. ಪದ್ಮರಸ

ಪದ್ಮರಸ ಕವಿಯ ಮನೆತನ ವಿದ್ವತ್‌ಪೂರ್ಣವಾದುದು, ಕವಿ ಕೂಡ ಸ್ವಾಭಿಮಾನದಿಂದ ತನ್ನ ಪರಂಪರೆಯನ್ನು ನಿರೂಪಿಸಿದ್ದಾಎನ. ಇವನು ಮೈಸೂರು ಜಿಲ್ಲೆಗೆ ಸೇರಿದ ಚಾಮರಾಜನಗರ ಸಮೀಪದಲ್ಲಿನ ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರಿನವನು. ಈ ಪ್ರದೇಶದಲ್ಲಿ ಬ್ರಹ್ಮಸೂರಿ ಪಂಡಿತನು ಅಖಿಲಶಾಸ್ತ್ರ ವಿಶಾರದನಾದ ಘನ ವಿದ್ವಾಂಸನೆಂದು ೧೫೪೦ ಸುಮಾರಿನಲ್ಲಿ ವಿಖ್ಯಾತನಾಗಿದ್ದನು. ಈತನನ್ನು ಪದ್ಮರಸ ಕವಿ ‘ಮಹಾವಾದಿಮದೇಭ ಮೃಗೇಂದ್ರ ತರ್ಕ ಶಬ್ದಾಗಮಜ್ಞ ಜೈನ ಸಂಹಿತಾಕರ್ತೃ’ವೆಂದು ವಿಶ್ಲೇಷಿಸಿದ್ದಾನೆ. ಶ್ರೀವತ್ಸ ಗೋತ್ರೋದ್ಭವನಾದ ಬ್ರಹ್ಮಸೂರಿ ಪಂಡಿತನು ರಾಜಪೂಜಿತನೂ ಆಗಿದ್ದನು. ಈತನ ಸಂತತಿಯವನು ಪದ್ಮಣೋಪಾಧ್ಯಾಯನು. ಈತ ಕೂಡ ‘ವೈದ್ಯಮಂತ್ರದೈವಜ್ಞ ಶಾಸ್ತ್ರ’ಗಳಲ್ಲಿ ಕೋವಿದನಾಗಿದ್ದನು. ಈತನ ಮಗನೇ ಪದ್ಮರಸ ಕವಿ.

ಪದ್ಮರಸ ಕವಿ ಭಟ್ಟಾಕಲಂಕಲರ  ಶಿಷ್ಯ, ಶೃಂಗಾರ ಕಥೆ ಕಾವ್ಯವನ್ನಲ್ಲದೆ ಬೇರೆ ಯಾವ ಕಾವ್ಯವನ್ನು ಬರೆದಿದ್ದಾನೆಯೋ ತಿಳಿಯದು. ಈ ಕಾವ್ಯವನ್ನು ‘ಆಸರು ಪರಿಹಾರವಾಗೆ ಪೇಳಿದೆ, ಪಾಪನಾಶವೆಂದುಸಿರಿತಿಲ್ಲಿದನು’ ಎಂದೂ, ‘ಇದು ಪುಣ್ಯಸಾರ ಸತ್ಕಥೆಯಲ್ಲವರದರಿಂದಾರೈದು ಪೇಳ್ದುದಿಲ್ಲ’ ಎಂದೂ ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಅರಿಕೆ ಮಾಡಿರುವುದು ಗಮನಾರ್ಹವಾಗಿದೆ. ಕನ್ನಡ ಕವಿಗಳಲ್ಲಿ ಬೇಸರ ಪರಿಹಾರಾರ್ಥವಾಗಿ ಕಾವ್ಯ ರಚಿಸಿದನೆಂದು ಹೇಳಿಕೊಂಡವರು ಕಡಿಮೆ. ಬಹುಜನ ಕವಿಗಳು ಇನ್ನೊಬ್ಬರು ಪ್ರಾರ್ಥಿಸಿದರು, ಅದರಿಂದ ಅವರ ಕೋರಿಕೆ ಮನ್ನಿಸಿ ಈ ಕಾವ್ಯ ಬರೆಯುತ್ತಿದ್ದೇನೆ; ಎಂದೇ ಹೇಳಿರುವರು. ‘ಬಿನ್ನಹ ಗುರುವೆ ಧ್ಯಾನಕೆ ಬೇಸರರಾದಾಗ ನಿನ್ನನಾದಿಯ ಮಾಡಿಕೊಂಡು ಕನ್ನಡದೊಳಗೊಂದು ಕಥೆಯ ಹೇಳುವೆನು’ ಎಂದು ಕಾವ್ಯರಚನೆಗೆ ತೊಡಗಿದ ರತ್ನಾಕರವರ್ಣಿ ಕೂಡ ಭರತೇಶ ಚರಿತೆಯನ್ನು ಭವ್ಯರಿಗೆ ಹೇಳಿದ್ದಾನೆ. ಅದನ್ನು ಆಲಿಸಿದವರಿಗೆ ಸದ್ಗತಿಯಿದೆಯೆಂದು ಸ್ವರ್ಗದ ಆಮಿಷ ತೋರಿಸಿದ್ದಾನೆ. ಆದರೆ ಪದ್ಮರಸ ಕವಿ ತನ್ನ ಕಾವ್ಯವನ್ನು ಪಾಪದ ನಾಶಕ್ಕಾಗಿಯಾಗಲಿ ಪುಣ್ಯಸಾರ ಸತ್ಕಥೆಯೆಂದಾಗಲಿ ಹೇಳಿಲ್ಲವೆನ್ನುತ್ತಾನೆ :

ನೆನದರೆ ಭಾವ ಬಾರದೆ ಬಿಟ್ಟುದಿಲ್ಲ
ಸನೆಗೆ ವಚನಗಳೊದಗದೆ
ಅನುಮಾನಿಸಿದುದಿಲ್ಲ ಸತ್ಕಾವ್ಯವಲ್ಲೆಂದು
ಮನಮೊಲ್ದು ಸಂಪೂರ್ಣವೆಂದೆ ||

ತನ್ನೀ ಶೃಂಗಾರ ಕಥೆ ಸತ್ಕಾವ್ಯವಲ್ಲವೆಂದ ಮಾತ್ರಕ್ಕೆ ಅವಜ್ಟೆಯಿಂದ ಬೇಕಾಬಿಟ್ಟಿ ಬರೆದ ಕಳಪೆ ಕಾವ್ಯವಲ್ಲ. ‘ಮನಮೊಲ್ದು ಸಂಪೂರ್ಣವೆಂದೆ’ ರತ್ನಾಕರನಂತೆ ಪದ್ಮರಸನೂ

ವಸ್ತುಕದೊಳಗೆ ಲಕ್ಷಣ ಲಕ್ಷಿತಗಳ ವಿ
ನ್ಯಸ್ತವಲ್ಲದೆ ಪೆರತಿಲ್ಲ
ಶಸ್ತವಾಗಿರಲರಿಯವು ವರ್ಣಕದೊಳು ದೋ
ಷಸ್ತೋಮಗಳ ನೋಡಬೇಡ

