ಹದಿನಾರನೆಯ ಶತಮಾನ ಸಾಂಗತ್ಯ ಕಾವ್ಯಗಳ ಸುಗ್ಗಿಯಕಾಲ. ಮಹಾಕವಿ ರತ್ನಾಕರ ಸಾಂಗತ್ಯ ಕೃತಿ ಶ್ರೇಣಿಯ ಶೃಂಗ. ಆತನ ಎಡ – ಬಲಗಳಲ್ಲಿ ಮಧ್ಯಮ ಗುಣಮಟ್ಟದ ಕವಿಗಳೂ ಕ್ರಿಯಾಶೀಲರಾಗಿದ್ದರು. ಈ ಲೇಖನ ಈ ಅವಧಿಯ ಕೆಲವು ಕವಿಗಳನ್ನೂ, ಕಾವ್ಯಗಳನ್ನೂ ಪರಿಚಯಿಸುವ ಪ್ರಯತ್ನ.

. ಆದಿದೇವ

ಆದಿದೇವ ಮತ್ತು ಆದಿಯಪ್ಪ ಎಂಬ ಹೆಸರುಗಳಲ್ಲಿ ಸಾದೃಶ್ಯವಿದ್ದರೂ ಇವರಿಬ್ಬರೂ ಬೇರೆ ಬೇರೆ ಕವಿಗಳು; ಇವರಿಬ್ಬರ ನಡುವೆ ಸುಮಾರು ನಲವತ್ತು ವರ್ಷಗಳ ಅಂತರವಿದೆ.

ಆದಿದೇವಕವಿ “ಧನಕನಕಾದಿ ಸಮೃದ್ಧನೂ ನಾನಾ ಜನಪರಿಷೋಷತತ್ಪರನೂ ಜಿನಮುನಿಜನಕೆ ಆಹಾರ ಭೈಷಜ್ಯದ ವಿನುತ ದಾನಿವರ’ನು ಆದ ವಿಜಯಪ್ಪ ಶರ್ಮನೆಂಬ ಜೈನಶ್ರಾವಕನ ಮಗ.[1] ಬ್ರಹ್ಮಾಂಬಿಕೆ ಕವಿಯ ತಾಯಿ. ಕವಿಯ ಅಣ್ಣನಾದ ಬ್ರಹ್ಮದೇವನು ಭೂಪಸಭಾ ಪೂಜಿತನು. ಆದಿದೇವಕವಿ ಆಯುರ್ವೇದ ಶಾಸ್ತ್ರದಲ್ಲಿಯೂ ಪಂಡಿತನಾಗಿದ್ದನು. ಈತನ ತಂದೆ ‘ಯಕ್ಷಪುರೋಪಮ ರತ್ನತ್ರಯಪುರ’ ದೇವನೆಂದು ಹೇಳಿಕೊಂಡಿದ್ದಾನೆ. ಇದು ಯಾವುದೊ ತಿಳಿಯದಾದರು ರತ್ನತ್ರಯಪುರವೆಂಬುದು ಛತ್ರತ್ರಯಪುರವೆಂಬುದರ ಅಪಲಿಖಿತ ಪಾಠವಿರಬಹುದೆಂದು ಭಾವಿಸಬಹುದು. ಮೈಸೂರು ಜಿಲ್ಲೆಯ ಚಾಮರಾಜನಗರದ ಸಮೀಪದಲ್ಲಿರುವ ಕೆಲಸೂರು (ಇದು ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದೆ) ಎಂಬ ಜೈನ ಕ್ಷೇತ್ರಕ್ಕೆ ಛತ್ರತ್ರಯಪುರವೆಂಬ ಹೆಸರಿರುವುದು ಜೈನ ಪುರಾಣಗಳಿಂದ ತಿಳಿದು ಬರುತ್ತದೆ. ಇದೇ ಸ್ಥಳದಲ್ಲಿ ಪದ್ಮರಸನೆಂಬ ಜೈನಕವಿ ಶೃಂಗಾರ ಕಥೆಯೆಂಬ ಕಾವ್ಯ ರಚಿಸಿದ್ದಾನಲ್ಲದೆ. ಆತ ಈ ಕೆಲಸೂರಿಗೆ ಛತ್ರತ್ರಯಪುರವೆಂಬ ಹೆಸರಿರುವುದನ್ನೂ ಹೇಳಿದ್ದಾನೆ. ಆದಿದೇವಕವಿ ಈ ಕೆಲಸೂರಿನವನೇ ಆಗಿರಬೇಕೆಂದು ಭಾವಿಸುವುದು ಕೇವಲ ಊಹೆಯಾಗಿ ನಿಲ್ಲದೆ ನಿಜವೆಂದೇ ಸಾಬೀತು ಮಾಡಲು ಇನ್ನೊಂದು ಪ್ರಬಲ ಆಧಾರವಿದೆ. ಕೆಲಸೂರಿನಲ್ಲಿ ಚಂದ್ರನಾಥ ಬಸದಿಯಿದೆ. ಆದಿದೇವನೂ ತನ್ನ ಕಾವ್ಯಾರಂಭದಲ್ಲೇ ಚಂದ್ರನಾಥನನ್ನು ಸ್ತುತಿಸುತ್ತಿದ್ದಾನೆ. ಈ ಎರಡು ಕಾರಣಗಳಿಂದ ಆದಿದೇವನನ್ನು ಮೈಸೂರು ಜಿಲ್ಲೆಯ ಕೆಲಸೂರಿನ ಕವಿಯೆಂದು ಪರಿಗಣಿಸಬಹುದು. ಪ್ರತಿಷ್ಠಾಸಾರೋದ್ಧಾರ, ತ್ರೈವರ್ಣೀಕಾಚಾರ ಗ್ರಂಥಗಳ ಕರ್ತೃವಾದ ಬ್ರಹ್ಮಸೂರಿಯೂ ‘ಛತ್ರತ್ರಯಪುರಿ’ಯನ್ನು ಹೇಳಿದ್ದಾನೆ. ಆದರೆ ಆತ ಅದನ್ನು ಹೊಯ್ಸಳರಾಜ್ಯದ ರಾಜಧಾನಿ ಎಂದು ಹೇಳಿರುವುದು ಸಂಶೋಧನೆಗೆ ಎಡೆಗೊಟ್ಟಿದೆ.

