ಹೀಗೆ ಸಂಪ್ರತಿಕಾರನಾಗಿ ಸಾಹಿತ್ಯೋದ್ಯಮಕ್ಕೆ ತೊಡಗಿದ ಪರಮದೇವ ಕವಿ ತನ್ನ ವ್ಯಾಸಂಗ ಮತ್ತು ವಿದ್ವತ್ತನ್ನು ರೂಢಿಸಿಕೊಂಡು, ಕಾವ್ಯಶಕ್ತಿಯನ್ನು ಕ್ರಮೇಣ ಪಳಗಿಸಿಕೊಂಡಿರಬಹುದೆಂದು ನಿರೀಕ್ಷಿಸುವುದು  ತಪ್ಪಾಗಲಾರದು. ಜತೆಗೆ ಈ ಕವಿ ವೃತ್ತಿಯಿಂದ ಅರ್ಚಕನಾಗಿ, ಐಗಳಾಗಿ ಇದ್ದುದೂ ಕವಿಯಲ್ಲಿ ಸುಪ್ತವಾಗಿದ್ದ ಈ ಸಾಹಿತ್ಯ ಶಕ್ತಿಯ ಸಂವರ್ಧನೆಗೊಂದು ಇಂಬಾಗಿದ್ದಿರಬೇಕೆನ್ನಿಸುತ್ತದೆ. ತಂದೆಯ ಕಡೆಯಿಂದ ಬಂದ ಯಕ್ಷಗಾನ ಕಲೆ ಮತ್ತು ನಾಟಕಗಳ (ಪ್ರಸಂಗಗಳ) ಪರಿಚಯವೂ ಸೃಜನಸಾಮರ್ಥ್ಯವನ್ನು ಪರಿಪೋಷಿಸಿರಬೇಕು. ಸುಳಿಗೋಡಿನಲ್ಲಿದ್ದಾಗ ಯಕ್ಷಗಾನ ಪಾತ್ರಧಾರಿಯಾಗಿ, ತಾಳಮದ್ದಲೆಯ ಅರ್ಥದಾರಿಯಾಗಿ ಈ ಕವಿ ಅನುಭವಗಳಿಸಿದ್ದನೆನ್ನುತ್ತಾರೆ.

[1] ಹಸ್ತಪ್ರತಿ ಮಾಡುವುದು, ಅರ್ಚಕ-ಐಗಳ ವೃತ್ತಿ ನಿರ್ವಹಿಸುವುದು, ಯಕ್ಷಗಾನ ಪರಂಪರೆಯಲ್ಲಿ ಪರಿಶ್ರಮ – ಮೂರು ಪೋಷಕ ಪರಿಸರ ಮುಪ್ಪರಿಗೊಂಡು ಕವಿಯಲ್ಲಿ ಮಲಗಿದ್ದ ಕಾವ್ಯಶಕ್ತಿಯನ್ನು ಪ್ರಚೋದಿಸಿ ಮೂರ್ತಗೊಳಿಸಿತೆಂದು ಊಹಿಸಬಹುದಾಗಿದೆ. ದೈವಸಾನ್ನಿಧ್ಯದೊಂದಿಗೆ ಕಾವ್ಯ ಸಾನ್ನಿಧ್ಯವೂ ಬೆಸೆದುಕೊಂಡು ಉಂಟಾದ ಸಂಸ್ಕಾರಬಲದಿಂದ ಪರಮದೇವನು ಕಾವ್ಯ ರಚಿಸಿದ್ದು ಸಹಜವೇ ಆಗಿದೆಯೆನ್ನಬಹುದು.[2]

ಇದಕ್ಕೆ ಸಮಾನಾಂತರವಾದ ಮತ್ತು ಪ್ರಸ್ತುತವಾಗಿರುವ ಸಾದೃಶ್ಯವನ್ನು ಇಲ್ಲಿಯೇ ತಿಳಿಸಬೇಕಾಗುತ್ತದೆ. ಮೊದಲು ದೈವೋಪಾಸಕನಾಗಿದ್ದು, ಅನಂತರ ಅದ್ವಿತೀಯ ಕಾವ್ಯೋಪಾಸಕರಾನಾದ ಮಹಾಕವಿ ನಾರಣಪ್ಪನ ವಿಚಾರ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧವಾಗಿದೆ.[3] ಆ ನಾರಣಪ್ಪನ ನೆರಳಿನಂತಿರುವ ಪರಮದೇವನೂ ಯಥಾಗುರು ತಥಾ ಶಿಷ್ಯ ಎಂಬ ಲೋಕೋಕ್ತಿಗೆ ಉದಾಹರಣೆಯಾಗಿದ್ದಾನೆ. ನಾರಣಪ್ಪ ಮಿಂದು ಮಡಿಯುಟ್ಟು ವೀರನಾರಾಯಣನ ಪ್ರೇರಣೆಯಿಂದ ಭಾರತ ಕಥಾಮಂಜರಿ (ಗದುಗಿನ ಭಾರತ) ಬರೆದು ಲೋಕವಿಖ್ಯಾತನೆನಿಸಿದನು. ಅವನ ಜಾಡುಹಿಡಿದು ನಡೆದಿರುವ ಭಕ್ತಕವಿ ಪರಮದೇವನೂ ಭೀಮನಕೋಣೆಲಕ್ಷ್ಮೀನಾರಾಯಣನ ಅನುಗ್ರಹ ಪ್ರೇರಣೆಯಿಂದ ಸಂಕ್ಷಿಪ್ತ ಭಾರತ (ತುರಂಗ ಭಾರತ) ಕಾವ್ಯವನ್ನು ರಚಿಸಿದ್ದಾನೆ. ಅದರೊಂದಿಗೆ ಪರಮದೇವನು ಹರಿದಾಸರ ಹಾಡುಗಳಿಂದ ಪ್ರಭಾವಿತನಾಗಿ, ಕೆಲವು ಕೀರ್ತನೆಗಳನ್ನೂ ಬರೆದು, ತಾನು ಇನ್ನೊಬ್ಬ ಹರಿದಾಸ ಹಾಗೂ ಕೀರ್ತಿನಕಾರನಾಗಿದ್ದಾನೆ. ಇದನ್ನು ಮುಂದೆ ಯಥೋಚಿತವಾಗಿ ಪರಾಮರ್ಶಿಸಬಹುದುದಾಗಿದೆ.

ತುರಂಗಭಾರತವನ್ನಲ್ಲದೆ ಪರಮದೇವ ಕವಿ ಇನ್ನೂ ಕೆಲವು ಚಿಕ್ಕಪುಟ್ಟ ಕೃತಿಗಳ ಹಾಗೂ ಅನೇಕ ಕೀರ್ತನೆಗಳ ಕರ್ತೃವಾಗಿದ್ದಾನೆ. ಈಗ ಖಚಿತವಾಗಿ ತಿಳಿದು ಬಂದಿರುವ ಆಧಾರಗಳಿಂದ ಹೇಳುವುದಾದರೆ ಈ ಕವಿಯ ಇನ್ನಿತರ ಕೃತಿಗಳು ಇಂತಿವೆ : ನಾರಾಯಣಾಕ್ಷರ ಮಾಲಿಕಾ ಸ್ತೋತ್ರ, ತತ್ತ್ವ ಚೌಪದಿ (ಚೌಪದನ) ಮತ್ತು ಕೀರ್ತನೆಗಳು, ಇವಲ್ಲದೆ ಬಾಲಕೃಷ್ಣ ಲೀಲಾಮೃತ, ಷಣ್ಮುಖ ಸ್ತುತಿ – ಮುಂತಾದ ಇನ್ನೂ ಕೆಲವು ಕೃತಿಗಳನ್ನು ಬರೆದಿರಬಹುದೆಂದು ಹೇಳಲಾಗುತ್ತಿದೆ. ಅಂಥ ಹೇಳಿಕೆಯನ್ನು ಪುಷ್ಟೀಕರಿಸಲು ಬೇಕಾದ ಇನ್ನಿತರ ಪೋಷಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆ ವಿಚಾರವಾಗಿ ಏನನ್ನೂ ಹೇಳಲಾಗದು. ಅಲ್ಲದೆ ಮೇಲೆ ಹೆಸರಿಸಲಾಗಿರುವ ಕೃತಿಗಳಲ್ಲಿಯೂ ದೊರೆತಿರುವುದು ಕೆಲವಾರು ಕೀರ್ತನೆಗಳು ಮಾತ್ರ. ನಾರಾಯಣಾಕ್ಷರ ಮಾಲಿಕಾಸ್ತೋತ್ರ ಎಂಬುದು ಕೇವಲ ೫೨ (ಪಲ್ಲವಿಯೂ ಸೇರಿ) ಸ್ತೋತ್ರಪದ್ಯಗಳಿರುವ ಕಿರುಹೊತ್ತಗೆಯೆಂದು ತಿಳಿದು ಬರುತ್ತದೆ. (ಇದನ್ನು ಅನುಬಂಧದಲ್ಲಿ ಕೊಡಲಾಗಿದೆ) : ಅಂದರೆ ಅದರ ಹೆಸರೇ ಹೇಳುವ ಹಾಗೆ ಅದರಲ್ಲಿ ಅಕಾರದಿಂದ ಹಿಡಿದು ಳಕಾರದವರೆಗೆ ಕನ್ನಡ  ವರ್ಣಮಾಲೆಯ ಒಂದೊಂದು ವರ್ಣದಿಂದ ಆರಂಭವಾಗುವ ಆಕಾರಾದಿ ಸ್ತೋತ್ರಪದ್ಯಗಳಿವೆ. ಇತ್ತೀಚೆಗೆ ಇದು ಪ್ರಕಟವಾಗಿದೆ. ಇದೊಂದು ಉದಯರಾಗವಾಗಿದೆ. [4] ಇದೇ ರೀತಿಯಾಗಿ ‘ತತ್ತ್ವ ಚೌಪದಿ’ ಎಂಬ ಪುಟ್ಟ ಕೃತಿಯಲ್ಲಿ ೫೪ ಚೌಪದಿ (ನಾಲ್ಕು ಸಾಲಿನ) ಪದ್ಯಗಳಿವೆಯೆಂದೂ, ಆ ಪದ್ಯಗಳು ಅದ್ವೈತ ತತ್ವಗಳನ್ನು ನಿರೂಪಿಸುತ್ತವೆಯೆಂದೂ ಹೇಳಲಾಗಿದೆ. ಈ ಎರಡೂ ಗ್ರಂಥಗಳು ಆಧ್ಯಾತ್ಮಿಕ ವಸ್ತುವನ್ನೊಳಗೊಂಡಿದ್ದುವೆಂದು ಇದರಿಂದ ತಿಳಿದುಬರುತ್ತದೆ.

