ತನ್ನ ಕಾವ್ಯವನ್ನು ನಡೆಯಿಸಿಕೊಂಡು ಹೋಗುವಾಗ ಶಾಂತಿನಾಥನು ಪಂಪಮಹಾಕವಿಯನ್ನೇ ಗುರುವೆಂದು ಆದರ್ಶವಾಗಿಟ್ಟುಕೊಂಡು ಅವನ ಜಾಡಿಯಲ್ಲಿ ನಡೆದಿದ್ದಾನೆ. ಕಾವ್ಯದ ಆರಂಭದಲ್ಲೇ ಪಂಪನನ್ನು ಮುಕ್ತಕಂಠದಿಂದ ಕೊಂಡಾಡುತ್ತಾ ಅವನ ಪದತಲಕ್ಕೆ ತನ್ನ ಸ್ತವ ಕುಸುಮಾಂಜಲಿಯನ್ನು ಶಾಂತಿನಾಥ ಹೀಗೆ ಅರ್ಪಿಸಿದ್ದಾನೆ :

            ರವಿಯಿಂದೆಂತು ತಮಂ ಮೃಗಾಧಿಪನಿನೆಂತುಗ್ರದ್ವಿಪಂ ತೀವ್ರವಾ
            ಯುವಿನೆಂತಭ್ರಕುಳಂ ತೆರಳ್ವ ತೆಱದಿಂ ಮಿಥ್ಯಾರಜಂ ತೂಳ್ದು
            ಱುವಿನಂ ನಿರ್ಮಳ ಧರ್ಮಮೊಂದಿ ನಿಲೆ ಪೇೞ್ದ ಪಂಪನತ್ಯಂತಸೌ
            ಷ್ಠವದಿಂದಾದಿ ಪುರಾಣಮಂ ಬುಧಜನ ಪ್ರಸ್ತುತ್ಯ ಕಲ್ಯಾಣಮಂ || ೩೭ ||

ಇಷ್ಟೇ ಅಲ್ಲದೆ “ಕವಿತೆಯ ಬಲ್ಮೆಯೊಳಮೀ ಮಹೀಮಂಡಲದೊಳ್ ಕವಿ ಪಂಪನ… ದೊರೆಗಮೊರೆಗಮೇಂ ಬಂದಪರೇ?” ಎಂಬ ಕೊಂಡಾಟದ ನುಡಿ ಬೇರೆ ! ಇಂತು ಶಾಂತಿನಾಥನು ಪಂಪನನ್ನು ಹೊಗಳಿದ ಮೇಲೆ ಮೆಲ್ಲಗೆ ತನ್ನ ಕಾವ್ಯದ ರಥವನ್ನು ಪಂಪನ ದಾರಿಗೆ ತಿರುಗಿಸಿಕೊಳ್ಳುವನು. ಆದಿಮಹಾಕವಿ ಪಂಪ ಆದಿಪುರಾಣದ ಆರಂಭದಲ್ಲಿ –

            ಇದುವೆ ಸುಕವಿ ಪ್ರಮೋದ
            ಪ್ರದಮಿದುವ ಸಮಸ್ತ ಭವ್ಯಲೋಕ ಪ್ರಮುದ
            ಪ್ರದಮೆನೆ ನೆಗೞ್ದಾದಿ ಪುರಾ
            ಣದೊಳಱೆವುದು ಕಾವ್ಯಧರ್ಮಮಂ ಧರ್ಮಮುಮಂ

ಎಂದು ಹೇಳೀದ್ದಾನೆ. ಶಾಂತಿನಾಥನಿಗೆ ಈ ಹೊಂದಾಣಿಕೆಯ ಮಹತ್ವ ತಿಳಿದು ತಾನೂ ಇದರಂತೆ (ಜಿನ) ಮತ ಧರ್ಮ – ಕಾವ್ಯ ಧರ್ಮಗಳೆರಡರ ಅಪೂರ್ವ ಸಾಮರಸ್ಯವನ್ನು ಸಾಧಿಸಬೇಕೆನ್ನಿಸಿತು. ಆದುದರಿಂದ ತನ್ನ ಕಾವ್ಯಾರಂಭದಲ್ಲೇ ಈ ಸಂಗಮವನ್ನು ಸಾಧಿಸುವುದಾಗಿ ಸಾರಿಹೇಳಿದ್ದಾನೆ. ಆ ಘೋಷಣೆ ಕೇಳಿದರೆ ಅದು ಪಂಪನ ಪ್ರತಿಧ್ವನಿಯಂತೆಯೇ ಇದೆ.

            ಸುಕವೀಂದ್ರರುಂ ವಿನಯ
            ಪ್ರಕರಮುಮುೞಿದವಱೊಳೇನನಿಂ ನೋಡುವರೀ
            ಸುಕುಮಾರ ಚರಿತದೊಳ್ ನೋ
            ೞ್ಕೆ ಕಾವ್ಯ ಧರ್ಮಮುಮನಮಳ ಜಿನಧರ್ಮಮುಮಂ || ೬೨ ||

ಹೀಗೆಯೇ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹುದಾದರೂ, ಸ್ಥಳಾಭಾವದಿಂದ ಹಾಗೆ ಮಾಡದೆ ಇನ್ನು ಒಂದು ಸನ್ನಿವೇಶದ ನಿರ್ದಶನವನ್ನು ಕೊಟ್ಟು ಶಾಂತಿನಾಥನ ಮೇಲಿರುವ ಪಂಪನ ಪ್ರಭಾವವನ್ನು ಸ್ಪಷ್ಟಪಡಿಸಬಹುದು. ಆದಿಪುರಾಣದಲ್ಲಿ ನೀಲಾಂಜನೆಯು ನೃತ್ಯಮಾಡುತ್ತಾ ಆಯು ಮುಗಿದು ಅದೃಶ್ಯಳಾದಾಗ ಪುರುದೇವ ಸಂಸಾರದ ಅನಿತ್ಯತೆಯನ್ನು ಕುರಿತು ಹೀಗೆ ಚಿಂತಿಸುತ್ತಾನೆ :

            ಎನಿತಾನುಮಂಬುನಿಧಿಗಳ
            ನನೇಕ ನಾಕಂಗಳಲ್ಲಿ ಕುಡಿದುಂ ಪೋಯ್ತಿ
            ಲ್ಲೆನಗೆ ನರಭೋಗಮೆಂಬೀ
            ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ    || ೮೧ ||

ಈ ಭಾಗವನ್ನು ಹೆಚ್ಚುಕಡಿಮೆ ಇದೇ ರೀತಿಯಲ್ಲಿ ಶಾಂತಿನಾಥನೂ ತನ್ನ ಕಾವ್ಯದಲ್ಲಿ ಪ್ರತಿಧ್ವನಿಸಿದ್ದಾನೆ. ಆ ಪದ್ಯ ಇಂತಿದೆ :

