ಈ ವರ್ಷವನ್ನು ಪುಸ್ತಕದ ವರ್ಷವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆದರೂ ಈ ಬಗ್ಗೆ ಯಾರಿಗಾಗಿ ಈ ಪುಸ್ತಕ ರಚಿತವಾಗುತ್ತಿದೆಯೋ ಆ ಓದುಗನನ್ನೆ ಮರೆತಂತಿದೆ. ಎಲ್ಲ ಪುಸ್ತಕಗಳ ಅಂತಿಮ ಗುರಿ ಜ್ಞಾನ ಪ್ರಸಾರ, ಪ್ರಚಾರ, ಎಲ್ಲ ಸಾಹಿತ್ಯ ಕೃತಿಗಳ ಪರಮೋದ್ದೇಶ ಆಹ್ಲಾದ. ಹೀಗಾಗಿ ಓದುಗನ ನಿಟ್ಟಿನಿಂದ ನೋಡುವುದೂ ಬಹಳ ಮುಖ್ಯ. ಮುಂದೆ ಹೇಳುವ ಅಂಶಗಳು ಪ್ರಮುಖವಾಗಿ ಕನ್ನಡ ಓದುಗರು ಮತ್ತು ಕನ್ನಡ ಹೊತ್ತಿಗೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನಿರೂಪಿತವಾಗಿವೆ. ಸಮಸ್ಯೆಯತ್ತ ಸಾಗುವ ಮೊದಲು ಪ್ರಾಸಂಗಿಕವಾಗಿ ಇದಕ್ಕೆ ಹೊಂದಿಕೊಂಡ ಕೆಲವು ಮಾತುಗಳನ್ನು ತಿಳಿಸಲಾಗಿದೆ.

ಗ್ರಂಥದ ಸಾರ್ಥಕತೆಯಿರುವುದು ಅದು ಹೇಗೆ ಅಚ್ಚಾಗಿದೆ ಎಂಬಲ್ಲಿ ಅಲ್ಲ. ಅದು ಹೇಗೆ ಉಪಯೋಗವಾಗುತ್ತಿದೆ ಎಂಬುದೇ ಪ್ರಮುಖ. ಗ್ರಂಥಗಳಿರುವುದು ಗ್ರಂಥಗಳಿಗಾಗಿ ಅಲ್ಲ, ಓದುಗನಿಗಾಗಿ. ಯಾವ ನಾಡಿನಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆಯೋ ಆ ನಾಡು ಭಾಗ್ಯಶಾಲಿ. ಜನತೆಯಲ್ಲಿ ವಾಚನಾಭಿರುಚಿ ಹೆಚ್ಚಬೇಕು, ನಿಜ. ಅದಕ್ಕೆ ತಕ್ಕ ಸನ್ನಿವೇಶವೂ ಕಲ್ಪಿತವಾಗಬೇಕು. ಮಾನವನ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಬಿಡುವು ಇದ್ದೇ ಇರುತ್ತದೆ. ಆ ಬಿಡುವಿನ ವೇಳೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಬದುಕು ಬೇಸರದ ಕೊಂಪೆಯಾಗಬಾರದು. ಬಿಡುವಿನ ಸಮಯವನ್ನು ನಿಷ್ಪ್ರಯೋಜಕ ಹರಟೆಯಲ್ಲಿ ಕಳೆಯಬಾರದು.

ಅರಿವು ಅಪಾರ, ಕಲಿಕೆ ಕಡಿಮೆ, ಕಲಿಯಲಿರುವ ಕಾಲವಂತೂ ಇನ್ನೂ ಕಡಿಮೆ. ಹೀಗಿರುವಾಗ ಇರುವ ಇಲ್ಲವೇ ಸಿಗುವ ವಿರಾಮ ಸಮಯವನ್ನು ಕೆಲಸಕ್ಕೆ ಬಾರದ ಕೀಳು ಮಾತುಕತೆಗಳಲ್ಲಿ ಕಾಲಹರಣ ಮಾಡಿದರೆ ಆಗುವ ಅಪಾಯಗಳನ್ನು ಊಹಿಸುವುದೂ ಕಷ್ಟ. ಒಂದು ದೇಶದ ಪ್ರಗತಿಗೆ ಇರುವ ಗಂಡಾಂತರಗಳಲ್ಲಿ ಸೋಮಾರಿಗಳಿಂದ, ಅಲ್ಲಸಲ್ಲದ ಟೀಕೆಗಳಲ್ಲಿ ಪ್ರವೃತ್ತರಾಗುವವರಿಂದ ಆಗುವಂತಹ ಗಂಡಾಂತರವೇ ದೊಡ್ಡದು, ಘೋರವಾದದು. ಪರಸ್ಪರ ದೂಷಣೆ, ಆಪಾದನೆ, ಪ್ರತ್ಯಾಪಾದನೆ, ಅವರು ಹಾಗೆ ಹೀಗೆ ಎಂಬ ಇದ್ದ ಇಲ್ಲದ ಆರೋಪಗಳನ್ನು ಹೇರುವುದು – ಇಂತಹ ಗೊಡ್ಡು ಸಂಭಾಷಣೆಗಳಲ್ಲಿ ಮನೆ, ಹೋಟೆಲು, ಸಿನಿಮಾ, ಉದ್ಯಾನವನಗಳಲ್ಲಿ ಕಡೆಗೆ ಉದ್ಯೋಗ ಮಾಡುವ ಕಚೇರಿಗಳಲ್ಲಿಯೂ ಜನ ತೊಡಗುತ್ತಿರುವುದನ್ನು ಕಂಡಿದ್ದೇವೆ. ಎಂಥ ಭಯಾನಕ ನಿರಾಶೆಯ ಚಿತ್ರವದು !

