ಪರಮದೇವ ಕವಿಯ ವಂಶವೃಕ್ಷ

ಶಂಕರನಾರಾಯಣಯ್ಯ ಮಹಾಲಕ್ಷ್ಮಮ್ಮ
ಪರಮೇಶ್ವರಯ್ಯ ೧ (ಕವಿ) ಭಾಗೀರಥಮ್ಮ
ಶಂಕರಯ್ಯ ೧ – ತಿಮ್ಮಮ್ಮ ಕೃಷ್ಣಯ್ಯ
ದ್ಯಾವಪ್ಪ
ಪರಮೇಶ್ವರಯ್ಯ ೨ – ಸುಬ್ಬಮ್ಮ ಸಣ್ಣಯ್ಯ
ಲಕ್ಷ್ಮಮ್ಮ
ಶಂಕರಯ್ಯ ೨ – ನರಸಮ್ಮ ಮೂಕಾಂಬಿಕಮ್ಮ
ಪರಮೇಶ್ವರಯ್ಯ ೩ ನಾರಾಣಪ್ಪ – ಭವಾನಮ್ಮ
ರಾಮಪ್ಪ
ಲಕ್ಷಮ್ಮ ೨ ಕೃಷ್ಣಮೂರ್ತಿ
ಭಾಗೀರಥಮ್ಮ ಚಂದ್ರಶೇಖರ
ನರಸಿಂಹಯ್ಯ ಅನ್ನಪೂರ್ಣಮ್ಮ
ಗಣೇಶರಾವ್ ಅನಸೂಯಮ್ಮ
ಗೋಪಾಲಯ್ಯ

ಇನ್ನು ಪರಮದೇವ ಕವಿಯ ಜೀವಿತದ ಕಾಲಮಾನವನ್ನು ಕುರಿತು ಕೆಲವು ಅಂಶಗನ್ನು ಇಲ್ಲಿಯೇ ವಿಶದೀಕರಿಸಿಕೊಳ್ಳಬಹುದಾಗಿದೆ. ಶಾಲಿವಾಹನಶಕ ೧೬೬೫ರ ನಂತರ ಅಂದರೆ ಕ್ರಿ.ಶ. ೧೭೪೩ರ ತರುವಾಯ ಪರಮದೇವ ಕವಿ ಜನಿಸಿದಂತೆ ತೋರುತ್ತದೆಂದು ವೆಂಕಟರಮಣಶಾಸ್ತ್ರಿ ಸೂರಿಯವರು ಅಭಿಪ್ರಾಯಪಟ್ಟಿದ್ದಾರೆ.

[1] ಆದರೆ ಇದನ್ನು ಪುಷ್ಟೀಕರಿಸುವ ಅಂತರ ಬಾಹ್ಯ ಪ್ರಮಾಣಗಳಿಲ್ಲವೆನ್ನಬಹುದು. ಏಕೆಂದರೆ ಶಾಲಿವಾಹನಶಕ ೧೭೦೦ ರ ಹೇವಿಳಂಬಿ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ಶುಕ್ರವಾರದಂದು ಶುಭಮುಹೂರ್ತದಲ್ಲಿ ಪರಮದೇವಕವಿ ಈ ಸಂಕ್ಷಿಪ್ತ ಭಾರತವನ್ನು ರಚಿಸಲು ತೊಡಗಿದ್ದು ಖಚಿತವಾಗಿ ತಿಳಿದುಬಂದಿದೆ.27ಅ ಇದರ ಬರವಣಿಗೆ ಪೂರೈಸಿದ್ದು ತಿಳಿಯದು. ಒಂದೆರಡು ವರ್ಷಗಳಲ್ಲಿ ಕಾವ್ಯ ಪೂರ್ಣಗೊಂಡಿರಬಹುದು. ಹೈದರಾಲಿಯ ಇಕ್ಕೇರಿ ಪ್ರಾಂತ್ಯ ಸಮಾವೇಶವಾಗಿದ್ದ ಬಿದನೂರು ರಾಜ್ಯವನ್ನು ತನ್ನದಾಗಿಸಿಕೊಂಡಿದ್ದನು. ೧೭೯೧ ರಲ್ಲಿ ಪರಶುರಾಮಭಾವೂನ ಮುಂದಾಳು ತನದಲ್ಲಿ ಮರಾಠಿಗರು ಈ ಇಕ್ಕೇರಿ ಭಾಗದಲ್ಲಿ ದಾಳಿ ಮಾಡಿ, ಲೂಟಿ ಮಾಡಿ ಹೋದ ದಾಖಲೆಗಳಿವೆ. ಆಗ ಅದೇ ಸಮಯದಲ್ಲಿ ಹೊಂದಿಕೊಂಡು, ಕ್ಷಾಮವೂ ತಲೆದೋರಿದಂತೆ ಹೇಳಲಾಗಿದೆ. ಈ ಐತಿಹಾಸಿಕ ಸಂಗತಿಯನ್ನು ಪರಮದೇವಕವಿ ತನ್ನ ಕೆಲವು ಕೀರ್ತನೆಗಳಲ್ಲಿ ಪ್ರಸ್ತಾಪಿಸಿ, ಆಗ ತನಗೆ ಎಪ್ಪತ್ತೊಂದು ವರ್ಷವಾಗಿತ್ತೆಂದು ಹೇಳಿದ್ದಾನೆ. ಇದೊಂದು ವಿಶ್ವಸನೀಯವೂ ಸಬಲವೂ ಆದ ಆಧಾರವಾಗಿದೆ. ಇದರ ಪುಷ್ಟಿಗಾಗಿ ಮೂರು ಉದಾಹರಣೆಗಳನನ್‌ಉ ಕೊಡಬಯಸುತ್ತೇವೆ :

. ಹೋಯಿತು ಪರಶುರಾಮನ ದಂಡಿಲಿ | ನಷ್ಟ |
   ವಾಯಿತು ಜನರೆಲ್ಲ ಹೊಡೆತ ಕಡಿತದಿ ||[2]

. ಶಿವ ಶಿವ ಎಂಥ ಕಾಲ ಬಂದಿತೊ | ಬಂದ |
   ಭವದೊಳು ಚಿಂತೆಯೊಳಗೆ ದಿನ ಸಂದಿತು ||
   ತಪ್ಪಿ ಹೇಳುವನೆ ನಮ್ಮಪ್ಪ ದುರ್ಭಿಕ್ಷವು
   ಎಪ್ಪತ್ತು ವರುಷಕೊದಗಿ ಬಂತು
   ಇಪ್ಪತ್ತು ವರುಷಕೀ ಕಾಲ ಬಂದಿದ್ದರೆ
   ಕನಿಷ್ಠಕ್ಕೆ ಗಣಿಸಿ ಸುಕ್ಷಾಮವ ಮರೆವೆನು ||[3]

. ಮುನಿದ ಭಾವುನದಂಡು ಕಂಡು | ನಿನ್ನ |
   ಮನೆಮಾರಿನಾಸೆಯನು ನೀಡಾಡು ||[4]

ಹೀಗೆ ೧೭೯೧ ರ ಸುಮಾರಿಗೆ ಕವಿಗೆ ಎಪ್ಪತ್ತು ವರ್ಷವಾಯಿತೆಂಬುದರಿಂದ ಕವಿಯ ಜನನದ ತೇದಿಯನ್ನು ೧೭೨೧ ಕ್ಕೆ ಹೊಂದಿಸುವುದರಲ್ಲಿ ಔಚಿತ್ಯವಿದೆಯನ್ನಬಹುದು. ಇದು ಶಾಲಿವಾಹನ ಶಕ ೧೬೪೩ ನೆಯ ಶಾರ್ವರಿ ಸಂವತ್ಸರಕ್ಕೆ ಹೊಂದಾಣಿಕೆಯಾಗುತ್ತದೆ. ಪರಮದೇವಕವಿ ಈ ತುರಂಗ ಭಾರತ ಕಾವ್ಯವನ್ನು ಯಾವಾಗ ಬರೆಯತೊಡಗಿದನೆಂಬುದನ್ನು ಸ್ಪಷ್ಟವಾಗಿ ತಿಳಿಸಿ ಉಪಕರಿಸಿದ್ದಾನೆಂದು ಆಗಲೇ ತಿಳಿಸಲಾಗಿದೆ. ಆ ಪದ್ಯ –

ಸ್ವಸ್ತಿ ಶ್ರೀಮಚ್ಯಾಲಿವಾಹನಗೆ ಶಕವರುಷ
            ಗುತ್ತಿಗೆಗೆ ಸಾವಿರದ ಏಳ್ನೂರು ಪೂರ್ಣ ಸಲು
            ತಿತ್ತುಲೆಖ್ಖಕೆ ಹೇವಿಳಂಬಿ ಸಂವತ್ಸರದ ವರುಷಋತು ಶ್ರಾವಣದೊಳು
            ಉತ್ತಮಂ ಶುಕ್ಲಪಕ್ಷದ ಪಂಚಮಿಯ ದಿನಂ
            ಹಸ್ತ ನಕ್ಷತ್ರ ಶುಭಲಗ್ನದಿಂ ಭಾರತವ
            ವಿಸ್ತರಿಸತೊಡಗಿದೆನು ಭಾರ್ಗವಾಸರದುದಯ ಕಾಲದೊಳು ಗುರುಕರುಣದಿಂ ||

ಅಂದರೆ ೧೭೦೦ ರ ಶಕವರುಷ ಹೇವಿಳಂಬಿ ಸಂವತ್ಸರಕ್ಕೆ ಕವಿಗೆ ೫೭ನೆಯ ವರ್ಷ ನಡೆಯುತ್ತಿತ್ತೆಂದು ಭಾವಿಸಬಹುದಾಗಿದೆ.

