ವಿಜಯಕುಮಾರಿ ಚರಿತೆ, ಅದರ ಹೆಸರೇ ಹೇಳುವಂತೆ, ವಿಜಯಕುಮಾರಿ ಎಂಬಾಕೆಯ ಕಥೆಯನ್ನೊಳಗೊಂಡಿದೆ. ವಿಜಯ ಕುಮಾರಿ ವಿಜಿತೇಂದ್ರಿಯಳಾಗಿದ್ದು ‘ಕಾಮನಗೆಲಿದ’ ಸಂಯಮಿ, ಧರ್ಮಿಷ್ಣು, ಶ್ರದ್ಧಾನ್ವಿತೆ, ಆಕೆ ಒಬ್ಬ ಆದರ್ಶ ಶ್ರಾವಕಿ (ಗೃಹಿಣಿ)ಯಾಗಿ ಜೀವನವನ್ನು ರೂಪಿಸಿಕೊಂಡುದರಿಂದ ಬ್ರಹ್ಮಚಾರಿಣಿ ‘ನೀಲಿ’ಯಂತೆ ಈಕೆಯ ಕತೆಯೂ ಪ್ರಸಿದ್ಧವಾಯಿತು[1] ವಿಜಯಕುಮಾರಿ ಪಾಯಿಸೆಟ್ಟಿ (ಪಾಯಣ್ಣ ಸೆಟ್ಟಿ) ಮತ್ತು ಪದ್ಮಾವತಿ (ಪದುಮಾಯಿ) ದಂಪತಿಗಳ ಮಗಳಾದ ವಿಜಯ ಕುಮಾರಿ ಪುರಾಣ ಪುಷ್ಪವಲ್ಲ, ಚಾರಿತ್ರಿಕ ವ್ಯಕ್ತಿ. ಒಂದು ದಿನ ಪಾಯಣಸೆಟ್ಟಿ ‘ಪರದುಗೈವರೆ ಪೋಗಲಿತ್ತಾ ವರಮುನಿಗಳ ಸಂಘ ದ್ವಾರಸಮುದ್ರಕ್ಕೆ ಬರುತಿರ್ದಪರೆಂದೆನಲೂ’ (೨-೧೧) ಪದ್ಮಾವತಿ ಆಹಾರ ದಾನಕ್ಕೆ ಅಣಿಯಾಗತೊಡಗಿದರು. ಅಲ್ಲಿಂದ ಮುಂದಕ್ಕೆ ವಿಜಯ ಕುಮಾರಿಯ ಬಾಳು ಧರ್ಮದ ಆಗರವಾಗಿ ಪರಿಣಮಿಸಿತೆಂಬ ಕಥೆ ವಿಸ್ತಾರವಾಗಿ ಬರುತ್ತದೆ. ಪಾಯಿಸೆಟ್ಟಿ ಮಗಳಿಗೆ ‘ವಿಜಯ ಪಾರಿಶ್ವನಾಥನ ನಾಮವಿರಲೆಂದು ವಿಜಯಕುಮಾರಿ ಯೆಂದಿಟ್ಟನಂತೆಂಬುದು ಪರಿಶೀಲನಾರ್ಹವಾಗಿದೆ. ಇದು ದ್ವಾರ ಸಮುದ್ರದಲ್ಲಿನ ಅಂದರೆ ಈಗಿನ ಹಳೆಯಬೀಡಿನಲ್ಲಿರುವ ವಿಖ್ಯಾತ ಚೈತ್ಯಾಲಯ. ವಿಜಯ ಪಾರ್ಶ್ವನಾಥನ ಬಸದಿಯನ್ನು ಬೊಪ್ಪನು ತನ್ನ ತಂದೆ ಗಂಗರಾಜ ಸೇನಾಪತಿಯ ನೆನಪಿಗಾಗಿ ೧೧೩೮ ರಲ್ಲಿ ಕಟ್ಟಿಸಿದನು.[2] ಈ ದೇವಾಲಯ ನಿರ್ಮಾಣವಾದಾಗ ಹೊಯ್ಸಳ ವಿಷ್ಣುವರ್ಧನ ಯುದ್ಧದಲ್ಲಿ ವಿಜಯಿಯಾದನು ಮತ್ತು ಮಗನ ಜನನವೂ ಆಯಿತು; ಅದರಿಂದ ತನ್ನ ಮಗನಿಗೆ ವಿಜಯನಾರಸಿಂಹನೆಂದೂ, ಬೊಪ್ಪನು ಕಟ್ಟಿಸಿದ ಬಸದಿಗೆ ವಿಜಯಪಾರ್ಶ್ವನಾಥ ಮಂದಿರವೆಂದು ವಿಷ್ಣುವರ್ಧನನು ಹೆಸರಿಟ್ಟನು. ಇದರಲ್ಲಿ ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನ ೧೬ ಅಡಿಯ ಖಡ್ಗಾಸನ ಮೂರ್ತಿಯಿದೆ.[3] ಆದ್ದರಿಂದ ಪಾಯಿಸೆಟ್ಟಿ ಪದ್ಮಾವತಿಯರ ಮಗಳು ವಿಜಯ ಕುಮಾರಿಯ ಜೀವಿತ ಕಾಲ ಸುಮಾರು ೧೧೫೦ ಎಂದು ತಿಳಿಯಬಹುದು. ಈಕೆಯ ಕಥೆ ಸಂಸ್ಕೃತ ಜೈನ ವಾಙ್ಮಯದಲ್ಲೂ ಉಂಟು, ಶ್ರುತಕೀರ್ತಿ ಕವಿ ಅದನ್ನು ಅಭ್ಯಾಸ ಮಾಡಿದ್ದಾನೆ. ಜೈನ ಶ್ರಾವಕೋತ್ತಮರು ಇದನ್ನು ತಿಳಿದು ಶ್ರುತಕೀರ್ತಿಯ ಬಳಿ, ಆರ್ಯಭಾಷೆಯಿಂದ ಈ ಕಥೆಯನ್ನು ಕನ್ನಡ ಭಾಷೆಯಲ್ಲೂ ರಚಿಸುವಂತೆ ವಿಜ್ಞಾಪಿಸಿಕೊಂಡರು. ಅವರ ಅರಿಕೆಯಂತೆ ತಾನು ಈ ಕಾವ್ಯ ಬರೆಯತೊಡಗಿದುದಾಗಿ ಕವಿ ನಿವೇದಿಸಿದ್ದಾನೆ :

ಉತ್ತರ ದೇಶದೊಳಾರ್ಯ ಭಾಷೆಯೊಳು ಚೆ
ಲ್ವೆತ್ತಿರಲಿಲ್ಲ ಸತ್ಕಥೆಯೂ |
ವಿಸ್ತರಿಸುವು ಕಂನಡದೊಳಗೆಂದು ಜೈ
ನೋತ್ತಮರೆಲ್ಲ ಪ್ರಾರ್ಥಿಸಲೂ
ಬಲ್ಲವರೆಲ್ಲಾಡಿದ ಮಾತ ಕೇಳಿ ನಾ
ನುಲ್ಲಂಘಿಸಬಾರದೆಂದೂ |
ಸೊಲ್ಲಿಸಿದನು ನಂನ ಮಾತಿಗೆ ತಕ್ಕನಿತರೊ
ಳೊಲ್ದು ಲಾಲಿಸಿ ಕೇಳುವುದು ||  (-೨೬,೨೭)

ವಿಜಯ ಕುಮಾರಿ ಚರಿತೆ ಕಾವ್ಯದ ಪ್ರಾರಂಭದಲ್ಲಿ ಅರ್ಹಂತ ಸಿದ್ಧಾದಿ ಪಂಚಪರಮೇಷ್ಟಿಗಳನ್ನೂ ಸರಸ್ವತಿ ಗಣಧರರನ್ನೂ ಸ್ತುತಿಸಿದ್ದಾನೆ. ತರುವಾಯ ಜೈನ ಪುರಾಣಕಾರರ ಪದ್ಧತಿಯಂತೆ ಪ್ರಾಚೀನ ಜೈನಾಚಾರ್ಯರನ್ನು ಭದ್ರಬಾಹುವಿನಿಂದ ಶ್ರುತಕೀರ್ತಿವರೆಗೆ ಸ್ಮರಿಸಿದ್ದಾನೆ. ಅಲ್ಲಿಂದ ಮುಂದಕ್ಕೆ ಸುಮಾರು ೧೨೮೦ ಪದ್ಯಗಳಲ್ಲಿ ವಿಜಯ ಕುಮಾರಿಯ ಕಥೆಯನ್ನು ನಿರೂಪಿಸಿದ್ದಾನೆ. ಕಾವ್ಯ ಕುಂಠಿತವಾಗದಂತೆ ನಿರರ್ಗಳವಾಗಿ ಸಾಗುತ್ತದೆ. ಶ್ರುತಕೀರ್ತಿ ರತ್ನಾಕರವರ್ಣಿಯ ಪದ್ಯಗಳನ್ನು ನೆನಪಿಗೆ ತರುತ್ತಾನೆಂಬುದುಕ್ಕೆ ಕೇವಲ ಮೂರು ಪದ್ಯಗಳನ್ನು ನೋಡಬಹುದು :