ಬಸ್ಸಿಗೆ ಕ್ಯೂ ನಿಂತಾಗ, ವಾಹನಗಳಲ್ಲಿ ಪ್ರಯಾಣಿಸುವಾಗ ಜನರ ಕೈಯಲ್ಲೊಂದು ಪುಸ್ತಕ ಹಿಡಿದು ಓದುವವರ ಸಂಖ್ಯೆ ಶೂನ್ಯದ ಕಲ್ಪನೆ ತಂದುಕೊಡುತ್ತದೆ. ಮನೆಯಲ್ಲಿ ಗಂಡಸರು ಕಾರ್ಯಗೌರವ ನಿಮಿತ್ತವಾಗಿ ಹೊರಗೆ ಹೋದಾಗ ಹೆಂಗಸರು ಕೂಡ ಒಡವೆ ಉಡಿಗೆ ತೊಡಿಗೆಗಳಿಂದ ಹಿಡಿದು, ಅಕ್ಕಪಕ್ಕದ ಬಿರುಕುಗಳನ್ನು ಎಣಿಸಿ ಗುರುತಿಸಿ ಉತ್ಪ್ರೇಕ್ಷಿಸುವಲ್ಲಿ ತೊಡಗಿ ಆಗದ ಹೋಗದ ಕೆಲಸದಲ್ಲಿ ಪರ್ಯಾವಸಾನವಾಗುವುದು ಅಪರೂಪವಲ್ಲ.

ನಗರಗಳಲ್ಲಿಯೂ ಕೂಡ ಮಹಿಳಾ ಸಮಾಜಗಳನ್ನು ಮಾಡಿಕೊಂಡರೂ ಆ ಸಮಾಜ ಸಂಪೂರ್ಣಾರ್ಥದಲ್ಲಿ ಸದ್ವಿನಿಯೋಗವಾಗುತ್ತಿಲ್ಲ. ಅಲ್ಲಿಯೂ ಅತ್ಯಾಧುನಿಕ ಫ್ಯಾಶನ್ನಿನ ಸಾಧಕ ಬಾಧಕಗಳ ವಿಶ್ಲೇಷಣೆಯೇ ಹೊರತು, ಇತ್ತೀಚೆಗೆ ಹೊರಬಂದ ಅತ್ಯುತ್ತಮ ಹೊತ್ತಗೆಯೊಂದರ ವಿವೇಚನೆ ನಡೆಯುವುದಿಲ್ಲ. ಯಾರೇ ಇಬ್ಬರು ವ್ಯಕ್ತಿಗಳು ಸೇರಿದರು ಒಂದೆರಡು ನಿಮಿಷ ಯೋಗಕ್ಷೇಮದ ವಿಚಾರಕ್ಕೆ ಬಿಟ್ಟರೆ, ಉಳಿದ ಸಮಯವನ್ನೆಲ್ಲ ಅವರು ಒಟ್ಟಿಗೆ ಮಾತನಾಡುತ್ತಿರುವ ತನಕ, ಗ್ರಂಥಗಳ ವಿಷಯ ಕುರಿತು ಮಾತನಾಡಲು ಮೀಸಲಿಡಬೇಕು. ಎಲ್ಲಿಯವರೆಗೆ ಜನತೆ ಇತ್ತ ಗಮನಹರಿಸುವುದಿಲ್ಲವೋ ಅಲ್ಲಿಯ ತನಕ ಲೇಖಕರ ಶ್ರಮವೆಲ್ಲ ಅಸಾರ್ಥಕ.