ಇದರಂತೆ ಪರಮದೇವ ಕವಿಯ ಮರಣವನ್ನು ಕುರಿತು ಖಚಿತವಾಗಿ ತಿಳಿಯದಾದರೂ ೧೭೯೧ ರ ತರುವಾಯ ಆಗಿರಬೇಕೆಂದು ಭಾವಿಸಬಹುದಾಗಿದೆ. ಬಹುಶಃ ಕವಿ ೧೮೦೫ ರ ಸುಮಾರಿಗೆ ನಿಧನವಾಗಿರಬಹುದೆಂದು ತುರಂಗ ಭಾರತದ ದ್ವಿತೀಯ ಸಂಸ್ಕರಣದ ಸಂಪಾದಕರು ಸಂಗ್ರಹಿಸಿರುವುದರಲ್ಲಿ ತಪ್ಪೇನಿರಲಾರದು.[5]

ಕವಿಯ ಕಾಲ ವಿಚಾರ ಕುರಿತ ಇದುವರೆಗಿನ ಚರ್ಚೆಯಿಂದ ಹೊರಪಡುವ ಸಾರಾಂಶವೆಂದರೆ, ಪರಮದೇವ ಕವಿಯ ಒಟ್ಟು ಆಯುರವಧಿ ೧೮ನೆಯ ಶತಮಾನದ ಅಂತ್ಯದವರೆಗೆ ಮುಂದುವರಿದಿದೆ. ಪರಮದೇವ ಕವಿ ಆರೋಗ್ಯಭಾಗ್ಯದಿಂದ ಸುಮಾರು ಎಂಬತ್ತು ವರ್ಷಗಳ ತುಂಬು ಜೀವನವನ್ನು ಬಾಳಿದನೆನ್ನಬಹುದು.[6]

ಜನನ ಸು. ೧೭೨೧
ತುರಂಗ ಭಾರತ ರಚನೆ ೧೭೭೮
ಮರಣ ಸು. ೧೮೦೫

ಪರಮದೇವ ಕವಿಯ ಇತರ ಕೃತಿಗಳನ್ನು ಕುರಿತು ವಿವರಣೆಗೆ ತೊಡಗುವ ಪೂರ್ವದಲ್ಲಿ ಆತನ ಬಹುಮುಖ ಶಕ್ತಿ ಹಾಗೂ ಅನುಭವ ವಿಶೇಷಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಂಶವನ್ನು ವಿಶದೀಕರಿಸಬೇಕಾಗಿದೆ. ಪರಮದೇವ ಕವಿ ಒಬ್ಬ ತಾಳೆಗರಿ ಹಸ್ತಪ್ರತಿ ಲಿಪಿಕಾರನೂ ಆಗಿದ್ದನೆಂಬುದು ಸ್ವಾರಸ್ಯಕರವಾಗಿರುವಂತೆ, ಕವಿಯ ಕಾವ್ಯ ರಚನೆಯ ವಿವೇಚನೆಯಲ್ಲಿ ಸ್ವಲ್ಪ ನೆರವೂ ಆಗಬಹುದಾದ ಸಂಗತಿಯಾಗಿದೆ.[7] ಈ ಕವಿಯ ಆಶ್ರಯದಾತರಲ್ಲಿ ಒಬ್ಬರಾದ ಲಕ್ಷ್ಮೀನಾರಾಯಣಯ್ಯನವರು ಪರಮದೇವನಿಂದ ಕೆಲವು ಪ್ರಾಚೀನ ಗ್ರಂಥಗಳನ್ನು ಓಲೆಗರಿಯ ಮೇಲೆ ಪ್ರತಿಮಾಡಿಸಿರುವುದಾಗಿ ತಿಳಿದುಬರುತ್ತದೆ. ಅವುಗಳಲ್ಲಿ ಮುಖ್ಯವಾಗಿ ರಾಮಾಯಣ, ಭಾಗವತ, ಭಗವದ್ಗೀತೆ, ಸಂಹಿತೆಗಳು, ಪುರಾಣಗಳು, ಚಾಟುವಿಠಲನಾಥ (?) ವಿರಚಿತ ಪೌಲೋಮ ಪರ್ವ ಮತ್ತು ಆಸ್ತಿಕ ಪರ್ವ, ಬಬ್ಬೂರು ರಂಗನ ಅಂಬಿಕಾ ವಿಜಯ, ಕುಮಾರವ್ಯಾಸಭಾರತ, ತಿಮ್ಮಣ್ಣ ಕವಿಯ ಕೃಷ್ಣರಾಯ ಭಾರತ – ಇವುಗಳನ್ನು ಪ್ರತಿ ಮಾಡಿದ್ದಂತೆ ಗೊತ್ತಾಗುತ್ತದೆ. ಇದಲ್ಲದೆ ಪುರಂದರದಾಸ ಮತ್ತು ಕನಕದಾಸರ ಕೆಲವು ಕೀರ್ತನೆಗಳನ್ನು ಸಂಗ್ರಹಿಸಿ ಪ್ರತಿ ಮಾಡಿಟ್ಟಿರುವುದೂ ಕಂಡುಬಂದಿದೆ.[8]

ಪರಮದೇವ ಕವಿ ಸಂಪಾದಿಸಿ ಹಸ್ತಪ್ರತಿಗಳನ್ನು ಸಿದ್ಧಪಡಿಸಿರುವುದರಲ್ಲಿ ಮತ್ತೊಂದು ಹೆಗ್ಗಳಿಕೆಯನ್ನು ಇಲ್ಲಿ ಬಿಚ್ಚಳಿಸಬೇಕಾಗಿದೆ. ಕವಿಗೆ ಸಂಬಂಧಿಸಿದಂತೆ ಹೊಸ ವಿಚಾರದತ್ತ ಹೊನಲು ಬೆಳಕು ಹಾಯಿಸುವ ಅಂಶವಿರುವುದರಿಂದ ಇದನ್ನು ಪ್ರತ್ಯೇಕವಾಗಿ ಹಾಗೂ ಪ್ರಮುಖವಾಗಿ ಉಲ್ಲೇಖಿಸುವ ಅಗತ್ಯವಿದೆ. ಅದು “ದ್ರೌಪದಿ ವಸ್ತ್ರಾಪಹರಣ” ಎಂಬ ಪುಟಾಣಿ ಕೃತಿಗೆ ಸಂಬಂಧಿಸಿದೆ.[9] ಪರಮದೇವನ ಸಂಗ್ರಹದಲ್ಲಿರುವ ಈ ಚಿಕ್ಕ ಕಾವ್ಯಕ್ಕೆ ದ್ರೌಪದಿ ಸೀರೆ ಸೆಳೆದದ್ದು, ದ್ರೌಪದಿ ಸೀರೆ ಸೆಳೆದ ಉದಯರಾಗ ಎಂಬ ನಾಮಾಂತರಗಳೂ ಇತರ ಹಸ್ತಪ್ರತಿಗಳಲ್ಲಿವೆಯೆಂದೂ ತಿಳಿದುಬರುತ್ತದೆ.[10]

೧. ಉಳ್ಳೂರು (ಉ) ಪ್ರತಿಯಲ್ಲಿರುವುದು : ದ್ರೌಪದಿ ಸೀರೆ ಸೆಳೆದದ್ದು

೨. ಶಿವಮೊಗ್ಗ (ಶಿ) ಮತ್ತು ಬಳ್ಳಾರಿ (ಬ) : ದ್ರೌಪದಿ ವಸ್ತ್ರಾಪಹರಣ ಪ್ರತಿಗಳಲ್ಲಿರುವುದು.

೩. ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ವಿಭಾಗದಲ್ಲಿರುವ ಓಲೆಪ್ರತಿ (ಕೆ. ೫೬೪) : ದ್ರೌಪದಿ ಸೀರೆ ಸೆಳೆದಾಗ ಉದಯರಾಗ.

ಈ ಪುಟ್ಟ ಕಾವ್ಯದಲ್ಲಿ ಒಟ್ಟು ೩೨ ವಾರ್ಧಕ ಷಟ್ಪದಿ ಪದ್ಯಗಳಿವೆ. ನಾಲ್ಕು ಹಸ್ತಪ್ರತಿಗಳ ಸಹಾಯದಿಂದ ಇದನ್ನು ಪ್ರಕಟಿಸಿರುವ ಸಂಪಾದಕರು ಪೀಠಿಕೆಯಲ್ಲಿ ಹೇಳಿರುವ ಮಾತುಗಳು : “ದ್ರೌಪದಿಯ ವಸ್ತ್ರಾಪಹರಣ ಸಂದರ್ಭ ಮಹಾಭಾರತದಲ್ಲಿ ಒಂದು ಮಹತ್ವದ ಘಟ್ಟ. ದೇಹಾಭಿಮಾನದ ನಿರಸನ, ಸರ್ವ ಸಮರ್ಪಣಭಾವದ ಮಹತ್ವ ಈ ಘಟ್ಟದ ಮುಖ್ಯತತ್ವ. ಶುಂಡಾಲಪುರದೊಳಗೆ ದುರುಳ ದುರಿಯೋಧನನು…. ಎಂದು ಪ್ರಾರಂಭವಾಗುವ ದ್ರೌಪದಿ ವಸ್ತ್ರಾಪಹರಣಕ್ಕೆ ಸಂಬಂಧಿಸಿದ ಹಾಡು ಕನ್ನಡ ನಾಡಿನಲ್ಲಿ ಬಹುಜನಕ್ಕೆ ಗೊತ್ತಿದೆ. ಇದು ವಾರ್ಧಕ ಷಟ್ಪದಿಯ ರಚನೆ. ಆದರೆ ಇದನ್ನು ಹಾಡಿನ ಮಟ್ಟಿನಲ್ಲಿ ಹೇಳುವುದರಿಂದ, ಇದು ಹಾಡಿನ ಸಾಲಿನಲ್ಲಿ ಸೇರಿಹೋಗಿದೆ. ೧೯೬೦ ರಲ್ಲಿ ಬಳ್ಳಾರಿಯಲ್ಲಿದ್ದಾಗ, ನಾನು ಮೊದಲು ಈ ಹಾಡನ್ನು ಸಂಗ್ರಹಿಸಿದ್ದೆ. ಅನಂತರ ಶಿವಮೊಗ್ಗದಲ್ಲಿ, ಬೆಂಗಳೂರಿನಲ್ಲಿ ವಯಸ್ಸಾದವರು ಬೆಳಗ್ಗೆ ಎದ್ದು ಹೇಳುತ್ತಿದ್ದುದು ಕಿವಿಗೆ ಬಿದ್ದಾಗ, ಅವರಿಂದ ಹೇಳಿಸಿ ಪ್ರತಿ ಮಾಡಿಕೊಂಡಿದ್ದೆ. ಈಗ ಪರಮದೇವನ ಕೀರ್ತನ ಸಂಗ್ರಹದಲ್ಲಿಯೂ ಈ ಪದ್ಯಗಳಿವೆ, ಈ ಸಂಗ್ರಹದಲ್ಲಿ ಮೂವತ್ತೆರಡು ವಾರ್ಧಕದ ಪದ್ಯಗಳಿವೆ. ಅವುಗಳನ್ನು ಇಲ್ಲಿ ಸಂಪಾದಿಸಿಕೊಟ್ಟಿದ್ದೇನೆ. ಈ ಸಂಗ್ರಹದಲ್ಲಿ ಪರಮದೇವ ತನ್ನದೇ ಆದ ಪದ್ಯಗಳನ್ನು ಸೇರಿಸಿದ್ದಾನೆ.”[11]