ಕವಿಚರಿತೆಯಲ್ಲಿ ಅನುಕ್ತನಾದ ಆದಿದೇವ ಕವಿಯ ಏಕೈಕ ಉಪಲಬ್ಧ ಕಾವ್ಯ ಸುಕುಮಾರ ಚರಿತೆ. ಇದರ ರಚನೆಯ ಕಾಲ ಖಚಿತವಾಗಿ ತಿಳಿಯದು. ಇದರ ಒಂದು ಹಸ್ತಪ್ರತಿಯಲ್ಲಿ ‘ಸ್ವಸ್ತಿಶ್ರೀ ಶಕವರ್ಷ ೧೪೮೬ನೆಯ ಪರಾಭವ ಸಂವತ್ಸರದ ವೈಶಾಖ ಶುದ್ಧ ೧೬ ಶುಕ್ರವಾರದಲ್ಲಿ ಯೇದಲಾಪುರದ (ಚೆ)ನ್ನ ಪಾರ್ಶ್ವನಾಥನ ಶ್ರೀಪಾದ ಸನ್ನಿಧಾನದಲ್ಲಿ ಅಕ್ಕನೂರ ಸಿಂಗಪನು ದುಂಡಿಗೆಯ ಪಾಯಣನ ಮಗಳು ಪದುಮಾಯಿಗೆ ಬರೆದುಕೊಟ್ಟ ಸುಕುಮಾರ ಚರಿತೆಯ ಪುಸ್ತಕಕ್ಕೆ ಮಂಗಳ ಮಹಾಶ್ರೀ’ ಎಂದಿದೆ. ಅಂದರೆ ಈ ಹಸ್ತಪ್ರತಿ ಹುಟ್ಟಿದ ಕಲ ೧೫೪೬ ಸಹಜವಾಗಿಯೇ ಆದಿದೇವ ಕವಿಯ ಕಾಲ ತತ್ವೂರ್ವದ್ದು; ಬಹುಶಃ ಈಗ ೧೫೦೦ರ ಸರಿಸುಮಾರಿನಲ್ಲಿದ್ದಿರಬಹುದು.[2] ಈತನು ನೇಮಿವರ್ಣಿಗಳ ಶಿಷ್ಯನಾಗಿರಬಹುದೆಂದು ಕಾವ್ಯದ ಆಂತರಿಕ ಆಧಾರದಿಂದ ಹೇಳಲವಕಾಶವಿದೆಯಾದರೂ ಈ ನೇಮಿವರ್ಣಿಗಳ ಬಗ್ಗೆ ಹೆಚ್ಚಿನ ವಿವರಗಳು ತಿಳಿಯದು. ಆದಿದೇವನು ಭವ್ಯೋತ್ತಮರ ಅರಿಕೆಯಂತೆ ತನ್ನ ಸಾಂಗತ್ಯ ಕಾವ್ಯವನ್ನು ರಚಿಸಿರುವುದಾಗಿ ತಿಳಿಸಿದ್ದಾನೆ. ಈತ ‘ಬಾಲಿಕಾಗಾಯನಕರಣಕ್ಕೆ ರಚಿಸಿದೆ’ ಎಂದು ಹೇಳಿರುವುದು ಸಾಂಗತ್ಯ ಛಂದಸ್ಸಿನ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿವೆ; ಈ ಹೇಳಿಕೆಯಿಂದ ಸಾಂಗತ್ಯ ಕಾವ್ಯ ಹೆಣ್ಣು ಮಕ್ಕಳ ಹಾಡುಗಾರಿಕೆಗಾಗಿ ರಚಿತವಾದಂತೆ ತಿಳಿದು ಬರುತ್ತದೆ. ಇದನ್ನು ಪುಷ್ಟೀಕರಿಸುವ ಇದರ ಇನ್ನೊಂದು ಪದ್ಯ ಇಂತಿದೆ :

ಅಮರೇಂದ್ರವಂದಿತ ಶ್ರೀ ಸುಕುಮಾರನ
ಚಾರು ಚರಿತದ ಪ್ರತಿಯನು |
ಜಿನಚಂದ್ರನು ತನ್ನ ಪುತ್ರೀತ್ರಯಗಳ
ನೋದಿಸಲೆಂದು ಬರೆದನು || (ಇಲ್ಲಿ ಪ್ರಾಸ ತಪ್ಪಿದೆ)

ಆದಿದೇವ ಕವಿ ಸ್ವಕೀಯ ಸಂಗತಿಗಳನ್ನು ಕಡಿಮೆ ತಿಳಿಸಿದ್ದಾನೆ. ಸ್ವಕಾವ್ಯ ಕುರಿತು ಅಭ್ಯಾಸಿಗಳಲ್ಲಿ ಎಂದಿನಂತೆ ವಿಜ್ಞಾಪಿಸಿಕೊಂಡಿದ್ದಾನೆ :

ಚಂದ್ರನು ಬೆಳಗಿದಾಕಾಶ ಭಾಗದೊಳು
ಮಂದತಾರಗೆ ಪೊಳೆವಂತೆ |
ಸಂದ ಕವೀಂದ್ರರುಸಿರಿದೀ ಕಾವ್ಯವನತಿ
ಕುಂದನು ನಾನು ಹೇಳುವೆನು ||
ಆದಿಕಾವ್ಯ ರಚನೆಯ ನೋಡಿ ರಚಿಸುವ
ಚೋದಿಸಿಯಿದೇತಕೆನ್ನದಿರಿ |
ಶ್ರಾವ್ಯವಲ್ಲದಡೇನು ಪದಸಂದರ್ಭವು
ನವ್ಯ ಕಥೆಯ ಲಾಲಿಸಿರಿ || (ಇಲ್ಲಿ ಪ್ರಾಸೋಲ್ಲಂಘನೆಯಾಗಿದೆ)

ಕಾವ್ಯಾರಂಭದಲ್ಲಿ ಚಂದ್ರನಾಥ, ಶಾಂತಿನಾಥ ಮತ್ತು ಮಹಾವೀರ ತೀರ್ಥಂಕರರನ್ನೂ ಅನಂತರ ಯಥಾ ಪ್ರಕಾರ ಸಿದ್ಧರು ಆಚಾರ್ಯರು ಸರ್ವಸಾಧುಗಳನ್ನೂ ಯಕ್ಷರನ್ನೂ ಯತಿಗಳನ್ನೂ ಸ್ತುತಿಸಿದ್ದಾನೆ. ಲೋಕಾಕಾರ ತಿಳಿಸಿ ಕಾವ್ಯದ ಕಥೆಯನ್ನು ಕೌಶಂಬೀನಗರದ ಅತಿಬಲರಾಜನಿಂದ ಪ್ರಾರಂಭಿಸಿದ್ದಾನೆ. ಕವಿ ಮೇಲಿನ ಎರಡು ಪದ್ಯಗಳಲ್ಲಿ ಹೇಳಿರುವಂತೆ, ಸುಕುಮಾರನ ಕಥೆ ಜೈನ ಸಾಹಿತ್ಯದಲ್ಲಿ ಸುಪ್ರಸಿದ್ಧವಾದುದು, ಇದರ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಆದಿದೇವನ ಕಾವ್ಯ ಗಣ್ಯವಾಗಿದೆ.[3] ಆರಾಧನ ಕಥಾಕೋಶ, ಹರಿಷೇಣನ ಬೃಹತ್ ಕಥಾಕೋಶ. ಕನ್ನಡ ವಡ್ಡಾರಾಧನೆ, ಸುಕುಮಾರ ಚರಿತೆ (ಶಾಂತಿನಾಥ), ಪುಣ್ಯಾಸ್ರವ ಕಥಾಕೋಶ (ರಾಮಚಂದ್ರ ಮುಮುಕ್ಷು), ಪುಣ್ಯಾಸ್ರವ ಚಂಪೂ (ನಾಗರಾಜ) ಮೊದಲಾದ ಕಾವ್ಯಗಳ ಕಥೆಗಳಲ್ಲಿರುವ ಸುಕುಮಾರಸ್ವಾಮಿಯ ಚರಿತೆಯನ್ನು ಆದಿದೇವನ ಕವಿ ತನ್ನ ಸಾಂಗತ್ಯಕಾವ್ಯದಲ್ಲಿ ಅಳವಡಿಸಿಕೊಂಡಿದ್ದಾನೆಯೆಂಬ ಕಾರಣದಿಂದ, ಈ ವಿವಿಧ ಮೂಲಗಳನ್ನು ಹೇಗೆ ಬಳಸಿಕೊಂಡಿದ್ದಾನೆಂಬುದು ಅಭ್ಯಸನೀಯವಾಗಿದೆ.