ಸರುನರಫಣೀಫತಿನತಪಾದಪದ್ಮಗೆ | ದುರಿತ ತಿಮಿರ ದಿನಕರಗೆ
ವರಮೋಕ್ಷ ಲಕ್ಷ್ಮೀಪತಿ ಮಹಾದೇವ ಶಂ | ಕರಗಾದಿಜಿನಗೆರಗುವೆನು || ()
ಸಿದ್ಧರ ಬೋಧ ಸಮೃದ್ಧರನಾತ್ಮದಿ | ಶುದ್ಧರನಂತೆ ರಂಗದೊಳೂ
ಬುದ್ಧರ ಸೌಖ್ಯ ಸುಧಾಬ್ಧಿಯೊಳದ್ದರ | ಶುದ್ಧ ಚಿತ್ತದೊಳು ಜ್ಞಾನಿಪೆನೊ || ()
ರಳಕುಳ ಶಿಥಿಲ ಸಮಾಸ ಮುಂತಾದ | ಕ್ಷಣಗಳಲ್ಲಿ ಬಲ್ಲವರೂ
ಯಳಸಿ ಕೇಳರಿವ ಮರೆಯಬೇಡ ಪಾಡುಗಬ್ಬ | ದೋಳಕೆ ಬರಬಲ್ಮೆ ನಿಮಗೆ || (೩೩)

ತನಗೆ ಶಬ್ದ ಕಾವ್ಯಾಗಮ ಶಾಸ್ತ್ರಗಳ ಬಲವಿದ್ದು ಹೇಳಿದ ಕೃತಿ ಇದಲ್ಲವೆಂದು, ಇದನ್ನು ‘ಜಡಮತಿಗಳಿಗೆ ನಾನು ನುಡಿದೆ ಬಲ್ಲನಿತನು’ ಎಂದೂ ಶ್ರುತಕೀರ್ತಿ ಅರಿಕೆ ಮಾಡಿದ್ದಾನೆ. ಅಲ್ಲದೆ ತನ್ನೀ ಕೃತಿಯನ್ನು ಕಡೆ ಮೊದಲಾಗಿ ಕೇಳುವವರ ಮನಸಿಗೆ ಜಡತೆಯಾಗದೆ ಅನುರಾಗವಡೆದಂತೆ ನಡೆಸಲು ಬಿಡದೆ ಶಾಸನದೇವತೆಗಳನ್ನು ಪ್ರಾರ್ಥಿಸಿದ್ದಾನೆ.

‘ನೆಲದೊಳಗೆ ಸುಜನರಾದವರು ಇಲಿಯ ಭೀತಿಗೆ ಮನೆಯ ಮಾಡರೆ? ನೊಣಕಾಗಿ ಮಲಯಮೃತಾನ್ನವನುಣರೆ? ಅದರಂತೆ ಕವಿಗಳು ಖಳಜನಕಂಜಿ ಕೃತಿವೇಳದಿಪ್ಪರೇ?’ – ಎಂದು ಶ್ರುತಕೀರ್ತಿ ವಿಶ್ವಾಸ ತಳೆದು ಕಾವ್ಯರಚನೆಗೆ ತೊಡಗಿದ್ದಾನೆ ಕಾವ್ಯಾಂತ್ಯದಲ್ಲಿ ಕವಿ ತನ್ನ ಹಾರೈಕೆಯನ್ನು ಹೇಳಿದ್ದಾನೆ :

ಕೆರೆತೊರೆ ಸರಸಿ ಹೊಕ್ಕರಣೆಯೊಳಗೆ ಜಲ
ಬರೆಯದಿರಲಿ ನೃಪವರರೂ |
ತೆರಿಗೆ ಬಾಧೆಯ ಪ್ರಜೆಗೆ ತಾರದೆ ಕೃಪೆ
(ವೆರಸಿ) ಧರೆಯನಾಳುತಿರಲೀ || (೧೨೭೬)

ವಿಜಯಕುಮಾರಿ ಚರಿತೆಯೆಂಬ ಅನ್ಯಕವಿಕೃತ ಸಾಂಗತ್ಯ ಕಾವ್ಯವಿದ್ದಂತೆ ತೋರುತ್ತದೆ.[4]

.ಶಾಂತವೀರ

ಶಾಂತವೀರ ಕವಿ ಹಾಗೂ ಅವನ ಕೃತಿ ವೀರಭದ್ರಲೀಲಾರತ್ನ ಕವಿಚರಿತೆಯಲ್ಲಿ ಅನುಕ್ತ ಹೆಸರುಗಳು. ಈ ಕವಿ ತನ್ನ ವಿಚಾರದಲ್ಲಿ :

ಧರೆಯೊಳುನ್ನತವಾದ ಕುಣಗೀಲ ಮಠಾಧೀಶ
ಗುರು ಚನ್ನಬಸವೇಶ್ವರನಾ |
ಕರಜಾತ ಪುರಾನದಿ ಶಾಂತವೀರನು ಪೇಳ್ದ
ವರ ಲೀಲಾರತ್ನವನೂ || (೧೦೧೧೨)

ಎಂಬುದಾಗಿ ತಿಳಿಸಿದ್ದಾನೆ. ಈಗಿನ ಕಾವ್ಯದ ಹಸ್ತ ಪ್ರತಿಯೊಂದು ಕನ್ನಡ ಅಧ್ಯಯನ ಕೇಂದ್ರದಲ್ಲಿಯಾದರೂ (ಕೆ.೧೮೬) ಅದು ತೀರ ಅಸಮಗ್ರವಾಗಿದ್ದು ಅದರಲ್ಲಿನ ೨, ೩, ೧೫, ೧೬, ೧೭, ೩೭, ೫೪ ಮೊದಲಾದ ಸಂಖ್ಯೆಯ ಪತ್ರಗಳು ಇಲ್ಲ ಮತ್ತು ಇರುವ ಓಲೆಗರಿಗಳಲ್ಲಿ ಹೆಚ್ಚಿನವು ಪ್ರಕಟಿಟವಾಗಿವೆ. ಇದು ಸು.೧೬೦೦ ಕ್ಕೆ ಸೇರಿದ ಸಾಂಗತ್ಯ ಕಾವ್ಯವೆಂದು ತೋರುತ್ತದೆ[5]. ಇದರಿಂದ ಮಾದರಿಗೆಂದುಎರಡು ಪದ್ಯಗಳನ್ನು ಉದಾಹರಿಸಿದೆ.

ರುದ್ರ ಶೋಭನಗಳ ಪಾಡುತ್ತಾರತಿಗಳ
ರುದ್ರ ಕನ್ನಿಕೆಯರು ಪಿಡಿದೂ |
ರುದ್ರನ ಮೊಗ ಸಿರಯೆತ್ತ ನಡಿಯೆ ವೀರ
ಭದ್ರನಿದಿರು ಗೊಂಬುವರೆ ||
ತಾಳ ದಂಡಿಗೆ ಮದ್ದಳೆಗಳ ರಚನೆಯ
ಮೇಳದ ದೇವಪಾತ್ರಗಳ |
ಆಳಾಪಭೃಂಗಿ ನಾಟ್ಯದಿ ನಂದಿ ನಡೆದನು
ಕಾಳಾಂಗಿರುದನೆಯಿಧೀರಾ ||

ಈ ಕಾವ್ಯದ ವಸ್ತು ವೀರಭದ್ರನಿಗೆ ಸಂಬಂಧಿಸಿದ್ದು. ದಕ್ಷನು ಈಶ್ವರನನ್ನು ಕರೆಯದೆಯೇ ಯಾಗಮಾಡಲು, ಅದಕ್ಕೆ ಕೋಪಿಸಿಕೊಂಡ ಶಿವನು ವೀರಭದ್ರನಾಗಿ ಗೆದ್ದ ಕಥೆ ಇದರಲ್ಲಿದೆ. ಇದು ವೀರಶೈವ ಕವಿಗಳಿಗೆ ತುಂಬ ಪ್ರಿಯವಾದ ಕಾವ್ಯ ಕಥಾ ವಸ್ತುಗಳಲ್ಲೊಂದು. ಉದಾಹರಣೆಗೆ ಇದೇ ವಿಷಯವನ್ನೆತ್ತಿಕೊಂಡು ರಾಘವಾಂಕನು (ಸು. ೧೨೦೦) ವೀರೇಶ್ವರ ಚರಿತೆಯನ್ನೂ, ವೀರ ಭದ್ರರಾಜನು (ಸು. ೧೫೩೦) ವೀರಭದ್ರ ವಿಜಯ ಚಂಪೂವನ್ನೂ, ಚೆನ್ನಣ್ಣ ಕವಿ (ಸು. ೧೬೫೦) ವೀರೇಶ್ವರ ವಿಜಯ ಚಂಪೂವನ್ನೂ, ಚೆನ್ನಣ್ಣ ಕವಿ (ಸು. ೧೫೩೦) ವೀರಭದ್ರ ವಿಜಯ ಚಂಪೂವನ್ನೂ, ಚೆನ್ನಣ್ಣ ಕವಿ (ಸು. ೧೬೫೦) ವೀರೇಶ್ವರ ಚರಿತೆಯನ್ನೂ ಸೋಮ ಕವಿ (ಸು. ೧೭೦೦) ವೀರಭದ್ರ ಸಾಂಗತ್ಯವನ್ನು ಬರೆದಿದ್ದಾರೆ. ಈಗ ಉಪಲಬ್ಧವಿರುವಷ್ಟು ಭಾಗದ ಅಭ್ಯಾಸದಿಂದ ಹೇಳುವುದಾದರೆ ಶಾಂತವೀರನ ವೀರಭದ್ರ ಲೀಲಾರತ್ನ ಸಾಧಾರಣ ದರ್ಜೆಯ ಕಾವ್ಯವಾಗಿದೆ.