‘ದ್ರೌಪದಿಯ ಸೀರೆ ಸೆಳೆದದ್ದು’ ಕೃತಿಯ ಆದಿಭಾಗ ಹೀಗಿದೆ :

            ಶ್ರೀ ಮಹಾಗಣಪತಿಯೇ ನಮಃ
            ಹರಿಯೇ ವಾಸುದೇವಾಯ ನಮಃ
            ವಾಸುಕೀ ಶಯನಾಯ | ವಾಶವಾದ್ಯಖಳಮುನಿನಮಿತ ಚರಣಾಂಭೋಜ
            ಭೂಸುರಪ್ರಿಯ | ಭಜಕ ಪೋಷಕನೆ |
            ರಕ್ಷಿಪುದು ಕೇಶವ ಮುಕುಂದ ನೀನೊಲಿದು.[12]

ಸಾಕಷ್ಟು ಪಾಠಾಂತರಗಳಿದ್ದರೂ ಅದರಲ್ಲಿ ಸಂಶೋಧನೆಗೆ ನೆರವಾಗುವ ಅಂಶಗಳಿಲ್ಲ. ಈ ಕೃತಿಯ ಕಡೆಯ ಪದ್ಯವಾದ ೩೨ನೆಯ ಪದ್ಯ ‘ಅರಸು ಮುದ್ದುವಿಠಲರಾಯ’ ಎಂಬ ಅಂಕಿತದಿಂದ ಮುಕ್ತಾಯವಾಗಿದ್ದರೂ, ಲಭ್ಯವಾಗಿರುವ ನಾಲ್ಕು ಹಸ್ತಪ್ರಿಗಳಲ್ಲೂ ಅದಕ್ಕೆ ಭಿನ್ನಪಾಠಗಳುಂಟು :[13]

೧. ಉಳ್ಳೂರು (ಉ) ಪ್ರತಿಯಲ್ಲಿ ಅರಸು ಮುದ್ದು ವಿಠಲರಾಯಗೆ
೨. ಮೈಸೂರು (ಕೆ. ೫೬೪) ಪ್ರತಿಯಲ್ಲಿ ಮಂಗಳಂ ಕನಕಾದ್ರಿ ನರಸಿಂಹಗೆ
೩. ಬಳ್ಳಾರಿ (ಬ) ಪ್ರತಿಯಲ್ಲಿ ಶ್ರೀ ಸೀಬಿ ನರಸಿಂಹಗೆ
೪. ಶಿವಮೊಗ್ಗ (ಶಿ) ಪ್ರತಿಯಲ್ಲಿ ಜಗದೀಶ ಪುರಂದರ ವಿಠ್ಠಲಗೆ

ಈ ನಾಲ್ಕು ಹಸ್ತಪ್ರತಿಗಳ ಕಾಲ ಕ್ರಮವಾಗಿ ಯಾವುದು ಎಂಬುದು ಮೊದಲು ನಿಶ್ಚಯವಾಗಬೇಕಾಗುತ್ತದೆ. ಅನಂತರ ಇವುಗಳಲ್ಲಿ ಪ್ರಾಚೀನವಾದುದು ಯಾವುದು ಹಾಗೂ ವಿಶ್ವಸನೀಯವೆನಿಸುವುದು ಯಾವುದು ಎಂಬುದೂ ಸಂಶೋಧನೆಯಿಂದ ನಿರ್ಧಾರವಾಗಬೇಕಾದ ವಿಷಯ. ಅಲ್ಲದೆ ‘ಅರಸು ಮುದ್ದು ವಿಠಲ’ ಎಂಬ ಅಂಕಿತ ಯಾವ ಕವಿಯದೆಂಬುದು ತಿಳಿಯದಾದರೂ ಪುರಂದರದಾಸರತ್ತ ಗಮನ ಸೆಳೆಯುತ್ತದೆ.[14] ಈ ಭಾವನೆಯನ್ನು ಶಿವಮೊಗ್ಗದ ಪ್ರತಿಯಲ್ಲಿರುವ ‘ಪುರಂದರ ವಿಠಲ’ ಎಂಬ ಅಂಕಿತ ಬಲಗೊಳಿಸುತ್ತದೆ.[15] ಆದರೆ ಇನ್ನೆರಡು ಪ್ರತಿಗಳಲ್ಲಿ ಬೇರೆ ಅಂಕಿತಗಳಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ಮೈಸೂರು ಪ್ರತಿಯಲ್ಲಿ ಬರುವ ಕನಕಾದ್ರಿ ನರಸಿಂಹ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ. ಕನಕಾದ್ರಿ ಎಂಬ ಹೆಸರಿನ ಬೆಟ್ಟಗಳು ಕರ್ನಾಟಕದಲ್ಲಿ ಬೇರೆ ಬೇರೆ ಇವೆ. ಮೈಸೂರು ಜಿಲ್ಲೆಯ ಚಾಮರಾಜನಗರ ತಾಲೂಕಿನಲ್ಲಿರುವ ಮಲೆಯೂರಿನ ಬೆಟ್ಟಕ್ಕೆ ಜೈನ ಸಾಹಿತ್ಯದಲ್ಲಿ ಕನಕಾದ್ರಿ ಎಂಬ ನಿರ್ದೇಶನವಿದೆ.[16] ಇದು ವೈದಿಕ ಪರಿಸರದ ಪದ್ಯವಾದುದರಿಂದ ಇಲ್ಲಿರುವುದು ನಿಶ್ಚಿತವಾಗಿಯೂ ಮೈಸೂರು ಜಿಲ್ಲೆಯ ಜೈನಪರವಾದ ಕನಕಾದ್ರಿಯಲ್ಲ. ಹಾಗಾದರೆ ಇನ್ನಾವುದಿರಬಹುದು ಎಂಬುದು ನಮ್ಮ ಮುಂದಿನ ಪ್ರಶ್ನೆಯಾಗುತ್ತದೆ. ರಾಯಚೂರು ಜಿಲ್ಲೆಗೆ ಸೇರಿದ ಗಂಗಾವತಿ ತಾಲೂಕಿನಲ್ಲಿ ಕನಕಗಿರಿ ಎಂಬುದೊಂದಿದೆ. ಇದಕ್ಕೆ ಕನಕಾಚಲವೆಂದೂ ಹೇಳುವುದುಂಟು. ಇಲ್ಲಿ ವಿಜಯನಗರ ಪ್ರೌಢದೇವರಾಯನೆಂದು ಖ್ಯಾತನಾಮವಾದ ಇಮ್ಮಡಿ ದೇವರಾಯನ[17] (೧೪೨೪-೧೪೪೬) ಸಾಮಂತನಾದ ಪರಸಪ್ಪ ಉಡಿಚನಾಯಕನು (೧೪೩೬-೧೪೩೭) ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು ಕಟ್ಟಿಸಿದ್ದಾಗಿ ತಿಳಿದು ಬರುತ್ತದೆ.[18] ಈ ದೇವರಿಗೆ ಕನಕಗಿರಿಸ್ವಾಮಿಯೆಂದೂ ಕರೆಯುತ್ತಾರೆ. ಸ್ಕಾಂದ ಪುರಾಣದಲ್ಲಿ ಇದನ್ನು ಸುವರ್ಣ(ಕನಕ)ಗಿರಿ ಎಂದು ಕರೆಯಲಾಗಿದೆ. ಕೃಷ್ಣದೇವರಾಯನ ‘ಆಮುಕ್ತ ಮೌಲ್ಯದಾ’ ಕಾವ್ಯದಲ್ಲಿ ಕನಕಗಿರಿಯನ್ನು ಹೆಸರಿಸಲಾಗಿದೆ. ಪುರಂದರದಾಸರ ಒಂದು ಕೀರ್ತನೆಯಲ್ಲಿ ‘ಕನಕಚಾಲ ಕೃಷ್ಣನ’ ಹಾಗೂ ನರಸಿಂಹನ ಸ್ತುತಿಯಿದೆ.[19]

