‘ಇಂದಿನ ಮಕ್ಕಳ ಶಿಕ್ಷಣ ಪರಿಸರ’ವನ್ನು ಕುರಿತು ಆಲೋಚಿಸುವಾಗ ಕನ್ನಡ ನಾಡಿನ ಮಕ್ಕಳನ್ನು ಮುಖ್ಯವಾಗಿ ನಾನು ಗಮನದಲ್ಲಿರಿಸಿಕೊಂಡಿದ್ದೇನೆ. ಐವತ್ತು ವರುಷಗಳ ಹಿಂದೆ ಮಕ್ಕಳಿಗೂ ಕನ್ನಡ ಭಾಷೆ, ಸಾಹಿತ್ಯಕ್ಕೂ ಇದ್ದ ಸಂಬಂಧಕ್ಕಿಂತಾ ಇಪ್ಪತ್ತು ವರುಷಗಳ ಸಂಬಂಧ ವಿಭಿನ್ನವಾಗಿ ತೋರುತ್ತದೆ. ಇಂದಿನ ಪರಿಸರ ಇಪ್ಪತ್ತು ವರುಷಗಳ ಹಿಂದಿನದಕ್ಕಿಂತಾ ಬೇರೆಯೇ ಆಗಿದೆ.

ಐವತ್ತು ವರುಷಗಳ ಹಿಂದೆ ಅಕ್ಷರಸ್ಥರ ಸಂಖ್ಯೆ ತೀರ ಕಡಿಮೆ ಇದ್ದು, ಅಂದು ಶಾಲೆಗಳಲ್ಲಿ ಕಲಿತವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿಯೂ ಐಚ್ಛಿಕವಾಗಿ ಇಂಗ್ಲಿಷ್-ಸಂಸ್ಕೃತ ಮೊದಲಾದ ಭಾಷೆಗಳನ್ನು ಕಲಿಯುತ್ತಿದ್ದರು. ಬ್ರಿಟಿಷರ ಆಳ್ವಿಕೆಯ ಪ್ರಭಾವ ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯವನ್ನು ಶಾಲೆಗಳಲ್ಲಿ ಕಲಿಸುವುದರ ಮೂಲಕ ಗುರುತಿಸಬಹುದಾಗಿದ್ದರೂ ಕೇವಲ ಐದನೆಯ ಅಥವಾ ಒಂಬತ್ತನೆಯ ತರಗತಿಯಿಂದ ಆಂಗ್ಲ ಭಾಷಾಭ್ಯಾಸ ಪ್ರಾರಂಭವಾಗುತ್ತಿದ್ದುದನ್ನು ಕಾಣಬಹುದಾಗಿದೆ. ವಿದ್ಯಾರ್ಥಿ ಆ ತರಗತಿಗೆ ಬರುವ ವೇಳೆಗೆ ಕನ್ನಡ ಭಾಷೆಯ ಬಗ್ಗೆ ಸಾಕಷ್ಟು ತಿಳುವಳಿಕೆಯುಳ್ಳವನಾಗಿದ್ದು ಮುಂದೆ ಆಂಗ್ಲ ಭಾಷೆಯನ್ನು ಅದರ ಜೊತೆಯಲ್ಲಿ ಚೆನ್ನಾಗಿ ಕಲಿಯಲು ಅನುಕೂಲವಾಗುತ್ತಿತ್ತು.

