ಜನಪ್ರಿಯ ಕಾವ್ಯವಾದ ತುರಂಗ ಭಾರತದ ಪ್ರಾರಂಭದಲ್ಲಿ ಬರುವ ಪದ್ಯಗಳಲ್ಲಿ ಎರಡನ್ನು ಕೆಳಗೆ ಉದಾಹರಿಸಿ, ಅವುಗಳ ಹಿನ್ನೆಲೆ ಮತ್ತು ಔಚಿತ್ಯವನ್ನು ಪರಾಮರ್ಶಿಸಬಹುದು :

ತಿಳಿದ ಕವಿಯಲ್ಲಮರ ಕಾವ್ಯಂಗಳಂ ಮುನ್ನ
ಹೊಲಬನರಿಯೆನು ಸಂಸ್ಕೃತಂಗಳಂ ಕನ್ನಡದ
ನೆಲೆಯನರಿಯೆನು ಗ್ರಂಥದಂರ್ಥಂಗಳಂ ಶಾಸ್ತ್ರಮನ್ನರಿಯದಾ ಜಡನೂ
ತಿಳಿಯಲಿದರ ಗುಣಾಗುಣಂಗಳಂ ಯಾದವರ
ಕುಲಶಿರೋಮಣಿ ಕೃಷ್ಣ ತಿದ್ದಿ ನಡಸುವ ಚಿತ್ರ
ದ್ಹಲಗೆಗಾರನು ನುಡಿಸಿದಂತಾನು ಪೊಗಳುವೆನು ಶಿರವೆರಗಿ ಗುರುಚರಣಕೇ[1]  || ೧೩

ಸುಲಿದ ಬಾಳೆಯ ಹಣ್ಣಿನಂತಿಹುದು ಭಾರತದ
ಜಲಧಿಯೊಳು ಪೇಳ್ದ ವೃತ್ತಾಂತವನೆ ಸಂಕ್ಷೇಪ
ದೊಳಗೆ ವಿಸ್ತರಿಸುವೆನು ತಿಳಿವಂತೆ ಸತ್ಕವಿಗಳಿಂಗೆರಗಿ ಬೇಡಿಕೊಂಡು
ನಳಿನನಾಭನ ಪುಣ್ಯಚರಿತವಂ ತನ್ನೊಳಗೆ
ತಿಳಿದು ಮೋಕ್ಷಂಗಳಂ ಗಳಿಸಿಕೊಂಡರೆ ಜನ್ಮ
ಫಲವಲಾ ಸಂಸ್ಕೃತದಲಿನ್ನೇನು ಕನ್ನಡದ ನುಡಿಸಾಕು ಸಜ್ಜನರಿಗೆ || ೧೩

ಈ ರೀತಿ ಕಾವ್ಯದ ಆರಂಭದಲ್ಲಿಯೇ, ತನ್ನ ಮಿತಿಯ ಜತೆ ಜತೆಗೇ[2]  ತಾಯ್ ನುಡಿಯ ಪ್ರೀತಿಯನ್ನು ತೋಡಿಕೊಂಡು[3] ಇಂದಿನ ಕನ್ನಡ ಭಾಷೆಯ ಸಂದರ್ಭದಲ್ಲಿ ತುಂಬ ಪ್ರಸ್ತುತವೆನಿಸುವ[4] ಮೌಲಿಕವಾದ ಮಾತುಗಳನ್ನು ಅರಿಕೆ ಮಾಡಿಕೊಂಡಿರುವ ಕವಿಯ ಹೆಸರು ಪರಮದೇವ; ಆತನ ಕಾವ್ಯದ, ಜನರೂಢಿಯ ಹೆಸರು ತುರಂಗಭಾರತ[5].

ಪರಮದೇವ ಕವಿ, ವಿಸ್ತಾರವಾಗಿ ಅಲ್ಲದಿದ್ದರೂ ಕಾವ್ಯಾಭ್ಯಾಸಿಗಳಿಗೆ ಅಗತ್ಯವೆನಿಸುವಷ್ಟು, ಸ್ವಕೀಯ ವೃತ್ತಾಂತವನ್ನು ಸಂಕ್ಷೇಪವಾಗಿ ತಿಳಿಸಿಕೊಟ್ಟಿದ್ದಾನೆ[6]. ಸ್ವಂತ ಬದುಕಿಗೆ ಸಂಬಂಧಿಸಿದಂತೆ ಆತ ಹೇಳಿರುವಷ್ಟು ಅವನ ಮಾತುಗಳಲ್ಲಿಯೇ ಕೇಳಬಹುದಾಗಿದೆ :

ಧರೆಯೊಳಗೆ ಕೊಡಚಾದ್ರಿ ಪರ್ವತದ ಸನ್ನಿಧಿಯೊ
ಳಿರುವ ಹನ್ನರಸೀಮೆ ಸುಳಿಗೋಡು ಗ್ರಾಮದೊಳು
ಧರಣಿಸುವ ಶಂಕ್ರನಾರಾಯಣನ ವರಕುವರ ಪರಮದೇವಾಂಕನೆಂಬಂ
ಪೊರಮಟ್ಟು ಸ್ಥಳಮನೆಗಳಂ ಕಾಲವಶದಿಂ
ಜರಿದು ಸರ್ವಸ್ವಮಂ ಸತಿಸುತರ ಕರಕೊಂಡು
ಬರುತ ಇಕ್ಕೇರಿಯಲಘೋರೇಶನೊತ್ತಿನೊಳಗಿರುತಿರ್ದ ಚಿಪ್ಪಳಿಯೊಳು ||

ಧರೆಗೆ ವೆಸರಾದ ಗೋಪಾಲಯ್ಯನನುಜನೆಂ
ದೆನಿಸುತಿಹ ಲಕ್ಷ್ಮೀನಾರಾಯಣನೆನಿಪ್ಪವಂ
ಪರಮಧಾರ್ಮಿಕ ನಮ್ಮನುರೆ ವಿಚಾರಿಸಿ ತಮ್ಮ ನಿಜಗೃಹದೊಳಿಟ್ಟುಕೊಂಡು
ಬರಸಿಕೊಂಡಿರುತ ಗೋಪಾಲಕೃಷ್ಣನ ಚರಣ
ದರುಶನ ನಿರುತ ಸೇವೆಯ ಮಾಡಿಯನವರತ
ಸ್ಮರಿಸಿಕೊಂಡಿರುತಿರಲ್ಕೆಲವು ದಿನವಾಮೇಲಕಂ ಇರವದೈಸ್ಸೀಮೆಯ ||

ಒಳಗಿರುವ ಎಳಗಳಲಿ ಸೀಮೆ ಕೇದಗೆ ಸರುಹಿ
ನೊಳಗಿರುವ ಧರಣಿಸುರರೊಳಗೋರ್ವ ದೇವಾಂಶ
ಕಲೆಯ ಭೂಸುರಂ ಹರವನೆಯ ಸೊಪ್ಪಿನವರೊಳಗೆ ಸುಬ್ರಹ್ಮಣ್ಯನು
ತಿಳಿವಿನಲಿ ಮತಿನಿಪುಣನೆಂದೆನಿಸಿ ಕೋವಿದಂ
ಬಲವಾಗಿ ಸಕಲರಿಗೆ ನೆಲೆಯೆನಿಸಿ ನಿತ್ಯ ನಿಜ
ನಿಳಯದಿಂದತಿಥಿಗಳಿಗಿತ್ತು ಮೃಷ್ಟಾನ್ನದಿಂ ದಾನದಿಂ ದಣಿಸುತಿಹನು ||

ಪರಮಧಾರ್ಮಿಕ ಬಡವರಾಧಾರಿ ಸಕಲಗುಣ
ಭರಿತದಿಂ ಹರಿಹರಪ್ರಿಯದಾಸನೆಂದೆನಿಸಿ
ವಿರಚಿಸುತ ದೇವಾಲಯಂಗಳಂ ಕಟ್ಟಿಸುತಲಿರುತಿಹನು ಬುದ್ಧಿಶಾಲೀ
ಪಿರಿದಾಗಿ ಊರೊಳು ಮಹಾಗಣಾಧೀಶ್ವರನ
ಸ್ಥಿರಗೊಳಿಸಿ ಅಮೃತಪಡಿ ನಂದದೀವಿಗೆ ಸಹಿತ
ಲರಮನೆಯೊಳುತ್ತಾರಮಂ ಬಿಡಿಸಿ ವಿಂಗಡಿಸಿ ಅನವರತ ನಡೆವಂದದಿಂ ||

ಮಾಡಿದನುದಾರಮತಿ ತೊಡರಿಲ್ಲದಂತೆ ಕೈ
ವಾಡದವರಂ ಕರೆಸಿ ಕಟ್ಟಿಸಿದ ಗುಡಿಯಕೃಪೆ
ಮಾಡಿದಂ ಮಹಾಗಣಾಧೀಶ್ವರಂ ಸತ್ವಮಂ ಕೊಟ್ಟವನ ಮುಖದಿಂದಲೇ
ಮಾಡಿಸಿಕೊಳುತ್ತಿಹನದಲ್ಲದೆ ವಿಚಾರಮಂ
ಮಾಡಿದರೆ ಹುರುಳಿಲ್ಲ ದೇವತಾಲಯಗಳಂ
ನೋಡಿದರೆ ವೈಕುಂಠಮಾಗಿಹುದು ಸರ್ವಶೃಂಗಾರದಿಂ ಮನೆಗಳಿಂದ ||

ಒಪ್ಪಿಹುದು ಭೋಗಮಂಟಪ ಚಂದ್ರಶಾಲೆಯಿಂ
ದುಪ್ಪರದಿ ಗೋಪುರಂ ರಂಜಿಸುತ ಎಡಬಲದೊ
ಲೊಪ್ಪಿಹುದು ಕೈಶಾಲಿ ಗೋಶಾಲಿ ಹೊರಪೌಳಿ ಕೆರೆಭಾವಿ ರಂಜಿಸಿಹುದು
ಚಿಪ್ಪಳಿಯೊಳಿರ್ದೆನ್ನ ಕರಸಿದರ ಹರವಸೆಯ
ಸೊಪ್ಪಿನಾ ಸುಬ್ಬಣ್ಣ ಹೆಗ್ಗಡೆಯುದಾರಮತಿ
ಯಿಪ್ಪುದಕೆ ಸ್ಥಳ ಮನೆಗಳಂ ಮಾಡಿ ಮೂಲಕಂ ಧರ್ಮಕಂ ಬರೆಸಿಕೊಟ್ಟು ||