ವಡ್ಡಾರಾಧನೆ ಮತ್ತು ಶಾಂತಿನಾಥನ ಸುಕುಮಾರಚರಿತೆ ಚಂಪೂ ಕಾವ್ಯ – ಇವನ್ನು ಕವಿನೇರ ಆಕರವನ್ನಾಗಿರಿಸಿಕೊಂಡಿದ್ದಾನೆ. ಈ ಕೃತಿಗಳಲ್ಲಿರುವಂತೆ ಇವನ ಕಾವ್ಯವು ಅಗ್ನಿಭೂತಿ – ವಾಯುಭೂತಿ ಸೋದರರ ಕಥೆಯಿಂದ ಆರಂಭವಾಗುತ್ತದೆ.[4] ಶಾಂತಿನಾಥನ ವಿಸ್ತಾರವಾದ ಸುಕುಮಾರಚರಿತೆಯನ್ನಲ್ಲದೆ ವಡ್ಡಾರಾಧನೆಯ ಗದ್ಯ ಕಥೆಯನ್ನೂ ಆದಿದೇವನು ನೋಡಿದ್ದಾನೆಂಬುದಕ್ಕಿರುವ ಪ್ರಬಲ ಆಧಾರವೆಂದರೆ ವಡ್ಡಾರಾಧನೆಯಲ್ಲಿ ಮಾತ್ರ ಇರುವ ವೈನಾಕನೆಂಬ ಕಳ್ಳನು ‘ಕನ್ನೆಯ ಬಂಟನ ವೃದ್ಧವಧೂ ಕಥೆಗಳನ್ನು ‘ಚಿತ್ರಪಟದಲ್ಲಿ ಬರೆದು ಭತ್ತವನ್ನು ಕದಿಯುತ್ತಿದ್ದನೆಂಬ ಕಥೆ ಆದಿದೇವನ ಕಾವ್ಯದಲ್ಲೂ (ಪದ್ಯ ೪೯೭) ಬಂದಿರುವುದು, ಸುಕುಮಾರನ ತಾಯಿ ಯಶೋಭದ್ರೆಯ ವಿಲಾಪ, ಪುತ್ರಾಪೇಕ್ಷೆ, ಗರ್ಭವತಿಯ ವರ್ಣನೆ; ಸುಕುಮಾರನ ವಿವಾಹ ವೈಭವದ ವರ್ಣನೆ – ಇದೆಲ್ಲ ಆದಿದೇವ ಶಾಂತಿನಾಥ ಕವಿಗೆ ಋಣಿಯಾಗಿದ್ದಾನೆ, ಇದರಂತೆ ನಾಗರಾಜನ ಪುಣ್ಯಾಸ್ರವ ಚಂಪೂಕಾವ್ಯದ ಸುಕುಮಾರನ ಕಥೆಯನ್ನೂ ಉಪಯೋಗಿಸಿಕೊಂಡಿದ್ದಾನೆ[5] ಯಶೋಭದ್ರೆಯ ಸೊಸೆಯರು ಹಾಕಿಕೊಂಡ ಬಹು ಬೆಲೆ ಬಾಳುವ ಹಾವುಗೆಯನ್ನು ಹದ್ದೊಂದು –

ಗಗನ ಗತಿಯಲ್ಲಿ ತಿರುಗುವ
ಖಗರಾಜಂ ಕಂಡು ಪಿಸಿತಮೆಂದದ ಮನದೊಳ್ |
ಬಗೆದೆತ್ತಿಕೊಂಡು ಪೋಪುದು
ಮೃಗ ಶಾಬೇಕ್ಷಣೆಯ ವಾಮ ಚರಣದ ಮೆಟ್ಟಂ ||

ಹೊತ್ತುಕೊಂಡು ಹೋಗಿ ದೊರೆ ವೃಷಭಾಂಕನ ಅರಮನೆಯಲ್ಲಿ ಹಾಕಿತೆಂಬ ಹೇಳಿಕೆ ನಾಗರಾಜನ ಪುಣ್ಯಾಸ್ರವ ಚಂಪೂಕಾವ್ಯದಲ್ಲಿದೆ. ಇದನ್ನು ಆದಿದೇವ ಅನಾಮತ್ತಾಗಿ (ಪದ್ಯಗಳು ೮೫೪-೮೫೬) ಸ್ವೀಕರಿಸಿದ್ದಾನೆ. ಹೀಗೆ ಆದಿದೇವನ ಸುಕುಮಾರ ಚರಿತೆ ತತ್ಪೂರ್ವದ ಕೃತಿಗಳಲ್ಲಿ ಮುಖ್ಯವಾಗಿ ಮೂರು ಕನ್ನಡ ಕೃತಿಗಳನ್ನು ಆಧರಿಸಿ ಬೆಳೆದಿದೆ. ಜತೆಗೆ ಸು.೧೨೦೦ ರಲ್ಲಿದ್ದ ಬಂದುವರ್ಮನ ಜೀವ ಸಂಬೋಧನೆ ಎಂಬ ಕಾವ್ಯದ ಆರನೆಯ ಅಧಿಕಾರದಲ್ಲಿ ಸಂಗ್ರಹವಾಗಿ (ಪದ್ಯ ೨೭ ರಿಂದ ೬೫) ಬರುವ (ಸುಕುಮಾರನ ಜನ್ಮದಿಂದ ಮುಂದಿನ ಕಥೆ ಮಾತ್ರ ಇದೆ) ಕಥೆಯನ್ನೂ ಅವಲೋಕಿಸಿರಬಹುದು.

ಆದಿದೇವನು ಈ ಜನಪ್ರಿಯ ಕಾವ್ಯವನ್ನು ಅಕ್ಲಿಷ್ಟವಾಗಿ ಚೇತೋಹಾರಿಯಾಗಿ ನಿರೂಪಿಸಿದ್ದಾನೆ. ಇದಕ್ಕೆ ಒಂದು ನಿದರ್ಶನವನ್ನು ಇಲ್ಲಿ ಕೊಡಬಹುದು, ಕಾವ್ಯನಾಯಕನಾದ ಸುಕುಮಾರನು ಸತ್ತಮೇಲೆ ಅವರ ಮಡದಿಯರು ದುಃಖತಪ್ತರಾಗಿ ಪ್ರಲಾಪಿಸುವುದನ್ನು ‘ಶೋಕವರಾಳಿ ರಗಳೆ” – (ಮಂದಾನಿಲ ರಗಳೆ)ಯಲ್ಲಿ ನಿರೂಪಿಸಿದ್ದಾನೆ; ರಗಳೆಗೆ ಮೊದಲು ಒಂದು ಸಾಂಗತ್ಯ ಪದ್ಯವಿದೆ;

ಎಲೆ ಸುಕುಮಾರ ಕುಲಾಂಗನೆಯರನಿಂತು
ಮಲಮಲ ಮರುಗಿಸಿ ನೀನು |
ಬಲುಹಿಂದ ಬಂದು ತಪಕೆ ನಿಂದ ತಪವಿದು
ಫಲಿಸಿ ನಿನ್ನಂಗವಿಂತಾಯ್ತು ||
ಏನನಿಂತು ನೀ ನೆನೆದಯ ಬುಧಸಾರ | ಮಾನವರೂಪಿನ ಸುಖದವತಾರ
ನಡುನೀರೊಳು ಕಡುಕಿರ್ಚೆರ್ದಂತೆ | ಸಿಡಿಲು ಹಂಸೆಗಡಣದೊಳು ಪೊಡೆವಂತೆ
ವರಮುನಿಜನ ಭವನಕೆ ಬರಲೇಕೆ | ಜರೆಯಲೇಕೆ ಸಂಸ್ಕೃತಿ ಭೋಗಗಳನು
ತಳುವದೆ ಸನ್ಯಸನವ ಕೈಕೊಂಡು | ಚಲಿಸದೆ ಗುರುವನು ಬೀಳ್ಕೊಂಡು
ನಡೆದು ಬಂದೆ ತಳಿರಡಿಯೊಡೆವಂತೆ | ಅಡಿಯಿನ್ನೆತ್ತರು ಬಿಡದೊಗುವಂತೆ
ಮೂರುದಿನದ ಘೋರವೇದನೆಯೊಳಗೆ | ಆರಿಸಿದವರಾರು ದುಃಖವ ನಿನಗೆ
ಚರ್ವಿಸುತಿರೆ ತನುವನು ಗೋಮಾಯು | ಕೊರ್ವಿಬೀಸುತಿರೆ ವನದೊಳ್ ವಾಯು
ಹಿಮದಿಂದಂಗವು ಕೊಕ್ಕಿಸುತಿರಲು | ಕ್ರಮದಿಂಬಿಸಿಲಸುವನು ಸುಡುತಿರಲು
ಹಸಿವು ತೃಷೆಗಳಡಿಗಡಿಗುದಯಿಸಲು | ಮಸಕಂಗಳು ಬಂದೂರುತ್ತಿರಲು
ಅಳಲದೆ ಬಳಲದೆ ನೀನೆಂತಿರ್ದೈ | ಕಳವಳಿಸದೆ ಮರವಟ್ಟಂತಿರ್ದೈ
ಇರಲೀಸದೆ ವಿಧಿಯಿಲ್ಲಿಗೆ ತಂದು | ಮರಳಿಬಾರದಂತಿಲ್ಲಿಯೆ ಕೊಂದು
ಮುಗ್ದೆಯರೆಮ್ಮನು ಕೆಡಿಸಿತು ನೋಡೈ | ಶುದ್ಧೆಯರೆಮ್ಮನು ಕೊಂದುದು ಕಂಡೈ