ಇದಲ್ಲದೆ ಪರಮದೇವ ಕವಿ ದಂಡಕವನ್ನು ಬರೆದಿರುವುದನ್ನು ಗಮನಿಸಬೇಕಾಗಿದೆ. ‘ವಿಭೂತಿದಂಡೆ’ ಎಂಬ ಹೆಸರಿನ ಒಂದು ದಂಡಕ ಗುಚ್ಛ ಉಪಲಬ್ಧವಿದೆ.65ಬಿ ಸುಮಾರು ಎಂಟು ಪುಟಗಳಷ್ಟಿರುವ ಇದರಲ್ಲಿ ೪೧ ದಂಡಕಗಳಿವೆ. ಇದರ ವಸ್ತು ದೈವಸಂಬಂಧವಾದುದ್ದು; ಶ್ರೀಮನ್ನಾರಾಯಣನ ವಿರಾಟ್ ಸ್ವರೂಪ ವಿಶಿಷ್ಟತೆಯನ್ನು, ಆತ ಹೇಗೆ ಕರುಣಾಮಯಿ ಎಂಬುದನ್ನೂ ನಿರೂಪಿಸಲಾಗಿದೆ. ಉದಾಹರಣೆಗೆ ಈ ಒಂದು ದಂಡಕವನ್ನು ಅವಲೋಕಿಸಬಹುದು :

            ದೇವದೇವಾಧೀಶ ದೈತ್ಯ ವೃಂದವಿನಾಶ
            ರಾವಣಾಸುರ ಮಥನ ರಾಜೀವ ದಳನಯನ
            ಭಾವಜಪಿತ ಭಕ್ತವತ್ಸಲನೆ ಭವಹರನೆ
            ಸಾವಿರನಾಮದೊಡೆಯ
            ದೇವಕೀಸುತ ಅಧೋಕ್ಷಜ ಶಕಟಮರ್ದನನೆ
            ಗೋವರ್ಧನೋದ್ಧಾರ ಗೋಪಾಲ ಜನಲೋಲ
            ಮಾವಕಂಸನ ಕೊಂದ ಮಾಧವ ಮುಕುಂದ ಜಗದೇಕ ಸಲಹೆಂಬುದು | [5]

ಇನ್ನು ಮುಖ್ಯವಾಗಿ ಗಮನಿಸಬೇಕಾದ, ಪರಾಮರ್ಶಿಸಬೇಕಾದ ಪರಮದೇವನ ರಚನೆಯೆಂದರೆ ಕೀರ್ತನೆಗಳು ಅಥವಾ ಹಾಡುಗಳು. ದಾಸಸಾಹಿತ್ಯದ ಕೀರ್ತನ ಸಾಹಿತ್ಯವನ್ನು ಪರಮದೇವ ಬಹುವಾಗಿ ಮೆಚ್ಚಿಕೊಂಡು ಪ್ರಭಾವಿತನಾಗಿದ್ದಾನೆ. ತನಗಿಂತ ಶತಮಾನಗಳಷ್ಟು ಹಿಂದೆಯೇ ಆಗಿಹೋದ ಹಲವಾರು ಹಿರಿಯ ಕೀರ್ತನಕಾರರ ಕೆಲವಾರು ಕೀರ್ತನೆಗಳನ್ನು ಪ್ರತಿಮಾಡಿಕೊಟ್ಟಿದ್ದ ವಿಚಾರವನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹಾಗೆ ಪ್ರತಿಮಾಡುವ ಕಾಲದಲ್ಲಿ ಪರಮದೇವನ ಅಂತರಂಗದಲ್ಲಿ ಅಡಗಿದ್ದ ಭಕ್ತಿಯ ನಿಕ್ಷಿಪ್ತ ಹೊರಹೊಮ್ಮಲು ಸೂಕ್ತ ಮಾಧ್ಯಮಕ್ಕಾಗಿ, ಸಂದರ್ಭಕ್ಕಾಗಿ ಹಾತೊರೆಯುತ್ತಿದ್ದಿರಬೇಕೆನಿಸುತ್ತದೆ. ಅದು ಅಖಂಡವಾಗಿ ತುರಂಗಭಾರತ ರಚನೆಯಲ್ಲಿ ಪ್ರಕಟಗೊಂಡಿರುವುದನ್ನು ಬೇರೆಯಾಗಿಯೇ ನಾವು ವಿವೇಚಿಸಬೇಕಾಗಬಹುದು. ಅದರಿಂದ ಆ ಬೃಹತ್ ಗ್ರಂಥವನ್ನು ಪ್ರತ್ಯೇಕಿಸಿ, ಇಲ್ಲಿ ಕೇವಲ ಪರಮದೇವನ ಕೀರ್ತನ ಸಾಹಿತ್ಯವನ್ನು ವಿಶೇಷವಾದ, ಆದರೆ ಸಂಕ್ಷಿಪ್ತಗೊಳಿಸಿದ, ಅಧ್ಯಯನಕ್ಕೆ ಒಳಪಡಿಸಬೇಕಾಗುತ್ತದೆ.

ಪರಮದೇವ ಕವಿ ವಾಸ್ತವವಾಗಿ ಒಟ್ಟು ಎಷ್ಟು ಕೀತೃನೆಗಳನ್ನು ಬರೆದಿದ್ದಾನೆಂಬುದು ಬಿಡಿಸಲಾಗದ ಒಗಟಾಗಿಯೇ ಉಳಿಯುತ್ತದೆ. ಅಂತೂ ೧೫೦ಕ್ಕಿಂತ ಹೆಚ್ಚು ಭಗವನ್ನಾಮ ಸಂಕೀರ್ತನ ರೂಪದ ಕೀರ್ತನೆಗಳನ್ನು ಬರೆದಿರಬಹುದೆಂದು ಊಹಿಸಲು ಅವಕಾಶವಿದೆ. ಏಕೆಂದರೆ ಈಗ ನಮಗೆ ಉಪಲಬ್ಧವಾಗಿರುವ ಪರಮದೇವ ಕವಿಯ ಕೀರ್ತನೆಗಳ ಸಂಖ್ಯೆಯೇ ೧೪೫ರಷ್ಟಿದೆ.[6] ಇದರಲ್ಲಿ ವಿವಿಧ ಅಂಕಿತಗಳ ೮೩ ಕೀರ್ತನೆಗಳೂ, ಆಧ್ಯಾತ್ಮ ಸಂಬಂಧವಾದ ೪೨ ಹಾಡುಗಳೂ, ಸೇರಿವೆ. ಇದೇನೂ ಕಡಿಮೆ ಸಂಖ್ಯೆಯಲ್ಲ. ತತ್ವಪದಗಳೆಂದು ಹೆಸರಿಸಿರುವ ಈ ೪೨ ಹಾಡುಗಳಲ್ಲಿ ‘ಬೆಡಗು’ ತೋರುವುದಿಲ್ಲ. ಸಾಹಿತ್ಯದ ಹಾಗೂ ಗುಣಮಟ್ಟದ ದೃಷ್ಟಿಯಿಂದ ಈ ಕೀರ್ತನೆಗಳನ್ನು ಸಮೀಕ್ಷಿಸುವುದು ತಪ್ಪಾಗಲಾರದು. ಅಂಥ ಒಂದು ವಿಮರ್ಶಾತ್ಮಕ ಅಧ್ಯಯನದಿಂದ ಹೆಕ್ಕಿ ನೋಡಿದಾಗ ಕೂಡ ಈ ಕವಿಯ ಕೆಲವು ಕೀರ್ತನೆಗಳು ಗಮನಾರ್ಹವೆನಿಸುತ್ತವೆ. ಒಟ್ಟು ಕೀರ್ತನ ಸಾಹಿತ್ಯದ ಚರಿತ್ರೆಯಲ್ಲಿ ಮೌಲಿಕವೆನಿಸುತ್ತವೆ.

ಪರಮದೇವ ಕೀರ್ತನ ಸಾಹಿತ್ಯ ರಚನೆಗೆ ಕೈಹಾಕುವ ವೇಳೆಗೆ ಆ ಕ್ಷೇತ್ರದಲ್ಲಿ ವಿಪುಲವಾದ, ಕೃಷಿ ನಡೆದಿತ್ತು. ಹುಲುಸಾದ ಬೆಳೆ ಬಂದಿತ್ತು. ಪುರಂದರದಾಸರು, ಕನಕದಾಸರು, ರತ್ನಾಕರವರ್ಣಿ ಮೊದಲಾದವರ ಹಾಡುಗಳ ಜನಪ್ರಿಯವಾಗಿದ್ದವು. ಪರಮದೇವ ಕವಿಯ ಹಾಡುಗಳಲ್ಲಿ ಈ ಪ್ರಾಚೀನ ಮಹಿಮರ ಜಾಡುಗಳಿವೆ. ಉದಾಹರಣೆಗೆ :

. ಕೇಳೆ ನಂದನ ಕಾಂತೆ ಹೇಳೆ ಮಗಗೆ ಬುದ್ಧಿ
               ಬಾಲೆಯರನು ಇರಗೊಡನೆ ದಮ್ಮಯ್ಯ|[7]

            . ಸುಮ್ಮನೆ ದೂರಿದರೆ ನಾ ನಂಬೆನು ರಂಗ
               ಗುಮ್ಮ ಬಂದನು ಎಂದರಂಜುವನು ||[8]

            . ಬೇಡವೋ ರಂಗ ಹೆಂಗಳ ತಳ್ಳಿ ಹೋಗ
               ಬೇಡವೋ ನಾ ಬೇಡಿ ಕೊಂಬೆನು ||[9]