ಕಲಿಸುವ ಉಪಾಧ್ಯಾಯರ ಜೀವನೋಪಾಯಕ್ಕಿಂತ ಅವರಿಗೆ ಉಪಾಧ್ಯಾಯ ವ್ಯಕ್ತಿ ವ್ರತವಾಗಿ ಪರಿಣಮಿಸಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು ಉಪಾಧ್ಯಾಯರ ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧ ಆತ್ಮೀಯವಾಗಿತ್ತು. ಹೀಗೆ ಇವರಿಬ್ಬರ ಆಸ್ಥೆ ಅಂದಿನ ಪ್ರಶಾಂತ ಪರಿಸ್ರ ಮುಪ್ಪುರಿಗೊಂಡು ವಿದ್ಯೆಯ ‘ಬುನಾದಿ’ ಭದ್ರವಾಗುತ್ತಿತ್ತು. ಬ್ರಿಟಿಷ್ ಅಧಿಕಾರ ಆಡಳಿತದಲ್ಲಿದ್ದರೂ ಯಾವುದಾದರೂ ಸರ್ಕಾರದ ದೊಡ್ಡ ಹುದ್ದೆಗೆ ಸೇರುವ ಉದ್ದೇಶವಿದ್ದವರು ಇಂಗ್ಲಿಷಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿ ಹೆಚ್ಚಿನ ವ್ಯಾಸಂಗದತ್ತ ಗಮನಹರಿಸುತ್ತಿದ್ದರು. ಈ ವಿಷಯವನ್ನು ಪ್ರಸ್ತಾಪಿಸುವ ನನ್ನ ಉದ್ದೇಶ ಇಷ್ಟೆ. ಆಂಗ್ಲರ ಆಡಳಿತ ಕಾಲದಲ್ಲಿಯೂ ವಿದ್ಯಾಭ್ಯಾಸದ ಪ್ರಾರಂಭದ ಹಂತದಲ್ಲಿ ಕನ್ನಡ ಭಾಷೆಗೇ ಆದ್ಯ ಅಗ್ರಸ್ಥಾನ ಇದ್ದುದು.

ಇಂದಿಗೆ ಇಪ್ಪತ್ತು ವರುಷಗಳ ಹಿಂದಕ್ಕೆ ನಾವು ಸರಿದರೆ ಇಂಗ್ಲಿಷ್ ಕಾನ್ವೆಂಟುಗಳ ಸಂಖ್ಯೆ ಹೆಚ್ಚಿ, ತಂದೆ-ತಾಯಿಗಳ ಹಾಗೂ ಮಕ್ಕಳ ಗಮನವೆಲ್ಲಾ ಆ ಶಾಲೆಗಳ ಕಡೆಗೇ ಹರಿಯಿತು. ಇದು ಒಂದು ದೌರ್ಭಾಗ್ಯದ ಸಂಗತಿ. ಈ ಕಾನ್ವೆಂಟುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳೇ ಬುದ್ಧಿವಂತರು ಎನ್ನುವ ಭ್ರಮೆ ವಿದ್ಯಾವಂತ-ಅವಿದ್ಯಾವಂತ ತಂದೆ-ತಾಯಿಗಳಲ್ಲಿ ಮೂಡಿ, ಕನ್ನಡಕ್ಕೆ ಕನ್ನಡ ಶಾಲೆಗಳಿಗೆ ಕಡೆಯ ಮಣೆ ಹಾಕಲಾಯಿತು.

ಈ ವ್ಯತ್ಯಾಸಕ್ಕೆ ತಂದೆ-ತಾಯಿಗಳು ಕೊಡುವ ಅನೇಕ ಕಾರಣಗಳಲ್ಲಿ ಮುಖ್ಯವಾಗಿ ನಾವು ಮೂರನ್ನು ಗಮನಿಸಬಹುದು.

ಒಂದು ಆಡಳಿತ ವ್ಯವಹಾರ ಎಲ್ಲವೂ ಇಂಗ್ಲಿಷಿನಲ್ಲೇ ನಡೆಯುವಾಗ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಮುಂದೆ ಕೆಲಸಕ್ಕೆ ಸೇರಿದಾಗ ಹಾಗೂ ಸೇರಿದ ಮೇಲೆ ವ್ಯವಹರಿಸಲು ಕಷ್ಟವಾಗುತ್ತದೆ ಎನ್ನುವುದು.

ಎರಡನೆಯದು ಆಂಗ್ಲಭಾಷೆಯ ಮಾಧ್ಯಮದ ಶಾಲೆಗಳಲ್ಲಿ ಶಿಸ್ತು-ಸಂಯಮ, ಒಳ್ಳೆಯ ಉಡುಪು ಅಂದರೆ ಸಮವಸ್ತ್ರ, ಕಾಲುಚೀಲ, ಬೂಟು, ಟೈ, ಶಿಕ್ಷಣಕ್ರಮ-ಇವೆಲ್ಲವೂ ಉತ್ತಮ ರೀತಿಯಲ್ಲಿದ್ದು ನಮ್ಮನ್ನೂ ನಮ್ಮ ಮಕ್ಕಳನ್ನೂ ಆಕರ್ಷಿಸುತ್ತವೆ ಎನ್ನುವುದು.

ಮೂರನೆಯದು ಮುಂದೆ ನಮ್ಮ ಮಗು ಪರದೇಶಕ್ಕೆ ಹೋಗುವ ಅವಕಾಶಕ್ಕೆ ಈ ರೀತಿಯ ಆಂಗ್ಲ ಶಿಕ್ಷಣದ ಅಗತ್ಯ ಹೆಚ್ಚು ಎನ್ನುವುದು.

ಈ ಕಾರಣಗಳನ್ನು ನಾವು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಹಾಗೆಂದ ಮಾತ್ರಕ್ಕೆ ಈ ಕಾರಣಗಳಿಗೇ ನಾವು ಬದ್ಧರಾಗಿ ನಿಲ್ಲಬೇಕು ಎಂದಲ್ಲ. ಇವುಗಳಿಗೆ ಪರಿಹಾರಗಳನ್ನು ಸೂಚಿಸುವುದರ ಮೂಲಕ ಮಕ್ಕಳ ಭೌತಿಕ ಮಟ್ಟವನ್ನು ಇನ್ನೂ ಹೆಚ್ಚಿಸುವ ಕಡೆಗೆ ನಮ್ಮ ಗಮನವನ್ನು ಹರಿಸಬೇಕಾಗಿದೆ.

ಒಂದನೆಯ ಸಮಸ್ಯೆಗೆ ಉತ್ತರ ಸುಲಭವಾಯಿತು. ೧೯೭೯ರ ನವೆಂಬರ್ ಒಂದನೆಯ ತಾರೀಖಿನಿಂದ ಆಡಳಿತ ಭಾಷೆ ಕನ್ನಡವಾದುದರಿಂದ ಶಿಕ್ಷಣ ಮಾಧ್ಯಮ ಕನ್ನಡದಲ್ಲೇ ನಡೆದರೆ ಉತ್ತಮ ಮತ್ತು ಅದು ತೀರ ಅಗತ್ಯ.

ಎರಡನೆಯದು, ಮಾತೃಭಾಷೆ ಅಂದರೆ ಪ್ರಾಂತ ಭಾಷೆಯಲ್ಲಿಯೇ ಮಕ್ಕಳು ಶಿಕ್ಷಣವನ್ನು ಕಲಿಯಬೇಕು. ಅದು ಬೋಧನ ಮಾಧ್ಯಮವಾಗಬೇಕು. ಇದು ಎಲ್ಲ ಶಿಕ್ಷಣತಜ್ಞರ ಅಭಿಪ್ರಾಯವಾಗಿದೆ. ಕಡಿಮೆ ಸಮಯದಲ್ಲಿ ಕಡಿಮೆ ಶ್ರಮದಿಂದ ವಿದ್ಯಾರ್ಥಿಗಳು ಅರ್ಥಾತ್ ಮಕ್ಕಳು ಹೆಚ್ಚಿಗೆ ಕಲಿಯಲು ಸಾಧ್ಯವಾಗುತ್ತದೆ. ಆ ಮೂಲಕ ತಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಮರ್ಥರಾಗುತ್ತಾರೆ. ಮಹಾತ್ಮಾಜಿಯವರು ‘ನಾನು ನನ್ನ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆದದ್ದರಿಂದ ಹೆಚ್ಚು ತಿಳಿಯಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ. ರವೀಂದ್ರನಾಥ ಟಾಗೋರರು ಬಂಗಾಳಿ ಭಾಷೆಯ ಶಿಕ್ಷಣ ನನ್ನನ್ನು ಉತ್ತಮ ಕವಿಯನ್ನಾಗಿಸಿತು ಎಂದು ತಿಳಿಸಿದ್ದಾರೆ. ಮಕ್ಕಳಿಗೆ ತರಗತಿಗಳಲ್ಲಿ ಮಾತೃಭಾಷೆಯಲ್ಲಿ ಪಾಠ ಹೇಳಿದಾಗ ಅವರ ಕಣ್ಣುಗಳಲ್ಲಿ ಮಿಂಚುವ ಹೊಳಪು, ಮುಖದ ಮಂದಸ್ಮಿತ ಇವೇ ಸಾಕ್ಷಿಯಾಗಿವೆ.