ಎಂದು ಹೇಳುತ್ತಾನೆ. ಪದ್ಮರಸ ‘ಶೃಂಗಾರ ಕಥೆ’ ಕಾವ್ಯ ಬರೆಯುವಾಗ ಬಹುವಾಗಿ ರತ್ನಾಕರವರ್ಣಿಯೇ ಮೊದಲಾದ ಕೆಲವು ಶೃಂಗಾರ ಕವಿ ಕಾವ್ಯಗಳನ್ನು ಮಾದರಿಯನ್ನಾಗಿಸಿಕೊಂಡಿದ್ದಾನೆ. ಆತ ತನ್ನ ಮೆಚ್ಚಿನ ಕಾವ್ಯಗಳೆಂದು ಮದನತಿಲಕ (ಚಂದ್ರರಾಜ), ಮಲ್ಲಿಕಾರ್ಜುನ ವಿಜಯ (‘ಜನವಶ್ಯ’, ಕಲ್ಲರಸಕವಿ), ಭರತೇಶ್ವರ ಚರಿತೆ (ರತ್ನಾಕರ), ಕುಮಾರರಾಮನ ಕಥೆ (ನಂಜುಂಡ) ಎಂಬ ನಾಲ್ಕು ಕಾವ್ಯಗಳನ್ನು ಹೆಸರಿಸಿದ್ದಾನೆ. ಇವೆಲ್ಲಾ ಶೃಂಗಾರರಸ ಪ್ರಧಾನ ಕಾವ್ಯಗಳೆಂಬುದನ್ನು ಗಮನಿಸುವಲ್ಲಿ ಇವು ಸಹಕಾರಿಯಾಗಿವೆ. ಏಕೆಂದರೆ ಪದ್ಮರಸ ಕವಿ ಹಲವು ಕಡೆ ಹಿಂದಿನ ರೂಢಿ ಜಾಡನ್ನು ಹಿಡಿಯುವುದುಂಟು ; ಸೂಳೆಗೇರಿಯನ್ನು ಕುರಿತ ಪದ್ಯಗಳಿವು :

ಪಾಪದ ಗಡಿ ದುಃಖವ ಸೀಮೆ ಬಹುವಿಧ
ದಾಪತ್ತಿನ ಪುರ ತೇಜ
ಪೋಪ ಮಹಾಲಯವೆಂಬಕೀರ್ತಿಯ
ತಾ ಪೊತ್ತು ಮೆರೆವುದಾ ಕೇರಿ ||
ಗದಕಿನಾಲಯ ಠಕ್ಕಿನ ಬೀಡನೃತದ
ಸದನ ವೈಸಿಕದ ಭವನವು
ಚದುರಿನ ಪೇಟೆ ವ್ಯಾಧಿಯ ತವರ್ಮನೆಯಂ
ದೆದೆಗೊಂಡುದಾ ಸೂಳೆಗೇರಿ ||

ಇಲ್ಲಿನ ಪದ್ಯಗಳಲ್ಲಿನ ಹಿಂದಿನ ಕವಿಗಳ ಹೇಳಿಕೆಯನ್ನು ಕಾಣುವಂತೆ ಪದ್ಮರಸ ಕವಿಯ ಸ್ವಂತಿಕೆಯನ್ನು ಕಾಣುತ್ತೇವೆ. ಇದರಂತೆ ಕವಿ ತನ್ನ ಸೋಪಜ್ಞತೆಯನ್ನು ತೋರಿರುವ ಸಂದರ್ಭಗಳು ಹಲವಾರಿವೆ. ಆಯ್ದು ಸಂಧಿಗಳು  ಹಾಗೂ ೫೩೩ ಪದ್ಯಗಳಿರುವ ಈ ಶೃಂಗಾರ ಕಥೆ ಕಾವ್ಯ, ಅದರ ಹೆಸರೇ ಸೂಚಿಸುವಂತೆ, ಶೃಂಗಾರಕ್ಕೆ ಪ್ರಾಧಾನ್ಯ ಕೊಟ್ಟಿದೆ. ಕಥಾಭಾಗವಿರುವುದು ಕೇವಲ ಕೊಂಚ, ವರ್ಣನಾ ಭಾಗವೇ ಮಿಗಿಲು ; ಕನ್ನಡ ನಾಡಿನ ‘ಸುಖನಿಲಯಪುರದ’ ಪ್ರಬು ರತ್ನಭೂಷಣ – ಗುಣಭೂಷಣೆ ದಂಪತಿಗಳಿಗೆ ಹುಟ್ಟಿದ ಸುಕುಮಾರ ಎಂಬುವನ ಚರಿತೆ ಈ ಶೃಂಗಾರ ಕಥೆಯಲ್ಲಿ ನಿರೂಪಿತವಾಗಿದೆ. ವಡ್ಡಾರಾಧನೆ, ಶಾಂತಿನಾಥನ ಸುಕುಮಾರ ಚರಿತೆ ಕಾವ್ಯಗಳಲ್ಲಿ ಬರುವ ಸುಕುಮಾರನಿಗೂ ಈ ಕಾವ್ಯದ ನಾಯಕ ಸುಕುಮಾರನಿಗೂ ಸಂಬಂಧವಿಲ್ಲ.

ಪದ್ಮರಸಕವಿಯ ವ್ಯುತ್ಪನ್ನತೆ ಬೆರಗುಗೊಳಿಸುವಷ್ಟಿದೆ.[1] ಅನುಕರಣವಲ್ಲದ ನವೀನವಾದ ಕಲ್ಪನೆಗಳನ್ನು ಕೊಡುತ್ತನೆ. ಸ್ವತಂತ್ರವಾಗಿ ಆಲೋಚಿಸುವ ಅಸಲು ಶಕ್ತಿಯಿರುವುದರಿಂದ ಅವನ ಕಾವ್ಯ ಗಾತ್ರದಲ್ಲಿ ಚಿಕ್ಕದಾದರೂ ಮಹತ್ವದ್ದಾಗಿದೆ. ಚರ್ವಿತ – ಚರ್ವಣ ಭಾಗಗಳು ಇವನ್ನಲ್ಲಿ ಇಲ್ಲವೇ ಇಲ್ಲವೆಂದು ಅಭಿಪ್ರಾಯ ಪಡುತ್ತಿಲ್ಲ.

ಕುಂಭಕುಂಚದ ಕಂಬುಕಂಠದ ಕೇಕಿದು
ರುಂಬಿನಂಭೋಜಾತ ಮುಖದ |
ಷೊಂಬಾಳೆದೊಡೆಯ ಕಾದಂಬಗತಿಯ ಪಕ್ವ
ಬಿಂಬಾಧರೆಯರಿರುತಿಹರು |

ಎಂಬಂಥ ವರ್ಣನೆಗಳಲ್ಲಿ ಹೊಸತನವೇನೂ ಕಾಣಿಸುವುದಿಲ್ಲ. ಅವನ ಹಿರಿಮೆ ಸ್ವಕಪೋಲ ಕಲ್ಪಿತ ಭಾವವಿಲಾಸದಲ್ಲಿ ಹೊಳೆಯುತ್ತದೆ. ಉದಾಹರಣೆಗೆ ಈ ಪದ್ಯ ನೋಡಬಹುದು.

ಲೋಕದೊಳಗೆ ಹಲಲಿಪಿಯುಂಟವರವ
ರಾಕಾರವೆಲ್ಲ ವಿಕಾರ |
ಕರ್ನಾಟ ಶ್ರಿಕಾರದಿರವ ಪೋ
ಲ್ತಾಕೆಯ ಕರ್ಣವೆಸೆದುದು ||

ಇಲ್ಲಿನ ಕಲ್ಪನಾ ವಿಲಾಸ ಅದ್ಭುತವಾಗಿದೆ. ಚೆಲುವ ಕನ್ಯೆಯ ಕಿವಿಯನ್ನು ಕನ್ನಡ ಭಾಷೆಯ ಲಿಪಿಗಳಲ್ಲೊಂದಾದ ಶ್ರೀಕಾರದಂತೆ ಸೊಗಯಿಸಿತೆಂಬುದು ಪದ್ಮರಸ ಕವಿಪ್ರತಿಭೆಯಲ್ಲುದಿಸಿದ ಹೊಚ್ಚ ಹೊಸ ಕಲ್ಪನೆ. ಇದನ್ನು ಪರಿಭಾವಿಸಿದಷ್ಟು ಅರ್ಥಗಳನ್ನು ಬಿಚ್ಚುತ್ತಿರುತ್ತದೆ. ಕನ್ನಡ ಕವಿಕಾವ್ಯ ಪರಂಪರೆಯಲ್ಲಿ ಮೊತ್ತ ಮೊದಲ ಸಲ ಕಾಣುವ ಈ ನವೀನ ಕಲ್ಪನೆ ತನ್ನ ಔಚಿತ್ಯದಿಂದ ರೋಮಾಂಚಕಕಾರಿಯಾದ ಅನುಭವನ್ನುಂಟುಮಾಡುತ್ತದೆ.