ಊರು ಕೇರಿಗಳಲ್ಲೆಲ್ಲ ಇಂದು ನಮ್ಮ ನಾಡಿನಾದ್ಯಂತ ಹೋಟೆಲುಗಳೂ ಸಿನಿಮಾಗಳು ಬೀಡಿ ಸಿಗರೇಟು ಅಂಗಡಿಗಳೂ, ಹೆಂಡ ಮಾರುವ ಬಾರುಗಳು ಪ್ರಾರಂಭವಾಗುತ್ತಿವೆ. ಇದು ದುರ್ದೈವ ಎನ್ನುವುದಕ್ಕಿಂತ ಎಲ್ಲ ಕೇರಿಗಳಲ್ಲೂ ಗ್ರಂಥ ಭಂಡಾರಗಳನ್ನು ತೆರೆಯದಿರುವುದು ದೊಡ್ಡ ದುರಾದೃಷ್ಟವೆನ್ನಬಹುದು. ಪಾಳಿಯಲ್ಲಿ ಗಂಟೆಗಟ್ಟಲೆ ನಿಂತು ಟಿಕೆಟ್ ಸಿಗದಿದ್ದರೆ ಕಾಳಸಂತೆಯಲ್ಲಿ ಹೆಚ್ಚು ದುಡ್ಡು ಕೊಟ್ಟಾದರೂ ಸಿನಿಮಾ ನೋಡುವ ಜನರಿದ್ದಾರೆ. ಅವರನ್ನೂ ಆ ದೃಶ್ಯವನ್ನೂ ಕಂಡಾಗಲೆಲ್ಲ ನನಗೆ ಗ್ರಂಥ ಭಂಡಾರಗಳಿಗೆ ಎಂದು ಜನ ಹೀಗೆ ಸಾಲಾಗಿ ನಿಂತು ಪ್ರವೇಶ ಪಡೆದು ಅಲ್ಲಿನ ಜ್ಞಾನದ ಪ್ರಯೋಜನ ಹೊಂದುವ, ಪುಸ್ತಕದಂಗಡಿ ಮುಂದೆ ನಿಂತು ನನಗೆ ತನಗೆಂದು ಪುಸ್ತಕ ಕೊಳ್ಳುವ ಭಾಗ್ಯದ ದಿನಗಳು ಬರುವುದೋ ಎಂಬ ಆಲೋಚನೆ ಬರುತ್ತಿರುತ್ತದೆ.

ಸರಕಾರವೂ ಈ ದಿಕ್ಕಿನಲ್ಲಿ ಓದುಗನಿಗೆ ಪ್ರೋತ್ಸಾಹ ಕೊಡಬಹುದು. ಉತ್ತಮ ಬೆಳೆ ಬೆಳೆದವರಿಗೆ, ಕೈತೋಟ ಮಾಡುವವರಿಗೆ ಬಹುಮಾನ ನೀಡಿ ಉತ್ತೇಜಿಸುತ್ತಿದ್ದಾರೆ. ಅದರಂತೆ ಉತ್ತಮ ಗ್ರಂಥ ಭಂಡಾರಗಳನ್ನು ಪಡೆದ ಮನೆಯವರಿಗೆ ಬಹುಮಾನಗಳನ್ನು ಕೊಡಬಹುದು. ಇದರಿಂದ ಇತರರಿಗೂ ಸ್ಫೂರ್ತಿ ಬರಲು ಅವಕಾಶವಿದೆಯಲ್ಲದೆ ಓದುವ ಕಡೆಗೆ ಜನತೆಯ ಗಮನ ಸೆಳೆದಂತಾಗುತ್ತದೆ. ಸರಕಾರ ಮನೆ ಕಟ್ಟಲು ವಾಹನ ಕೊಳ್ಳಲು ಸಾಲ ಕೊಡುತ್ತದೆ. ಅದೇ ರೀತಿ ಪುಸ್ತಕ ಕೊಳ್ಳಲು ಸಾಲ ಕೊಟ್ಟು ಓದುಗನಿಗೆ ಸಹಾಯ ಮಾಡಬಹುದು.