ವರಣಾಧೀಶ್ವರನ ಪೂಜೆಯಂ ಸ್ಥಿರಗೊಳಿಸಿ
ಇರಿಸಿಕೊಂಡರು ತಂದೆಯೋಪಾದಿ ರಕ್ಷಿಸುತ
ಆರುತಿರಲ್ ಗಣಪತಿಯ ಸನ್ನಿಧಿಯ ವರಕರುಣದಿಂ ಮಾಳ್ಪೆ ಕವನಂಗಳ
ಎರಗಿ ಬೇಡುವೆನು ಸನ್ಮತಿಯ ಭಾರತ ಕೃತಿಯ
ವಿರಚಿಸಲು ಗಣಪ ಶಾರದೆ ಶಂಭು ಶ್ರೀಲಲನೆ
ಯರಸ ಬಿಸಜೋದ್ಭವಗೆ ಸುಜನರಿಗೆ ಕವಿಗಳಿಗೆ ಮಣಿವೆ ಪ್ರತಿಪಾಲಿಸುವುದು[7] || ೧೦

ಪರಮದೇವಕವಿಯು ಸ್ವಕೀಯ ಸಂಗತಿಗಳನ್ನು ಬಿಚ್ಚಿಡುವಾಗ ಕೃಪಣನಾಗದೆ ಹೀಗೆ ತಕ್ಕಷ್ಟು ಮಾಹಿತಿ ಕೊಟ್ಟು ಉಪಕರಿಸಿದ್ದಾನೆ. ಮಲೆನಾಡಿನ ಮಡಿಲ ಮಗುವಾದ ಪರಮದೇವ ಕೊಟ್ಟಿರುವ ಆತನ ಈ ಜೀವನ ವಿವರಗಳನ್ನು ಆಸಕ್ತಿಯಿಂದ ಅವಲೋಕಿಸಬೇಕಾಗುತ್ತದೆ. ಆದರೆ ಅದಕ್ಕೆ ಮೊದಲು ಕವಿಚರಿತೆಕಾರರು ಕೊಟ್ಟಿರುವ ಮಾಹಿತಿಯನ್ನು ಪರಿಶೀಲಿಸಬಹುದು. ಕವಿಚರಿತೆಯ ಮೂರನೆಯ ಸಂಪುಟದಲ್ಲಿರುವ ಮಾಹಿತಿಯನ್ನು ಯಥಾರೂಪದಲ್ಲಿ ಇಲ್ಲಿ ಉಲ್ಲೇಖಿಸಲಾಗಿದೆ.

“ಪರಮದೇವ ೧೭೭೭. ಈತನು ತುರಂಗ ಭಾರತ, ತತ್ವಚೌಪದ, ನಾರಾಯಣಕ್ಷರ ಮಾಲಿಕಾ ಸ್ತೋತ್ರ ಇವುಗಳನ್ನು ಬರೆದಿದ್ದಾನೆ. ಇವನ ತಂದೆ ಶಂಕರನಾರಾಯಣ. ಜನ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಹನ್ನರ ಮಾಗಣಿಯಲ್ಲಿರುವ ಸುಳಿಗೋಡು. ಇವನ ಮನೆತನವರು ತೋಟಮನೆ ಬೇಸಾಯಗಾರರಾಗಿದ್ದರು. ಇವನು ಬಹಳ ಬಡವನು. ಸಾಲದಿಂದ ಸ್ವತ್ತೆಲ್ಲಾ ಹೋಗಿ ಹೆಂಡರು ಮಕ್ಕಳೊಡನೆ ಇಕ್ಕೇರಿ ಸಾಗರ ಪ್ರಾಂತಕ್ಕೆ ಬಂದು ಇಕ್ಕೇರಿ ಅಘೋರೇಶ್ವರನ ಬಳಿ ಚಿಪ್ಪಳಿಯಲ್ಲಿ ಹುಡುಗರಿಗೆ ಓದು ಬರಹ ಕಲಿಸುತ್ತಿದ್ದನು. ಕೇದಿಗೆ ಸರುಹು ಎಂಬ ಊರಿನಲ್ಲಿ ಹೊಸದಾಗಿ ಪ್ರತಿಷ್ಠೆ ಮಾಡಿದ ಗಣಪತಿಯ ಪೂಜೆಗೆ ಇವನನ್ನು ನೇಮಿಸಿದರು. ಇಲ್ಲಿಯೇ ಇವನ ಕವಿತೆ ಆರಂಭವಾಯಿತು. ಲಕ್ಷ್ಮೀನಾರಾಯಣ ಎಂಬುವನು ಇವನಿಗೆ ಪೋಷಕನಾಗಿದ್ದನು. ಸಾಗರದ ಜನರು ಇವನನ್ನು ಗೌರವದಿಂದ ಕಾಣುತ್ತಿದ್ದರು. ತನ್ನ ಮರಣ ದಿವಸವನ್ನು ಮುಂದಾಗಿ ಇಷ್ಟಮಿತ್ರರಿಗೆ ತಿಳಿಸಿ ಅವರೊಡನೆ ಮಾತಾಡುತ್ತ ಸತ್ತನೆಂದು ಹೇಳುತ್ತಾರೆ. ಭಾರತವನ್ನು ಶಕ ೧೭೦೦ ಹೇವಿಳಂಬಿಯಲ್ಲಿ – ಎಂದರೆ ೧೭೭೭ ರಲ್ಲಿ ಬರೆದಂತೆ ಹೇಳುತ್ತಾನೆ. ಈ ಗ್ರಂಥವನ್ನು ಕೋಣೆ ಲಕ್ಷ್ಮೀರಮಣ ದೇವರ ಅಂಕಿತದಲ್ಲಿ ಬರೆದಿದ್ದಾನೆ.[8]

ವಾಸ್ತವವಾಗಿ ಪರಮದೇವ ಕವಿಯನ್ನು ಕುರಿತು ಮೊಟ್ಟಮೊದಲು ಪರಿಚಯ ಬರೆದು ಬೆಳಕಿಗೆ ತಂದವರು ಮುಂಬಯಿ ಕನ್ನಡಿಗರು ಎಂಬುದು ತುಂಬ ಸ್ವಾರಸ್ಯವಾಗಿದೆ.[9] ಆ ಪುಸ್ತಕದ ಮುದ್ರಣದ ವಿವರ ಕೂಡ ಕುತೂಹಲಕರವಾಗಿದೆ. ಕವಿಚರಿತೆಯ ಮೂರನೆಯ ಸಂಪುಟದ ಮೊದಲನೆಯ ಮುದ್ರಣವಾಗದದ್ದು ೧೯೨೯ರಲ್ಲಿ.[10] ಆದರೆ ತುರಂಗ ಭಾರತ ಕಾವ್ಯ ಪ್ರಕಟವಾದದ್ದು ೧೮೮೯ರಲ್ಲಿ.[11] ಆ ಮುದ್ರಣದ ಮುಖಪುಟದ ಮೇಲ್ಭಾಗದಲ್ಲಿ ‘ಶ್ರೀ ಲಕ್ಷ್ಮೀ ರಮಣಾಯ ನಮಃ’ ಎಂದಿದೆ. ತರುವಾಯ ಇಂಗ್ಲೀಷ್ ಅಕ್ಷರಗಳಲ್ಲಿ Turanaga  Bharata ಎಂದಿದೆ. ಅನಂತರ ‘ಮಹಾಕವಿ ಪರಮದೇವಾಂಕನಿಂದ ರಚಿಸಲ್ಪಟ್ಟ ತುರಂಗ ಭಾರತವು’ ಎಂದಿದೆ. ಆಮೇಲೆ ‘ಈ ಪುಸ್ತಕವು ಮ.ರಾ. ಬೂದಿ ಮಹಾಬಲೇಶ್ವರ ಭಟ್ಟ ಪ್ರೊ.ಹ.ಸು. ೩\೪, ರಾ. ರಾ. ರಾಮಪಂಚಿ ಕಣ್ಣಂಗಾರ ೧/೪ ಇವರಿಗಾಗಿ ಕೆ. ವೆಂಕಟರಮಣಶಾಸ್ತ್ರೀ ಸೂರಿ ಇವರಿಂದ ಪರಿಶೋಧಿಸಿ ಮುಂಬಯಿ ಭಾರತೀ ಛಾಪಖಾನೆಯಲ್ಲಿ ಛಾಪಿಸಲ್ಪಟ್ಟಿತು. ೧೮೮೯ ಎಂದು ನಮೂದಾಗಿದೆ.

ತುರಂಗ ಭಾರತ ಪುಸ್ತಕದ ಆಗಿನ ಮುಖಬೆಲೆ – ಕ್ರಯ ಐದು ರೂಪಾಯಿ ಇದರ ಜತೆಗೆ ಟ.ಖ. (ಟಪಾಲು ಖರ್ಚು) ಎಂಟಾಣೆ.[12] ಡೆಮ್ಮಿ ೧/೮ ಆಕಾರದಲ್ಲಿ ೫೦೭ ಪುಟಗಳಿವೆ. ಷಟ್ಪದಿಯ ಸಾಲುಗಳನ್ನು ಗದ್ಯದ ಸಾಲುಗಳಂತೆ ಹಾಳೆಯ ಉದ್ದಕ್ಕೂ ಮುದ್ರಿಸಿದ್ದು ಪ್ರಾಸಸ್ಥಾನ ತೋರಿಸಲು ಉದ್ದ ಗೆರೆಗಳನ್ನು ಯಥಾಸ್ಥಾನದಲ್ಲಿ ಎಳೆಯಲಾಗಿದೆ.[13] ಈ ಭಾರತೀ ಪ್ರೆಸ್ ಎಂಬುದು ಮುಂಬಯಿಯ ಹವ್ಯಕ ಸಮಾಜದ ಸುಬೋಧ ಕಾರ್ಯಾಲಯಕ್ಕೆ ಸೇರಿದ್ದೆಂದು, ಮೊದಲನೆಯ ಮುದ್ರಣದ ರಕ್ಷಾಪುಟದ ಹಿಂಬದಿಯ ಎರಡನೆಯ ಪುಟದಲ್ಲಿ, ಇಂಗ್ಲೀಷ್ ಅಕ್ಷರಗಳಲ್ಲಿ, ರಬ್ಬರ್ ಮೊಹರಿನಂತೆ ದುಂಡಾಕಾರದಲ್ಲಿರುವ, ಮುದ್ರಿತ ಭಾಗದಿಂದ ತಿಳಿದು ಬರುತ್ತದೆ.[14] ಈ ಪುಸ್ತಕದ ಮುಕ್ಕಾಲು ಭಾಗವನ್ನು ಬೂದಿ ಮಹಾಬಲೇಶ್ವರಭಟ್ಟರೂ, ಕಾಲು ಭಾಗವನ್ನು ರಾಮಪಂಜಿ ಕಣ್ಣಂಗಾರರೂ ನಿರ್ವಹಿಸಿದಂತೆ ಸೂಚಿಸಿರುವುದನ್ನೂ ಪ್ರತ್ಯೇಕವಾಗಿ ಹೇಳಬೇಕಾಗುತ್ತದೆ. ಇದು ಗ್ರಂಥ ಪರಿಶೋಧಕರಾದ ಕೆ. ವೆಂಕಟರಮಣಶಾಸ್ತ್ರಿಗಳ (ಸು. ೧೮೫೨-೧೮೯೨) ಪ್ರಾಮಾಣಿಕತೆ ಮತ್ತು ಕರಾರುವಾಕ್ಕಾದ ಅಚ್ಚುಕಟ್ಟುತನವನ್ನು ತೋರಿಸುತ್ತದೆ.[15]