            ಅನುಪಮ ದಿವಿಜ ಸುಖಾಮೃತ
            ವನನಿಧಿಯಂ ಪೀರ್ದು ತೃಷ್ಣೆ ಪೋಗದೆ ಮಾಯ್ದೀ
            ಮನುಜ ಸುಖಮೆಂಬ ಮಂಜಿನ
            ಪನಿಪುಲ್ಲ ನಕ್ಕೆ ತೃಷ್ಣೆ ತಾಂ ಪೋದಪುದೇ  || ೧೧೮೧ ||

ಹೀಗೆ ತನ್ನ ಕಾವ್ಯಸೌಧದ ಸೌಂದರ್ಯವನ್ನು ಹೆಚ್ಚಿಸಲು ಹಲವು ಕಡೆಯಿಂದ ಶಾಂತಿನಾಥ ಸೂಚನೆಗಳನ್ನೂ, ಹೇಳಿಕೆಗಳನ್ನೂ ಸ್ವೀಕರಿಸಿದ್ದಾನೆ. ಪಂಪಕವಿ ವ್ಯಾಸ ಜಿನಸೇನರಿಂದ ಸಿದ್ಧವಾದ ವಸ್ತುವನ್ನು ಉಪಯೋಗಿಸಿಕೊಂಡರೂ ತನ್ನ ಪ್ರತಿಭೆಯ ಅಮೃತ ಸ್ಪರ್ಶದಿಂದ ಮೂಲ ಕತೆಯನ್ನು ಇನ್ನೂ ದೇದೀಪ್ಯಮಾನವಾಗಿ ಪ್ರಜ್ವಲಿಸುವಂತೆ ಉಜ್ವಲಗೊಳಿಸಿದ್ದಾನೆ. ರನ್ನಕವಿ ಪಂಪನ ನೆರಳಿನಲ್ಲೇ ತನ್ನ ಪ್ರತಿಭೆಯನ್ನು ಅರಳಿಸಿಕೊಂಡಿದ್ದರೂ ತನ್ನ ಸಹಜ ಗುಣವಾದ ಶಕ್ತಿಯನ್ನು ವಿಶೇಷವಾಗಿ ತೋರಿ, ಮೂಲಕ್ಕೆ ಮೆರುಗು ಇತ್ತಿದ್ದಾನೆ. ವಡ್ಡಾರಾಧನೆಯ ಕರ್ತೃವಿಗೆ ಮೂಲ ಪ್ರಾಕೃತವೊ ಅಥವಾ ಬೇರೆ ಯಾವುದೇ ಆಗಿರಲಿ, ಅಲ್ಲಿಯ ಸುಕುಮಾರಸ್ವಾಮಿ ಕತೆಯನ್ನು ಶಾಂತಿನಾಥ ಕವಿ ಬಳಸಿಕೊಂಡು ತನ್ನ ಸಹಜ ಕಲ್ಪನೆ ಶೈಲಿಗಳಿಂದ ಬೆಳಗಿಸಿದ್ದಾನೆ.

ಸುಕುಮಾರಸ್ವಾಮಿಯ ಕತೆ ಒಂದು ಧಾರ್ಮಿಕ ಕತೆಯಾದರೂ ವಾಸ್ತವವಾಗಿ ಇದು ಜೀವಂತಸತ್ತ್ವದಿಂದ ರಸಸಂಪುಷ್ಟವಾಗಿದೆ. ಅದರಲ್ಲಿಯೂ ಸರ್ವಾಂಗ ಸುಂದರವಾದ ಈ ಕಾವ್ಯದ ಪಾತ್ರಗಳು ಅತ್ಯಂತ ಮನೋಜ್ಞವಾಗಿವೆ. ಶಾಂತಿನಾಥ ಕವಿ ಪಾತ್ರ ಚಿತ್ರಣದಲ್ಲಿ ತೀರ ಪರಿಣತ ಕವಿಯೆನ್ನಬಹುದು. ಅವನು ಈ ನೈಪುಣ್ಯವನ್ನು ಕಾವ್ಯದ ಪ್ರಮುಖ ಪಾತ್ರಗಳಲ್ಲಿ ಹೇಗೆ ಬಿತ್ತರಿಸಿದ್ದಾನೆಂಬುದನ್ನು ನಾಲ್ಕೈದು ಪಾತ್ರಗಳನ್ನು ವಿಮರ್ಶಿಸುವುದರ ಮೂಲಕ ಪರಿಶೀಲಿಸಬಹುದು.

ಯಶೋಭದ್ರೆ

ಕಾವ್ಯದ ಕೊನೆಕೊನೆಗೆ, ಅಂದರೆ ಒಂಬತ್ತು ಮತ್ತು ಹತ್ತನೆಯ ಆಶ್ವಾಸಗಳಲ್ಲಿ ಸುಕುಮಾರನ ತಾಯಿಯಾದ ಯಶೋಭದ್ರೆಯ ಪಾತ್ರ ಬಂದಿದೆ. ಯಶೋಭದ್ರೆ ಸಹಜ ಸುಂದರಿ, ಕುಲಲಲನೆ. ರೂಪವತಿಯೂ, ಲಾವಣ್ಯವತಿಯೂ, ವಿಲಾಸವತಿಯೂ ಆದ ಆಕೆ ಮದನನ ಮಂಗಳ ರಾಜ್ಯಲಕ್ಷ್ಮಿಯಂತೆ ಸೊಗಯಿಸಿ ಮನವನ್ನು ಸೆರೆಹಿಡಿಯುವಂತಿದ್ದಳು.