ಸರಕಾರ ಸಾಹಿತ್ಯ-ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ವತಿಯಿಂದ ಗದುಗಿನ ಭಾರತ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯವನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿ ಎಲ್ಲ ಓದುಗನಿಗೂ ದೊರೆಯುವಂತೆ ಮಾಡಿದ್ದು ಮೆಚ್ಚತಕ್ಕದ್ದು. ಇತ್ತೀಚೆಗೆ ಮಹಾಕವಿ ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯವನ್ನು ಸುಲಭ ಬೆಲೆ ಆವೃತ್ತಿಯಲ್ಲಿ ಹೊರತಂದುದು ತುಂಬ ಸಂತೋಷ. ಪಂಪ ಭಾರತ, ಗದಾಯುದ್ಧ, ಶಾಂತಿಪುರಾಣ ಮೊದಲಾದ ಹಳಗನ್ನಡ ಕಾವ್ಯಗಳನ್ನೂ ಸುಲಭ ದರದಲ್ಲಿ ಸಿಗುವಂತೆ ಮಾಡಬೇಕು. ಓದುಗನ ಹೊರೆ ಇಳಿದು ಓದುವ ಹಂಬಲ ಈಡೇರುತ್ತದೆ.

ದೇಶದಲ್ಲಿ ಎಲ್ಲೋ ಕೆಲವು ಜನ ವಿದ್ಯಾವಂತರಾದರೆ ಸಾಲದು. ಎಲ್ಲ ಜನರು ಓದು ಬಲ್ಲವರಾಗಬೇಕು. ಇದರಿಂದ ಎಲ್ಲರೂ ಉದ್ಯೋಗಕ್ಕೇ ಹೋಗಬೇಕೆಂದರ್ಥವಲ್ಲ. ನೇಗಿಲಯೋಗಿಯಾಗಿಯೂ ವಿದ್ಯಾವಂತನಾಗಬೇಕು. ಹೊಲ ಗೇದು ಮನೆಗೆ ಬಂದ ಒಕ್ಕಲುಮಗ ತನ್ನ ದಣಿವನ್ನು ಒಂದು ಉತ್ತಮ ಹೊತ್ತಗೆಯನ್ನು ಓದಿ ನಿವಾರಿಸಿಕೊಂಡು ಆನಂದಿಸುವಂತಾಗಬೇಕು. ಸಹಿತಿಂಡಿ ತಿನಿಸುಗಳನ್ನು ಮಾಡಿ ಮನೆಯವರು ಹಬ್ಬದ ದಿನಗಳಲ್ಲಿ ಸಂತೋಷಿಸುವಂತೆ ಹೊಸ ಪುಸ್ತಕದ ಕೊಂಡು ಸುಖಪಡಬೇಕು. ಕಡೆಗೆ ಜನತೆಯ ವಾಚನಾಭಿರುಚಿ ಎಷ್ಟು ಬೆಳೆಯಬೇಕೆಂದರೆ ಪ್ರತಿಯೊಂದು ಮನೆಮನೆಯೂ ಒಂದೊಂದು ಸಣ್ಣ ಗ್ರಂಥ ಭಂಡಾರಗಳನ್ನು ಹೊಂದಿರಬೇಕು.

ಯಾವ ಕನ್ನಡಿಗನ ಬಾಯಲ್ಲಿ ವಚನ, ಕೀರ್ತನೆ, ಕಾವ್ಯದ ಕೆಲವು ಪದ್ಯಗಳಾದರೂ ಬರುವುದಿಲ್ಲವೋ ಆತ ಕನ್ನಡಿಗನೆ ? ಎಂದು ಸಂಶಯಪಡಬೇಕು. ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು. ಒಳ್ಳೆಯ ಮನೆ ಕಟ್ಟಿಸಿ ವಸ್ತ್ರ ಆಭರಣ ಕೊಂಡು ತೊಟ್ಟು ತೋರಿಸಿ ಪ್ರದರ್ಶಿಸಿ ಆನಂದಿಸುವಂತೆ ಒಳ್ಳೆಯ ಪುಸ್ತಕಗಳನ್ನು ಓದಿ, ಕೊಂಡು ಓದಿ ಮನೆಯಲ್ಲಿ ಶೇಖರಿಸಿ ಹರ್ಷಿಸುವಂತಾಗಬೇಕು.