            . ಏನೆ ಗೋಪಮ್ಮ ಕೇಳೆ ನಮ್ಮಮ್ಮ
               ಬಾಲಕೃಷ್ಣನ ಬಾಧೆ ತಾಳಲಾರೆವು ನಾವು
               ನಾಳೆ ಗೋಕುಲದಿಂದಿ ಪೋಗುವೆವಮ್ಮ ||[10]

            . ದೇವ ಬಂದ ಭಕ್ತರ ಕಾವ ಬಂದ
               ರಂಗ ಬಂದ ಕೋಮಲಾಂಗ ಬಂದ |[11]

ಮುಂತಾದ ಇನ್ನೂ ಹತ್ತಾರು ಕೀರ್ತನೆಗಳ ಮೇಲೆ ಪುರಂದರದಾಸರ ಪ್ರಭಾವ ಮುದ್ರೆಯನ್ನು ನಿಚ್ಚಳವಾಗಿ ಕಾಣಬಹುದು. ಕೃಷ್ಣನ ಜಿವನ, ಮಹಿಮೆ ಮತ್ತು ಅವನ ಬಾಲಲೀಲೆಗಳ ವರ್ಣನೆಗೆ ತೊಡಗುವ ಹಾಡುಗಳಲ್ಲಿ ಈ ಬಗೆಯ ಪ್ರಭಾವಕ್ಕೆ ಒಳಗಾಗುವುದು ನಿರೀಕ್ಷಿತ ಮತ್ತು ಸಹಜ. ಆದರೆ ರತ್ನಾಕರವರ್ಣಿಯ ಹಾಡುಗಳಲ್ಲಿ ಬರುವ ಅವನಿಗೆ ವಿಶಿಷ್ಟವೆನಿಸಿರುವ ಪಾರಿಭಾಷಿಕ ಮಾತುಗಳನ್ನೊಳಗೊಂಡಿರುವ ಹಾಡೊಂದು ಪರಮದೇವನ ಬತ್ತಳಿಕೆಯಲ್ಲಿರುವುದು ಕುತೂಹಲಕಾರಿಯಾಗಿದೆ.

            ನೀನೆ ರಕ್ಷಿಸೋ ಎನ್ನನು ಕೃಪೆ ಮಾಡಿ
            ಜ್ಞಾನಮೂರುತಿ ಗುರುವರನೆ ದಿಗಂಬರ |

ಎಂದು ಆರಂಭವಾಗುವ ಈ ಹಾಡು

ನಂಬಿದೆ ನಿಮ್ಮ ಪಾದಾಂಬುಜವನು ಕರು
            ಣಾಂಬುಧಿ ಕಾಯೋ ಕಮಲಮಿತ್ರ ತೇಜ ಸು
            ಖಾಂಬುಧಿ ರೂಪ ನಿರಂಜನ ಗುರುವೇ ಚಿ
            ದಂಬರ ಸೂನು ದಿಗಂಬರ ಮೂರ್ತಿ ||[12]

ಎಂದು ಮುಕ್ತಾಯಗೊಳ್ಳುತ್ತದೆ, ಇಲಿ ‘ನಿರಂಜನ ಗುರು’ ಎಂಬುದಕ್ಕಿಂತ ‘ಚಿದಂಬರ ಸೂನು’ ಎಂಬುದು ಗಮನಾರ್ಹವಾಗುತ್ತದೆ. ರತ್ನಾಕರನ ಚಿದಂಬರ ಪುರುಷ ಹಾಗೂ ನಿರಂಜನ ಸ್ತುತಿ ಪ್ರಸಿದ್ಧಿಯಾದುದು.[13] ರತ್ನಾಕರ ಸಂಚರಿಸಿ ಉಪಾಸಿಸಿದ ಕ್ಷೇತ್ರವಾದ ಹುಂಚವು (ಹೊಂಬುಜ, ಪೊಂಬುಚ್ಚ) ಪರಮದೇವನ ಉಪಾಸನೆ ಕ್ಷೇತ್ರವಾದ ಕೇಡಲಸರಕ್ಕೂ ಭೀಮನಕೋಣೆಗೂ ತೀರ ಸಮೀಪವಾದುದೆಂಬುದನ್ನು ಇಲ್ಲಿ ನೆನೆಯಬಹುದಾಗಿದೆ. ಈ ವಿಚಾರದಲ್ಲಿ ಮತ್ತಷ್ಟು ತೌಲನಿಕ ವ್ಯಾಸಂಗವನ್ನು ಮುಂದುವರಿಸಲು ಸಾಧ್ಯವಿದೆ.

ಪರಮದೇವ ಕವಿಯ ಕೆಲವು ಕೀರ್ತನೆಗಳ ಲಯವಂತಿಕೆ, ಶಬ್ದ, ಸಾಹಚರ್ಯ ಮತ್ತು ಸೌಷ್ಠವ, ಶೈಲಿ ಪ್ರಶಂಸೆ ಪಡೆಯುತ್ತವೆ. ಎಲ್ಲವನ್ನೂ ಉದಾಹರಿಸಿ ವಿಮರ್ಶಿಸುವುದು ಈ ಮಹಾಪ್ರಬಂಧದ ವ್ಯಾಪ್ತಿಗೆ ಮೀರಿದ್ದು. ಆದರೂ ಕೆಲವು ಆಯ್ದ ಭಾಗಗಳನ್ನು ಗಮನಿಸಬಹುದಾಗಿದೆ :

.        ಪಾಡುತ | ನಲಿದಾಡುತ | ವರಗಳ ಬೇಡುತ |
            ಪೂಮಳೆಗರೆಯುತ | ಅಮರರು ನೋಡುತ[14]

.        ಎಲ್ಲಿ ದಂಡು ಎಲ್ಲಿಗೂಳ್ಯವೆಲ್ಲಿ ಗಮನವೆಲ್ಲ ವಾಸವೆಲ್ಲಿ ಶಯನವು
            ಎಲ್ಲಿ ನಿದ್ದೆ ಎಲ್ಲಿ ಸುಲಿಗೆ ಎಲ್ಲಿ ಕಡಿತವೆಲ್ಲಿ ಮರಣವೆಲ್ಲಿ ರುದ್ರಭೂಮಿ ಮತ್ತೆಲ್ಲಿ ಜನನವು
            ಊರದೆಲ್ಲಿ ಮನೆಗಳೆಲ್ಲಿ ನಾರಿ ನೆಂಟರಿಷ್ಟರೆಲ್ಲಿ ಸೇರಿಸಿಟ್ಟವಸ್ತುವಡೆ ಒಂದುಕಾಣವು[15]

.        ಈಗಳೋ ಆಗಳೋ ಇನ್ನಾವಾಗಳೋ ಜೀವವಿದು ಗೂಡಿನಿಂದ
            ಸಾಗಿ ಹೋಗುವಂಥ ಕಾಲ ||
            ಏಳು ಏಳು ಎಂದು ಯಮನ ಆಳು ಬಂದು ಪಾಶವಿಕ್ಕಿ
            ಕಾಲಹಿಡಿದು ಕಲ್ಲು ಮುಳ್ಳು ಮೇಲೆ ಎಳೆದು ಒಯ್ವಹೊತ್ತು ||[16]

ಕಡೆಯ (ಮೂರನೆಯ) ಉದಾಹರಣೆಯಲ್ಲಿ ಮೂರು ಮಾತ್ರೆಯ ಉತ್ಸಾಹದ ಕುಣಿತ ಗಮನಾರ್ಹವೆನಿಸುತ್ತದೆ. ಹೀಗೆ ಭಾಷೆ, ಭಾವ, ಲಯ ಕೈಹಿಡಿದು ಜತೆಯಲ್ಲಿ ಸಪ್ತಪದಿ ಹಾಕುವ ಸಾಲುಗಳ ಚೆಲುವು ಅಲ್ಲಲ್ಲಿ ಕೀರ್ತನೆಗಳಲ್ಲಿ ಕೀಲಿಸಿದ ಪರಮದೇವ ಕವಿಯ ಶಕ್ತಿಯನ್ನು ಶ್ಲಾಘಿಸಬೇಕಾಗುತ್ತದೆ. ಪುನರುಕ್ತಿಯಿರುವ ಕೀರ್ತನೆಗಳಿವೆ. ಸಾಮಾಜಿಕ ಹಾಗು ಸಾಂಸ್ಕೃತಿಕ ಅಧ್ಯಯನಕ್ಕೆ ಅನುವು ಮಾಡಿಕೊಡುವ ಹಾಡುಗಳಿವೆ. ಭಾಷಾವಿಜ್ಞಾನದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಾಮಗ್ರಿಯಿದೆ. ಹೀಗೆಯೇ ಚರಿತ್ರಕಾರರಿಗೆ ಬೇಕಾಗುವ ಮಾಹಿತಿಗಳಿವೆ. ಅವೆಲ್ಲದರ ಆಳವಾದ ವ್ಯಾಸಂಗಕ್ಕೆ ಪ್ರತ್ಯೇಕ ಮಹಾಪ್ರಬಂಧಬೇಕಾಗಬಹುದು.

