ಕನ್ನಡ ಸಾಹಿತ್ಯ ಉದ್ಘಾಟನೆಗೊಳ್ಳುವುದು ಜೈನ ಸಾಹಿತ್ಯದಿಂದ, ಅದೂ ಚಂಪೂ ಕಾವ್ಯಗಳ ಮೂಲಕ. ಈ ಹಿರಿಮೆಗೆ ಪಾತ್ರರಾದ ಕವಿಗಳ ಸಾಲಿನಲ್ಲಿ ಮೊದಲಸ್ಥಾನದ ಗೌರವ ಪಡೆದಿರುವ ಕವಯತ್ರಿ ನಾಗಲದೇವಿ (ಕ್ರಿ.ಶ. ೧೪೩೧-೧೪೬೨). ಈಕೆ ಕನ್ನಡ ಸಾಹಿತ್ಯದಲ್ಲಿ ಚಂಪೂಕಾವ್ಯವನ್ನು ರಚಿಸಿರುವ ಪ್ರಥಮ ಹಾಗೂ ಏಕೈಕ ಕವಯತ್ರಿ. ಆದರೆ ಈಕೆಯನ್ನು ಕುರಿತು ಇದುವರೆಗೂ ಒಂದಾದರೂ ಸ್ವತಂತ್ರ ಲೇಖನ ಹೊರಬಂದಿಲ್ಲದಿರುವುದು ಸಾಹಿತ್ಯ ಸೋಜಿಗ.

ಹಂಪಿಯ ಕನ್ನಡ ವಿಶ್ವವಿದ್ಯಾಲಯ ೨೦೦೧ರಲ್ಲಿ ಹೊರತಂದ ನೋಂಪಿಯ ಕಥೆಗಳು (ಸಂ : ಹಂ. ಪ. ನಾಗರಾಜಯ್ಯ) ಪುಸ್ತಕದ ಪ್ರಸ್ತಾವನೆಯಲ್ಲಿ ಈ ಪ್ರೌಢ ಕವಯತ್ರಿ ನಾಗಲದೇವಿಯನ್ನು ಕುರಿತು ಮೊಟ್ಟಮೊದಲ ಬಾರಿಗೆ ಪ್ರಸ್ತಾಪ ಹಾಗೂ ಸವಿವರ ಪರಿಚಯ ಪ್ರಕಟವಾಯಿತು. ಈಕೆಯ ಚಂಪೂಕಾವ್ಯ ಕೂಡ ಆ ಸಂಕಲನದಲ್ಲಿ ಸೇರ್ಪಡೆಯಾಗಿರುವುದು ತಿಳಿಯಿತು.

ನಾಗಲದೇವಿ ಕನ್ನಡ ಅಕ್ಷರಲೋಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ವ್ಯಕ್ತಿತ್ವವಿರುವ ಅನನ್ಯ ಮಹಿಳೆ. ರಾಜಕೀಯದ ನಡುವೆ ಹುಟ್ಟಿ ಬೆಳೆದರೂ ಅರಮನೆಯ ನರುಗಂಪು ತುಂಬಿದ ಸಿರಿಸೊಬಗಿನ ಬಾಳ ಮಧ್ಯದಲ್ಲಿಯೂ ಜನಸಮ್ಮುಖಿ ಚಿಂತನೆಗಳಿಗೆ ಸ್ಪಂದಿಸಿದಳೆಂಬುದು ವರ್ತಮಾನದ ವಿವೇಚನೆಗೆ ಪ್ರಸ್ತುತವಾದ ಸಂಗತಿ.

ಶಿವಮೊಗ್ಗ ಜಿಲ್ಲೆಯ ಜೋಗದ ಜಲಪಾತಕ್ಕೆ ಮುವ್ವತ್ತು ಕಿ.ಮೀ. ದೂರದಲ್ಲಿ ಪಶ್ಚಿಮಕ್ಕೆ ಶರಾವತಿ ನದಿಯ ದಂಡೆಯ ಮೇಲಿರುವ ಊರು ಗೇರುಸೊಪ್ಪೆ. ಇದು ೧೪ ರಿಂದ ೧೬ನೆಯ ಶತಮಾನದ ಅವಧಿಯಲ್ಲಿ ಈ ಪ್ರದೇಶವನ್ನು ಆಳಿದ ಸಾಳುವ ವಂಶದ ರಾಜರ ನೆಲೆವೀಡಾಗಿತ್ತು. ಗೇರುಸೊಪ್ಪೆಗೆ ಕ್ಷೇಮಪುರ, ಭಲ್ಲಾತಕೀಪುರ, ನಗಿರೆ ಎಂಬ ಬೇರೆ ಬೇರೆ ಹೆಸರುಗಳಿದ್ದುವು. ನಗಿರೆ ರಾಜ್ಯವು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ೨೫೦ ವರ್ಷ ವೈಭವದಿಂದ ವಿಜೃಂಭಿಸಿತು. ಕರಿಮೆಣಸಿನರಾಣಿ ಚೆನ್ನಾಭೈರಾದೇವಿಯು (೧೫೪೮-೧೬೦೭) ಅರ್ಧ ಶತಮಾನ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿದ್ದು ಇತಿಹಾಸ ಪ್ರಸಿದ್ಧವಾಗಿದೆ. ಹಾಡುವಳ್ಳಿ, ಹೊನ್ನಾವರ ಪ್ರದೇಶವನ್ನೂ ಒಳಗೊಂಡ ಆ ನಗಿರೆ ರಾಜ್ಯವನ್ನು ಆಳಿದ ಸಾಳುವರು ಜೈನ ಧರ್ಮೀಯರು.