ಮಾನವನ ಜನ್ಮ ಸಮಗ್ರವಾಗಿ ಸರಿಯಾಗಿ ರೂಪುಗೊಳ್ಳಬೇಕಾದರೆ ಓದುವುದರ ಪಾತ್ರ ಹಿರಿದು. ಅಕ್ಷರಸ್ಥರ ಸಂಖ್ಯೆ ಹೆಚ್ಚಬೇಕು. ಸಾಕ್ಷರರು ಗ್ರಂಥಗಳನ್ನು ಪ್ರೀತಿಸಬೇಕು. ಓದಬೇಕು. ಓದುವ ಹವ್ಯಾಸ ಜನತೆಯಲ್ಲಿ ಹೆಚ್ಚಿದಷ್ಟೂ ರಾಷ್ಟ್ರಜೀವನದ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಇದೆಲ್ಲ ಸರಿಯೆ, ಓದುಗರು ಹೆಚ್ಚಬೇಕೆಂಬ ದಿಶೆಯಲ್ಲಿ ನೋಡಿದಾಗ. ಈಗ ಇರುವ ಓದುಗರೇಕೆ ಹೆಚ್ಚಿನ ಪ್ರಯೋಜನ ಪುಸ್ತಕಗಳಿಂದ ಪಡೆಯುತ್ತಿಲ್ಲ ಎಂಬ ಪ್ರಶ್ನೆಯಿದೆ. ಇದಕ್ಕೆ ಕನ್ನಡ ನಾಡಿನ ಚೌಕಟ್ಟಿಗೆ ಬದ್ಧಳಾಗಿ ಕೆಲವು ಕುಂದು ಕೊರತೆಗಳನ್ನು ತಿಳಿಯ ಬಯಸುತ್ತೇನೆ.

ಸಾರಸ್ವತ ಲೋಕದ ಸಮಸ್ಯೆಗಳು ಚತುಷ್ಕೋನಾತ್ಮಕವಾಗಿವೆ; ಓದುಗ, ಬರಹಗಾರ, ಪ್ರಕಾಶಕ ಹಾಗೂ ಮಾರಾಟಗಾರ. ಇಲ್ಲಿ ಓದುಗನ ನಿಟ್ಟಿನ ವಿವೇಚನೆಯಷ್ಟೇ ಕೊಟ್ಟಿದೆ. ಆನಂದಕ್ಕಾಗಿ ಓದುವ ಉತ್ತಮ ಹವ್ಯಾಸವಿರುವ ಓದುಗನ ಕೆಲವು ಕಷ್ಟಗಳಿವೆ. ಓದುವ ಹವ್ಯಾಸ ಒಳ್ಳೆಯದು. ಕೊಂಡು ಓದುವ ಪದ್ಧತಿ ಇನ್ನೂ ಒಳ್ಳೆಯದು, ಗ್ರಂಥಾಲಯಗಳಿಗೆ ಹೋಗಿ ಓದುವ ಓದುಗನಿಗೆ ಅಲ್ಲಿ ತನಗೆ ಬೇಕಾದ ಗ್ರಂಥ ಸಿಗದಿರಬಹುದು. ಇದ್ದರೂ ಹೆಚ್ಚಿನ ಪ್ರತಿಗಳಿಲ್ಲದಿರಬಹುದು. ಪ್ರತಿಯೊಂದು ಗ್ರಂಥಾಲಯವೂ ಒಂದೊಂದು ಪುಸ್ತಕದ ಐದಾರು ಪ್ರತಿಗಳನ್ನಾದರೂ ಹೊಂದಿರಬೇಕು. ಓದುಗನಿಗೆ ಆಗ ಬೇಕೆನ್ನಿಸಿದ ಪುಸ್ತಕ ದೊರೆತೀತು.

ಎಲ್ಲವೂ ಎಲ್ಲ ಕಾಲದಲ್ಲೂ ಪುಸ್ತಕ ಭಂಡಾರಗಳಿಗೇ ಹೋಗಿ ಓದಲು ಆಗದಿರಬಹುದು. ಅದಕ್ಕೆ ಬೇರೆ ವ್ಯವಸ್ಥೆಯೇ ಆಗಬೇಕು. ಪುಸ್ತಕದಂಗಡಿಗಳಲ್ಲೂ ಓದುಗನಿಗೆ ಕನ್ನಡದ ಎಲ್ಲ ಗ್ರಂಥಗಳು ಬೇಕೆಂದಾಗ, ಜೇಬಿನಲ್ಲಿ ಹಣವಿದ್ದಾಗ ಸಿಗುವ ವ್ಯವಸ್ಥೆಯಾಗಬೇಕು, ಇಂದು ಪುಸ್ತಕ ವ್ಯಾಪಾರಿ ತನಗೆ ಹೆಚ್ಚಿನ ರಿಯಾಯಿತಿ-ವಿನಾಯಿತಿಯನ್ನೂ ಯಾವ ಬಗೆಯ ಪುಸ್ತಕ ಗಿಟ್ಟಿಸಿ ಕೊಡುವುದೋ ಅಂಥ ಅಗ್ಗದ ಮುಗ್ಗಿದ ಹೊತ್ತಗೆಗಳನ್ನೇ ಮಾರುವುದು ಅನೇಕ ಕಡೆ ಕಂಡು ಬರುತ್ತಿದೆ. ಇದು ತಪ್ಪಬೇಕು. ಓದುಗನಿಗೆ ಪುಸ್ತಕದಂಗಡಿಯೂ ಮಾರ್ಗದರ್ಶನ ಮಾಡಬೇಕು. ಅಷ್ಟೇ ಅಲ್ಲದೆ ಪ್ರತಿಯೊಂದು ಪುಸ್ತಕದಂಗಡಿಯವರೂ ವಿದ್ಯಾವಂತರಾಗಿದ್ದು ಓದುಗನಿಗೆ ಉತ್ತಮ ಕೃತಿಗಳತ್ತ ದಾರಿ ತೋರುವವರಾಗಬೇಕು.

