಈ ಕನ್ನಡ ಕಾವ್ಯಕ್ಕೆ ಸಂಸ್ಕೃತ ಜೈಮಿನಿ ಕಾವ್ಯವೇ ಮೂಲ ಹಾಗೂ ನೇರ ಆಕರವೆಂಬುದನ್ನು ಮರೆಯುವಂತಿಲ್ಲ. ಆದರೆ ಲಕ್ಷ್ಮೀಶನ ಸ್ವೋಪಜ್ಞತೆ ಎಲ್ಲೆಲ್ಲಿ ಉತ್ಕಟಗೊಂಡು ವಿಜೃಂಭಿಸಿದೆಯೆಂಬುದನ್ನು ನಮ್ಮ ವಿಮರ್ಶನ ಪ್ರಜ್ಞೆ ಗುರುತಿಸಬಲ್ಲುದು. ಲಕ್ಷ್ಮೀಶ ಕವಿ ತನ್ನನ್ನೇ ತಾನು ಮರೆತು, ಓದುಗರನ್ನೂ ಮೈಮರೆಸಿ ತನ್ಮಯಗೊಳಿಸುವ ಭಾಗಗಳಲ್ಲಿ ಸೀತೆಯನ್ನು ಕಾಡಿಗಟ್ಟುವ ಹಾಗೂ ಲಕ್ಷ್ಮಣನೊಂದಿಗೆ ಆಕೆಯ ಸಂವಾದ ಏರ್ಪಡುವ ಸಂದರ್ಭ ಉಲ್ಲೇಖನೀಯವಾದುದು. ಎಲ್ಲಿ ತನ್ನ ಮೇಲೆ ಜನರ ಅಪವಾದ ಬಂದೀತೊ, ತನ್ನ ಹೆಸರಿಗೆ ಮಸಿ ಬಳಿದೀತೊ ಎಂಬ ಚಿಂತನೆ ರಾಮನನ್ನು ಆತಂಕ ಪಡಿಸಿತೆ ಹೊರತು, ತನಗಾಗಿ ತನ್ನೆಲ್ಲ ಸುಖ ಸಂತೋಷ ಯೌವನವನ್ನು ಸಮರ್ಪಣ ಭಾವದಿಂದ ಅರ್ಪಿಸಿದ ಸೀತೆಯ ಗತಿಯೇನು ಎಂಬ ಭಾವನೆ ಅವನನ್ನು ಕಾಡಲಿಲ್ಲ. ನಿರಾತಂಕವಾಗಿ ರಾಜ್ಯಭಾರ ನಡೆಸುವುದಕ್ಕಾಗಿ ಹಾಗೂ ರತ್ನಸಿಂಹಾಸನವನ್ನು ಉಳಿಸಿಕೊಳ್ಳುವುದಕ್ಕಾಗಿ ತುಂಬುಗರ್ಭಿಣಿಯಾದ ಹೆಂಡತಿಯನ್ನು ಕೂಡ ಕಾಡಿಗೆ ಕಳಿಸಬಲ್ಲ ರಾಮ ಹೇಗೆ ತಾನೆ ಆದರ್ಶಪ್ರಭುವಾಗಬಲ್ಲ? ಅಂದರೆ ಕುರ್ಚಿ ಮತ್ತು ಹೆಂಡತಿ-ಆಯ್ಕೆ ಪ್ರಶ್ನೆ ಬಂದಾಗ ರಾಮ ಆರಿಸಿಕೊಂಡಿದ್ದು ಕುರ್ಚಿಯನ್ನು, ಅಗ್ನಿಸಾಕ್ಷಿಯಾಗಿ ಅರ್ಥೇಚ, ಧರ್ಮೇಚ, ಕಾಮೇಚ ಕೈಬಿಡುವುದಿಲ್ಲವೆಂದು ಆಣಿ ಮಾಢಿ ಸಪ್ತಪದಿಯಿಟ್ಟ ರಾಮ, ಅವಳನ್ನು ಕಾಮೇಚ ಮತ್ತು ಅರ್ಥೇಚ ಅನುಭವಿಸಿ, ಅವನ ಭೋಗದ ಫಲವನ್ನು ಹೊಟ್ಟೆಯಲ್ಲಿ ಹೊತ್ತುನಿಂತಿರುವಾಗ ಧರ್ಮೇಚ ಅವಳೊಂದಿಗೆ ತಾನೂ ಕಾಡಿಗೆ ನಡೆಯದೆ ತಾನು ಅರಮನೆಯಲ್ಲಿ ನಿಂತು ಅವಳನ್ನು ಅರಣ್ಯರೋದನ ಮಾಡಲು ಕಳಿಸಿದ್ದು ನ್ಯಾಯ ಸಮ್ಮತವೆ ಎಂಬ ಮೂಲಭೂತ ಪ್ರಶ್ನೆ ಭುಗಿಲೆಂದು ನಿಲ್ಲುತ್ತದೆ. ನಿನ್ನನ್ನು ಮನೆಗೆ ಸೇರಿಸಿಕೊಳ್ಳಲು ನಾನೇನು ರಾಮನೆ – ಎಂದು ಹೆಂಡತಿಯನ್ನು ಕೇಳಿದ ಸಾಮಾನ್ಯ ಪ್ರಜೆಗಿಂತ ಈ ರಾಮ ಯಾವ ರೀತಿ ಉತ್ತಮನಾಗುತ್ತಾನೆ ಎಂಬ ಒಳನೋಟವೊಂದು ಮಿಂಚುತ್ತದೆ. ಹೀಗೆ ಸೂಕ್ಷ್ಮಸ್ತರದಲ್ಲಿ ಘಟನೆಯನ್ನು ವಿಶ್ಲೇಷಿಸಿ ಅಂತರ್ಮುಖಿಯಾಗಿ ಆಲೋಚಿಸುವಂತೆ ಮಾಡುವ ಹಾಗೂ ನಮ್ಮ ಏಕಾಂತದ ಕ್ಷಣಗಳಲ್ಲಿ ಕಾಡುವ ಭಾವನೆಗಳಿಗೆ ಜನ್ಮಕೊಡುವ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಬಹುಜನರಿಗೆ ಇಷ್ಟವಾದ ಕಾವ್ಯ.

ಭಕ್ತಕವಿಯಾದ ಜಗನ್ನಾಥದಾಸರ ಹರಿಕಥಾಮೃತಸಾರ ೩೨ ಸಂಧಿಗಳು ೯೮೮ ಭಾಮಿನಿ ಷಟ್ಪದಿ ಪದ್ಯಗಳೂ ಇರುವ ಒಂದು ಸಾಮಾನ್ಯ ಧಾರ್ಮಿಕ ಕೃತಿ. ಕನಕದಾಸರ ಹರಿಭಕ್ತಸಾರವೆಂಬ ಕಾವ್ಯವ ನಾಮ ಸಾದೃಶ್ಯಬಲ ಹಾಗೂ ಪ್ರಭಾವದಿಂದ ‘ಹರಿಕಥಾಮೃತ ಸಾರ’ ಎಂಬ ಕಲ್ಪನೆ ಹುಟ್ಟಿದೆಯಾದರೂ, ಕನಕದಾಸರ ಕಾವ್ಯಶಕ್ತಿ ಇಲ್ಲಿಲ್ಲ. ರಾಘವಾಂಕ, ಕುಮಾರವ್ಯಾಸ ಲಕ್ಷ್ಮೀಶ ಕವಿಗಳ ಷಟ್ಪದಿ ಕಾವ್ಯಗಳಲ್ಲಿ ಕ್ರೀಡಿಸಿದ ಸಹೃದಯ ಚೇತನಗಳಿಗೆ ಇಲ್ಲಿನ ಸಪ್ಪೆ ನಿರೂಪಣೆ ನಿರಾಶೆಗೊಳಿಸುತ್ತದೆ. ಆಧುನಿಕ ಬುದ್ಧಿ ಭಾವಗಳನ್ನು ತಣಿಸಬಲ್ಲ, ವೈಚಾರಿಕ ಸಂಪತ್ತು ಇಲ್ಲಿ ಕಡಿಮೆ; ಕವಿಯ ಸೃಷ್ಟಿ ಶಕ್ತಿ ಕೂಡ ಎತ್ತರದಲ್ಲಿ ಉದ್ದೀನ ಮಾಡುವುದಿಲ್ಲ. ಇಂಥ ಇನ್ನಿತರ ಕಾರಣಗಳಿಗಾಗಿ ಈ ಕೃತಿಯನ್ನು ಸಹಿತ್ಯ ಚರ್ಚೆಯ ನಿಕಷಕ್ಕೆ ಹೆಚ್ಚು ಒಡ್ಡುವ ಅಗತ್ಯ ಕಾಣುತ್ತಿಲ್ಲ. ಶೈಲಿಯಲ್ಲೂ ಆಕರ್ಷಣೆ, ಸಹಜತೆ ಮತ್ತು ಹೃದ್ಯತೆ ಕಾಣುವುದಿಲ್ಲ. ಕನ್ನಡದಲ್ಲಿರುವ ಈ ಗ್ರಂಥಕ್ಕೆ ಸಂಸ್ಕೃತದಲ್ಲಿ ಟೀಕೆಯನ್ನು ಬರೆದಿರುವುದರ ಔಚಿತ್ಯ ತಿಳಿಯದು. ಇಂಗ್ಲಿಷಿಗೂ ಇದನ್ನು ತರ್ಜುಮೆ ಮಾಡಲಾಗಿದೆ. ಧಾರ್ಮಿಕ ಸಿದ್ಧಾಂತ ಪ್ರಕ್ರಿಯೆಗಳ ಆಧ್ಯಾತ್ಮಿಕ ಸ್ವರೂಪವನ್ನು ನಿರೂಪಿಸುವ ಈ ಶಾಸ್ತ್ರ ಕೃತಿಗೆ ವ್ಯಾಖ್ಯಾನಗಳೂ ರಚಿತವಾಗಿವೆ.

ಕೃಷಿಜ್ಞಾನ ಪ್ರದೀಪಿಕೆ ಜನಪರ ದೃಷ್ಟಿಯ ಕೃತಿ. ಹಳಗನ್ನಡ ಸಾಹಿತ್ಯದಲ್ಲಿ ಜನೋಪಯೋಗಿ ಕೃತಿಗಳು ವಿರಳವೆಂಬುದು ನಿಜವಾದರೂ ಅಂಥ ಕೆಲವು ಕೃತಿಗಳಿವೆ. ಮಳೆಯನ್ನು ಕುರಿತು ಬರೆದ ರಟ್ಟಕವಿಯ ರಟ್ಟಮತವನ್ನು ಹೆಸರಿಸಬಹುದು; ಜನಜೀವನ ಸಂಬಂಧಿಯಾದ ಲೋಕೋಪಕಾರ ಕೃತಿಯೂ ನೆನಪಾಗುತ್ತದೆ. ಅಡಿಗೆ ವಿಚಾರವಾಗಿ ಬರೆ ಸೂಪಶಾಸ್ತ್ರವೆಂಬ ಕೃತಿಯಿದೆ. ಆನೆ, ಕುದುರೆ, ದನಕರುಗಳನ್ನು ಸಾಕುವುದು, ಅವುಗಳ ರೋಗ ನಿವಾರಣೆ ಕುರಿತ ಕೃತಿಗಳಿವೆ. ಮನುಷ್ಯನ ಸ್ವಸ್ಥಜೀವನ ಸಂವರ್ಧನೆಯನ್ನು ಚಿಂತಿಸಿದ ವೈದ್ಯ ಗ್ರಂಥಗಳಿವೆ. ಆದರೂ ಕನ್ನಡ ಕೃತಿ ರಾಶಿಯಲ್ಲಿ ವ್ಯಾವಹಾರಿಕವಾಗಿ ಸಾಮಾನ್ಯವಾದ ಬಹು ಜನೋಪಯೋಗಿ ಕೃತಿಗಳು ಅಪರೂಪ. ಈ ಹಿನ್ನೆಲೆಯಲ್ಲಿ ಒಕ್ಕಲುತನಕ್ಕೆ ನೆರವಾಗುವ ವ್ಯವಸಾಯ ವಿಷಯವನ್ನು ಆರಿಸಿಕೊಂಡು ಕೃಷಿಜ್ಞಾನ ಪ್ರದೀಪಿಕೆಯನ್ನು ಬರೆದ ಸಿದ್ಧರಾಮಪ್ಪ ಕುನ್ನಾಳ್ ಅಭಿನಂದನೆಗೆ ಅರ್ಹರು.