ಹೀಗೆ ಪುರಾಣ ಕೀರ್ತನೆ ಇತಿಹಾಸದಲ್ಲಿ ಬಂದಿರುವ ಹೆಸರಾಂತ ಕನಕಗಿರಿಯ ಲಕ್ಷ್ಮೀನರಸಿಂಹಸ್ವಾಮಿಯನ್ನೇ ಮೈಸೂರು ಪ್ರತಿಯಲ್ಲಿ ‘ಮಂಗಳಂ ಕನಕಾದ್ರಿ ನರಸಿಂಹಗೆ’ ಎಂಬುದಾಗಿ ಸ್ತುತಿಸಿರುವುದೆಂದು ಈ ತುಲನೆಯಿಂದ ಸ್ಪಷ್ಟವಾಗಿ ಹೇಳಬಹುದು. ಉಳ್ಳೂರು, ಶಿವಮೊಗ್ಗ ಮತ್ತು ಮೈಸೂರು ಹಸ್ತಪ್ರತಿಗಳು ಈ ರಚನೆ ಪುರಂದರದಾಸರದಿರಬಹುದೆಂಬ ಭಾವನೆಗೆ ಎಡೆ ಮಾಡಿಕೊಡುತ್ತದೆ. ಆದರೆ ಬಳ್ಳಾರಿ ಸಂಗ್ರಹದ ಹಸ್ತಪ್ರತಿಯಲ್ಲಿ ಬರುವ ‘ಸೀಬಿ ನರಸಿಂಹ’ ತುಮಕೂರು ಜಿಲ್ಲೆಯಲ್ಲಿದೆ. ತುಮಕೂರಿನಿಂದ ಶಿರಾ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನಿಂದ ೨೫ ಕಿಲೋಮೀಟರು ದೂರದಲ್ಲಿ ಸೀಬಿ ನರಸಿಂಹ ದೇವಾಲಯ ಸಿಗುತ್ತದೆ. ಇದು ೧೮ನೆಯ ಶತಮಾನದಿಂದೀಚೆಗಿನ ಐತಿಹಾಸಿಕ ಪ್ರಸಿದ್ಧವಾದ ಬೃಹತ್ ದೇವಾಲಯ, ಶಿಬಿಯೂರು, ಶಿಬಿಪುರ, ಹರಿಹರರಾಯಪುರ ಎಂಬ ಹೆಸರುಗಳೂ ಸೀಬಿಗೆ ಬಳಕೆಯಾಗಿದೆ.[20] ಸೀಬಿಯ ಉಲ್ಲೇಖವಿರುವುದರಿಂದ ‘ದ್ರೌಪದಿ ಸೀರೆ ಸೆಳೆದದ್ದು’ ಎಂಬ ರಚನೆ ಪುರಂದರದಾಸರ ಕಾಲಕ್ಕೆ ಹೋಗಲಾರದೆಂದೂ, ೧೮ನೆಯ ಶತಮಾನದಲ್ಲಿ ರಚಿತವಾಗಿರಬಹುದೆಂದು ವಾದಿಸಲು ಅನುವು ಮಾಡಿಕೊಟ್ಟಿದೆ. ಆದರೂ ಕಾಲವಿಚಾರದ ಚರ್ಚೆಗೆ ತೆರವು ಇದ್ದೆ ಇದೆ. ಏಕೆಂದರೆ ‘ಬ’ ಪ್ರತಿಯ ಪ್ರತಿಕಾರ ಈ ಉದಯರಾಗ ಕಾವ್ಯದ ಕಡೆಯ ಮಂಗಳಾಂತ ಸಾಲನ್ನು ತಾನೇ ಬದಲಾಯಿಸಿ, ತನ್ನ ಆರಾಧ್ಯದೈವದ ಅಂಕಿತವನ್ನು ಸೇರಿಸಿರಬಾರದೇಕೆ ಎಂಬ ಸಂಶಯಕ್ಕೆಡೆಯಿದೆ. ಕೃತಿ ರಚನೆಯು ಹಿಂದಿನದಾಗಿದ್ದು ಅಂತ್ಯದ ಸಾಲುಗಳನ್ನು ಅನಂತರದವರು ಮಾರ್ಪಡಿಸಿರುವ ಉದಾಹರಣೆಗಳುಂಟು.

ಈ ಚರ್ಚೆಯನ್ನು ಇನ್ನು ವಿಸ್ತರಿಸದೆ ಕುತೂಹಲ ಜನಕವಾದ ವಿಷಯವನ್ನು ಮನಗಾಣಬಹುದು. ಇಷ್ಟೆಲ್ಲ ಆಸಕ್ತಿ ಹುಟ್ಟಿಸುವ ಈ ಉದಯರಾಗ ವಾಸ್ತವವಾಗಿ ಪುರಂದರದಾಸರ ರಚನೆಯಾಗಿದೆ.46ಅ ಈ ವಾಸ್ತವವನ್ನು ಸಂಪಾದಕರು ಗುರುತಿಸದೆ ಹೋಗಿರುವುದರಿಂದ ಊಹಾಪೋಹಗಳಿಗೆ ಕಾರಣವಾಗಿದೆ. ಇದು ವಾರ್ಧಕ ಷಟ್ಪದಿಯಲ್ಲಿರುವ ಪದ್ಯಗಳ ಕಾವ್ಯವಾದುರಿಂದಾಗಿ, ಕೆಲವು ಹಸ್ತಪ್ರತಿಗಳಲ್ಲಿ ಕೀರ್ತನೆಗಳ ಪ್ರಭುವಾದ ಪುರಂದರರ ಅಂಕಿತವಿದ್ದೂ ಇದನ್ನು ಅವರ ಕೀರ್ತಿನರಾಶಿಯಲ್ಲಿ ಹುಡಕಿ ತೆಗೆಯುವ ತೊಂದರೆ ತೆಗೆದುಕೊಂಡಿಲ್ಲವೆಂದು ತೋರುತ್ತದೆ. ಸಹಜವಾದ ಆಸಕ್ತಿಯಿಂದ ಹಾಗೂ ಅನ್ವೇಷಕ ಬುದ್ಧಿಯಿಂದ ನಾವು ಪುರಂದರದಾಸರ ಕೀರ್ತನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಒಮ್ಮೆಲೇ ‘ದ್ರೌಪದೀ ಮಾನಸಂರಕ್ಷಣ’ ಎಂಬೊಂದು ಉದಯರಾಗ ಕಣ್ಣಿಗೆ ಬಿತ್ತು. ಭೂಪಾಲಿ ರಾಗ ಹಾಗೂ ಝಂಪೆತಾಳದಲ್ಲಿರವು ಆ ಉದಯರಾಗ ಆರಂಭವಾಗುವುದು ಹೀಗೆ:[21]

            ವಾಸುದೇವಾಯ ನಮೋ ವಾಸುಕೀ ಶಯನಾಯ
ವಾಸವಾದ್ಯಖಿಳಸುರ ನಮಿತ ಪಾದಾಂಭೋಜ
ಭೂಸುರ ಪ್ರಿಯ ಭಜಕ ಪೋಷಕನೆ ರಕ್ಷಿಪುದು ಕೇಶವಾನಾಥಬಂಧು ||||

ಈ ಪಲ್ಲವಿ ವಾಸ್ತವವಾಗಿ ಪರಮದೇವ ಮತ್ತು ಇತರರು ಸಂಗ್ರಹಿಸಿರುವ ಉದಯರಾಗದ ಮೊದಲಿಗೇ ಇದೆಯಾದರೂ ಅದು ಸಂಪ್ರತಿಕಾರರ ಕೈವಾಡದಲ್ಲಿ ಮರೆಯಾಗಿ ಕುಳಿತಿದೆ, ಅಷ್ಟೆ. ಪುರಂದರದಾಸರು ಸುಮಾರು ಹದಿನಾರು ಉದಯರಾಗ ಕೀರ್ತನೆ (ಹಾಡು)ಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದಾದ ‘ದ್ರೌಪದಿ ಮಾನ ಸಂರಕ್ಷಣ’ ಎಂಬುದು ವಾರ್ಧಕ ಷಟ್ಪದಿಯಲ್ಲಿದೆ. ಅದರಲ್ಲಿ ೧೫ ಪದ್ಯಗಳಿವೆ. ಪರಮದೇವನ ಸಂಗ್ರಹದಲ್ಲಿ ೩೨ ಪದ್ಯಗಳಿವೆ. ಅಂದರೆ ೧೭ ಪದ್ಯಗಳ ವ್ಯತ್ಯಾಸವಿದೆ. ಇಲ್ಲಿ ಆಗಿರುವ ಕುತೂಹಲಕಾರಿ ವಾಸ್ತವಾಂಶವಿಷ್ಟು : ಪುರಂದರು ಬರೆದಿರುವ ಮೂಲ ೧೫ ಪದ್ಯಗಳಿಗೆ ಇನ್ನು ೧೭ ಪದ್ಯಗಳನ್ನು ಪರಮದೇವನ ತುರಂಗಭಾರತದಿಂದ ಹೊಸದಾಗಿ ಸೇರಿಸಲಾಗಿದೆ. ಸಂದರ್ಭದಲ್ಲಿರುವ ಸಾದೃಶ್ಯ ಹಾಗೂ ಛಂದಸ್ಸಿನಲ್ಲಿರುವ ಸಮಾನತೆಯಿಂದಾಗಿ ಈ ನೂತನ ಸೇರ್ಪಡೆ ಸುಲಭಸಾಧ್ಯವಾಗಿದೆ.[22]

ಇಲ್ಲಿ ಇನ್ನೊಂದು ಸ್ವಾರಸ್ಯವನ್ನು ನಾವು ಗಮನಿಸಬಹುದು. ದೊರೆತಿರುವ ೪ ಹಸ್ತಪ್ರತಿಗಳಲ್ಲಿ ಮೂರು ಪ್ರತಿಗಳು ಸಮನವಾಗಿದ್ದು ಅವುಗಳಲ್ಲಿ ಈ ಹೊಸದಾಗಿ ಸೇರಿಸಲಾಗಿರುವ ಪರಮದೇವನ ೧೭ ಪದ್ಯಗಳಿಲ್ಲ. ಬಳ್ಳಾರಿ, ಶಿವಮೊಗ್ಗ, ಮೈಸೂರು – ಈ ಮೂರು ಒಂದು ಬಗೆಯ ಹಸ್ತಪ್ರತಿಗಳಾಗಿವೆ. ಇವುಗಳಲ್ಲೆಲ್ಲಾ ಮೂಲಕ ೧೫ ವಾರ್ಧಕ ಷಟ್ಪದಿ ಪದ್ಯಗಳು ಮಾತ್ರ ಇವೆ. ಉಳ್ಳೂರು ಹಸ್ತಪ್ರತಿಯಲ್ಲಿ ಮಾತ್ರ ಪರಮದೇವ ಕವಿಯ ೧೭ ಹೆಚ್ಚಿನ ಹೊಸ ಪದ್ಯಗಳು ಕೂಡಿಕೊಂಡು ೩೨ ಪದ್ಯಗಳಿವೆ. ಉಳ್ಳೂರು ಪ್ರತಿಯಲ್ಲಿ ಪರಮದೇವ ಕವಿಯ ಪದ್ಯಗಳು ಸೇರಿರುವುದನ್ನು ಸಕಾರಣವಾಗಿ ಅರ್ಥೈಸಿಕೊಳ್ಳಬಹುದು. ಉಳ್ಳೂರು ಪ್ರತಿ ಪರಮದೇವ ಕವಿಯ ಪರಿಸರದ ಪ್ರತಿ. ಕವಿಯ ಭಕ್ತರು ಇರುವ ಸ್ಥಳ ಹಾಗೂ ತುರಂಗಭಾರತ ಮನೆಮನೆಗೆ ತಲುಪಿದ ಪ್ರದೇಶಕ್ಕೆ ಸೇರಿದ ಪ್ರತಿ. ಅದರಿಂದ ಸಹಜವಾಗಿಯೇ, ಪರಮದೇವನ  ತುರಂಗಭಾರತದ ನಿಕಟ ಪರಿಚಯವಿರುವ ಪ್ರತಿಕಾರರು, ವಸ್ತು ಸಾದೃಶ್ಯದಿಂದ ಪ್ರೇರಿತರಾಗಿ, ಮೂಲಕ್ಕೆ ಕಸಿಮಾಡಿ ಈ ಮಿಶ್ರತಳಿಯನ್ನು ಸಿದ್ಧಪಡಿಸಿದ್ದಾರೆಂದು ತೋರುತ್ತದೆ. ಈ ಉಳ್ಳೂರು ಪ್ರತಿ ಪರಮದೇವನ ಸಂಗ್ರಹವೆಂಬ ಸೂಚನೆಯೂ ಇದೆ.[23] ಹಾಗಾದರೆ ಕವಿಯೇ ಹೀಗೆ ಸೇರಿಸಿರಬಹುದೆ ಎಂಬ ಸಂದೇಹ ಬರುತ್ತದೆ. ವಸ್ತುಸ್ಥಿತಿ ತಿಳಿಯದೆ ತೀರ್ಮಾನ ತೆಗೆದುಕೊಳ್ಳುವುದು ಅಪಾಯಕಾರಿ.