ವಿಮರ್ಶಾತ್ಮಕವಾಗಿ ಹೇಳಬೇಕಾದರೆ, ಹಿಂದಿನ ಕೀರ್ತನೆಗಳ ಸಮೆದ ಜಾಡಿನಲ್ಲಿಯೇ ಪರಮದೇವ ಕವಿಯೂ ಅಡಿಯಿಟ್ಟಿರುವುದು ನಿಚ್ಚಳವಾಗಿ ಕಾಣುತ್ತದೆ. ಚರ್ವಿತ ಚರ್ವಣಿವೆನಿಸುವ ಸವಕಲ ಸರುಕು ಇಲ್ಲಿಯೂ ಬಳಕೆಯಾಗಿದೆ. ಈ ದುರ್ಬಲ ಅಂಶಗಳನ್ನು ಉಪೇಕ್ಷಿಸಬೇಕಾಗಿಲ್ಲ. ಆದರ ಒಂದು ಸಂಗತಿಯನ್ನು ಹೆಚ್ಚು ಒತ್ತುಕೊಟ್ಟು ಹೇಳಬೇಕಾಗಿದೆ. ಪರಮದೇವ ಕವಿಯ ಸಮಕಾಲೀನ ಸ್ಥಿತಿಗತಿಗಳ ಅವಲೋಕನಕ್ಕೆ ಬೇಕಾದ ಆಕರ ಮತ್ತು ಸಾಮಗ್ರಿ ಬೃಹತ್ ಗ್ರಂಥವಾದ ತುರಂಗಭಾರತಕ್ಕಿಂತ ಹೆಚ್ಚಾಗಿ ಕೆಲವು ಕೀರ್ತನೆಗಳಲ್ಲಿ ಕಾಣಸಿಗುತ್ತದೆ. ಹಿಂದಿನ ಪ್ಯಾರಾದಲ್ಲಿ ತೋರುಬೆರಳೆತ್ತಿ ಹೇಳಿದಂತೆ, ಸಾಂಸ್ಕೃತಿಕ ಅಧ್ಯಯನಕ್ಕೆ ಪರಮದೇವನ ಕೆಲವು ಕೀರ್ತನೆಗಳು ಕೈವೋಕ್ಕ ನಿಧಿಯಿದ್ದ ಹಾಗೆ. ಬರಗಾಲದ ಭೀಕರ ಚಿತ್ರಕೊಡುವ ಹಾಗೂ ಪರಿಣಾಮ ತಿಳಿಸುವ ಕೀರ್ತನೆಗಳು ಮನಕಲಕುತ್ತವೆ. ಮರಾಠಿಸೈನ್ಯ ಇಕ್ಕೇರಿ ಪ್ರಾಂತವನ್ನು ವಶಪಡಿಸಿಕೊಂಡು ಸುಲಿಗೆ ಮಾಡಿ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದ ವಿವರಗಳನ್ನು ಒದಗಿಸುವ ಹತ್ತಾರು ಕೀರ್ತನೆಗಳು ಇತಿಹಾಸ ವಿದ್ಯಾರ್ಥಿಗಳಿಗೇ ಅಲ್ಲದೇ ಸಾಹಿತ್ಯಾಭ್ಯಾಸಿಗಳಿಗೂ ಸ್ವಾರಸ್ಯಕರವಾಗಿವೆ.[17] ಇಂಥ ಐತಿಹಾಸಿಕ ಹಾಗೂ ಸಾಮಾಜಿಕ ಸಂಗತಿಗಳನ್ನು ಸಮಕಾಲೀನ ಪ್ರಜ್ಞೆಯಿಂದ ದಾಖಲಿಸುವ ಕೀರ್ತನೆಗಳನ್ನು ಬಿಟ್ಟರೆ, ಒಟ್ಟಾರೆ ಉಳಿದೆಲ್ಲ ಹಾಡುಗಳೂ ದೈವವನ್ನು ಆರಾಧಿಸುವ ನೆಲೆಯಲ್ಲಿ ಸಾಗುತ್ತವೆ. ಭಕ್ತಿಯೇ ಅವುಗಳ ಸ್ಥಾಯಿಭಾವ. ಯಾವ ಕೀರ್ತನೆಗೂ ರಾಗ ತಾಳಗಳ ನಿರ್ದೇಶನವಿಲ್ಲ.

ಇನ್ನು ಪರಮದೇವ ಕವಿ ಈ ಕೀರ್ತನೆಗಳಿಗೆ ಉಪಯೋಗಿಸಿರುವ ಅಂಕಿತಗಳ ವಿಚಾರವಾಗಿ ನಮ್ಮ ಗಮನಿಕೆಗೆ ಬಂದ ವಿಶೇಷತೆಯನ್ನು ಪ್ರಸ್ತಾಪಿಸುತ್ತೇವೆ. ಎಲ್ಲ ಕೀರ್ತನೆಗಳಿಗೂ ಸಾಮಾನ್ಯವಾಗಿರುವಂತೆ ಈ ಕವಿಯ ಕೀರ್ತನೆಗಳಿಗೂ ಅಂಕಿತವಿದೆ. ಈ ಅಂಕಿತ ಪರಮದೇವ ಕವಿಯ ಆರಾಧ್ಯದೈವವಾದ, ಸ್ಫೂರ್ತಿಯ ಮೂರ್ತಿಯಾದ ಭೀಮನಕೋಣೆಯ ಲಕ್ಷ್ಮೀನಾರಾಯಣ ಸ್ವಾಮಿಯೇ ಆಗಿದೆ. ಲಕ್ಷ್ಮೀನಾರಾಯಣನಿಗೆ ಪರ್ಯಾಯವಾಗಿ ಅದೇ ಅರ್ಥ ಭಾವಗಳನ್ನು ತರಬಲ್ಲ ವಿಷ್ಣು ಕೃಷ್ಣ ಸಂಬಂಧವಾದ ಪರ್ಯಾಯನಾಮ (ಶಬ್ದ) ರೂಪಗಳು ಸಾಕಷ್ಟು ಪ್ರಯೋಗವಾಗಿವೆ. ಕವಿಯ ತುರಂಗಭಾರತದಲ್ಲೂ ಇದನ್ನು ನೋಡಬಹುದು. ಅದೇ ರೀತಿ ಭೀಮನಕೋಣೆ ಎಂಬ ಸ್ಥಳವಾಚಿಗೂ ಸಂವಾದಿ ಮಾತುಗಳು ಬಳಕೆಯಾಗಿವೆ.[18]

ಲಕ್ಷ್ಮೀನಾರಾಯಣ (೫೫) ಭೀಮನಕೋಣೆ (೨೩)
ಲಕ್ಷ್ಮೀರಮಣ (೨೩) ಬಕನವೈರಿಯಕೋಣೆ (೩೩)
ಲಕ್ಷ್ಮೀಕಾಂತ (೨೫) ವಾಯುತನಯಕೋಣೆ (೨೪)
ಲಕ್ಷ್ಮೀಲೋಲ (೨೬) ಹರಿಸೂನು ಕೋಣೆ (೨೯)
ಲಕ್ಷ್ಮೀಶ (೩೦) ಹರಿಸುತ ಕೋಣೆ (೩೦)
ವಾಯುಜನ ಕೋಣೆ (೩೧)
ಲಕ್ಷ್ಮೀಪತಿ (೩೪) ಮರುತ ಸುತನಕೋಣೆ (೩೨)
ಪವಮಾನಸುತ ಕೋಣೆ (೩೪)
ಹಿಡಿಂಬೆಯ ರಮಣಕೋಣೆ (೩೯)
ಕೀಚಕರಿಪುಕೋಣೆ (೩೮)
ಮಗಧನಂತಕ ಕೋಣೆ (೩೭)

ಇದೊಂದು ಅಪರೂಪದ ಕವಿಚಮತ್ಕಾರವಾಗಿದೆ. ಪ್ರಾಸಕ್ಕಾಗಿ, ಛಂದಸ್ಸಿನ ಸೌಕರ್ಯಕ್ಕಾಗಿ ಇಂಥ ಕೆಲವು ರೂಪಗಳು ಬಳಕೆಯಾಗಿರುವುದುಂಟು. ಇನ್ನೊಂದು ವಿಶೇಷವೆಂದರೆ ಪರಮದೇವ ಕವಿ ಒಂದೆ ಅಂಕಿತಕ್ಕೆ ತೆಕ್ಕೆಬಿದ್ದಿಲ್ಲ. ಸಾಮಾನ್ಯವಾಗಿ ಕವಿಗಳು (ಶರಣರು, ದಾಸರು) ಒಂದೇ ಅಂಕಿತವನ್ನು ಬಳಸುತ್ತಾರೆ. ಆದರೆ ರತ್ನಾಕರವರ್ಣಿ ತನ್ನ ಹಾಡುಗಳಲ್ಲಿ ನಾಲ್ಕಾರು ಅಂಕಿತಗಳನ್ನು ಅಳವಡಿಸಿಕೊಂಡಿದ್ದಾನೆ.[19] ಪರಮದೇವ ಕವಿಯೂ ಈ ವಿಷಯದಲ್ಲಿ ಉಳಿದ ಕೀರ್ತನಕಾರರ ದಾರಿಯನ್ನು ತೊರೆದು ರತ್ನಾಕರವರ್ಣಿಯ ಮಾರ್ಗವನ್ನು ಅನುಸರಿಸಿದ್ದಾನೆ. ಈ ಕವಿ ತಾನು ಮೆಚ್ಚಿದ ಮೂರು ಸ್ಥಳಗಳ ಮೂವರು ಗಣಪತಿದೇವರ ಅಂಕಿತವನ್ನೂ, ಶಾರದಾಂಬೆಯ ಮತ್ತು ಹೆಚ್ಚಾಗಿ ಮೂಕಾಂಬಿಕಾದೇವಿಯರ ಅಂಕಿತಗಳನ್ನು ಅಳವಡಿಸಿಕೊಂಡು ಕೆಲವು ಕೀರ್ತನೆಗಳನ್ನು ರಚಿಸಿದ್ದಾನೆ. (ಮೂಕಾಂಬೆ ಸ್ತುತಿಯ ಹಾಡುಗಳ ಅಂತ್ಯದಲ್ಲಿ ‘ಶ್ರೀ ಮೂಕಾಂಬ’ ಎಂದಿರುವುದನ್ನುಬಹುಶಃ ಅಂಕಿತವೆಂದು ಹೇಳುವುದು ಸರಿಯಾಗುವುದಿಲ್ಲ. ಇಕ್ಕೇರಿ ಟಂಕಸಾಲೆ ಗಣಪತಿ, ಕೇದಿಗೆ ಸರುಹಿನ (ಕೇಸಲಸರದ) ಗಣಪತಿ ಮತ್ತು ಮಧುಪುರದ ಗಣಪತಿ – ಇವು ಮೂರು ಸ್ಥಳಗಳ ಗಣಪತಿಯಾಗಿದ್ದು ಆಯಾ ಕೀರ್ತನೆಯ ಕಡಯ ಅಂಕಿತದಲ್ಲಿ ಸ್ಥಾನ ಪಡೆದಿದೆ. ಇವಿಷ್ಟೇ ಅಲ್ಲದೆ ಇನ್ನೂ ಕೆಲವು ತನ್ನ ಇಷ್ಟ ದೈವದ ಅಂಕಿತಕ್ಕೂ ಎಡೆಮಾಡಿಕೊಟ್ಟಿದ್ದಾನೆ : ಚಿಪ್ಪಳಿಯ ವೇಣುಗೋಪಾಲಕೃಷ್ಣ, ಇಕ್ಕೇರಿಯ ಅಘೋರೇಶ್ವರ, ಕೆಳದಿ ರಾಮೇಶ್ವರ, ಉಡುಪಿಯ ಶ್ರೀಕೃಷ್ಣ, ಎಂಟಣದೇಶದ ವೆಂಕಟರಮಣ, ಗೆಣಸಿನಕುಣಿಯ ವೆಂಕಟರಮಣ, ಗೌತಮಪುರದ ಗೌತಮೇಶ್ವರ, ನಂದಿತಳೆ ಹನುಮ, ತಿರುಪತಿಯ ವೆಂಕಟರಮಣ, ಮೃಗಪುರದ ವೆಂಕಟೇಶ, ಮೂಡಲಗಿರಿ ವೆಂಕಟರಮಣ, ವರದಾಮೂಲದ ಶಂಭುಲಿಂಗೇಶ್ವರ ಇತ್ಯಾದಿ.[20] ಗಣಪತಿಯ ಸ್ತುತಿ, ಶಾರದಾಸ್ತುತಿ ಹಾಗೂ ಗುರುಸ್ತುತಿಯ ಹಾಡುಗಳಿಗೆ ಯಾವ ಅಂಕಿತವೂ ಬಳಕೆಯಾಗಿಲ್ಲ.