ಇಲ್ಲಿ ಇಷ್ಟು ಪದ್ಯಗಳನ್ನು ಉದಾಹರಿಸಿರುವುದಕ್ಕೆ ಕಾರಣವೆಂದರೆ ಮೊದಲನೆಯದಾಗಿ ಆದಿದೇವನ ಈ ಸುಕುಮಾರ ಚರಿತೆ ಕಾವ್ಯ ಕವಿಚರಿತೆಯಲ್ಲಿ ಅನುಕ್ತವು ಮತ್ತು ಇದು ತನಕ ಅಪ್ರಕಟಿತವೂ ಆಗಿರುವುದು; ಎರಡನೆಯದಾಗಿ ಆದಿದೇವನ ಕಾವ್ಯಗುಣವನ್ನು ಪ್ರಕಟಿಸುವುದು. ಸಾಂಗತ್ಯದ ಓಟ ಹಿತವಾಗಿರುವಂತೆ ಈತನ ರಗಳೆಯ ಲಯವೂ ಆಕರ್ಷಕವಾಗಿದೆ.[6]

. ನೇಮಣ್ಣ ಕವಿ (ನೇಮಿವ್ರತಿ)

ಕವಿಚರಿತೆಯಲ್ಲಿ ಜ್ಞಾನಭಾಸ್ಕರಚರಿತೆಯನ್ನು ಬರೆದ ನೇಮಣ್ಣ ಕವಿ ಹಾಗೂ ಚರಿತೆಯನ್ನು ಬರೆದ ನೇಮಿವ್ರತಿ ಕವಿ ಪ್ರತ್ಯೇಕ ಕವಿಗಳೆಂದು ಉಲ್ಲೇಖವಾಗಿದೆ.[7] ಆದರೆ ಅವರಿಬ್ಬರೂ ಪ್ರತ್ಯೇಕರಾಗಿರದೆ ಅಭಿನ್ನರೆಂದು ಬಿ.ಬಿ. ಮಹೀಶವಾಡಿವರು ಸಾಧಾರಣವಾಗಿ ತೋರಿಸಿದ್ದಾರೆ : ‘ಕವಿ ಚರಿತ್ರೆಕಾರರಿಗೆ ಸುವಿಚಾರ ಚರಿತೆಯ ಸಮಗ್ರಪ್ರತಿ ದೊರೆತಂತೆ ಕಾಣುವುದಿಲ್ಲ. ಆದ್ದರಿಂದ ಕೃತಿನಿರ್ಮಾಣಕಾಲದ ಪದ್ಯ ದೊರೆಯದೆ ಕವಿಯ ಕಾಲವನ್ನು ಸು. ೧೬೫೦ ಎಂದು ಊಹಿಸಿದ್ದಾರೆ. ನನ್ನ ಬಳಿಯಲ್ಲಿ ಇರುವ ಕೃತಿ ೧೨ ಸಂಧಿಗಳಿಂದಲೂ ಒಟ್ಟು ೧೪೪೪ ಪದ್ಯಗಳಿಂದಲೂ ಪೂರ್ಣವಾಗಿದೆ. ಕಾಲಸೂಚಕಗದ್ಯವೂ ಇದೆ – ದೊರೆ ಶಕವರುಷ ಸಾವಿರದ ನಾನೂರೆಂಬತ್ತೆರಡನೆ ಸಿದ್ಧಾರ್ಥನಾಮ ವರ್ಷ ಭಾದ್ರಪದ ಶುದ್ಧ ದಶಮಿಯಂದು ಪರಿಪೂರ್ಣವಾಯಿತೀ ಚರಿತೆ ಅಂದರೆ ೧೪೮೨ ಶಕೆಗೆ ಸರಿಹೋಗುವಂತೆ ಇಸ್ವಿಗೆ ಪರಿವರ್ತನೆ ಮಾಡಿದರೆ ೧೫೫೯ನೇ ಇಸ್ವಿ ಆಗುತ್ತದೆ. ಅಲ್ಲದೆ ಗ್ರಂಥದ ಕೊನೆಯ ಭಾಗದಲ್ಲಿ ಬಿದುರೆಯ ನೇಮಣ್ಣಗಳು ಪೇಳಿದ ಕೃತಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಐದನೇ ಸಂಧಿಯ ಕೊನೆಯ ಭಾಗದಲ್ಲಿ ‘ನೇಮಿವ್ರತಿಯು ಪೇಳ್ದ ಚರಿತೆಗೆ ಮಧ್ಯ ಮಂಗಲವಹುದಿಲ್ಲಿ’ ಎಂದು ಹೇಳಲಾಗಿದೆ. ಆದ್ದರಿಂದ ನೇಮಿಪ್ರತಿ ಎಂದರೆ ನೇಮಣ್ಣಕವಿಯೇ ಹೌದು. ಸುವಿಚಾರ ಚರಿತೆಯನ್ನೂ ಜ್ಞಾನಭಾಸ್ಕರ ಚರಿತೆಯನ್ನೂ ನೇಮಣ್ಣ ಕವಿಯೇ ಬರೆದಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.[8]

ನೇಮಣ್ಣಕವಿ ಶೀಲಾಬ್ಧಿಯೆಂಬ ಜೈನಾಚಾರ್ಯನ ಶಿಷ್ಯ. ಶೀಲಾಬ್ಧಿಯ ಗುರು ಜಿನಸೇನನೆಂಬುವನು. ಈ ಜಿನಸೇನನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಮಡೊಳ್ಳಿಪುರದಲ್ಲಿದ್ದ ಜೈನ ಬಸದಿಯಾದ ಆದಿಜಿನಾಲಯಕ್ಕೆ ಗುರುವಾಗಿದ್ದನು. ಬೆಳಗಾವಿ ಜಿಲ್ಲೆಯ ಉಗಾರವನ್ನೂ ಕವಿ ಹೆಸರಿಸಿದ್ದಾನೆ. ಇದು ಈತನ ಜನ್ಮಸ್ಥಳವಿರಬಹುದು. ನೇಮಣ್ಣ ಕವಿ ತುಳು ರಾಜ್ಯಕ್ಕೆ ಸೇರಿದ, ಅಂದರೆ ಈಗಿನ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಬಿದುರೆಯ (ಮೂಡಬಿದರೆ) ಹಿರಿಯ ಬಸ್ತಿಯನ್ನು (ಇದು ಈಗಲೂ ಇದೆ) ಉದ್ಧರಿಸಿದ ಜೈನ ಶ್ರಾವಕರಲ್ಲಿ ಜಿನದೀಕ್ಷೆಯನ್ನು ಧರಿಸಿದನೆಂದು –

ವರತುಳು ರಾಜ್ಯಕಗ್ಗಳವಾದ ಬಿದಿರೆಯೊಳ್
ಹಿರಿಯ ಬಸ್ತಿಯನುದ್ಧರಿಸಿದಾ
ಉರುಶ್ರಾವಕರೊಳುದಯಿಸಿ ಜಿನದೀಕ್ಷೆಯ
ಸಿರಿಯಿಂದಾತ್ಮನ ಸೂಚಿಸಿದೆನೊ  ||೧೨೮||

ಎಂಬ ಪದ್ಯದಿಂದ ತಿಳಿದುಬರುತ್ತದೆ; ಇದೇ ಹೇಳಿಕೆ ಸುವಿಚಾರ ಚರಿತೆಯಲ್ಲೂ ಇದೆ. ಜ್ಞಾನಭಾಸ್ಕರ ಚರಿತೆಯನ್ನು ಮೂಡಬಿದರೆಯಲ್ಲೂ ಸುವಿಚಾರ ಚರಿತೆಯನ್ನು ಕಾರ್ಕಳದಲ್ಲೂ ರಚಿಸಿದ್ದನೆಂದು ತಿಳಿದುಬರುತ್ತದೆ.