ಕನ್ನಡ ಶಾಲೆಗಳಲ್ಲಿ ಕಾನ್ವೆಂಟು ಶಾಲೆಗಳ ಸೌಲಭ್ಯವಿಲ್ಲ ಎನ್ನುವುದು. ತಂದೆ ತಾಯಂದಿರು ಈ ವಿಷಯವನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಈ ಕಾನ್ವೆಂಟು ಶಾಲೆಗಳು ಒಬ್ಬ ವಿದ್ಯಾರ್ಥಿಯಿಂದ ತಿಂಗಳಿಗೆ, ಆ ಮೂಲಕ ಆ ವರ್ಷಕ್ಕೆ, ಎಷ್ಟು ಹಣವನ್ನು ಸುಲಿಗೆ ಮಾಡುತ್ತವೆ ಎನ್ನುವುದು ಮುಖ್ಯ. ಅವರು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಹಣದಲ್ಲಿ ಕಾಲು ಭಾಗವನ್ನು ಖರ್ಚು ಮಾಡಿದರೂ ಆ ಎಲ್ಲ ಸೌಲಭ್ಯಗಳನ್ನೂ ಅವರೇ ಏಕೆ, ಕನ್ನಡ ಶಾಲೆಗಳನ್ನು ನಡೆಸುವವರೂ ಒದಗಿಸಿಕೊಡಬಲ್ಲರು. ಹೀಗೆ ವ್ಯಯಿಸಿ ಉಳಿಯುವ ಹಣದಲ್ಲಿ ಕಾಲುಭಾಗ ಈಗ ಸಾಕು, ಇಂಥ ಹತ್ತಾರು ಶಾಲೆಗಳನ್ನು ಅವರು ಕೆಲವೇ ವರ್ಷಗಳಲ್ಲಿ ಪ್ರಾರಂಭಿಸಬಹುದು. ಇದೊಂದು ಮಕ್ಕಳ ವಿದ್ಯಾಭ್ಯಾಸದ ಹೆಸರಿನಲ್ಲಿ ನಡೆಯುವ ದರೋಡೆ ಎಂದರೆ ತಪ್ಪಾಗಲಾರದು.

ಇಂಥ ಕಾನ್ವೆಂಟುಗಳಿಗೆ ಒಂದೋ ಎರಡೋ ಮಕ್ಕಳನ್ನು ಕಳುಹಿಸಿ ಸಾವಿರಾರು ರೂಪಾಯಿಗಳನ್ನು ತಿಂಗಳಿಗೆ ವ್ಯಯಮಾಡುವ ತಂದೆ-ತಾಯಿಗಳು ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. ಇಂಗ್ಲಿಷ್ ಶಾಲೆಗಳಿಗೆ ವಿನಿಯೋಗಿಸುವ ಹಣದಲ್ಲಿ ಕಾಲು ಭಾಗ ಹಣವನ್ನು ಕಟ್ಟಿದರೂ ಸಾಕು ಇನ್ನೂ ಉತ್ತಮ ಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯುವುದರಲ್ಲಿ ಸಂದೇಹವಿಲ್ಲ. ಕನ್ನಡ ಶಾಲೆಗಳ ಬಗ್ಗೆ ಇರುವ ಮಲತಾಯಿ ಧೋರಣೆ ತಂದೆ-ತಾಯಿಗಳಿಂದ ಮೊದಲು ದೂರವಾಗಬೇಕು.

ಹಣದ ಹೆಚ್ಚಿನ ಸಹಾಯವಿಲ್ಲದ ಕನ್ನಡ ಶಾಲೆಗಳು ಅನಾಥವಾಗಿವೆ, ಸರ್ಕಾರದಿಂದ ದೊರೆಯುವ ಹಣ ಸಾಲದಾಗಿವೆ. ತಂದೆ-ತಾಯಿಗಳಿಗೆ, ಸಾರ್ವಜನಿಕರಿಗೆ ಈ ಶಾಲೆಗಳು ಬೇಕಾಗಿಲ್ಲ. ಇಂಥ ತಬ್ಬಲಿತನವನ್ನು ಇನ್ನು ಮುಂದಾದರೂ ಸರ್ಕಾರ, ತಂದೆ ತಾಯಿಗಳು ಹಾಗೂ ಸಾರ್ವಜನಿಕರೂ ಗಮನಿಸಿ ಸೂಕ್ತ ಪರಿಹಾರವನ್ನು ಕಾಣಬೇಕಾಗಿದೆ.