ಊರಿನ ಬೇಲಿಯ ಕೋಲುಗಳೆದ್ದು ಹೊಲಮೆದ್ದರಾರಿಗೆ ಹೇಳೋನ, ಸಾರಿ ಸಾರಿ ಹೇಳುತೀನಿ ಕಡ್ಡಿ ಮುರಿದು ನಾನು, ಗೇರುಹಣ್ಣೀನ ಬೀಜ ಹೊರಸಾರಿ ಇರ್ದವೊಲು ಸಂಸಾರವೆಂಬ ವಾರಿಧಿಯೊಳು, ನೆಂಟರಿಷ್ಟರ ಮನೆಗೆ ಪೋದರಾ ಬಾಂಧವರು ಒಂಟಿಯಂದದಿ ನಿನ್ನ ನೋಡುತಿಹರು, ಬಡವಗಿಕ್ಕುವ ಕೈಯ ಲಕ್ಷ್ಮೀಶ ಬಲ್ಲ, ಘಟ್ಟದ ಕೆಳಗುಪ್ಪು ಬೆಟ್ಟದ ಮರಗಾಯ ಹುಟ್ಟಿದ ಬಯಲುಸೀಮೆಯ ಮೆಣಸು ಕುಟ್ಟಿದ ಸಾಸುವೆ ಸಂಬಾರಗಳು ಕೂಡಿ ಒಟ್ಟಾದ ಲವಣಶಾಕದ ವೋಲು ಸಂಸಾರ, ಸಲ್ಲಾಮು ಸ್ವಾಮಿ ಸಲ್ಲಾಮು –[21] ಮುಂತಾದ ಸಾಲುಗಳು ದೇಸಿಯಸೊಗಸಿಗೆ, ಭಾಷೆಯ ಚೆಲುವಿಗೆ, ಅಭಿವ್ಯಕ್ತಿಯ ತಾಜಾತನಕ್ಕೆ ಉತ್ತಮ ನಿದರ್ಶನವಾಗಿದೆ. ಆದರೆ ಕೀರ್ತನೆಗಳನ್ನು ಸಮಷ್ಟಿಯಾಗಿ ಪರಿಶೀಲಿಸಿದಾಗ ಭಾವನೆಯ ತೀವ್ರತೆಯಾಗಲಿ, ಅಭಿವ್ಯಕ್ತಿಯ ವಿಶಿಷ್ಟ ಚಾತುರ್ಯವಾಗಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಪರಮದೇವ ಕವಿಯ ಕೀರ್ತನೆಗಳ ಸ್ಥಾಯಿಭಾವವನ್ನು ಬಿಂಬಿಸುವ ಒಂದೇ ಒಂದು ಕೀರ್ತನೆಯನ್ನು ಉದಾಹರಿಸಿ ಮುಂದಿನ ವಿವರಣೆಗೆ ತೊಡಗಬಹುದು:[22]

            ಯಾವ ಕಾಲ ತಪ್ಪಿದಾರು ಸಾವಕಾಲ ತಪ್ಪದೋ
            ಯಾವಜೀವ ಜಂತುಗಳಿಗು ಕಾಯವಿಡಿದು ಬಂದ ಬಳಿಕ ||
            ಇರಲಿ ಜನನಿ ಜಠರದೊಳಗೆ | ಧರೆಗೆ ಜನನಿ ತಂದೆ ತಾಯ
            ಕರದೊಳಿರಲಿ ಸ್ತನವನುಂಡು | ಭರದಿ ನಿದ್ರೆಗೈಯುತಿರಲಿ |
            ನೆರೆದ ಬಾಲರೊಡನೆ ಅಡಿ | ಚರಿಸುತಿರಲಿ ಬಾಲಕತ್ವ
            ತೆರಳಿ ಜವ್ವನವು ಬಂದು | ರಮಣಿಯನ್ನೆ ವರಿಸಿ ಇರಲಿ ||
            ಇರಲಿ ಸಿರಿಯ ಸಡಗರದಲಿ | ಕರಿಹಯಂಗಳನೆ ಹತ್ತಿ ಮೆರೆಯುತಿರಲಿ
            ದೊರೆಗಳೊಡನೆ ಚರಿಸುತಿರಲಿ | ಮೇರುಗಿರಿಯ ಶಿರದೊಳಿರಲಿ
            ಶರಧಿ ಮಧ್ಯಪುರದೊಳಿರಲಿ | ಅರಣ್ಯದೊಳಗೆ ತರುಗುತಿರಲಿ
            ಅತಳವಿತಳ ಸುತಳವನ್ನೆ ಪೊಕ್ಕುಯಿರಲಿ ||
            ಕಾಯವಿದುವೆ ತನ್ನ ಹೆತ್ತ | ತಾಯಿ ತಂದೆಗಳಿಗೂ ಉರಿಗೊ
            ಜಾಯೆಸುತರ ಗೃಧ್ರ ಭಲ್ಲೂಕಾದಿಗಳಿಗೂ ಪುಲಿಗೊ ಫಣಿಗೊ
            ವಾಯಸಾದಿ ಕ್ರಿಮಿಗೊ ಕೀಟಕಾದಿಗಳಿಗೊ ನಾಯಿ ನರಿಗೊ
            ವಾಯುಸುತನ ಕೋಣೆ ಲಕ್ಷ್ಮೀರಮಣನೊಬ್ಬ ಬಲ್ಲನಿದನು ||

ಪರಮದೇವ ಕವಿಯ ಸಂಬಂಧವಾಗಿ ‘ವೈಶಿಷ್ಟ್ಯ, ಪರಮಣ್ಣ’ ಮತ್ತು ‘ಮಯಿ ಪರಮಯ್ಯ’ ಎಂಬ ಎರಡು ವಿಶೇಷಣಗಳು ಬಳಕೆಯಲ್ಲಿವೆ. ಇದರ ಹಿನ್ನೆಲೆಯನ್ನು ವಸ್ತುನಿಷ್ಠವಾಗಿ ಹೆಕ್ಕಿನೋಡಬಹುದಾಗಿದೆ. ಸ್ವಲ್ಪಮಟ್ಟಿಗೆ ಪವಾಡ ಸದೃಶ್ಯವೆನಿಸುವ ಮೂರು ಘಟನೆಗಳು ಈ ಹೇಳಿಕೆಗಳ ಹಿಂದೆ ಕ್ರಿಯಾಶೀಲವಾಗಿರುವುದನ್ನು ಅರಿಯಬಹುದು. ಈ ಕವಿ ಇನ್ನೂ ಐದಾರು ವರ್ಷದ ಚಿಕ್ಕ ಕೂಸಾಗಿದ್ದರೂ ಸರಿಯಾಗಿ ಮಾತು ಬಾರದೆ ಮೂಕನಂತಿದ್ದಾಗ ತಂದೆ ಶಂಕರನಾರಾಯಣಯ್ಯನವರು ತಮ್ಮ ಮನೆದೇವರಾದ ಮೂಕಾಂಬಿಕಾ ಮಾತೆಯನ್ನು ಪ್ರಾರ್ಥಿಸಿ ಅಳಲನ್ನು ತೋಡಿಕೊಂಡರಂತೆ.[23] ಆಗ ಬೆಳಗಿನ ಜಾವ ಮಹಾದೇವಿ ಕಾಣಿಸಿಕೊಂಡು ದೇವಾಲಯದ ಗರ್ಭಗೃಹದಿಂದ ಹೊರಬಂದು ಮಗು ಪರಮಣ್ಣನನ್ನು ತನ್ನ ತೊಡೆಯಲ್ಲಿರಿಸಿಕೊಂಡು ಮಗುವಿನ ನಾಲಗೆಯ ಮೇಲೆ ಶ್ರೀಕಾರ ಬರದು ಅನುಗ್ರಹಿಸಿದಳಂತೆ. ಅಂದಿನ ಮರುದಿನವೆ ಮಗು ಪರಮಣ್ಣ ತಂದೆ ಬೋಧಿಸುತ್ತಿದ್ದ ಶ್ಲೋಕಾದಿ ಪಾಠಗಳನ್ನು ಅಡೆತಡೆಯಿಲ್ಲದೆ ಒಪ್ಪಿಸಿದನೆಂದೂ ಒಂದು ಪ್ರತೀತಿ ರೂಢಿಯಲ್ಲಿದೆ. ಇದರ ಸತ್ಯಾಸತ್ಯತೆಯ ವಿವಕ್ಷತೆಗೆ ಇಂಥ ಪರಿಕಲ್ಪನೆಗೆ ಪೂರಕವಾಗಿ ಸ್ಫೂರ್ತಿ ಕೊಟ್ಟಿರಬಹುದಾದ ಒಂದು ಅಂಶದ ಕಡೆಗೆ ಗಮನ ಹರಿಸಬಹುದು. ಅದೆಂದರೆ, ಪರಮದೇವ ಕವಿ ರಚಿಸಿರುವ ಕೀರ್ತನೆಗಳಲ್ಲಿ ಮೂಕಾಂಬಿಕೆಯ ಅಂಕಿತದಲ್ಲಿ ಬರೆಯಲಾದ ಮೂರು ಕೀರ್ತನೆಗಳಿವೆ ಮತ್ತು ಶಾರದಾಸ್ತುತಿ ಕೀರ್ತನೆಗಳಲ್ಲೂ ಒಂದೆಡೆ ಮೂಕಾಂಬಿಕೆಯ ಸ್ತುತಿ ಸೇರಿಕೊಂಡಿದೆ.[24]