ಪದ್ಮರಸ ಕವಿ ಜೈನಕವಿಯಾದರೂ ಕಾವ್ಯಾರಂಭದಲ್ಲಿ ಸದಾಶಿವನನ್ನು ಸ್ತುತಿಸಿದ್ದಾನೆ. ಸರಸ್ವತಿಯ ಸ್ಮರಣೆಯಾದ ಮೇಲೆ ಗಣೇಶನನ್ನು ನೆನೆದಿದ್ದಾನೆ. ಇಉ ಪರಸಮಯವನ್ನು ಗೌರವಿಸುವ ಕವಿಯ ಸಮನ್ವಯ ದೃಷ್ಟಿಯನ್ನು ತೋರಿಸುತ್ತದೆಯೇ ಅಥವಾ ಇದಕ್ಕೆ ಮತ್ತೇನಾದರು ಹಿನ್ನೆಲೆಯಿದೆಯೋ ತಿಳಿಯದು. ಶೃಂಗಾರವನ್ನು ಮೋಹಕವಾಗಿಯೂ ಅಪ್ರಯಾಸಕರ ಸಹಜ ಶೈಲಿಯಲ್ಲಿಯೂ ಈ ಕವಿ ವರ್ಣಿಸುತ್ತಾನೆ; ವಿರಹಭಾವದ ವಿಚಾರವಾಗಿ ಪದ್ಮರಸನ ಪದ್ಯಗಳು :

ಮಲಯಜಲೇಪ ಮನ್ಮಥ ಶಾಪ ತಾವರೆ
ಯೆಲೆಯ ವೀಜನ ಮಹಾಜ್ವಲನ!
ತಳಿವ ಪರಾಗ ಜೀವನತ್ಯಾಗ ವೀಣೆಯ
ಲಲಿತ ಸುಸ್ವರ ಬಹುವೈರ ||
ಮರುಗ ಮಹೋರಗ ಕತ್ತುರಿ ದಳ್ಳುರಿ
ಸುರಗಿ ಸುರಗಿ ವಾಲ ವ್ಯಾಲ |
ಸರಸಿಜ ವಿಷರಜ ತಾಮಬೂಲವೆದೆ ಶೂಲ
ದಿರವಾದುವಾ ವಿರಹದೊಳು ||

ಒಮ್ಮೊಮ್ಮೆ ಶೃಂಗಾರ ಕಟರೆಯಾಗುಂತೆ ನೇಮಿಚಂದ್ರ ತನ್ನ ಲೀಲಾವತಿ ಕಾವ್ಯದಲ್ಲಿ ವರ್ಣಿಸುವುದುಂಟು. ಆದರೆ ಪದ್ಮರಸ ಅದನ್ನು ಒಂದು ಮಿತಿಯೊಳಗೆ ತರುವುದರಿಂದ ಇಲ್ಲಿನ ವರ್ಣನೆ ಸಹ್ಯವಾಗುತ್ತದೆ. ಸಮುದ್ರವನ್ನು ವರ್ಣಿಸುತ್ತಾ ಅದನ್ನು ಉತ್ಪ್ರೇಕ್ಷಿಸಿ ಪದ್ಮರಸಕವಿ ‘ಕಡಲೂ ಕೂಡ ಕನ್ನೆಯಾಗಿ ಕಾಣುತ್ತದೆ’ ಎಂದು ಹೇಳಿದ್ದಾನೆ :

ಸುಳಿನಾಭಿ ಝಷನೇತ್ರ ತೆರೆ ಪುರ್ಬುರಗಬಾಸೆ
ಗಳ ಶಂಖಕೂರ್ಮಮೋಗಾಲು |
ಪುಳಿನದೊಟ್ಟಲೆ ಪೊರವಾರಾಗೆ ಸಾಮಾನ್ಯ
ಲಲನೆಯಂತೆಸೆದುದಾ ವಾರ್ಧಿ ||

ಪದ್ಮರಸ ಕವಿ ತನ್ನ ಈ ‘ಶೃಂಗಾರಕಥೆ’ ಕಾವ್ಯವನ್ನು ಕೆಲಸೂರ ಚಂದ್ರನಾಥ ಬಸದಿಯಲ್ಲಿ ಬರೆದು ಮುಗಿಸಿದುದಾಗಿಯೂ, ಕೃತಿರಚನೆ ಶಕ ೧೫೨೧ (ಕ್ರಿ.ಶ.೧೫೯೯) ರ ವಿಳಂಬ ಸಂವತ್ಸರದಲ್ಲಿ ಪೂರೈಸಿತೆಂದೂ ತಿಳಿಸಿದ್ದಾನೆ.

೧೦. ಪದ್ಮರಸ

ಜೈನರ ೨೪ ಜನ ತಿರ್ಥಂಕರದಲ್ಲಿ ಅಂತಿಮನಾದ ವರ್ಧಮಾನ ಮಹಾವೀರನ ಚರಿತೆಯನ್ನು ಕನ್ನಡದಲ್ಲಿ ಜನಪ್ರಿಯ ಸಾಹಿತ್ಯ ರೂಪದಲ್ಲಿ ಬರೆದ ಕವಿಗಳು ಪದ್ಮಕವಿ ಮತ್ತು ಜಿನಸೇನ ದೇಶವ್ರತಿ.[2]

ಶಾಲಿವಾಹನ ಶಕವರ್ಷ ಸಾಸಿರವೊಂದು
ಮೇಲೆ ನಾಲ್ನೂರಮೈವತ್ತು |
ಆಲೋಕಿಸಲು ಸರ್ವಧಾರಿ ಸಂವತ್ಸರ
ದಾ ಲಕ್ಷದಾ ಮಾರ್ಗಶಿರದ || (೧೫೪)
ಮಾಸದ ಬಹುಳ ತದಿಗೆಯ ಕರ್ಕಾಟಕಲ
ಗ್ನಾಶಶಿ ಹೋರೆ ವೇಳೆಯದಿ |
ಸೇವ್ಯವರ್ಧಮಾನೇಕ ಚರಿತ್ರ ನಿ
ವಾಸ ಮತ್ಕೃತಿ ನೆಲೆಯಾಯ್ತು || (೧೫೫)