ಕೃಷಿಜ್ಞಾನ ಪ್ರದೀಪಿಕೆ ಸಂಸ್ಕೃತದ ಅಥವಾ ಇನ್ನಾವುದೆ ಭಾಷೆಯಲ್ಲಿ ಬರೆದ ಗ್ರಂಥದ ಭಾಷಾಂತರ ಕೃತಿಯಲ್ಲ. ಇದು ಕನ್ನಡ ಭಾಷೆಯ ನೆಲದ ಸೃಷ್ಟಿ. ಈ ಗ್ರಂಥದಲ್ಲಿ ನಿರ್ಮಲತ್ವ ಸದಾಚಾರ ಸದ್ಭಕ್ತಿ ಮಲತ್ರಯಮಂತ್ರ ಕ್ರಿಯಾದೀಕ್ಷೆ ಪಾರಮಾರ್ಥ ಮತ್ತು ಪಾಲಿಮಾರ್ಥಕೃಷಿ – ಮುಂತಾದ ಮತೀಯ ಪ್ರಕ್ರಿಯೆಗಳ ಪ್ರಸ್ತಾಪಕ್ಕೂ ಸಾಕಷ್ಟು ಸ್ಥಳಾವಕಾಶ ಕಲ್ಪಿಸಿಕೊಂಡು ನಿರೂಪಿಸಲಾಗಿದೆ; ಈ ಅಂಶವನ್ನು ಸೇರಿಸದೆ ಕೇವಲ ಲೌಕಿಕವಾಗಿಯೇ ಬರೆದಿದ್ದರೆ ಇದರ ಉಪಯುಕ್ತತೆಯೂ ಮಹತ್ವವೂ ಇಮ್ಮಡಿಗೊಳ್ಳುತ್ತಿತ್ತು.

ಇಲ್ಲಿಯೇ ಸ್ಪಷ್ಟಪಡಿಸಿ ಹೇಳಬೇಕಾದ ನೋವಿನ ಮಾತೊಂದಿದೆ. ಈ ರೈತ ಹೊತ್ತಗೆಯನ್ನು ಬರೆದ ಸಿಂದಗಿ ತಾಲ್ಲೂಕು ಬೆಕ್ಕಿನಾಳ ಗ್ರಾಮದ ಸಿದ್ಧರಾಮಪ್ಪ ಕುನ್ನಾಳರ ಹೆಸರನ್ನು ಕಣ್ಣಿಗೆ ಕಾಣದಂತೆ, ಕಿವಿಗೆ ಕೇಳದಂತೆ ಹಿಂದೆ ಸರಿಸಿರುವುದು ಮೂಲ ಲೇಖಕನಿಗೆ ಅನ್ಯಾಯ ಮಾಡಿದಂತಾಗಿದೆ. ಈಗ ಅಚ್ಚಾಗಿರುವ ಪುಸ್ತಕದ ಮುಖಪುಟದಿಂದ ಹಿಡಿದು, ಗ್ರಂಥದ ಆರಂಭದಲ್ಲಿ ಹೊರೆಯಾಗಿ ಅನವಶ್ಯಕವಾಗಿರುವ ಸುಮಾರು ೩೫ ಪುಟಗಳ ಸರಮಾಲೆಯಲ್ಲಿ ಎಲ್ಲಿಯೂ ಮರೆತು ಕೂಡ ಸಿದ್ಧರಾಮಪ್ಪ ಕುನ್ನಾಳರ ಹೆಸರನ್ನು ಹೇಳಿಲ್ಲ. ಅದರ ಬದಲು ಲೇಖಕರು ಕೇವಲ ಗೌರವ ಭಾವನೆಯಿಂದ ಗುರುಸ್ವರರೂಪರೆಂದು ನೆನೆದಿರುವ ನಾಗಭೂಷಣ ಘನಮಠ ಶಿವಯೋಗಿಗಳ ಹೆಸರು ರಾರಾಜಿಸಿದೆ. ರಕ್ಷಾಪುಟದ ಮೇಲ್ಭಾಗದಲ್ಲೂ ಈ ಕೃತಿ ಆ  ಯೋಗಿಯ ಮೇರುಕೃತಿಯೆಂದು ಛಾಪಿಸಿರುವುದು ಅಸಮಂಜಸವಾಗಿದೆ. ಅಲ್ಲದೆ ಗ್ರಂಥದ ಹಸ್ತಪ್ರತಿಯ ಒಡೆತನ ಮಲ್ಲಿಕಾರ್ಜುನ ಸ್ವಾಮಿಗಳದಂತೆ; ಅಂದರೆ ಗ್ರಂಥಕರ್ತನಿಗೆ ಇತ್ತ ಹೆಸರೂ ಇಲ್ಲ, ಅತ್ತ ಉಸಿರೂ ಇಲ್ಲ. ಈ ಪುಸ್ತಕದ ಮುದ್ರಣ ಮಾರಾಟದಿಂದ ಬಂದ ಹಣದ ಒಂದಂಶವಾದರೂ ಸಿದ್ಧರಾಮಪ್ಪ ಕುನ್ನಾಳರ ವಂಶಸ್ಥರಾದ ಮರಿಮಕ್ಕಳಿಗೂ ಸಂದಂತೆ ತೋರುವುದಿಲ್ಲ. ಈ ಲೋಪವನ್ನು ಸರಿಪಡಿಸಿ ನ್ಯಾಯ ನಿಲ್ಲುವಂತೆ ಗ್ರಂಥ ಪ್ರಕಾಶನದ ಹೊಣೆ ಹೊತ್ತ ನರಗುಂದದ ವಿರಕ್ತಮಠದವರು ನಿಗಾ ವಹಿಸುತ್ತಾರೆಂಬ ನಂಬಿಕೆಯಿದೆ.

ಈ ಗ್ರಂಥದ ಒಂದು ಮತ್ತು ಎರಡನೆಯ ಭಾಗದಲ್ಲಿ ಹದಿನೆಂಟನೆಯ ಪ್ರಕರಣದವರೆಗೆ ರೈತರಿಗೆ ಸಹಾಯಕವಾದ ಅನೇಕ ಮಾಹಿತಿಗಳಿವೆ : “ಕೃಷಿಜ್ಞಾನ ಪ್ರದೀಪಿಕೆ ಎಂಬ ಗ್ರಂಥವನ್ನು ಮೂಢರಿಗೂ ಪ್ರಾಜ್ಞರಿಗೂ ಮುಗ್ಧರಿಗೂ ವಿದಗ್ಧರಿಗೂ ಅಬಾಲವೃದ್ಧರಿಗೂ ಆಯಾಸವಿಲ್ಲದೆ ತಿಳಿಯುವ ಹಾಗೆ ದೇಶ ಭಾಷೆಯಾದ ತಿಳಿಗನ್ನಡ ವಾಚ್ಯ ರೂಪದಿಂದ ರಚಿಸುವಲ್ಲಿ ಸಮಸ್ತ ಜನರ ಕರ್ಣ ಮುಖಕ್ಕೆ ರಸ ರಸಾಯನ ಪದಾರ್ಥವನ್ನು ತುತ್ತುಮಾಡಿ ಉಣಿಸುವಂತೆ ಕೇಳುವವರಿಗೆ ರುಚಿಯು ಹುಟ್ಟುವ ಹಾಗೆ….. ಗ್ರಂಥ ರಚನೋದ್ಯೋಗಕ್ಕೆ ಪ್ರಾರಂಭಿಸಿರುವೆನು” (ಪೀಠಿಕೆ, ಪುಟ ೫೭-೫೮) ಎಂಬ ಅರಿಕೆಯಲ್ಲಿ ಕನ್ನಡ ನುಡಿಯ ಕಳಕಳಿಯೂ ತುಂಬಿ ತುಳುಕಿದೆಯಲ್ಲದೆ ಸಾಮಾನ್ಯ ಜನರಿಗೂ ತಿಳಿಯುವ ಭಾಷೆಯಲ್ಲೇ ಬರೆಯಬೇಕೆಂಬ ಧ್ವನಿಯೂ ಕೇಳುತ್ತದೆ.

ಕೃಷಿಜ್ಞಾನ ಪ್ರದೀಪಿಕೆಯಲ್ಲಿ ರೈತರಿಗೆ ಬೆಳೆಯೊಂದಿಗೆ ವೈಜ್ಞಾನಿಕ ತಿಳಿವಳಿಕೆಯನ್ನೂ ಹೇಳಿರುವುದು ಗಮನಾರ್ಹವಾಗಿದೆ. ಇದರ ನಿದರ್ಶನಕ್ಕಾಗಿ ಒಂದು ಉದಾಹರಣೆಯನ್ನು ನೋಡಬಹುದು : “ಆಚಾರಾದಿ ಸತ್ಕ್ರಿಯೆಗಳಿಗೆ ನಿರ್ಮಲ ಜಲವೇ ಪ್ರಾಮಾಣ್ಯ”.