ತುರಂಗ ಭಾರತ ಕಾವ್ಯವನ್ನು ಮೊತ್ತ ಮೊದಲನೆಯ ಸಲಕ್ಕೆ ಮುದ್ರಿಸಿ ಬೆಳಕಿಗೆ ತಂದ ವಿಶೇಷ ಶ್ರೇಯಕ್ಕೆ ಪಾತ್ರರಾದ ಸಂಪಾದಕರ ಮತ್ತು ಅವರ ನೆರವಿಗೆ ನಿಂತವರ ಸೂಕ್ತ ಪರಿಚಯವೂ ಇಲ್ಲಿಗೆ ಪ್ರಸ್ತುತವಾಗಿರುವುದರಿಂದ ಕೆಲವು ಮಾಹಿತಿಗಳನ್ನು, ನಾವು ಸಂಗ್ರಹಿಸಿರುವಷ್ಟನ್ನು, ತಿಳಿಸುತ್ತೇವೆ. ಅವರಲ್ಲಿ ಸಂಪಾದಕರ ವಿಚಾರವಾಗಿ ಸುಪ್ರಸಿದ್ಧ ಸಾಹಿತಿಗಳಾದ ನಿರಂಜನರು ಪುಷ್ಪಹಾರದಲ್ಲಿ ಸೇರಿಸಿರುವ ‘ಕನ್ನಡದ ಪ್ರಪ್ರಥಮ ಪ್ರಹಸನ’ ಎಂಬ ಲೇಖನದಲ್ಲಿ ಕೆಲವು ಅಪೂರ್ವ ಮಾಹಿತಿಗಳನ್ನು ಒದಗಿಸಿಕೊಟ್ಟಿದ್ದಾರೆ.[16]

ತುರಂಗ ಭಾರತ ಗ್ರಂಥದ ಪರಿಶೋಧಕರು (ಅಂದರೆ ಈಗ ನಾವು ಕರೆಯುವ ಸಂಪಾದಕರು ಎಂಬರ್ಥ) ಸೂರಿಗಳಾದ ಕೆ. ವೆಂಕಟರಮಣಶಾಸ್ತ್ರಿಯವರು. ಅವರ ಹೆಸರಿನ ಅಧ್ಯಕ್ಷದ ‘ಕೆ’, ಎಂಬುದು ಕರ್ಕಿ ಎಂಬ ಊರಿನ ಸಂಕ್ಷಿಪ್ತಾಕ್ಷರ.[17] ಅವರು ಸಾಕಷ್ಟು ಪ್ರವಾಸ ಮಾಡಿ ಲೋಕಜ್ಞಾನ ಸಂಪಾದಿಸಿದ್ದರು. ವಿಪುಲವಾದ ವ್ಯಾಸಂಗದಿಂದ ಬಂದ ಸಾಹಿತ್ಯ ಜ್ಞಾನವಿತ್ತು. ಇಂಗ್ಲೀಷಿನಲ್ಲೂ ತಕ್ಕಮಟ್ಟಿನ ಪರಿಶ್ರಮವಿದ್ದಂತೆ ತಿಳಿದುಬರುತ್ತದೆ. ಅದರಿಂದ ಅವರಿಗೆ ಆಧುನಿಕ ದೃಷ್ಟಿಕೋನಕ್ಕೆ ಒಗ್ಗುವಂತೆ ನಾಟಕವೊಂದನ್ನು ಬರೆಯುವ ಪ್ರೇರಣೆ ಉಂಟಾಯಿತು.

“ಕನ್ನಡದ ಮೊದಲ ಏಕಾಂತ ನಾಟಕ ೧೮೮೭ ರಲ್ಲಿ ಪ್ರಕಟವಾಯಿತು. ಬರೆದವರು : ‘ಹವ್ಯಕ ಹಿತೇಚ್ಛು ವಿದ್ವಾಂಸರೊಬ್ಬರು’. ನಾಟಕದ ಹೆಸರು : ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’, ಇಲ್ಲವೆ, ‘ಕನ್ಯಾವಿಕ್ರಯದ ಪರಿಣಾಮವು’, ಆ ಪುಸ್ತಕದ ಹೊದಿಕೆಯ ಪುಟದ ಪಡಿಯಚ್ಚಿನಲ್ಲಿ,ಕ್ರಯ ೨ ಆನೆ. ಟ.ಖ (ಟಪಲು ಖರ್ಚು) ಆರು ಪೈ. ಎಂದಿದೆ.

“ಬರೆದವರ ಹೆಸರು ಸ್ಪಷ್ಟವಾಗಿಲ್ಲ ಅಲ್ಲವೆ ?” ಪ್ರಗತಿಪರದೃಷ್ಟಿ, ನಾಟಕದ ಉದ್ದಕ್ಕೂ ಹವ್ಯಕ ಕನ್ನಡಿಗರ ಮನೆ ಮಾತಿನ ಪ್ರಯೋಗ. ಇದು ಕೂಡ ಕನ್ನಡದ ಮೊದಲ ಕಾದಂಬರಿಯಷ್ಟೇ ಹೆಮ್ಮೆ ಪಡಬಹುದಾದ ಕೃತಿ. ಆದರೆ ಬರೆದವರ ಹೆಸರಿಲ್ಲ.

‘ಈ ನಾಟಕದ ಪುನರ್ಮುದ್ರಣವನ್ನು ಕನ್ನಡ ಜನತೆಗೆ ಈಗ ದೊರಕಿಸಿಕೊಟ್ಟಿರುವ ಕುಮಟಾ ಕಾಲೇಜಿನ ಪ್ರಾಧ್ಯಾಪಕರಾದ ಲಿಂಗೇಶಶರ್ಮರು ಈ ಪ್ರಹಸನವನ್ನು ಕುರಿತಾದ ಲೇಖನದಲ್ಲಿ ಆ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

“ಕನ್ನಡ ಸಾಹಿತ್ಯದಲ್ಲಿ ಏಕಾಂಕ ನಾಟಕಗಳ ಯುಗ ಆರಂಭವಾದುದು ಈ ಶತಮಾನದ ಎರಡು ಮೂರನೆಯ ದಶಕಗಳಲ್ಲಿ……”

“ಆದರೆ ಕಳೆದ ಶತಮಾನದಲ್ಲಿಯೇ ಕನ್ನಡದಲ್ಲಿ ಇಂಥ ಪ್ರಯತ್ನ ನಡೆದಿತ್ತೆಂದರೆ ಯಾರಿಗಾದರೂ ಆಶ್ವರ್ಯವೇ ! ಹೊಸಗನ್ನಡ ಗದ್ಯ ಶೈಲಿ ರೂಪುಗೊಳ್ಳುತ್ತಿದ್ದ ಕಾಲವದು. ಪೌರಾಣಿಕ, ಹೆಚ್ಚೆಂದರೆ ಐತಿಹಾಸಿಕ ಕಥಾವಸ್ತುವನ್ನು ಬೇರೆ ಯಾವುದಕ್ಕೂ ಲೇಖಕರು ಕೈ ನೀಡುವಂತಿರಲಿಲ್ಲ. ಅಂಥ ಒಂದು ಕಾಲದಲ್ಲಿ, ಪ್ರಹಸನದಂಥ ಕೃತಿ ಬೆಳಕಿಗೆ ಬಂದಿತು. ಹವ್ಯಕ ಹಿತೇಚ್ಛುಗಳಾದ ವಿದ್ವಾಂಸರೊಬ್ಬರು ಈ ಸಾಮಾಜಿಕ ದೃಶ್ಯವನ್ನು ಬರೆದರು; ಮುಂಬೈ ನಗರದಲ್ಲಿ ೧೮೮೭ ರಲ್ಲಿ ಮುದ್ರಿಸಿ ಪ್ರಕಟಿಸಿದರು”.

“ಈ ಹಿತೇಚ್ಚು ಯಾರೆಂಬುದನ್ನು ತಿಳಿಯಬಯಸಿ ಲಿಂಗೇಶಶರ್ಮರು ನಡೆಸಿದ ಸಂಶೋಧನೆಯ ಫಲವಿದು;

‘…. ಮುಂಬೈ ನಗರದಲ್ಲಿ ‘ಭಾರತೀ ಛಾಪಖಾನೆ’ಯನ್ನಿಟ್ಟು ೧೮೮೭ ರಲ್ಲಿ ಇದನ್ನು ಪ್ರಕಟಿಸಿದ ಸಾಹಸಿಗಳು, ಕರ್ಕಿಯ ಸೂರಿ ವೆಂಕಟರಮಣಶಾಸ್ತ್ರಿಗಳು. ಅನೇಕ ಹಳೆಯ ಗ್ರಂಥಗಳನ್ನು, ತುರಂಗಭಾರತ, ಯೋಗವಾಸಿಷ್ಠ, ಭಗವದ್ಗೀತೆಯ ಕನ್ನಡ ಪದ್ಯಾತ್ಮಕ ಅನುವಾದ, ಶಂಕರ ಸಂಹಿತೆ, ಭಾಗವತ ಪ್ರತಿಯ ಯಕ್ಷಗಾನ ಪ್ರಸಂಗಗಳು ಮುಂತಾದವುಗಳನ್ನು ಅವರು ಅದೇ ಸುಮಾರಿಗೆ ಮುದ್ರಿಸಿ ಪ್ರಕಟಿಸಿದರು. ಮುಂಬಯಿಯಿಂದ ‘ಹವ್ಯಕ ಸುಬೋಧ’ ಮತ್ತು ‘ಕಾರವಾರ ಚಂದ್ರಿಕೆ’ ಎಂಬ ಇಂಗ್ಲೀಷು ಕನ್ನಡ ಪತ್ರಿಕೆಯನ್ನೂ ಹೊರಡಿಸುತ್ತಿದ್ದರು’.