ಶಾಲಿವಾಹನ ಶಕ ೧೫೫೦ ರ ಸರ್ವಧಾರಿ ಸಂವತ್ಸರದ ಮಾರ್ಗಶಿರ ಮಾಸ ಬಹುಳ ತದಿಗೆ ಕರ್ಕಾಟಕ ಲಗ್ನದಲ್ಲಿ ವರ್ಧಮಾನಚರಿತೆ ರಚಿತವಾಗಿದೆ. ಅಂದರೆ ನವೆಂಬರ್ ೩೦, ೧೫೨೮ ರಲ್ಲಿ. ಪದ್ಮ ಕವಿಯ ವಂಶ ಕೂಡ ಬಲ್ಲಿದರ ಬೀಡು. ಕಬ್ಬಗರ ರಸಿಕನಾದ ಬನದಾರ್ಯ ಹಾಗೂ ಬೊಮ್ಮರಸಿಯರ ಮಕ್ಕಳು ಹರಿಯಣ ಮತ್ತು ಚೆನ್ನಣಾಂಕರು. ಇವರು ‘ನಿಪುಣ ಸೂನುಗಳು’, ‘ಸೊಬಗಿನ ಗಟ್ಟಿಗಳು ಸುಗುಣ ರತ್ನಗಳು’ ಹರಿಯಣನು ‘ಭರತನಾಟಕ ಕರ್ತ ಛಂದೋಲಂಕಾರಾದಿ ಪರಿಪೂರ್ಣ ಸಾಹಿತ್ಯ ವಿಷಯ’ನಾಗಿ ‘ಸಂಗೀತ ಗಂಗಾಧರ’ನೆಂಬ ಕೀರ್ತಿ ಪಡೆದಿದ್ದ, ರಾಯಚೂಡಾಮಣಿ ಕೃಷ್ಣರಾಯನನ್ನು ನೋಟದಿಂದಲೇ ಮಝಭಾಪುಜೀಯ ಎಂದೆನಿಸಿದ್ದ. ಈ ಹರಿಯಣನ ಸುವಿಖ್ಯಾತ ಸೋದರಳಿಯನೇ ಚಿಕ್ಕ ಪದ್ಮದೇವ (ಪದ್ಮಕವಿ). ಈ ಪದ್ಮಕವಿಯ ತಂದೆಯ ಹೆಸರು ನಾಗಯ್ಯ – ‘ಕವಿಪದ್ಮನು ನಾಗಯ್ಯ ತಂದೆಯ ಸೂನು’ ಆದರೆ ನಾಗಯ್ಯನ ವಿಚಾರವಾಗಿ ಏನೇನೂ ತಿಳಿಯುವುದಿಲ್ಲ. ಹರಿಯಣ (ಚೆನ್ನಣಾಂಕರ) ವಿಚಾರವಾಗಿ ಕವಿ ನಾಲ್ಕು ಪದ್ಯಗಳಲ್ಲಿ ಕೊಂಡಾಡಿದರೂ, ಅನ್ಯತ್ರ ತಂದೆಯ ಪರವಾದ ಮತ್ತು ಪೋಷಕರ ಉಲ್ಲೇಖಗಳು ದೊರೆಯವು. ಬನದಾರ್ಯನನ್ನು ‘ರತ್ನಸಮಾನ ವ್ಯುತ್ಪನ್ನ, ಕವಿಗಳೊಳು ರಸಿಕ’ನೆಂದು ಕವಿ ಹೇಳಿರುವುದನ್ನು ನೋಡಿದರೆ ಆತನ ಬಗ್ಗೆ ನಮಗೂ ಕುತೂಹಲವಾಗುತ್ತದೆ. ಆದರೆ ಮತ್ತೇನೂ ಸಂಗತಿಗಳು ಸಿಗುವುದಿಲ್ಲ. ಪದ್ಮಕವಿಯ ಸೋದರ ಮಾವನಾದ ಹರಿಯಣನನ್ನು ಮೆಚ್ಚಿಕೊಂಡ ‘ರಾಯಚೂಡಾಮಣಿ ಮಸಕದ ರಿಪುರಾಯ ಕಾಯಜ ಭಾಳಾಕ್ಷ ಕೃಷ್ಣರಾನು’, ವಿಜಯನಗರ ಸಾಮ್ರಾಜ್ಯಾಧಿಪತಿ ಕೃಷ್ಣದೇವರಾಯನೇ (೧೫೦೯-೧೫೨೯) ಇರಬೇಕೆಂದು ತೋರುತ್ತದೆ. ಪದ್ಮಕವಿ ತನ್ನನ್ನು ‘ನವರಸರೀತಿ ಮಾರ್ಗೋದಯ ಪದಬಂಧ ಸವಿವಾತು ಸರಸ ಸೊಂಪಾದ ಕಿವಿಯೊಗುವರ್ಥಗಳಿಂದ ಮೋಹನ ಕವಿಯಲ್ತೆ ಚಿಕ್ಕ ಪದ್ಮದೇವ’ ಎಂದೂ, ತನ್ನೀ ಕಾವ್ಯಧಾರೆ ಕಿವಿಗೆ ಸೇರಿದ್ದೇ ತಡ ಶಾರದೆ ವೀಣೆಯ ರವವನ್ನೂ ರಸಿಕರು ಕೋರಿವೆಣ್ಗಳ ಲಲ್ಲೆವಾತನ್ನೂ ಮರೆತು ತನ್ನ ಕಾವ್ಯವನ್ನೇ ಆಲಿಸುವರೆಂದೂ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾನೆ. ಜಿನನ ಚರಿತೆಯೆಂದು ಪದ್ಮಕವಿ ಶೃಂಗಾರಕ್ಕೆ ಕೊರತೆಮಾಡಿಲ್ಲ.

ಬಿಸವಲ್ಲರಿಯೆಂಬ ಕನ್ನೆಗೆ ಜವ್ವನ
ಮಿಸುಗಲು ಮೊಲೆ ಮೂಡುವಂತೆ
ಬಿಸಜದ ಮುಗುಳು ಹುಟ್ಟಿದುದು ತಕ್ಕಂದದಿ
ಪೊಸತು ಶಾರದ ಗಮನದೊಳು || ()

ಎಂಬಂಧ ಹಲವಾರು ಪದ್ಯಗಳು ಈ ಕಾವ್ಯದಲ್ಲಿವೆ. ಇವನ್ನು ನೋಡಿದಾಗ ಚಿಕ್ಕಪದ್ಮದೇವಕವಿ ‘ಮೋಹನಕವಿಯಲ್ತೆ’ಎಂದು ಓದುಗರಿಗೂ ಅನಿಸುತ್ತದೆ.

ಪದ್ಮಕವಿಯ ವರ್ಧಮಾನಚರಿತೆ ಕಾವ್ಯರಚನೆಗೆ ಆಶ್ರಯ ನೀಡಿದಾತ.

ಬಲ್ಲರ ಬಲ್ಲಹ ಮೋಹಿವೆಣ್ಗಳ ಸವಿ
ವಿಲ್ಲಸರಸ ಗೋಷ್ಠಿಗೇಹ |
ಸಲ್ಲಲಿತಾಂಗ ಗುಮ್ಮಣನನಂತ ಸಂ
ಪುಲ್ಲನೀಕೃತಿಗೆ ಸಹಾಯ (೧೨೧೫೩)

ಅಖಿಲಶಾಸ್ತ್ರ ಕುಶಲನೂ ನೀತಿ ನಿಪುಣನೂ ಜಿನಧರ್ಮ ಪ್ರೀತನೂ ಆದ ಗುಮ್ಮಣ (ಗುಮ್ಮಣಾಂಕ)ನು. ಈತನು ತುಮಕೂರು ಜಿಲ್ಲೆಯ ಮಾಗಡಿ ತಾಲ್ಲೂಕು ಸಂಕಿಘಟ್ಟದ ಆದಿನಾಥನಾಗಿದ್ದನು. ಸಂಕಿಘಟ್ಟದಲ್ಲಿ ಕವಿ ಹೇಳೂವ (ವರ್ಧಮಾನ) ಬಸದಿ ಇಂದಿಗೂ ಸುಸ್ಥಿತಿಯಲ್ಲಿದೆ. ಪದ್ಮಕವಿಯ ಸ್ಥಳ ಸಂಕಿಘಟ್ಟವೊ ಬೇರೆಯೊ ಸರಿಯಾಗಿ ತಿಳಿಯದು. ಕವಿಯೇನೋ ಸಂಕಿಘಟ್ಟವನ್ನೂ ಅಲ್ಲಿನ ಚೈತ್ಯಾಲಯವನ್ನೂ ಅದರ ಪೂಜಾದಿಗಳನ್ನೂ ಹತ್ತು ಪದ್ಯಗಳಲ್ಲಿ ವರ್ಣಿಸಿದ್ದಾನೆ. ಈ ಊರಿನಲ್ಲಿ ಗುಮ್ಮಣಾಂಕನು ಅನುದಿನ ಜಿನಶಾಸ್ತ್ರಗಳನ್ನು ಓದಿಸುತ್ತಿರುವಾಗ ನಾಗಚಂದ್ರಕವಿಯ ಮಲ್ಲಿನಾಥಚರಿತದಲ್ಲಿ ‘ಮನಸಿಜನೊಂದು ಪರಾಜಯ ಬಂದಿರಲು’ ಆತ ಈ ಪದ್ಮಕವಿಗೆ ಪೇಳೆಂದು ಬೆಸಸಿದನಂತೆ. ಅದು ನೆವವಾಗಿ ತೊಡಗಿ ಈ ವರ್ಧಮಾನ ಚರಿತೆಯನ್ನು ನಿವೇದಿಸಿದನಂತೆ.