ಜಿನಧರ್ಮ ಪರಾಯಣರಾದ ಗೇರುಸೊಪ್ಪೆಯ ರಾಜರಾಣಿಯರು ಚಂದ್ರಗುತ್ತಿ, ಗೇರುಸೊಪ್ಪೆ, ಮೂಡುಬಿದುರೆ, ಶ್ರವಣಬೆಳಗೊಳ, ಹಾಡುವಳ್ಳಿ, ಹೊನ್ನಾವರ, ಭಟ್ಕಳ, ಬಾರಕೂರು ಮೊದಲಾದ ಸ್ಥಳಗಳಲ್ಲಿ ಅನೇಕ ಧರ್ಮಕಾರ್ಯಗಳನ್ನು ಮಾಡಿದರು. ಪ್ರಸ್ತುತ ನಾಗಲದೇವಿಯು ಈ ಭವ್ಯ ಪರಂಪರೆಗೆ ಸೇರಿದವಳು.

ಈಕೆಯ ಹೆಸರನ್ನು ಕಾರ್ಕಳ ತಾಲೂಕಿನ ಮೂಡಬಿದುರೆಯ ಶಾಸನಗಳು ನಮೂದಿಸಿವೆ. ನಾಗಲದೇವಿಯು ತಿಳುವಳ್ಳಿ ಪುರವಾಧೀಶನಾದ ಕಾಯಪ್ಪ ಮತ್ತು ಲಕ್ಷ್ಮೀಮತಿ ದಂಪತಿಗಳ ಮಗಳು. ಈಕೆಯ ಪತಿ ಸಾಳುವ ವಂಶದ ನಗಿರೆನಾಡಿನ ಎರೆಯ ಹಿರಿಯ ಭೈರವರಾಯ (ಭೈರವೇಂದ್ರ). ಈ ಹಿರಿಯ ಭೈರವರಸನು ಕ್ರಿ.ಶ. ೧೪೩೧ ರಿಂದ ೧೪೬೨ ರವರೆಗೆ ಮೂರು ದಶಕಗಳ ಕಾಲ ಆಡಳಿತ ನಡೆಸಿದ್ದು ಶಾಸನಗಳಲ್ಲಿ ದಾಖಲಾಗಿದೆ. ಭೈರವೇಂದ್ರನು ವಿಜಯನಗರ ಸಾಮ್ರಾಜ್ಯದ ಒಬ್ಬ ಮಹಾಮಾಂಡಲಿಕನೆನಿಸಿ ಖ್ಯಾತ ನಾಮನಾಗಿದ್ದನು. ಈತನಿಗೆ ನಾಗಲದೇವಿ ಪಟ್ಟಮಹಾದೇವಿಯಾಗಿದ್ದಳಲ್ಲದೆ ಮಾಣಿಕದೇವಿಯೆಂಬ ಇನ್ನೊಬ್ಬ ರಾಣಿಯೂ ಮುಖ್ಯ ಮಡದಿಯಾಗಿದ್ದಳು. ಮಾಣಿಕದೇವಿಯು ಸಂಗಮ ನೃಪಾಲನ ಮಗಳು :

ರೂಪಲಾವಣ್ಯದಿಂ ಚೆಲುವೆಯಾಗಿದ್ದ ನಾಗಲದೇವಿಯಂ ಮಂಗಲೋತ್ಸಾಹ
ದಿಂ ಕುಡಲಾ ಭೈರವ ಮಹೀಪಾಲಂ ಮಾಣಿಕಮಹಾದೇವಿ ನಾಗಲದೇವಿಯ
ರೆಂಬ ಪಟ್ಟಮಹಾದೇವಿಯರಿಂದ ಅನೇಕ ಅಂತಃಪುರಂದ್ರಿಯರೊಳ್ ಕೂಡಿ
ನಿಜರಾಜ್ಯಭಾರ ಧುರಂಧರನಾಗಿ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯು
ತ್ತಿರ್ದ್ದು ಶಶಿರವಿಯನ್ನರಪ್ಪ ವರಸಂಗಮನಂ ಗುರುರಾಯನೆಂಬವರಂ
ಪೆಸರವಡೆದಾ ತನೂಭವರ ತಾಂ ಪಡೆದಿರ್ದನತಿ ಪ್ರಮೋದದಿಂ ||

ಮಹಾ ಜಿನಭಕ್ತರಾದ ನಾಗಲದೇವಿ (ನಾಗಲಾಂಬಿಕೆ) ಮತ್ತು ಭೈರವರಾಯ ದಂಪತಿಗಳನ್ನು ಸಾಳ್ವಕವಿ (೧೪೮೫) ಕೂಡ ತನ್ನ ಸಾಳ್ವ ಭಾರತವೆಂಬ ಷಟ್ಪದಿ ಕಾವ್ಯದಲ್ಲಿ ಪರಿಚಯಿಸಿ ಶ್ಲಾಘಿಸಿದ್ದಾನೆ.

            ವನಜಮುಖಿಯಾ ಲಕ್ಷ್ಮಿಯುದರದಿ
            ಜನಿಸಿದುನ್ನತನಮಲ ಜಿನಮತ
            ವನಧಿವರ್ಧನ ಚಂದ್ರನಭಿನವ ನಿಂಬನಿನತೇಜಾ
            ಜನ ನುತ ಮಹಾಮಂಡಲೇಶ್ವರ
            ನನುಪಮಿತ ಗುಣಧಾಮಿನೀ ಭೂ
            ವನಿತೆಯನು ಪಡೆದಾಳು ಭೈರವರಾಯನಂದೆಸೆದಾ ||  ೨೪

            ಖ್ಯಾತೆ ಪಟ್ಟದರಾಣಿಯಭಿನವ
            ಸೀತೆಯೆನಿಸಿದ ನಾಗಲಾಂಬಿಕೆ
            ಯಾತನೂಭವ ನವಮನೋಭವ ಸಂಗನೃಪವೆರಸೆ
            ಪ್ರೀತಿಯಿಂ ಪಲಕಾಲವಾ ರಘು
            ಜಾತನೆನೆ ಧರ್ಮಾರ್ಥ ಕಾಮವ
            ಸೋತು ಸಾಧಿಸಿ ಭೈರವೇಶ್ವರನರಸುಗೆಯದನದಾ ||

(ಸಾಳ್ವಕವಿಯ ಸಾಳ್ವಭಾರತ : ಸಂ. ಹಂಪ. ನಾಗರಾಜಯ್ಯ, ಬೆಂಗಳೂರು, ೧೯೭೭).