. ಶಾಂತಕವಿ

ಶಾಂತಕವಿ ಹಾಗೂ ಅವನ ಕೃತಿಯಾದ ಸತ್ಕೇಂದ್ರ ಚೋಳನ ಸಾಂಗತ್ಯ ಕವಿಚರಿತೆಯಲ್ಲಿ ಉಲ್ಲೇಖವಾಗಿಲ್ಲ. ಸುಮಾರು ೧೬೦೦ ರ ಅವಧಿಗೆ ಅಳವಡು ಶಾಂತಕವಿಯ ಸತ್ಯೇಂದ್ರ ಚೋಳನ ಸಾಂಗತ್ಯ ಕಾವ್ಯವು ಒಂಬತ್ತು ಸಂಧಿ (ಕವಿ ಸಂಧಿಗಳನ್ನು ಗತಿ ಎಂದು ಕರೆದಿದ್ದಾನೆ) ಮತ್ತು ೧೫೮೨ ಪದ್ಯಗಳ ಕಾವ್ಯ. ಕನ್ನಡ ಅಧ್ಯಯನ ಕೇಂದ್ರದಲ್ಲಿರುವ ಇದರ ಕಾಗದದ ಹಸ್ತ ಪ್ರತಿ ಪೂರ್ಣವಾಗಿದ್ದರೂ ಲಿಪಿಕಾರ ಹೆಚ್ಚು ಓದಿದವನಲ್ಲವಾದುದರಿಂದ ಅದರಲ್ಲಿ ಅಕ್ಷರಾಧಿ ದೋಷಗಳು ಕೆಲವು ನುಸುಳಿಕೊಂಡಿವೆ[6]. ಈ ಪ್ರತಿಯ ಪ್ರಾರಂಭ ಹೀಗಿದೆ : ‘ಶ್ರೀ ಗುರುಬಸವಲಿಂಗಾಯ ನಮಃ ಶ್ರೀ ಗಣೇಶಾಯ ನಮಃ ಶ್ರೀ ಶಾರದಾಯ ನಮಃ ಸತ್ಯಂದ್ರ ಚೋಳನ ಸಾಂಗತ್ಯದ ಪುಸ್ತಕ ಬರುವುದಕ್ಕೆ ಶುಭಮಸ್ತು’. ಈ ಪ್ರತಿಯನ್ನು ಎತ್ತಿ ಬರೆದವನು ‘ರೇವಯ್ಯನ ಪುತ್ರ ವಿರಸಂಗಯ್ಯನು’. ಈ ಕಾವ್ಯದ ಪ್ರಾರ್ಥನಾ ಪದ್ಯ ಹೀಗಿದೆ :

ಶ್ರೀಪತಿ ಸುರಪತಿ ಶ್ರೀಪದ್ಮಜಾರ್ಚಿತ
ಶ್ರೀಪದ ಪಂಕಜಯಗಳ |
ಶ್ರೀಪಾರ್ವತಿಯ ಕಾಂತಾ ಶ್ರೀಪದವಿಯನೀವ
ಶ್ರೀ ಪರಮೇಶ್ವರ ಜಯತೂ ||

ಶಾಂತಕವಿಯ ಸಾಂಗತ್ಯ ಪದ್ಯಗಳ ಬಂಧ ಲಲಿತವಾಗಿದೆ. ಪಂಚಾಕ್ಷರಿಯ ಮಹತ್ವವನ್ನು ಬೋಧಿಸುವ ಈ ಕಾವ್ಯದ ವಸ್ತು ವೀರಶೈವ ವಾಙ್ಮಯದಲ್ಲಿ ಸುಪರಿಚಿತವಾದದು. ಕನ್ನಡದಲ್ಲಿ ಗುಬ್ಬಿಯ ಮಲ್ಲಣಾರ್ಯನು (೧೫೧೩) ತನ್ನ ಭಾವಚಿಂತಾರತ್ನದಲ್ಲಿಯೂ ಷಡಕ್ಷರ ಕವಿ (೧೬೫೫) ತನ್ನ ರಾಜಶೇಖರ ವಿಲಾಸದಲ್ಲಿಯೂ ಈ ವಸ್ತುವನ್ನು ಆರಿಸಿಕೊಂಡಿದ್ದಾರೆ. ಈ ಕವಿ ಬಹುವಾಗಿ ಭಾವಚಿಂತಾರತ್ನದಿಂದ ಪ್ರಭಾವಿತನಾಗಿದ್ದಾನೆಂಬುದು ಗಮನಾರ್ಹವಾಗಿದೆ. ಆದರೆ ಈ ಎಲ್ಲ ಕವಿಗಳಿಗೂ ಮೂಲ ಆಕರ ತಮಿಳು ಭಾಷೆಯ ಕೃತಿಯೆಂಬುದನ್ನು ಮರೆಯುವಂತಿಲ್ಲ ವಿವಿಧ ಭಾವಗಳಿಗೆ ಮುಖ್ಯವಾಗಿ ಭಕ್ತಿ ಮತ್ತು ಕರುಣೆಗೆ ಅವಕಾಶ ಮಾಡಿಕೊಟ್ಟಿರುವ ಈ ವಸ್ತುವನ್ನು ಶಾಂತಕವಿ ತನ್ನ ಇತಿಮಿಗೆ ತಕ್ಕಂತೆ ಲೇಸಾಗಿ ಬಳಸಿಕೊಂಡಿದ್ದಾನೆನ್ನಬಹುದು.

. ಪಾಯಣ್ಣ ವ್ರತಿ

ಪಾಯಣ್ಣ ವ್ರತಿ, ಪಾಯಣವರ್ಣಿ, ಪಾಯಣ ಮುನಿ ಎಂಬ ಹೆಸರುಗಳನ್ನುಳ್ಳ ನಾಲ್ವರು ಕವಿಗಳಿದ್ದಾರೆ. ಇವರು ನಾಲ್ವರೂ ಹೆಸರಿನಸಾದೃಶ್ಯವಿರುವ ಬೇರೆ ಬೇರೆ ಕವಿಗಳು. ಇವರಲ್ಲಿ ಪಾಯಣ್ಣ (ಣ೦ ವ್ರತಿಯೆಂಬ ಕವಿ ಸಮ್ಯಕ್ತ್ವ ಕೌಮುದಿಯೆಂಬ ಸಾಂಗತ್ಯ ಕಾವ್ಯವನ್ನು ರಚಿಸಿದ್ದಾನೆ.

ಪಾಯಣ್ಣ ವ್ರತಿ ಈಗಿನ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸೇರಿದ ನಂದಿಗ್ರಾಮ (ನಂದಿಯಪುರ) ದವನೆಂದು ತೋರುತ್ತದೆ. ಏಕೆಂದರೆ ಪಾಯಣ್ಣ ವ್ರತಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾ ತಾನು ‘ಪೆನಗೊಂಡೆ ದೇಶದಲ್ಲಿಯ ನಂದಿಯಪುರದವನೆಂದು ತಿಳಿಸಿದ್ದಾನೆ. ಪೆನಗೊಂಡ (ಪೆನಕೊಂಡ) ಈಗಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಸೇರಿದ ತಾಲ್ಲೂಕು ಕೇಂದ್ರ ಇಲ್ಲಿ ಈಗ ಕೇವಲ ಎರಡು ಜೈನ ದೇವಾಲಯಗಳು ಮಾತ್ರ ಉಳಿದಿವೆಯಾದರೂ ಹಿಂದೆ ಇಲ್ಲಿ ನೂರಾರು ಬಸದಿಗಳಿದ್ದುವೆಂದು ಪ್ರತೀತಿಯಿದೆ.[7] ಜೀವಂಧರ ಷಟ್ಪದಿ ಕಾವ್ಯವನ್ನು ಬರೆದ ಭಾಸ್ಕರಕವಿ ಈ ಪೆನಗೊಂಡೆಯವನು. ಈಗಿನ ಕೋಲಾರ ಜಿಲ್ಲೆಯನ್ನು ಮೂಡಲಸೀಮೆಯೆಂದು ಜೈನರು ಕರೆಯುತ್ತಾರೆ. ಈ ಮೂಡಲಸೀಮೆಯ ಬಹಳ ಜನ ಶ್ರಾವಕರಿಗೆ ಪೆನಗೊಂಡೆಯ ಪಚ್ಚೆ ಪಾರಿಶ್ವನಾಥಸ್ವಾಮಿಯೇ ಮನೆ (ಕುಲ) ದೇವರು. ಪೆನಗೊಂಡ ಪ್ರಾಂತ್ಯ ವಿಜಯನಗರದ ಸಾಮಂತರ ಆಳ್ವಿಕೆಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಪಾಯಣ್ಣ ವ್ರತಿ ಹೇಳುವ ನಂದಿಯಪುರ ಈಗಿನ ನಂದಿಗ್ರಾಮವಿರಬಹುದೆಂದು ತೋರುತ್ತದೆ.