ಈಗ ಪ್ರಕಟವಾಗಿರುವ ಉದಯರಾಗ ಕಾವ್ಯದ ನಾಲ್ಕು ಹಸ್ತಪ್ರತಿಗಳಲ್ಲಿ ಶಿವಮೊಗ್ಗದ ಪ್ರತಿ ಮೂಲ ಪುರಂದರರು ರಚನೆಗೆ ಅನುಗುಣವಾಗಿದೆ. ಬಳ್ಳಾರಿ ಮತ್ತು ಮೈಸೂರು ಪ್ರತಿಗಳಲ್ಲಿ ಆಯಾ ಪ್ರತಿಕಾರರು ಅವರವರ ಅಚ್ಚುಮೆಚ್ಚಿನ ದೈವದ ಅಂಕಿತವನ್ನಿಟ್ಟು ತುಸು ಅಂಕಿತ ಬದಲಾವಣೆ ಮಾಡಿದ್ದಾರೆ. ಉಳ್ಳೂರಿನ ಪ್ರತಿಕಾರ ಇನ್ನೂ ಹಲವು ಹೆಜ್ಜೆ ಮುಂದೆ ಹೋಗಿ ಕಾವ್ಯಶರೀರದಲ್ಲಿಯೇ ೧೭ ಪದ್ಯಗಳನ್ನು ಬೆಸುಗೆ ಹಾಕಿದ್ದಾನೆ. ಮುದ್ರಣವಾಗಿರುವ ೩೨ ಪದ್ಯಗಳಲ್ಲಿ ಪುರಂದರ ಹಾಗೂ ‘ಪರಮದೇವನ ಕೀರ್ತನೆಗಳು’ ಪುಸ್ತಕದಲ್ಲಿ ಇರುವ ಕ್ರಮದಲ್ಲಿ ಪದ್ಯಗಳನ್ನು ಪೃಥಕ್ಕರಿಸಿ ತೋರಿಸಲಾಗುವುದು. ಪ್ರಾರಂಭದ ಪಲ್ಲವಿಯಷ್ಟೂ ಪುರಂದರರ ಪೂರ್ತಿ ರಚನೆಯಾಗಿದೆ. ಅದರ ಅನಂತರ ಬರುವ ಪದ್ಯಗಳಲ್ಲಿ ೧ ರಿಂದ ೮ ರ ವರೆಗಿನ ಪದ್ಯಗಳು ಪುರಂದರದಾಸರ ರಚನೆಯಾಗಿದೆ. ಅದರ ಅನಂತರದ ೯ ನೆಯ ಪದ್ಯದಿಂದ ೨೫ನೆಯ ಪದ್ಯಪೂರ್ತಿ ಪರಮದೇವನ ರಚನೆಯಾಗಿದೆ. ಮತ್ತೆ ೨೬ ನೆಯ ಪದ್ಯದಿಂದ ೩೨ ನೆಯ ಪದ್ಯದವರೆಗೆ ಪುರಂದರದಾಸರ ಮೂಲ ರಚನೆಯಾಗಿದೆ. ಅಂದರೆ ಪದ್ಯಸಂಖ್ಯೆ ೧ ರಿಂದ ೮ (-೮). ೨೬ ರಿಂದ ೩೨ (-೭) – ಈ ೧೫ (೮-೭) ಪದ್ಯಗಳು ಮೂಲಕಾವ್ಯಕ್ಕೆ ಸೇರಿದ್ದಾಗಿವೆ.

ಪುರಂದರರ ಉದಯರಾಗ ಹಾಡಿನ ಹೆಸರು ‘ದ್ರೌಪದೀ ಮಾನಸಂರಕ್ಷಣ’ ಎಂಬುದು ಅರ್ಥಪೂರ್ಣವಾಗಿದೆ, ಧ್ವನಿಪೂರ್ಣವಾಗಿದೆ. ದ್ರೌಪದಿ ಸೀರೆ ಸೆಳೆದದ್ದು ಅಥವಾ ವಸ್ತ್ರಾಪಹರಣ ಎಂಬುದು ತೀರ ವಾಚ್ಯವಾಯಿತು. ಎರಡನೆಯದಾಗಿ ಈಗ ದೊರೆತಿರುವ ನಾಲ್ಕು ಹಸ್ತಪ್ರತಿಗಳಿಂದ ಆಗಿರುವ ಇನ್ನೊಂದು ಉಪಕಾರವೆಂದರೆ ಮೂಲ ಪುರಂದರರ ರಚನೆಯನ್ನು ಪರಿಷ್ಕರಿಸಲು ಬೇಕಾಗುವ ಕೆಲವಾರು ಉತ್ತಮ ಶುದ್ಧ ಪಾಠಾಂತರಗಳು ದೊರೆಯುತ್ತವೆ.[24] ಇನ್ನೂ ಸ್ವಾರಸ್ಯವೆಂದರೆ ಪುರಂದರದಾಸರ ಉದಯರಾಗಕ್ಕೇ ಅಲ್ಲದೆ ವಾಸ್ತವವಾಗಿ ಪರಮದೇವನ ೧೭ ಪದ್ಯಗಳಿಗೇ ಹತ್ತಾರು ಪಾಠಾಂತರಗಳು ಸಿಗುತ್ತವೆ.[25]

ದ್ರೌಪದಿ ವಸ್ತ್ರಾಪಹರಣ ಪ್ರಸಂಗ ಕುಮಾರವ್ಯಾಸಭಾರತದಲ್ಲಿ ಸಭಾಪರ್ವದ ೧೪ನೆಯ ಸಂಧಿಯಲ್ಲಿ, ಪದ್ಯ ೧೦೧ ರಿಂದ ೧೩೨ ರ ವರೆಗೆ ಬರುತ್ತದೆ.[26] ಪರಮದೇವನ ತುರಂಗಭಾರತದಲ್ಲಿಯೂ ಸಭಾಪರ್ವದ ೮ನೆಯ ಸಂಧಿಯಲ್ಲಿ ಪದ್ಯ ೨೧ ರಿಂದ ೪೩ ರ ವರೆಗೂ ಮತ್ತು ಸಂಧಿ ೯ ರಲ್ಲಿ ೫ನೆಯ ಪದ್ಯದವರೆಗೂ ನಿರೂಪಿತವಾಗಿದೆ.[27] ಅಪರೂಪಕ್ಕೊಮ್ಮೆ ಪರಮದೇವ ಕುಮಾರವ್ಯಾಸನಿಗಿಂತ ಭಿನ್ನವಾಗಿ ಮತ್ತು ತನ್ನ ಸ್ವಂತ ಕಲ್ಪನೆಗನುಗುಣವಾಗಿ ವಿವರಣೆ ಕೊಡುವುದುಂಟು.[28] ಅದರಂತೆ ಈ ಭಾಗವನ್ನು ಕುಮಾರವ್ಯಾಸನಿಗಿಂತ ಬೇರೆಯಾಗಿ ಹಾಗೂ ಅಲ್ಲಿನ ಭಾವವನ್ನು ಜೀರ್ಣಿಸಿಕೊಂಡು ಸ್ವತಂತ್ರ ಶೈಲಿಯಲ್ಲಿ ಪರಮದೇವ ನಿರೂಪಿಸಿದ್ದಾನೆ. ಸೀರೆ ಸೆಳೆದ ಉದಯರಾಗ ಇರುವುದು ವಾರ್ಧಕ ಷಟ್ಪದಿಯಲ್ಲೇ. ಪುರಂದರದಾಸರ ಕೀರ್ತನ ಸಾಹಿತ್ಯವನ್ನು ವ್ಯಾಸಂಗದಿಂದ ಹೃದಯಸ್ಥ ಮಾಡಿಕೊಂಡಿದ್ದ ಪರಮದೇವ ಕವಿ ಪುರಂದರರ ಈ ದ್ರೌಪದೀ ಮಾನ ಸಂರಕ್ಷಣ ಉದಯರಾಗವನ್ನು ಮೆಚ್ಚಿಕೊಂಡು ಪ್ರಭಾವಿತನಾಗಿದ್ದಾನೆ. ಈ ಹೇಳಿಕೆಯನ್ನು ಇಷ್ಟು ನಿಸ್ಸಂದಿಗ್ಧವಾಗಿ ಮಂಡಿಸಲು ಅಂತರ ಬಾಹ್ಯ ಸಾಕ್ಷ್ಯಾಧಾರಗಳಿವೆ.