ಮಹಾಮಂಡಲೇಶ್ವರನಾದ ಭೈರವರಾಯನು ‘ಅಭಿನವ ನಿಂಬ’ ಎಂದೆನಿಸಿದ್ದನು. ಆ ‘ನಿಂಬೆ’ನೆಂಬ ಮಹಾ ಸಾಮಂತನು ಮಹಾವೀರ, ಮಹಾಧಾರ್ಮಿಕ, ವೀರಸೇನಾನಿಯೂ ಜಿನಭಕ್ತಧುರಂಧರನೂ ಆಗಿದ್ದ ನಿಂಬ ಸಾಮಂತನದು ದೊಡ್ಡ ಇತಿಹಾಸ. ೧೨ನೆಯ ಶತಮಾನದ ಕೊಲ್ಹಾಪುರ ಶಿಲಾಹಾರರ ರಾಜನಾದ ಗಂಡರಾದಿತ್ಯನ ಸಾಮಂತನಾದ ನಿಂಬದೇವನನ್ನು ಕುರಿತು ಪಾರ್ಶ್ವನೆಂಬ ಕವಿ ೧೭೧೦ ‘ನಿಂಬದೇವಸಾಮಂತ ಚರಿತೆ’ಎಂಬ (೫ ಸಂಧಿ ೫೦೬ ಭಾಮಿನಿ ಷಟ್ಪದಿ ಪದ್ಯಗಳಿರುವ) ಕಾವ್ಯವನ್ನು ಬರೆದಿದ್ದಾನೆ. (ಸಂ : ಎಂ.ಎ.ಕಲಬುರ್ಗಿ, ಬೆಂಗಳೂರು, ೧೯೮೧) ಭೈರವೇಂದ್ರನನ್ನು ನಿಂಬ ಸಾಮಂತನಿಗೆ ಹೋಲಿಸಿರುವ ಔಚಿತ್ಯವನ್ನು ಮನಗಾಣಬೇಕು.

ತನ್ನ ನಗಿರೆ ರಾಜ್ಯದ ರಾಜಧಾನಿ ಗೇರುಸೊಪ್ಪೆಯಿಂದ ಆಳುತ್ತಿದ್ದಾಗ ಭೈರವರಸನು ಶ್ರವಣಬೆಳಗೊಳ ಮತ್ತು ಹೊನ್ನಾವರದ ಜಿನಚೈತ್ಯಾಲಯಗಳಿಗೆ ದಾನಗಳನ್ನಿತ್ತನು. ಮೂಡುಬಿದುರೆಯ ಸಾವಿರ ಕಂಬದಬಸದಿಯೆನಿಸಿದ ‘ತ್ರಿಭುವನದ ತಿಲಕ ಚೂಡಾಮಣಿ’ ಚೈತ್ಯಾಲಯಕ್ಕೆ ದತ್ತಿಯಿತ್ತು ‘ಚಿನ್ನ ಬೆಳ್ಳಿ ಹರಿವಾಣ ಕಲಶ ಪಾತ್ರೆ’ಗಳನ್ನು ದಾನ ಮಾಡಿದನು.

            ವೇಣುಪುರದ ಚಂದ್ರನಾಥ ಸ್ವಾಮಿಗೆ ರಜತಮಯಂಗಳಪ್ಪ ವಿಪುಲೋಜ್ವಲ
            ಕುಂಭಘಟೀ ಗಣಂಗಳ ರಜತದೆ ಮಾಡಿದ ದಂಡಿಗೆಯಂ ಪರಿಯಣಮನರ್ಥಿ          
            ಭಕ್ತಿಯಿಂ ರಜತದ ತಾಣ ದೀವಿಗೆಗಳಂ ರಜತದ ಪೃಥುಪೀಠಮುಮಂ
            ರಜತದ ಪರಿಪರಿಯ ಬಟ್ಟಲಂ ಗಿಂಡಿಯುಮಂ ಯಜನಕ್ಕುಚಿತಂಗಳನಾ
            ನಿಜಭುಜಬಲಶಾಲಿ ಭೈರವೇಶ್ವರನಿತ್ತ ||

ಎಂಬುದಾಗಿ ಸ್ಥಳದ ಶಾಸನ ಹೇಳುತ್ತದೆ.

ಕವಿ ನಾಗಲಾಂಬಿಕೆಯೂ ಜಿನಭಕ್ತ ಮಹಾಮಂಡಲೇಶ್ವರ ಗಂಡನಿಗೆ ಸರಿಸಮಳಾದ ಹೆಂಡತಿ. ಮೂಡುಬಿದುರೆಯ ‘ತ್ರಿಭುವನ ತಿಲಕ ಚೂಡಾಮಣಿ’ ಜಿನಾಲಯದ ಮುಂದುಗಡೆ ವಿರಾಜಮಾನವಾಗಿರುವ ಐವತ್ತು ಅಡಿ ಎತ್ತರದ ಅತಿ ಚೆಲುವಿನ ಮಾನಸ್ತಂಭವನ್ನು ನಿಲ್ಲಿಸಿದಳಲ್ಲದೆ ಸೊಗಸಾದ ಮುಖ ಮಂಟಪವನ್ನೂ ಮಾಡಿಸಿದಳು. ಇಷ್ಟು ಪ್ರಸಿದ್ಧಳೂ, ಪ್ರತಿಷ್ಠಿತಳೂ ಆದ ಅಭಿಲಷಿತಾರ್ಥ ದಾನವಿನೋದೆ ನಾಗಲದೇವಿಯು ಶ್ರೇಷ್ಠ ಕವಯತ್ರಿಯೂ ಅಗಿದ್ದಳೆಂಬುದು ಗಮನಿಸಬೇಕಾದ ಅಂಶ.