ಇನ್ನು ತಂದೆ ತಾಯಿಗಳು ಕೊಡುವ ಮೂರನೇ ವಿಚಾರವನ್ನು ಗಮನಿಸೋಣ. ಸಾವಿರಾರು ಸಂಖ್ಯೆಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡಾಗ, ಅವರಲ್ಲಿ ಪ್ರೌಢಶಾಲೆಗಳನ್ನು ಮುಟ್ಟುವುದರಲ್ಲಿ ಅರ್ಧಭಾಗ ಸೋರಿ ಹೋಗುತ್ತಾರೆ. ಇನ್ನು ೧/೪ ಭಾಗ ಪಿ.ಯು.ಸಿ. ಸೆರುವ ವೇಳೆಗೆ, ಇನ್ನು ಉಳಿದ ೧/೪ ಭಾಗದಲ್ಲಿ ಅರ್ಧಭಾಗ ಪದವೀ ಶಿಕ್ಷಣಕ್ಕೆ ಬರುವ ವೇಳೆಗೆ ನಿಂತು ಬಿಡುತ್ತಾರೆ. ಇನ್ನು ಉಳಿದವರಲ್ಲಿ ಬೆರಳೆಣಿಕೆಗೆ ಸಿಗುವ ಪದವಿ ಪೂರ್ಣ ವಿದ್ಯಾರ್ಥಿಗಳಲ್ಲಿ ಎಲ್ಲೊ ಒಬ್ಬರು ಪರದೇಶ ವ್ಯಾಸಂಗಕ್ಕೆ ಹೊರಡುತ್ತಾರೆ. ಅವರೊಬ್ಬರಿಗಾಗಿ ಅಥವಾ ನಾಲ್ವರಿಗಾಗಿ ಲಕ್ಷಾಂತರ ಸಂಖ್ಯೆಯ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ಶಿಕ್ಷಣ ಮಾಧ್ಯಮದ ಬಲವಂತ ಮಾಘಸ್ನಾನವೇಕೆ ? ಇದು ಬೇಕೆ ?

ಒಟ್ಟಿನಲ್ಲಿ ತಂದೆ ತಾಯಿಗಳು ಈ ಆಂಗ್ಲ ಭಾಷೆಯ ಮೋಹದ ಭ್ರಾಮಕ ಪ್ರಪಂಚದಿಂದ ವಾಸ್ತವಿಕ ಪ್ರಪಂಚಕ್ಕೆ ಇಳಿಯಬೇಕಾಗಿದೆ. ಇಲ್ಲಿ ಒಂದು ಮುಖ್ಯ ವಿಷಯವನ್ನು ಗಮನಿಸಬೇಕಾಗಿದೆ. ಈ ಕಾನ್ವೆಂಟುಗಳಲ್ಲಿ ಓದಿದ ಮಕ್ಕಳ ನಿಜವಾದ ವಿದ್ಯೆಯ ಅರಿವಾಗುವುದು ಅವರು ಕಾಲೇಜಿನ ಶಿಕ್ಷಣಕ್ಕೆ ಪ್ರವೇಶಿಸಿದಾಗ. ಅಲ್ಲಿಯವರೆಗೂ ಕೇವಲ ಕಂಠಪಾಠದಿಂದ ಉತ್ತೀರ್ಣರಾಗಿ ಬರುವ ಈ ವಿದ್ಯಾರ್ಥಿಗಳು ಕಾಲೇಜನ್ನು ಪ್ರವೇಶಿಸಿ ಸ್ವಂತ ಪ್ರಯತ್ನದಿಂದ ಉತ್ತರಗಳನ್ನು ಬರೆಯಲು ತೊಡಗಿದಾಗ ಅವರಿಗೆ ಬೃಹತ್ ಸಮಸ್ಯೆ ತಲೆದೋರುತ್ತದೆ. ಆಗ ಅವರಿಗೆ ಚೆನ್ನಾಗಿ ತಿಳಿಯುವ ಅಂಶವೆಂದರೆ ಅತ್ತ ಇಂಗ್ಲಿಷ್ ಭಾಷೆಯೂ ಬರದು, ಇತ್ತ ಕನ್ನಡವೂ ಏನೂ ತಿಳಿಯದು. ಇಂಥ ವಿಷಮ ಸನ್ನಿವೇಶವನ್ನು ಅಲ್ಲಿ ಅವರು ಎದುರಿಸಬೇಕಾಗುತ್ತದೆ.

ಅಂತರ ರಾಷ್ಟ್ರೀಯ ಮಕ್ಕಳ ವರ್ಷದಲ್ಲಾದರೂ ಮಕ್ಕಳಿಗೆ ಸಲ್ಲಬೇಕಾದ ಸೌಲಭ್ಯಗಳ ಕಡೆ ಗಮನಹರಿಸಿ ಕ್ರಿಯಾತ್ಮಕವಾಗಿ ಹಿರಿಯರೆಲ್ಲಾ ಕೆಲಸ ಮಾಡಬೇಕಾಗಿದೆ. ಈ ವರ್ಷ ಸಂಯುಕ್ತ ರಾಷ್ಟ್ರಸಂಘ ಹತ್ತು ಹಕ್ಕು ಬಾಧ್ಯತಾ ಘೋಷಣೆಯನ್ನು ಮಕ್ಕಳಿಗಾಗಿ ಘೋಷಿಸಿದೆ. ಈ ಹಕ್ಕುಗಳಿಗೆ ವಿಶ್ವದ ಎಲ್ಲಾ ಮಕ್ಕಳೂ ಯಾವ ಅಪವಾದವೂ ಇಲ್ಲದೆ ಅರ್ಹರಾಗಿದ್ದಾರೆ. ಅವು ಯಾವುವೆಂದರೆ,

೧. ಒಲವು, ಪ್ರೀತಿ ಮತ್ತು ತಿಳುವಳಿಕೆ

೨. ಯುಕ್ತಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ರಕ್ಷಣೆ

೩. ಮುಫತ್ತು ವಿದ್ಯೆಗೆ

೪. ಆಟ-ಆರಾಮಗಳ ಪೂರ್ಣ ಅವಕಾಶಗಳಿಗೆ

೫. ಒಂದು ಹೆಸರು, ರಾಷ್ಟ್ರೀಯತೆಗೆ

೬. ಶಾರೀರಿಕ ಅನಾನುಕೂಲತೆಗೊಳಗಾಗಿದ್ದರೆ ವಿಶೇಷ ರಕ್ಷಣೆಗೆ

೭. ವಿಪತ್ತುಗಳ ಸಮಯದಲ್ಲಿ ಪ್ರಥಮ ಪರಿಹಾರಕ್ಕೆ

೮. ಸಮಾಜದ ಉಪಯುಕ್ತ ಸದಸ್ಯನಾಗುವ ಮತ್ತು ತನ್ನ ವ್ಯಕ್ತಿಗತ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶಕ್ಕೆ

೯. ಶಾಂತಿಯ ಮತ್ತು ಸಾರ್ವತ್ರಿಕ ಸಹೋದರತೆಯ ವಾತಾವರಣದಲ್ಲಿ ಬೆಳೆಯಲಿಕ್ಕೆ

೧೦. ಜಾತಿ, ಬುದ್ಧಿ, ಲಿಂಗ, ಮತ ಹಾಗೂ ಸಾಮಾಜಿಕ ಮೂಲ ಇತ್ಯಾದಿಗಳಿಗೆ ಹೊರತಾಗಿ ಈ ಮೂಲಭೂತ ಹಕ್ಕುಗಳನ್ನು ಅನುಭವಿಸುವುದಕ್ಕೆ.

ಈ ಎಲ್ಲ ಹಕ್ಕುಗಳಿಗೆ ಎಲ್ಲ ಮಕ್ಕಳೂ ಅರ್ಹರಾಗಿದ್ದರೂ ಅವುಗಳ ಸೌಲಭ್ಯಗಳನ್ನು ಮಕ್ಕಳಿಗೆ ದೊರಕಿಸಿ ಕೊಡುವುದರಲ್ಲಿ ಹಿರಿಯರು ವಿಶೇಷವಾಗಿ ಶ್ರಮಿಸಬೇಕಾಗಿದೆ.