ಪಾಯಣ್ಣ ವ್ರತಿಕವಿಯ ತಂದೆಯ ಹೆಸರು ಗುಣಮಣಮ್ಮ ಬಣಜಿಗಶೆಟ್ಟಿ’ ಎಂದು. ಗುಣಮಣಮ್ಮ ಎಂಬಲ್ಲಿ ಬರುವ ಅಮ್ಮ ಎಂಬುದು ಹಳಗನ್ನಡ ಅಮ್ಮನ್ ಎಂಬ ರೂಪಕ್ಕೆ ಸಂಬಂಧಿಸಿದ್ದು, ಕವಿಯ ತಾಯಿಯ ಹೆಸರು ಕೆಂಚಮ್ಮ. ಪಾಯಣ್ಣ ವ್ರತಿ ಬಾಲಬ್ರಹ್ಮಚಾರಿ. ಚಿಕ್ಕಂದಿನಿಂದಲೂ ಶಾರದೆಯ ವರದಿಂದ, ಅನುಗ್ರಹದಿಂದ ಕವಿಯಾಗಿ ಬೆಳೆದನೆಂದು ಹೇಳಿಕೊಂಡಿದ್ದಾನೆ. ತನ್ನ ನಿಡುಬಾಳಿನ ಬಹುಕಾಲವನ್ನು ಸದ್ಧರ್ಮ ಸೇವೆಯಲ್ಲಿ ಸವೆಸಿದ್ದಾನೆ. ಭವ್ಯ ಶ್ರಾವಕ ಶ್ರಾವಕಿಯರಿಗೆ ಧರ್ಮ ಕಥಾ ಪುರಾಣ ಶ್ರವಣ ಮಾಡಿಸುವ ಓಜನಾಗಿ ಪಾಯಣ್ಣ ವ್ರತಿ ಜೀವನವನ್ನು ಸದ್ವಿನಿಯೋಗಿಸಿದನು. ಅದರಿಂದ ಇವನ ಕಾವ್ಯ ಕೂಡ ಪುರಾಣ ಪಾರಾಯಣ ಧಾಟಿಯಲ್ಲೇ ನಡೆಯುತ್ತದೆ :

ಇದು ಭವ್ಯ ಜನಚಿತ್ತ ಕುವಲಯ ಚಂದ್ರಮ
ವಿದು ಸಜ್ಜನರ ಕರ್ಣಾಭರಣ |
ಇದು ಮುಕ್ತಿಸತಿಯ ಠಾವೆನಿಸುವ ವಿತರಣ
ವಿದು ಕೇಳ್ದರ ಪಾಪ ಹರಣ ||
ನಾರಿಕೇಳದ ಫಲದಂತೆ ಕವಿತೆಯು
ತೋರದು ರಮ್ಯ ಕೆಲರಿಗೆ |
ಸಾರಕದಳಿ ಪಣ್ಣಿನಂತೆ ಗೂಢಾರ್ಥವು
ತೋರಿ ತೋರದೆಯಿರಬೇಕು ||

ಪಾಯಣ್ಣ ವ್ರತಿ ಸಂಸಾರದಲ್ಲಿ ೫೫ ವರ್ಷಗಳವರೆಗೆ ಹೆಂಗಳ ಮೋಹದ ಜಾಲಕ್ಕೆ ಸುಲುಕದೆ’ ಶುದ್ಧ ಅವಿವಾಹಿತ ಬ್ರಹ್ಮಚಾರಿಯಾಗಿದ್ದನಂತೆ; ೫೫ ವರ್ಷಗಳಾದ ಮೇಲೆ ಸೇನಗಣದ ಲಕ್ಷ್ಮೀಸೇನ ಮುನಿಯಿಂದ ದೀಕ್ಷೆಯನ್ನು ಪಡೆದು ಸನ್ಯಾಸಿಯಾದನು. ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯರು ಜೈನರ ಯಾತ್ರಾಕ್ಷೇತ್ರ ನರಸಿಂಹರಾಜಪುರ (ಸಿಂಹನ ಗದ್ದೆ) ಪೀಠಾಧಿಪತಿಗಳು ಹಾಗೂ ಪೆನಗೊಂಡೆಗೂ ಅಧಿಪತಿಗಳು. ಬಹುಶಃ ಈ ಲಕ್ಷ್ಮೀಸೇನರಲ್ಲೇ ಕವಿ ಯತಿ ದೀಕ್ಷೆ ಪಡೆದಿರಬೇಕು. ದೀಕ್ಷೆಯನ್ನು ಪಾರ್ಶ್ವನಾಥನ ಬಸದಿಯಲ್ಲಿ ಪಡೆದೆನೆಂದು ಕವಿ ಹೇಳಿದ್ದಾನೆ. ಇದು ಯಾವ ಊರಿನ ಪಾರ್ಶ್ವನಾಥ ಬಸದಿಯೆಂದು ಕವಿಯ ಉಲ್ಲೇಖವಿಲ್ಲವಾದರೂ ಇದು ಪೆನಗೊಂಡೆಯ ಪಾರ್ಶ್ವನಾಥ ಬಸದಿಯೆಂದು ಭಾವಿಸಲು ಮೂರು ಅವಕಾಶಗಳಿವೆ; ಮೊದಲನೆಯದಾಗಿ ಕವಿ ತಾನು ಪೆನಗೊಂಡೆ ದೇಶದವನೆಂಧು ಹೇಳೀಕೊಂಡಿದ್ದಾನೆ. ಎರಡನೆಯದಾಗಿ ಪಾರ್ಶ್ವನಾಥ ಬಸದಿಯಲ್ಲಿ ದೀಕ್ಷಿತನಾದನೆಂದು ತಳಿಸಿದ್ದಾನೆ ಮತ್ತು ಪೆನಗೊಂಡೆಯಲ್ಲಿ ಆ ಬಸದಿಯಿದೆ. ಮೂರನೆಯದಾಗಿ ಲಕ್ಷ್ಮೀಸೇನ ಮುನಿಗಳಿಂದ ದೀಕ್ಷೆ ಪಡೆದುದಾಗಿ ನಿರೂಪಿಸಿದ್ದಾನೆ ಮತ್ತು ಪೆನಗೊಂಡೆ ಲಕ್ಷ್ಮೀಸೇನ ಮುನಿಗಳ ಮಠಾಧಿಪತ್ಯದ ವ್ಯಾಪ್ತಿಗೆ ಸೇರಿದೆ. ಈ ಮೂರು ಸಬಲ ಕಾರಣಗಳಿಂದ ಪಾಯಣ್ಣ ವ್ರತಿ ಪೆನಗೊಂಡೆಯ ಪಾರ್ಶ್ವನಾಥ ಸನ್ನಿಧಿಯಲ್ಲಿ, ಲಕ್ಷ್ಮೀಸೇನರ ಸಮಕ್ಷಮದಲ್ಲಿ ದೀಕ್ಷಿತನಾದನೆಂದು ಧಾರಾಳವಾಗಿ ಹೇಳಬಹುದು. ಆದರೆ ಯಾವ ಇಸವಿಯಲ್ಲಿ ಈತ ದೀಕ್ಷಿತನಾದನೆಂಬುದು ತಿಳಿಯುವುದಿಲ್ಲ. ಕವಿಯ ಕಾಲ ಸುಮಾರು ೧೬೦೦ ಎಂದು ತಿಳಿದು ಬರುತ್ತದೆ.