ದರ್ಪಣ ನಸುಮಾಸೆ ಬೆಳಗುಮಾಡಿ
ನೇರ್ಪುವಡಿಸಿ ನೋಡುವಂತ
ಒಪ್ಪುವ ಸುಕವಿಗಳಿದರೊಳಗೊಂದರೆ
ತಪ್ಪಿರೆ ತಿದ್ದಿ ಮೆರೆವುದು

ಎಂದು ಬಿನ್ನೈಸಿಕೊಂಡು ಪದ್ಮಕವಿ ಕಾವ್ಯ ನಿರೂಪಣೆಗೆ ತೊಡಗಿದ್ದಾನೆ.

ವರ್ಧಮಾನನಂತೆ ಹನ್ನೆರಡು ಸಂಧಿ ಹಾಗೂ ೧೩೧೯ ಪದ್ಯಗಳ ಮಧ್ಯಮಗಾತ್ರದ ಸಾಂಗತ್ಯ ಕಾವ್ಯ. ಇದರ ವಸ್ತು ಜೈನ ವಾಙ್ಮಯದಲ್ಲಿ ಸುಪರಿಚಿತ. ಈಗನ ಬಿಹಾರ್ ಪ್ರಾಂತ್ಯದ ಪಾವಾಪುರಿಯಲ್ಲಿ ಕ್ರಿ.ಪೂ. ೫೨೭ರಲ್ಲಿ ನಿರ್ವಾಣ ಪಡೆದ ಮಹಾವೀರನ ಬದುಕಿನ ವಿವರಗಳು ಪರಂಪರೆಯಾಗಿ ಹರಿದು ಬಂದಿದೆ. ಮಹಾವೀರನ ನೇರ ನಿಕಟಶಿಷ್ಯ ಇಂದ್ರಭೂತಿ ಗೌತಮ ಗಣಧರನಿಂದ ಸಂಕಲಿತವಾದ ಮಹಾವೀರಚರಿತೆ ಅನುಪಲಬ್ಧವಾದರೂ ಆದಾರಂಗ, ವ್ಯಾಖ್ಯಾಪ್ರಜ್ಞಪ್ತಿ, ಉತ್ತರಾಧ್ಯಯನ, ದಶವೈಕಾಲಿಕ, ಕಲ್ಪಸೂತ್ರ, ತ್ರಿಲೋಯ ಪಣ್ಣತ್ತಿ ಮೊದಲಾದ ಪ್ರಾಚೀನ ಕೃತಿಗಳಲ್ಲಿ ಹಿಡಿದು ಪ್ರಾಕೃತ – ಸಂಸ್ಕೃತ ಭಾಷೆಗಳಲ್ಲಿನ ಹಲವಾರು ಹೊತ್ತಗೆಗಳಲ್ಲಿ ಉಳಿದುಬಂದಿದೆ.[3] ಇವುಗಳಲ್ಲಿ ಗುಣಭದ್ರಾಚಾರ್ಯನ ಉತ್ತರ ಪುರಾಣ (ಸಂಸ್ಕೃತ) ಮತ್ತು ಪುಷ್ಪದಂತನ ಮಹಾಪುರಾಣ (ಪ್ರಾಕೃತ) ಪ್ರಖ್ಯಾತವಾಗಿವೆ. ಕನ್ನಡದಲ್ಲಿ ಚಾವುಂಡರಾಯ ಪುರಾಣವೇ ಪ್ರಾಚೀನವಾದರೂ ಇಲ್ಲಿ ಮಹಾವೀರನ ಚರಿತ್ರೆ ಗೌಣವಾಗಿ ಉಳಿದ ಭವಾವಳಿ ಮತ್ತು ಧಾರ್ಮಿಕ ವಿವರಣೆ ಗಣ್ಯವಾಗಿಬಿಟ್ಟಿದೆ.[4] ಇಮ್ಮಡಿ ನಾಗವರ್ಮನ ವರ್ಧಮಾನ ಪುರಾಣವೇ (೧೦೪೨) ಈಗ ಕನ್ನಡದಲ್ಲಿ ಪೂರ್ಣಚರಿತೆಯಾಗಿ ಲಬ್ಧವಾಗಿರುವ ಪ್ರಾಚೀನಕೃತಿ. ತರುವಾಯ ಸುಮಾರು ೧೧೫೦ ರಲ್ಲಿ ರಚಿತವಾದ ಕರ್ಣಪಾರ್ಯನ ವೀರೇಶಚರಿತೆ ದೊರೆತಿಲ್ಲವಾಗಿ ಅದರ ಸ್ವರೂಪ ತಿಳಿಯದು, ಬಹುಶಃ ಅದು ಚಂಪೂ ಗ್ರಂಥವಾಗಿರಬೇಕು. ಆಮೇಲೆ ಬಂದ ಆಚಣ್ಣನ ಕಾವ್ಯಗಳು ಪ್ರೌಢ ಚಂಪೂ ಕೃತಿಗಳು. ಕಲಿತವರಿಗಷ್ಟೇ ಕಾಮಧೇನುಗಳು. ಇದನ್ನು ಕಲಿಯದವರಿಗೂ ಕಲ್ಪವೃಕ್ಷವಾಗಿ ಎಟುಕುವಂತೆ ಮಾಡಿದವರು ಏಚಿರಾಜ, ಪದ್ಮಕವಿ ಮತ್ತು ಜಿನಸೇನ ದೇಶವ್ರತಿ. ಏಚಿರಾಜನ ಕಾವ್ಯ ಅನುಪಲಬ್ಧ, ಇನ್ನಿಬ್ಬರ ಕಾವ್ಯಗಳು ಸಿಕ್ಕಿವೆ.[5] ಪದ್ಮಕವಿ ಪೂರ್ವಕವಿಸ್ಮರಣೆಯ ಅವಸರದಲ್ಲಿ ಸೊಂಪಿನ ಕವಿತೆಯನು ಸುರಿದ’ ಪಂಪ ಪೊನ್ನ ರನ್ನ ಅಗ್ಗಳ ನೇಮಿಚಂದ್ರ ನಾಗಚಂದ್ರರನ್ನು ‘ನಾಂ ಪೊಗಳುವೆನನವರತ’ ಎನ್ನುತ್ತಾನೆ; ಮತ್ತು ಇನ್ನೊಂದು ಪದ್ಯದಲ್ಲಿ