ಪ್ರಬಲವಾದ ಒಂದು ಆಧಾರವನ್ನು ಸವಿವರವಾಗಿ ಪ್ರಸ್ತಾಪಿಸಬಯಸುತ್ತೇವೆ. ಪರಮದೇವ ಕವಿ ಸಭಾಪರ್ವದ ಎಂಟನೆಯ ಸಂಧಿಯಲ್ಲಿ ಈ ದ್ರೌಪದಿ ವಸ್ತ್ರಾಪಹರಣ ಕಥೆಯನ್ನು ನಿರೂಪಿಸಿದ್ದಾದ ಮೇಲೆ ಅದರ ಮುಂದುವರಿದ ಉಳಿದ ಅಂತ್ಯಭಾಗವನ್ನು ಮುಂದಿನ (ಒಂಬತ್ತನೆಯ) ಸಂಧಿಯಲ್ಲಿ ಮೊದಲ ಐದು ಪದ್ಯಗಳಲ್ಲಿ ವರದಿ ನೀಡಿದ್ದಾನೆ.[29] ಅವುಗಳಲ್ಲಿ ಒಂದು ಪದ್ಯ ಪ್ರಸ್ತುತ ವಿವೇಚನೆಗೆ ಸಂಬಂಧ ಪಡುವುದರಿಂದ ಆ ಪದ್ಯವನ್ನು ಇಲ್ಲಿ ಉದಾಹರಿಸಲಾಗಿದೆ :

ದ್ರೌಪದಿಯ ಮೊರೆಯನ್ನು ಮನ್ನಿಸಿದ ಕೃಷ್ಣನ ಮಹಿಮೆಯಿಂದಾಗಿ ವಸ್ತ್ರ ಅಕ್ಷಯವಾಯಿತು. ದುಶ್ಯಾಸನ ಸೆಳೆದು ಹಾಕಿದ ಸೀರೆಗಳ ದೊಡ್ಡ ರಾಶಿಯೇ ಸಿದ್ಧವಾಯಿತು. ಅದನ್ನು ನೋಡಿ ದುರ್ಯೋಧನನು ಹೇಳಿದ ಮಾತಿನಿಂದ ಪದ್ಯ ಪ್ರಾರಂಭವಾಗುತ್ತದೆ.[30]

            ಬೆಳೆದ ಸೀರೆಯ ಕಟ್ಟಿ ಪೊರಿಸೆಂದು ನೇಮಿಸಲ್
ನಳಿನಮುಖಿ ಕೋಪಮಂ ಧರಿಸಿ ನೋಡಲ್ಕನಲ
ನಲಿ ಭುಗಿಲುಭುಗಿಲೆಂದೆನುತ ಸುಟ್ಟಿದುದು ಬೆಟ್ಟದಂತಿರ್ದ ವಸನ ರಾಶಿಗಳು
ಬೆಳಗಿನಿಂ ನೆರೆದ ಸಭೆ ತಲ್ಲಣಿಸೆ ನೃಪನೊಡಲಿ
ನೊಳಗಲಗುಡಿದಂತಾಗೆ ಮತ್ತಾ ಪೊಗೆಯಿಂದ
ಹೊಳಲ ಮುಸುಕಲು ಕರ್ಣ ಖತಿಗೊಂಡು ನೂಕಿವಳ ತೊತ್ತಿರೊಳುಕೂಡಿರೆಂದಂ ||

ಈ ಪದ್ಯದಲ್ಲಿ ಒಂದು ಪವಾಡ ನಡೆದ ಪ್ರಸ್ತಾಪ ಬಂದಿದೆ. ಕೃಷ್ಣನ ಅನುಗ್ರಹದಿಂದ ದ್ರೌಪದಿಯ ವಸ್ತ್ರ ಅಕ್ಷಯವಾದರೆ, ಇಲ್ಲಿ ದ್ರೌಪದಿಯ ಪಾತಿವ್ರತ್ಯ ಮಹಿಮೆಯಿಂದ ಕೋಪದ ಕುಡಿನೋಟಕ್ಕೆ ಬೆಟ್ಟದ ಹಾಗಿದ್ದ ಬಟ್ಟೆಯರಾಶಿ ಸುಟ್ಟು ಬೆಂದು ಕರಿಕಾಯಿತೆಂಬುದು ಗಮನಾರ್ಹವಾಗಿದೆ. ಪರಮದೇವನಿಗೆ ಮುಖ್ಯ ಮೂಲ ಆಕರವಾದ ಕುಮಾರವ್ಯಾಸಭಾರತದಲ್ಲಿ ‘ಬೆಳೆದ ಸೀರೆಯ ಕಟ್ಟಿ ಪೊರಿಸು’ ಎಂಬ ಮಾತೇನೋ ಹಾಗೇ ಬಳಕೆಯಾಗಿದೆ.[31] ಇದನ್ನು ಪರಮದೇವ ಯಥಾವತ್ತಾಗಿ ತನ್ನದಾಗಿಸಿಕೊಂಡಿದ್ದಾನೆ. ಆದರೆ ಅಲ್ಲಿಂದ ಮುಂದೆ ಬರುವ ಘಟನೆ ಹೊಸದು. ದ್ರೌಪದಿಗೆ ಕೋಪ ಬಂದು ನೋಡಿದ ಕೂಡಲೆ ಬಟ್ಟೆ ಸುಟ್ಟುಹೋದ ಪ್ರಕರಣ ಕುಮಾರವ್ಯಾಸನಲ್ಲಿ ಇಲ್ಲ. ಇದನ್ನು ಹೊಸದಾಗಿ ಅನ್ಯಮೂಲದಿಂದ ಸಂಗ್ರಹಿಸಿ ಪರಮದೇವ ಇಲ್ಲಿ ಸೇರಿಸಿದ್ದಾನೆ. ಆ ಅನ್ಯಮೂಲವನ್ನು ಬೇರೆಲ್ಲೋ ನಾವು ಹುಡುಕುವ ಶ್ರಮಪಡಬೇಕಾಗಿಲ್ಲ. ಇದುವರೆಗೆ ನಾವು ಪ್ರಸ್ತಾಪಿಸಿ ಚರ್ಚಿಸುತ್ತಿರುವ ಪುರಂದರದಾಸರ ಉದಯರಾಗದಲ್ಲಿ ಆ ವಿವರಣೆಯಿದೆ. ಶ್ರೀಕೃಷ್ಣನ ಭಕ್ತಿ ಮಹಿಮೆಗಳನ್ನು ಭಕ್ತವತ್ಸಲನಾದ ಆತ ತನ್ನನ್ನು ನಂಬಿದವರ ಆಪದ್ಭಾಂಧವನಾಗಿ ಹೇಗೆ ಕಾಪಾಡುತ್ತಾನೆಂಬುದನ್ನೂ ಎತ್ತಿಹಿಡಿಯುವ ಈ ಉದಯರಾಗದಲ್ಲಿ, ಹರಿಭಕ್ತರ ಅಸಾಧಾರಣ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಸಂಗವೊಂದನ್ನು ಸೃಷ್ಟಿಸಲಾಗಿದೆ.[32]

            ಸೆಳೆವುತಿರ್ದನು ಖಳನು ಬೆಳೆಯುತಿರ್ದುವು ಸೀರೆ
ಬಿಳಿಯ ಪೊಂಬಟ್ಟೆ ನಾನಾ ವಿಚಿತ್ರದ ಬಣ್ಣ
ಹೊಳಲು ತುಂಬುವ ತೆರದೊಳೆದೆಳೆದು ಪಾಪಾತ್ಮ ಬಳಲಿ ಇಳಿಯಲಿ ಬಿದ್ದನು
ಕಳೆಯುಕುಂದಿತು ಮೋರೆ ಶಕುನಿ ದುರ್ಯೋಧನರ
ಬಳಿಯ ನಿಂತಿರ್ದ ಭಟರನು ನೇಮಿಸುತ
ಬೊಕ್ಕಸಕೆನಲು ನಳಿನಮುಖಿ ತಿಳಿದಳಲ್ದಳು
ತಿಳುಹದೇ ವಸ್ತ್ರಗಳ ಕಳುಹು || ೧೦
ಸಿಟ್ಟಿನಲ್ಲಿ ಸುವ್ರತೆಯು ಕಣ್ದೆರೆದು ನೋಡಿದಳು
ಬೆಟ್ಟದಂತೊಟ್ಟಿರ್ದ ವಸ್ತ್ರ ರಾಶಿಗಳೆಲ್ಲ ಸುಟ್ಟಗ್ನಿ ಹೊರಸೂಸೆ ರಾಜಸಭೆ ಮನೆ ಕೆಲವು
ಪಟ್ಟಣಾಹುತಿಗೊಂಡವೈ
ಕೊಟ್ಟಳೈ ಶಾಪವನು ಕಮಲಮುಕಿ ಕುರುಪತಿಗೆ
ಕಟ್ಟಾಳು ಭೀಮಸೇನನ ರಣದಿ ಗದೆ ಬಂದು
ಕುಟ್ಟಿ ಬಿಸುಡಲಿ ನಿನ್ನ ತೊಡೆಗಳೆರಡನು ಎಂದು ಇಟ್ಟ ನುಡಿ ತಪ್ಪಲುಂಟೆ || ೧೧