ಗೇರುಸೊಪ್ಪೆಯ ರಾಣಿ, ನಗಿರೆನಾಡಿನ ಒಡತಿ ನಾಗಲದೇವಿಯು ಸೊಗಸಾದ ‘ಷೋಡಶ ಭಾವನೆಯ ನೋಂಪಿ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾಳೆ. ಈ ಕಾವ್ಯದ ಕಡೆಯ ಭಾಗದಲ್ಲಿ ಬರುವ ಆಯ್ದ ಕಂದಪದ್ಯಗಳಲ್ಲಿ ಸ್ವವಿಷಯವನ್ನು ತಿಳಿಸಿದ್ದಾಳೆ.

ಯಿಳೆಯೊಳ್ ಜಿನಧರ್ಮಕ್ಕಿದು
            ನಿಲಯಂ ತಾನೆನಿಸಿ ಮೆರೆವ ನಗಿರೀನೃಪನಂ
            ಕುಲ ತಿಲಕನಮಲ ಭುಜ ಬಲ
            ದಲಿತಾಹಿತಮಂಡಲೀಕನುಜ್ವಲ ತೇಜಂ ||

            ಚಲುವಂ ಛಲಿಗಳ ದೇವಂ
            ಸಲೆ ಬಲ್ಲಂ ಸಕಲ ಕಲೆಗಳನ್ನುಡೆ ಜಾಣಂ
            ಸುಲಲಿತ ಜಿನಪದ ಪಲ್ಲವ
            ವಿಲಸತ್ಕೋಕಿಲ ಸುಸ್ವರನುದಾತ್ತ ಪವಿತ್ರಂ ||

            ಮಾನಧನಂ ವಿದ್ವಸ್ಸುರ
            ಧೇನುಮಾನ ಪ್ರಭಾವ ಜಿನವರ ಧರ್ಮ
            ಧ್ಯಾನೈಕ ತಾನ ಚಿತ್ತಂ
            ಮಾನಿತಗುಣಶೀಲಮಮ ಸಾಳುವ ಮಲ್ಲಂ ||

            ಎನೆ ನೆಗಳ್ದ ಮಲ್ಲಭೂಪನ
            ಮಿನುತಾಗ್ರಜ ಭೈರವೇಂದ್ರನರಸಿ ಸರೋಜಾ
            ನನೆ ನಾಗಲದೇವಿ ಮಹಾ
            ವಿನಯಾನ್ವಿತೆ ಷೋಡಶಾಖ್ಯಕಾರಣ ವಿಧೇಯಂ ||

            ವರಸುಖಭಾಷಾಮಯಮಂ
            ಸುರುಚಿರ ಕರ್ಣಾಟ ಭಾಷೆಯಿಂ ವಿರಚಿಸಿ
            ವ್ಯರ ಮನದಜ್ಞಾನ ತಮೋ
            ಹರಣಮನಾಗಿಸಿದಳೇಂ ವಿದಗ್ಧೆಯೋ ಜಗದೊಳ್ ||

ನಗಿರೆ ರಾಜ್ಯವನ್ನು, ಅಂದರೆ ಗೇರುಸೊಪ್ಪೆಯನ್ನು ಆಳಿದ ಅರಸರನ್ನು, ನಾಗಲದೇವಿ ‘ಜೈನಧರ್ಮದ ತವರು’ ಎಂದು ಸ್ಪಷ್ಟವಾಗಿ ಸಾರಿದ್ದಾಳೆ. ಹೀಗೆ ಈ ಇಳೆಯಲ್ಲಿ ಜಿನಧರ್ಮಕ್ಕೆ ಇದು ತವರುಮನೆಯೆನಿಸಿ ಮೆರೆದ ನಗಿರೆನಾಡಿನ ರಾಜರ ಸಮೂಹದಲ್ಲಿ ಚೆಲುವನೂ, ಛಲವಾದಿಯೂ, ಬಲ್ಲಿದನೂ, ಬಹುಕಲೆಗಳನ್ನು ತಿಳಿದವನೂ, ಜಾಣನೂ, ಮೃದು ಮಧುರ ಭಾಷಿಯೂ, ಜಿನಭಕ್ತನೂ ಆದವನು ಸಾಳುವಮಲ್ಲನೆಂಬ ಹೆಸರಿನ ಮಹಾಮಾಂಡಲಿಕ. ಈತನು ಮಾನಧನನೂ, ವಿದ್ವಾಂಸರಿಗೆ ಕಾಮಧೇನುವೂ ಆಗಿದ್ದನಲ್ಲದೆ ತನ್ನ ಹೃದಯವನ್ನು ಜಿನಧರ್ಮದಲ್ಲಿ ಇರಿಸಿದ್ದನು. ಒಳ್ಳೆಯ ಗುಣ ಮತ್ತು ಚಾರಿತ್ರ್ಯದಿಂದ ಹೆಸರಾದ ಸಾಳುವಮಲ್ಲ ಭೂಪನ (೧೪೭೧-೮೪) ಅಗ್ರಜನೂ ಹೊಗಳಿಕೆಗೆ ಪಾತ್ರನೂ ಆದವನು ಭೈರವೇಂದ್ರನು (೧೪೩೧-೬೨). ಈ ಭೈರವೇಂದ್ರನ ಅರಸಿಯೇ ತಾವರೆ ಮೊಗದವಳಾದ ನಾಗಲದೇವಿ. ವಿನಯಗುಣದಿಂದ ಕೂಡಿದ ನಾಗಲದೇವಿಯು ‘ಷೋಡಶ ಭಾವನೆ’ಯೆಂಬ ಚಂಪೂ ಕಾವ್ಯವನ್ನು ತನ್ನ ಇಳಿವಯಸ್ಸಿನಲ್ಲಿ, ಕ್ರಿ.ಶ. ೧೪೭೫ ರಲ್ಲಿ ರಚಿಸಿದ್ದಾಳೆ.