“ವಿದ್ವಾಂಸರ ಮನೆತನದಲ್ಲಿಯೇ ಹುಟ್ಟಿ ಬೆಳೆದ ವೆಂಕಟರಮಣಶಾಸ್ತ್ರಿಗಳು…. ಬೂದಿ ಮಹಾಬಲೇಶ್ವರಭಟ್ಟ ಎಂಬ ಇನ್ನೊಬ್ಬ ವೈದಿಕರೊಡನೆ ಮುಂಬಯಿಗೆ ಹೋಗಿ ಅಲ್ಲಿ ಮುದ್ರಣಾಲಯ ಸ್ಥಾಪಿಸಿದರು. ಕನ್ನಡ ಅಕ್ಷರಗಳಿಗಾಗಿ ಮಂಗಳೂರಿನ ಅಕ್ಕಸಾಲಿಗರನ್ನು ಕರೆಸಿಕೊಂಡು, ಕನ್ನಡ ಅಕ್ಷರಗಳನ್ನು ಕೆತ್ತಿಸಿಕೊಂಡು, ಕಾರ್ಯಾರಂಭ ಮಾಡಿದರು”.

ಈ ವಿದ್ವಾಂಸರ ಸಾಹಸೀ ಜೀವನ ಇಂದಿಗೂ ಹಿಂದಿನ ತಲೆಮಾರಿನ ಹಿರಿಯರಿದ್ದಲ್ಲಿ ಮನೆಮಾತಾಗಿ ಉಳಿದಿದೆ”.

“…. ೧೮೮೫-೮೬ ರ ಸುಮಾರಿಗೆ ಅವರು ತಮ್ಮ ಪತ್ರಿಕೆಯಲ್ಲಿ ‘ವನ ದುಃಖ ನಿವಾರಣೆ’ ಎಂಬ ತಲೆಬರಹದಡಿಯಲ್ಲಿ ಈ ಜಿಲ್ಲೆಯಲ್ಲಿ ಅರಣ್ಯ ಸಂಕಷ್ಟಗಳನ್ನು ಕುರಿತು ಬರೆದಾಗ ಆಗಿನ ಸರಕಾರ ಅವರ ಮೇಲೆ ಖಟ್ಲೆ ಹಾಕಿ ದಂಡ ಮಾಡಿತು. ಅದನ್ನು ಲೆಕ್ಕಿಸದೆ ಅವರು ಮುಂದುವರಿದರು. ಈ ಉದ್ಯೋಗದಲ್ಲಿ ಅವರಿಗೆ ಯಶಸ್ಸು ಪ್ರಾಪ್ತಿಯಾಗಲಿಲ್ಲ. ಕೊನೆಗೆ ಮನೆತನಕ್ಕೆ ಮಾಮೂಲಾದ ವೈದ್ಯಕೀಯ ವೃತ್ತಿಯನ್ನು ಪುಣಿಯಲ್ಲಿ ಆರಂಭಿಸಿದರಂತೆ. ಅಂತೂ ಈ ಸಾಹಸೀ ಜೀವ ಕೊನೆಗಾಲಕ್ಕೆ ಏನೂ ಪ್ರತಿಫಲವಿಲ್ಲದೆ ಊರಿಗೇ ಬರುವಂತಾಯಿತು”.[18]

ಕೆ. ವೆಂಕಟರಮಣಶಾಸ್ತ್ರೀ ಮತ್ತು ತಿಮ್ಮಾಜೀ ಗೋಪಾಲರಾವ್ ಗೊನ್ನು, ಕರ್ಕಿ – ಈ ಉಭಯತರೂ ಸೇರಿ ಪಂಡಿತರಿಂದ ಶೋಧನೆ ಮಾಡಿಸಿ ‘ಶ್ರೀ ಶಂಕರ ಸಂಹಿತೆಯು’ ಎಂಬ ಷಟ್ಪದಿ ಕಾವ್ಯವನ್ನು ೧೮೮೮ ರಲ್ಲಿ ಮುಂಬಯಿ ಭಾರತೀ ಮುದ್ರಣ ಯಂತ್ರಾಲಯದಲ್ಲಿ ಛಾಪಿಸಿದ್ದಾರೆ.[19] ಆಗ ಅದರ ಕ್ರಯ ಎರಡು ರೂಪಾಯಿ, ಟಪಾಲು ಖರ್ಚು ಆರಾಣೆ. ಇದರ ಎರಡನೆಯ ಮುದ್ರಣವು ವಿದ್ವಾನ್ ರಾಮಚಂದ್ರ ಉಚ್ಚಿಲರ ಸಂಪಾದಕತ್ವದಲ್ಲಿ ೧೯೮೧ ರಲ್ಲಿ ಹೊರಬಂದಿದೆ; ಇದರ ಕ್ರಯ ೪೫ ರೂಪಾಯಿ. ಎರಡನೆಯ ಮುದ್ರಣದ ಅವತರಣಿಕೆಯಿಂದ ತಿಳಿದುಬರುವ ಒಂದು ಹೊಸ ವಿಷಯ, ತುರಂಗಭಾರತದ ಮೊದಲನೆಯ ಮುದ್ರಣಕ್ಕೆ ನೆರವಾದ ಕಣ್ಣಂಗಾರು ರಾಮಪಂಜಿಯವರಿಗೆ ಸಂಬಂಧಿಸಿದ್ದು:

ಮುಂಬಯಿಯಲ್ಲಿ ನೂರು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಕನ್ನಡ ಸಂಸ್ಥೆ ಶ್ರೀಮದ್ಭಾರತ ಮಂಡಳಿ. ಶ್ರೀಲಕ್ಷ್ಮೀನಾರಾಯಣ ದೇವರ ಭಕ್ತನಾದ ಕಣ್ಣಂಗಾರು ರಾಮಪಂಜಿಯವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಪುರಾಣ ಪಾರಾಯಣ ಪ್ರವಚನಾದಿಗಳನ್ನು ಮಾಡುತ್ತ ಮುಂಬಯಿಯಲ್ಲಿ ಪ್ರಪ್ರಥಮವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಾಂದಿ ಹಾಡಿತು. ತೊರವೆ ರಾಮಾಯಣ, ತುರಂಗಭಾರತ, ಜೈಮಿನಿ ಭಾರತ, ಭಾಗವತ ಮತ್ತು ಶಂಕರ ಸಂಹಿತೆಗಳೇ ಮಂಡಳಿಯು ಪಾರಾಯಣ ಮಾಡಿಸುತ್ತಿದ್ದ ಪುರಾಣ ಗ್ರಂಥಗಳು. ಇವುಗಳಲ್ಲಿ ತುರಂಗ ಭಾರತ ಮತ್ತು ಶಂಕರ ಸಂಹಿತೆಗಳು ಮುಂಬಯಿಯಲ್ಲೇ ನೂರು ವರ್ಷಗಳ ಹಿಂದೆ ಅಚ್ಚಾಗಿದ್ದವು. ತುರಂಗ ಭಾರತವನ್ನು ಪ್ರಕಟಿಸಲು ಮಂಡಳಿಯ ಸಂಸ್ಥಾಪಕರಾದ ಕಣ್ಣಂಗಾರು ರಾಮಪಂಜಿಯವರು ಧನಸಹಾಯ ಮಾಡಿದ್ದರೆಂಬುದನ್ನೂ ಆ ಗ್ರಂಥದಲ್ಲೇ ಉಲ್ಲೇಖಿಸಲಾಗಿದೆ”.[20]

ವೆಂಕಟರಮಣಶಾಸ್ತ್ರಿಗಳು ಈ ಕಾವ್ಯವನ್ನು ತುರಂಗ ಭಾರತವೆಂದು ಜನರೂಢಿಯಲ್ಲಿದ್ದ ಹೆಸರಿನಿಂದಲೇ ಕರೆದಿದ್ದಾರೆ. ಹೀಗಾಗಿ ಈ ಕಾವ್ಯಕ್ಕೆ ಇಂದಿಗೂ ಅದೇ ಹೆಸರು ಉಳಿದುಕೊಂಡು ಬಂದಿದೆ.[21] ಈ ಪುಸ್ತಕಕ್ಕೆ ವೆಂಕಟರಮಣಶಾಸ್ತ್ರಿಗಳು ಪ್ರಸ್ತಾವನೆ ರೂಪದಲ್ಲಿ ಎರಡು ಪುಟ ಬರೆದಿದ್ದಾರೆ. ಅನಂತರ ‘ಪರಮದೇವನ ಚರಿತ್ರೆಯು’ ಎಂದು ಇನ್ನೆರಡು ಪುಟ ವಿವರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಗ್ರಂಥ ಸಂಪಾದನೆಯ ದೃಷ್ಟಿಯಿಂದ ಹೇಳುವುದಾದರೆ ಕೆ.ವೆಂಕಟರಮಣಶಾಸ್ತ್ರಿಗಳು, ಎರಡು ತಾಡಪತ್ರದ ಹಸ್ತಪ್ರತಿಗಳ ಸಹಾಯದಿಂದ, ಈ ತುರಂಗಭಾರತದ ಮುದ್ರಣ ಪ್ರತಿಯನ್ನು ಸಿದ್ಧಪಡಿಸಿದ್ದಾರೆ; ಒಂದು ಪ್ರತಿ ಶಿವಮೊಗ್ಗ ಜಿಲ್ಲೆಯ ಸಾಗರದ ಹುಲೀಮನೆ ವೆಂಕಟಗಿರಿಯಪ್ಪ ನವರಿಗೆ ಸೇರಿದ್ದು, ಇನ್ನೊಂದು ಪ್ರತಿಯಾಗೈಯನ ಯಾಗಪ್ಪ ನವರಿಂದ ಬಂದದ್ದು. ಯಾಗಪ್ಪನವರು ಕೂಡ ಸದರಿ ಸಾಗರಕ್ಕೆ ಸೇರಿದ ಗೃಹಸ್ಥರು.[22]