ಮನೆಯಲ್ಲೇ ಕೊಂಡು ತಂದು ಓದುವಂತಾಗಬೇಕು. ಸರಿಯೆ. ಅಂಥ ಪ್ರತಿಯೊಬ್ಬರೂ ಓದಬಹುದಾದ ತುಷ್ಟಿ-ಪುಷ್ಟಿ ನೆಮ್ಮದಿ ಕೊಡಬಲ್ಲಂಥ ಉತ್ತಮ ಪುಸ್ತಕಗಳು ಹೆಚ್ಚಾಗಿ ರಚಿತವಾಗಬೇಕು. ಎಲ್ಲ ವಿಷಯಕ್ಕೂ ಸಂಬಂಧಿಸಿ ಬರೆದ ಬೇರೆ ಬೇರೆ ಗ್ರಂಥಗಳಿರಬೇಕು. ಇಂಥ ಪುಸ್ತಕ ಓದುಗನಿಗೆ ಒದಗಿಸುವ ಹೊಣೆ ಬರಹಗಾರನದು. ವಿಚಾರ ಸಂಪತ್ತಿನಿಂದ ಕೂಡಿದ ಗ್ರಂಥಗಳಿರಬಹುದೆನ್ನಿ ; ಅದರ ಪ್ರಚಾರವೂ ಆಗಬೇಕು. ಜನತೆಗೆ ಅಂತಹುದೊಂದು ಪುಸ್ತಕವಿದೆಯೆಂಬುದು ಗೊತ್ತಾಗಬೇಕು. ಸಂಶೋಧನಾಂಗ, ಬೋಧನಾಂಗ, ಪ್ರಸಾರಾಂಗಗಳಂತ ಅವುಗಳಿಗೆ ಪೂರಕವಾದ ಪ್ರಚಾರಾಂಗವೂ ಆಗಬೇಕು. ಯಾವ ಪುಸ್ತಕಗಳು ಯೋಗ್ಯವಾದುವೆಂಬುದರ ತಿಳಿವಳಿಕೆಯನ್ನು ಪ್ರಚಾರಾಂಗ ಉಂಟುಮಾಡಿಕೊಡಬೇಕು.

ಈ ಸಮಸ್ಯೆಗೆ ಇನ್ನೊಂದು ಮುಖವೂ ಇದೆ. ಓದುಗನಿಗೆ ಕೆಲವು ಪುಸ್ತಕಗಳನ್ನು ಕೊಳ್ಳಲು ಮನಸ್ಸಿರುತ್ತದೆ. ಪುಸ್ತಕದ ಬೆಲೆ ಗಗನಗಾಮಿ! ಬೆಲೆ ಆಕಾಶ ಕುಸುಮವಾಗಿದ್ದರೆ ದೇವರೇ ಗತಿ. ಇಂದು ಕನ್ನಡ ನಾಡಿನಲ್ಲಿ ದುಬಾರಿ ಬೆಲೆಯಿಡುವ ಕಾಯಿಲೆಯೊಂದು ಹರಡಿಕೊಂಡಿದೆ. ಒಂದು ರೂಪಾಯಿ ಬೆಲೆ ಇಟ್ಟಿರುವ ಉದಾಹರಣೆಗಳು ಬೇಕಾದಷ್ಟು. ಯದ್ವಾ ತದ್ವಾ ಬೆಲೆಯಿಡುವ ಈ ಹಗಲು ದರೋಡೆಕೋರರನ್ನು ಸರ್ಕಾರ ನಿಯಂತ್ರಿಸಬೇಕು. ಐವತ್ತು ಪುಟದ ಪುಸ್ತಕಕ್ಕೆ ಐದು ರೂಪಾಯಿ ಬೆಲೆಯಿಡುವುದು ಓದುಗನನ್ನು ಲೂಟಿ ಮಾಡುವುದಕ್ಕಾಗಿಯೋ? ಜನತೆಯ ಹಣ ಸುಲಿಗೆ ಮಾಡಲೊ? ಕೇವಲ ಗ್ರಂಥ ಭಂಡಾರಗಳಿಗೆ ತಳ್ಳಿ ಹಣ ಕೊಳ್ಳೆ ಹೊಡೆಯುವ ಕಳ್ಳ ಸಂತೆಕೋರರ ವ್ಯಾಪಾರವಿದು.