ನೇಮಣ್ಣ ಕವಿಯ ಕಾವ್ಯಗಳು ಎರಡು : ಜ್ಞಾನಭಾಸ್ಕರ ಚರಿತೆ ಮತ್ತು ಸುವಿಚಾರ ಚರಿತೆ. ಜ್ಞಾನಭಾಸ್ಕರ ಚರಿತೆಯನ್ನು ಶಕ ೧೪೮೨ನೆಯ ಸಿದ್ಧಾರ್ಥ ಸಂವತ್ಸರದಲ್ಲಿ, ಅಂದರೆ ಕ್ರಿ.ಶ.೧೫೫೯ ರಲ್ಲಿ ರಚಿಸಿದನೆಂದು ತಿಳಿದುಬರುತ್ತದೆಯಲ್ಲದೆ ಸುವಿಚಾರ ಚರಿತೆಯನ್ನೂ, ಇದೇ ಸಿದ್ಧಾರ್ಥನಾಮ ಸಂವತ್ಸರದ ಭಾದ್ರಪದ ಶುದ್ಧ ದಶಮಿಯಲ್ಲಿ ಬರೆದು ಮುಗಿಸಿದನೆಂದೂ ತಿಳಿದುಬಂದಿದೆ. ಆದರಿಂದ ಕವಿಯ ಕಾಲ (೧೫೫೯-೧೫೬೦). ಜ್ಞಾನಭಾಸ್ಕರಚರಿತೆ ಕಾವ್ಯವಾಗಿ ಗಣ್ಯಕೃತಿಯೇನೂ ಅಲ್ಲ. ಇದರಲ್ಲಿ ೧೩೩ ಪದ್ಯಗಳಿವೆ. ಇದು ಸಾಂಗತ್ಯ ಕೃತಿ. ಇದರಲ್ಲಿನ ವಸ್ತು ಸೈದ್ಧಾಂತಿಕವಾದುದು :

ದುರಿತವೆಂದೆಂಬ ಮಹಾಂಧಕಾರಕೆ ಜ್ಞಾನ
ದುರರವಿಕರಣದುದಯವು |
ಪರಮಾತ್ಮನೆಂಬುದಯಾದ್ರಿಯೊಳುದಯಿಸೆ
ನಿರುಪಮಸುಖವಹುದಾಗ  ||||

ಜ್ಞಾನಚಂದ್ರಾಭ್ಯುದಯ (ಕಲ್ಯಾಣಕೀರ್ತಿ), ಜ್ಞಾನಚಂದ್ರಚರಿತೆ (ಪಾಯವರ್ಣಿ) ಎಂಬ ಕಾವ್ಯಗಳಿಗೂ ನೇಮಣ್ಣಕವಿಯ ಜ್ಞಾನಭಾಸ್ಕರಚರಿತೆಗೂ ನಾಮಸಾದೃಶ್ಯದ ಹೊರತು ವಸ್ತು ಸಂಬಂಧವಿಲ್ಲ; ಅವೆರಡೂ ಜ್ಞಾನಚಂದ್ರನೆಂಬ ಜಿನಭಕ್ತನಾದ ಭವ್ಯಜೀವಿಯ ಚರಿತೆಗಳು; ಈ ಕೃತಿ ಆಧ್ಯಾತ್ಮಶಾಸ್ತ್ರಪಠನ ಧ್ಯಾನಗಳು ಮೋಕ್ಷಕ್ಕೆ ಪ್ರಮುಖ ಸಾಧನಗಳೆಂದೂ, ಕೇವಲ ಕಾಯಕ್ಲೇಷ ಹಾಗೂ ಹೊರಗಿನ ವೇಷ ಭೂಷಣಗಳು ಅಪ್ರಯೋಕವೆಂದೂ ಸಾರುತ್ತದೆ :

ತನುವೆಂಬ ಕೆಸರೊಳು ಲೋಕವ ಬೆಳಗುವ
ಚಿನ್ಮಯರತ್ನವುಂಡದನು |
ತನುವ ಬತ್ತಿಸಿಯಾ ರತ್ನವ ತೆಗೆವಂತೆ
ಜಿನಮಾರ್ಗದ ತಪಶ್ಚರಣ  ||೩೮||

ಒಳಗೆ ಕತ್ತಲೆ ಮತ್ತೆ ಹೊರಗೆ ಬತ್ತಲೆಯವ
ರಿಳೆಗೆ ಗುರುಗಳು ಜಡರಿಗೆ |
ಒಳಗೆ ಸಂಯುಕ್ತ್ವದೊಡನೆ ಭೋಗವಿದ್ದರು
ಬಳಲದ ಗುರು ಜ್ಞಾನಿಗಳಿಗೆ  ||೪೫||

ನೇಮಣ್ಣಕವಿ ಮೂಡುಬಿದರೆಯ ಮಹಾಕವಿ ರತ್ನಾಕರವರ್ಣಿಯ ಪ್ರಭಾವ ಪಡೆದಿದ್ದಾನೆ. ಇಲ್ಲಿ ಉದಾಹರಿಸಿದ ೪೫ನೆಯ ಪದ್ಯ ರತ್ನಾಕರವರ್ಣಿಯ ‘ಮೆಯ್ಯಬತ್ತಲೆ ಮಾಡಿ ಮನವಕತ್ತಲೆ ಮಾಡಿ ಹುಯ್ಯಲಿಡುತ ಸುತ್ತುತಿಹರು’ಎಂಬ ಪದ್ಯದ ಛಾರ್ಯೆ. ಇದೇ ರೀತಿ ರತ್ನಾಕರವರ್ಣಿಯ ಪ್ರಭಾವವನ್ನು ಈತನ ಇನ್ನೊಂದು ಪದ್ಯವಾದ ‘ಉಂಗುಷ್ಠ ಮೊದಲ್ಗೊಂಡು ಮಸ್ತಕಪರ್ಯಂತ| ಮಂಗಲರೂಪ ತೋರುವನು’ (೧೦೧) ಎಂಬಲ್ಲಿಯೂ ಗುರುತಿಸಬಹುದು; ಇದು ರತ್ನಾಕರಾಧೀಶ್ವರ ಶತಕದ ‘ಆಂಗುಷ್ಠಂ ಮೊದಲಾಗಿ ನೆತ್ತಿವರೆಗಂ ಮಾಂಗಲ್ಯ ಮಹಿಮಂ’ ಎಂಬ ಪದ್ಯವನ್ನು ನೆನಪಿಸುತ್ತದೆ.[9] ನೇಮಣ್ಣಕವಿಯ ಶೈಲಿ ಚೆನ್ನಾಗಿದೆ; ಆತ ಉತ್ತಮವಾದ ಜೈನಕಥಾವಸ್ತುವೊಂದನ್ನು ಆರಿಸಿಕೊಂಡಿದ್ದರೆ ಒಳ್ಳೆಯ ಕಾವ್ಯ ಬರೆಯಬಹುದಿತ್ತೆಂಬ ಭರವಸೆಯನ್ನು ಆತನ ಇನ್ನೊಂದು ಕಾವ್ಯವೂ ಸಮರ್ಥಿಸುತ್ತದೆ. ಉದಾಹರಣೆಗೆ, ಸಂಖ್ಯೆಗಳಲ್ಲಿ ಸೊನ್ನುಗು ಉಳಿದ ಅಂಕಿಗಳಿಗೂ ಇರುವ ವೈಶಿಷ್ಟ್ಯವನ್ನು ಕವಿ ಬಹು ಚಮತ್ಕಾರವಾಗಿ ತಾತ್ವಿಕ ಸಂಗತಿಗಳಿಗೆ ಅನ್ವಯಿಸಿ ಮನಸ್ಸಿಗೆ ಧರ್ಮಾನುರಕ್ತಿ ನಾಟುವಂತೆ ಮಾಡಿದ್ದಾನೆ :