ಕನ್ನಡದಲ್ಲಿ ಚಂಪೂಕೃತಿಯಗಿರೆ
ಬಿನ್ನಾಣಿಗರು ಪೇಳ್ದ ಬಳಿಕ |
ಪೊನ್ನ ಪಂಪನ ನೇಮಿಜನ್ನಿಗ ಕಬ್ಬಿಗ
ರನ್ನ ಸಮಾನವ್ಯುತ್ಪನ್ನ (೧೨.೧೪೩)

ಎಂಬುದಾಗಿ ಹೇಳುತ್ತಾನೆ. ನಾಗವರ್ಮ, ಕರ್ಣಪಾರ್ಯ, ಆಚಣ್ಣರನ್ನು ಕವಿ ಎಲ್ಲಿಯೂ ಹೆಸರಿಸುವುದಿಲ್ಲವಾದರೂ ಅವರನ್ನು ಸೇರಿಸಿಯೋ ‘ಕನ್ನಡದಲ್ಲಿ ಚಂಪೂಕೃತಿಯಾಗಿದೆ ಪೇಳ್ದ’ ಬಿನ್ನಾಣಿಗರೆಂದು ಇಲ್ಲಿ ಮೊಗಂ ಆಗಿ ಗುರುತಿಸಿರುವಂತೆ ತೋರುತ್ತದೆ. ಆದರೂ ತಾನು ನೇರ ಆಕರವಾಗಿರಿಸಿಕೊಂಡಿರುವ ಅಚಣ್ಣನನ್ನು ಪ್ರತ್ಯೇಕವಾಗಿ ಹೆಸರಿಸಬೇಕೆತ್ತೆನಿಸುತ್ತದೆ.

ಪದ್ಮಕವಿ ಹಲವು ಹಳಗನ್ನಡ ಮತ್ತು ಸಂಸ್ಕೃತ ಕಾವ್ಯಗಳನ್ನ ಅಭ್ಯಾಸ ಮಾಡಿದ್ದಾನೆ. ಪ್ರಿಯಕಾರಿಣಿ ರಾಣಿಯ ಪುತ್ರದೋಹಳ ಪ್ರಸಂಗ ಮೂರ್ತಿ ನೇಮಿಚಂದ್ರನ ನೇಮಿನಾಥ ಪುರಾಣದಿಂದ ಪ್ರಭಾವಿತವಾಗಿದೆ. ನೇಮಿಚಂದ್ರನ ಅರ್ಧ ನೇಮಿಪುರಾಣದ ಪ್ರಥಮಾಶ್ವಾದಲ್ಲಿ ಅರ್ಹದ್ದಾಸನ ಮಡದಿ ಜಿನದತ್ತೆಯ ಪುತ್ರಾಕಾಂಕ್ಷೆ ಕಾವ್ಯ ನಿರ್ಭರತೆಯಿಂದ ಉಜ್ವಲವಾಗಿದೆ, ಅದರ ಸಂಗ್ರಹವನ್ನು ಪದ್ಮಕವಿ ಇಲ್ಲಿ ಕೊಟ್ಟಿದ್ದಾನೆ.

ಅರಸನ ನುಡಿ ಮುನ್ನ ಕಿವಿಗೆ ರಸಾಯನ
ಬೆರಸಿತು ಸೂನುಲಾಭವನು |
ಮರುಗ ಹೂತುದು ಕಬ್ಬು ಪಣ್ತುದು ಬೇರೆ ತಾ
ನಿರವೇನು ಸರಸವಾತುಗಳು || ()

ಎಂಬ ಸಾಂಗತ್ಯ ಪದ್ಯ ನೇರವಾಗಿ ನೇಮಿಚಂದ್ರ ಕವಿಯ

ಅರಸನ ನುಡಿ ಮುನ್ನಮೆ
ರ್ಣರಸಾಯನಮದರ ಮೇಲೆ ಸುತಲಾಭ ಕಥಾಂ |
ತರಸಮೆನೆ ಸರಸಿಜಾಸ್ಯೆಗೆ
ಮರುಗಂ ಪೂತತ್ತು ಕರ್ವು ಪಣ್ತುದು ಪೆರತೇಂ ||[6]

ಎಂಬ ಕಂದ ಪದ್ಯದ ಪೂರ್ಣ ಪ್ರತಿಬಿಂಬ. ಹನ್ನೊಂದನೆಯ ಸಂಧಿಯ ಕಡೆಯಲ್ಲಿ ಮತ್ತು ಹನ್ನೆರಡನೆಯ ಸಂಧಿಯ ಆರಂಭದಲ್ಲಿ ಬರುವ ಕಾಮವಿಜಯ ಪ್ರಸಂಗ ಪೂರ್ತಿ ನಾಗಚಂದ್ರ ಕವಿಯ ಮಲ್ಲಿನಾಥ ಪುರಾಣದ ಅನುವಾದವಾಗಿದೆ.[7] ಕಾಮನು ಮಲ್ಲಿನಾಥನ ತಪಸ್ಸು ಕೆಡಿಸಲು ವಿಫಲನಾಗಿ ಮೊದಲೇ ಕೋಪಾನಿಲನಿಂದ ಸುಟ್ಟಿದ್ದು ಈಗ ಮುನಿಯ ದಯಾವರ್ಷಣದಿಂದ, ಕಣ್ಣೀರಿಂದ ಬೇವ ಸುಣ್ಣದಂತೆ, ಕ್ಷಣಮಾತ್ರದಲ್ಲಿ ಬೆಂದುಹೋದನು. ಕಾಮನಿಗುಂಟಾದ ಸ್ಥಿತಿ ಕಂಡು ರತಿಯೂ ದುಃಖತಪ್ತೆಯಾಗಿ ವಿರಹತಾಪದಿಂದ ಮಡಿದಳು. ಇದಿಷ್ಟೂ ನಾಗಚಂದ್ರನಲ್ಲಿ ಬರುವ ಕಾಮವಿಜಯಕಥೆ ಈ ಕಥೆ ನಾಗಚಂದ್ರನ ಮಲ್ಲಿನಾಥ ಪುರಾಣಕ್ಕೆ ಮೂಲವಾದ ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಬರುವುದಿಲ್ಲ. ಇದು ನಾಗಚಂದ್ರನ ನೂತುನ ನಿರ್ಮಾಣ ಮತ್ತು ಜೈನ ಪುರಾಣಕ್ಕೆ ಆತನ ಕೊಡುಗೆ. ಆದರೆ ನಾಗಚಂದ್ರನ ಈ ನವೀನ ಕಲ್ಪನೆಗೆ ಆಕರವಾಗಿ ನಿಂತು ಸ್ಫೂರ್ತಿ ಕೊಟ್ಟಿರುವುದು ಮಹಾಕವಿ ಕಾಳಿದಾಸನ ‘ಕುಮಾರಸಂಭವ’ ಕಾವ್ಯ. ಕುಮಾರ ಸಂಭವದ ನೆರಳಿನಂತೆ ನಡೆಯುವ ಮಲ್ಲಿನಾಥ ಪುರಾಣದ ಈ ಕಥೆಯನ್ನೇ ಮೊದಲು ಪದ್ಮಕವಿಯ ಆಶ್ರಯದಾತನ ಗುಮ್ಮಣಾಂಕನು ಮೆಚ್ಚಿಕೊಂಡು, ಕವಿಯನ್ನು ವಿವರಿಸುವಂತೆ ವಿಜ್ಞಾಪಿಸಿಕೊಂಡಿದ್ದು, ಇದರ ಅಭ್ಯಾಸದಿಂದ ಉತ್ತೇಜಿತನಾದ ಪದ್ಮಕವಿ ತಾನು ಬರೆದ ವರ್ಧಮಾನ ಚರಿತೆಯ ಅಂತ್ಯದಲ್ಲಿ ಇದನ್ನು ಅನಾಮತ್ತಾಗಿ ಸೇರಿಸಿದ್ದಾನೆ. ಮಹಾವೀರ ಚರಿತೆಗಳಲ್ಲಿ ಇದು ಹೊಸ ಸೇರ್ಪಡೆ, ಪದ್ಮಕವಿ ಕೊಡುಗೆ.