ಉದಾ:  ಮೊಗಮಂ ತಾವರೆಗೆತ್ತು, ಕಣ್ಮಲರ್ಗಳಂ ನೀಲೋತ್ಪಲಂಗೆತ್ತು ಸೆ
            ಳ್ಳುಗುರಂ ಕೇದಗೆಗೆತ್ತು ಹಸ್ತತಳಮಂ ಸತ್ಪಲ್ಲವಂಗೆತ್ತು
            ನ್ಮೃಗಶಾಬಾಕ್ಷಿಯನಿಂತು ಮನ್ಮಥವನಶ್ರೀಗೆತ್ತು ಭೃಂಗಂಗಳೋ
            ಲಗಿಸುತ್ತಿರ್ದಪುವೆಂಬಿನಂ ಸೊಗಯಿಕುಂ ನೀಳಾಳಕಂ ಕಾಂತೆಯಾ ||

ಆದರೂ ಶಾಂತಿನಾಥನ ಮಾತೃಭಕ್ತಿಯೇ ಈಕೆಯಲ್ಲಿ ಸಮಾವೇಶಗೊಂಡಿದೆಯೋ ಎಂಬಂತೆ ಇವಳ ವ್ಯಕ್ತಿ ಚಿತ್ರವನ್ನು ಕವಿ ಅವಿಸ್ಮರಣೀಯವಾಗಿ ರೂಪಿಸಿದ್ದಾನೆ. ಯಶೋಭದ್ರೆಯ ಶ್ರೀಮಂತಿಕೆಯ ಔನ್ನತ್ಯ, ಪುತ್ರದೋಹಳದ ತೀವ್ರತೆ ವಿಶೇಷವಾಗಿ ವ್ಯಕ್ತವಾಗಿದೆ, ಸ್ಪುಟವಾಗಿ ಪ್ರಕಾಶಗೊಂಡಿದೆ.

            ಆಡುವ ನಲಿದಾಡುವ ನಡೆ
            ನೋಡುವ ಕೊರಳಪ್ಪಿಕೊಳ್ವ ಭಕ್ಷ್ಯಾದಿಗಳಂ
            ಬೇಡುವ ಮಕ್ಕಳ ಬಾಳ
            ಕ್ರೀಡೆಗಳಂ ನೋಡುತಿರ್ಪುದೊಂದಿರವಲ್ತೇ ||

            ಎನಿತೊಳವು ಬಾಳಕೇಳಿಗ
            ಳನಿತಱೊಳಂ ಮುದ್ದುವಡೆದು ಮನಯಂಗಣದೊಳ್
            ಮನಮೊಸೆದಾಡುವ ಮಕ್ಕಳ
            ವಿನೋದಮಂ ಕಾಣ್ಬ ದಿವಸಮೆಂದಾದಪುದೋ ||

ಇವಳ ಪಾತ್ರದಲ್ಲಿ ಲೋಕದ ಎಲ್ಲ ತಾಯಂದಿರ ಸಹಜ ಮಾತೃ ವಾತ್ಸಲ್ಯ ಕೋಡಿವರಿದಿದೆ ಯೆನ್ನಬಹುದು. ತನ್ನ ಮಗ ಸುಕುಮಾರನನ್ನು ಕಂಡರೆ ಅವಳ ಮಮತೆ ಉಕ್ಕಿ ಹರಿಯುತ್ತದೆ. ಪುತ್ರ ದರ್ಶನದಿಂದ, ಯತಿಯ ಆದೇಶದಂತೆ ತನ್ನ ಪತಿ ಮುನಿಯಾದಾಗ ತಾನೂ ಕಂತಿಯಾಗಿ ಹೊರಡದೆ ಮಗನಿಗಾಗಿ ಮನೆಯಲ್ಲೇ ನಿಂತಳು.

            ಇನಿಯನಗಲ್ದು ಪೋದ ಪೆಱಗಿರ್ಪುದು ಸೂೞೆನಗಲ್ತು ಪೋಪೊಡಂ
            ತನಯ ವಿಮೋಹಮೆಂಬ ನಿಗಳಂ ತೊಡರ್ದಿರ್ದಪುದೇವೆನೆಂದು ಕಾ
            ಮಿನಿ ನಿಜಜೀವಿತೇಶ್ವರನಗಲ್ಕೆಯೊಳಂ ತನುಜನ್ಮಮೋಹ ಬಂ
            ಧನದೊಳೆ ಸಿಲ್ಕಿ ನಿಂದಳೆನೆ ಪುತ್ರವಿಮೋಹಮನಾರೊ ಮೀಱುವರ್ ||

ಯಶೋಭದ್ರೆ ಅತ್ಯಂತ ದಕ್ಷಳಾದ ಯಜಮಾನಿಯೂ ಹೌದು. ಪತಿಯ ನಿರ್ಗಮನಾನಂತರ ಇಡೀ ಕುಟುಂಬದ ಆಗುಹೋಗುಗಳ ಮೇಲ್ವಿಚಾರಣೆ ತನ್ನ ಮೇಲೆ ಬಿದ್ದಾಗಲೂ ಅದನ್ನು ಸಮರ್ಥವಾಗಿ ನಿರ್ವಹಿಸಿದಳು. “ತೊಟ್ಟಿಲು ತೂಗುವ ಕೈ ಮನೆಯನ್ನೂ ಆಳಬಲ್ಲದು – ಬೆಳಗಬಲ್ಲದು” ಎಂಬುದನ್ನು ಸ್ಪಷ್ಟಪಡಿಸಿದಳು. ಅವಳು ಅತಿಥಿ ಸತ್ಕಾರದ ಉತ್ತಮ ಸಂಪ್ರದಾಯವನ್ನು ಹೇಗೆ ಪಾಲಿಸುತ್ತಿದ್ದಳೆಂಬುದಕ್ಕೆ ವೃಷಭಾಂಕ ದೊರೆಯನ್ನು ಉಪಚರಿಸಿದ ಒಂದು ಸಂದರ್ಭ ಸೊಗಸಾದ ದೃಷ್ಟಾಂತ. ಮೂವತ್ತೆರಡು ಜನ ಸೊಸೆಯಂದಿರನ್ನು ಸುಖವಾಗಿ ಬಾಳಿಸಿದಳು. ಅಷ್ಟು ಜನರಲ್ಲಿ ಯಾರೊಬ್ಬರಿಗೂ ಒಲವರವನ್ನು ತೋರದೆ ಎಲ್ಲರಿಗೂ ಸಮಾನವಾದ ಪ್ರೀತ್ಯಾದಾರಗಳಿಂದ ಕಾಣುತ್ತಿದ್ದಳೆಂಬುದಕ್ಕೆ ಆ ಒಂದು ಅಮೂಲ್ಯ ರತ್ನಗಂಬಳಿಯ ಸನ್ನಿವೇಶ ಉತ್ತಮ ಉದಾಹರಣೆಯಾಗಿದೆ.