ಪಾಯಣ್ಣ ವ್ರತಿಯ ಕೃತಿ ಸಮ್ಯಕ್ತ್ವ ಕೌಮುದಿ. ಈ ಹೆಸರಿನ ಕಾವ್ಯಗಳು ಕನ್ನಡದಲ್ಲಿ ಇನ್ನೂ ಇಬ್ಬರು ಕವಿಗಳಿಂದ ರಚನೆಯಾಗಿವೆ; ೧. ಚಿಕ್ಕಮಲ್ಲಣ್ಣಕವಿ (೧೫೦೦) ಸಾಂಗತ್ಯ ಛಂದಸ್ಸಿನಲ್ಲಿ ೨೪ ಸಂಧಿ ಹಾಗೂ ೨೨೦೫ ಪದ್ಯಗಳಿರುವ ಸಮ್ಯಕ್ತಕೌಮುದಿ ಕಾವ್ಯವನ್ನು ೧೪೯೨ ರಲ್ಲಿ ರಚಿಸಿದ್ದಾನೆ.[8] ಈ ಚಿಕ್ಕಮಲ್ಲಣ್ಣಕವಿ ಸಲ್ಲೇಖನವ್ರತ ಸ್ವೀಕರಿಸಿ ೧೫೦೬ ರಲ್ಲಿ ‘ಸ್ವರ್ಗಾಗ್ರಮಾನ್’ ಸೇರಿದ ಸಂಗತಿ ಶಾಸನಗಳಲ್ಲಿ ಉಲ್ಲೇಖವಾಗಿದೆ.[9] ೨. ಮೂರನೆಯ ಮಂಗರಸಕವಿ ಷಟ್ಪದಿ ಛಂದಸ್ಸಿನಲ್ಲಿ ೧೨ ಆಶ್ವಾಸ ಹಾಗೂ ೭೯೨ ಪದ್ಯಗಳಿರುವ ಸಮ್ಯಕ್ತ್ವ ಕೌಮುದಿ ಕಾವ್ಯವನ್ನು ರಚಿಸಿದ್ದಾನೆ.[10] ಇವರಿಬ್ಬರೂ ಪಾಯಣ್ಣ ವ್ರತಿಗಿಂತ ಹಿಂದಿನವರಾದುದರಿಂದ ಇವರ ಪ್ರಭಾವ ಪಾಯಣ್ಣ ವ್ರತಿಯ ಮೇಲೆ ಎಷ್ಟು ಮಟ್ಟಿಗೆ ಆಗಿದೆಯೆಂಬ ತುಲನಾತ್ಮಕ ಅಭ್ಯಾಸ ಇನ್ನೂ ಆಗಬೇಕಾಗಿದೆ.

ಪಾಯಣ್ಣ ವ್ರತಿಯ ಸಮ್ಯಕ್ತ್ವ ಕೌಮುದಿ ಹದಿನೆಂಟು ಸಂಧಿಗಳ ಹಾಗೂ ೧೯೮೯ ಪದ್ಯಗಳ ಉತ್ತಮ ಸಾಂಗತ್ಯ ಕಾವ್ಯ. ಕವಿ ಆಜನ್ಮ ಬ್ರಹ್ಮಚಾರಿಯಾದರೂ ಸ್ತ್ರೀ ವರ್ಣನೆಯಲ್ಲಿ ಕೂಡ ಬೇರೆ ಕವಿಗಳಿಗೆ ಹಿಂದೆ ಬೀಳುವುದಿಲ್ಲ.

ನಡುಸಿಂಹ ಧನುಪುರ್ಬು ಕುಚಕುಂಭ ಮೀನಾಕ್ಷಿ | ಮಡದಿ ಮಕರ ಪತ್ರದಿಂದ
ಸಡಗರದಿಂ ನಿಡುಹಸ್ತದಿಂದಲಿ ಕನ್ನೆ | ಬೆಡಗಿಂದೊಪ್ಪಿದಳ್ ರಾಸಿಯಂತೆ ||
ಹರಿಯ ಅಂಗವು ಕಪ್ಪು ಹರನ ಕೊರಳು ಕಪ್ಪು | ಉರಗನ ಹೆಡೆಯೊಳು ಕಪ್ಪು
ವರವಾಣಿ ಹಸ್ತದ ವೀಣೆ ತಾ ಕಡುಕಪ್ಪು | ಕಪ್ಪಿಂಥ ಕೊರತೆಯೇ ನಮ್ಮ ||
ಹೆಣ್ಣಿಗಾಗಿ ಹರಿ ತುರುಗಳ ಕಾದನು | ಹೆಣ್ಣಿನಿಂದಜನು ಕೆಟ್ಟ
ಹೆಣ್ಣಿನ ಮೋಹದಿ ಹರನರೆಹೆಣ್ಣಾದ | ಹೆಣ್ಣಿಗಾದನು ಕೋಳಿ ಸುರಪ ||

ಸಮ್ಯುಕ್ತ್ವ ಕೌಮುದಿ ಕಾವ್ಯದ ವಸ್ತುವೆಂದರೆ ದಾನಪೂಜೆ ಶೀಲ ಉಪವಾಸಗಳ ಮಹತ್ವವನ್ನು ಮನದಟ್ಟು ಮಾಡಿಸಿ ಧರ್ಮಾನುರಾಗ ಮೂಡಿಸುವುದು; ಸಮ್ಯುಕ್ತ್ವವೆಂದರೆ ಈ ಗುಣಗಳೇ. ಇವುಗಳನ್ನು ಶ್ರದ್ಧೆಯಿಂದ ಪಾಲಿಸುವುದೆಂದರೆ ಮುಕ್ತಪಥದಲ್ಲಿ ಮುನ್ನಡೆದಂತೆ. ಇವು ಜೈನ ಗೃಹಸ್ಥನ ಷಟ್ಕರ್ಮಗಳಲ್ಲಿ ಬರುತ್ತವೆ. ಈ ಕಾವ್ಯದಲ್ಲಿ ಪಾಯಣ್ಣ ವ್ರತಿಕವಿ ಸಮ್ಯುಕ್ತ್ವ ಪಾಲನೆಯಿಂದ ಸದ್ಗತಿಗೆ ಪಾತ್ರರಾದವರ ಕಥೆಗಳನ್ನು ವಿವರಿಸಿದ್ದಾನೆ. ಈ ಕಥೆಗಳು ಸಮಂತಭದ್ರರ ರತ್ನಕರಂಡಕ ಶ್ರಾವಕಾಚಾರ, ವಸುನಂದಿ ಉವಾಸಯಜ್ಝಯಣ, ಸೋಮದೇವನ ಯಶಸ್ತಿಲಕ ಚಂಪೂ, ಪ್ರಭಾಚಂದ್ರನ ಕಥಾಕೋಶ, ನಯಸೇನನ ಧರ್ಮಾಮೃತ ಮೊದಲಾದ ಮೂಲಗಳಿಂದ ಬೆಳೆದು ಬಂದಿವೆ.[11]

. ಓದುವ ಗಿರಿಯ

ಓದುವ ಗಿರಿಯ ಕಂತೆಯ ದೇವರ ಭಕ್ತಕವಿ : ಈ ಸಂಗತಿಯನ್ನು ‘ಪುರಾಣದ ವಿರೂಪಾಕ್ಷನ ವರಗರ್ಭ ಶರಧಿಚಂದ್ರ ಮನ ಪರಮಪಾವನಮೂರ್ತಿ ಕಂತೆಯ ದೇವರ ಚರಣವ ನಾ ಬಲಗೊಂಬೆ’ ಎಂಬಲ್ಲಿ ಹೇಳಿದ್ದಾನೆ. ಕವಿಯ ತಂದೆಯ ಹೆಸರು ಕರಿಯ ಸೋಮಪ್ಪ.  ಓದುವ ಗಿರಿಯಯ ಹರಿಶ್ಚಂದ್ರ ಕಾವ್ಯದ ಒಂದು ಪ್ರತಿ ೧೫೭೭ ರಲ್ಲಿ ಪ್ರತಿಯಗಿರುವುದರಿಂದ ಇವನ ಕಾಲವನ್ನು ಸುಮಾರು ೧೫೨೫ ಎಂದು ಭಾವಿಸಲಾಗಿದೆ.

ಈ ಕವಿ ಮಧ್ಯಮ ಗಾತ್ರದ ಮತ್ತು ಸಮಪ್ರಮಾಣವಿರುವ ಎರಡು ಕಾವ್ಯಗಳನ್ನು ರಚಿಸಿದ್ದಾನೆ ಹರಿಶ್ಚಂದ್ರ ಸಾಂಗತ್ಯ ಮತ್ತು ಸಾನಂದ ಗಣೇಶ ಸಾಂಗತ್ಯ ಕಾವ್ಯದಲ್ಲಿ ಆರು ಸಂಧಿಗಳೂ ೪೪೧ ಪದ್ಯಗಳೂ ಇವೆ; ಸಾನಂದ ಗಣೇಶ ಸಾಂಗತ್ಯ ಕಾವ್ಯದಲ್ಲಿಯೂ ಆರು ಸಂಧಿಗಳು ಮತ್ತು ೪೪೦ (ಮತ್ತೊಂದು ಪ್ರತಿಯಲ್ಲಿ ೪೭೮) ಪದ್ಯಗಳೂ ಇವೆ. ಎರಡೂ ಕಾವ್ಯಗಳ ವಿಂಗಡಣೆಯಲ್ಲಿರುವ ಈ ಸಮಪ್ರಮಾಣ ಪ್ರಜ್ಞೆ ಕೇವಲ ಆಕಸ್ಮಿಕವೊ ಪೂರ್ವನಿಯೋಜಿತ ವ್ಯವಸ್ಥೆಯೋ ತಿಳಿಯದು.

ಈತ ಪೂರ್ವಕವಿಗಳಲ್ಲಿ ಸಂಸ್ಕೃತ ಹಾಗೂ ಕನ್ನಡದ ಕೆಲವು ಕವಿಗಳನ್ನು ನೆನೆದಿದ್ದಾನೆ :

ಬಾಣಮಯೂರನುದ್ಭಟ ಕಾಳಿದಾಸನ | ಜಾಣಹಂಪೆಯ ಹರೀಶ್ವರನ
ಮಾಣದೆ ಮಲುಹಣೇಶ್ವರ ರಾಘವಾಂಕನ | ಕೇಣವಿಲ್ಲದೆ ಬಲಗೊಂಬೆ ||

ರಾಘವಾಂಕನ ಪ್ರಭಾವಕ್ಕೆ ಈ ಕವಿ ಒಳಗಾಗಿದ್ದಾನೆ. ಇದೇ ವಸ್ತುವನ್ನು ಬೊಂಬೆಯಲಕ್ಕ, ಹಲಗ ಮೊದಲಾದ ಕವಿಗಳೂ ಆಧರಿಸಿ ಕೃತಿರಚನೆ ಮಾಡಿದ್ದಾರೆ.