ನಾಗಲದೇವಿಯ ತಾಯ್ನುಡಿ, ಮನೆಮಾತು ಅಚ್ಚಗನ್ನಡ, ಆಕೆ ಉತ್ಕಟ ಕನ್ನಡ ಭಾಷಾಭಿಮಾನಿ. ತನ್ನ ಮಾತೃಭಾಷೆಯಾದ ಕನ್ನಡವನ್ನು ಶ್ರೇಷ್ಠವೆಂದೂ(‘ವರ’) ಸುಖದಾಯಕ ಭಾಷೆಯೆಂದೂ (‘ಸುಖಭಾಷಾ’) ಹೊಳಪುಳ್ಳ ಬಹಳ ಸುಂದರ ಭಾಷೆಯೆಂದೂ (‘ಸುರಚಿರ ಕರ್ಣಾಟ ಭಾಷೆ’) ಕರೆದಿರುವ ನಾಗಲದೇವಿಯ ವರ್ಣನೆ ಪರಿಭಾವನ ರಮಣೀಯವಾಗಿದೆ. ಕನ್ನಡ ಭಾಷೆಯನ್ನು ಹೀಗೆ ಮನೋಜ್ಞವಾಗಿ ಪರಿಚಯಿಸಿದ ಕವಯತ್ರಿ ನಾಗಲದೇವಿ ಒಬ್ಬಳೇ. ಭವ್ಯರ ಮನಸ್ಸಿನ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಲು ಕಾಂತಿಯಿಂದ ಬೆಳಗುವ ಕನ್ನಡ ಭಾಷೆಯಲ್ಲಿ ನಾನು ಈ ಷೋಡಶ ಭಾವನೆಯೆಂಬ ಕಾವ್ಯವನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ತಾನು ಪಂಡಿತೆಯೆಂದೂ (‘ವಿದಗ್ಧೆ’) ಪರಿಚಯಿಸಿರುವುದು ಉಚಿತವಾಗಿದೆ.

‘ಷೋಡಶ ಭಾವನೆ’ ಯೆಂದರೆ ಹದಿನಾರು ಬಗೆಯ ಭಾವನೆಗಳು. ಒಂದು ಜೀವ ತೀರ್ಥಂಕರ (ಜಿನ) ಆಗಲು ಹದಿನಾರು ಬಗೆಯ ಮನೋವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಈ ೧೬ ಭಾವನೆಗಳನ್ನು ಆಚಾರ್ಯ ಉಮಾ ಸ್ವಾತಿಯವರ ತತ್ವಾರ್ಥಸೂತ್ರದಲ್ಲಿ ಹೇಳಲಾಗಿದೆ. ದರ್ಶನ ವಿಶುದ್ಧಿ, ವಿನಯಸಂಪನ್ನತೆ, ಶೀಲವ್ರತಗಳಲ್ಲಿ ಅನತಿಚಾರ, ಅಭೀಷ್ಣಜ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧುಸಮಾಧಿ, ವೈಯಾವೃತ್ಯ, ಅರ್ಹದ್ಭಕ್ತಿ, ಆಚಾರ್ಯ ಭಕ್ತಿ, ಉಪಾಧ್ಯಾಯ ಭಕ್ತಿ, ಪ್ರವಚನ ಭಕ್ತಿ, ಆವಶ್ಯಕಾಪರಿಹಾಣಿ, ಮಾರ್ಗಪ್ರಭಾವನೆ ಮತ್ತು ಪ್ರವಚನ ವತ್ಸಲತ್ವ ಇವು ೧೬ ಭಾವನೆಗಳು. ಪಂಪಕವಿಯ ಆದಿಪುರಾಣ, ರನ್ನಕವಿಯ ಅಜಿತ ತೀರ್ಥಂಕರ ಪುರಾಣ ಮೊದಲಾದ ಪ್ರಾಚೀನ ಕನ್ನಡ ಕಾವ್ಯಗಳಲ್ಲಿಯೂ ಜೈನಾಗಮಶಾಸ್ತ್ರಗ್ರಂಥಗಲ್ಲಿಯೂ ಷೋಡಶ ಭಾವನೆಯ ಪ್ರಸ್ತಾಪ ಬಂದಿದೆ.