ವೃಷಭಾಂಕ

ಸುಕುಮಾರನು ಜನಿಸಿದ ನಾಡಿಗೆ ಒಡೆಯನಾದ ವೃಷಭಾಂಕನ ನಿರ್ವಿಕಾರ ಸಮತಾದೃಷ್ಟಿ, ಪ್ರಜಾವಾತ್ಸಲ್ಯ, ಮಾತ್ಸರ್ಯರಹಿತ ಪರಿಶುದ್ಧ ಪ್ರೀತಿ ಮನಂಬುಗುವಂತೆ ವ್ಯಕ್ತವಾಗಿದೆ. ತಾನು ಕೊಂಡುಕೊಳ್ಳಲಾಗದ ರತ್ನಗಂಬಳಿಯನ್ನು ಸುಕುಮಾರನ ಅಂಬಿಕೆಯಾದ ಯಶೋಭದ್ರಾಂಬಿಕೆ ಕೊಂಡುದನ್ನು ಕೇಳಿ ಅಸೂಯಾಪರನಾಗಲಿಲ್ಲ. ಅದರ ಬದಲು ತನ್ನ ರಾಜ್ಯದಲ್ಲಿ ಇಂಥ ಐಶ್ವರ್ಯವಂತರಿರುವರೆಂದು ಕೃತಾರ್ಥನಾದ. ಇದು ಅವನ ಔದಾರ್ಯ ಗುಣದ ಪ್ರದರ್ಶನ. ಆತ ಅಷ್ಟೇ ಕುತೂಹಲಿಯೂ ಹೌದು. ರತ್ನಗಂಬಳಿಯವನನ್ನು ಬಹುಮಾನಿಸಿ ಕಳುಹಿಸಿದ ಮೇಲೆ ಮಾರನೆಯ ದಿನದ ಒಡ್ಡೋಲಗದಲ್ಲಿ ಮತ್ತೆ ಅದನ್ನೇ ಪ್ರಸ್ತಾಪಿಸಿ ಬಹುಶಃ ಇದನ್ನು ಕೊಳ್ಳುವ ಧನಿಕರು ಯಾರು ಇರಲಾರರಲ್ಲವೇ ? ಎನ್ನುತ್ತಾನೆ. ‘ಇದ್ದಾರೆ’ ಎಂದಾಗ ಒಡನೆಯೇ ಯಾರು ಎಂಬ ಪ್ರಶ್ನೆ ಬಾಯಿಂದ ಬರುತ್ತದೆ. ಇಂಥವರು ಎಂದು ತಿಳಿದಾಗ ಅವನ ಕುತೂಹಲಕ್ಕೆ ಗರಿಮೂಡಿ ಹಾರಲು ತವಕಿಸುತ್ತದೆ. ತನಗಿಂತಲೂ ಸಿರಿವಂತರು ತನ್ನ ರಾಜಧಾನಿಯಲ್ಲೇ ತನ್ನ ಪ್ರಜೆಯಾಗಿ ಇದ್ದಾರೆಂದು ತಿಳಿದು ವೃಷಭಾಂಕ ದೊರೆ ಅಸೂಯಾಪರನಾಗಲಿಲ್ಲ, ದ್ವೇಷಭಾವನೆಯನ್ನು ತಳೆಯಲಿಲ್ಲ. ಅದರ ಬದಲು ‘ನನ್ನ ಪ್ರಜೆಗಳಲ್ಲಿ ಅಂಥ ಶ್ರೀಮಂತರೂ ಇರುವರೋ !’ ಎಂದು ಆನಂದಪಡುವನು.

            ಆಂ ಬಿಲಲಾಱದ ವಸ್ತುಗ
            ಳಂ ಬಿಲಲಾರ್ಪನ್ನರೆನ್ನ ಪೊೞಲೊಳ್ ಮಹಿಮಾ |
            ಡಂಬರದಿನಿರ್ಪೊಡಿನ್ನೆ
            ನ್ನಿಂ ಬಿಟ್ಟು ಕೃತಾರ್ಥರಾರೊ ಮಹಿತಳದೊಳ್ ||

ಈ ಸಂದರ್ಭ ವೃಷಭಾಂಕನ ಘನತೆ ಔದಾರ್ಯಗಳನ್ನು ಪ್ರತಿಬಿಂಬಿಸುತ್ತದೆ.

ಸುಕುಮಾರ

ಸುಕುಮಾರ ಈ ಕಾವ್ಯದ ಅಧಿಪತಿ, ನಾಯಕ. ಆದರೆ ಅವನ ಆಗಮನಕ್ಕಾಗಿ ಹನ್ನೆರಡು ಆಶ್ವಾಸಗಳ ಈ ಕಾವ್ಯದಲ್ಲಿ ಮೊದಲ ಒಂಬತ್ತು ಆಶ್ವಾಸಗಳಲ್ಲಿ ಸಿದ್ಧತೆ ನಡೆಯುತ್ತದೆ. ಸುಕುಮಾರನ ಜನನವಾಗುವುದು ಹತ್ತನೆಯ ಆಶ್ವಾಸದಲ್ಲಿ. ಅಲ್ಲಿಯವರೆವಿಗೂ ಅವನ ಜೀವ ಹಾದುಬಂದ ಭವಗಳೆಷ್ಟು? ಆತ ಧರಿಸಿ ಕಳೆದೊಗೆದ ದೇಹಗಳೆಷ್ಟು ? ಕ್ರಮಕ್ರಮವಾಗಿ ಆ ಜೀವ ಅಧಃಪತನದಿಂದ ಮೇಲೆದ್ದು ಉದ್ಧಾರವಾದ ಬಾಳಿನ ಚಿತ್ರ ನಿಜವಾಗಿಯೂ ಒಂದು ವಿಕಾಸದ ಏರೇರಿಕೆಯ ರಮ್ಯಚಿತ್ರ. ಸೃಷ್ಟಿಯ ವಿಚಿತ್ರವೆಲ್ಲವೂ ಆ ಚಿತ್ರದಲ್ಲಿ ಸಮಾವೇಶವಾಗಿದೆ. ಧರ್ಮವನ್ನು ನೆಮ್ಮಿದ ಯಾವುದೇ ಜೀವ ಮೇಲ್ಮೊಗವಾಗಿ ಮಹತ್ತಾದುದಕ್ಕೆ ಜಿಗಿಯಬಹುದೆಂಬುದನ್ನೂ, ಕರ್ಮವನ್ನು ಕಟ್ಟಿಕೊಂಡ ಜೀವ ಎಷ್ಟೇ ಸತ್ತ್ವಶಾಲಿಯಾದರೂ ಕುಸಿಯುತ್ತದೆ ಎಂಬುದನ್ನೂ ಸುಕುಮಾರನ ಹಿಂದಿನ ಭವಗಳ ಏಳು ಬೀಳುಗಳಲ್ಲಿ ಗುರುತಿಸಬಹುದು. ತನ್ನ ಸುತ್ತಲೂ ಸುಖ ಸಂತೋಷ. ಸೌಂದರ್ಯ ಸಿರಿವಂತಿಕೆಗಳ ಸಮುದ್ರವೇ ತುಂಬಿ ಗಂಭೀರವಾಗಿ ಹರಿಯುತ್ತಿದ್ದರೂ ಅದೆಲ್ಲವನ್ನೂ ಕೇವಲ ತೃಣಸಮಾನವಾಗಿ ಕಂಡು ಸುಕುಮಾರನು ತೊರೆದು ಹೋದುದು ಅವನ ದೃಢವಾದ ಮನೋನಿರ್ಧಾರವನ್ನೂ ಮಿಗಿಲಾಗಿ ಅವನ ಮನಸ್ಸಿನ ಪರಿಪಕ್ವ ಸ್ಥಿತಿಯನ್ನೂ ಬಿತ್ತರಿಸುತ್ತದೆ. ಸುಕುಮಾರಭವದ ವೈಭವ ಅನ್ಯಾದೃಶ. ಆತ,