ಹದಿನಾಲ್ಕು ಸೊನ್ನೆಯ ಬರೆದೊಂದನಿಕ್ಕಿದ
ಡದು ಕೋಟಿಕೋಟಿಗಳಹುದು |
ಅದರೊಳಗೇನು ಲೆಕ್ಕಗಳಿಲ್ಲದಿದ್ದರೆ
ಯದು ನಿರಕ್ಷರಿಕರ್ಗೆ ಚಂದ ||೭೩||

ವ್ರತಗುಣಶೀಲ ತಪಸು ಶಾಸ್ತ್ರಗಳೆಲ್ಲ
ಕ್ಷಿತಿಯೊಳು ಸೊನ್ನೆಗಳಂತೆ |
ಅತಿಶಯದಾತ್ಮಭಾವನೆ ಲೆಕ್ಕದಂತೆಯೆಂ (ಲೆಕ್ಕದೊಂ)
ದತಿ ಸುಜ್ಞಾನಿಗಳು ಪೇಳುವರು  ||೭೫||

ಒಬ್ಬ ಕರತಿ ಆಧ್ಯಾತ್ಮಕವಿಷಯ ನಿರೂಪಣೆಗೇ ಮೀಸಲಾಗಿದೆಯಾಗಿ ಜೈನಮತೀಯ ವಿಚಾರ ಪ್ರತಿಪಾದನೆಯ ಪ್ರಾಥಮಿಕ ನೆಲೆಯಲ್ಲೇ ನೇಮಣ್ಣನ ಜ್ಞಾನಭಾಸ್ಕರ ಚರಿತೆ ಪರ‍್ಯವಸಾನವಾಗುತ್ತದೆ. ಆದರೆ ಕವಿ ಚತುರ, ತಾನು ಈ ಕಿರಿಯ ಕೃತಿಯಲ್ಲಿ ಹಿರಿಯ ಸಿದ್ಧಾಂತವನ್ನು ಸಂಗ್ರಹಿಸಿ ನಿರೂಪಿಸಿರುವುದಕ್ಕೆ –

ಬಹಳಪದಳಿಂದಧ್ಯಾತ್ಮವ ಪೇಳ್ದರೆ
ಬಹು ಭಕ್ತಿಯಿಂದ ಲಾಲಿಸುವ |
ಸಹಕರೀಕಾಲದೊಳಗಿಲ್ಲವದರಿಂದ
ಬಹಳದಡಕವ ಮಾಡಿಹುದೂ  ||೧೨೬||

ಎಂದು ಸಕಾರಣವಾದ ಸಮರ್ಥನೆ ಒದಗಿಸುತ್ತಾನೆ. ಈ ಹೇಳಿಕೆ ಕವಿಯ ಕಾಲಕ್ಕೆಂತೊ ಅಂತೆಯೇ ಈಗಿನ ಕಾಲಕ್ಕೂ ಇನ್ನೂ ಚೆನ್ನಾಗಿ ಅನ್ವಯಿಸುತ್ತದೆ.

ನೇಮಣ್ಣಕವಿಯ ಎರಡನೆಯ ಕಾವ್ಯ ಸುವಿಚಾರ ಚರಿತ್ರೆ[10] ಇದು ಮೊದಲನೆಯ ಕಾವ್ಯಕ್ಕಿಂತ ಗಾತ್ರದಲ್ಲಿಯೂ ಗುಣದಲ್ಲಿಯೂ ದೊಡ್ಡದು. ಸಾಂಗತ್ಯ ಕಾವ್ಯವಾದ ಸವಿಚಾರಚರಿತೆಯಲ್ಲಿ ಹನ್ನೆರಡು ಸಂಧಿಗಳೂ ೧೪೪೪ ಪದ್ಯಗಳೂ ಇವೆ. ಇದರಲ್ಲಿ ದೇವ, ಮಾನುಷ, ತಿರ್ಯಕ್ ಹಾಗೂ ನಾರಕಗಳೆಂಬ ನಾಲ್ಕು ಗತಿಗಳಲ್ಲಿನ ದುಃಖಗಳನ್ನೂ ಗೃಹಸ್ಥರ ಹನ್ನೊಂದು ನೆಲೆಗಳನ್ನೂ, ಮೋಕ್ಷದ ಸ್ವರೂಪವನ್ನೂ ನಿರೂಪಿಸಿದೆ. ಇಪ್ಪತ್ತೆರಡನೆಯ ತೀರ್ಥಂಕರನಾದ ನೇಮಿನಾಥನನ್ನು ಸ್ತುತಿಸಿದ್ದು ಆದಮೇಲೆ ನೇಮಣ್ಣ ಕವಿ ಮತ್ತೆ ಜೈನಕವಿಗಳ ಸಂಪ್ರದಾಯಾನುಸಾರವಾಗಿ ಜೈನಾಚಾರ್ಯವನ್ನು ಸ್ಮರಿಸಿದ್ದಾನೆ; ಇಲ್ಲಿ ಬರುವ ನೇಮಿಚಂದ್ರನು ಲೀಲಾವತಿ ಕಾವ್ಯಖ್ಯಾತಿಯ ನೇಮಿಚಂದ್ರನಲ್ಲ; ಚಾವುಂಡರಾಯನ ಗುರುವೂ ಗೊಮ್ಮಟಸಾರದ ಕರ್ತೃವೂ ಜೈನ ಸಿದ್ಧಾಂತ ಚಕ್ರವರ್ತಿಯೂ ಆದ ನೇಮಿಚಂದ್ರಾಚಾರ್ಯನಾಗಿದ್ದಾನೆ.

ಲೋಕದಲ್ಲಿ ಅಜ್ಞಾನ ಮೂಲವಾಗಿ ರೂಢಿಯಲ್ಲಿರುವ ಮೂಢನಂಬಿಕೆ ಮೂಢಪದ್ಧತಿಗಳನ್ನೂ ಅನ್ಯಾಯರೂಪದ ವಿತ್ತಸಂಚಯವನ್ನೂ ತಿರಸ್ಕರಿಸಲು ಕವಿ ಜನತೆಗೆ ಕರೆ ಕೊಟ್ಟಿದ್ದಾನೆ :

ರವಿಯ ಮಂಡಲಕೆ ಜಲಾರ್ಘ್ಯ ಸಂಕ್ರಾಂತಿಯೊ
ಳವಿವೇಕಿಗಳ್ಗೆ ದಾನವನು |
ರವಿಶಶಿಗಳ ಗ್ರಹಣದೊಳು ಸ್ನಾನವ ಮಾಡು
ವಿಚಾರವು ಲೋಕಮೂಢ ||
ತ್ರಾಸುಗಟ್ಟಳೆ ಮಚ್ಚಸರಗಳೊಳೊಂದೊಂದು
ವೀಸವೀಸಹೆಚ್ಚು ಕುಂದು |
ಲೇಸಹುದೆನಗೆಂದು ಮಾಡಿದಡದು ಮುಂದೆ
ಮೋಸಬಹುದು ಮೂಲಧನಕೆ ||