ಸಾಂಸ್ಕೃತಿ ಸ್ವಾಸ್ಥ್ಯ ಜೀವನಕ್ಕೆ ವಾಚಕರ ಕೊರತೆಯೆಂಬುದು ರೋಗ ತಗಲಿದಂತೆ. ಆದರೆ ಈಗ ಹಾಲಿ ಇರುವ ವಾಚಕರದೇ ಆದ ಬನ್ನ ಬವಣೆಗಳನ್ನು ಇಲ್ಲಿ ಹೇಳುತ್ತಿರುವುದು. ಓದುಗನದು ನಿರ್ಮಲವಾದ ಮನಸ್ಸು, ಸಾಧಾರಣವಾಗಿ. ಅವನ ಮನಸ್ಸನ್ನು ಸರಿಯಾದ ದಾರಿಯಲ್ಲಿ ತಿದಿ ಮುನ್ನಡೆಸುವ ಹೊಣೆ ಬರಹಗಾರನದು, ಪ್ರಕಾಶಕನದು. ಅನೇಕ ವೇಳೆ ಲೇಖಕ-ಪ್ರಕಾಶಕರು ಸೇರಿ ಓದುಗನನ್ನೇ ದೂರುವುದೂ ದೂಷಿಸುವುದೂ ಉಂಟು : “ಓದುಗ ಕೊಳ್ಳುವುದಿಲ್ಲ, ಹಣ ಬೇರಯದಕ್ಕೆ ಸುರಿಯುತ್ತಾನೆ. ನಾವು ಬರೆಯಬೇಕೇಕೆ ? ಓದುಗ ನಿರಭಿಮಾನಿ” ಇತ್ಯಾದಿ. ಆದರೆ ಓದುಗನೂ ಎಂಥ ನಿರಾಶೆಯ ಸುಳಿಯಲ್ಲಿ ತೊಳಲಾಡುತ್ತಿದ್ದಾನೆಂಬುದನ್ನೂ ಉಳಿದವರೂ ತಿಳಿಯಬೇಕು. ಓದುಗ “ನನ್ನನ್ನು ನೀವೆಲ್ಲ ಸೇರಿ ಷೋಷಣೆಯ ಬದಲು ದುಬಾರಿ ಬೆಲೆಯಿಟ್ಟು ಶೋಷಣೆ ಮಾಡುತ್ತಿದ್ದೀರಿ, ನಿರ್ಲಕ್ಷ್ಯ ತೋರಿದ್ದೀರಿ” ಎಂದು ಪ್ರತ್ಯುತ್ತರ ಕೊಟ್ಟರೆ ಅಚ್ಚರಿಯಿಲ್ಲ.