            ಪ್ರಿಯಸತಿಯರೊಳಲ್ಲದೆ ಕೂ
            ಡಿಯಱೆಯನತ್ಯಂತರುಚಿರ ಮಣಿಕುಟ್ಟಿಮ ಭೂ
            ಮಿಯನಲ್ಲದೆ ನೆಲನಂ ಮೆ
            ಟ್ಟಿಯಱೆಯನೇಂ ಗರ್ಭಸುಖಿಯೊ ತತ್ಸುಕುಮಾರಂ ||

ಮಡದಿಯೊಡನೆ ಮಲಗಿದ್ದ ಸುಕುಮಾರನ ಬೆಳಗಿನ ಜಾವದ ನೀರವತೆಯಲ್ಲಿ ದೂರದಿಂದ ಕೇಳಿಬಂದ ಮುನಿಯ ದಿವ್ಯ ಧರ್ಮ ಧ್ವನಿಯನ್ನು ಆಲಿಸಿದೊಡನೆಯೇ ಮಡದಿಯ ಪಕ್ಕದಿಂದ ಮೇಲೆದ್ದು ನೇರವಾಗಿ ವೈರಾಗ್ಯದೆಡೆಗೆ ನಡೆದು ಹೋಗುವ ಘಟನೆ ಬುದ್ಧನ ಬಾಳಿನ ಇಂಥದೇ ಸನ್ನಿವೇಶವನ್ನು ಸಹೃದಯರ ಸ್ಮರಣೆಗೆ ತರುತ್ತದೆ. ಈ ಇಬ್ಬರೂ ಆತ್ಮೋನ್ನತಿಗಾಗಿ, ಮುಕ್ತಿಗಾಗಿ ಮನೆ ಮಡದಿಯರನ್ನು ಬಿಟ್ಟು ಹೊರಟ ಮಹಾತ್ಮರು. ಅವನು ಮಹಾಕಾಳದಲ್ಲಿ ಅಂತರ್ಮುಖಿಯಾಗಿ ತಪಕ್ಕೆ ತೊಡಗಿದಾಗ ಪೂರ್ವಭವದ ಸೇಡಿನಿಂದ ಬಂದ ನರಿ ಮತ್ತು ಮರಿಗಳು ಮೈಯನ್ನು ಬಗೆದು ಅಗಿದು ತಿಂದರೂ, ‘ಒಂದಿದ ಧೈರ್ಯ ಒಂದಿದ ಅಳವು’ ಅಸದಳವಾದುದು.

ಇನ್ನು ಉಳಿದ ಪಾತ್ರಗಳು : ತನ್ನ ತಂದೆಗೆ ಒದಗಿ ಬಂದಿದ್ದ ಆಪತ್ತನ್ನು ಕೇವಲ ತನ್ನ ಚುರುಕು ಬುದ್ಧಿಯ ಬಲದಿಂದ ಬಹಳ ಸುಲಭವಾಗಿ ಹೋಗಲಾಡಿಸಿದ ನಿಶಿತಮತಿ ಸುಮತಿಯ ಪಾತ್ರ ; ಸತ್ಯವಾಕ್ಯ ಪರಿಪಾಲನೆಗಾಗಿ ಅನೇಕ ಸಾಹಸಗಳನ್ನು – ತನ್ನ ಪ್ರಾಣವನ್ನೂ, ಪಾತಿವ್ರತ್ಯವನ್ನೂ ಪಣವಾಗೊಡ್ಡಿ ಸತ್ಯಸಂಧತೆಯನ್ನೇ ಸಾಧಿಸಿದ ಸುಧಾಮೆ; ಇನ್ನೇನು ಧಾರೆಯ ಸುಮುಹೂರ್ತ ಮುಗಿದು ಎಲ್ಲವೂ ಸುಖಾಂತವಾಗಿ ನಡೆಯಬೇಕಾಗಿದ್ದ ಮದುವೆಯ ಮಂಗಳ ಒಸಗೆ ನಿಂತು ತನ್ನ ಬಾಳು ದುರಂತವಾಗಿ ಪರಿಣಮಿಸಿ ಕೊನೆಗೆ ದಾರಿತಪ್ಪಿ ನಡೆದು ಶಿಕ್ಷೆಗೆ ಗುರಿಯಾದ ಮದಾಳಿ : ತನ್ನ ಇಬ್ಬರು ಮಕ್ಕಳ ಅಧಃಪತನ – ಉದ್ಧಾರಗಳನ್ನು ನೋಡಿ ಅದರ ನೋವು ನಲಿವುಗಳೆರಡನ್ನೂ ಜೀವಂತಕಾಲದಲ್ಲೇ ಅನುಭವಿಸಿದ ಕಾಶ್ಯಪಿ; ಅಣುವ್ರತಗಳ ಅನುಷ್ಠಾನದಿಂದಾಗಿ ಅತಿ ಕ್ಷಿಪ್ರದಲ್ಲೇ ಅತಿಶಯ ಪದವಿಯನ್ನು ಪಡೆದ ನಾಗಶ್ರೀ; ಮೈದುನನಿಂದಾದ ಅಪಮಾನದ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಪ್ರತೀಕಾರ ಮನೋಭಾವದಿಂದ ತಿರ್ಯಕ್ ಜಾತಿಯಲ್ಲಿ ಹುಟ್ಟಿ ತೊಳಲಾಡಿದ ಸೋಮದತ್ತೆ; ಎಂಥವರಿಗೂ ಅಸಹ್ಯವನ್ನುಂಟು ಮಾಡುವಂತಿದ್ದ ಅತ್ಯಂತ ವಿಕಾರವಾದ ತನ್ನ ಆಕಾರದಿಂದ ಸಂಕಟ ಪಟ್ಟ ಹುಟ್ಟುಕುರುಡಿ ಮಾತಂಗಿ – ಮೊದಲಾದ ಸ್ತ್ರೀ ಪತ್ರಗಳು ಸಹೃದಯರ ಹೃದಯವನ್ನು ಸೂರೆಗೊಳ್ಳುತ್ತವೆ. ಮಾವನೂ, ಗುರುವೂ ಆದವರಿಗೆ ತನ್ನ ತಮ್ಮನಿಂದಾಗಿ ಅಪಮಾನವಾದಾಗ ತಾನೇ ಮುನಿದೀಕ್ಷೆ ಪಡೆದು ಆದರೂ ತನ್ನ ಸೋದರ ಜೀವದ ಉದ್ಧಾರಕ್ಕಾಗಿ ಶ್ರಮಿಸಿ ನಿರಂತರವಾಗಿ ನೆವಾದ ಅಗ್ನಿಭೂತಿ; ಮೊದಲಲ್ಲಿ ಮಹಾಮಂತ್ರಿಯಾಗಿದ್ದು ಉಂಗುರದ ವ್ಯಾಜದಿಂದ ಕಪಟದೀಕ್ಷೆಯ ಮೂಲಕ ದಿಟದ ಯತಿಯಾಗಿ ಪರಿವರ್ತನೆ ಪಡೆದು ಕಾವ್ಯದುದ್ದಕ್ಕೂ ಇತರ ಅನೇಕ ವ್ಯಕ್ತಿಗಳ ಶ್ರೇಯಸ್ಸಿಗಾಗಿ ಶ್ರಮಿಸಿ ಸಹಾಯಕನಾದ ಯತೀಂದ್ರ, ಸೂರ್ಯಮಿತ್ರ;ತಾನು ಪರಮ ಪಂಡಿತೋತ್ತಮನಾದರೂ ತನಗೆ ಕೇಡಾಳಿಗಳಾದ ದುಷ್ಟಮಕ್ಕಳು ಹುಟ್ಟಿದರಲ್ಲಾ ಎಂಬ ಕೊರಗಿನಿಂದ ಕರಗಿ ಮರಣ ಹೊಂದಿದ ಸೋಮಶರ್ಮ; ತಾನು ದ್ವಿಜನಾದರೂ ತನ್ನ ಮಗಳು ಜೈನಮುನಿಯ ಬಳಿ ಪಂಚಾಣುವ್ರತಗಳನ್ನು ಸ್ವೀಕರಿಸಿದಳೆಂದು ಸಹಜವಾಗಿಯೇ ಕೋಪೋದ್ರಿಕ್ತನಾಗಿ ರೇಗಾಡಿ ಕೂಗಾಡಿ ಕೊನೆಗೆ ಪ್ರಶಾಂತವಾದ ಚಿತ್ತದಿಂದ ದೀಕ್ಷೆ ಹೊಂದಿದ ನಾಗಶರ್ಮ ಮುಂತಾದ ಪುರುಷ ಪಾತ್ರಗಳು ಕವಿ ಕಡೆದ ದಿವ್ಯಶಿಲ್ಪಗಳು.