ಇನ್ನೊಮ್ಮೆ ಅಡಕೆ ಮರದ ಮೇಲೆ ಪರಮಣ್ಣ ಇರುವಾಗ ದೈವಸ್ಫೂರ್ತಿ ಬಂದು ಮೈಮರೆವೆಯಿಂದ ಕೈತಾಳ ಹಾಕತೊಡಗಿದನಂತೆ. ಆಗ ಆತ ಮರದ ಮೇಲಿಂದ ಜಾರಿ ನೆಲಕ್ಕೆ ಬಿದ್ದನಂತೆ. ಅದನ್ನು ದೂರದಿಂದ ನೋಡಿದ ಜನ ಹೆರಿ ಓಡೋಡಿ ಹತ್ತಿರ ಬಂದರೆ ಪರಮಣ್ಣ ಮರದಿಂದ ಬಿದ್ದವನು ಹಾಗೇ ಎದ್ದು ಕೂತು ತಾಳ ಹಾಕುತ್ತಾ ಹಾಡು ಹೇಳುತ್ತಿದ್ದುದನ್ನು ಕಂಡು ‘ಈತ ಮಹಿಮಾ ಪುರುಷನೇ ಸರಿ’ಎಂದು ಕೊಂಡಾಡಿದರಂತೆ.[25]

ಮತ್ತೊಮ್ಮೆ ಪರಮಣ್ಣ ಕವಿ ಕೌಟುಂಬಿಕ ಕಷ್ಟದಲ್ಲಿ ಸಿಲುಕಿ ನಲುಗಿದಾಗ ನಡೆಯಿತೆಂದು ಹೇಳುವ ಘಟನೆಯನ್ನು ಮನಗಾಣಬಹುದು. ಬಡತನದ ಬವಣೆ ಬೇಗುದಿಯಲ್ಲಿ ಸಾಲ ಸೋಲಗಳಿಗೆ ಕೈಚಾಚಬೇಕಾಗಿತ್ತು. ಒಮ್ಮೆ ಸಾಲ ನೀಡಿದ್ದ ಸಾಹುಕಾರರು ಪರಮಣ್ಣನಿಗೆ ಕೂಡಲೆ ಸಾಲ ಹಿಂತಿರುಗಿಸಬೇಕೆಂದು ಜೋರುಮಾಡಿ ಮನೆಗೆ ಆಳುಕಾಲಿನ ಮೂಲಕ ಹೇಳಿಕಳಿಸಿದರು. ಪರಮಣ್ಣ ತನ್ನ ಕುಚೇಲ ಸ್ಥಿತಿಯಲ್ಲಿ ಹಣಪಾವತಿ ಮಾಡುವ ಹಾಗಿರಲಿಲ್ಲ. ಬಂದದ್ದು ಬರಲಿ, ಆದದ್ದು ಆಗಲಿ ಎಂದು ಸೇವಕನೊಡನೆ ಸಾಹುಕಾರರ ಮನೆಗೆ ಹೊರಟ. ದಾರಿಯಲ್ಲೇ ಸಾಹುಕಾರನ ತೋಟ. ಅದನ್ನು ಹಾದುಹೋಗುವಾಗ ಸಾಹುಕಾರ ತನ್ನ ಮನೆಯ ಹೊರಜಗಲಿಯಲ್ಲಿ ಕುಳಿತು ಇವರು ಬರುವುದನ್ನೇ ಎದುರು ನೋಡುತ್ತಿದ್ದ.

ಆ ತೋಟದಲ್ಲಿ ಒಂದು ಸಕ್ಕರೆಗಂಜಿ ಹಣ್ಣಿನ ಮರವಿತ್ತು. ಪರಮಣ್ಣ ಸಕ್ಕರೆಗಂಜಿ ಗಿಡದ ಬಳಿಗೆ ಬಂದವನೇ ತಟ್ಟನೆ ನಿಂತು ಕೈಮುಗಿದು ತನ್ನ ಶಲ್ಯವನ್ನು ಅಗಲಿಸಿ ಮರದ ಕೆಳಗೆ ಹೋದ. ಕೂಡಲೆ ಮೇಲಿಂದ ಹಣ್ಣುಗಳು ತಾವಾಗಿ ಉದುರಿ ಕವಿಯ ಉತ್ತರೀಯಕ್ಕೆ ಬಿದ್ದವು. ಇದನ್ನು ಸಾಹುಕಾರ ಕಣ್ಣಾರೆ ಕಂಡು ಚಕಿತನಾದ; ಪರಮಣ್ಣ ಮಹಿಮಾಪುರುಷನೇ ಇರಬೇಕೆಂದು ಗ್ರಹಿಸಿ, ಊಟಕ್ಕೆ ಹಾಕಿ ‘ನನ್ನ ಹಣ, ಮೂಲಧನ ಮತ್ತು ಬಡ್ಡಿ ಸಂದಾಯವಾಗಿದೆ. ಇನ್ನು ನೀವು ನನ್ನ ಸಾಲಗಾರರಲ್ಲ’ ಎಂದು ಹಣ ಸಂದಾಯ ರಶೀತಿ ಕೊಟ್ಟು ಗೌರವದಿಂದ ಬೀಳ್ಕೊಟ್ಟನಂತೆ.[26]

ಹೀಗೆ ಸಮಕಾಲೀನರ ಬಾಯಲ್ಲಿ ‘ಮಹಿಮಾ ಪರಮಯ್ಯ’ನು ಮುಂದೆ ‘ಮಯಿಪರಮಯ್ಯ’ನಾಗಿ ಮನ್ನಣೆ ಪಡೆದಿದ್ದನೆಂದು ತಿಳಿದುಬರುತ್ತದೆ. ಜತೆಗೆ ಇಂಥ ಭಾವನೆಗಳಿಗೆ ಕೋಡು ಮೂಡುವ ಹಾಗೆ ಇನ್ನೊಂದು ನಂಬಿಕೆಯೂ ಪ್ರಚಲಿತವಾಗಿದೆ. ಪರಮಣ್ಣನು ದೈವಭಕ್ತ. ದೈವಾಂಶ ಪುರುಷ ಎಂದು ಜನ ನಂಬಿದ್ದರಿಂದ ಆತನ ವಿಚಾರವಾಗಿ ಗೌರವಾಭಾವನೆ ತುಂಬಿ ತುಳುಕುತ್ತಿತ್ತು. ಮೇಲಾಗಿ ಆತ ಅರ್ಚಕನೂ ಆಗಿದ್ದ. ಇನ್ನೂ ಮಿಗಿಲಾಗಿ ಆತ ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರವೇಶ ಪಡೆದಿದ್ದ. ಇವೆಲ್ಲದರ ಸಮಾಗಮದಿಂದಾಗಿ ಅವಧೂತ ಪುರುಷನಂತಿದ್ದ ಪರಮದೇವ ತನ್ನ ಸಾವಿನ ದಿನಾಂಕವನ್ನು ಪೂರ್ವಭಾವಿಯಾಗಿ ಅರಿತಿದ್ದನೆಂಬ ತುಂಬು ನಂಬುಗೆಯೂ ಪ್ರಚಲಿತವಾಗಿದೆ. ತನ್ನ ಮರಣದ ದಿನಗಳು ಹತ್ತಿರವಾದಂತೆ ಎಲ್ಲ ನೆಂಟರು ಇಷ್ಟರನ್ನು ಮುಂಚಿತವಾಗಿಯೇ ಹೇಳಿಕಳಿಸಿ ಬರಮಾಡಿಕೊಂಡನಂತೆ. ಅವರೆಲ್ಲರೊಡನೆ ಮಾತನಾಡುತ್ತ ಇರುವಾಗಲೇ ಕಡೆಯ ಉಸಿರೆಳೆದು ಕಣ್ಮುಚ್ಚಿದನೆಂದೂ ಹೇಳುತ್ತಾರೆ.[27] ಇದರಿಂದ ಹೊರಪಡುವ ಸಂಗತಿಯೆಂದರೆ, ಪರಮದೇವಕವಿ ನಿರಾಯಾಸ ಮರಣ ಪಡೆದಿರಬಹುದೆಂಬುದು.[28]