ಮುಖ್ಯವಾಗಿ ಲೋಕಾಚಾರಕ್ಕೂ ಜ್ಞಾನಾಚಾರಕ್ಕೂ ಅದು ನಿರ್ಮಲವಾಗಿರಬೇಕು. ಹಾಗೆಂದರೆ ಬಾವಿಗಳ ಸಮೀಪದಲ್ಲಿ ತಿಪ್ಪೆಗಳಿರಬಾರದು. ಬಚ್ಚಲ ನೀರು ಹರಿಗಳಿರಬಾರದು ಮತ್ತು ಮಲಮೂತ್ರ ವಿಸರ್ಜನೆ ಮಾಡಬಾರದು. ಮಳೆಯಾದಾಗ ಊರ ಮಲಿನವಾದ ನೀರು ಬಾವಿಯಲ್ಲಿ ಹೋಗಬಾರದು. ಬಾವಿಯ ಸಮೀಪದಲ್ಲಿ ಶವಗಳನ್ನು ಹೂಳಬಾರದು. ಬಾವಿಯಲ್ಲಿ ಮಲಿನ ವಸ್ತ್ರಗಳನ್ನು ತೊಳೆಯಬಾರದು, ಸಗಣಿಯಾದ ಕೈಕಾಲುಗಳನ್ನು ತೊಳೆಯಬಾರದು. ರೋಗಿ ಜನರ ಮೈ ತೊಳೆಯಬಾರದು. ಮಲಮೂತ್ರ ವಿಸರ್ಜನೆಯಾದ ಬಟ್ಟೆಗಳನ್ನು ಕೌದಿಗಳನ್ನು ಹಾಗೂ ಋತುಮತಿಯರ ಸ್ತ್ರೀಯ ಬಟ್ಟೆಗಳನ್ನು ತೊಳೆಯಬಾರದು. ಇಂಥ ನಿರ್ಮಲತರ ಬಾವಿ ಇದ್ದರೆ ಆ ಬಾವಿಯ ಉದಕವನ್ನು ಬಳಸಬೇಕು. ಇದನ್ನು ಪರೀಕ್ಷಿಸದೇ ಬಳಸಿದಾಗ ಜ್ಞಾನಿಗಳ ಜ್ಞಾನಾಚಾರಕ್ಕೂ ಲೋಕಾಚಾರದ ನಿರ್ಮಲತನಕ್ಕೂ ಭಂಗವಾಗಿ ಕಜ್ಜಿ, ತಿಮರು, ಇಸಬು, ಗಜಕರ್ಣ ಇಂಥ ರೋಗಗಳು ಆಗುವುದಲ್ಲದೆ ಶವಗಳನ್ನು ಹೂಳಿದ್ದಲ್ಲಿ ಮಳೆಗಾಲಕ್ಕೆ ಸಮಾಧಿಯ ನೀರು ಬಸಿದು ಬಾವಿಯಲ್ಲಿ ಬಂದರೆ ಗಿಣ್ಣೆ ಮೊದಲಾದ ರೋಗಗಳು ಹುಟ್ಟುತ್ತವೆ. ಅದು ಕಾರಣ ಲೋಕಾಚಾರಕ್ಕೂ ಜ್ಞಾನಾಚಾರಕ್ಕೂ ನಿರ್ಮಲವಾದ ಜಲವನ್ನೇ ಬಳಸಬೇಕಲ್ಲದೆ ಅಪವಿತ್ರ ಜಲವನ್ನು ಬಳಸಲಾಗದು”. (ಅದೇ; ಪುಟ ೨೩೦) ಇಂಥ ಉಪಯುಕ್ತ ಸೂಚನೆಗಳು ಸಾಕಷ್ಟಿವೆ. ಒಟ್ಟಿನಲ್ಲಿ ಈ ಗ್ರಂಥ ಮಣ್ಣಿನ ಮಕ್ಕಳಿಗೆ ಕೈಹಿಡಿಯಂತಿದೆ.