ಶಾಂತಿನಾಥನಲ್ಲಿ ಕೆಲವು ಹಿರಿಯ ಗುಣಗಳನ್ನು ಕಾಣಬಹುದು. ಶಾಂತಿನಾಥ ಕವಿ ಜಿಧರ್ಮದ ಮಹೋನ್ನತಿಯನ್ನು ಲೋಕಕ್ಕೆ ಬಿತ್ತರಿಸುವ ಶ್ರದ್ಧಾನ್ವಿತವಾದ ಆವೇಶದ ಭರದಲ್ಲಿ ಅನ್ಯಧರ್ಮದ ಅವಹೇಳನ ಮಾಡಿಲ್ಲ. ಸ್ವಧರ್ಮ ನಿಷ್ಠೆ ಅನ್ಯಧರ್ಮದ ನಿಂದೆಯಲ್ಲಿ ತೊಡಗುವಂತೆ ವಿವೇಕವನ್ನು ಮಸುಳಿಸಿಲ್ಲ. ಸರಸ್ವತೀ ಮುಖ ಮುಕುರನೆಂಬ ಬಿರುದಾಂಕಿತನಾದ ಶಾಂತಿನಾಥನ ಜಿನ ವಚನವಿನಿರ್ಗತವಾದ ಸುಕುಮಾರ ಚರಿತೆಯೆಂಬ ಈ ಕಾವ್ಯ ವಾಗ್ವನಿತೆಗೆ ವಾಗ್ವಿಲಾಸವನ್ನುಂಟು ಮಾಡಿದೆ; ಭಾರತೀ ಸತಿಗೆ ಮಾಡಿ ಪೊಸ ಅಳಂಕೃತಿಯಂತೆ ಕಂಗೊಳಿಸುವ ಈ ಪುಣ್ಯಕೃತಿ ಓದಿ ಮೆಚ್ಚುವ ಸಹೃದಯರಿಗೂ, ಭಾವಿಸುವ ಭವ್ಯ ನಿವಹಕ್ಕೂ ಒಂದು ಅಗಾಧವಾದ ಬೋಧಾಕೃತಿಯಾಗಿದೆ. ಚೆಲುವಾದ ಬಂಧುರೋಕ್ತಿಗಳಿಂದ ಅಭಿವರ್ಣಿಸಿದ ಈ ಕಾವ್ಯ ಕವಿಗೆ ವೈಯುಕ್ತಿಕವಾಗಿ ಹೆಮ್ಮೆಯನ್ನೂ, ಆತ್ಮತೃಪ್ತಿಯನ್ನೂ ಉಂಟುಮಾಡಿದೆಯೆಂದು ಈ ಕೆಳಗಿನ ಪದ್ಯದಿಂದ ತಿಳಿದುಬರುತ್ತದೆ.

            ಪರಮಾತ್ಮಂ ನಿಷ್ಠಿತಾತ್ಮಂ ಜಿನಪತಿ ಪರಮಸ್ವಾಮಿ ಸದ್ಧರ್ಮಮಾರ್ಮಂ
            ಗುರುವಂದ್ಯಂ ವರ್ಧಮಾನ ವ್ರತಿಪತಿ ಸುಕುಮಾರಂ ಕಥಾನಾಯಕಂ
            ಚ್ಚರಿತಂ ಕಾವ್ಯಂ ಮದೀಯಾನುಜನನುಬಲಮೆಂದದೆ ದಲ್ ಮದ್ವಚೋವಿ
            ಸ್ತರ ವಿನ್ಯಾಸಂ ಬಲಂಬೆತ್ತುದು ಪೆಱರ್ಗದನಿಂತಂತೆನಲ್ಕೆಂತು ತೀರ್ಗುಂ

ಛಂದಸ್ಸು

            ಎರಡು ಅಂಶಗಣ ಘಟಿತ ತ್ರಿಪದಿಗಳು
            ಒಂದು ಅಂಶಗಣ ಘಟಿತ ಅಪೂರ್ವ ಷಟ್ಪದಿ
            ಎಂಟು ಪಿರಿಯಕ್ಕರಗಳೂ, ನಾಲ್ಕು ರಗಳೆಗಳೂ ಇವೆ.