ಪದ್ಮಕವಿ ತಾನು ಹೆಸರಿಸಿರುವ ಕವಿಗಳಿಂದಲೇ ಅಲ್ಲದೆ ಹೆಸರಿಸದಿರುವ ಜೈನ ಜೈನೇತರ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದಾನೆ. ನಾಗವರ್ಮ, ದೇಪರಾಜ (ಕನಕದಾಸ – ಮುದ್ರಣ)ರಂತೆ ಈತನೂ ಕಾವ್ಯವನ್ನು ತನ್ನ ಹೆಂಡತಿಗೆ ಹೇಳಿದ್ದಾನೆ; ಆಕೆ –

ರಸಿಕರ ತಲೆವಣಿಯಲರವಿಲ್ಲಿನ ಪೊಚ್ಚ
ಪೊಸ ಬೆಡಗೆನೆ ಮುಂಗಥೆಯ |
ಉಸುರಿನಿಯನೆ ನೇಹದೆರಕವ ಬಲ್ಲನೆ
ಪಸಿವು ತೊಲಗಲು ಕರ್ಣಗಳ || (೬-೩)

ಎಂದು ನಲ್ಮೆ ತುಂಬಿ ಇನಿದಾಗಿ ಕೇಳಿಕೊಂಡಾಗ ಆತ :-

ಇಟ್ಟೆಡೆ ಮೊಲೆಯ ಬೆಡಗಿ ನಿಡಿದಾದೊಳು
ದಿಟ್ಟಿಯ ನೀರೆ ಕಪ್ಪಾದ |
ಬಟ್ಟದುರುಬಿ ನೆಳೆವೆಣ್ಣೆ ಹರನ ನಾಡ
ಕಟ್ಟೊಡತಿಯೆ ಕಥೆಗೇಳ ||

ಎಂದು ಕಾದಲಿನ ಕಾವು ಕೊಡುತ್ತಾನೆ.

ನಾಗವರ್ಮನ ವರ್ಧಮಾನ ಪುರಾಣಕ್ಕಿಂತ ಆಚಣ್ಣನ ವರ್ಧಮಾನ ಪುರಾಣವನ್ನು ವಿಶೇಷವಾಗಿ ಅನುಸರಿಸಿದ್ದರೂ ಪದ್ಮಕವಿ ತನ್ನತನವನ್ನು ಚೆನ್ನಾಗಿಯೇ ಪ್ರಕಟಿಸಿದ್ದಾನೆ.[8] ಮುಖ್ಯವಾಗಿ ಇವನ ಔಚಿತ್ಯ ಪ್ರಜ್ಞೆ ಪುರಸ್ಕಾರ ಯೋಗ್ಯವಾಗಿದೆ. ಇವನ ಹಿಂದಿನ ಕನ್ನಡ, ಸಂಸ್ಕೃತ ಮತ್ತು ಪ್ರಾಕೃತ ಕವಿಗಳು ಮಹಾವೀರನ ಪೂರ್ವಭವಾವಳಿಗಳಿಗೆ ಹಾಗೂ ಪಂಚಕಲ್ಯಾಣಗಳಿಗೆ ಹೆಚ್ಚಿನ ಮಹತ್ವಕೊಟ್ಟು ಚಾರಿತ್ರಿಕ ಸತ್ಯ ಸಂಗತಿಗಳನ್ನು ಕಡೆಗಣಿಸಿದ್ದಾರೆ. ಈತ ಪುರಾಣ ಉವಾಚವನ್ನು ಕೈಬಿಟ್ಟಿಲ್ಲ. ಅವನ್ನು ಸಂಗ್ರಹಿಸಿ ಚಾರಿತ್ರಿಕ ವಿವರಣೆಗೆ ಮನ್ನಣೆ ಕೊಟ್ಟಿದ್ದಾನೆ. ಪದ್ಮಕವಿ ಒಳ್ಳೆಯ ವರ್ಣಕ ಕವಿ. ಕಾವ್ಯದ ವಸ್ತು ದೊಡ್ಡದು. ಗ್ರಂಥ ಪ್ರಮಾಣ ಚಿಕ್ಕದು. ಹೀಗಿದ್ದೂ ಸಂದರ್ಭ ಸಿಕ್ಕಾಗಲೆಲ್ಲಾ ಕವಿ ಸ್ವಸಾಮರ್ಥ್ಯ ಪ್ರದರ್ಶನಕ್ಕೆ ತೊಡಗುತ್ತಾನೆ. ಈ ಕಾವ್ಯದಲ್ಲಿ ಬರುವ ವರ್ಣನೆಗಳ ಬಹುಪಾಲು ಹಿಂದಿನ ಕವಿಗಳ ಪ್ರತಿಧ್ವನಿಯಾಗಿದ್ದರೂ ಅಲ್ಲಲ್ಲಿ ಅದಕ್ಕೊಂದು ಸ್ವಂತ ಮುದ್ರೆ ಒತ್ತಿರುತ್ತಾನೆ. ಸಿದ್ಧಾರ್ಥ – ಪ್ರಿಯಕಾರಿಣಿಯರು ‘ಅವನು ಅವಳಿಗಾಗಿ ಅವಳು ಅವನಿಗಾಗಿ’ ಎಂಬಂತೆ ಅನುರಾಗದ ಆಲಿಂಗನದಲ್ಲಿ ಕಾಲ ಕಳೆಯುತ್ತಿರುವಾಗ ಶಾರದ ಆಗಮನವಾಯಿತು. ಆಗ –

ಶಾರದ ರಜಕ ಬಾಂದೊರೆಯೊಳು ತೊಳೆದಾಗ
ಸೀರೆಗಳು ಬಾನವೆಂಬ |
ಚಾರು ಶಿಲೆಯೊಳು ಪಾಸಿದನೆನೆ ಬೆಳ್ಪಿನ
ನೀರದಗಳು ತುರುಗಿದವು || ()

ಎಂದು ಕವಿ ಕಲ್ಪನೆ ಕೊನರುತ್ತದೆ. ಸಕಲ ಸಂಪತ್ತಿಗೆ ಎರೆವಟ್ಟಾದ ತ್ರಿಪಿಷ್ಟನ ಕೀರ್ತಿಲತೆ ದಶದಿಕ್ಕಿಗೂ ದಾಂಗುಡಿಯಿಟ್ಟಿತು. ಅವನ ಚೆಲುವು ಸಾಟಿಯಿಲ್ಲದ್ದು. ಪದ್ಮಕವಿ ಇದನ್ನು ಉತ್ಪ್ರೇಕ್ಷಿಸಿ ವಿಶಿಷ್ಟವಾದ ರೀತಿಯಲ್ಲಿ ಚಿತ್ರಿಸಿದ್ದಾರೆ.