ಹವ್ಯಕ ಸಮಾಜದ ಪ್ರತಿಭೆಯ ಕುಡಿಯಾದ ಈ ಪರಮದೇವ ಕವಿ ಸ್ವವಿಚಾರವಾಗಿ ಹೇಳಿರುವ ಪದ್ಯಗಳನ್ನು ಈಗಾಗಲೇ ನಾವು ಈ ಅಧ್ಯಾಯದ ಪ್ರಾರಂಭದಲ್ಲಿ ಉದಾಹರಿಸಿದ್ದೇವೆ. ಅದರೊಂದಿಗೆ ಕವಿಚರಿತೆಯಲ್ಲಿ ಬರೆದಿರುವ ವಿವರವನ್ನೂ ಪ್ರಸ್ತಾಪಿಸಿ ಉದ್ಧರಿಸಿದ್ದೇವೆ. ಅದನ್ನು ಕ್ರೋಢೀಕರಿಸಿ ವಿವೇಚಿಸುವ ಮುನ್ನ ಪರಮದೇವ ಕವಿಯ ಇತಿವೃತ್ತವನ್ನು, ತುರಂಗ ಭಾರತ ಕಾವ್ಯದ ಪರಿಶೋಧಕರಾದ ವೆಂಕಟರಮಣಶಾಸ್ತ್ರಿಯವರು ಕೊಟ್ಟಿರುವುದನ್ನೂ ಇಲ್ಲಿ ಯಥಾವತ್ತಾಗಿ ಉದಾಹರಿಸುವುದು ಅಪ್ರಸ್ತುತವಾಗಲಾರದೆಂದು ತಿಳಿಯುತ್ತೇವೆ. ಏಕೆಂದರೆ ಅವರು ಪರಮದೇವ ಕವಿಗೆ ನಮಗಿಂತ ಒಂದು ಶತಮಾನ ಹತ್ತಿರದವರು ಮತ್ತು ಒಂದೇ ಸಮಾಜಕ್ಕೆ ಸೇರಿದವರು. ನಾವು ಪರಮದೇವ ಕವಿಗೆ ಎರಡು ಶತಮಾನದ ಅಂತರದಲ್ಲಿ ನಿಂತು ಮಾತನಾಡುತ್ತಿದ್ದೇವೆ; ಆ ಸಂಪಾದಕರು ಒಂದು ಶತಮಾನದಷ್ಟು ಅಂತರದ ದಡದ ಮೇಲಿದ್ದಾರೆ; ಅಂದರೆ ನಮಗೂ ಕವಿಗೂ ನಟ್ಟನಡುವೆ ಈ ಸಂಪಾದಕರು ಇದ್ದಾರೆಂದಾಯಿತು. ಇದರಿಂದಾಗಿ ನಮಗಿಂತ ಅವರಿಗೆ ಮಾಹಿತಿಗಳು ಅಧಿಕೃತವಾಗಿ ತಿಳಿದಿರುವ ಸಾಧ್ಯತೆ ಇರುತ್ತದೆ.

ಕೆ.ವೆಂಕಟರಮಣಶಾಸ್ತ್ರಿ ಸೂರಿಯವರು ಕೊಟ್ಟಿರುವ ವಿವರವಿಷ್ಟು:

‘ಇದುವರೆಗೆ’ ‘ಪರಮದೇವ’ ಸುದ್ದಿಯು ಕನ್ನಡ ಜನರಲ್ಲಿ ಪ್ರಸಿದ್ಧವಿರಲಿಲ್ಲ. ಯಾವ ಮಹಾಕವಿಯು ಕನ್ನಡ ಭಾಷೆಯಿಂದ ವಾರ್ದಿಕ ಷಟ್ಪದಿ ಪದ್ಯರೂಪವಾಗಿ ‘ಮಹಾಭಾರತ’ವನ್ನು ರಚಿಸಿದನೋ, ಅವನೇ ಪರಮದೇವನೆಂಬ ಹೆಸರುಳ್ಳವನು. ಇವನು ಇತ್ತಲಾಗಿನ ಕವಿಯಾಗಿದ್ದರೂ, ಪುರಾತನ ಕನ್ನಡ ಕವಿಗಳಲ್ಲಿ ಇವನನ್ನು ಗಣನೆ ಮಾಡುವುದಕ್ಕೆ ಏನೂ ಅಡ್ಡಿ ಇರಲಾರದು. ಯಾಕೆಂದರೆ, ಇವನ ಕವಿತೆಯು ಹೆಚ್ಚು ಸುಂದರತರದ್ದಾಗಿರುವದಲ್ಲದೆ, ಕವಿತೆಯ ಮಟ್ಟೆಲ್ಲ ಹಿಂದಿನ ಗ್ರಂಥಗಳಂತೆಯೇ ಇರುತ್ತದೆ ಮತ್ತು ಇವನು ಕೈಕೊಂಡ ಗ್ರಂಥವಾದರೂ ಸಾಧಾರಣದ್ದಲ್ಲ : ಈ ಭರತಖಂಡದಲ್ಲಿರುವ ಗ್ರಂಥಗಳಲ್ಲಿ ಮಹತ್ವದ್ದೆಂಧು ಹೆಸರುಪಟ್ಟ ಮಹಾಭಾರತವಾಗಿರುತ್ತದೆ. ಇಂಥ ದೊಡ್ಡದಾದ ಗ್ರಂಥವನ್ನು ಸಾಧಾರಣತರದ ಯೋಗ್ಯತೆಯುಳ್ಳವರಿಂದರಚಿಸಲಿಕ್ಕಾಗಲಿಕ್ಕಿಲ್ಲವೆಂಬುದು ನಿರ್ವಿವಾದದ ಮಾತಾಗಿರುತ್ತದೆ.

“ಪರಮದೇವನು ಹವ್ಯಕ ಬ್ರಾಹ್ಮಣನಾಗಿರುತ್ತಿದ್ದನು. ಇವನು ದಕ್ಷಿಣ ಕನ್ನಡ ಜಿಲ್ಲೆಯ ಹನ್ನರ ಮಾಗಣಿಯಲ್ಲಿರುವ ಸುಳಿಗೋಡು ಎಂಬ ಊರಿನಲ್ಲಿ ಹುಟ್ಟಿದನು. ಈ ಊರು ಕೊಡಚಾದ್ರಿ ಪರ್ವತದ ಉತ್ತರ ದಿಕ್ಕಿನ ಮಗ್ಗಲಲ್ಲಿರುತ್ತದೆ. ಇವನ ಮನೆತನದವರು ತೋಟಮನೆ ಬೇಸಾಯಗಾರರಾಗಿದ್ದರು. ಇವನ ತಂದೆಯ ಹೆಸರು ‘ಶಂಕರನಾರಾಯಣ’ನೆಂಬುದಾಗಿತ್ತು. ಪರಮದೇವನ ಮೂಲ ಹೆಸರು ಪರಮೇಶ್ವರನೆಂಬುದಾಗಿತ್ತು. ಇವನಿಗೆ ಆ ಊರ ಜನರು ಚಿಕ್ಕವನಿರುವಾಗ ಪರಮೈಯ್ಯನೆಂತಲೂ ಅಥವಾ ಪರಮಣ್ಣನೆಂತಲೂ ಕರೆಯುತ್ತಿದ್ದರು. ಇವನು ತನ್ನ ಹೆಸರಿನ ಉತ್ತರಾರ್ಧ ಭಾಗದ ‘ಈಶ್ವರ’ ಶಬ್ದದ ಬದಲಿಗೆ ‘ದೇವ’ ಎಂಬ ಶಬ್ದವನ್ನು ತನ್ನ ಗ್ರಂಥಗಳಲ್ಲಿ ತೋರಿಸಿರುತ್ತಾನೆ”.

“ಪರಮದೇವನ ಮನೆತನದವರು ಸಾಧಾರಣ ಬಡತನದ ಸ್ಥಿತಿಯವರಾಗಿದ್ದರೂ ದೈವಭಕ್ತಿಯುಳ್ಳವರಾಗಿದ್ದರು ಮತ್ತು ಕುಟುಂಬ ಭಾರದ ದೆಸೆಯಿಂದ ಸಾಲಂಡಿಗರಾಗಿದ್ದರು. ಪರಮದೇವನಿಗೆ ಮದುವೆ ಮುಹೂರ್ತಗಳೆಲ್ಲ ಆದ ನಂತರ ಇವನೇ ಗೃಹಕೃತ್ಯಕ್ಕೆ ಯಜಮಾನನಾಗಬೇಕಾಯಿತು. ಇವನು ಸಾಧಾರಣದ ಮಟ್ಟಿಗೆ ಓದು ಬರೆಯುವಿಕೆಯನ್ನು ಕಲಿತುಕೊಂಡಿದ್ದರಿಂದಲೂ, ಇವನ ಮನೆತನದ ಗುಣದಿಂದ ಸ್ವಾಭಾವಿಕವಾಗುಂಟಾದ ದೈವಭಕ್ತಿಯುಳ್ಳವನಾದ್ದರಿಂದಲೂ, ಯಾವಾಗಲೂ ಭಕ್ತಿಪರವಾದ ಪುರಾಣ ಇತಿಹಾಸ ಗ್ರಂಥಗಳನ್ನೋದುವುದರಲ್ಲಿ ಕಾಲ ಕಳೆಯುತ್ತಿದ್ದನಲ್ಲದೇ, ಬೇಸಾಯ ಮಾಡುವುದರಲ್ಲಿ ಇವನು ಉದಾಸೀನವುಳ್ಳವನಾಗಿದ್ದನು. ಇದರಿಂದ ಇವನಿಗೆ ಮೈಗಳ್ಳನೆಂದು ಒಮ್ಮೆಗೆ ಉಪಮೆ ಕೊಟ್ಟರೂ, ಈ ಮೈಗಳ್ಳತನವು ಒಂದು ವಿಧವಾದ ಧರ್ಮ ಭೋಳೆತನದಿಂದ ಉಂಟಾದ ವೈರಾಗ್ಯದಿಂದಲೇ ಆಗಿತ್ತಾದ್ದರಿಂದ ಆ ದೋಷವನ್ನು ನಾವು ಅವನ ಮೇಲೆ ಹೊರಿಸುವುದಿಲ್ಲ. ಯಾಕೆಂದರೆ : ಮೈಗಳ್ಳರ ಸ್ವಭಾವಕ್ಕೂ ಇವನ ಸ್ವಭಾವಕ್ಕೂ ಹೆಚ್ಚು ಅಭ್ಯಂತರಗಳಿರುವುವು. ನಿರುದ್ಯೋಗದಿಂದ ನಿದ್ದಂಡಿಗಳಾಗಿ ಕಾಲಹರಣ ಮಾಡುವವರೇ ಮೈಗಳ್ಳರು. ಪರಮದೇವನು ನಿದ್ದಂಡಿಯಾಗಿರಲಿಲ್ಲ. ತನ್ನ ಹೊತ್ತನ್ನೆಲ್ಲ ಗ್ರಂಥವಾಚನದಲ್ಲಿ ಖರ್ಚು ಮಾಡುತ್ತಿದ್ದನು. ಇದಾದರೂ ಒಂದು ತರದ ಉದ್ಯೋಗವೇ ಆಗಿರುವುದು. ಆದರೆ ಈಗ ಇಷ್ಟು ಮಾತ್ರ ಹೇಳಬಹುದಲ್ಲ ಅವನ ಮನೆತನದ ಉದ್ಯೋಗದಲ್ಲಿ ಪರಮದೇವನಿಗೆ ಪ್ರೀತಿ ಇರಲಿಲ್ಲ.