ಪುರಂದರದಾಸರ ಉದಯರಾಗದ ೧೦ ಮತ್ತು ೧೧ ನೆಯ ಪದ್ಯಗಳಲ್ಲಿ ಹೇಳಿರುವ ಬೆಳೆಯುತಿ‌ರ್ದುವು ಸೀರೆ, ಕಳುಹು ಬೊಕ್ಕಸಕೆನಲು ನಳಿನಮುಖಿ, ಸಿಟ್ಟಿನಲಿ ಕಣ್ದೆರೆದು ನೋಡಿದಳು, ಬೆಟ್ಟದಂತೊಟ್ಟಿರ್ದ ವಸ್ತ್ರರಾಶಿಗಳೆಲ್ಲ ಸುಟ್ಟಗ್ನಿ ಹೊರಸೂಸೆ ಎಂಬ ಅಷ್ಟೂ ಅಭಿಪ್ರಾಯವನ್ನು ಪರಮದೇವ ಕವಿ ಸಭಾಪರ್ವ ೯-೪ ನೆಯ ಪದ್ಯದ ಪೂರ್ವಾಧರದ ಮೂರು ಸಾಲುಗಳಲ್ಲಿ ಅಳವಡಿಸಿಕೊಂಡಿದ್ದಾನೆ. ಅಲ್ಲಿಂದ ಮತ್ತೆ ಕುಮಾರವ್ಯಾಸನ ಕಾವ್ಯದ ಪ್ರಕಾರ ಕಾವ್ಯ ಬೆಳೆಸಿದ್ದಾನೆ. ಹೀಗೆ ಪುರಂದರದಾಸರ ಹಾಡಿನಿಂದ ಪ್ರಭಾವಿತನಾಗಿ ಅಲ್ಲಿನ ವಿಚಾರವನ್ನೂ ಪದಪುಂಜಗಳನ್ನೂ ಪರಮದೇವ ತನ್ನ ಕಾವ್ಯದಲ್ಲಿ ಗರ್ಭೀಕರಿಸಿಕೊಂಡಿರುವುದನ್ನು ಇದೇ ಮೊದಲ ಬಾರಿಗೆ ನಾವು ತೌಲನಿಕ ಅಧ್ಯಯನದಿಂದ ಗುರುತಿಸಿದ್ದೇನೆ.[33]

ದ್ರೌಪದಿ ಸಿಟ್ಟಿನಿಂದ ನಿಟ್ಟಿಸಿ ನೋಡಿದೊಡನೆ ಬೆಟ್ಟದಷ್ಟಿದ್ದ ಬಟ್ಟೆಯ ರಾಶಿಯೆಲ್ಲ ಸುಟ್ಟು ಹೋಯಿತೆಂಬ ಈ ಕಲ್ಪನೆ ಪುರಂದರದಾಸರ ಸ್ವಂತ ಕಲ್ಪನೆಯಾಗಿ ಅರಳಿತೊ ಅಥವಾ ಅವರು ಕೂಡ ಬೇರೊಂದು ಮೂಲದಿಂದೇನಾದರೂ ಸಂಗ್ರಹಿಸಿದರೊ ಎಂಬುದು ವಿಚಾರಣೀಯವಾಗಿದೆ. ಪುರಂದರದಾಸರು ಬಹುಶಃ ತಮ್ಮ ಕಾಲದ, ಅಂದರೆ ೧೫ ನೆಯ ಶತಮಾನದ ಮಧ್ಯಭಾಗ, ಜನಪದರಲ್ಲಿ ಪ್ರಚಲಿತವಾಗಿದ್ದ ಕಥೆಗಳಿಂದ ಸಂಗ್ರಹಿಸಿರಲೂಬಹುದು. ಈ ಅಭಿಪ್ರಾಯದ ಸಮರ್ಥನೆಗೆ ಇನ್ನೊಂದು ಸಂಗತಿ ಸೇರಿಸಬಹುದು. ಈ ಮಹಾಪ್ರಬಂಧಕಾರರ ಅಜ್ಜಿಯಾಗಿದ್ದ ದಿವಂಗತ ಶ್ರೀಮತಿ ದೊಡ್ಡೆಲ್ಲಮ್ಮ ನವರು ಅನೇಕ ಜನಪದ ಕಥೆಗಳನ್ನು ಹೇಳುತ್ತಿದ್ದರು.[34] ಅವುಗಳಲ್ಲಿ ಒಂದು ಈ ದ್ರೌಪದಿ ವಸ್ತ್ರಾಪಹರಣಕ್ಕೆ ಸಂಬಂಧಿಸಿದ್ದು ಈಗಲೂ ಚೆನ್ನಾಗಿ ನೆನಪಿನಲ್ಲಿದೆ. ಅವರ ನಿರೂಪಣೆಯಲ್ಲಿ ದುಶ್ಯಾಸನನು ಸೆಳೆದ ಸೀರೆಗಳೆಲ್ಲ ಬಣ್ಣ ಬಣ್ಣದ ಚಿಟ್ಟೆಗಳಾಗಿ ಹಾರಿಹೋದವು ಎಂಬ ವಿವರಣೆಯಿತ್ತು.[35] ಈ ರೀತಿ ಇನ್ನೆಷ್ಟು ಆವೃತ್ತಿಗಳು ಸಿಗಬಹುದೊ; ಅದರಿಂದ ನಮ್ಮ ಅಭಿಪ್ರಾಯದ ಪ್ರಕಾರ ಪುರಂದರದಾಸರು ಹೊಸದಾಗಿ ಉದಯರಾಗದಲ್ಲಿ ಹೇಳಿರುವ ಕಲ್ಪನೆಯ ಬೇರು ಜನಪದರ ಕಥೆಗಳಲ್ಲಿ ಇದ್ದಿರಬಹುದು. ಇನ್ನು ಕುಮಾರವ್ಯಾಸ ಭಾರತದಲ್ಲಿನ ದ್ರೌಪದಿ ವಸ್ತ್ರಪಹರಣ ಪ್ರಸಂಗದಲ್ಲಿ ಬರುವ ವರ್ಣನೆಗೂ ಪುರಂದರದಾಸರ ಈ ಉದಯರಾಗ ಹಾಗೂ ಇನ್ನಿತರ ಕೆಲವು ಕೀರ್ತನೆಗಳಲ್ಲಿ ಬರುವ ಹರಿಮಹಿಮೆಯ ಉಲ್ಲೇಖಕ್ಕೂ ಇರುವ ಸಾದೃಶ್ಯಗಳನ್ನು ಕುರಿತು ಸಾಕಷ್ಟು ಸಂಶೋಧನೆಗೆ ಸಾಮಗ್ರಿಯಾಗಿದೆ.

[1] ಪೂರ್ವೋಕ್ತ ಪುಟ ೪ (ತು.ಭಾ. ೨)

27ಅ ಅದೇ ಪುಟ ೫, ಪದ್ಯ ೩ (ತು.ಭಾ. ೨)

[2] ಪರಮದೇವನ ಕೀರ್ತನೆಗಳು ; (ಸಂ) ಕೂಡಲಿ ಜಗನ್ನಾಥಶಾಸ್ತ್ರಿ, ಹೊಳೇಹೊನ್ನೂರು, ೧೯೮೬, ಪುಟ ೨೪, ಕೀರ್ತನೆ ಸಂಖ್ಯೆ ೪೫.

[3] ಅದೇ, ಪುಟ ೩೧, ಕೀರ್ತನೆ ಸಂಖ್ಯೆ ೫೬

[4] ಅದೇ, ಪುಟ ೭೧ ಕೀರ್ತನೆ ಸಂಖ್ಯೆ ೪೦

[5] ಪೂರ್ವೋಕ್ತ, ಪುಟ ೮ (ತು.ಭಾ. ೨)

[6] ಮನುಷ್ಯನ ಪೂರ್ಣ ಆಯಸ್ಸಿನ ಪ್ರಮಾಣದ ೧೦೦ ವರ್ಷ ಪೂರ್ತಿ ಬದುಕಿದ, ಅದಕ್ಕೆ ಸಮೀಪತರವಾಗಿ ಬದುಕಿದ ಪ್ರಾಚೀನ ಹಾಗೂ ಆಧುನಿಕ ಲೇಖಕರಿದ್ದಾರೆ. ಪ್ರಾಚೀನರಲ್ಲಿ ಮಹಾಪುರಾಣದ ಜಿನಸೇನರನ್ನೂ, ಆಧುನಿಕರಲ್ಲಿ ವೈ. ಚಂದ್ರಶೇಖರಶಾಸ್ತ್ರಿಯವರನ್ನೂ ಹೆಸರಿಸಬಹುದಾಗಿದೆ.

[7] ಚಂದ್ರಸಾಗರವರ್ಣಿ (ಬ್ರಹ್ಮಣಾಂಕ) ಕೂಡ ತನ್ನ ಕಾವ್ಯಗಳಲ್ಲದೆ ಅನ್ಯ ಕವಿಕೃತಿಗಳ ಹಸ್ತ ಪ್ರತಿಯನ್ನು ಬರೆದುಕೊಟ್ಟಿರುವುದುಂಟು. ಇದು ಅವರ ಅಮತ್ಸರತೆಯನ್ನು ತೋರಿಸುತ್ತದೆ.

[8] ಪರಮದೇವಕವಿಯ ವಂಶಸ್ಥರಾದ ಉಳ್ಳೂರು ಪರಮೇಶ್ವರಯ್ಯನವರಿಂದ ದೊರೆತ ಓಲೆಕಟ್ಟಿನಿಂದ ಸಂಗ್ರಹಿಸಿದ್ದನ್ನು ಪೂರ್ವೋಕ್ತ ಅ.ಟಿ. ೭ರಲ್ಲಿ ಹೇಳಿರುವ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. (ತು.ಭಾ.೨)

[9] ಅದೇ, ಪುಟ ೯೩-೧೦೨ (ಪ. ಕೀರ್ತನೆಗಳು)

[10] ಅದೇ, ಪುಟ ೯೩ (ಪ. ಕೀರ್ತನೆಗಳು)

[11] ೧) ಅದೇ, ಪೀಠಿಕೆಯಲ್ಲಿ (ಪುಟಸಂಖ್ಯೆ ಕೊಟ್ಟಿಲ್ಲ) (ಪ. ಕೀರ್ತನೆಗಳು)

೨) ತುರಂಗಭಾರತ, ೨ ವಿಷಯಾನುಕ್ರಮಣಿಕೆ, ಪುಟ ೧೬

[12] ಅದೇ, ಪುಟ ೯೩ (ಪ. ಕೀರ್ತನೆ)

[13] ಅದೇ, ಪುಟ ೧೦೨ (ಪ. ಕೀರ್ತನೆ)

[14] ತಂದೆ ಪುರಂದರ ವಿಠಲ, ಪತಿ-, ಗುರು-, ಶ್ರೀ-, ಸಿರಿ-, ದೊರೆ- ಎಂಬಿತ್ಯಾದಿಯಾಗಿ ಪುರಂದರರ ಕೀರ್ತನೆಗಳು ಮುಗಿಯುತ್ತವೆ. ಅದು ಆಯಾ ರಚನೆಗೆ ಛಂದಸ್ಸಿಗೆ ಭಾವಕ್ಕೆ ಅನುಗುಣವಾಗಿರುತ್ತದೆ.