ಕೇಶವನ ಪರಭಾಗದ ರುಚಿ ಮೇಲಕೆ
ಸೂಸೆ ಪೊದರುಗಟ್ಟಿತೆನಲು |
ದೇಸಿಕಾತಿಯರ ಕಣ್ಗಿನಿದಾಗಿ ಮೃದುನೀಳ
ಕೇಶಕಲಾಪ ರಂಜಿಸಿತು || (೪-೩)

ಕುಡಿವುರ್ವಿನೆರಳೆಯ ಕೋಡಿರ್ದ ಚಂದ್ರನು
ನುಡಿವೆಣ್ಣು ನೆಸಿರ್ದ ಕಮಲ |
ಬೆಡಗಿನ ಕೊರಲುವಿಡಿಯ ನೋಟಗನ್ನಡಿ
ಪೊಡೆಯಲರನ ಸಿರಿವದನ | (೪-೪)

ಸ್ಮರನ ವಕ್ಷದ ಸಿರಿ ಪಡೆಯೆ ಮೊಗದ ಸಿರಿ
ಹುರುಡಿಸಿ ತಾನೆ ನವೀನ |
ಸ್ಮರನ ಬಸಲೆಯಾಗೆ ಮಲಗಿರ್ದನೆನೆ ಮೀಸೆ
ಸರಸಿಜನಾಭನಿಗೆಸೆಗು || (೪-೯)

ದೇಸಿಗಾತಿಯರನೆಸುಗೆಯಲ್ಲಿ ಕರ ನೊಂದು
ಬೇಸತ್ತು ಹೆದೆಯನಿಳುಹದೆ |
ಸಾಸಿಗ ಕಾಮನಿಟ್ಟಿಕ್ಷುಚಾಪದವೊಲು
ಮೀಸೆ ರಂಜಿಪುದು ಕೇಶವನ || (೪-೧೦)

ಅಂಗನೆಯರ ಅಂಗಾಂಗ ಶೃಂಗಾರ ವರ್ಣನೆಗಳಲ್ಲಿ ವಿಜೃಂಭಿಸಿ ಕಾವ್ಯಶಕ್ತಿಯನ್ನು ಧಾರೆಯೆರೆಯುವ ಕವಿಗಳೇ ಹೆಚ್ಚು. ಪದ್ಮ ಕವಿಯೂ ಅದಕ್ಕೆ ಹೊರತಲ್ಲವಾದರೂ ಒಂದು ಕಡೆ ಅಪವಾದವೆಂಬಂತೆ ‘ತ್ರಿಪಿಷ್ಟನಾಮದ ವಾಸುದೇವ’ನನ್ನು ಅಡಿಮುಡಿವಿಡಿದು ಮುವ್ವತ್ತು ಪದ್ಯಗಳಲ್ಲಿ ವರ್ಣಿಸಿದ್ದಾನೆ. ಕಾವ್ಯುದುದ್ದಕ್ಕೂ ಮನಸೆಳೆಯುವ ಉಪಮೆಗಳನ್ನು ಚೆಲ್ಲಿದ್ದಾನೆ : ನಾರಿಸೂಸಿದ ಪುಷ್ಪಾಂಜಲಿಯೆನೆ (೯-೬೭) ಕಾವನ ಹೂವುವಿಲ್ಲಿಗೆ ಗವಸಣಿಗೆಯನಾವರಿಸುವೊಲು (೫-೫೭) ಜವನ ಕೈಯೊಳ ಸೂತ್ರದಾಟದ ಬೊಂಬೆಯಂತೆ (೧೧-೩೭) ತಿರುಪಿದ ಚಕ್ರದ ತಿಗುರಿಯಂದದಿ (೭-೨೮) ತೊಂಡವಣ್ಣನು ಸವಿದರಗಿಳಿ ಸೊಕ್ಕಿ ತಾ ತೊಂಡುಗೆಡೆವ ತೆರನಂತೆ (೫-೯೨) ಉರುವ ಪಿಶಾಚರ್ಗೆ ಜವ ಮಾರಲೆಂದಿಟ್ಟ ನೆರೆ ಪಸರದ ಸಾಲಿನಂತೆ (೬-೧೩೭) ಅರಳೆಯನುರಿಕೊಂಡ ತೆರನೊಳು (೫-೧೭) ಮುಂತಾದವನ್ನು ಹೆಸರಿಸಬಹುದು. ಪದ್ಮ ಕವಿಗೆ ಒಳ್ಳೆ ಚಿತ್ರಕ ಶಕ್ತಿಯೂ ಇದೆ. ಆತ ಕಂಡರಿಸಿರುವ ಹಲವು ಚಿತ್ರಗಳಲ್ಲೊಂದು –

ಎಳೆಗರು ತುಡುಕೆ ಕೆಚ್ಚಲ ಚಾಚಿ ನೆಕ್ಕುತ
ಲಿಳುಹಿ ಸೊರಹನು ಹೂಂಕರಿಸಿ |
ಫಳಿಲನಿನಿಸು ಗಂಜಳವ ಬಿಟ್ಟು ಮರುಕದೊ
ಳೆಳೆಗಂದಿಯದೆ ನೋಡು ನೀರೆ || (೨೧)

ಪರಿಪರಿದಾಡಿ ಬೆಂಬಳಿ ಬಂದು ತಾಯೊಂದು
ತೊರೆದ ಮೊಲೆಯನಿನಿಸುಂಡು |
ಒರಸಿ ಮುಸುಡಿನಿಂದ ಗಂಗೆದೊವಲನಿರ್ದ
ಕರುವಿನಂದವ ಕಂಡಳಾಗ (೨೨)

ಹೀಗೆ ನಾನಾ ದೃಷ್ಟಿಗಳಿಂದ, ಮಹಾವೀರನನ್ನು ಕುರಿತು ರಚಿತವಾಗಿರುವ ಕನ್ನಡ ಹಾಗೂ ಕನ್ನಡೇತರ ಕಾವ್ಯಗಳ ಶ್ರೇಣಿಯಲ್ಲಿ ಪದ್ಮಕವಿಯ ವರ್ಧಮಾನ ಚರಿತೆ ಒಂದು ವಿಶಿಷ್ಟಕೃತಿ.[9]

[1] ಅದೇ; ಪು. ೭೮ – ೮೧

[2] ಬಿ.ಎಸ್. ಸಣ್ಣಯ್ಯ (ಸಂ 🙂 ವರ್ಧಮಾನ ಚರಿತೆ ೧೯೭೬

[3] ಹೀರಾಲಾಲ್ ಜೈನ್ ಮತ್ತು ಆ. ನೇ. ಉಪಾಧ್ಯೆ : ವೀರಜಿಣಿಂದ ಚರಿತೆ ; ೧೯೭೬

[4] ಕಮಲಾಹಂಪನಾ : ಚಾವುಂಡರಾಯಪುರಾಣ, (ಹಸ್ತಪ್ರತಿ), ಇದರಲ್ಲಿ ಮಹಾವೀರನ ಬಗ್ಗೆ ಎಂಟು         ಪುಟವಿದ್ದು ಉಳಿದದ್ದು ಅರವತ್ತು ಪುಟ ಇದೆ.

[5] ಕಮಲಾಹಂಪನಾ : ಮಹಾವೀರರ ಜೀವನ ಸಂದೇಶ; ಅನುಬಂಧ ೧ ಪು. ೬೦ ರಿಂದ ೬೨

[6] ಬಿ.ಎಸ್. ಕುಲಕರ್ಣಿ (ಸಂ) ; ನೇಮಿನಾಥ ಪುರಾಣ ; ಪು. ೨೨ ಪದ್ಯ ೧-೧೧೩

[7] ಬಿ. ಎಸ್. ಕುಲಕರ್ಣಿ (ಸಂ) : ಮಲ್ಲಿನಾಥ ಪುರಾಣ ; ಪದ್ಯಗಳು ೧೪-೧೪ ರಿಂದ ೩೮ ರವರೆಗೆ

[8] ಬಿ.ಬಿ. ಮಹೀರವಾಡಿ : ಆಚಣ್ಣ ಕವಿಯ ವರ್ಧಮಾನ ಪುರಾನ ೧೯೭೬

[9] ಕೆ. ಭುಜಬಲಿಶಾಸ್ತ್ರೀ, ಕನ್ನಡ ಪ್ರಾಂತೀಯ ತಾಡಪತ್ರೀಯ ಗ್ರಂಥ ಸೂಚಿ ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು, ಪು. ೫೭-೫೮