“ಪರಮದೇವನ ಮನೆತನದವರು ಮೊದಲೇ ಸಾಲಂಡಿಗರಾಗಿದ್ದರು. ಹೀಗಿದ್ದು, ಪರಮದೇವನು ವೈರಾಗ್ಯಶೀಲನಾಗಿ ಬೇಸಾಯ ಕಸುಬಿನಲ್ಲಿ ಉದಾಸೀನವುಳ್ಳವನಾದನು. ಈ ಕಾರಣಗಳಿಂದ ಪರಮದೇವನು ತನ್ನ ಸಂಸಾರ ಪೋಷಣಕ್ಕಾಗಿ ಮತ್ತು ಸಾಲ ಮಾಡಬೇಕಾಯಿತು. ಈ ಇವನ ಸ್ಥಿತಿಯನ್ನು ನೋಡಿ, ಸಾಲ ಕೊಟ್ಟವರೆಲ್ಲ ಇವನ ಭೂಮಿ, ಮನೆ, ಆಸ್ತಿಗಳನ್ನು ಕ್ರಯಮಾಡಿಸಿ ತಮ್ಮ ಹಣವನ್ನು ತುಂಬಿಕೊಂಡರು. ಹೀಗಾದ್ದರಿಂದ ಪರಮದೇವನಿಗೆ ತನ್ನ ಹೆಂಡರು ಮಕ್ಕಳ ಹೊಟ್ಟೆಯನ್ನು ಹೊರೆಯುವುದು ಸಹ ದುಃಸ್ಸಹವಾಯಿತು. ಇಂಥ ಕಷ್ಟದ ದೆಸೆಯಲ್ಲಿ ಪರಮದೇವನು ಸಂಸಾರ ಪೋಷಣಕ್ಕೆ ಬೇರ್ಯಾವ ಉಪಾಯವೂ ತೋರದೆ, ಆ ತನ್ನ ಹುಟ್ಟಿದ ಊರನ್ನು ಬಿಡಬೇಕಾಯಿತು. ಆದ್ದರಿಂದ ಪರಮದೇವನು ತನ್ನ ಹೆಂಡರು ಮಕ್ಕಳ ಸಹಿತವಾಗಿ ಆ ಊರನ್ನು ಬಿಟ್ಟು ಇಕ್ಕೇರಿ ಸಾಗರದ ಪ್ರಾಂತಕ್ಕೆ ಬಂದನು. ಆ ಕಾಲದಲ್ಲಿ ಇಕ್ಕೇರಿಯು ಹೆಸರ್ಗೊಂಡದ್ದಾಗಿ ಒಬ್ಬ ಲಿಂಗವಂತ ಪಾಳ್ಯಗಾರನ ಆಳ್ವಿಕೆಯಲ್ಲಿರುತ್ತಿತ್ತು.

“ಪರಮದೇವನು ಯಾವಾಗ ಇಕ್ಕೇರಿ ಪ್ರಾಂತಕ್ಕೆ ಬಂದನೋ, ಆಗ ಆ ಇಕ್ಕೇರಿ ಸಮೀಪದ ಚಿಪ್ಪಳಿ ಎಂಬ ಗ್ರಾಮದಲ್ಲಿ ಇವನಿಗೊಬ್ಬ ಸದ್ ಗೃಹಸ್ಥರು ಆಶ್ರಯವನ್ನು ಕೊಟ್ಟು, ಇವನನ್ನು ತನ್ನ ಮನೆಯ ಹುಡಗರಿಗೆ ಬರಹ ಕಲಿಸುವ ಐಗಳನ್ನಾಗಿ ಮಾಡಿದರು. ಪರಮದೇವನು ಇದೇ ವೃತ್ತಿಯಿಂದ ಕೆಲವು ವರುಷ ಜೀವನ ಮಾಡಿದನು. ಹೀಗಿರುವಲ್ಲಿ ಅಲ್ಲೇ ಕೇದಿಗೇಸರು ಎಂಬ ಊರಿನಲ್ಲಿ ಅದೇ ಊರ ಹರವಸೆಯ ಸೊಪ್ಪಿನ ಸುಬ್ಬಣ್ಣಹೆಗಡೆ ಎಂಬ ಗೃಹಸ್ಥರು ಒಂದು ಗಣಪತಿಯ ದೇವಸ್ಥಾನವನ್ನು ಕಟ್ಟಿಸಿದರು. ಆಗ ಅದರ ಪೂಜೆ ಮಾಡುವ ಕೆಲಸವನ್ನು ಬಡವ ಹಾಗೂ ಸಕುಂಟುಬಿಯಾದ ಪರಮದೇವನಿಗೆ ನೇಮಿಸಿಕೊಟ್ಟರು. ಇದರಿಂದ ಪರಮದೇವನಿಗೆ ಹೆಚ್ಚು ಆನಂದವೂ, ಅನುಕೂಲವೂ ಉಂಟಾಯಿತೆಂಬುದು ಅವನ ಲೇಖನದಿಂದಲೇ ಸ್ಪಷ್ಟವಾಗುತ್ತದೆ”.

“ಸಾಗರದ ಜನರೂ, ವಿಶೇಷವಾಗಿ ಯುಗಳಶೀಮೆಯ ಜನರು ಸಹ, ಈ ಪರಮದೇವನಿಗೆ ‘ಕದಲ ಸರದ ಐಗಳು’ ಎಂತ ಕರೆಯುತ್ತಿದ್ದರು ಮತ್ತು ಇವನನ್ನು ನಿಷ್ಠರಾದ ಹರಿಭಕ್ತರಲ್ಲಿ ಗಣನೆ ಮಾಡುತ್ತಿದ್ದರು. ಪರಮದೇವನ ಎಲ್ಲ ತರದ ನಡತೆ ನಡಾವಳಿ ಸಹ ಅದಕ್ಕೆ ಒಪ್ಪುವಂತೆ ಇತ್ತು”.

“ಆ ನಂತರ ಪರಮದೇವನು ಭಕ್ತಿಪರವಾದ ಕೆಲ ಕೆಲವು ಹಾಡು ಪದ್ಯಗಳನ್ನು ರಚಿಸತೊಡಗಿದನಲ್ಲದೆ, ಚಿಕ್ಕದಾದ ಒಂದು ಕಾವ್ಯಬದ್ಧ ಗ್ರಂಥವನ್ನೂ ಬರೆದನು. ಅದು ಅದ್ವೈತ ಸ್ವರೂಪದ್ದಿದ್ದು ೫೪ ಪದ್ಯವುಳ್ಳದ್ದಾಗಿದೆ. ಈ ಗ್ರಂಥಕ್ಕೆ ‘ತತ್ವಚ್ಚೌಪದನ’ವೆಂಬ ಹೆಸರಿರುತ್ತದೆ. ಅನಂತರ ‘ನಾರಾಯಣಾಕ್ಷರ ಮಾಲಿಕಾ ಸ್ತೋತ್ರ’ವೆಂಬುದನ್ನು ರಚಿಸಿದನು. ಈ ಗ್ರಂಥವನ್ನು ದೈವಭಕ್ತಿಯುಳ್ಳ ಜನರು ಪ್ರತಿನಿತ್ಯವೂ ಶ್ರೇಯಃ ಸಂಪಾದನಾರ್ಥವಾಗಿ ಪಠನ ಮಾಡುತ್ತಿರುತ್ತಾರೆ. ಅನಂತರ ಇವನು ‘ತುರಂಗ ಭರತ’ವೆಂಬುದನ್ನು ರಚಿಸಿದನು. ಆದರೆ ಈಗ ಇದರಲ್ಲಿ ವಿಶೇಷವೇನೆಂದರೆ :- ಬಾಕಿ ಕನ್ನಡ ಪದ್ಯಕಾವ್ಯಗಳಂತೆ ಇದು ದುರ್ಬೋಧೆವಿಲ್ಲದೆ, ಸುಬೋಧವಾಗಿಯೂ ಸುಲಭವಾಗಿಯೂ ಇರುತ್ತದೆ. ಈ ಕಾರಣದಿಂದ ನಾವು ಇವನ ಗ್ರಂಥಕ್ಕೆ ಹೆಚ್ಚು ಮಾನ ಕೊಡುತ್ತೇವೆ”[23]

ಕೆ. ವೆಂಕಟರಮಣಶಾಸ್ತ್ರೀ ಸೂರಿಯವರ ಈ ವಿವರಣೆ ಅಡಕವಾಗಿದೆ. ಅಗತ್ಯವಾದ ಮಾಹಿತಿಗಳನ್ನು ಪೂರೈಸಿದೆ ಮತ್ತು ವ್ಯಾಖ್ಯಾನ ನಿರಪೇಕ್ಷವಾಗಿದೆ. ಪರಮದೇವ ಕವಿಯ ಇತಿವೃತ್ತಕ್ಕೆ ಸಂಬಂಧಿಸಿದಂತೆ ಮುಖ್ಯ ಸಂಗತಿಗಳು ಇಲ್ಲಿ ಸೇರ್ಪಡೆಯಾಗಿವೆ. ಕವಿಯ ಹೆಸರು, ಸ್ಥಳ, ಕೇಡಲಸರ, ಭೀಮನಕೋಣೆ, ಕವಿಯ ಪೂರ್ವಿಕರು, ಅವರ ಮತ್ತು ಕವಿಯ ವೃತ್ತಿ, ಪರಿಸರ – ಇವಿಷ್ಟೂ ಇದರಲ್ಲಿ ನಿರೂಪಿತಗೊಂಡಿದೆ. ಅಲ್ಲದೆ ಈ ಅಧ್ಯಾಯದ ಆರಂಭದಲ್ಲಿಯೇ ನಾವು ಕವಿಯ ಕಾವ್ಯದಿಂದ ಉದಾಹರಿಸಿದ ಪದ್ಯಗಳ ಸಾರವೂ ಇದಕ್ಕೆ ಮತ್ತಷ್ಟು ಉಪಷ್ಟಂಬಕವಾಗಿದೆ. ಇಲ್ಲಿಯೇ ಪ್ರಸ್ತಾಪಿಸಬೇಕಾದ ಇನ್ನೊಂದು ವಿಷಯವೆಂದರೆ, ಕವಿಚರಿತೆಕಾರರು ಕೊಟ್ಟಿರುವ ಪರಮದೇವ ಕವಿಯ ಪರಿಚಯ ಮಾಹಿತಿಯನ್ನು ವೆಂಕಟರಮಣಶಾಸ್ತ್ರಿಯವರ ಪ್ರಸ್ತಾವನೆಯಿಂದ ಸಂಗ್ರಹಿಸಲಾಗಿದೆಯೆಂಬುದು.[24]