ಇವೆಲ್ಲದರೊಂದಿಗೆ ಇನ್ನೂ ಒಂದು ಹೇಳಿಕೆ ಕೇಳಿಬರುತ್ತದೆ. ಇದು ಬಹುಶಃ ಮಹಾಭಾರತವನ್ನು ವ್ಯಾಸರು ಬರೆಯಲು ಆರಂಭಿಸಿದಾಗ ನಡೆಯಿತೆಂದು ಹೇಳಲಾದ ಘಟನೆಯ ಅನುರಣನವಿರಬೇಕು. ಆ ಪ್ರಹೇಳಿಕೆ ಇಂತಿದೆ. ಮಗದೊಮ್ಮೆ ಪರಮದೇವಕವಿ ಈ ‘ಸಂಕ್ಷಿಪ್ತ ಭಾರತ’ ಕಾವ್ಯರಚನೆ ಮಾಡಿದಮೇಲೆ ನೋಡುತ್ತಾನೆ, ಅದರಲ್ಲಿ ಹದಿನೇಳೇ ಪರ್ವಗಳಿವೆ; ಹದಿನೆಂಟು ಪರ್ವಗಳ ಮಹಾಭಾರತ ಕಥೆಯನ್ನು ಹದಿನೇಳು ಪರ್ವಕ್ಕೆ ಹೊಂದಿಸಿದ್ದೊಂದು ಅಭಾಸವಾಯಿತಲ್ಲಾ ಎಂದು ಕವಿ ನೊಂದುಕೊಂಡ. ತನ್ನ ಸಂಕ್ಷಿಪ್ತ ಭಾರತಕ್ಕೆ ಸಂಪೂರ್ಣತೆಯ ಧನ್ಯತೆ ತಪ್ಪಿ ಅಪೂರ್ಣತೆಯ ಕೊರತೆ ತಲೆದೋರಿ ದೋಷ ತಟ್ಟಿದಂತಾಯಿತಲ್ಲಾ ಎಂದು ಕವಿ ನಿತ್ಯ ಕೊರಗುತ್ತಿದ್ದ. ಹೀಗಿರುವಾಗ ಒಮ್ಮೆ ಅಭ್ಯಂಜನ ಮಾಡುತ್ತಿರುವಾಗ ಕವಿಗೆ ಏನೋ ಹೊಳೆಯಿತು. ಹೆಂಡತಿ ಭಾಗೀರಥಿಗೆ ಓಲೆಗರಿ ಮತ್ತು ಕಂಠವನ್ನು ಬಚ್ಚಲು ಮನೆಗೇ ತಂದು ಕೊಡಲು ಕೂಗಿ ಹೇಳಿದ. ಆಕೆ ಬಂದು ‘ಆಗಲೇ ನಿಮಗೆ ತಂದುಕೊಟ್ಟೆ. ಮತ್ತೇಕೆ ಕೇಳುವಿರಿ’ ಎಂದಳು. ಕವಿಗೆ ಆಶ್ಚರ್ಯ!

ಅವರ ಕಲ್ಪನೆಯಂತೆ ನಡೆದದ್ದೇನೆಂದರೆ, ಕವಿ ಬಚ್ಚಲಲ್ಲಿ ಮೀಯುತ್ತಿರುವಾಗ ಗಣಪತಿ ದೇವಾಲಯದ ಕಂಬಕ್ಕೊರಗಿ ಕುಳಿತ ಗಣಪತಿ ದೇವರೇ ಓಲೆಗರಿ ತರಸಿಕೊಂಡು ಅದರ ಮೇಲೆ ಕೆಲವು ಪದ್ಯಗಳನ್ನು ಬರೆದು ಕವಿಗೆ ಮುಂದಿನ ದಾರಿ ತೋರಿಸಿ ಹರಿಸಿದ್ದಾಗಿತ್ತು; ಅನಂತರ ಸ್ನಾನ ಮುಗಿಸಿ ಪರಮದೇವ ಕವಿ ಬಂದು ಕಾವ್ಯದ ಓಲೆಗರಿಕಟ್ಟು ಬಿಚ್ಚಿ ನೋಡುತ್ತಾನೆ; ತಾನು ಬರೆದಿಟ್ಟಿದ್ದ ನಾಂದೀ ಪದ್ಯಗಳ ಮುಂದುವರಿಕೆಗೆ ಗಣಪತಿ ದೇವರ ವರಪ್ರಸಾದದಿಂದ ಯಶಸ್ವಿಯಾಗಿ ನಡೆದಿತ್ತು.[29] ಈ ರೀತಿಯಾಗಿ ನಾಂದೀ ಪದ್ಯಗಳಿಂದ ಕೂಡಿದ ಆರಂಭದ ಕಾವ್ಯಭಾಗವನ್ನೂ ಒಂದು ಪರ್ವವನ್ನಾಗಿ ಪರಿಗಣಿಸಿ, ಅಲ್ಲಿಗೆ ಒಟ್ಟು ಹದಿನೆಂಟು ಪರ್ವಗಳ ಸಂಕ್ಷಿಪ್ತ ಭಾರತ ಬರೆದ ನೆಮ್ಮದಿ ಕವಿಗೆ ದೊರೆಯಿತು. ಈ ಘಟನೆಯ ಧ್ವನಿಯಿಂದ ನಿಜದ ನೆಲೆಯನ್ನು ಕಲ್ಪಿಸಿಕೊಳ್ಳಬಹುದು. ಬಿಸಿನೀರಿನ ತೊಟ್ಟಿಯಲ್ಲಿ ಎಣ್ಣೆ ನೀರು ಹಾಕಿಕೊಳ್ಳುತ್ತಿರುವಾಗ, ಕವಿಗೆ ಗಣಪತಿಯ ಸ್ಮರಣೆಯಿಂದ ಸಂಕ್ಷಿಪ್ತ ಭಾರತದ ಪ್ರಾರಂಭದಲ್ಲಿರುವ ಪೀಠಿಕಾ ಸಂಧಿಯನ್ನೇ ಒಂದು ಪರ್ವವನ್ನಾಗಿ ಪರಿಗಣನೆಗೆ ತೆಗೆದುಕೊಂಡರೆ ಅಲ್ಲಿಗೆ ಉದ್ಭವಿಸಿರುವ ಸಮಸ್ಯೆ ತನ್ನ ಪಾಡಿಗೆ ತಾನು ನಿವಾರಣೆಯಾಗುತ್ತದೆಂಬ ಆಲೋಚನೆ ಸ್ಫುರಿಸಿರಬೇಕು. ಇದು ಸಂಭವನೀಯವೆನಿಸುತ್ತದೆ.

ಆದರೆ ಪರಮದೇವಕವಿಯ ಕಾವ್ಯಗಳಲ್ಲಾಗಲೀ, ಕೀರ್ತನೆಗಳಲ್ಲಾಗಲೀ ಈ ಊಹಾಪೋಹಗಳನ್ನು ಪುಷ್ಟೀಕರಿಸುವ ಆಂತರಿಕ ಪ್ರಮಾಣ ಸಿಗುವುದಿಲ್ಲ. ಕವಿ ಸಾವಿನ ದವಡೆಯಿಂದ, ಹಾವಿನ ಕುಡಿತದಿಂದ ಪಾರಾದುದನ್ನು ಒಂದು ಹಾಡಿನ್ಲಲಿ ನಿವೇದಿಸಿ ಕೊಂಡಿದ್ದಾನೆ. ಆತ್ಮ ನಿವೇದನೆಯಂತಿರುವ ಆ ಕೀರ್ತನೆ :

ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀಕೃಷ್ಣ
            ನಾನರಿಯದಿರ್ದಡಿದ ನೀನರಿಯದವನೇ | ||

            ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲಿ
            ಕೊಂದುಚೂತನ ನೆಳಲ ಸಾರಿ ನಾನು
            ಒಂದು ನಿಮಿಷವು ನೀರ ತಡಿಯಲಿ ಸಂಚರಿಸುತಿರ
            ಲೊಂದು ತಕ್ಷಕ ಬಂದು ವನವ ಹೊಕ್ಕಿರಲು ||

            ಮಲಮೂತ್ರದುಪಹತಿಯ ಪರಿಹರಿಸಿ ಕೈಗಳನು
            ಜಲಮೃತ್ತಿಕೆಗಳಿಂದ ತೊಳೆದು ತೊಳೆದು
            ಎಳೆಬಿಸಿಲ ಸೇವಿಸುದತಂದಧಾನವ ಗೈದು
            ಸಲಿಲವನೆ ಮುಕ್ಕುಳಿಸಿ ಕೆಲದೊಳುಗಿದು ||

            ನಿಂತು ಕಾಲ್ಮೊಗದೊಳೆದು ಆಗಮಿಸಿ ಆದಿತ್ಯ
            ನಂಕಿತಕೆ ಸಲಿಲಮಂ ತಿದ್ದಿ ಜಪವಾ
            ಅಂತರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು
            ಗೊಂತಿಗೈತಂದವನು ಮರಳಿ ಧರಿಸಿ ||

            ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ
            ಲ್ಕಾಶ್ಚರ್ಯವೆನಿಸಿ ಬದಿಯೊಳಗುಮ್ಮಲು
            ಸ್ವಚ್ಛವಲ್ಲವಿದೆಂದು ಕಿಮುಚಿ ನಾನೋಡಿ ಬಲು
            ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯನು ಕಂಡೆ ||

            ನೀ ಕೊಲುವ ಕಾಲದೊಳು ಕೊಲುವರಿಲ್ಲ
            ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ
            ನೀ ಕರುಣದಿಂ ಕಾಯ್ದೆ ಎನ್ನಸುವನು ||[30]

ಹೀಗೆ ಪರಮದೇವಕವಿ ತಾನು ಜೀವಿಸಿರುವಾಗಲೇ ಅಲ್ಲದೆ ಅನಂತರವೂ, ಆತ ಬಾಳಿ ಬದುಕಿ ಕಾವ್ಯ ರಚಿಸಿದ ಸುತ್ತಲ ಪ್ರದೇಶದ ಜನತೆಯಲ್ಲಿ ಅತ್ಯಂತ ಆದರಣೀಯ ಅವಧೂತನಂತೆ ಆಗಿಹೋಗಿದ್ದಾನೆ. ಇಲ್ಲಿಯೇ ನಾವು ಪರಮದೇವ ಕವಿ ವಿರಚಿತ ತುರಂಗ ಭಾರತ ಕಾವ್ಯ ಹೇಗೆ ಒಂದು ಭಾಗದ, ಒಂದು ಸಮುದಾಯದ ಪರಮಪೂಜ್ಯ ಗ್ರಂಥವಾಗಿ ಜನಮನ್ನಣೆಗೆ ಪಾತ್ರವಾಯಿತೆಂಬುದನ್ನೂ ಹೇಳಬೇಕಾಗುತ್ತದೆ.