ತೀರ್ಥಂಕರ ನಾಮಕರ್ಮ ಉದಯವಾಗಲು ಕಾರಣವಾದ ಈ ೧೬ ಭಾವನೆಗಳ ಸಂಬಂಧ ವ್ರತಕಥೆಗಳು ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ರಚಿತವಾಗಿವೆ. ವ್ರತಕಥೆಗಳನ್ನು ಕನ್ನಡದಲ್ಲಿ ನೋಂಪಿ ಕತೆಗಳೆಂದು ಕರೆದಿದ್ದಾರೆ. ಇಂತಹ ನೂರಾರು ನೋಂಪಿಯ ಕಥೆಗಳು ಕನ್ನಡದಲ್ಲಿ ಉಪಲಬ್ಧವಾಗಿವೆ (ನೋಂಪಿಯ ಕಥೆಗಳು, ಸಂಪಾದಕರು-ಹಂಪನಾ, ಹಂಪಿ, ೨೦೦೧). ಈ ವಿಪುಲ ನೋಂಪಿಯ ಕತೆಗಳ ನಡುವೆ ನಾಗಲದೇವಿಯ ‘ಷೋಡಶ ಭಾವನೆ’ ಕಾವ್ಯ ಉತ್ಕೃಷ್ಟವಾಗಿದೆ. ಇದು ಪ್ರಧಾನವಾಗಿ ಕಥನಕಾವ್ಯ. ಚಂಪೂಶೈಲಿಯಲ್ಲಿ ಮೈಪಡೆದಿರುವ ಈ ಕಾವ್ಯದ ಕಥನಗಾರಿಕೆ ಮೇಲ್ಪಟ್ಟದ್ದಾಗಿದೆ.

ಹಾಲಿ ಎರಡು ಷೋಡಶ ಭಾವನೆ ನೋಂಪಿಯ ಕಾವ್ಯಗಳು ದೊರೆತಿವೆ; ಒಂದು ಅಜ್ಞಾತ ಕವಿಕರ್ತೃಕ, ಮತ್ತೊಂದು ನಾಗಲದೇವಿ ವಿರಚಿತ. ಇವೆರಡೂ ಚಂಪೂ ಕಾವ್ಯಗಳೇ ಆಗಿವೆ. ಹೀಗೆ ಕಾವ್ಯರೂಪ, ಕಾವ್ಯಶೈಲಿ ಮತ್ತು ವಸ್ತು – ಈ ಮೂರೂ ಸಮಾನವಾಗಿರುವುದರಿಂದ ತೌಲನಿಕ ಅಧ್ಯಯನಕ್ಕೆ ತಕ್ಕ ಹಾಸೂ ಅಣಿಯಾಗಿದೆ. ನಾಗಲದೇವಿಯ ಸೃಷ್ಟಿ ಶಕ್ತಿ ಅದ್ಭುತ. ಆಕೆ ಉಭಯ ಭಾಷಾ ವಿಶಾರದೆ. ಕನ್ನಡದೊಂದಿಗೆ ಸಂಸ್ಕೃತ ಭಾಷೆಯ ಮೇಲೂ ಸಮದಂಡಿಯಾದ ಹಿಡಿತವಿದೆ. ಛಂದಸ್ಸು ಆಕೆಗೆ ಮಣಿದಿದೆ. ಹಳೆಗನ್ನಡ ಚಂಪೂ ಕಾವ್ಯಗಳನ್ನು ಹೃದ್ಗತ ಮಾಡಿಕೊಂಡಿರುವ ನಾಗಲದೇವಿ ಪಂಪಾದಿ ಕವಿಗಳ ಪ್ರಭಾವವನ್ನು ಸ್ಪಷ್ಟವಾಗಿ ಸೂಚಿಸಿದ್ದಾಳೆ. ಜಿನಶಿಶುವಿನ ಜನ್ಮಾಭಿಷೇಕ ವರ್ಣನೆಯಲ್ಲಿ ನಾಗಲದೇವಿಯ ಭಾಷಾಪ್ರಭುತ್ವ, ಕಾವ್ಯ ವಿಲಾಸ ಮತ್ತು ಆಗಮಶಾಸ್ತ್ರ ಜ್ಞಾನದ ಮುಪ್ಪುರಿಯನ್ನು ಮನಗಾಣಬಹುದು. ಷೋಡಶ ಭಾವನೆ ನೋಂಪಿಯ ಕಥೆಯೆಂಬ ಏಕಮೇವಾದ್ವಿತೀಯ ಪ್ರೌಢ ಚಂಪೂ ಕಾವ್ಯದ ಮೂಲಕ ನಾಗಲದೇವಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮನ್ನಣೆಯ ಸ್ಥಾನ ಮೀಸಲಾಗಿದೆ.

ನಾಗಲದೇವಿಯ ಕಾವ್ಯ ಸಂಕ್ಷಿಪ್ತವಾಗಿದೆ. ಒಂದು ಮಹಾ ಕಾವ್ಯದ ವಸ್ತುವನ್ನು ಸಂಗ್ರಹಿಸಿರುವ ರೀತಿ ನೋಡಿದರೆ ಆಕೆ ವಿಸ್ತಾರ ಪ್ರಿಯಳಲ್ಲವೆಂದು ಮನವರಿಕೆಯಾಗುತ್ತದೆ.

ಈ ಕವಯತ್ರಿ ಕಾವ್ಯವನ್ನು ನಾಲ್ಕು ಭಾಗಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾಳೆಂದು ತಿಳಿಯಬಹುದು. ಮೊದಲ ಭಾಗದಲ್ಲಿ ಮುಂದೆ ಜೀವಂಧರ ತೀರ್ಥಂಕರರಾಗುವ ಭವದ, ಹಿಂದಿನ ಭವದ ಭವಾವಳಿಗಳನ್ನು ತಿಳಿಸಿದ್ದಾಳೆ. ಆ ಭವಗಳಲ್ಲಿ ಮಾಡಿದ ಕೆಟ್ಟಕೆಲಸಗಳ ಪಾಪ-ಕರ್ಮದಿಂದ ವಿಶಾಲೆ ಹಾಗೂ ಚಂಡಕುಮಾರಿಯರ ಭವಗಳಲ್ಲಿ ಮಾಡಿದ ಎಂಥ ಕಠಿಣತರ ನೋವನ್ನು ಅನುಭವಿಸಬೇಕಾಗುತ್ತದೆ ಎನ್ನುವ ವಿವೇಕವನ್ನು ಸಾರಿದ್ದಾಳೆ. ಚಾರಣ ಮುನಿಗಳ ಹಿರಿಮೆ ಹಾಗೂ ಮಹಿಮೆ, ಆಹಾರ, ದಾನದ ಸತ್ ಸಂಪ್ರದಾಯ – ಇವುಗಳ ಶ್ರೇಷ್ಠತೆಯನ್ನು ಪರಿಚಯಿಸಿದ್ದಾಳೆ.