ಈಗ ಮೇಲಿನ ವಿಷಯಗಳಿಗೆ ಪೂರಕವಾಗಿ ಸಿಗುವ ಇನ್ನಷ್ಟು ಹೊಸ ಸಂಗತಿಗಳನ್ನು ಈ ವಿವರಣೆಗೆ ಕೂಡಿಸಿದರೆ ಅಲ್ಲಿಗೆ ಪರಮದೇವ ಕವಿಯ ಇತಿವೃತ್ತಕ್ಕೊಂದು ಸಮಗ್ರತೆಯ ಚೌಕಟ್ಟು ಕಟ್ಟಿದಂತಾಗುತ್ತದೆ.[25]

ಕವಿ ಪರಮಯ್ಯನ ಮಡದಿಯ ಹೆಸರು ಭಾಗೀರಥಮ್ಮ. ಇವರಿಗೆ ಶಂಕರ, ಕೃಷ್ಣ ಎಂಬ ಇಬ್ಬರು ಗಂಡುಮಕ್ಕಳು. ಎರಡನೆಯ (ಅಂದರೆ ಕಿರಿಯ) ಮಗ ಕೃಷ್ಣನ ಹೆಂಡತಿ ಮತ್ತು ಮಕ್ಕಳು ಬೇಗ ವಿಧಿವಶರಾದರೆಂದು ತಿಳಿದುಬರುತ್ತದೆ. ಹಿರಿಯ ಮಗ ಶಂಕರ(ಯ್ಯ)ನ ವಂಶದವರು ಉಳ್ಳೂರು, ಸಂಪಿಗೆಸರ ಮೊದಲಾದ ಸ್ಥಳಗಳಲ್ಲಿದ್ದಾರೆ. ಶಂಕರಯ್ಯನೂ ತಂದೆಯಂತೆ ಒಬ್ಬ ಕವಿಯಾಗಿದ್ದು, ‘ಪಂಚತಂತ್ರ’ ಕಾವ್ಯ ರಚಿಸಿದ್ದನೆಂದು ಹೇಳುತ್ತಾರೆ. ಇಂದಿಗೂ ಪರಮದೇವಕವಿಯ ವಂಶದವರೆಂದು ಹೇಳುವ ಪರಮೇಶ್ವರಯ್ಯನವರ ಮನೆಗೆ ನಾನು, ನನ್ನ ಮಗಳು ಆರತಿ ಶ್ರೀ ಮಹಾಬಲೇಶ್ವರ ಭಟ್ಟರ ಜೊತೆಯಲ್ಲಿ ಭೇಟಿಕೊಟ್ಟಾಗ ಪರಮದೇವ ಕವಿ ಬಳಸುತ್ತಿದ್ದ ಕಂಠ, ವ್ಯಾಸಪೀಠವನ್ನು ನೋಡಿದೆವು. ಆತ ಪ್ರತಿಕಾರನಾಗಿದ್ದನೆನ್ನುವುದಕ್ಕೆ ಅವರ ಮನೆಯಲ್ಲಿರುವ ಕೆಲವು ಓಲೆಗರಿ ಪ್ರತಿಗಳು ಇಂದಿಗೂ, ಸಾಕ್ಷಿಯಾಗಿವೆ. ಪರಮೇಶ್ವರಯ್ಯನವರಿಗೆ ತನ್ನ ವಂಶಜರಾದ ಪರಮದೇವನ ಬಗೆಗೆ ಹೆಚ್ಚಿನ ಗೌರವವಿದೆ. ಕವಿಯ ಮನೆತನದವರು ನಾವು ಎನ್ನುವ ಹಿರಿಮೆ ಅವರಲ್ಲಿದೆ. ‘ಪರಮದೇವಕವಿಯ ಹಿಂದಿನ ಮನೆತನದವರಂತೆ ತೋಟ-ಬೇಸಾಯಗಾರಿಕೆ ಇವರದು. ಆದರೆ ಪರಮೇಶ್ವರಯ್ಯನವರ ಮಕ್ಕಳು ಪದವೀಧರರಾಗಿ ಬೇರೆ ಹುದ್ದೆಗಳನ್ನು ಕೈಗೊಂಡಿದ್ದಾರೆ. ಪರಮೇಶ್ವರಯ್ಯನವರು ಇಂದಿಗೂ ಓಲೆಗರಿ ಪ್ರತಿಗಳಿಂದ ನೇರವಾಗಿ, ಸರಾಗವಾಗಿ ಓದುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ತಮಗೆ ಉಪಲಬ್ಧವಿದ್ದ ಸಾಮಗ್ರಿಗಳ ಸಹಾಯದಿಂದ ಪರಮದೇವ ಕವಿಯ ವಂಶಾವಳಿಯನ್ನು ರೂಪಿಸಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ತುರಂಗ ಭಾರತದ ಎರಡನೆಯ ಪರಿಷ್ಕೃತ ಮುದ್ರಣದ ಪೀಠಿಕೆಯಲ್ಲಿ ಅದರ ಸಂಪಾದಕರಾದ ಶ್ರೀ ಕೆ. ಜಗನ್ನಾಥಶಾಸ್ತ್ರಿಯವರು ಕೊಟ್ಟಿರುವುದು[26] ಈ ರೀತಿಯಾಗಿದೆ.

[1] ಪರಮದೇವಕವಿ : ತುರಂಗಭಾರತ :

೧. (ಸಂ) ಕೆ. ವೆಂಕಟರಮಣಶಾಸ್ತ್ರಿ ಸೂರಿ, ಮುಂಬಯಿ ೧೮೮೯, ಪು. ೨

೨. (ಸಂ) ಕೆ. ಜಗನ್ನಾಥಶಾಸ್ತ್ರಿ, ಕಸಾಪ, ಬೆಂಗಳೂರು, ೧೯೮೬, ಪು. ೬

ಮೊದಲನೆಯ ಮುದ್ರಣದ ಹಾಳೆಗಳು ನೂರು ವರ್ಷದಷ್ಟು ಹಳೆಯದಾಗಿ ಜೀರ್ಣಾವಸ್ಥೆಯಲ್ಲಿವೆ, ಮುಟ್ಟಿದರೆ ಪುಡಿಪುಡಿಯಾಗುತ್ತವೆ, ಅದರಿಂದ ಇನ್ನು ಮುಂದೆ ಪುಟಸಂಖ್ಯೆಯನ್ನು ಹೊಸ       ಮುದ್ರಣದಿಂದ ಕೊಡಲಾಗುವುದು.

[2] ಪ್ರಾಚೀನ ಕವಿಗಳಲ್ಲಿ ಕೆಲವರು ಹೀಗೆ ತಮ್ಮ ವಿನಯಗುಣವನ್ನು ಪ್ರಕಟಿಸಿದ್ದಾರೆ. ‘ಕೃಷ್ಣ ತಿದ್ದಿ ನಡೆಸುವ ಚಿತ್ರದ ಹಲಗೆಗಾರನು ನುಡಿಸಿದಂತಾನು’ ಎಂಬ ಇಲ್ಲಿನ ಮಾತು ‘ವೀರನಾರಾಯಣನೆ   ಕವಿ ಲಿಪಿಕಾರ ಕುಮಾರ ವ್ಯಾಸ’ ಎಂಬ ಹೇಳಿಕೆಯನ್ನು ನೆನಪಿಗೆ ತರುತ್ತದೆ.

[3] ನಮ್ಮ ಕವಿಗಳು ಮಾತೃಭಾಷೆಯ ಅಭಿಮಾನ ಕುರಿತು ಹೀಗೆ ಹೇಳಿರುವುದು ಅಪರೂಪ.

[4] ಗೋಕಾಕ್ ಭಾಷಾ ಚಳುವಳಿಯ ಹಿನ್ನೆಲೆಯಲ್ಲಿ ಈ ಹೇಳಿಕೆಗೆ ಇರುವ ಮಹತ್ವವನ್ನು ಮತ್ತು ಪ್ರಸ್ತುತತೆಯನ್ನು ಮನಗಾಣಬಹುದು.

[5] ಈ ಹೆಸರಿನ ಹಿನ್ನೆಲೆ ಕುರಿತು ಮುಂದೆ ಯಥೋಚಿತ ಸ್ಥಳದಲ್ಲಿ ವಿವರಣೆ ಬರುತ್ತದೆ.

[6] ಹಿಂದಿನ ಕವಿಗಳಲ್ಲಿ ಆತ್ಮ ವೃತ್ತಾಂತವನ್ನು ಕೊಟ್ಟವರು ಕಡಿಮೆ. ಅನೇಕರು ಸ್ವಂತ ವಿಷಯದಲ್ಲಿ ದಿವ್ಯಮೌನ ವಹಿಸಿದ್ದಾರೆ; ಕುಮಾರವ್ಯಾಸನ ವಿಷಯ ಏನೇನೂ ತಿಳಿಯದು. ಪಂಪ ರನ್ನ ಮೊದಲಾದವರು ಅಗತ್ಯವಾದಷ್ಟು ಮಾಹಿತಿಯನ್ನಾದರೂ ಕೊಟ್ಟಿದ್ದಾರೆ; ಪರಮದೇವನೂ ಈ ವರ್ಗಕ್ಕೆ ಸೇರಿದ್ದಾನೆ.

[7] ಪೂರ್ವೋಕ್ತ : (ತು.ಭಾ. ೨)

[8] ಕವಿಚರಿತೆ ; ಸಂಪುಟ ೩ ; ಕಸಾಪ ೧೯೭೪ ; ಪುಟ ೧೩೪-೧೩೫

[9] ೧೯ನೆಯ ಶತಮಾನ ಹಾಗೂ ೨೦ನೆಯ ಶತಮಾನದ ಆರಂಭದವರೆಗೆ ಮುಂಬಯಿಯ ಆಡಳಿತದಲ್ಲಿ ಕನ್ನಡಕ್ಕೆ ಮನ್ನಣೆಯಿತ್ತು. ಇಂದಿಗೂ ಬೆಂಗಳೂರನ್ನು ಬಿಟ್ಟರೆ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಇರುವ ಮಹಾನಗರ ಮುಂಬಯಿ ಎಂದು ಹೇಳುತ್ತಾರೆ.