ಕಡಕೋಳ ಮಡಿವಾಳೇಶ್ವರ ಸ್ವರ ವಚನಗಳು ಸಂಗೀತ ಮತ್ತು ಸಾಹಿತ್ಯದ ಸಾಮರಸ್ಯವನ್ನು ತೋರಿವೆಯೆಂದು ಸ್ಥೂಲವಾಗಿ ಹೇಳಬಹುದಾದರೂ ಈ ವಚನಗಳು ಧಾರ್ಮಿಕ ನೆಲೆಯಲ್ಲಿ ಪರ್ಯಾವಸಾನಗೊಂಡಿರುವುದೇ ಹೆಚ್ಚು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಾದಿ ಹಿರಿಯ ವಚನಕಾರರ ವಚನಗಳಲ್ಲಿರುವ ಉತ್ಕಟತೆ ವೈಚಾರಿಕತೆ ಸಂಘರ್ಷಗಳು ಇಲ್ಲಿ ಕಾಣುವುದಿಲ್ಲ. ಇಲ್ಲಿ ಅಧಿಕಾಂಶ ಭಕ್ತಿಯ ಉಕ್ತಿಗಳು.

ಕನ್ನಡ ಸಾಹಿತ್ಯಕ್ಕೆ ವಿಸ್ತಾರ ವೈವಿಧ್ಯ ವಿಲಾಸ ವೈಭವಗಳ ಸೆರೆಹರಿದುಬಂದ್ದು ಈ ೨೦ನೆಯ ಶತಮಾನದಲ್ಲಿ, ಅದರಲ್ಲೂ ಸ್ವಾತಂತ್ರ್ಯೋತ್ತರ ಅವಧಿಯಲ್ಲಿ. ಅಲ್ಲಿಯವರೆಗಿನ ಸಾಹಿತ್ಯದ ಪರಿಕಲ್ಪನೆ ಮತ್ತು ಪ್ರೇರಣೆಗಳೆಲ್ಲ ಮುಖ್ಯವಾಗಿ ಧರ್ಮ ಮತ್ತು ಸಂಸ್ಕೃತ ಮೂಲಗಳಿಂದ ಅಂಕುರಿಸಿ ಪಲ್ಲವಿಸಿವೆ. ಬಹುಮಟ್ಟಿಗೆ ನಿಯಮವೆನ್ನಬಹುದಾದ ಈ ಹೇಳಿಕೆಗೆ ಅಪವಾದಗಳಿದ್ದರೂ ಅವು ಪರಿಮಿತವಾಗಿವೆ. ಇಂದಿನ ಈ ಕವಿ-ಕೃತಿ ವೈಶಿಷ್ಟ್ಯವೆಂಬ ಗೋಷ್ಠಿಯಲ್ಲಿ ಮಂಡಿತವಾದ ವಿಚಾರಪೂರಿತ ಪ್ರಬಂಧಗಳ ವಿಷಯದಲ್ಲೇ ನಮ್ಮ ಇಡೀ ಕನ್ನಡ ಸಾಹಿತ್ಯ ಪರಂಪರೆಯ ಪ್ರಾತಿನಿಧಿಕವೆನ್ನಬಹುದಾದ ಕಿರು ಪ್ರತಿಬಿಂಬವನ್ನು ಕಾಣಬಹುದು. ಕವಿರಾಜಮಾರ್ಗ ಮತ್ತು ಜೈಮಿನಿ ಭಾರತ ಕೃತಿಗಳು ಸಂಸ್ಕೃತ ಮೂಲವನ್ನು ಆಶ್ರಯಿಸಿವೆ. ಹರಿಕಥಾಮೃತಸಾರ ಮತ್ತು ಸ್ವರ ವಚನಗಳು ಧಾರ್ಮಿಕ ಪ್ರೇರಣೆಯ ಕೃತಿಗಳಾಗಿವೆ. ಕೃತಿಜ್ಞಾನ ಪ್ರದೀಪಿಕೆ ಸ್ವತಂತ್ರ ರಚನೆಯಾಗಿದೆ. ಹೀಗೆ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಇವಿಷ್ಟು ಕೃತಿಗಳು ಈ ಕೆಲವು ವಿಶೇಷವಾದ ಕಾರಣಗಳಿಗಾಗಿ ವಿಶಿಷ್ಟವಾಗಿವೆ.