ಕಥೆಯ ಎರಡನೆಯ ಭಾಗದಲ್ಲಿ ನೊಂದ ಜೀವದ ಪರಿತಾಪ, ಪಾಪಕರ್ಮದಿಂದ ಬಿಡುಗಡೆ ಹೊಂದಿ ಉತ್ಕರ್ಷಕ್ಕೆ ಹಾತೊರೆಯುವ ಜೀವದ ನೋವಿನ ಹಾಡಿದೆ. ‘ಷೋಡಶ ಭಾವನೆ’ನೋಂಪಿಯ ರೀತಿ, ಅದನ್ನು ಆಚರಿಸುವ ಪರಿ, ಯಾವಯಾವ ಮಂತ್ರಗಳಿಂದ, ಯಾವ ಯಾವ ಶ್ಲೋಕಗಳನ್ನು ಪಠಿಸುತ್ತಾ ಕಳಸ ಪ್ರತಿಷ್ಠಾಪಿಸಬೇಕು, ‘ಷೋಡಶ ಭಾವನೆ’ಗಳು ಯಾವುವು ಅವುಗಳ ವಿವರಣೆ, ಮೋಕ್ಷಸಾಧನೆಗೆ ದಾರಿಯಾಗುವ ಪರಿ – ಹೀಗೆ ಎಲ್ಲವನ್ನೂ ಸವಿವರವಾಗಿ ಕೊಟ್ಟಿದ್ದಾಳೆ.

ಮೂರನೆಯ ಭಾಗದಲ್ಲಿ ಚಂಡಕುಮಾರಿಯು ‘ಷೋಡಶ ಭಾವನೆ’ಯ ನೋಂಪಿಯ ಆಚರಣೆಯಿಂದ ಪಾಪಕರ್ಮ ಕಳೆದುಕೊಳ್ಳುವ ಪ್ರಭಾವನೆಯನ್ನು ಪರಿಚಯಿಸಲಾಗಿದೆ. ಪಾಪಕಾಳಿಕೆಯಿಂದ ಹೊರಬಂದ ಜೀವ ಅಚ್ಯುತ ಸ್ವರ್ಗದಲ್ಲಿ ಮಹರ್ಧಿಕ ದೇವನಾಗಿ ಹುಟ್ಟುತ್ತದೆ. ಆ ದೇವನು ಸಾಗರೋಪಮಕಾಲ ಸ್ವರ್ಗವಾಸದಲ್ಲಿ ವೈಭವೋಪೇತ ಸಂಸಾರಸುಖವನ್ನು ಅನುಭವಿಸಿದ ಪ್ರಭಾವನೆಯನ್ನು ನಿರೂಪಿಸಲಾಗಿದೆ.

ಅನಂತರದ ನಾಲ್ಕನೆಯ ಹಾಗೂ ಕಡೆಯ ಭಾಗದಲ್ಲಿ ಮಹರ್ಧಿಕ ದೇವನು ಗಂಧರ್ವರಾಜ ನಗರದ ಮಹಾರಾಜ ಸೀಮಂಕರ ಹಾಗೂ ಆತನ ಪಟ್ಟ ಮಹಾದೇವಿ ರಾಜೀವಲೋಚನೆ ದಂಪತಿಗಳಿಗೆ ಮಗನಾಗಿ ತೀರ್ಥಂಕರತ್ವ ಪಡೆಯುವ ಕಟ್ಟಕಡೆಯ ಭವದಲ್ಲಿ ಜನಿಸುವನು. ಅನಂತರದ ಮಹಿಮೆಗಳನ್ನು ನಾಗಲದೇವಿ ಅತ್ಯಂತ ಶ್ರದ್ಧೆ, ಭಕ್ತಿ, ವೈಭವಗಳಿಂದ ವರ್ಣಿಸಿದ್ದಾಳೆ. ಪಂಚಕಲ್ಯಾಣಗಳ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾಳೆ. ರಾಜೀವಲೋಚನೆ ಕಂಡ ಹದಿನಾರು ಸ್ವಪ್ನಗಳ ನಿರೂಪಣೆ ಇದೆ. ಜನ್ಮಾಭಿಷೇಕದ ವರ್ಣನೆ, ಇಂದ್ರನ ಆನಂದ ನರ್ತನದ ವೈಭವ, ಕುಮಾರನಿಗೆ ‘ಜೀವಂಧರ’ನೆಂದು ಹೆಸರಿಡುವ ನಾಮಕರಣೋತ್ಸವ, ಕುಮಾರನ ಬೆಳವಣಿಗೆ, ವೈರಾಗ್ಯ, ರಾಜ್ಯತ್ಯಾಗ, ಘೋರತಪಸ್ಸು, ಮತಿ, ಶ್ರುತಿ, ಅವಧಿ, ಮನಃಪರ್ಯಯ, ಕೇವಲ ಜ್ಞಾನೋತ್ಪತ್ತಿ – ಈ ಎಲ್ಲ ನಿರೂಪಣೆಯ ಜತೆಗೆ ಸಮವಸರಣ ಮಂಟಪದ ಸಂಪೂರ್ಣ ವಿವರಣೆಗಳನ್ನು ನೀಡಿದ್ದಾಳೆ. ಅನಂತರ ಜೀವಂಧರ ತೀರ್ಥಂಕರರು ಮೋಕ್ಷ ಪದವಿಯಲ್ಲಿ ಲೀನವಾಗುವ ಪರಿಯನ್ನು, ಅನೇಕ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳ ವಿವರಗಳಿಂದ ಆಶ್ಚರ್ಯ ಮೂಡಿಸುವಂತೆ ಕವಯತ್ರಿ ನಾಗಲದೇವಿ ಚಿತ್ರಿಸಿದ್ದಾಳೆ.