ಇಂದಿನ ಕನ್ನಡ ಓದುಗ ಒಂದು ದೃಷ್ಟಿಯಲ್ಲಿ ಪಥಭ್ರಾಂತ. ಪಥಭ್ರಷ್ಟ ಆಧುನಿಕ ಕಾವ್ಯದ ಒಂದು ಪಾಲು ಅವನಿಗೆ ಅರ್ಥವಾಗದೆ ಅಗಮ್ಯ ಏಳುಸುತ್ತಿನ ಕೋಟೆಯಾಗಿ ನಿಂತಿದೆ. ಅದರ ಮುಕ್ಕಾಲು ಭಾಗ ನಾರೀಕೇಳ ಪಾಕವೋ ಇಲ್ಲವೇ ಪಾಕವೇ ಅಲ್ಲವೋ ಅದೂ ತಿಳಿಯದಾಗಿದೆ. “ನನ್ನ ಕಾವ್ಯ ಅರ್ಥ ಮಾಡಿಕೊಳ್ಳಬಲ್ಲ ಬುದ್ಧಿವಂತ ಓದುಗರಿಗಾಗಿ ಮಾತ್ರ ರಚಿತವಾಗಿದೆ” ಎಂದು ಅದನ್ನು ಬರೆದವರ ವಿವರಣೆ. ಬುದ್ಧಿವಂತರನ್ನು ಕೇಳಿದರೆ, ಅವರಲ್ಲಿ ಕೆಲವರು, ತೀಟೆ ನಾಲಗೆಯ ನವ್ಯ ಕವಿಗಳ ಕೋಪಕ್ಕೆ ಪಕ್ಕಾಗಬಾರದೆಂಬ ಹಾಗೂ ‘ಅಂದರಿಕೂ ಮಂಚಿವಾಡು ಅನಂತಯ್ಯ’ ಬುದ್ಧಿಯಿಂದ ತೆಪ್ಪಗಾಗುವರು. ಮತ್ತೆ ಕೆಲವರು ‘ನಮಗೂ ಅರ್ಥವಾಗುವುದಿಲ್ಲ’ ಎಂದು ತಲೆಯಾಡಿಸುವರು, ಪರಸ್ಪರ ಪ್ರಶಂಸೆಯ ಪರಾಕು ಹೇಳಿಕೊಂಡು ತಂತಮ್ಮ ಗೆಳೆಯರ ಬಳಗದ ಪತ್ರಿಕೆಗಳಲ್ಲಿ, ತಮ್ಮ ಮಾತು ನಡೆಯುವ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಕೊಂಡಾಡಿಸಿ ಕೊಂಡಿರುವುದಷ್ಟೇ ಈಚೆಗೆ ನಡೆದಿರುವ ಸಂಗತಿ. ಇದರಿಂದ ಓದುಗನಿಗೆ ತುಂಬ ವಂಚನೆಯಾಗಿದೆ. ನವ್ಯ ಸಾಹಿತ್ಯ ಈಗ ಹಳೆಯ ಹಳಸಿದ ಮಾತು. ಅದು ಕಳೆದ ಮೂರು ದಶಕ ರಚಿತವಾಗುತ್ತ ಬಂದಿದೆ. ಅದರ ಬಗೆಗೆ ಸಾಕಷ್ಟು ಚರ್ಚೆಯಾಗಿದೆ. ಇಷ್ಟೆಲ್ಲಾ ಆಗಿಯೂ ಮೇಲಿನ ಮಾತುಗಳನ್ನು ತೀರ ಅನಿವಾರ್ಯವಾಗಿ ಹೇಳಬೇಕಾಗಿದೆ, ಓದುಗರ ವತಿಯಿಂದ. ಕಲಿತ ಓದುಗರಿಗೂ ಎದುರಾಗುವ ಅರ್ಥ ಮಾಡಿಕೊಂಡು ಆನಂದಿಸಲಾಗದ ಸಮಸ್ಯೆಯಿದು. ಈ ಸಮಸ್ಯೆಯ ಪರಿಹಾರಕ್ಕೂ ಅದಕ್ಕೆ ಸಂಬಂಧಿಸಿದ ಜನ ಶ್ರಮಿಸಿ ಓದುಗನ ನೆರವಿಗೆ ನಿಲ್ಲಬೇಕಲ್ಲವೆ?

ಇನ್ನು ಓದುಗ ಕೂಡ ಲೇಖಕ-ಪ್ರಕಾಶಕರಿಗೆ ಸಹಕರಿಸುವ ಒಂದೆರಡು ಮುಖ್ಯ ಮಾತಿವೆ. ಶಾಲಾ ಕಾಲೇಜುಗಳಲ್ಲಿ ಬಹುಮಾನ ವಿತರಣೆಗೆ ಪುಸ್ತಕಗಳನ್ನೇ ಕಡ್ಡಾಯ ಕೊಡಬೇಕು. ಸಭೆ ಸಮಾರಂಭಗಳಲ್ಲಿ ಹಾರ ತುರಾಯಿಗಳ ಬದಲು ಪುಸ್ತಕ ಕೊಡಬೇಕು. ಮದುವೆ ಮುಂಜಿ ಮೊದಲಾದ ಕಡೆಗಳಲ್ಲಿ ಪುಸ್ತಕದ ಉಡುಗೊರೆ ನೀಡಬೇಕು. ಇದರಿಂದ ಅಗುವ ಪ್ರಯೋಜನಗಳು ವಿಪುಲ. ಶಾರದೆಯ ತೇರನ್ನು ಮನೆಮನೆಗೂ ಮುಟ್ಟಿಸುವಲ್ಲಿ ಲೇಖಕ ಪ್ರಕಾಶಕ ಪುಸ್ತಕ ಮಾರಾಟಗಾರರಷ್ಟೇ ಅಲ್ಲದೆ ಓದುಗನೂ ಮುಂದಾಗಬೇಕಾದುದು ಅಗತ್ಯ ಅನಿವಾರ್ಯ.