[15] ಶಿವಮೊಗ್ಗದ ಪ್ರತಿ ಗಮನಾರ್ಹವಾಗಿದೆಯೆಂಬುದು ಮುಂದಿನ ವಿವರಣೆಯಿಂದ ಶ್ರುತಪಡುತ್ತದೆ.

[16] “ವಿಜಯಕುಮಾರಿ ಚರಿತೆ” ಎಂಬ ಸಾಂಗ್ಯ ಕಾವ್ಯವನ್ನು ರಚಿಸಿರುವ ಶ್ರುತಕೀರ್ತಿ ಕನಕಗಿರಿಯವನು, ಈ ಮಲೆಯೂರಿನಲ್ಲಿರುವ ಬೆಟ್ಟಕ್ಕೆ ಈಗಲೂ ಕನಕಗಿರಿಯೆಂಬ ಹೆಸರಿದೆ, ಹಿಂದಿನ ಜೈನ ಪುರಾಣಗಲ್ಲೂ ಇದರ ಉಲ್ಲೇಖವಿದೆ. ಜೈನರ ಸುಪ್ರಸಿದ್ಧ ಆಚಾರ್ಯ ಶ್ರೇಷ್ಠರಾದ ಪೂಜ್ಯ ಪಾದಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರೆಂಬುದಕ್ಕೆ ಆಧಾರಗಳಿವೆ”: ಕಮಲಾ ಹಂಪನಾ, ಈ                ಕಾಲದ ಇತರ ಸಾಂಗತ್ಯ ಕವಿಗಳು – ಲೇಖನ; ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’, ಸಂಪುಟ ೪, ಭಾಗ ೨, ಬೆಂಗಳೂರು ವಿಶ್ವವಿದ್ಯಾಲಯ ೧೯೭೮, ಪುಟ ೮೧೮

[17] ಕರ್ನಾಟಕದ ಪರಂಪರೆ, ಸಂಪುಟ ೨, ೧೯೭೦, ಪುಟ ೨೬-೩೦

[18] ಪುರಂದರ ಸಾಹಿತ್ಯದರ್ಶನ, ಸಂಪುಟ ೧, ಕರ್ನಾಟಕ ಸರಕಾರ ೧೯೮೫, ಪುಟ ೨೩೩

[19] ಅದೇ, ಪುಟ ೨೩೫, ಈ ಉದಯರಾಗವು ಕನಕದಾಸರೆಂಬ ಅಭಿಪ್ರಾಯವಿದೆ.

[20] ತುಮಕೂರು ಜಿಲ್ಲಾ ದರ್ಶನ, (ಸಂ) ಸಿ.ಎನ್.ಭಾಸ್ಕರಪ್ಪ, ೧೯೮೧, ಪುಟ ೧೭೫

46ಅ ಪೂರ್ವೋಕ್ತ ಅ.ಟಿ. ೪೪, ಸಂಪುಟ ೩, ಪುಟ ೩೫೫-೩೫೮

[21] ಅದೇ – ಪುಟ ೩೫೫

[22] ಪೂರ್ವೋಕ್ತ, ಪುಟ ೯೬ ರಿಂದ ೧೦೦ (ಪ. ಕೀರ್ತನೆಗಳು)

[23] ದಾಸರ ಕೀರ್ತನೆಗಳಲ್ಲೂ, ಸರ್ವಜ್ಞನ ವಚನಗಳಲ್ಲೂ ಇಂಥ ಸೇರ್ಪಡೆಗಳು ಕಂಡುಬಂದಿವೆ. ಕುಮಾರವ್ಯಾಸ ಭಾರತ, ಮೂಲ ವ್ಯಾಸಭಾರತಗಳಲ್ಲೇ ಪ್ರಕ್ಷಿಪ್ತಗಳಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.

[24] ಇದಕ್ಕೆ ವಿಸ್ತಾರವಾದ ಲೇಖನವನ್ನೇ ಬರೆಯಬೇಕಾಗಬಹುದು. ಇದು ಗ್ರಂಥ ಸಂಪಾದನಾ ಶಾಸ್ತ್ರಜ್ಞರಿಗೆ ಒಳ್ಳೆಯ ವಿಷಯವಾಗಿದೆ. ಒಂದು ಉದಾಹರಣೆಯನ್ನು ಇಲ್ಲಿ ಕೊಡಬಹುದು : ಪುರದಂದರದಾಸರ ಉದಯರಾಗದ ಮೂರನೆಯ ಪದ್ಯದ ಪ್ರಾರಂಭದ ಪದ ‘ಪಾವನಕೆ’ ಎಂದಿದೆ                (ಪೂರ್ವೋಕ್ತ, ಪುಟ ೩೫೫). ಆದರೆ ಪರಮದೇವನ ಸಂಗ್ರಹದಲ್ಲಿ ‘ಪಾವಕನ’ ಎಂದಿದೆ (ಪೂರ್ವೋಕ್ತ, ಪುಟ ೯೪) ಪಾವಕನ ಎಂಬುದೇ ಸೂಕ್ತ ಪಾಠವಾಗಿದೆ.

[25] ಇಲ್ಲಿಯೂ ಅಷ್ಟೆ, ಪ್ರತ್ಯೇಕ ಲೇಖನಕ್ಕೆ ಸಾಮಗ್ರಿಯಿದೆ. ಒಂದು ನಿದರ್ಶನ : ತುರಂಗಭಾರತದ ಈಗಿನ ಮುದ್ರಿತ ಪ್ರತಿಯಲ್ಲಿನ ಪುಟ ೨೦೧ ರಲ್ಲಿ ೩೦ ನೆಯ ಪದ್ಯದ ಎರಡನೆಯ ಪಂಕ್ತಿ ಹೀಗಿದೆ – ‘ಮಿರುಪುವ         ದಂತ ಪಂಕ್ತಿಗಳ ಪೊಳೆವಲ್ಲ ನಾಸಿಕದಿ ಶೋಭಿಸುವನೆ” (ಪೂರ್ವೋಕ್ತ, ಪುಟ ೯೬) ಎಂದಿದೆ. ಇದೇ ಸರಿಯಾದ ಪಾಠವನ್ನೊಳಗೊಂಡಿದೆ. ಏಕೆಂದರೆ ‘ದಂತಪಂಕ್ತಿಗಳ ಪೊಳೆವಲ್ಲ’ ಎಂಬುದರಲ್ಲಿ ಪುನರುಕ್ತಿ ದೋಷವಿದೆ. ‘ಸಂಪಿಗೆಯ ನಾಸಿಕದಿ’ಎಂಬುದು ಲೋಕರೂಢಿಯ ಉಪಮೆಯ ಮಾತಾಗಿ ಸಮರ್ಪಕವಾಗಿದೆ.

[26] ಕುಮಾರವ್ಯಾಸ, ಕರ್ಣಾಟ ಭಾರತ ಕಥಾಮಂಜರಿ, ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ, (ಸಂ) ಕುವೆಂಪು ಮತ್ತು ಮಾಸ್ತಿ, ೧೯೫೮, ಪುಟ ೧೪೨ ರಿಂದ ೧೪೪

[27] ಪೂರ್ವೋಕ್ತ, ಪುಟ ೨೦೦-೨೦೨ (ತು.ಭಾ. ೨)

[28] ಎಲ್ಲೆಲ್ಲಿ ಕುಮಾರವ್ಯಾಸನನ್ನು ಅನುಸರಿಸುತ್ತಾನೆ, ಎಲ್ಲೆಲ್ಲಿ ಭಿನ್ನವಾಗಿದ್ದಾನೆ ಎಂಬುದನ್ನು ಮುಂದೆ ನಾಲ್ಕನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ವಿವರಿಸಲಾಗುವುದು.

[29] ಪೂವೋಕ್ತ, ಪುಟ ೨೦೫ (ತು.ಭಾ. ೨)

[30] ಅದೇ, ಪುಟ ೨೦೫ (ತು.ಭಾ. ೨)

[31] ಪೂವೋಕ್ತ, ಕುಮಾರವ್ಯಾಸ ಭಾರತ ಸಭಾಪರ್ವ ೧೫-೮, ಪುಟ ೧೪೫; ೮ನೆಯ ಪದ್ಯದ ಕಡೆಯ       ಸಾಲು

[32] ಪೂವೋಕ್ತ, ಅ.ಟಿ. ೪೪, ಸಂಪುಟ, ಪುಟ ೩೫೭

[33] ಇದುವರೆಗೆ ಯಾರೂ ಈ ಸಂಗತಿಯನ್ನು ಗಮನಿಸದಿರುವುದು ಹಾಗಿರಲಿ, ತುರಂಗ ಭಾರತ ಹಾಗೂ ಪರಮದೇವ ಕೀರ್ತನೆಗಳು ಪುಸ್ತಕಗಳ ಸಂಪಾದಕರೂ ನೋಡಿಲ್ಲವೆಂಬುದು ಪ್ರಮುಖವಾಗುತ್ತದೆ.

[34] ಅವರು ಹೇಳಿದ ಒಂದು ಜನಪದ ಕಥೆಯನ್ನು ಪ್ರಕಟಿಸಿದ್ದೇನೆ : ಪ್ರೊ. ಕಮಲಾಹಂಪನಾ ‘ಚಂದನಾ’ (ಕಥಾ ಸಂಕಲನ) ಪುಸ್ತಕದಲ್ಲಿರುವ ತಾಳೆರಾಜನ ಕತೆ, ೧೯೮೨, ಪುಟ ೧೭-೨೭

[35] ಇದಕ್ಕೆ ಸಂವಾದಿಯಾದ ನಿರೂಪಣೆಯನ್ನು ಬೇರೆಯವರ ಬಾಯಿಂದಲೂ ಕೇಳಿದ ನೆನಪು. ಪ್ರಕಟಿತ ಸಾಹಿತ್ಯದಲ್ಲೂ ಎಲ್ಲಾದರೂ ಇಂಥ ಉಲ್ಲೇಖ ಸಿಗಬಹುದು.