ಈ ಕವಿ ತನ್ನನ್ನು ‘ಶ್ರೀ ಗಿರಿಯ ಮಲ್ಲೇಶನ ಚರಣಕಮಲ ಮಧುಕರನು, ವರಕವಿ ಶರಧಿಚಂದ್ರಮನು’ ಎಂದು ಮುಂತಾಗಿ ವಿಶ್ಲೇಷಿಸಿಕೊಂಡಿದ್ದಾನೆ. ಈ ಕವಿಯಿಂದ ಎರಡೂ ಕಾವ್ಯಗಳನ್ನು ‘ಹರಿಣಪುರಸಿಂಹಾಸನಾಧೀಶ್ವರ ಗುರುಕೆಂಪ ನಂಜೇಶ್ವರನುದರ ಜಾತ ನಂಜಯ’ ಎಂಬಾತ ಬರೆಸಿದನೆಂದು ತಿಳಿದುಬರುತ್ತದೆ. ತಾನು ‘ಛಂದವಲಂಕಾರವೊಂದಿದ ವಡಿಪ್ರಾಸು | ಬಿಂದುವೆಂಬೀ ಗಣನೇಯ | ನೊಂದುವನರಿತವನಲ್ಲವೆಂದು ವಿಜ್ಞಾಪಿಸಿಕೊಂಡಿದ್ದಾನೆ.[12]

ಸಾನಂದ ಗಣೇಶ ಸಾಂಗತ್ಯದ ಕಥಾವಸ್ತು ‘ನಿರಯಾಧಿಪತಿಯ ಪಟ್ಟಣದ ಕೋಳ್ಕೊಂಡು ಕೈಲಾಸಕ್ಕೆ ಕೊಂಡೊಯ್ದ ಯತಿ ಸಾನಂದ ಚರಿತೆ’. ಇದರ ವಸ್ತು ಪ್ರಾಚೀನವಾದದು’. ಸ್ಕಾಂದ ಪುರಾಣದಲ್ಲಿ ನಂದಿಯು ಸನತ್ಕುಮಾರನಿಗೆ ಈ ಸಾನಂದ ಚರಿತ್ರೆಯನ್ನು ನಿರೂಪಿಸಿದನೆಂದು ಹೇಳಿದೆ. ಸಾನಂದ ಒಬ್ಬ ಋಷಿ, ಪೂರ್ವವಿತ್ತ ಋಷಿಪುತ್ರ. ನರಕದಲ್ಲಿ ಜನರು ನರಳುತ್ತಿದ್ದಾರೆಂದು ಕೇಳಿದ ಸಾನಂದನು ಅವರ ಸಂಕಟವನ್ನು ತವಿಸುತ್ತೇನೆಂದು ಹೊರಟು ಪಂಚಾಕ್ಷರಿಯ ಮಹಿಮೆಯಿಂದ ನಾರಕಿಗಳಿಗೆ ಸದ್ಗತಿ ದೊರಕಿಸಿಕೊಟ್ಟನು ಎಂಬುದು ಒಟ್ಟು ಕಾವ್ಯದ ಸಾರ. ಇದೇ ವಸ್ತುವನ್ನು ಕುರಿತು ಈ ಕವಿಗಿಂತ ಹಿಂದೆ ಆಗಿಹೋದ ಕುಮಾರ ಪದ್ಮರಸನು (ಸು. ೧೧೮೦) ನಾನಾ ಷಟ್ಪದಿಗಳ ಸಾನಂದ ಚರಿತ್ರವೆಂಬ ಕಾವ್ಯವನ್ನು ಕನ್ನಡದಲ್ಲಿ ರಚಿಸಿದ್ದನು, ಇದು  ಓದುವ ಗಿರಿಯ ಕವಿಗೆ ಆಧಾರ – ಆಕರ. ಗಿರಿಯ ಕವಿಯ ಕಾವ್ಯ ಸಾಧಾರಣ ದರ್ಜೆಯದು. ಈ ಕವಿ ವರ್ಣಿಸುವ ವಿಧಾನಕ್ಕೆಂದು ಎರಡು ಉದಾಹರಣೆಗಳು :

ಕಡಿದು ಕಚ್ಚಿ ಹೀರಿ ಹಾರು ಜಿಗುಳೆಯ | ಬಿಡದೆ ಕಡಿವವಜ್ರದುಂಬಿ
ಮಡಲಿರಿದಿಹ ಮರಗೆಂಜುಗ ದಾರಿಯೊ | ಳೆಡದೆರಹಿಲ್ಲ ನೋಡಿದರೆ ||
ವಿಷದ ಕಾರ್ಮಡು ಕೆಂಡದ ತೊರೆ ದಳ್ಳುರಿ | ಮುಸುಕಿ ಹರಿವೆ ಪೆದ್ದೊರೆಯು
ಬಿಸಿನೀರ ಭಾವಿ ಹಾವಸೆಗಲ್ಲು ಸೋಪಾನ | ಹೊಸಪರಿಯಲ್ಲಿ ನೋಡಿದರೆ ||

ಎಂಬ ನರಕ ವರ್ಣನೆಯನ್ನೂ,

ನೆಳಲ ತಂಪಿನ ಕೊಳ ತಳಿರ ಮಂಟಪ ಸಣ್ಣ | ಮಳಲು ವಟ್ಟಿಯ ರನ್ನ ಜಗಲಿ
ಸುಳಿಗಾಳಿ ಸುತ್ತ ಪರ್ಬಿದ ಲತೆಪೂದೋಟ | ವಳವಟ್ಟು ಮೆರೆದುವಾ ವನದಿ ||

ಎಂಬ ವನವರ್ಣನೆಯನ್ನು ನೋಡಬಹುದು ಎರಡೂ ಕಾವ್ಯಗಳ ಬಹುಪಾಲು ಹೀಗೆಯೇ ಪೇಲವ.

. ಬ್ರಹ್ಮಕವಿ

ಬ್ರಹ್ಮಕವಿ ಕುಂತಳ ದೇಶದವನು, ಅಂದರೆ ತುಳುನಾಡಿನವನು. ಈತನು ಸು. ೧೬೦೦ ರಲ್ಲಿದ್ದಿರಬಹುದೆಂದು ಊಹಿಸಲಾಗಿದೆ. ಪಾಂಡ್ಯವಂಶದ ವಿರುಪನೃಪನ ಮನ ಚೆನ್ನನೃಪನು ಆಳುತ್ತಿದ್ದ ಈ ಕುಂತಳ ದೇಶದೊಳಗೆ ಪುರಹರ ಕ್ಷೇತ್ರವಿತ್ತು. ಇದೇ ಬ್ರಹ್ಮಕವಿಯ ಸ್ಥಳ. ಈ ಕವಿಯ ತಂದೆ ನೇಮಣ್ಣ. ತಾಯಿ ಬೊಮ್ಮರಸಿ, ಗುರು ಗುಣಭದ್ರಾಚಾರ್ಯ, ಕುಲದೈವ ಶಾಂತಿನಾಥ ತೀರ್ಥಂಕರ. ಬ್ರಹ್ಮಕವಿಯ ಮಗನ ಹೆಸರು ಗುಮ್ಮಣ್ಣ. ತನ್ನ ಹೊಸ ಕಾವ್ಯವನ್ನು ಗೌರವದಿಂದ ಓದಲು ಬ್ರಹ್ಮಕವಿ ವಿಜ್ಞಾಪಿಸಿದ್ದಾನೆ :

ವಸಗೆವರೆ ಛತ್ರ ಚಾಮರ (ದಲಿ)
ಶಶಿಮುಖಿಯರು ಪಾಡಿಕಳಶ ಕನ್ನಡಸಹಿತಂ |
ಹೊಸಕೃತಿಯನೊಯ್ದು ಶ್ರೀ ಜನ
ವಸತಿಯೊಳೋದಲ್ಕೆ (ಹಿರಿದು) ಪುಣ್ಯಮದಕ್ಕುಂ ||

ತನ್ನ ಕುಲದೈವನಾದ ಶಾಂತಿಜಿನನಿಗೆ ಪ್ರಥಮ ವಂದನೆ ಸಲ್ಲಿಸಿದ್ದಾನೆ. ಶಾಂತಿಜಿನಸ್ತುತಿ ಮತ್ತು ಯಥಾಪ್ರಕಾರ ಪಂಚ ಪರಮೇಷ್ಠಿಸ್ತವವಾದ ಮೇಲೆ ನಯಸೇನ, ಅಭಿನವಪಂಪ, ಗುಣವರ್ಮ, ಪೊನ್ನ, ಜನ್ನರನ್ನು ನೆನೆದಿದ್ದಾನೆ.