ನಾವು ನಡೆಯುವ ಆಡುವ ನುಡಿಯೂ ಉತ್ತಮವಾಗಿರಬೇಕೆಂಬುದನ್ನು ‘ವಚನದಿಂದಲೆ ಪುಣ್ಯಪಾಪ ಮಿತ್ರವೈರಿ ಸರ್ವಭೋಗಗಳೆಲ್ಲ ವಚನದಿಂದಲೆ ಸ್ವರ್ಗ’ವೆಂದು ತಿಳಿಸುತ್ತಾನೆ. ಮಾನವನ ಆಶೆ ಆಕಾಂಕ್ಷೆಗಳು ಹೇಗೆ ಅನಂತವಾಗಿವೆಯೆಂಬುದನ್ನೂ ಅವು ಹೇಗೆ ಒಂದಕ್ಕೊಂದು ಕೊಂಡಿ ಹಾಕಿಕೊಂಡು ಅವಿಚ್ಛಿನ್ನಗತಿಯಲ್ಲಿ ಬೆಳೆಯುತ್ತಲೇ ಹೋಗುತ್ತವೆಂಬುದನ್ನು ಹೃದ್ಯವಾಗಿ ವರ್ಣಿಸಿದ್ದಾನೆ :

ಅನ್ನಕೆ ಬಗೆಯಿಲ್ಲದವನಿಗನ್ನದ ಚಿಂತೆ
ಯನ್ನವಾದದರಿಂದೆ ಮೇಲೆ ||
ಹೊನ್ನಿನಚಿಂತೆ ಹೊನ್ನುಗಳು ತಾನಾದರೆ
ಕನ್ನಿಕೆಯರ ಚಿಂತೆಯಹುದು ||
ನೆನೆದ ಕನ್ನಿಕೆಯಾದ ಬಳಿಕ ಮಕ್ಕಳ ಚಿಂತೆ ಮೊದಲಾದ
ಘನಚಿಂತೆ ತಾಣತಿಕಾಂಕ್ಷೆ ||
ಹಣತೆಯೊಳುರಿವ ದೀವಿಗೆಯ ಪ್ರಕಾಶದೊಂ
ದೆಣಿಕೆ ಸಂಸಾರ ಸುಖಗಳು |
ಗಣಿತವಿಲ್ಲದ ಲೋಕಗಳ ಬೆಳಗುವುದೊಂದು
ಮಣಿದೀಪದಂತೆ ಮೋಕ್ಷಗಳು

ಇಷ್ಟಾದರೂ, ನೇಮಣ್ಣಕವಿ ಪ್ರಧಾನವಾಗಿ ಶ್ರವಕನೆಲೆ ದಾಟಿ ಶ್ರಮಣನಾಗಿರುವುದರಿಂದ ಸಂಸಾರದ ಅಸಾರತೆಯನ್ನೇ ಪ್ರತಿಪಾದಿಸಿದ್ದಾನೆ.[11] ಹೀಗಿದ್ದೂ ಹೋಲಿಕೆ ಹಿತವಾಗಿದೆ.[12]

.ಶ್ರುತಕೀರ್ತಿ

ವಿಜಯಕುಮಾರಿಚರಿತೆ ಎಂಬ ಸಾಂಗತ್ಯ ಕಾವ್ಯವನ್ನು ರಚಿಸಿರುವ ಶ್ರುತಕೀರ್ತಿ ತನ್ನ ಬಗ್ಗೆ ಹೆಚ್ಚು ಹೇಳಿಕೊಂಡಿಲ್ಲ. ತಿಳಿದುಬಂದಿರುವ ಸಂಗತಿಗಳಿಷ್ಟು : ಇವನು ಕನಕಗಿರಿಯವನು. ಕನಕಗಿರಿಯೆಂಬುದು ಈಗಿನ ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನಲ್ಲಿರುವ ಮಲೆಯೂರಿಗೆ ಇರುವ ಇನ್ನೊಂದು ಹೆಸರು. ಇದು ಚಾಮರಾಜನಗರಕ್ಕೆ ಎಂಟು ಮೈಲಿ ದೂರದಲ್ಲಿದೆ. ಈ ಮಲೆಯೂರಿನಲ್ಲಿರುವ ಬೆಟ್ಟಕ್ಕೆ ಈಗಲೂ ಕನಕಗಿರಿಯೆಂಬ ಹೆಸರಿದೆ. ಹಿಂದಿನ ಜೈನಪುರಾಣಗಳಲ್ಲೂ ಇದರ ಉಲ್ಲೇಖವಿದೆ. ಜೈನರ ಸುಪ್ರಸಿದ್ಧ ಆಚಾರ್ಯ ಶ್ರೇಷ್ಠರಾದ ಪೂಜ್ಯಪಾದಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರೆಂಬುದಕ್ಕೆ ಆಧಾರಗಳಿವೆ. ಶ್ರುತಕೀರ್ತಿ ಕೂಡ ತನ್ನ ಕಾವ್ಯದಲ್ಲಿ ಪೂಜ್ಯಪಾದರನ್ನು ಗುರುಗೌರವದಿಂದ ನೆನೆದಿದ್ದಾನೆ.[13] ಪೂಜ್ಯಪಾದರು ತಮ್ಮ ಕೃತಿಗಳಾದ ಸಮಾಧಿಶತಕ, ಇಷ್ಟೋಪದೇಶ, ಸರ್ವಾರ್ಥಸಿದ್ಧಿ, ದಶಭಕ್ತಿ, ಜೈನೇಂದ್ರ ವ್ಯಾಕರಣ ಮತ್ತು ಕಲ್ಯಾಣಕಾರಕಗಳನ್ನು ಈ ಕನಕಗಿರಿಯಲ್ಲಿ ರಚಿಸಿದರೆಂದೂ ತಿಳಿದು ಬರುತ್ತದೆ. ರಾಜಾವಳಿ ಕಥೆಯನ್ನು ರಚಿಸಿದ ದೇವೇಂದ್ರ ಕವಿಯೂ ಇದೇ ಸ್ಥಳದವನು. ಇಲ್ಲಿ ಪಾರ್ಶ್ವನಾಥ ತೀರ್ಥಂಕರರ ಬಸದಿಯಿದೆ.

ಹದಿನಾರನೆಯ ಶತಮಾನದ ಆದಿಯಲ್ಲಿ (ಸು.೧೫೧೬) ಕನಕಗಿರಿಯಲ್ಲಿದ್ದ ವಿಜಯಕೀರ್ತಿ ಮಗನಾದ ಅಕಲಂಕನ (೧೫೫೦) ಮಗನೇ ಶ್ರುತಕೀರ್ತಿ, ಈತನು ಜೈನ ಯತಿಯಾಗಿದ್ದನು. ತನ್ನ ಬಗ್ಗೆ –

ಸಂದ ಸಂಸಾರದೊಳಗೆ ರಾಮಚಂದ್ರನು
ಚಂದನವರ್ಣಿ ಮಧ್ಯದೊಳು |
ಸಂದುದು ಕಡೆಯೊಳು ಶ್ರುತಕೀರ್ತಿ ದೇವರಿ
ನ್ನೆಂದೆಂಬ ನಾಮ ಲೋಕದೊಳು ||
ತೆರದೊಳು ಮೂರು ನಾಮದ ತಳೆದ
ತ್ತಾತನೊಲಿದು ಹೇಳಿದನು |