ತ್ರಿಪದಿಗಳು

೧.        ಪುರಬಹಿರ್ಭಾಗ ವಿಸ್ತರಿತ ನಂದನದೊಳಂ
            ಕುರಿತ ಪಲ್ಲವಿತ ಮುಕುಳಿತ ಕುಸುಮಿತಾ
            ಪರಿಮಿತ ಫಲಿತ ತರುಗಳೆ ||

೨.        ಬಡವಂ ನಿಧಾನಮಂ ಪಡೆದಂತೆ ಕುರುಡಂ
            ಣ್ಪಡೆದಂತೆ ಮನದೊಳ್ ಪಿರಿದುಮುತ್ಸಾಹಮಂ
            ಪಡೆದಳಾತ್ಮಜರ ಬರವಿಂದೆ ||

ಶೈಲಿ

ಶಾಂತಿನಾಥ ಕವಿಯ ಶೈಲಿ, ಪದಬಂಧ, ಪದಪವಣಿಕೆಯ ಪ್ರೌಢಿಮೆ ಕನ್ನಡದ ಹಿರಿಯ ಕವಿಗಳ ಶೈಲಿಗೆ ಯಾವುದರಲ್ಲೂ ಕಡಿಮೆಯಲ್ಲ. ಪಂಪನ ಹಿತಮಿತ ವಚನ, ರನ್ನಕವಿಯ ವಾಗ್ಧೋರಣೆಯ ಶಕ್ತಿ, ಜನ್ನ ಕಥಾ ನಿರೂಪಣಾ ಕೌಶಲ, ಕುಮಾರವ್ಯಾಸ – ಹರಿಹರ ಭಕ್ತಿ – ಎಲ್ಲವೂ ಶಾಂತಿನಾಥದಲ್ಲಿ ಇವೆ. ವಾಯುಭೂತಿ ತನ್ನ ಮಾವನನ್ನು ಕುರಿತು ಧಿಕ್ಕರಿಸಿ ಅವಹೇಳನ ಮಾಡುವ ಈ ಕೆಳಗಿನ ಪದ್ಯದಲ್ಲಿ ಅವನ ಪ್ರತೀಕಾರ ಭಾವ ಮಾತುಗಳಲ್ಲಿ ಹೇಗೆ ಮೂಡಿದೆ ನೋಡಿ.

            ಮನೆಯೊಳ್ಮಯ್ಮೆಗೆ ಬಾತುಕೊಂಡ ಸಿಯೊಳ್ಕಣ್ಣಾಣದೊಡ್ಡಯ್ಸುವಂ
            ದಿನ ನೀಮಾರ್ಗೆಲೆ ನಿಮ್ಮ ನಾವಱೆಯೆಮೆಂದೆಮ್ಮಂ ತೊಡಂಕಿಕ್ಕುವಂ
            ದಿನ ಭಿಕ್ಷಾನ್ನಮನಿಕ್ಕುವಲ್ಲಿ ಸತಿಯಂ ಬೇಡೆಂದು ಕಣ್ಕೆತ್ತುವಂ
            ದಿನ ಸೊರ್ಕ್ಕಕ್ಕಟ ಮುಕ್ಕುವೋಗಿ ಕಡೆಯೊಳ್ ಭೈಕ್ಷಕ್ಕೆ ಪಕ್ಕಾದಿರೇ

ಎಂದು ತಾರಸ್ವರದಲ್ಲಿ ರೋಷವನ್ನು ಕಾರಿದುದಾಗಲಿ,

            ಜನನಿಯೊಡವುಟಿದಂ ಮಾ
            ವನುಪಾಧ್ಯಾಯಂ ಮುನೀಶ್ವರಂ ದಯೆಯಿಂ ನಿ
            ನ್ನನೆಪರಸಲ್ಬಜಯಂಗೆಯೆ
            ನೀನುದಾಸೀನನಾಗಿ ಕಡೆಗಣಿಸುವುದೇ ?

ಎಂದು ಮೃದುವಾಗಿ ಬುದ್ಧಿ ಹೇಳಿದಂತೆ ಪ್ರಶ್ನಿಸುವುದಾಗಲಿ ಭಾವಪೂರ್ಣವಾಗಿ ಬಂದಿದೆ. ಶಾಂತಿನಾಥ ಕವಿ ಅಂತರಂಗದ ಭಾವನೆಗಳನ್ನು ಸಹಜವಾಗಿ ತಕ್ಕ ಮಾತುಗಳಿಂದ ಮೂಡಿಸಬಲ್ಲ, ಹುಟ್ಟುಕುರುಡಿಯಾದ ಹೊಲೆಯರ ಹುಡುಗಿ ಎಷ್ಟು ಹೊಲಸಾಗಿದ್ದಳೆಂಬುದನ್ನು ಕಣ್ಣಿಗೆ ಕಟ್ಟುವಷ್ಟು ನಿಚ್ಚಳವಾಗಿ ವರ್ಣಿಸಬಲ್ಲ, ತನ್ನ ಸೋದರನ ಏಳುಬೀಳೂಗಳು ಅಗ್ನಿಭೂತಿ ಮುನಿಯ ಹೃದಯದಲ್ಲಿ ಹೊಮ್ಮಿ ಹರಿಯುವ ಕಾರುಣ್ಯಗಂಗೆ ಸಹೃದಯರ ಚಿತ್ತವನ್ನು ಕಲಕುವಂತೆ ಕವಿ ನಿರೂಪಿಸಬಲ್ಲ. ತೀಕ್ಷ್ಣವಾದ ಮೂದಲೆಯನ್ನು, ತಿವಿಯುವ ವ್ಯಂಗ್ಯೋಕ್ತಿಗಳನ್ನು ಆತ ಚೆನ್ನಾಗಿ ಬಳಸುತ್ತಾನೆ.