ವಜ್ರಕುಮಾರನ ಕಥೆ ವಾತ್ಸಲ್ಯಾಂಗಕ್ಕೆ ಸಂಬಂಧಿಸಿದುದು. ವಾತ್ಸಲ್ಯವೆಂಬುದು ಸಮ್ಯಕ್ತ್ವದ ಎಂಟು ಅಂಗಗಳಲ್ಲೊಂದು.[13]

ಯಂಟಂಗದೊಳಗಂ ವಾತ್ಸಲ್ಯವೆಂಬುದು
ಉಂಟಾದ ಕಥೆಗಳಿವರಂ |
ಯಂಟಘನಾಶದಿಂ ತ್ರಿಭುವನದಗ್ರದೊ
ಳೆಂಟುಗುಣದಿ ನೆರದಿಪರುಂ ||
ಜಿನಮತಗಗನ ದಿವಾಕರ ವಾತ್ಸಲ್ಯ
ಅನುಪಮ ಗುಣರತ್ನಾಕರನೂ ||
ಅನುಮಿಷ ವಿಭವನು ವಜ್ರಕುಮಾರನ
ಜನಪದ ಕಥೆಯ ಬಂಣಿಪೆನೂ ||

ಇಲ್ಲಿ ಕವಿ ಹೇಳುವ ‘ಜನಪದ ಕಥೆಯ ಬಣ್ಣಿಪೆನು’ ಎಂಬ ಮಾತು ಗಮನಾರ್ಹವಾದುದು; ವಜ್ರಕುಮಾರನ ಬಗ್ಗೆ ಜೈನ ವಾಙ್ಮಯದಲ್ಲೂ ಜನಮನದಲ್ಲೂ ಹುಟ್ಟಿಬೆಳೆದ ಒಂದು ‘ಜನಪದ ಕಥೆ’ಯನ್ನು (Folktale) ತಾನು ಹೇಳುತ್ತಿರುವುದಾಗಿ ಬ್ರಹ್ಮಕವಿ ತಿಳಿಸಿರುವುದು ಜಾನಪದ ಸಾಹಿತ್ಯಾಭ್ಯಾಸದಲ್ಲಿ ಒಂದು ವಿಶ್ವಸನೀಯ ಪ್ರಾಚೀನ ಉಲ್ಲೇಖವಾಗಿದ್ದು ಇದಕ್ಕೊಂದು ಚಾರಿತ್ರಿಕ ಮಹತ್ವವಿದೆ.

ವಜ್ರಕುಮಾರಚರಿತೆ ಮಧ್ಯಮಗಾತ್ರದ ಸಾಂಗತ್ಯ ಕೃತಿ. ಇದರಲ್ಲಿ ಕೆಲವು ಕಂದ ಹಾಗೂ ವೃತ್ತ ಪದ್ಯಗಳೂ ಪ್ರಯೋಗವಾಗಿವೆ; ಇಂಥ ರಚನೆ ಆದಿಯಪ್ಪನ ಧನ್ಯಕುಮಾರ ಚರಿತೆ ಮೊದಲಾದ ಇನ್ನೂ ಹಲವು ಸಾಂಗತ್ಯ ಕಾವ್ಯಗಳಲ್ಲುಂಟು. ಬ್ರಹ್ಮಕವಿ ಒಳ್ಳೆಯ ಕಥೆಗಾರ. ಹಳೆಯ ಕನ್ನಡ ಕಾವ್ಯಗಳನ್ನು ಓದಿದ್ದಾನೆ. ಅವುಗಳಲ್ಲಿ ನಯಸೇನ ಕವಿಯ ಧರ್ಮಾಮೃತ ಕಾವ್ಯದ ಕಥೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾನೆ; ಆ ಪದ್ಧತಿಗನುಗುಣವಾಗಿ ತನ್ನ ಕಾವ್ಯವನ್ನು ರಚಿಸಿರುವುದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಬ್ರಹ್ಮಕವಿ ಸಂಪ್ರದಾಯವನ್ನು ಒಪ್ಪಿಕೊಂಡವನು; ಪಾಂಚಾಲದೇಶವನ್ನು ಆತ ವರ್ಣಿಸಿರುವ ರೀತಿಯದು –

ಹೊಡೆಯೆಂಬ ಮಾತಿಲ್ಲ ತಡೆಯೆಂಬ ನುಡಿಯಿಲ್ಲ
ಕಡಿಮೆಯೆಂಬುದಿಲ್ಲ ನಾಡೊಳಗೆ ||
ಕಡಿಹ ಕಬ್ಬಿನೊಳುಂಟು ತಡೆಹ ದಟ್ಟಡಿಯೊಳು
ಹೊಡೆಯುಂಟು ಹೊಂಬಾಳೆಯಲಿ ||

ಇದು ಕನ್ನಡ ಕವಿ ಕಾವ್ಯ. ಅದರಲ್ಲಿಯೂ ಚಂಪೂಕಾವ್ಯ ಪದ್ಧತಿಯ ಪ್ರತಿಧ್ವನಿ.

ಬ್ರಹ್ಮಕವಿಯ ವಜ್ರಕುಮಾರಚರಿತೆ ಕಾವ್ಯದ ಕಥೆ ಚಿಕ್ಕದು : ಸೋಮದತ್ತ ಪುರೋಹಿತ ಜಿನದೀಕ್ಷೆ ತಳೆದಾಗ ಅವನ ಹೆಂಡತಿ ಯಜ್ಞದತ್ತೆ ತಡೆದರೂ ಪ್ರಯೋಜನವಾಗಲಿಲ್ಲವಾದ್ದರಿಂದ ಆಕೆ ತನ್ನ ಮಗನನ್ನು ಆತನ ಬಳಿಯೇ ಬಿಟ್ಟುಹೋದಳು. ಆಗ ಖಚರನೊಬ್ಬ ಬಂದು ಬಾಲಕ ಶ್ರೀದತ್ತನನ್ನು ವಿಮಾನದಲ್ಲಿ ಕರೆದುಕೊಂಡು ತನ್ನ ಪ್ರಭುವಾದ ಭಾಸ್ಕರನಿಗೊಪ್ಪಿಸಿದನು. ಭಾಸ್ಕರ ಮಣಿಮಾಲೆ ದಂಪತಿಗಳು ಹುಡುಗನನ್ನು ಸಾಕಿ ಬೆಳೆಸಿ ಮದುವೆ ಕೂಡ ಮಾಡಿದರು. ಆ ಅದೃಷ್ಟಶಾಲಿ ಹುಡುಗನೇ ವಜ್ರಕುಮಾರ.

ಈ ಕಥೆಯ ಈ ಹಂದರವನ್ನು ಸಮುಚಿತ ವರ್ಣನೆ – ಅಲಂಕಾರಗಳಿಂದ ಬ್ರಹ್ಮಕವಿ ಬೆಳಗಿಸಿದ್ದಾನೆ. ‘ಪತ್ರನದೊಳಗಣಪರದರು ಧನದನವಿತ್ತವ ಜರೆದು ನಗುವ’ ಅಹಿಚ್ಛತ್ರಪುರದ ಸಂಪತ್ತನ್ನು ಉತ್ಪ್ರೇಕ್ಷಿಸಿದರೆ,

ತಾರಾಗಣದ ತೊತ್ತು ಚೋರಜಾರರ ಮಿತ್ತು
ನೀರಜತತಿಗೆ ವಿಪತ್ತು |
ವಾರಿಧಿಚಯದೊತ್ತು ಕೌಮುದಿಗಳ ಬಿತ್ತು
ಧಾರಿಣಿಗಿಂದುದಯಿಸಿತು ||

ಎಂದು ಚಂದ್ರೋದಯವನ್ನು ವರ್ಣಿಸುತ್ತಾನೆ. ಇದೇ ರೀತಿ ಹಿಮಗಾಲದ ವರ್ಣನೆಯಲ್ಲಿಯೂ ಮಾಮೂಲಿನ ಸರಕನ್ನು ಪ್ರದರ್ಶಿಸುತ್ತನೆ :

ಕರೆದುವು ತಾವರೆ ತುಟಿಬಿರಿದೊಡೆದುವು
ಕೊರಗಿ ನುಡಿಯವು ಪಿಕಾಳಿ |
ಸ್ಮರನ ಬಾಣಗಳ ಖಂಡಿಸಿದನು ಹಿಮನೃಪ
ಸುರಿದು ತುಷಾರ ಮಾರ್ಗಣದಿಂ ||

ಇಂಥ ಸಪ್ಪೆ ನಡಿಗೆಯ ನಡುವೆ ಬ್ರಹ್ಮಕವಿ ಒಮ್ಮೊಮ್ಮೆ ತನ್ನತನವನ್ನೂ ತೋರಿಸುತ್ತಾನೆ : ಬೇಡಿತಿಯನ್ನು ಆತ ಹೀಗೆ ಬಣ್ಣಿಸಿದ್ದಾನೆ –

ಕರಿಯರು ಕಾಯದಶೋಕೆದಳಿರನುಟ್ಟು
ಗುರುಗಂಜಿಸರ ಕೊರಲೊಳಗೆ
ಕರಿವೇಣು ಮುತ್ತ ಮುಡಿಗೆ ಕಟ್ಟಿ ಸಂಜೆಯ
ಸಿರಿಯಂತಿಹರು ಶಬರಿಯರು ||