ಸ್ಥೂಲವಾಗಿ ಮಲೆನಾಡಿನ ಭಾಗದಲ್ಲಿ, ನಿರ್ದಿಷ್ಟವಾಗಿ ಭವ್ಯ ಹವ್ಯಕ ಜನಾಂಗದಲ್ಲಿ ತುರಂಗಭಾರತವನ್ನು ದೈವೀ ಸದೃಶ ಕೃತಿಯೆಂದು ಇಂದಿಗೂ ಗೌರವಿಸಲಾಗುತ್ತಿದೆ. ಯಾರ ಮನೆಯಲ್ಲಿ ಈ ಕಾವ್ಯ ಪುಸ್ತಕವಿರುತ್ತದೆಯೋ ಅಂತಹವರ ಮನೆಗೆ ಭೂತಪ್ರೇತಾದಿಗಳ ಈತಿ ಬಾಧೆ ತಟ್ಟಲಾರದೆಂಬೊಂದು ದಟ್ಟವಾದ ಪ್ರತೀತಿ ಪ್ರಚಲಿತವಾಗಿ ಬಂದಿದೆ. ರೋಗ ನಿವಾರಣೆಗೆ, ಹೆಣ್ಣು ಮಕ್ಕಳ ಮದುವೆಗೆ, ಸಂತಾನ ಪ್ರಾಪ್ತಿಗೆ, ಮಾನಸಿಕ ನೆಮ್ಮದಿಗೆ, ಮಳೆಗೆ, ದುಃಕ ದುಗುಡ ದುಮ್ಮಾನ ನಿವಾರಣೆಗೆ, ಕಷ್ಟ ಕಾರ್ಪಣ್ಯ ಕ್ಲೇಶಗಳ ಪರಿಹಾರಕ್ಕೆ ಈ ತೆರನಾಗಿ ಕೌಟುಂಬಿಕ ನೆಮ್ಮದಿಗೆ ತುರಂಗಭಾರತದ ವಾಚನ ಸಿದ್ಧೌಷಧಿಯೆಂಬೊಂದು ವಿಶ್ವಾಸದ ಗ್ರಹಿಕೆ ಮತ್ತು ನಂಬಿಕೆ ಮಲೆನಾಡಿಗರಲ್ಲಿ ಮನೆ ಮಾಡಿದೆ.

ತುರಂಗಭಾರತ ಕಾವ್ಯ ಪಾರಾಯಣದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ಸೊರಬ ಭಾಗದವರು, ಉತ್ತರ ಕನ್ನಡ ಜಿಲ್ಲೆಯವರು ಪಡುತ್ತಿರುವ ಸಂತೋಷ ಸಮಾಧಾನ ಭಾವನೆಯನ್ನೂ ಇಂದಿಗೂ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ಪರಮದೇವ ಕವಿ ಹೀಗೆ ಕವಿಯಾಗಿ ಕಾವ್ಯದ ಮೂಲಕ ಇಂದಿಗೂ ಜೀವಂತವಾಗಿದ್ದಾನೆ. ಜನರ ಕಷ್ಟ ಸುಖಕ್ಕೆ ಬೇಕಾದವನಾಗಿದ್ದಾನೆ. ಒಬ್ಬ ಕವಿಗೆ, ಒಂದು ಕೃತಿಗೆ, ಒಬ್ಬ ವ್ಯಕ್ತಿಗೆ ಇದಕ್ಕಿಂತ ದೊಡ್ಡ ಗೌರವ, ಮಹದ್ಭಾಗ್ಯ ಮತ್ತಾವುದು!

[1] ಪೂವೋಕ್ತ ತು.ಭಾ. ಅ. ಟಿ ೧ (೨), ಪುಟ ೪

[2] ಅದೇ, ಪುಟ ೨೪-೨೫

[3] ನಾರಾಣಪ್ಪ ಕವಿ ಗದಗಿನ ವೀರನಾರಾಯಣ ಗುಡಿಯ ಹಿಂದಿರುವ ಕೊಳದಲ್ಲಿ ನಿತ್ಯಮಿಂದು ಮಡಿಯುಟ್ಟು ಒದ್ದೆಯ ಬಟ್ಟೆ ಆರುವವರೆಗೂ ನಿರರ್ಗಳವಾಗಿ ಕಾವ್ಯ ರಚಿಸುತ್ತಿದ್ದನೆಂಬ ಪ್ರತೀತಿಯಿದೆ.

[4] ಮಹಾಕವಿ ಪರಮದೇವ ವಿರಚಿತ ನಾರಾಯಣಾಕ್ಷರ ಮಾಲಿಕಾ ಉದಯರಾಗವು : ಆರ‍್. ಎನ್. ಶಾಸ್ತ್ರಿ, ಕಸಾಪ ಪುಟ, ೭೧-೧, ಪುಟ ೮೦-೮೫, ಅನುಬಂಧ ನೋಡಿ.

65ಬಿ ಪೂವೋಕ್ತ ಅ.ಟಿ. ೨೮, ಪುಟ ೮೫-೯೨ (ಪ. ಕೀರ್ತನೆಗಳು)

[5] ಅದೇ, ಪುಟ ೯೧ (ಪ. ಕೀರ್ತನೆಗಳು)

[6] ಅದೇ, ಪುಟ ೧ ರಿಂದ ೮೪ (ಪ. ಕೀರ್ತನೆಗಳು)

[7] ಅದೇ, ಸಂಖ್ಯೆ ೪೨, ಪುಟ ೨೩ (ಪ. ಕೀರ್ತನೆಗಳು)

[8] ಅದೇ, ಸಂಖ್ಯೆ ೪೦, ಪುಟ ೨೨ (ಪ. ಕೀರ್ತನೆಗಳು)

[9] ಅದೇ, ಸಂಖ್ಯೆ ೪೩, ಪುಟ ೨೩ (ಪ. ಕೀರ್ತನೆಗಳು)

[10] ಅದೇ, ಸಂಖ್ಯೆ ೩೮, ಪುಟ ೨೧ (ಪ. ಕೀರ್ತನೆಗಳು)

[11]

[12] ಅದೇ, ಸಂಖ್ಯೆ ೧೮, ಪುಟ ೧೦-೧೧ (ಪ. ಕೀರ್ತನೆಗಳು)

[13] ರತ್ನಾಕರನ ಹಾಡುಗಳು; (ಸಂ) ಡಾ. ಹಂಪನಾ, ಬೆಂಗಳೂರು, ೧೯೭೯

[14] ಪೂವೋಕ್ತ, ಅ.ಟಿ. ೨೮, ಸಂಖ್ಯೆ ೧೭, ಪುಟ ೧೦

[15] ಅದೇ, ಸಂಖ್ಯೆ ೩೬, ಪುಟ ೬೯

[16] ಅದೇ, ಸಂಖ್ಯೆ ೫೪, ಪುಟ ೭೯-೮೦

[17] ಅದೇ, ಸಂಖ್ಯೆ ೪೫ ರಿಂದ ೫೬, ಪುಟ ೨೪-೩೨

[18] ಅದೇ : ಕಂಸದೊಳಗೆ ಕೊಟ್ಟಿರುವುದು ಕೀರ್ತನೆಗಳ ಸಂಖ್ಯೆ

[19] ಪೂವೋಕ್ತ, ಟ.ಟಿ. ೭೪; ಅಪರಾಜಿತೇಶ, ಹಂಸನಾಥ, ನಿರಂಜನಸಿದ್ಧ, ಚಿದಂಬರ ಪುರುಷ, ಶ್ರೀಮಂದರಸ್ವಾಮಿ, ಕಡಲಾದಿಜಿನ ಇತ್ಯಾದಿ

[20] ಪೂವೋಕ್ತ, ತು.ಭಾ. ಅ.ಟಿ. ೨೮, ಪುಟ ೪೩-೫೧

[21] ಅದೇ, ಪುಟ ೬೩, ೬೭, ೭೪, ೭೫, ೭೮, ೨೭

[22] ಅದೇ, ಪುಟ ೭೯

[23] ಪೂವೋಕ್ತ, ಅ.ಟಿ. ೧ (೨), ಪುಟ ೩

[24] ಪೂವೋಕ್ತ, ಅ.ಟಿ. ೨೮, ಸಂಖ್ಯೆ ೧೬, ಪುಟ ೭

[25] ಪೂವೋಕ್ತ, ಅ.ಟಿ. ೧(೨), ಪುಟ ೨೪

[26] ಅದೇ, ಪುಟ ೨೫

[27] ೧. ಅದೇ, ಪುಟ ೨೬

೨.            ಪೂವೋಕ್ತ ಅ.ಟಿ. ೧(೧), ತು.ಭಾ. ೧ ಪುಟ ೧೪

“ಇವನ ಮರಣದ ವಿಷಯದಲ್ಲಿ ಜನರಲ್ಲಿ ಒಂದು ಸುದ್ದಿ ಇರುವುದೇನೆಂದರೆ :- ಇವನು ತನ್ನ ಮರಣದ ದಿನವನ್ನು ತನ್ನ ಇಷ್ಟ ಮಿತ್ರರಿಗೆಲ್ಲ ಮುಂದಾಗಿ ತಿಳಿಸಿರುತ್ತಿದ್ದನು. ಎಲ್ಲ ಬಂಧು ಬಳಗದವರನ್ನೂ ಮರಣಪಡುವ ದಿವಸ ಬರಮಾಡಿಕೊಂಡು ಮಾತಾಡುತ್ತ ಈ ಲೋಕ ಸುಖವನ್ನು ಬಿಟ್ಟು ಪರಲೋಕದ           ಸುಖಕ್ಕಾಗಿ ಹೋದನು. ಇದರಿಂದ ಇವನು ಕೇವಲ ಸತ್ಪುರುಷ ನಾಗಿದ್ದನೆಂದು ಸಿದ್ಧವಾಗುತ್ತದೆ” – ಕೆ. ವೆಂಕಟರಮಣಶಾಸ್ತ್ರೀ ಸೂರಿ

[28] ಹಿಂದಣ ಹಿರಿಯರ ಹರಕೆ ಹೀಗಿತ್ತು – ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ.

[29] ಪೂವೋಕ್ತ ಅ.ಟಿ. ೧(೨), ತು.ಭಾ. ೨ ಪುಟ ೨೫-೨೬

[30] ಪೂವೋಕ್ತ ಅ.ಟಿ. ೨೮, ಪುಟ ೩೬