[10] ಕವಿಚರಿತೆಯ ಮೂರನೆ ಸಂಪುಟದ ಪರಿಷ್ಕೃತ ಮುದ್ರಣವನ್ನು ಕಸಾಪ ಮಾಡುತ್ತಾ ಬಂದಿದೆ. ಅ.ಟಿ. ೮ರಲ್ಲಿ ಹೇಳಿರುವುದನ್ನು ನೋಡಿ.

[11] ಮುಂಬಯಿಯಲ್ಲಿ ಕಳೆದ ಶತಮಾನದಲ್ಲೇ ಕನ್ನಡಿಗರ ಮುದ್ರಣಾಲಯ ಇಷ್ಟು ದೊಡ್ಡ ಗ್ರಂಥವನ್ನು ಪ್ರಕಟಿಸುವಷ್ಟು ಸಜ್ಜಾಗಿತ್ತೆಂಬುದು ಗಮನಿಕೆಗೆ ತಕ್ಕುದಾಗಿದೆ.

[12] ಹಿಂದೆ ಅಚ್ಚಾಗುತ್ತಿದ್ದ ಪುಸ್ತಕಗಳ ಮೇಲೆ ಪುಸ್ತಕದ ಬೆಲೆಯೊಂದಿಗೆ ಅಂಚೆವೆಚ್ಚ ಎಷ್ಟೆಂಬುದನ್ನೂ ನಮೂದಿಸುತ್ತಿದ್ದುದುಂಟು. ಇದೇ ಅವಧಿಯಲ್ಲಿ ಬೆಂಗಳೂರಿನ ತೋವಿನಕೆರೆ ರಾಯಂಣವಾಗ್ಮಿ, ಚಾಮರಾಜನಗರದ ಪದ್ಮರಾಜ ಪಂಡಿತ ಇವರು ಪ್ರಕಟಿಸಿರುವ ಪುಸ್ತಕಗಳ ಮೇಲೂ ಟಪಾಲು ಹಾಸಲುಖರ್ಚು ಇಂತಿಷ್ಟು ಎಂಬ ಉಲ್ಲೇಖ ಸಿಗುತ್ತದೆ. ಆಗಿನ ಪುಸ್ತಕಗಳ ಮುಖಬೆಲೆ ರೂ. (ಪಾಯಿ), ಆಣೆ, ಪೈ (ಕಾಸು) ಲೆಕ್ಕದಲ್ಲಿ ಇರುತ್ತಿತ್ತು.

[13] ಷಟ್ಪದಿ ಪದ್ಯಗಳನ್ನು ಕ್ರಮವಾಗಿ ಒಂದರ ಕೆಳಗೆ ಒಂದರಂತೆ ಆರು ಸಾಲುಗಳಲ್ಲೂ ಸಾಂಗತ್ಯವನ್ನು ನಾಲ್ಕು ಸಾಲುಗಳಲ್ಲೂ ಮುದ್ರಿಸುವುದು ವಾಡಿಕೆ. ಆದರೆ ಬೃಹತ್ ಕಾವ್ಯಗಳನ್ನು ಪ್ರಕಟಿಸುವಾಗ ಪುಟದ ಮಿತಿಗಾತಿ ಆರು ಸಾಲುಗಳನ್ನು ನಾಲ್ಕು ಸಾಲಿಗೂ, ನಾಲ್ಕು ಸಾಲಿನ ಸಾಂಗತ್ಯಪದ್ಯವನ್ನು               ಎರಡು ಸಾಲಿಗೂ ಅಳವಡಿಸಿ ಮುದ್ರಿಸುತ್ತಿದ್ದ ಪರಿಪಾಟಿಯೂ ಕಂಡು ಬರುತ್ತದೆ. ಉದಾಹರಣೆಗೆ ಚಂದ್ರಸಾಗರವರ್ಣಯ (ಬ್ರಹ್ಮಣಾಂಕನ) ಜಿನಭಾರತ, ಜಿನರಾಮಾಯಣ, ಜಿನಮುನಿಕಾವ್ಯಗಳನ್ನು ತೋವಿನಕೆರೆಯ ರಾಯಂಣ ವಾಗ್ಮಿ ಮುದ್ರಿಸಿದ್ದಾನೆ; ರತ್ನಾಕರವರ್ಣಿಯ ಭರತೇಶ ವೈಭವ ಸಾಂಗತ್ಯ ಕಾವ್ಯದ ಪದ್ಯಗಳನ್ನು ನಾಲ್ಕು ಸಾಲುಗಳಿಂದ ಎರಡೆರಡು ಸಾಲಿಗಿಳಿಸಿ ಮುದ್ರಿಸಲಾಗಿದೆ.

[14] ೧೮೮೯ರ ವೇಳೆಗೆ ಕನ್ನಡ ಪುಸ್ತಕಗಳಲ್ಲಿ ಇಂಗ್ಲಿಷನ್ನು ಬಳಸುವ ರೂಢಿ ಆರಂಭವಾಗಿತ್ತೆಂಬುದನ್ನು ಗಮನಿಸಬೇಕು.

[15] ಅವರ ಸಮಕಾಲೀನ ಪ್ರಕಟಣೆಗಳನ್ನೂ ಗಮನಿಸಬೇಕು. ಕೆಲವರು ಈ ವಿಚಾರದಲ್ಲಿ ಯಾವ ಮುತುವರ್ಜಿಯನ್ನೂ ತೋರಿಸುತ್ತಿರಲಿಲ್ಲ.

[16] ಇನ್ನೂ ಹೆಚ್ಚಿನ ಮಾಹಿತಿಗೆ ಆಸಕ್ತರು ಅವಶ್ಯ ಓದಬೇಕಾದ ಪುಸ್ತಕ ಡಾ. ಶ್ರೀನಿವಾಸ ಹಾವನೂರರ      ‘ಹೊಸಗನ್ನಡ ಅರುಣೋದಯ’, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೪, ಪುಟ ೨೮೯-೧೯೨

[17] ಕರ್ಕಿ ಎಂಬ ಹೆಸರಿನ ಗ್ರಾಮಗಳು ಕೆಲವಾರಿವೆ ; ಇಲ್ಲಿ ಕರ್ಕಿ ಎಂಬ ಊರು ಉತ್ತರ ಕನ್ನಡ ಜಿಲ್ಲೆಗೆ ಸೇರಿದ್ದು.

[18] ನಿರಂಜನ ; ಪುಷ್ಪಹಾರ, ಪುಟ ೨೧೦-೨೧೨

[19] ಶಂಕರ ಸಂಹಿತೆ : (ಸಂ) ರಾಮಚಂದ್ರ ಉಚ್ಚಿಲ, ಶ್ರೀಮದ್ಭಾರತ ಮಂಡಳಿ, ಮುಂಬಯಿ, ೧೯೮೧, ಅವತರಣಿಕೆ, ಪುಟ ೧

[20] ಅದೇ, ಪುಟ ೧ (ಶಂಕರ ಸಂಹಿತೆ)

[21] ಈ ಹೆಸರನ್ನಿಡಲು ಅವರಿಗೆ ಯಾವ ಆಧಾರ ದೊರೆತಿತ್ತೆಂಬುದು ತಿಳಿಯದು.

[22] ಅವರು ಕಳೆದ ಶತಮಾನದಲ್ಲಿಯೇ ಗ್ರಂಥ ಸಂಪಾದನೆಗೆ ಬಳಸಿಕೊಂಡ ಹಸ್ತ ಪ್ರತಿಗಳ ವಿಚಾರವಾಗಿ ಇಷ್ಟಾದರೂ ಮಾಹಿತಿ ಕೊಟ್ಟಿದ್ದಾರೆ ; ಅವರ ಸಮಕಾಲೀನ ಪ್ರಕಟಣೆಯಲ್ಲಿ ಕೆಲವರು ಈ ವಿವರವನ್ನೂ ನೀಡಿಲ್ಲ.

[23] ಪೂರ್ವೋಕ್ತ, ತು.ಭಾ. ೧ ಪುಟ ೩-೪, ಇಷ್ಟು ಉದ್ದನೆಯ ಉದ್ಧೃತಕ್ಕೆ ಇನ್ನೊಂದು ಕಾರಣವಿದೆ; ಕನ್ನಡ ಭಾಷಾ ಶೈಲಿಯ ಅಧ್ಯಯನಕ್ಕೆ ಇದು ಉಪಯುಕ್ತವಾದ ಮಾಹಿತಿಗಳನ್ನೊಳಗೊಂಡಿದೆ.

[24] ಕವಿಚರಿತೆಕಾರರು ಹಸ್ತಪ್ರತಿಗಳನ್ನೇ ಅಲ್ಲದೆ ಪ್ರಕಟಿತ ಪುಸ್ತಕಗಳನ್ನು ಅಭ್ಯಸಿಸಿ ವಿಷಯವನ್ನು ಗ್ರಹಿಸುತ್ತಿದ್ದರು.

[25] ಕವಿಯೇ ಹೇಳಿರುವ ಮಾಹಿತಿಯೊಂದೇ ನಮಗೆ ಏಕೈಕ ವಿಶ್ವಾಸಾರ್ಹ ಆಧಾರ. ಅದರ ಜತೆಗೆ ರಂಗಭಾರತ ಕಾವ್ಯದ ಇಬ್ಬರು ಸಂಪಾದಕರ ವಿವರಣೆ ಪೂರಕವಾಗಬಹುದಷ್ಟೆ. ಕಲ್ಪನೆ, ಕಟ್ಟು ಕಥೆ ಹುಟ್ಟಬಹುದು. ಅದಕ್ಕೆ ಬಲ, ಬೆಲೆ ಬರಬೇಕಾದರೆ ಚಾರಿತ್ರಿಕ ದಾಖಲೆಗಳೂ ದೊರೆಯಬೇಕು.

[26] ಸಂಪಾದಕರು ಸಾಕಷ್ಟು ಮಾಹಿತಿ ಸಂಗ್ರಹಿಸಿ ಉಪಕರಿಸಿದ್ದಾರೆ. ನೋಡಿ, ಪೂರ್ವೋಕ್ತ, ಪುಟ ೮ ತು.ಭಾ.೨)