            ನೀಂ ಬೇವಾದೊಡೆ ನಿನ್ನ ಕು
            ಟುಂಬಿನಿಯುಂ ಕಯ್ಪೆಸೂರೆಯ ಕುಡಿಯೇಂ ಮಿಡಿಯೇ
            ನೆಂಬಂತೆ ದರಸಿಯಾದಳಿ
            ದೇಂ ಬಳ್ವಳ ಬಳೆದ ಬಂಧುತನಮಿನಿದಾಯ್ತೊ |

ಎಂಬಲ್ಲಿಯಂತೂ ವಾಯುಭೂತಿಯ ಆಂತರಿಕ ಪ್ರತೀಕಾರ ಮನೋಭಾವ ವಿಡಂಬನೆ ಅತ್ಯಂತ ಸಹಜವಾಗಿ, ನಾಟಕೀಯವಾಗಿ ಒಡಮೂಡಿದೆ. ಕವಿ ಹೇಗೆ ಭೋಗ – ರಾಗಗಳನ್ನೂ ಹಾಡಬಲ್ಲನೋ ಹಾಗೆ ವೀತರಾಗನನ್ನೂ ಸ್ತೋತ್ರಮಾಡಬಲ್ಲ.

ಉದಾಹರಣೆಗೆ ಈ ಕೆಳಗಿನ ಪದ್ಯದಲ್ಲಿನ ಜಿನಸ್ತೋತ್ರ ರತ್ನಾಕರವರ್ಣಿಯ ನಿರಂಜನ ಸ್ತುತಿಯನ್ನು ನೆನಪಿಗೆ ತರುತ್ತದೆ. ಅಲ್ಲದೆ ಅದರ ಪ್ರಾಸಾನುಪ್ರಾಸದ ಸೊಗಸು, ‘ನ’ ಕಾರದ ಪುನರಾವರ್ತನೆ ಭಕ್ತಿಗೆ ಗೀತದ ಸೊಗಸನ್ನು ಕೂಡಿಸಿದೆ :

            ಜಯಜಯ ವಾಸುಪೂಜ್ಯ ಸುರಪೂಜ್ಯ ಜಿನೇಶ್ವರ ವೀತರಾಗ ನಿ
            ರ್ಭಯ ನಿರವದ್ಯ ನಿರ್ಜಿತ ನಿರಂಜನ ನಿರ್ಮಲ ನಿಷ್ಕಲಂಕಿ ನಿ
            ರ್ನಯ ನಿರಪಾಯ ನಿರ್ಜನನ ನಿಃಸ್ಪೃಹ ನಿರ್ಮಮ ನಿರ್ವಿಕಲ್ಪ ನಿ
            ಷ್ಕ್ರಿಯ ನಿರಪೇಕ್ಷ ನಿನ್ನ ಚರಣಂ ಶರಣಕ್ಕೆಮಗಿಂ ಜಿನೇಶ್ವರಾ.

ಇದರಂತೆ ಸುಕುಮಾರನ ಮಡದಿಯರು ಗಂಡನನ್ನು ಅರಸಿ ಅರಸಿ ಕಾಣದೆ ಹಂಬಲಿಸುತ್ತಾ ಗೋಳಿಡುವ ಪದ್ಯ,

            ವರಪುಣ್ಯಾಧಾರನಂ ಕಂಡಿರೆ ಗುಣಧರನಂ ಕಂಡಿರೇ ಭೋಗಿಯಂ ಕಂ
            ಡಿರೆ ಲಕ್ಷ್ಮೀಕಾಂತನಂ ಕಂಡಿರೆ ವಿಶದಯಶೋರಾಶಿಯಂ ಕಂಡಿರೇ ಸೌಂ  
            ದರ ದಿವ್ಯಾಕಾರನಂ ಕಂಡಿರೆ ಸುಖಮಯನಂ ಕಂಡಿರೇ ರೂಪವಿದ್ಯಾ
            ಧರನಂ ನೀಮಾರುಮೇಂ ಕಂಡಿರೆ ಮನಸಿಜನಂ ಕಂಡಿರೇ ಪೇೞಿಮೀಗಳ್ ||
(ಇದು ಮಹಾಕವಿ ಪಂಪನ ಆದಿಪುರಾಣದ ಪ್ರಭಾವ)

ಇವಲ್ಲದೆ ಕಾವ್ಯದಲ್ಲಿ ಅನೇಕ ಕಡೆ ಗಾದೆ ಮಾತುಗಳು ಸಹಜ ಚೆಲುವಿನಿಂದ ಅರಳಿ ನಿಂತಿವೆ. ಉದಾಹರಣೆಗೆ, ಪುತ್ತುಂ ಬತ್ತಲೆಯಂ ಬಱೆದಿಲ್ಲ; ಕಯ್ಪೆಸೊರೆಯ ಕುಡಿಯೇಂ ಮಿಡಿಯೇಂ; ಪುಲಿ ಬಾವಿಯೊಳ್ ಬಿರ್ದುದನರಿದೊಡೆ ಗುಂಡುಗೊಂಡುಕೊಂದಿಕ್ಕುಗುಮಲ್ಲದೆ ಪಿಡಿದು ತೆಗೆವರಾರ್ ? ಗಗನ ಪ್ರಯಾಣಮಂ ತಳದೊಳಳೆದು ಕಂಡರುಮೊಳರೆ ? ಬಡವಂ ನಿಧಾನಮಂ ಪಡೆದಂತೆ, ಕುರುಡಂ ಕಣ್ವಡೆದಂತೆ – ಮೊದಲಾದವು.

ಹೀಗೆ ಶಾಂತಿನಾಥ ಕವಿ ವಸ್ತು, ಶೈಲಿ, ಕಲೆಗಾರಿಕೆ, ಪ್ರತಿಭೆ, ಪಾಂಡಿತ್ಯ – ಎಲ್ಲ ದೃಷ್ಟಿಯಿಂದಲೂ ಹನ್ನೊಂದನೆಯ ಶತಮಾನದ ಕನ್ನಡ ಸಾಹಿತ್ಯದ ಸಂಪತ್ತನ್ನು ಬಹುಮಟ್ಟಿಗೆ ಹೆಚ್ಚಿಸಿದ ಸಮರ್ಥ ಕವಿ; ಪಂಪನಂತೆ ಸವ್ಯಸಾಚಿಯಾಗಿ, ರನ್ನ – ಜನ್ನರಂತೆ ಶಾಸನ ಕವಿಯಾಗಿ ಕನ್ನಡದ ಬಾವುಟವನ್ನು ಎತ್ತಿಹಿಡಿದು ಈ ಹಿರಿಯಕವಿ ವಿಜೃಂಭಿಸಿದ.

            ವಿಪುಲ ಪದರಚನೆ ಪದರಚ
            ನೆ ಪೊಚ್ಚ ಪೊಸ ದೇಸೆ ದೇಸೆ ಪೊಸ ಬಗೆ ಬಗೆ ರಂ |
            ಜಿಪ ರಸಿಕತೆ ರಸಿಕತೆ ಕುಸಿ
            ಪಸರಿಸುವ ರೀತಿ ರೀತಿಯೆನೆ ಮೆಚ್ಚಿದರಾರ್ ||