ಪುಟಗಟ್ಟಲೆ ವರ್ಣಿಸಬಹುದಾದ ಅನೇಕ ಗಣನೀಯ ವಿವರಗಳನ್ನೆಲ್ಲ ಪುಟ್ಟ ಕಾವ್ಯದಲ್ಲಿ ಹಾಸುಹೊಕ್ಕಾಗಿ ನೇಯ್ದಿರುವ ಕವಯತ್ರಿಯ ಸಂಗ್ರಹಕಲೆ ಪರಿಭಾವನಾರ್ಹವಾದುದಾಗಿದೆ. ಒಟ್ಟಿನಲ್ಲಿ ಗಿಂಡಿಯಲ್ಲಿ ಗೊಮ್ಮಟನಿಗೆ ಅಭಿಷೇಕಿಸಿದಂತೆ ನಾಗಲದೇವಿಯ ಪುಟ್ಟ ಕಾವ್ಯಕಥೆ ಗಮನ ಸೆಳೆಯುತ್ತದೆ. ಕಾವ್ಯದ ಆರಂಭದಲ್ಲಿ ಜಿನನನ್ನೂ, ಸರಸ್ವತಿಯನ್ನೂ ಸುತ್ತಿಸಿದ್ದಾಳೆ.

ಕಲ್ಯಾಣದಾಯಿಯಂ ಗುಣ
            ಸಲ್ಲಿಲಿತ ವ್ರತ ಸುಶೀಲ ರತ್ನಾಕರನಂ
            ಫುಲ್ಲಶರಾಂತಕನಂಭವ
            ವಲ್ಲೀಹರನಂ ಜಿನೇಂದ್ರನಂ ವಂದಿಸುವೆಂ ||

            ಶಾರದೆಯಂ ಸಕಲಕಲಾ
            ವಾರಧಿಯಂ ನಮಿಸಿ ಭವವಿನಾಶ ನಿಮಿತ್ತಂ
            ಸಾರಮೆನಿಸಿರ್ಪ ಷೋಡಶ
            ಕಾರಣಮಂ ಪುಣ್ಯ ನಿಲಯಮಂ ವಿರಚಿಸುವೆಂ ||

ಶಾರದೆಗೆ ವಂದಿಸಿ ಒಡನೆಯೇ ನೇರವಾಗಿ ಕಥೆಯನ್ನು ಪ್ರಾರಂಭಿಸಿದ್ದಾಳೆ. ಆದರ ಅಜ್ಞಾತ ಕವಿಯು ರಚಿಸಿರುವ ಇದೇ ವಸ್ತುವಿರುವ ಇನ್ನೊಂದು ಕಾವ್ಯದಲ್ಲಿ ಶ್ರೇಣಿಕ ಮತ್ತು ಚೇಲನಾ ದೇವಿಯರು ಆರಂಭ ಮತ್ತು ಅಂತ್ಯದಲ್ಲಿ ಶ್ರೋತೃಪಾತ್ರಗಳಾಗಿ ಬಂದಿದ್ದಾರೆ. ಅದರಲ್ಲಿ ಜೀವಂಧರ ತೀರ್ಥಂಕರನ ಹಿಂದಿನ ನಾಲ್ಕು ಭವಗಳ ಭವಾವಳಿ ನಿರೂಪಿತವಾಗಿದ್ದರೆ, ನಾಗಲದೇವಿಯ ಕಾವ್ಯದಲ್ಲಿ ಮೂರು ಭವಗಳ ಕಥನ ಮಾತ್ರ ಹೇಳಿ, ಶ್ರೀಪಾಲನ ಭವದ ವರ್ಣನೆಯನ್ನು ಕೈ ಬಿಡಲಾಗಿದೆ. ಇಲ್ಲಿ ವೃತ್ತ ಕಂದ ಪದ್ಯಗಳಲ್ಲದೇ ಗದ್ಯವೂ ಹೃದ್ಯವಾಗಿದೆ. ನಾಗಲದೇವಿಯ ಚಿತ್ರಕ ಶಕ್ತಿ ಶ್ಲಾಘನೀಯವಾಗಿದೆ. ಹಳೆಗನ್ನಡ ಕಾವ್ಯಗಳಲ್ಲಿ ನಾಗಲದೇವಿಯ ಪ್ರತಿಭೆ ಕ್ರೀಡಿಸಿದೆ. ಕುರೂಪಿಯೂ ಮದಾಂಧಳೂ ಆದ ಸ್ತ್ರೀಯೊಬ್ಬಳು ಮುಂದೆ ತೀರ್ಥಂಕರನಾದ ಕಥೆಯ ವಸ್ತು, ಪತಿತ ಸ್ತ್ರೀಯರಿಗೂ ಉದ್ಧಾರವಿದೆಯೆಂದೂ ತೋರಿಸುವ ಸ್ತ್ರೀಪರ ಧೋರಣೆಯನ್ನು ಬಿಂಬಿಸಿದೆ. ಈ ಕಾವ್ಯ ನೂರಾರು ನೋಂಪಿಗಳ ನಡುವೆ ಮಿರುಗುವ ಕಥಾರತ್ನವೆಂಬುದು ನಾಗಲದೇವಿಯ ಕಾವ್ಯಸಿದ್ಧಿಗೆ ಸಂದ ಪ್ರಶಸ್ತಿ.