ವಜ್ರಕುಮಾರನ ಕಥೆ ಸಮಂತಭದ್ರರ ರತ್ನಕರಂಡಕ ಶ್ರಾವಕಾಚಾರ,[14] ಸೋಮದೇವನ ಯಶಸ್ತಿಲಕ ಚಂಪೂ[15] ಮುಂತಾದ ಪ್ರಾಚೀನ ಕೃತಿಗಳಲ್ಲಿ ಬರುತ್ತದೆ. ಸಮ್ಯಕ್ತ್ವದ ಎಂಟು ಅಂಗಗಳಲ್ಲಿ ಏಳನೆಯದಾದ ವಾತ್ಸಲ್ಯವೆಂಬ ಅಂಗಕ್ಕೆ ವಿಷ್ಣು ಕುಮಾರನನ್ನೂ, ಎಂಟನೆಯದಾದ ಪ್ರಭಾವನಾ ಅಂಗಕ್ಕೆ ವಜ್ರುಕುಮಾರನನ್ನೂ ಸಮಂತಭದ್ರರು ಉದಾಹರಿಸಿದ್ದರೆ, ಕನ್ನಡದಲ್ಲಿ ನಯಸೇನನು ತನ್ನ ಧರ್ಮಾಮೃತ ಚಂಪೂ ಕಾವ್ಯದಲ್ಲಿ ವಾತ್ಸಾಲಂಗಕ್ಕೆ ವಜ್ರಕುಮಾರನ ಕಥೆಯನ್ನು ನಿರೂಪಿಸಿದ್ದಾನೆ. ಬ್ರಹ್ಮಕವಿಯೂ ನಯಸೇನನ ಕ್ರಮವನ್ನು ಪಾಲಿಸಿದ್ದಾನೆ. ನಯಸೇನನಲ್ಲಿ ಹದಿನಾಲ್ಕು ಮಹಾರತ್ನಗಳನ್ನು ಸಾಧಿಸಿ ನಿರ್ವೃತಿಯನ್ನೈದಿದ ಮಹಾಪುರುಷರ ಕಥೆಗಳಲ್ಲಿ ಒಂದಾಗಿ ವಜ್ರ ಕುಮಾರ (ಶ್ರೀದತ್ತ)ನ ಕಥೆಯಿದೆ[16] ತುಂಬ ಆಕರ್ಷಕವಾಗಿ ಬಂದಿದೆ. ಬ್ರಹ್ಮಕವಿಯಲ್ಲಿ ಇದೊಂದೇ ಕಥೆ ಒಟ್ಟು ಕಾವ್ಯದ ಚೌಕಟ್ಟಿನಲ್ಲಿ ಮೈತುಂಬಿಕೊಂಡು ಮನೋಜ್ಞವಾಗಿದೆ.[17]

[1] ಮಾತಂಗೋ ಧನದೇವಶ್ಚ ವಾರಿಷೇಣಸ್ತತಃ ಪರಃ |
ನೀಲೀ
ಜಯಶ್ಚ ಸಂಪ್ರಾಪ್ತಾ : ಪೂಜಾತಿಶಯಮುತ್ತಮಮ್ ||
ಸಮಂತಭದ್ರ
, ರತ್ನಕರಂಡ ಶ್ರವಕಾಚಾರ      

[2] i.  ಎಪಿಗ್ರಾಫಿಯಾ ಕರ್ನಾಟಕ, ii,  ಶ್ರವಣಬೆಳಗೊಳ ೫೨ ಮತ್ತು ೧೫೪

  1. ಎಸ್. ಬಿ. ವಸಂತರಾಜಯ್ಯ; ಶ್ರವಣಬೆಳಗೊಳದಿಂದ ಕೊಪ್ಪಳದವರೆಗೆ, ೧೯೭೧

[3] ಬೇಲೂರು ಶಾಸನ ಸಂಖ್ಯೆ ೧೨೪, ಕಾಲ ೧೧೩೩
ಜಳಜಭವಂಗಮಿಂತು
ಬರೆಯಲ್ ಕಡೆಯಲ್ ಕರುವಿಟ್ಟು ಗೆಯ್ಯಲ
ತ್ತಳಗಮೆನಿಪ್ಪುದಂ
ತೊಳಪ ಚೆಳ್ಳಿಯ ಬೆಟ್ಟನೆ ಪೋಲ್ವುದಂ ಜಗ |
ತ್ತಿಳಕಮನೀ
ಜಿನಾಲಯಮನೆತ್ತಿಸಿದಂ ವಿಭು ಬೊಪ್ಪದೇವನ
ಗ್ಗಳಿಕೆಯ
ರಾಜಧಾನಿಗಳೊಳೊಪ್ಪುವ ದೋರ ಸಮುದ್ರ ಮಧ್ಯದೊಳ್ ||

[4] i. ಸರಾಫ್ಪದ್ಮರಾಜಯ್ಯ (ಸಂ) : ವಿಜಯಕುಮಾರೀ ಚರಿತ್ರೆ : ಚಿಕ್ಕ ಶ್ರವಕಾಚಾರಾದಿ           ಪಂಚಗ್ರಂಥಗಳು ಪು. ೧-೨

  1. ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು; ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಪು. ೭೭-೭೮

[5] ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು; ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಪು. ೧೧೪

[6] ಅದೇ; ಪು. ೧೧೩

[7] ಹಂಪ ನಾಗರಾಜಯ್ಯ; ಶ್ರೀ ಶಂಭವಸಾಗರ ಚರಿತೆ, ೧೯೬೮

[8] ಬಿ.ಬಿ.ಮಹೀರವಾಡಿ; ಚಿಕ್ಕಮಲ್ಲಣ್ಣಕವಿ, ಸನ್ಮತಿ, ಜನವರಿ ೧೯೭೫

[9] South Indian Inscriptions, xv, Annual Report of 1926

[10] ಹಂಪ ನಾಗರಜಯ್ಯ ; ಮೂರನೆಯ ಮಂಗರಸ, ೧೯೬೮, ಪು. ೭೨ – ೭೫

[11] i. ಡಾ. ಆ. ನೇ ಉಪಾಧ್ಯೆ ಮತ್ತು ಡಾ. ಹೀರಾಲಾಲ್ ಜೈನ್ : ಪುಣ್ಯಾಸ್ರವ ಕಥಾಕೋಶ, ೧೯೬೪, ಪ್ರಸ್ತಾವನೆ ಭಾಗ,

  1. ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು ೧೯೭೫, ಪು.೮೧ – ೮೨

[12] ಅದೇ; ಪು. ೧೦೮ – ೧೧೦

[13] ಸಂವೇಓಣಿವ್ವೇ ಓಣಿಂದಣಗರುಹಾಯ ಉವಸವೋ ಭತ್ತೀ |
ವಚ್ಛಲ್ಲಂ
ಅಣುಕಂಪಾ ಅಷ್ಠಗುಣ ಹುಂತಿ ಸಮ್ಮತ್ತೇ ||

ಹೀರಾಲಾಲ್ ಜೈನ್, ವಸುನಂದಿ, ಶ್ರವಕಾಚಾರ, (ಸಂ) ಸಂವೇಗ) ನಿರ್ವೇದ, ತಿಂದಾ, ಗರ್ಹಾ,             ಉಪಶಮ, ಭಕ್ತಿ, ವಾತ್ಸಲ್ಯ, ಅನುಕಂಪೆ ಇವು ಸಮ್ಯಕ್ತ್ವದ ಅಷ್ಟಾಂಗಗಳು.

[14] ತತೋ ಜಿನೇಂದ್ರ ಭಕ್ತೋ ನ್ಯೋ ವಾರಿಷೇಣಸ್ತಃ ಪರಃ (ಪರಂ) |
ವಿಷ್ಣುಶ್ಚ
ವಜ್ರನಾಮಾ ಶೇಷಯೋರ್ಲಕ್ಷ್ಯತಾಂ ಗತಾಃ ||
ಸಮಂತಭದ್ರ
: ರತ್ನಕರಂಡ ಶ್ರವಕಾಚಾರ, ೨೦

[15] K.K. Handiqui : Yasastilaka and Indian culture;  (ಆಶ್ವಾಸ ೬ ರ ವಿವರಣೆ)

[16] ನಿಶ್ಯಂಕೆ, ನಿಷ್ಕಾಂಕ್ಷೆ, ನಿರ್ಧಿಚಿಕಿತ್ಸೆ, ಅರೂಢ ದೃಷ್ಟಿತ್ವ, ಉಪಗೂಹನ, ಸ್ಥಿತಿಕರಣ, ವಾತ್ಸಲ್ಯ,               ಧರ್ಮಪ್ರಭಾವನೆ, ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ, ಸಮ್ಯಗ್ದರ್ಶನ ಇವು ೧೪.

[17] ಹಂಪ ನಾಗರಾಜಯ್ಯ ; ಸಾಂಗತ್ಯ ಕವಿಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಪು. ೮೨ – ೮೪