– ಎಂದು ಹೇಳಿರುವುದರಿಂದ ಇವನು ಯತಿಯಾಗುವುದಕ್ಕೆ ಮೊದಲಿದ್ದ ಪೂರ್ವಾಶ್ರಮದಲ್ಲಿ ರಾಮಚಂದ್ರ ಮತ್ತು ಚಂದನವರ್ಣಿ ಎಂಬ ಹೆಸರುಗಳಿದ್ದು ದೀಕ್ಷಾನಂತರ ಶ್ರುತಕೀರ್ತಿಯೆಂಬ ಹೆಸರು ಬಂದಂತೆ ಗೊತ್ತಾಗುತ್ತದೆ. ಒಬ್ಬ ಜೈನಯತಿಗೆ ಮೂರು ಬೇರೆ ಬೇರೆ ಅವಸ್ಥೆಗಳ ಸಂಸ್ಕಾರವಿರುತ್ತದೆ; ಸಂಸಾರ, ಬ್ರಹ್ಮಚರ್ಯ ಮತ್ತು ಯತಿ ಸಂಸಾರದಲ್ಲಿರುವಾಗ ತಾಯಿ ತಂದೆಯರಿಟ್ಟ ಹೆಸರೂ, ದೀಕ್ಷಾನಂತರ ಬ್ರಹ್ಮಚರ್ಯಾವಸ್ಥೆಯಲ್ಲೊಂದು ಹೆಸರೂ, ಮುನಿಯಾದ ಮೇಲೆ ಮತ್ತೊಂದು ಹೆಸರೂ ಬರುತ್ತವೆ. ಈ ಕವಿಗೆ ರಾಮಚಂದ್ರ ಎಂದು ತಂದೆ ತಾಯಿಯಿಂದ ಬಂದ ಹೆಸರು ಮೊದಲೂ, ಬ್ರಹ್ಮಚರ್ಯ ವ್ರತ ಸ್ವೀಕಾರಾನಂತರ ಚಂದನವರ್ಣಿಯೆಂದೂ, ಪೂರ್ಣ ಸನ್ಯಾಸದೀಕ್ಷೆ ತಳೆದ ಮೇಲೆ ಶ್ರುತಕೀರ್ತಿಯೆಂಬ ಹೆಸರು ಬಂದಿವೆ. ವಿಜಯಕುಮಾರಿ ಚರಿತೆ ಕಾವ್ಯ ರಚನೆಯಾದದ್ದು ಶ್ರುತಕೀರ್ತಿಯಾದ ಮೇಲೆ. ಈ ಅವಧಿಯಲ್ಲಿ ಶ್ರುತಕೀರ್ತಿಯು ಶ್ರವಣಬೆಳಗೊಳದ ಪೀಠಾಧಿಪತಿಗಳ ಶಿಷ್ಯನಾಗಿದ್ದಂತೆಯೂ ತೋರುತ್ತದೆ.

ಚಾರುಗುಣಾನ್ವಿತ ಚಾರು ಚರಿತ ನೋಡೆ
ಚಾರು ಚಾತುರ್ಯವಚನನೂ |
ಚಾರು ಕೀರ್ತಿ ಶ್ರೀಪಂಡಿತಾಚಾರ್ಯರ
ಚಾರು ಚರಣಕೆಗುವೆನೂ ||

ಶ್ರುತಕೀರ್ತಿ ಕವಿ ವಿಜಯಕುಮಾರಿ ಚರಿತೆಯನ್ನೂ ಶಕ ಸಂವತ್ ೧೪೮೮ ರ ಪ್ರಭಾವದಲ್ಲಿ ಪ್ರಾರಂಭಿಸಿ ಮರುವರ್ಷ ವಿಭವದಲ್ಲಿ, ಅಂದರೆ ಕ್ರಿ.ಶ.೧೫೬೭ ರಲ್ಲಿ ಬರೆದು ಮುಗಿಸಿದಂತೆ ತಿಳಿಸಿದ್ದಾನೆ. ವಿಜಯಕುಮಾರಿ ಚರಿತೆಯಲ್ಲಿನ ಪದ್ಯ ಸಂಖ್ಯೆ ೧೩೧೨ ಎಂದು ಕವಿ ಚರಿತೆಯಲ್ಲಿ ಹೇಳಿರುವುದು ಸರಿಯಲ್ಲ; ಇದರಲ್ಲಿ ಹನ್ನೆರಡು ಸಂಧಿಗಳೂ ೧೭೩೩ ಪದ್ಯಗಳೂ ಇವೆ. ಇದೇ ಕವಿಯ ಇನ್ನೊಂದು ಸಾಂಗತ್ಯ ಕಾವ್ಯ – ‘ಯಶೋಧರ ಚರಿತೆ’.

[1] ಡಿ.ಎಲ್. ನರಸಿಂಹಾಚಾರ್ : ಆದಿದೇವ; ಜಯಕರ್ನಾಟಕ ೧೦-೪, ಪು.೩೧೧-೧೨

[2] ಡಿ.ಎಲ್. ನರಸಿಂಹಾಚಾರ್ : ಪೀಠಿಕೆಗಳು – ಲೇಖನಗಳು, ಪು. ೪೮೯-೪೯೨

[3] ಆ. ನೇ ಉಪಾಧ್ಯೆ : ಹರಿಷೇಣನ ಬೃಹತ್ ಕಥಾಕೋಶ; ಪ್ರಸ್ತಾವನೆ

[4] ಕಮಲಾಹಂಪನಾ : ಸುಕುಮಾರ ಚರಿತೆ ಸಂಗ್ರಹ ; ಎರಡನೆಯ ಮುದ್ರಣ ೧೯೬೭

[5] ಡಿ.ಎಲ್. ನರಸಿಂಹಾಚಾರ್ : ಸುಕುಮಾರಚರಿತೆ ಪೀಠಿಕೆ, ಪು.  xxix

[6] ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು; ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಪುಟ ೪೨-೪೪

[7] ಆರ್. ನರಸಿಂಹಾಚಾರ್ : ಕರ್ನಾಟಕ ಕವಿಚರಿತೆ; ಸಂಪುಟ ಎರಡು, ತಿದ್ದಿದ ಎರಡನೆಯ ಮುದ್ರಣ,      ಪು. ೨೩೨, ೩೯೭

[8] ಬಿ.ಬಿ. ಮಹೀಶವಾಡಿ (ಸಂ) : ಜ್ಞಾನಭಾಸ್ಕರ ಚರಿತೆ, ಪ್ರಸ್ತಾವನೆ ಪು. ii  ಮತ್ತು iii

[9] ಎ. ಶಾಂತಿರಾಜಶಾಸ್ತ್ರೀ (ಸಂ) : ರತ್ನಾಕರ ಕವಿ ವಿರಚಿತ ರತ್ನತ್ರಯ, ದ್ವಿತೀಯ ಮುದ್ರಣ, ಪು.೪,         ಪದ್ಯ ೨

[10] ಜಿ.ಬಿ. ಮಹೀರವಾಡಿ : ನೇಮಣ್ಣ – ನೇಮಿವ್ರತಿ ಇಬ್ಬರು ವ್ಯಕ್ತಿಗಳಲ್ಲ. ಒಬ್ಬನೇ ವ್ಯಕ್ತಿ’, ಕರ್ನಾಟಕ          ವಿಶ್ವವಿದ್ಯಾಲಯ ಪತ್ರಿಕೆ, ಮಾನವಿಕ ವಿಭಾಗ xii ೧೯೬೮.

[11] ಸುವಿಚಾರ ಚರಿತೆಯೆಂದಿದರ ನಾಮವು |
ಸರ್ವರ
ವಿವೇಕವೆಂಬ ಕತ್ತಲೆಗೆ |
ರವಿಯ
ಕಿರಣದಂತೆ ಬೆಳಗೂದು ಸಮ್ಯಜ್ಞಾ |
ನವೆ
ಕಣ್ಗಳಾದ ಭವ್ಯರಿಗೆ

[12] ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಪು. ೭೨-೭೩.

[13] ತನುದೋಷಕೆ ವೈದ್ಯ ವಚನ ದೋಷಕ ಶಬ್ದ |
ಮನುದೋಷಕೆ
ತತ್ವವನು
ಜನಕರುಹಿದ
ಶ್ರೀಪಾಜ್ಯಪಾದರಪಾದ |
ವನಜಕ್ಕೆ
ನಾನೆರಗುವೆನು