ಇಂದು ಕರ್ನಾಟಕದಲ್ಲಿ ಶೇ. ೩೨ರಷ್ಟು ಅಕ್ಷರಸ್ಥರಿದ್ದಾರೆ. ಅವರಲ್ಲಿ ವಿದ್ಯಾವಂತರ ಸಂಖ್ಯೆ ತುಂಬಾ ಕಡಿಮೆ. ಸರ್ಕಾರವೇನೋ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದೆ. ಆ ದಿಸೆಯಲ್ಲಿ ಕೆಲಸವನ್ನೂ ಮಾಡುತ್ತಿದೆ. ಆದರೆ ಹಳ್ಳಿಗಳಲ್ಲಿನ ವಾತಾವರಣ ಇನ್ನೂ ತುಂಬಾ ಸುಧಾರಿಸಬೇಕಾಗಿದೆ. ಪಟ್ಟಣ, ನಗರ, ಊರು, ತಾಲ್ಲೂಕು ಕೇಂದ್ರಗಳಲ್ಲಿ ವಾಸಿಸುವ ಮಕ್ಕಳಿಗೆ ಸ್ವಲ್ಪವಾದರೂ ಅನುಕೂಲತೆಗಳು ದೊರೆಯುತ್ತವೆ. ಆದರೆ ಹಳ್ಳಿಗಳಲ್ಲಿ, ಕುಗ್ರಾಮಗಳಲ್ಲಿ ವಾಸಿಸುವ, ಅದರಲ್ಲಿಯೂ ಹರಿಜನ, ಗಿರಿಜನ, ಅಲೆಮಾರಿ ತಂಡದ ಮಕ್ಕಳಿಗೆ ನಿಜವಾದ ಸೌಲಭ್ಯಗಳು ದೊರೆಯಬೇಕಾಗಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗದ ಹೊರತು ಮಕ್ಕಳ ಸಾಹಿತ್ಯದ ಬೆಳವಣಿಗೆ ಸಂಪೂರ್ಣ ಅರ್ಥದಲ್ಲಿ ನೆವೇರಲಾರದು. ಇದಕ್ಕೆಲ್ಲಾ ಮೂಲಭೂತ ಕಾರಣ ನಮ್ಮಲ್ಲಿನ ಆರ್ಥಿಕ ದುಸ್ಥಿತಿ ಹಾಗೂ ಜನತೆಯ ಅಜ್ಞಾನ. ಇವು ಮಕ್ಕಳ ಭವಿಷ್ಯಕ್ಕೆ ದೊಡ್ಡ ಪೆಟ್ಟಾಗಿವೆ. ತಂದೆ ತಾಯಿಗಳ ಆರ್ಥಿಕ ಸುಧಾರಣೆ ಆಗದ ಹೊರತು ಮಕ್ಕಳ ವಿದ್ಯಾಭ್ಯಾಸ ಕುಂಟುತ್ತಲೇ ಸಾಗಬೇಕಾಗುತ್ತದೆ. ವಿದ್ಯಾವಿಹೀನ ಮಕ್ಕಳು ರಾಷ್ಟ್ರದ ಏಳಿಗೆಗೆ ಎಷ್ಟರಮಟ್ಟಿಗೆ ನೆರವಾಗಬಲ್ಲರು ? ಹಿಂದಿನ ಪರಿಸ್ಥಿತಿ ಬೇರೆ ಇತ್ತು. ಅಂದು ವಿದ್ಯೆಯ ನೆರವಿಲ್ಲದ ಜೀವನ ಸಾಗಿಸುವುದು ಸುಲಭವಾಗಿತ್ತು. ಆದರೆ ಶರವೇಗದಲ್ಲಿ ಮುನ್ನಡೆಯುತ್ತಿರುವ ಇತರ ರಾಷ್ಟ್ರಗಳ ಜೊತೆ ನಾವೂ ಹೆಜ್ಜೆ ಹಾಕಬೇಕಾದರೆ ಇಂದಿನ ಮಕ್ಕಳ ಭವಿಷ್ಯದ ಕಡೆಗೆ ನಮ್ಮ ಕಾಳಜಿ ಅತ್ಯಗತ್ಯ.